ಲೂಸಿಯಾ - ಈ ಹೆಸರಿನ ಸ್ಪಾನಿಷ್ ಚಿತ್ರವೊಂದು ೧೯೬೮ರಲ್ಲಿ ಬಿಡುಗಡೆಯಾಗಿತ್ತು. ಅದೊಂದು ಕಪ್ಪು ಬಿಳುಪು ಚಿತ್ರವಾಗಿತ್ತು. ಲೂಸಿಯಾ ಅಂದರೆ ಬೆಳಕು! ಕತ್ತಲೆಯಲ್ಲಿ ಕಪ್ಪು / ಬಿಳುಪು ಮಾತ್ರ ಕಾಣುವ ಬಣ್ಣಗಳು ಬೆಳಕಿನಲ್ಲಿ ಬಂದಾಗ ಅದರ ನಿಜ ಬಣ್ಣಗಳು ಬಯಲಾಗುವಂತೆಯೇ, ಬಣ್ಣ ಬಣ್ಣದ ಕನಸು ಹಾಗೂ ಕಪ್ಪು ಬಿಳುಪಿನ ವಾಸ್ತವಗಳ ನಡುವೆ ಲೂಸಿಯಾ ಚಿತ್ರ ಓಡಾಡುತ್ತದೆ. ಚಿತ್ರಕಥೆ ಏನಿರಬಹುದು? ಚಿತ್ರದ ಬಗ್ಗೆ ಏನೂ ಬರೆಯಬಹುದು? ಎಂದು ಯೋಚಿಸಬಹುದಷ್ಟೇ ಹೊರತು ಅಷ್ಟು ಸುಲಭವಾಗಿ ಚಿತ್ರದ ಬಗ್ಗೆ ಬರೆಯಲು ಥಟ್ ಎಂದು ಹೊಳೆಯುವುದಿಲ್ಲ. ಹಾಗಾಗಿಯೇ ಬಹಳಷ್ಟು ಜನ ಚಿತ್ರ ನೋಡಿದವರೂ ಕಥೆಯ ಬಗ್ಗೆ ಬರೆದಿಲ್ಲವೇನೋ? ಎನ್ನುವ ಅನುಮಾನದೊಂದಿಗೆ, ಕೆಲವರು ತಮ್ಮ ರಿವ್ಯೂಗಳಲ್ಲಿ ಬರೆದಷ್ಟೇ ಸಿಂಪಲ್ ಆಗಿ ಚಿತ್ರಕಥೆ ಇದೆಯೇ? ಎನ್ನುವ ಪ್ರಶ್ನೆಯ ಜೊತೆಜೊತೆಗೆ ಇಂತಹದೊಂದು ಕಥೆಗೆ ಪವನ್ ಯಾಕೆ ೨ ವರ್ಷಗಳು ತೆಗೆದುಕೊಂಡರು? ಗಾಂಧಿ ನಗರದ ಕನ್ನಡ ನಿರ್ಮಾಪಕರು ಹಣ ಹಾಕಲು ಯಾಕೆ ಮುಂದೆ ಬರಲಿಲ್ಲ? ನಟಿಸಲು ನಮ್ಮ ಪ್ರಸಿದ್ಧ ನಟರು ಯಾಕೆ ನಿರ್ಧರಿಸಲಿಲ್ಲ? ಪ್ರತಿಯೊಂದು ಕೆಲಸವನ್ನೂ ಕೂಡ ಹೊಸಬರ ಬಳಿಯಲ್ಲಿಯೇ ಮಾಡಿಸಲು ಪವನ್ ನಿರ್ಧರಿಸಿದ್ದಾದರೂ ಏಕೆ? ನಿರ್ದೇಶಕ, ಸ್ಕ್ರಿಪ್ಟ್, ಸಂಕಲನ, ಕ್ಯಾಮೇರಾ ವರ್ಕ್, ಹಾಡುಗಳು, ಸಂಗೀತ ಎಲ್ಲವೂ ಅದ್ಭುತ ಟೀಮ್ ವರ್ಕ್ ಆಗಿದ್ದರೆ ಮಾತ್ರ ಅಂತಹ ಚಿತ್ರ, ಅತ್ಯುತ್ತಮ ಚಿತ್ರವಾಗುತ್ತದೆ ಎನ್ನುವ ಸತ್ಯ, ಅದರಲ್ಲೂ ಮುಖ್ಯವಾಗಿ ನಿರ್ದೇಶಕನಿಗಿರಬೇಕಾದ ತಾಳ್ಮೆ, ಆಸಕ್ತಿ, ಡೆಡಿಕೇಶನ್ ಎಲ್ಲವೂ ತಿಳಿಯಬೇಕಾದರೆ ‘ಲೂಸಿಯಾ’ ನೋಡಬೇಕು.
