Monday, August 27, 2012

ಪರ್ವ - ನನ್ನದೊಂದು ಅನಿಸಿಕೆ!


ಪರ್ವ ಓದಲು ಶುರು ಮಾಡಿದಂದಿನಿಂದ ಬೇರಾವುದನ್ನೂ ಓದಲಾಗಲೇ ಇಲ್ಲ.    ಪರ್ವ -  ನನ್ನ ಇಷ್ಟು ವರ್ಷಗಳ ಓದಿನಲ್ಲಿ ನನ್ನ ಮನದ ಮೇಲೆ ಬಹು ಪರಿಣಾಮ ಬೀರಿದ ಪುಸ್ತಕ.  ಕುಳಿತಿದ್ದರೂ, ನಿಂತಿದ್ದರೂ, ಕನಸಿನಲ್ಲೂ, ಪಾತ್ರಗಳ ಗುಂಗು.  ಪ್ರತಿಯೊಂದು ಪಾತ್ರದ ಚಿತ್ರಣವನ್ನು ಓದುತ್ತಿದ್ದಾಗಲೂ ನಾನೇ ಆ ಪಾತ್ರವೇನೋ ಎಂಬಂತಹ, ನನ್ನ ಬಗ್ಗೆಯೇ ಬರೆದಿದ್ದಾರೋ ಎಂಬಂತಹ ಭಾವ ಮನದೊಳಗೆ ಆವರಿಸಿಬಿಡುತ್ತಿತ್ತು.  ನಾನೇ ಕುಂತಿ ಯಾಗಿದ್ದೆ, ನಾನೇ ದ್ರೌಪದಿಯಾಗಿದ್ದೆ, ನಾನೇ ಎಲ್ಲವೂ ಆಗಿದ್ದೆ.  ಪ್ರತಿಯೊಂದು ಪಾತ್ರವನ್ನು ಕಲ್ಪನೆಯಲ್ಲಿ ಅನುಭವಿಸುತ್ತಿದ್ದೆ. ಹಾಗಾಗಿ ಆಯಾ ದಿನಗಳಂದು ಕನಸಿನಲ್ಲಿಯೂ ಕೂಡ ನಾನೇ ಆ ಪಾತ್ರವಾಗಿದ್ದೆ.  ಯಾಕೆ ಹೀಗೆ ನನ್ನ ಮನಸ್ಸನ್ನು ಪರ್ವ ಕಾಡಿತು? ಎಂಬ ಪ್ರಶ್ನೆ ಮನವನ್ನು ಬಹಳ ಕಾಡತೊಡಗಿತು.  ಉತ್ತರ ನನಗೆ ಹೊಳೆದಿದ್ದೇನೆಂದರೆ ಬಹುಶಃ ಚಿಕ್ಕಂದಿನಿಂದಲೂ ಅಮ್ಮ, ಮಾವ, ಅಜ್ಜಿಯ ಬಾಯಿಯಲ್ಲಿ ಕೇಳಿದ ಮಹಾಭಾರತದ ಕಥೆಗಳು, ಕುಂತಿ, ಭೀಷ್ಮ, ಪಾಂಡವರು ಎಲ್ಲದಕ್ಕಿಂತ ಹೆಚ್ಚಾಗಿ ಶಾಲೆಗಳಲ್ಲಿ ಸ್ಪರ್ಧೆಗಾಗಿ ಬಾಯಿ ಪಾಠ ಮಾಡಿದ್ದ ಭಗವದ್ಗೀತೆ, ಅದರಲ್ಲಿನ ಕೃಷ್ಣನ ಪಾತ್ರ, ಇವರೆಲ್ಲಾ ನಮಗೆ ಚಿರಪರಿಚಿತರೇನೋ ಎಂಬಂತಹ ಭಾವ ಮೂಡಿಸಿತ್ತೆಂದು ಕಾಣುತ್ತದೆ.  ನನಗೆ ಗೊತ್ತಿಲ್ಲದೆಯೇ ನನ್ನ ಮನದ ಕಲ್ಪನೆಯಲ್ಲಿ ಇವರೆಲ್ಲರ ಬಗ್ಗೆಯೂ ಒಂದು ಚಿತ್ರಣವನ್ನು ಕಟ್ಟಿಕೊಂಡಿದ್ದೆನೆಂದು ತೋರುತ್ತದೆ.  ಜೊತೆಗೆ ಭೈರಪ್ಪನವರ ಬರವಣಿಗೆಯ ಶೈಲಿ (ಇವರ ಬಗ್ಗೆ ಮಾತನಾಡಲು ತೀರಾ ಚಿಕ್ಕವಳು) ಒಂದೊಂದು ಪಾತ್ರವೂ ತನ್ನ ಅಸ್ತಿತ್ವ, ತನ್ನ ಅನಿಸಿಕೆ, ಅಭಿಪ್ರಾಯ, ತನ್ನ ಚಿಂತನೆಗಳನ್ನು ಹೇಳಿದಾಗ ಮನಸ್ಸನ್ನುಬಹು ಗಾಢವಾಗಿ ತಟ್ಟಿ ಮನ ಚಿಂತಿಸಲು ಶುರುಮಾಡತೊಡಗಿತು. 
ಮೊದಲ ೩೦ ಪುಟಗಳನ್ನು ಬಹು ಬೇಸರದಲ್ಲಿಯೇ ತಿರುವಿ ಹಾಕಿದ ನಾನು, ಪರ್ವ ಚೆನ್ನಾಗಿಲ್ಲ ಎಂದು ನಿಶ್ಚಯಿಸಿ ನಿಲ್ಲಿಸಿಬಿಡಲೇ ಎಂದೆಣಿಸಿದ್ದೆ.  ಕುಂತಿಯ ಪಾತ್ರದ ಚಿತ್ರಣ ಶುರುವಾದಾಗ ಸ್ವಲ್ಪ ಸ್ವಲ್ಪ ಇಷ್ಟವಾಗತೊಡಗಿದ್ದು, ಆಕೆಯ ಭಾವನೆಗಳು, ಪಾಂಡುರಾಜನ ನಿರ್ವೀಯತೆ, ನಿಯೋಗದಂತಹದಕ್ಕೆ ತನ್ನನ್ನು ತಾನು ಒಪ್ಪಿಕೊಂಡಿದ್ದು, ಮರುತ್ತನಲ್ಲಿ ಅನುರಾಗ, ಇಂದ್ರನಲ್ಲಿ ಸುಖ, ಮಾದ್ರಿಗೆ ಅವಳಿ ಮಕ್ಕಳಾದಾಗ ಅಸೂಯೆ…. ಓಹ್! ನಾನೇ ಕುಂತಿಯಾಗಿಬಿಟ್ಟಿದ್ದೆ.  ಈಗ ಓದಿಗೊಂದು ಗತಿ ಸಿಕ್ಕಿತು.  ಒಂದೇ ಉಸಿರಿನಲ್ಲಿ ಓದತೊಡಗಿದ ನಾನು ಪೂರ್ತಿ ಓದಿಯೇ ನಿಲ್ಲಿಸಿದ್ದು.  ಪೂರ್ತಿ ಓದಿದ ಮೇಲೆ ಬಹುಶಃ ಒಂದು ದಿನ ಪೂರ್ತಿ ಏನು ಮಾಡಲು ತೋಚಲಿಲ್ಲ. ದೇಹಕ್ಕೋ, ಮನಸ್ಸಿಗೋ ಸುಸ್ತಾಗಿದ್ದು ಏನೊಂದು ತಿಳಿಯದ ಹಿಂದೆಂದೂ ಆಗಿರದಂತಹ ವಿಚಿತ್ರ ಅನುಭವ!    ಹಸಿವು, ನೀರಡಿಕೆಗಳೊಂದು ತಿಳಿಯದಂತಹ ವಿಚಿತ್ರ ಸ್ಥಿತಿ!  ನಾನ್ಯಾರು ಎಂಬುದನ್ನೇ ಮರೆತುಬಿಟ್ಟಿದ್ದೆ.  ಈ ಮಹಾಭಾರತದ ಯುದ್ಧದಿಂದ ಆದ ಪ್ರಯೋಜನವೇನು? ಯಾರಿಗೆ ಏನು ದೊರಕಿತು? ಯಾರ ಗೆಲುವು,  ಯಾರ ಸೋಲು? ಪಾಂಡವರು ಗೆದ್ದರೇ? ಯಾರೂ ಗೆಲ್ಲಲಿಲ್ಲ.  ಬರೀ ಸಾವು, ನೋವು, ನಷ್ಟ.  ಇಷ್ಟೆಯೇ ಜೀವನ? 
ಇಡೀ ಪರ್ವದುದ್ಧಕ್ಕೂ ಕಂಡು ಬಂದಿದ್ದು, ಜೂಜು, ಮದ್ಯ, ತೀರದ ಲೈಂಗಿಕ ತೃಷೆ!  ಸಾಮ್ರಾಜ್ಯ ವಿಸ್ತರಣೆ, ಯುದ್ಧ, ಸಾವು, ನೋವು, ನಷ್ಟ, ಋತುಸ್ರಾವ ನಷ್ಟವಾದರೆ ನರಕಕ್ಕೆ ಹೋಗುವ ಭಯ! ಹೆಂಗಸರೆಂದರೆ ಮಕ್ಕಳನ್ನು ಹುಟ್ಟಿಸುವ ಯಂತ್ರಗಳೇನೋ ಎಂಬಂತೆ ಭಾಸವಾಗುತ್ತದೆ. ಹೆಣ್ಣು ಬರೀ ಸಂತಾನ  ಬೆಳೆಸುವ ಸಾಧನವಾದರೆ ಮದುವೆಯಾಗುವ ಜಂಜಾಟ ಏಕೆ ಬೇಕು ಎಂಬುದು ಮನಸ್ಸಿಗೆ ಒಂದು ಕ್ಷಣ ಅನ್ನಿಸದೆ ಇರುವುದಿಲ್ಲ. 

