ಇತ್ತೀಚಿನ ‘ಡೆಲ್ಲಿ ಅತ್ಯಾಚಾರ’ ಪ್ರಕರಣ ಇಡೀ ಭಾರತದಲ್ಲಿ ಒಂದು ದೊಡ್ಡ ಸಂಚಲನವನ್ನುಂಟು ಮಾಡಿತು. ಅಂದು ಮುಂಬೈನಲ್ಲಿ ‘ಕಸಬ್’ ಸಿಕ್ಕಸಿಕ್ಕವರನ್ನು ಕೊಂದದ್ದಕಿಂತಲೂ, ತಾಜ್ ಹೋಟೇಲ್ ನಲ್ಲಿ ಆದ ಉಗ್ರರ ದಾಳಿಗಿಂತಲೂ, ಒಂದಿಷ್ಟು ಹೆಚ್ಚಿನ ‘ಸುದ್ಧಿ’ಯನ್ನು ಈ ಭೀಕರ ಕೃತ್ಯ ಮಾಡಿತು! ಇಂತಹ ನಾಚಿಕೆಗೇಡಿನ ಕೃತ್ಯ ಮಾಡಿದ ಅಪರಾಧಿಗಳಿಗೆ ಗಲ್ಲು ಶಿಕ್ಷೆ ಕೊಡಬೇಕು ಎಂಬುದರಿಂದ ಹಿಡಿದು, ಅವರ ಪುರುಷತ್ವದ ಹರಣವಾಗಬೇಕು, ಅವರ ‘ಆಯುಧ’ವನ್ನು ನಿಷ್ಕ್ರಿಯಗೊಳಿಸಬೇಕು ಎನ್ನುವವರೆಗೂ ಆಕ್ರೋಶದ ಮಾತುಗಳು ಕೇಳಿಬಂದವು. ಈ ಪ್ರಕರಣ ಅತ್ಯಂತ ಅಸಹ್ಯ, ಭೀಭತ್ಸ, ಪೈಶಾಚಿಕ ಹಾಗೂ ಅಮಾನವೀಯ ಎಂಬುದರಲ್ಲಿ ಎರಡು ಮಾತಿಲ್ಲ! ಆದರೆ ಇಂತಹದೊಂದು ರೇಪ್ ಪ್ರಕರಣ ಇದೇ ಮೊದಲ ಬಾರಿಗೆ ಆದಂತೆ ಬಿಂಬಿಸಿದ್ದು ಮಾತ್ರ ಅಸಹನೀಯ!
ಹಿಂದೆ ಕೂಡ ಹೆಣ್ಣಿನ ಮೇಲೆ ದೌರ್ಜನ್ಯವಿತ್ತು. ನಮಗ್ಯಾರಿಗೂ ಗೊತ್ತಾಗುತ್ತಿರಲಿಲ್ಲ. ‘ಹೆಣ್ಣಿನ ಮೇಲೆ’ ಮಾತ್ರ! ಎಂದು ಹೇಳುವುದಕ್ಕಿಂತ ಸಮಾಜದಲ್ಲಿ ದುರ್ಬಲ ವರ್ಗಗಳ ಮೇಲಿನ ದೌರ್ಜನ್ಯ ಎಂದಿಗೂ ಇತ್ತು, ಇಂದಿಗೂ ಇದೆ! ನಾನು ಚಿಕ್ಕವಳಿದ್ದಾಗ ‘ರೂಪ’ ಎಂಬಾಕೆಯನ್ನು ಸತಿ ಸಹಗಮನ ಮಾಡಿದ ಕ್ರೂರ ಘಟನೆ ನನಗೆ ಇಂದಿಗೂ ಮನದಲ್ಲಿ ಅಚ್ಚೊತ್ತಿದೆ. ಎಷ್ಟೋ ಮನೆಗಳಲ್ಲಿ ಇವತ್ತಿಗೂ ಕೂಡ ನಡೆಯುವ ಹಿಂಸೆ, ಹೊರಗೆ ಯಾರಿಗೂ ಗೊತ್ತಾಗುವುದೇ ಇಲ್ಲ. ಹೆಣ್ಣಿನ ಮೇಲೆ ಮಾತ್ರವಲ್ಲ, ಗಂಡಿನ ಮೇಲೆಯೂ ಕೂಡ ಇಂತಹುದ್ದೇ ಲೈಂಗಿಕ ಶೋಷಣೆಗಳು, ಮಕ್ಕಳ ಮೇಲೆ, ಎಲ್ಲ ದುರ್ಬಲರ ಮೇಲೂ ನಡೆಯುತ್ತಲೇ ಇದೆ. ಅಪ್ಪ, ಅಮ್ಮ, ಚಿಕ್ಕಪ್ಪ, ಚಿಕ್ಕಮ್ಮ, ಹೀಗೆ ಮನೆಯವರೇ ಲೈಂಗಿಕ ಶೋಷಣೆ ಮಾಡುತ್ತಾರೆ. ಅದು ಡೆಲ್ಲಿ ರೇಪ್ ಗಿಂತಲೂ ಭೀಕರ! ಮನೆಯವರೇ ಹೀಗೆ ಮಾಡಿದರೆ, ಮುಂದೆ ಯಾರನ್ನೂ ನಂಬಲಾಗುವುದು? ಹಿಂಸೆಯಲ್ಲಿನ ಪ್ರಮಾಣ ಹೆಚ್ಚು ಕಡಿಮೆಯಾಗಿರಬಹುದೇ ಹೊರತು, ಹಿಂಸೆ ಹಿಂಸೆಯೇ. ನಮ್ಮ ಅರಿವಿಗೆ, ಬೆಳಕಿಗೆ ಬಂದದಷ್ಟೇ ನಮಗೆ ತಿಳಿಯುವುದು. ಮೊದಲಿಗೆ ಯಾವುದೇ ‘ಜವಾಬ್ದಾರಿ’ ಇಲ್ಲದೇ, ಕೇವಲ, ತಮ್ಮ ಮಾಧ್ಯಮಗಳ ಹೆಚ್ಚುಗಾರಿಕೆ ತೋರಿಸಿಕೊಳ್ಳಲಷ್ಟೇ ತಾ ಮುಂದೆ, ನಾ ಮುಂದೆ ಎಂದು ಇಂಥ ‘ಗಂಭೀರ’ ವಿಷಯಗಳನ್ನು ತೋರಿಸುವ ಮೀಡಿಯಾಗಳ ಬಗ್ಗೆಯೇ ನನ್ನ ಧಿಕ್ಕಾರವಿದೆ.
ಈಗ ಮಾಧ್ಯಮಗಳು ತಮ್ಮ, ತಮ್ಮ ಟಿ ಆರ್ ಪಿ ಹೆಚ್ಚಿಸಿಕೊಳ್ಳಲಷ್ಟೇ ಈ ತರಹದ ಸೆನ್ಸಿಟಿವ್ ಇಶ್ಯೂಗಳನ್ನು ಮೊದಲಿಗೆ ಹೆಡ್ ಲೈನ್ಸ್, ಸೆನ್ಶೇಷನಲ್ ಎಂದು ತೋರಿಸುತ್ತವೆ! ಅದರಲ್ಲೂ ಮುಖ್ಯವಾಗಿ ರೇಡಿಯೋ, ಟಿವಿಯವರು ನಡೆದುಕೊಳ್ಳುವ ರೀತಿ ನೋಡಿದರೆ ಅಸಹ್ಯವಾಗುತ್ತದೆ. ಮೊನ್ನೆ ಎಫ್ ಎಮ್ ೧೦೪ ಚಾನೆಲ್ ನಲ್ಲಿ ಹಾಡುಗಳ ಮಧ್ಯೆ, ಮಧ್ಯೆ ರೇಡಿಯೋ ಜಾಕಿ ಒಬ್ಬಳು ಈ ರೇಪ್ ವಿಷಯ ಮಾತನಾಡುತ್ತಿದ್ದಳು! ‘ಡೆಲ್ಲಿ ರೇಪ್’ ಬಗ್ಗೆ ನಿಮ್ಮ ಒಪಿನಿಯನ್ ತಿಳಿಸಿ ಎಂದು ಆಕೆ ಹಾಕಿದ ಹಾಡು ಯಾವುದೋ ಸೆಕ್ಸಿ ಐಟಮ್ ಸಾಂಗ್! ಇಂಥ ಗಂಭೀರ, ಸೆನ್ಸಿಟಿವ್ ವಿಷಯವನ್ನು ಹಾಡುಗಳ ಮಧ್ಯೆ ಚರ್ಚಿಸುವುದು! ಎಲ್ಲಿ? ಹೇಗೆ? ಎಷ್ಟು ಮಾತನಾಡಬೇಕು ಎಂಬುದರ ಅರಿವಿಲ್ಲ ಇವರ್ಯಾರಿಗೂ?! ಮುಖ್ಯವಾಗಿ ಇಂತಹ ವಿಷಯಗಳನ್ನು, ಇಂತಹವರು ಹೀಗೆ ಬೇಕಾಬಿಟ್ಟಿ ಮಾತನಾಡುವುದನ್ನು ನಿಷೇಧಿಸಬೇಕು. ಇವರಿಂದ ವಿಷಯದ ಗಂಭೀರತೆ ಹಾಳಾಗಿಬಿಡುತ್ತದೆ.
