ಚಿಕ್ಕಂದಿನಲ್ಲಿ ಸಿನೆಮಾಗಳನ್ನು ನೋಡುವುದು ಕೇವಲ ಟೈಮ್ ಪಾಸ್ ಅಥವಾ ಮನರಂಜನೆಗಾಗಿ ಮಾತ್ರ ಎಂಬ ಅಭಿಪ್ರಾಯವಿತ್ತು. ಹಾಗಾಗಿ ಅದರಲ್ಲಿ ಲಾಜಿಕ್ ಹುಡುಕುವ ಕೆಲಸವನ್ನೇ ಮಾಡುತ್ತಿರಲಿಲ್ಲ. ಕಥೆಗೆ ಪೂರಕವಾಗಿ ನಟನೆ, ಹಾಡು, ಸಂಗೀತ ಎಲ್ಲವೂ ಇದ್ದರಾಯಿತು ಎಂಬುದಷ್ಟೇ ಆಗಿದ್ದ ಮನಸ್ಥಿತಿ. ನಂತರ ಹೀಗೆ ಒಂದಷ್ಟು ಜನರ ಪರಿಚಯವಾದ ನಂತರ ಚಿತ್ರವನ್ನು ಕೇವಲ ನೋಡುವುದಷ್ಟೇ ಅಲ್ಲ, ಅದರಲ್ಲಿ ಅರ್ಥವನ್ನು ಹುಡುಕಬೇಕು, ಅವು ಏನನ್ನೋ ಹೇಳುತ್ತಿರುತ್ತವೆ, ಅವನ್ನು ಅರ್ಥೈಸಬೇಕು, ಅರ್ಥ ಮಾಡಿಕೊಳ್ಳಬೇಕು ಎಂದೆಲ್ಲಾ ಅವರು ಹೇಳಿದಾಗ, ನಾನು ಸಿನೆಮಾ ನೋಡುವ ದೃಷ್ಟಿಯೇ ಬದಲಾಗಿಬಿಟ್ಟಿತು. ಇರುವ, ಇಲ್ಲದಿರುವ ಅರ್ಥವನ್ನೆಲ್ಲಾ ಹುಡುಕಿ, ಹುಡುಕಿ, ಸುಮ್ಮನೆ ಸಿನೆಮಾ ನೋಡುವ ಅಭ್ಯಾಸವೇ ತಪ್ಪಿ ಬಿಟ್ಟಿತು. ಒಂದು ರೀತಿಯಲ್ಲಿ ಮನರಂಜನೆ ಕಳೆದು ಹೋಗಿ, ತಲೆಯಲ್ಲಿ ಆಲೋಚನೆಗಳು ಹೆಚ್ಚಾಗಿದ್ದಂತೂ ಸುಳ್ಳಲ್ಲ.
‘ಬೌದ್ಧಿಕ ದಾಸ್ಯದಲ್ಲಿ ಭಾರತ’ ಪುಸ್ತಕದಲ್ಲಿ ಪಾಶ್ಚಾತ್ಯರ ಹಾಗೂ ಭಾರತೀಯರ ಕಲಾ ಸಂಸ್ಕೃತಿಯ ಬಗ್ಗೆ ಒಂದಷ್ಟು ಮಾತುಗಳಿವೆ. ಪಾಶ್ಚಾತ್ಯರಿಗೆ ಸಂಗೀತ, ಚಿತ್ರಕಲೆ, ಕಥೆ, ಕಾವ್ಯಗಳೆಲ್ಲ ಕೇವಲ ಆಸ್ವಾದನೆ ಮಾಡಿ ಸಂತೋಷ ಪಡಬೇಕಾದ ವಿಷಯಗಳಾಗಿ ಕಾಣುವುದಿಲ್ಲ. ಅವು ಅರ್ಥ ಮಾಡಿಕೊಳ್ಳಬೇಕಾದ ವಿಷಯಗಳು. ಹಾಗಾಗಿ ಕಲಾವಿಮರ್ಶೆ ಎಂಬುದು ಅವರಲ್ಲಿ ಆದ್ಯ ಸ್ಥಾನವನ್ನು ಪಡೆದುಕೊಂಡಿದೆ. ಕಲೆ ಎನ್ನುವುದು ಜೀವನದ ಅರ್ಥದ ಹುಡುಕಾಟವಾಗಿದೆ. ಒಂದು ಕಲೆಯನ್ನು ಆಸ್ವಾದಿಸುವುದೆಂದರೆ ಅದರ ಅರ್ಥವನ್ನು, ಉದ್ದೇಶವನ್ನು ತಿಳಿದುಕೊಳ್ಳುವುದು ಎಂದೇ ಅವರು ಭಾವಿಸುತ್ತಾರೆ. ಏನನ್ನು ತಿಳಿಸಲಿಕ್ಕಾಗಿ ಈ ಕಲಾಕೃತಿಯನ್ನು ರಚಿಸಲಾಗಿದೆ? ಕಲಾಕಾರನು ಅದರಲ್ಲಿ ಎಷ್ಟರಮಟ್ಟಿಗೆ ಯಶಸ್ವಿಯಾಗಿದ್ದಾನೆ? ಎಲ್ಲಿ ಎಡವಿದ್ದಾನೆ? ಅವನ ಉದ್ದೇಶವನ್ನು ಹೇಗೆ ತಿಳಿಸಿದ್ದರೆ ಚೆನ್ನಾಗಿರುತ್ತಿತ್ತು? ಇತ್ಯಾದಿಗಳನ್ನು ಕಲಾವಿಮರ್ಶೆ ಒಳಗೊಳ್ಳುತ್ತದೆ.