ತೀರ ಕಾಡಿದ ಪಾತ್ರಗಳು - ಕುಂತಿ, ಗಾಂಧಾರಿ, ದ್ರೌಪದಿ, ಕೃಷ್ಣ, ಕರ್ಣ, ಮರುತ್ತ, ಭೀಮ, ಅರ್ಜುನ, ಭೀಷ್ಮ, ದ್ರೋಣ.
ಅವಿವಾಹಿತ ತಾಯಿಯಾದವಳನ್ನು ಒಪ್ಪುತ್ತಿದ್ದ ಸಮಾಜಕ್ಕೆ ಕುಂತಿಯ ಕಾಲದಲ್ಲಿ ಸ್ವಲ್ಪ ಸ್ವಲ್ಪ ಬದಲಾವಣೆಯಾಗುತ್ತದೆ.  ಹಾಗಾಗಿಯೇ ಕರ್ಣನ ಜನನವನ್ನು ಕುಂತಿಯ ತಂದೆ ತಾಯಿ ಮುಚ್ಚಿಡುತ್ತಾರೆ. ಪಾಂಡುರಾಜನ ಲೈಂಗಿಕ ಅಶಕ್ತತೆ ಮೊದಲ ದಿನವೇ ಗೊತ್ತಾದರೂ ಮುಚ್ಚಿಡುವ ಕುಂತಿ, ಮಾದ್ರಿಯನ್ನು ವಧು ದಕ್ಷಿಣೆ ಕೊಟ್ಟು, ಆಕೆಯನ್ನು ಒಂದು ವಸ್ತುವಿನಂತೆ ಕೊಂಡುಕೊಂಡು ಬರುವ ಪದ್ಧತಿ,  ಚಿಕಿತ್ಸೆಗಾಗಿ ಹಿಮಾಲಯಕ್ಕೆ ಹೊರಡುವ ಪಾಂಡು ಮಹಾರಾಜ, ಅವರನ್ನು ಹಿಂಬಾಲಿಸುವ ಪತ್ನಿಯರು, ಇತ್ತ ದೃತರಾಷ್ಟ್ರ ನಿಗೆ ಪಟ್ಟ ಕಟ್ಟಿ ಅವನಿಗೆ ಗಾಂಧಾರಿಯನ್ನು ಮದುವೆ ಮಾಡಿಸುವ ಭೀಷ್ಮ!   ಅವರಿಗೆ ಮಕ್ಕಳಾದರೆ ತಾನು ದಿಗ್ವಿಜಯ ಮಾಡಿ ವಿಸ್ತರಿಸಿದ ಸಾಮ್ರಾಜ್ಯ ತನ್ನ ಕೈ ತಪ್ಪಿಹೋಗುವುದೆಂಬ ಪಾಂಡು ರಾಜನ ಭಯ.   ತನಗೊಬ್ಬ ಕಾನೀನ ಪುತ್ರ ನಿದ್ದಾನೆಂದೂ ತಿಳಿಸುವ ಕುಂತಿ, (ಮದುವೆಗೆ ಮುಂಚೆಯೇ ಹುಟ್ಟಿದ ಪುತ್ರ ಕರ್ಣ),   ಆದರೆ ಅವನ ಸ್ವೀಕಾರ ಮದುವೆಯಲ್ಲೇ ಆಗಿದ್ದರೇ ಜನ ಒಪ್ಪುತ್ತಿದ್ದರೆಂದೂ ತನ್ನ ನಿಸ್ಸಹಾಯಕತೆಯನ್ನು  ತೋಡಿಕೊಳ್ಳುವ ಪಾಂಡು, ಪತಿಯು ಅಶಕ್ತನಾದರೆ ಅಥವಾ ಮಕ್ಕಳಿಲ್ಲದೆ ಸತ್ತರೆ ಅವನ ವಂಶಾಭಿವೃದ್ಧಿಗಾಗಿ ಅವನ ಹೆಂಡತಿಗೆ ನಿಯೋಗ ಮಾಡಿಸಬಹುದೆಂದು ಕುಂತಿಯನ್ನು ಒಪ್ಪಿಸುತ್ತಾನೆ.  ಆದರೆ ಅದರ ಜೊತೆಗೊಂದು ಅಸಾಧ್ಯದ ಪ್ರಮಾಣ ‘ಈ ಪುರುಷನೊಡನೆ ನಾನು ಮೋಹಗೊಳ್ಳುವುದಿಲ್ಲ, ಅವನು ಸಮೀಪಸ್ಥನಾಗಿರುವಾಗ ನನ್ನ ಮನಸ್ಸೆಲ್ಲಾ ಪತಿಯಲ್ಲಿ ಲೀನವಾಗಿರುತ್ತದೆ, ಸಂತಾನಾಪೇಕ್ಷೆಯ ವಿನಾ ನನ್ನಲ್ಲಿ ಬೇರೆ ಬಯಕೆ ಇರುವುದಿಲ್ಲ, ಗರ್ಭ ಕಟ್ಟಿದುದು ಖಚಿತವಾದ ತಕ್ಷಣ ನಾನು ಈತನನ್ನು ಪಿತೃಸಮಾನವೆಂದು ಭಾವಿಸಿ ದೂರವಾಗುತ್ತೇನೆ!’  ದೇವ ಲೋಕದ ಧರ್ಮಾಧಿಕಾರಿಯಾದ ಯಮನೊಂದಿಗೆ ನಿಯೋಗ, ಧರ್ಮನ ಜನನ, ಆದರೆ ಮಗು ತೀರ ಗಂಭೀರ, ಹಾಗೂ ಮೈಕಟ್ಟು ಸಣ್ಣದಾಗಿರುವುದರಿಂದ ಪಾಂಡುರಾಜನಿಗೆ ತನಗೆ ಕೀರ್ತಿ ದೊರಕಿಸಿಕೊಡುವಂತಹ ಕ್ಷತ್ರಿಯ  ವೀರಪುತ್ರನ ಬಯಕೆ.  ಮತ್ತೆ ದೇವಲೋಕದ ಸೈನ್ಯಾಧಿಕಾರಿಯಾದ ಮರುತ್ತನೊಂದಿಗೆ ಕುಂತಿಯ ನಿಯೋಗ, ಮತ್ತೆ ಪ್ರಮಾಣ.  ಬಲಿಷ್ಟನಾದ , ಎತ್ತರದ, ದೊಡ್ಡ ದೇಹದವನಾದರೂ ಮರುತ್ತ ಮಗುವಿನಂತೆ ಕುಂತಿಯ ತೋಳಿನಲ್ಲಿ ಕ್ಷೇಮ ಭಾವ ದೊರಕಿತೆಂದು ಹೇಳುವಾಗ ಕುಂತಿಗೆ ಅವನಲ್ಲಿ ಉಂಟಾಗುವ ಅನುರಾಗ.  ಆಕೆ ತನ್ನೊಂದಿಗೆ ಬರುವುದಾದರೆ ಇನ್ನಾವ ಹೆಂಗಸರ ಸಂಗವನ್ನೂ ಮಾಡುವುದಿಲ್ಲವೆಂಬ ಭಾಷೆ ನೀಡುವ ಮರುತ್ತ. ‘ಸ್ವಯಂವರಕ್ಕೆ ಬೇಕಾದವರು, ಬೇಡವಾದವರು ಎಲ್ಲರೂ ಬಂದಿರುತ್ತಾರೆ.  ಎಲ್ಲ ರಾಜರೂ ಒಟ್ಟು ಸೇರುವ ಸಮಾರಂಭವಾದುದರಿಂದ ಜೂಜಾಡುವವರು, ಮದ್ಯಪಾನಕ್ಕೆ ಜೊತೆ ಬಯಸುವವರೆಲ್ಲರೂ ತುಂಬುತ್ತಾರೆ.  ಇವಳ ಕೈ ಹಿಡಿದರೆ ತಾನು ಸಾರ್ಥಕನೆಂಬ ಅನನ್ಯ ಉತ್ಕಟತೆಯಿಂದ ಯಾರೂ ಬಂದಿರುವುದಿಲ್ಲ.  ಈಗ ಅವರನ್ನೆಲ್ಲಾ ಮೀರಿಸಿರುವ ಈ ವೀರ್ಯವಂತನು ತನಗಾಗಿ ಸ್ತ್ರೀಸಂಗ ವ್ಯಸನವನ್ನು ತ್ಯಜಿಸಿ ನನ್ನ ಹಸ್ತವನ್ನು ಯಾಚಿಸುತ್ತಿದ್ದಾನೆ. ಹೆಣ್ತನದ ಸಾರ್ಥಕತೆಯ ಅನುಭವ.     
ಆತನೊಂದಿಗೆ ಹೊರಟುಬಿಟ್ಟರೇ ಎಂಬ ಭಯದಿಂದ ಇತ್ತ ವಚನವನ್ನು ನೆನಪಿಸಿ ತನ್ನ ಇಡೀ ಸುಖದ ಬಲಿಯನ್ನು ಬೇಡಿದ ಸ್ವಾರ್ಥಿ ಗಂಡ.  ಇಂದ್ರನ ಮಾತುಗಳಿಗೆ ಬಲಿಯಾದ ಪಾಂಡು, ಮತ್ತೆ ಇಂದ್ರನೊಂದಿಗೆ ನಿಯೋಗಕ್ಕೆ ಸಿದ್ಧಳಾದ ಕುಂತಿ.  ಆದರೆ ಈತ ಹಿಂದಿನವರಂತೆ ಹೆಂಡತಿಯಾಗೆಂದು ಕೇಳಲಿಲ್ಲ, ಭಾವನೆಗಳಲ್ಲಿ ಕಟ್ಟಿ ಹಾಕಲಿಲ್ಲ, ಸಂಗಡ ಬಾ ಎಂಬ ಧರ್ಮಸಂಕಟವನ್ನುಂಟು ಮಾಡಲಿಲ್ಲ.  ಒಂದು ರೀತಿಯ ನಿರಾಳ ಹಾಗೂ ಸಂತೃಪ್ತ ಭಾವ, ಅರ್ಜುನನ ಜನನ.  ಮಾದ್ರಿಯ ಋತುಸ್ರಾವ ನಷ್ಟವಾಗುತ್ತಿದ್ದರಿಂದ ಕುಂತಿಗೆ ಅವಳ ಮೇಲೆ ಕರುಣೆ, ಅಶ್ವಿನಿ ವೈದ್ಯರಿಂದ ನಿಯೋಗ. ಅವಳಿ ಪುತ್ರ ನಕುಲ, ಸಹದೇವ ರ ಜನನ.  ತನ್ನದಕ್ಕಿಂತ ಇವಳ ಹೊಟ್ಟೆ ಶಕ್ತಿಯುತವಾದದ್ದೆಂದು ಕುಂತಿಗೆ ಅಸೂಯೆ, ಇನ್ನೊಮ್ಮೆ ಅವಕಾಶ ಸಿಕ್ಕರೆ ಅವಳ ಸ್ಥಾನ ತನ್ನದನ್ನು ಮೀರಿಬಿಟ್ಟರೆ ಎಂಬ ಅಸೂಯೆಯಿಂದ ಧರ್ಮವು ಲಂಪಟತನವಾಗಬಾರದೆಂಬ ಕಾರಣ ಕೊಟ್ಟು ನಿಯೋಗ ಸಾಕೆಂದ ಕುಂತಿ. ಲೈಂಗಿಕ ಅತೃಪ್ತಿಯಿಂದಾಗಿ ಪಾಂಡು ರಾಜನ ಮರಣ, ತಾನೇ ಅದಕ್ಕೆ ಕಾರಣಳಾದೆನೆಂದು ಮಾದ್ರಿಯ ಸಹಗಮನ. 
ಪರ್ವ ಓದಿದ ನನ್ನ ಅನುಭವವನ್ನು ಬರೆಯತೊಡಗಿದರೆ ಮತ್ತೊಂದು ಪರ್ವವೇ ಆಗಿಬಿಡಬಹುದೆಂಬ ಸಂಶಯವೂ ಇದೆ. ಪರ್ವದ ಪ್ರತಿಯೊಂದು ವಾಕ್ಯವನ್ನೂ ಇಲ್ಲಿ ಉಲ್ಲೇಖಿಸುವ ಮನಸ್ಸಾಗುತ್ತದೆ. ಕುಂತಿಯ ಬಗ್ಗೆ ಮಾತ್ರ ಬರೆಯಲು ಸಾಧ್ಯವಾಯಿತು ನನಗೆ

