ಯಾವುದೇ ಕಥೆ, ಕಾದಂಬರಿ, ನಾಟಕ, ಸಿನೆಮಾಗಳಲ್ಲಿ ಮುಖ್ಯವಾಗುವುದು ಪಾತ್ರ ರಚನೆ. ಒಳ್ಳೆಯ ಪಾತ್ರ ಸೃಷ್ಠಿಯಾದರೆ, ನಂತರ ಪಾತ್ರಗಳೇ ಕಥೆಯನ್ನು ನಡೆಸಿಕೊಂಡು ಹೋಗುತ್ತವೆ. ವೈದೇಹಿಯವರು ತಮ್ಮ ಕಥೆಗಳ ಬಗ್ಗೆ ಹೇಳುತ್ತಾ, ಒಮ್ಮೆ, ನಾನು ಕಥೆಗಾರ್ತಿಯಲ್ಲಾ, ಬರಹಗಾರ್ತಿ. ನಾನು ಬರೀತಾ ಹೋಗುತ್ತೇನೆ. ನಂತರ ಅದು ಕಥೆಯಾಗುತ್ತದೆ ಎಂದು ಹೇಳಿದ್ದರು. ಅಕ್ಷರಶಃ ಅವರ ಮಾತು ನಿಜ ಎಂದೆನಿಸುತ್ತದೆ. ಅವರ ಕಥೆಯ ಪಾತ್ರವಾದ ‘ಅಕ್ಕು’, ಕಾರಂತರ ‘ಮೂಕಜ್ಜಿ’, ತೇಜಸ್ವಿಯವರ ‘ಕರ್ವಾಲೋ’, ‘ಮಂದಣ್ಣ’, ‘ಕಿವಿ’, ಕಂಬಾರರ ‘ಶಿಖರ ಸೂರ್ಯ’, ಹೀಗೆ....... ಯಾವುದೇ ಕಾದಂಬರಿಯ ಯಶಸ್ವಿ, ಅವುಗಳಲ್ಲಿನ ಪಾತ್ರ ರಚನೆಯಲ್ಲಿ ಹಾಗೂ ಪಾತ್ರ ಪೋಷಣೆಯಲ್ಲಿರುತ್ತದೆ. ಒಮ್ಮೆ ಆ ಪಾತ್ರಗಳು ಓದುಗರ, ವೀಕ್ಷಕರ ಮನಸ್ಸಿನಲ್ಲಿ ನಾಟಿಬಿಟ್ಟರೆ, ಆಮೇಲೆ ತಾನಾಗಿಯೇ ಅವು ಓದಿಸಿಕೊಂಡು ಹೋಗುತ್ತವೆ. ಪಾತ್ರಗಳು ನಮ್ಮೊಡನೆ ಮಾತಾಡತೊಡಗುತ್ತವೆ. ನಾವು ಕೂಡ ಅವುಗಳೊಂದಿಗೆ ಪಾತ್ರವಾಗಿ ಸಂಭಾಷಿಸಲು ಶುರು ಮಾಡುತ್ತೇವೆ. ಅವುಗಳೊಂದಿಗೆ ಒಬ್ಬರಾಗಿಬಿಡುತ್ತೇವೆ.
ಇತ್ತೀಚೆಗೆ ನನಗೆ ಕಥೆಗಳು ಚಿತ್ರಕಥೆಗಳಾಗಿ ಬದಲಾಗುವ ಪ್ರಕ್ರಿಯೆಯ ಬಗ್ಗೆ ತೀವ್ರ ಕುತೂಹಲ. ಕಥೆಗಳಲ್ಲಿ ನಮ್ಮ ಕಲ್ಪನೆಯಲ್ಲಿ ಮೂಡುವ ಪಾತ್ರಗಳು, ವ್ಯಕ್ತಿ ಚಿತ್ರಣಗಳು ದೃಶ್ಯ ಮಾಧ್ಯಮದಲ್ಲಿ ಬೇರೆಯದೇ (ತನ್ನ ಮಿತಿಗಳಿಂದಾಗಿಯೋ ಅಥವಾ ನಿರ್ದೇಶಕನ ಕಲ್ಪನೆಯ ಮಿತಿಯಿಂದಾಗಿಯೋ?!) ಆಗಿ ಮೂಡುವಾಗ ಆಗುವ ಬದಲಾವಣೆಗಳು ಇತ್ಯಾದಿ ನನ್ನನ್ನು ಹೆಚ್ಚು ಆಕರ್ಷಿಸುತ್ತಿದೆ. ಹೀಗಾಗಿ ಸಾಹಿತ್ಯವೊಂದು ಅದರಲ್ಲೂ ಕುವೆಂಪುರವರ ೭೫೦ ಪುಟಗಳ ಬೃಹತ್ ಕಾದಂಬರಿ ‘ಮಲೆಗಳಲ್ಲಿ ಮದುಮಗಳು’ ರಂಗರೂಪಾಂತರವಾಗಿ ಬೆಂಗಳೂರಿನಲ್ಲಿ ಪ್ರದರ್ಶಿತವಾಗುತ್ತಿದೆಯೆಂದು ತಿಳಿದಾಗ ನಾನು ಮಾಡಿದ ಮೊಟ್ಟಮೊದಲ ಕೆಲಸ, ಪುಸ್ತಕವನ್ನು ಓದಲು ಶುರು ಮಾಡಿದ್ದು. (ಇದುವರೆವಿಗೂ ಕುವೆಂಪುರವರ ಪುಸ್ತಕಗಳನ್ನು ನಾನು ಏಕೆ ಓದಿರಲಿಲ್ಲವೆಂಬುದನ್ನೂ ಈ ಹಿಂದೆ ಬರೆದಿದ್ದೇನೆ).
ಮಲೆನಾಡಿನ ೧೫೦ ವರ್ಷಗಳ ಹಿಂದಿನ ಪರಿಸರ, ಕಾಡು, ಮಳೆ, ಜನಜೀವನ, ಎಲ್ಲಕ್ಕಿಂತ ಮುಖ್ಯವಾಗಿ ಅಲ್ಲಿಯ ಭಾಷೆ, ಒಕ್ಕಲಿಗರ ದರ್ಬಾರು, ಬ್ರಾಹ್ಮಣಿಕೆಯ ಆಡಂಬರ, ಕ್ರೈಸ್ತರ ಮತಾಂತರದ ಹುನ್ನಾರ, ಸಾಬರ ದೌರ್ಜನ್ಯ ಇವುಗಳ ಮಧ್ಯೆ ನಲುಗುವ ದಲಿತರ / ಹೊಲೆಯರ ‘ನಾಯಿ’ ಪಾಡು, ಶ್ರೀಮಂತರ ದಬ್ಬಾಳಿಕೆ, ಬಡವರ ನೋವು, ಗಂಡಸರ ಕಾಮುಕತನ, ಹೆಂಗಸರ ಮೇಲಿನ ಅತ್ಯಾಚಾರ.... ಇವೆಲ್ಲದರ ನಡುವೆ ಎಲ್ಲೋ ಒಂದು ಕಡೆ ಕುವೆಂಪುರವರ ಎಂದಿನ ‘ವಿಶ್ವ ಮಾನವ ತತ್ವ’ ಚಿಗುರುವ ಕನಸು, ಆಶಾವಾದ, ಪ್ರೀತಿ, ಪ್ರೇಮ, ಇವೆಲ್ಲವುಗಳೂ ನಾಜೂಕಾಗಿ ಪಾತ್ರಗಳ ಮೂಲಕ ಜೀವಂತಿಕೆಯಲ್ಲಿ ಮೆರೆಯುವುದು ‘ಮಲೆಗಳಲ್ಲಿ ಮದುಮಗಳು’ ಕಾದಂಬರಿಯ ವೈಶಿಷ್ಟ್ಯ! ವಿವೇಕಾನಂದರ ಬಗೆಗಿನ ಅಥವಾ ರಾಮಕೃಷ್ಣ ಆಶ್ರಮದ ಕಡೆಗಿನ ಕುವೆಂಪುರವರ ಆಕರ್ಷಣೆ ಎಲ್ಲೋ ಒಂದಷ್ಟು ಪುಟಗಳಲ್ಲಿ ಮೂಡಿ ಬಂದಿರುವುದನ್ನು (ಬಲವಂತವಾಗಿಯೇ ತುರುಕಿದಂತೆ ನನಗೆ ತೋರಿತು!) ಹೊರತು ಪಡಿಸಿದರೆ, ಮಿಕ್ಕಂತೆ ಎಲ್ಲಾ ಪಾತ್ರಗಳೂ, ತಮ್ಮಷ್ಟಕ್ಕೆ ತಾವೇ ಕಥೆಯನ್ನು ಮುಂದುವರಿಸಿಕೊಂಡು ಹೋಗುತ್ತವೆ. ಪಾತ್ರಗಳೇ ತಮ್ಮ ಕಥೆಯ ಅಂತ್ಯವನ್ನು ಕಂಡುಕೊಳ್ಳುತ್ತವೆ. ಈ ಕಾದಂಬರಿಯಲ್ಲಿ ಎರಡು ಎಳೆಗಳಲ್ಲಿ ಕಥೆಯು ಶುರುವಾಗುತ್ತದೆ, ಮಧ್ಯೆ ಮಧ್ಯೆ ಸಣ್ಣ, ಪುಟ್ಟ ಉಪಕಥೆಗಳು, ಪಾತ್ರಗಳು ಮುಖ್ಯ ಕಥೆಗೆ ತಿರುವನ್ನು ಕೊಡುತ್ತವೆ.
