Saturday, July 26, 2014

ಹೆಜ್ಜೆ, ವ್ಯಾಸರಾಯ ಬಲ್ಲಾಳರ ಕಾದಂಬರಿಯಲ್ಲಿ ಇಷ್ಟವಾದದ್ದು


ಸಾವು ಭಿನ್ನತೆಯನ್ನು ಮರೆಸುವ ಸತ್ಯವೂ ಆಗುತ್ತದೆ, ಸ್ವಾರ್ಥವನ್ನು ಅಳಿಸದೆಯೂ ಒರೆಸುವ ಮುಖವಾಡವೂ ಆಗುತ್ತದೆ.

ಕಾರ್ಯಕಾರಣ ಜಿಜ್ಞಾಸೆ ಯಾವಾಗ ಶುರುವಾಗುತ್ತದೆಯೋ ಗೊತ್ತೇ.... ಮನಸ್ಸಿಗೆ ಕಸಿವಿಸಿಯಾಗುವಂತಹ ಯಾವುದೊಂದು ವಿಚಾರ ಸಂಭವಿಸಿದಾಗ. ಈ ಜಿಜ್ಞಾಸೆಗೆ ಉತ್ತರ ದೊರಕುವುದೂ ಮನಸ್ಸು ಕಂಡುಕೊಂಡ ಹಾಗೆ.... ಮನಸ್ಸೇ ಹೇಳುತ್ತೆ ಇದೇ ಕಾರಣ ಅಂತ. ಮನಸ್ಸು ಕಾಣುವ ಸಮಸ್ಯೆಗೆ ಮನಸ್ಸೇ ಕಾರಣ ಹೀಗಿರಬಹುದು ಅಂತ ತಿಳಿದುಕೊಂಡಾಗ ಮನಸ್ಸು ತನಗೆ ಬೇಕಾದ ತೀರ್ಮಾನ ತೊಗೊಳ್ಳತ್ತೆಯೇ ಹೊರತು ಸಮಸ್ಯೆಯನ್ನು ಅರ್ಥ ಮಾಡಿಕೊಂಡ ಹಾಗಲ್ಲ.


ಹೆಜ್ಜೆ ' ಯಲ್ಲಿ ಸಂದರ್ಭವೊಂದಿದೆ. ಇಡೀ ಮನೆಯಲ್ಲಿ ಕ್ರಾಂತಿಕಾರಕ ಬದಲಾವಣೆಗಳಾಗುತ್ತಿರುತ್ತವೆ. ಸಂಪ್ರದಾಯ ಮುರಿಯದ ಬ್ರಾಹ್ಮಣನ ಮನೆಯಲ್ಲಿ, ಆತನ ಮಕ್ಕಳು ಎಲ್ಲವನ್ನೂ ಮುರಿಯುತ್ತಾರೆ. 

ಸುಮಾರು ೧೯೩೮ರ ಸಮಯದಲ್ಲಿ ನಡೆಯುವ ಘಟನೆ. ಆಗ ಕಿರಿಯ ಮಗ (ಆತ ಕಮ್ಯುನಿಸ್ಟ್) ತನ್ನ ಹೆಂಡತಿಯ ಬಳಿ (ಆಕೆ ಗಾಂಧೀ ವಾದಿ) ಹೇಳುತ್ತಾನೆ - ಹಿಟ್ಲರ್ ಯುದ್ಧ ಸಾರಿದ, ಇಂಗ್ಲೆಂಡ್ ತಾನೂ ಯುದ್ಧದ ನಿರ್ಧಾರ ತೆಕೊಂಡಿತು. ಈ ನಿರ್ಧಾರ ತನ್ನ ಸಾಮ್ರಾಜ್ಯವನ್ನೇ ಅಲುಗಾಡಿಸೀತು ಎಂದು ಯೋಚನೆ ಅದು ಮಾಡಿಲ್ಲ. ಅಣ್ಣ ಮನೆ ಬಿಟ್ಟು ಹೋದ. ಅವನ ನಿರ್ಧಾರ ಮನೆಯನ್ನು ಯಾವ ರೀತಿ ಬದಲಾಯಿಸುತ್ತೆ ಅಂತಾ ಅವನಿಗೆ ತಿಳಿದಿಲ್ಲ. ಅಕ್ಕ ತಾನು ಯಾವ ನಿರ್ಧಾರ ತೆಗೊಬೇಕು ಅಂತಾ ತಿಳೀದೇ ಒದ್ದಾಡ್ತಿದ್ದಾಳೆ. ನಮಗೆಲ್ಲಾ ಇವು ಸಾಮಾನ್ಯ ಕುಟುಂಬಗಳಿಗೆ ಸಂಬಂಧಿಸಿದ ಪ್ರಶ್ನೆಗಳೂಂತ ಕಾಣತ್ತೆ. ಒಂದಕ್ಕೊಂದು ಹೊಂದಿಕೆ ಇಲ್ಲಾಂತ ಕಾಣುತ್ತೆ. ಆದರೆ ಇದೆಲ್ಲಾ ಒಂದು ಸಾಮಾಜಿಕ ವ್ಯವಸ್ಥೆ ಬದಲಾಗ್ತಾ ಇರೋ ಲಕ್ಷಣಾಂತ ನಮಗೆ ತೋರ್ತಾ ಇಲ್ಲಾ. ನಾವೆಲ್ಲಾ, ನಾವಾಗಲೀ ನಮ್ಮ ಕುಟುಂಬದವರಾಗಲೀ ಭದ್ರವಾಗೋದು ಹೇಗೇಂತ ಯೋಚನೆ ಮಾಡ್ತಾ ಇದ್ದೇವೆ. ಆದರೆ ಇಡಿಯ ಸಮಾಜಕ್ಕೆ, ಅಂದರೆ ಎಲ್ಲರಿಗೂ ನೆಮ್ಮದಿ ತರುವ ವ್ಯವಸ್ಥೆ ಏನಾದರೂ ಸಾಧ್ಯವೇ ಅಂತಾ ಯೋಚನೇನೇ ಮಾಡೊಲ್ಲ.

ಸ್ವಾತಂತ್ರ್ಯ ಪೂರ್ವದ ಮನ, ಮನೆಗಳ ತಾಕಲಾಟಗಳನ್ನು ವ್ಯಾಸರಾಯ ಬಲ್ಲಾಳರು ೨೦೦೦ ಇಸವಿಯಲ್ಲಿ ಬರೆದ ಕಾದಂಬರಿ. 

ಈಗ ನಡೆಯುತ್ತಿರುವ ಅತ್ಯಾಚಾರಗಳು, ಅಧಿಕಾರದ ದುರುಪಯೋಗ, ಹೊಡಿ, ಬಡಿ, ಕೊಲ್ಲು, ಕೊಚ್ಚು ನೋಡಿದಾಗ ಹೀಗೆ ಅನ್ನಿಸುತ್ತಿದೆ. ನಾವೆಲ್ಲಾ ತೀರಾ ಸ್ವಾರ್ಥಿಗಳಾಗುತ್ತಿದ್ದೇವೆ.

Thursday, June 5, 2014

ಸಹನೆ - ಹೆಣ್ಣಿನ ‘ಛದ್ಮವೇಷ’!

ದ್ರೌಪದಿ - ಮಹಾಭಾರತದಲ್ಲಿ ರಚಿತವಾಗಿರುವ ಅದ್ಭುತ ಪಾತ್ರ.  ಆಕೆಯ ಬಗ್ಗೆ ಅಸಂಖ್ಯಾತ ಕಥೆಗಳಿವೆ.  ದ್ರುಪದ ಮಹಾರಾಜ, ‘ದ್ರೋಣ’ನ ಮೇಲೆ ಸೇಡು ತೀರಿಸಿಕೊಳ್ಳಲು ಮಗನಿಗಾಗಿ ಪ್ರಾರ್ಥಿಸಿ ಯಜ್ಞ ನಡೆಸುವಾಗ ದೃಷ್ಟದುಮ್ಯನೊಟ್ಟಿಗೆ ಹುಟ್ಟಿದವಳು ದ್ರೌಪದಿ, ‘ಅಗ್ನಿಯ ಮಗಳು’. ಅದೇ ‘ದ್ರೋಣ’ ನ ಶಿಷ್ಯ ‘ಅರ್ಜುನ’, ದ್ರುಪದ ಇಟ್ಟಿದ್ದ ಸ್ವಯಂವರ ಪರೀಕ್ಷೆಯಲ್ಲಿ ಗೆದ್ದು, ಇವಳನ್ನು ವರಿಸಿದ.  ಅಲ್ಲೂ ಕೂಡ ಮೊದಲಿಗೆ ಬಾಣವನ್ನು ಎದೆಗೇರಿಸಿದ್ದು ‘ಕರ್ಣ’. ಕರ್ಣ, ಈ ಸ್ವಯಂವರ ಪರೀಕ್ಷೆ ಎದುರಿಸಿದ್ದು ತನಗಾಗಿಯಲ್ಲದೆ, ದುರ್ಯೋಧನನಿಗಾಗಿ. ಇದನ್ನು ತಿಳಿದ ದ್ರೌಪದಿ, ಕರ್ಣನ ಮೇಲೆ ಮನಸ್ಸಾಗಿದ್ದರೂ, ‘ಸೂತಪುತ್ರ’ ನೆಂದು ಎಲ್ಲರ ಮುಂದೆ ಜರಿದು, ಅವನನ್ನು ಮದುವೆಯಾಗಲು ನಿರಾಕರಿಸಿದಳು. ದುರ್ಯೋಧನನಿಗೆ ಈ ಘಟನೆಯಿಂದ ಈಕೆಯ ಮೇಲೆ ದ್ವೇಷ ಶುರುವಾಯಿತು. 

ಅರ್ಜುನನ ಮಡದಿಯಾಗಿ ಮನೆ ಸೇರಿದ ಅಪ್ರತಿಮ ಸೌಂದರ್ಯವತಿ ‘ದ್ರೌಪದಿ’, ಅತ್ತೆ ‘ಕುಂತಿ’ಯ ಯೋಜನೆಯಿಂದಾಗಿ, ಪಂಚಪಾಂಡವರ ಮಡದಿಯಾಗಿ  ‘ವಸ್ತು’ವಿನಂತೆ ಹಂಚಿಹೋದಳು. ಇಲ್ಲಿಂದ ಆಕೆಯ ಮೇಲಿನ ದೌರ್ಜನ್ಯ, ಆಕೆ ಅದನ್ನು ಎದುರಿಸುವ ಬಗೆ, ಅವಳ ಕಷ್ಟ, ಹೆಂಗಸರಿಗೆ ಅರ್ಥವಾದಷ್ಟು ಇನ್ಯಾರಿಗೂ ಆಗದು.  ವರ್ಷಕೊಮ್ಮೆ ಪತಿಯರನ್ನು ಬದಲಾಯಿಸುವ ಈಕೆ ನಂಬುವುದಾದರೂ ಯಾರನ್ನು? ಪ್ರೀತಿಸುವುದಾದರೂ ಯಾರನ್ನು? ಅಥವಾ ಒಬ್ಬ ಪಾಂಡವನನ್ನೇ ಪ್ರೀತಿಸಿದರೂ ಕೂಡ, ಬಲವಂತವಾಗಿಯಾದರೂ ರೂಲ್ಸ್ ಪ್ರಕಾರ ಉಳಿದ ನಾಲ್ವರನ್ನು ಕೂಡಲೇಬೇಕಿತ್ತಲ್ಲವೇ?  ದ್ರೌಪದಿ ಪ್ರತಿ ಬಾರಿ ಪತಿಯನ್ನು ಬದಲಾಯಿಸುವಾಗ, ‘ಕನ್ಯತ್ವ’ ಮರುಕಳಿಸುವ ವರ ಪಡೆದಿದ್ದಳು ಎನ್ನುವುದನ್ನು ಕೂಡ ಒಪ್ಪದಿದ್ದರೂ ಪ್ರೀತಿ ಇಲ್ಲದ ಮೇಲೆ ಸಂಭೋಗ, ಬರೀ ಕಾಮವಷ್ಟೇ!  ಹಾಗಾಗಿ ಆಕೆ ಐವರನ್ನು ಮದುವೆಯಾಗಿದ್ದರೂ ಕೂಡ, ‘ಕನ್ಯೆ’ ಎನ್ನುವುದರಲ್ಲಿ ತಪ್ಪಿಲ್ಲ.  

ಗಂಡಿಗೆ ತನ್ನೆಲ್ಲಾ ಚಿಂತೆಯನ್ನು ಮರೆಯಲು, ಒತ್ತಡವನ್ನು ಕಳೆದುಕೊಳ್ಳಲು ಸಂಭೋಗ ಬೇಕು. ಕುಡಿತದ ಮತ್ತಿನಲ್ಲಿ ತನ್ನೆಲ್ಲಾ ಕಷ್ಟಗಳನ್ನು ಕ್ಷಣ ಕಾಲ ಮರೆಯುವ ಹಾಗೆ, ಸಂಭೋಗದ ಮೂಲಕ ಕ್ಷಣಿಕ ಸುಖ ಕಂಡುಕೊಳ್ಳುತ್ತಾನೆ. ಆದರೆ ಹೆಣ್ಣಿಗೆ ಸಂಭೋಗ ಎಂಬುದು ಧ್ಯಾನಸ್ಥ ಸ್ಥಿತಿ, ಎಲ್ಲವನ್ನೂ ಮರೆತು, ಎಲ್ಲರನ್ನೂ ಮರೆತು, ತನ್ನೊಳಗೆ ತಾನು ಲೀನಳಾಗುವ ಸ್ಥಿತಿ. ಆತಂಕವೋ, ಚಿಂತೆಯೋ, ಅಶಾಂತಿಯೋ ಇದ್ದರೆ ಆಕೆಗೆ ಸಂಭೋಗದ ಬಯಕೆಯಿರುವುದಿಲ್ಲ. ಹಿಂದೆಂದೋ ಓದಿದ ಒಂದು ಜೋಕ್ ನೆನಪಾಗುತ್ತಿದೆ.  ಗಂಡ, ಹೆಂಡತಿ ಸಂಭೋಗಿಸುತ್ತಿರುವಾಗ, ಆಕೆ ತನ್ನ ಮನೆಯ ಮೇಲ್ಚಾವಣಿಗೆ ಯಾವ ಬಣ್ಣ ಹಾಕಿಸಬೇಕೆಂದು ಯೋಚಿಸುತ್ತಿದ್ದಳಂತೆ! ಆಗೆಲ್ಲಾ ಇಂತಹ ಜೋಕ್ಸ್ ಗೆ ನಕ್ಕರೂ, ಈಗ ಅದನ್ನೇ ಮರು ಯೋಚಿಸುವಾಗ ಅನಿಸುತ್ತದೆ - ಹೌದು, ಹೆಣ್ಣು ತನ್ನ ಅಸ್ತಿತ್ವವನ್ನು ಮರೆತು, ಅಲೌಕಿಕವಾಗಿ, ನಿಶ್ಚಿಂತೆಯಿಂದ, ಸಂಭೋಗದಲ್ಲಿ ಕೂಡಿಕೊಂಡರೆ ಮಾತ್ರ ಆಕೆಗೆ ಸಂತೃಪ್ತಿ ಸಿಗುತ್ತದೆ. 

ಪರ್ವದಲ್ಲಿ ದ್ರೌಪದಿಯ ಮನದ ಈ ತೊಳಲಾಟಗಳನ್ನು ಕೆಲವು ಕಡೆ ಚೆಂದವಾಗಿ ಚಿತ್ರಿಸಿದ್ದಾರೆ. ಯುದ್ಧದಲ್ಲಿ ಅವಳ ಮಕ್ಕಳು ಸತ್ತಾಗ, ಈ ಪಂಚಪಾಂಡವರು ಅಷ್ಟಾಗಿ ಗಮನಿಸುವುದಿಲ್ಲ, ಜೊತೆಗೆ ಆಕೆಯನ್ನು ಸಂತೈಸಲು ಬರುವುದಿಲ್ಲ, ನಮೈವರಲ್ಲಿ ಯಾರಿಗೆ ಹುಟ್ಟಿದವರೋ? ಏನೋ? ಎಂಬಂತಹ ಅವರ ಮನಸ್ಥಿತಿ, ಆ ಮಕ್ಕಳೊಡನೆ ಅವರಿಗೆ ಭಾವನಾತ್ಮಕ ಸಂಬಂಧವೇ ಇರುವುದಿಲ್ಲ. ಆದರೆ ಅದೇ ಭೀಮ ತನ್ನ ಮಗ ಘಟೋದ್ಗಜನನ್ನು ಹೊತ್ತೊಯ್ಯುವ ದೃಶ್ಯ, ಅಭಿಮನ್ಯು ಸತ್ತಾಗ ಅರ್ಜುನ ರೋದಿಸುವ ದೃಶ್ಯಗಳು, ದ್ರೌಪದಿಯ ಮನಸ್ಥಿತಿಯನ್ನು ಊಹಿಸಿಕೊಂಡರೆ ನಮ್ಮ ಮನವನ್ನು ಕಲಕಿಬಿಡುತ್ತದೆ. 

