Thursday, November 29, 2012

ಸಿನೆಮಾಗಳನ್ನು ಓದುವುದು!


ಚಿಕ್ಕಂದಿನಿಂದ ನಾನು ಸಿನೆಮಾಗಳನ್ನು ನೋಡಿದಕ್ಕಿಂತ ಪುಸ್ತಕಗಳನ್ನು ಓದಿದ್ದೇ ಹೆಚ್ಚು.  ಸಿನೆಮಾಗಳನ್ನು ನೋಡುವುದು ಒಳ್ಳೆಯದಲ್ಲ, ಪುಸ್ತಕಗಳನ್ನು ಓದುವುದು ಒಳ್ಳೆಯ ಹವ್ಯಾಸ ಎನ್ನುವಂತಹ ವಾತಾವರಣದಲ್ಲಿದ್ದ ನನಗೆ ಸಿನೆಮಾಗಳು ಎಂದರೆ ಅಷ್ಟಕಷ್ಟೆ.  ಬೆಂಗಳೂರಿಗೆ ಯಾರಾದರೂ ನೆಂಟರು ಬಂದರೆ ಅವರೊಟ್ಟಿಗೆ ಕನ್ನಡ ಸಿನೆಮಾಗಳಿಗೆ ಹೋಗಿ ಬಂದರೆ ಮುಗಿಯಿತು. ನಾಟಕಗಳನ್ನಂತೂ ನೋಡಿಯೇ ಇಲ್ಲವೆನ್ನುವಷ್ಟು ಕಡಿಮೆ.  ಸಿನೆಮಾಗಳು ಮನರಂಜನೆಗಾಗಿ ಮಾತ್ರ ಎಂದೇ ತಿಳಿದಿದ್ದೆ ನಾನು.  ಪುಸ್ತಕಗಳನ್ನು ಓದಿದಾಗ ಸಿಕ್ಕಂಥ ಒಳನೋಟಗಳು, ಅವುಗಳು ಬೀರಿದ ಪ್ರಭಾವಗಳು, ಚಿಂತನೆಗಳು, ಎಂದಿಗೂ ನನಗೆ ಸಿನೆಮಾಗಳನ್ನು ನೋಡಿದಾಗ ಸಿಕ್ಕಿಲ್ಲ. ಒಬ್ಬಳೇ ಕುಳಿತು, ಪುಸ್ತಕಗಳನ್ನು ಓದುತ್ತಾ, ಅವುಗಳಲ್ಲಿನ ದೃಶ್ಯಗಳನ್ನು, ಪಾತ್ರಧಾರಿಗಳನ್ನು ಕಲ್ಪಿಸುತ್ತಾ, ಯೋಚಿಸುತ್ತಾ, ಅವು ನನ್ನೊಳಗೆ ದೃಶ್ಯಗಳನ್ನು ಮೂಡಿಸುವಾಗ, ಅದನ್ನು ನೋಡುತ್ತಾ ಖುಷಿ ಪಡುತ್ತಿದ್ದೆ.  ಸಿನೆಮಾಗಳಲ್ಲಿಯಾದರೋ ಈ ಮೊದಲೇ ಯಾರದೋ ಕಲ್ಪನೆಯಲ್ಲಿ ದೃಶ್ಯಗಳು ಚಿತ್ರಿತಗೊಂಡಿರುವುದರಿಂದ, ಅದನ್ನು ಕುರಿತು ಅಲೋಚಿಸುವುದೇನು? ಕಲ್ಪಿಸಿಕೊಳ್ಳುವುದೇನು?  ಇದು ನನ್ನ ಸಮಸ್ಯೆ. ಹೀಗಾಗಿ ನಾನು ನೋಡಿರುವ ಯಾವುದೇ ಸಿನೆಮಾಗಳು, ನಾನು ಓದಿರುವ ಪುಸ್ತಕಗಳಷ್ಟು ಪ್ರಭಾವವನ್ನು ನನ್ನ ಮೇಲೆ ಬೀರಿಲ್ಲ.

