Friday, March 15, 2013

ಸಿಂಪಲ್ಲಾಗೊಂದು......................


ಟಿವಿಯಲ್ಲಿ ಆಗ ತಾನೇ ಪ್ರಾರಂಭಗೊಂಡಿದ್ದ ದೈನಿಕ ಧಾರಾವಾಹಿಗಳನ್ನು ಇಷ್ಟ ಪಟ್ಟು, ತಮ್ಮೆಲ್ಲಾ ಕೆಲಸ ಕಾರ್ಯಗಳನ್ನು ಬಿಟ್ಟು ನೋಡುತ್ತಿದ್ದ ಹೆಂಗಳೆಯರು, ಐಟಿ, ಬಿಟಿ ಇಂಡಸ್ಟ್ರಿಗಳಿಂದಾಗಿ ಏರು ಪೇರಾದ ಸಮಯದ ಅಭಾವ, ಜೊತೆಗೆ ಅಲ್ಪಸ್ವಲ್ಪ ಸಮಯ ದೊರೆತಾಗ ಬೇರೆ ಭಾಷೆಯ ಚಿತ್ರಗಳ ಪೈರಸಿ ಸಿಡಿಗಳನ್ನು ಮನೆಯಲ್ಲಿಯೇ ನೋಡುವ ವ್ಯವಸ್ಥೆ, ಜೊತೆಗೆ ಅದದೇ ರವಿಚಂದ್ರನ್ ಚಿತ್ರಗಳಲ್ಲಿನ  ಹೀರೋಯಿನ್ ಗಳ ಆಪಲ್?! ಹೊಕ್ಕುಳುಗಳು,  ಉಪೇಂದ್ರರ ಹುಚ್ಚುತನ, ಶಿವರಾಜ್ ಕುಮಾರ್, ರಾಧಿಕಾ ಅಣ್ಣ ತಂಗಿ ಸೆಂಟಿಮೆಂಟ್, ರಮೇಶ್ ನ ತ್ಯಾಗ ರಾಜ ಚಿತ್ರಗಳು, ಸುದೀಪ್, ದರ್ಶನ್ ನ ಲಾಂಗು ಮಚ್ಚು ಚಿತ್ರಗಳು, ಜಗ್ಗೇಶ್, ಸಾಧು ಕೋಕಿಲ ರವರ ಹಳಸಲು ಹಾಸ್ಯ ನೋಡಿ ಬೇಸತ್ತಿದ್ದ ಕನ್ನಡದ ಜನತೆ, ಚಿತ್ರಮಂದಿರಗಳತ್ತ ಬೆನ್ನು ಹಾಕಿಬಿಟ್ಟಿದ್ದರು.  

ಇಂಥ ಸಮಯದಲ್ಲಿ ರಿಲೀಸ್ ಆದ ‘ಮುಂಗಾರು ಮಳೆ’ ಚಿತ್ರ, ಛಾಯಾಗ್ರಹಣದಿಂದ ಹಿಡಿದು ಹಾಡುಗಳ ತನಕವೂ ಎಲ್ಲವೂ ಹೊಸತನದಿಂದ ಕೂಡಿತ್ತು. ಅನಂತನಾಗ್ ಅವರ ಸಹಜ ನಟನೆ, ಗಣೇಶ್ ನಗುನಗುತ್ತಲೇ ಮಾತಾಡುವ ಪರಿ, ಅದಕ್ಕೆ ತಕ್ಕಂತೆ ಇದ್ದ ಸಂಭಾಷಣೆ,  ಬಳಸಿಕೊಂಡಂತಹ ಪ್ರಾಪ್ಸ್ (ಮೊಲ, ಮಳೆ, ಮುಂತಾದವು), ಪೋಷಕ ಪಾತ್ರದವರ ಅದ್ಭುತ ನಟನೆ ಎಲ್ಲವೂ ಕೂಡ ‘ಮುಂಗಾರು ಮಳೆ’ ಒಂದು ದೃಶ್ಯಕಾವ್ಯದಂತೇ ಪ್ರತಿಯೊಬ್ಬರನ್ನೂ ಮೋಡಿ ಮಾಡಿಬಿಟ್ಟಿತು. ಇಷ್ಟೊಂದು ಮಂದಿ ವೀಕ್ಷಕರು ಇಷ್ಟು ದಿವಸ ಎಲ್ಲಿ ಅಡಗಿದ್ದರು? ಎಂದು ಕನ್ನಡ ಚಿತ್ರರಂಗ ಮೂಗಿನ ಮೇಲೆ ಬೆರಳಿಟ್ಟು ನೋಡಿತ್ತು. ನಿರ್ದೇಶಕ ಮಾತ್ರ ಈ ಚಿತ್ರದ ಅದ್ಭುತ ಯಶಸ್ಸಿಗೆ ಕಾರಣವಾಗಿರಲಿಲ್ಲ.  ಈ ಚಿತ್ರಕ್ಕಾಗಿ ದುಡಿದ ಪ್ರತಿಯೊಬ್ಬರೂ ಕೂಡ ಒಬ್ಬರಿಗೊಬ್ಬರು ಪೂರಕವಾಗಿ ಕೆಲಸ ಮಾಡಿದ್ದರು. ಈ ಚಿತ್ರವು ಪ್ರಪ೦ಚದಾದ್ಯಂತ ಮಲ್ಟಿಪ್ಲೆಕ್ಸ್ ಗಳಲ್ಲಿ ಒಂದು ವರ್ಷ! ಓಡಿದ ಮೊದಲ ಚಿತ್ರ ಎಂಬ ಹೆಸರು ಕೂಡ ಗಳಿಸಿಕೊಂಡುಬಿಟ್ಟಿತು. ಈಗಲೂ ಕೂಡ ಈ ಚಿತ್ರವನ್ನು ನೋಡುತ್ತಿದ್ದರೆ ಯಾವುದಾದರೂ ಸಾಹಿತ್ಯವನ್ನು ಓದುತ್ತಿರುವ ಭಾಸವಾಗುತ್ತದೆ.  ಚಿತ್ರದಷ್ಟೇ ಪ್ರಖ್ಯಾತಿಯಾಗಿದ್ದು ಅದರ ಮೇಕಿಂಗ್ ಬಗೆಗಿನ ಪುಸ್ತಕ. ಇನ್ನು ಮುಂದೆ ಕನ್ನಡ ಚಿತ್ರರಂಗದವರನ್ನು ಹಿಡಿಯುವವರೇ ಇಲ್ಲ ಎನ್ನುವಂಥ ಆಶಾಭಾವನೆಯನ್ನು ಈ ಚಿತ್ರ ಹುಟ್ಟುಹಾಕಿದ್ದಂತೂ ಸುಳ್ಳಲ್ಲ. 

ದುರಂತವೆಂದರೆ ಮುಂಗಾರು ಮಳೆ ಚಿತ್ರ ರಿಲೀಸ್ ಆಗಿ ೬, ೭ ವರ್ಷಗಳು ಕಳೆದರೂ ಕೂಡ ಅಂತಹದೊಂದು ಘಟನೆ ಕನ್ನಡ ಚಿತ್ರರಂಗದಲ್ಲಿ ಪುನರಾವರ್ತನೆಯಾಗದೇ ಇದ್ದದ್ದು, ಅಂತಹದೊಂದು ಚಮತ್ಕಾರಕ್ಕಾಗಿ ಈಗಲೂ ಹಗಲಿರುಳು ಪ್ರಯತ್ನ ಪಡುತ್ತಿರುವ ಕನ್ನಡ ನಿರ್ಮಾಪಕ, ನಿರ್ದೇಶಕರು! ಆದರೆ ಪರಿಸ್ಥಿತಿ ಮಾತ್ರ ಶೋಚನೀಯ. ಅಲ್ಲೊಂದು, ಇಲ್ಲೊಂದು ಆಶಾದಾಯಕ ಬೆಳವಣಿಗೆ ಕಂಡು ಬಂದರೂ ಕೂಡ, ಯಾರಿಗೂ ಕೂಡ ‘ಮುಂಗಾರು ಮಳೆ’ ಎಫೆಕ್ಟ್ ನಿಂದ ಹೊರಗೆ ಬರಲಾಗಲಿಲ್ಲ. ನಮ್ಮ ಸಿನೆಮಾರಂಗದಲ್ಲೊಂದು ಮೂಢನಂಬಿಕೆ. ಉದಾಹರಣೆಗೆ  ಬುಧವಾರ ಚಿತ್ರದ ಶೂಟಿಂಗ್ ಶುರುವಾಗಿದ್ದು, ಆ ಚಿತ್ರ ೧೦೦ ದಿವಸಗಳು ಓಡಿಬಿಟ್ಟರೆ, ಇನ್ನು ಮುಂದೆ ಆ ನಿರ್ಮಾಪಕ, ನಿರ್ದೇಶಕ, ನಟ, ನಟಿಯರು ತಮ್ಮ ಮುಂದಿನ ಚಿತ್ರಗಳನ್ನೆಲ್ಲಾ ಬುಧವಾರವೇ ಶುರು ಮಾಡುತ್ತಾರೆ, ಅಥವಾ ಆ ಹೀರೋಯಿನ್ ಳ ಐಟಮ್ ಡಾನ್ಸ್ ಇದ್ದು ಆ ಚಿತ್ರ ಸಕ್ಸಸ್ ಆದರೆ, ಇನ್ನು ಮುಂದಿನ ಚಿತ್ರಗಳಲ್ಲಿ ಬೇಕಂತಲೇ ಆಕೆಯ ನೃತ್ಯವನ್ನು ತುರುಕುತ್ತಾರೆ.... ಹೀಗೆ.  ಮುಂಗಾರು ಮಳೆ ಚಿತ್ರದ ಅತ್ಯದ್ಭುತ ಯಶಸ್ಸಿನಿಂದಾಗಿ ಕನ್ನಡ ಚಿತ್ರರಂಗದಲ್ಲಿ ಈ ಮೊದಲೇ ಇದ್ದ ಈ ಮೂಢನಂಬಿಕೆಗೆ ಇಂಬು ಸಿಕ್ಕಿ, ಆ ಚಿತ್ರದಲ್ಲಿದ್ದ ಡೈಲಾಗ್ಸ್ ಆಗಬಹುದು ಅಥವಾ ಹಾಡುಗಳಾಗಬಹುದು, ನಟ, ನಟಿ, ನಿರ್ದೇಶಕರಾಗಿರಬಹುದು, ಈ ಕಾರಣಕ್ಕಾಗಿಯೇ ಆ ಚಿತ್ರಕ್ಕೆ ಯಶಸ್ಸು ಸಿಕ್ಕಿದೆಯೆಂದು ತಮಗನ್ನಿಸಿದ ಕಾರಣಗಳನ್ನಿಟ್ಟುಕೊಂಡು ಈಗಲೂ ಅದರ ನಿಟ್ಟಿನಲ್ಲೇ ತಯಾರಾಗುತ್ತಿರುವ ಚಿತ್ರಗಳು! ಅದರಲ್ಲೊಂದು ‘ಸಿಂಪಲ್ಲಾಗೊಂದು ಲವ್ ಸ್ಟೋರಿ’!