ಈಗ ‘ದ್ರೌಪದಿ’ ಯ ಬಗ್ಗೆ ಮಾತನಾಡುವಾಗ ಎಷ್ಟೇ ಆಕೆ ದಿಟ್ಟೆ, ವೀರವನಿತೆ, ಲೋಕವನ್ನು ಎದುರಿಸಿದವಳು ಎಂದು ಹೇಳಿದರೂ, ಆಗಿನ ಪರಿಸ್ಥಿತಿಯಲ್ಲಿ ಅವಳ ಬಗ್ಗೆ ಎಂತಹ ಕೀಳು ಅಭಿಪ್ರಾಯ ಇತ್ತು ಎಂಬುದಕ್ಕೆ ಅವಳ ವಸ್ತ್ರಾಪರಣದ ಘಟನೆಯೇ ಸಾಕ್ಷಿ.  ಐವರಿಗೆ ಹೆಂಡತಿಯಾದವಳು, ಆರನೆಯವರಿಗೋ ಅಥವಾ ಬೇರಾರಿಗೋ ಹೆಂಡತಿಯಾದರೆ ತಪ್ಪೇನು? ಎಂಬಂಥ ಅಸಹ್ಯ ಮನಸ್ಥಿತಿ ಉಳಿದ ಗಂಡಸರಿಗೆ ಇತ್ತು. ಆಕೆಯ ಮಾನವನ್ನು ಕಾಪಾಡಲು ಆಕೆಯ ಪಂಚಪಾಂಡವರು, ಮಹಾ ಶೂರರು ಅಸಹಾಯಕರಾಗಿದ್ದು ವಿಪರ್ಯಾಸ. ಇಂತಹ ಸಮಯದಲ್ಲಿ ಆಕೆಯನ್ನು ಕಾಪಾಡಲು ಬಂದವನು ‘ಕೃಷ್ಣ’ ಮಾತ್ರ.  ಹಾಗಾಗಿ ಎಲ್ಲಾ ಹೆಂಗಳೆಯರಿಗೂ ‘ಕೃಷ್ಣ’ನೆಂದರೆ ಪ್ರೀತಿ.  ಕೃಷ್ಣ ಹೆಂಗಳೆಯರ ಮನ ಅರಿತದ್ದರಿಂದಲೇ, ಆತ ಸಹಸ್ರಾರು ಮಹಿಳೆಯರಿಗೆ ಗಂಡನಾದರೂ ಕೂಡ, ಪ್ರತಿ ಹೆಣ್ಣು ಕೂಡ ‘ಕೃಷ್ಣ’ ನಂತಹ ಗಂಡ ಬೇಕೆಂದು ಹಪಹಪಿಸುತ್ತಿದ್ದದ್ದು, ರಾಮ ‘ಏಕ’ ಪತ್ನಿವ್ರತಸ್ಥ ನಾದದ್ದರಿಂದಲೇ ಗೌರವ ಪಡೆದದ್ದು.   

ಬಹಳ ದಿವಸಗಳ ಹಿಂದೆ ಪಂಚಕನ್ಯೆಯರ ಬಗ್ಗೆ ಬರೆಯಬೇಕೆಂದುಕೊಂಡಿದ್ದೆ.  ಒಂದಿಬ್ಬರ ಬಗ್ಗೆ ಬರೆದು ಬ್ಲಾಗ್ ನಲ್ಲಿ ಪ್ರಕಟಿಸಿಯೂ ಇದ್ದೆ. ‘ದ್ರೌಪದಿ’ ಯ ಬಗ್ಗೆ ಬರೆಯಲಾಗಿರಲಿಲ್ಲ.  ಅದಕ್ಕೆ ಅವಕಾಶ ದೊರೆತದ್ದು ಕಿರುಚಿತ್ರ ‘ಛದ್ಮವೇಷ’ ನೋಡಿದ ನಂತರ.  ಹೆಚ್ ಎಸ್ ವಿ ಯವರ ನಾಟಕದ ‘ಮೊನೋಲಾಗ್’ ಜೊತೆಜೊತೆಗೆ ಪ್ರಸ್ತುತ ಹೆಣ್ಣಿನ ಕಥೆಯೊಂದನ್ನು ಹೆಣೆದು, ಅದನ್ನು ನಿರೂಪಿಸಿರುವ ರೀತಿ ಚಂದ.  
ನಾಟಕದಲ್ಲಿ ದ್ರೌಪದಿಯ ಪಾತ್ರಧಾರಿ, ನಿಜಜೀವನದಲ್ಲಿ ಕುಡುಕ ಗಂಡ, ಇಬ್ಬರು ಮಕ್ಕಳೊಡನೆ ಬದುಕುವ ಹೆಣ್ಣುಮಗಳೊಬ್ಬಳು,  ಗಂಡನನ್ನು ಹೆಂಡತಿಗಿಂತ ಹೆಚ್ಚಾಗಿ ತಾಯಿಯಂತೆಯೇ ಸಲಹುವ ಇವಳಿಗೊಬ್ಬ ಆಟೋ ಡ್ರೈವರ್ ‘ತಮ್ಮ’.  ತನಗಿರುವಂತೆಯೇ ಈಕೆಗೂ ಕೂಡ  ಅನೈತಿಕ ಸಂಬಂಧ ಆ ಆಟೋಡ್ರೈವರ್ ನೊಟ್ಟಿಗಿರಬಹುದೆಂದು ಸಂಶಯಿಸುವ ಗಂಡ, ಮಕ್ಕಳಿಗೆ ಸುಭದ್ರ ಭವಿಷ್ಯ ಕಲ್ಪಿಸುವಲ್ಲಿ ನಿರತಳಾಗಿರುವ ಹೆಣ್ಣು ಮಗಳು ಈಕೆ, ಇವೆಲ್ಲದರ ನಡುವೆ ಬರುವಂತಹ ಮಕ್ಕಳ ಶಾಲೆಯಲ್ಲಿ ನಡೆಯುವ ‘ಛದ್ಮವೇಷ’ ಸ್ಪರ್ಧೆ, ಒಬ್ಬ ಮಗನನ್ನು ‘ರಾಮ’ನನ್ನಾಗಿಯೂ, ಮತ್ತೊಬ್ಬನನ್ನು ‘ಗಾಂಧಿ’ಯನ್ನಾಗಿಯೂ ರೆಡಿ ಮಾಡುವ ಅಮ್ಮ, ಅಲ್ಲಿ ಶಾಲೆಯಲ್ಲಿ ‘ಭಾರತಮಾತೆ’ ಯ ವೇಷ ಧರಿಸಿದ್ದ ಮಗುವನ್ನು ಕರೆದೊಯ್ಯಲು ಬರದ ಅವಳ ಬೇಜವಾಬ್ದಾರಿ ಪೋಷಕರು, ‘ಕೃಷ್ಣ’ನಂತೆ ತನಗೆ ಸಹಾಯ ಮಾಡುವವ ಎಂದೇ ನಂಬಿಕೊಂಡಿದ್ದ ಇವಳ ನಂಬಿಕೆಯನ್ನು ಹುಸಿ ಮಾಡುವ ಆಟೋ ಡ್ರೈವರ್,  ದ್ರೌಪದಿಯ ಕಾಲದಿಂದಲೂ ಹೆಣ್ಣು ಮಕ್ಕಳ ಶೋಷಣೆ ತಪ್ಪಿಲ್ಲ ಎನ್ನುವುದನ್ನು ನಿರೂಪಿಸುವ ಇವಳ ಮೇಲಿನ ಅತ್ಯಾಚಾರದ ಪ್ರಯತ್ನ, ಅದನ್ನು ಆಕೆ ಒಬ್ಬಂಟಿಯಾಗಿ ಎದುರಿಸುವ ಧೈರ್ಯ, ‘ಸಹನೆ - ಹೆಣ್ಣಿನ ಛದ್ಮವೇಷ’ ಎಂಬುವಲ್ಲಿಗೆ ಕಿರುಚಿತ್ರ ಮುಗಿಯುತ್ತದೆ.

ಚಿತ್ರದ ಟೆಕ್ನಿಕಲ್ ವಿಷಯಗಳ ಬಗ್ಗೆ ಮಾತಾಡುವುದು ಅನಗತ್ಯ.  ಅಲ್ಲಲ್ಲಿ ತುಂಡು, ತುಂಡಾದಂತೆ ಅನಿಸಿದರೂ, ಕೆಲವೊಂದು ಕಡೆ ನಾಟಕೀಯವೆನಿಸಿದರೂ ಕೂಡ ಚಿತ್ರವು ಏನನ್ನು ಹೇಳಬಯಸಿದೆ? ಅದನ್ನು ಚಂದವಾಗಿ ಹೇಳಿದೆ, ಮನಮುಟ್ಟುವಂತೆ ಹೇಳಿದೆ.  ಆದರೆ ಒಂದಷ್ಟು ಹಿರಿಯರು ಹೇಳಿದಂತೆ ‘ದೊಡ್ಡ’ ಚಿತ್ರವಾಗಿ, ತೆರೆಗೆ ಬಂದರೆ ಯಶಸ್ವಿಯಾಗುತ್ತದೆಯೇ? ಕಮರ್ಷಿಯಲೀ ಓಡುವುದೇ?  ಗೊತ್ತಿಲ್ಲ. ಛದ್ಮವೇಷದಲ್ಲಿ ಗಮನ ಸೆಳೆದದ್ದು ನಾಯಕಿ ಪಾತ್ರಧಾರಿಯ ಅಭಿನಯ, ಆಕೆ  ಸಂಭಾಷಿಸುವ ಶೈಲಿ, ಆ ಘಳಿಗೆಯಲ್ಲಿ ನಾವೇ ದ್ರೌಪದಿಯಾಗುತ್ತೇವೆ ಎಂಬುದರಲ್ಲಿ ಸಂಶಯವಿಲ್ಲ.  ವಸ್ತ್ರಾಪರಣದ ಸಂದರ್ಭದಲ್ಲಿ ಆಕೆ ಹೇಳುವ ಮಾತುಗಳು ‘ಕೃಷ್ಣ, ಅಂದು ನೀ ಬರಬಾರದಿತ್ತು, ಈ ದ್ರೌಪದಿ ಬೆತ್ತಲಾಗಬೇಕಿತ್ತು,  ಆ ಮೂಲಕ ಅಲ್ಲಿ ನೆರೆದಿದ್ದ ಸಮಸ್ತ ಗಂಡಸರು ಬೆತ್ತಲಾಗಬೇಕಿತ್ತು, ಇಡೀ ಸಮಾಜ ಅವರನ್ನು ಗೇಲಿ ಮಾಡುತ್ತಿತ್ತು.  ನೀ ಬಂದು ಕಾಪಾಡಿದ್ದು ನನ್ನನ್ನಲ್ಲ, ಅವರನ್ನು’ ಎಂಬಂತಹ ಮಾತುಗಳು, ಮನಸ್ಸನ್ನು ಚುಚ್ಚಿಬಿಡುತ್ತವೆ.  ಮರುಕ್ಷಣವೇ ಆಕೆಯ ಒಳಧ್ವನಿ ಆಕೆಯನ್ನು ಎಚ್ಚರಿಸುತ್ತದೆ ‘ಅವರನೆಲ್ಲಾ ತೆಗಳುತ್ತಿರುವೆಯಲ್ಲಾ? ನೀನೇಕೆ ಅಸಹಾಯಕಳಾಗಿ ಎರಡು ಕೈಮೇಲೆತ್ತಿ, ಕೃಷ್ಣನ ಮೊರೆಹೋದೆ, ಅಗ್ನಿಯ ಮಗಳು ನೀನೆಂಬುದನ್ನು ಮರೆತದ್ದು ಏಕೆ? ಎನ್ನುತ್ತದೆ. ಆ ಕ್ಷಣದಲ್ಲಿ ನಮಗೂ ಕೂಡ ‘ಹೌದಲ್ಲಾ? ಇದುವರೆವಿಗೂ ನಾವು ನಮ್ಮನ್ನು ರಕ್ಷಿಸಿ, ಎಂದೇ ಮೊರೆಹೋಗುತ್ತಿದ್ದೇವೆ ಹೊರತು ಬೇರೆಯವರು ನಮ್ಮನ್ನೇಕೆ ರಕ್ಷಿಸಬೇಕು? ನಮ್ಮನ್ನು ನಾವೇ ರಕ್ಷಿಸಿಕೊಳ್ಳಬೇಕಲ್ಲವೇ? ಎಂದೆನಿಸಿಬಿಡುತ್ತದೆ.

ಮಹಿಳೆಯರನ್ನು ದುರ್ಬಲರು ಎಂದು ಚಿತ್ರಿಸಿ, ಚಿತ್ರಿಸಿ, ನಿಜವಾಗಿಯೂ ನಾವೆಲ್ಲರೂ ದುರ್ಬಲರಾಗಿಬಿಟ್ಟಿದ್ದೇವೆ, ಈ ಹೊತ್ತಿನಲ್ಲಿ ಅತ್ಯಾಚಾರ ಅಥವಾ ಇನ್ಯಾವುದೇ ಶೋಷಣೆಗಳನ್ನು ತಪ್ಪಿಸಿಕೊಳ್ಳಲು ಅವಶ್ಯವಾಗಿಯೂ ಹೆಣ್ಣು ಸಮರ್ಥಳು, ಯಾರ ಮೇಲೂ ಡಿಪೆಂಡ್ ಆಗಬೇಕಂತಿಲ್ಲ, ಯಾಕೆ ಆಗಬೇಕು? ಎನ್ನುವ ಸತ್ಯ ಮುಖಕ್ಕೆ ಹೊಡೆದು ಎಬ್ಬಿಸುತ್ತದೆ. ಹೆಣ್ಣು ತಾಯಿಯಾಗಿ ಎಲ್ಲರನ್ನು ಸಲಹುತ್ತಾಳೆ ಎಂಬುದಾದರೆ ಅವಳನ್ನು ಕೂಡ ಅವಳೇ ಸಲುಹಬಲ್ಲಳು ಎಂದನ್ನಿಸಿ, ಮೈ ಹಗುರಾಗಿಬಿಡುತ್ತದೆ.  ಈ ತರಹದ ಒಂದು ಆಲೋಚನೆ, ಶಕ್ತಿ ಆ ಚಿತ್ರ ನೀಡಿತು ಎಂಬುದಂತೂ ಸುಳ್ಳಲ್ಲ.  ಪ್ರಸ್ತುತ ಸಮಾಜದಲ್ಲಿ ಹೆಣ್ಣಿನ ಶೋಷಣೆಗಳಿಗೆ, ಹೆಣ್ಣು ತನ್ನನ್ನು ತಾನು ದುರ್ಬಲಳು ಅಂದುಕೊಳ್ಳುವುದು ಕೂಡ ಕಾರಣ ಎಂದೆನಿಸಿಬಿಡುತ್ತದೆ. ಚಿತ್ರದ ಕೊನೆಯಲ್ಲಿ ಅತ್ಯಾಚಾರಿಗಳನ್ನು ಎದುರಿಸಿ ಗೆದ್ದು ಬಂದ ಇವಳನ್ನು ಸಂದರ್ಶಿಸುವವರಿಗೆ ಆಕೆ ನೀಡುವ ಹೇಳಿಕೆ, ಇಡೀ ಚಿತ್ರದ ಪ್ಲಸ್ ಪಾಯಿಂಟ್ ಆಗಿಬಿಡುತ್ತದೆ. ‘ನನಗಿಬ್ಬರು ಗಂಡು ಮಕ್ಕಳು, ಅವರು ಹೆಣ್ಣುಮಕ್ಕಳನ್ನು ಗೌರವಿಸುವಂತೆ ಬೆಳೆಸುತ್ತೇನೆ’ ಎಂಬುದು ಅಲ್ಲೂ ಕೂಡ ಹೆಣ್ಣಿನ ಜವಾಬ್ದಾರಿಯನ್ನು ಅರ್ಥ ಮಾಡಿಸುತ್ತದೆ.