ಇನ್ನೂ ಕನ್ನಡ ಸಿನೆಮಾಗಳೋ, ನಮ್ಮ ಥಿಯೇಟರ್ ಗಳಲ್ಲಿ ತುಂಬಾ ದಿವಸಗಳು ಇದ್ದರೆ ಮಾತ್ರ ಒತ್ತಾಯಕ್ಕೆ ಹೋಗಿಬರುತ್ತಿದ್ದದ್ದಷ್ಟೆ. ‘ಮುಂಗಾರು ಮಳೆ’ ಸಿನೆಮಾವನ್ನು ನಾನು ನೋಡಿದ್ದು, ‘ಸುಧಾ’ ವಾರಪತ್ರಿಕೆಯಲ್ಲಿ ಯೋಗರಾಜ್ ಭಟ್ಟರ ಸಿನೆಮಾ ಮೇಕಿಂಗ್ ಬಗೆಗಿನ ಆರ್ಟಿಕಲ್ ಓದಿ, ಅವರ ಬರಹದ ಶೈಲಿಯಿಂದ ಪ್ರಭಾವಿತಳಾಗಿ! ಟೈಟಲ್ ಚೆನ್ನಾಗಿಲ್ಲ ಅನ್ನೋ ಕಾರಣಕ್ಕೆ ಎಷ್ಟೋ ಕನ್ನಡ ಸಿನೆಮಾಗಳು ಬಾಕ್ಸ್ ಆಫೀಸ್ ನಲ್ಲಿ ಗೆದ್ದಿದ್ದರೂ ನಾನು ನೋಡೇ ಇಲ್ಲ. ಎಷ್ಟೋ ಬಾರಿ ಟಿವಿಗಳಲ್ಲಿ ಬರೇ ಸಿನೆಮಾದ ಬಗ್ಗೆಯೇ ಬಂದಾಗ ಬೇಜಾರಾಗಿ ಟಿವಿ ಆರಿಸಿದ್ದು ಕೂಡ ಉಂಟು. ಇನ್ನೂ ನಮ್ಮ ಕನ್ನಡದ ಹೆಸರಾಂತ ನಟರ ಸಿನೆಮಾಗಳನ್ನು ನೋಡಿದಾಗ ಇಷ್ಟು ಸಿಲ್ಲಿ ಸಿನೆಮಾಗಳನ್ನು ಏಕೆ ಮಾಡುತ್ತಾರೆ? ಕಥೆ ಓದಿರುವುದಿಲ್ಲವೇ? ಸಿನೆಮಾದ ಬಗ್ಗೆ ಏನೂ ಗೊತ್ತಿಲ್ಲದ ನನಗೇ ಇದರ ಹುಳುಕುಗಳು ಕಂಡುಬರುವುದಾದರೆ, ಇವರಿಗೆ ಇದರ ಅರಿವೇಕೆ ಆಗುವುದಿಲ್ಲಾ? ಇವರೆಲ್ಲಾ ಏಕೆ ಹೀಗೆ? ಕನ್ನಡದಲ್ಲಿ ಪ್ರಜ್ಞಾವಂತ ಸಿನೆಮಾ ನೋಡುಗರಿಲ್ಲವೇ? ಇಷ್ಟೇ ನನ್ನ ಆಲೋಚನೆಗಳು. ನಂತರ ನನಗ್ಯಾಕೆ? ಎಂದು ಮರೆತುಬಿಡುತ್ತಿದ್ದೆ.

