Thursday, April 25, 2013

ಕಂಬಾರರ ‘ಶಿಖರ ಸೂರ್ಯ’ - ಕುವೆಂಪು ಅವರ ‘ಮಲೆಗಳಲ್ಲಿ ಮದುಮಗಳು’


ನನಗೆ ಕುವೆಂಪು ಎಂದರೆ ಚಿಕ್ಕಂದಿನಿಂದಲೂ ಅಷ್ಟಕಷ್ಟೆ. ಅಂದರೆ ಗೌರವ ಮಿಶ್ರಿತ ಭಯ (ಸ್ವಲ್ಪ ಗೌರವ, ಜಾಸ್ತಿ ಭಯ!) ಯಾಕೆಂದರೆ ಪರೀಕ್ಷೆಗಳಲ್ಲಿ ಕುವೆಂಪು ಅವರ ಪರಿಚಯವನ್ನು ವಿವರಿಸಿ ಎಂದು ೫ ಮಾರ್ಕಿಗೆ ಪ್ರಶ್ನೆ ಇದ್ದೇ ಇರುತ್ತಿತ್ತು.  ಕುವೆಂಪು - ಇವರ ಪೂರ್ಣ ನಾಮ ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ! ಇವರ ಕಾವ್ಯ ನಾಮ ಕುವೆಂಪು. ಇವರು ಬರೆದಿರುವ ಶ್ರೀ ರಾಮಾಯಣ ದರ್ಶನಂ ಎಂಬ ಕೃತಿಗೆ ಜ್ಞಾನಪೀಠ ಪ್ರಶಸ್ತಿ ದೊರಕಿದೆ. ಇವರು ನಮ್ಮ ರಾಷ್ಟ್ರ ಕವಿ. ಇವರು ಬರೆದ ಕಾದಂಬರಿಗಳು ಮಲೆಗಳಲ್ಲಿ ಮದುಮಗಳು, ಕಾನೂರು ಸುಬ್ಬಮ್ಮ ಹೆಗ್ಗಡಿತಿ. ಇದನ್ನು ಶಾಲೆಯಲ್ಲಿ ಚಿಕ್ಕವಳಿದ್ದಾಗ ಎಷ್ಟು ಸಲ ಬಾಯಿಪಾಠ ಮಾಡಿದ್ದೇನೋ! ಗೊತ್ತಿಲ್ಲ. ಇವರ ಕವನಗಳಾದ ‘ಬಾರಿಸು ಕನ್ನಡ ಡಿಂಡಿಮವ, ಜಯ ಭಾರತ ಜನನಿಯ ತನುಜಾತೆ, ಎಲ್ಲಾದರೂ ಇರು, ಎಂತಾದರೂ ಇರು, ಓ ನನ್ನ ಚೇತನ’, ಇವೆಲ್ಲವೂ ಶಾಲೆಯಲ್ಲಿ ಪ್ರತಿಭಾಪ್ರದರ್ಶನದಲ್ಲಿ ಪ್ರತಿಯೊಬ್ಬರ ನಾಲಿಗೆಯಲ್ಲಿ ಇಷ್ಟ ಬಂದ ರಾಗದಲ್ಲಿ ನಲಿದಾಡುತ್ತಿದ್ದವು. 