ಪರ್ವದಿಂದ ಆಯ್ದ ಮಾತುಗಳು

ಯಾವುದೋ ಕಾಲದ ವ್ಯಕ್ತಿ ಸಂಗತಿಗಳು ನಮ್ಮ ಕಾಲದವಾಗಿ, ನಮಗೆ ತೀರ ಹತ್ತಿರದವಾಗಿ ಮಾರ್ಪಡುವ ಕಲಾಕೌಶಲವನ್ನು ಈ ಕಾದಂಬರಿ ತೋರಿಸುತ್ತದೆ. ನಾನು ಬರೆಯುತ್ತಿರುವುದು ಭಾರತ ಪಾತ್ರಗಳ ಕಥೆಯನ್ನಲ್ಲ. ಮಾನವ ಅನುಭವದ ವಿವಿಧ ಮುಖ, ರೂಪ, ಮಾನವಸಂಬಂಧ ಸ್ವರೂಪ, ಮತ್ತು ವಿವೇಚನೆಗಳನ್ನು ಎಂಬ ಪ್ರಜ್ಞೆ ನನಗೆ ಉದ್ದಕ್ಕೂ ಇತ್ತು. ಒಂದೊಂದು ಹೊಸ ಪಾತ್ರ ಅಥವಾ ಸನ್ನಿವೇಶವನ್ನು ಬರೆಯುವಾಗಲೂ ಇವುಗ ಹೊಸ ಹೊಸ ಆಯಾಮವನ್ನು ಗೋಚರಿಸುತ್ತಿದ್ದವು. ಸಿದ್ಧತೆಯ ಹಲವು ಮಜಲುಗಳಲ್ಲಿ ನನ್ನ ಕಲ್ಪನೆಗೆ ಗೋಚರಿಸಿದ್ದುದ್ದಕ್ಕಿಂತ ಅಭಿವ್ಯಕ್ತ ಕಾದಂಬರಿಯಾಗಿ ಇದು ತಾಳಿರುವ ಸ್ವರೂಪ ಮತ್ತು ಒಟ್ಟಂದದ ಅರ್ಥಗಳು ಸಂಪೂರ್ಣ ಬೇರೆಯಾಗಿವೆ. ಪರ್ವ ಬರೆದ ಅನುಭವವು ನನ್ನಲ್ಲಿ ಹೊಸ ಭಾವ ತಂದಿತ್ತು. ನನಗೆ ಹೊಸ ಹುಟ್ಟು ಕೊಟ್ಟಿತ್ತು. ರೂಢಿಯೇ ನಮ್ಮ ಬಹುತೇಕ ನಂಬಿಕೆಗಳ ಮೂಲ. ಇವನ್ನೆಲ್ಲ ಬಿಟ್ಟು ಜೀವನದ ಕೊನೆಯ ಸಾವಿನ ದೃಷ್ಟಿಯಿಂದ ಜೀವನವನ್ನು ನೋಡಿದರೆ ಹೊಸ ಅರಿವು ಹುಟ್ಟಬಹುದು ಎಂಬ ಭಾವ ಬೆಳೆದಿತ್ತು.

ಮದುವೆಗೆ ಮೊದಲು ಹುಡುಗಿಗೆ ಮಗುವಾಗುವುದೂ ತಪ್ಪಂತೆ, ನಿಯೋಗವೂ ಸರಿಯಲ್ಲವಂತೆ. ಹಿರಿಯ ಪದ್ದತಿಯೇ ತಪ್ಪೇ, ಹೆಂಗಸಿನ ಒಂದೊಂದು ಋತುಚಕ್ರ ಕಾಲದಲ್ಲಿಯೂ ಬೀಜ ಬಿತ್ತದೆ ಹಾಳು ಬಿಟ್ಟರೆ ಭೂಮಿಯನ್ನು ಬರಡು ಮಾಡಿದಷ್ಟು ಪಾಪ, ಗಂಡ ಊರಿನಲ್ಲಿ ಇಲ್ಲದಿದ್ದರೆ ಗುರು ಪತ್ನಿಯರು ಶಿಷ್ಯನನ್ನೇ ಕರೆದ ಗುರುಪತ್ನಿಯರ ಕಥೆಯಿದೆ! ಕಾನೀನ ಪುತ್ರ ಒಪ್ಪಿಗೆ, ಹೆಮ್ಮೆ ಕೂಡ (ಶಲ್ಯರಾಜ, ಮಾದ್ರಿಯ ಅಣ್ಣ)

ಕುರುಕುಲ ಬೆಳೆಯಬೇಡವೇ? ಈ ವಂಶಕ್ಕೆ ಸೊಸೆಯಾಗಿ ಬಂದ ನೀನು ಹೀಗನ್ನಬಹುದೇ? (ಪಾಂಡು)

