Monday, October 29, 2012

ಉತ್ಸವ - ಭಾಗ ೧


ತುಮಕೂರಿನ ಬಳಿಯೊಂದು ಪುಟ್ಟ ಹಳ್ಳಿ, ಅಲ್ಲೊಂದು ಪುಟ್ಟದೊಂದು ಗುಡಿ. ಈ ಗುಡಿಯ ಆಡಳಿತ, ಪೂಜೆ, ಕೆಲಸ, ಕಾರ್ಯಗಳೆಲ್ಲವನ್ನೂ ಪುಟ್ಟ ಕುಟುಂಬ ವರ್ಗವೊಂದು ನೋಡಿಕೊಳ್ಳುತ್ತದೆ.  ಈ ಕುಟುಂಬ ವರ್ಗವು ರಾಮಾನುಜಚಾರ್ಯರ ಅನುನಾಯಿಗಳಾದ ಆಳ್ವಾರುಗಳಿಗೆ ಸೇರಿದ್ದು.  ಇವರನ್ನು ಸಾತಾನಿ ವೈಷ್ಣವರೆಂದು ಕೂಡ ಕರೆಯಲಾಗುವುದು.  ಈ ಗುಡಿಯಲ್ಲಿ ಯಾವುದೇ ಉದ್ಭವ ಮೂರ್ತಿಯಿಲ್ಲ. ತಿರುಪತಿ ವೆಂಕಟರಮಣ ತಮ್ಮ ದೈವವೆಂದು ಹಾಗೂ ಅಲ್ಲಿಗೆ ಯಾವತ್ತಿಗೂ ಹೋಗಿ ಬರಲು ಸಾಧ್ಯವಿಲ್ಲವೆಂದು, ಅಲ್ಲಿಂದ ತಂದ ಕಲ್ಲೊಂದನ್ನು ಇಲ್ಲಿ ಪ್ರತಿಷ್ಠಾಪಿಸಿ, ಕಳ್ಳ ಒಕ್ಕಲು ಮಾಡಿಕೊಂಡಿರುವರು! ರಂಗನಾಥನ ಗುಡಿಯೆಂದು ಹಳ್ಳಿಯಲ್ಲಿ ಪ್ರಸಿದ್ಧಿ.  ಆ ಗುಡಿಯಿರುವ ಜಾಗದ ಮಾಲೀಕರು ಲಿಂಗಾಯಿತರು! ತಮ್ಮ ಕಾಲದ ನಂತರ ಮಕ್ಕಳು ಗಲಾಟೆ ಮಾಡಿ, ಗುಡಿಯನ್ನು ಎಬ್ಬಿಸಿದರೆ ತೊಂದರೆಯಾಗುವುದೆಂದು, ತಾವಿದ್ದ ಕಾಲದಲ್ಲಿಯೇ, ರಿಜಿಸ್ಟ್ರೇಷನ್ ಮಾಡಿಸಲೆಂದು ಹಟ ಮಾಡಿ, ದೇವಸ್ಥಾನದ ಟ್ರಸ್ಟಿಗೆ ಇತ್ತೀಚೆಗೆ ಈ ಜಾಗವನ್ನು ಬಿಟ್ಟುಕೊಟ್ಟಿರುವರು. 

