ಸ್ವಪ್ನ ಸಾರಸ್ವತದಲ್ಲಿ ಒಂದು ಮಾತಿದೆ, ನಾಗ್ಡೋ ಬೇತಾಳ ಹೇಳುವುದು ‘ಮಾತುಗಳು ಅರ್ಥ ಕಳೆದುಕೊಳ್ಳುತ್ತವೆ! ಶಾಪಗಳು ತಗಲುವುದಿಲ್ಲ, ಅಂಥ ಕಾಲ ಬರುತ್ತದೆ! :( ಹ್ಮ್. ಅಂಥ ಕಾಲ ಬಂದಿದೆ. ಮೊನ್ನೆ ಡೆಲ್ಲಿ ರೇಪ್ ನಂಥ ಭೀಕರ ದೌರ್ಜನ್ಯ ವಾಗಿರಬಹುದು ಅಥವಾ ಪ್ರತಿ ನಿತ್ಯ ನಡೆಯುತ್ತಿರುವ ಇಂತಹ ಅಮಾನುಷ ಘಟನೆಗಳನ್ನು ನೋಡುತ್ತಿದ್ದಾಗಲೆಲ್ಲಾ ನನಗೆ ಇದೇ ಮಾತು ನೆನಪಿಗೆ ಬರುತ್ತದೆ.
ನಾನು ಸಣ್ಣವಳಾಗಿದ್ದಾಗ, ಅಜ್ಜನ ಊರಿಗೆ ಹೋಗಿದ್ದಾಗ (ಮಂಗಳೂರಿನ ಬಳಿಯ ಪುಟ್ಟ ಹಳ್ಳಿ) ಬಾಗಿಲುಗಳಿಗೆ ಚಿಲಕವೇ ಹಾಕುತ್ತಿರಲಿಲ್ಲ, ಮನೆಗಳಲ್ಲಿ ಅಲ್ಮೇರಾ ಇವುಗಳು ಕೂಡ ಮರದ್ದೇ ಆಗಿದ್ದು, ಬೀಗ ಎಂಬುದೆಲ್ಲಾ ನಾನು ನೋಡಿರಲಿಲ್ಲ. ತಾಮ್ರದ ಬಿಂದಿಗೆಗಳು ಹಾಗೇಯೇ ಬಾವಿ ಕಟ್ಟೆಯ ಬಳಿ ಇಟ್ಟು ಬರುತ್ತಿದ್ದರು. ನಾನು ಬೆಂಗಳೂರಿನಿಂದ ಹೋಗುತ್ತಿದ್ದರಿಂದ ನನಗೆ ಇವೆಲ್ಲವೂ ಆಶ್ಚರ್ಯ! ಅಣ್ಣನನ್ನು ಕೇಳಿದ್ದಕ್ಕೆ, ಯಾರೂ ತೆಗೆದುಕೊಂಡು ಹೋಗುವುದಿಲ್ಲ, ಅಷ್ಟು ನಂಬಿಕೆ ಇದೆ ಎಂದು ಹೇಳುತ್ತಿದ್ದ. ಆದರೆ ಆಗ ಬೆಂಗಳೂರಿನಲ್ಲಿ ಸ್ವಲ್ಪ ಕಳ್ಳತನದ ಭಯವಿತ್ತು. ಆದರೂ ಸಿಕ್ಕಿದನ್ನಷ್ಟೇ ಅಂದರೆ, ಕಿಟಕಿಯಲ್ಲಿಟ್ಟ ವಾಚು, ರೇಡಿಯೋ, ಹೊರಗೆ ಒಣಗಿ ಹಾಕಿದ ಬಟ್ಟೆಗಳು, ಇಂತಹವುಗಳನ್ನೇ ತೆಗೆದುಕೊಂಡು ಹೋಗುತ್ತಿದ್ದರೇ ವಿನಃ ಮನೆಗೆ ನುಗ್ಗಿ, ದೋಚಲು ಅಥವಾ ಮನೆಯವರನ್ನು ಕೊಲೆ ಮಾಡಲು ಭಯವಾಗುತ್ತಿತ್ತು. ಏಕೆಂದರೆ ಒಂದು ಕೂಗು ಹಾಕಿದ ತಕ್ಷಣ ಅಕ್ಕ, ಪಕ್ಕದ ಮನೆಯವರೆಲ್ಲರೂ ಸೇರಿ, ಕಳ್ಳನನ್ನು ಚಚ್ಚಿ ಹಾಕುತ್ತಿದ್ದರು. ಇನ್ನೂ ಜಿಂಡಾಲ್ ಮುಂತಾದ ಕ್ವಾರ್ಟರ್ಸ್ ಮನೆಗಳಲ್ಲಿ (ಬೆಂಗಳೂರಿನಲ್ಲಿಯೂ ಕೂಡ) ಹೊರಗೆ ಎಲ್ಲಿಗೆ ಹೋಗುವಾಗಲೂ ಚಿಲಕ ಹಾಕುವ ಪದ್ಧತಿ ಇರುತ್ತಿರಲಿಲ್ಲ. ನೆರೆಹೊರೆಯವರಲ್ಲಿ ಅಷ್ಟೊಂದು ನಂಬಿಕೆ ಆಗ.
ಇನ್ನೂ ಮನೆಯಲ್ಲಿ ಕೆಲಸದವಳನ್ನು ಇಟ್ಟುಕೊಳ್ಳುವ ಪದ್ಧತಿ ಕೂಡ ಇರಲಿಲ್ಲ. ಮನೆಯವರೇ ಮಕ್ಕಳಾದಿಯಾಗಿ ಎಲ್ಲರೂ ಸೇರಿಕೊಂಡು ಮನೆಕೆಲಸವನ್ನೆಲ್ಲಾ ಮಾಡಿಕೊಳ್ಳುತ್ತಿದ್ದರು. ಮನೆಯಲ್ಲಿನ ದೊಡ್ಡವರು ಎಲ್ಲಿಗಾದರೂ ಹೋಗುವುದಾದರೆ, ಮಕ್ಕಳು ಶಾಲೆಯಿಂದ ಬಂದ ಮೇಲೆ ಪಕ್ಕದ ಮನೆಯವರು ನೋಡಿಕೊಳ್ಳುತ್ತಿದ್ದರು. ಒಬ್ಬರಿಗೊಬ್ಬರು ಸಹಾಯ ಮಾಡುತ್ತಿದ್ದರು. ಎಲ್ಲರಲ್ಲಿಯೂ ಒಂದು ಬದ್ಧತೆ ಇತ್ತು. ಸಹಕಾರವಿತ್ತು. ಕಿತ್ತಾಡಿದರೂ ಅದು ಆ ಕ್ಷಣಕಷ್ಟೇ ಆಗಿರುತ್ತಿತ್ತು. ನಂತರ ಒಂದಿಷ್ಟು ದಿವಸಗಳಾದ ಮೇಲೆ, ಯಾವುದೋ ಜಾತ್ರೆಯೋ, ಹಬ್ಬವೋ ಬಂದಾಗ ಮತ್ತೆ ಒಂದಾಗುತ್ತಿದ್ದರು. ಮಕ್ಕಳು ಕೂಡ ಹೊಡೆದಾಡಿಕೊಂಡರೂ, ಒಂದಷ್ಟು ಕ್ಷಣಗಳಾದ ಮೇಲೆ ಮತ್ತೆ ಒಂದುಗೂಡಿ ಆಡುತ್ತಿದ್ದರು. ಇಲ್ಲಿ ಅವರು ಶ್ರೀಮಂತರು, ನಾವು ಬಡವರು, ಅವರು ಓದಿದವರು, ನಾವು ಅನಕ್ಷರಸ್ಥರು ಎಂಬ ಭೇಧ ಭಾವ ಇರುತ್ತಿರಲಿಲ್ಲ. ಮಕ್ಕಳು ಮನೆಯಲ್ಲಿ ಗಲಾಟೆ ಮಾಡದಿದ್ದರೇ ಸೈ, ಹೊರಗೆ ಹೋಗಿ ಆಡಿಕೊಳ್ಳಲಿ ಎಂಬುದಷ್ಟೇ ದೊಡ್ಡವರು ಯೋಚಿಸುತ್ತಿದ್ದರು. ಅಣ್ಣ ಒಮ್ಮೆ ಕೆಟ್ಟ ಪದವನ್ನು ಕಲಿತು ಬಂದಾಗ ಅಮ್ಮ ಬಾಸುಂಡೆ ಬರುವಂತೆ ಬಾರಿಸಿದ್ದು ನನಗೆ ಈಗಲೂ ನೆನಪಿದೆ. ಅಮ್ಮ ಒಂದಕ್ಷರವೂ ಪಕ್ಕದ ಮನೆಯ ಹುಡುಗನಿಗೆ ಬೈದಿರಲಿಲ್ಲ. ನಮ್ಮ ಮನೆಯಲ್ಲಿ ಇಷ್ಟು ಸಂಸ್ಕಾರವಿದ್ದು ನೀನು ಕಲಿತಿದ್ದು ಹೇಗೆ? ಎಂಬುದಷ್ಟೇ ಅವಳ ಪ್ರಶ್ನೆಯಾಗಿತ್ತು! ಅಷ್ಟೇ ಕೊನೆ, ಅಣ್ಣ ಇವತ್ತಿಗೂ ಎಷ್ಟೇ ಕೋಪ ಬಂದರೂ, ಕೆಟ್ಟ ಪದಗಳನ್ನು ಉಪಯೋಗಿಸುವುದಿಲ್ಲ. ಅವನಿಗೆ ಹೊಡೆದದ್ದು ನೋಡಿದ ನನಗೇ ಬುದ್ಧಿ ಕಲಿಯಲು ಅಷ್ಟೇ ಸಾಕಿತ್ತು!
