Sunday, November 11, 2012

ದೀಪಾವಳಿಯ ಸಂಭ್ರಮ


ದೀಪಾವಳಿ ಎಂದೊಡನೆಯೇ ನನಗೆ ಮೊದಲು ನೆನಪಾಗುವುದು ದೀಪಾವಳಿ ವಿಶೇಷಾಂಕ ಹಾಗೂ ಎಣ್ಣೆಸ್ನಾನ. ಮನೆ ತುಂಬಾ ಮಕ್ಕಳಿದ್ದರಿಂದ, ಗಲಾಟೆ ಆಗುತ್ತದೆಯೆಂದು ಅಮ್ಮ ಮೊದಲೇ ಒಂದು ರೂಲ್ ಮಾಡಿಟ್ಟಿದ್ದಳು.  ದೊಡ್ಡವರಿಗೆ ಅಂದರೆ ನನ್ನ ಅಣ್ಣಂದಿರಿಗೆ ಎಲ್ಲದಕ್ಕೂ ಪ್ರಾಮುಖ್ಯತೆ ಹೆಚ್ಚು.   ದೊಡ್ಡ ಅಣ್ಣಂದಿರಿಗೆ ಅಮ್ಮನ ರೂಲ್ ನಿಂದಾಗಿ ಮೊದಲಿಗೆ ವಿಶೇಷಾಂಕ ಓದಲು ಸಿಗುತ್ತಿತ್ತು. ಅಕ್ಕ ಸ್ವಲ್ಪ ಬಜಾರಿ. ಹಾಗಾಗಿ ಅವಳಿಗಂತೂ ಯಾವ ರೂಲ್ ಕೂಡ ಅನ್ವಯ ಆಗುತ್ತಿರಲಿಲ್ಲ.  ಆದರೆ ಮಿಕ್ಕೆಲ್ಲಕ್ಕೂ ಬಜಾರಿತನವನ್ನು ಉಪಯೋಗಿಸಿಕೊಳ್ಳುತ್ತಿದ್ದ ಅಕ್ಕ, ಪುಸ್ತಕಗಳ ತಂಟೆಗೆ ಮಾತ್ರ ಬರುತ್ತಿರಲಿಲ್ಲ.  ಇನ್ನೂ  ಕೊನೆಯ ಅಣ್ಣನಿಗೂ, ನನಗೂ ವಯಸ್ಸಿನ ಅಂತರ ಸ್ವಲ್ಪ ಕಡಿಮೆಯಾದ್ದರಿಂದ ಅವನ ದೊಡ್ಡತನಕ್ಕೆ ನನ್ನ ಬಳಿ ಬೆಲೆ ಇರಲಿಲ್ಲ. ಎಣ್ಣೆಸ್ನಾನಕ್ಕೆ ಬೇಗ ಎದ್ದವರೂ ಮಿಕ್ಕೆಲ್ಲರ ಸ್ನಾನ ಆಗುವವರೆಗೆ ಪುಸ್ತಕವನ್ನು ಯಾವುದೇ ಅಡಚಣೆ ಇಲ್ಲದೆ ಓದಲಾಗುತ್ತಿತ್ತು.  ನನಗೂ, ಕೊನೆಯ ಅಣ್ಣನಿಗೂ ಬೇಗ ಏಳುವುದರಿಂದ ಹಿಡಿದು ಎಣ್ಣೆ ಹಚ್ಚುವಾಗಿನ ಸಂಭ್ರಮ, ಸ್ನಾನ ಎಲ್ಲದರಲ್ಲಿಯೂ ಸ್ಪರ್ಧೆ ಇರುತ್ತಿತ್ತು.  ಅಮ್ಮ ಈ ರಂಪರಾಮಾಯಣವೇ ಬೇಡವೆಂದು ಇಬ್ಬರಿಗೂ ಒಟ್ಟಿಗೆ ಎಣ್ಣೆ ಹಚ್ಚಿ, ನೆನೆಯಲು ಬಿಡುತ್ತಿದ್ದಳು. ಇಬ್ಬರೂ ಎಣ್ಣೆ ಹಚ್ಚಿದ ನಂತರ ಮೈ ಮೇಲೆಲ್ಲಾ ಜಾಮಿಟ್ರಿಯ ಚಿತ್ರಗಳನ್ನು ಬರೆದುಕೊಂಡು ಸಂಭ್ರಮಿಸುತಿದ್ದೆವು.  ನಂತರ ಬಿಸಿ ನೀರಿನ ಸ್ನಾನ!

ಆಗ ಬೆಂಗಳೂರಿನಲ್ಲಿ ನೀರಿಗೆ ಕೊರತೆಯಿರಲಿಲ್ಲ. ನಾವಿದ್ದದ್ದು ಮೆಜೆಸ್ಟಿಕ್ ನ ವಠಾರವೊಂದರಲ್ಲಿ. ದಿನದ ೨೪ ಗಂಟೆಗಳೂ! ನೀರು ಕೊಳಾಯಿಗಳಲ್ಲಿ ಬರುತ್ತಲೇ ಇತ್ತು. ನೀರು ತುಂಬುವ ಹಬ್ಬವೆಂದು ಅಕ್ಕಪಕ್ಕದ ಮನೆಯವರೆಲ್ಲರೂ ಸೇರಿ ಹಿಂದಿನ ದಿವಸವೇ ಬೀದಿಗಳಿಂದ ಹಿಡಿದು, ಇಡೀ ಮನೆ, ಬಚ್ಚಲು ಮನೆ ಎಲ್ಲವನ್ನೂ ತೊಳೆದು, ಹಂಡೆಯನ್ನು ಅತ್ಯಂತ ಚಂದದಲ್ಲಿ ತೊಳೆದು ನೀರು ತುಂಬಿಸಲಾಗುತ್ತಿತ್ತು. ಬಡವ ಬಲ್ಲಿದ ಬೇಧವಿಲ್ಲದೆ ಎಲ್ಲರೂ ಅತ್ಯಂತ ಖುಷಿಯಿಂದ ಬೀದಿ ತೊಳೆಯುವುದರಲ್ಲಿ ಪಾಲ್ಗೊಳ್ಳುತ್ತಿದ್ದರು. ಸೂರ್ಯೋದಯಕ್ಕೂ ಮುನ್ನಾ ಸ್ನಾನ ಆಗಬೇಕಾದದ್ದರಿಂದ (ನರಕಾಸುರನ ಕಥೆಯಲ್ಲಿದೆ ಅಂತೆ),  ಮೊದಲ ಹಂಡೆ ಬಿಸಿ ನೀರು ‘ಬಂಗಾರದ ನೀರು’ ಎಂದು ಅಮ್ಮ ಮೊದಲೇ ಹುರಿದುಂಬಿಸಿ, ನನಗೂ ಮತ್ತೂ ಕೊನೆ ಅಣ್ಣನಿಗೂ ಇದರಲ್ಲಿಯೂ ಸ್ಪರ್ಧೆ! ಅಂತೂ ಇಂತೂ ಇಬ್ಬರನ್ನು ಒಟ್ಟಿಗೆ ಕೂಡಿಸಿ ನೀರೆರೆಯಲು ಆರಂಭಿಸುತ್ತಿದ್ದಳು ಅಮ್ಮ.  ಆಕೆ ಇಡೀ ತಲೆಗೂದಲು ಕೈಗೆ ಬರುವಂತೆ ಸೀಗೆಕಾಯಿ ಹಾಕಿ ಉಜ್ಜಿ, ಉಜ್ಜಿ, ರಪ, ರಪ ಎಂದು ಕೈ ಅಡ್ಡ ಇಟ್ಟು ಚೊಂಬಿನಿಂದ ನೀರನ್ನು ತಲೆಯ ಮೇಲೆ ಹಾಕುತ್ತಿದ್ದ ಶೈಲಿಗೆ ಕಣ್ಣುಗಳಲ್ಲಿ ಸೀಗೆಕಾಯಿ ಹೋಗಿ ಕಣ್ಣುರಿಯಲು ಆರಂಭವಾಗುತ್ತಿತ್ತು. ಆದರೂ ಆ ಚಳಿಗೆ ತಲೆಯ ಮೇಲೆ ಬಿಸಿನೀರು ಬೀಳುತ್ತಿದ್ದದ್ದು, ಎಷ್ಟು ಹಂಡೆ ನೀರು ಖಾಲಿಯಾದರೂ ಎದ್ದೇಳಲು ಮನಸ್ಸೇ ಬರುತ್ತಿರಲಿಲ್ಲ. ಕೊನೆಗೆ ನೀರು ಹಾಕಿ, ಹಾಕಿ ಸೋತ ಅಮ್ಮನೇ ನಮ್ಮನ್ನು ಕಳಿಸಬೇಕಿತ್ತು! ಆಕೆ ಉಜ್ಜುವಾಗ ಉರಿಯಾಗಿ ನಾವೇನಾದರೂ ಸ್ವಲ್ಪ ನಕಾರ ಮಾಡಿದರೆ, ತನ್ನ ತವರು ಮನೆಯ ದೀಪಾವಳಿಯ ಸಂಭ್ರಮ, ತನ್ನ ಅಪ್ಪ ಬಾವಿಯಲ್ಲಿ ನೀರು ಸೇದಿ ಹಾಕುತ್ತಿದ್ದದ್ದು, ತನ್ನ ಅಮ್ಮ ಹಾಕುತ್ತಿದ್ದ ಕುದಿಯುತ್ತಿತ್ತು ಎಂದೇ ಹೇಳಬಹುದಾದಷ್ಟು ಬಿಸಿನೀರು ಎಲ್ಲವನ್ನೂ ಹೇಳುತ್ತಾ ಕೊನೆಗೆ ಆಕೆಯ ದೊಡ್ಡಪ್ಪ ಈ ಸಮಯದಲ್ಲಿ ಬಂದರೆ ತನಗಾಗುತ್ತಿದ್ದ ಭಯ, ಆತ ತಲೆ, ಮೈ ಉಜ್ಜುತ್ತಿದ್ದ ಶೈಲಿ, ಅದರಿಂದ ಮೈಕೈ ಎಲ್ಲವೂ ಕೆಂಪಾಗಿ ಉರಿಯುತ್ತಿದ್ದದ್ದು ಇದೆಲ್ಲವನ್ನು ಪ್ರತಿ ವರ್ಷವೂ ಆಕೆ ಹೇಳಿ, ಹೇಳಿ, ನಮಗದು ಬಾಯಿ ಪಾಠವಾಗಿಬಿಡುತ್ತಿತ್ತು. ಈಗ ಆಕೆಯ ಮೈಯಲ್ಲಿ ಕಸುವಿಲ್ಲ, ಬಹುಶಃ ಆಕೆ ಮನಸ್ಸು ಮಾಡಿದರೂ, ಸಮಯವಿಲ್ಲದ ನಮಗೆ, ದೂರದೇಶದಲ್ಲಿರುವ ಅಣ್ಣನಿಗೆ?! ನಮ್ಮಲ್ಲಿ ತಾಳ್ಮೆಯಿಲ್ಲ. ಎಲ್ಲವೂ ನೆನಪು ಮಾತ್ರ. ಆದರೂ ಅಮ್ಮ ಈಗಲೂ ಎಣ್ಣೆ ಸ್ನಾನ ಮಾಡಿಕೊಳ್ಳಲು ಹಠ ಮಾಡುವ ಮೊಮ್ಮಕ್ಕಳಿಗೆ, ತನ್ನ ತವರುಮನೆ ಕತೆ ಹೇಳದೇ ಬಿಡಳು. ಅವರಿಗೂ ಆ ಕತೆ ಬಾಯಿಪಾಠವಾಗುತ್ತಿದೆ.