ಕುವೆಂಪು ಅವರ ಕೃತಿಗಳ ಹೆಸರನ್ನು ಕೇಳಿಯೇ ಭಯಪಡುತ್ತಿದ್ದ ನಾನು, ಅವರ ಕವನಗಳಲ್ಲಿರುತ್ತಿದ್ದ ಅರ್ಥವಾಗದ ಕ್ಲಿಷ್ಥ ಪದಗಳು, ಅವರ ಮೇಲಿದ್ದ ಭಯ ಇವೆಲ್ಲವುಗಳಿಂದಾಗಿ, ಅವರ ಕೃತಿಗಳು ನನ್ನನೆಂದೂ ಆಕರ್ಷಿಸಲಿಲ್ಲ.  ತೇಜಸ್ವಿಯವರ ಕೃತಿಗಳನ್ನು ೫ ನೇ ಕ್ಲಾಸಿನಲ್ಲಿದ್ದಾಗಲೇ ಓದುತ್ತಿದ್ದ ನಾನು, ಕುವೆಂಪು ಅವರ ರಕ್ತಾಕ್ಷಿ ನಾಟಕವನ್ನು ಹೊರತುಪಡಿಸಿದರೆ, ಯಾವುದನ್ನೂ ಇದುವರೆವಿಗೂ ಓದಿಲ್ಲ. ಶಾಲೆಯ ವಾರ್ಷಿಕೋತ್ಸವದಲ್ಲಿ ಪಾತ್ರ ವಹಿಸಲಿಕ್ಕಾಗಿ ಮಾತ್ರ ‘ರಕ್ತಾಕ್ಷಿ’ ಯನ್ನು ಓದಿದ್ದದ್ದು. ಕಾಲೇಜಿನ ಸಮಯದಲ್ಲಿ ಕಾನೂರು ಸುಬ್ಬಮ್ಮ ಹೆಗ್ಗಡಿತಿ, ಮಲೆಗಳಲ್ಲಿ ಮದುಮಗಳು ಪುಸ್ತಕಗಳನ್ನು ಎರವಲು ತಂದು ಓದಿದ್ದರೂ, ಅಷ್ಟಾಗಿ ಅರ್ಥವಾಗದೇ ಅರ್ಧಕ್ಕೆ ಕೈಬಿಟ್ಟಿದ್ದೆ!  ಕುವೆಂಪು ಅವರನ್ನು ನಾನು ದೂರವಿಟ್ಟಿದ್ದರಲ್ಲಿ ನನ್ನ ಶಿಕ್ಷಕರ ಪಾಲು ಕೂಡ ಇತ್ತೆನ್ನಿ!  ನಮ್ಮ ರಸ ಋಷಿ ಕುವೆಂಪು, ಅವರ ಕೃತಿಗಳು ಅಮೋಘ ಹಾಗೇ, ಹೀಗೆ  ಎಂದೆಲ್ಲಾ ವರ್ಣಿಸಿ, ವರ್ಣಿಸಿ, ನಮ್ಮಂಥವರು ಓದುವಂಥದ್ದಲ್ಲ ಎಂಬ ಭಾವ ಚಿಕ್ಕಂದಿನಲ್ಲಿಯೇ ಮೂಡಿಬಿಟ್ಟಿತ್ತು. ಕೀಳರಿಮೆ ಉಂಟಾಗಿಬಿಟ್ಟಿತ್ತು!.

ಇತ್ತೀಚೆಗೆ ನಾನು ಕಂಬಾರರ ‘ಶಿಖರ ಸೂರ್ಯ’ ಓದಿದ್ದೆ.  ಆ ಪುಸ್ತಕದ ಬೆನ್ನುಡಿಯಲ್ಲಿ ಲೇಖಕರೊಬ್ಬರು (ಹೆಸರು ನೆನಪಿಲ್ಲ), ‘ಮಲೆಗಳಲ್ಲಿ ಮದುಮಗಳು’ ಕಾದಂಬರಿಯಷ್ಟೇ ಉತ್ಕೃಷ್ಟ ಕೃತಿ ‘ಶಿಖರ ಸೂರ್ಯ’ ಎಂದು ಹೊಗಳಿದ್ದರು. ಹಾಗಾಗಿ ಅದನ್ನೂ ಕೂಡ ಓದಲು ಭಯವಾದರೂ, ಓದುತ್ತಾ ಹೋದಂತೆ ‘ಶಿಖರ ಸೂರ್ಯ’ ಮನದಲ್ಲಿ ಅಚ್ಚಾಗಿಬಿಟ್ಟಿತು.  