ಬಾಯಿ ಮಾತಿನ ಆಧಾರದ ಮೇಲೆ ಅಪ್ಪ, ಅವರ ಕಸಿನ್ ಒಬ್ಬನಿಗೆ ತಾವು ಕೆಲಸ ಮಾಡುತ್ತಿದ್ದ ಜಾಗದಲ್ಲೇ ಕೆಲಸ ಕೊಡಿಸಿದ್ದರು. ಆತ ಕಲೆಕ್ಟ್ ಮಾಡಿದ ಹಣವನ್ನೆಲ್ಲಾ ಸರಿಯಾಗಿ ಬ್ಯಾಂಕ್ ಗೆ ಕಟ್ಟದೇ, ಸ್ನೇಹಿತನ ಮಾತು ಕೇಳಿ ಹಣವನ್ನು ಹಾಳು ಮಾಡಿಕೊಂಡು ಓಡಿ ಹೋದ. ಅಪ್ಪ ಕಷ್ಟ ಪಟ್ಟು, ಬಡ್ಡಿ, ಚಕ್ರಬಡ್ಡಿ ಎಂದು ಸಾಲ ತಂದು ಮಾತು ಉಳಿಸಿಕೊಂಡಿದ್ದರು. ಹಾಗೆಯೇ ಯಾವುದೇ ಸಹಿ ಮಾಡಿಸಿಕೊಳ್ಳದೇ ಸಾಲ ಕೊಟ್ಟಿದ್ದವರಿಗೂ ಕೂಡಾ ತಮ್ಮೆಲ್ಲಾ ಶಕ್ತಿ ಮೀರಿ (ಹೆಂಡತಿ, ಮಕ್ಕಳಿಗೆ ತೊಂದರೆಯಾದರೂ ಕೂಡ), ಹಣ ತೀರಿಸಿದ್ದರು. ನಾನು ಆಗ ಬಹಳ ಸಣ್ಣವಳು. ನನಗೇ ತಿಳಿದಂತೆ, ಅಪ್ಪ ತನ್ನನ್ನು ಈ ಸ್ಥಿತಿಗೆ ತಂದಿಟ್ಟ ತನ್ನ ತಮ್ಮನನ್ನು ಒಮ್ಮೆಯೂ ಬೈದುಕೊಂಡಿರಲಿಲ್ಲ. ಅಪಾರವಾಗಿ ನೊಂದಿದ್ದರು. ಅಮ್ಮ ಕೂಡ ನಾನು ಹಿಂದೆ ಮಾಡಿದ ಯಾವುದೋ ಕರ್ಮ ಎಂದೇ ನೊಂದುಕೊಳ್ಳುತ್ತಿದ್ದಳು ಹೊರತು ಅದನ್ನು ಲೋಕದ ಮೇಲೆ ತೀರಿಸಿಕೊಂಡಿರಲಿಲ್ಲ. ಇದೇ ಚಿಂತೆಯಲ್ಲಿ ಅನಾರೋಗ್ಯದಿಂದ ತೀರಿಕೊಂಡ ನಂತರ, ಉಳಿದಿದ್ದ ಅಲ್ಪಸ್ವಲ್ಪ ಸಾಲವನ್ನು ಅಣ್ಣ ತೀರಿಸಿದ್ದ. ಅಪ್ಪನಿಗೆ ಅವರು ಕೊಟ್ಟಿದ್ದಾರೆ ಎಂಬ ಯಾವುದೇ ಪ್ರೂಫ್ ಇಲ್ಲದಿದ್ದರೂ ಮಾತು ಮುಖ್ಯವಾಗಿತ್ತು. ಅಷ್ಟರಮಟ್ಟಿಗಿನ ಬದ್ಧತೆ ಎಲ್ಲರಲ್ಲಿಯೂ ಇತ್ತು. ಅವರು ಮಾಡಿದ್ದು ಅವರಿಗೇ ಎಂದಷ್ಟೇ ಹೇಳಿ ತನ್ನೆಲ್ಲಾ ಸಿಟ್ಟನ್ನು ತೀರಿಸಿಕೊಳ್ಳುತ್ತಿದ್ದ ಅಮ್ಮ, ಈಗಲೂ ತನ್ನ ಆ ಮೈದುನನನ್ನು (ತನ್ನಿಡೀ ಬದುಕೇ ಆತನಿಂದ ಹಾಳಾಗಿದ್ದರೂ!) ಮಾತನಾಡಿಸುತ್ತಾಳೆ ಎಂದರೆ ಎಂಥವರಿಗಾದರೂ ಆಶ್ಚರ್ಯವಾಗಬಹುದು.
