Wednesday, September 5, 2012

ಶಿಕ್ಷಕರ ದಿನಾಚರಣೆ

ಇವತ್ತು ಶಿಕ್ಷಕರ ದಿನಾಚರಣೆ. ಸೆಪ್ಟೆಂಬರ್ ೫ ಅಂದ ತಕ್ಷಣ ನನಗೆ ಮೊದಲು ನೆನಪಾಗೋದು ನಮ್ಮ ನಾಯಿ ಟಾಮಿ ಸತ್ತಿದ್ದು ಇದೇ ದಿನದಂದು. ನಾನು ತುಂಬಾ ಚಿಕ್ಕವಳಿದ್ದೆ. ೨ ನೇ ಕ್ಲಾಸೋ, ೩ನೇ ಕ್ಲಾಸೋ ಇರಬೇಕು. ಅಮ್ಮ ಎಬ್ಬಿಸಿ, ಟಾಮಿ ಸತ್ತು ಹೋಯಿತು ಅಂದಾಗ, ಹೋಗಮ್ಮ ಅಂತೇನೋ ಹೇಳಿ ಮತ್ತೆ ಮಲಗಿದ್ದೆ. ಅಣ್ನಂದಿರೆಲ್ಲರೂ ತುಂಬಾ ಅತ್ತಿದ್ದರಂತೆ. ಅಮ್ಮ ಅದಕ್ಕೆ ಇವಳಿಗೆ ಸ್ವಲ್ಪ ಕೂಡ ಫೀಲಿಂಗ್ ಇಲ್ಲವಲ್ಲ ಎಂದು ತಮಾಷೆ ಮಾಡಿದ್ದಳು. ನನ್ನದೊಂದು ಪುಟ್ಟ ಡೈರಿ ಇತ್ತು. ಅದ್ರಲ್ಲಿ ಶಿಕ್ಶಕರ ದಿನಾಚರಣೆಯಂದು ಟಾಮಿ ಸತ್ತಿದೆ, ನನಗೆ ತುಂಬಾ ಬೇಜಾರಾಗಿದೆ ಎಂದೇನೋ ಬರೆದುಕೊಂಡಿದ್ದೆ. ಅದಕ್ಕೆ ನಾನು ನನಗೂ ತುಂಬಾ ಬೇಜಾರಾಗಿದೆ, ಆದರೆ ನಿಮ್ಮ ತರಹ ಹೇಳಿಕೊಳ್ಳೊಕೆ ಬರೊಲ್ಲ ಅಂತಾ ಹೇಳಿದ್ದಕ್ಕೆ ಎಲ್ಲರೂ ಸಿಕ್ಕಾಪಟ್ಟೆ ಜೋರಾಗಿ ನಕ್ಕಿದ್ದರು. ಅವರಿಗೆ ತಮಾಷೆಯಾಗಿ ಕಂಡಿದ್ದರೂ, ನನಗೆ ತುಂಬಾ ಅವಮಾನವಾಗಿತ್ತು. ಹಾಗಾಗಿ ಅಂದಿನಿಂದ ಇಂದಿನವರೆಗೂ ಶಿಕ್ಷಕರ ದಿನಾಚರಣೆಯಂದು ಟಾಮಿಯ ನೆನಪು ಬಹಳ ಕಾಡುತ್ತದೆ

ನಾನು ಮೂರು ಸ್ಕೂಲ್ ಗಳಲ್ಲಿ ಓದಿದ್ದು, ಮನೆ ಹತ್ತಿರವೆಂದು ಪ್ರೈಮರಿ, ಅಣ್ನ ಜೊತೆ ಇರ್ತಾನೆ ಎಂದು ಮಿಡಲ್ ಸ್ಕೂಲ್, ಆಗ ತಾನೇ ಶುರುವಾಗಿದ್ದ ಹೈಸ್ಕೂಲ್ ನಲ್ಲಿ ಸೇರಲೇಬೇಕೆಂದು