ನಾಲ್ಕೈದು ದಿವಸಗಳು ‘ಶಿಖರ ಸೂರ್ಯ’ ಪಾತ್ರ ನನ್ನನ್ನು ಕೂತಲ್ಲಿ, ನಿಂತಲ್ಲಿ ಬಹಳವಾಗಿ ಕಾಡಿಸಿತ್ತು. ‘ಶಿಖರ ಸೂರ್ಯ’ನ ಮಹತ್ವಾಕಾಂಕ್ಷೆ, ಚಾಣಾಕ್ಷತನ, ಪ್ರೀತಿ, ಪ್ರೇಮ, ವಾತ್ಸಲ್ಯವನ್ನು ಬದಿಗಿಟ್ಟು, ತನ್ನ ಮಹತ್ವಾಕಾಂಕ್ಷೆ ಪೂರೈಸಿಕೊಳ್ಳಲು, ಎಲ್ಲಾ ತ್ಯಾಗಕ್ಕೂ ಸಿದ್ಧನಾಗುವುದು, ಮೋಸ, ವಂಚನೆ, ಬುದ್ಧಿವಂತಿಕೆ, ಹೆಣ್ಣಿನಾಸೆ, ಕೊನೆಗೆ ತನ್ನೆಲ್ಲಾ ದುರಾಸೆ, ಮೋಸಕ್ಕೆ ತಾನೇ ಬಲಿಯಾಗುತ್ತಾನೆ.  ಆತನ ಅಂತ್ಯಕ್ಕೆ ಆತನೇ ಕಾರಣವಾಗುವುದು ಪಾತ್ರ ದೃಷ್ಠಿಯಿಂದ ದುರಂತವಾದರೂ, ಕೆಟ್ಟವರ ಅಂತ್ಯ ಮಾತ್ರ ಕೆಟ್ಟದ್ದೇ ಆಗಿರುತ್ತದೆ ಎಂಬ ತತ್ವ ಮನಸ್ಸಿಗೆ ಸಾಂತ್ವನ ನೀಡುವುದು. ಹಾಗೂ ಆತನ ಮಗಳು, ಅಳಿಯ ಒಳ್ಳೆಯತನದ ಪ್ರತೀಕಗಳಂತೆ ಕಂಡು ಬಂದು, ಕಥೆ ಸುಖಾಂತ್ಯಗೊಳ್ಳುತ್ತದೆ.  ಇಡೀ ಕಾದಂಬರಿ ಓದುವಾಗ ‘ಶಿಖರ ಸೂರ್ಯ’ ಪಾತ್ರ ರಚನೆ ಅದ್ಬುತವಾಗಿದ್ದೂ, ಮನಸ್ಸನ್ನು ಸೂರೆಗೊಂಡರೂ ಕೂಡ, ಇದೊಂದು ಕಾಲ್ಪನಿಕ ಕಾದಂಬರಿ ಮಾತ್ರ, ನಿಜ ಜೀವನದಲ್ಲಿ ಇಂಥದ್ದು ನಡೆಯಲಾರದು ಎಂಬ ಎಚ್ಚರ ಅನುಕ್ಷಣವೂ ಓದುಗರಲ್ಲಿರುವಂತೆ ಸನ್ನಿವೇಶಗಳೂ ರಚನೆಗೊಂಡಿವೆ.  ಹಾಗಾಗಿ ಓದಲು ಮುದ ನೀಡಿದರೂ, ತಲ್ಲೀನರಾಗುವುದು ಸಾಧ್ಯವಿಲ್ಲ. ಇದು ಇಡೀ ಕಾದಂಬರಿಯ ‘ಮಿತಿ’ ಯಾಗಿಬಿಡುತ್ತದೆ.