ಇಷ್ಟೇ ಅಲ್ಲಾ, ಇಷ್ಟೆಲ್ಲಾ ಆದ ಮೇಲೂ ಅದರಿಂದ ಅಪರಾಧಿಗೆ ಸಿಕ್ಕ ಪನಿಶ್ ಮೆಂಟ್ ಏನು? ಯಾರಿಗೂ ಗೊತ್ತಾಗೊಲ್ಲ. ಯಾಕೆಂದರೆ ಅಪರಾಧಿ ಸಿಕ್ಕು, ಆತನ ಅಪರಾಧಗಳು ಕೋರ್ಟಿನಲ್ಲಿ ರುಜುವಾತಾಗುವಷ್ಟರಲ್ಲಿ, ಬಹುಶಃ ವಿಕ್ಟಿಮ್ ಗೂ ಕೂಡ ಅಪರಾಧ ಏನಾಗಿತ್ತು? ಅನ್ನುವುದು ಮರೆತೇ ಹೋಗಿರುತ್ತದೆಯೇನೋ? ಅಥವಾ ಗೆದ್ದೆ ಎಂದು ಬೀಗಲು ಆಗದಷ್ಟು ಮಾನಸಿಕ ತೊಂದರೆಗಳಿಗೀಡಾಗಿರುತ್ತಾರೆ :(. ಆಕೆ ಒಮ್ಮೆ ‘ರೇಪ್’ ದೈಹಿಕವಾಗಿ ಅನುಭವಿಸಿದ್ದರೆ, ಪದೇ, ಪದೇ ಮಾಧ್ಯಮಗಳಲ್ಲಿ, ಕೋರ್ಟ್ ಗಳಲ್ಲಿ, ನಮ್ಮೆಲ್ಲರ ಬಾಯಿಗಳಲ್ಲಿ ಎಷ್ಟು ಬಾರಿ ‘ರೇಪ್’ ಆಗುತ್ತಾಳೋ? ಆ ನೋವಿಗೆ ನಮ್ಮಲ್ಲಿ ಉತ್ತರವಿದೆಯೇ? ನಾವು ಕೂಡ ಅಷ್ಟೇ. ಎಲ್ಲಾ ಚಾನೆಲ್ ಗಳನ್ನು ನೋಡುವುದು, ಬಾಯಿಗೆ ಬಂದಂತೆ ಮಾತನಾಡಿಕೊಳ್ಳುವುದು, ಒಂದಿಷ್ಟು ದಿವಸಗಳು ಕೂಗಾಡುವುದು, ಹಾರಾಡುವುದು ಅಷ್ಟೇ. ಪ್ರಕರಣದ ಕಾವು ಆರಿದ ನಂತರ, ನಮ್ಮ ಕೆಲಸ, ನಮ್ಮ ಪಾಡು. ಇದರ ಬಗ್ಗೆಯೂ ನನ್ನನ್ನು ಒಳಗೊಂಡಂತೆ ಎಲ್ಲರ ಮೇಲೂ ನನಗೆ ತಿರಸ್ಕಾರವಿದೆ.