ಸಾಮಾಜಿಕ ತಾಣದಲ್ಲಿ ಮೊದಲಿಗೆ ‘ಕಿರು ಚಿತ್ರ’ ದಂತೆ ಟ್ರೇಲರ್ ರಿಲೀಸ್ ಮಾಡಿ, ಅದರ ಅತ್ಯದ್ಭುತ ಯಶಸ್ಸಿನಿಂದ ಸ್ಪೂರ್ತಿಗೊಂಡು, ತಯಾರಾದ ಈ ಚಿತ್ರ, ಹೊಸದೊಂದು ಟ್ರೆಂಡ್ ಹುಟ್ಟು ಹಾಕಿತು. ಫೇಸ್ ಬುಕ್ ವಾಲ್ ಗೆ ಅಂಟಿಕೊಂಡಿರುವ ಜನರು ಚಿತ್ರದ ಟ್ರೇಲರ್ ಅನ್ನು ಮುಗಿಬಿದ್ದು ನೋಡಿ, ತಾ ಮುಂದೆ, ನಾ ಮುಂದೆ ಎಂಬಂತೆ ಶೇರ್ ಮಾಡಿದರು. ಚಿತ್ರದ ಮುಹೂರ್ತ ಶುರುವಾಗುವ ಮೊದಲೇ ಯಶಸ್ಸಾಗುವ ಎಲ್ಲಾ ಲಕ್ಷಣಗಳು ಈ ಮೂಲಕ ಕಂಡುಬಂದಿತು. ಟ್ರೇಲರ್ ನಲ್ಲಿದ್ದ ಪಟಾಕಿಯಂಥ ಡೈಲಾಗ್ಸ್, ಚಿನಕುರಳಿಯಂಥ ನಾಯಕ, ನಾಯಕಿ, ಒಳ್ಳೇ ಕ್ಯಾಮೆರಾ ವರ್ಕ್ ಎಲ್ಲವೂ ಕೂಡ ಚಿತ್ರದ ಬಿಡುಗಡೆಯಾಗುವ ಮುನ್ನವೇ, ಚಿತ್ರ ಎಂದು ಬಿಡುಗಡೆಯಾದೀತೋ? ಎಂಬ ಕಾತುರವನ್ನು ಪ್ರೇಕ್ಷಕರಲ್ಲಿ ಉಂಟು ಮಾಡಿತು. ತಂಡದಲ್ಲಿ ಪ್ರತಿಯೊಬ್ಬರೂ ಹೊಸಬರಾಗಿದ್ದರಿಂದ ಸಾಮಾಜಿಕ ತಾಣಗಳನ್ನು ತಮ್ಮ ಪಬ್ಲಿಸಿಟಿಗಾಗಿ ಬಳಸಿಕೊಂಡಿದ್ದು, ಆ ಮೂಲಕ ಕನ್ನಡ ಚಿತ್ರರಂಗಕ್ಕೆ ಆಶಾದಾಯಕ ಬೆಳವಣಿಗೆಯನ್ನು ಉಂಟು ಮಾಡಿದ್ದು, ಎಲ್ಲವನ್ನೂ ಗಮನಿಸಿ ನೋಡಿದಾಗ ಈ ಚಿತ್ರತಂಡದ ಶ್ರಮಕ್ಕೆ ಅಭಿನಂದನೆಯನ್ನು ಸಲ್ಲಿಸಲೇಬೇಕು. ತಮಗೆ ದೊರೆತ ಈ ಅಭೂತ ಪೂರ್ವ ಬೆಂಬಲವನ್ನು ಈ ಚಿತ್ರತಂಡದವರು ಒಂದಿಷ್ಟು ಪ್ರಯತ್ನ ಪಟ್ಟಿದ್ದರೆ, ಕನ್ನಡ ಚಿತ್ರರಂಗದಲ್ಲಿ ಮುಂಗಾರು ಮಳೆಯಂತೆ ಮತ್ತೊಂದು ಪವಾಡ ನಡೆಯುತ್ತಿತ್ತು. ವಿಪರ್ಯಾಸವೆಂದರೆ, ಚಿತ್ರವು ‘ಮುಂಗಾರು ಮಳೆ ಭಾಗ ೨’ ರಂತೆ ಕಾಣುವುದು!.  