ಈ ಹಿಂದೆ, ಹೆಸರಿಲ್ಲದ ನಾವು ನಾಲ್ಕೈದು ಮಂದಿ, ಹೀಗೆಯೇ ಪಬ್ಲಿಕ್ ಫಂಡಿನಿಂದ ಚಿತ್ರವೊಂದನ್ನು ಮಾಡಲು ಹೊರಟು, ಕಥೆ ಆರಿಸುವ ಹಂತದಲ್ಲಿಯೇ ಗುಂಪು ಬೇರೆ, ಬೇರೆಯಾಗಿ ಆ ಸಿನೆಮಾ ಮುಂದುವರೆಯಲೇ ಇಲ್ಲ. ಹಾಗಾಗಿ ಪಬ್ಲಿಕ್ ಫಂಡ್ ನಿಂದ ‘ಲೂಸಿಯಾ’ ಚಿತ್ರವು ನಿರ್ಮಾಣವಾಗುತ್ತಿದೆ ಎಂದು ತಿಳಿದಾಗಿನಿಂದ ನನಗೆ ಅದರ ಪ್ರತಿಯೊಂದು ಕಾರ್ಯವೈಖರಿಯ ಬಗ್ಗೆ ಅತ್ಯಂತ ಆಸಕ್ತಿ. ಹಣ ಹೇಗೆ ಸಂಗ್ರಹಿಸುತ್ತಾರೆ ಎಂಬಲ್ಲಿಂದ ಹಿಡಿದು, ಚಿತ್ರ ಪ್ರದರ್ಶನದವರೆಗೂ ಪವನ್ ನೀಡುತ್ತಿದ್ದ ಪ್ರತಿಯೊಂದು ಮಾಹಿತಿಯನ್ನು ಸುಮಾರು ಬಾರಿ ಓದುತ್ತಿದ್ದೆ. ಮೊದಲಿಗೆ ಆಸಕ್ತಿಯುಳ್ಳ ಪ್ರೇಕ್ಷಕರ ಬಳಿಯೇ ಹಣವನ್ನು ಸಂಗ್ರಹಿಸಿ, ನಂತರ ಪ್ರತಿಯೊಬ್ಬ ವ್ಯಕ್ತಿಯನ್ನು ಅಳೆದು, ತೂಗಿ, ಚಿತ್ರಕ್ಕೆ ಸರಿಹೊಂದುತ್ತಾರೋ ಇಲ್ಲವೋ ಎಂದು ವೋಟಿಂಗ್ ಮೂಲಕವೇ ಸಾಮಾಜಿಕ ಜಾಲ ತಾಣಗಳಲ್ಲಿ ವಿಚಾರಿಸಿ, ಅವರನ್ನು ಚಿತ್ರದಲ್ಲಿ ತೊಡಗಿಸಿಕೊಂಡು, ಹಾಡುಗಳನ್ನು ಸುಮಾರು ದಿನಗಳಿಂದಲೇ ಎಲ್ಲರಿಗೂ ಕೇಳಿಸಿ, ಇಂಟರ್ ನೆಟ್ ಮಾರ್ಕೆಟಿಂಗ್ ಮಾಡಿಕೊಂಡು, ಒಮ್ಮೊಮ್ಮೆ ತೀರಾ ಇಷ್ಟೊಂದು ಪಬ್ಲಿಸಿಟಿ ಬೇಕಿತ್ತೇ? ಎನ್ನುವ ಜಿಗುಪ್ಸೆ ಹುಟ್ಟಿಸಿ, ಪವನ್ ಕುಮಾರ್ ತಮ್ಮ ಕನಸು ‘ಲೂಸಿಯಾ’ ವನ್ನು ನೈಜವನ್ನಾಗಿಸಲು ಪಟ್ಟ ಪರಿಪಾಡಲಿಗೆ ಅವರನ್ನು ಭೇಷ್ ಅನ್ನಲೇಬೇಕು. ಪ್ರತಿಬಾರಿಯೂ ‘ಲೂಸಿಯಾ’ ಹೊಸದೊಂದು ಹೆಸರು ಮಾಡಿದ ಕೂಡಲೇ, ನಾನೇ ಆ ಜಾಗದಲ್ಲಿ ನಿಂತಂತೆ ಸಂಭ್ರಮಿಸಿದ್ದು ಸುಳ್ಳಲ್ಲ! ಸ್ಕ್ರಿಪ್ಟ್ ಹಂತದಿಂದ ಹಿಡಿದು ಚಿತ್ರವು ಥಿಯೇಟರ್ ಗಳಿಗೆ ಬಿಡುಗಡೆ ಆಗುವವರೆಗೂ ತಾವು ಪಟ್ಟ ಕಷ್ಟವೆಲ್ಲವನ್ನೂ ಫೇಸ್ ಬುಕ್ಕಿನಲ್ಲಿ, ತಮ್ಮ ಬ್ಲಾಗ್ ನಲ್ಲಿ ಬರೆಯುತ್ತಿದ್ದ ‘ಪವನ್’ ಗೆ ನಿಜವಾಗಿಯೂ ಚಿತ್ರದ ನಾಯಕನಂತೇ ‘Insomnia' ಆಗಿತ್ತೇ ಎಂದು ಚಿತ್ರ ನೋಡುವಾಗ ನನಗೆ ಅನಿಸಿದ್ದು ಕೂಡ ಸುಳ್ಳಲ್ಲ! :-)
ರಾತ್ರಿ ನಿದ್ದೆ ಬರದ ನಾಯಕ, ನಿದ್ದೆಗಾಗಿ ಕನಸಿನ ಗುಳಿಗೆ?! ತೆಗೆದುಕೊಂಡು, ತನ್ನ ಕನಸುಗಳಲ್ಲಿ ತನಗನಿಸಿದಂತೆ ಸಹಜವಾಗಿ ಬದುಕುವ ಪಾತ್ರ! ಇಲ್ಲಿ ಒಬ್ಬ ಹೆಸರಾಂತ ನಾಯಕ ನಟ, ಮತ್ತೊಬ್ಬ ಥಿಯೇಟರಿನಲ್ಲಿ ಟಾರ್ಚ್ ಬಿಡುವ ಮುಗ್ಧ ಹುಡುಗ. ‘ಇರುವುದೆಲ್ಲವ ಬಿಟ್ಟು ಇರದುದೆಡೆಗೆ ತುಡಿವುದೇ ಜೀವನ’ ಎಂಬಂತೆ, ಹೆಸರಾಂತ ನಾಯಕನಟನ ಪಾತ್ರಧಾರಿಗೆ ಒಂಟಿತನ ಬೇಕು, ತನ್ನ ಕೀರ್ತಿ ಅಥವಾ ಹಣಕ್ಕಾಗಿ ಹಿಂದೆ ಬೀಳದ, ಸಹಜ ಪ್ರೀತಿ ಬೇಕು. (ಚಿತ್ರದಲ್ಲಿ ಪದೇ, ಪದೇ ಆತ, ನಾಯಕಿಗೆ ನೀನು ಆಕ್ಟಿಂಗ್ ಮಾಡಬೇಡ ಎಂದು ಹೇಳುತ್ತಿರುತ್ತಾನೆ, ಅವಳು ಏಕೆ? ಎಂದು ಕೇಳಿದರೆ ಆಕೆಗೆ ಉತ್ತರ ಕೊಡುವುದಿಲ್ಲ. ಅದರ ಅರ್ಥ ನಾನು ಮಾಡಿಕೊಂಡಿದ್ದು ಹೀಗೆ - ಆತನಿಗೆ ಸಹಜ ಪ್ರೀತಿಯ ಅವಶ್ಯಕತೆ ಇರುತ್ತದೆ, ಆದರೆ ಮಾತಿನಲ್ಲೆಲ್ಲೂ ಅದನ್ನು ಹೇಳಿಸುವುದಿಲ್ಲ!) ಆದರೆ ಮತ್ತೊಬ್ಬ ಮುಗ್ಧ ಹುಡುಗನಿಗೆ ಕೀರ್ತಿ, ಹಣ ಎಲ್ಲವೂ ಬೇಕು ಆದರೆ ಅದು ತನ್ನ ಪ್ರೀತಿಯ ಹುಡುಗಿಯನ್ನು ಪಡೆಯಲು ಮಾತ್ರ. ನಾಯಕಿಯ ಪಾತ್ರ ಕೂಡ ಎರಡು ಶೇಡ್ ನಲ್ಲಿ ನಡೆಯುತ್ತದೆ. ಈ ಎರಡೂ ಕಥೆಗಳು, ಎರಡೂ ಶೇಡ್ ಗಳಾಗಿ ಅಂದರೆ ಕಪ್ಪು / ಬಿಳುಪು ಹಾಗೂ ಕಲರ್ ನಲ್ಲಿ ಒಂದಕ್ಕೊಂದು ಪೂರಕವಾಗಿ ನಡೆಯುತ್ತಾ ಹೋಗುತ್ತದೆ. ಚಿತ್ರದುದ್ದಕ್ಕೂ ಬರುವ ಪಾತ್ರಧಾರಿಗಳು ಎರಡು ಕಥೆಗಳಲ್ಲಿಯೂ ಆಯಾಯ ಕಥೆಗೆ ಪೂರಕವಾಗಿ ತಮ್ಮ ತಮ್ಮ ಪಾತ್ರ ನಿರ್ವಹಿಸುತ್ತಾ ಹೋಗುತ್ತಾರೆ. ಯಾವುದೂ ನೈಜ? ಯಾವುದೂ ಕನಸು? ಯಾರ ಕನಸಿನಲ್ಲಿ ಯಾರೂ ಬರುತ್ತಿದ್ದಾರೆ? ಎಂಬುದು ಅರ್ಧ ಚಿತ್ರದವರೆಗೂ ಗೊತ್ತಾಗುವುದಿಲ್ಲ. ಮಧ್ಯಂತರದ ನಂತರ ಚಿತ್ರ ಬಿಡಿಸಿಕೊಳ್ಳುತ್ತಾ ಹೋಗುತ್ತದೆ. ಕೊನೆಗೆ ನಾಯಕನಟನ ಆಸೆಯಂತೆ, ಎಲ್ಲರೂ ಸಹಜವಾಗಿ ಬದುಕುತ್ತಾರೆ ಎಂಬಲ್ಲಿಗೆ ಮುಗಿಯುತ್ತದೆ.