Tuesday, May 13, 2014

‘ಉಳಿದವರು ಕಂಡಂತೆ’

  1. ನಾವೊಂದಿಷ್ಟು ಗೆಳತಿಯರು ಫೇಸ್ ಬುಕ್ ನ ಗುಂಪಿನಲ್ಲಿ ಒಂದೆರಡು ಬಾರಿ ಖೋಖೋ ಕಥೆಗಳು ಎಂಬ ಆಟವನ್ನು ಆಡಿದ್ದೇವೆ. ಮೊದಲ ಕಥೆಯ ಥೀಮ್ ‘ಫಾಂಟಸಿ’ ಯಾಗಿದ್ದು, ಆಕೆ ಸುಮಾರು ಒಂದು ಪ್ಯಾರವುಳ್ಳ ಕಥೆಯನ್ನು ಆರಂಭಿಸಿದ್ದರು. ಒಬ್ಬರು ಮತ್ತೊಬ್ಬರಿಗೆ ‘ಖೋ!’ ಕೊಡುವುದು, ಮೊದಲಿನವರು ಹೇಳಿದ ಕಥೆಯ ವಿರುದ್ಧವೇ ಮತ್ತೊಬ್ಬರು ಕಥೆಯನ್ನು ತಿರುಗಿಸಿಬಿಡಬಹುದು, ಆದರೆ ಪಾತ್ರಗಳನ್ನು ಬದಲಿಸುವಂತಿಲ್ಲ. ಕಥೆಯ ಓಘವನ್ನು ತಪ್ಪಿಸುವಂತಿಲ್ಲ. ಹೀಗೆ.... ಉಳಿದವರೆಲ್ಲರೂ ತಮ್ಮದೇ ಕಲ್ಪನೆಯಲ್ಲಿ ಒಂದೊಂದು ಪ್ಯಾರವನ್ನು ಜೋಡಿಸುತ್ತಾ, ಅದೊಂದು ಅದ್ಭುತ ಮಕ್ಕಳ ಫಾಂಟಸಿ ಕಥೆಯಾಗಿ ಮೂಡಿ ಬಂದಿತ್ತು.
  2. ‘ಉಳಿದವರು ಕಂಡಂತೆ’ ಕೂಡ ಇದೇ ರೀತಿಯಾದ ಖೋಖೋ ಕಥೆ. ಮೊದಲಿಗೆ ಶುರುವಾಗುವ ಮುಂಬೈಯಿಂದ ವಾಪಾಸಾಗಿರುವ ಪಾತ್ರ. ಆತನಿಗೆ ಮಂಗಳೂರಿನಲ್ಲಿಯೇ ವಾಸವಾಗಿರುವ ತನ್ನಮ್ಮನನ್ನು ದುಬೈಗೆ ಕರೆದುಕೊಂಡು ಹೋಗಬೇಕೆನ್ನುವ ಬಯಕೆ, ಜೊತೆಗೆ ಮುಂಬೈನ ಭೂಗತ ಪಾತಕಿಗಳಿಂದ ತಪ್ಪಿಸಿಕೊಳ್ಳುವ ಆಸೆ, ಇಲ್ಲಿ ಒಂದಷ್ಟು ಸ್ಲೋ ಮೋಷನ್ ಶಾಟ್ಸ್ ಗಳು ಬೇಜಾರಾದರೂ ಕೂಡ, ಇನ್ನೇನೋ ಇರಬಹುದು ಎನ್ನುವ ಕಾತರತೆ, ಈ ಬೇಸರವನ್ನು ಮರೆಮಾಚುತ್ತವೆ. ಈ ಪಾತ್ರ ತನ್ನ ಮುಂದಿನ ಪಾತ್ರಕ್ಕೆ ಖೋ! ಕೊಡುತ್ತದೆ, ಜೊತೆಗೊಂದು ಲಿಂಕ್ ಕೂಡ ನೀಡುತ್ತದೆ. ಆ ಕೊಂಡಿಯನ್ನು ಹಿಡಿದು ಮತ್ತೊಂದು ಪಾತ್ರ ತನ್ನ ಕಥೆ ಶುರು ಮಾಡಿಕೊಳ್ಳುತ್ತದೆ. ಹೀಗೆ ಕೊನೆಯ ಪಾತ್ರದ ತನಕವೂ ಅವರ ಸ್ವಗತವನ್ನು ಕಥೆಗಾರ್ತಿ / ವರದಿಗಾರ್ತಿಯೊಬ್ಬಳು ಹಲವು ಭಾಗಗಳ ಮೂಲಕ ಬರೆಯುತ್ತಾ ಹೋಗುತ್ತಾಳೆ. ಅವನ್ನು ಒಂದರ ಜೊತೆಗೆ ಮತ್ತೊಂದನ್ನು ಜೋಡಿಸುತ್ತಾ ಹೋಗುತ್ತಾಳೆ. ಕೊನೆಯವರೆವಿಗೂ ನಿಮಗೇನನ್ನು ಹೇಳುತ್ತಿದ್ದಾರೆ ಎಂಬುದು ಅರ್ಥವಾಗುವುದಿಲ್ಲ. ಆದರೆ ಪಾತ್ರಗಳು ನಮ್ಮನ್ನು ಹಿಡಿದಿಡುತ್ತವೆ. ಕಥೆಯನ್ನು ಲಿಂಕ್ ಮಾಡುತ್ತಾ ಹೋಗುತ್ತವೆ.

  3. ಮೂರು ಕೊಲೆಗಳಾಗಿವೆ, ಆದರೆ ಯಾರಿಗೂ ಕೂಡ ಇದರ ಹಿಂದಿನ ಉದ್ದೇಶವೇನು? ಎಂಬುದೇ ತಿಳಿಯುವುದಿಲ್ಲ. ಈ ಗೊಂದಲವನ್ನು ಹಲವು ಬಾರಿ ‘ರಿಚ್ಚಿ’ ಪಾತ್ರದ ಬಾಯಲ್ಲಿ ಹೇಳಿಸುತ್ತಾರೆ ಕೂಡ! ಕೊಲೆಗಳಾಗಿವೆ ಎಂಬುದಷ್ಟೇ ಸತ್ಯ, ಉದ್ದೇಶ ಮುಖ್ಯವಲ್ಲ, ಒಬ್ಬೊಬ್ಬರಿಗೆ ಒಂದೊಂದು ಉದ್ದೇಶವಿರುತ್ತದೆ. ಅದು ಸತ್ಯವಿರಬೇಕಂತಿಲ್ಲ ಎಂಬುದಷ್ಟೇ ಸತ್ಯ ಮತ್ತು ಚಿತ್ರದ ಉದ್ದೇಶ! ಹಾಗೂ ಈ ಉದ್ದೇಶವು ‘ಉಳಿದವರು ಕಂಡಂತೆ’ ಆಗಿರುತ್ತದೆಯೇ ಹೊರತು, ಪಾತ್ರಧಾರಿಗಳದ್ದಾಗಿರುವುದಿಲ್ಲ ಎಂಬುದನ್ನು ಅತ್ಯಂತ ಚಂದವಾಗಿ, ಯಾವುದೇ ಡೈಲಾಗ್ ಗಳ ಅಬ್ಬರವಿಲ್ಲದೆಯೇ ನಿರೂಪಿಸಿದ್ದಾರೆ ನಿರ್ದೇಶಕ ‘ರಕ್ಷಿತ್ ಶೆಟ್ಟಿ’.

  4. ಅದ್ಭುತವಾದ ತಂತ್ರಗಾರಿಕೆ, ಪಾತ್ರಗಳ ರಚನೆ, ಪಾತ್ರಧಾರಿಗಳ ನಟನೆ, ಚಂದದ ಸಂಗೀತ ಮತ್ತು ಹಾಡುಗಳು, ದಕ್ಷಿಣ ಕನ್ನಡದ ಸೊಗಡನ್ನು ಇಂಚಿಂಚು ಬಿಡದಂತೆ ತೋರಿಸಿರುವ ಛಾಯಾಗ್ರಾಹಣ, ಅಲ್ಲಲ್ಲಿ ‘ಸ್ಲೋ ಮೋಷನ್’ ದೃಶ್ಯಗಳ ಹಾವಳಿಯಿದ್ದರೂ, ಒಂದೆರಡು ಕಡೆ ಹೇಳಿದ್ದನ್ನೇ ಹೇಳಿಸಿರುವುದರ ಔಚಿತ್ಯವೇನು? ಎನ್ನಿಸಿದರೂ ಕೂಡ ಅವೆಲ್ಲಾ ಮರೆತುಹೋಗಿಬಿಡುತ್ತವೆ. ಕೊನೆಗೆ ನಿರ್ದೇಶನವೊಂದೇ ಮನಸ್ಸಿನಾಳಕ್ಕಿಳಿದುಬಿಡುತ್ತದೆ. ದಕ್ಷಿಣ ಕನ್ನಡದ ಬಗ್ಗೆ ಸ್ವಲ್ಪವಾದರೂ ತಿಳಿದಿರುವವರಿಗಂತೂ, ಒಮ್ಮೆ ಮಂಗಳೂರಿಗೆ ಹೋಗಿ ಬಂದಂಥ ಭಾವ ಹುಟ್ಟಿಸಿಬಿಡುತ್ತದೆ.

  5. ಕನ್ನಡ ಚಿತ್ರಗಳಲ್ಲಿ ಡೈಲಾಗ್ ಗಳ ಅಬ್ಬರ ಹೆಚ್ಚು, ಏಕೆ ಬೇಕು? ದೃಶ್ಯಗಳಲ್ಲಿ ಕಥೆಯನ್ನು ಹೇಳಲು ಸಾಧ್ಯವಿಲ್ಲವೇ? ಎಂಬ ನನ್ನ ಯಾವತ್ತಿನ ಆಕ್ಷೇಪಣೆಗೆ ಉತ್ತರವಾಗಿ ‘ಉಳಿದವರು ಕಂಡಂತೆ’ ಬಂದಿದೆ. ಇಡೀ ಚಿತ್ರದಲ್ಲಿ ಸಣ್ಣ, ಸಣ್ಣ ದೃಶ್ಯಗಳು ಹೇಗೆ ದಕ್ಷಿಣ ಕನ್ನಡದ ಕಥೆಯನ್ನು ಹೇಳುತ್ತದೆ? ಎಂಬುದನ್ನು ಸಣ್ಣ ಉದಾಹರಣೆಯ ಮೂಲಕ ಹೇಳಿಬಿಡುತ್ತೇನೆ. ಮಂಗಳೂರಿನಲ್ಲಿ ಮೀನು ಮಾರುವ ಹೆಂಗಸರು ಅತ್ಯಂತ ಚಂದವಾಗಿರುತ್ತಾರೆ. ಎಲ್ಲರೂ ಒಂದೇ ಕಡೆ ವ್ಯಾಪಾರ ಮಾಡುವವರಾದ್ದರಿಂದ ಸ್ಪರ್ಧೆ ಹೆಚ್ಚು. ಅದಕ್ಕಾಗಿ ತಮ್ಮ ಮಾಲುಗಳನ್ನು ಮಾರಲು ಏನೇನೋ ಕಸರತ್ತು ಮಾಡುತ್ತಾರೆ. ಗಿರಾಕಿಗಳು ವ್ಯಾಪಾರದ ನೆಪದಿಂದ ಒಂದಿಷ್ಟು ತಮ್ಮ ಮೈ, ಕೈ ಸವರಿದರೂ ‘ಏನೂ ಆಗಿಲ್ಲವೆಂಬಂತೆ’ ಸುಮ್ಮನಾಗಿಬಿಡುತ್ತಾರೆ ಈ ಮೀನುಗಾರ್ತಿಯರು. ನಾನಿಷ್ಟು ದೊಡ್ಡದಾಗಿ ಬರೆದದ್ದನ್ನು, ಒಂದು ಸಣ್ಣ ಹಾಡಿನ ದೃಶ್ಯದಲ್ಲಿ ತೋರಿಸಿಬಿಡುತ್ತಾರೆ ನಿರ್ದೇಶಕ! ಈ ತರಹದ ಅನೇಕ ದೃಶ್ಯಗಳು ಅಲ್ಲಿ ಚಂದವಾಗಿ ಬಂದಿವೆ. ನೋಡುವ ತಾಳ್ಮೆ ಬೇಕಷ್ಟೇ!

  6. ಹಿಂದೆ ‘ಸಿಂಪಲ್ಲಾಗೊಂದು’ ಚಿತ್ರ ನೋಡಿ, ಅದರಲ್ಲಿದ್ದ ಡೈಲಾಗ್ ಗಳ ಸುರಿಮಳೆಗೆ ನಾನು ಇನ್ನಿಲ್ಲದಂತೆ ಆ ಚಿತ್ರದ ನಿರ್ದೇಶಕ ‘ಸುನಿ’ ಹಾಗೂ ನಟಿಸಿದ ‘ರಕ್ಷಿತ್’ ಗೆ ಅಕ್ಷರಶಃ ಬೈದಿದ್ದೆ. ಯೋಗರಾಜ್ ಭಟ್ಟರನ್ನು ಯಥಾವತ್ತಾಗಿ ನಕಲಿಸಿದ್ದಾರೆ ಎಂದೇ ಹೇಳಿಬಿಟ್ಟಿದ್ದೆ. ಆದರೆ ‘ಉಳಿದವರು ಕಂಡಂತೆ’ ನೋಡಿದ ಮೇಲೆ, ಇಂತಹ ಚಿತ್ರವನ್ನು ನಿರ್ಮಾಣ ಮಾಡಲು ಒಪ್ಪಿಕೊಂಡ ‘ಸುನಿ’ ಹಾಗೂ ನಟಿಸಿ, ನಿರ್ದೇಶಿಸಿದ ‘ರಕ್ಷಿತ್’ ಗೆ ನನ್ನ ಕಡೆಯಿಂದ ‘ಹ್ಯಾಟ್ಸ್ ಆಫ್’. ಕನ್ನಡ ಚಿತ್ರರಂಗದಲ್ಲಿ ದುನಿಯಾ ‘ಸೂರಿ’ ಹಾಗೂ ಯೋಗರಾಜ್ ಭಟ್ಟರಿಗೆ ಯಾರಾದರೂ ಸಡ್ಡು ಹೊಡೆಯುತ್ತಾರೆಂದರೇ ಅದು ನಿಜವಾಗಿಯೂ ನಿರ್ದೇಶಕ ‘ರಕ್ಷಿತ್’ ನಿಂದಲೇ ಸಾಧ್ಯ!

  7. ಒಂದೆಡೆ ಕನ್ನಡದಲ್ಲಿ ಒಳ್ಳೆಯ ಚಿತ್ರಗಳೇ ಇಲ್ಲವೆಂದು ಬೊಬ್ಬೆ ಹೊಡೆಯುತ್ತೇವೆ. ಅದದೇ ಮಚ್ಚು, ಲಾಂಗು, ರೌಡಿಸಂ, ಐಟಮ್ ನೃತ್ಯಗಳು, ನಾಯಕ ಪ್ರಧಾನ ಚಿತ್ರಗಳೆಂದು ಮೂಗು ಮುರಿಯುತ್ತೇವೆ. ಅದ್ಯಾವುದೋ ಬಾಲಿವುಡ್ ನ ಚಿತ್ರಗಳು, ತಮಿಳು, ತೆಲುಗುನಲ್ಲಿ ಯಶಸ್ವಿಯಾದದ್ದನ್ನು ತಂದು, ಇಲ್ಲಿ ರಿಮೇಕ್ ಮಾಡಿ ಕೊಟ್ಟರೆ, ಸ್ವಂತಿಕೆ ಇಲ್ಲ, ಕನ್ನಡದ ಸೊಗಡಿಲ್ಲ ಎಂದು ಹೀಗಳೆಯುತ್ತೇವೆ. ಕೊನೆಗೊಮ್ಮೆ, ನಮ್ಮ ಯುವ ನಿರ್ದೇಶಕರು, ನಿರ್ಮಾಪಕರು ಧೈರ್ಯ ಮಾಡಿ, ‘ನಮ್ಮಲ್ಲೂ ಪ್ರತಿಭೆ ಇದೆ, ತೆಗೆದುಕೊಳ್ಳಿ, ಈಗ ಮಾತಾಡಿ’ ಎಂದೊಡನೆ, ಚಿತ್ರ ಅರ್ಥವಾಗುತ್ತಿಲ್ಲ, ಕ್ಲೈಮಾಕ್ಸ್ ಹೀಗಿರಬೇಕಿತ್ತು, ಹಾಲಿವುಡ್, ಬಾಲಿವುಡ್ ಚಿತ್ರಗಳ ಪ್ರೇರಣೆಯಂತಿದೆ ಎಂದು ಹೇಳಿ ಉತ್ಸಾಹ ಭಂಗ ಮಾಡುತ್ತೇವೆ.

  8. ‘ಉಳಿದವರು ಕಂಡಂತೆ’ ಚಿತ್ರದ ಬಗೆಗಿನ ಒಂದಷ್ಟು ಪತ್ರಿಕಾ ವಿಮರ್ಶಕರು ಬರೆದ ವಿಮರ್ಶೆಗಳನ್ನು ಓದಿದ್ದೆ. ನಾನೇ ನೋಡಿ, ನಂತರ ನಿಶ್ಚಿತ ಅಭಿಪ್ರಾಯಕ್ಕೆ ಬರುವುದೊಳ್ಳೆಯದು ಎಂದೇ ನಿರ್ಧರಿಸಿದ್ದೆ. ಆದರೆ ಚಿತ್ರ ನೋಡಿ ಬಂದ ಮೇಲೆ ಅನಿಸುತ್ತಿದೆ. ಇಂತಹ ಚಿತ್ರ ಅರ್ಥವಾಗುವುದಿಲ್ಲ ಎಂದು ಹೇಳಿದ ವಿಮರ್ಶಕರ ವಿಮರ್ಶೆಗಳನ್ನೇ ಇನ್ನು ಮುಂದೆ ಓದದಿರುವುದು ಒಳ್ಳೆಯದು. ಕನ್ನಡ ಪ್ರೇಕ್ಷಕರನ್ನು ಬೆಳೆಸಬೇಕು, ಕನ್ನಡ ಪ್ರೇಕ್ಷಕರಿಗೆ ಇಂತಹ ಚಿತ್ರಗಳು ಅರ್ಥವಾಗುವುದಿಲ್ಲ ಎನ್ನುವುದು, ನಮಗೆಲ್ಲಾ ಅವಮಾನ ಮಾಡಿದಂತಲ್ಲವೇ? ಅಂತಹ ಕಾಂಪ್ಲೆಕ್ಸ್ ಚಿತ್ರವೇನಲ್ಲ ‘ಉಳಿದವರು ಕಂಡಂತೆ’
     

ಫೇಸ್ ಬುಕ್ ಸ್ಟೇಟಸ್ ಗಳೂ!

ಕೆಲವು ತಿಂಗಳುಗಳ ಹಿಂದೆ ಕಾವ್ಯಕಮ್ಮಟವೆಂದರೆ ಹೇಗಿರಬಹುದು? ಎನ್ನುವ ಕುತೂಹಲ ತಣಿಸಿಕೊಳ್ಳಲು ಹೋಗಿದ್ದೆ. ಅಲ್ಲಿ ನನಗಾದ ಒಂದಿಷ್ಟು ಅನುಭವಗಳನ್ನು, ಹೀಗೆಯೇ ಫೇಸ್ ಬುಕ್ಕಿನಲ್ಲಿ ಹಾಕಿಕೊಂಡಿದ್ದೆ. ಈ ಫೇಸ್ ಬುಕ್ಕಿನಲ್ಲಿ ಒಂದಷ್ಟು ದಿವಸಗಳಾದ ಮೇಲೆ, ನಮ್ಮೆಲ್ಲಾ ಸ್ಟೇಟಸ್ ಗಳು ತಳ ಕಾಣುವುದರಿಂದ, ಜೊತೆಗೆ ನಾನೆಲ್ಲೂ ಇದನ್ನು ಬರೆದಿಟ್ಟುಕೊಳ್ಳದ್ದರಿಂದ, ನನ್ನ ದೃಷ್ಟಿಯಲ್ಲಿ ನನಗಿವು ಮುಖ್ಯ ಅನ್ನಿಸಿದ್ದರಿಂದ, ಬ್ಲಾಗ್ ಗೆ ಎಲ್ಲವನ್ನೂ ಕಾಪಿ ಮಾಡಿಟ್ಟಿದ್ದೇನೆ.  ಓದಿ ನೋಡಿ! :-)

ಹೀಗೊಂದು ಘೋಷಣೆ!