ಸಂವಾದ.ಕಾಮ್ ನ ರೂವಾರಿಯಾದ ಶೇಖರ್ ಪೂರ್ಣರವರನ್ನು ಭೇಟಿಯಾಗುವವರೆಗೂ ನನ್ನ ಆಲೋಚನೆಗಳು ಇಷ್ಟಕ್ಕೆ ಸೀಮಿತವಾಗಿದ್ದವು. ಅವರು ಸಿನೆಮಾಗಳನ್ನು ವಿಮರ್ಶಿಸುವ ರೀತಿ, ಶೈಲಿ, ಒಂದು ಸಿನೆಮಾವನ್ನು ಒಡೆದು, ಕಟ್ಟಬೇಕು ಎನ್ನುವ ಅವರ ಮಾತು ನನ್ನ ಮೇಲೆ ಪ್ರಭಾವ ಬೀರಿತು. ಅವರು ಹೇಳಿದ ಬಹಳಷ್ಟು ಮಾತುಗಳು ಅರ್ಥವಾಗದಿದ್ದರೂ!, ‘ಸಿನೆಮಾಗಳನ್ನು ಓದುವುದು’ ಎಂಬ ಪರಿಕಲ್ಪನೆಯೇ ನನ್ನಲ್ಲಿ ಕುತೂಹಲವನ್ನುಂಟು ಮಾಡಿತು. ನಾನು ಇವರ ಹಾಗೇ ಎಲ್ಲಾ ಸಿನೆಮಾಗಳನ್ನು ನೋಡಿಯೇಬಿಡಬೇಕೆಂಬ ಆಸೆ ಕೂಡ ಮೂಡಿಸಿತು. ನಮ್ಮ ಸಿನೆಮಾದಲ್ಲಿನ ವಸ್ತು (ಕಂಟೆಂಟ್) ಪ್ರತಿಯೊಬ್ಬರನ್ನೂ ಚಿಂತನೆಗೀಡಾಗುವಂತೆ ಮಾಡಬೇಕು. ಸಿನೆಮಾ ನೋಡಿ, ವಾಪಾಸ್ಸು ಹೋಗುವಾಗ ಈ ವಿಷಯ ಜನರನ್ನು ಕಾಡಬೇಕು. ವಾದಗಳಾಗಬೇಕು, ಚರ್ಚೆಗಳಾಗಬೇಕು. ನಮ್ಮ ಮುಂದಿನ ಪೀಳಿಗೆಗೆ ಇದೆಲ್ಲವನ್ನೂ ದಾಖಲಿಸಬೇಕು. ಟೆಕ್ಸ್ಟ್ ಕ್ರಿಯೇಟ್ ಮಾಡಬೇಕು! ಇದು ಅವರ ಆಶಯವಾಗಿತ್ತು.  ಈ ಎಲ್ಲಾ ಅವರ ಮಾತುಗಳನ್ನು ಕೇಳುತ್ತಾ, ಚರ್ಚಿಸುತ್ತಾ ಹೋದಂತೆ ಇದೆಲ್ಲವೂ ನಮ್ಮೆಲ್ಲರ ಆಶಯವಾಗಿ ಬದಲಾಗಿತ್ತು.  ಸಿನೆಮಾದ ಗಂಧಗಾಳಿಯೂ ಇಲ್ಲದ ನನಗೆ ಇದರಿಂದಾಗಿ ಕಥೆಯೊಂದು ಚಿತ್ರಕಥೆಯಾಗಿ, ಸಿನೆಮಾ ಆಗುವಲ್ಲಿನ ಪ್ರಕ್ರಿಯೆಯ ಬಗ್ಗೆ ಅತ್ಯಂತ ಆಸಕ್ತಿ ಮೂಡಿತು. ಕೂತಲ್ಲಿ, ನಿಂತಲ್ಲಿ  ಓದಿದ ಕಥೆಗಳೆಲ್ಲವನ್ನೂ ಚಿತ್ರಕಥೆ ಮಾಡಬಹುದೇ ಎಂದು ಆಲೋಚಿಸಲು ಮನವು ತೊಡಗಿತು. 