ಮುಂಗಾರು ಮಳೆ ಚಿತ್ರದಲ್ಲಿ ನಾಯಕನ ಪ್ರೀತಿ ಸೋತು, ನಾಯಕಿ ಮತ್ತೊಂದು ಮದುವೆಯಾಗುವ ಸಂದರ್ಭದಲ್ಲಿ,  ‘ಮೊಲ’ ಸತ್ತಾಗ ಮಣ್ಣು ಮಾಡಿ ಹೊರಡುವ ನಾಯಕ ಎಲ್ಲಿಗೆ ಹೋದ? ಎಂದೇನಾದರೂ ಕನ್ನಡ ಪ್ರೇಕ್ಷಕರು ತಲೆಕೆಡಿಸಿಕೊಂಡಿದ್ದರೆ, ಅದಕ್ಕೆ ಉತ್ತರವಾಗಿ ಈ ಚಿತ್ರದಲ್ಲಿ ತಂಗಿಯ ಬಲವಂತಕ್ಕಾಗಿ, ಮತ್ತೊಬ್ಬ ನಾಯಕಿಯ ಮನೆ ಮುಂದೆ ಪ್ರೊಪೋಸ್ ಮಾಡಲು ಕಾಣಿಸಿಕೊಳ್ಳುತ್ತಾನೆ. ನಾಯಕನ ತಂಗಿ ‘ರೇಡಿಯೋ ಜಾಕಿ’. ಈಗಾಗಲೇ ಎಲ್ಲ ದೃಶ್ಯಗಳನ್ನು ತೆರೆಯ ಮೇಲೆ ನೋಡಿದ್ದರೂ, ಮತ್ತೊಮ್ಮೆ ಆಕೆಯ ಬಾಯಲ್ಲಿ ಚಿತ್ರದಲ್ಲಿ ಏನಾಗುತ್ತಿದೆ? ಎಂಬುದನ್ನು ನಿರ್ದೇಶಕರು ಹೇಳಿಸುತ್ತಾರೆ! ನಾಯಕ ರೇಡಿಯೋ ಜಾಕಿಯ ಅಣ್ಣನಾಗಿರುವುದರಿಂದಲೋ ಏನೋ?  ಪ್ರತಿಯೊಂದು ದೃಶ್ಯಗಳು ವಾಚ್ಯವಾಗಿಬಿಡುತ್ತವೆ. ಸನ್ನಿವೇಶಕ್ಕೂ, ಸಂಭಾಷಣೆಗೂ ಸಂಬಂಧವೇ ಇಲ್ಲದೇ, ಪ್ರತಿಯೊಂದು ವಾಕ್ಯ ರಚನೆಯನ್ನೂ ಪಂಚಿಂಗ್ ಆಗಿಸುವ ಯತ್ನದಲ್ಲಿ, ಶಿಳ್ಳೆ ಪಡೆಯುವ ಪ್ರಯತ್ನದಲ್ಲಿ, ಯಾವ ದೃಶ್ಯಗಳೂ ಕೂಡ ಮನಸ್ಸಿನಲ್ಲಿ ಅಚ್ಚೊತ್ತುವುದಿಲ್ಲ. ಇದರ ಜೊತೆಗೆ ನಾಯಕನ ಮನಸ್ಸಿನ ಆಲೋಚನೆಗಳೆಲ್ಲವನ್ನೂ ವಾಚ್ಯವಾಗಿಸಿರುವುದು ಅಸಹನೀಯವಾಗಿಬಿಡುತ್ತದೆ. ದೃಶ್ಯಮಾಧ್ಯಮಗಳ ಔಚಿತ್ಯವೇನು? ಎಂದು ಪ್ರಶ್ನಿಸಿಕೊಳ್ಳುವಂತೆ ಮಾಡಿಬಿಡುತ್ತದೆ. ರೇಡಿಯೋ ನಾಟಕಗಳಿಗೂ, ಈ ಚಿತ್ರಕ್ಕೂ ವ್ಯತ್ಯಾಸವೇ ಇಲ್ಲವೆನಿಸಿ ಕಿರಿಕಿರಿಯಾಗುತ್ತದೆ. ಉದಾಹರಣೆಗೆ - ಈ ಚಿತ್ರದ ದೃಶ್ಯವೊಂದರಲ್ಲಿ ನಾಯಕಿ, ನಾಯಕನ ಕೈ ಅಕಸ್ಮಾತ್ತಾಗಿ ಹಿಡಿಯುತ್ತಾಳೆ.  ಆಗ ಆತನಿಗೆ ರೋಮಾಂಚನವಾಗುತ್ತದೆ.  ಅದನ್ನು ದೃಶ್ಯರೂಪದಲ್ಲಿಯೇ, ನಟನೆಯಲ್ಲಿಯೇ  ತೋರಿಸಲು ಸಾಧ್ಯ.  ಆದರೆ ಬ್ಯಾಕ್ ಗ್ರೌಂಡ್ ನಲ್ಲಿ ಅದನ್ನು ಕೂಡ ವಾಚ್ಯವಾಗಿಸುತ್ತಾರೆ.   

ನಾಯಕ ಆಗಾಗ ‘ಮುಂಗಾರು ಮಳೆ’ ಯ ಭಾಷಣೆ ಅಥವಾ ಚಿತ್ರದ ಸನ್ನಿವೇಶಗಳನ್ನು (ಉದಾ - ತನ್ನ ಹಳೆಯ ಪ್ರೇಯಸಿ, ತನ್ನ ಎದೆಯ ಮೇಲೆ ಕಾಲಿಟ್ಟು ಹೋದಳು! / ಚಿತ್ರದ ನಾಯಕಿಯ ಹೆಸರು ‘ನಂದಿನಿ’ ಎನ್ನುತ್ತಾ, ‘ಬಂಧನ ಹಾಗೂ ಮುಂಗಾರು ಮಳೆಯ ನಾಯಕಿಯರ ಹೆಸರು ಕೂಡ ನಂದಿನಿ ಆಗಿತ್ತು ಎಂದು ನೆನಪಿಸುತ್ತಾ, ಲೇವಡಿ ಮಾಡುವುದು ಹೀಗೆ.... ದೃಶ್ಯಗಳಲ್ಲೂ ಬೇಕಿದ್ದರೂ, ಬೇಡದಿದ್ದರೂ ಸುಮ್ಮನೆ ಮಳೆಯ ದೃಶ್ಯಗಳನ್ನು ತೋರಿಸುವುದು, ‘ಪಂಚರಂಗಿ’, ‘ಡ್ರಾಮಾ’ ಮುಂತಾದ ಚಿತ್ರಗಳಲ್ಲಿ ಬ್ಯಾಕ್ ಗ್ರೌಂಡ್ ನಲ್ಲಿ ಭಾಗವತರ ಹಾಗೇ, ಸೂತ್ರಧಾರಿಯ ಹಾಗೇ ಮಾತನಾಡಿದ ಸಂಭಾಷಣೆಗಳೂ, ಯಥಾವತ್ತಾಗಿ ಅದೇ ಶೈಲಿಯಲ್ಲಿ ಈ ಚಿತ್ರದಲ್ಲಿ ಪ್ರತಿಯೊಂದು ಸನ್ನಿವೇಶಗಳಲ್ಲೂ ಮರುಕಳಿಸುತ್ತವೆ.  ಬಹುಶಃ ಪ್ರೇಕ್ಷಕರಿಗೆ ‘ಸ್ವಗತ’ ಅರ್ಥವಾಗುವುದಿಲ್ಲ ಎಂದೋ? ಅಥವಾ ತಪ್ಪಾಗಿ ತಿಳಿದುಕೊಂಡರೆ? ಎಂದೋ ನಿರ್ದೇಶಕರು ಭಾವಿಸಿರಬಹುದು.  ಕಥೆಗೆ ಸಂಬಂಧವಿಲ್ಲದೇ ಇರುವ ದೃಶ್ಯಗಳನ್ನು, ಬೇಡದಿರುವ ದೃಶ್ಯಗಳನ್ನು ಅನಗತ್ಯವಾಗಿ ತುರುಕಿರುವುದು (ನಾಯಕಿ ಮಶ್ರೂಮ್ ಬೆಳೆಯುವುದು, ‘ಇಂತಿ ನಿನ್ನ ಪ್ರೀತಿಯ’ ಚಿತ್ರದಲ್ಲಿಲ್ಲದ ತುಣುಕುಗಳನ್ನು ಆ ಚಿತ್ರದ್ದು ಎಂಬಂತೆ ತೋರಿಸುವುದು...ಹೀಗೆ).  ಕಥೆ, ಸಂಭಾಷಣೆ, ನಿರ್ದೇಶನ, ಛಾಯಾಗ್ರಹಣ ಎಲ್ಲದರಲ್ಲೂ ಕೂಡ (ನಾಯಕ, ನಾಯಕಿಯ ನಟನೆಯ ಹೊರತು) ಯೋಗರಾಜ ಭಟ್ಟರನ್ನು ತದ್ರೂಪು ಅನುಕರಿಸಿರುವುದು ವಿಷಾದನೀಯ.