ಜಾಗ ತಮ್ಮದಾದ ಮೇಲೆ, ಇಲ್ಲಿ ಹಬ್ಬ, ಹುಣ್ಣಿಮೆಗಳನ್ನು ಆಚರಿಸದಿದ್ದಲ್ಲಿ, ದೇವರು ಕೋಪ ಮಾಡಿಕೊಳ್ಳುವುದಿಲ್ಲವೇ?! ತಮ್ಮ ದೇವರನ್ನು ಕೂಡ ಪ್ರಖ್ಯಾತಿಗೊಳಿಸಬೇಕಲ್ಲವೇ?! ಇತ್ಯಾದಿ ಜಿಜ್ಞಾಸೆಗಳಿಂದ ಹಾಗೂ ಈಗ ಎಲ್ಲೆಡೆ ನಡೆಯುವಂತೆ ದೇವಸ್ಥಾನದ ಜೀರ್ಣೋದ್ಧಾರದ ಕೆಲಸ ನಡೆಸಲು ತೀರ್ಮಾನವಾಯಿತು, ಆ ದೇವಸ್ಥಾನದ ಮೇಲೆ ಹಕ್ಕಿರುವ ಹತ್ತಿಪ್ಪತ್ತು ಕುಟುಂಬ ವರ್ಗದವರೆಲ್ಲರನ್ನೂ ಭೇಟಿ ಮಾಡಿ, ಇದು ನಿಮ್ಮ ಕುಟುಂಬದ ದೇವರೆಂದು ಇದಕ್ಕೆ ತಮ್ಮ ಶಕ್ತಾನುಸಾರ ಬೆಂಬಲ ವ್ಯಕ್ತಪಡಿಸಬೇಕೆಂದು ಮನದಟ್ಟುಪಡಿಸಲಾಯಿತು. ಬೇರೆ ಬೇರೆ ಊರಿನಲ್ಲಿ ನೆಲೆಸಿದ್ದು, ಒಂದೇ ಕುಟುಂಬ ವರ್ಗಕ್ಕೆ ಸೇರಿದವರಾದರೂ, ಬಂದು ಹೋಗುವ ಬಳಕೆಯಿಲ್ಲದ ಕಾರಣ, ದೂರವೇ ಆಗಿರುವ ಕುಟುಂಬದವರೆಲ್ಲರನ್ನೂ, ಈ ಕಾರಣದಿಂದ ಒಟ್ಟುಗೂಡಿಸಿ, ಈ ದೇವರಿಗೆ ಅವರು ಹರಕೆ ಹೊತ್ತಿದ್ದಕ್ಕೆ, ಮಗಳಿಗೆ ಮದುವೆ ಆಯಿತು ಎಂದೂ, ಇವರು ಯಾವುದೇ ಶುಭ ಕೆಲಸಕ್ಕೂ ಮುನ್ನ ಈ ದೇವಸ್ಥಾನಕ್ಕೆ ಬಂದು ಹೋಗುವರು, ಹಾಗಾಗಿಯೇ ಇವರಿಗೆ ಒಳ್ಳೆದಾಯಿತು ಎಂದೂ, ದೇವಸ್ಥಾನಕ್ಕೂ, ತಮಗೂ ಸಂಬಂಧವೇ ಇಲ್ಲದಂತಿದ್ದ ಒಂದೇ ಕುಟುಂಬಕ್ಕೆ ಸೇರಿದವರಿಗೆಲ್ಲರಿಗೂ ವಿವರಿಸಿ, ಹಣ ಸಂಗ್ರಹಿಸಿದ್ದಾಯಿತು.  