ಸೊಸೆಯ ಮಕ್ಕಳು ಮಗನ ಮಕ್ಕಳೇಕೆ ಆಗುವುದಿಲ್ಲ? ಯುದ್ಧದಲ್ಲಿ ಗೆಲ್ಲಲಾರದು, ಕುಂತಿ ಸೋಲುವುದಿಲ್ಲ. ವಧುದಕ್ಷಿಣೆ ಪಡೆದು ಮದುವೆಯಾದ ಹೆಣ್ಣು ಗಾಂಧಾರಿ. ದೇವಜನರಲ್ಲಿ ಯಾವ ಹೆಂಗಸು ತನ್ನ ಗಣದ ಯಾವ ಗಂಡಸನ್ನಾದರೂ ಕೂಡಬಹುದು. ಗಂಡಸೇ ಆಗಲಿ, ಹೆಂಗಸೇ ಆಗಲಿ ಯಾರು ಯಾರನ್ನು ಕರೆದರೂ ನಿರಾಕರಿಸುವಂತಿಲ್ಲ. ಗಂಡಸು ಹೆಂಗಸು ಇಬ್ಬರಿಗೂ ಸಮಾನ ಅಧಿಕಾರ. ಹುಟ್ಟುವ ಮಕ್ಕಳು ಇಡೀ ಗಣಕ್ಕೆ ಸೇರಿದವು. ಎಲ್ಲರಿಗೆ ಎಲ್ಲರೂ ಗಂಡಂದಿರು, ಹೆಂಡತಿಯರು. ಸಂಕೋಚವಿಲ್ಲ, ನಾಚಿಕೆಯಿಲ್ಲ. ಭೇದ ಮಾಡಿದರೆ ಗಣಮುಖ್ಯನು ಶಿಕ್ಷಿಸುತ್ತಾನೆ. 

ಪತಿಯು ಅಶಕ್ತನಾದರೆ, ಅಥವಾ ಮಕ್ಕಳಿಲ್ಲದೆ ಸತ್ತರೆ ಅವನ ವಂಶಾಭಿವೃದ್ಧಿಗಾಗಿ ಅವನ ಹೆಂಡತಿಗೆ ನಿಯೋಗ ಮಾಡಿಸುವುದು. ಪಾಂಡು ರಾಜ ನನ್ನಿಂದ ಪ್ರಮಾಣ ಮಾಡಿಸಿಕೊಂಡ. ಈ ಪುರುಷನೊಡನೆ ನಾನು ಮೋಹಗೊಳ್ಳುವುದಿಲ್ಲ. ಅವನು ಸಮೀಪಸ್ಥನಾಗಿರುವಾಗ ನನ್ನ ಮನಸ್ಸೆಲ್ಲಾ ಪತಿಯಲ್ಲಿ ಲೀನವಾಗಿರುತ್ತದೆ. ಸಂತಾನಾಪೇಕ್ಷೆಯ ವಿನಾ ನನ್ನಲ್ಲಿ ಬೇರೆ ಬಯಕೆ ಇರುವುದಿಲ್ಲ. ಗರ್ಭ ಕಟ್ಟಿದುದು ಖಚಿತವಾದ ತಕ್ಷಣ ನಾನು ಈತನನ್ನು ಪಿತೃಸಮಾನನೆಂದು ಭಾವಿಸಿ ದೂರವಾಗುತ್ತೇನೆ. (ಕುಂತಿ)

ಯಮ ಹೇಳಿದ್ದು ‘ರಾತ್ರಿಗೆ ತನಗೆ ಯಾವ ಗಂಡ ಬರುತ್ತಾನೋ, ಯಾವ ಹೆಂಡತಿ ಬರುತ್ತಾಳೋ ನಮ್ಮಲ್ಲಿ ಯಾರಿಗೂ ಗೊತ್ತಿರುವುದಿಲ್ಲ. ನಮ್ಮ ಹೆಂಗಸರು ಸುಖಕ್ಕೆ ತಗಾದೆ ಮಾಡುತ್ತಾರೆ. ನಿನ್ನ ಹಾಗೆ ಸೇವೆ ಮಾಡುವಿದಿಲ್ಲ. ಪಾಂಡು ಧರ್ಮಾಧಿಕಾರಿಗೆ ಭಾರಿ ಔತಣವೇರ್ಪಡಿಸಿ ಕೃತಜ್ಞತೆ ಸಲ್ಲಿಸಿದ. 

ಊಟವಾಗುವ ವೇಳೆಗೆ ಸಂಜೆಯಾಗಿತ್ತು. ಅವನನ್ನು ಪಕ್ಕದ ಗುಡಿಸಿಲಿನಲ್ಲಿ ಮಲಗಲು ವ್ಯವಸ್ಥೆ ಮಾಡಿದ್ದ. ತಾನು ಮಾತ್ರ ತನ್ನ ವಂಶದ ಮೊಳಕೆಯ ಹೊಟ್ಟೆಯನ್ನು ತನ್ನ ಕೈಯಿಂದ ಸವರಿ ಸವರಿ ಹಿಗ್ಗುವುದಕ್ಕೆ. ನನ್ನ ದುಃಖ ದುಮ್ಮಾನ ತಿರಸ್ಕಾರಗಳನ್ನು ಯಾರು ಅರಿಯಬೇಕು? ಬೆಳಗೆದ್ದು ಅತಿಥಿ ಹೊರಡುವಾಗ ಗಟ್ಟಿಯಾಗಿ ಕಾಲು ಹಿಸುಕಿ ನಮಸ್ಕರಿಸಿದೆ. ಧರ್ಮಾಧಿಕಾರಿ, ನಿನ್ನ ಮಗಳಿಗೆ ಆಶೀರ್ವದಿಸು. (ಕುಂತಿ)

ಕ್ಷತ್ರಿಯನಿಗೆ ಕೀರ್ತಿ ಬರುವುದು ವೀರಪುತ್ರನಿಂದ. ನಿನ್ನಂತಹ ದೊಡ್ಡ ಹೆಂಗಸಿನ ಹೊಟ್ಟೆಯಲ್ಲಿ ಇಷ್ಟು ಸಾಮಾನ್ಯ ಕಟ್ಟಿನ ಮಗು ಹುಟ್ಟಿದರ ಕಾರಣ ವೀರ್ಯದ್ದೇ. ಸರಿಯಾದ ವೀರ್ಯವಂತನಿಂದ ಸ್ವೀಕರಿಸಿ ನೀನು ಒಬ್ಬ ಬಲಶಾಲಿ ಮಗನನ್ನು ಹೆತ್ತು ಕೊಟ್ಟರೆ ನನಗೆ ಸಮಾಧಾನ. ಹೆಂಗಸಿನ ತೋಳಿನಲ್ಲಿರುವಾಗ ಇಂತಹ ಕ್ಷೇಮಭಾವ ಇರುತ್ತದೆಂದು ಇವತ್ತಿನ ತನಕ ಗೊತ್ತೇ ಇರಲಿಲ್ಲ. ಮಗುವಿನಂತೆ ರಕ್ಷಣೆ ಬಯಸಿ ಗಂಡಸಿನ ತೋಳಿನಲ್ಲಿ ಹುದುಗಿಕೊಳ್ಳುವ ಹೆಂಗಸಿನಿಂದ ಏನು ಸಿಕ್ಕುತ್ತೆ ಹುಡಿಮಣ್ಣು? (ಮರುತ್ತ)

ಸ್ವಯಂವರದಲ್ಲಿ ನನ್ನ ಕೈಹಿಡಿಯಲೆಂದು ನೂರು ಜನ ರಾಜ, ರಾಜಕುಮಾರರು ಸೇರಿದ್ದರು. ಆಗಲೂ ನನ್ನಲ್ಲಿ ಪ್ರಾಮುಖ್ಯದ ಭಾವ ಹುಟ್ಟಿತ್ತು. ಆದರೆ ಈಗ ಅರ್ಥವಾಗುತ್ತಿತ್ತು. ಸ್ವಯಂವರಕ್ಕೆ ಬೇಕಾದವರು, ಬೇಡವಾದವರು ಎಲ್ಲರೂ ಬಂದಿರುತ್ತಾರೆ. ಎಲ್ಲ ರಾಜರೂ ಒಟ್ಟು ಸೇರುವ ಸಮಾರಂಭವಾದುದರಿಂದ ಜೂಜಾಡುವವರು, ಮದ್ಯಪಾನಕ್ಕೆ ಜೊತೆ ಬಯಸುವವರೆಲ್ಲರೂ ತುಂಬುತ್ತಾರೆ. ಇವಳ ಕೈಹಿಡಿದರೆ ತಾನು ಸಾರ್ಧಕನೆಂಬ ಅನನ್ಯ ಉತ್ಕಟತೆಯಿಂದ ಯಾರೂ ಬಂದಿರುವುದಿಲ್ಲ. ಈಗ ಅವರನ್ನೆಲ್ಲ ಮೀರಿಸಿರುವ ಈ ವೀರ್ಯವಂತನು ಪರಮಭಕ್ತಿಯಿಂದ ನನ್ನ ಹಸ್ರವನ್ನು ಯಾಚಿಸುತ್ತಿದ್ದಾನೆ. ತನ್ನ ಗಣದ ಇತರ ಸ್ತ್ರೀ ಸಂಗವನ್ನು ವರ್ಜಿಸುವುದಾಗಿ ಭಾಷೆ ಇಡಲು ಸಿದ್ಧನಾಗಿದ್ದನೆ. ಇತರ ಸ್ತ್ರೀಸಂಗ ವ್ಯಸನವು ನಮ್ಮ ಆರ್ಯಾವರ್ತದ ಯಾವ ಕ್ಷತ್ರಿಯನಿಗಿಲ್ಲ? ನಾನೇ ಧನ್ಯಳು. ಪ್ರಮಾಣ ಮಾಡಿದ ಪತ್ನೀಧರ್ಮವನ್ನು ಮುಂದುಮಾಡಿ ನನ್ನ ಇಡೀ ಸುಖದ ಬಲಿ ಬೇಡಿದ ಗಂಡ. (ಕುಂತಿ)

ಈ ಇಂದ್ರ ಚಲುವನಷ್ಟೇ ಅಲ್ಲ, ಚತುರ ಕೂಡ. ಬರೀ ಶರೀರಶಕ್ತಿಯಲ್ಲ, ಕಲಾಪ್ರಪೂರ್ಣ. ಆದರೆ ಗಾಢತೆಯಲ್ಲಿ ಮುಳುಗದೆಯೇ ರತಿಯ ಮಾಧುರಯವನ್ನು ಸೃಷ್ತಿಸಿ, ಪರಸ್ಪರರಿಗೆ ಉಣಿಸಬಹುದೆಂಬ ಅರಿವನ್ನು ನಲ್ಲಿ ಹುಟ್ಟಿಸಿದ. ಇವನು ಬರೀ ಲಂಪಟನೇನೋ ಎಂದು ನನಗೆ ಒಮ್ಮೊಮ್ಮೆ ಸಿಟ್ಟು ಬರುತ್ತಿತ್ತು. ನಾನಿನ್ನ ದಾಸ ಎಂದು ಮತ್ತೆ ಮತ್ತೆ ಗೆಲ್ಲುತ್ತಿದ್ದ. ಪರ್ವತದ ನೀರಸ ವರ್ಷಗಳಲ್ಲಿ ರಸ ತುಂಬಿದ, ನನ್ನ ಮೈ ನನಗೇ ಹೂವಿನಂತೆ ಹಗುರವೆನೆಸಿದ ದಿನಗಳು ಅವು. ತನ್ನ ಹೆಂಡತಿಯಾಗೆಂದು ಕೇಳಲಿಲ್ಲ. ಭಾವನೆಯ ಭಾರದಲ್ಲಿ ಕಟ್ಟಿ ಹಾಕಲಿಲ್ಲ. ಸಂಗಡ ಬಾ ಎಂಬ ಧರ್ಮಸಂಕಟಕ್ಕೆ ಎಳೆಯಲಿಲ್ಲ. 

ಇವಳ ಹೊಟ್ಟೆ ನನ್ನದಕ್ಕಿಂತ ಹೆಚ್ಚು ಶಕ್ತಿಯುತವಾದುದೆ? ಇನ್ನೊಮ್ಮೆ ಅವಕಾಶ ಕೊಟ್ಟು ಆಗಲೂ ಅವಳು ಅವಳಿ ಬೆಳೆಸಿಕೊಂಡರೆ ಅವಳ ಸ್ಥಾನ ನನ್ನದನ್ನು ಮೀರುತ್ತದೆ. ಇನ್ನು ಅವಳು ಕೇಳಿದರೂ ಸಮ್ಮತಿಸಕೂಡದು. ಧರ್ಮವು ಲಂಪಟತನವಗಬಾರದು. (ಕುಂತಿಯ ಮತ್ಸರ)

(ಪರ್ವದಿಂದ ಆಯ್ದ ಮಾತುಗಳು)

ಅಮು ಮತ್ತು ಪರ್ಜಾನಿಯಾ ಚಿತ್ರಗಳು



ಪುಸ್ತಕಗಳಂತೆಯೇ ನಾನು ನೋಡಬೇಕಾಗಿರುವ ಸಿನೆಮಾಗಳ ಪಟ್ಟಿಯೂ ಬಹಳ ದೊಡ್ಡದೇ ಇದೆ. ಅದರಲ್ಲೂ ವಿವಾದಗಳ ಸುತ್ತ ಚಿತ್ರಣಗೊಂಡಿರುವ ಸಿನೆಮಾಗಳೆಂದರೆ ನನಗೆ ಸ್ವಲ್ಪ ಆಸಕ್ತಿ ಹೆಚ್ಚು. ಭಾರತದಲ್ಲಿ ಕೋಮುಗಲಭೆಯೋ ಅಥವಾ ಜನರಲ್ಲಿ ಆತಂಕ ಹುಟ್ಟಿಸಬಹುದೆಂದೂ ಸರಕಾರ ಬಹಿಷ್ಕರಿಸಿರುವ ಸಿನೆಮಾಗಳು, ಇನ್ನೂ ಕೆಲವು ಸಿನೆಮಾಗಳು ಡಿವಿಡಿಗಾಗಿಯೇ ತಯಾರಾಗಿರುವುದು (ಅಂದರೆ ಮನೆಯಲ್ಲಿ ಕುಳಿತು ಡಿವಿಡಿ ನೋಡುವ ಪ್ರೇಕ್ಷಕ ವರ್ಗಕ್ಕಾಗಿ), ಮತ್ತೆ ಕೆಲವು ಸಿನೆಮಾಗಳು ವಿದೇಶದಲ್ಲಿ ತಯಾರಾಗಿ ಅಲ್ಲಿಯೇ ಪ್ರದರ್ಶಿತಗೊಂಡಿರುವಂತಹದ್ದು (ಮುಖ್ಯವಾಗಿ ಕೊರಿಯಾದ ಸಿನೆಮಾಗಳು). ಇಂತಹ ಸಿನೆಮಾಗಳೆಂದರೆ ನನಗೇನೋ ಆಕರ್ಷಣೆ, ನನ್ನನ್ನು ಬಹುವಾಗಿ ಸೆಳೆಯುತ್ತವೆ. ಅದೇನೂ ಕಾಕತಾಳೀಯವೋ ಗೊತ್ತಿಲ್ಲ, ಈ ವಾರ ನೋಡಿದ ೨ ಸಿನೆಮಾಗಳಲ್ಲಿಯೂ ಸಾಮ್ಯತೆ ಬಹಳವಿತ್ತು. . 

