Friday, October 12, 2012

‘ಹಲಗೆ ಬಳಪ’ ಓದಿದ ಮೇಲೆ


All my best thoughts were stolen by the ancients!  - Ralph Waldo Emerson.  ಜೋಗಿ ಅವರ ಹಲಗೆ ಬಳಪ ಓದುತ್ತಾ, ಓದುತ್ತಾ ನನಗೆ, ಅದರಲ್ಲಿದ್ದ ಈ ವಾಕ್ಯ ಮಾತ್ರ ಸಿಕ್ಕಾಪಟ್ಟೆ ಮನಸ್ಸಿಗೆ ಹಿಡಿಸಿಬಿಡ್ತು.  ಹೊಸ ಬರಹಗಾರರಿಗೆ ಜೋಗಿಯವರ ಪಾಠಗಳು ಬರೆಯಲು ಪ್ರೇರೇಪಿಸುತ್ತೋ ಇಲ್ಲವೋ ಗೊತ್ತಿಲ್ಲ! ಓದಲಂತೂ ಬಹಳ ಖುಷಿ ಕೊಡುತ್ತದೆ. ಎಲ್ಲರ ಮೊದಲ ಬರಹಗಳ ಅನುಭವವನ್ನು ಓದುತ್ತಾ, ನಾನೇ ಅವರಾಗಿ, ಈ ಎಲ್ಲಾ ಅನುಭವಗಳೂ, ನನಗೂ ಆಗಿತ್ತಲ್ಲಾ?  ನನಗೇಕೆ ಬರೆಯೋಕೆ ಆಗಿಲ್ಲ? ಎನ್ನುವ ಕಳವಳದ ಜೊತೆಜೊತೆಗೆ ಓಹ್! ಇವರಂಥವರಿಗೂ ಕೂಡಾ ಹೀಗೆಲ್ಲಾ ಗೊಂದಲ / ಆತಂಕ ಆಗಿತ್ತಾ? ಹಾಗಿದ್ದರೆ ನಾನು ಕೂಡ ಒಳ್ಳೆಯ ಬರಹಗಾರ್ತಿಯಾಗಬಲ್ಲೆ! ಎನ್ನುವ ಹುಮ್ಮಸ್ಸನ್ನು ಕೂಡ ಹುಟ್ಟಿಸಿತು. ಹಲಗೆ ಬಳಪದ ಪುಟಪುಟವೂ ಅರೆರೆ! ಎಷ್ಟು ಚಂದ ಬರೆದಿದ್ದಾರೆ? ಎಂದು ಸಂತೋಷಿಸುತ್ತಾ,  ನನ್ನ ಆಲೋಚನೆಗಳು ಬಹು ಮಟ್ಟಿಗೆ ಈ ಲೇಖಕರನ್ನು ಹೋಲುತ್ತವೆ, ಹೇ, ನನಗೂ ಕೂಡ ಇಂಥ ಅನುಭವ ಆಗಿದೆಯಲ್ಲಾ? ಎಂದೆಲ್ಲಾ ನನ್ನನ್ನು ನಾನೇ ಅವರೊಂದಿಗೆ ಹೋಲಿಸಿಕೊಳ್ಳುತ್ತಾ, ಓಹ್! ಇಷ್ಟೊಂದು ಪುಸ್ತಕಗಳನ್ನು ಓದಿದ್ದಾರಾ? ಎಂದು ಆಶ್ಚರ್ಯ ಪಡುತ್ತಾ, ಪುಸ್ತಕಗಳನ್ನು ಓದಲು ಇಷ್ಟು ಸೀರಿಯಸ್ ನೆಸ್ ಬೇಕಾಗುತ್ತಾ? ಎಂದು ಚಿಂತಿಸುತ್ತಾ, ಕವನಗಳನ್ನು ಬರೆಯುವುದು ಇಷ್ಟು ಸುಲಭವೇ? ಎಂದು ನಿಡುಸುಯ್ಯುತ್ತಾ, ನಾಟಕಗಳನ್ನು ನಾನೆಂದಿಗೂ ಓದಿಯೇ ಇಲ್ಲ, ಓದಬೇಕು ಎಂದು ಆಲೋಚಿಸುತ್ತಾ, ಒಂದೇ ಉಸಿರಿಗೆ ಪೂರ್ತಿ ಪುಸ್ತಕ ಓದಿದೆ.  ನಂತರಾ, ಮತ್ತೊಮ್ಮೆ, ಮಗದೊಮ್ಮೆ ಎಂದು ೨, ೩ ಬಾರಿ ಓದಿದ್ದಾಯಿತು! ಈಗ ತಲೆಯ ತುಂಬಾ ಪದಗಳ, ವಾಕ್ಯಗಳ ಮೆರವಣಿಗೆ! ಅಲ್ಲಲ್ಲಾ ಜಾತ್ರೆ! 

