೧೯೫೨ರಲ್ಲಿ ಕಾರ್ಮಿಕರ ಹಾಗೂ ದೇಶದ ಭವಿಷ್ಯದ ದೃಷ್ಟಿಯಿಂದ ಭವಿಷ್ಯ ನಿಧಿ ಮತ್ತು ಪಿಂಚಣಿ ಯೋಜನೆಯನ್ನು ಕೇಂದ್ರ ಸರ್ಕಾರ ಆರಂಭಿಸಿತು. ವಯಸ್ಸಿದ್ದಾಗ ಕೆಲಸ ಮಾಡಿ ಹೇಗೋ ಬದುಕು ಸಾಗಿಸುವ ಜನರು, ತಮ್ಮ ವೃದ್ಧಾಪ್ಯದಲ್ಲಿ ನೆಮ್ಮದಿಯಿಂದಿರಲಿ ಎಂಬುವುದು ಈ ಯೋಜನೆಯ ಮೂಲ ಉದ್ಧೇಶ. ನಮ್ಮ ಭಾರತದಲ್ಲಿ ಕಾರ್ಮಿಕರಿಗೆ ಒತ್ತಾಯಿಸದಿದ್ದರೆ ಅಥವಾ ರೂಲ್ ಮಾಡದಿದ್ದರೆ, ತಮ್ಮ ಭವಿಷ್ಯಕ್ಕಾಗಿ, ಯಾವುದಾದರೂ ಅನಪೇಕ್ಷಿತ ಖರ್ಚುಗಳು ಬಂದಾಗ, ಬದುಕು ದುರ್ಬರವಾಗಿಬಿಡುತ್ತದೆ ಎಂಬ ಕಾರಣದಿಂದ ಈ ಭವಿಷ್ಯ ನಿಧಿ, ವಿಮಾ ಮತ್ತು ಪಿಂಚಣಿ ಯೋಜನೆಯನ್ನು ಜಾರಿಗೆ ತಂದರು. ಕಾರ್ಮಿಕರ ವೇತನದಿಂದ ಒಂದಷ್ಟು ಹಣವನ್ನು ಕಡಿತಗೊಳಿಸಿ, ಅಷ್ಟೇ ಹಣವನ್ನು ಕೈಗಾರಿಕೆಗಳ ಮಾಲೀಕರು ಕೂಡ ಸೇರಿಸಿ, ಈ ನಿಧಿಯನ್ನು ಕೂಡಿಡುವುದು. ಈ ಹಣ ಆ ಕೆಲಸಗಾರರ ಭವಿಷ್ಯದಲ್ಲಿ ಬರಬಹುದಾದ ಬಳಕೆಗಾಗಿಯಷ್ಟೆ ಹೊರತು ದೈನಂದಿನ ಆಗುಹೋಗುಗಳ ಖರ್ಚಿಗೆ ಬಳಸಲಲ್ಲ.
ಪ್ರತಿ ತಿಂಗಳು ಕಾರ್ಮಿಕರ ವೇತನದಿಂದ ೧೨% ಹಣವನ್ನು ಕಡಿತ ಮಾಡಿ, ಜೊತೆಗೆ ಅಷ್ಟೇ ೧೨% ಹಣವನ್ನು ಅವರು ದುಡಿಯುತ್ತಿರುವ ಫ್ಯಾಕ್ಟರಿಗಳ ಮಾಲೀಕರು ಸೇರಿಸಿ, ಒಟ್ಟು ವೇತನದ ಶೇಕಡ ೨೪% ಹಣವನ್ನು ಭವಿಷ್ಯ ನಿಧಿಯಲ್ಲಿ ಕೂಡಿಡಬೇಕಾಗುತ್ತದೆ. ಇದರಲ್ಲಿ ಕಾರ್ಮಿಕರ ವೇತನದಿಂದ ಕಡಿತವಾದ ೧೨% ಹಣ ಸಂಪೂರ್ಣವಾಗಿ ಭವಿಷ್ಯ ನಿಧಿಯಲ್ಲಿಯೇ ಸಂಗ್ರಹವಾದರೆ, ಮಾಲೀಕರು ನೀಡುವ ೧೨% ಹಣದಲ್ಲಿ ಶೇಕಡ ೮.೩೩% ಕಾರ್ಮಿಕರ ಪಿಂಚಣಿ ಯೋಜನೆಗೆ, ಶೇಕಡ .೫೦% ಕಾರ್ಮಿಕರ ವಿಮಾ ಯೋಜನೆಗೆ, ಉಳಿದ ಹಣ ಭವಿಷ್ಯ ನಿಧಿಗೆ ಸಂಗ್ರಹವಾಗುತ್ತದೆ. ಅಂದರೆ ಈ ಭವಿಷ್ಯ ನಿಧಿಗೆಂದು (ಪಿಎಫ್) ಮಾಲೀಕರು ನೀಡುವ ಹಣ ಕೇವಲ ಶೇಕಡ ೩.೧೭% ಅಷ್ಟೆ. ಮಾಲೀಕರು ಪಿಂಚಣಿ ಯೋಜನೆಗೆಂದು ನೀಡುವ ಶೇಕಡ ೮.೩೩% ಜೊತೆಗೆ ಕೇಂದ್ರ ಸರ್ಕಾರವೂ ಕೂಡ ಶೇಕಡ ೧.೧೬% ಹಣವನ್ನು ಪಿಂಚಣಿಗೆಂದು ನೀಡುತ್ತದೆ. ಇಲ್ಲಿ ನಾವು ಮೂರು ಸಂಗತಿಗಳನ್ನು ಗಮನಿಸಬೇಕು.