ಇಷ್ಟೇನೇ ಕಥೆ? ಇಲ್ಲಾ ‘ಲೂಸಿಯಾ’ ಚಿತ್ರವನ್ನು ನೋಡಬೇಕಾಗಿರುವುದು, ದೃಶ್ಯಗಳಲ್ಲಿ ಅದನ್ನು ಹೆಣೆದಿರುವ ರೀತಿಗಾಗಿ! ಮೊದಲಿಗೆ ಚಲನಚಿತ್ರ ಯಶಸ್ವಿ ಎನಿಸಬೇಕಾದರೆ, ಪಾತ್ರ ರಚನೆ ಗಟ್ಟಿಯಿರಬೇಕು, ಸ್ಕ್ರಿಪ್ಟ್ ನಲ್ಲಿ ಹಿಡಿತವಿರಬೇಕು, ಸಂಕಲನಕೊಂದು ನಿರ್ದಿಷ್ಠ ವೇಗವಿರಬೇಕು, ನಿರ್ದೇಶಕರು ಹೇಳಿದ್ದನ್ನು ಅವರು ಹೇಳಿದಂತೆಯೇ, ಛಾಯಾಗ್ರಾಹಕರು ಕಣ್ಮುಂದೆ ಇಳಿಸಬೇಕು. ಇನ್ನುಳಿದಂತೆ ಸಂಗೀತ, ಹಾಡುಗಳು, ಮಾತುಗಳು ಚಿತ್ರಕಥೆಗೆ ಪೂರಕವಾಗುತ್ತವೆಯೇ ಹೊರತು ಮುಖ್ಯವಾಗುವುದಿಲ್ಲ. ಈ ಎಲ್ಲವೂ ‘ಲೂಸಿಯಾ’ ದಲ್ಲಿ ಚೆನ್ನಾಗಿ ಮೇಳೈಸಿವೆ. ಕೊನೆಯ ೨೦ ನಿಮಿಷಗಳು ಸ್ವಲ್ಪ ನಿಧಾನವಿದ್ದಿದ್ದರೆ?! ಇನ್ನೂ ಚೆನ್ನಾಗಿ ಅರ್ಥವಾಗುತ್ತಿತ್ತೇನೇನೋ? ಎಂದು ಮನ ಬಯಸಿದೊಡನೆಯೇ, ನಮ್ಮ ಆಸೆಗಳಿಗೆ ಕಡಿವಾಣವೇ ಇಲ್ಲವೇ? ಎಂದು ಮತ್ತೆ ನಮ್ಮನ್ನು ನಾವೇ ಬೈದುಕೊಳ್ಳುವಂತಾಗಿಬಿಡುತ್ತದೆ. ‘ಲೂಸಿಯಾ’ ಚಿತ್ರದ ಅತ್ಯುತ್ತಮ ಭಾಗ ಅದರ ಸ್ಕ್ರಿಪ್ಟ್ ಹಾಗೂ ಸಂಕಲನ. ಎರಡೆರಡು ಶೇಡ್ ಗಳಿರುವಂತಹ ಸ್ಕ್ರಿಪ್ಟ್ ಬರೆಯಲು ಹಾಗೂ ಚಿತ್ರೀಕರಣದ ನಂತರ ಅದನ್ನು ಒಂದಾದ ನಂತರ ಸರಿಯಾಗಿ ಜೋಡಿಸುವುದು ಕೂಡ ಬಹಳ ಕಷ್ಟ ಜೊತೆಗೆ ತುಂಬಾ ತಾಳ್ಮೆ ಬೇಕು. ಅದನ್ನು ಯಶಸ್ವಿಯಾಗಿ ನಿರ್ವಹಿಸಿದ ನಿರ್ದೇಶಕ ಹಾಗೂ ಸಂಕಲನಕಾರ ಇಬ್ಬರಿಗೂ ಅಭಿನಂದನೆಗಳು. ಬಹುಶಃ ‘ಲೂಸಿಯಾ’ ಚಿತ್ರದ ಸಂಕಲನದ ನಂತರ ಬಹುದಿನಗಳವರೆಗೆ, ಕನಸಿನಲ್ಲಿಯೂ ಕೂಡ ‘ಲೂಸಿಯಾ’ ಎಡಿಟರ್ ನನ್ನು ಹೆದರಿಸಿರಬಹುದು. ಅವರಿಗೂ ಕೂಡ ಸ್ವಲ್ಪ ದಿನಗಳು ‘Insomnia' ಆಗಿತ್ತೋ, ಏನೋ?