ಹಾಗಾದರೇ ಹೆಣ್ಣಿನ ಮೇಲೆ ಈ ಹಿಂದೆ ದೌರ್ಜನ್ಯ ಆಗುತ್ತಿರಲಿಲ್ಲವೇ? ರಾಮಾಯಣ, ಮಹಾಭಾರತ ಕಾಲದಿಂದಲೂ ಹೆಣ್ಣಿನ ಮೇಲೆ ಈ ತರಹದ ಹಿಂಸೆ / ದೌರ್ಜನ್ಯ ನಡೆಯುತ್ತಿತ್ತು. ಆದರೆ ನಮಗೆ ತಿಳಿಯುತ್ತಿರಲಿಲ್ಲ. ತಿಳಿದರೂ, ನಮಗೆಲ್ಲಾ ದ್ರೌಪದಿಯನ್ನು ಕೆಣಕಿದ ದುರ್ಯೋಧನ, ದುಶ್ಯಾಸನ, ಕೀಚಕರ ಗತಿ ಹೀಗಾಯಿತು, ಹೆಣ್ಣನ್ನು ಕೆಣಕಿದರೆ ಹೀಗಾಗುವುದು ಎಂಬ ನೀತಿ ಪಾಠ ಮನೆ, ಮನೆಯಲ್ಲೂ ನಡೆಯುತ್ತಿತ್ತು. ಪ್ರತಿ ವರ್ಷ ಹೋಳಿಹುಣ್ಣಿಮೆಯಂದು ಕಾಮದಹನ ನಡೆದಾಗ ಹೇಳುತ್ತಿದ್ದ ಎಷ್ಟೋ ವಾಕ್ಯಗಳು ಆಗ (ಕಾಮಣ್ಣ ಮಕ್ಕಳೇ, ಕಾಳೇ, ಸೂಳೇ ಮಕ್ಕಳೇ... ಅರ್ಧರ್ಧ ನೆನಪಿದೆ) ನನಗೆ (ಚಿಕ್ಕವಳಿದ್ದದ್ದರಿಂದ) ಅರ್ಥವಾಗದಿದ್ದರೂ, ಯುವಕರಿಗೆ ನೀತಿಪಾಠವಾಗಿರುತ್ತಿತ್ತು. ಸಮಾಜದಲ್ಲಿ ನಾವು ಹೇಗಿರಬೇಕು? ಎಂಬುದನ್ನು ಸೂಚ್ಯವಾಗಿ, ಸೂಕ್ಷ್ಮವಾಗಿ ತಿಳಿಸುತ್ತಿದ್ದರು. ದೇವಸ್ಥಾನಗಳಲ್ಲಿ ನಡೆಯುವ ಪೂಜೆ, ಪುನಸ್ಕಾರಗಳು, ಮೈಮೇಲೆ ಬರುವ ದೇವರು, ದೆವ್ವ ಎಲ್ಲವೂ ನೀತಿ ಹೇಳುತ್ತಿತ್ತೇ ಹೊರತು ಕೆಟ್ಟದ್ದು ಮಾಡಿ ಎಂದೆಲ್ಲೂ ಹೇಳುತ್ತಿರಲಿಲ್ಲ. ಹಾಗೂ ಎಲ್ಲರೂ ಭಯಭಕ್ತಿಯಿಂದಲೇ ಇವೆಲ್ಲಾ ಸಮಾರಂಭಗಳಲ್ಲಿ ಪಾಲ್ಗೊಳ್ಳುತ್ತಿದ್ದರು. ಒಳ್ಳೆಯವರಿಗೆ ಒಳ್ಳೆಯದೇ ಆಗುತ್ತದೆ, ಕೆಟ್ಟದು ಮಾಡಿದರೆ ದೇವರು ಶಿಕ್ಷೆ ಕೊಡುತ್ತಾನೆ ಎಂಬ ಭಯವಿತ್ತು. ಏನೇ ದೌರ್ಜನ್ಯಗಳು ಬೆಳಕಿಗೆ ಬರುವಷ್ಟು ದಿನಗಳು ಮಾತ್ರ ಅಪರಾಧಿಗಳು ಸುರಕ್ಷಿತರಾಗಿರುತ್ತಿದ್ದರು. ಸಿಕ್ಕಿ ಬೀಳುವೆನೆಂಬ ಭಯ, ಜೊತೆಗೆ ಹೀಗೆ ಮಾಡಿದೆನೆಂಬ ಗಿಲ್ಟ್ ಅವರಿಗೆ ಕಾಡುತ್ತಿರುತ್ತಿತ್ತು. ಹೀಗೆಲ್ಲಾ ಪೈಶಾಚಿಕ ಕೃತ್ಯ ನಡೆಸಿ, ಆರಾಮಾಗಿ ಬೆಳಿಗ್ಗೆ ಎದ್ದು ಕೆಲಸಕ್ಕೆ ಹೋಗುವಂಥ ಕ್ರೂರ ಮನಸ್ಥಿತಿ ಇರಲಿಲ್ಲ!
ಇನ್ನೂ ಶಾಲೆಗಳಲ್ಲಂತೂ ದಿನಕ್ಕೊಂದು ಕಥೆ, ಅದರ ನೀತಿ ಪಾಠವನ್ನು ನಾವು ಬರೆದುಕೊಂಡು ಹೋಗಬೇಕಿತ್ತು. ಚೆನ್ನಾಗಿ ಓದುತ್ತಿದ್ದವರೇ ಶಾಲಾ ಲೀಡರ್ ಗಳಾಗುತ್ತಿದ್ದರು. ತಂಟೆ ಮಾಡಿದವರಿಗೆ, ಸೋಮಾರಿತನ ಮಾಡುವವರಿಗೆ ಬಾರು ಕೋಲಿನಿಂದ ಅಂಗೈಗೆ ಪೆಟ್ಟು ಬೀಳುತ್ತಿತ್ತು. ಪ್ರತಿ ಬಾರಿಯು ಮೊದಲಿಗನಾಗಿ ಬಂದು, ಒಮ್ಮೆ ಯಾವುದೇ ಕಾರಣಕ್ಕಾಗಿ, ಆ ಸ್ಥಾನದಿಂದ ಕೆಳಗಿಳಿದರೆ, ನಿರ್ದಾಕ್ಷಿಣ್ಯವಾಗಿ ಆತನ ಲೀಡರ್ ಷಿಪ್ ಕಿತ್ತುಕೊಳ್ಳಲಾಗುತಿತ್ತು. ಯಾವುದೇ ರೀತಿಯ ವಶೀಲಿ ನಡೆಯುತ್ತಿರಲಿಲ್ಲ. ಹುಡುಗಿಯರು ಒಟ್ಟಿಗೆ ಕುಳಿತರೆ, ಹುಡುಗರು ಒಟ್ಟಿಗೆ ಕುಳಿತರೆ ಗಲಾಟೆಯಾಗುವುದೆಂದು, ಒಬ್ಬ ಹುಡುಗ, ಒಬ್ಬ ಹುಡುಗಿ ಹೀಗೆ. ಪಕ್ಕದಲ್ಲಿ ಕೂಡಿಸುತ್ತಿದ್ದರು. ಹೈಸ್ಕೂಲುಗಳಲ್ಲಿಯೂ ಹೀಗೆ ಇರುತ್ತಿತ್ತು. ಯಾರಾದರೂ ತಪ್ಪು ಮಾಡಿದರೆ, ಸರಿ ಮಾಡಿದವ / ದವಳ ಕಾಲ ಕೆಳಗೆ ತೂರಿಸುತ್ತಿದ್ದರು. ಇಂಥ ಶಿಕ್ಷೆಗಳಿಗೆಲ್ಲಾ ಹುಡುಗ, ಹುಡುಗಿ ಎಂಬ ಭೇಧ ಭಾವ ಇರುತ್ತಿರಲಿಲ್ಲ. ಪಕ್ಕದಲ್ಲಿ ಕೂತಾಕ್ಷಣ, ಲೈಂಗಿಕ ಬಯಕೆಗಳಾಗಲೀ, ತೀಟೆಗಳಾಗಲೀ, ದೈಹಿಕವಾಗಿ ಬಯಸುತ್ತಿದ್ದದ್ದಾಗಲೀ, ಇವ್ಯಾವುದೂ ಕಾಡುತ್ತಿರಲಿಲ್ಲ. ಶಿಕ್ಷಕ / ಶಿಕ್ಷಕಿಯರನ್ನು ಕಂಡರೆ ಆರಾಧನಾ ಭಾವ ಇರುತ್ತಿತ್ತೇ ಹೊರತು ಲೈಂಗಿಕ ಆಸೆಗಳು ಅರಳುತ್ತಿರಲಿಲ್ಲ. ಮದುವೆಯಾಗದೇ ಇವೆಲ್ಲವೂ ತಪ್ಪು ಎನ್ನುವ ಭಾವ ಹೆಚ್ಚು ಕಡಿಮೆ ಎಲ್ಲರಲ್ಲಿಯೂ ಇತ್ತು. ಲೈಂಗಿಕ ಶೋಷಣೆಗೆ ಹೆಣ್ಣು ಮಕ್ಕಳು, ತಮ್ಮ ಮನೆಯವರಿಂದಲೇ, ದೊಡ್ಡವರಿಂದಲೇ ಬಲಿಯಾಗುತ್ತಿದ್ದರೇ ಹೊರತು, ಮತ್ತೊಬ್ಬ ಸಹಪಾಠಿ ಮಾಡುತ್ತಿದ್ದದ್ದು ಅತಿ ವಿರಳ. ಯಾವುದೇ ಶಾಲಾ ದಿನಾಚರಣೆಗಳೂ ಸುಮ್ಮನೇ ಕಾಟಾಚಾರಕ್ಕೆ ಮಾಡುತ್ತಿರಲಿಲ್ಲ. ನನಗೆ ಈಗಲೂ ವಿಶ್ವ ವಿನೂತನ ಹಾಡು ನಿನ್ನೆ, ಮೊನ್ನೆ ಹಾಡಿದಂತಿದೆ. ಅಷ್ಟು ತಲ್ಲೀನರಾಗಿ ಹಾಡುತ್ತಿದ್ದೆವು. ಭಗತ್ ಸಿಂಗ್, ಅಜಾದ್ ಇವರೆಲ್ಲರ ಹೆಸರು ಕೇಳಿದರೆ ಮೈಮನವೆಲ್ಲಾ ರೋಮಾಂಚನವಾಗುತ್ತಿತ್ತು.
