ಸಿನೆಮಾ ಆಗಬಹುದು, ಸಾಹಿತ್ಯ ಆಗಬಹುದು, ನಾಟಕ ಆಗಬಹುದು ಈ ಯಾವುದೇ ಕಲಾ ಮಾಧ್ಯಮಗಳೂ ಕೂಡ ವೀಕ್ಷಕರಿಗೆ ಒಂದೊಂದು ರೀತಿಯಲ್ಲಿ ಕಥೆ ಹೇಳುತ್ತಾ ಹೋಗುತ್ತವೆ. ಕಥಾವಸ್ತುವಿನಲ್ಲಿ ಹೊಸತನವಿಲ್ಲದಿದ್ದರೂ, ನಮಗೆ ಇಷ್ಟವಾಗುವುದು ಅದರ ನಿರೂಪಣೆಯಲ್ಲಿ. ಮಹಾಭಾರತ ಕಥೆಯನ್ನು ಚಿಕ್ಕಂದಿನಿಂದ ಕೇಳಿದ್ದರೂ ಕೂಡ, ಭೈರಪ್ಪನವರ ‘ಪರ್ವ’ ಓದಿದಾಗ ನಮಗೆ ಇಡೀ ಕಥಾವಸ್ತುವೇ ಹೊಸದಂತೆ ಕಾಣುವುದು ಸುಳ್ಳಲ್ಲ. ಪ್ರತಿಯೊಬ್ಬ ಕಲಾವಿದ ಕೂಡ ತನಗೆ ಒಗ್ಗುವ ಕಲಾಪ್ರಕಾರದಲ್ಲಿ ವೀಕ್ಷಕರಿಗೆ ತನ್ನ ಕಲ್ಪನೆಯನ್ನು, ತನ್ನ ಅನುಭವಗಳನ್ನು ಉಣಬಡಿಸಲು ಪ್ರಯತ್ನಿಸುತ್ತಾನೆ. ಅದರ ರುಚಿ ಪ್ರತಿಯೊಬ್ಬರಿಗೂ ಇಷ್ಟವಾದರೆ ಆತ ಗೆದ್ದಂತೆ! ಆದರೆ ಹಾಗಾಗಲು ಬಹಳ ಕಷ್ಟ, ಒಬ್ಬರಿಗೆ ಸಕ್ಕರೆ ಕಡಿಮೆಯಾದಂತೆ, ಮತ್ತೊಬ್ಬರಿಗೆ ಉಪ್ಪು ಹೆಚ್ಚಾದಂತೆ.... ಹೀಗೆ... ಲೋಕೋಭಿನ್ನರುಚಿಃ :-)
ಎಲ್ಲಾ ಪಶು, ಪಕ್ಷಿ, ಪ್ರಾಣಿಗಳಲ್ಲಿಯೂ ಅಮ್ಮನಿಗೊಂದು ವಿಶಿಷ್ಠ ಸ್ಥಾನವಿದೆ. ನಮ್ಮನ್ನು ಹೆತ್ತು, ಪೊರೆಯುವ ಆಕೆ, ತನಗೆ ಎಷ್ಟೇ ಕಷ್ಟವಿದ್ದರೂ, ತನ್ನ ಮಕ್ಕಳ ಕಣ್ಣಲ್ಲಿ ಖುಷಿಯನ್ನು ಕಾಣಬಯಸುವವಳು, ಆ ಖುಷಿಯನ್ನು ಕಂಡೂ ತನ್ನೆಲ್ಲಾ ದುಃಖ ದುಮ್ಮಾನಗಳನ್ನು ಮರೆಯುವವಳು ‘ಅಮ್ಮ’. ಹಾಗೆಂದೇ ‘ಕೆಟ್ಟ ಮಗನಿರಬಹುದು, ಕೆಟ್ಟ ತಾಯಿಯೆಂದಿಗೂ ಇರಲು ಸಾಧ್ಯವಿಲ್ಲ’ ಎಂಬ ಮಾತುಗಳಿಂದ ಹಿಡಿದು ತಾಯಿಗಿಂತ ಬೇರೆ ದೇವರಿಲ್ಲ, ಬೇರೆ ಬಂಧುವಿಲ್ಲ ಎಂಬ ಮಾತುಗಳೂ ತಾಯಿಯ ಹಿರಿಮೆಯನ್ನು ಎತ್ತಿ ಹಿಡಿಯುತ್ತವೆ. ನಮ್ಮ ಸಿನೆಮಾಗಳಲ್ಲಿಯೂ ಕೂಡ ಗಂಡು, ಹೆಣ್ಣಿನ ಪ್ರೇಮ ತೋರಿಸುವಂತೆಯೇ, ತಾಯಿಯ ವಾತ್ಸಲ್ಯದ ಕುರಿತಾಗಿ ಬೇಕಾದಷ್ಟು ಸಿನೆಮಾಗಳು ಬಂದಿವೆ. ಅಮ್ಮ ನೀನೇನೇ ಅಂದರೂ ನೀ ನನ್ನ ದೇವರು ಎಂಬ ‘ಅಣ್ಣಯ್ಯ’ ಚಿತ್ರದಿಂದ ಹಿಡಿದು, ಮೈ ಮದರ್ ಇಂಡಿಯಾ ಎಂಬ ಕಲಿಯುಗ ಭೀಮ ಚಿತ್ರದವರೆಗೂ, ಅಮ್ಮ ಎಂದರೆ ಏನೋ ಹರುಷವೂ, ಅಮ್ಮ ನೀನು ನಕ್ಕರೆ ಎಂಬ ಹಾಡುಗಳಿಂದ ಹಿಡಿದು, ಸಾವೇ ಬಂದರೂ, ಮಣ್ಣೇ ಆದರೂ ತಾಯಿ ಪ್ರೀತಿಗೆಂದೂ ಕೊನೆ ಇಲ್ಲ, ತಾಯೀನೇ ಎಲ್ಲಾ ಎಂಬ ಜೋಗಿ ಚಿತ್ರದ ಹಾಡಿನ ತನಕ ತಾಯಿಯ ಮಹಿಮೆಯನ್ನು ಸಾರುವ ಅನೇಕಾನೇಕ ಚಿತ್ರಗಳು ಬಂದಿವೆ. ಬಾಕ್ಸ್ ಆಫೀಸಿನಲ್ಲಿ ಗೆದ್ದಿವೆ. ಈ ನಿಟ್ಟಿನಲ್ಲಿ ಕಥಾವಸ್ತು ಹಳತಾದರೂ ಕೂಡ, ಈ ‘ಅಮ್ಮ’ ಎಂಬ ಎಮೋಷನ್ ಬಳಸಿಯೇ ಹೊಸತನದಲ್ಲಿ ನಿರೂಪಿತವಾಗಿರುವ ಚಿತ್ರ ‘ಗೊಂಬೆಗಳ ಲವ್’.
ಸಾಹಿತ್ಯದಲ್ಲಿಯಾದರೆ ನಾವು ನಮ್ಮ ಕಲ್ಪನೆಗಳನ್ನು ಪುಂಖಾನುಪುಂಖವಾಗಿ ಪುಟಗಟ್ಟಲೆ ಹರಿಯಬಿಡಬಹುದು. ಓದುಗರಿಗೆ ಕೂಡ ತಮಗೆ ಸಮಯವಿದ್ದಾಗ, ತಮ್ಮ ಕಲ್ಪನೆಯಲ್ಲಿ ದೃಶ್ಯಗಳನ್ನು ಮೂಡಿಸಿಕೊಂಡು ಓದಬಹುದು. ನಾಟಕಗಳಲ್ಲಿ ಪಾತ್ರಗಳು ವೀಕ್ಷಕರ ಕಣ್ಣಮುಂದಿರುತ್ತವೆ. ಪಾತ್ರಗಳ ಮಾತುಗಳಲ್ಲಿಯೇ ಇಡೀ ಸನ್ನಿವೇಶವನ್ನು ತೋರಿಸಬೇಕಾಗುತ್ತದೆ. ಮಾತುಗಳಲ್ಲಿಯೇ ಅರಮನೆ ಕಟ್ಟುವುದು ನಾಟಕಗಳಿಗೆ ಅವಶ್ಯ. ಆದರೆ ಸಿನೆಮಾಗಳಿಗೆ ನಾಟಕಗಳಂತೆ ಇತಿಮಿತಿಯಿಲ್ಲ, ಸಾಹಿತ್ಯಗಳಂತೆ ಸಮಯವಿಲ್ಲ. ಸಿನೆಮಾಗಳು ದೃಶ್ಯಗಳನ್ನು ಚಿತ್ರಿಸುವುದರ ಮೂಲಕ ಕಥೆಯನ್ನು ಹೇಳಬೇಕು. ಇದು ಪ್ಲಸ್ ಪಾಯಿಂಟ್ ಹಾಗೂ ನೆಗೆಟಿವ್ ಪಾಯಿಂಟ್ ಕೂಡ. ಸಿನೆಮಾಗಳಲ್ಲಿ ‘ಸ್ವಗತ’ವನ್ನು ಚಿತ್ರಿಸುವುದು ಅತ್ಯಂತ ಕಷ್ಟಕರ. ಹಾಗಾಗಿಯೇ ಅನೇಕ ಪಾತ್ರಗಳ ಸೃಷ್ಠಿ ಅವಶ್ಯವಾಗುತ್ತದೆ. ಜೊತೆಗೆ ಚಿತ್ರಕಥೆಯಲ್ಲಿ ಬಿಗಿಯಿರಬೇಕಾಗುತ್ತದೆ ಹಾಗೂ ಇದೆಲ್ಲವೂ ಅತ್ಯಂತ ಹಣ ಖರ್ಚಿನ ಬಾಬತ್ತು. ಉದಾಹರಣೆಗೆ ಹೇಳುವುದಾದರೆ ಮುಂಗಾರು ಮಳೆಯಲ್ಲಿ ಗಣೇಶನೊಟ್ಟಿಗಿದ್ದ ಮೊಲದ ಮೂಲಕ ತನ್ನೆಲ್ಲಾ ಸ್ವಗತವನ್ನು ಆತ ಅದರೊಟ್ಟಿಗೆ ಹಂಚಿಕೊಳ್ಳುವುದು ಅಥವಾ ಕಠಾರಿವೀರ (ಉಪೇಂದ್ರ) ಚಿತ್ರದಲ್ಲಿ ಚಿತ್ರಿಸಿರುವ ಸ್ವರ್ಗ....ಹೀಗೆ. ‘ಗೊಂಬೆಗಳ ಲವ್’ ಚಿತ್ರದ ಬಗ್ಗೆ ಮಾತಾಡುವುದಾದರೆ ಇಡೀ ಚಿತ್ರದ ಕಥಾನಿರೂಪಣೆಯ ಅತ್ಯಂತ ಪ್ರಮುಖ ಘಟ್ಟಗಳಲ್ಲಿ ದೃಶ್ಯಗಳನ್ನು ಸಿಂಬಾಲಿಕ್ ಆಗಿ ನಿರೂಪಿಸಿರುವುದು ಚಿತ್ರದ ಮುಖ್ಯ ಹೈಲೈಟ್. ತಮ್ಮ ಸೀಮಿತ ಬಜೆಟ್ಟಿನಲ್ಲಿ, ಹೊಸ ತಂಡದೊಂದಿಗೆ ಇಂತಹ ಚಿತ್ರವೊಂದನ್ನು ಅತ್ಯುತ್ತಮ ರೀತಿಯಲ್ಲಿ ನಿರ್ದೇಶಿಸಿದ ನಿರ್ದೇಶಕ ಸಂತೋಷ್ ಅವರನ್ನು ಇದಕ್ಕಾಗಿ ಅಭಿನಂದಿಸಲೇಬೇಕು.
ಇತ್ತೀಚಿನ ದಿನಗಳಲ್ಲಿ ದುನಿಯಾ ‘ಸೂರಿ’ ಅವರನ್ನು ಬಿಟ್ಟರೆ, ದೃಶ್ಯಗಳನ್ನು ಅತ್ಯಂತ ಚೆಂದದಲ್ಲಿ ನಿರೂಪಿಸಿದವರು ‘ಸಂತೋಷ್’ ಎಂದರೆ ತಪ್ಪಾಗಲಾರದು. ನಿರ್ದೇಶಕ ‘ಸಂತೋಷ್’ ದೃಶ್ಯ ರೂಪಕಗಳನ್ನು ಅತ್ಯಂತ ಸಮರ್ಥವಾಗಿ ಬಳಸಿಕೊಂಡಿದ್ದಾರೆ. ಚಿತ್ರ ಶುರುವಾಗುವುದೇ ಅತ್ಯಂತ ವಿಶಿಷ್ಠ ರೀತಿಯಲ್ಲಿ. ಮನೆಯ ದೇವರ ಫೋಟೋಗೆಂದು ತರಿಸುವ ಹೂವು ಕೆಳಗೆ ಬಿದ್ದು (ಗೇಟಿನ ಬಳಿ) ಗಲೀಜಾಗಿದೆಯೆಂದು, ತರಾತುರಿಯಲ್ಲಿ ತನ್ನ ಕೆಲಸಕ್ಕೆಂದು ಹೊರಡುತ್ತಿರುವ ಪೋಲೀಸ್ ಪೇದೆಯೊಬ್ಬಳು, ತನಗಾಗಿ ಕಾಯುತ್ತಿರುವ ತನ್ನ ಮೇಲಾಧಿಕಾರಿಯ ಬೈಗುಳವನ್ನು ಕೇಳುತ್ತಲೇ ಅದನ್ನು ಹಿಸುಕಿ, ಮುದ್ದೆ ಮಾಡಿ ಎಸೆದು ಹೋಗುತ್ತಾಳೆ. ಮೊಳಕ್ಕೆ ೩೦ ರೂಪಾಯಿ ಎಂದು ಮಂಗಳಮುಖಿಯೊಬ್ಬಳು, ಹೂವು ಹೊಸದಾಗಿಯೇ ಇದೆಯೆಂದು, ಅದನ್ನು ಸ್ವಲ್ಪ ಸರಿ ಮಾಡಿಕೊಂಡು ಮುಡಿದುಕೊಂಡು ಹೋಗುತ್ತಾಳೆ. ಪೋಲೀಸ್ ಪೇದೆ ಮೃದು ಸ್ವಭಾವದವಳಾಗಿದ್ದರೂ, ತನ್ನ ವೃತ್ತಿಯ ಕಾರಣ ಕಠೋರ ಹೃದಯಿಯಂತೆ ತೋರಿಸಿಕೊಳ್ಳಬೇಕಾದ ಅನಿವಾರ್ಯತೆ ಹಾಗೂ ಮಂಗಳಮುಖಿಯ ದೇಹ ಗಂಡಾಗಿದ್ದರೂ, ತನ್ನ ವೃತ್ತಿಗಾಗಿ ಹೆಂಗಸಂತೇ ಕಾಣಿಸಿಕೊಳ್ಳಬೇಕಾದ ಪರಿಸ್ಥಿತಿಯನ್ನು ಒಂದೆರಡು ನಿಮಿಷಗಳಲ್ಲಿಯೇ ಸಣ್ಣ ಕಥೆಯಂತೆ ಮನಸ್ಸಿಗೆ ಮುಟ್ಟಿಬಿಡುತ್ತದೆ. ಈ ಮಹಿಳಾ ಪೋಲೀಸ್ ಕೇಳುವ ‘ಬದುಕೆಂದರೇನು?’ ಎಂಬಲ್ಲಿಂದ ಚಿತ್ರವು ಒಂದು ಥ್ರಿಲ್ಲರ್ ನಂತೆ ಕಾಣಿಸಿಕೊಳ್ಳತೊಡಗುತ್ತದೆ. ಆಕೆಯ ಈ ಪ್ರಶ್ನೆಗೆ ಚಿತ್ರವು ಉತ್ತರ ಹೇಳುವ ಪ್ರಯತ್ನ ಶುರು ಮಾಡುತ್ತದೆ.
ಹುಡುಗಿ ಮುನಿಸಿಕೊಂಡಿದ್ದಾಳೆಂದು ಹುಡುಗ ಆಕೆಯನ್ನು ಅನುನಯಿಸುತ್ತಿದ್ದಾಗ, ಹಾದು ಹೋಗುವ ಐಸ್ ಕ್ರೀಮ್ ಗಾಡಿ, ಪರೋಕ್ಷವಾಗಿ ಹುಡುಗ ಐಸ್ ಹಚ್ಚುತ್ತಿದ್ದಾನೆಂದು ಹೇಳಿದಂತೆ ಅನಿಸುತ್ತದೆ. ಹಾಗೆಯೇ ಮತ್ತೊಂದು