ನಾನು ಕಾವ್ಯಕಮ್ಮಟದ ಬಗ್ಗೆ ಬರೆದಿರುವುದೆಲ್ಲಾ ನಾ ಕಂಡುಕೊಂಡ ಸತ್ಯ, ಕಾವ್ಯಕಮ್ಮಟದಲ್ಲಿ ಹೇಳಿಕೊಟ್ಟಿರುವುದಲ್ಲಾ ! ಕಾವ್ಯಕಮ್ಮಟಕ್ಕೂ ನನ್ನ ಹೇಳಿಕೆಗಳಿಗೂ ಸಂಬಂಧವಿಲ್ಲ!

೧.  ಗುಂಪುಗಾರಿಕೆ ರಾಜಕಾರಣಿಗಳ ಸ್ವತ್ತು ಎಂದುಕೊಂಡಿದ್ದೆ. ಉಹೂ! ಇದಕ್ಕೆ ಯಾವ ರಂಗದವರು ಹೊರತಲ್ಲ ಸಾಹಿತಿಗಳು / ಹಿರಿತೆರೆ / ಕಿರುತೆರೆ etc., et..... ಅದರಲ್ಲೂ ನಮ್ಮ ಸಾಹಿತಿಗಳೇ (ಸ್ವಘೋಷಿತರು) ರಾಜಕೀಯ ಮಾಡುವುದನ್ನು ನೋಡಿದಾಗ ಅನಿಸಿದ್ದು - ಈಗಿರುವುದು ಎರಡೇ ಜಾತಿಗಳು - ಶ್ರೀಮಂತ, ಬಡವ. ಇದನ್ನರಿತು, ನಮ್ಮ ಹಿರಿ, ಕಿರಿ, ಮರಿ ಸಾಹಿತಿಗಳೆಲ್ಲರೂ ಇನ್ಯಾವುದೇ ಬ್ರಾಹ್ಮಣ, ದಲಿತ, ಬಂಡಾಯ, ಕ್ರಾಂತಿ ಕಡೆಗೆ ಗಮನ ಹರಿಸದೆ, ತಮ್ಮ ಪಾಡಿಗೇ ತಮ್ಮ ಓದು, ಬರಹಗಳಲ್ಲಿ ತೊಡಗಿಸಿಕೊಳ್ಳುವುದು! ರಾಜಕೀಯವನ್ನು ರಾಜಕಾರಣಿಗಳಿಗೆ ಬಿಟ್ಟು ಕೊಡುವುದು! :-)

೨.  ನಮ್ಮ ‘ಲೇಡಿ’ ಸಾಹಿತಿಗಳು ತಮ್ಮ ಸೆಕ್ಶುಯಾಲಿಟಿ ಪ್ರದರ್ಶನ ಮಾಡದೇ ಇಂಟೆಲೆಕ್ಚುಯಾಲಿಟಿಯನ್ನು ತೋರಿಸುವುದು!

೩.  ಹೇಗೆ ನಮ್ಮ ಕಿರಿ, ಮರಿ ಸಾಹಿತಿಗಳು ಹಿಂದಿನ ಪಂಪ, ರನ್ನ, ಕುವೆಂಪು ಇವರನ್ನೆಲ್ಲಾ ಓದಬೇಕಿದೆಯೋ, ಅಷ್ಟೇ ಅವಶ್ಯಕತೆ ನಮ್ಮ ಹಿರಿ ಸಾಹಿತಿಗಳು ಆನ್ಲೈನ್ ಮೀಡಿಯಾಗಳ ಬಗ್ಗೆ ಅಪ್ಡೇಟ್ ಆಗಬೇಕಿರುವುದು!

೪. ಅರ್ಥವಾದದ್ದು! - ಪರಂಪರೆ ಮತ್ತು ಪ್ರತಿಭೆ ಇದ್ದರೆ ಮಾತ್ರ ಕಾವ್ಯಸೃಷ್ಟಿ ಸಾಧ್ಯ.

೫. ಕೇಳಿದ್ದು! - Interpretations are extravagant! :)

೬. ಮನ ಚಿಂತೆಗೀಡಾದದ್ದು! - ಸ್ತ್ರೀವಾದವೆಂದರೆ?.........
     ಸ್ತ್ರೀವಾದವೆಂದರೆ ಗಂಡಿಗೆ ಸಮನಾಗಿ ಕಾಮಿಸುವುದಲ್ಲ!
     ಹೆಣ್ತನವನ್ನು ಗೌರವಿಸುತ್ತಾ ಬದುಕುವುದು!

೭. ಬಹಳ ಬೇಸರವಾಗಿದ್ದು - ಇವತ್ತಿಗೂ ಕೆಲ ಬುದ್ಧಿಜೀವಿಗಳು ಹೆಂಗಸರನ್ನು ಕಮಾಡಿಟಿಯಾಗಿಯೇ ನೋಡುವುದು! ಕೆಲ ಹೆಂಗಸರು ತಾವು ಬುದ್ಧಿಜೀವಿಗಳಾಗಬೇಕೆಂದು, ತಮ್ಮ ಹೆಣ್ತನವನ್ನು ಬಳಸುವುದು. ಇದಕ್ಕೆ ದೊಡ್ಡವರು, ಚಿಕ್ಕವರು ಎಂಬ ವಯಸ್ಸಿನ ಬೇಧಭಾವವಿಲ್ಲ.

೮. ಬುದ್ಧ ಪ್ರೇಮಿ ಬೇಸ್ತು ಬಿದ್ದ ಪ್ರಸಂಗ! - ನನ್ನ ಪ್ರಶ್ನೆಗಳಿಗೆ ವೈಯಕ್ತಿಕವಾಗಿ ಉತ್ತರಿಸಲು, ತೋಳೇರಿಸಿದ ‘ಬುದ್ಧ ಪ್ರೇಮಿ’, ನಾನ್ಯಾರೆಂದು ತಿಳಿಯದೇ ಪೆಚ್ಚಾದದ್ದು! ಅಬ್ಬರಿಸಿ ಬೊಬ್ಬಿರಿದರಿಲ್ಲಾರಿಗೂ ಭಯವಿಲ್ಲ!

೯. ಪಸರಿಸಿದ ಹೊಸ ಘಮಲು! - ಅಮ್ಮನಾದ ಫೇಸ್ ಬುಕ್, ಭಕ್ತಿ ಪರಾಕಾಷ್ಠೆಯಿಂದ ಕಾಮದ ಉತ್ತುಂಗಕ್ಕೇರಿದ ‘ಅಕ್ಕ’!

೧೦. ಕಿರಿಕಿರಿಯಾದದ್ದು! - ಬಿಂಬ ಪ್ರತಿಬಿಂಬ! ಪದಗಳು ಅರ್ಥವಾಗದಿದ್ದದ್ದು!

೧೧. ತಲೆ ಕೆಡಿಸಿದ್ದು! - ವಿಷಯಕ್ಕಿಂತ ಯಾರು, ಯಾವ ಪೊಸಿಷನಲ್ಲಿದ್ದು ಮಾತಾಡ್ತಿದ್ದಾರೆ ಅನ್ನೋದು ಅತಿ ಮುಖ್ಯವಾಗುತ್ತದೆ! ಎಂಬುವುದು

೧೨. ಮರೆತು ಹೋದದ್ದು! - ಒಡೆದು ಕಟ್ಟುವ ಪ್ರಾಸೆಸ್ ನಲ್ಲಿ, ಎಲ್ಲರೂ ಇನ್ನೂ ಒಡೆಯುತ್ತಲೇ ಇರುವುದು ಮತ್ತು ಕಟ್ಟುವ ಉತ್ಸಾಹ ಯಾರಿಗೂ ಇಲ್ಲದಿರುವುದು!

೧೩.  Last but not the least ಕಾವ್ಯಕಮ್ಮಟದಲ್ಲಿ ಜ್ಞಾನೋದಯವಾದದ್ದು / ಗೊಂದಲಗೊಂಡದ್ದು! -
ಓದಿಕೊಂಡವರೆಲ್ಲಾ ಜ್ಞಾನಿಗಳಲ್ಲ!
ಬರೆದವರೆಲ್ಲಾ ಅರಿತವರಲ್ಲಾ!
ಓದುವುದು ಮುಖ್ಯ, ಬರೆಯಲು!
ಬರೆಯುವುದು ಮುಖ್ಯ, ಬರೆಯಲು!

೧೪. ಮೈಕ್ ತುಂಬಾ ಮಾತಾಡುತ್ತೆ, ಮನುಷ್ಯರಿಗಿಂತ.

೧೫.  ತೂಕಬದ್ಧ ಮಾತುಗಳಿಗೆ ಪರಂಪರೆ ಬೇಕು. ಅವನ್ನು ಸುಂದರವಾಗಿ ಹೆಣೆಯಲು ಪ್ರತಿಭೆ ಬೇಕು!

ಉಸ್ಸಪ್ಪಾ! ಮುಗೀತು!

ಸೂರ್ಯೋದಯಕ್ಕೆ ಕಾಯುತ್ತಿರುವಾಗ, ಕಮ್ಮಟದಲ್ಲಿ ಹಿಂದಿನ ದಿವಸ ನಡೆದ ಘಟನೆಗಳನ್ನು ಮೆಲಕು ಹಾಕುತ್ತಾ, ಆಕಾಶದೆಡೆ ನೋಡುತ್ತಾ ಕುಳಿತಾಗ ಹೊಳೆದಿದ್ದು! -

ಹುಟ್ಟಬೇಕಿದೆ ನಮ್ಮಲ್ಲೊಬ್ಬ ಕುವೆಂಪು, ಬೇಂದ್ರೆ, ಅಡಿಗ!

ಹುಟ್ಟಬೇಕಿದೆ ನಮ್ಮಲೊಬ್ಬ ಕುವೆಂಪು, ಬೇಂದ್ರೆ, ಅಡಿಗ!

ನವಿಲುಕಲ್ಲಿನಲ್ಲಿ ನೆಟ್ಟದ್ದು ಶೂನ್ಯ ನೋಟ,
ನಭೋಮಂಡಲದಲ್ಲಿ ತಾರೆಗಳ ಕೂಟ
ಮನದಲ್ಲಿ ಆಲೋಚನೆಗಳ ಮೆರವಣಿಗೆ,
ಪಲ್ಲಕ್ಕಿ ಹೊತ್ತದ್ದು ಜಾತೀಯ, ಜಾಗತಿಕ ಸಮಸ್ಯೆ
ಮರೆತಿದ್ದಾನೆ, ಮನುಷ್ಯ ಜಾತಿ ತಾನೊಂದೇ ವಲಂ,
ಆಗಿರುವನು ಶೂದ್ರ ತಪಸ್ವಿ ಮೌನ,
ಗಾಳಿಯ ಮಾತುಗಳದ್ದೇ ಅಬ್ಬರ

ಬುದ್ಧ, ಬಸವಣ್ಣ, ಗಾಂಧಿ ಅಮರರಾದರು,
ಕಡಲಿನಲೆಯ ಮೊರೆತದಲಿ
ಕ್ಷೀಣವಾದದ್ದು ವಿಶ್ವಮಾನವ ತತ್ವಗಳು,
ಬೇಕೇ ಪಂಪ, ರನ್ನ, ಕುವೆಂಪು?
ಅಹುದಹುದು! ಎಂದೆಯಾ?
ಪಕ್ಕದಲ್ಲಿಯೇ ಅಪ್ಪ ಹಾಕಿದ ಆಲದಮರ!
ದೂರದಲ್ಲೆಲ್ಲೋ ಹಕ್ಕಿಗಳ ಇಂಚರ!

ಅಗೋ ನೋಡಲ್ಲಿ ‘ಉದಯ ರವಿ’
ಮರೆಯಾಗಿರುವ ‘ಪೂರ್ಣಚಂದ್ರ’
ಮನದಲ್ಲಿ ಹೆಪ್ಪುಗಟ್ಟಿರುವ ಹಿಮಾಲಯ
ಕೆಂಪಾದ, ಮಸುಕು ಮಲೆನಾಡು
ಒಡೆದು ಕಟ್ಟಲು ಇದು ಮನೆಯಲ್ಲ
ಸ್ವಾತಿ ಮುತ್ತಾಗಲು ತಾಳ್ಮೆ ಬೇಕು
ಕಲಿಸುವ, ಕಲಿಯುವ ಸಹನೆ ಇಬ್ಬರಿಗೂ ಬೇಕು

ಹುಟ್ಟಬೇಕಿದೆ ನಮ್ಮಲ್ಲೊಬ್ಬ ಕುವೆಂಪು, ಬೇಂದ್ರೆ, ಅಡಿಗ :-)

(ರಾಜಕಾರಣ ಮಾಡುತ್ತಿರುವ ಸಾಹಿತಿಗಳನ್ನು ನೋಡಿದಾಗ ಅನ್ನಿಸಿದ್ದು - ಇವರೆಲ್ಲಾ ರಾಜಕೀಯಕ್ಕೆ ಇಳಿದಿದ್ದರೆ ಈಗಿರುವ ಎಲ್ಲಾ ರಾಜಕಾರಣಿಗಳನ್ನೂ ಬೀಸಿ ಒಗೆಯಬಹುದು. ಅಷ್ಟರ ಮಟ್ಟಿಗೆ ರಾಜಕಾರಣ ಇವರಿಗೆ ಒಲಿದಿದೆ) 

Tuesday, April 15, 2014

ತೊತ್ತೊ-ಚಾನ್ - ಪೋಷಕರು ಓದಬೇಕಾದ ಮಕ್ಕಳ ಪುಸ್ತಕ!

ತೊತ್ತೊ-ಚಾನ್ - ಜಪಾನಿನ ತೆತ್ಸುಕೊ ಕುರೊಯಾನಾಗಿ ಎಂಬಾಕೆ ತಾನು ಓದಿದ ವಿಶಿಷ್ಠ, ಪುಟ್ಟ ಶಾಲೆಯ ಬಗ್ಗೆ ಬರೆದ ಪುಸ್ತಕ. ಮಕ್ಕಳ ಸೃಜನಶೀಲ ಕಲಿಕೆಯ ಬಗ್ಗೆ ಆಸಕ್ತಿ ಹುಟ್ಟಿಸುವ ಕೃತಿ.  ಇದು ಸುಮಾರು ೧೯೭೮ ರಲ್ಲಿ ಪ್ರಕಟಗೊಂಡಾಗ, ಜಪಾನಿನಲ್ಲಿ ಮಕ್ಕಳ ಶಿಕ್ಷಣ ಹೇಗಿರಬೇಕು? ಎಂಬುದರ ಬಗ್ಗೆ ದೊಡ್ಡ ಅಲೆಯನ್ನೆಬ್ಬಿಸಿಬಿಟ್ಟಿತ್ತು.  ಅಂದಿನಿಂದ ಇಂದಿನವರೆಗೆ ಸುಮಾರು ೬೦ ಲಕ್ಷ ಪ್ರತಿಗಳು ಪ್ರಕಟಗೊಂಡಿವೆ ಹಾಗೂ ಅಸಂಖ್ಯಾತ ಭಾಷೆಗಳಲ್ಲಿ ಪುಸ್ತಕವು ಅನುವಾದಗೊಂಡಿದೆ.  ತೊತ್ತೊಚಾನ್ ಓದುವಾಗ ಪ್ರತಿ ಪುಟ, ಪುಟದಲ್ಲೂ ನನ್ನ ಪುಟ್ಟ ಮಗನೇ ಕಾಣಿಸುತಿದ್ದು, ತೊತ್ತೊಚಾನ್ ಬೇರೆ ಅಲ್ಲ, ನನ್ನ ಮಗ ಬೇರೆ ಅಲ್ಲ ಅನಿಸಿಬಿಟ್ಟಿತು.

ಲೇಖಕಿ ತೆತ್ಸುಕೋ ಳನ್ನು (ಈಗ ೮೦ವರ್ಷ) ಚಿಕ್ಕಂದಿನಲ್ಲಿ  ಪ್ರೀತಿಯಿಂದ ತೊತ್ತೊಚಾನ್ ಎಂದು ಕರೆಯುತ್ತಿರುತ್ತಾರೆ.  ಎಲ್ಲಾ ಮಕ್ಕಳ ಹಾಗೇ ತೊತ್ತೊಚಾನ್ ಅತ್ಯಂತ ತುಂಟಿ ಹಾಗೂ ಓದು, ಬರಹಗಳಲ್ಲಿ ಆಕೆಯ ಗಮನವನ್ನು ಸೆಳೆದಿಟ್ಟುಕೊಳ್ಳುವುದು ಬಹಳ ಕಷ್ಟ.  ಶಾಲೆಯಲ್ಲಿ, ತರಗತಿಯಲ್ಲಿ ಆಕೆಯ ತುಂಟತನವನ್ನು ತಡೆಯಲಾರದೇ, ತಮ್ಮ ಶಾಲೆಯಿಂದ ತೆಗೆದುಬಿಡುತ್ತಾರೆ.  ಆಗ ಆಕೆಗೆ ಕೇವಲ ೬, ೭ ವರ್ಷ.  ಅವಳ ಅಮ್ಮ, ಈ ವಿಷಯ ಆಕೆಗೆ ತಿಳಿಸದೇ, ಮತ್ತೊಂದು ಶಾಲೆಗೆ ಸೇರಿಸಲು ಕರೆದುಕೊಂಡು ಹೋಗುತ್ತಾರೆ.  ಅಲ್ಲಿಂದ, ತೊತ್ತೊಚಾನ್ ನ ವಿಶಿಷ್ಠ ಶಾಲೆ ‘ತೊಮೊಯೆ’ ಗೆ ಪಯಣ ಶುರುವಾಗುತ್ತದೆ.