ನಂತರ ಪಾತ್ರ ನಿರ್ವಹಣೆ, ನೀನಾಸಂ ಸತೀಶ್ ಅವರಿಗೆ ಇಂತಹ ಪಾತ್ರ ಹೇಳಿ ಮಾಡಿಸಿದಂತಿರುತ್ತದೆಯಾದ್ದರಿಂದ ಅವರದೆಲ್ಲೂ ನಟನೆ ಎನಿಸುವುದೇ ಇಲ್ಲ. ಸಿನೆಮಾ ನಾಯಕ ನಟನ ಪಾತ್ರದಲ್ಲಿ ಸ್ವಲ್ಪ ನಟನೆ ಕಾಣುತ್ತದೆಯಷ್ಟೇ. ಪರಮಾತ್ಮ ಚಿತ್ರದ ‘ಮೂಗು ಬೊಟ್ಟಾಗಿ ಹುಟ್ಟಿದ್ರೆ ನಾನು ಇವಳ ಮೂತೀಲೇ ಇರಬಹುದಿತ್ತು ಎಂದೆನ್ನಿಸುವಂತಹ ಚಂದದ ಮೂಗಿನ, ಮೂಗುಬೊಟ್ಟಿನ ಒಡತಿ ಶೃತಿ ಹರಿಹರನ್ ಕೂಡ ಎರಡೂ ಶೇಡ್ ಗಳಲ್ಲೂ ಅತ್ಯಂತ ನೈಜವಾಗಿ ನಟಿಸಿದ್ದಾರೆ. ಅದರಲ್ಲೂ ಐಟಮ್ ನೃತ್ಯದಲ್ಲಂತೂ ಬಹು ಚೆಂದ ಕಾಣುತ್ತಾರೆ. ಇನ್ನುಳಿದವರ್ಯಾರೂ ಕೂಡ ಬೇಸರ ಹುಟ್ಟಿಸುವುದಿಲ್ಲ ಡಿಟೆಕ್ಟಿವ್ ಪಾತ್ರಧಾರಿಯ ಹೊರತು! ಹಾಡುಗಳನ್ನು ಈ ಮೊದಲಿಗೆ ಬಾಯಿಪಾಠವಾಗುವಷ್ಟು ‘ಪವನ್’ ಫೇಸ್ ಬುಕ್ಕಿನಲ್ಲಿ, ಟ್ವಿಟರಿನಲ್ಲಿ, ಅಲ್ಲಿ, ಇಲ್ಲಿ ಕೇಳಿಸಿಬಿಟ್ಟದ್ದರಿಂದ, ಜೊತೆಗೆ ಚಿತ್ರಕಥೆಯನ್ನು ಅರ್ಥ ಮಾಡಿಕೊಳ್ಳುವತ್ತಲೇ ನಾವು ನಮ್ಮೆಲ್ಲಾ ಗಮನವನ್ನು ಕೊಡುವುದರಿಂದ, ಓಹ್! ಈ ಹಾಡು ಈ ಸನ್ನಿವೇಶದಲ್ಲಿ ಬರುತ್ತದೆಯೇ? ಎನ್ನಿಸುತ್ತದೆ ಅಷ್ಟೇ. ಆದರೆ ಹಾಡುಗಳಾಗಬಹುದು, ಸಂಗೀತವಾಗಬಹುದು, ಡೈಲಾಗ್ಸ್ ಆಗಬಹುದು, ಯಾವುದೂ ಕೂಡ ಎಲ್ಲೂ ಬೇಕಾಗಿ ತುರುಕಿದಂತಿಲ್ಲ. ಚಿತ್ರಕ್ಕೆ ಪೂರಕವಾಗಿಯೇ ಇದೆ. ಎರಡೂ ಶೇಡ್ ಗಳಿಗೂ ಹೊಂದುವಂತೆ ಹಾಡುಗಳನ್ನು ಬರೆದ ತೇಜಸ್ವಿ, ಭಟ್ಟರನ್ನು ಮೆಚ್ಚಲೇ ಬೇಕು. (ಭಟ್ಟರನ್ನು ಲೇವಡಿ ಮಾಡುವ ಮಾತು ಚಪ್ಪಾಳೆ ಗಿಟ್ಟಿಸುತ್ತದೆ),