ಹಿಂದೆ ಒಮ್ಮೆ ವಸುಧೇಂದ್ರ ಅವರು ಕನ್ನಡ ಚಿತ್ರಗಳ ಬಗ್ಗೆ ಮಾತನಾಡುತ್ತಾ -‘ದೃಶ್ಯ ಮಾಧ್ಯಮಗಳಲ್ಲಿ ಒಂದಿಷ್ಟು ಮೌನವಿರಬೇಕು. ಆಗಲೇ ಆ ಚಿತ್ರವು ನಮ್ಮೊಂದಿಗೆ ಸಂಭಾಷಿಸಲು ಸಾದ್ಯ.  ಆದರೆ ನಮ್ಮ ಕನ್ನಡ ಚಿತ್ರಗಳು ತುಂಬಾ ವಾಚ್ಯವಾಗಿಬಿಟ್ಟಿವೆ. ಪ್ರೇಕ್ಷಕರಿಗೆ ಯಾವುದನ್ನು ಫೀಲ್ ಮಾಡಲು ಸಾಧ್ಯವಿಲ್ಲದಂತಾಗಿದೆ’ ಎಂದಿದ್ದರು.  ಈ ಚಿತ್ರವನ್ನು ನೋಡುತ್ತಿದ್ದಂತೆ, ವಸುಧೇಂದ್ರ ಅವರ ಮಾತುಗಳು ಅಕ್ಷರಶಃ ನಿಜವೆನಿಸುತ್ತದೆ. ಚಿತ್ರಕಥೆಯ ದೃಶ್ಯಗಳಿಗೆ ತಾರ್ಕಿಕ ಕಾರಣಗಳಿಲ್ಲದೆ, ಮುಂಜಾನೆ ಎದ್ದೊಡನೆ ಎಲ್ಲವನ್ನೂ ಮರೆಯುವ ನಾಯಕಿಯಂತೆಯೇ, ಪ್ರೇಕ್ಷಕರು ಕೂಡ ಥಿಯೇಟರ್ ನಿಂದ ಆಚೆ ಬಂದೊಡನೆಯೇ ಎಲ್ಲವನ್ನೂ ಮರೆತುಬಿಡುವುದರಲ್ಲಿ ಆಶ್ಚರ್ಯವಿಲ್ಲ.  ಆದರೆ ತಲೆಯ ಮೇಲೆ ಒಡೆದಂತೆ ಸಂಭಾಷಣೆಗಳೂ, ಪ್ರೇಕ್ಷಕರ ಕಿವಿಗಳಲ್ಲಿ,  ನಿದ್ದೆಯಲ್ಲಿಯೂ, ಕನಸಿನಲ್ಲಿಯೂ ಮೊಳಗುತ್ತಲೇ ಇರುವುದು ಚಿತ್ರದ ಪ್ಲಸ್ ಪಾಯಿಂಟೋ, ನೆಗೆಟಿವ್ ಪಾಯಿಂಟೋ ಅರ್ಥವಾಗದೇ, ಕಕ್ಕಾಬಿಕ್ಕಿಯಾಗುವ ಸರದಿ ಕನ್ನಡ ಪ್ರೇಕ್ಷಕರಿಗೆ! :-) ಅತಿ ನಿರೀಕ್ಷೆ ಹುಟ್ಟಿಸಿದ್ದ ‘ಸಿಂಪಲ್ಲಾಗೊಂದು ಲವ್ ಸ್ಟೋರಿ’, ಚಿತ್ರಕಥೆಯಲ್ಲಿ ಸಿಂಪಲ್ ಆಗಿಬಿಡುವುದು, ಚಿತ್ರದ ಸೋಲು :(