‘ತೊಮೊಯೆ’ ಕೊಬಾಯಾಶಿ ಎಂಬುವವರ ಕನಸಿನ ಕೂಸು.  ಮಕ್ಕಳನ್ನು ಮಕ್ಕಳ ಹಾಗೆಯೇ ಬೆಳೆಸಬೇಕು, ರೇಸ್ ಕುದುರೆಗಳಂತಲ್ಲ! ಎಂಬುದರಲ್ಲಿ ಅಪಾರ ನಂಬಿಕೆಯಿಟ್ಟಿದ್ದವರು. ಹಾಗಾಗಿ ಅವರ ಶಾಲೆಯಲ್ಲಿ ಯಾವುದೇ ರೀತಿಯ ನಿಯಮಾವಳಿಗಳು ಇರಲಿಲ್ಲ. ಕಲಿಕೆ ಎಂಬುದು ಸ್ವಚ್ಚಂದವಾಗಿ ಮಕ್ಕಳು ಆಹ್ಲಾದಿಸಬೇಕೇ ಹೊರತು ಒತ್ತಾಯದಿಂದ ಓದುವುದಲ್ಲ ಎಂದು ನಂಬಿದ್ದ ಅವರು, ಅದಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟರು.  ‘ತೊಮೊಯೆ’ ಪ್ರಾರಂಭಿಸುವ ಮುನ್ನಾ, ಪ್ರಪಂಚದ ಅನೇಕ ಶಾಲೆಗಳಿಗೆ ಭೇಟಿ ನೀಡಿ, ತಮ್ಮ ಶಾಲೆ ಹೇಗಿರಬೇಕು? ಎಂಬುದರ ಬಗ್ಗೆ ಖಚಿತ ಅಭಿಪ್ರಾಯ ಹೊಂದಿದ್ದರು.  ಅದ್ಭುತ ಶಿಕ್ಷಕ! ನಮ್ಮ ಮಕ್ಕಳಿಗೆ ಇಂತಹ ಒಬ್ಬ ಶಿಕ್ಷಕ ಸಿಕ್ಕರೂ ಸಾಕು ಎಂಬ ಬಯಕೆ ಪ್ರತಿಯೊಬ್ಬರಲ್ಲೂ ಉಂಟು ಮಾಡುವಂತಹ ವ್ಯಕ್ತಿ.

‘ತೊಮೊಯೆ’ ಶಾಲೆಯ ಕಟ್ಟಡವೇ ಅತ್ಯಂತ ಸೊಗಸು. ರೈಲು ಗಾಡಿಗಳದ್ದು! ಇಂತಹ ಕಲ್ಪನೆಯಾದರೂ ನಮಗೆ ಬರಬಹುದೇ? ಪುಟ್ಟ, ಪುಟ್ಟ ಮಕ್ಕಳಿಗೆ ರೈಲಿನ ಪ್ರಯಾಣ ಎಂದರೆ ಬಹಳ ಇಷ್ಟವಲ್ಲವೇ?  ಇನ್ನೂ ಅಂತಹ ರೈಲು ಗಾಡಿಯೇ ಶಾಲೆಯಾಗಿಬಿಟ್ಟರೆ?  ಓದಿನ ಸುಖ! ಆಹಾ! :-)  ಶಾಲೆಯೆಂದರೆ ಜೈಲು ಎಂದುಕೊಂಡಿದ್ದ ತೊತ್ತೊಚಾನ್, ‘ತೊಮೊಯೆ’ ಪ್ರವೇಶಿಸಿದೊಡನೆಯೇ, ಈ ರೈಲು ಗಾಡಿಯನ್ನು ನೋಡಿ ದಂಗಾಗಿಬಿಡುತ್ತಾಳೆ.  ಇದೇ ಶಾಲೆಗೆ ಸೇರಬೇಕು ಎಂದು ನಿಶ್ಚಯಿಸಿಬಿಡುತ್ತಾಳೆ.  ಆದರೆ ಈಗಾಗಲೇ ಒಂದು ಶಾಲೆಯಿಂದ ಹೊರದಬ್ಬಿಸಿಕೊಂಡಿರುವ ಈ ‘ತುಂಟಿ’ ಯನ್ನು, ಕೊಬಾಯಾಶಿ ಸೇರಿಸಿಕೊಳ್ಳುವರೇ? ಎಂಬುದು ‘ಅಮ್ಮ’ ನ ತಾಕಲಾಟ. ಇವಾವುದರ ಅರಿವಿಲ್ಲದೆ, ಮುಖ್ಯೋಪಾಧ್ಯಾಯರ ಕೋಣೆಯನ್ನು ಪ್ರವೇಶಿಸುವ ಪುಟ್ಟ ಹುಡುಗಿ ತೊತ್ತೊ-ಚಾನ್, ಸುಮಾರು ೪ ಗಂಟೆಗಳ ಕಾಲ ಕೊಬಾಯಾಶಿಯವರೊಂದಿಗೆ ಮಾತಾಡುತ್ತಾಳೆ! ಯಾರ ಸಂದರ್ಶನ ಯಾರು ಮಾಡಿದ್ದು? :-)  ಪುಸ್ತಕವನ್ನು ಓದಿಯೇ ತಿಳಿಯಬೇಕು.

ಹೀಗೆ ಶುರುವಾಗುವ ತೊತ್ತೊಚಾನ್ ನ ‘ತೊಮೊಯೆ’ ಯ ಕಥೆ, ಆ ಬಾಲ ಭಾಷೆಯಲ್ಲಿಯೇ ಮುಂದುವರೆಯುತ್ತದೆ. ಓದುವ ಪ್ರತಿಯೊಬ್ಬರೂ ೬,೭ ವರ್ಷದವರಾಗುತ್ತಾರೆ! ಅನೇಕ ಪುಟ್ಟ, ಪುಟ್ಟ ಘಟನೆಗಳು ‘ಹಿರಿಯರ’ ದೃಷ್ಠಿಯಲ್ಲಿ ‘ಕೆಲಸಕ್ಕೆ ಬಾರದಂತದ್ದು, ತುಂಟತನದ್ದೋ ಅಥವಾ ಕಿರಿಕಿರಿಯದ್ದೋ, ಇವೆಲ್ಲವೂ ಆ ಪುಟ್ಟ ಹುಡುಗಿಯ ಕಣ್ಗಳಲ್ಲಿ ಮಹತ್ತರವಾಗಿ ಕಾಣುತ್ತದೆ. ಒಂದು ಪುಟ್ಟ ಘಟನೆ - ತೊತ್ತೊಚಾನ್ ಳ ಪರ್ಸ್ ಒಮ್ಮೆ ಶಾಲೆಯ ಕಕ್ಕಸು ಗುಂಡಿಯಲ್ಲಿ ಬಿದ್ದು ಹೋಗುತ್ತದೆ.  ಆಕೆ ಅದನ್ನು ಅಲ್ಲಿಯೇ ಬಿಟ್ಟುಬಿಡಲು ತಯಾರಿರುವುದಿಲ್ಲ. ಹಾಗಾಗಿ ಯೋಚಿಸಿ, ತೋಟದ ಕೆಲಸಕ್ಕಾಗಿ ತಂದಿದ್ದ ದೊಡ್ಡ ಸಟ್ಟುಗವನ್ನು ತಂದು, ಅಗೆಯಲು ಶುರು ಮಾಡುತ್ತಾಳೆ, ಕೊಬಾಯಾಶಿ ಬಂದವರು ಆಕೆಯನ್ನು, ಆಕೆಯ ಪಕ್ಕ ರಾಶಿ ಬಿದ್ದಿದ್ದ ಕೊಳಕನ್ನು ನೋಡಿ ಏನಾಗಿದೆ? ಎಂದು ವಿಚಾರಿಸುತ್ತಾರೆ.  ಪರ್ಸ್ ಕಳೆದು ಹೋದ ವಿಚಾರ ತಿಳಿದು, ‘ಸರಿ, ಎಲ್ಲಾ ಆದ ಮೇಲೆ, ಮತ್ತೆ ಆ ಕೊಳಕನ್ನು ವಾಪಾಸು ಆ ಗುಂಡಿಗೆ ತುಂಬಿಬಿಡು’ ಎಂದು ಹೇಳಿ ಹೊರನಡೆಯುತ್ತಾರೆ.  ಸುಮಾರು ಹೊತ್ತಿನ ನಂತರವೂ ಅವಳನ್ನು ‘ಪರ್ಸ್ ಸಿಕ್ಕಿತೇ?’ ಎಂದು ಕೇಳುವರೇ ಹೊರತು ಇನ್ನೇನೂ ಹೇಳುವುದಿಲ್ಲ. ಕೊನೆಗೂ ಪರ್ಸ್ ಸಿಕ್ಕದೇ, ತೊತ್ತೊಚಾನ್ ನಿರಾಶಳಾಗಿ, ದುರ್ಗಂಧ ಬೀರುತ್ತಿದ್ದ ಆ ಕೊಳಕನ್ನು ಮತ್ತೆ ಗುಂಡಿಗೆ ತುಂಬಿಸಿ ಹೊರಡುತ್ತಾಳೆ!

ಮಧ್ಯಾಹ್ನದ ಆ ಮಕ್ಕಳ ಊಟವಂತೂ ನಿಜಕ್ಕೂ ಚಂದ. ‘ಒಂದಿಷ್ಟು ನೆಲದ್ದು, ಒಂದಿಷ್ಟು ಜಲದ್ದು’ ತೆಗೆದುಕೊಂಡು ಬರಬೇಕು ಮತ್ತು ಊಟಕ್ಕೂ ಮುನ್ನಾ ಅವರ ಪಾರ್ಥನೆ ‘ಅಗಿಯಿರಿ, ಅಗಿದು ತಿನ್ನಿರಿ’ ಎನ್ನುವ ಪುಟ್ಟ ಪದ್ಯವಾಗಿರುತ್ತದೆ.  ಊಟವಾದ ನಂತರ ಮಕ್ಕಳ ಇಷ್ಟದ ಹಾಗೇ ವಾಕಿಂಗ್ ಅಥವಾ ಈಜುವುದೋ ಮುಂತಾದ ಚಟುವಟಿಕೆಗಳಲ್ಲಿ ತೊಡಗುತ್ತಿದ್ದರು. ಅಮೇರಿಕಾದಿಂದ ಪುಟ್ಟ ಹುಡುಗನೊಬ್ಬ ಈ ಶಾಲೆಗೆ ಬಂದು ಸೇರುತ್ತಾನೆ.  ಅವನಿಗೆ ಈ ಮಕ್ಕಳು ಜಪಾನೀಸ್ ಕಲಿಸುವುದು, ಆತನಿಂದ ಇಂಗ್ಲೀಷ್ ಭಾಷೆ ಕಲಿಯುತ್ತಾ ಹೋಗುತ್ತಾರೆ.  ಅಂಗವಿಕಲರು, ಹೆಣ್ಣು ಮಕ್ಕಳು, ಗಂಡು ಮಕ್ಕಳು, ಜಪಾನೀಯರು, ಅಮೇರಿಕನ್ನರು ಎನ್ನುವ ಬೇಧಭಾವವಿಲ್ಲದೇ, ಯಾರಿಗೂ ಕೂಡ ಮುಜುಗರವಾಗದಂತಹ, ಎಲ್ಲರಲ್ಲೂ ಆತ್ಮವಿಶ್ವಾಸ ಉಕ್ಕುವಂತಹ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸುತ್ತಿದ್ದರು. ಸಂಗೀತ ಕಲಿಯುತ್ತಿದ್ದರು,  ಬೇಸಿಗೆಯಲ್ಲಿ ಕ್ಯಾಂಪು ಹಾಕುತ್ತಿದ್ದರು, ಪ್ರವಾಸಕ್ಕೆ ಹೋಗುತ್ತಿದ್ದರು, ಶಾಲೆಯಲ್ಲಿಯೇ ‘ನೈಟ್ ಔಟ್’ ಮಾಡುತ್ತಿದ್ದರು, ಅಡುಗೆ ಮಾಡುತ್ತಿದ್ದರು,ಇಷ್ಟವಿದ್ದವರೂ ವಿಜ್ಞಾನ ಪ್ರಯೋಗಗಳಲ್ಲಿ ತೊಡಗುತ್ತಿದ್ದರು ಹೀಗೆ..... ಮಗುವೊಂದು ‘ದೊಡ್ಡವ’ನಾಗಿ ಬೆಳೆಯಲು ಬೇಕಾದ ಎಲ್ಲವನ್ನೂ ಹೇಳಿಕೊಡುತ್ತಿದ್ದರು.  ಮಕ್ಕಳು ಅದನ್ನೊಂದು ಶಿಕ್ಷೆ ಎಂಬಂತೆ ಅನುಭವಿಸದೇ, ಆನಂದದಿಂದ ‘ದೊಡ್ಡವ’ರಾಗುತ್ತಿದ್ದರು.

ಕೇವಲ ೫೦ ಮಕ್ಕಳಿಗಿಂತ ಕಡಿಮೆ ಇದ್ದ ‘ತೊಮೊಯೆ’ ಶಾಲೆಗೆ ಯುದ್ಧದ ಭೀತಿ ಆವರಿಸುತ್ತದೆ.  ಆದರೆ ಮಕ್ಕಳಿಗೆ ಮಾತ್ರ ಇದಾವುದರ ಅರಿವಿಲ್ಲದಂತೆ ನೋಡಿಕೊಳ್ಳುತ್ತಾರೆ.  ಆದರೆ ಬಾಂಬ್ ದಾಳಿಯಿಂದ ‘ತೊಮೊಯೆ’ ನಾಶವಾಗಿಬಿಡುತ್ತದೆ.  ಕೊಬಾಯಾಶಿಯವರಿಗೆ ಮತ್ತೊಂದು ಇಂತಹ ಶಾಲೆಯನ್ನು ಮಾಡಲು ಸಾಧ್ಯವಾಗುವುದಿಲ್ಲ. ತೊತ್ತೊಚಾನ್ ತಾನು ಬೆಳೆದು ದೊಡ್ಡವಳಾದ ಮೇಲೆ ಇಂತಹದೊಂದು ಶಾಲೆಯನ್ನು ನಿರ್ಮಿಸುವುದಾಗಿ ಶಪಥ ಮಾಡುತ್ತಾಳೆ. ಕೊನೆಗೊಮ್ಮೆ, ತನ್ನ ಈ ಶಾಲೆಯಲ್ಲಿ ಬೆಳೆದವರೆಲ್ಲಾ ಏನಾಗಿದ್ದಾರೆ? ಎಂಬುದನ್ನು ದಾಖಲಿಸುತ್ತಾ ಹೋಗುತ್ತಾಳೆ.  ಶಾಲೆಯಿಂದ ಹೊರದಬ್ಬಿಸಿಕೊಂಡಿದ್ದ ತೊತ್ತೊಚಾನ್ ಈಗ ತೆತ್ಸುಕೋ ಕುರೊಯಾನಾಗಿ - ಪ್ರಖ್ಯಾತ ಜಪಾನೀ ನಟಿ ಮತ್ತು ಯುನಿಸೆಫ್ ನ ಸದ್ಭಾವನಾ ರಾಯಭಾರಿ!

ಇಂತಹ ಶಾಲೆಯ ಪರಿಕಲ್ಪನೆ ಬೆಂಗಳೂರಿನಲ್ಲಿಯೂ ಸುಮಾರು ಏಳೆಂಟು ಕಡೆ ಇವೆ.  ಹೆಸರಿಸಬಹುದಾದದ್ದು ವ್ಯಾಲೀ ಸ್ಕೂಲ್,  ಸೆಂಟರ್ ಫಾರ್ ಲರ್ನಿಂಗ್ ಮುಂತಾದವು, ಮುಖ್ಯವಾಗಿ ಈ ಶಾಲೆಗಳು ಜಿಡ್ಡು ಕೃಷ್ಣಮೂರ್ತಿ ಯವರ ಆಶಯಾಧಾರಿತ ರೂಪುಗೊಂಡವು.  ಆದರೆ ಎಷ್ಟರ ಮಟ್ಟಿಗೆ ಯಶಸ್ವಿಯಾಗಿದೆ? ಎಂಬುದು ಅಷ್ಟಾಗಿ ತಿಳಿದುಬಂದಿಲ್ಲ.  ಒಟ್ಟಿನಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಇಂತಹದೊಂದು ಕ್ರಾಂತಿ ಆಗಲೇಬೇಕಾದ ಅವಶ್ಯಕತೆಯಂತೂ ಇದೆ.  ಆದಷ್ಟೂ ಬೇಗ ಆಗಲಿ ಎಂಬುದಷ್ಟೇ ನನ್ನ ಬಯಕೆ.  ಪ್ರತಿಯೊಬ್ಬರೂ ತೊತ್ತೊ-ಚಾನ್ ಓದಿದರೆ, ಮಕ್ಕಳ ಮನಸ್ಸನ್ನು ಅರ್ಥ ಮಾಡಿಕೊಳ್ಳುವುದು ಸುಲಭಸಾಧ್ಯ! ಮಕ್ಕಳ ಶಿಕ್ಷಣ ಹೇಗಿರಬೇಕೆಂಬುದನ್ನು ಕೂಡಾ!