ಇದನ್ನು ತಕ್ಷಣ ಬ್ಲಾಗ್ ನಲ್ಲಿ ಇಳಿಸಿಬಿಟ್ಟರೆ, ಮನಸ್ಸಿಗೆ ಒಂದಷ್ಟು ನೆಮ್ಮದಿಯಾಗಬಹುದೇನೋ ಎಂದು ಬರೆಯಲು ಕುಳಿತೆ. ಆದರೆ ಬರೆಯಲು ಕುಳಿತರೆ ಮಾತ್ರ ಒಂದಕ್ಷರವೂ ನಿನ್ನ ತಲೆಯಲ್ಲಿ ಮೂಡಲೊಲ್ಲೆ ಎನ್ನುವ ಹಠ ಯಾಕೆ ಮಾಡುತ್ತವೋ? ನನಗೆ ಅಕ್ಷರಗಳ ಮೇಲೆ ಸಿಟ್ಟು! ಆದರೆ ಅಕ್ಷರ ಪ್ರೀತಿ ಇದ್ದರೆ ಮಾತ್ರ ಒಳ್ಳೆ ಬರಹಗಾರನಾಗಬಹುದೆಂಬ ಅದ್ರಲ್ಲಿದ್ದ ಮತ್ತೊಬ್ಬ ಲೇಖಕರ ಕಿವಿಮಾತು! ಹಾಗೂ ಹೀಗೂ ಅಕ್ಷರಗಳ ಮೇಲೆ ಪ್ರೀತಿ ಹುಟ್ಟಿಸಿಕೊಂಡು ಬರೆಯಲು ಕುಳಿತರೆ ಏನು ಬರೆಯೋದು? ಯಾವುದರ ಬಗ್ಗೆ ಬರೆಯೋದು? ಮತ್ತೆ ಗೊಂದಲ ಶುರು.  ಕವನ ಬರೆಯೋದಾ? ಕಥೆಯನ್ನೋ? ಬರೆಯೋದಕ್ಕೆ ಶುರು ಮಾಡಿ, ಆಮೇಲೆ ತನ್ನಷ್ಟಕ್ಕೆ ನಿಮ್ಮ ಪ್ರಕಾರ ಯಾವುದೆಂದು ತಿಳಿಯುತ್ತದೆ ಎಂಬುದನ್ನು ‘ಹಲಗೆ ಬಳಪ’ದಲ್ಲಿ ಓದಿದ ನೆನಪಾಗಿ, ಕವನ ಕಷ್ಟ, ಕಥೆಯನ್ನು ಬರೆಯೋಣ ಎಂದು ತೀರ್ಮಾನಿಸಿದೆ.  ಈಗ ಯಾರ ಕಥೆ ಬರೆಯೋದು? ನನ್ನ ಕಥೆಯನ್ನೇ?! ಅಕ್ಕಪಕ್ಕದವರದ್ದೇ? ‘ಹಲಗೆ ಬಳಪ’ ದಲ್ಲಿ ಜೋಗಿಯವರ ‘ಮುದ್ದಣ ಮೇಷ್ಟ್ರು’ ಲೇಖಕ ಯಾವತ್ತೂ ಔಟ್ ಸೈಡರ್ ಆಗಬಾರದು, ಒಳಗಿದ್ದು ಬರೆಯಬೇಕು! ಅಕ್ಕಪಕ್ಕದವರ ಪಾತ್ರದ ಒಳಹೊಕ್ಕು ಬರೆಯುವುದು ತೀರಾ ಕಷ್ಟ! ಏನು ಮಾಡುವುದು?  ಒಟ್ಟಿನಲ್ಲಿ ಬರೆಯಬೇಕು ಎಂಬ ಒತ್ತಡವಂತೂ ಇದೆ.  ಹಾಗಾದರೆ ಅಕ್ಕಪಕ್ಕದವರ ಕಥೆ ಬರೆಯಲು ನನ್ನ ಕೈಯಲ್ಲಿ ಸಾಧ್ಯವಿಲ್ಲ. ನನ್ನದೇ ಕಥೆ ಬರೆಯೋದು ಒಳ್ಳೆಯದು.  ಈಗ ಮತ್ತೆ ತಲೆ ತುಂಬಾ ಪ್ರಶ್ನೆಗಳು? ಎಲ್ಲಿಂದ ಶುರು ಮಾಡುವುದು? ಬಾಲ್ಯದಿಂದಲೇ?  ಕೆಲಸದ ಅನುಭವಗಳೇ? ಕಾಲೇಜಿನದೇ? ಮೊದಲ ಪ್ರೇಮ ವೈಫಲ್ಯದ ಬಗ್ಗೆಯೇ? ಬಗೆಹರಿಯದ ಸಮಸ್ಯೆ ಇದು.  ಕೊನೆಗೂ ಸಮಸ್ಯೆಗೊಂದು ಪರಿಹಾರ ಥಟ್ ಅಂತ ಹೊಳೆಯಿತು.  ನನ್ನಲ್ಲಿ ಓದಿನ ಅಭಿರುಚಿ ಶುರು ಆದದ್ದು ಹೇಗೆ?  ಹಾ! ವಿಷಯ ಸಿಕ್ಕಿತು. ಈಗ ಪದಗಳು ಕೂಡ ಸಿಕ್ಕಿದರೆ?! ಬರೆಯುವ ಕೆಲಸ ಸುಲಭ. 