ಮೊದಲನೆಯದು, ವಿಮಾ ಯೋಜನೆ (Employees Deposit Linked Insurance Scheme). ಮಾಲೀಕರು ನೀಡುವ ೧೨% ಹಣದಲ್ಲಿ ಶೇಕಡ ೦.೫% ರಷ್ಟನ್ನು ಈ ಯೋಜನೆಯ ಅಡಿಯಲ್ಲಿ ಸಂಗ್ರಹಿಸುತ್ತಾರೆ. ಉದ್ಯೋಗ ಮಾಡುತ್ತಿರುವಾಗಲೇ ವ್ಯಕ್ತಿ ತೀರಿಕೊಂಡರೆ, ಆ ವ್ಯಕ್ತಿಯ ಕುಟುಂಬ ವರ್ಗದವರಿಗೆ ಈ ಹಣವನ್ನು ನೀಡುತ್ತಾರೆ. ಸಾಯುವ ಸಮಯದಲ್ಲಿ ಆತನಿಗೆ ದೊರೆಯುತ್ತಿದ್ದ ತಿಂಗಳ ವೇತನದ (ಗರಿಷ್ಟ ಮೊತ್ತ ರೂ ೧೫೦೦೦) ಮೂವತ್ತು ಪಟ್ಟು ಮತ್ತು ಬೋನಸ್ ರೂಪದಲ್ಲಿ ಸುಮಾರು ೧.೫ ಲಕ್ಷ ರೂಗಳನ್ನು ಸೇರಿಸಿ ನೀಡುತ್ತಾರೆ. ಉದಾಹರಣೆಗೆ ಆತ ತೀರಿಕೊಳ್ಳುವ ಸಮಯದಲ್ಲಿ ಆತನ ಮಾಸಿಕ ವೇತನ ೧೫೦೦೦ ರೂಗಳಾಗಿದ್ದರೆ, ರೂ ೧೫೦೦೦ x ೩೦ = ೪,೫೦,೦೦೦ + ಬೋನಸ್ ೧,೫೦,೦೦೦ ಸೇರಿ ಒಟ್ಟು ಆರು ಲಕ್ಷ ರೂ.ಗಳು ಆತನ ಕುಟುಂಬ ವರ್ಗಕ್ಕೆ ಸೇರುತ್ತದೆ. ಈ ಹಣವು ಆತ ತೀರಿಕೊಂಡ ನಂತರವೂ ಆತನನ್ನು ಅವಲಂಬಿಸಿರುವವರು ತಮ್ಮ ಜೀವನವನ್ನು ಸುಗಮವಾಗಿ ನಡೆಸಲು ಸಹಾಯಕವಾಗಿದೆ.