ಮಾಧ್ಯಮಗಳು ಗಮನವನ್ನು ಕೊಡುತ್ತಿರಲಿಲ್ಲವೋ? ಘಟನೆಗಳೇ ನಡೆಯುತ್ತಿರಲಿಲ್ಲವೋ? (ನಾನು ಚಿಕ್ಕವಳಿದ್ದರಿಂದ ಓದುತ್ತಿರಲಿಲ್ಲವೋ?) ಒಟ್ಟಿನಲ್ಲಿ ಇಷ್ಟೊಂದು ರೇಪ್ ಘಟನೆಗಳು ನಮ್ಮ ಗಮನಕ್ಕೆ ಬರುತ್ತಿರಲಿಲ್ಲ. ಇನ್ನೂ ಸಿನೆಮಾಗಳಾಗಬಹುದು, ಪುಸ್ತಕಗಳಾಗಬಹುದು ಯಾವುದೇ ಕಲಾ ಮಾಧ್ಯಮಗಳಲ್ಲಿಯೂ ಅಪರಾಧಿಗಳ ಅಂತ್ಯ ಭೀಕರವಾಗಿರುತ್ತಿತ್ತು. ಆತ ಚಿತ್ರದುದ್ದಕ್ಕೂ ಎಷ್ಟೇ ಕಷ್ಟ ಪಟ್ಟರೂ, ಯಾವುದೇ ತಪ್ಪು ಮಾಡದ ನಾಯಕನೇ ಅಂತ್ಯದಲ್ಲಿ ಗೆಲ್ಲುತ್ತಿದ್ದ! ಪ್ರತಿಯೊಬ್ಬರೂ ತಮ್ಮನ್ನು ನಾಯಕನ ಪಾತ್ರದಲ್ಲಿಯೇ ಗುರುತಿಸಿಕೊಳ್ಳುತ್ತಿದ್ದರು. ಆ ಮೂಲಕ ನೀಚ ಕೆಲಸಗಳನ್ನು ಮಾಡಿದ ವಿಲನ್ ನನ್ನು ಕೊಚ್ಚಿ ಕೊಲ್ಲುತ್ತಿದ್ದರು. ಬಲಾತ್ಕಾರಕ್ಕೆ ಒಳಗಾಗುವ ನಾಯಕನ ತಂಗಿ, ಆ ಕಾಮುಕನನ್ನು ಕೊಲ್ಲುವ ನಾಯಕ! ಒಂದೇ, ಎರಡೇ! ನಮ್ಮ ಚಿತ್ರ ನಟಿ ತಾರಾ ಎಷ್ಟು ಚಿತ್ರಗಳಲ್ಲಿ ಬಲಾತ್ಕಾರಕ್ಕೊಳಗಾಗಿ ಸತ್ತಿಲ್ಲ?! ಉಪ್ಪಾ ತಿಂದ ಮೇಲೆ ನೀರ ಕುಡಿಯಲೇ ಬೇಕು ಎನ್ನುತ್ತಿದ್ದ ಚಿತ್ರರಂಗ ಇದ್ದಕಿದ್ದಂತೆ ತಪ್ಪು ಮಾಡದವ್ರು ಯಾರವ್ರೇ? ಅಂತಾ ಹಾಡಲು ಶುರು ಮಾಡಿತು. ಸಮಾಜದಿಂದ ಚಿತ್ರಗಳು ತಯಾರಾಗುತ್ತವೆಯೋ? ಚಿತ್ರಗಳಿಂದ ಸಮಾಜ ಪ್ರಭಾವಿತವಾಗುತ್ತದೆಯೋ? ಅರಿಯದು! ಒಟ್ಟಿನಲ್ಲಿ ಇದ್ದಕ್ಕಿದ್ದಂತೆ ಎಲ್ಲವೂ ಬದಲಾಯಿತು. ನಮ್ಮ ಟಿವಿ ಧಾರಾವಾಹಿಗಳಿಂದ ಹಿಡಿದು ಚಲನಚಿತ್ರಗಳವರೆಗೂ ಎಲ್ಲದರಲ್ಲಿಯೂ ಮೌಲ್ಯಗಳು ಕುಸಿಯಿತು.
ಹಾಗಾದರೇ ಇಷ್ಟೆಲ್ಲಾ ಇದ್ದದ್ದು ಹಠಾತ್ತಾಗಿ ಬದಲಾಗಿದ್ದು ಹೇಗೆ? ನಾವೇಕೇ ಇಷ್ಟು ಕ್ರೂರಿಗಳಾಗಿದ್ದೇವೆ? ನಮ್ಮೆಲ್ಲರಿಗೂ ಏನಾಗುತ್ತಿದೆ? ನಮ್ಮ ಮುಂದಿನ ಪೀಳಿಗೆಗೆ ನಾವು ಕೊಡುತ್ತಿರುವುದು ಏನನ್ನೂ? ಏನನ್ನೂ ನಾವು ಸೂಚಿಸುತ್ತಿದ್ದೇವೆ? ಬೆಳಿಗ್ಗೆ ೧೦ ರಿಂದ ೫ ಗಂಟೆಯವರೆಗೂ ಕೆಲಸ, ನಂತರ ಏನಾದರೂ ಹವ್ಯಾಸ, ಹಾಡು, ಹಸೆ, ಹರಿಕಥೆ, ದೇವಸ್ಥಾನ, ನೆರೆಹೊರೆಯವರು ಎಂದಿದ್ದ ಹಿರಿಯರು, ಶಾಲೆಗೆ ಹೋಗಿ ಬಂದು, ರಾತ್ರಿಯ ತನಕ ಆಡುತ್ತಿದ್ದ ಮಕ್ಕಳು, ಒಟ್ಟಿನಲ್ಲಿ ಎಲ್ಲರಲ್ಲೂ ಸಮಾಧಾನದ ಸ್ಥಿತಿ ಇರುತ್ತಿತ್ತು. ಹಣದ ಕೊರತೆ ಇದ್ದರೂ ಕೂಡ ಯಾರಲ್ಲೂ ಒತ್ತಡವಿರುತ್ತಿರಲಿಲ್ಲ. ಇದ್ದಕಿದ್ದಂತೆ ಗ್ಲೋಬಲೈಸೇಷನ್ ಎಂದು ಅಥವಾ ಐಟಿ, ಬಿಟಿ, ಬಿಪಿಒ ಉದ್ಯಮಗಳು ಶುರುವಾದ ಮೇಲಂತೂ ಇದ್ದಕ್ಕಿದ್ದಂತೆ, ಮನೆ-ಮಠಗಳ, ಸಮಾಜದ ಸ್ಥಿತಿ ಬದಲಾಗಿಬಿಟ್ಟಿತು. ಚೈನಾ ವಸ್ತುಗಳು ಕಡಿಮೆ ಕ್ವಾಲಿಟೀ, ಕಡಿಮೆ ಹಣಕ್ಕೆ ಸ್ಪರ್ಧೆ ಕೊಡಲು ಶುರುವಾದೊಡನೆಯೇ, ನಾವು ಕೂಡ ಕಡಿಮೆ ಕ್ವಾಲಿಟೀ ವಸ್ತುಗಳನ್ನು ಉತ್ಪಾದಿಸಲು ಶುರು ಮಾಡಿದೆವು! ಎಲ್ಲರ ಬಳಿಯೂ ಹಣ ಓಡಾಡತೊಡಗಿತು. ಮಕ್ಕಳಾದಿಯಾಗಿ ಎಲ್ಲರಲ್ಲೂ ಒತ್ತಡ, ಧಾವಂತ. ಯಾರಿಗೂ ನಾವು ಏನು ಮಾಡುತ್ತಿದ್ದೇವೆ? ಯಾವುದರ ಹಿಂದೆ ಓಡುತ್ತಿದ್ದೇವೆ? ಯಾವುದರ ಬಗ್ಗೆಯೂ ತಲೆಕೆಡಿಸಿಕೊಳ್ಳುವಷ್ಟು ಪುರುಸೊತ್ತಿಲ್ಲ. ಒಟ್ಟಿನಲ್ಲಿ ಹಿಂದೆ, ಮುಂದೆ, ಅಕ್ಕ, ಪಕ್ಕ ಎಲ್ಲೂ ನೋಡಬೇಡಾ, ನಿಲ್ಲಬೇಡಾ, ಓಡು, ಅಷ್ಟೇ ಎಂದು ಹಿರಿಯರು ಕಿರಿಯರಿಗೆ ಬೋಧನೆ ಮಾಡಲಾರಂಭಿಸಿದರು. ಕಿರಿಯರು ಓಡಲಾರಂಭಿಸಿದರು.
ಹವ್ಯಾಸಗಳಿಂದ ಹಿಡಿದು ಪ್ರತಿಯೊಂದು ವಿದ್ಯೆಯೂ ಕಲಿಯಲೂ / ಕಲಿಸಲೂ ಹಣ ಮಾಡುವ ದಂಧೆಯಾಯಿತು. ಸಂಬಂಧಗಳಿಂದ ಹಿಡಿದು ಎಲ್ಲಾ ವಿಷಯಗಳಲ್ಲೂ ಗುಣಮಟ್ಟ ಕಡಿಮೆ ಆಯಿತು. ಹಣದ ಹೊರತು ಎಲ್ಲಾ ವಿಷಯಗಳಲ್ಲಿಯೂ ಜನರು ರಾಜಿಯಾಗತೊಡಗಿದರು. ಮಾತುಗಳಿಗಂತೂ ಬೆಲೆಯೇ ಇಲ್ಲವಾಯಿತು. ಮಕ್ಕಳು ಉಸಿರು ಕಟ್ಟಿ ಪಾಠವಷ್ಟೇ ಓದಿ, ಅಂಕಗಳನಷ್ಟೇ ತೆಗೆದು, ಲಕ್ಷಾಂತರ ರೂಪಾಯಿ ಸಂಬಳ ತರುವ ಕೆಲಸ ಸೇರಲಾರಂಭಿಸಿದರು. ಬೆಳಿಗ್ಗೆ ೫ ಗಂಟೆಗೆದ್ದರೆ, ರಾತ್ರಿ ೧೧ ಗಂಟೆಯ ತನಕವೂ ಮಕ್ಕಳಿಗೆ ತಮ್ಮಷ್ಟಕ್ಕೆ ತಾವು ಜೀವಿಸುವ ಹಕ್ಕೇ ಇಲ್ಲವಾಯಿತು. ನಿದ್ದೆಯಲ್ಲಿಯೂ ಕೂಡ ಅಪ್ಪ, ಅಮ್ಮಂದಿರ ಕನಸುಗಳನ್ನೇ ಮಕ್ಕಳು ಕಾಣುವಂತಾದರು. ಮಕ್ಕಳಾದಿಯಾಗಿ ಎಲ್ಲರೂ ರೇಸುಕುದುರೆಗಳಾದರು. ಎಲ್ಲರಿಗೂ ಎಲ್ಲ ಕಡೆಯಿಂದ ಒತ್ತಡ. ಎಲ್ಲದರ ಬೆಲೆ ಹೆಚ್ಚಾಯಿತು. ಸಂಬಂಧಗಳಿಗೆ ಬೆಲೆ ಕಡಿಮೆ ಆಯಿತು. ಬುದ್ಧಿವಂತರು ಎರಡೆರಡು ಕೆಲಸ ಮಾಡುವವರಾದರು. ಹಣ ಬಿಸಾಕಿದರೆ ಮನೆ ಕೆಲಸದವಳು ಸಿಗುತ್ತಾಳೆ ಎಂಬ ಮನೋಭಾವ, ಅವಿದ್ಯಾವಂತ ಬಡವರು ಇನ್ನೊಂದಿಷ್ಟು ಹೆಚ್ಚಿಗೆ ಬಡವರಾದರು. ಅವರಲ್ಲಿ ಆತಂಕ, ಗೊಂದಲ, ನಿರಾಸೆ, ಕಿರಿಕಿರಿ, ಈ ಬುದ್ಧಿವಂತರ ಮೇಲೆ ಸಿಟ್ಟು! ಹೆಚ್ಚಾಯಿತು. ಒಟ್ಟಿನಲ್ಲಿ ಈ ಎಲ್ಲಾ ಬದಲಾವಣೆಗಳಿಂದ ಎಲ್ಲವನ್ನೂ, ಎಲ್ಲರನ್ನೂ ಉಡಾಫೆಯಿಂದ ನೋಡುವ ಮನಸ್ಥಿತಿ ಉಂಟಾಯಿತು. ಅಕ್ಕಪಕ್ಕದ ಮನೆಯ ಅಥವಾ ನಮ್ಮ ಮನೆಯವರ ಸಮಸ್ಯೆಗಳಿಗೆ ತಲೆ ಬಿಸಿ ಯಾರು ಮಾಡಿಕೊಳ್ಳುತ್ತಾರೆ? ಎನ್ನುವ ಬೇಜವಾಬ್ದಾರಿ ಶುರುವಾಯಿತು.