ಇಂತಹ ಪ್ರಕರಣಗಳು ಘಟಿಸಿದೊಡನೆಯೇ ರಾಜಕೀಯ ಪಕ್ಷಗಳು ತಮ್ಮ ಬೇಳೆ ಬೇಯಿಸಿಕೊಳ್ಳಲು, ಸ್ವಹಿತಕ್ಕಾಗಿ ಪ್ರಯತ್ನ ಶುರು ಮಾಡಿಬಿಡುತ್ತಾರೆ. ಮಂಗಳೂರಿನ ಪಬ್ ಪ್ರಕರಣದಲ್ಲಿ ಸಂಸ್ಕೃತಿ ಎಂದು ಬೊಬ್ಬೆ ಹೊಡೆದ ಮುತಾಲಿಕ್ ಮತ್ತು ಸಂಘಟಿಗರು, ಅವರಿಗೆ ಪಿಂಕ್ ಚೆಡ್ಡಿಗಳನ್ನು ಕಳಿಸುವ ಮೂಲಕ ನಾವೇನೋ ಸಾಧಿಸಿದೆವು ಎಂದು ಬೀಗಿದ ರೇಣುಕಾ ಚೌಧರಿ ಮುಂತಾದವರು ಇಂತಹ ಘಟನೆಗಳು ನಡೆದಾಗ, ತಮಗೆ ಸಂಬಂಧವೇ ಇಲ್ಲದಂತೆ ನಟಿಸುವಾಗ ಅವರ ಬಗ್ಗೆ ಹೇಸಿಗೆಯಾಗುತ್ತದೆ. ಇಂತಹ ಅತ್ಯಾಚಾರಗಳು ನಡೆದ ಕೂಡಲೇ, ಆ ದೌರ್ಜನ್ಯಕ್ಕೊಳಗಾದ ಹೆಣ್ಣನ್ನು ಇನ್ನೊಂದಿಷ್ಟು ನೋಯಿಸುವ, ಇಡೀ ಹೆಣ್ಣು ಕುಲವನ್ನೇ ಅಶ್ಲೀಲವಾಗಿ ನೋಡುವ ಗಂಡಸರು, ಇಡೀ ಗಂಡಸರನ್ನೆಲ್ಲಾ ಅಪರಾಧಿಗಳಂತೆ, ಅವರಿಗೆಲ್ಲಾ ಶಿಕ್ಷೆ ಆಗಬೇಕು ಎಂದು ಕುದಿಯುವ ಹೆಂಗಸರು! ಇಲ್ಲಿ ಒಬ್ಬರ ತಪ್ಪು, ಇಡೀ ಒಂದು ಸಮುದಾಯದ ತಪ್ಪಾಗಿ ಬಿಂಬಿತವಾಗಿಬಿಡುತ್ತದೆ. ಇಲ್ಲಿ ಒಂದು ಒಳ್ಳೆಯ, ಆರೋಗ್ಯಕರ ಸಮಾಜದ ನಿರ್ಮಾಣಕ್ಕೆ, ನಮ್ಮ ಪೀಳಿಗೆ ಮುಂದುವರಿಯಲು ನಮಗೆ ಗಂಡು, ಹೆಣ್ಣು, ಇಬ್ಬರೂ ಬೇಕು ಎಂಬುದನ್ನೇ ನಾವು ಮರೆತಂತಿದ್ದೇವೆ. ನಮ್ಮ ನಮ್ಮ ವೈಯಕ್ತಿಕ ಅಭಿಪ್ರಾಯಗಳನ್ನು ಹಿಡಿದು, ಇಡೀ ಸಮಾಜದ ಸಮಸ್ಯೆಗೆ ಇದೇ ಪರಿಹಾರ ಎಂಬಂತೆ ಮಾತನಾಡಲು ತೊಡಗುತ್ತೇವೆ.