‘ಶಿಖರ ಸೂರ್ಯ’ ವನ್ನು ‘ಮಲೆಗಳಲ್ಲಿ ಮದುಮಗಳು’ ಜೊತೆ ಹೋಲಿಸಿ ನೋಡಿದ್ದಾರೆ ಎಂಬುದನ್ನು ತಿಳಿದಕೂಡಲೇ ಆ ತಕ್ಷಣವೇ ಕುವೆಂಪು ಅವರ ಆ ಪುಸ್ತಕವನ್ನು ಓದಬೇಕು ಎಂಬ ಹಪಾಹಪಿ ಶುರುವಾಯಿತು.  ಅಷ್ಟರಲ್ಲಿ ‘ಮಲೆಗಳಲ್ಲಿ ಮದುಮಗಳು’ ನಾಟಕ ಬೆಂಗಳೂರಿನಲ್ಲಿ ಪ್ರದರ್ಶಿತಗೊಳ್ಳಲು ಅನುವಾಗಿದೆ ಎಂಬ ವಿಷಯ ಈ ಸಂದರ್ಭದಲ್ಲಿ ತಿಳಿದು ಬಂದಿತು. ಎರಡು ವರ್ಷಗಳ ಹಿಂದೆ ‘ಮಲೆಗಳಲ್ಲಿ ಮದುಮಗಳು’ ಕೃತಿಯನ್ನು ಸಿ. ಬಸವಲಿಂಗಯ್ಯನವರು ರಂಗಪ್ರಯೋಗವಾಗಿ ಅಳವಡಿಸಿದ್ದಾರೆ, ಮೈಸೂರಿನ ರಂಗಾಯಣದಲ್ಲಿ ಪ್ರದರ್ಶಿತಗೊಳ್ಳುತ್ತಿದೆ, ಇಡೀ ರಾತ್ರಿ ೯ ಗಂಟೆಗಳ ಸಮಯವಂತೆ, ಬಹಳ ಚೆನ್ನಾಗಿದೆಯಂತೆ ಎಂಬುದನ್ನೆಲ್ಲಾ ಸ್ನೇಹಿತರ ಬಾಯಲ್ಲಿ ಕೇಳಿ, ಖುಷಿಗೊಂಡ ನಾನು ಇನ್ನಿಲ್ಲದಂತೆ ಆ ನಾಟಕಕ್ಕೆ ಹೋಗಲು ಪ್ರಯತ್ನ ಮಾಡಿದ್ದೆ.  ಆದರೆ ಟಿಕೇಟ್ ದೊರಕದೆ ನಿರಾಶಳಾಗಿದ್ದೆ.  ಮತ್ತೆ ಇದೀಗ ಬೆಂಗಳೂರಿನಲ್ಲಿ ಪ್ರದರ್ಶಿತಗೊಳ್ಳುತ್ತಿದೆ ಎಂದಾಗ ಮೊಟ್ಟ ಮೊದಲಿಗೆ ನಾನು ಮಾಡಿದ್ದು ಮತ್ತೊಮ್ಮೆ ಆ ಪುಸ್ತಕವನ್ನು ಓದಲು ಶುರು ಮಾಡಿದ್ದು.  ಸುಮಾರು ೭೫೦ ಪುಟಗಳ ಆ ಪುಸ್ತಕವನ್ನು ನಾನು ೩ ದಿವಸಗಳಲ್ಲಿಯೇ ಓದಿ ಮುಗಿಸಿಬಿಟ್ಟೆ!  ಅಷ್ಟು ಸರಳವಾಗಿ ಬರೆದಿದ್ದಾರೆಯೇ ಕುವೆಂಪು?  ನನಗೆ ಆಶ್ಚರ್ಯ.  ಯೋಚಿಸಿದಾಗ ಹೊಳೆದಿದ್ದು - ಇತ್ತೀಚಿಗೆ ಹೆಚ್ಚಾಗಿರುವ ನನ್ನ ಹಾಗೂ ಮಲೆನಾಡಿನ ಬಾಂಧವ್ಯ, ತೀರ್ಥಹಳ್ಳಿ ಗೆಳೆಯರೊಂದಿಗೆ ಒಡನಾಡಿ, ಮಾತಾಡಿ, ಸರಳ ಸುಲಲಿತ, ನನ್ನದೇ ಮನೆ ಭಾಷೆಯೇನೋ ಎನ್ನುವಂತಾಗಿರುವ ಅಲ್ಲಿಯ ಗೌಡ್ರು ಭಾಷೆ!, ಹೋಗಿ ಬಂದು, ಸುಲಭವಾಗಿ ಅರ್ಥವಾಗುವ ಭೌಗೋಳಿಕ ಪ್ರದೇಶಗಳು, ಹೀಗೆ... ಅನೇಕ ಕಾರಣಗಳಿಂದ ಮಲೆಗಳಲ್ಲಿ ಮದುಮಗಳು (ನಮ್ಮ ಮನೆಯ ಕಥೆಯೇನೋ ಎಂಬಂತೆ) ಆರಾಮವಾಗಿ ಓದುವಂತಾಯಿತು. ಮಲೆನಾಡಿಗರಿಗೆ ಕಥೆ, ಕವನಗಳ ಬಗ್ಗೆ ಆಸಕ್ತಿ ಹೆಚ್ಚಲು ಇಂತಹ ಕೃತಿಗಳು ಕಾರಣವಾಗಿರಬಹುದು ಎಂದು ಕೂಡ ಅನಿಸಿತು.  