ಕಲಾಕೃತಿಯೆಂಬುದರ ಮೂಲಕ ಕಲಾಕಾರನು ಏನನ್ನೋ ತಿಳಿಸಬೇಕು, ಇಲ್ಲದಿದ್ದಲ್ಲಿ ಕಲಾಕೃತಿಗೆ ಅದೊಂದು ನ್ಯೂನತೆ ಎಂಬ ಭಾವನೆ ಅವರಲ್ಲಿದೆ. ಅವರೆಲ್ಲರ ಪ್ರಕಾರ ವ್ಯಕ್ತಿಯೊಬ್ಬನು ಏನನ್ನೋ ತಿಳಿಸುವ, ಸಂಕೇತಿಸುವ ಹಂಬಲವಿಲ್ಲದೇ ರಚಿಸಿದ್ದು ಕಲಾಕೃತಿಯಾಗಲಾರದು. ಇದನ್ನೇ ‘ಕಲಾಕಾರನ ಅಭಿವ್ಯಕ್ತಿ’ ಎನ್ನಲಾಗುತ್ತದೆ. ಆದರೆ ಈ ಕಲಾಕಾರರಿಗೆ ಹಾಗೂ ವಿಮರ್ಶಕರಿಗೆ ತಾವು ಕಲಾಕೃತಿಗಳಲ್ಲಿ ಯಾವ ಅರ್ಥವನ್ನು ಹುಡುಕಬೇಕು? ಯಾವ ಪ್ರಶ್ನೆಯನ್ನು ಇಟ್ಟುಕೊಂಡು, ಏಕಾಗಿ ಕಲೆಯನ್ನು ರಚಿಸಬೇಕು ಅಥವಾ ವಿಮರ್ಶೆಯನ್ನು ಮಾಡಬೇಕು? ಎಂಬುದರ ಬಗ್ಗೆ ಒಮ್ಮತವಿನ್ನೂ ಮೂಡದೇ, ವಿಭಿನ್ನ ಪಂಥಗಳು, ಬಗೆಹರಿಯದ ಚರ್ಚೆಗಳು ಇದಕ್ಕೆ ಸಂಬಂಧಿಸಿ ಹುಟ್ಟಿಕೊಂಡಿವೆ.