ಇನ್ನೂ ನಾವು ಸಮಾಜದ ಅಂಗವೆಂದು, ನಮ್ಮಿಂದಲೇ ಸಮಾಜವೆಂದು ತಿಳಿಯದ ಕೆಲವು ತಟಸ್ಥ ಮಂದಿಗಳಿದ್ದಾರೆ. ಇವರು ತಮ್ಮ ಸುರಕ್ಷಿತ ವಲಯವನ್ನು ಬಿಟ್ಟು ಬರಲೊಲ್ಲರು! ತಮ್ಮ ಮನೆಯಲ್ಲಿ ಕಸ ಬಿದ್ದಿದ್ದರೆ, ಪಕ್ಕದ ಮನೆಗೆ ಎಸೆದು ಸುಮ್ಮನಾಗುವಂಥವರು! ಅದೃಷ್ಟವಶಾತ್ ನಾವು, ನಮ್ಮ ಮನೆಯವರು ಇಂಥ ದುರ್ಘಟನೆಗಳಿಗೆ ಈಡಾಗಿಲ್ಲ ಎಂದರಿಯದ ಇವರು, ಪರಿಸ್ಥಿತಿಯ ಸೂಕ್ಷ್ಮತೆ ಅರಿಯದೆ, ಯಾವುದಕ್ಕೂ ಬೆಂಬಲ ಕೊಡದವರು. ವೈಯಕ್ತಿಕ ಸಮಸ್ಯೆಗೂ, ಸಾಮಾಜಿಕ ಪಿಡುಗಿಗೂ ವ್ಯತ್ಯಾಸ ತಿಳಿಯದವರು ಇವರು! ನಾವು, ನಮ್ಮ ಮನೆ, ನಮ್ಮ ಮಕ್ಕಳು, ನಮ್ಮ ಮಕ್ಕಳನ್ನು ಸಂಸೃತಿ, ಸಂಸ್ಕಾರ ಎಂದು ಚೆಂದದಲ್ಲಿ ಬೆಳೆಸುತ್ತಿದ್ದೇವೆ ಎನ್ನುವ ಹುಂಬತನದಲ್ಲಿರುವವರು. ಆದರೆ ಇದೇ ನಮ್ಮ ಮಕ್ಕಳು ಸಮಾಜಕ್ಕೆ ತೆರೆದುಕೊಂಡಾಗ ಇಂತಹ ಪ್ರಕರಣಗಳನ್ನು ಡೈಜೆಸ್ಟ್ ಮಾಡಿಕೊಳ್ಳುವುದಾದರೂ ಹೇಗೆ? ನಮ್ಮ ಮಕ್ಕಳಿಗೆ ನಾವು ಎಂತಹ ಕ್ರೂರ ಕೆಲಸ ಮಾಡಿದರೂ, ನಿನಗೇನು ಶಿಕ್ಷೆ ಆಗದು ಎಂಬುದನ್ನು ನಾವು ಈ ಮೂಲಕ ಹೇಳಿಕೊಡುತ್ತಿಲ್ಲವೇ? ನಾವು ಎಷ್ಟೇ ನಮ್ಮ ಮಕ್ಕಳನ್ನು ಹುಷಾರಾಗಿ ನೋಡಿಕೊಂಡರೂ, ನಮಗೆ ಅರಿವಿಲ್ಲದಂತೆ ನಮ್ಮ ಮಕ್ಕಳು ಸಮಾಜದಲ್ಲಿನ ಒಳಿತು ಕೆಡಕುಗಳತ್ತಾ ಆಕರ್ಷಿತರಾಗುವುದಿಲ್ಲವೇ? ನಮ್ಮಿಂದಲೇ ಸಮಾಜ ಅಲ್ಲವೇ? ಇದಾವುದನ್ನೂ ಯೋಚಿಸದೇ, ನೀನೇನೂ ಬೇಕಿದ್ರೂ ಮಾಡಿಕೋ? ನನಗೂ ಇದಕ್ಕೂ ಸಂಬಂಧವಿಲ್ಲ ಎಂದು ಹೇಳುತ್ತಾ ತಮ್ಮ ಸ್ವಹಿತ, ತಮ್ಮ ಸ್ವಾರ್ಥ, ತಮ್ಮ ಏಳಿಗೆ, ಉದ್ದಾರ ನೋಡಿಕೊಳ್ಳುವವರು. ಇವರಿಗೆ ಇಂತಹ ಪ್ರಕರಣಗಳೂ ಯಾವುದೂ ಕೂಡ ಬಾದಿಸದು.