ಸ್ನಾನ ಮಾಡಿದ ಕೂಡಲೇ ಓಡಿ ಹೋಗಿ ಒಂದೇ ಒಂದು ಬಿಜಲಿ ಪಟಾಕಿ ಹಚ್ಚುವುದು. ಇಡೀ ವಠಾರದಲ್ಲಿ ಎಲ್ಲಾ ಗೆಳೆಯರಿಗೂ ಸ್ಪರ್ಧೆ, ಬೆಳಿಗ್ಗೆ ಬೇಗ ಎದ್ದು ಸ್ನಾನ ಮಾಡಿ ಯಾರು ಪಟಾಕಿ ಹಚ್ಚುವರು ಅವರಿಗೊಂದು ಹೆಮ್ಮೆ!  ಮೊದಮೊದಲಿಗೆ ಅಪ್ಪನ ಸಂಬಳ ಚೆನ್ನಾಗಿದ್ದಾಗ ಡಬ್ಬ, ಡಬ್ಬ ಪಟಾಕಿ ತರುವುದು ಆತನಿಗೊಂದು ಖಯಾಲಿ.  ಇಡೀ ವಠಾರಕ್ಕೆ ನಮ್ಮ ಮನೆಯಲ್ಲಿಯೇ ಹೆಚ್ಚಿನ ಪಟಾಕಿ ತರುತ್ತಿದ್ದದ್ದು. ಕರಾವಳಿಯಿಂದ ಬಂದ ಅಮ್ಮನಿಗೆ ಪಟಾಕಿ ಹೊಡೆಯುವುದು ಅಷ್ಟೊಂದು ಇಷ್ಟವಿಲ್ಲದ್ದು, ಪದ್ಧತಿಯಿಲ್ಲದಕ್ಕೋ ಅಥವಾ ಹಣ ಸುಖಾಸುಮ್ಮನೇ ದಂಡವಾಗುತ್ತಿದೆ ಎನ್ನುವ ಸಂಕಟಕ್ಕೋ, ಅಪ್ಪ ಕುಡಿದು ಪಟಾಕಿ  ಹಚ್ಚುತ್ತಾರೆ ಎನ್ನುವ ನೋವಿಗೋ ಅಪ್ಪ, ಅಮ್ಮನಿಗೆ ಈ ವಿಷಯದಲ್ಲಿ ಸ್ವಲ್ಪ ಕಿರಿಕ್ ಆಗುತ್ತಿತ್ತು.  ಜಗಳ ಇಷ್ಟವಿಲ್ಲದ ಅಮ್ಮ ಇದಕ್ಕೆ ಕಂಡುಕೊಂಡ ಉಪಾಯವೆಂದರೆ, ದೀಪಾವಳಿಯ ೩ ರಾತ್ರಿಗಳು ಕೂಡಾ ಮನೆಮಂದಿಯನ್ನೆಲ್ಲಾ ಕರೆದುಕೊಂಡು ಹೊಸದಾಗಿ ರಿಲೀಸ್ ಆದ ಸಿನೆಮಾಗಳಿಗೆ ಹೋಗುವುದು.  ಆದರೂ ಸಿನೆಮಾಕ್ಕೆ ಹೋಗಿ ಬಂದು, ಕುಡಿದು, ಅದೇ ಮತ್ತಿನಲ್ಲಿ ವಠಾರದ ಮಂದಿಯನ್ನೆಲ್ಲಾ ಎಬ್ಬಿಸಿ, ಪಟಾಕಿ ಹಚ್ಚುತ್ತಿದ್ದ ಅಪ್ಪ!  ಈಗಲೂ ನನಗೆ ಪಟಾಕಿ ಎಂದರೆ ಕಣ್ಮುಂದೆ ಬರುವುದು ಅಪ್ಪ ತರುತ್ತಿದ್ದ ಸಾವಿರ ಪಟಾಕಿಗಳ ಸರಮಾಲೆ, ನಮ್ಮ ಮನೆಯ ಬಳಿ ಇಟ್ಟರೆ ವಠಾರದ ಅರ್ಧಕ್ಕೂ ಅದರ ಉದ್ಧ, ಅದರ ಶಬ್ಧ! ಇಷ್ಟನ್ನು ಬಿಟ್ಟರೆ ನಾನು ತೀರಾ ಚಿಕ್ಕವಳಿದ್ದರಿಂದ ಇದ್ಯಾವುದೂ ನನ್ನ ಗಮನಕ್ಕೆ ಬರುತ್ತಲೇ ಇರಲಿಲ್ಲ. ಈಗ ಹಿಂದಿರುಗಿ ನೋಡಿದಾಗ ನಾನು ಅಪ್ಪನ ಕಾಲದಲ್ಲಿ ಅಷ್ಟೊಂದು ಪಟಾಕಿ ಹೊಡೆದದ್ದು ಇಲ್ಲವೆನ್ನಬೇಕು. ಅಣ್ಣಂದಿರೇ ಹೆಚ್ಚು ಮಜಾ ಅನುಭವಿಸಿದ್ದರು.