ದೃಶ್ಯದಲ್ಲಿ ಕೋಪಗೊಂಡಿರುವ ಪ್ರೇಮಿಗಳು, ಮನಸ್ಸಿನಲ್ಲಿ ಪ್ರೀತಿ ಇದ್ದರೂ ಕೂಡ ತಮ್ಮ ಅಹಂ ಬಿಟ್ಟು ಮಾತಾಡಲೊಲ್ಲರು. ಆಗ ಈಕೆಯನ್ನು ಉರಿಸಲೆಂದು, ತಮಟೆಯವಳಿಗೆ ಹಣ ಕೊಟ್ಟು ಟಪ್ಪಾಂಗುಚ್ಚಿ ಡಾನ್ಸ್ ಮಾಡುವ ನಾಯಕ, ತನ್ನ ಅಹಂ ಬಿಡಲೊಲ್ಲದ ನಾಯಕಿ, ಈತನ ನೃತ್ಯಕ್ಕೆ ಶಿಳ್ಳೆ ಹಾಕಿ, ಆತನನ್ನೇ ಉರಿಸುವ ನಾಯಕಿ, ಅಪ್ಪ ಮದುವೆಗೆ ವಿರೋಧ ಮಾಡುತ್ತಾನೆಂದು ಓಡಿ ಹೋಗುವ ಹವಣಿಕೆಯಲ್ಲಿರುವ ಪ್ರೇಮಿಗಳ ಪ್ರಯತ್ನಕ್ಕೆ ನಾಯಕಿಯ ತಾಯಿ ಕಣ್ಣೀರು ಸುರಿಸಿ ಹಾಳುಮಾಡುವಾಗ, ಹಿಂಬದಿಯಲ್ಲಿ ತೋರಿಸುವ ಹುಚ್ಚನೊಬ್ಬನ ಬಡಬಡಿಕೆ, ತಾಳ್ಮೆಯಿಂದ ಅದನ್ನು ಕೇಳಿಸಿಕೊಳ್ಳುತ್ತಿರುವ ಮನೆಯವನು, ಅವನನ್ನು ಕಡಿವಾಣ ಹಾಕಿ ಬಂಧಿಸುವುದು ಕೂಡ ಪರೋಕ್ಷವಾಗಿ ಓಡಿಹೋಗಿ ಮದುವೆ ಮಾಡಿಕೊಳ್ಳುವ ಪ್ರೇಮಿಗಳ (ಭವಿಷ್ಯದ ಯೋಚನೆ ಇಲ್ಲದೆ) ಹುಚ್ಚುತನವನ್ನು, ಅದನ್ನು ತಡೆಹಾಕುವುದನ್ನು ಸೂಚಿಸುವುದು. ಮಗಳನ್ನು ಮದುವೆಯಾಗಿ ಓಡಿ ಹೋದ ಎಂದು ಊರೆಲ್ಲಾ ಅಪ್ಪ ಹುಡುಕುತ್ತಿದ್ದರೆ, ಒಂದೇ ಒಂದು ಶಾಟ್ ನಲ್ಲಿ ೩ ಟೀ ಕಪ್ ಗಳನ್ನು ತೋರಿಸುವ ಮೂಲಕ ಆತ ಮನೆಯಲ್ಲಿದ್ದಾನೆ ಎನ್ನುವುದಿರಬಹುದು, ಪ್ರೇಮಿಗಳಿಬ್ಬರೂ ಒಂದಾಗುವಾಗ ತೋರಿಸುವ ೨ ಕಪ್ ಗಳ ಮಿಲನ ಹೀಗೆ.... ಬಹಳಷ್ಟು ಪ್ರಮುಖ ದೃಶ್ಯಗಳು ಕಥೆ ಹೇಳುತ್ತಿರುವಾಗ, ಹಿಂಬದಿಯಲ್ಲಿ ಮತ್ತೊಂದು ದೃಶ್ಯದ ಮೂಲಕ (ಪಿಕ್ಚರ್ ಇನ್ ಪಿಕ್ಚರ್) ಸಿಂಬಾಲಿಕ್ ಆಗಿ ಹೇಳುವ ಪ್ರಯತ್ನ ಮಾಡಿರುವುದು ಶ್ಲಾಘನೀಯ.