ಪುಸ್ತಕಗಳನ್ನು ಓದುವಾಗ, ಹೇಗೆ ಕಲ್ಪನೆಯಲ್ಲಿ ನಾವು ಓದುತ್ತಿರುವ ವಿಷಯಗಳ ದೃಶ್ಯಗಳನ್ನು ಮೂಡಿಸಿಕೊಳ್ಳುತ್ತಾ ಹೋಗುತ್ತೇವೆಯೋ ಹಾಗೆಯೇ ನಿರ್ದೇಶಕನೊಬ್ಬ ತನಗೆ ಹೊಳೆದ / ಓದಿದ / ಬರೆದ ಕಥೆಯೊಂದನ್ನು, ತನ್ನ ಕಲ್ಪನೆಯಲ್ಲಿಯೇ ದೃಶ್ಯಗಳಾಗಿ ಮೂಡಿಸಿ, ಚಿತ್ರಕಥೆಯನ್ನು ಬರೆದು, ಅದನ್ನು ದೃಶ್ಯರೂಪವಾಗಿಸಿ ನಮ್ಮ ಮುಂದಿಡುತ್ತಾನೆ. ಕಥೆ ಬರೆಯುವಾಗ, ಅದನ್ನು ಚಿತ್ರಕಥೆಯಾಗಿಸುವಲ್ಲಿ ಎಡವದ ನಿರ್ದೇಶಕ, ಅದನ್ನು ತೆರೆಯ ಮೇಲೆ ದೃಶ್ಯಗಳಾಗಿ ಮೂಡಿಸುವ ಪ್ರಕ್ರಿಯೆಗಳಲ್ಲಿನ ಇತಿಮಿತಿಗಳಿಂದ ಹಲವು ಬಾರಿ ಎಡವಲು ಬಹುದು, ತನ್ನ ಕಲ್ಪನೆಯಂತೆಯೇ ಮೂಡಿಸಲು ಕಷ್ಟವಾಗಬಹುದು ಅಥವಾ ಕಲ್ಪನೆಗಿಂತ ಇನ್ನೂ ಚೆನ್ನಾಗೇ ಮೂಡಿಸಬಹುದು!  ಇದು ಆತನ ಚಾಕಚಕ್ಯತೆಯನ್ನು ಅವಲಂಬಿಸಿರುತ್ತದೆ. ಕಥೆಯೊಂದು, ಚಿತ್ರಕಥೆಯಾಗಿ, ನಂತರ ಸಿನೆಮಾ ಆಗುವುದರಿಂದ, ಈ ಕಲಾಪ್ರಕ್ರಿಯೆಯಲ್ಲಿ ನಿರ್ದೇಶಕ ಮುಖ್ಯವಾದರೂ ಕೂಡ, ಇದೊಂದು ಟೀಮ್ ವರ್ಕ್. ನಿರ್ದೇಶಕನ ಕಲ್ಪನೆಯನ್ನು ಸಾಕಾರಗೊಳಿಸುವಲ್ಲಿ ಛಾಯಾಗ್ರಾಹಕನಿಂದ ಹಿಡಿದು, ಎಡಿಟರ್ ತನಕ ಪ್ರತಿಯೊಬ್ಬರೂ ಕಷ್ಟಪಡುತ್ತಾರೆ.  ಬರಹಗಾರ / ಕಥೆಗಾರ ತನ್ನ ಕಲ್ಪನೆಯನ್ನು ಬರೆಯುವಷ್ಟು ಸುಲಭವಾಗಿ ನಿರ್ದೇಶಕ ಚಿತ್ರಿಸಲಾರ.  ಬರಹಗಾರನಿಗಿರುವಷ್ಟು ಸ್ವಾತಂತ್ರ್ಯವಾಗಲೀ, ಕಲ್ಪನಾವಿಸ್ತಾರವಾಗಲೀ, ನಿರ್ದೇಶಕನಿಗೆ ಸಾಧ್ಯವಿಲ್ಲ. ಸಿನೆಮಾ ನಿರ್ಮಾಣ ಎಂಬುದು ದುಬಾರಿ ಕಲಾಪ್ರಕಾರವಾದ್ದರಿಂದ ನಿರ್ದೇಶಕ ಬಹಳಷ್ಟು ಬಾರಿ ತನ್ನ ಕಲ್ಪನೆಯೊಂದಿಗೆ ರಾಜಿಯಾಗಬೇಕಾಗುತ್ತದೆ. ಹಾಗಾಗೀ ಸಿನೆಮಾ ನಿರ್ದೇಶಿಸುವುದು, ಬರೆಯುವುದಕ್ಕಿಂತಲೂ ಅತ್ಯಂತ ಕಷ್ಟದ ಕೆಲಸ!  