ಅಪ್ಪನಿಗೆ ಆತನ ಸಂಬಂಧಿಕರು ಮೋಸ ಮಾಡಿ, ಅದೇ ಕೊರಗಿನಲ್ಲಿ ತೀರಿಕೊಂಡರು.  ಆತ ತೀರಿಕೊಂಡ ನಂತರ ಸಣ್ಣ ವಯಸ್ಸಿಗೆ ದುಡಿಯಲು ಶುರು ಮಾಡಿದ ಅಣ್ಣಂದಿರು ಕೊಡುತ್ತಿದ್ದ ೫ ರೂಪಾಯಿಗಳು, ನಮಗೆ ಅತ್ಯಮೂಲ್ಯವಾಗಿ ಕಾಣಿಸುತಿತ್ತು. ಅಕ್ಕ ಹಾಗೂ ನಾನು, ನಮಗೆ ಪಟಾಕಿ ಬೇಡವೆಂದು ೫ ರೂಪಾಯಿಗಳಲ್ಲಿ ನಮಗೆ ಬೇಕಾದ ಸರ, ಕ್ಲಿಪ್, ಬಳೆ ಇತ್ಯಾದಿಗಳನ್ನು ಕೊಂಡುಕೊಳ್ಳುತ್ತಿದ್ದೆವು. ಒಮ್ಮೆ ದೀಪಾವಳಿಯ ಹಿಂದಿನ ದಿವಸ, ಕ್ಲಿಪ್ ತರಲು ಹೋದಾಗ, ಏನಾಯಿತೋ ಏನೋ ಗೊತ್ತಿಲ್ಲ, ಬಳೆ ಅಂಗಡಿಯಲ್ಲಿ ಒಂದರ ಮೇಲೊಂದು ಪೇರಿಸಿಟ್ಟಿದ್ದ ಗಾಜಿನ ಬಳೆಗಳು ಕೆಳಗೆ ಬಿದ್ದು ಚೂರುಚೂರಾಗಿಬಿಟ್ಟಿತ್ತು. ಅದರ ಪಕ್ಕದಲ್ಲೇ ಇದ್ದ ನನಗೆ ‘ಶುಕ್ರವಾರ ಬೇರೆ, ಸಂಜೆಯ ಹೊತ್ತು, ಜೊತೆಗೆ ದೀಪಾವಳಿ! ಬಳೆಗಳಿಗೆ ಒರಗಿ ಬೀಳಿಸಿಬಿಟ್ಟೆಯಾ? ಎಂದೂ ಎರ್ರಾಬಿರ್ರಿ ಅಂಗಡಿಯವಳ ಕೈಯಲ್ಲಿ ಬೈಸಿಕೊಂಡು, ನಾನಲ್ಲವೆಂದೂ ಹೇಳಿದರೂ ಆಕೆ ನಂಬದೆ, ಅಲ್ಲಿಂದ ಓಡಿಸಿಬಿಟ್ಟಿದ್ದಳು.  ಅದೇ ನೋವಿನಲ್ಲಿ ಮತ್ತೊಂದು ಅಂಗಡಿಗೆ ಹೋಗಿ ಕ್ಲಿಪ್, ಬಳೆಗಳನ್ನು ಮನೆಗೆ ತಂದು, ಚಿಲ್ಲರೆ ನೋಡಿದಾಗ, ಆತ ೧೦ ರೂಪಾಯಿಗಳನ್ನು ನನಗೆ ಹೆಚ್ಚಿಗೆ ವಾಪಸ್ಸು ಕೊಟ್ಟಿದ್ದು ನೋಡಿ, ಬೇರೆಯವರ ಹಣ ಇಟ್ಟುಕೊಳ್ಳಬಾರದೆಂದು ಯೋಚಿಸಿ (ಎಷ್ಟೇ ಆಸೆಯಾದರೂ!), ಆತನಿಗೆ ವಾಪಾಸು ಕೊಟ್ಟಿದ್ದು, ಅಮ್ಮ ಕಲಿಸಿದ ನಿಯತ್ತಾಗಿತ್ತು. ಅದೊಂದು ಸಾರ್ಥಕತೆಯನ್ನು ಕೊಟ್ಟಿತ್ತು. 