‘ಶಿಖರ ಸೂರ್ಯ’ ಕ್ಕೆ ಹೋಲಿಸಿದರೆ  ‘ಮಲೆಗಳಲ್ಲಿ ಮದುಮಗಳು’ ಓದುವಾಗ ಪ್ರತಿಯೊಂದು ಪಾತ್ರವೂ ಅದ್ಭುತವಾಗಿ ರಚನೆಯಾಗಿರುವುದಲ್ಲದೆ, ಓದುತ್ತಾ ಹೋದಂತೆ ನಾವೇ ಆ ಪಾತ್ರಗಳಾಗಿರುತ್ತೇವೆ.  ನಿಧಾನವಾಗಿ ಮಲೆನಾಡಿನ ಪರಿಸರ, ಕಾಡು, ಮಳೆ, ಬೇಟೆ, ಅಲ್ಲಿನ ಒಕ್ಕಲಿಗರು, ಹೊಲೆಯರು, ಹಸಲರು, ಅಡಿಕೆ ತೋಟ, ಗುಡಿಸಲು, ಜನರ ದಿನಚರಿಯಾಗಿರುವ ಕಳ್ಳು ಕುಡಿತ, ಇವೆಲ್ಲವೂ ಮತ್ತೇರಿಸುತ್ತವೆ. ಸ್ವಲ್ಪ ಮಟ್ಟಿಗೆ ಮಲೆನಾಡಿನ ಜನಜೀವನ ಹಾಗೂ ಒಕ್ಕಲಿಗರ ಭಾಷೆಯ ಬಗ್ಗೆ ತಿಳುವಳಿಕೆ ಇದ್ದರಂತೂ, ಸಮಯ ಕಳೆದದ್ದೇ ಗೊತ್ತಾಗುವುದಿಲ್ಲ. ೧೫೦ ವರ್ಷಗಳ ಹಿಂದಿನ ಕಾಲ್ಪನಿಕ?! ‘ಕಥೆ’ ಅತ್ಯಂತ ನೈಜತೆಯಿಂದ ಕಣ್ಣ ಮುಂದೆ ಕುಣಿಯುತ್ತದೆ. ಎರಡು ಮುಖ್ಯ ಕಥೆಗಳ ನಡುವೆ, ಅಲ್ಲಲ್ಲಿ ಉಪಕಥೆಗಳು ಇಣುಕುತ್ತವೆ. ಗುತ್ತಿ, ಆತನ ನಾಯಿ ಹುಲಿಯ, ಆತ ತನ್ನ ಪ್ರೇಮಿ ‘ತಿಮ್ಮಿ’ ಯನ್ನು ಅಪಹರಿಸುವ ಪ್ರಯತ್ನ, ‘ತಿಮ್ಮಿ’ ಯನ್ನು ಮತ್ತೊಬ್ಬ ‘ಬಚ್ಚ’ ಎಂಬಾತನಿಗೆ ಮದುವೆ ಮಾಡಿಕೊಡಲು (ಆತ ಕ್ರೈಸ್ತನಾಗುವ ಹವಣಿಕೆಯಲ್ಲಿದ್ದಾನೆಂದು ತಿಳಿದು ಇಷ್ಟವಿಲ್ಲದಿದ್ದರೂ) ಆ ಊರ ಗೌಡನ ಒಕ್ಕಲಾದದಕ್ಕಾಗಿ ಒಪ್ಪಿಗೆ ನೀಡುವ ಆಕೆಯ ತಂದೆ, ತಾಯಿ, ಪರೋಕ್ಷವಾಗಿ ‘ತಿಮ್ಮಿ’ ತಪ್ಪಿಸಿಕೊಳ್ಳಲು ಸಹಾಯ ಮಾಡುವ ಆಕೆಯ ತಾಯಿ, ಈ ಮಧ್ಯೆ ನಡೆಯುವ ತಮ್ಮ ತಮ್ಮ ಆಳುಗಳಿಗಾಗಿ ನಡೆಯುವ ಅನೇಕ ರಾಜಕೀಯ (ಗೌಡರ ಮಧ್ಯೆ) ಕಾರಣಗಳು, ಅಲ್ಲಿ ಬೇರೊಬ್ಬರ ತಪ್ಪಿಗೆ ಬಲಿಯಾಗುವ ಗುತ್ತಿ, ಪೋಲೀಸರ ಭಯದಿಂದ ಆತನ ಓಡಿ ಹೋಗುವ ಹವಣಿಕೆ, ಜೊತೆಯಲ್ಲಿ ಪ್ರೀತಿಸಿ, ಮದುವೆಯಾದವಳನ್ನು ಕೂಡ ತನ್ನೊಟ್ಟಿಗೆ ಎಷ್ಟೇ ಕಷ್ಟವಾದರೂ ಕರೆದೊಯ್ಯುವ ಹಂಬಲ, ಇವೆಲ್ಲದರ ನಡುವೆ ಬೇಡ, ಬೇಡವೆಂದರೂ ತನ್ನ ಮಾಲೀಕ ಗುತ್ತಿಯನ್ನು ನಿಷ್ಟೆಯಿಂದ ಹಿಂಬಾಲಿಸುವ ಹುಲಿಯ....  ಗುತ್ತಿ ಈ ಎಲ್ಲ ಗೋಜಲುಗಳಿಂದ ತಪ್ಪಿಸಿಕೊಂಡು ತನ್ನ ಪತ್ನಿಯನ್ನು ಕರೆದುಕೊಂಡು ಊರು ಬಿಟ್ಟೇ ಹೋದರೂ, ಹುಲಿಯನನ್ನು ಕರೆದುಕೊಂಡು ಹೋಗಲಾಗದ ಆತನ ಅಸಹಾಯಕತೆ ಹಾಗೂ ಮಳೆಯಿಂದಾಗಿ ತುಂಬಿ ಹರಿಯುತ್ತಿದ್ದ ರಾಮತೀರ್ಥದಲ್ಲಿ ಈಜಲು ಸಾಧ್ಯವಾಗದೇ ಬಲಿಯಾಗುವ ಹುಲಿಯ, ಕಣ್ಣಲ್ಲಿ ನೀರು ತರಿಸುತ್ತದೆ.

ಮತ್ತೊಂದು ಮುಖ್ಯ ಕಥೆಯಾದ ಮುಕುಂದಯ್ಯ ಹಾಗೂ ಚಿನ್ನಕ್ಕನ ಮದುವೆ ಕೂಡ ಸ್ವಲ್ಪ ಮಟ್ಟಿಗೆ ಗುತ್ತಿಯ ಕಥೆಯನ್ನೇ ಹೋಲಿದರೂ, ಮುಕುಂದಯ್ಯನಿಗೆ ತನ್ನ ಚಿಕ್ಕಂದಿನ ಒಡನಾಡಿಗಳು ಹಾಗೂ ಪ್ರಸ್ತುತ ಆಳುಗಳಾದ ಐತ ಹಾಗೂ ಪೀಂಚಲುವಿನ ಸಹಾಯದಿಂದ ಅವರ ಕಥೆಯು ಸುಖಾಂತ್ಯವನ್ನು ಕಾಣುತ್ತದೆ.  ಈವೆರಡು ಕಥೆಗಳ ನಡುವೆ ಮನೆಮನೆಗಳಲ್ಲಿ ನಡೆಯುವಂತೆ ಅನೇಕ ಉಪಕಥೆಗಳು ನಡೆಯುತ್ತವೆ. ಕಾವೇರಿಯ ಅತ್ಯಾಚಾರ, ಸಾಬರುಗಳ ಅನಾಚಾರ, ಕ್ರೈಸ್ತರ ಮತಾಂತರದ ಹುನ್ನಾರ, ಶ್ರೀಮಂತ ಬ್ರಾಹ್ಮಣರ ದಬ್ಬಾಳಿಕೆ, ನಾಗಕ್ಕ, ನಾಗತ್ತೆಯ ಬದುಕಿನ ಗೋಳು, ಇವೆಲ್ಲದರ ನಡುವೆ ಐತ ಹಾಗೂ ಪೀಂಚಲುವಿನ ಪ್ರೇಮ ದಾಂಪತ್ಯ (ಇದ್ದರೇ ಹೀಗಿರಬೇಕು ಎನ್ನುವಂಥ), ಅದರಲ್ಲೂ ಪೀಂಚಲುವಿನ ಪಾತ್ರ ಮೆಚ್ಚುಗೆಯಾಗುತ್ತದೆ. ಇಲ್ಲಿನ ಪಾದ್ರಿ, ಜನರನ್ನು ಬಲವಂತವಾಗಿ ಕ್ರೈಸ್ತರಾಗಿ ಮತಾಂತರಗೊಳಿಸುತ್ತಿದ್ದನ್ನು ನೋಡಿ ಹೇಳುವ ಬಿಳಿ ಪಾದ್ರಿ (ವಿದೇಶಿ)ಯ ಮಾತುಗಳು - ಔಷಧೋಪಚಾರ, ವಿದ್ಯಾಭ್ಯಾಸ ಮೊದಲಾದ ಸಹಾಯಗಳ ಮೂಲಕ ಜನರ ಮನಸ್ಸನ್ನು ಗೆದ್ದು ತರುವಾಯವೇ ಅವರಷ್ಟಕ್ಕೇ ಅವರು ಮತಾಂತರಗೊಳ್ಳುವಂತೆ ಮಾಡಬೇಕು ಎಂಬುದು, ಇದುವರೆವಿಗೂ ನನಗೆ ಹೊಳೆಯದಿದ್ದ ಆಲೋಚನೆಯನ್ನು ಹುಟ್ಟು ಹಾಕಿತು.  ನಮ್ಮಲ್ಲಿ ದಲಿತರು, ಬಡವರು ಏಕೆ ಕ್ರೈಸ್ತರಾಗುತ್ತಿದ್ದಾರೆ? ಎಂಬುದಕ್ಕೆ ಉತ್ತರವನ್ನು ಕೂಡ ನೀಡಿತು!  ಮತ್ತೊಂದು ಅಂಶ ನನಗೆ ಕಂಡು ಬಂದದ್ದು - ಹೆಂಗಸರು ತಮ್ಮ ಕಾಮ ತೃಷೆ ತೀರಿಸಲು ಮಾತ್ರ ಎಂಬ ಗೌಡರು, ಹೊಲೆಯರೆನ್ನದೆ ಎಲ್ಲ ಗಂಡಸರ ಧೋರಣೆ! ಹೆಂಡತಿಯಲ್ಲದಿದ್ದರೆ ಕೂಡಿಕೆಯಾದರೂ ಸರೀ ಒಟ್ಟಿನಲ್ಲಿ ಹೆಣ್ಣಿನ ಸಂಗ ಸುಖಕ್ಕಾಗಿ (ಆಕೆಯ ಮನಸ್ಸನ್ನರಿಯದೆ!) ಹಂಬಲಿಸುವುದು ನನಗೊಂದಿಷ್ಟು ಕಳವಳ, ಆತಂಕ ಹುಟ್ಟಿಸಿತು. ಗೆಳೆಯನೊಬ್ಬ ದೆಹಲಿಯ ಅತ್ಯಾಚಾರವಾದಾಗ ಹೇಳುತ್ತಿದ್ದ ಮಾತುಗಳು ಬೇಡಬೇಡವೆಂದರೂ ನೆನಪಾಗಿ (ನಮ್ಮ ಸಮಾಜದಲ್ಲಿ ಯಾವತ್ತಿಗೂ ಹೆಣ್ಣು ಕಮಾಡಿಟಿ!, ಆ ಮನಸ್ಥಿತಿ ಸರಿಯಾಗದೇ ಇಂತದ್ದನ್ನು ತಡೆಯಲಾಗದು...) ದುಃಖವಾಯಿತು.