ಸಿನೆಮಾ ಎಂಬುದು ನಮ್ಮ ಸಂಸ್ಕೃತಿಯಲ್ಲಿ ಕಾಲಾನುಕಾಲದಿಂದ ಹಾಸುಹೊಕ್ಕಾಗಿವೆ ಹಾಗೂ ಬೇರೆ ಎಲ್ಲಾ ಕಲಾಪ್ರಕಾರಗಳಿಗಿಂತ ಹೆಚ್ಚು ಜನರನ್ನು ತಟ್ಟುತ್ತವೆ.  ಸಿನೆಮಾ ನೋಡಲು ಬರುವ ವೀಕ್ಷಕರು, ಹಣ ಕೊಟ್ಟು ಬರುವುದರಿಂದ ಗ್ರಾಹಕರು ಕೂಡ ಆಗುತ್ತಾರೆ. ಸಿನೆಮಾ ನಿರ್ಮಾಣವು ದುಬಾರಿಯೂ ಹಾಗೂ ವೀಕ್ಷಕರು ಗ್ರಾಹಕರೂ ಆಗುವುದರಿಂದ ಇದೊಂದು ದೊಡ್ಡ ಉದ್ಯಮವಾಗಿದೆ.  ಹಾಗಾಗಿ ನಮ್ಮ ಹೆಚ್ಚಿನ ಸಿನೆಮಾಗಳು ಹಣ ಮಾಡುವ ದಂಧೆಯಾಗಿಬಿಟ್ಟಿವೆ. ಸಿನೆಮಾ ಒಂದು ಕಲಾಪ್ರಕಾರ ಎಂಬುದನ್ನು ಮರೆತಿರುವ ನಿರ್ಮಾಪಕರು, ಹೆಸರಾಂತ ನಾಯಕನಟನಿಗಾಗಿ ಕೋಟ್ಯಾಂತರ ರೂಪಾಯಿಗಳನ್ನು (ಕಥೆಯನ್ನು ಕೂಡ ಕೇಳದೆ!) ಖರ್ಚು ಮಾಡಲು ರೆಡಿ ಇರುತ್ತಾರೆ. ವೀಕ್ಷಕರಿಗೆ ಕಥೆಯನ್ನು ದೃಶ್ಯವಾಗಿಸುತ್ತಿದ್ದೇವೆ ಎಂಬ ಕಲ್ಪನೆಯೇ ಇರದಂತೆ, ಹಣಕ್ಕಾಗಿಯೇ ಸಿನೆಮಾಗಳು ನಿರ್ಮಾಣಗೊಳ್ಳುತ್ತಿವೆ. ಹೀಗಾಗಿ ಚಲನಚಿತ್ರಗಳ ಗುಣಮಟ್ಟ ಸೊರಗುತ್ತಿವೆ. ಇದಕೆಲ್ಲಾ ಯಾರು ಕಾರಣ? ಸಿನೆಮಾವನ್ನು ಉದ್ದಿಮೆಯಾಗಿ ನೋಡುತ್ತಿರುವ ನಿರ್ಮಾಪಕರೇ? ಗುಣಮಟ್ಟದಲ್ಲಿ ರಾಜಿಯಾಗುತ್ತಿರುವ ನಿರ್ದೇಶಕರೇ?  ತಮ್ಮ ಹೆಸರನ್ನು ಬಳಸಿಕೊಳ್ಳಲು ಅನುವು ಮಾಡಿಕೊಟ್ಟು, ಹಣ ಮಾಡುತ್ತಿರುವ ನಾಯಕನಟರೇ? ತಮ್ಮ ನಾಯಕನಟನಿಗಾಗಿಯೇ ಚಿತ್ರವನ್ನು ನೋಡುತ್ತಿರುವ ವೀಕ್ಷಕರೇ? ಬದಲಾವಣೆ ಯಾರಲ್ಲಿ ತರುವುದು?  ನಿಜ! ಇದು ಕೂಡ ಒಂದು ಟೀಮ್ ವರ್ಕ್. ಸಿನೆಮಾವು ಉನ್ನತ ಕಲಾಪ್ರಕಾರ ಎಂಬುದರ ಅರಿವು ಎಲ್ಲರಲ್ಲಿಯೂ ಮೂಡಬೇಕು. ಆ ನಿಟ್ಟಿನಲ್ಲಿ ಸಂವಾದ.ಕಾಮ್ ರವರ ಕೆಲವು ಕಾರ್ಯಕ್ರಮಗಳು ಶ್ಲಾಘನೀಯ.