ಎರಡನೆಯದು, ಪಿಂಚಣಿ ಯೋಜನೆ (Employees Pension Scheme, 1995) - ಇದು ಶುರುವಾದದ್ದು ೧೯೯೫ ರಲ್ಲಿ. ಮಾಲೀಕರು ಪಿ ಎಫ್ ಎಂದು ನೀಡುವ ಶೇಕಡ ೧೨% ಹಣದಲ್ಲಿ, ಶೇಕಡ ೮.೩೩% ರಷ್ಟು ಹಣವನ್ನು ಯೋಜನೆಗೆಂದು ಸಂಗ್ರಹಿಸುತ್ತಾರೆ. ಇದಕ್ಕೆ ಕೇಂದ್ರ ಸರ್ಕಾರ ಕೂಡ ಶೇಕಡ ೧.೧೬% ಹಣವನ್ನು ನೀಡುತ್ತದೆ. ಅಂದರೆ ಒಟ್ಟು ಕಾರ್ಮಿಕರ ವೇತನದ ೯.೪೯ % ಹಣ ಪಿಂಚಣಿ ಯೋಜನೆಗಾಗಿ ಇಡುತ್ತಾರೆ. ಈ ಹಣವನ್ನು ನಿವೃತ್ತಿ ಹೊಂದಿದ ಕಾರ್ಮಿಕರಿಗೆ ನೀಡಲಾಗುವುದು. ಇದಕ್ಕಾಗಿ ೧೯೯೫ರ ಮುಂಚಿನಿಂದ ಕೆಲಸ ಮಾಡುತ್ತಿದ್ದವರಿಗೆ ಒಂದು ರೀತಿಯ ನಿಯಮಗಳು, ನಂತರ ಉದ್ಯೋಗಕ್ಕೆ ಸೇರಿದವರಿಗೆ ಮತ್ತೊಂದು ರೀತಿಯ ನಿಯಮಗಳಿವೆ. ನಿವೃತ್ತಿ ಹೊಂದುವ ಸಮಯದಲ್ಲಿ ಆತ ಪಡೆಯುತ್ತಿದ್ದ ೧೨ ತಿಂಗಳ ವೇತನದ ಸರಾಸರಿ ಲೆಕ್ಕ ಹಾಕಿ, ಆತ ಎಷ್ಟು ವರ್ಷಗಳ ಕಾಲ ಉದ್ಯೋಗದಲ್ಲಿದ್ದ ಎಂಬುದರೊಟ್ಟಿಗೆ ಗುಣಿಸಿ, ಅದನ್ನು ೭೦ರಲ್ಲಿ ಭಾಗಿಸಿ, ಆ ಹಣವನ್ನು ತಿಂಗಳು, ತಿಂಗಳು ಪಿಂಚಣಿಯಾಗಿ ನೀಡುತ್ತಾರೆ. ಅಕಸ್ಮಾತ್ ಈತ ತೀರಿಕೊಂಡರೆ, ಈತನಿಗೆ ೨೫ ವರ್ಷಕ್ಕಿಂತ ಸಣ್ಣ ವಯಸ್ಸಿನ ಮಕ್ಕಳಿದ್ದರೆ, ಅವರಿಗೆ ಹಾಗೂ ಈತನ ಪತ್ನಿಗೆ ಈ ಪಿಂಚಣಿ ಹಣ ದೊರೆಯುತ್ತದೆ.
ಮೂರನೆಯದು, ಇವೆರಡು ಯೋಜನೆಗೆಳಿಗೆ ಅಂದರೆ ಪಿಂಚಣಿ ಮತ್ತು ವಿಮಾ ಯೋಜನೆಗೆ ಕಾರ್ಖಾನೆಯ ಮಾಲೀಕರು ನೀಡಿದ ಹಣವನ್ನು ಕಳೆದು, ಉಳಿದ ಹಣ ಮಾತ್ರ ಅಂದರೆ ಸುಮಾರು ಶೇಕಡ ೩.೧೭ ರಷ್ಟು ಮಾತ್ರ ಭವಿಷ್ಯ ನಿಧಿಗೆಂದು ಹೋಗುತ್ತದೆ. ಈ ಭವಿಷ್ಯ ನಿಧಿಯಲ್ಲಿ ಕಾರ್ಮಿಕರ ವೇತನದಲ್ಲಿ ಕಳೆದ ಶೇಕಡ ೧೨% ಮತ್ತು ಕಾರ್ಖಾನೆಯ ಮಾಲೀಕರು ನೀಡುವ ಶೇಕಡ ೩.೧೭ ರಷ್ಟು ಅಂದರೆ ಒಟ್ಟು ವೇತನದ ಶೇಕಡ ೧೫.೧೭% ರಷ್ಟು ಭವಿಷ್ಯನಿಧಿಯಲ್ಲಿ ಸಂಗ್ರಹವಾಗುತ್ತದೆ. ಇದಕ್ಕೆ ಕಾಲಾನುಕಾಲಕ್ಕೆ ಕೇಂದ್ರ ಸರ್ಕಾರವು ಬಡ್ಡಿಯನ್ನು ಸೇರಿಸಿ, ಕಾರ್ಮಿಕರು ನಿವೃತ್ತಿ ಹೊಂದುವ ಕಾಲದಲ್ಲಿ ನೀಡುತ್ತಾರೆ. ಇಲ್ಲಿ ಕೂಡ ಈ ಹಣವನ್ನು ಆಪತ್ಕಾಲದಲ್ಲಿ ಬಳಸಲು ಅನುಕೂಲಗಳು ಹಾಗೂ ಅನೇಕ ನಿಯಮಗಳು ಇವೆ. ತಮ್ಮ ಮಕ್ಕಳ ಮದುವೆಗೆ, ವಿದ್ಯಾಭ್ಯಾಸಕ್ಕೆ, ಆರೋಗ್ಯ ಸಮಸ್ಯೆಗಳಿಗೆ, ಮನೆ ಕಟ್ಟಲು..... ಮುಂಗಡವಾಗಿ ಪಡೆಯಬಹುದಾಗಿದೆ (ನಿಯಮಗಳಿಗನುಸಾರವಾಗಿ). ಇದನ್ನು ಸಾಲವೆಂದು ಹೇಳುವುದು ತಪ್ಪಾಗುವುದು. ಇದು ಮುಂಗಡ ಹಣವಷ್ಟೆ. ಇದನ್ನು ವಾಪಾಸ್ಸು ತೀರಿಸಬೇಕೆಂಬ ನಿಯಮವಾಗಲೀ, ಇದಕ್ಕೆ ಬಡ್ಡಿ ನೀಡಬೇಕೆಂಬ ರೂಲ್ ಆಗಲೀ ಇಲ್ಲ.
ಈ ಯೋಜನೆಯನ್ನು ಕಾಲಾನುಕಾಲಕ್ಕೆ ಕೇಂದ್ರ ಸರ್ಕಾರವು ಆಯಾ ಕಾಲದ ಪರಿಸ್ಥಿತಿಗನುಗುಣವಾಗಿ ಪರಿಷ್ಕರಿಸುತ್ತಿರುತ್ತದೆ. ಇದು ದೇಶದ ಅಭಿವೃದ್ಧಿಯ ದೃಷ್ಟಿಯಿಂದ ಹಾಗೂ ಸಾಮಾನ್ಯ ಜನರೇ ಹೆಚ್ಚು ತುಂಬಿರುವ ದೇಶದಲ್ಲಿ, ಆ ಜನರ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಲು ಅವಶ್ಯಕ. ಆ ನಿಟ್ಟಿನಲ್ಲಿ ಈ ಬಾರಿಯ ಕೇಂದ್ರ ಸರ್ಕಾರ ಒಂದಷ್ಟು ನಿಯಮಗಳನ್ನು ಬದಲಾಯಿಸಿತು. ಅವುಗಳಲ್ಲಿ ಮುಖ್ಯವಾದವು Universal Account Number (UAN) - ದೇಶದಾದ್ಯಂತ ಒಬ್ಬ ವ್ಯಕ್ತಿಗೆ ಒಂದೇ ನಂಬರ್ ನೀಡುತ್ತದೆ. ಆತ ಉದ್ಯೋಗ ಬದಲಾಯಿಸಿದರೂ ಕೂಡ ಈ ನಂಬರ್ ಮಾತ್ರ ಬದಲಾಗುವುದಿಲ್ಲ. ಹಾಗಾಗಿ ಪದೇ, ಪದೇ ಹೊಸ ಅಕೌಂಟ್ ಗಳನ್ನು ಮಾಡುವ ತಲೆಬಿಸಿ ಇರುವುದಿಲ್ಲ. ಜೊತೆಗೆ ಆ ನಂಬರ್ ಬಳಸಿ, ಆನ್ಲೈನ್ ನಲ್ಲಿಯೇ ತನ್ನ ಬಳಿ ಪಿ ಎಫ್ ಹಣ ಎಷ್ಟಿದೆ? ಎಂಬ ಲೆಕ್ಕಾಚಾರವನ್ನು ನೋಡಿಕೊಳ್ಳಬಹುದು. ಇದಕ್ಕಾಗಿ ಪದೇ, ಪದೇ ಪಿ ಎಫ್ ಆಫೀಸಿಗೆ ತಿರುಗಾಡುವ ಅವಶ್ಯಕತೆ ಇರುವುದಿಲ್ಲ.