ಇಲ್ಲಿ ಯುವಕ / ಯುವತಿಯರ ಮನಸ್ಥಿತಿಯ ಬಗ್ಗೆ ಕೂಡ ಮಾತಾಡಲೇ ಬೇಕು. ಅಪ್ಪ, ಅಮ್ಮಂದಿರು ಕೊಡುವ ಸಾವಿರಾರು ರೂಪಾಯಿಗಳ ಪಾಕೆಟ್ ಮನಿ, ಅದನ್ನು ಖರ್ಚು ಮಾಡಲು ಬೇಕಾದಷ್ಟು ಹಾದಿಗಳು, ಇವತ್ತು ಯಾರಿಗಾದರೂ ಆಕರ್ಷಿತರಾಗುವುದು, ನಾಳೆ ಐ ಲವ್ ಯೂ, ನಾಡಿದ್ದು ಡೇಟಿಂಗ್, ಅಪ್ಪ, ಅಮ್ಮ ಹುಡುಕಿದ ಹುಡುಗ ಅಕಸ್ಮಾತ್ ತನ್ನ ಹುಡುಗನಿಗಿಂತ ‘ಬೆಲೆ’ ಬಾಳುವವನಾಗಿದ್ದರೆ, ಇವನಿಗೆ ಗುಡ್ ಬೈ!, ನೊಂದ ಯುವಕರ ಮನಸ್ಥಿತಿ ಹೀಗೆ - ಸಿಕ್ಕಿದ ಎಲ್ಲಾ ಹುಡುಗಿಯರನ್ನು ‘ಮಜಾ’ ಮಾಡಿ ಕೈಕೊಡುವುದು! ಪ್ರೀತಿ, ಪ್ರೇಮ, ವಿಶ್ವಾಸ, ನಂಬಿಕೆ ಯಾವುದಕ್ಕೂ ಅರ್ಥವೇ ಗೊತ್ತಿರದ ಸ್ಥಿತಿ. ಬುದ್ಧಿ ಹೇಳಲು ಅಪ್ಪ ಅಮ್ಮಂದಿರಿಗೆ ಪುರುಸೊತ್ತಿಲ್ಲ! ಕೇಳುವ ತಾಳ್ಮೆ ಯುವ ಜನಾಂಗಕ್ಕಿಲ್ಲ! ಯಾರಿಗೂ ಯಾವುದರ ಭಯವೂ ಇಲ್ಲ! ಇನ್ನೂ ಶಾಲಾ ಮಕ್ಕಳನ್ನು ಕಂಡರಂತೂ ಶಿಕ್ಷಕರೇ ಹೆದರಬೇಕು. ಬುದ್ಧಿ ಮಾತು ಕೇಳದಿದ್ದರೆ ನಮ್ಮ ಮಕ್ಕಳನ್ನು ಹೊಡೀರಿ, ಬಡೀರಿ ಎನ್ನುತ್ತಿದ್ದ ಅಪ್ಪ, ಅಮ್ಮಂದಿರೆಲ್ಲಿ? ಮಕ್ಕಳು ಹೋಮ್ ವರ್ಕ್ ಮಾಡಿಲ್ಲ ಎಂದು ಶಿಕ್ಷಕರು ಬುದ್ಧಿ ಮಾತು ಹೇಳ ಹೊರಟರೆ, ಅವರ ಮೇಲೆ ಕೇಸು ಹಾಕುವ ಅಪ್ಪ, ಅಮ್ಮಂದಿರೆಲ್ಲಿ? ಮಕ್ಕಳು ಎಷ್ಟೇ ತಪ್ಪು ಮಾಡಿದರೂ ಅವರಿಗೆ ಪೋಷಕರಾಗಲೀ, ಶಿಕ್ಷಕರಾಗಲೀ ಶಿಕ್ಷೆ ನೀಡುವಂತಿಲ್ಲ! ಆಗ ಪೈಶಾಚಿಕ ಪ್ರವೃತ್ತಿ ಬಲಿಯದೇ ಇನ್ನೇನಾಗುತ್ತದೆ? ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೇ? ಎಂಬ ಗಾದೆ ಮಾತು ನಮಗೇಕೆ ಮರೆತು ಹೋಯಿತು? ನಾವು ಮಾಡುವ ಕೆಲಸದಲ್ಲಿನ ಆತ್ಮ ತೃಪ್ತಿಗಿಂತ ತಿಂಗಳ ಕೊನೆಗೆ ಸಿಗುವ ಸಂಬಳ ಹೆಚ್ಚಾಯಿತಲ್ಲವೇ? ಎಲ್ಲರ ಮನಸ್ಥಿತಿಯೂ ಹೀಗೆ ಆಗಿಬಿಟ್ಟಿದೆಯಲ್ಲವೇ?
ಇಂತಹ ಒಂದು ಘಟನೆ ನಡೆದ ಕೂಡಲೇ ಪರಿಹಾರ ಕಂಡುಹಿಡಿಯುವುದನ್ನು ಬಿಟ್ಟು, ಸಮಸ್ಯೆಯ ಮೂಲವೆಲ್ಲಿದೆ? ಎಂಬುದನ್ನು ಹುಡುಕುವುದನ್ನು ಬಿಟ್ಟು, ಪ್ರತಿಯೊಬ್ಬರಿಗೂ ತಮ್ಮ, ತಮ್ಮ ಒತ್ತಡಗಳನ್ನು ಹೊರಹಾಕುವುದೇ ಮುಖ್ಯವಾಗಿರುವಾಗ! ಪ್ರತಿಯೊಬ್ಬರೂ ತಮ್ಮ, ತಮ್ಮ ಅನುಭವಗಳ ಮೂಸೆಯಲ್ಲಿಯೇ ಮತ್ತೊಬ್ಬರನ್ನು ಜಡ್ಜ್ ಮಾಡುತ್ತಿರುವಾಗ! ಪ್ರತಿಯೊಬ್ಬರಿಗೂ ತಾವು ಮಾತನಾಡುವುದು ಶೋ ಆಫ್ ಆಗಿರುವಾಗ, ಬದಲಾವಣೆ ಆಗುವುದೆಲ್ಲಿಂದ?! ಗಂಡೊಬ್ಬ ತಪ್ಪು ಮಾಡಿದರೇ, ಇಡೀ ಗಂಡು ಜನಾಂಗವನ್ನು ನಾಶ ಮಾಡಲು ಪಣ ತೊಡುವ ಹೆಂಗಸರು, ಹೆಣ್ಣೊಬ್ಬಳಿಂದ ಆದ ಅನಾಹುತಕ್ಕೆ, ಇಡೀ ಹೆಣ್ಣು ಕುಲವನ್ನೇ ಬಲಾತ್ಕಾರ ಮಾಡುವ ಗಂಡಸರು, ತಮ್ಮ ತಮ್ಮ ಸ್ವಾರ್ಥಕ್ಕಾಗಿ, ತಮ್ಮ ತಮ್ಮ ಹಿತಕ್ಕಾಗಿ, ಸುಮ್ಮನೇ ಸುಳ್ಳು ರೇಪ್ ಕೇಸುಗಳನ್ನು ಹಾಕುವ ತಾಯಂದಿರು ಒಂದು ಕಡೆ, ತಮ್ಮ ಲೈಂಗಿಕ ತೃಷೆಗಾಗಿ ಮಗಳನ್ನು ಬಿಡದಾ ಅಪ್ಪಂದಿರು ಒಂದು ಕಡೆ, ತಾಯ್ತಂದೆಯರ ಒತ್ತಡ ತಡೆಯಲಾರದೇ ಮಕ್ಕಳು ಮಾಡಿಕೊಳ್ಳುವ ಆತ್ಯಹತ್ಯೆಗಳು, ವಿದೇಶ ಪಯಣಕ್ಕಾಗಿ ಅಪ್ಪ, ಅಮ್ಮಂದಿರನ್ನು ವೃದ್ಧಾಶ್ರಮಕ್ಕೋ ಅಥವಾ ಒಂಟಿಯಾಗಿ ಕೊಲೆಯಾಗಲೂ ಬಿಟ್ಟು ಹೋಗುವ ಮಕ್ಕಳು, ಇವೆಲ್ಲಕ್ಕೂ ಪರಿಹಾರ ಹೇಗೆ? ಬೇಲಿಯೇ ಎದ್ದು ಹೊಲ ಮೇಯ್ದರೇ?