ಮನೆ ತುಂಬಾ ಮಕ್ಕಳು. ಅಪ್ಪನಿಗಾದರೋ ಒಳ್ಳೆಯ ಕೆಲಸವಿರಲಿಲ್ಲ. ಹೊಟ್ಟೆ ತುಂಬಾ ತಿನ್ನಲು ಕೂಡ ಕಷ್ಟ. ತನ್ನ ತಾಯಿಯ ಮನೆಯಲ್ಲಿ ಓದಿನ ಬೆಲೆ ಅರಿತಿದ್ದ ಅಮ್ಮ ಎಂದಿಗೂ ಪುಸ್ತಕಗಳನ್ನು ಕೊಡಿಸಲು ಯೋಚಿಸುತ್ತಿರಲಿಲ್ಲ.  ಆಕೆಗೆ ಮಂಕುತಿಮ್ಮನ ಕಗ್ಗದಿಂದ ಹಿಡಿದು ಸುಮಾರಷ್ಟು ಸ್ತ್ರೋತ್ರಗಳು ಬಾಯಿಪಾಠವಾಗಿತ್ತು.  ಹಾಗಾಗಿ ಮನೆಗೆ ದಿನಪತ್ರಿಕೆ, ಸುಧಾ, ತರಂಗ, ಮಯೂರ, ಕಸ್ತೂರಿ, ಚಂದಮಾಮ ತರುವುದನ್ನೂ ತಪ್ಪಿಸುತ್ತಿರಲಿಲ್ಲ. ನಾನು ಮನೆಯಲ್ಲಿ ಕೊನೆಯವಳು.  ಮಕ್ಕಳು ಕಿತ್ತಾಡಬಾರದೆಂದು ಮನೆಯಲ್ಲಿ ದೊಡ್ಡವರು ಹೇಳಿದಂತೆ ಕೇಳಬೇಕೆಂದು ಅಮ್ಮನ ರೂಲ್ ಆಗಿತ್ತು. ಸುಧಾ, ತರಂಗ ತರಲು ಸಣ್ಣವಳಾದ ನಾನೇ ಹೋಗಬೇಕಿತ್ತು.  ಆದರೆ ಅದನ್ನು ಮೊದಲು ಓದುವ ಹಕ್ಕು ಮಾತ್ರ ಅಣ್ಣಂದಿರದಾಗಿತ್ತು.  ಪುಸ್ತಕವನ್ನು ತಂದು ಅಣ್ಣನ ಕೈಗೆ ಕೊಡುವಷ್ತರಲ್ಲಿ ಜೀವ ಬಾಯಿಗೆ ಬಂದಷ್ಟು ಸಂಕಟವಾಗಿಬಿಡ್ತಿತ್ತು.  ಅದಕ್ಕೆ ನಾನು ಕಂಡುಕೊಂಡ ಉಪಾಯವೆಂದರೆ ಅಂಗಡಿಯಿಂದ ಮನೆಗೆ ಬರುವಷ್ಟರಲ್ಲಿ, ನನಗೆ ಬೇಕಾದ ಅಂಕಣಗಳೆಲ್ಲವನ್ನೂ ರಸ್ತೆಯಲ್ಲಿ ಓದುತ್ತಾ ಬರುವುದು!  ಹೀಗೆ ಓದುತ್ತಾ ಬರುವಾಗ ಲೆಕ್ಕವಿಲ್ಲದಷ್ಟು ಬಾರಿ ಜನರಿಗೆ ಢಿಕ್ಕಿ ಹೊಡೆದು, ಅವರ ಕೈಯಲ್ಲಿ ಬೈಸಿಕೊಂಡು ಬರುತ್ತಿದ್ದೆ.  ಮನೆಯ ಬಳಿಯೇ ಪುಟ್ಟದೊಂದು ಲೈಬ್ರರಿ ಇತ್ತು.  ಅದರ ಓನರ್ ನ ಮಗ ನನ್ನ ಶಾಲೆಯಲ್ಲಿ ಸಹಪಾಠಿ.  