ಉತ್ಸವ ಮೂರ್ತಿ (ರಂಗನಾಥ) ಯನ್ನು ಪ್ರತಿಷ್ಠಾಪಿಸುವ ದಿವಸ ನಡೆದ ಉತ್ಸವ ಹೀಗಿತ್ತು.  ಮೂರ್ತಿಯನ್ನು ಶುದ್ಧಗೊಳಿಸಿ, ಎಲ್ಲಾ ತರಹದ ಮೈಲಿಗೆಯನ್ನು ತೊಳೆದು, ಶುಚಿ ಮಾಡಿ, ಪೂಜಿಸಿ, ಅಭಿಷೇಕ ಮಾಡಿ, ನಂತರ ಇಡೀ ಹಳ್ಳಿಯಲ್ಲಿ ಈ ದೇವರ ಮೂರ್ತಿಯ ಮೆರವಣಿಗೆ.  ಈ ಮೆರವಣಿಗೆಗಾಗಿ ಕೊಳದಪ್ಪಲೆ ಬಾಳೆಹಣ್ಣಿನ ರಸಾಯನ ತಯಾರು ಮಾಡುತ್ತಾರೆ. ಪ್ರಸಾದಕೆಂದು ಅಲ್ಲ! ಮೆರವಣಿಗೆ ಶುರುವಾದಾಗ ಬಹುಶಃ ಕೊರಗ ಜಾತಿಯ (?!) ಜನರು ಸುಮಾರು ೭, ೮ ಮಂದಿ ಟಮಟೆ ಬಾರಿಸಲು ತೊಡಗುತ್ತಾರೆ. ಇವರನ್ನು ಯಾವುದೋ ಹಳ್ಳಿಯಿಂದ ಉತ್ಸವಕೆಂದೇ ಕರೆಸಲಾಗಿತ್ತು.  ಟಮಟೆ ಬಾರಿಸುತ್ತಾ, ಬಾರಿಸುತ್ತಾ, ಅವರಲ್ಲೇ ೩ ಮಂದಿ ವಿಶೇಷ ವಸ್ತ್ರಧಾರಿಗಳಾಗಿ ಕೈಯಲೊಂದು ಖಡ್ಗ, ಗುರಾಣಿ ಹಿಡಿದು ಆವೇಶಭರಿತರಾಗುತ್ತಾರೆ.  ಈ ಮೂವರಿಗೊಬ್ಬ ನಾಯಕ, ಆತನ ಕೈಯಲೊಂದು ಎಲೆಗಳಿರುವ ಸಣ್ಣ ಗಿಡದ ಕೊಂಬೆ (ಎಕ್ಕದ್ದೋ / ಹಲಸಿನದ್ದೋ?! ತಿಳಿಯಲಿಲ್ಲ).  ಆತ ಇವರನ್ನು ಎಂಥದೋ ಭಾಷೆಯಲ್ಲಿ ನಿಯಂತ್ರಿಸುತ್ತಿರುತ್ತಾನೆ. ಆಗಾಗ ಆ ಕೊಂಬೆಯಿಂದ ಹೊಡೆಯುತ್ತಿರುತ್ತಾನೆ.

ಮುಂದೆ ಟಮಟೆ ಬಾರಿಸುವವರು, ಅವರ ಹಿಂದೆ ಈ ಆವೇಶ ಭರಿತರಾದ ಮೂವರು, ಅವರ ಆವೇಶವನ್ನುನಿರ್ದೇಶಿಸುವ ನಾಯಕ, ಅವರ ಹಿಂದೆ ಈ ಬಾಳೆಹಣ್ಣಿನ ರಸಾಯನ ತಿನ್ನಿಸಲು ಉತ್ಸವದ ರೂವಾರಿ ಅಥವಾ ಉತ್ಸಾಹಿ ಯುವಕರು, ಅವರ ಹಿಂದೆ ದೇವಸ್ಥಾನ ಆಡಳಿತ ಮಂಡಲಿಯ ಮುಖ್ಯಸ್ಥರು, ನಂತರ ಉತ್ಸವ ಮೂರ್ತಿಯ ಪಲ್ಲಕ್ಕಿ, ಇದರ ಹಿಂದೆ ಭಕ್ತರು! ಹೀಗೆ ಮೆರವಣಿಗೆ ಮುನ್ನಡೆಯುತ್ತದೆ. ಈ ಕೈಯಲ್ಲಿ ಖಡ್ಗ, ಗುರಾಣಿ ಹಿಡಿದು ಟಮಟೆಯ ಶಬ್ಧಕ್ಕೆ ಆವೇಶಭರಿತರಾದ ಮೂವರು, ಹನುಮಂತನ ಹಾಗೆ ಮುಖ ಮಾಡುತ್ತಾ, ಸುತ್ತ ನೆರೆದಿರುವವರನ್ನೂ ಹೆದರಿಸುತ್ತಾ, ರಸಾಯನ ನೋಡಿದ ಕೂಡಲೇ, ಅದಕ್ಕೆ ಬಾಯಿ ಹಾಕುತ್ತಾ (ಕೈಯಲ್ಲಿ ಮುಟ್ಟಲಾರರು) ಮುಂದೆ, ಮುಂದೆ ಹೋಗುತ್ತಿರುತ್ತಾರೆ. ಕೈಯಲೊಂದು ತಪ್ಪಲೆ ರಸಾಯನ ಹಿಡಿದು, ಇವರನ್ನು ಆಟವಾಡಿಸುತ್ತಾ, ಅವರಂತೆಯೇ ತಾನು ಕೂಡ ಕುಣಿಯುತ್ತಾ, ಸ್ವಲ್ಪ, ಸ್ವಲ್ಪ ರಸಾಯನವನ್ನು ಕೈಯಲ್ಲಿ ತಿನ್ನಿಸುವುದು ಉತ್ಸವದ ರೂವಾರಿಯ ಕೆಲಸ! ಸ್ವಲ್ಪ ಹೆಚ್ಚಿಗೆ ಇವರನ್ನು ಆಟವಾಡಿಸಿದ ತಪ್ಪಿಗಾಗಿ (ಆ ವ್ಯಕ್ತಿ ಬೇಕೆಂದೇ ಮಾಡಿದ್ದೋ? ತಿಳಿಯಲಿಲ್ಲ),  ರೊಚ್ಚಿಗೆದ್ದ ಆ ಮೂವರಲ್ಲಿ ಒಬ್ಬ, ಈತನನ್ನು ಹಿಡಿದು, ಬೀಳಿಸಿ, ಹೊಡೆದು, ಮೂರ್ಚೆ ಹೋಗಿದ್ದ! ಸಿಟ್ಟಾದ ನಾಯಕ ನಾವಿನ್ನೂ ಮುಂದುವರೆಯುವುದಿಲ್ಲವೆಂದು ಮುಷ್ಕರ ಹೂಡಿದ ಕಾರಣ, ದೇವಸ್ಥಾನದ ಮುಖ್ಯಸ್ಥರು ಎಲ್ಲರ ಕ್ಷಮೆ ಕೇಳಿ, ನಂತರ ಮೆರವಣಿಗೆ ಮೊದಲಿನ ಹಾಗೇ ಮುಂದುವರೆಯಿತು.  

ಇಡೀ ಹಳ್ಳಿಯಲೊಂದು ಸುತ್ತು ಹಾಕಿದ ಉತ್ಸವ ಮೂರ್ತಿಗಳ ಮೆರವಣಿಗೆ, ಹಳ್ಳಿಯಲ್ಲಿದ್ದ ಎಲ್ಲಾ ದೇವಸ್ಥಾನಗಳನ್ನು ದರ್ಶಿಸಿ, ಪೂಜೆ ಮಾಡಿಸಿಕೊಂಡು ತನ್ನ ಸ್ವಸ್ಥಾನಕ್ಕೆ ಮರಳುತ್ತಿತ್ತು. ಆಗ ನಡೆದ ವೈಚಿತ್ರ್ಯವೆಂದರೆ, ಉತ್ಸವ ಮೂರ್ತಿಗಳ ಪಲ್ಲಕ್ಕಿ, ಸುಮಾರು ೨೦ ಮಂದಿ ಅದನ್ನು ಹೊತ್ತಿದ್ದರು ಕೂಡ ಇದ್ದಕ್ಕಿದ್ದಂತೆ ಹಿಂದಕ್ಕೆ ಎಳೆಯತೊಡಗಿತು.  