ಇನ್ನೂ ಅಣ್ಣನ ಪಾಲಾದ ೫ ರೂಪಾಯಿಗೆ ತರುತ್ತಿದ್ದ ಪಟಾಕಿ, ನಮ್ಮಿಬ್ಬರಿಗೆ ಸಾಕಾಗುತ್ತಿತ್ತು. ಇಬ್ಬರೂ ಬೆಳ್ಳಂಬೆಳಗ್ಗೆ ಹಣ ಹಿಡಿದು, ಚಿಕ್ಕ ಲಾಲ್ ಬಾಗ್ ಗೆ ಹೋಗಿ, ಯಾವುದನ್ನೂ ಕೊಂಡುಕೊಂಡರೆ ಹೆಚ್ಚಿನ ಪಟಾಕಿ ದೊರೆಯುವುದು ಎಂಬುದನ್ನೆಲ್ಲಾ ಯೋಚಿಸಿ, ಚರ್ಚಿಸಿ, ಆಟಮ್ ಬಾಂಬ್ ಗಳೆಲ್ಲಾ ಆತನಿಗೆ, ಸುರುಸುರುಬತ್ತಿ ಅಂಥವೆಲ್ಲಾ ನನಗೆ ಎಂದು ನಿರ್ಧರಿಸಿ ತರುವಷ್ಟರಲ್ಲಿ ಮಧ್ಯಾಹ್ನವಾಗಿರುತ್ತಿತ್ತು. ಒಂದೇ ದಿವಸ ಹೊಡೆದು ಮುಗಿಸಿದರೆ ಇನ್ನೂ ಉಳಿದ ೨ ದಿವಸಗಳಿಗೆ ಏನು ಮಾಡುವುದು? ಎಂದು ಅಣ್ಣ ಇಷ್ಟಿಷ್ಟೇ ಪಟಾಕಿ ಹೊಡೆಯುತ್ತಿದ್ದ. ಸರ ಪಟಾಕಿ ತಂದು ಅದನ್ನು ಬಿಡಿಸಿಟ್ಟುಕೊಂಡು ಒಂದೊಂದೇ ಪಟಾಕಿ ಹೊಡೆಯುತ್ತಿದ್ದೆವು. ಆದರೂ ಅರ್ಧ ಗಂಟೆಯಲ್ಲಿ ನಮ್ಮಲ್ಲಿರುವ ಪಟಾಕಿ ಮುಗಿದು ಬಿಡುತ್ತಿತ್ತು. ಇನ್ನುಳಿದ ಸಮಯವನ್ನೇನು ಮಾಡುವುದು? ನಮ್ಮ ವಠಾರದ ಹಿಂದೆ ಒಂದಷ್ಟು ಶ್ರೀಮಂತ ಹಿಂದಿಯವರ ಮನೆಗಳಿದ್ದವು.  ಅವರ ಮನೆಯ ಮುಂದೆ ಆಚೀಚೆ ಒಂದಷ್ಟು ಹೊತ್ತು ಸುಳಿದಾಡುವುದು, ಅವರು ಪಟಾಕಿ ಹೊಡೆಯುವಾಗ ನಿಂತು ನೋಡುವುದು, ಅವರಿಗೆ ಕರುಣೆ ಉಕ್ಕಿ ಬಂದು ಕೊಟ್ಟರೆ ನಾವು ಕೂಡ ಹೊಡೆಯುವುದು, ಇಲ್ಲವಾದರೆ ಠುಸ್ ಆದ ಅವರ ಪಟಾಕಿಗಳೆಲ್ಲವನ್ನೂ ಆರಿಸಿ ತಂದು, ಅದರ ಮದ್ಧನ್ನು ಒಂದು ಪೇಪರಿಗೆ ನಿಧಾನವಾಗಿ ಸುರಿದು, ಆ ಪೇಪರ್ ಗೆ ಬೆಂಕಿ ಹಚ್ಚಿ ಮಜಾ ನೋಡುವುದು!  ಒಮ್ಮೆಯಂತೂ ಹೀಗೆ ಪೇಪರ್ ಗೆ ಸುರಿದ ಮದ್ಧು ಹೆಚ್ಚಾಗಿ, ಅಣ್ಣನ ಮುಖದ ಹತ್ತಿರದವರೆಗೆ ಬೆಂಕಿ ಬಂದು, ಭಯವಾಗಿತ್ತು.  ಪುಣ್ಯಕ್ಕೆ ಯಾವುದೇ ರೀತಿಯ ಹಾನಿಯಾಗಿರಲಿಲ್ಲ. ಈಗ ಪಟಾಕಿ ಹೊಡೆಯುವ ಮನೆಗಳ ಮುಂದೆ, ಮಕ್ಕಳು ಸುಳಿದಾಡುತ್ತಿದ್ದರೆ ಏಕೋ ಏನೋ, ಆ ಮುಖಗಳಲ್ಲಿ ನನಗೆ, ನನ್ನ ಹಾಗೂ ಅಣ್ಣನ ಮುಖಗಳೇ ಕಾಣಿಸುತ್ತವೆ.  ನಮ್ಮ ಮನೆಯಲ್ಲಿರುವ ಪಟಾಕಿಗಳನ್ನು ಒಂದಿಷ್ಟೂ ಹೆಚ್ಚಿಗೆ ಕೊಟ್ಟು ಕಳುಹಿಸುವಾಗ, ಮನಕ್ಕೆ ತೃಪ್ತಿ ದೊರೆಯುತ್ತದೆ.

ವಠಾರದ ಮಕ್ಕಳೆಲ್ಲರಿಗೂ ರಜೆಯಾದ್ದರಿಂದ ನಮ್ಮನ್ನು ಹೇಳುವವರು, ಕೇಳುವವರು ಯಾರೂ ಇರುತ್ತಿರಲಿಲ್ಲ.  ಅಲ್ಲೊಂದು ಮೂಲೆಯಲ್ಲಿ ಅಜ್ಜಿ, ತಾತ ಇಬ್ಬರೇ ಮನೆ ಮಾಡಿಕೊಂಡಿದ್ದರು. ಅವರಿಗೆ ಮಕ್ಕಳಿರಲಿಲ್ಲ.  ತಾತನಿಗೆ ಏಳಲು ಕೂಡ ಆಗುತ್ತಿರಲಿಲ್ಲ. ಮಲಗೇ ಇದ್ದರೂ, ತಾತನ ರೋಷಕ್ಕೇನೂ ಕಡಿಮೆ ಇರಲಿಲ್ಲ. ಮಕ್ಕಳು ಆಟ ಆಡಿದರೂ, ಬೈಯುವುದು, ಕೂಗಿಕೊಳ್ಳುವುದು ಎಲ್ಲವನ್ನೂ ಮಾಡುತ್ತಿದ್ದರು.  ಹಾಗಾಗಿ ದೀಪಾವಳಿ ಬಂದರೆ ಅವರ ಮೇಲೆ ಸೇಡು ತೀರಿಸಿಕೊಳ್ಳುವ ಚಟ ಎಲ್ಲಾ ಮಕ್ಕಳಿಗೂ! ಅವರ ಮನೆಯ ಮುಂದೆ ಬೇಕಂತಲೇ ಈರುಳ್ಳಿ ಬಾಂಬುಗಳನ್ನು ಇಟ್ಟು ಹೊಡೆಯುವುದು, ಆಚೀಚೆ ಪೋಲೀಸರು ಓಡಾಡುವ ಸಮಯದಲ್ಲಿ ಸೆಗಣಿಯಲ್ಲಿ ಪಟಾಕಿ ಇಟ್ಟು ಹೊಡೆಯುವುದು, ಡಬ್ಬದೊಳಗೆ ಪಟಾಕಿ ಇಟ್ಟು ಹೊಡೆಯುವುದು, ಒಂದೇ, ಎರಡೇ, ಇದೆಲ್ಲವೂ ತಪ್ಪು ಎಂಬುದೂ ನಮಗೆ ತಿಳಿದಿರಲಿಲ್ಲಾ.  ಯಾರೂ ಎಷ್ಟು ಕಿತಾಪತಿ ಮಾಡಿ ಪಟಾಕಿ ಹೊಡೆಯುತ್ತಾರೋ ಎಂಬುದಷ್ಟೇ ಮುಖ್ಯವಾಗಿತ್ತು.  