ಇವೆಲ್ಲವೂ ಬದುಕಿನಲ್ಲಿ ನಡೆಯುವಂಥದ್ದೇ, ಎಲ್ಲೂ ಉತ್ರೇಕ್ಷೆಯಾಗಲೀ, ಕಲ್ಪನೆಯಾಗಲೀ ಇಲ್ಲವೇ ಇಲ್ಲ ಎಂದು ಅನಿಸುತ್ತಿರುವಾಗಲೇ, ಮಧ್ಯೆ ಗಡ್ಡದಯ್ಯ ಎಂಬ ಪಾತ್ರವು ಕಾದಂಬರಿಯಲ್ಲಿ ಕಾಣಿಸುತ್ತದೆ. ಆತನ ಅತೀಂದ್ರಿಯ ಜ್ಞಾನ, ‘ವಿವೇಕಾನಂದರು ಭರತ ಖಂಡವನ್ನೆಲ್ಲ ಸಂಚರಿಸಿ, ಬೋಧಿಸಿ ಹಿಂದೂ ಧರ್ಮವು ಬ್ರಾಹ್ಮಣ ಪುರೋಹಿತರಿಂದ ಪಾರಾಗಿ, ಕ್ರೈಸ್ತಾದಿ ಮತ ಪ್ರಚಾರಕರಿಗೆ ದುರ್ಗಮವಾಗಿ......’ ಇತ್ಯಾದಿ ಹೇಳುವ ಮಾತುಗಳು, ಆತ ಮುಕುಂದಯ್ಯನನ್ನು ಉದ್ಧೇಶಿಸಿ, ಆತನ ವಂಶದಲ್ಲಿ ಮುಂದೆ ಹುಟ್ಟಲಿರುವ ಮಗು ರಾಮಕೃಷ್ಣ ಪಂಥವನ್ನು ಉದ್ದರಿಸುವುದು ..... ಎಂಬಿತ್ಯಾದಿ ಮಾತುಗಳು ನನಗೆ ಕಸಿವಿಸಿಯನ್ನುಂಟು ಮಾಡಿತು.  ಮನಸ್ಸಿನ ಒಂದು ಮೂಲೆಯಲ್ಲಿ, ‘ಕುವೆಂಪು’ ಅವರು ತಮ್ಮನ್ನು ಉದ್ದೇಶಿಸಿಕೊಂಡೇ ಹೀಗಂದಿರಬಹುದೇ? ಎಂಬ ಅನುಮಾನ ಕಾಡತೊಡಗಿತು.  ಎರಡೂ ಕಾದಂಬರಿಗಳು ಸುಖಾಂತ್ಯವನ್ನೇ ಕಂಡಿದ್ದರೂ ಕೂಡ, ‘ಮಲೆಗಳಲ್ಲಿ ಮದುಮಗಳು’ ಓದಿ ಮುಗಿಸಿದೊಡನೇ ಒಂದು ರೀತಿಯ ವಿಷಾದ ಮನವನ್ನು ಆವರಿಸುತ್ತದೆ. ಒಂದನ್ನು ಪಡೆಯಲು ಮತ್ತೊಂದನ್ನು ಕಳೆದುಕೊಳ್ಳುವುದು ಅವಶ್ಯ ಎಂಬ ಸತ್ಯದ ಅರಿವಾಗಿ ಸಂಕಟ ಶುರುವಾಗುತ್ತದೆ!

1 comment:

  1. ಬಹಳ ಅದ್ಭುತವಾದ ಕಾದಂಬರಿ. ನೀವೇ ಹೇಳಿದಂತೆ ಓದುತ್ತ ಓದುತ್ತ ನಾವೇ ಆ ಪಾತ್ರದ ಒಳಗೆ ಹೋಗುತ್ತೇವೆ. ಗುತ್ತಿ, ಹುಲಿಯ, ಮೆಘರವಳ್ಳಿ ಹೀಗೆ ಅಲ್ಲಿ ಬರುವ ಪ್ರತಿಯೊಂದು ಪಾತ್ರ, ಸ್ಥಳದ ವರ್ಣನೆ ಬಹಳ ಸುಂದರ. ಓದಿದರೆ ಇನ್ನೊಮ್ಮೆ, ಮಗದೊಮ್ಮೆ ಓದಬೇಕೆನ್ನುವ ಬಹಳ ಸುಂದರ, ಸಲೀಸಾದ ಬರವಣಿಗೆ.

    ReplyDelete