ಒಂದು ಸಿನೆಮಾದಲ್ಲಿ ಇಂದಿರಾಗಾಂಧಿ ಹತ್ಯೆಯಾದಾಗ ನಡೆದ ಕೋಮು ಘರ್ಷಣೆಯ ಸಂದರ್ಭದ ತುಮುಲಗಳನ್ನೂ ಚಿತ್ರಿಸಿದ್ದರೆ, ಇನ್ನೊಂದರಲ್ಲಿ ಗೋಧ್ರಾ ಘಟನೆಯಾದ ಮೇಲೆ ಗುಜರಾತಿನಲ್ಲಿ ನಡೆದ ಕೋಮು ಗಲಭೆಯ ಚಿತ್ರಣ!. ಒಂದರಲ್ಲಿ ತಾಯಿ, ತಮ್ಮ, ತಂದೆಯನ್ನು ಕಳೆದುಕೊಂಡ ಮುಗ್ಧ ಹುಡುಗಿಯ ಮಾನಸಿಕ ಸಂಘರ್ಷ, ಮತ್ತೊಂದರಲ್ಲಿ ಮಗನನ್ನು ಕಳೆದುಕೊಂಡ ತಂದೆ, ತಾಯಿಯ ಸಂಕಟ! ಎರಡು ಸಿನೆಮಾಗಳಲ್ಲೂ ನಮ್ಮ ರಾಜಕಾರಣಿಗಳ ಭ್ರಷ್ಠತೆ, ಪೋಲಿಸ್ ಅಧಿಕಾರಿಗಳ ಅದಕ್ಷತೆ, ಸಾಮಾನ್ಯ ಜನರ ಅಸಹಾಯಕತೆ ಬಹಳ ಮನೋಜ್ನವಾಗಿ ಮೂಡಿಬಂದಿದೆ. ೧೯೮೪ರಲ್ಲಿ ಇಂದಿರಾಗಾಂಧಿಯವರನ್ನು ಅವರ ಸಿಖ್ ಅಂಗರಕ್ಷಕರು ಹತ್ಯೆ ಮಾಡಿದ ಮೇಲೆ ನಡೆದ ಕೋಮುಗಲಭೆ, ಸಾವಿರಾರು ಮುಗ್ಧ ಸಿಖ್ ರನ್ನು ಕೊಂದ ಘಟನೆಯ ಸುತ್ತ ನಡೆಯುವ ಚಿತ್ರಣದ ಸಿನೆಮಾದ ಈ ಹೆಸರು ‘ಅಮು’. ಮುಖ್ಯ ಪಾತ್ರದಲ್ಲಿ ನಟಿಸಿರುವ ಕೊಂಕಣ ಸೇನ್ ಈ ಸಿನೆಮಾದಲ್ಲಿ ೨೦ ವರ್ಷ ವಯಸ್ಸಿನ ಯುವತಿ ಪಾತ್ರಕ್ಕೆ ಜೀವ ತುಂಬಿದ್ದಾರೆ. ವಿದೇಶದಲ್ಲಿ ತಾಯಿಯೊಂದಿಗೆ ಬೆಳೆಯುವ ಆಕೆ, ತಾನೊಬ್ಬ ದತ್ತು ಮಗಳೆಂದು ತಿಳಿದಾಗ ತನ್ನ ಬೇರುಗಳನ್ನು ತಿಳಿಯಲು ಭಾರತಕ್ಕೆ ಬರುತ್ತಾಳೆ. ಅಲ್ಲಿನ ಸ್ಲಮ್ ವೊಂದಕ್ಕೆ ಭೇಟಿ ನೀಡಿದಾಗ, ಅದೇನೋ ಅಲ್ಲಿನ ಜನರೊಟ್ಟಿಗೆ ಅವಳಿಗೆ ಬಾಂಧವ್ಯ ಬೆಳೆಯುತ್ತದೆ. ಅವಳಿಗೆ ಆ ಸ್ಲಮ್ ನ ಪ್ರತಿಯೊಂದು ಭಾಗವೂ ಚಿರಪರಿಚಿತದಂತೆ ಭಾಸವಾಗುತ್ತದೆ. ಮಗಳನ್ನು ಬಿಟ್ಟಿರಲಾಗದೆ ತಾಯಿ ಕೂಡ ಭಾರತಕ್ಕೆ ಬಂದುಬಿಟ್ಟಾಗ, ಬಾರಿಬಾರಿಗೂ ಅಮ್ಮನನ್ನು ತನ್ನ ಮೂಲದ ಬಗ್ಗೆ ಕೇಳುತ್ತಾಳೆ. ಆದರೆ ಅಮ್ಮನ ನಿರಾಕರಣೆಯಿಂದ ಬೇಸತ್ತ ಅವಳಿಗೆ ಸಹಕಾರ ನೀಡಲು ಗೆಳೆಯನೊಬ್ಬ ದೊರಕುತ್ತಾನೆ. ಆತನ ತಂದೆಯೊಬ್ಬ ಪ್ರತಿಷ್ಠಿತ ಅಧಿಕಾರಿ. ತಾಯಿ ಈಕೆಗೆ ೧೯೮೧ ರಲ್ಲಿ ಸಾಂಕ್ರಮಿಕ ರೋಗದಿಂದಾಗಿ ಹೆತ್ತ ತಂದೆ, ತಾಯಿ ಸತ್ತಿದ್ದರೆಂದು ಹೇಳಿರುತ್ತಾಳೆ. ಆದರೆ ಅದು ಸುಳ್ಳೆಂದು, ಆಗ ಯಾವುದೇ ಸಾಂಕ್ರಮಿಕ ರೋಗವು ಹರಡಿರಲಿಲ್ಲವೆಂದು ಗೆಳೆಯನ ತಂದೆಯಿಂದಾಗಿ ಅಮು ವಿಗೆ ಗೊತ್ತಾಗುತ್ತದೆ. ದತ್ತು ತಾಯಿ ತನಗೇಕೆ ಸುಳ್ಳು ಹೇಳಿದಳೆಂದು ಮಾನಸಿಕ ತುಮುಲಕ್ಕೆ ಒಳಗಾಗುವ ಅಮು, ಸತ್ಯ ಕಂಡು ಹಿಡಿಯಲು ಮುಂದಾಗುತ್ತಾಳೆ. ಹುಡುಕುತ್ತಾ ಹೋದಂತೆ ಸತ್ಯ ತೆರೆಯುತ್ತಾ ಹೋಗುತ್ತದೆ. ಸುಖೀ ಸಿಖ್ ಕುಟುಂಬದಲ್ಲಿ ಹುಟ್ಟಿದ್ದ ಅಮುವಿಗೆ ಕೋಮು ಗಲಭೆಯಾದಾಗ ಸುಮಾರು ೪-೫ ವರ್ಷ, ಆಕೆಗೊಬ್ಬ ೨ ವರ್ಷದ ತಮ್ಮ! ತಮ್ಮ ಪಾಡಿಗೆ ಮನೆಯಲ್ಲಿದ್ದ ಸಿಖ್ ರನ್ನು, ಟ್ರೈನ್ ನಲ್ಲಿದ್ದವರನ್ನೂ, ಗಲಭೆಗೆ ಬೆದರಿ ಅಡಗಿಕೊಂಡಿದ್ದವರನ್ನೂ ದುಷ್ಕರ್ಮಿಗಳು ಹುಡುಕಿ ಹುಡುಕಿ ಸಾಯಿಸುವ ದೃಶ್ಯಗಳು ನೋಡುಗರ ಕಣ್ಣಲ್ಲಿ ನೀರು ತರಿಸುತ್ತದೆ. ಇವರಿಗೆ ಪೋಲಿಸ್ ಹಾಗೂ ಸರ್ಕಾರದ ಸಹಕಾರ! ಗಂಡ ಮತ್ತು ಚಿಕ್ಕ ಮಗನನ್ನು ಕಳೆದುಕೊಂಡ ಅಮು ಳ ತಾಯಿ ಹಾಗೂ ಅಮು ಇಬ್ಬರೂ ಪರಿಶ್ರಿತ ತಾಣದಲ್ಲಿ ಸಮಾಜ ಸೇವಕಿಯೊಬ್ಬಳನ್ನು ಭೇಟಿಯಾಗುತ್ತಾರೆ. ಇವರ ನಡುವೆ ಬಾಂಧವ್ಯವೊಂದು ಬೆಳೆಯುತ್ತದೆ. ಗಂಡ, ಮಗನನ್ನು ಬಚಾವ್ ಮಾಡಲು ಸಾಧ್ಯವಾಗಲಿಲ್ಲ ಎನ್ನುವ ಖಿನ್ನತೆಯಲ್ಲಿ ಬಳಲುವ ಅಮು ಳ ತಾಯಿ ‘ಅಮು’ ಳನ್ನು ಈ ಸಮಾಜ ಸೇವಕಿಗೆ ಒಪ್ಪಿಸಿ, ತಾನು ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ. ಅಮು ಎಲ್ಲವನ್ನೂ ಮರೆಯಬೇಕೆಂದು ಆಕೆಯ ದತ್ತು ತಾಯಿ ವಿದೇಶಕ್ಕೆ ಹೋಗಿ ನೆಲೆಸುತ್ತಾಳೆ. ಪೂರ್ತಿ ಚಿತ್ರ ನೋಡಿದ ಮೇಲೆ ನನಗೇಕೋ ಈ ಸಿನೆಮಾ ಸ್ವಲ್ಪ ಅಪೂರ್ಣವಾಗಿದೆಯೆಂದೆನಿಸಿತು. ಕಾರಣ ಮಾತ್ರ ಗೊತ್ತಾಗಲಿಲ್ಲ.

ಸುಮಾರು ೨೦೦೦ ಸಿಖ್ ಕುಟುಂಬಗಳು ಅಂದಿನ ಗಲಭೆಯಲ್ಲಿ ನೋವನ್ನನುಭವಿಸಿದ್ದಾರೆಂದು ಈ ಚಲನಚಿತ್ರದಲ್ಲಿ ಹೇಳುತ್ತಾರೆ. ಸರ್ಕಾರದ ಸಹಕಾರ ಈ ದುಷ್ಕರ್ಮಿಗಳಿಗೆ ಇತ್ತೆನ್ನುವ ಕಾರಣಕ್ಕಾಗಿಯೋ ಏನೋ ಗೊತ್ತಿಲ್ಲ, ಭಾರತದಲ್ಲಿ ಈ ಚಿತ್ರವನ್ನು ಥಿಯೇಟರ್ ಗಳಲ್ಲಿ ಬಿಡುಗಡೆ ಮಾಡಲು ಸರ್ಕಾರ ನಿಷೇಧಿಸಿತ್ತು!