ಮಿಡಲ್ ಸ್ಕೂಲಿನ ಪ್ರಾಧ್ಯಾಪಕಿಯರ ಒತ್ತಾಯದಿಂದ ವಾಣಿ ಸ್ಕೂಲಿನಲ್ಲಿ ಹೈಸ್ಕೂಲ್ ಸೀಟ್ ತಪ್ಪಿ, ಕೊನೆಗೆ ಗಾಂಧಿನಗರದ ಕಾರ್ಪೋರೇಷನ್ ಸ್ಕೂಲಿಗೆ ಸೇರಬೇಕಾಯಿತು. ಏನು ಮಾತಾಡಿದರೆ ತಪ್ಪಾಗುವುದೋ ಎಂಬ ಸಂಕೋಚದಿಂದ ನನ್ನೊಳಗೆ ನಾನು ಹುದುಗಿ ಹೋಗಿದ್ದರಿಂದ, ನನಗೆ ಪ್ರೈಮರಿ ಶಾಲೆಯ ನೆನಪೇ ಇಲ್ಲ. ಈಗಾಗಲೇ ಅಣ್ಣಂದಿರೆಲ್ಲರೂ ಮಿಡಲ್ ಸ್ಕೂಲ್ ನಲ್ಲಿ ಕ್ಲಾಸಿಗೆ ಫಸ್ಟ್, ಸ್ಕೂಲಿಗೆ ಫಸ್ಟ್ ಬಂದು ತಮ್ಮಮ್ಮ ಛಾಪನ್ನು ಮೂಡಿಸಿಬಿಟ್ಟಿದ್ದರಿಂದ, ನಾನು ಎಷ್ಟೇ ಚೆನ್ನಾಗಿ ಓದಿದರೂ, ಓಹ್! ಅವರ ತಂಗಿ ಅಲ್ವೆ? ಅದಕ್ಕೆ ಇಷ್ಟು ಚಂದ ಓದ್ತಾಳೆ ಅನ್ನುವ ಸರ್ಟಿಫಿಕೇಟ್ ಸಿಕ್ಕಿಬಿಡ್ತಿತ್ತು. 

೫ನೇ ಕ್ಲಾಸಿನಲ್ಲಿ ಯಾವಾಗಲೂ ಫಸ್ಟ್ ಬರ್ತಿದ್ದ ನಾನು, ಒಮ್ಮೆ ಸೆಕಂಡ್ ಬಂದಾಗ ಸ್ನೇಹಿತೆಯೊಬ್ಬಳ ಬಳಿ, ಮೂರನೇ ಪರೀಕ್ಷೆಗೆ ಮೂರನೆಯವಳಾಗಿ ಬಂದರೆ ಮುಗೀತು ಎಂದು ತಮಾಷೆ ಮಾಡುತ್ತಿದ್ದಾಗ, ಕೇಳಿಸಿಕೊಂಡ ರಾಧಾ ಮಿಸ್ (ಆಕೆಯೇ ಪ್ರಿನ್ಸಿಪಾಲ್ ಕೂಡ) (ಈಗ ಗೊತ್ತಾಗುತ್ತೆ, ಮಿಸ್ / ಮೇಡಮ್ ವ್ಯತ್ಯಾಸ! ;-) ) ಕರೆದು ಸಿಕ್ಕಾಪಟ್ಟೆ ಬೈದಿದ್ದು ಇವತ್ತಿಗೂ ನೆನಪಿದೆ. ಅದೇ ಕೊನೆ, ಆಮೇಲೆ ಮಿಡಲ್ ಸ್ಕೂಲ್ ಮುಗಿಯುವವರೆಗೂ ನಾನೆಂದಿಗೂ ಸೆಕಂಡ್ ಕೂಡ ಬರಲಿಲ್ಲ.