ಇನ್ನೂ ಜನಧ್ವನಿಯಾಗಿ, ನೊಂದವರಿಗೆ ಬೆನ್ನೆಲುಬು ಆಗಿ ನಾವಿದ್ದೇವೆ ಎಂದು ನಿಲ್ಲಬೇಕಾದ ಮಾಧ್ಯಮಗಳು ಕೂಡ ತಾ ಮುಂದೇ, ನಾ ಮುಂದೇ ಎಂದು ತಮ್ಮ ತಮ್ಮ ಹೆಚ್ಚುಗಾರಿಕೆಯನ್ನೂ ಸುದ್ಧಿ ನೀಡುವುದರಲ್ಲೇ ನಿರತರಾಗಿರುವಾಗ?!, ರಾಜಕೀಯ ಪಕ್ಷಗಳು ಇಂತಹ ವಿಷಯಗಳ ಮೂಲಕ ಒಬ್ಬರ ಮೇಲೊಬ್ಬರು ಕೆಸರೆರಚಿ, ತಮ್ಮ ಬೇಳೆ ಬೇಯಿಸಿಕೊಳ್ಳುವುದರಲ್ಲೇ ಆಸಕ್ತರಾಗಿರುವಾಗ?!, ವಕೀಲರು ಇಂತಹ ಕೇಸುಗಳಲ್ಲಿ ಹೇಗೆ ವಾದ ಮಾಡಿ ಅಪರಾಧಿಗಳನ್ನು ಗೆಲ್ಲಿಸಬಹುದು? ಎಂಬ ತಮ್ಮ ಜಾಣ್ಮೆಯ ಪ್ರದರ್ಶನ ಮಾಡುತ್ತಿರುವಾಗ?! ಮಠ, ದೇವಸ್ಥಾನಗಳು ತಮ್ಮ ಶ್ರೀಮಂತಿಕೆಯನ್ನು, ತಮ್ಮ ಖ್ಯಾತಿಯನ್ನು ಹೆಚ್ಚಿಸಿಕೊಳ್ಳುವುದರಲ್ಲೇ ಮಗ್ನರಾಗಿರುವಾಗ?! ಸಿನೆಮಾಗಳು, ಟಿವಿ ಧಾರವಾಹಿಗಳು, ಪುಸ್ತಕಗಳು ನಾವೆಷ್ಟು ದುಡ್ಡು ಮಾಡುತ್ತಿದ್ದೇವೆ? ಎಂದು ತಮ್ಮ ಟಿಆರ್ ಪಿ ಹೆಚ್ಚಿಸುವ ಪ್ರಯತ್ನದಲ್ಲಿಯೇ ತೊಡಗಿರುವಾಗ?!
ನಾವು ಹೇಳುವುದಾದರೂ ಯಾರಿಗೇ?
ಇನ್ನೂ ರೇಪಿಸ್ಟ್ ಗಳಿಗೆ ಕೊಡುವ ಮರಣದಂಡನೆಯಿಂದ ಏನೂ ಪ್ರಯೋಜನವಿಲ್ಲ! ತಮ್ಮ ಆತ್ಮಸಾಕ್ಷಿಗೆ ಹೆದರದ ಅವರು, ಇನ್ನೆಂಥ ಶಿಕ್ಷೆಗೆ ಹೆದರಿಯಾರು? ಈ ಹಿಂದೆಯಾದರೆ ದೇವರು ಎನ್ನುವ ಭಯದಿಂದ ಹಿಡಿದು ಎಲ್ಲವೂ ಭಯದಿಂದಲೇ ನಡೆಯುತ್ತಿತ್ತು. ಎಲ್ಲರೂ ತಮ್ಮ ಆತ್ಮಗಳಿಗೆ ಹೆದರುತ್ತಿದ್ದರು. ಈಗಿರುವ ಉಡಾಫೆ ಸ್ಥಿತಿಯಿಂದ ಅಪರಾಧಿಗಳಲ್ಲಿ ಭಯವಿಲ್ಲ. ತದ್ವಿರುದ್ದವಾಗಿ ಯಾವ ತಪ್ಪನ್ನೂ ಮಾಡದೇ ಧೈರ್ಯವಾಗಿರಬೇಕಾಗಿದ್ದ ಮುಗ್ಧರಲ್ಲಿ ಭಯವಿದೆ. ಆತ್ಮಪ್ರಜ್ಞೆಯಿಲ್ಲದ ವ್ಯಕ್ತಿಗಳಿಂದ ತುಂಬಿಹೋಗುತ್ತಿರುವ ಸಮಾಜವೂ ಮತ್ತಷ್ಟು ಹಾಳಾಗುತ್ತಿದೆ. ಭಯದಿಂದ ಯಾವ ಕೆಲಸವನ್ನು ನಾವು ಮಾಡಲು / ಮಾಡಿಸಲು ಸಾಧ್ಯವಿಲ್ಲ. ಆದರೆ ಇಂತಹ ವಿಷಯಗಳಲ್ಲಿ ಎಲ್ಲರಲ್ಲೂ ಸೀರಿಯಸ್ ನೆಸ್ ಬಂದರೆ, ಎಲ್ಲರೂ ಸೆನ್ಸಿಬಲ್ ಆದರೆ, ಎಲ್ಲರೂ ತಮ್ಮ, ತಮ್ಮ ಆತ್ಮದೊಳಗೆ ಸಂಚರಿಸಲು ಶುರು ಮಾಡಿದರೆ.... ಸ್ವಲ್ಪವಾದರೂ ಪ್ರಯೋಜನವಾಗಬಹುದು. ದುಡ್ಡಿಂದಲೇ ಎಲ್ಲವೂ ಅಲ್ಲ! ಅನ್ನುವ ಮನಸ್ಥಿತಿ ಉಂಟಾದರೆ, ಮಾತುಗಳಿಗೂ ಬೆಲೆ ಇದೆ ಎನ್ನುವುದು ಅರ್ಥವಾದರೆ, ಮಕ್ಕಳಿಗೆ ನಾವು ಕಲಿಸಬೇಕಿರುವುದು ಮೌಲ್ಯಗಳು ಎಂಬುದರ ಅರಿವಾದರೆ, ಸ್ವಾರ್ಥವಿಲ್ಲದೇ ನಾನು ಏನಾದರೂ ಸಮಾಜಕ್ಕೆ ಒಳಿತು ಮಾಡಬೇಕೆಂಬ ಮನಸ್ಥಿತಿ ಉಂಟಾದರೇ..... ಸ್ವಲ್ಪವಾದರೂ ಹದಗೆಟ್ಟಿರುವ ಈ ಸಮಾಜವನ್ನು ನಾವೆಲ್ಲರೂ ಸರಿಪಡಿಸಬಹುದು. ಯುದ್ಧಕಾಲೇ ಶಸ್ತ್ರಾಭ್ಯಾಸ ಮಾಡದೇ, ಮನೆ ಮನಗಳಲ್ಲಿ ಬದಲಾವಣೆ ತರಬೇಕಾದ ಜರೂರು ಈ ಹೊತ್ತಿಗಿದೆ.
Well written.
ReplyDeleteGood write up.
ಚಿಂತನೆಗೆ ಹಚ್ಚುವ ಬರಹ. ಬಿರುಗಾಳಿ ಎಬ್ಬಿಸಿದ ರೀತಿಯಂತಲ್ಲದೆ, ಆದರೆ ಮನಸ್ಸಿಗೆ ನಾಟುವಂತೆ ವಿಚಾರಗಳನ್ನು ಚೆನ್ನಾಗಿ ಮಂಡಿಸಿದ್ದೀರಿ. ವೈಯಕ್ತಿಕವಾಗಿ ನಾನು "ಒಳ್ಳೆಯದನ್ನೇ ಹುಡುಕು, ಒಳ್ಳೆಯದನ್ನೇ ಗುರುತಿಸು" ಸ್ವಭಾವದವನು. ಆದರೂ ವಸ್ತುಸ್ಥಿತಿಯಲ್ಲಿ ಒಳ್ಳೆಯದಕ್ಕಿಂತ ಕೆಟ್ಟದೇ ಹೆಚ್ಚಾದಾಗ ಒಳ್ಳೆಯದನ್ನು ಎಲ್ಲಿ ಹುಡುಕುವುದು? ನೀವು ಲೇಖನದಲ್ಲಿ ಬಣ್ಣಿಸಿರುವ ಹೊಸ ಜೀವನಪದ್ದತಿಯಲ್ಲಿ ನಮ್ಮಲ್ಲಿ ಪ್ರತಿಯೊಬ್ಬರೂ ಒಂದೊಂದು ದ್ವೀಪವಾಗುತ್ತಿದ್ದೇವೆ (ಇಷ್ಟೆಲ್ಲ ಕ್ಷಿಪ್ರಗತಿಯ ಸಂಪರ್ಕಸಾಧನಗಳಿದ್ದೂ!!). ಅದೇ ಮುಳುವಾಗಿರೋದು. ಮನೆಮನಗಳಲ್ಲಿ ಬದಲಾವಣೆಯ ಗಾಳಿ ಬೀಸಲೆಂದು ನಿಮ್ಮ ಬಯಕೆಯಂತೆಯೇ ನನ್ನದೂ! ಬೋಧಪ್ರದ ಬರಹಗಳನ್ನು ಬರೆಯುವ ನಿಮ್ಮ ಕಸುವು ಕುಗ್ಗದಿರಲಿ.