ಇನ್ನೊಂದು ಚಿತ್ರ ‘ಪರ್ಝಾನಿಯ’. ಇದು ಗೋಧ್ರಾ ಘಟನೆಯ ನಂತರ ಗುಜರಾತಿನಲ್ಲಾದ ಗಲಭೆಯಲ್ಲಿ ನಡೆದ ಸತ್ಯ ಘಟನೆಯಾಧಾರಿತ ನಿರ್ಮಿತವಾದ ಸಿನೆಮಾವಂತೆ. ಈ ಚಿತ್ರದಲ್ಲೂ ಗಲಭೆಗೆ ಪೋಲಿಸ್ ಹಾಗು ಸರ್ಕಾರದ ಸಹಾಯವಿತ್ತು ಎಂದು ತೋರಿಸಿದ್ದಾರೆ. ಬಹುಶಃ ಇದಕ್ಕಾಗಿಯೇ ಏನೋ ಇದನ್ನು ಗುಜರಾತಿನಲ್ಲಿ ನಿಷೇಧಿಸಿದ್ದರಂತೆ. ಬಹುತೇಕ ಮುಸ್ಲಿಮ್ ಜನರೇ ಇರುವ ಕಾಲೋನಿಯಲ್ಲಿ ನೆಲೆಸಿರುವ ಒಂದು ಪಾರ್ಸಿ ಕುಟುಂಬ. ನಸಿರುದ್ದೀನ್ ಷಾ, ಸಾರಿಕಾ ಹಾಗೂ ಇಬ್ಬರು ಪುಟ್ಟ ಮಕ್ಕಳು ಪಾತ್ರಕ್ಕೆ ಜೀವ ತುಂಬಿದ್ದಾರೆ. ಮತ್ತೊಂದು ಪಾತ್ರ ವಿದೇಶಿಯನದು. ಆತ ತನ್ನ ಮನಶ್ಯಾಂತಿಗಾಗಿ ಭಾರತವನ್ನು, ಗಾಂಧೀಜಿಯವರ ಆದರ್ಶಗಳಿಗೆ ಮಾರು ಹೋಗಿ ಗುಜರಾತಿನಲ್ಲಿ ಬಂದು ಬಂದು ನೆಲೆಸಿರುತ್ತಾನೆ. ಈತ ಷಾ ನ ಗೆಳೆಯನಾಗುತ್ತಾನೆ. ಗೋಧ್ರಾ ಘಟನೆಯ ನಂತರ ಉದ್ರೇಕಿತ ಹಿಂದೂ ಜನರು ಮುಸ್ಲಿಮ್ ರನ್ನು ಹುಡುಕಿ ಕೊಲ್ಲುವ ಅನಾಗರೀಕ ವರ್ತನೆ! ಪೋಲಿಸರು ಈ ಕಾಲೋನಿಗೆ ಬಂದು ನಿಮಗೆಲ್ಲರಿಗೂ ರಕ್ಷಣೆ ಕೊಡುತ್ತಿದ್ದೇವೆ, ಯಾರೂ ಕೂಡ ಹೊರಗೆ ಬರಬೇಡಿ ಎಂದು ಹೇಳಿ ಹೋಗಿ, ದುಷ್ಕರ್ಮಿಗಳಿಗೆ ಈ ಕಾಲೋನಿಯನ್ನು ತೋರಿಸುತ್ತಾರೆ!. ಉದ್ರೇಕಿತರ ಅಮಾನವೀಯ ವರ್ತನೆ ನಿಜವಾಗಲೂ ಅಸಹ್ಯ ಬರಿಸುತ್ತದೆ. ಇಡೀ ಕಾಲೋನಿಗೆ ಬೆಂಕಿ ಹಚ್ಚುತ್ತಾರೆ ಹಾಗೂ ಸಾರಿಕಾ ತಾನು ಪಾರ್ಸಿಯೆಂದರೂ ಬಿಡದೆ ಬೆಂಬತ್ತುವವರನ್ನು ನೋಡಿ ಬೆದರಿದ ಆಕೆ ಅಲ್ಲಿಂದ ಓಡಿಹೋಗುವಾಗ ತನ್ನ ಮಗನನ್ನು ಕಳೆದುಕೊಳ್ಳುತ್ತಾಳೆ. ಗಂಡನ ಗೆಳೆಯನೇ ಪೋಲೀಸ್ ಅಧಿಕಾರಿಯಾಗಿದ್ದರೂ, ಆತ ಸರ್ಕಾರದ ಆದೇಶವಿದ್ದ ಕಾರಣ ಇವರಿಗೆ ಸಹಾಯ ಮಾಡುವುದಿಲ್ಲ. ಮನೆ, ಮಗನನ್ನು ಕಳೆದುಕೊಂಡ ದಂಪತಿಗಳು, ತಮ್ಮ ಪುತ್ರಿಯೊಂದಿಗೆ ಸಂತ್ರಸ್ತ್ರರ ತಾಣದಲ್ಲಿ ಬಂದು ನೆಲೆಸುತ್ತಾರೆ. ಈ ಗಲಭೆಗಳನ್ನೆಲ್ಲಾ ನೋಡಿ ಹತಾಷಗೊಂಡ ವಿದೇಶಿಯನಿಗೆ, ಆತನ ಮಾರ್ಗದರ್ಶಿ ಸಂತ್ರಸ್ತ್ರರನ್ನು ಸಂತ್ಯೈಸುವಂತೆ ಹಾಗೂ ಹೇಳಿಕೊಡುತ್ತಾನೆ. ನಿರಾಶ್ರಿತರ ತಾಣದಲ್ಲಿ ತನ್ನ ಗೆಳೆಯನನ್ನು ಕಂಡ ಆತ ಅವರನ್ನು ತನ್ನ ಮನೆಗೆ ಕರೆದು ತರುತ್ತಾನೆ. ಪ್ರತಿ ಬಾರಿಯೂ ಪೋಲೀಸ್ ರಿಂದ ತಮ್ಮ ಮಗನ ದೇಹ ಸಿಕ್ಕಿದೆ ಎಂಬ ಕರೆ ಬಂದಾಗ ಆತಂಕದಲ್ಲಿ ಹೋಗುವ ದಂಪತಿಯೂ, ಮೃತದೇಹ ಮಗನದ್ದಲ್ಲ ಅಂದಾಗ ನಿಟ್ಟುಸಿರುಬಿಡುತ್ತಾ, ಮಗದೊಮ್ಮೆ ತಮ್ಮ ಮಗನೆಲ್ಲಿರಬಹುದೆಂದು ಚಿಂತಿಸುವ ಪರಿ ನಮ್ಮಲ್ಲೂ ಪರ್ಝಾನ್ ಬದುಕಿರಲಿ ಎಂದು ಆಶಿಸುತ್ತದೆ. ಈ ದಂಪತಿಗಳ ಹಾಗೂ ವಿದೇಶಿಯ, ಜೊತೆಗೆ ಸಂತ್ರಸ್ತರ ಇದೆಲ್ಲದರ ನಡುವೆ ಇನ್ನೊಂದು ಕಡೆ ನೊಂದ ಮುಸ್ಲಿಮ್ ಜನರು ಪ್ರತೀಕಾರಕ್ಕಾಗಿ ಹಿಂದೂ ಜನರನ್ನು ಕೊಲ್ಲಲು ಯೋಜಿಸುತ್ತಿದ್ದಾಗ ಆ ಗುಂಪಿನ ನಾಯಕನ ಹೆಂಡತಿ ಹೇಳುವ ಮಾತು, ಹಗೆ ಸಾಧಿಸುವ ಪ್ರತಿಯೊಬ್ಬರಿಗೂ ಪಾಠದಂತಿದೆ! ಆಕೆಯನ್ನು ಹಿಂದೂವೊಬ್ಬ ಕಾಪಾಡಿರುತ್ತಾನೆ. ಅವಳು ತನ್ನ ಗಂಡನಿಗೆ ಮುಗ್ಧರ ವಿರುದ್ಧ ಹಗೆ ತೀರಿಸಿಕೊಳ್ಳುವುದಕ್ಕಿಂತ, ತಮ್ಮನ್ನು ಈ ಸ್ಥಿತಿಗೆ ತಂದವರ ವಿರುದ್ಧ ಸಾಕ್ಷಿ ಹೇಳಲು ಪ್ರೇರೆಪಿಸುತ್ತಾಳೆ. ಅವಳಿಂದಾಗಿ ಎಲ್ಲರೂ ದುಷ್ಕರ್ಮಿಗಳ ವಿರುದ್ಧ ಸಾಕ್ಷಿ ಹೇಳುವಂತಾಗಿ ಅವರು ಶಿಕ್ಷೆ ಅನುಭವಿಸುತ್ತಾರೆ. ಆದರೆ ಈ ದಂಪತಿಗಳಿಗೆ ಮಾತ್ರ ಮಗ ಸಿಗುವುದೇ ಇಲ್ಲ!. 

ಎರಡು ಚಿತ್ರಗಳನ್ನೂ ನೋಡಿದಾಗ ಮನಸ್ಸಿಗೆ ಹಿಂಸೆಯಾದರೂ, ಅದಕ್ಕಿಂತಲೂ ನನಗೆ ಬೇಸರವಾಗಿದ್ದೇನೆಂದರೆ ಎರಡು ಸಿನೆಮಾಗಳಲ್ಲೂ ತಮಗಾಗಿ ಬದುಕುಳಿದಿದ್ದ ಪುತ್ರಿಯ ಬಗ್ಗೆ ಯಾರೂ ಯೋಚಿಸುವುದೇ ಇಲ್ಲ. ಕಳೆದುಕೊಂಡ ಜೀವ, ಜೀವನದ ಚಿಂತೆಯಲ್ಲಿ, ನಮಗಾಗಿ ಬದುಕುಳಿದ ಜೀವದ ಬಗ್ಗೆ ನಾವ್ಯಾಕೆ ಕಾಳಜಿ ವಹಿಸುವುದಿಲ್ಲ ಎಂಬುದು ಮನಸ್ಸನ್ನು ಬಹಳ ಕಾಡತೊಡಗಿತು. ‘ಇರದುದೆಲ್ಲವ ಬಿಟ್ಟು ಇರದುದೆಡೆಗೆ ತುಡಿವುದೇ ಜೀವನ’ ಎಂಬ ಕಹಿ ಸತ್ಯದ ಅರಿವಾಗತೊಡಗಿತು.

ನನ್ನಮ್ಮನನ್ನು ಹುಡುಕಿಕೊಡಿ ಪ್ಲೀಸ್

ನನ್ನಮ್ಮನನ್ನು ಹುಡುಕಿಕೊಡಿ! ಹೌದು ನನ್ನಮ್ಮ ಕಾಣೆಯಾಗಿದ್ದಾಳೆ. 