ಮತ್ತೊಬ್ಬ ಟೀಚರ್ ಅಹಲ್ಯಾ ಮಿಸ್, ಅವರದು ಸ್ವಲ್ಪ ಉಬ್ಬು ಹಲ್ಲು! ಅವರಿಗೆ ಸ್ಪಷ್ಟವಾಗಿ ‘ಷ’ ಹೇಳಲಾಗುತ್ತಿರಲಿಲ್ಲ. ‘ಅಷ್ಟೆ’ ಹೇಳಲು ‘ಅಟ್ಟೆ’ ಹೇಳುತ್ತಿದ್ದರು. ‘ಮರದ ಬಾಯಿ ಆಗಿದ್ದರೆ ಯಾವಾಗಲೋ ಒಡೆದು ಹೋಗ್ತಿತ್ತು, ಚರ್ಮ ಆಗಿದ್ದಕ್ಕೆ ಉಳಿದುಕೊಂಡಿದೆ ಅಟ್ಟೆ’. ಇದು ಅವರು ದಿನಕ್ಕೊಮ್ಮೆ ತರಗತಿಯಲ್ಲಿ ಹೇಳಲೇಬೇಕಾದ ಮಾತು. ಒಮ್ಮೆ ಅವರ ಈ ಮಾತನ್ನು ನಾನು ಅವರದೇ ಸ್ಟೈಲ್ ನಲ್ಲಿ ಮಿಮಿಕ್ರಿ ಮಾಡಿ ತೋರಿಸುತ್ತಿದ್ದೆ. ಹಿಂದೆ ತಿರುಗಿ ನೋಡಿದರೆ ಅಹಲ್ಯಾ ಮಿಸ್! ರೂಮಿಗೆ ಕರೆದು ಮುದ್ದು ಮಾಡಿ, ನಿನ್ನ ಅಣ್ಣಂದಿರು ಎಷ್ಟು ಒಳ್ಳೆಯವರು. ಒಂದು ದಿವಸಕ್ಕೂ ಹೀಗೆ ಮಾಡಿಲ್ಲ, ನೀನು ಹೀಗೆ ಮಾಡಬಹುದಾ? ಶಿಕ್ಷಕರು ಅಪ್ಪ, ಅಮ್ಮನ ತರಹ, ಗೌರವ ಕೊಡಬೇಕು ಎಂದಿದ್ದರು. ಆದರೆ ಮನೆಯಲ್ಲಿ ಅಣ್ಣಂದಿರು ಯಾವಾಗಲೂ ಅವರಿಗೆ ಹೀಗೆ ತಮಾಷೆ ಮಾಡ್ತಿದ್ದದ್ದು ಹೇಳಲು ಬಾಯೇ ಬಂದಿರಲಿಲ್ಲ. ಆದರೂ ಆಕೆ ಬುದ್ಧಿ ಹೇಳಿದ ರೀತಿಗೆ ನಾನವರ ಅಭಿಮಾನಿ ಆಗಿಬಿಟ್ಟೆ. ಮತ್ತೊಬ್ಬರು ವಿಜಯಲಕ್ಷ್ಮಿ ಮಿಸ್. ನನಗೆ ಅವರ ಜೊತೆಗಿನ ಒಡನಾಟ ಅಷ್ಟಿಲ್ಲದಿದ್ದರೂ, ಅಣ್ಣಂದಿರಿಗೆ ಅವರನ್ನು ಕಂಡರೆ ಇಷ್ಟವಾಗಿದ್ದರಿಂದ, ನನಗೂ ಕೂಡ ಅವರನ್ನು ಕಂಡರೆ ಪ್ರೀತಿ ಇತ್ತು. ಹಾಗೆಯೇ ಅವರಿಗೂ ಕೂಡ. ಅಕ್ಕನ ಮದುವೆ ಆದ ಮೇಲೆ ನನ್ನ ಶಾಲೆಯ ಶಿಕ್ಷಕರಿಗೆಂದು ಅಮ್ಮ ಕೊಟ್ಟ ಮೈಸೂರ್ ಪಾಕ್ ಅನ್ನು ದಾರಿಯುದ್ದಕ್ಕೂ ನಾನೇ ತಿನ್ನುತ್ತಾ ಹೋಗಿ, ಈ ಮೂವರು ಟೀಚರ್ಸ್ ಗೆ ಮಾತ್ರ ಉಳಿದದ್ದನ್ನು ಕೊಟ್ಟಿದ್ದೆ!

ಹೈಸ್ಕೂಲ್ ನಲ್ಲಿ ಅಕ್ಕ ಈಗಾಗಲೇ ಬಜಾರಿ / ಓದುವುದಿಲ್ಲ ಎಂದು ಕುಖ್ಯಾತಿ ಪಡೆದದ್ದರಿಂದ, ಅವಳ ತಂಗಿಯೆಂದೂ ನನ್ನ ಮೇಲೆ ಯಾವಾಗಲೂ ಹೆಚ್ಚಿನ ಕಣ್ಣು ಎಲ್ಲಾ ಶಿಕ್ಷಕರಿಗೂ ಇರುತ್ತಿತ್ತು. ೮ ನೇ ತರಗತಿಗೆ ಸ್ಕೂಲಿಗೆ ಮೊದಲಿಗಳಾಗಿ ಬಂದ ಮೇಲೆ ಸ್ವಲ್ಪ ಮಟ್ಟಿನ ಹೆಸರನ್ನು ಪಡೆದೆ. ಇಲ್ಲಿ ನಾಲ್ಕು ಶಿಕ್ಷಕರೂ ನನ್ನ ಮೇಲೆ ಸಿಕ್ಕಾಪಟ್ಟೆ ಪ್ರಭಾವ ಬೀರಿದ್ದರು. ಕನ್ನಡ ಮಾಧ್ಯಮದಿಂದ ಇಂಗ್ಲೀಷ್ ಮಾಧ್ಯಮಕ್ಕೆ ಬದಲಾಯಿಸಿಕೊಂಡದ್ದರಿಂದ, ನನ್ನ ಇಷ್ಟದ ಗಣಿತ, ಇಂಗ್ಲೀಷ್ ನಿಂದಾಗಿ ಕಬ್ಬಿಣದ ಕಡಲೆಯಾಗಿತ್ತು. ಬ್ರಿಡ್ಜ್ ಕೋರ್ಸ್ ನಲ್ಲಿ ಧೈರ್ಯ ಮಾಡಿ ಗಣಿತದ ಟೀಚರ್ ನನ್ನು ನನಗೇನೂ ಅರ್ಥವಾಗುತ್ತಿಲ್ಲವೆಂದು ಕೇಳಿ, ಕನ್ನಡ ಬರದಿದ್ದರೂ (ಆಕೆ ಮುಸ್ಲಿಮ್) ಕಷ್ಟ ಪಟ್ಟು ನನಗೆ ಅರ್ಥ ಪಡಿಸಿದ್ದು ನನಗೆ ಮತ್ತೆ ಗಣಿತದ ಮೇಲೆ ಆಸಕ್ತಿ ಮೂಡಲು ಕಾರಣವಾಗಿತ್ತು. ಮತ್ತೊಬ್ಬಾಕೆ ಸೈನ್ಸ್ ಟೀಚರ್. ಸೈನ್ಸ್ ಎಕ್ಸಿಬಿಷನ್ ಗಾಗಿ ಚಂದ ಓದುವವರನ್ನೆಲ್ಲಾ (ನಾನು ಕೂಡ! ) ಆಯ್ಕೆ ಮಾಡಿಕೊಂಡು, ನಮ್ಮೆಲ್ಲರ ಕೈಯಲ್ಲಿ ವಾಯು ಮಾಲಿನ್ಯದ ಬಗ್ಗೆ ದೊಡ್ಡದೊಂದು ಬೇತಾಳದಂಥ ಮಾಡೆಲ್ ಮಾಡಿಸಿದ್ದು, ಕನ್ನಡದಲ್ಲಿ ವಿವರಿಸಲು ನನ್ನನ್ನು ಆಯ್ಕೆ ಮಾಡಿದ್ದು, ಕೊನೆಗೆ ಅತಿಥಿಗಳು ಬರುವಾಗ ಇಂಗ್ಲೀಷ್ ನಲ್ಲಿ ವಿವರಿಸಲು ತರಬೇತಿ ಪಡೆದಿದ್ದ ನನ್ನ ಸಹಪಾಠಿ ಎಲ್ಲವನ್ನೂ ಮರೆತಿದ್ದು, ಕೊನೆಗೆ ನಾನೇ ಇಂಗ್ಲೀಷಿನಲ್ಲೂ ಕೂಡ ವಿವರಿಸಿ, ಕರ್ನಾಟಕಕ್ಕೆ ಎರಡನೇ ಪ್ರೈಜ಼್ ಪಡೆದದ್ದು, ಎಲ್ಲವೂ ಹಸಿರು. ಹಾಗಾಗಿ ಇಂದಿಗೂ ಕೂಡ ಪರಿಸರದ ಬಗ್ಗೆ ಕಾಳಜಿ ಇರಲು ನೆರವಾದ ಕೌಸರ್ ಬೇಗಂ ಮಿಸ್, ಮತ್ತೊಬ್ಬ ಟೀಚರ್ ನೋಡಲು ಸಿನೆಮಾ ತಾರೆ ಲಕ್ಷ್ಮಿಯ ಹಾಗೇ, ಬಹು ಚೆಂದ. ಆಕೆಯ ಮಾತುಗಳಂತೂ ಮುತ್ತಿನಂತೆ, ಧ್ವನಿಯಂತೂ ಬಹಳ ಚೆಂದ. ನಮ್ಮ ಕ್ಲಾಸ್ ಟೀಚರ್ ಅವರು. ಅವರು ಹೇಳಿದ ಮಾತುಗಳೆಲ್ಲವೂ ನನಗೆ ವೇದವಾಕ್ಯ. ಎಷ್ಟು ಚಂದ ಇದ್ದರೋ, ಅಷ್ಟೇ ಚೆಂದ ಪಾಠ ಕೂಡ ಮಾಡುತ್ತಿದ್ದರು. ಅವರು ಒಂದು ದಿವಸ ಕ್ಲಾಸಿಗೆ ಬರದಿದ್ದರೆ ನನಗೆ ಅಂದೆಲ್ಲಾ ಬೇಸರ. ಇಂತಹ ಟೀಚರ್, ಹತ್ತನೇ ಕ್ಲಾಸಿನ ಪಬ್ಲಿಕ್ ಪರೀಕ್ಷೆ ನಡೆಯುತ್ತಿರುವಾಗ, ಸರಸರನೆ ಒಳಬಂದು, ಬಾಗಿಲು ಮುಚ್ಚಿ, ೨೦ ಮಾರ್ಕ್ ಗಳ ಆಬ್ಜೆಕ್ಟಿವ್ ಟೈಪ್ ಉತ್ತರಗಳನ್ನು, ನನ್ನ ಪೇಪರ್ ಸರ್ರೆಂದು ಕಸಿದು, ಅದ್ರಲ್ಲಿನ ಉತ್ತರಗಳನ್ನು ಎಲ್ಲರಿಗೂ ಡಿಕ್ಟೇಟ್ ಮಾಡಿ, ಬಂದ ರಭಸದಲ್ಲಿಯೇ ಹೊರ ಹೋದಾಗ, ಅವರ ಮೇಲೆ ಅದುವರೆವಿಗೂ ಇದ್ದ ಪ್ರೀತಿ ಮಾಯವಾಗಿತ್ತು. ಆಕೆಯ ಹೆಸರು ಕೂಡ ಈಗ ನನಗೆ ನೆನಪಿಲ್ಲ. 