ಛಾಯಾಗ್ರಹಣವಂತೂ ದೃಶ್ಯಗಳು ಕಣ್ಮುಂದೆ ನಡೆಯುತ್ತಿರುವಷ್ಟು ಚೆನ್ನಾಗಿದೆ. ಕತ್ತಲು ಬೆಳಕಿನ ಹೊಯ್ದಾಟ, ಬಣ್ಣಗಳ ಮಿಶ್ರಣ, ಕನಸಿಗೂ ವಾಸ್ತವಕ್ಕೂ ಇರುವ ವ್ಯತ್ಯಾಸದ ಚಿತ್ರಣ ಬಹಳ ಚೆಂದ ಕಾಣುತ್ತದೆ. ಇತ್ತೀಚೆಗೆ ಕನ್ನಡ ಚಿತ್ರಗಳಲ್ಲಿ ಕಿವಿ ತೂತಾಗುವಷ್ಟು ಮಾತುಗಳು, ಚಿತ್ರಕ್ಕೆ ಬೇಕೋ, ಬೇಡವೋ, ಆ ಕ್ಷಣಕ್ಕೆ ಚಪ್ಪಾಳೆ, ಶಿಳ್ಳೆ ಗಿಟ್ಟಿಸಲೆಂದೇ ತುರುಕುವ ಅಶ್ಲೀಲ ಮಾತುಗಳು, ಅದೇ ಹಳಸಲು ಕಥೆ, ಡೈಲಾಗ್ಸ್, ಹಾಸ್ಯ, ಕೀಳು ಅಭಿರುಚಿಯ ನೃತ್ಯಗಳು, ಐಟಮ್ ಸಾಂಗ್ ಗಳು, ಮಚ್ಚು, ಲಾಂಗುಗಳ ಸುರಿ ‘ಮಳೆ’, ಕೃತಕ ನಟನೆ, ವಿದೇಶದಲ್ಲಿ ಚಿತ್ರೀಕರಣ, ಶಕ್ತಿಯೇ ಇಲ್ಲದ, ತೆಳು ಕಾಯದ ನಾಯಕ ನಟ, ಕ್ಷಣ ಮಾತ್ರದಲ್ಲಿ ನಾಲ್ಕೈದು ಗೂಂಡಾಗಳನ್ನು ಸದೆಬಡಿಯುವುದು ಕಂಡು ಬೇಸತ್ತ ಮಂದಿಗೆ ಹಾಲಿವುಡ್ ಮಟ್ಟದ ಕಥೆ ‘ಲೂಸಿಯಾ’ ವನ್ನು ಉಣಬಡಿಸಿದ್ದಾರೆ ನಿರ್ದೇಶಕ ‘ಪವನ್’ ಮತ್ತು ತಂಡದವರು. ಚಿತ್ರದ ಶೀರ್ಷಿಕೆ ಹಾಗೂ ಕಥೆಗೆ ಸಂಬಂಧವೇ ಇಲ್ಲದ ಶಿಪ್ ಆಫ್ ಥೀಸಿಯಸ್, ನಿರ್ದಿಷ್ಟ ಉದ್ದೇಶವೇ ಇಲ್ಲದ, ಅತ್ಯಂತ ಕಳಪೆ ಕಥೆಯ ‘ಮದ್ರಾಸ್ ಕಫೆ’ ಚಿತ್ರಗಳು ‘ಲೂಸಿಯಾ’ ಚಿತ್ರದ ಮುಂದೆ ಅತ್ಯಂತ ಪೇಲವವಾಗಿ ಕಾಣುತ್ತದೆ. ಇದು ನಿಜವಾಗಿಯೂ ಇಡೀ ಕನ್ನಡ ಚಿತ್ರರಂಗದ ಆಶಾದಾಯಕ ಬೆಳವಣಿಗೆ.