ಯಾರಿಗೂ ಏನೂ ಅರ್ಥವಾಗಲಿಲ್ಲ. ಎಷ್ಟೇ ಕಷ್ಟ ಪಟ್ಟರೂ ಪಲ್ಲಕ್ಕಿಯನ್ನು ಹೊತ್ತವರಿಗೆ ಮುನ್ನಡೆಯಲಾಗಲಿಲ್ಲ.  ಆಗ  ಹಳ್ಳಿಯ ಜನರಲ್ಲಿ ಯಾರೋ ಒಬ್ಬರು, ಅಲ್ಲೊಂದು ಈಶ್ವರನ ಪುಟ್ಟಗುಡಿಯಿದೆ ಎಂದು, ಬಹುಶಃ ಅಲ್ಲಿಗೆ ಹೋಗಬೇಕೆಂದು ಸೂಚಿಸಿದರು. ಪಲ್ಲಕ್ಕಿ ಅತ್ತ ಸಲೀಸಾಗಿ ನಡೆಯಿತು.  ಅಲ್ಲಿ ಪೂಜಿಸಿಕೊಂಡು ಬಂದ ಮೇಲೆ ಉತ್ಸವ ದೇವರ ಪಲ್ಲಕ್ಕಿ , ತನ್ನ ದೇವಸ್ಥಾನಕ್ಕೆ ಯಾವುದೇ ಅಡಚಣೆಯಿಲ್ಲದೆ ಮರಳಿತು.

ದೇವಸ್ಥಾನದ ಮುಂಭಾಗದಲ್ಲಿ ಬಟ್ಟೆಯೊಂದನ್ನು ಹಾಸಿ, ಉಳಿದಿದ್ದ ರಸಾಯನವನ್ನೆಲ್ಲಾ (ಸುಮಾರು ೧೦, ೧೫ ಕೆಜಿ ಬಾಳೆಹಣ್ಣಿದ್ದಿರಬಹುದು!) ಅದರ ಮೇಲೆ ಸುರಿದರು.  ಈ ಆವೇಶ ಭರಿತ ಮೂವರು (ಮೆರವಣಿಗೆ ಸಮಯದಲ್ಲಿ ಮೂರು ಸಲ ತಂಡದ ಮಂದಿ ಬದಲಾಗಿದ್ದರು) ಓಡಿ ಬಂದು, ಅಲ್ಲಿದ್ದ ರಸಾಯನವನ್ನೆಲ್ಲಾ ಬಾಯಿ ತುಂಬಾ ಮುಕ್ಕಿ (ಪೂರ್ತಿ ಖಾಲಿ ಆಯಿತು), ಸೀದಾ ದೇವಸ್ಥಾನದ ಒಳಗೆ ಓಡಿ, ಮೂರ್ಚೆ ಹೋದರು! ಈ ಮೂವರಲ್ಲಿ ಒಬ್ಬಾತನಿಗೆ ಸುಮಾರು ೭೦ ವರ್ಷ ವಯಸ್ಸಾಗಿದ್ದು, ಆತ ಕೂಡ ಕೆಜಿಗಟ್ಟಲೆ ರಸಾಯನ ತಿಂದದ್ದು ಆಶ್ಚರ್ಯ ಪಡಬೇಕಾದದ್ದೇ! ನಂತರ ಅವರ ತಲೆಗೆ ತಣ್ಣೀರು ತಟ್ಟಿ ಶುಶ್ರೂಷೆ ನಡೆಸಲಾಯಿತು.  ಪ್ರಜ್ಞೆ ಬಂದ ನಂತರ ಬಟ್ಟೆ ಬದಲಾಯಿಸಿ, ತಮ್ಮ ಕೆಲಸಕ್ಕೆ ತಕ್ಕ ಕಾಣಿಕೆ ಪಡೆದು, ಇಷ್ಟು ಹೊತ್ತಿನ ತನಕ ನಡೆದದ್ದಕ್ಕೂ, ತಮಗೂ ಸಂಬಂಧವೇ ಇಲ್ಲದಂತೆ ಅವರು ಹೊರಟರು. ಉತ್ಸವ ಮುಗಿಯಿತು. ಮೂರ್ತಿಗಳು ಪ್ರತಿಷ್ಠಾಪಿತಗೊಂಡವು. ಉತ್ಸವ ಮುಗಿದ ನಂತರ ಈ ಜನರು ದೇವಸ್ಥಾನದ ಒಳಗೆ ಹೋಗಬಾರದು.