ನಾವು ಮಕ್ಕಳು ಎಷ್ಟೇ ಕಿತ್ತಾಟ ಮಾಡಿಕೊಂಡರೂ, ನಮ್ಮ ಈ ಕಿತಾಪತಿ ವಿಷಯಗಳು ದೊಡ್ಡವರ ಬಳಿ ಹೋಗುತ್ತಿರಲಿಲ್ಲ. ಅಜ್ಜಿ ಬಂದು ದೂರುವಾಗ ನಾವೆಲ್ಲರೂ ಒಗ್ಗಟ್ಟಿನಿಂದ ನಮಗೇನೂ ತಿಳಿಯದು ಎಂಬಂತೆ ಮುಖ ಮಾಡಿಕೊಂಡು ಮುಗ್ಧರಂತೆ ನಿಲ್ಲುತ್ತಿದ್ದದ್ದು, ದೊಡ್ಡವರಿಗೆ ಪಾಪ! ಆಕೆಗೆ ಮಕ್ಕಳಿಲ್ಲದ ಹೊಟ್ಟೆ ಉರಿಗೆ, ಈ ಮಕ್ಕಳ ಮೇಲೆ ದ್ವೇಷ ಸಾಧಿಸುತ್ತಾಳೆ! ಎಂಬಷ್ಟು ಅಜ್ಜಿ ತಪ್ಪಿತಸ್ಥೆಯಾಗಿಬಿಡುತ್ತಿದ್ದಳು. ಈಗಿನ ಮಕ್ಕಳೆಲ್ಲರಿಗೂ ಈ ಪಟಾಕಿ, ಮಕ್ಕಳ ಗುಂಪು, ಆಟ ಎಲ್ಲವೂ ವಿಡಿಯೋಗಳ ಒಳಗಿನ ಕ್ಲಿಪ್ಪಿಂಗ್ಸ್ ಗಳಂತೆ, ಜೊತೆಗೆ ಶಾಲೆಯಲ್ಲಿ ಹೇಳಿ ಕೊಡುವ ಪಟಾಕಿಯಿಂದಾಗುವ ಪರಿಸರ ಹಾನಿ, ಅರ್ಥವಾಗುತ್ತದೆಯೋ ಇಲ್ಲವೋ, ಟೀಚರ್ಸ್ ಗಳನ್ನು ಮೆಚ್ಚಿಸಬೇಕೆನ್ನುವ ಹಂಬಲ, ಎಲ್ಲಕ್ಕಿಂತ ಹೆಚ್ಚಾಗಿ ಬಿಪಿಒ ಕಂಪೆನಿಗಳು, ಸಾಫ್ಟ್ ವೇರ್ ಕಂಪೆನಿಗಳು ನಮ್ಮ ಹಬ್ಬಗಳಿಗೆ ನೀಡದ ರಜೆಗಳು (ಅಮೇರಿಕಾದಲ್ಲಿ ರಜೆ ಇದ್ದರೆ ಮಾತ್ರ ಇಲ್ಲಿಯವರಿಗೂ ಇರುವ ರಜೆ!), ಈ ಎಲ್ಲಾ ಥ್ರಿಲ್ ಗಳನ್ನು ಕಡಿಮೆ ಮಾಡುತ್ತಿವೆ ಎಂದರೆ ತಪ್ಪಾಗಲಾರದು. ಈಗ ದೀಪಾವಳಿ ಎಂದರೆ ಮತ್ತೊಂದು ರಜೆಯಷ್ಟೇ!

3 comments:

 1. This comment has been removed by the author.

  ReplyDelete
 2. ಚಂದದೊಂದು ನಿರೂಪಣೆ !!! ಮೊದಲು ತುಂಬ ಕುತೂಹಲದಿಂದ ಓದಿಸಿಕೊಂಡು ಹೋಯಿತು .ಕೊನೆಗೆ ಕಣ್ಣು ತೇವವಾಯಿತು .....

  ReplyDelete
 3. ನಿಮ್ಮ ನಿರೂಪಣೆ ಚೆನ್ನಾಗಿದೆ.
  ಬರೆಯುತ್ತಿರಿ.

  ReplyDelete