Wednesday, February 26, 2014

‘ಗಾಂಧಿ ಬಂದ’ - ತುಳುನಾಡಿನ ಸಂಸ್ಕೃತಿಯ ಚಿತ್ರಣ

 "ಈಗಿರುವುದು ಎರಡೇ ಜಾತಿ, ಶ್ರೀಮಂತ ಮತ್ತು ಬಡವ.  ಹಾಗಾಗಿ ಕನ್ನಡದ ಹಿರಿ, ಕಿರಿ, ಮರಿ ಸಾಹಿತಿಗಳೆಲ್ಲರೂ ತಮ್ಮ ಪಾಡಿಗೆ ತಾವು ಓದಿಕೊಂಡು, ಬರೆದುಕೊಂಡು ಇರುವುದು, ರಾಜಕೀಯವನ್ನು ರಾಜಕಾರಣಿಗಳಿಗೆ ಬಿಡುವುದು!’ ಎಂದೊಂದು ಸ್ಟೇಟಸ್ ಅನ್ನು ಇತ್ತೀಚೆಗೆ FB ಲಿ ಹಾಕಿಕೊಂಡಿದ್ದೆ.  ನಾನು ಹೇಳಿದ್ದಕ್ಕೆ ಒಂದಷ್ಟು ಜನ ‘ಜಾತಿಯೇ ಇಲ್ಲವೆನ್ನುತ್ತೀರಾ?  ಹಾಗಾದರೆ ಅಲ್ಲಿ ನೋಡಿ, ಇಲ್ಲಿ ನೋಡಿ ಎಂದು ಒಂದಷ್ಟು ದಲಿತರ ಮೇಲಿನ ದಬ್ಬಾಳಿಕೆಯನ್ನು ತೋರಿಸಿ, ನನ್ನನ್ನು ಖಂಡಿಸಿದ್ದರು.ಒಂದಷ್ಟು ಹಲ್ಲಾ, ಗುಲ್ಲಾ ಆಯಿತು, ನಾನು ಹೇಳಿದ್ದೇ ಬೇರೆ, ಓದಿದವರು ಅರ್ಥೈಸಿಕೊಂಡಿದ್ದೇ ಬೇರೆಯಾಗಿ, ಕೊನೆಗೆ ಮತ್ತೊಂದು ಉದ್ದದ ಪೋಸ್ಟ್ ಹಾಕಿ ಸುಮ್ಮನಾಗಿಸಬೇಕಾಯಿತು. ಈಗಿನ ಬಹಳಷ್ಟು ಸಾಹಿತಿಗಳು ತಮ್ಮ ಪುಸ್ತಕಗಳ ‘ಕಂಟೆಂಟ್’ ಅನ್ನು ‘ಸೇಲಬಲ್’ ಆಗಿ ಮಾಡುವ ಉದ್ದೇಶ ಇಟ್ಟುಕೊಂಡು ಬರೆಯುತ್ತಾರೆ, ಪ್ರಾಮಾಣಿಕತೆಯಿಂದಲ್ಲ’ ಎಂದು ಹೇಳುವುದಷ್ಟೇ ನನ್ನ ಉದ್ದೇಶವಾಗಿತ್ತು.  

ಜಾತಿ, ಸೆಕ್ಸ್, ಕೆಳವರ್ಗ, ಸ್ತ್ರೀವಾದ ಮುಂತಾದವನ್ನು ಉದ್ದೇಶಪೂರ್ವಕವಾಗಿಯೇ ತಮ್ಮ ಪುಸ್ತಕಗಳಲ್ಲಿ ‘ಬಲವಂತ’ ವಾಗಿ ತಂದು, ಪಾತ್ರಗಳ ಮೂಲಕ ಈ ಭಾವನೆಗಳನ್ನು ವಿಜೃಂಭಿಸಿ, ಮತ್ತಷ್ಟು ಇವುಗಳೆಲ್ಲವನ್ನೂ ಹೆಚ್ಚಿಸುತ್ತಿದ್ದಾರೆ. ಇವರ ಸಾಹಿತ್ಯ ಕೃಷಿಯಿಂದಾಗಿ ಮತ್ತಷ್ಟು ಎಲ್ಲರಲ್ಲಿಯೂ ಒಡಕು ಮೂಡುತ್ತಿದೆಯೇ ಹೊರತು ಮಾನವೀಯತೆ ಉಂಟಾಗುತ್ತಿಲ್ಲ ಎಂಬುದು ಇತ್ತೀಚಿನ ಬಹುತೇಕರ ಪುಸ್ತಕಗಳನ್ನು ಓದುವಾಗ ನನಗನ್ನಿಸುತ್ತಲೇ ಇರುತ್ತದೆ.  ಹಾಗೆಯೇ ತಮ್ಮ ಚಾನೆಲ್ ಗಳ ಟಿ ಆರ್ ಪಿ ಹೆಚ್ಚಿಸಿಕೊಳ್ಳಲು, ಎಲ್ಲಾ ಚಾನೆಲ್ ಗಳವರ ಸಾಹಸ, ಅದಕ್ಕಾಗಿ ಯಾವುದೇ ಮಟ್ಟಕ್ಕೆ ಬೇಕಿದ್ದರೂ ಇಳಿಯುವಂತಹ ನೀಚತನ, ಕಂಡದನ್ನೆಲ್ಲಾ ‘ಬ್ರೇಕಿಂಗ್ ನ್ಯೂಸ್’ ಎಂದು  ಇರುವುದನ್ನು, ಇಲ್ಲದೇ ಇರುವುದೆಲ್ಲವನ್ನೂ ‘ಕ್ರಿಯೇಟ್’ ಮಾಡಿ, ರೋಚಕತೆಯಿಂದ ತೋರಿಸುವುದು, ನ್ಯೂಸ್ ಪೇಪರ್ ಗಳವರು ಕೂಡ ‘ತಾವೇನೂ ಕಡಿಮೆ ಇಲ್ಲ’ ವೆಂದು, ಸ್ವಲ್ಪವೂ ತರ್ಕ ಮಾಡದೇ, ಏನೇನೋ ಅಸಂಬದ್ಧ ‘ನ್ಯೂಸ್’ ಗಳನ್ನು ನೀಡುವುದು, ಒಟ್ಟಿನಲ್ಲಿ ಮಾಧ್ಯಮಗಳ ಸತ್ಯಾಸತ್ಯತೆ ಬಗ್ಗೆ ಜನರಲ್ಲಿ ವಿಶ್ವಾಸವೇ ಇಲ್ಲದಂತಾಗಿದೆ. ಒಟ್ಟಿನಲ್ಲಿ ದುಡ್ಡಿಗಾಗಿ ಏನು ಬೇಕಾದರೂ ಮಾಡಬಲ್ಲೆವು, ಸತ್ಯವನ್ನು ಕೂಡ ತಿರುಚಬಲ್ಲೆವು, ನಮ್ಮನ್ಯಾರೂ ಕೇಳುವವರಿಲ್ಲ ಎಂಬ ಧೋರಣೆ ಹೀಗೆಲ್ಲಾ ಅವರನ್ನು ಆಡಿಸುತ್ತಿದೆ. 

ಇಂತಹದೊಂದು ಸ್ಟೇಟ್ ಮೆಂಟ್ ನಾನು ನೀಡಿದ ಮೇಲೆ ದುರ್ಬೀನು ಹಾಕಿಕೊಂಡು ಈಗಿನ ಪರಿಸ್ಥಿತಿಯನ್ನು ನೋಡುತ್ತಲೇ ಬಂದೆ.  ಜಾತಿಗಿಂತಲೂ ನಮ್ಮನ್ನು ಕಾಡುತ್ತಿರುವುದೇ ಈ ಬಡವರ ಮೇಲಿನ ದೌರ್ಜನ್ಯ ಎಂಬ ನನ್ನ ಅನಿಸಿಕೆ ಗಟ್ಟಿಯಾಗುತ್ತಲೇ ಬಂದಿತು. ಇರಲಿ, ಇವೆಲ್ಲವೂ ಮತ್ತೆ ನೆನಪಾದದ್ದು ಶ್ರೀಮತಿ ನಾಗವೇಣಿಯವರ ‘ಗಾಂಧಿ ಬಂದ’ ಓದಲು ಶುರು ಮಾಡಿದ ಮೇಲೆ.  ‘ಗಾಂಧಿ ಬಂದ’ ಕಾದಂಬರಿ ತುಳುನಾಡಿನವರಿಗೆ ಒಂದು ರೀತಿಯ ಅಪ್ಯಾಯಮಾನ ಭಾವವನ್ನು ನೀಡುತ್ತದೆ.  ಸುಮಾರು ೧೦ ವರ್ಷಗಳ ಕಾಲದ ಸ್ವಾತಂತ್ರ್ಯ ಹೋರಾಟದ ಚಿತ್ರಣ, ಆ ಸಮಯದಲ್ಲಿ  ತುಳುನಾಡು ಹೇಗಿತ್ತು? ಎಂಬುದನ್ನು ಒಂದು ಸಣ್ಣ ಕಥೆಯ ಜೊತೆಗೆ ಬಹಳಷ್ಟು ತುಳುನಾಡಿನ ಸಂಸ್ಕೃತಿ, ದೈನಂದಿನ ಬದುಕಿನ ಚಿತ್ರಣದ ಮೂಲಕ ನಾಗವೇಣಿಯವರು ಹೇಳುತ್ತಾ ಹೋಗುತ್ತಾರೆ.  ಈ ಕಾದಂಬರಿಯಲ್ಲಿ ಎಲ್ಲಾ ಜಾತಿಗಳ ಸಂಘರ್ಷವಿದೆ, ದೇಶಕ್ಕಾಗಿ ಹೋರಾಡಿದ ಕಥೆಯಿದೆ, ಪ್ರೀತಿಗಾಗಿ ಮಿಡಿದ ಮನಗಳಿವೆ, ಒಂದೇ, ಎರಡೇ, ಎಲ್ಲಕ್ಕಿಂತ ಹೆಚ್ಚಾಗಿ ಇದ್ಯಾವುದೂ ಕೂಡ ಬಲವಂತವಾಗಿ ಇಲ್ಲಿ ಚಿತ್ರಿಸಿಲ್ಲ.  ಈ ಪುಸ್ತಕ ‘ಸೇಲಬಲ್ ಪ್ರಾಡಕ್ಟ್’ ಆಗಿ ನಿರ್ಮಿತಗೊಂಡಿಲ್ಲ. ಅತ್ಯಂತ ಪ್ರಾಮಾಣಿಕತೆಯಿಂದ, ತುಳುನಾಡಿನಲ್ಲಿ ಹೇಗಿತ್ತು ಪರಿಸ್ಥಿತಿ?
ಎಂಬುದನ್ನಷ್ಟೇ ಹೇಳುತ್ತಾ ಹೋಗುತ್ತದೆ. ಹಾಗಾಗಿ ಬಹಳ ಇಷ್ಟವಾಗುತ್ತಾ ಹೋಗುತ್ತದೆ.

ಬೆಂಗಳೂರಿನಲ್ಲಿಯೇ ಹುಟ್ಟಿ ಬೆಳೆದಿದ್ದರೂ, ಅಮ್ಮನಿಂದಾಗಿ ತುಳು ನಾಡಿನ ಪರಿಚಯ, ಆಕೆ ಹೇಳಿಕೊಡುತ್ತಿದ್ದ ತುಳು ತಿಂಗಳುಗಳು, ಯಾವುದೇ ನೋವು ಉಂಟಾದರೂ ಹಚ್ಚುತ್ತಿದ್ದ ತ್ಯಾಂಪಣ್ಣ ಭಂಡಾರಿಗಳ ನೋವಿನೆಣ್ಣೆ, ಹಬ್ಬ, ಹರಿದಿನಗಳು ಬಂದಾಗ  ತುಳುನಾಡಿನಲ್ಲಿ ಆ ಸಂದರ್ಭದಲ್ಲಿ ನಡೆಯುತ್ತಿದ್ದ ಆಟೋಟ, ಸಂಪ್ರದಾಯಗಳ ಪರಿಚಯ, ರಜೆ ಬಂದಾಗಲೆಲ್ಲಾ ಮಾವನ ಮನೆಗೆ ಓಡುತ್ತಿದ್ದಾಗ ಪರಿಚಯವಾಗಿದ್ದ ಅಲ್ಲಿನ ಒಕ್ಕಲಿನವರು, ಅವರು ಹೇಳುತ್ತಿದ್ದ ಕಥೆಗಳು, ಭೂತದ ಮನೆ, ಕೋಲ, ಗುತ್ತಿನ ಮನೆ, ಬಂಟರ ಮನೆಯ ರೀತಿ ರಿವಾಜು, ಗುತ್ತಿನ ಮನೆಯ ಹೆಂಗಸರ ಗತ್ತು, ವರದಕ್ಷಿಣೆಯ ಆರ್ಭಟ, ಒಡವೆಗಳ ಮೆರೆದಾಟ, ಮೊಗೆವೀರರ ಆಕ್ರೋಶ, ಕೊರಗರ ನಿಸ್ಸಹಾಯಕತೆ, ಕೆಳವರ್ಗದವರಲ್ಲಿಯೇ ಇರುವ ಜಾತಿಗಳ ಮೇಲಾಟ, ಅಮ್ಮನ ಅಮ್ಮ, ಅಕ್ಕ ಮಾಡುತ್ತಿದ್ದ ಮೂಡೆ, ಪತ್ರೊಡೆ, ಅರಿಷಿಣ ಎಲೆಯ ಗಟ್ಟಿ, ಮಿಡಿ ಉಪ್ಪಿನ ಕಾಯಿ ಎಲ್ಲವೂ ಕೂಡ ‘ಗಾಂಧಿ ಬಂದ’ ದಲ್ಲಿ ಬಂದು ಹೋಗುತ್ತದೆ.  ಯಕ್ಷಗಾನದ ಬಗ್ಗೆ ಅಷ್ಟೊಂದು ಮಾಹಿತಿಯಿರಲಿಲ್ಲವೆಂಬುದು ಒಂದಿಷ್ಟು ಆಶ್ಚರ್ಯವಾಯಿತು.  ಅದರ ಹೊರತು ತುಳುನಾಡಿನ ಬಗ್ಗೆ ಸಂಪೂರ್ಣ ಮಾಹಿತಿ ಇರುವ ಒಂದು ರೀತಿಯ ಡಾಕ್ಯುಮೆಂಟರಿ ಈ ‘ಗಾಂಧಿ ಬಂದ’. ಅವರ ಅಮ್ಮ ಹೇಳಿದ ಸಣ್ಣ ಕಥೆ ಯೊಂದನ್ನು ಹಿಡಿದು ಇಡೀ ತುಳುನಾಡಿನ ಚಿತ್ರಣವನ್ನು ನೀಡಿದ ಶ್ರೀಮತಿ ನಾಗವೇಣಿಯವರಿಗೆ ಅಭಿನಂದನೆಗಳನ್ನು ಸಲ್ಲಿಸಲೇ ಬೇಕು.

ಬ್ರಾಹ್ಮಣರ ಮನೆಯ ಪುಟ್ಟ ಹುಡುಗಿ ವಿಧವೆ ‘ದ್ರೌಪದಿ’ ಪ್ರೀತಿಸುವ ಮುಸ್ಲಿಮ್ ಹುಡುಗ ಆದರ್ಶವಾದಿ ‘ಅದ್ರಾಮ’, ಮತ್ತೊಂದು ಕಡೆ ಗರ್ಭಕೋಶವಿಲ್ಲದಿರುವುದರಿಂದ, ಹೆಣ್ತನವೇ ಇಲ್ಲವೆಂದು ಮನೆ, ನೆರೆಹೊರೆಯವರ ಬಳಿ ‘ಶಿಖಂಡಿ’ ಎಂದು ಹೀಯಾಳಿಸಿಕೊಳ್ಳುವ ‘ದಾರು’, ಆಕೆಯ ಸಂಕಟ ನಿವಾರಿಸಲೆಂದೇ ಮದುವೆಯಾಗುವ ಮತ್ತೊಬ್ಬ ಗಾಂಧೀವಾದಿ ‘ಮಾರಪ್ಪ’ ಇವರೀರ್ವರ ಕಥೆಯ ನಡುವೆ ಆಳು ಮಕ್ಕಳ ಜಾತಿ ಸಂಘರ್ಷಗಳು, ಮೇಲ್ವರ್ಗ, ಕೆಳವರ್ಗದವರ ಕಿತ್ತಾಟಗಳು,  ಗುತ್ತಿನ ಹೆಣ್ಣುಮಕ್ಕಳ ‘ಅಳಿಯ ಸಂತಾನ’ವೆನ್ನುತ್ತಾ ತಾಯಿ ಮನೆಯಲ್ಲಿ ನಡೆಯುವ ದರ್ಬಾರು, ನೋಯುವವರು ಕೂಡ ಹೆಣ್ಣು ಮಕ್ಕಳೇ!, ಎಲ್ಲವೂ ಮನವನ್ನು ಆಲೋಚನೆಗೀಡು ಮಾಡಿಬಿಡುತ್ತವೆ.  ಸುಮಾರು ೧೦-೧೨ ವರ್ಷಗಳ ಕಾಲದ ಘಟನೆಗಳನ್ನು ಡಾಕ್ಯುಮೆಂಟರಿಯ ರೀತಿಯಲ್ಲಿ ಚಿತ್ರಿಸಿರುವುದರಿಂದ, ತುಳುನಾಡಿನ ಹಿನ್ನೆಲೆ ಇಲ್ಲದಿರುವವರಿಗೆ ‘ಬೋರ್’ ಹೊಡೆಸುತ್ತದೆಯೆನೋ? ಎಂದೆನಿಸಿತು.