ಉತ್ಸವದಂದು ನೆರೆದಿದ್ದವರೆಲ್ಲರಿಗೂ (ಜಾತಿ ಭೇಧವಿಲ್ಲದೆ) ಊಟೋಪಚಾರದ ವ್ಯವಸ್ಥೆ. ದೇವಸ್ಥಾನದ ಕುಟುಂಬ ವರ್ಗದವರಿಗೆ ಮೊದಲು ಬಡಿಸಬೇಕೋ? ಹಳ್ಳಿಯ ಜನರಿಗೆ ಮೊದಲು ಬಡಿಸಬೇಕೋ? ಎಂಬ ಚರ್ಚೆ ನಡೆಯುವಷ್ಟರಲ್ಲಿಯೇ, ಊಟಕ್ಕೆ ಬಹು ತಡವಾಗಿದ್ದ ಕಾರಣ, ಸ್ಥಳ ಸಿಕ್ಕಲೆಲ್ಲಾ, ಎಲ್ಲಾ ಜನರು ಕುಳಿತರು. ಬೇರೆ ಜಾತಿಯ / ‘ಕೀಳು’ ಜಾತಿಯ ಅಥವಾ ಹಾಕಿದ್ದ ಬಟ್ಟೆ ನೀಟಾಗಿಲ್ಲದೆ ಕೀಳಾಗಿ ಕಾಣಿಸಿದ್ದೋ ಗೊತ್ತಿಲ್ಲ, ಅಂಥ ಮಕ್ಕಳನ್ನು ಮಾತ್ರ ಬೆದರಿಸಿ, ಎಬ್ಬಿಸಿ, ಓಡಿಸಿ, ಕುಟುಂಬ ವರ್ಗದ ಜನ ಊಟಕ್ಕೆ ಮೊದಲ ಪಂಕ್ತಿಗೆ ಕುಳಿತರು. ಕೊಳಕು, ಕೊಳಕಾಗಿದ್ದ ದೊಡ್ಡವರು ಮಾತ್ರ ಭಂಡತನದಿಂದ ಪಾಯಸದೂಟ ಮಾಡಲು ಕುಳಿತೇ ಇದ್ದರು. ಇರಿಸು ಮುರಿಸು ಮಾಡಿಕೊಂಡು ಎಲ್ಲರೂ ಅವರ ಜೊತೆಯಲ್ಲಿಯೇ ಊಟಕ್ಕೆ ಕುಳಿತರು.  ಹಳ್ಳಿಯ ಜನಕ್ಕೆ ಮುದ್ದೇ ಮಾಡಿಸಬೇಕು, ಅನ್ನದಿಂದ ಪೂರೈಸೊಲ್ಲ ಎನ್ನುವ ಒಮ್ಮತದ ಅಭಿಪ್ರಾಯ ಬರುವ ಹೊತ್ತಿಗೆ ಎಲ್ಲರ ಊಟಾ ಮುಗಿದಿತ್ತು.  ಬೇರೆ ಜಾತಿಯವರು ಮೊದಲಿಗೆ ಕುಳಿತದಕ್ಕೆ, ನಾವು ಊಟ ಮಾಡುವುದಿಲ್ಲ, ಫಲಾಹಾರ ಮಾತ್ರ ಎಂದು ಒಂದಷ್ಟು ಜನ ಬಾಳೆಹಣ್ಣು (ರಸಾಯನ ಮಾಡಲು ತಂದು, ಉಳಿದಿದ್ದ :-), ಹಣ್ಣಿಗೆ ದೋಷವಿಲ್ಲ ಅಲ್ಲವೇ?  ) ತಿಂದು ಮುಗಿಸಿದರು.  ಅಡುಗೆ ವ್ಯವಸ್ಥೆ ಸರಿಯಿಲ್ಲವೆಂದು ಇನ್ನೊಂದಷ್ಟು ಜನ ದೂರಿದರು. ಅಂತೂ ಇಂತೂ ಉತ್ಸವ ಮುಗಿಯಿತು.  