ಇನ್ನೂ ಕಾಲೇಜಿನ ದಿವಸಗಳಲ್ಲಿಯಂತೂ ನನ್ನ ಜೀವನದ ಗತಿಯನ್ನು ಬದಲಿಸಿದ ಒಬ್ಬ ಲೆಕ್ಚರರ್, ಕಾಲೇಜಿನಲ್ಲಿ ಸ್ಟೈಕ್ ಮಾಡಿಸಿದೆನೆಂದು, ನನಗೆ ಕಡಿಮೆ ಮಾರ್ಕ್ಸ್ ಕೊಟ್ಟು, ರ್ಯಾಂಕ್ ಕಡಿಮೆ ಆಗುವಂತೆ ನೋಡಿಕೊಂಡ ಮತ್ತೊಬ್ಬ ಲೆಕ್ಚರರ್, ನನ್ನನ್ನು ಮುಂದಿನ ಬೆಂಚಿನಲ್ಲಿ ಕುಳಿತುಕೊಳ್ಳಲು (ಸ್ಪೂರ್ತಿಗಾಗಿ) ಹೇಳಿ, ನಾನು ಕಾಲೇಜಿಗೆ ರಜೆ ಹಾಕಿದಂದು ಚಡಪಡಿಸುತ್ತಿದ್ದ, ನನಗೆ ಲೈನ್ ಹೊಡೆಯುತ್ತಿದ್ದ ಮತ್ತೊಬ್ಬ ಲೆಕ್ಚರರ್ (ಆಗ ತಾನೇ ಕಾಲೇಜು ಮುಗಿಸಿ ಬಂದಿದ್ದರು), ಮರೆತೆನೆಂದರೂ ಮರೆಯಲಿ ಹೇಗೆ? ಆದರೂ ನನಗೆ ಈ ಎಲ್ಲಾ ಟೀಚರ್ ಗಳಿಗಿಂತಲೂ ಜೀವನ ಪಾಠ ಕಲಿಸಿದ್ದು ಹೆಚ್ಚು. ಎಲ್ಲರನ್ನೂ ಸ್ವಾಭಾವಿಕವಾಗಿ ತುಂಬಾ ನಂಬಿಬಿಡುವ ನನಗೆ, ಹಾಗೆಲ್ಲ ನಂಬಬೇಡವೆಂದು ಬುದ್ಧಿ ಕಲಿಸಿ ಹೋದ ಸಂಬಂಧಿಕರು / ಸ್ನೇಹಿತರು ಬಹಳಷ್ಟು. ನಾವು ಜೊತೆಗಿದ್ದೇವೆ ಎಂದು ಪ್ರೀತಿಸಲು ಕಲಿಸಿದ ಗೆಳೆಯರು, ಇವೆಲ್ಲದರ ಜೊತೆಗೆ ನಾನು ಓದಿದ / ಓದುತ್ತಿರುವ ಪುಸ್ತಕಗಳು ನನ್ನನ್ನು ಬಹುವಾಗಿ ತಿದ್ದಿವೆ, ಬುದ್ಧಿ ಹೇಳಿವೆ, ನನ್ನನ್ನು ನಾನು ಅರ್ಥೈಸಿಕೊಳ್ಳುವಂತೆ ಪ್ರೇರೇಪಿಸಿವೆ. ನನ್ನೆಲ್ಲಾ ಕ್ರಿಯೆಗಳನ್ನೂ ಚಿಂತನೆಗೆ ಒಳಪಡಿಸುವಂತೆ ಮಾಡಿವೆ. ನಾ ಹೇಗಿದ್ದೆ? ಹೇಗಾದೆ? ಇವೆಲ್ಲಕ್ಕೂ ನಾನು ಬದುಕಿನಲ್ಲಿ ಕಲಿತ ಪಾಠವೇ ಕಾರಣ. ಈ ಪಾಠ ಕಲಿಯಲು ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಕಾರಣರಾದ ಎಲ್ಲರಿಗೂ ಈ ಶಿಕ್ಷಕರ ದಿನಾಚರಣೆಯ ಮೂಲಕ ನನ್ನ ಕೃತಜ್ಞತೆಗಳು :-)


No comments:

Post a Comment