ಕಥೆಯ ಮುಖ್ಯಪಾತ್ರಗಳಾದ ಗುತ್ತಿ, ಆತನ ನಾಯಿ ‘ಹುಲಿಯಾ’, ಆತನ ಪ್ರೇಮಿ ತಿಮ್ಮಿ, ಆಕೆಗೆ ನಿಶ್ಚಯವಾಗಿರುವ (ಆಳು ಬೇರೆ ಕಡೆ ಹೋಗಬಾರದೆಂಬ ತಮ್ಮ ಗೌಡರ ಆದೇಶದಿಂದಾಗಿ!) ಬಚ್ಚಾ, ಆತನ ಮಾಲೀಕನ ಕ್ರೈಸ್ತ ಮತದೆಡೆಗಿನ ಆಕರ್ಷಣೆ, ಆಧುನಿಕನಾಗಬೇಕೆಂಬ ಹಂಬಲ, ತಿಮ್ಮಿಗೆ ಯಾವ ಗಂಡಾದರೂ ಪರವಾಗಿಲ್ಲ, ಆದರೆ ತಮ್ಮ ಜಾತಿಯವನೇ ಆಗಿರಬೇಕೆಂಬ ಬಯಕೆ, ತಿಮ್ಮಿಯ ತಾಯಿಗೆ ತನ್ನ ತವರುಮನೆಯವನಾದ ಗುತ್ತಿಗೆ ಮದುವೆ ಮಾಡಿಸಬೇಕೆಂಬ ಆಸೆ, ಬಚ್ಚಾನಿಗೆ ಕೊಡಲು ವಿರೋಧವೇನಿಲ್ಲದಿದ್ದರೂ, ಆತ ಕ್ರೈಸ್ತನಾಗುವ ಭಯದಿಂದ ಇಷ್ಟವಿಲ್ಲದಿದ್ದರೂ, ಆ ಊರ ಗೌಡನ ಒಕ್ಕಲಾದದಕ್ಕಾಗಿ ಒಪ್ಪಿಗೆ ನೀಡುವ ತಿಮ್ಮಿಯ ತಂದೆ, ಪರೋಕ್ಷವಾಗಿ ‘ತಿಮ್ಮಿ’ ತಪ್ಪಿಸಿಕೊಳ್ಳಲು ಸಹಾಯ ಮಾಡುವ ತಾಯಿ, ಇವೆಲ್ಲದರ ನಡುವೆ ಓಡಿಹೋಗಿಯಾದರೂ ತಿಮ್ಮಿಯನ್ನು ಪಡೆಯಲೇಬೇಕೆಂಬ ಗುತ್ತಿಯ ಪ್ರಬಲ ಉತ್ಸಾಹ, ಅವಳನ್ನು ತನ್ನವಳನ್ನಾಗಿಸಿಕೊಳ್ಳಲು ಆತ ಪಡುವ ಕಷ್ಟ, ತಿಮ್ಮಿಯ ಸಹಕಾರ, ಈ ಮಧ್ಯೆ ತಮ್ಮ ತಮ್ಮ ಆಳುಗಳಿಗಾಗಿ ಊರ ಗೌಡರ ಮಧ್ಯೆ ನಡೆಯುವ ಅನೇಕ ರಾಜಕೀಯ ಚದುರಂಗದಾಟಗಳು, ಇಲ್ಲಿ ಬೇರೊಬ್ಬರ ತಪ್ಪಿಗೆ ಬಲಿಯಾಗುವ ಗುತ್ತಿ, ಪೋಲೀಸರ ಭಯದಿಂದ ಆತನ ಓಡಿಹೋಗುವ ಹವಣಿಕೆ, ಜೊತೆಯಲ್ಲಿ ಪ್ರೀತಿಸಿ ಮದುವೆಯಾದವಳನ್ನು ಕೂಡ ತನ್ನೊಟ್ಟಿಗೆ ಎಷ್ಟೇ ಕಷ್ಟವಾದರೂ ಕರೆದೊಯ್ಯುವ ಹಂಬಲ, ಈ ಎಲ್ಲಾ ಗೋಜಲುಗಳಿಂದ ಊರು ಬಿಟ್ಟು ಹೋಗುವ ಗುತ್ತಿ, ಇವೆಲ್ಲದರ ನಡುವೆ ಬೇಡ, ಬೇಡವೆಂದರೂ ತನ್ನ ಮಾಲೀಕ ಗುತ್ತಿಯನ್ನು ನಿಷ್ಠೆಯಿಂದ ಹಿಂಬಾಲಿಸುವ ಹುಲಿಯಾ..... ಕೊನೆಗೂ ಆಕೆಯನ್ನು ಪಡೆದರೂ ತನ್ನ ಜೀವದಂತಿದ್ದ ‘ಹುಲಿಯಾ’ ನನ್ನು ಕರೆದೊಯ್ಯಲಾಗದೇ ಅನುಭವಿಸುವ ಅಸಹಾಯಕತೆ, ಹುಲಿಯಾ ನದಿಯಲ್ಲಿ ಈಜಲಾಗದೇ ಬಲಿಯಾಗುವುದು, ಗುತ್ತಿಗೆ ಹುಲಿಯಾನನ್ನು ಕಳೆದುಕೊಂಡ ನೋವು, ಇವೆಲ್ಲದರ ನಡುವೆ ನಮಗೆ ಮರುಕ ಹುಟ್ಟಿಸುವುದು ಹುಲಿಯಾ ನ ಸಾವೇ ಹೊರತು, ತನ್ನೂರನ್ನು ಬಿಟ್ಟು ಬಂದ ಗುತ್ತಿ, ತಿಮ್ಮಿ ಪರದೇಶಿಯಾಗುವುದಲ್ಲ! ಮತ್ತೊಂದೆಡೆ ಮಾಲೀಕನಿಗಾಗಿಯೇ ಕ್ರೈಸ್ತನಾಗುವ ಹೊಲೆಯ ‘ಬಚ್ಚಾ’!, ಕ್ರೈಸ್ತ ಮತದವರ ರೀತಿ ರಿವಾಜನ್ನು ಬಹಳವಾಗಿ ಇಷ್ಟ ಪಟ್ಟರೂ, ತನ್ನ ಜೀವನ ಶೈಲಿಯಲ್ಲಿ ಅವೆಲ್ಲವನ್ನೂ ಅಳವಡಿಸಿಕೊಂಡರೂ, ಜೊತೆಗೆ ಕ್ರೈಸ್ತ ಹುಡುಗಿಯೊಟ್ಟಿಗೆ ಸಂಬಂಧ ಬೆಳೆಸಿದರೂ ಕೂಡ ಜಾತಿ ಬಿಡಲೊಲ್ಲದ ‘ಬಚ್ಚಾ’ನ ಮಾಲೀಕ! ತನ್ನ ಹೆಂಡತಿಯ ತಮ್ಮ ಮುಕುಂದಯ್ಯನ ಸಹಾಯದಿಂದ ಕ್ರೈಸ್ತನಾಗದೇ ತಪ್ಪಿಸಿಕೊಂಡರೂ, ತನ್ನ ಆಳುಗಳನ್ನು ಕ್ರಿಸ್ತರನ್ನಾಗಿಸುವ ‘ಒಡೆಯ’! ಇಲ್ಲಿ ‘ಒಡೆಯ’ ಗೆದ್ದರೂ, ಬಲಿಯಾಗುವುದು ‘ಆಳುಗಳು’!
ಮತ್ತೊಂದು ಕಥೆ ಮುಕುಂದಯ್ಯ ಹಾಗೂ ಚಿನ್ನಕ್ಕಳ ಮದುವೆ ಪ್ರಸಂಗ. ಇದು ಕೂಡ ಒಂದು ರೀತಿಯಲ್ಲಿ ನಾಯಿಗುತ್ತಿಯ ಕಥೆಯನ್ನೇ ಹೋಲಿದರೂ ಕೂಡ, ಇಲ್ಲಿ ಆತನ ಒಕ್ಕಲುಗಳು ಹಾಗೂ ಬಾಲ್ಯ ಸ್ನೇಹಿತರೂ ಕೂಡ ಆದ ಐತ ಮತ್ತು ಆತನ ಹೆಂಡತಿ ಪೀಂಚಲು ತಮ್ಮ ಒಡೆಯನ ಸಹಾಯಕ್ಕೆ ಒದಗುತ್ತಾರೆ. ಅದರಲ್ಲೂ ಬುದ್ಧಿವಂತೆ, ಸ್ಪ್ರುರದ್ರೂಪಿ ಪೀಂಚಲೂ, ಮುಕುಂದ ಹಾಗೂ ಚಿನ್ನಕ್ಕಳ ನಡುವೆ ಮಧ್ಯವರ್ತಿಯಾಗುತ್ತಾಳೆ. ಚಿಕ್ಕಂದಿನಿಂದಲೂ ಮುಕುಂದನಿಗೆ ಮನಸೋತಿರುವ ಚಿನ್ನಕ್ಕ, ತನ್ನ ತಂದೆ ಮಾಡಿರುವ ಸಾಲಕ್ಕೆ ಹೊಣೆಯಾಗಿ, ಶ್ರೀಮಂತ ಮುದುಕನನ್ನು ಮದುವೆಯಾಗುವ ಸಂದರ್ಭ ಒದಗುತ್ತದೆ, ಆಕೆ, ಪೀಂಚಲೂ ಹಾಗೂ ನಾಗಕ್ಕನ ಸಹಾಯದಿಂದ ಹೇಗೆ ಓಡಿಬಂದು ಮುಕುಂದಯ್ಯನನ್ನು ಮದುವೆಯಾಗುತ್ತಾಳೆಂಬುದು ಕಾದಂಬರಿಯ ಮತ್ತೊಂದು ಎಳೆ. ಇಲ್ಲಿ ಐತ ಹಾಗೂ ಪೀಂಚಲುವಿನ ಪ್ರೇಮ ದಾಂಪತ್ಯ, ಆ ಕಾಲದಲ್ಲಿ ಒಡೆಯ ಹಾಗೂ ಹೆಣ್ಣಾಳುಗಳ ನಡುವಿದ್ದ ಲೈಂಗಿಕ ಸಂಬಂಧಗಳು, ಮುಕುಂದಯ್ಯ ಹಾಗೂ ಪೀಂಚಲುವಿನ ಸ್ನೇಹ ಸಂಬಂಧದ ಬಗ್ಗೆ ಅನುಮಾನ ಹುಟ್ಟಿಸುವ ಐತನ ಗೆಳೆಯ / ಸೇರೆಗಾರ ಚೀಂಕ್ರ, ಇದನ್ನು ಪ್ರೀತಿಯಿಂದಲೇ ಪರಿಹರಿಸುವ ಪೀಂಚಲು, ಐತ ಹಾಗೂ ಪೀಂಚಲುವಿನ ದಾಂಪತ್ಯ ವಾಹ್! ಅನಿಸಿಬಿಡುತ್ತದೆ. ಮುಕುಂದ ಹಾಗೂ ಚಿನ್ನಕ್ಕನ ಕಥೆ ಸುಖಾಂತ್ಯವಾದರೂ ಕೂಡ, ಇದರಿಂದಾಗುವ ಮುಕುಂದಯ್ಯನ ಆಸ್ತಿ ವಿಭಜನೆ, ಚಿನ್ನಕ್ಕಳ ತಂದೆಯ ಸಾವು, ನಾಗಕ್ಕಳ ಮರುವೈಧವ್ಯ ವಿಷಾದ ಹುಟ್ಟಿಸುತ್ತದೆ.
ಈ ಮಧ್ಯೆ ಗಂಡಸರ ಲೈಂಗಿಕ ಬಯಕೆಗಾಗಿ ಬಲಿಯಾಗುವ ಹೆಣ್ಣುಗಳ ಕಥೆಗಳು (ಉಪಕಥೆಗಳಾಗಿದ್ದರೂ, ಪಾತ್ರಗಳು ನಮ್ಮನ್ನು ಸೆಳೆದುಕೊಳ್ಳುತ್ತವೆ) - ನಾಗಕ್ಕ, ಕಾವೇರಿ, ಚೀಂಕ್ರನ ಹೆಂಡತಿ ದೇಯಿ, ಚೀಂಕ್ರನ ಪಕ್ಕದ ಮನೆಯ ಅಕ್ಕಣಿ. ಮುಕುಂದಯ್ಯನ ಅಕ್ಕ, ತಂಗಿಯರು....... ವಿಧವೆ ನಾಗಕ್ಕ, ತನ್ನ ಅತ್ತೆಯಿಂದಲೇ (ಜೀವನೋಪಾಯಕ್ಕಾಗಿ) ಮೋಸಕ್ಕೊಳಗಾಗಿ ಬಲವಂತವಾಗಿ ಚಿನ್ನಕ್ಕನ ತಂದೆಯೊಟ್ಟಿಗೆ ಕೂಡಿಕೆಯಾಗುವುದು, ಆತನೋ ಮೋಟುಗಾಲಿನವನಾದರೂ, ಹೆಣ್ಣಿನ ಸೆರಗು ಕಂಡೊಡನೆ ಜೊಲ್ಲು ಸುರಿಸುತ್ತಾ ಹಿಂದೆ ಓಡುವಾತ, ಮಹಾನ್ ಹೆಣ್ಣುಬಾಕ! ಮತ್ತೊಮ್ಮೆ ಅದೇ ಮೋಸ ನಾಗಕ್ಕಳ ಅತ್ತೆಗೆ ತಿರುಮಂತ್ರವಾಗಿ ಅವಳೇ ಮೋಸ ಹೋಗುವಂಥ ಪರಿಸ್ಥಿತಿ!, ಅತ್ತೆಯ ಮೋಸಕ್ಕೆ ಬಲಿಯಾದರೂ ಕೂಡ ನಾಗಕ್ಕಳಿಗೆ ಇದೊಂದು ವರವಾಗಿ ಪರಿಣಮಿಸುವುದು, ಚಿನ್ನಕ್ಕಳಿಗೆ ಮಲತಾಯಿಯಾದರೂ, ತಾಯಿಗಿಂತಲೂ ಹೆಚ್ಚಿಗೆ ಪ್ರೀತಿಸುವ ನಾಗಕ್ಕ, ಚಿನ್ನಕ್ಕಳು ಮುಕುಂದಯ್ಯನನ್ನು ಕೂಡಲು ಸಹಾಯ ಮಾಡುವ ಮೃದು ಹೃದಯಿ ನಾಗಕ್ಕ, ಓಡಿ ಹೋದ ಚಿನ್ನಕ್ಕ ವಾಪಾಸು ಬರುವಾಗ ತಂದೆಯ ಸಾವಿನಿಂದ ವಿಚಲಿತಳಾದರೂ, ಮತ್ತೊಮ್ಮೆ ವಿಧವೆಯಾದ ನಾಗಕ್ಕ ಆಕೆಗೆ ಬೆಂಬಲವಾಗಿ ನಿಲ್ಲುವುದು, ಇಬ್ಬರೂ ಸೇರಿ ತಂದೆಯ ಸಾಲವನ್ನು ಗದ್ದೆಯಲ್ಲಿ ದುಡಿದು ತೀರಿಸಲು ಮನಸು ಮಾಡುವುದು, ಒಬ್ಬಂಟಿ ನಾಗಕ್ಕಳ ಧೈರ್ಯವನ್ನು ಸೂಚಿಸುತ್ತದೆ.
ಕಾವೇರಿಯ ತಾಯಿ ಮಗಳನ್ನು ಕಾಮುಕರಿಂದ ಎಷ್ಟೇ ರಕ್ಷಿಸಿ ಆಕೆಗೊಂದು ಉತ್ತಮ ಜೀವನ ಕಲ್ಪಿಸಿಕೊಡಬೇಕೆಂದು ಏನೆಲ್ಲಾ ಮಾಡಿದರೂ, ಮುಗ್ಧೆ ಕಾವೇರಿಯ ಮೇಲಿನ ಅತ್ಯಾಚಾರ, ಆಗೆಲ್ಲಾ ಮನೆಯಲ್ಲಿ ಗಂಡಸರ ಬೆಂಬಲವಿಲ್ಲದಿದ್ದರೆ, ಅಂತಹ ಹೆಣ್ಣುಮಕ್ಕಳನೆಲ್ಲಾ ವೈಶ್ಯೆಯರನ್ನಾಗಿಸುತ್ತಿದ್ದ ಗಂಡಸರ ಮನೋಭಾವ!, ಊರಿನ ಗೌಡನೊಬ್ಬ ಪ್ರೀತಿಯಿಂದಲೇ, ಕಾವೇರಿಯನ್ನು ಆಕರ್ಷಿಸಿಕೊಂಡು ಮಾನಸಿಕ ಅತ್ಯಾಚಾರ ಮಾಡಿದರೆ, ಇದರಿಂದ ಬಸವಳಿದ ಕಾವೇರಿಯ ಮೇಲಿನ ಉಳಿದ ಗಂಡಸರ ದೈಹಿಕ ಅತ್ಯಾಚಾರ, ಕಂಗೆಟ್ಟ ಪುಟ್ಟ ಕಾವೇರಿ ಮಾಡಿಕೊಳ್ಳುವ ಆತ್ಮಹತ್ಯೆ, ಅಕ್ಕಪಕ್ಕದವರು ಕಾವೇರಿ ಮುಂಚಿನಿಂದಲೂ ಚೆಲ್ಲುಚೆಲ್ಲಾಗಿದ್ದಳು ಎಂದು ಮಾತಾಡಿಕೊಳ್ಳಬಾರದೆಂದು, ಕಾವೇರಿಯ ತಾಯಿ ಅಂತಕ್ಕ ಮಗಳು ಅತ್ಯಾಚಾರಕ್ಕೆ ಬಲಿಯಾದಳು ಎಂದು ತಿಳಿದರೂ ಕೂಡ, ಪೋಲೀಸರಿಗೆ ಹೇಳುವ ಸುಳ್ಳು ಹೇಳಿಕೆ! (ಆಗಿನಿಂದಲೂ ಈ ಕಾಲದವರೆಗೂ ಅತ್ಯಾಚಾರಗೊಂಡ ಹೆಣ್ಣುಮಕ್ಕಳೇ ಅಪರಾಧಿಗಳಾಗಿ ಕಾಣುವಂಥ ಮನಸ್ಥಿತಿ :( ) ಎಲ್ಲವೂ ಮರುಕ ಹುಟ್ಟಿಸುತ್ತದೆ.
ಈಗಾಗಲೇ ಅನೇಕ ಮಕ್ಕಳ ತಾಯಿಯಾಗಿ ಬಸವಳಿದ ತುಂಬು ಗರ್ಭಿಣಿಯ ಕಾಮುಕ ಗಂಡ ಚೀಂಕ್ರ, ಮತ್ತಿನಲ್ಲಿ ಆಕೆಯ ಮೇಲೆ ನಡೆಸುವ ಬಲವಂತದ ಸಂಭೋಗದಿಂದ ಸಾಯುವ ಆಕೆ, ಮಕ್ಕಳಿಲ್ಲದ ಅಕ್ಕಣಿ, ಪಕ್ಕದ ಮನೆಯ ಚೀಂಕ್ರನ ಮಕ್ಕಳನ್ನು ನೋಡಿಕೊಳ್ಳುವ ಹಾಗೂ ರೋಗಿ ಗಂಡನನ್ನು ಸಂಬಾಳಿಸುತ್ತಲೇ, ಚೀಂಕ್ರ ಬೀಸಿದ ಹಣದ ಬಲೆಗೆ ಬೀಳುವ ಅಕ್ಕಣಿ, ಚೀಂಕ್ರ ತನ್ನ ಗಂಡ ಪಿಜಿಣನನ್ನು ನಿಧಾನವಾಗಿ ಕೊಲ್ಲುತ್ತಿರುವ ಮೋಸದ ಅರಿವಾಗದೇ, ತನ್ನನ್ನು, ತನ್ನ ಗಂಡನನ್ನು ಕೈತುಂಬಾ ಹಣ ಕೊಟ್ಟು ನೋಡಿಕೊಳ್ಳುತ್ತಿರುವ ಕೃತಜ್ಞತೆಯಿಂದ ತನ್ನ ದೇಹವನ್ನು ಕೂಡ ಚೀಂಕ್ರನಿಗೆ ಒಪ್ಪಿಸುವ ಪಾಪದ ಅಕ್ಕಣಿ, ಅಕ್ಕಣಿಯ ಬಯಕೆಗಳನ್ನು ಈಡೇರಿಸಲಾಗದಂಥ ನಿಶ್ಯಕ್ತ ಗಂಡ ಇದನ್ನೊಪ್ಪಿಕೊಳ್ಳದೇ ನೇಣು ಹಾಕಿಕೊಳ್ಳುವುದು, ತಾನು ಮಾಡಿದ ತಪ್ಪೇನು? ಎಂಬ ಅರಿವಾಗದೇ ದಿಗ್ಬ್ರಮೆಗೊಳಗಾಗುವ ಅಕ್ಕಣಿ,
ತಿರುಪತಿಗೆ ಹೋದ ಗಂಡ ೭,೮ ವರ್ಷಗಳಾದರೂ ವಾಪಾಸ್ಸು ಬರದೇ, ಕಂಗಾಲಾಗಿರುವ ಮುಕುಂದಯ್ಯನ ಅಕ್ಕ ರಂಗಮ್ಮ ಹೆಗ್ಗಡಿತಿ, ಆಸ್ತಿಯ ಆಸೆಗಾಗಿ ಅಣ್ಣನ ಹೆಂಡತಿಯನ್ನೇ ಹುಚ್ಚು ಹೆಗ್ಗಡಿತಿಯಾಗಿ ಬೇಕೆಂದೇ ಬಿಂಬಿಸುವ ಮೈದುನ, ಪಕ್ಕದ ಮನೆಯಲ್ಲಿ ಬ್ರಾಹ್ಮಣರಂತೆಯೇ ವರ್ತಿಸುವ ಮತ್ತೊಬ್ಬ ದಾಯಾದಿ ಶಂಕರ ಹೆಗ್ಗಡೆ, ದೊಡ್ಡಮಗನನ್ನು ಕಳೆದುಕೊಂಡು ಕೊರಗುವ ಜಿಪುಣ ಸುಬ್ಬಣ್ಣ ಹೆಗ್ಗಡೆ, ಇವುಗಳೆಲ್ಲದರ ನಡುವೆ ತಂದೆಯಿಲ್ಲದೇ ಕಂಗಾಲಾಗಿರುವ ಪುಟ್ಟ ಮಗು ಧರ್ಮುವಿನ ವಿಚಾರ ಧಾರೆ, ಕೊನೆಗೆ ಕಳೆದು ಹೋದ ಗಂಡನ ಕಳೇಬರ ತಂದಾಗ ಅದರ ಮೇಲೆಯೇ ಜೀವ ಬಿಡುವ ರಂಗಮ್ಮ ಹೆಗ್ಗಡಿತಿ, ಹೆಣ್ಣಿಗಾಗಿ ಕ್ರೈಸ್ತ ಮತಾಂತರಕ್ಕೆ ಒಪ್ಪಿಕೊಳ್ಳುವಂಥ ಹಾಗೂ ಹಿಂದೂಗಳು ಅನುಸರಿಸುವ ಎಲ್ಲಾ ಪದ್ದತಿಗಳನ್ನೂ ಗೊಡ್ಡು ಎಂದು ಹೀಗಳೆಯುತ್ತಾ, ಆಧುನಿಕ ಜಗತ್ತಿನ ಆಕರ್ಷಣೆಗೊಳಗಾಗಿರುವ ಗಂಡ ದೇವಯ್ಯನನ್ನು ಸಂಬಾಳಿಸಲು ತೋರದ, ದಿನವಿಡೀ ಕೊರಗುವ ಸೌಮ್ಯ ಸ್ವಭಾವದ ಹೆಂಡತಿ ರಂಗಮ್ಮಳ ತಂಗಿ. ಸ್ವಲ್ಪ ದಿವಸಗಳ ಚೇತರಿಕೆಗೆಂದು ತವರುಮನೆಗೆ ಬಂದಿದ್ದ ರಂಗಮ್ಮಳು, ತನ್ನ ತಂಗಿಯ ಮಗನನ್ನು ‘ಸ್ವಾಮಿ, ಸ್ವಾಮಿ ಎಂದು ಕರೆಯುತ್ತಾ ಪ್ರೀತಿಸುವುದು, ಆ ಮಗುವು ಕೂಡ ತನ್ನ ದೊಡ್ಡಮ್ಮನನ್ನು ಹಚ್ಚಿಕೊಳ್ಳುವುದು ಎಲ್ಲವೂ ವಿಚಿತ್ರವೆಂದು ಕಾಣುತ್ತದೆ.
ಇಲ್ಲಿ ಮತ್ತೊಂದು ಅಸಂಗತ ಕಥೆ, ಇಡೀ ಕಾದಂಬರಿಗೆ ಮುಖ್ಯ ತಿರುವನ್ನು, ಬಹುಶಃ ಮುಕುಂದಯ್ಯನಿಗೆ ಚಿನ್ನಕ್ಕಳನ್ನು ಮದುವೆಯಾಗಲು ಆತ್ಮ ಸ್ಥೈರ್ಯವನ್ನು ನೀಡುತ್ತದೆ. ರಂಗಮ್ಮನ ತಂಗಿಗೆ ಹುಟ್ಟಿರುವ ಪುಟ್ಟ ಮಗನೇ ರಂಗಮ್ಮನ ಗಂಡನೆಂದೂ, ಮುಕುಂದಯ್ಯ ಹಾಗೂ ಚಿನ್ನಕ್ಕಳಿಗೆ ಹುಟ್ಟುವ ಮಗಳು ‘ರಂಗಮ್ಮ’ ಮತ್ತೆ ಇವನನ್ನು ಮದುವೆಯಾಗುತ್ತಾಳೆಂದು ಹಾಗೂ ಹಿಂದಿನ ಜನ್ಮದಲ್ಲಿಯೂ ಮುಕುಂದಯ್ಯ ಹಾಗೂ ಚಿನ್ನಕ್ಕ ದಂಪತಿಗಳಾಗಿದ್ದರೆಂದು, ಭೂತ, ವರ್ತಮಾನ, ಭವಿಷ್ಯ ಹೇಳುವ ಗಡ್ಡದಯ್ಯ ಎಂಬ ಪಾತ್ರ ಕಾದಂಬರಿಯಲ್ಲಿ ಕಾಣುತ್ತದೆ. ಆತನ ಅತೀಂದ್ರಿಯ ಜ್ಞಾನ, ‘ವಿವೇಕಾನಂದರು ಭರತ ಖಂಡವನ್ನೆಲ್ಲ ಸಂಚರಿಸಿ, ಬೋಧಿಸಿ ಹಿಂದೂ ಧರ್ಮವು ಬ್ರಾಹ್ಮಣ ಪುರೋಹಿತರಿಂದ ಪಾರಾಗಿ, ಕ್ರೈಸ್ತಾದಿ ಮತ ಪ್ರಚಾರಕರಿಗೆ ದುರ್ಗಮವಾಗಿ......’ ಇತ್ಯಾದಿ ಹೇಳುವ ಮಾತುಗಳು, ಆತ ಮುಕುಂದಯ್ಯನನ್ನು ಉದ್ಧೇಶಿಸಿ, ಆತನ ವಂಶದಲ್ಲಿ ಮುಂದೆ ಹುಟ್ಟಲಿರುವ ಸಂತಾನವು ಸ್ವಾಮಿ ವಿವೇಕಾನಂದರ ಯುಗ ಧರ್ಮ ಶಕ್ತಿಗೆ ಸೇವೆ ಸಲ್ಲಿಸುವುದು ಇತ್ಯಾದಿ, ಬಹುಶಃ ಕುವೆಂಪುರವರು ಕಾದಂಬರಿಯಲ್ಲಿ ಹೇಳಬೇಕೆಂದಿದ್ದ ಮುಖ್ಯ ಮಾತುಗಳೆಲ್ಲವನ್ನೂ ಅಂದರೆ ತಮ್ಮ ವಿಶ್ವ ಮಾನವ ತತ್ವವನ್ನು, ಗಡ್ಡದಯ್ಯನ ಪಾತ್ರದ ಮೂಲಕ ಹೇಳಿಸಿದ್ದಾರೆ ಎಂದೆನಿಸುವುದು. ಕಾದಂಬರಿಯನ್ನು ಓದುವಾಗ ಇನ್ನೂ ಅನೇಕ ಪಾತ್ರಗಳು ನಮ್ಮ ಸುತ್ತಮುತ್ತಲೆಲ್ಲೋ ಇವೆಯೇನೋ? ಎನ್ನುವಂಥ ಭಾಸವನ್ನು ಮೂಡಿಸಿಬಿಡುತ್ತವೆ. ಪಾತ್ರಗಳು ಕಣ್ಮುಂದೆ ಜೀವಂತಿಕೆಯಲ್ಲಿ ಕುಣಿಯುತ್ತವೆ. ಮತ್ತೊಮ್ಮೆ, ಮಗದೊಮ್ಮೆ ಓದುತ್ತಲೇ ಇರಬೇಕೆಂಬ ಆಸೆಯನ್ನು ಕೂಡ ಹುಟ್ಟು ಹಾಕುತ್ತವೆ.
ಕಾದಂಬರಿಯ ರಂಗರೂಪಾಂತರದಲ್ಲಿ ನನಗೆ ಕಂಡ ಬದಲಾವಣೆಗಳು, ವ್ಯತ್ಯಾಸಗಳು ಎಲ್ಲೋ ಮನಸ್ಸಿನ ಮೂಲೆಯಲ್ಲಿ, ಇದು ಕುವೆಂಪುರವರ ‘ಮಲೆಗಳಲ್ಲಿ ಮದುಮಗಳು’ ಹೌದೇ?! ಎಂದೆನಿಸಿದ್ದು ಸುಳ್ಳಲ್ಲ. ಇಡೀ ಕಾದಂಬರಿಗೆ ತಿರುವನ್ನು ಕೊಟ್ಟ ಮುಖ್ಯ ಪಾತ್ರವಾದ ‘ಗಡ್ಡದಯ್ಯ’ ಇಲ್ಲಿ ಇಲ್ಲವೇ ಇಲ್ಲ. ಕಾವೇರಿಯ ಆತ್ಮಹತ್ಯೆಯ ನಂತರ ಅಂತಕ್ಕ ಅಳುತ್ತಾ, ಶಾಪ ಹಾಕುವಾಗ (ಕಾವೇರಿಯನ್ನು ಮದುವೆಯಾಗಲೆಂದು ಬಂದಿದ್ದ ಕಿಟ್ಟಯ್ಯನಿಗೆ), ಮೂಗಿಗೆ ಕೈಹಾಕುತ್ತಾ, ತಿರುವುತ್ತಾ, ಮುಖ ಸಪ್ಪೆ ಮಾಡಿಕೊಂಡು ನಿಲ್ಲುವ ಕಿಟ್ಟಯ್ಯ ಶೆಟ್ಟಿಯ ನಟನೆ ಹೆಚ್ಚು ಆಪ್ತವೆನಿಸಿ, ತಮಾಷೆಯೆನಿಸಿ ಚಪ್ಪಾಳೆ ಗಿಟ್ಟಿಸಿದರೆ, ಕಾವೇರಿಯ ಅತ್ಯಾಚಾರದ ಘಟನೆ ಇದರಿಂದಾಗಿ ಹೈಲೈಟ್ ಆಗದಿರುವುದು ವಿಷಾದವೆನಿಸಿತು. ಕಿಟ್ಟಯ್ಯ ಶೆಟ್ಟಿಯ ಪಾತ್ರ ಕಾದಂಬರಿಯಲ್ಲಿ ಮುಖ್ಯವೆನಿಸಿರಲಿಲ್ಲ.
ಕಾದಂಬರಿಯಲ್ಲಿ ಮುಕುಂದಯ್ಯ, ಶಂಕರ ಹೆಗ್ಡೆ, ರಂಗಮ್ಮ ಹೆಗ್ಗಡಿತಿ, ಆಕೆಯ ತಂಗಿ ಇವುಗಳೆಲ್ಲಾ ಸ್ವಲ್ಪ ಮಟ್ಟಿಗೆ ಸೌಮ್ಯ ಪಾತ್ರಗಳು, ಆದರೆ ನಾಟಕದಲ್ಲಿ ಮುಕುಂದಯ್ಯ ಪೇಲವ, ಶಂಕರ ಹೆಗ್ಡೆ ಹಾಸ್ಯಾಸ್ಪದ, ರಂಗಮ್ಮ ನಾಟಕೀಯ, ಆಕೆಯ ತಂಗಿ ಗಯ್ಯಾಳಿ ಯಾಗಿ ಕಾಣಿಸುತ್ತಾರೆ. ಇನ್ನೂ ಬ್ರಾಹ್ಮಣರೆಲ್ಲರೂ ಹಾಸ್ಯಾಸ್ಪದವಾಗಿ ಕಾಣುವಂತೆ ಅಂದರೆ ಬ್ರಾಹ್ಮಣರೆಲ್ಲರನ್ನೂ ಲೇವಡಿ ಮಾಡುವಂತ ಸನ್ನಿವೇಶವನ್ನು ಸೃಷ್ಠಿ ಮಾಡಿದ್ದಾರೆ. ಸಾಬರೆಲ್ಲರೂ ಹೊಡಿ, ಬಡಿ, ಕೊಲ್ಲು, ದೋಚು, ಮೋಸ ಮಾಡು ಎನ್ನುವಂಥವರು ಎಂಬ ಪಾತ್ರರಚನೆಗಳನ್ನು ಕುವೆಂಪು ಸೃಷ್ಠಿಸಿದ್ದರೆ, ಬಹುಶಃ ಅಲ್ಪಸಂಖ್ಯಾತರನ್ನು ಎತ್ತಿ ಹಿಡಿಯಲೆಂದೋ ಏನೋ? ಅವರಲ್ಲಿಯೂ ಮಾನವೀಯತೆ ಇದೆ, ನಾವು ಬಡವರು, ಶ್ರೀಮಂತರ ದಬ್ಬಾಳಿಕೆಯಿಂದ ಹೀಗಾಗಿದ್ದೇವೆ ಎಂಬ ಕಾದಂಬರಿಯಲ್ಲಿಲ್ಲದ ಸನ್ನಿವೇಶವೊಂದು ಸೃಷ್ಠಿಯಾಗಿದೆ. ಇನ್ನೂ ಕ್ರೈಸ್ತ ಮತಾಂತರವನ್ನು ಬಲವಂತದಿಂದ ಮಾಡದೇ, ಉಪಾಯದಿಂದ ಮಾಡಬೇಕೆನ್ನುವ ದೊಡ್ಡ ಪಾದ್ರಿಯ ಸಲಹೆ ಅಲ್ಲಿ ಕ್ರೈಸ್ತರ ಮತಾಂತರದ ಹುನ್ನಾರವನ್ನು ಅರ್ಥ ಪಡಿಸಿದರೆ, ಇಲ್ಲಿ ಆ ಇಡೀ ಸನ್ನಿವೇಶ ತಮಾಷೆಯಂತೆ ಚಿತ್ರಣಗೊಂಡು ದೊಡ್ಡ ಪಾದ್ರಿ ಇತ್ಯಾದಿಯಾಗಿ ಎಲ್ಲರೂ ಹಾಸ್ಯಾಸ್ಪದವಾಗಿ ಕಾಣುತ್ತಾರೆ. ಹ್ಮ್ . ನಿಜ. ಇಲ್ಲಿ ಯಾರೂ ಮುಖ್ಯರಲ್ಲ! ಯಾರೂ ಅಮುಖ್ಯರಲ್ಲ, ಯಾವುದೂ ಯಕಶ್ಚಿತವಲ್ಲ.
ನಾಟಕವನ್ನು ಪ್ರಾರಂಭಿಸಿದ ರೀತಿ ಬಹಳ ಚಂದವಾಗಿದೆ. ಶಾಪದ ಉಂಗುರ ಸಿಕ್ಕ ಜೋಗಿಯೊಬ್ಬ ಕಥೆಯನ್ನು ಹೇಳುತ್ತಾ ಹೋಗುವುದು ದೃಶ್ಯಗಳನ್ನು ಕಟ್ಟಿಕೊಡುತ್ತಾ ಹೋಗುತ್ತದೆ. ಕಾವೇರಿಯ ಅತ್ಯಾಚಾರಕ್ಕೆ ಕಾರಣವಾಗಿರುವ ಈ ಉಂಗುರದಿಂದ ಕಥೆ ಶುರುವಾಗುವುದು ಇಡೀ ಕಾದಂಬರಿಯ ಆಶಯವಾದ ವಿಶ್ವ ಮಾನವ ತತ್ವವನ್ನು (ನನ್ನ ಊಹೆಯೇ?!) ತೆಳುವಾಗಿಸುತ್ತದೆಯೇನೋ? ಕಾದಂಬರಿಯಲ್ಲಿಲ್ಲದ ಮತ್ತೊಂದು ಸನ್ನಿವೇಶ ಈ ಸನ್ಯಾಸಿ, ಗೋಸಾಯಿ, ಬೈರಾಗಿಗಳನ್ನು ಸುತ್ತಲೂ ಧ್ಯಾನಮಗ್ನರಾಗಿರುವಂತೆ ಮಾಡಿ, ಕೆಲವರು ವಿಕಾರವಾಗಿ ನಗುವಂತೆ, ಮತ್ತೆ ಕೆಲವರು ಕಾದಂಬರಿಯ ಶುರುವಿನಲ್ಲಿ ಕುವೆಂಪುರವರು ಬರೆದಿರುವ ಮಾತುಗಳನ್ನು ಹೇಳುವಂತೆ ಹಾಗೂ ಹಿನ್ನೆಲೆಯಲ್ಲಿ ಕೆಟ್ಟದಾದ ಸಂಗೀತ ಸಂಯೋಜನೆ ಎಲ್ಲವೂ ಸಮಾಧಿ ಸ್ಥಳಕ್ಕೆ ಹೋದಂತೆ ಭಾಸವಾಗಿ ತಮಾಷೆಯಾಗಿ ಕಾಣುವುದು. ಈ ಸನ್ನಿವೇಶದ ಅಗತ್ಯತೆಯೇ ನನಗೆ ಕಾಣಲಿಲ್ಲ.
ಕಾದಂಬರಿಯಲ್ಲಿನ ಮತ್ತೊಂದು ಮುಖ್ಯ ಪಾತ್ರವಾದ ರಂಗಮ್ಮ ಹೆಗ್ಗಡಿತಿಗೆ, ತನ್ನ ತಂಗಿಯ ಮಗನೇ, ತನ್ನ ಸ್ವಾಮಿಯಂತೆ ಕಂಡುಬರುವುದು, ಹಾಗೂ ಆ ಮಗುವು ಕೂಡ ಈಕೆಯನ್ನು ಹಚ್ಚಿಕೊಳ್ಳುವ ಸನ್ನಿವೇಶಗಳು ಕಣ್ಣೀರು ತರಿಸುತ್ತವೆ. ಕಾದಂಬರಿಯ ತಿರುವಿಗೆ ಅರ್ಥ ಕೊಡುತ್ತವೆ. ಆದರೆ ಅದನ್ನು ಚಿತ್ರಿಸದೇ, ಆಕೆಯ ಮಾವ ಸುಬ್ಬಣ್ಣ ಹೆಗ್ಗಡೆ ಆ ಪುಟ್ಟ ಮಗುವಿನಲ್ಲಿ ತನ್ನ ಮಗನನ್ನು ಕಾಣುವಂತೆ ಚಿತ್ರಿಸಿರುವ ಸನ್ನಿವೇಶಗಳು ಸುಬ್ಬಣ್ಣ ಹೆಗ್ಗಡೆಯನ್ನು, ಆ ಪಾತ್ರಧಾರಿಯನ್ನು ಹೈಲೈಟ್ ಆಗಿಸಿ, ರಂಗಮ್ಮಳ ನಟನೆ ತೀರಾ ನಾಟಕೀಯವಾಗಿ ಕಾಣುತ್ತವೆ. ಗಡ್ಡದಯ್ಯನ ಮೂಲಕ ಇಡೀ ವಿವೇಕಾನಂದರ ತತ್ವಗಳನ್ನು ಹೇಳಿಸಿರುವುದು, ಗಡ್ಡದಯ್ಯ ಮುಕುಂದಯ್ಯ ಹಾಗೂ ದೇವಯ್ಯನ ಜೊತೆ ಆಗಿದ್ದ ಮತಾಂತರ, ಕ್ರೈಸ್ತರು, ಬ್ರಾಹ್ಮಣರ ಪದ್ಧತಿಗಳು, ಮೂಢನಂಬಿಕೆಗಳ ಬಗ್ಗೆ ನಡೆಸಿರುವ ಗಹನವಾದ ಚರ್ಚೆ ನಮಗೆ ಕಾದಂಬರಿಯ ಆಶಯವನ್ನು ತಿಳಿ ಹೇಳಿದರೆ, ಇಲ್ಲಿ ಸುಮ್ಮನೆ ೨ ನಿಮಿಷಗಳ ಕಾಲ ಬಂದು ಹೋಗುವ ವಿವೇಕಾನಂದರ ಪಾತ್ರಧಾರಿ, ಹಾಗೂ ಚಿಕಾಗೋದಲ್ಲಿನ ಅವರ ಭಾಷಣವನ್ನು ಹಿನ್ನೆಲೆಯಲ್ಲಿ ಕೇಳಿಸುವುದು ವೀಕ್ಷಕರಿಗೆ ಅರ್ಥವಾಗುವುದೇ ಇಲ್ಲ. ಕಾದಂಬರಿಯ ಕೊನೆಯಲ್ಲಿ ಗುತ್ತಿಯ ನಾಯಿ ‘ಹುಲಿಯಾ’ ನದಿಯಲ್ಲಿ ಮುಳುಗಿ ಹೋಗುವುದನ್ನು ಓದುತ್ತಾ, ಓದುತ್ತಾ, ಅಳಲು ಶುರು ಮಾಡುವ ಓದುಗರು, ಇಲ್ಲಿ ಓಹ್! ನಾಟಕ ಮುಗಿಯಿತು ಎಂಬಂತೆ ಎದ್ದು ಬರುವುದು ನಾಟಕದ ದುರಂತ :(
ಮೊದಲನೆಯದಾಗಿ ರಂಗ ಸಜ್ಜಿಕೆ. ಇಡೀ ಮಲೆನಾಡಿನ ಪರಿಸರವನ್ನು ಕಣ್ಣಮುಂದೆ ತಂದಿಡಲು ಪ್ರಯತ್ನ ಪಟ್ಟಿರುವ ಶಶಿಧರ ಅಡಪ ಅವರಿಗೆ ಮೆಚ್ಚುಗೆ ವ್ಯಕ್ತಪಡಿಸಲೇ ಬೇಕು. ಆದರೆ ರಂಗಸಜ್ಜಿಕೆಯಲ್ಲಿನ ಮತ್ತೊಂದು ಭಾಗವಾದ ವೀಕ್ಷಕರ ಸ್ಥಳವನ್ನು ಕೂಡ ಅವರು ಅಷ್ಟೇ ಮುತುವರ್ಜಿಯಿಂದ ಸಜ್ಜುಗೊಳಿಸಿದ್ದರೆ ಇನ್ನಷ್ಟು ಕಳೆಗಟ್ಟುತ್ತಿತ್ತು ಎಂಬುದು ನನ್ನ ಅನಿಸಿಕೆ. ಸುಮಾರು ೯ ಗಂಟೆಗಳ ನಾಟಕವು ೪ ಸ್ಥಳಗಳಲ್ಲಿ ನಡೆಯುವುದು ಹಾಗೂ ಆ ಬದಲಾವಣೆಗೆ ಕೇವಲ ೧೫ ನಿಮಿಷಗಳ ವಿರಾಮ ದೊರೆತು, ಓಡಿ ಹೋಗಿ, ಸೀಟನ್ನು ಹಿಡಿದಿಟ್ಟುಕೊಳ್ಳಬೇಕಾದ ಪರಿಸ್ಥಿತಿ, ವಯಸ್ಸಾದವರಿಗೆ ಅನಾನುಕೂಲವಾಗಿದ್ದನ್ನು ಕಣ್ಣಾರೆ ಕಂಡೆ. ಮೂರು ಘಂಟೆಗಳ ಕಾಲ ಕಲ್ಲಿನ ಮೇಲೆ ಕುಳಿತುಕೊಂಡು ನೋಡುವುದು ನಿಜಕ್ಕೂ ಕಷ್ಟಕರ. ಆದರೆ ಅದನ್ನು ಮರೆಯುವಂತೆ ಮಾಡುವುದು ನಾಟಕದ ಪ್ಲಸ್ ಪಾಯಿಂಟ್! ಕಲಾಗ್ರಾಮದ ಪರಿಸರ ಕೂಡ ನಾಟಕ ನೋಡಲು ಪೂರಕವಾಗಿರುವುದು ಒಳ್ಳೆಯ ಅಂಶ.
ಸಂಗೀತ ಸಂಯೋಜನೆ - ಮಲೆನಾಡಿನ ದೃಶ್ಯ ವೈಭವವನ್ನು ಕಳೆಗಟ್ಟುವಂತೆ ನಿರ್ಮಿಸಿದವರು, ಸಂಗೀತ ಸಂಯೋಜನೆಯಲ್ಲಿಯೂ ಕೂಡ ಅಲ್ಲಿಯದೇ ಗ್ರಾಮ್ಯ ಸಂಗೀತವನ್ನು ಅಳವಡಿಸಿಕೊಂಡಿದ್ದರೆ ಬಹಳ ಚೆನ್ನಾಗಿರುತ್ತಿತ್ತು. ಹಂಸಲೇಖರ ಸ್ವರ ಸಂಗೀತ ಸುಮ್ಮನೆ ಕೇಳಿದರೆ ಖುಷಿ ಕೊಡುತ್ತದೆಯಾದರೂ, ನಾಟಕದಲ್ಲಿ ಹಿನ್ನೆಲೆ ಸಂಗೀತವಾಗಿ ಉಪಯೋಗಿಸಿಕೊಂಡಾಗ ಅಭಾಸವಾಗಿಬಿಡುತ್ತದೆ. ನಾಟಕಕ್ಕೂ, ಸಂಗೀತಕ್ಕೂ ಸ್ವಲ್ಪವೂ ಹೊಂದಿಕೆಯಾಗದೇ ಕಿರಿಕಿರಿಯಾಗುತ್ತದೆ. ಸಿನೆಮಾ ಹಾಡುಗಳ ರೀತಿಯಲ್ಲಿ ಮೂಡಿ ಬಂದಿರುವ ಎಲ್ಲಾ ಹಾಡುಗಳೂ, ಮಲೆನಾಡಿನ ಪರಿಸರವನ್ನು ಆಧುನಿಕವಾಗಿಸಿ, ಪರಿಸರವನ್ನು ಕಲುಷಿತಗೊಳಿಸುತ್ತದೆ. ಕಾವೇರಿಯ ಪಾತ್ರದ ಸಂದರ್ಭದಲ್ಲಿ ಹಿನ್ನೆಲೆಯಲ್ಲಿ ತೋರಿಸುವ ನೃತ್ಯ ಕೂಡ ಅಸಂಬದ್ಧವಾಗಿ ಕಾಣುತ್ತದೆ. ಮಲೆನಾಡಿನ ಇಂಬಳಗಳನ್ನು ತೋರಿಸಿರುವ ರೀತಿ ಚಂದವಾಗಿದ್ದರೆ, ಗೊಬ್ಬರದ ಹುಳು ಅಷ್ಟೇನೂ ಆಕರ್ಷಿಸುವುದಿಲ್ಲ.
ಇನ್ನೂ ಕಾದಂಬರಿಯ ಮುಖ್ಯ ವೈಶಿಷ್ಟ್ಯವಾದ ಮಲೆನಾಡಿನ ‘ಭಾಷೆ’ ನಾಟಕದಲ್ಲಿ ಸರಿಯಾಗಿ ಕಂಡೂ ಬರದೇ ಬೇಸರವಾಗುತ್ತದೆ. ಬೆಂಗಳೂರು, ಮಂಗಳೂರು, ಮೈಸೂರು, ಮಲೆನಾಡು ಎಲ್ಲಾ ರೀತಿಯ ಸಂಭಾಷಣೆಯ ಶೈಲಿಯು ಮೂಡಿ ಬಂದು, ಸಂಪೂರ್ಣವಾಗಿ ಕಲಸಿಹೋಗಿ, ಮನಸಿಗೆ ವಿಪರೀತವಾಗಿ ಕಿರಿಕಿರಿಯಾಗಿಬಿಡುತ್ತದೆ. ಮಲೆನಾಡಿನ ಪರಿಸರವನ್ನು ದೃಶ್ಯಿಸಲು, ಪಾತ್ರಧಾರಿಗಳ ವೇಷಭೂಷಣಗಳಿಗೆ ಗಮನ ಕೊಟ್ಟ ನಿರ್ದೇಶಕರು, ಭಾಷೆಗೇಕೆ ಒತ್ತು ಕೊಡಲಿಲ್ಲವೆಂಬ ಪ್ರಶ್ನೆ ಕಾಡುತ್ತದೆ. ಓದುವಾಗ ಮನಸ್ಸಿನಲ್ಲಿ ಮೂಡಿದ ಪಾತ್ರಗಳು, ಇಲ್ಲೀ ನಾಟಕದಲ್ಲಿ ನಟಿಸುವಾಗ ಹೊಂದಾಣಿಕೆಯಾಗದಿದ್ದದ್ದು ನನ್ನ ಕಲ್ಪನೆಯ ತಪ್ಪೇ? ನಟಿಸಿದ ಪಾತ್ರಧಾರಿಗಳ ತಪ್ಪೇ? ನಿರ್ದೇಶಕರದ್ದೇ? ತಿಳಿಯಲಿಲ್ಲ. ಕಾದಂಬರಿಯಲ್ಲಿ ಪೀಂಚಲು ಮಿಂಚಿದರೆ, ನಾಟಕದಲ್ಲಿ ‘ಐತ’, ಅಲ್ಲಿ ಮುಕುಂದಯ್ಯನಾದರೆ, ಇಲ್ಲಿ ಮಿಂಚುವ ತಿಮ್ಮಪ್ಪ ಹೆಗ್ಗಡೆ, ಕಾದಂಬರಿಯಲ್ಲಿ ಕಾಣುವ ಜಿಪುಣ ಸುಬ್ಬಣ್ಣ ಹೆಗ್ಗಡೆ, ಇಲ್ಲಿ ವಿಶಾಲ ಹೃದಯದವನಾಗಿ ಕಾಣುವುದು, ಅಲ್ಲಿ ಸಣ್ಣವನಾದರೂ ವಿಚಾರವಂತಿಕೆಯುಳ್ಳ ಧರ್ಮುವನ್ನು ಕಂಡು ಆಶ್ಚರ್ಯವೆನಿಸಿದರೆ , ನಾಟಕದಲ್ಲಿ ಹಾಲುಗಲ್ಲದ, ಹುಡುಗಾಟದ ಪುಟ್ಟ ಹುಡುಗನಾಗಿ ವಾತ್ಸಲ್ಯ ಉಕ್ಕಿಸುವುದು, ಇನ್ನೂ ಕಾದಂಬರಿಯಲ್ಲಿ ಕಂಡಂತೆಯೇ ಇರುವ ಪಾತ್ರಗಳೆಂದರೆ ಗುತ್ತಿ, ನಾಗಕ್ಕ, ನಾಗತ್ತೆ, ಚಿನ್ನಕ್ಕಳ ಅಜ್ಜಿ, ಸಾಬರು, ಐಗಳು ಅದರಲ್ಲೂ ಚೀಂಕ್ರ ಹಾಗೂ ಚಿನ್ನಕ್ಕಳ ತಂದೆಯ ಪಾತ್ರಗಳು ಕಣ್ಣಿಗೆ ಕಟ್ಟಿದಂತೆಯೇ ನಾಟಕದಲ್ಲಿ ಅದ್ಭುತವಾಗಿ ನಟಿಸಿವೆ.
ಬೃಹತ್ ಅಂದರೆ ಸುಮಾರು ೭೫೦ ಪುಟಗಳ ಕಾದಂಬರಿಯನ್ನು (ಅಷ್ಟನ್ನು ಓದಲೂ ಸುಮಾರು ದಿವಸಗಳು ಬೇಕೆಂದಿರುವಾಗ!), ಕೇವಲ ೯ ಗಂಟೆಗಳ ಅವಧಿಯ ನಾಟಕದ ಮೂಲಕ ಎಲ್ಲಾ ಜನರಿಗೂ ಅರ್ಥವಾಗುವಂತೆ ದೃಶ್ಯ ರೂಪಕ್ಕೆ ಅಳವಡಿಸುವುದು ನಿಜಕ್ಕೂ ಕಷ್ಟಸಾಧ್ಯದ ಕೆಲಸ. ಹಾಗಿರುವಾಗ ಇದನ್ನು ತಕ್ಕಮಟ್ಟಿಗೆ ಸಾಧಿಸಿದ ಸಿ.ಬಸವಲಿಂಗಯ್ಯ ಹಾಗೂ ತಂಡದವರು ನಿಜಕ್ಕೂ ಅಭಿನಂದನಾರ್ಹರು. ಮಲೆನಾಡಿನಲ್ಲಿಯೇ ‘ಮಲೆ, ಮಳೆ’ ಇಲ್ಲವಾಗುತ್ತಿರುವ ಈ ಗ್ಲೋಬಲೈಸೇಷನ್ ಕಾಲದಲ್ಲಿ, ಬೆಂಗಳೂರಿನಂತಹ ‘ಮೆಟ್ರೋ’ ಪರಿಸರದಲ್ಲಿ ‘ಮದುಮಗಳ’ನ್ನು ಕರೆತಂದ ಅವರ ಸಾಹಸ ಮೆಚ್ಚಬೇಕಾದದ್ದೇ! ಬಹಳಷ್ಟು ಜನ ನಾಟಕ ವೀಕ್ಷಿಸಿದ ಮಂದಿ, ನಂತರ ಪುಸ್ತಕವನ್ನು ಓದಿದ್ದು ಅಥವಾ ಓದಬೇಕೆಂದು ಆಶಿಸಿದ್ದು! ಈ ಮೂಲಕ ಮತ್ತೊಮ್ಮೆ ‘ಮಲೆಗಳಲ್ಲಿ ಮದುಮಗಳು’ ಪುಸ್ತಕವನ್ನು ಓದುವಂತೆ ಮಾಡಿದ ಯಶಸ್ವಿ ಅವರಿಗೆ ಸಲ್ಲತಕ್ಕದ್ದು!
ಕುವೆಂಪುರವರ ಕಾದಂಬರಿಯ ರಂಗ ರೂಪಾಂತರವೆಂದು ಬಿಂಬಿಸಿದ್ದಕ್ಕಾಗಿಯೇ ಹಾಗೂ ಬಹಳಷ್ಟು ಜನರು ಕಾದಂಬರಿಯನ್ನು ಓದದೇ ಬಂದದ್ದು ನಾಟಕದ ಯಶಸ್ಸಿಗೆ ಕಾರಣವಾಯಿತೆಂದು ಹೇಳಿದರೆ ತಪ್ಪಾಗಲಾರದು. ಕಾದಂಬರಿಯನ್ನು ಓದಿ ಮುಗಿಸಿದಾಗ ಒಂದನ್ನು ಪಡೆಯಲು, ಮತ್ತೊಂದನ್ನು ಕಳೆದುಕೊಳ್ಳಲೇಬೇಕೆಂಬ ಅನಿಸಿಕೆ / ವಿಷಾದ ಮೂಡಿದರೆ, ನಾಟಕವನ್ನು ನೋಡಿ ಬರುವಾಗ ನಮಗೆ ಯಾವ ಘಟನೆಗಳೂ ಕೂಡ ಮುಖ್ಯವಲ್ಲ, ಎಲ್ಲವೂ ಕಮರ್ಶಿಯಲೈಸ್ ಆಗಿಬಿಟ್ಟಿವೆ, ನಾಟಕದ ಅನೇಕ ಮಾತುಗಳು ಕೂಡ ಚಪ್ಪಾಳೆ ಗಿಟ್ಟಿಸುತ್ತವೆ ಹೊರತು ಮನಸ್ಸಿನಲ್ಲಿ ಚಿಂತನೆಯನ್ನು ಹುಟ್ಟು ಹಾಕುವುದಿಲ್ಲವಲ್ಲ ಎಂಬ ಕಳವಳವನ್ನು ಹುಟ್ಟು ಹಾಕುವುದು ಬದಲಾದ ಮನಸ್ಥಿತಿಯೇ? ಯಾವುದಕ್ಕೂ ಮೊದಲಿಲ್ಲ, ಕೊನೆಯಿಲ್ಲ :(