ಅದುವರೆವಿಗೂ ಬರೀ ಪ್ರೇಮಿಗಳ ಕಥೆಯಂತೆ ಭಾಸವಾಗುತ್ತಿದ್ದ ಚಿತ್ರಕಥೆ, ಮಧ್ಯಂತರದ ನಂತರ ಊಹಿಸಲು ಸಾಧ್ಯವಿಲ್ಲದಂತೆ ಬದಲಾಗಿಬಿಡುತ್ತದೆ. ಪಂಡರೀಬಾಯಿ ನಂತರ ತೆರವಾದ ಕನ್ನಡ ಚಿತ್ರರಂಗದ ‘ಅಮ್ಮ’ನ ಸ್ಥಾನಕ್ಕೆ ‘ಶೃತಿ’ ಚೆಂದ ಕಾಣಬಹುದೇನೋ?! ಎನ್ನುವಷ್ಟು ಪರಿಣಾಮಕಾರಿಯಾಗಿ ನಟಿ ‘ಶೃತಿ’ ಅಮ್ಮನ ಪಾತ್ರಕ್ಕೆ ನೈಜತೆ ತುಂಬಿದ್ದಾರೆ. ನಾಯಕಿಯ ಅಣ್ಣನ ಪಾತ್ರಧಾರಿ ಶಾರೂಖ್ ಖಾನ್ ನಂತೆ ನಟಿಸುವುದು, ನಾಯಕಿಯ, ನಾಯಕನ ನಟನೆಯಲ್ಲಿ ಕಂಡುಬರುವ ಅಸಹಜ ನಟನೆ, ದೃಶ್ಯಗಳನ್ನು ನಿರೂಪಿಸುವಾಗ ಎಲ್ಲೂ ಕಾಣಿಸದಿರುವ ಇತರ ಜನರು ಅಥವಾ ಪಾತ್ರಗಳು, ಪ್ರೇಮಿಗಳ ನಡುವೆ ದೇಹಕ್ಕಿಂತ ಮನಸ್ಸೇ ಹೆಚ್ಚು ಏಕೆ ಮಾತಾಡುತ್ತದೆ? ಎಂಬುದು ಅದುವರೆವಿಗೂ ಹೊಳೆಯದೇ ಇದ್ದದ್ದು ಅಥವಾ ಪೋಲೀಸ್ ಇನ್ಸ್ ಪೆಕ್ಟರ್ ಮಹಿಳಾ ಪೋಲೀಸ್ ಗೆ ತಂದುಕೊಡುವ ಇಡ್ಲಿ ಪಾಕೆಟ್ ನ ಅರ್ಥ (ನನಗೇ ಈ ದೃಶ್ಯ ಯಾಕೆ ಅಂತಾ ಅರ್ಥವಾಗಿರಲೇ ಇಲ್ಲ) ಥಟ್ ಅಂತಾ ತಲೆಗೆ ಹೊಳೆಯುತ್ತದೆ. ಈ ಎಲ್ಲಕ್ಕೂ ಒಂದು ತಾರ್ಕಿಕ ಕಾರಣ / ಉತ್ತರ ಮಧ್ಯಂತರದ ನಂತರ ವೀಕ್ಷಕರಿಗೆ ಸಿಗುತ್ತದೆ. ಮೃದು ಹೃದಯಿ ಪೋಲೀಸ್ ಪೇದೆ, ಹಣ, ಅಧಿಕಾರವಿದ್ದರೂ ನಿಸ್ಸಹಾಯಕನಾಗುವ ಪೋಲೀಸ್ ಇನ್ಸ್ ಪೆಕ್ಟರ್, ನಮಗ್ಯಾಕೆ ಜವಾಬ್ದಾರಿ? ಎಂದು ಸಹಾಯಕ್ಕೆ ಒದಗದ ನೆರೆಹೊರೆಯವರು, ಅಂತಃಕರಣ ಅವಶ್ಯವಾಗಿರಬೇಕಾದ ವೈದ್ಯರ ಹಣದಾಸೆ, ಎಷ್ಟೋ ವರ್ಷಗಳ ನಂತರ ಬಯಸಿ, ಬಯಸಿ, ಹುಟ್ಟಿದ ಮಗು ಅಂಗವಿಕಲನೆಂದು ಗೊತ್ತಾದ ತಕ್ಷಣವೇ ಆಚೆಗೆಸೆ ಎಂದು ಹೇಳುವ ತಂದೆ, ಹೆಂಡತಿಯನ್ನು ಕೆಲಸಕ್ಕೆ ಕಳುಹಿಸಿ, ಆಕೆಯನ್ನು ಅನುಮಾನ ಪಡುವ ಗಂಡ, ಮಾತೆತ್ತಿದರೆ ಹೊಡಿ, ಬಡಿ ಎಂದು ಹೇಳುವ ಗೆಳೆಯ, ಗಂಡಸರೆಲ್ಲರೂ ಸರಿ ಇಲ್ಲ ಎಂದು ಹೇಳುವ ಗೆಳತಿ ಇವರೆಲ್ಲರ ನಡುವೆಯೇ ಬದುಕಲು ಪ್ರೇಮವೇ ದೈವ, ಪ್ರೇಮವೇ ಜೀವ ಎಂದು ಸಾರುವ ತಾಯಿ, ತನ್ನ ಅಂಗವಿಕಲ ಮಗುವಿಗಾಗಿಯೇ, ಆ ಮಗುವಿನ ಖುಷಿಗಾಗಿಯೇ ತನ್ನೀಡಿ ಬದುಕನ್ನು ಮೀಸಲಿಡುವುದು, ‘ನೀವು ಹೊರಗಡೆ ಏಟು ತಿಂದರೆ, ನಾವು ಒಳಗಡೆ ತಿನ್ನುತ್ತಿರುತ್ತೇವೆ ಕಣೋ’ ಎಂದು ನಾಯಕನಿಗೆ ತಮಗೂ ನೋವಾಗುತ್ತಿರುತ್ತದೆ ಎಂದು ಸೂಕ್ಷ್ಮವಾಗಿಯೇ ಬುದ್ಧಿ ಹೇಳುವ ನಾಯಕಿ (ಹುಡುಗಿಯರೆಲ್ಲಾ ಮೋಸಗಾರ್ತಿಯರು ಎಂದಾಗ), ಪ್ರೀತಿಯಿಂದಲೇ ಎಲ್ಲರನ್ನು ಗೆಲ್ಲಬಹುದು ಎನ್ನುವ ಹುಮ್ಮಸ್ಸಿರುವ ನಾಯಕ, ಒಟ್ಟಿನಲ್ಲಿ ಪ್ರೀತಿ / ಪ್ರೇಮ ಬದುಕಿನಲ್ಲಿ ಇಲ್ಲವೆಂದರೆ ನಾವೆಲ್ಲರೂ ಬದುಕಿದ್ದು ಕೂಡ ಜೀವಚ್ಛವಗಳಂತೆ ಎನ್ನುವ ಚಿತ್ರದ ಅಂತ್ಯ ಬದುಕಲು ಮನುಷ್ಯನಿಗೆ ಬೇಕಿರುವುದು ಒಂದಿಷ್ಟು ಪ್ರೀತಿ ಎಂದು ಆ ಮಹಿಳಾ ಪೋಲೀಸ್ ಬಿಕ್ಕಿಬಿಕ್ಕಿ ಅಳುವ ಮೂಲಕ ಕೊನೆಯಾಗುತ್ತದೆ.. ಬದುಕಿನಲ್ಲಿ ಎಷ್ಟೇ ಕಷ್ಟವಿರಲಿ, ಪ್ರೀತಿಯಿದ್ದರೆ ಎಲ್ಲವನ್ನೂ ನಗುನಗುತ್ತಲೇ ಗೆಲ್ಲಬಹುದು ಎನ್ನುವುದು ಈ ಚಿತ್ರದ ನೀತಿಪಾಠವಾಗುತ್ತದೆ.
ನಿಮ್ಮಿಂದ ನಿರೀಕ್ಷಿಸಿದ್ದು ಸಿಕ್ಕಿತು. ಸೂಚ್ಯ ದೃಶ್ಯಗಳನ್ನು ಅದ್ಭುತವಾಗಿ ತೆರೆದಿಟ್ಟಿದ್ದೀರಿ (ನಿರ್ದೇಶಕನ ಸೃಜನಶೀಲತೆಗೆ ಅನುಗುಣವಾಗಿ). ನವೀನ್ ಹೇಳಿದ ಹಾಗೆ ಸ್ಡರ್ಗ ಸದೃಶ್ಯ ವಿಮರ್ಶೆ. ನನಗೆ ಇನ್ನೂ ಕಾಡುತ್ತಿರುವುದು ಆ ಮಹಿಳಾ ಪೊಲೀಸ್ ನ ಹನಿ ತುಂಬಿದ ಬಟ್ಟಲುಕಂಗಳು.....
ReplyDeleteಥ್ಯಾಂಕ್ಸ್ ಕುಮುದ. ಮತ್ತೆ, ಮತ್ತೆ ಎಡಿಟ್ ಮಾಡ್ತಾನೇ ಇದ್ದೀನಿ. ಇನ್ನೂ ಪೂರ್ತಿ ಬರೆದ ಹಾಗೇ ಅನ್ನಿಸಿಲ್ಲ :-)
Deleteಚೆಂದದ ವಿಶ್ಲೇಷಣೆ... :) ಓದಿ ಖುಷಿಯಾಯ್ತು
ReplyDeleteಧನ್ಯವಾದಗಳು.