ಭಾರತೀಯ ಸಾಂಪ್ರದಾಯಿಕ ಕಲಾ ಪ್ರಕಾರಗಳ ಸಂದರ್ಭದಲ್ಲಿ ಇಂಥ ಹುಡುಕಾಟಕ್ಕೆ ಪ್ರಸ್ತುತತೆಯೇನು? ಎಂಬ ಪ್ರಶ್ನೆಗೆ ಉತ್ತರವಿದ್ದಂತಿಲ್ಲ. ಭಾರತೀಯ ಕಲೆಗಳಿಗೆ ಸಂಬಂಧಿಸಿ ರಸಸೃಷ್ಟಿ ಹಾಗೂ ರಸಾಸ್ವಾದನೆ ಎಂಬ ಪರಿಕಲ್ಪನೆ ಇದೆ. ಆದರೆ ಇದನ್ನು ಅಲ್ಲಗಳೆದು ‘ಕಲಾಕಾರನು ಏನನ್ನೋ ತಿಳಿಸುವುದಕ್ಕಾಗಿ ಕಲೆಯನ್ನು ರಚಿಸಬೇಕು ಅಥವಾ ಅವನು ಏನನ್ನು ಅಭಿವ್ಯಕ್ತಿ ಮಾಡುತ್ತಿದ್ದಾನೆ ಎಂಬುದನ್ನು ಅರ್ಥ ಮಾಡಿಕೊಳ್ಳುವುದು ರಸಿಕನ ಉದ್ದೇಶ’ ಎಂಬುದಾಗಿ ಯಾರಾದರೂ ಪ್ರತಿಪಾದಿಸಿದರೆ ಅದು ಉಳಿದವರಿಗಿರಲಿ, ಹೇಳಿದವನಿಗೇ ಅರ್ಥವಾಗುತ್ತದೆ ಅಂತ ಅನ್ನಿಸುವುದಿಲ್ಲ. ಅಂದರೆ ನಮ್ಮ ಕಲಾಪ್ರಕಾರಗಳಲ್ಲಿ ಅರ್ಥ ಕಂಡುಹಿಡಿಯುವುದೇ ಅರ್ಥಹೀನ ಕೆಲಸವಾಗಬಹುದು (ಬೌದ್ಧಿಕ ದಾಸ್ಯದಲ್ಲಿ ಭಾರತ, ಪುಟ ೮೨).
ಕಲಾವಿಮರ್ಶೆಯ ಬಗ್ಗೆ ಈ ಪುಸ್ತಕದಲ್ಲಿ ಬರೆದದ್ದನ್ನು ಓದಿದಾಗ, ಅರೆ! ಹೌದಲ್ಲಾ? ನಾವು ಚಿಕ್ಕಂದಿನಲ್ಲಿ ಚಿತ್ರಗಳನ್ನು ಹೀಗೆಯೇ ಎಂಜಾಯ್ ಮಾಡುತ್ತಿದ್ದದ್ದು. ರಾಜ್ ಕುಮಾರ್ ದ್ವಿಪಾತ್ರದಲ್ಲಿ ನಟಿಸುತ್ತಿದ್ದಾರೆ ಎಂದು ತಿಳಿದಿದ್ದರೂ ಕೂಡ ಕೆಟ್ಟ ಪಾತ್ರಕ್ಕೆ ಬೈಯುತ್ತಾ, ಒಳ್ಳೆಯ ಪಾತ್ರವನ್ನು ನಾವೇ ಆ ಪಾತ್ರವಾಗಿ ಸಂಭ್ರಮಿಸುತ್ತಾ, ಆ ಪಾತ್ರಕ್ಕೆ ತೊಂದರೆಯಾದಾಗ ನಾವು ಕೂಡ ಅದರೊಡನೆ ಅಳುತ್ತಾ, ನಮ್ಮ ಜೀವನದಲ್ಲಿ ನಡೆಯುತ್ತಿರುವ ಘಟನೆಯಂತೆಯೇ ಭಾವಿಸುತ್ತಿದ್ದೆವು. ಆ ಮೂಲಕ ಚಿತ್ರದಲ್ಲಿ ತಲ್ಲೀನತೆಯನ್ನು ಪಡೆಯುತ್ತಿದ್ದೆವು. ಆ ಘಳಿಗೆಗೆ ನಮ್ಮೆಲ್ಲಾ ನೋವನ್ನು ಮರೆಯುತ್ತಿದ್ದೆವು. ನಾವು ಪಾಶ್ಚಾತ್ಯರನ್ನು ಅನುಕರಿಸುತ್ತಾ, ಅರ್ಥ ಹುಡುಕಾಡುವ ಗೋಜಿನಲ್ಲಿ, ಆ ಮುಗ್ಧತೆಯನ್ನು / ರಸಾಸ್ವಾದನೆಯನ್ನು ಕಳೆದುಕೊಂಡುಬಿಟ್ಟೆವೇ? ಎಂಬುದು ಕಾಡತೊಡಗಿತು. ಇನ್ನು ಮುಂದೆ, ಯಾವುದೇ ಚಿತ್ರವನ್ನು ನೋಡುವಾಗಲೂ ಅದನ್ನು ಎಂಜಾಯ್ ಮಾಡುವುದಷ್ಟೇ ನನ್ನ ಕೆಲಸ, ಅರ್ಥ ಹುಡುಕುವುದಲ್ಲ ಎಂಬ ಸ್ಪಷ್ಟತೆಯನ್ನು ಕಂಡುಕೊಂಡು! ಹೋಗಿ ನೋಡಿದ ಮೊದಲ ಚಿತ್ರ ‘ವಾಸ್ತು ಪ್ರಕಾರ’.
ಬಹಳ ನಿರೀಕ್ಷೆ ಮೂಡಿಸಿದ್ದ ‘ಬೆಂಕಿಪಟ್ಣ’ ಎರ್ರಾಬಿರ್ರಿ ಸೋತದ್ದು, ‘ವಾಸ್ತು ಪ್ರಕಾರ’ ದ ಮೇಲಿನ ನಿರೀಕ್ಷೆಯನ್ನು ಇನ್ನೂ ಹೆಚ್ಚು ಮಾಡಿತ್ತು ಎಂದರೆ ತಪ್ಪಾಗಲಾರದು. ಆದರೆ ‘ವಾಸ್ತು ಪ್ರಕಾರ’ ನಿರೀಕ್ಷೆಯ ಮಟ್ಟ ಮುಟ್ಟದಿದ್ದರೂ, ಯೋಗರಾಜ್ ಭಟ್ಟರ ಮೇಲೆ ಪ್ರೇಕ್ಷಕರಿಗಿರುವ ನಂಬಿಕೆಯಿಂದಾಗಿ ಮಿಶ್ರ ಪ್ರತಿಕ್ರಿಯೆಗಳು ಎಲ್ಲೆಡೆ ವ್ಯಕ್ತವಾದವು. ನೋಡದೇ ಮಾತಾಡಬಾರದು ಎಂದು ಚಿತ್ರವನ್ನು ನೋಡಿದ್ದಾಯಿತು. ಚಿತ್ರ ಚೆನ್ನಾಗಿದೆಯೇ? ಇಲ್ಲವೇ? ಭಟ್ಟರ ಚಿತ್ರಗಳ ಮಾಮೂಲಿಯಾಗಿ ಇರುವ ಎಲ್ಲಾ ಅಂಶಗಳು (ಮುಂಗಾರು ಮಳೆಯನ್ನು ಸೇರಿಸಿ) ಈ ಚಿತ್ರದಲ್ಲೂ ಇವೆ. ಚಿತ್ರದ ಶುರುವಿನಲ್ಲಿಯೇ ಫೈಟಿಂಗ್, ನಂತರ ಒಂದು ಕಲರ್ ಫುಲ್ ಹಾಡು, ನೃತ್ಯ, ಉಡಾಫೆ ನಾಯಕ (ಈ ಬಾರಿ ಇಬ್ಬರೂ!), ವಯಸ್ಸು ಬೆಳೆದಿದ್ದರೂ ಅನುಭವದ ಕೊರತೆಯಿರುವ, ಚೆಲ್ಲುಚೆಲ್ಲಾಗಿ ಆಡುವ ನಾಯಕಿ, ಬಿಸ್ಲೇರಿ ನೀರಿನಂತಹ ಭಟ್ಟರ ಕಂಗ್ಲೀಷ್ ಹಾಡುಗಳು, ಕಾಡಿನ ಝರಿ ನೀರಿನಂತಹ ತಂಪಾದ ಜಯಂತ್ ಕಾಯ್ಕಿಣಿಯವರ ಹಾಡುಗಳು, ಪ್ರೀತಿಯಲ್ಲಿ ಬೀಳೊಲ್ಲವೆನ್ನುತ್ತಲೇ ಪ್ರೀತಿಯ ಒಂದೆರಡು ದೃಶ್ಯಗಳು, ನಾಯಕ, ನಾಯಕಿ ಜಗಳವಾಡಿದ ವಿರಹದ, ಕೋಪದ, ಕಣ್ಣೀರಿನ ದೃಶ್ಯಗಳು. ಅತಿ ಮುಖ್ಯವಾಗಿ ರೇಡಿಯೋ ನಾಟಕದ ಹಾಗೆಯೇ ಕೇಳಿಸುವ ಉದ್ದದ ಡೈಲಾಗ್ ಗಳು! ಅದೇ ಅನಂತ ನಾಗ್, ಸುಧಾ ಬೆಳವಾಡಿ.......