ಹಾಗಾದರೆ ನಾವು ಮಾಡಬೇಕಾದುದೇನು? ಪ್ರತಿಯೊಬ್ಬ ಮನುಷ್ಯನೂ ವೈಯಕ್ತಿಕ ಹಿತಾಸಕ್ತಿಯನ್ನು ಬಿಟ್ಟು, ಸಮಾಜಕ್ಕಾಗಿ, ತಮ್ಮ ಮುಂದಿನ ಪೀಳಿಗೆಗಾಗಿ, ಇಂತಹ ಪ್ರಕರಣಗಳಾದಾಗ ಒಗ್ಗಟ್ಟಿನಿಂದ ಒಮ್ಮನಸಿನಿಂದ ಸಮಾಜದ ಹಿತದೃಷ್ಟಿಯಿಂದ ಕೆಲಸ ಮಾಡಬೇಕಿದೆ. ಅಲ್ಲಿ ಅಂದೂ ರೇಪ್ ಆದಾಕೆಯನ್ನು ಬಸ್ಸಿನಿಂದ ಹೊರಗೆ ಎಸೆದಾಗ, ಯಾರೊಬ್ಬರೂ! ಆಕೆಯನ್ನು ರಕ್ಷಿಸಿಕೊಳ್ಳಲು ಅಂದರೆ, ಆಸ್ಪತ್ರೆಗೆ ಸೇರಿಸಲು ಬರಲಿಲ್ಲವೆಂದರೆ.....? ಎಷ್ಟು ನೋವಾಗಬಹುದು? ಹೇಳಿ, ನಮ್ಮನೆಯವರು ಈ ತರಹದ ಘಟನೆಗಳಲ್ಲಿ ಸಿಕ್ಕಿಕೊಂಡಾಗಲೇ ನಮಗೆ ಆ ನೋವಿನ ಅನುಭವ ಆಗಬೇಕೆ? ಅಷ್ಟು ಕ್ರೂರಿಗಳೇ ನಾವು? ವೋಟುದಾರರಿಂದ ಹಿಡಿದು ರಾಜಕೀಯ ಪಕ್ಷಗಳ ತನಕವೂ ಹಾಗೂ ಪೋಲೀಸ್ ವ್ಯವಸ್ಥೆಯಿಂದ ಹಿಡಿದು ಕೋರ್ಟುಗಳವರೆಗೂ, ಪ್ರತಿಯೊಬ್ಬರೂ ಸ್ವಾರ್ಥವನ್ನು ಮರೆತು, ಸ್ವಹಿತವನ್ನು ಬಿಟ್ಟು, ಯಾವುದೇ ಹಿಡನ್ ಅಜೆಂಡಾ ಇಲ್ಲದೆ ಕೆಲಸ ಮಾಡುವ ಅವಶ್ಯಕತೆ ಈಗ ಅತ್ಯಗತ್ಯ.
ನಿಜವಾಗಿಯೂ ಜನರಿಗೆ ನ್ಯಾಯ ಒದಗಿಸಬೇಕೆಂಬ ಅರಿವಿದ್ದರೆ, ಮಾಧ್ಯಮಗಳು ಜವಾಬ್ದಾರಿಯುತವಾಗಿ ಕಾರ್ಯಕ್ರಮಗಳನ್ನು ನಿರೂಪಿಸಲಿ. ಇಂತಹ ಘಟನೆಗಳು ನಡೆದಾಗ, ಆ ದಿವಸ ಮನರಂಜನಾ ಕಾರ್ಯಕ್ರಮಗಳನ್ನು ನಿಲ್ಲಿಸಿ, ‘ಸೆನ್ಸಿಬಲ್’ ಆಗಿ ಮಾತನಾಡುವವರನ್ನು, ನಿಜವಾದ ಕಾಳಜಿ ಇರುವವರನ್ನು ಕರೆಸಿ, ಚರ್ಚಿಸಲಿ. ಅದನ್ನು ಫಾಲೋ ಅಪ್ ಮಾಡಿ ತೀರ್ಪು ಸಿಗುವ ತನಕ ಹೋರಾಡಲಿ. ‘ನೊಂದವರಿಗೆ’ ಆ ಸಮಯದಲ್ಲಿ ಅವಶ್ಯವಾಗಿ ಬೇಕಾದಂಥ ಎಲ್ಲಾ ಸಹಾಯಗಳನ್ನು ಮಾಡಲಿ. ಜನರನ್ನು ಒಗ್ಗೂಡಿಸಲಿ, ಧನಸಹಾಯದಿಂದ ಹಿಡಿದು ಮಾನಸಿಕವಾಗಿ ನಾವಿದ್ದೇವೆ ಎಂಬ ಭರವಸೆಯನ್ನು ಅವರಲ್ಲಿ ಉಂಟು ಮಾಡಲಿ, ನಾನು ಒಂಟಿಯಲ್ಲ! ಅಪರಾಧಿಗಳಿಗೆ ಶಿಕ್ಷೆ ಆಗುತ್ತದೆಯೋ, ಇಲ್ಲವೋ, ನನ್ನೊಂದಿಗೆ ಇಡೀ ಸಮಾಜ ನಿಂತಿದೆ ಎಂಬ ನಂಬಿಕೆ ಇಂತಹ ಪ್ರಕರಣಗಳಲ್ಲಿ ನೊಂದವರಿಗೆ ಸಿಕ್ಕಿಬಿಟ್ಟರೆ, ಅವರಿಗಾಗುವ ಸಮಾಧಾನ, ಅವರಿಗೆ ಮುನ್ನುಗ್ಗಲು ಸಿಗುವ ಧೈರ್ಯ, ಇಡೀ ಸಮಾಜಕ್ಕೆ ಸಿಕ್ಕ ಜಯ. ಅಲ್ಲವೇ?