Deleteಎಲ್ಲವು ಮಾರ್ಮಿಕ !!! ಯಾವ ತೋರ್ಪಡಿಕೆಯಾಗಲಿ, ಆರ್ಭಟವಾಗಲಿ ಇಲ್ಲದೆ, ಸಲೀಸಾಗಿ ಎಳೆದು ಕೊಂಡುಹೋಗುವ ಚಿತ್ರ ಇದು.ಪವನ ತನ್ನ ಕಣ್ಣಿನಲ್ಲೇ ಮಾತಾಡುವ ಪರಿ ನನಗೆ ಬಹಳ ಹಿಡಿಸಿತು ಮತ್ತು ಲೇಡಿ ಪೋಲಿಸ್ ತಾನು ಕೇಳಿಸಿಕೊಂಡಿದ್ದು ನಮಗೆ ತಿಳಿಸದೇ ನಮ್ಮಲ್ಲಿ ಒಂದಾಗಿ ನಮ್ಮ ಭಾವನೆಯನ್ನು ತನ್ನ ಅಭಿನಯದ ಮುಖೇನ ತೋರಿಸಿದ್ದು ನನಗೆ ಅತ್ಯಂತ ಪ್ರಿಯವಾದ ಸಂಗತಿ.....
ReplyDeleteನಿಮ್ಮ ಮೌನದಲ್ಲಿ ಹುದುಗಿದ್ದ ಮಾತು ಓದಲು ಸಿಕ್ಕಿತು ಎನ್ನುವುದೇ ಸಂತೋಷ.
ಹೌದು. ಧನ್ಯವಾದಗಳು ಸರ್ :)
Deleteಅಬ್ಬಾ!! ಸಿನೆಮಾದ ತುಣುಕುಗಳು ಮತ್ತೆ ಕಣ್ಣೆದುರು ಬಂದುಬಿಡುತ್ತವೆ ಇದನ್ನು ಓದುವಾಗ :) ತುಂಬಾ ಚೆನ್ನಾಗಿ ಬರೆದಿದ್ದೀರ :) ಹಾಟ್ಸ್ ಆಫ್ ! :)
ReplyDeleteಧನ್ಯವಾದಗಳು
Delete"ಪೋಲೀಸ್ ಪೇದೆ ಮೃದು ಸ್ವಭಾವದವಳಾಗಿದ್ದರೂ, ತನ್ನ ವೃತ್ತಿಯ ಕಾರಣ ಕಠೋರ ಹೃದಯಿಯಂತೆ ತೋರಿಸಿಕೊಳ್ಳಬೇಕಾದ ಅನಿವಾರ್ಯತೆ ಹಾಗೂ ಮಂಗಳಮುಖಿಯ ದೇಹ ಗಂಡಾಗಿದ್ದರೂ, ತನ್ನ ವೃತ್ತಿಗಾಗಿ ಹೆಂಗಸಂತೇ ಕಾಣಿಸಿಕೊಳ್ಳಬೇಕಾದ ಪರಿಸ್ಥಿತಿಯನ್ನು ಒಂದೆರಡು ನಿಮಿಷಗಳಲ್ಲಿಯೇ ಸಣ್ಣ ಕಥೆಯಂತೆ ಮನಸ್ಸಿಗೆ ಮುಟ್ಟಿಬಿಡುತ್ತದೆ."
ReplyDeleteಒಳ್ಳೆಯ ಅಬ್ಸರ್ವೇಶನ್. ಹೂ ಮುಡಿದದ್ದು ಮಂಗಳ ಮುಖಿನೇನಾ?ನಾವು ನೋಡುವಾಗ ಗಮನಕ್ಕೆ ಬರಲಿಲ್ಲ.
ಆಕೆ ಹೂವು ತೆಗೆದುಕೊಳ್ಳುವ ಮುಂಚೆ ಚಪ್ಪಾಳೆ ಹೊಡೆದದ್ದು,ಗಲೀಜಾದ ಹೂವನ್ನು ಕಿತ್ತು ಎಸೆಯುವ ಶೈಲಿ, ಮುಡಿದುಕೊಳ್ಳುವ ಶೈಲಿ, ಆಮೇಲೆ ನಡೆದುಕೊಂಡುಹೋಗುವ ಶೈಲಿ ಈ ಎಲ್ಲದರ ಜೊತೆಗೆ ಮಾತಾಡುವ ಧ್ವನಿಯ ಶೈಲಿ ಎಲ್ಲವೂ ಅವರಿಬ್ಬರೂ ಮಂಗಳಮುಖಿಯರು ಎಂಬುದನ್ನು ಚೆಂದವಾಗಿ ತೋರಿಸಿತು. ಯಾರೂ ಕೂಡ ಇದನ್ನು ಗಮನಿಸಿಲ್ಲ ಎಂದೇ ತೋರುತ್ತದೆ! :(
Delete