ಹಾಗಿದ್ದರೆ ಹೊಸದೇನಿಲ್ಲವೇ? ಇದೆ. ಈ ಬಾರಿ ನಾಯಕನ ಬದಲು ಸಹನಾಯಕನ ಬಾಯಲ್ಲಿ ಉದ್ದುದ್ದದ ಡೈಲಾಗ್ಸ್, ನಾಯಕಿಗಿಂತ ನಾಯಕಿಯ ಅಮ್ಮನಿಗೆ ನಟಿಸಲು ಸಿಕ್ಕಿರುವ ಅವಕಾಶ, ಮೊದಲ ಬಾರಿಗೆ ಭಟ್ಟರ ಚಿತ್ರದಲ್ಲೊಬ್ಬ ಖಳನಾಯಕಿ, ವಿದೇಶಿ ಲೊಕೇಷನ್, ಮುಖ್ಯವಾಗಿ ಪ್ರಸ್ತುತ ಸಮಾಜದಲ್ಲಿ ಮಧ್ಯಮ ವರ್ಗದವರನ್ನು ಕಾಡುತ್ತಿರುವ ಸಮಸ್ಯೆಗೊಂದು ಪರಿಹಾರ / ಸಂದೇಶ ಕೊಡಲು ಯತ್ನಿಸಿದ್ದಾರೆ. ಮನೆಗಳ ಗೋಡೆ ಬೀಳಿಸುವುದಕ್ಕಿಂತ, ಸಂಸಾರದಲ್ಲಿ ಸಾಮರಸ್ಯಕ್ಕಾಗಿ ಮನಗಳ ನಡುವೆ ಗೋಡೆ ಕಟ್ಟಿಕೊಳ್ಳಬೇಡಿ ಎಂದು ಸಾರಿದ್ದಾರೆ. ಹಾಗಿದ್ದರೆ ಎಲ್ಲವೂ ಇದೆ. ಚಿತ್ರ ಚೆನ್ನಾಗಿರಬೇಕು ಎನ್ನುತ್ತೀರಾ? ಊಹೂ, ಎಲ್ಲವೂ ಇದ್ದರೂ ಚಿತ್ರದಲ್ಲಿ ಏನೂ ಇಲ್ಲವೆಂದೇ ಭಾಸವಾಗುತ್ತದೆ.
ಚಿತ್ರವೊಂದರ ಪ್ಲಸ್ ಪಾಯಿಂಟ್ ಇರುವುದು ಕಿವಿ ಮುಚ್ಚಿ ಕುಳಿತುಕೊಂಡರೂ ಚಿತ್ರದ ಕಥೆ ಅರ್ಥವಾಗುವುದರಲ್ಲಿ! ಆದರೆ ‘ವಾಸ್ತುಪ್ರಕಾರ’ ದಲ್ಲಿ ಕಣ್ಮುಚ್ಚಿ ಕುಳಿತರೂ ಚಿತ್ರ ಅರ್ಥವಾಗುತ್ತದೆ. ಕಣ್ಣು ಬಿಟ್ಟು ನೋಡುವಂತಹ ಯಾವುದೇ ಅಂಶಗಳೂ ಚಿತ್ರದಲ್ಲಿಲ್ಲ. ಜಗ್ಗೇಶ್ ತನ್ನ ಎಂದಿನ ಲವಲವಿಕೆಯಲ್ಲಿ ನಟಿಸಿಲ್ಲ, ಭಟ್ಟರ ಡೈಲಾಗ್ ಗಳಲ್ಲಿ ಏಕತಾನತೆ ಇದೆ, ಪಂಚಿಂಗ್ ಇಲ್ಲ. ರಕ್ಷಿತ್ ಶೆಟ್ಟಿಗಂತೂ ಈ ಪಾತ್ರ ಹೊಂದುವುದೇ ಇಲ್ಲ. ರಕ್ಷಿತ್ ಶೆಟ್ಟಿಯ ಬಾಡಿ ಲಾಂಗ್ವೇಜ್ ಗೂ, ಡೈಲಾಗ್ ಗೂ ಹೊಂದಾಣಿಕೆಯೇ ಆಗುವುದಿಲ್ಲ. ಬಹುಶಃ ಡೈಲಾಗ್ ಗಳು ಡಬ್ಬಿಂಗ್ ನಲ್ಲಿಯೇ ರಚಿತಗೊಂಡವೋ? ಎಂಬ ಅನುಮಾನ ಹುಟ್ಟಿಸುತ್ತವೆ. ಗಣೇಶ್, ಯಶ್, ದಿಗಂತ್ ಅಥವಾ ಸೃಜನ್ ಲೋಕೇಶ್ ಈ ಪಾತ್ರಕ್ಕೆ ಹೊಂದುತ್ತಿದ್ದರು. ರಕ್ಷಿತ್ ಶೆಟ್ಟಿ ಮತ್ತು ಈಶಾನಿಯ ನಡುವೆ ಕೆಮಿಸ್ಟ್ರಿಯೇ ಇಲ್ಲದಿರುವುದು ಎದ್ದು ಕಾಣುತ್ತದೆ. ಅನಂತನಾಗ್ ಅವರಿಗಂತೂ ನಟಿಸುವ ಅವಕಾಶವೇ ಇಲ್ಲ. ಅವರು ಕೂಡ ಮುಖದಲ್ಲಿ ಭಾವನೆ ಕಾಣಿಸದಿರಲು / ನಟಿಸದಿರಲು ಶತಾಯಗತಾಯ ಪ್ರಯತ್ನಿಸಿದ್ದಾರೆ. ಇಡೀ ಚಿತ್ರದಲ್ಲಿ ಆರ್ಭಟಿಸುವುದು ಸುಧಾರಾಣಿ, ಚಂದ ಕಾಣುವುದು ಪರೋಲ್, ಟಿ.ಎನ್.ಸೀತಾರಾಂ, ಸುಧಾ ಬೆಳವಾಡಿ ಅವರ ನಟನೆ ನೋಡುವಂತಿದೆ.