ಅದರೊಟ್ಟಿಗೆ ಪದೇ, ಪದೇ ಇಂತಹ ಪ್ರಕರಣಗಳು ಜರುಗುತ್ತಿರುವುದು ಏಕೆ? ಎಂಬುದನ್ನು ಕೂಲಂಕುಷವಾಗಿ ಪರೀಶೀಲಿಸಬೇಕಾದ ಅಗತ್ಯವಿದೆ. ಇಂತಹ ಕ್ರೂರ, ಆಕ್ರಮಣಕಾರಿ ಮನಸ್ಥಿತಿ ಉಂಟಾಗಲು ಕಾರಣಗಳೇನು? ಹೆಣ್ಣನ್ನು ತುಳಿಯುವುದೇ ಮೂಲ ಉದ್ದೇಶವೇ? ಅಪರಾಧಿಗಳು ಚಿಕ್ಕವರಿದ್ದಾಗ ಏನಾದರೂ ಶೋಷಣೆಗೆ ಒಳಗಾಗಿದ್ದಾರೆಯೇ? ಅಥವಾ ಬೇರೆ ಇನ್ನೇನಾದರೂ ಕಾರಣಗಳಿವೆಯೇ ಎಂಬುದನ್ನು ತಿಳಿದುಕೊಂಡರೆ, ಮೂಲದಲ್ಲಿಯೇ ತಿದ್ದಲು ಆಗಬಹುದೇನೋ? ಒಟ್ಟಿನಲ್ಲಿ ಸಂಘಜೀವಿ ಮನುಷ್ಯ ನಾನಾ ಕಾರಣಗಳಿಂದ ಒಂಟಿಯಾಗುತ್ತಿದ್ದಾನೆ! ಹಣಕ್ಕಾಗಿ, ಐಷಾರಾಮದ ಜೀವನಕ್ಕಾಗಿ ಸ್ವಾರ್ಥಿಯಾಗುತ್ತಿದ್ದಾನೆ. ನಂಬಿಕೆ, ಪ್ರೀತಿ, ವಿಶ್ವಾಸ, ಸಂಘಟನೆ ಎಲ್ಲವೂ ಅರ್ಥ ಕಳೆದುಕೊಳ್ಳುತ್ತಿದೆ. ಕಾನೂನು ಸುವ್ಯವಸ್ಥೆಯಿಂದ ಹಿಡಿದು ಪ್ರತಿಯೊಂದು ಸಿಸ್ಟಮ್ ಗಳಲ್ಲಿಯೂ ನಿಷ್ಟಾವಂತ ಜನರು ಕಡಿಮೆಯಾಗುತ್ತಿದ್ದಾರೆ. ಹುಳುಕುಗಳೇ ರಾರಾಜಿಸುತ್ತಿದ್ದಾವೆ. ಒಂದಷ್ಟು ಹಣ ಚೆಲ್ಲಿದರೆ ಸಾಕು! ಪಾರಾಗಬಹುದು ಎನ್ನುವ ಮನೋಭಾವ, ಎಂತಹ ಕ್ರೂರ ಕೆಲಸಕ್ಕೂ ಅಡಿಯಿಡುವಂತೆ ಮಾಡುತ್ತಿದೆ. ನಮ್ಮ ಮಕ್ಕಳಿಗೆ ಸಮಾಜದಲ್ಲಿ ಇಂಥ ವಾತಾವರಣ ಇದ್ದರೆ ಅವರೇನು ಕಲಿಯುತ್ತಾರೆ? ಎಲ್ಲರೂ ಯೋಚಿಸಬೇಕಾದ ವಿಷಯ. ಹಾ! ಒಮ್ಮತದಿಂದ, ಒಗ್ಗಟ್ಟಿನಿಂದ ಗಂಡು, ಹೆಣ್ಣು, ಬಡವ ಬಲ್ಲಿದ ಭೇಧವಿಲ್ಲದೇ ಮಾಡಬೇಕಾದ ಕೆಲಸ.
No comments:
Post a Comment