ಇನ್ನುಳಿದಂತೆ ಜನರು ಗಲಾಟೆ ಮಾಡುತ್ತಿರುವ ರೂಲ್ ಗಳಲ್ಲಿ ಹಳೆಯ ರೂಲ್ ಗಳು ಏನಿದ್ದವು? ಹೊಸ ರೂಲ್ ಗಳು ಏನು? ಹಳೆಯ ರೂಲ್ - ಈ ಹಿಂದೆ ಪಿ ಎಫ್ ಸೌಲಭ್ಯವಿದ್ದ ಉದ್ಯೋಗಿ, ೬೦ ದಿನಗಳ ಕಾಲ ನಿರುದ್ಯೋಗಿಯಾಗಿದ್ದರೆ, ಆಗ ತನ್ನ ಪಿ ಎಫ್ ಹಣವನ್ನು (ಕಾರ್ಮಿಕನ ಹಣ + ಮಾಲೀಕನ ಹಣ + ಬಡ್ಡಿ) ಪೂರ್ತಿ ತೆಗೆಯುವ ಸೌಲಭ್ಯವಿತ್ತು. ಹಾಗೂ ಹಾಗೆ ಪೂರ್ತಿ ಹಣ ತೆಗೆದ ಕೂಡಲೇ ಆತನ ಅಕೌಂಟ್ ಮುಚ್ಚಿಹೋಗುತ್ತಿತ್ತು. ನಿವೃತ್ತಿಯ ವಯಸ್ಸನ್ನು ೫೫ ವರ್ಷಗಳಿಗೆ ನಿಗದಿಗೊಳಿಸಲಾಗಿತ್ತು. ಅಕಸ್ಮಾತ್ ಉದ್ಯೋಗಿ ತನ್ನ ಕೆಲಸಕ್ಕೆ ರಾಜೀನಾಮೆ ನೀಡಿದರೂ ಕೂಡ, ಆತನಿಗೆ ಸಂಪೂರ್ಣ ಹಣವನ್ನು ಪಡೆಯುವ ಅವಕಾಶವಿತ್ತು. ಆತನಿಗೆ ೫೪ ವರ್ಷ ವಯಸ್ಸಾಗಿದ್ದರೆ ಅಥವಾ ನಿವೃತ್ತಿ ಹೊಂದುವ ಒಂದು ವರ್ಷಕ್ಕೆ ಮುನ್ನವೇ ಪಿಎಫ್ ನಲ್ಲಿ ಸಂಗ್ರಹವಾಗಿರುವ ಶೇಕಡ ೯೦% ರಷ್ಟನ್ನು ಆತ ತೆಗೆಯಬಹುದಿತ್ತು.
ಬದಲಾಗಿದ್ದ ರೂಲ್ - ಪಿ ಎಫ್ ಸೌಲಭ್ಯವಿದ್ದ ಉದ್ಯೋಗಿ, ತನ್ನ ಕೆಲಸಕ್ಕೆ ರಾಜೀನಾಮೆ ನೀಡಿ, ಬೇರೆಲ್ಲೂ ಕೆಲಸಕ್ಕೆ ಸೇರದಿದ್ದರೆ ಆತನಿಗೆ ಪಿಎಫ್ ಹಣವನ್ನು ಸಂಪೂರ್ಣವಾಗಿ ಪಡೆಯುವಂತಿಲ್ಲ. ಕೇವಲ ಆತನ ವೇತನದಲ್ಲಿ ಕಡಿತಗೊಂಡ ಹಣ ಮತ್ತು ಅದಕ್ಕೆ ನೀಡುವ ಬಡ್ಡಿಯನ್ನು ಆತ ತೆಗೆದುಕೊಳ್ಳಬಹುದು. ಮಾಲೀಕ ನೀಡಿದ ಹಣ ಅಂದರೆ ಶೇಕಡ ೩.