ಉತ್ಸವ ನಡೆದ ಮೇಲೆ ಬಂದ ಮೊದಲ ದಸರಾಹಬ್ಬವನ್ನು ಆಚರಿಸದಿದ್ದರೆ ಹೇಗೆ?  ವಿಜಯದಶಮಿಯ ದಿನ ಮತ್ತೆ ಉತ್ಸವ ಹೊರಟಿತು. ಈ ಬಾರಿ ಓಲಗ ಊದುವವರು ಬಂದರು.  ಓಲಗ ಶುರುವಾದ ನಂತರ ಉತ್ಸವ ಮೂರ್ತಿಯನ್ನು ಹೊತ್ತು ಹಳ್ಳಿಯ ಹಾದಿ ಬೀದಿಗಳಲೆಲ್ಲಾ ಮೆರವಣಿಗೆ ಬಂತು.  ಶಿವನ ದೇವಸ್ಥಾನದಲ್ಲಿಯೂ, ಕಾಳಿಯ (ದೇವಿಯ) ದೇವಸ್ಥಾನದಲ್ಲಿಯೂ ಈ ಉತ್ಸವ ದೇವರ ಪೂಜೆ ನಡೆಯಿತು.  ಹಣೆಗೆ ದೊಡ್ಡದಾಗಿ ವಿಭೂತಿ ಬಳಿದುಕೊಂಡು, ತಾವು ಲಿಂಗಾಯಿತರೆಂದು ಜಗಜ್ಜಾಹೀರುಗೊಳಿಸುತ್ತಿದ್ದ ಮಂದಿಯು ಕೂಡ, ಅಷ್ಟೇ ಭಯಭಕ್ತಿಯಿಂದ, ಈ ‘ರಂಗನಾಥ’ ದೇವರಿಗೆ ಹಣ್ಣುಕಾಯಿ ಮಾಡಿಸಿದರು. ನೆಲಕ್ಕೆ ಅಪ್ಪಳಿಸಿದ ತೆಂಗಿನಕಾಯಿಯನ್ನು, ‘ಕೀಳು ಜಾತಿಯ ಜನರು ಮಾತ್ರ ಆರಿಸಿಕೊಂಡು ತಿನ್ನಬೇಕು, ನಾವೆಲ್ಲಾ ಅಲ್ಲಾ! ಎಂದು ಜೋರು ಮಾಡುತ್ತಿದ್ದ ಅಜ್ಜಿಯೊಬ್ಬರು, ಚೂರುಚೂರಾಗಿ ಕೆಳಗೆ ಬಿದ್ದಿರುವ ಕಾಯಿಯನ್ನು ಆಸೆಕಂಗಳಿಂದ ನೋಡುತ್ತಿದ್ದ ವೈಷ್ಣವರ ಮಗುವೊಂದು, ‘ನಾವು ತಿನ್ನಬಾರದಂತೆ? ಆದರೆ ಈಗ ನೋಡಿ, ನಾಯಿಯೊಂದು ತಿನ್ನುತ್ತಿದೆ! ಇದೀಗ ನಿಮ್ಮ ದೇವರಿಗೆ ಅಪಮಾನವಾದಂತಲ್ಲವೇ? ಎಂದು ವಾದಿಸುತ್ತಿದ್ದ ೧೨ ವರ್ಷ ವಯಸ್ಸಿನ ಪೋರನ ಹೊಟ್ಟೆಉರಿ ಒಂದು ಕಡೆ, ಇದ್ಯಾವುದೋ ತಮಗೆ ಸಂಬಂಧಿಸಿದಲ್ಲವೆಂಬಂತೆ, ಭಕ್ತಿ ಪರವಶರಾಗಿದ್ದ ಆತನ ಅಪ್ಪ, ಅಮ್ಮ!  