ಹಾಗಾಗಿ ಅಲ್ಲಿಯೇ ಕುಳಿತು ಎಷ್ಟೋ ಪುಸ್ತಕಗಳನ್ನು ಓದುತ್ತಿದ್ದೆ. ಇನ್ನೂ ಯುಗಾದಿ ಹಾಗೂ ದೀಪಾವಳಿ ಸಮಯದಲ್ಲಿ ಬರುತ್ತಿದ್ದ ಸುಧಾ ವಿಶೇಷಾಂಕಗಳು! ಬೆಳಿಗ್ಗೆ ಬೇಗ ೪ ಗಂಟೆಗೆ ಎದ್ದು ಮೊದಲಿಗೆ ಯಾರು ಅಭ್ಯಂಜನ ಸ್ನಾನ ಮಾಡುವರೋ, ಅವರಿಗೆ ಆ ವಿಶೇಷಾಂಕ ಓದುವ ಹಕ್ಕು - ಅಮ್ಮನ ರೂಲ್!  ನನಗೂ, ಕೊನೆ ಅಣ್ಣನಿಗೂ ಬೇಗ ಏಳುವ ಸ್ಪರ್ಧೆ! ಪೆಚ್ಚು ಮುಖ ಹಾಕಿಕೊಳ್ಳುವ ನನ್ನನ್ನು ನೋಡಿ, ’ಹೋಗಲಿ ಬಾ! ಒಟ್ಟಿಗೆ ಓದೋಣ’ ಎನ್ನುತ್ತಿದ್ದ ಅಣ್ಣಾ. ಮಿಕ್ಕೆಲ್ಲಾ ದಿವಸಗಳಲ್ಲಿ ಇಷ್ಟೇ ದೋಸೆ ತಿನ್ನಬೇಕೆಂಬ ರೂಲ್ ಇದ್ದ ನಮಗೆ, ಅಂದು ಮಾತ್ರ ಎಷ್ಟು ಬೇಕಾದರೂ ದೋಸೆ ತಿನ್ನುವ ಅದೃಷ್ಟ. ದೋಸೆ ಮೆಲ್ಲುತ್ತಾ, ವಿಶೇಷಾಂಕವನ್ನು ಓದುತ್ತಾ, ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ ಸರ್ವಜ್ಞ! 

ನನಗೂ, ನನ್ನ ಕೊನೆಯ ಅಣ್ಣನಿಗೂ ೨ ವರ್ಷಗಳ ಅಂತರ. ನಾವಿಬ್ಬರೂ ಸ್ನೇಹಿತರಂತೆಯೇ ಬೆಳೆದವರು. ಶಾಲೆಗೆ ರಜೆ ಶುರುವಾದಾಗ ಅಣ್ಣನ ಒಂದೊಂದೇ ಹುಚ್ಚು ಪ್ರಕಟವಾಗುತ್ತಿತ್ತು.  ಆತನಿಗೆ ಕರಾಟೆಯ ಹುಚ್ಚು ಬಹಳ. ಅದಕ್ಕಾಗಿ ದೇಹವನ್ನು ಹುರಿಗೊಳಿಸಿಕೊಳ್ಳಲು ಸಾಕಷ್ಟು ಪ್ರಯತ್ನ ಪಡುತ್ತಿದ್ದ. ಅದರಲ್ಲೊಂದು ಬೆಳ್ಳಂಬೆಳಿಗ್ಗೆ ೪ ಗಂಟೆಗೆ ಕಬ್ಬನ್ ಪಾರ್ಕಿಗೆ ಜಾಗಿಂಗ್ ಹೋಗುವುದು.  ಅಕ್ಕಪಕ್ಕದ ಗೆಳೆಯರನ್ನೆಲ್ಲ ಹುರಿದುಂಬಿಸಿ, ನನ್ನನ್ನು ಕೂಡ ಎಳೆದುಕೊಂಡು ೪ ಗಂಟೆಗೆ ಹೋಗುತ್ತಿದ್ದ.  ನಾನಾದರೋ ಈ ಆಟ / ಎಕ್ಸರ್ಸೈಸ್ ಮುಂತಾದವುಗಳಲ್ಲಿ ಬಲು ಸೋಮಾರಿ.  ಹಾಗೂ ಹೀಗೂ ೭ ಗಂಟೆಯಾದೊಡನೆ, ಕಬ್ಬನ್ ಪಾರ್ಕಿನ ಸೆಂಟ್ರಲ್ ಲೈಬ್ರರಿ ನನ್ನನ್ನು ಸೆಳೆದುಕೊಂಡುಬಿಡುತ್ತಿತ್ತು. ಅಣ್ಣನಿಗೆ ನನಗಿಂತಲೂ ಓದುವ ಹಂಬಲ ಬಹಳ. ಆಗ ಅಲ್ಲಿ ಮನೆಗೆ ತರಲು ಕೂಡ ಪುಸ್ತಕಗಳನ್ನು ಕೊಡುತ್ತಿದ್ದರೆಂಬ ನೆನಪು. ನಾವಿಬ್ಬರೂ ಆಗ ೪,೫ ಕ್ಲಾಸಿನಲ್ಲಿದ್ದವರು. ಆ ವಯಸ್ಸಿನಲ್ಲಿ, ಅರ್ಥವಾಗುತ್ತಿತ್ತೋ, ಇಲ್ಲವೋ,  ಸೆಂಟ್ರಲ್ ಲೈಬ್ರರಿಯಲ್ಲಿ ನಾವಿಬ್ಬರೂ ಎಡತಾಕುತ್ತಿದ್ದದ್ದು ಮಾತ್ರ ಪತ್ತೇದಾರಿ ಕಾದಂಬರಿಗಳಿಗಾಗಿ.  ಅಲ್ಲಿಯೇ ಕುಳಿತು ಪತ್ತೇದಾರಿ ಕಾದಂಬರಿಗಳನ್ನು ಓದಿ (ಮನೆಗೆ ತರಲು ಅಮ್ಮನ ಭಯ), ಮಕ್ಕಳ ಪುಸ್ತಕಗಳನ್ನು ಮನೆಗೆ ತರುತ್ತಿದ್ದೆವು.  ಕಬ್ಬನ್ ಪಾರ್ಕಿನಲ್ಲಿರುವ ಮಯೂರ ಹೋಟೇಲ್ ನ ಜೋಕಾಲಿಯಲ್ಲಿ ಕುಳಿತು, ಪುಸ್ತಕಗಳನ್ನು ಓದಿದ ನೆನಪು ಇಂದಿಗೂ ಆಹ್ಲಾದಕರ.  ಹೀಗೆ ಒಮ್ಮೆ ಪತ್ತೆದಾರಿ ಸೆಕ್ಷನ್ ನಲ್ಲಿ, ಪುಸ್ತಕಗಳನ್ನು ಹುಡುಕುತ್ತಿರುವಾಗ, ವೃದ್ಧರೊಬ್ಬರು ನಾವು ಏನನ್ನು ಹುಡುಕುತ್ತಿದ್ದೇವೆ? ಎಂದು ವಿಚಾರಿಸಿ, ನಮ್ಮ ಉತ್ತರ ತಿಳಿದು, ತಲೆಗೊಂದು ಮೊಟಕಿ, "ಪತ್ತೇದಾರಿ ಪುಸ್ತಕಗಳನ್ನು ಈ ವಯಸ್ಸಿನಲ್ಲಿ ಓದುತ್ತೀರಾ?" ಎಂದು ಬೈದ ಮೇಲೆ, ನಾವೇನೋ ಅಪರಾಧ ಮಾಡುತ್ತಿದ್ದೇವೆ ಎಂಬ ಭಾವ ಮೂಡಿ ಅಂದಿನಿಂದ ನನ್ನ ಪತ್ತೇದಾರಿ ಕಾದಂಬರಿಗಳ ಓದುವಿಕೆಗೊಂದು ಪುಲ್ ಸ್ಟಾಪ್. ಆದರೂ ಸೆಂಟ್ರಲ್ ಲೈಬ್ರರಿ, ಅಲ್ಲಿನ ವಾತಾವರಣ, ಅಲ್ಲಿನ ಪುಸ್ತಕಗಳು ಮಾಡುತ್ತಿದ್ದ ಮೋಡಿ ಎಷ್ಟೇ ನೆನಪಿನಲ್ಲಿಲ್ಲವೆಂದು ನಾನು ಹೇಳಿದರೂ, ಹಾಗೆಯೇ ಕಣ್ಣಮುಂದೆ ಸುಳಿದಾಡುತ್ತದೆ.  

ಈಗಾಗಲೇ ಕಾಲೇಜಿನಲ್ಲಿ ಓದುತ್ತಿದ್ದ ಅಣ್ಣಂದಿರು ತರುತ್ತಿದ್ದ ಯಂಡಮೂರಿಯವರ ಪುಸ್ತಕಗಳು ರೋಚಕತೆ ಉಂಟುಮಾಡುತ್ತಿದ್ದವು, ಬೆಳದಿಂಗಳ ಬಾಲೆಯಂತೂ ಮನಸ್ಸಿನಲ್ಲಿ ಅಚ್ಚಾಗಿಬಿಟ್ಟಿತ್ತು. ಅದರಲ್ಲಿನ ಪದಬಂಧ, ಆಕೆ ಕೇಳುವ ಪ್ರಶ್ನೆಗಳೆಲ್ಲವನ್ನೂ, ಪುಸ್ತಕದಲ್ಲಿ ಬರೆದುಕೊಂಡು ಅದನ್ನು ನಾವೇ ‘ರೇವಂತ್’ ನಂತೆ ಬಗೆಹರಿಸುತ್ತಿದ್ದ ಪರಿ, ಓಹ್! ಈಗ ನೆನಪಿಸಿಕೊಂಡರೂ, ನಗೆಯೊಂದು ಮುಖದಲ್ಲಿ ಮೂಡುತ್ತದೆ. ಬೆಳಿಗ್ಗೆ ತಿಂಡಿ ತಿನ್ನುವಾಗಲೂ, ಊಟ ಮಾಡುವಾಗಲೂ ಈ ಪುಸ್ತಕವಂತೂ ಕೈಯಲಿದ್ದೇ ಇರುತ್ತಿತ್ತು. ಎಷ್ಟು ಸಲ ಓದಿದರೂ ಬೋರ್ ಆಗುತ್ತಿರಲಿಲ್ಲ.  ಹಾಗಾಗಿ ಈ ಕಥೆ ಚಲನಚಿತ್ರವಾಗಿ ಮೂಡಿ ಬಂದಾಗ, ಕುತೂಹಲಕೆಂದು ಹೋದವಳಿಗೆ ಅರ್ಧಕ್ಕೆ ಎದ್ದು ಬರಬೇಕೆಂದು ಅನಿಸಿಬಿಟ್ಟಿತ್ತು.  ಅನಂತನಾಗ್ ಆ ಪಾತ್ರಕ್ಕೆ ಸೂಕ್ತ ಎನಿಸಿದರೂ, ನನ್ನ ಕಲ್ಪನೆಯಲ್ಲಿನ ‘ಬೆಳದಿಂಗಳ ಬಾಲೆ’ ಯ ಪಾತ್ರಗಳು, ಮುಖ್ಯವಾಗಿ ‘ನಾಯಕಿ’ ಹಾಗೂ ಆಕೆಯ ‘ಧ್ವನಿ’ ಗೂ ಹಾಗೂ ಚಲನಚಿತ್ರದ ನಾಯಕಿಯ ಧ್ವನಿಗೂ ಸ್ವಲ್ಪವೂ ಹೋಲಿಕೆಯಿರಲಿಲ್ಲ. ಚಿತ್ರ ನೋಡಿ ಭ್ರಮನಿರಸನವಾಗಿಬಿಟ್ಟಿತ್ತು. ‘ಗುಲಾಬಿ ಟಾಕೀಸ್’ ಚಿತ್ರ ನೋಡಿದ ಮೇಲೆ, ಇತ್ತೀಚೆಗೆ ನಾನು ವೈದೇಹಿಯವರ ‘ಗುಲಾಬಿ ಟಾಕೀಸ್’ ಕಥೆ ಓದಿದೆ.  ಚಿತ್ರಕ್ಕೂ, ಕಥೆಗೂ ಸ್ವಲ್ಪವೂ ಹೋಲಿಕೆಯಿಲ್ಲವೆಂದೆನಿಸಿ ಬೇಸರವಾಯಿತು.  ಪುಸ್ತಕಗಳನ್ನು ಓದುತ್ತಾ, ಕಲ್ಪನೆಯಲ್ಲಿ ಆಯಾ ಪಾತ್ರಗಳನ್ನು ಸೃಷ್ಟಿಸುತ್ತಾ, ಕಲ್ಪನೆಯಲ್ಲಿಯೇ ಪುಸ್ತಕದ ದೃಶ್ಯಾವಳಿಗಳನ್ನು ನೋಡುವುದು ಸಿನೆಮಾಗಳಿಗಿಂತ ನನಗೆ ಹೆಚ್ಚು ಖುಷಿ ನೀಡುತ್ತದೆ. ಬಾಲ್ಯದಲ್ಲಿ ಮೋಡಿ ಮಾಡಿದ ಮತ್ತೊಂದು ಪುಸ್ತಕ ಪೂರ್ಣ ಚಂದ್ರ ತೇಜಸ್ವಿಯವರ ‘ಕರ್ವಾಲೋ’  ಒಂದೊಂದು ಪಾತ್ರಗಳು ಕಣ್ಣ ಮುಂದೆ ಜೀವಂತ, ಪ್ರೊಫೆಸರ್, ಮಂದಣ್ಣ, ಹಾರುವ ಓತಿ, ಅಲ್ಲಿನ ಪರಿಸರ, ಜೇನು ತೆಗೆಯುವ ಪ್ರಸಂಗ, ‘ಕಿವಿ’ ಯ ತರಲೆಗಳು, ಸುಮಾರು ೧೦೦, ೨೦೦ ಬಾರಿ ಆ ಪುಸ್ತಕವನ್ನು ಓದಿರಬಹುದೇನೋ?  ಪ್ರತಿ ವಾಕ್ಯಗಳು ಬಾಯಿಪಾಠವಾಗಿಬಿಟ್ಟಿತ್ತು.  ಆದರೂ ಅದನ್ನು ಓದುವಾಗೆಲ್ಲಾ ಆಗಷ್ಟೇ ನಮ್ಮ ಮುಂದೆ ಘಟನೆಗಳು ನಡೆದವೇನೋ? ಎನ್ನುವ ಭಾವ. ಮತ್ತೊಂದು ಪುಸ್ತಕ - ಬಹುಶಃ ತ್ರಿವೇಣಿಯವರದೇನೋ ಗೊತ್ತಿಲ್ಲ, ಅದರಲ್ಲಿನ ನಾಯಕಿ, ಆಕೆಗೆ ಮಲತಾಯಿ, ನಾಯಕಿಗೆ ಹುಚ್ಚು ಹಿಡಿಯುವುದು, ನಾಯಕನ ಹೆಸರು ರಾಜಶೇಖರ(?) ಆತ ಅವಳನ್ನು ಮಾನಸಿಕ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಟ್ರೀಟ್ ಮೆಂಟ್ ಕೊಡಿಸುವುದು, ಹೀಗೆ ಇದು ಕೂಡ ಮನಸ್ಸಿನಲ್ಲಿ ಅಚ್ಚೊತ್ತಿತ್ತು.  ಮನೆಗೆ ಬಂದ ನೆಂಟರೆಲ್ಲರೂ ನೀವು ಶಾಲೆಯ ಪುಸ್ತಕಗಳನ್ನು ಬಿಟ್ಟು, ಕಥೆ, ಕಾದಂಬರಿಗಳನ್ನು ಓದಲೇಕೆ ಬಿಡುತ್ತೀರಿ? ಎಂದು ಅಮ್ಮನಿಗೆ ಆಕ್ಷೇಪಿಸುತ್ತಿದ್ದರೂ, ಅಮ್ಮ ಮಾತ್ರ ನಮಗೆ ತಡೆಯನ್ನೊಡ್ಡುತ್ತಿರಲಿಲ್ಲ. 

ಹೀಗೆ ಪತ್ತೇದಾರಿ ಕಾದಂಬರಿಗಳಿಂದ ಶುರುವಾದ ನನ್ನ ಓದುವ ಚಟ, ಯಂಡಮೂರಿ, ತ್ರಿವೇಣಿ, ತೇಜಸ್ವಿಯವರಿಂದ ಆಕರ್ಷಿತಗೊಂಡು, ಗಂಭೀರ ಓದಿನತ್ತ ತಿರುಗಿದ್ದು ಭೈರಪ್ಪನವರ ‘ಪರ್ವ’ ಓದಿದ ನಂತರ.  ‘ಪರ್ವ’ ಓದಿದ ನಂತರ ನಾನು ಒಂದೆರಡು ತಿಂಗಳು ನಾನೇ ಆಗಿರಲಿಲ್ಲ. ಉಸಿರು ಕಟ್ಟಿದಂತೆ ಭೈರಪ್ಪನವರ ಎಲ್ಲಾ ಪುಸ್ತಕಗಳನ್ನು ಓದಿ ಮುಗಿಸಿ, ಒಮ್ಮೆಗೇ ಭೈರಪ್ಪನವರ ಎಲ್ಲಾ ಪುಸ್ತಕಗಳನ್ನು ಓದಬೇಡಾ, ಹುಚ್ಚು ಹಿಡಿದೀತು! ಎಂದು ಗೆಳೆಯನೊಬ್ಬನ ಕೈಲಿ ಬುದ್ಧಿ ಹೇಳಿಸಿಕೊಂಡಿದ್ದೆ.  ‘ಹಲಗೆ ಬಳಪ’ ದಲ್ಲಿ ರಾಘವೇಂದ್ರ ಜೋಷಿಯವರು ಬರೆದಂತೆ ನನಗೆ ಬರೆದವರಾರು? ಎಂಬುದು ಎಂದಿಗೂ ಮುಖ್ಯವಾಗಿರಲಿಲ್ಲ. ನನಗೆ ಪುಸ್ತಕಗಳ ಶೀರ್ಷಿಕೆ ಕೂಡ ನೆನಪಿರುತ್ತಿರಲಿಲ್ಲ. ಇಂದಿಗೂ ಕೂಡ.  