ಈಗ ಸಂಸ್ಕೃತಿ ರಕ್ಷಕರಿಂದ, ಜಾತಿ, ಕೋಮು ಗಲಭೆಯಲ್ಲಿ ತುಳುನಾಡಿನ ಜನತೆ ನಲುಗುತ್ತಿರುವುದನ್ನು ನೋಡುವಾಗ, ಆಗಿನ ಕಾಲಕ್ಕಿಂತಲೂ, ಈಗಲೇ ಹೆಚ್ಚಿನ ಹಿಂದೂ, ಮುಸ್ಲಿಮ್ ಗಲಾಟೆ ಕಂಡುಬರುವುದನ್ನು ನೋಡಿದಾಗ ಬೇಸರವಾಗುತ್ತದೆ. ಆಗ ಹೇಗಿತ್ತು? ಎಂಬುದನ್ನು  ‘ಗಾಂಧಿ ಬಂದ’ ಕಾದಂಬರಿ ಅವರಿಗೆಲ್ಲರಿಗೂ ಪಾಠ ಹೇಳಿದಂತೆ ಕಾಣುತ್ತದೆ.  

ಮತ್ತೊಂದು ಮಾತು - ‘ಗಾಂಧಿ ಬಂದ’ ಪುಸ್ತಕ ಓದುವ ಮುನ್ನವೇ, ಇದರ ನಾಟಕವನ್ನು ನೋಡಿದ್ದೆ.  ಒಂದು ಪುಸ್ತಕವನ್ನು ಹೇಗೆ ದೃಶ್ಯರೂಪಕ್ಕಿಳಿಸುವುದು ಎಂಬುದನ್ನು ನಿಜವಾಗಿಯೂ ಈ ನಾಟಕ ನೋಡಿದಾಗ ಅರ್ಥವಾಗುವುದು.  ಎಲ್ಲಿಯೂ ಕಿಂಚಿತ್ತು ಪುಸ್ತಕದ ಆಶಯಕ್ಕೆ ಧಕ್ಕೆ ಬಾರದಂತೆ ನಾಟಕ ರಚಿಸಿರುವುದು, ಜೊತೆಗೆ ಆಯಾ ಪಾತ್ರಧಾರಿಗಳ ನಟನೆ, ಆ ನಾಟಕಕ್ಕೆ ಜೀವ ತುಂಬಿತ್ತು.  ಆ ನಾಟಕದಲ್ಲಿಯೂ ಕೂಡ ಭೂತದ ಕೋಲ, ಒಂದಿಷ್ಟು ‘ನಲಿಕೆ’ ಯವರ ನೃತ್ಯ, ಮುಂತಾದವನ್ನು ತೋರಿಸಿ, ತುಳುನಾಡಿನಲ್ಲಿಯೇ ಕುಳಿತಿದ್ದೇವೆ ಎಂಬ ಭಾಸವನ್ನು ಉಂಟು ಮಾಡುವಲ್ಲಿ ಆ ತಂಡ ಯಶಸ್ವಿಯಾಗಿದೆ.  ಅದರಲ್ಲಿಯೂ ಮಾರಪ್ಪನ ಅಮ್ಮನ ಪಾತ್ರಧಾರಿ ‘ಸೂರಕ್ಕೆ’ ಯ ನಟನೆಯಂತೂ ನಾಟಕದ ಪ್ಲಸ್ ಪಾಯಿಂಟ್.  ಪುಸ್ತಕ ಓದಲು ಸಾಧ್ಯವಾಗದಿದ್ದವರೂ ನಾಟಕವನ್ನಾದರೂ ನೋಡುವುದು ತುಳುನಾಡಿನ ಬಗ್ಗೆ ಸ್ವಲ್ಪವಾದರೂ ಅರ್ಥ ಮಾಡಿಕೊಳ್ಳಲು ಸಾಧ್ಯವಾಗುವುದು :-)









Monday, February 10, 2014

ಜಾತಿ ರಾಜಕಾರಣ!


ನಾವಿದ್ದ ಮನೆಯ ಸುತ್ತಮುತ್ತಲೂ ಅನೇಕ ಜಾತಿಗಳು ಸುತ್ತುವರೆದಿದ್ದರೂ, ಜಾತಿ ಬೇಧ / ಸಂಘರ್ಷ ನಮ್ಮನೆಂದಿಗೂ ಭಾಧಿಸಿರಲಿಲ್ಲ. ನಾವು ತೊಂದರೆಗೀಡಾದದ್ದು, ಅವಮಾನ ಮಾಡಿಸಿಕೊಂಡದ್ದು, ಕೊರಗಿದ್ದು, ನೊಂದಿದ್ದು ಎಲ್ಲವೂ ಈ ಶ್ರೀಮಂತ, ಬಡವ ಎಂಬ ವರ್ಗೀಕರಣದಿಂದಲೇ! ಹಾಗಾಗಿ ನಮ್ಮಷ್ಟಕ್ಕೆ ನಾವು ಪುಸ್ತಕಗಳನ್ನು ಓದುವುದನ್ನು ರೂಢಿಸಿಕೊಂಡೆವು. ಎಷ್ಟೇ ಬಡತನವಿದ್ದರೂ, ಪುಸ್ತಕಗಳನ್ನು ಓದುವುದಕ್ಕೆ ‘ಅಮ್ಮ’ ನಮ್ಮನ್ನು ನಿರ್ಬಂಧಿಸಿರಲಿಲ್ಲ. ಅದಕ್ಕೆ ಹಲವಾರು ಕಾರಣಗಳಿದ್ದವು. 

ಮುಖ್ಯವಾದವು - ೧. ಅಮ್ಮನಿಗೆ (ಅವರ ಅಣ್ಣ ಹೇಳಿಕೊಟ್ಟಂತೆ) ಮಕ್ಕಳು ಪಠ್ಯ ಪುಸ್ತಕಗಳ ಜೊತೆಗೆ ಉಳಿದ ಪುಸ್ತಕಗಳನ್ನು ಓದುವುದರಿಂದ ಭಾಷೆಯ ಮೇಲಿನ ಜ್ಞಾನ ಹೆಚ್ಚಾಗುವುದು ಎಂಬ ನಂಬಿಕೆ. ೨. ನಮಗೆ ಬಡತನವಿದ್ದುದ್ದರಿಂದ, ಹೊರಗೆ ಹೋಗಿ ಆಡುವಷ್ಟು ಸಮಯ ನಮ್ಮಲ್ಲಿರಲಿಲ್ಲ. ಏನಾದರೂ ಸಣ್ಣಪುಟ್ಟ ಕೆಲಸ ಮಾಡುತ್ತಾ, ಹಣ ಸಂಪಾದಿಸುವ ಅವಶ್ಯಕತೆ ಇತ್ತು. ಹಾಗಾಗಿ ಎಲ್ಲಾ ಕೆಲಸಗಳು ಮುಗಿದ ಮೇಲೆ ರಾತ್ರಿ ಹೊತ್ತು ಪುಸ್ತಕವನ್ನು ಓದುವುದರಲ್ಲಿಯೇ ಮನರಂಜನೆ ಕಾಣುತ್ತಿದ್ದೆವು. ೩. ನಾವಿದ್ದ ವಠಾರದ ಸುತ್ತಮುತ್ತಲಿನ ಜನರು ಅವಿದ್ಯಾವಂತರು ಹಾಗೂ ಅವಾಚ್ಯ ಶಬ್ದಗಳನ್ನು ಯಥೇಚ್ಛವಾಗಿ ಬಳಸುತ್ತಿದ್ದುದರಿಂದ, ಹಳ್ಳಿಯಿಂದ ಬಂದ ಅಮ್ಮ ಇಂತಹ ಭಾಷೆಯನ್ನು ಎಂದು ಕೇಳದಿದ್ದುದು, ಆಕೆಗೆ ತನ್ನ ಮಕ್ಕಳು ಕೂಡ ಈ ಭಾಷೆ ಎಲ್ಲಿ ಕಲಿತುಬಿಡುತ್ತಾರೋ? ಎನ್ನುವ ಭಯ. ಇಂದಿಗೂ ನನಗೆ ಸಿಟ್ಟು ಬಂದರೆ, ಯಾವ ಕೆಟ್ಟ ಪದಗಳು ಬೈಯಲು ಬರುವುದಿಲ್ಲವೆಂದರೆ, ಅದು ಅಮ್ಮ ಕಲಿಸಿದ ಸಂಸ್ಕೃತಿ!  ಇರಲಿ.

ಹೀಗೆ ಪುಸ್ತಕ ಪ್ರೀತಿ ಬೆಳೆಸಿಕೊಂಡ ನಾವು, ಹತ್ತಿರದಲ್ಲಿಯೇ ಇದ್ದ ಸೆಂಟ್ರಲ್ ಲೈಬ್ರರಿಗೆ ಎಡತಾಕುತ್ತಿದ್ದೆವು. ೨, ೩ ನೇ ಕ್ಲಾಸಿನಲ್ಲಿಯೇ ಪತ್ತೇದಾರಿ ಕಾದಂಬರಿಗಳನ್ನು ಓದುವ!, ನಂತರ ಅದು ಬೋರಾದಾಗ, ಮತ್ತಿನ್ಯಾರದೋ, ಹೀಗೆ ಸುಮಾರಷ್ಟು ಪುಸ್ತಕಗಳನ್ನು ಓದಲು ಶುರುಮಾಡಿದೆವು. ಪುಸ್ತಕಗಳನ್ನು ಬರೆದಿರುವ ಸಾಹಿತಿಗಳಂತೂ ದೇವರಂತೆಯೇ ಭಾಸವಾಗುತ್ತಿದ್ದರು. ತೇಜಸ್ವಿ, ಭೈರಪ್ಪನವರ ಪುಸ್ತಕಗಳನ್ನು ಓದಿದಾಗಲಂತೂ, ಇವರು ಬೇರೆ ಯಾವುದೋ ಲೋಕದಿಂದ ಬಂದವರಿರಬೇಕು ಎಂಬ ಅನಿಸಿಕೆಯೂ ಕೂಡ ಮೂಡಿಬಿಡುತ್ತಿತ್ತು. ಇವರೆಲ್ಲರನ್ನೂ ಪೂಜ್ಯಭಾವದಿಂದ ನೋಡುವಂತಾಗುತ್ತಿತ್ತು. ಪತ್ತೇದಾರಿ ಕಾದಂಬರಿಗಳು ಪುಸ್ತಕಗಳ ಹುಚ್ಚನ್ನು ಹಚ್ಚಿದರೆ, ಕುವೆಂಪು, ಭೈರಪ್ಪನವರ ಕೃತಿಗಳು ಚಿಂತನೆಗೆ ಹಚ್ಚುತ್ತಿದ್ದವು. ಆಗೆಲ್ಲಾ ನನಗೆ ಈ ಕುವೆಂಪು, ತೇಜಸ್ವಿ - ಒಕ್ಕಲಿಗರು, ಭೈರಪ್ಪ - ಬ್ರಾಹ್ಮಣ, ಅನಂತಮೂರ್ತಿ - ಲೆಫ್ಟಿಸ್ಟ್, ಮತ್ತಿನ್ಯಾರೋ - ರೈಟಿಸ್ಟ್ ಇದೆಲ್ಲಾ ಗೊತ್ತೇ ಇರಲಿಲ್ಲ! 



ಕಿನ್ನರ, ಕಿಂಪುರುಷ ರಂತೆ ಕಂಡುಬರುತ್ತಿದ್ದ ನಮ್ಮ ಚಿತ್ರ ನಟ/ನಟಿಯರು, ಹೇಗೆ ಟಿವಿ ಬಂದ ಮೇಲೆ, ಅದರಲ್ಲಿ ಅವರ ಮಾತುಕಥೆಗಳನ್ನು ನೋಡಿದ ಮೇಲೆ, ನಮ್ಮಂತೆಯೇ ಇವರು ಕೂಡ ಭೂಲೋಕದವರು ಎಂಬ ಅರಿವಾಯಿತೋ, ಹಾಗೆಯೇ ಈ ಫೇಸ್ ಬುಕ್ಕಿನಲ್ಲಿ ಹೊಸ ಸಾಹಿತಿಗಳ ಚರ್ಚೆ, ಹಳೆಯ ಸಾಹಿತಿಗಳ ಬಗೆಗಿನ ಮಾತುಕಥೆ ನೋಡಿದಾಗ, ಅರೆರೆ! ಸಾಹಿತಿಗಳೂ ಕೂಡ ನಮ್ಮಂತೆಯೇ ಜನ ಸಾಮಾನ್ಯರು! ಎಂಬುದರ ಅರಿವಾಗತೊಡಗಿತು. ನಾನು ಯಾವ ಪುಸ್ತಕಗಳನ್ನು ಓದಿದರೂ, ಅದರಲ್ಲಿನ ಹೂರಣ ನೆನಪಿಟ್ಟುಕೊಳ್ಳುತ್ತೇನೆಯೇ ಹೊರತು, ಪುಸ್ತಕದ ಶೀರ್ಷಿಕೆ ಮತ್ತು ಬರೆದಿರುವವರು ಯಾರು ಎಂಬ ನೆನಪಿರುವುದಿಲ್ಲ. ಮತ್ತೊಮ್ಮೆ ಪುಸ್ತಕವನ್ನು ತೆರೆದು, ಓದಲು ಶುರುಮಾಡಿದಾಗಲೇ, ಓಹ್! ಇದನ್ನು ಓದಿದ್ದೆ ಅಲ್ಲವೇ? ಎಂಬುದು ಅರಿವಾಗುತ್ತದೆ. ಇದು ನನ್ನ ಅಜ್ಞಾನ ಅಥವಾ ಮರೆಗುಳಿತನ! ನಾನು ಯಾವುದನ್ನು ಅಜ್ಞಾನ / ಮರೆಗುಳಿತನ ಎಂದೆಣಿಸಿದ್ದೇನೋ, ಅದು ನಿಜವಾಗಿಯೂ ಜ್ಞಾನ ಎಂಬುದು ಅರಿವಾಗತೊಡಗಿದ್ದು ಫೇಸ್ ಬುಕ್ ನ ಸಂಪರ್ಕಕ್ಕೆ ಬಂದ ಮೇಲೆಯೇ! ಬರೆದಿರುವವರು ಯಾರು ಎಂಬುದು ನಿಮಗೆ ತಿಳಿದಿಲ್ಲವಾದರೆ, ಯಾವುದೇ ಪೂರ್ವಾಗ್ರಹವಿಲ್ಲದೆ ಮಾತನಾಡಬಹುದು ಎಂಬುದು ನನಗರ್ಥವಾಗುತ್ತಾ ಹೋಯಿತು!

ಈಗಿನ ಸಾಮಾಜಿಕ ಪರಿಸ್ಥಿತಿಯಲ್ಲಿ, ಜಾತಿವ್ಯವಸ್ಥೆಯಿಂದಾಗುತ್ತಿರುವ ತೊಂದರೆಗಳಿಗಿಂತಲೂ ಹೆಚ್ಚಾಗಿ ತೊಂದರೆಗೀಡಾಗುತ್ತಿರುವವರು ಬಡವರು. ಈಗ ಎಲ್ಲಾ ಕಡೆಯೂ ರಾರಾಜಿಸುತ್ತಿರುವುದು ಹಣ ಬಿಟ್ಟರೆ ರಾಜಕೀಯ ‘ಬಲ’. ಈ ಪೊಲಿಟಿಕಲ್ ಇನ್ ಫ್ಲುಯೆನ್ಸ್ ಕೂಡ ಹಣಬಲದಿಂದಾಗಿಯೇ ದೊರೆಯುವುದರಿಂದ, ನನ್ನ ಪ್ರಕಾರ ‘ಹಣ’ ವೊಂದೇ ಇವತ್ತಿನ ‘ದಲಿತ’ರನ್ನು ತುಳಿಯುತ್ತಿರುವುದು. ಈ ‘ದಲಿತ’ - ಬ್ರಾಹ್ಮಣ, ಒಕ್ಕಲಿಗ ಅಥವಾ ಇನ್ಯಾವುದೋ ಜಾತಿಗಳಾಗಿರಬಹುದು, ಬಡವನಾಗಿರಬೇಕು, ಅಷ್ಟೇ. ‘ಹಳ್ಳಿ ಹುಡುಗ, ಪ್ಯಾಟೇಗೇ ಬಂದ’ ಇಂತಹ ಕಾರ್ಯಕ್ರಮಗಳು ‘ದಲಿತ’ ರನ್ನು ತುಳಿಯಲು ಮಾಡಿದ್ದೋ? ಟಿಆರ್ ಪಿ ಗಳಿಸಿ ಹಣ ಮಾಡಲು ಮಾಡಿದ್ದೋ? ಅಥವಾ ಹಳ್ಳಿಗಳೆಲ್ಲವೂ ಮುಚ್ಚಿ ಹೋಗಿ, ನಗರಕ್ಕೆ ವಲಸೆ ಬರುತ್ತಿರುವುದು ಜಾತಿಯಿಂದಾಗಿಯೇ? ಇಂತಹ ಇನ್ನೂ ಹತ್ತು ಹಲವಾರು ಪ್ರಶ್ನೆಗಳನ್ನು ನಮ್ಮಷ್ಟಕ್ಕೆ ನಾವೇ ಕೇಳಿಕೊಂಡರೆ, ನಮ್ಮ ಈಗಿನ ಕಾಲದ ‘ಸತ್ಯ’ ಗೊತ್ತಾಗುವುದು. ನಾವು ಹೋರಾಡಬೇಕಿರುವುದು ಈ ‘ಸತ್ಯ’ದ ವಿರುದ್ಧ!. 