ನಂತರ ಮೆರವಣಿಗೆ ತಾತ್ಕಾಲಿಕವಾಗಿ ನಿರ್ಮಿಸಿದ್ದ ಬನ್ನಿಮಂಟಪದ ಕಡೆಗೆ ತೆರಳಿತು.  ತೆಂಗಿನ ಸೋಗೆ ಹಾಕಿ ಮಾಡಿದ್ದ ಚಪ್ಪರ, ಅದರಡಿಯಲ್ಲಿ ಹಾಸಿದ್ದ ಬಟ್ಟೆ ಮೇಲೆ ಉತ್ಸವ ದೇವರು ಕುಳಿತರು. ಅದಕ್ಕಾಗಿ ಇದ್ದ ಛತ್ರಿಯಡಿ, ಭಕ್ತರು ಅದನ್ನು ಹಿಡಿದು, ತಾವೇ ನಿಂತರು.  ಚಪ್ಪರದಡಿ ಒಂದು ಗುಳಿ ಈ ಮೊದಲೇ ತೋಡಿಟ್ಟಿದ್ದರು.  ಪಕ್ಕದಲ್ಲೇ ಬಾಳೇ ಗಿಡವೊಂದನ್ನು, ಅದಕ್ಕೆ ಬನ್ನಿ ಮರದ ಟೊಂಗೆಗಳನ್ನು ಕಟ್ಟಿಟ್ಟಿದ್ದರು.  ಈ ಬಾಳೆಗಿಡವನ್ನು ತೋಡಿಟ್ಟಿದ್ದ ಗುಳಿಯಲ್ಲಿ ನೆಟ್ಟರು.  ದೇವಸ್ಥಾನದ ಮುಖ್ಯಸ್ಥರು ಕತ್ತಿಯನ್ನು ಪೂಜೆ ಮಾಡಿ ಒಂದೇ ಏಟಿಗೆ ಬಾಳೇಗಿಡವನ್ನು ಕಡಿದರು. ಅದು ನೆಲಕ್ಕೆ ಒರಗುವ ಮುನ್ನವೇ, ಅದರಲ್ಲಿದ್ದ ಬನ್ನಿ ಎಲೆಗಳಿಗೆ ಕಿತ್ತಾಟ ನಡೆದು (ಬನ್ನೀ ಎಲೆಗಳು ನೆಲಕ್ಕೆ ಬೀಳುವ ಮುನ್ನವೇ ಪಡೆದರೆ, ಅದು ಚಿನ್ನವಂತೆ!), ಸಿಕ್ಕಿದವರಿಗೇ ಸೀರುಂಡೆ ಎಂದಂತೆ, ಸಿಕ್ಕಷ್ಟು ಹಳ್ಳಿಯವರೆಲ್ಲರೂ ತೆಗೆದುಕೊಂಡರು.  ಮನೆಗೆ ತೆರಳಿದ ನಂತರ ಅದನ್ನು ಹಿರಿಯರಿಗಿತ್ತು, ಅವರಿಗೆ ನಮಸ್ಕರಿಸಿ, ಬನ್ನಿ ಕೊಡ್ತೇವೆ, ಬಂಗಾರ ನೀಡಿ ಎಂದರೆ, ಕಿರಿಯರ ಬಾಳು ಬಂಗಾರವಂತೆ! 

(ಮುಂದುವರಿಯುವುದು)

1 comment: