"ಈಗಿರುವುದು ಎರಡೇ ಜಾತಿ, ಶ್ರೀಮಂತ ಮತ್ತು ಬಡವ. ಹಾಗಾಗಿ ಕನ್ನಡದ ಹಿರಿ, ಕಿರಿ, ಮರಿ ಸಾಹಿತಿಗಳೆಲ್ಲರೂ ತಮ್ಮ ಪಾಡಿಗೆ ತಾವು ಓದಿಕೊಂಡು, ಬರೆದುಕೊಂಡು ಇರುವುದು, ರಾಜಕೀಯವನ್ನು ರಾಜಕಾರಣಿಗಳಿಗೆ ಬಿಡುವುದು!’ ಎಂದೊಂದು ಸ್ಟೇಟಸ್ ಅನ್ನು ಇತ್ತೀಚೆಗೆ FB ಲಿ ಹಾಕಿಕೊಂಡಿದ್ದೆ. ನಾನು ಹೇಳಿದ್ದಕ್ಕೆ ಒಂದಷ್ಟು ಜನ ‘ಜಾತಿಯೇ ಇಲ್ಲವೆನ್ನುತ್ತೀರಾ? ಹಾಗಾದರೆ ಅಲ್ಲಿ ನೋಡಿ, ಇಲ್ಲಿ ನೋಡಿ ಎಂದು ಒಂದಷ್ಟು ದಲಿತರ ಮೇಲಿನ ದಬ್ಬಾಳಿಕೆಯನ್ನು ತೋರಿಸಿ, ನನ್ನನ್ನು ಖಂಡಿಸಿದ್ದರು.ಒಂದಷ್ಟು ಹಲ್ಲಾ, ಗುಲ್ಲಾ ಆಯಿತು, ನಾನು ಹೇಳಿದ್ದೇ ಬೇರೆ, ಓದಿದವರು ಅರ್ಥೈಸಿಕೊಂಡಿದ್ದೇ ಬೇರೆಯಾಗಿ, ಕೊನೆಗೆ ಮತ್ತೊಂದು ಉದ್ದದ ಪೋಸ್ಟ್ ಹಾಕಿ ಸುಮ್ಮನಾಗಿಸಬೇಕಾಯಿತು. ಈಗಿನ ಬಹಳಷ್ಟು ಸಾಹಿತಿಗಳು ತಮ್ಮ ಪುಸ್ತಕಗಳ ‘ಕಂಟೆಂಟ್’ ಅನ್ನು ‘ಸೇಲಬಲ್’ ಆಗಿ ಮಾಡುವ ಉದ್ದೇಶ ಇಟ್ಟುಕೊಂಡು ಬರೆಯುತ್ತಾರೆ, ಪ್ರಾಮಾಣಿಕತೆಯಿಂದಲ್ಲ’ ಎಂದು ಹೇಳುವುದಷ್ಟೇ ನನ್ನ ಉದ್ದೇಶವಾಗಿತ್ತು.
ಜಾತಿ, ಸೆಕ್ಸ್, ಕೆಳವರ್ಗ, ಸ್ತ್ರೀವಾದ ಮುಂತಾದವನ್ನು ಉದ್ದೇಶಪೂರ್ವಕವಾಗಿಯೇ ತಮ್ಮ ಪುಸ್ತಕಗಳಲ್ಲಿ ‘ಬಲವಂತ’ ವಾಗಿ ತಂದು, ಪಾತ್ರಗಳ ಮೂಲಕ ಈ ಭಾವನೆಗಳನ್ನು ವಿಜೃಂಭಿಸಿ, ಮತ್ತಷ್ಟು ಇವುಗಳೆಲ್ಲವನ್ನೂ ಹೆಚ್ಚಿಸುತ್ತಿದ್ದಾರೆ. ಇವರ ಸಾಹಿತ್ಯ ಕೃಷಿಯಿಂದಾಗಿ ಮತ್ತಷ್ಟು ಎಲ್ಲರಲ್ಲಿಯೂ ಒಡಕು ಮೂಡುತ್ತಿದೆಯೇ ಹೊರತು ಮಾನವೀಯತೆ ಉಂಟಾಗುತ್ತಿಲ್ಲ ಎಂಬುದು ಇತ್ತೀಚಿನ ಬಹುತೇಕರ ಪುಸ್ತಕಗಳನ್ನು ಓದುವಾಗ ನನಗನ್ನಿಸುತ್ತಲೇ ಇರುತ್ತದೆ. ಹಾಗೆಯೇ ತಮ್ಮ ಚಾನೆಲ್ ಗಳ ಟಿ ಆರ್ ಪಿ ಹೆಚ್ಚಿಸಿಕೊಳ್ಳಲು, ಎಲ್ಲಾ ಚಾನೆಲ್ ಗಳವರ ಸಾಹಸ, ಅದಕ್ಕಾಗಿ ಯಾವುದೇ ಮಟ್ಟಕ್ಕೆ ಬೇಕಿದ್ದರೂ ಇಳಿಯುವಂತಹ ನೀಚತನ, ಕಂಡದನ್ನೆಲ್ಲಾ ‘ಬ್ರೇಕಿಂಗ್ ನ್ಯೂಸ್’ ಎಂದು ಇರುವುದನ್ನು, ಇಲ್ಲದೇ ಇರುವುದೆಲ್ಲವನ್ನೂ ‘ಕ್ರಿಯೇಟ್’ ಮಾಡಿ, ರೋಚಕತೆಯಿಂದ ತೋರಿಸುವುದು, ನ್ಯೂಸ್ ಪೇಪರ್ ಗಳವರು ಕೂಡ ‘ತಾವೇನೂ ಕಡಿಮೆ ಇಲ್ಲ’ ವೆಂದು, ಸ್ವಲ್ಪವೂ ತರ್ಕ ಮಾಡದೇ, ಏನೇನೋ ಅಸಂಬದ್ಧ ‘ನ್ಯೂಸ್’ ಗಳನ್ನು ನೀಡುವುದು, ಒಟ್ಟಿನಲ್ಲಿ ಮಾಧ್ಯಮಗಳ ಸತ್ಯಾಸತ್ಯತೆ ಬಗ್ಗೆ ಜನರಲ್ಲಿ ವಿಶ್ವಾಸವೇ ಇಲ್ಲದಂತಾಗಿದೆ. ಒಟ್ಟಿನಲ್ಲಿ ದುಡ್ಡಿಗಾಗಿ ಏನು ಬೇಕಾದರೂ ಮಾಡಬಲ್ಲೆವು, ಸತ್ಯವನ್ನು ಕೂಡ ತಿರುಚಬಲ್ಲೆವು, ನಮ್ಮನ್ಯಾರೂ ಕೇಳುವವರಿಲ್ಲ ಎಂಬ ಧೋರಣೆ ಹೀಗೆಲ್ಲಾ ಅವರನ್ನು ಆಡಿಸುತ್ತಿದೆ.
ಇಂತಹದೊಂದು ಸ್ಟೇಟ್ ಮೆಂಟ್ ನಾನು ನೀಡಿದ ಮೇಲೆ ದುರ್ಬೀನು ಹಾಕಿಕೊಂಡು ಈಗಿನ ಪರಿಸ್ಥಿತಿಯನ್ನು ನೋಡುತ್ತಲೇ ಬಂದೆ. ಜಾತಿಗಿಂತಲೂ ನಮ್ಮನ್ನು ಕಾಡುತ್ತಿರುವುದೇ ಈ ಬಡವರ ಮೇಲಿನ ದೌರ್ಜನ್ಯ ಎಂಬ ನನ್ನ ಅನಿಸಿಕೆ ಗಟ್ಟಿಯಾಗುತ್ತಲೇ ಬಂದಿತು. ಇರಲಿ, ಇವೆಲ್ಲವೂ ಮತ್ತೆ ನೆನಪಾದದ್ದು ಶ್ರೀಮತಿ ನಾಗವೇಣಿಯವರ ‘ಗಾಂಧಿ ಬಂದ’ ಓದಲು ಶುರು ಮಾಡಿದ ಮೇಲೆ. ‘ಗಾಂಧಿ ಬಂದ’ ಕಾದಂಬರಿ ತುಳುನಾಡಿನವರಿಗೆ ಒಂದು ರೀತಿಯ ಅಪ್ಯಾಯಮಾನ ಭಾವವನ್ನು ನೀಡುತ್ತದೆ. ಸುಮಾರು ೧೦ ವರ್ಷಗಳ ಕಾಲದ ಸ್ವಾತಂತ್ರ್ಯ ಹೋರಾಟದ ಚಿತ್ರಣ, ಆ ಸಮಯದಲ್ಲಿ ತುಳುನಾಡು ಹೇಗಿತ್ತು? ಎಂಬುದನ್ನು ಒಂದು ಸಣ್ಣ ಕಥೆಯ ಜೊತೆಗೆ ಬಹಳಷ್ಟು ತುಳುನಾಡಿನ ಸಂಸ್ಕೃತಿ, ದೈನಂದಿನ ಬದುಕಿನ ಚಿತ್ರಣದ ಮೂಲಕ ನಾಗವೇಣಿಯವರು ಹೇಳುತ್ತಾ ಹೋಗುತ್ತಾರೆ. ಈ ಕಾದಂಬರಿಯಲ್ಲಿ ಎಲ್ಲಾ ಜಾತಿಗಳ ಸಂಘರ್ಷವಿದೆ, ದೇಶಕ್ಕಾಗಿ ಹೋರಾಡಿದ ಕಥೆಯಿದೆ, ಪ್ರೀತಿಗಾಗಿ ಮಿಡಿದ ಮನಗಳಿವೆ, ಒಂದೇ, ಎರಡೇ, ಎಲ್ಲಕ್ಕಿಂತ ಹೆಚ್ಚಾಗಿ ಇದ್ಯಾವುದೂ ಕೂಡ ಬಲವಂತವಾಗಿ ಇಲ್ಲಿ ಚಿತ್ರಿಸಿಲ್ಲ. ಈ ಪುಸ್ತಕ ‘ಸೇಲಬಲ್ ಪ್ರಾಡಕ್ಟ್’ ಆಗಿ ನಿರ್ಮಿತಗೊಂಡಿಲ್ಲ. ಅತ್ಯಂತ ಪ್ರಾಮಾಣಿಕತೆಯಿಂದ, ತುಳುನಾಡಿನಲ್ಲಿ ಹೇಗಿತ್ತು ಪರಿಸ್ಥಿತಿ?
ಎಂಬುದನ್ನಷ್ಟೇ ಹೇಳುತ್ತಾ ಹೋಗುತ್ತದೆ. ಹಾಗಾಗಿ ಬಹಳ ಇಷ್ಟವಾಗುತ್ತಾ ಹೋಗುತ್ತದೆ.
ಬೆಂಗಳೂರಿನಲ್ಲಿಯೇ ಹುಟ್ಟಿ ಬೆಳೆದಿದ್ದರೂ, ಅಮ್ಮನಿಂದಾಗಿ ತುಳು ನಾಡಿನ ಪರಿಚಯ, ಆಕೆ ಹೇಳಿಕೊಡುತ್ತಿದ್ದ ತುಳು ತಿಂಗಳುಗಳು, ಯಾವುದೇ ನೋವು ಉಂಟಾದರೂ ಹಚ್ಚುತ್ತಿದ್ದ ತ್ಯಾಂಪಣ್ಣ ಭಂಡಾರಿಗಳ ನೋವಿನೆಣ್ಣೆ, ಹಬ್ಬ, ಹರಿದಿನಗಳು ಬಂದಾಗ ತುಳುನಾಡಿನಲ್ಲಿ ಆ ಸಂದರ್ಭದಲ್ಲಿ ನಡೆಯುತ್ತಿದ್ದ ಆಟೋಟ, ಸಂಪ್ರದಾಯಗಳ ಪರಿಚಯ, ರಜೆ ಬಂದಾಗಲೆಲ್ಲಾ ಮಾವನ ಮನೆಗೆ ಓಡುತ್ತಿದ್ದಾಗ ಪರಿಚಯವಾಗಿದ್ದ ಅಲ್ಲಿನ ಒಕ್ಕಲಿನವರು, ಅವರು ಹೇಳುತ್ತಿದ್ದ ಕಥೆಗಳು, ಭೂತದ ಮನೆ, ಕೋಲ, ಗುತ್ತಿನ ಮನೆ, ಬಂಟರ ಮನೆಯ ರೀತಿ ರಿವಾಜು, ಗುತ್ತಿನ ಮನೆಯ ಹೆಂಗಸರ ಗತ್ತು, ವರದಕ್ಷಿಣೆಯ ಆರ್ಭಟ, ಒಡವೆಗಳ ಮೆರೆದಾಟ, ಮೊಗೆವೀರರ ಆಕ್ರೋಶ, ಕೊರಗರ ನಿಸ್ಸಹಾಯಕತೆ, ಕೆಳವರ್ಗದವರಲ್ಲಿಯೇ ಇರುವ ಜಾತಿಗಳ ಮೇಲಾಟ, ಅಮ್ಮನ ಅಮ್ಮ, ಅಕ್ಕ ಮಾಡುತ್ತಿದ್ದ ಮೂಡೆ, ಪತ್ರೊಡೆ, ಅರಿಷಿಣ ಎಲೆಯ ಗಟ್ಟಿ, ಮಿಡಿ ಉಪ್ಪಿನ ಕಾಯಿ ಎಲ್ಲವೂ ಕೂಡ ‘ಗಾಂಧಿ ಬಂದ’ ದಲ್ಲಿ ಬಂದು ಹೋಗುತ್ತದೆ. ಯಕ್ಷಗಾನದ ಬಗ್ಗೆ ಅಷ್ಟೊಂದು ಮಾಹಿತಿಯಿರಲಿಲ್ಲವೆಂಬುದು ಒಂದಿಷ್ಟು ಆಶ್ಚರ್ಯವಾಯಿತು. ಅದರ ಹೊರತು ತುಳುನಾಡಿನ ಬಗ್ಗೆ ಸಂಪೂರ್ಣ ಮಾಹಿತಿ ಇರುವ ಒಂದು ರೀತಿಯ ಡಾಕ್ಯುಮೆಂಟರಿ ಈ ‘ಗಾಂಧಿ ಬಂದ’. ಅವರ ಅಮ್ಮ ಹೇಳಿದ ಸಣ್ಣ ಕಥೆ ಯೊಂದನ್ನು ಹಿಡಿದು ಇಡೀ ತುಳುನಾಡಿನ ಚಿತ್ರಣವನ್ನು ನೀಡಿದ ಶ್ರೀಮತಿ ನಾಗವೇಣಿಯವರಿಗೆ ಅಭಿನಂದನೆಗಳನ್ನು ಸಲ್ಲಿಸಲೇ ಬೇಕು.
ಬ್ರಾಹ್ಮಣರ ಮನೆಯ ಪುಟ್ಟ ಹುಡುಗಿ ವಿಧವೆ ‘ದ್ರೌಪದಿ’ ಪ್ರೀತಿಸುವ ಮುಸ್ಲಿಮ್ ಹುಡುಗ ಆದರ್ಶವಾದಿ ‘ಅದ್ರಾಮ’, ಮತ್ತೊಂದು ಕಡೆ ಗರ್ಭಕೋಶವಿಲ್ಲದಿರುವುದರಿಂದ, ಹೆಣ್ತನವೇ ಇಲ್ಲವೆಂದು ಮನೆ, ನೆರೆಹೊರೆಯವರ ಬಳಿ ‘ಶಿಖಂಡಿ’ ಎಂದು ಹೀಯಾಳಿಸಿಕೊಳ್ಳುವ ‘ದಾರು’, ಆಕೆಯ ಸಂಕಟ ನಿವಾರಿಸಲೆಂದೇ ಮದುವೆಯಾಗುವ ಮತ್ತೊಬ್ಬ ಗಾಂಧೀವಾದಿ ‘ಮಾರಪ್ಪ’ ಇವರೀರ್ವರ ಕಥೆಯ ನಡುವೆ ಆಳು ಮಕ್ಕಳ ಜಾತಿ ಸಂಘರ್ಷಗಳು, ಮೇಲ್ವರ್ಗ, ಕೆಳವರ್ಗದವರ ಕಿತ್ತಾಟಗಳು, ಗುತ್ತಿನ ಹೆಣ್ಣುಮಕ್ಕಳ ‘ಅಳಿಯ ಸಂತಾನ’ವೆನ್ನುತ್ತಾ ತಾಯಿ ಮನೆಯಲ್ಲಿ ನಡೆಯುವ ದರ್ಬಾರು, ನೋಯುವವರು ಕೂಡ ಹೆಣ್ಣು ಮಕ್ಕಳೇ!, ಎಲ್ಲವೂ ಮನವನ್ನು ಆಲೋಚನೆಗೀಡು ಮಾಡಿಬಿಡುತ್ತವೆ. ಸುಮಾರು ೧೦-೧೨ ವರ್ಷಗಳ ಕಾಲದ ಘಟನೆಗಳನ್ನು ಡಾಕ್ಯುಮೆಂಟರಿಯ ರೀತಿಯಲ್ಲಿ ಚಿತ್ರಿಸಿರುವುದರಿಂದ, ತುಳುನಾಡಿನ ಹಿನ್ನೆಲೆ ಇಲ್ಲದಿರುವವರಿಗೆ ‘ಬೋರ್’ ಹೊಡೆಸುತ್ತದೆಯೆನೋ? ಎಂದೆನಿಸಿತು.