ಆದರೆ ಹಣಗಳಿಕೆಯೊಂದೇ ಚಿತ್ರದ ಯಶಸ್ಸಿನ ಮಾಪನವಾಗಿರುವಾಗ, ‘ಲೂಸಿಯಾ’ ಹಣ ಮಾಡಬಲ್ಲುದೇ? ಸಾಮಾನ್ಯ ಕನ್ನಡ ಪ್ರೇಕ್ಷಕರಿಗೆ ಚಿತ್ರವು ಅರ್ಥವಾಗುತ್ತದೆಯೇ? ಅಕ್ಕ, ಪಕ್ಕ ಕುಳಿತ ಕೆಲ ಪ್ರೇಕ್ಷಕರು ೧೦ ನಿಮಿಷಕೊಮ್ಮೆ ಅರ್ಥವಾಗದು ಎಂದು ಗೊಣಗಿಕೊಳ್ಳುತ್ತಿರುವಾಗ? ಇನ್ನೆಂಥ ಚಿತ್ರ ಬೇಕು? ಇವರಿಗೆ ಎಂದು ಕಸಿವಿಸಿ ಆಯಿತು. ‘ಲೂಸಿಯಾ’ ಮೊದಲ ವಾರದಲ್ಲಿಯೇ ಹಣ ಗಳಿಕೆಯಲ್ಲಿ ಮುಗ್ಗರಿಸುತ್ತದೆಯೇ? ತಮ್ಮೆಲ್ಲಾ ಶಕ್ತಿ ಮೀರಿ, ಇಂತಹದೊಂದು ಚಿತ್ರ ಮಾಡುವಂಥ ಹುಚ್ಚು ಧೈರ್ಯ ‘ಪವನ್’ ಗೆ ಬೇಕಿತ್ತೇ? ಈಗಾಗಲೇ ಪ್ರೇಕ್ಷಕರಿಂದ ಚೈನ್ ಲಿಂಕ್ ಮಾದರಿಯಲ್ಲಿ ಡಿಸ್ಟ್ರಿಬ್ಯೂಷನ್ ಗಾಗಿ ಹಣವನ್ನು ಪಡೆದಿರುವ ನಿರ್ದೇಶಕನಿಗೆ ಈ ಚಿತ್ರ ಲಾಭವನ್ನು ನೀಡುತ್ತದೆಯೇ? ಹಾಗೆಯೇ ಮಾಯಾನಗರಿ ಗಾಂಧಿನಗರಕ್ಕೆ ಸಡ್ಡು ಹೊಡೆದು ನಿಂತ ‘ಪವನ್ ಮತ್ತು ತಂಡ’ದವರಿಗೆ ಇನ್ನಷ್ಟು ಇಂತಹ ಚಿತ್ರಗಳನ್ನು ಮಾಡಲು ಗಾಂಧಿನಗರದಿಂದಲೇ ಪ್ರೋತ್ಸಾಹ ಸಿಕ್ಕೀತೇ? ಇನ್ನಷ್ಟು ಹೊಸ ಆಲೋಚನೆಗಳಿಗೆ ಈ ಪ್ರಯೋಗ ಕಾರಣವಾಗಬಲ್ಲುದೇ? ಇನ್ನಷ್ಟು ಬಣ್ಣಬಣ್ಣದ ಕನಸುಗಳು ನನಸಾಗುತ್ತವೆಯೇ? ಇವೆಲ್ಲಾ ಪ್ರಶ್ನೆಗಳೂ ಇನ್ನೂ ಕಾಡುತ್ತಲೇ ಇವೆ......... ! ‘ಲೂಸಿಯಾ’ ಚಿತ್ರ ನೋಡ್ತಾ, ನೋಡ್ತಾ, ನೋಡ್ತಾ, ನೋಡ್ತಾ ಆಲೋಚನೆಗಳು ಕಣಮ್ಮಿ! ನಾನ್ಸೆನ್ಸ್ ಅಂದ್ರಾ? :-) ‘ಲೂಸಿಯಾ’ ನೋಡಿ ನೀ ಮಾಯೆಯೊಳಗೋ, ಮಾಯೆ ನಿನ್ನೊಳಗೋ?...... ಅಂತಾ ಧಿಡೀರ್ ತತ್ವಜ್ಞಾನಿಗಳಾಗಿಬಿಡ್ತೀರಿ!
No comments:
Post a Comment