ReplyDeleteದೆಹಲಿಯಲ್ಲಿ ನಡೆದ ಕ್ರೌರ್ಯವನ್ನು ಅರ್ಥ ಮಾಡಿಕೊಳ್ಳುವ ಪ್ರಯತ್ನ ನಿಮ್ಮ ಲೇಖನದಲ್ಲಿ ಕಾಣುತ್ತೆ. ಆದರೆ ಯಾವುದೇ ಚರ್ಚೆಯನ್ನು ಹಾದಿ ತಪ್ಪಿಸುವ, ಪ್ರಾಮಾಣಿಕ ಜಿಜ್ಞಾಸೆಗಳನ್ನು ಹಳ್ಳ ಹಿಡಿಸುವ ಟ್ರ್ಯಾಪ್ ಗಳಲ್ಲಿ ನಿಮ್ಮ ಪ್ರಯತ್ನ ಸಿಲುಕಿದಂತೆ ಕಾಣುತ್ತದೆ.
ReplyDeleteಮೊದಲನೆಯದಾಗಿ, "ಕಾಲ ಕೆಟ್ಟು ಹೋಗಿದೆ" ಎನ್ನುವ ವಾದ. ಗತ ಇತಿಹಾಸದ ಯಾವುದೋ ಕಾಲ ಘಟ್ಟವನ್ನು ಉಲ್ಲೇಖಿಸಿ ಆಗ ಎಲ್ಲವೂ ಚೆನ್ನಾಗಿತ್ತು ಈಗ ಎಲ್ಲವೂ ಕೆಟ್ಟು ಹೋಗಿದೆ ಎನ್ನುವ ಹಳಹಳಿಕೆ ಈ ಕಾಲಕ್ಕೆ ವಿಶಿಷ್ಟವಾದದ್ದೇನಲ್ಲ. ನಲವತ್ತು ವರ್ಷ ಹಿಂದಿನ ಸಾಹಿತ್ಯವನ್ನು ಅಭ್ಯಸಿಸಿದರೆ ಇದೇ ಬಗೆಯ ಹಳಹಳಿಕೆಗಳು ಕಾಣಸಿಗುತ್ತವೆ.
ಎರಡನೆಯದಾಗಿ, ಧರ್ಮ, ದೇವರು, ಸಮುದಾಯ ಆಧಾರಿತ ಜೀವನ ಶೈಲಿಯಲ್ಲಿನ ಉತ್ತಮ ಗುಣಗಳನ್ನು ಪಟ್ಟಿ ಮಾಡುತ್ತಾ ಆ ಕಾಲದಲ್ಲಿ ಎಷ್ಟೋಂದು ಹಿತವಿತ್ತು ಎಂದು ವಾದಿಸುವುದು. ಇದೇ ಧರ್ಮ, ದೇವರು, ಆತ್ಮಗಳ ಸಾಕ್ಷಿಯಲ್ಲಿ ಬಾಲ ವಿಧವೆಯರನ್ನು ಅಮಾನುಷವಾಗಿ ಕಾಣಲಾಗುತ್ತಿತ್ತು. ಬೆತ್ತಲೆ ಸೇವೆ, ಸತಿಯಂತಹ ಆಚರಣೆಗಳು ಚಾಲ್ತಿಯಲ್ಲಿದ್ದವು. ವರದಕ್ಷಿಣೆ ಕಿರುಕುಳ, ಹೆಣ್ಣಿಗೆ ವಿದ್ಯೆ, ಉದ್ಯೋಗ ಆಸ್ಥಿಯಲ್ಲಿ ಯಾವ ಪಾಲೂ ಕೊಡದೆ ನಾಲ್ಕು ಗೋಡೆಗಳ ನಡುವೆ ಬದುಕು ತಳ್ಳುವಂತೆ ಮಾಡಲಾಗುತ್ತಿತ್ತು. ಆತ್ಮಗಳಿಗೆ ಹೆದರುವ ಸಜ್ಜನರೇ ದಲಿತರನ್ನು ಪ್ರಾಣಿಗಳಿಗಿಂತ ಕಡೆಯಾಗಿ ನೋಡಿಕೊಂಡವರು. ಅವರ ನೆರಳು ಬಿದ್ದರೆ ಮೈಲಿಗೆ ಎಂದು ವರ್ತಿಸಿದವರು.
ಮೂರನೆಯದಾಗಿ, ಈಗಿನ ಸಮಾಜದ ಒತ್ತಡಗಳು ಹಾಗೂ ಜೀವನವಿಧಾನವನ್ನು ಯಾವುದೋ ಕಾಲದ 'ವೈಯಕ್ತಿಕ ಅನುಭವಗಳ' ನೆಲೆಯಲ್ಲಿ ವಿಮರ್ಶಿಸುವುದು. ಅಪರಾಧಗಳು ಸುದ್ದಿಯಾಗುವ, ಅಪರಾಧಗಳಿಗೆ ಕಾನೂನಿನನ್ವಯ ಶಿಕ್ಷೆ ವಿಧಿಸುವ ಪದ್ಧತಿಯಂತೂ ಆಧುನಿಕ ಜೀವನ ಶೈಲಿಯ ಕೊಡುಗೆಯೇ. ಫ್ಯೂಡಲ್ ವ್ಯವಸ್ಥೆಯಲ್ಲಿ ಅತ್ಯಾಚಾರಿಯೇ ನ್ಯಾಯಾಧೀಶನು ಆಗಿದ್ದಾಗ ನ್ಯಾಯಕ್ಕಾಗಿ ಆಗ್ರಹಿಸಲು ಜನವರಿಗೆ ಅವಕಾಶವಾದರೂ ಎಲ್ಲಿತ್ತು?
ಉತ್ತಮ ಉದ್ದೇಶವಿರುವ ಲೇಖನ ಈ ಮೇಲಿನ ಟ್ರ್ಯಾಪ್ ಗಳಲ್ಲಿ ಸಿಲುಕಿರುವ ಸಾಧ್ಯತೆ ನನಗೆ ಕಂಡಿತು. ಆಧುನಿಕ ಸಮಾಜ ಹಾಗೂ ಜೀವನ ಪದ್ಧತಿ ಹೇಗೆ "ಹಿಂಸಾತ್ಮಕ ಅತ್ಯಾಚಾರ"ಗಳಿಗೆ ಕಾರಣವಾಗುತ್ತಿದೆ ಎನ್ನುವ ಕುರಿತು ಆಶೀಶ್ ನಂದಿ ವಿಚಾರಗಳು ಈ ವಿಷಯದ ಕುರಿತು ಹೆಚ್ಚು ಒಳನೋಟಗಳನ್ನು ನೀಡಬಹುದು.
ಆಶೀಶ್ ನಂದಿ ಕಮೆಂಟ್ (http://tehelka.com/ashis-nandy-says-bhagwat-is-right/)
ReplyDelete