೧೭% ರಷ್ಟು ಹಣವನ್ನು ಆತ ತನಗೆ ೫೮ ವರ್ಷಗಳಾಗುವ ತನಕ ಪಡೆಯುವಂತಿಲ್ಲ. ಹಾಗಾಗಿ ಆತನ ಅಕೌಂಟ್ ಸಂಪೂರ್ಣವಾಗಿ ಮುಚ್ಚಲಾಗದು. ಹಾಗಾಗಿ ಆತನ ಪಿಎಫ್ ಹಣ ಬೆಳೆಯುತ್ತಲೇ ಇರುತ್ತದೆ. ನಿಜವಾಗಿ ಹೇಳಬೇಕೆಂದರೆ ಸಾಮಾನ್ಯ ಜನರಿಗೆ ತಮ್ಮ ನಿವೃತ್ತಿಯ ಸಮಯದಲ್ಲಿ ಒಂದಿಷ್ಟಾದರೂ ನೆಮ್ಮದಿಯಾಗಿರಲು ಇದೊಂದು ಆಕರ್ಷಕ ಕೊಡುಗೆಯಾಗಿತ್ತು. ಪಿ ಎಫ್ ಹಣವನ್ನು ಪಡೆಯಲೆಂದು ಇದ್ದ ನಿವೃತ್ತಿಯ ವಯಸ್ಸನ್ನು ಈಗ ೫೮ ವರ್ಷಗಳಿಗೆ ಏರಿಸಲಾಗಿರುವುದರಿಂದ ಪಿಎಫ್ ನ ಶೇಕಡ ೯೦% ರಷ್ಟು ಹಣವನ್ನು ಕೂಡ ತನ್ನ ೫೭ ನೇ ವಯಸ್ಸಿನಲ್ಲಿ ಪಡೆಯಬಹುದು (ಈ ಹಿಂದೆ ಇದ್ದ ೫೪ ವರ್ಷಗಳ ಬದಲು - ಕೇವಲ ಮೂರು ವರ್ಷಗಳ ಏರಿಕೆಯಷ್ಟೆ). ಹಾಗೂ ಈ ಎಲ್ಲಾ ನಿಯಮಗಳು ಆಗಸ್ಟ್ ಒಂದು, ೨೦೧೬ ರಿಂದ ಜಾರಿಗೆ ಬರುತ್ತಿತ್ತು. ಅದುವರೆವಿಗೂ ಜನರ ಅಭಿಪ್ರಾಯಗಳನ್ನು ತಿಳಿಯಲು ಕೇಂದ್ರ ಸರ್ಕಾರ ಕಾದು ನೋಡುತ್ತಿತ್ತು. ಮತ್ತು ಒಂದು ವಿಷಯವೇನೆಂದರೆ, ನಿಷ್ಕ್ರಿಯಗೊಂಡಿರುವ ಖಾತೆಗಳಿಗೂ ಕೂಡ ಬಡ್ಡಿಯನ್ನು ನೀಡಲು ಕೇಂದ್ರ ಸರ್ಕಾರವು ನಿರ್ಧರಿಸಿದ್ದು, ಈ ನಿರ್ಣಯದಿಂದ ಸುಮಾರು ಒಂಭತ್ತು ಕೋಟಿ ಜನರಿಗೆ ಅನುಕೂಲವಾಗಲಿದೆ. ೨೦೧೧ ರಿಂದ ಇಂತಹ ಖಾತೆಗಳಿಗೆ ಬಡ್ಡಿ ನೀಡುವುದನ್ನು ಆಗಿನ ಕೇಂದ್ರಸರ್ಕಾರ ನಿಲ್ಲಿಸಿತ್ತು!
ಇಷ್ಟೆಲ್ಲಾ ಇದ್ದರೂ ಗಲಭೆಯಾದದ್ದು ಹೇಗೆ? ಯಾಕೆ? ಅದು ಕೂಡ ಕರ್ನಾಟಕ ರಾಜ್ಯದ ಬೆಂಗಳೂರಿನಲ್ಲಿ ಮಾತ್ರವೇಕೆ? ಇದು ಸಂಶಯಕ್ಕೆ ಕಾರಣವಾಗುತ್ತಿದೆ. ಇಲ್ಲಿ ಕಾಂಗ್ರೆಸ್ ಆಡಳಿತವಾಗಿದ್ದು, ಕೇಂದ್ರದಲ್ಲಿನ ಮೋದಿ ಸರ್ಕಾರದ ವಿರುದ್ಧ ತಪ್ಪು ಅಭಿಪ್ರಾಯ ಬರುವಂತೆ ಮಾಡಲೆಂದೇ ಹೀಗೆಲ್ಲಾ ಗಲಭೆಯನ್ನು ಸುಮ್ಮನೆ ಹುಟ್ಟು ಹಾಕಲಾಯಿತೇ? ನಿನ್ನೆ, ಮೊನ್ನೆ ಗಾರ್ಮೆಂಟ್ಸ್ ನೌಕರರ ಮುಷ್ಕರವೆಂಬುದು ಯಾರಿಗೂ ಕೂಡ ತಿಳಿದಿರಲಿಲ್ಲವೇಕೇ? ಪೋಲೀಸ್ ರಿಗೆ ಒಂದಿಷ್ಟಾದರೂ ಸುಳಿವು ಸಿಗಬೇಕಿತ್ತಲ್ಲವೇ? ಗಲಭೆಯಾಗುತ್ತಿದ್ದಾಗಲೂ ರಾಜ್ಯದ ಸಚಿವರುಗಳು ಯಾಕೆ ಯಾವುದೇ ಹೇಳಿಕೆಗಳನ್ನು ನೀಡಲಿಲ್ಲ? ಅಲ್ಲಿ ಹೋರಾಟ ಮಾಡುತ್ತಿದ್ದ ಯಾರಿಗೂ ಕೂಡ ಪಿಎಫ್ ನ ಬದಲಾದ ರೂಲ್ ಗಳಿಗೆ ಮಾಹಿತಿಯೇ ಇರಲಿಲ್ಲ. ಹಾಗಿರುವಾಗ ಅವರನ್ನು ಸಂತೈಸುವುದು ರಾಜ್ಯ ಸರ್ಕಾರದ ಆ ಸಮಯದ ಗುರಿಯಾಗಬೇಕಿತ್ತಲ್ಲವೇ? ರಾಜ್ಯದ ಬೊಕ್ಕಸಕ್ಕೆ ಇದರಿಂದಾದ ನಷ್ಟವೆಷ್ಟು? ಅದನ್ನು ತುಂಬಿಸುವ ಬಗೆ ಹೇಗೆ? ಕೇಂದ್ರ ಸರ್ಕಾರದ ನೀತಿಗಳು ಸರಿಯಾಗಿಲ್ಲದಿದ್ದಲ್ಲಿ, ಅದನ್ನು ಕೇಂದ್ರದ ಸಚಿವರ ಗಮನಕ್ಕೆ ತರಬೇಕಾದದ್ದು ಯಾರ ಹೊಣೆ? ಈ ವಿಷಯದಲ್ಲಿ ರಾಜ್ಯ ಕಾರ್ಮಿಕ ಸಚಿವರ ಜವಾಬ್ದಾರಿಗಳೇನು? ಭದ್ರತಾ ವೈಫಲ್ಯಕ್ಕೆ ಕಾರಣವನ್ನು ಯಾರು ಹೊರುತ್ತಾರೆ? ಎರಡು ದಿನಗಳಲ್ಲಿ ಜನ ಸಾಮಾನ್ಯರಿಗೆ ಆದ ತೊಂದರೆಯನ್ನು ಯಾರು ಪರಿಹರಿಸುತ್ತಾರೆ? ಇವಕ್ಕೆಲ್ಲಾ ಉತ್ತರಗಳು ರಾಜ್ಯ ಸರ್ಕಾರದ ಬಳಿ ಇದೆಯೇ? ಆದರೆ ಬೆಂಗಳೂರಿನಲ್ಲಿ ಆದ ಗಲಭೆಯ ಕಾರಣವೋ ಅಥವಾ ಮುಂಬರುವ ಚುನಾವಣೆಗಳಲ್ಲಿ ಇದೇ ವಿಷಯ ತಪ್ಪಾಗಿ ಹರಡಬಾರದೆಂದೋ ಈಗ ಕೇಂದ್ರ ಸರ್ಕಾರ, ಮತ್ತೆ ಹಳೆಯ ನಿಯಮಗಳಿಗೆ ಮರಳಿದೆ. ಭವಿಷ್ಯ ನಿಧಿಯ ಹೆಸರು ಸಾರ್ಥಕವಾಗಬಹುದಾಗಿದನ್ನು ಹಾಳು ಮಾಡಿದ ಕೀರ್ತಿ ಬೆಂಗಳೂರಿನ ಗಾರ್ಮೆಂಟ್ಸ್ ನೌಕರರದ್ದು ಎಂದರೆ ತಪ್ಪಾಗಲಾರದು.
No comments:
Post a Comment