ಇವುಗಳಲ್ಲೊಂದು ‘ಸಿನೆಮಾ ಓದುವುದು!’. ಪುಸ್ತಕವೊಂದನ್ನು ಓದುತ್ತಾ, ಓದುತ್ತಾ ಕಲ್ಪನೆಯಲ್ಲಿ ನಾವು ಹೇಗೆ ಅವುಗಳನ್ನು ದೃಶ್ಯಗಳನ್ನಾಗಿಸಿಕೊಳ್ಳುತ್ತೇವೆಯೋ, ಆ ದೃಶ್ಯಗಳು ನಮಗೊಂದು ಒಳನೋಟಗಳನ್ನು ಹೇಗೆ ಕೊಡುತ್ತವೆಯೋ? ಹಾಗೆಯೇ, ಸಿನೆಮಾಗಳ ದೃಶ್ಯಗಳನ್ನು ನೋಡುತ್ತ, ನೋಡುತ್ತಾ, ಕಲ್ಪನೆಯಲ್ಲಿ ಅವು ಕೊಡುವ ಒಳಾರ್ಥಗಳನ್ನು ಓದುವುದು!  ಪುಸ್ತಕಗಳನ್ನು ಓದುವುದರಿಂದ, ಆ ಮೂಲಕ ಅವು ಕೊಡುವ ಒಳನೋಟಗಳನ್ನು ಅರ್ಥ ಮಾಡಿಕೊಳ್ಳುತ್ತಾ, ನಮ್ಮ ಜ್ಞಾನವನ್ನು ಹೇಗೆ ಹೆಚ್ಚಿಸಿಕೊಳ್ಳುತ್ತೇವೆಯೋ ಹಾಗೆಯೇ ಸಿನೆಮಾಗಳನ್ನು ನೋಡುತ್ತಾ, ಅವುಗಳ ಒಳಾರ್ಥಗಳಿಂದ ನಮ್ಮ ಜ್ಞಾನವನ್ನು ವೃದ್ಧಿ ಮಾಡಿಕೊಳ್ಳಲು ಸಾಧ್ಯ! ಪುಸ್ತಕಗಳು ಬೀರುವಷ್ಟೇ ಅಥವಾ ಅದಕ್ಕಿಂತಲೂ ಹೆಚ್ಚಿನ ಪ್ರಭಾವವನ್ನು ಸಿನೆಮಾಗಳು ಕೂಡ ಬೀರಬಲ್ಲುದು. ಸಾಲು ಸಾಲಾಗಿ ಕನ್ನಡ ಚಿತ್ರಗಳು ಬಾಕ್ಸ್ ಆಫೀಸಿನಲ್ಲಿ ಸೋಲುತ್ತಿರುವ ಈ ಸಂದರ್ಭದಲ್ಲಿ ಇಂತಹ ಕಾರ್ಯಕ್ರಮಗಳು ಅಗತ್ಯವಾಗಿದೆ.  ‘ಸಿನೆಮಾಗಳನ್ನು ಓದುವುದರ’ ಮೂಲಕ ಪ್ರಜ್ಞಾವಂತ ವೀಕ್ಷಕರು ಹುಟ್ಟಿಕೊಳ್ಳುತ್ತಾರೆ. ಎಲ್ಲಿ ಪ್ರಜ್ಞಾವಂತ ವೀಕ್ಷಕರು ಇರುತ್ತಾರೋ, ಆಗ ಸಿನೆಮಾ ನಿರ್ಮಾಣದ ತಂಡಗಳು ಕೂಡ ಪ್ರಜ್ಞಾವಂತರಾಗಿಯೇ ಕೆಲಸ ಮಾಡಬೇಕಾದ ಅಗತ್ಯ ಹುಟ್ಟಿಕೊಳ್ಳುತ್ತದೆ. ಈ ಮೂಲಕ ನಮ್ಮ  ಸಿನೆಮಾಗಳು ಕೂಡ ಅತ್ಯುತ್ತಮ ಕಲಾಪ್ರಕಾರವಾಗಿ ನಮ್ಮ ಸಂಸ್ಕೃತಿಯಲ್ಲಿ ನೆಲೆ ನಿಲ್ಲುತ್ತವೆ. ಈ ಆಶಯದಲ್ಲಿಯೇ ಸಂವಾದ.ಕಾಮ್ ಹಾಗೂ ಗೆಳೆಯರು, ತಾವು ಓದಿದ ಸಿನೆಮಾಗಳನ್ನು, ಪುಸ್ತಕದ ಮೂಲಕ ಮುಂದಿಡುತ್ತಿದ್ದಾರೆ.  ಅವರು ಅದನ್ನು ಹೇಗಾದರೂ ಓದಿರಲಿ,  ಅವರು ಓದಿದ್ದು ನಮಗರ್ಥವಾಗದಿದ್ದರೂ, ಅಥವಾ ಅದೇ ಸಿನೆಮಾಗಳನ್ನು ನಾವು ನೋಡುವಾಗ, ಅವರು ಬರೆದಿರುವುದಕ್ಕಿಂತ ಭಿನ್ನವಾಗಿಯೇ ನಾವು ಓದಿಕೊಂಡರೂ, ‘ಸಿನೆಮಾಗಳನ್ನು ಓದಲು ಸಾಧ್ಯ!’ ಎಂಬುದು ನಮಗೆಲ್ಲರಿಗೂ ಅರ್ಥವಾದರೆ, ಅವರ ಈ ಪ್ರಯತ್ನಕ್ಕೊಂದು ಜಯ.  


2 comments:

  1. naanu olleya cinema nodalu istapaduttene.....adare adakke cinema oduvudu enba e term hechchu arthapurnavagide annisitu

    ReplyDelete
  2. naanu olleya cinema nodalu istapaduttene.....adare adakke cinema oduvudu enba e term hechchu arthapurnavagide annisitu

    ReplyDelete