ಹೋರಾಡಬೇಕೆಂದೊಡನೆ ಸಾಮಾನ್ಯ ಮನುಷ್ಯ ‘ಲೆಫ್ಟಿಸ್ಟ್’ ಆಗಿಬಿಡುವುದು, ಮೇಲ್ವರ್ಗದವರ ಪರ ಮಾತಾಡಿದೊಡನೆಯೇ ‘ರೈಟಿಸ್ಟ್’ ಆಗಿಬಿಡುವುದು, ದಲಿತರು ಹೋರಾಡಿದರೆ ‘ಹಕ್ಕಿಗಾಗಿ’ ಹೋರಾಡುವುದು (ದಲಿತರಲ್ಲಿ ಬಡವರನ್ನು ಕೇಳುವವರಿಲ್ಲ, ಆ ಮಾತು ಬೇರೆ!) ರಾಜಕಾರಣಿಗಳು ತಮ್ಮ ಸ್ವಾರ್ಥಸಾಧನೆಗಾಗಿ ನೂರಾರು ಜಾತಿಗಳನ್ನು ಪೋಷಿಸುತ್ತಿದ್ದರೆ, ಸಾಹಿತಿಗಳು ‘ಈ ಲೆಫ್ಟಿಸ್ಟ್, ರೈಟಿಸ್ಟ್, ಮೇಲ್ವರ್ಗ, ದಲಿತರು’ ಎಂಬ ನಾಲ್ಕು ಜಾತಿಗಳನ್ನು ಪೋಷಿಸುತ್ತಿದ್ದಾರೆ. ಇವೆಲ್ಲವನ್ನೂ ನಾವು ಇನ್ನೆಷ್ಟು ಕಾಲ ಸಾಮಾನ್ಯ ಜನರು ಬಾಯಿಮುಚ್ಚಿಕೊಂಡು ಸಹಿಸುವುದು? ಸಮಾಜದಲ್ಲಿ ಬಡವರ್ಗದವರಿಗೆ / ಅವಿದ್ಯಾವಂತರಿಗೆ ಬೆಳೆಯಲು ಏನು ಬೇಕೋ? ಆ ಸಹಾಯ ಮಾಡಲಿ, ತಪ್ಪಿಲ್ಲ. ಎಲ್ಲರೂ ಒಂದೇ!. ಆದರೆ ಕಣ್ಣೊರೆಸುವ ತಂತ್ರ ಏಕೆ? ಯಾವುದೇ ನೀತಿ ನಿಯಮಗಳು ಮನುಷ್ಯನಿಗೆ ಬೆಳೆಯಲು ಸಹಾಯಕಾರಿಯಾಗಿರಬೇಕೇ ಹೊರತು ಯಾವುದೇ ಮನುಷ್ಯನನ್ನು ತುಳಿಯಲಲ್ಲ! ಹಳ್ಳಿ, ಹಳ್ಳಿಗಳಿಗೆ ಅಥವಾ ನಗರದ ಸ್ಲಮ್ ಪ್ರದೇಶಗಳಿಗೆ ಹೋಗಿ ಸಂದರ್ಶನ (ಪ್ರಾಮಾಣಿಕವಾಗಿ!) ಮಾಡಿ ನೋಡಿದರೆ ತಿಳಿಯುತ್ತದೆ. ಇವತ್ತಿನ ಮೂಲ ಸಮಸ್ಯೆ ‘ಜಾತಿ’ ಗಿಂತಲೂ ‘ಆರ್ಥಿಕ ಪರಿಸ್ಥಿತಿ’ ಯದ್ದು ಎಂದು. ಹಣವಿಲ್ಲದೆ ಯಾವ ಕೆಲಸವೂ ನಡೆಯದು, ದಲಿತರದು ಕೂಡ! 



ಈ ಎಲ್ಲಾ ವಿಷಯಗಳನ್ನು ಯಾವಾಗಲೂ ಯೋಚಿಸುವ ನಾನು ಯಾವುದೇ ಹುನ್ನಾರವಿಲ್ಲದೆ, ಪ್ರಾಮಾಣಿಕವಾಗಿ (ನನ್ನ ಅರಿವನ್ನು ಹಿಗ್ಗಿಸಿಕೊಳ್ಳಲು) ಕೇಳಿದ ಮೊದಲ ಪ್ರಶ್ನೆ - ಈಗಿನ ಸಾಹಿತಿಗಳು ಕೂಡ ತಮ್ಮ ಕಾವ್ಯರಚನೆಯಲ್ಲಿ ವಸ್ತುವಿಷಯವನ್ನು ಆಯ್ಕೆ ಮಾಡಿಕೊಳ್ಳುವಾಗ ‘ಜಾತಿ’ ವಿಷಯವನ್ನೇಕೆ ಆಯ್ದುಕೊಳ್ಳುತ್ತಾರೆ? ಮತ್ತೊಂದು ಪ್ರಶ್ನೆ - ತಮ್ಮ ಕೃತಿಗಳ ಮಾರ್ಕೆಟಿಂಗ್ ಗಾಗಿ ಅಥವಾ ಅದನ್ನೊಂದು ಸೇಲಬಲ್ ಕೃತಿಯಾಗಿಸಲು, ಬೇಕಂತಲೇ ‘ಕಾಮ’ ‘ಅಶ್ಲೀಲ’ ‘ನೀಲಿ’ ಮುಂತಾದ ಶೀರ್ಷಿಕೆಗಳನ್ನಿಟ್ಟು ಅಥವಾ ಪುರಾಣ ಕೃತಿಗಳ ಪಾತ್ರಗಳನ್ನಿಟ್ಟುಕ್ಕೊಂಡು, ಬೇಕೆಂದೇ ಆ ಪಾತ್ರಗಳನ್ನು ಅಶ್ಲೀಲವಾಗಿ ಚಿತ್ರಿಸುವರೇ? ಎಂಬುದಾಗಿತ್ತು. ಇದಕ್ಕೆ ಉತ್ತರಗಳು ನನಗೆ ಅರ್ಥವಾಗುವ ಹಾಗೇ ಸಮರ್ಪಕವಾಗಿ ಸಿಗಲಿಲ್ಲ. ಹಾಗಾಗಿ ನನ್ನ ಮತ್ತೊಂದು ‘ಫೆಮಿನಿಸ್ಟ್’ ಗಳು ಎಂದೊಡನೆ ಯಾಕೆ ‘ಬಿಂದಾಸ್’ ಆಗಿ, ‘ಕಾಮ / ಸೆಕ್ಸ್’ ವಿಷಯದ ಬಗ್ಗೆಯೇ ಮಾತಾಡಬೇಕು? ಗಂಡಿಗೆ ಸರಿಸಮನಾಗಿ ನಿಲ್ಲುವುದು ಎಂದರೆ ಗಂಡನ್ನು ತುಳಿಯುವುದೇ? ಅಥವಾ ತನ್ನ ಹೆಣ್ತನವನ್ನು ಬಿಟ್ಟುಕೊಡದಿರುವುದೇ? ಎಂಬೆಲ್ಲಾ ಪ್ರಶ್ನೆಗಳನ್ನು ಕೇಳದೇ ಸುಮ್ಮನಾಗಿಬಿಟ್ಟೆ. 

ಕಾವ್ಯಕಮ್ಮಟದಲ್ಲಿ ನಾನು ಕೇಳಿದ ಈ ಎರಡು ಪ್ರಶ್ನೆಗಳು, ಅದಕ್ಕೆ ಸಿಕ್ಕಂತಹ ಉತ್ತರಗಳು, ಜೊತೆಗೆ ಒಂದೆರಡು ಹುರುಳಿಲ್ಲದ ಕವನ ಸಂಕಲನಗಳನ್ನು ಬರೆದವರಿಗೆ (ಇನ್ಯಾವುದೋ ಹಿಡನ್ ಅಜೆಂಡಾ ಇಟ್ಟುಕೊಂಡು) ತೋರಿಸುತ್ತಿದ್ದ ಅಪ್ರಾಮಾಣಿಕ ಪ್ರೀತಿ, ಸಾಹಿತಿಗಳೂ ಕೂಡ ವ್ಯಕ್ತಿನಿಷ್ಟರೇ? ಇವರೇಕೆ ವಸ್ತುನಿಷ್ಟರಾಗಿ ಮಾತನಾಡುತ್ತಿಲ್ಲ? ‘ವಿಶ್ವ ಮಾನವ’ ತತ್ವವನ್ನು ಪ್ರತಿಪಾದಿಸಿದ ‘ಕುವೆಂಪು’ ರವರನ್ನಾಗಲೀ, ಅಪ್ಪ ಹೊರಟ ದಾರಿಯ ಮತ್ತೊಂದು ದಿಕ್ಕಿನಲ್ಲಿ ಹೊರಟ,ವಿಜ್ಞಾನವನ್ನು ಸರಳಾತಿಸರಳವಾಗಿ ನಮಗೆಲ್ಲಾ ನೀಡಿದ ‘ತೇಜಸ್ವಿ’ ಯವರನ್ನು ಇವತ್ತಿಗೂ ಜಾತಿಯಿಂದಲೇ ಗುರುತಿಸುತ್ತಿದ್ದಾರೆ ಎಂಬುದು ವಿಷಾದನೀಯ. ಸಾಮಾನ್ಯ ಜನರಲ್ಲ ಇವರನ್ನು ಹೀಗೆ ನೋಡುತ್ತಿರುವವರು! ಸಾಹಿತಿಗಳೇ! ತುಂಬಾ ಓದಿಕೊಂಡಿರುವವರೇ ಹೀಗೆ ಮಾಡುತ್ತಿರುವುದು. ಅದಕ್ಕೆ ಅವರದೇ ಆದ ಹಿಡನ್ ಅಜೆಂಡಾಗಳಿರುವುದು ಅತ್ಯಂತ ಶೋಚನೀಯ ಪರಿಸ್ಥಿತಿ! 



ನನ್ನೊಳಗೆ ಈಗಿನ ಸಾಹಿತಿಗಳೆಲ್ಲರೂ ಸಾಹಿತಿಗಳಲ್ಲ, ಸಾಹಿತ್ಯವನ್ನು ಅರೆದು ಕುಡಿದಿದ್ದರೂ, ಜ್ಞಾನವಾಹಕರಲ್ಲ, ತಮ್ಮ ಪ್ರತಿಭೆಯಿಂದ ಜಾತೀ ಪದ್ದತಿಯನ್ನು ಇನ್ನಷ್ಟು (ತಮ್ಮ ಬೇಳೆ ಬೇಯಿಸಿಕೊಳ್ಳಲು!) ಉತ್ತೇಜಿಸುವವರು ಎಂದೇ ಅನಿಸತೊಡಗಿತು. ಇದು ನನ್ನನುಭವ / ನನ್ನನಿಸಿಕೆ ಹೊರತು ಇದು ಕಾವ್ಯಕಮ್ಮಟ ಆಯೋಜಿಸಿದವರ ತಪ್ಪಲ್ಲ. ನಾನು ಜಾತಿ ಎಂಬ ವಿಷಯದ ಬಗೆಗಿನ ಪ್ರಶ್ನೆಗೆ, ತಾಳ್ಮೆಯಿಂದ ಉತ್ತರಿಸದೇ, ಬುದ್ಧಪ್ರೇಮಿಯೊಬ್ಬರು ನನ್ನ ಹಿನ್ನೆಲೆ ವಿಚಾರಿಸಲು ಮುಂದಾದರು, ಒಂದಷ್ಟು ಜನ ವಾತಾವರಣ ಕಾವೇರದಂತೆ ಶ್ರಮಿಸಿದರು, ಒಂದಷ್ಟು ಜನ ಮೈಕ್ ಮುಂದೆ ನನ್ನ ವಿಚಾರಗಳನ್ನು ಕಡಿದು ಹಾಕಿದರೂ, ಮೈಕಿಲ್ಲದಿದ್ದಾಗ ‘ನಾನು ಹೇಳಿದ್ದು ಸರಿ’ ಎಂದು ಒಪ್ಪಿದರು. ರಾಜಕಾರಣಿಗಳು ಹೇಗೆ ವೋಟ್ ಬ್ಯಾಂಕಿಂಗ್ ಗಾಗಿ ಜಾತೀ ವ್ಯವಸ್ಥೆಯನ್ನು ಕೊನೆಗೊಳಿಸಲು ಮುಂದಾಗುವುದಿಲ್ಲವೋ? ಹಾಗೆಯೇ ನಮ್ಮ ಸಾಹಿತಿಗಳು ಕೂಡ ಈ ಜಾತೀ ವ್ಯವಸ್ಥೆಯನ್ನು ಕೊನೆಗೊಳಿಸುತ್ತಿಲ್ಲ ಎಂಬುದು ಮನಸ್ಸಿಗೆ ಕಿರಿಕಿರಿಯನ್ನುಂಟು ಮಾಡತೊಡಗಿತು. ನಮ್ಮ ಸಾಹಿತಿಗಳು, ರಾಜಕಾರಣಿಗಳು, ಬುದ್ಧಿಜೀವಿಗಳು ತಮ್ಮೆಲ್ಲರ ತರ್ಕಗಳನ್ನು ನಮ್ಮಂತಹ ಜನಸಾಮಾನ್ಯರಲ್ಲಿ ಬಿಂಬಿಸಿ, ಇನ್ನಷ್ಟು ಜಾತೀ ಪದ್ದತಿಯನ್ನು, ಜಾತಿಗಳ ನಡುವಿನ ಅಂತರವನ್ನು ಹೆಚ್ಚಿಸುತ್ತಿದ್ದಾರೆ ಎಂದರೆ ತಪ್ಪಿಲ್ಲ. 

ಈ ರೈಟಿಸ್ಟ್, ಲೆಫ್ಟಿಸ್ಟ್, ಬ್ರಾಹ್ಮಣ, ದಲಿತ ಯಾವುದೇ ಅರಿವಿಲ್ಲದೆ ತಣ್ಣಗಿದ್ದ ನನಗೆ, ಹಿಂದಿನವರು ಬರೆದ ಪುಸ್ತಕಗಳಲ್ಲಿನ ತತ್ವಗಳನ್ನು ಮಾತ್ರ ಅರಗಿಸಿಕೊಳ್ಳುವತ್ತ ಗಮನದಲ್ಲಿದ್ದ ನನಗೆ, ಈಗಿನ ಸಾಹಿತಿಗಳ ‘ವ್ಯಕ್ತಿ’ ಪರಿಚಯ, ಅವರ ಆಲೋಚನೆಗಳಲ್ಲಿ ತುಂಬಿರುವ ‘ಸ್ವಾರ್ಥ’, ಅದಕ್ಕಾಗಿ ಅವರು ಯಾವ ಮಟ್ಟಕ್ಕೆ ಬೇಕಿದ್ದರೂ ಹೋಗುತ್ತಾರೆ ಎನ್ನುವ ‘ಸತ್ಯ’, ಅದಕ್ಕಾಗಿ ಮುಗ್ಧ / ಸಾಮಾನ್ಯ ಜನರನ್ನೂ ಬಳಸಿಕೊಳ್ಳುವ ‘ಹುನ್ನಾರ’ ಎಲ್ಲವನ್ನೂ ಕಂಡು ರೋಸಿಹೋಗುತ್ತಿದೆ. ಈ ರಾಜಕೀಯದಲ್ಲಿ ಹೆಣ್ಣು, ಗಂಡೆಂಬ ಬೇಧವಿಲ್ಲ. ಅಷ್ಟರಮಟ್ಟಿಗೆ ಹೆಣ್ಣು ಸಮಾನತೆ ಹೊಂದಿದ್ದಾಳೆ ಎಂಬುದು ಗಮನಾರ್ಹ! ನಿಜವಾಗಿಯೂ ಇಂತಹ ಸಾಹಿತಿಗಳ / ರಾಜಕಾರಣಿಗಳ ವಿರುದ್ಧ ಹೋರಾಡಬೇಕಿರುವುದು ಈ ಹೊತ್ತಿನ ತುರ್ತು! ಕಾವ್ಯಕಮ್ಮಟದಲ್ಲಿ ‘ಪಂಪ’, ‘ಕುಮಾರವ್ಯಾಸ’ ಇವರನ್ನೆಲ್ಲಾ ಓದಿಕೊಂಡು ಮರೆತು, ಹೊಸ ಕಾವ್ಯದ ಸೃಷ್ಟಿ ಮಾಡಬೇಕಂದರು! ಅಂದರೆ ಅದರ ಅರ್ಥ ಅವರ ತತ್ವಗಳನ್ನು ನಮ್ಮಲ್ಲಿ ಅಳವಡಿಸಿಕೊಂಡು, ಒಂದಾಗಿಸಿಕೊಂಡು ಅವರನ್ನು ಮರೆತುಬಿಡುವುದು, ಆ ವ್ಯಕ್ತಿಗಳನ್ನು ಮರೆತುಬಿಡುವುದು. ಇದನ್ನು ಎಲ್ಲಾ ಸಾಹಿತಿಗಳು ತಮ್ಮಲ್ಲಿ ಅಳವಡಿಸಿಕೊಂಡರೆ, ಪೂರ್ವಾಗ್ರಹವಿಲ್ಲದೇ ಮಾತಾಡಬಹುದು. ವ್ಯಕ್ತಿನಿಷ್ಟೆಗಿಂತ, ವಸ್ತು ನಿಷ್ಟೆ ಅತಿ ಮುಖ್ಯ. ಸಾಧ್ಯವಿಲ್ಲವೇ? ರೂಮಿಯ ಗುರು ಹೇಳಿದಂತೆ ‘The Knowledge which does not steal you from yourself; Ignorance is better than such knowledge' ನಮಗೆ ಪಂಪ, ರನ್ನ, ಕುವೆಂಪು ಯಾರನ್ನೂ ಓದದಿರುವುದೇ ಒಳ್ಳೆಯದು!