‘ವಾಸ್ತು’ ಎಂಬುದೆಲ್ಲಾ ಸುಳ್ಳು ಎಂಬುದನ್ನು ನಿರೂಪಿಸಲು ಹೊರಟ ಭಟ್ಟರು, ನಿರೂಪಣೆಯಲ್ಲಿ ಎಡವಿದ್ದರಿಂದ, ಪ್ರೇಕ್ಷಕರಿಗೆ ‘ವಾಸ್ತು’ ಕಾಡುವುದೇ ಇಲ್ಲಾ, ಇತ್ತ ಕಡೆ ಪಾತ್ರಗಳು ರಚಿತವಾಗಿವೆಯೇ ಹೊರತು, ಅವುಗಳಿಗೊಂದು ಗೊತ್ತು, ಗುರಿ ಇಲ್ಲದಿರುವುದರಿಂದ, ಅವುಗಳು ಆಡಿದ್ದೇ ಆಟವಾಗಿಬಿಡುತ್ತವೆ. ಪ್ರೇಕ್ಷಕರಿಗೆ ಮೋಡಿ ಮಾಡುವಲ್ಲಿ ಸೋಲುತ್ತವೆ. ಬಹುಶಃ ಹೊಸಬರು ಈ ಚಿತ್ರವನ್ನು ಹೀಗೆ ನಿರ್ದೇಶಿಸಿದ್ದರೆ, ಚಿತ್ರದ ನೆಗೆಟಿವ್ ಅಂಶಗಳನ್ನು ಮರೆತುಬಿಡಬಹುದಿತ್ತು. ಆದರೆ ಭಟ್ಟರ ಪ್ರತಿಭೆಗೆ ತಕ್ಕುದಾದ ಸಿನೆಮಾವಲ್ಲವೆಂದೇ ಹೇಳಬಹುದು. ಕನ್ನಡ ಚಿತ್ರರಂಗದ ನಿರ್ದೇಶಕರು ಇನ್ನಾದರೂ ‘ಚಿತ್ರಕಥೆ’ ಗೆ ಹೆಚ್ಚಿನ ಗಮನ ನೀಡುವುದು ಒಳ್ಳೆಯದು. ಈ ವಿಷಯದಲ್ಲಿ ಉಡಾಫೆ ಸಲ್ಲದು! ಪ್ರೇಕ್ಷಕರು taken as granted ಆಗಬಾರದು. ಇಂತಹದೊಂದು ಪಾಠ, ಕನ್ನಡ ಚಿತ್ರರಂಗಕ್ಕೆ ಅವಶ್ಯವಾಗಿ ಬೇಕಿತ್ತು. ಭಟ್ಟರ ಹೆಸರಿನಿಂದಾಗಿ ‘ವಾಸ್ತು ಪ್ರಕಾರ’ ಹಣ ಮಾಡಿಬಿಡಬಹುದು. ಆದರೆ ಗುಣಮಟ್ಟದ ವಿಷಯದಲ್ಲಿ ಈ ತರಹದ ರಾಜಿ ಸಲ್ಲದು!
Hi,
ReplyDeleteI am new to ur blog, liked ur article. True...that now a days films are loosing their quality.
Visit my blog aakshanagalu.blogspot.in in ur free time