ಈಗ ಸಂಸ್ಕೃತಿ ರಕ್ಷಕರಿಂದ, ಜಾತಿ, ಕೋಮು ಗಲಭೆಯಲ್ಲಿ ತುಳುನಾಡಿನ ಜನತೆ ನಲುಗುತ್ತಿರುವುದನ್ನು ನೋಡುವಾಗ, ಆಗಿನ ಕಾಲಕ್ಕಿಂತಲೂ, ಈಗಲೇ ಹೆಚ್ಚಿನ ಹಿಂದೂ, ಮುಸ್ಲಿಮ್ ಗಲಾಟೆ ಕಂಡುಬರುವುದನ್ನು ನೋಡಿದಾಗ ಬೇಸರವಾಗುತ್ತದೆ. ಆಗ ಹೇಗಿತ್ತು? ಎಂಬುದನ್ನು ‘ಗಾಂಧಿ ಬಂದ’ ಕಾದಂಬರಿ ಅವರಿಗೆಲ್ಲರಿಗೂ ಪಾಠ ಹೇಳಿದಂತೆ ಕಾಣುತ್ತದೆ.
ಮತ್ತೊಂದು ಮಾತು - ‘ಗಾಂಧಿ ಬಂದ’ ಪುಸ್ತಕ ಓದುವ ಮುನ್ನವೇ, ಇದರ ನಾಟಕವನ್ನು ನೋಡಿದ್ದೆ. ಒಂದು ಪುಸ್ತಕವನ್ನು ಹೇಗೆ ದೃಶ್ಯರೂಪಕ್ಕಿಳಿಸುವುದು ಎಂಬುದನ್ನು ನಿಜವಾಗಿಯೂ ಈ ನಾಟಕ ನೋಡಿದಾಗ ಅರ್ಥವಾಗುವುದು. ಎಲ್ಲಿಯೂ ಕಿಂಚಿತ್ತು ಪುಸ್ತಕದ ಆಶಯಕ್ಕೆ ಧಕ್ಕೆ ಬಾರದಂತೆ ನಾಟಕ ರಚಿಸಿರುವುದು, ಜೊತೆಗೆ ಆಯಾ ಪಾತ್ರಧಾರಿಗಳ ನಟನೆ, ಆ ನಾಟಕಕ್ಕೆ ಜೀವ ತುಂಬಿತ್ತು. ಆ ನಾಟಕದಲ್ಲಿಯೂ ಕೂಡ ಭೂತದ ಕೋಲ, ಒಂದಿಷ್ಟು ‘ನಲಿಕೆ’ ಯವರ ನೃತ್ಯ, ಮುಂತಾದವನ್ನು ತೋರಿಸಿ, ತುಳುನಾಡಿನಲ್ಲಿಯೇ ಕುಳಿತಿದ್ದೇವೆ ಎಂಬ ಭಾಸವನ್ನು ಉಂಟು ಮಾಡುವಲ್ಲಿ ಆ ತಂಡ ಯಶಸ್ವಿಯಾಗಿದೆ. ಅದರಲ್ಲಿಯೂ ಮಾರಪ್ಪನ ಅಮ್ಮನ ಪಾತ್ರಧಾರಿ ‘ಸೂರಕ್ಕೆ’ ಯ ನಟನೆಯಂತೂ ನಾಟಕದ ಪ್ಲಸ್ ಪಾಯಿಂಟ್. ಪುಸ್ತಕ ಓದಲು ಸಾಧ್ಯವಾಗದಿದ್ದವರೂ ನಾಟಕವನ್ನಾದರೂ ನೋಡುವುದು ತುಳುನಾಡಿನ ಬಗ್ಗೆ ಸ್ವಲ್ಪವಾದರೂ ಅರ್ಥ ಮಾಡಿಕೊಳ್ಳಲು ಸಾಧ್ಯವಾಗುವುದು :-)