ಯಾವುದೇ ಪುಸ್ತಕವಾದರೂ ನಡೆದೀತು, ಓದಲಷ್ಟೇ ಬೇಕಿತ್ತು. ಈಗಲೂ ಕೂಡ ಯಾರಾದರೂ ಆ ಪುಸ್ತಕ ಓದಿದ್ದೀರಾ? ಈ ಪುಸ್ತಕ ಓದಿದ್ದೀರಾ? ಎಂದು ಕೇಳಿದರೆ ತಕ್ಷಣ ನನಗೆ ನೆನಪಾಗುವುದಿಲ್ಲ. ಓದಿಲ್ಲವೆಂದುಕೊಂಡು ಮನೆಗೆ ತಂದು ಓದಲು ಶುರು ಮಾಡಿದಾಗ ಅರೆ! ಓದಿದ್ದೆ ಎಂಬ ಅರಿವಾಗುತ್ತದೆ.   ಇತ್ತೀಚೆಗೆ ಗೆಳೆಯನೊಬ್ಬ ತಾನು ಬರೆದವರು ಯಾರು ಎಂಬುದನ್ನು ತಿಳಿದುಕೊಂಡ ನಂತರವೇ ಪುಸ್ತಕವನ್ನು ಓದಲು ಶುರು ಮಾಡುವುದು ಎಂದಾಗ, ನನಗೂ ಕೂಡ ಜ್ಞಾನೋದಯವಾಗಿ ನೆನಪಿನಲ್ಲಿಟ್ಟುಕೊಳ್ಳಲು ಶುರು ಮಾಡಿದ್ದೇನೆ. ಪುಸ್ತಕವೊಂದನ್ನು ಓದಲು ಶುರು ಮಾಡಿದರೆ ಉಸಿರುಗಟ್ಟಿದಂತೆ ಓದುವುದು ನನ್ನ ಅಭ್ಯಾಸ.  ತಿಂಡಿ ತಿನ್ನುವಾಗ, ಊಟ ಮಾಡುವಾಗ ಎಲ್ಲ ಸಮಯದಲ್ಲಿಯೂ ಅದನ್ನು ಓದಿ ಮುಗಿಸಿದ ಮೇಲೆ ಸಮಾಧಾನ. ಅಕಸ್ಮಾತ್ ಎಲ್ಲಿಯಾದರೂ ಇದಕ್ಕೆ ಅಡಚಣೆ ಆಯಿತೋ ಅಥವಾ ಆ ಪುಸ್ತಕದ ಭಾವ ನನ್ನೊಳಗೆ ಇಳಿಯಲಿಲ್ಲವೋ, ನಂತರ ಆ ಪುಸ್ತಕವನ್ನು ಪೂರ್ತಿಯಾಗಿ ಓದಲಾಗುವುದೇ ಇಲ್ಲ. ಈ ಓದುವ ಕ್ರಮ ತಪ್ಪೋ, ಏನೋ ಎನ್ನುವ ಅಳುಕು ಮನದ ಮೂಲೆಯಲ್ಲಿತ್ತು. ಅದು ‘ಹಲಗೆ ಬಳಪ’ ಓದಿದ ನಂತರ ಮರೆಯಾಯಿತು.

2 comments:

  1. ಅದರಲ್ಲಿನ ನಾಯಕಿ, ಆಕೆಗೆ ಮಲತಾಯಿ, ನಾಯಕಿಗೆ ಹುಚ್ಚು ಹಿಡಿಯುವುದು, ನಾಯಕನ ಹೆಸರು ರಾಜಶೇಖರ(?) ಆತ ಅವಳನ್ನು ಮಾನಸಿಕ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಟ್ರೀಟ್ ಮೆಂಟ್ ಕೊಡಿಸುವುದು, ಹೀಗೆ ಇದು ಕೂಡ ಮನಸ್ಸಿನಲ್ಲಿ ಅಚ್ಚೊತ್ತಿತ್ತು. idu Triveni avara kaadambari "BEKKINA KANNU"
    Nim baraha sooper keep posting something in harate!!!!!!!!!!

    ReplyDelete
  2. ಬೆಕ್ಕಿನ ಕಣ್ಣು ಅಂತಾ ಅಂದುಕೊಂಡೆ. ಧನ್ಯವಾದಗಳು

    ReplyDelete