ನನ್ನಮ್ಮನನ್ನು ನೀವು ಹುಡುಕಬೇಕೆಂದರೆ ನಾನ್ಯಾರು ಎಂದು ನಿಮಗೆ ಪರಿಚಯಿಸಿಕೊಳ್ಲಬೇಕು. ನಾನ್ಯಾರು? ನಾನೊಂದು ೯ ತಿಂಗಳ ಭ್ರೂಣ. ನನಗೊಬ್ಬ ಅಣ್ಣನಿದ್ದಾನಂತೆ. ಆದರೆ ನಮ್ಮಿಬ್ಬರ ಅಪ್ಪ ಮಾತ್ರ ಬೇರೆ ಬೇರೆ. ಅಣ್ಣನ ಅಪ್ಪ ಈಗೊಂದು ವರ್ಷದಿಂದ ವಿದೇಶದಲ್ಲಿ ಕೆಲಸ ಮಾಡುತ್ತಿದ್ದಾನಂತೆ! ಹಾಗಾಗಿಯೇ ನಾನು ಇವಳ ಒಡಲು ಸೇರಿದೆನೆಂದು ನನ್ನಮ್ಮ ಮತ್ತೊಬ್ಬ ಹೆಂಗಸಿನ ಹತ್ತಿರ ಹೇಳುತ್ತಿದ್ದನ್ನು ನಾನು ಕದ್ದು ಕೇಳಿಸಿಕೊಂಡೆ. ಸಂತೋಷದಿಂದ ಸಿಳ್ಳೆ ಹಾಕಿ ಕೂಗತೊಡಗಿದೆ ‘ಅಮ್ಮ! ನಾನೀ ಭೂಮಿಗೆ ಬರುತ್ತಿದ್ದೇನೆ‘. ಆದರೆ ‘ಇದೇನಿದು, ನನ್ನ ಕೂಗು ಅಮ್ಮನಿಗೆ ಸಂತೋಷ ತಂದಂತೆ ತೋರಲಿಲ್ಲ’. ‘ಅಯ್ಯೋ! ಅಮ್ಮಾ! ಆ ಮತ್ತೊಬ್ಬ ಹೆಂಗಸು ನನ್ನನ್ನು ಒತ್ತಿ ಒತ್ತಿ ನೋಡುತ್ತಿದ್ದಾಳೆ. ಯಾಕಿಷ್ಟು ನೋವು ಮಾಡಿದರೂ ನನ್ನಮ್ಮ ಅವಳಿಗೆ ಬೈಯುತ್ತಿಲ್ಲ. ಇವಳ್ಯಾಕೆ ಇಷ್ಟು ಚಿಂತೆಯಲ್ಲಿದ್ದಾಳೆ. ಅಮ್ಮ, ನಿನಗೆ ನನ್ನ ಬರುವಿಕೆ ಸಂತೋಷ ತರಲಿಲ್ಲವೇ? ಒತ್ತಿ, ಒತ್ತಿ ನೋಡಿದ ಆ ಹೆಂಗಸು ಹೇಳಿದಳು, ೫ ತಿಂಗಳಾಗಿದೆ. ಮುಖ ಕಿವುಚಿಕೊಂಡ ನನ್ನಮ್ಮನೆಂದಳು ‘ಅಯ್ಯೋ! ನಾನೆಲ್ಲಾ ಎಚ್ಚರಿಕೆ ತೆಗೆದುಕೊಂಡಿದ್ದರೂ ಹೀಗ್ಯಾಕೆ ಆಯಿತು? ಡಾಕ್ಟ್ರೇ ತೆಗೆಸಿಬಿಡಿ’ ಎಂದಳು! 

ಮೊಟ್ಟ ಮೊದಲ ಬಾರಿಗೆ ಅನಿಸಿತು ‘ಇಲ್ಲ, ಇವಳು ನನ್ನಮ್ಮನಲ್ಲ! ನಾನ್ಯಾಕೆ ಬಯಸಿ, ಬಯಸಿ ಇವಳ ಮಡಿಲಿಗೆ ಬಂದೆ. ನನ್ನನ್ನು ಬಯಸಿ, ಎಷ್ಟೋ ಹೆಂಗಸರು ಪೂಜೆ, ಪುನಸ್ಕಾರ ಮಾಡಿದ್ದರಲ್ಲಾ, ಅವರ ಒಡಲನ್ನು ನಾನ್ಯಾಕೆ ಸೇರಲಿಲ್ಲ? ಅತ್ತೆ, ಕಿರುಚಿದೆ ‘ಬೇಡಮ್ಮಾ, ನನ್ನನ್ನು ಕೊಲ್ಲಬೇಡ. ನನಗೆ ಈ ಭೂಮಿ ನೋಡುವ ಆಸೆಯಿದೆ. ನನ್ನನ್ನು ಬದುಕಲು ಬಿಡು.’ ಅವಳಿಗೆ ನನ್ನ ಧ್ವನಿ ಕೇಳಿಸಲೇ ಇಲ್ಲ. ಆ ಕ್ರೂರ ವೈದ್ಯರು ಹಣದಾಸೆಗಾಗಿ ನನ್ನ ಆಸೆ ಆಕಾಂಕ್ಷೆಗಳನ್ನೆಲ್ಲಾ ನುಚ್ಚು ನೂರು ಮಾಡುವಂತೆ, ನನ್ನನ್ನು ತೆಗೆಸಿಬಿಡಲು ಯಾವುದೋ ಮಾತ್ರೆಯನ್ನು ಈ ಹೆಂಗಸಿಗೆ ಕೊಟ್ಟರು. ಆದರೆ ಕಲಬೆರೆಕೆಯ ಮಾತ್ರೆಯಾದ ಅದಕ್ಕೆ ನನ್ನನ್ನು ಈ ಹೆಂಗಸಿನ ಹೊಟ್ಟೆಯಿಂದ ಹೊರದೂಡಲು ಸಾಧ್ಯವಾಗಲೇ ಇಲ್ಲ. ಇದುವರೆವಿಗೂ ಹಾಯಾಗಿ ಈಜಾಡಿಕೊಂಡಿದ್ದ ನನಗೆ ಈಗ ಚಿಂತೆಯೊಂದು ಶುರುವಾಯಿತು. ನನ್ನಮ್ಮ ಯಾರಿರಬಹುದು? ಅವಳನ್ನು ಹುಡುಕುವುದು ಹೇಗೆ? ಹೀಗೆ ಮತ್ತೆರಡು ತಿಂಗಳು ಕಳೆಯಿತು. ಈ ಹೆಂಗಸು ಮತ್ತೆ ಅದೇ ಡಾಕ್ಟರ ಬಳಿಗೆ ಹೋದಳು. ಇವಳ್ಯಾಕೆ ಇಷ್ಟೊಂದು ಆ ವೈದ್ಯರ ಹತ್ತಿರ ಕೂಗಾಡುತ್ತಿದ್ದಾಳೆ. ‘ಓ! ನಾನಿನ್ನೂ ಹೊರಬಂದಿಲ್ಲವೆಂದೇ? ಏ ಹೆಂಗಸೇ! ನಾನು ಈ ಭೂಮಿ ನೋಡುವ ಆಸೆಯಿಂದ ನಿನ್ನ ಒಡಲಿಗೆ ಬಂದಿದ್ದೇನೆ. ಯಾರಿಂದಲೂ ನನ್ನ ಈ ಆಸೆಯನ್ನು ಕಸಿದುಕೊಳ್ಳಲು ಸಾಧ್ಯವಿಲ್ಲ. ಆ ವೈದ್ಯೆ ತಾನೇನೂ ಮಾಡಲು ಸಾಧ್ಯವಿಲ್ಲವೆಂದು ತನ್ನ ಅಸಹಾಯಕತೆಯನ್ನು ಹೇಳಿದಳು. ನನ್ನ ಆಸೆಯನ್ನು ನೆರವೇರಿಸುತ್ತಿರುವ ಇವಳಿರಬಹುದೇ ನನ್ನಮ್ಮ? ನನ್ನನ್ನು ಸಾಯಿಸಲು ಪ್ರಯತ್ನಿಸಿದವಳಲ್ಲವೇ ಇವಳು! ಇಲ್ಲಾ, ಇವಳಲ್ಲ ನನ್ನಮ್ಮ. ನನ್ನನ್ನು ಹೊಟ್ಟೆಯಲ್ಲಿ ಹೊತ್ತ ಈ ಹೆಂಗಸು ಮತ್ತೊಬ್ಬ ವೈದ್ಯೆಯ ಬಳಿಗೆ ಹೋಗಲು ನಿಶ್ಚಯಿಸುವಷ್ಟರಲ್ಲಿ ಮತ್ತೆರಡು ತಿಂಗಳು ಕಳೆದಿತ್ತು. 

ಇದಿಷ್ಟು ನನ್ನ ಫ್ಲಾಶ್ ಬ್ಯಾಕ್! ನಾನು ಈ ಭೂಮಿಗೆ ಬರುವುದನ್ನು ತಡೆಯಲು ಯಾರಿಂದಲೂ ಇನ್ನೂ ಸಾಧ್ಯವಿಲ್ಲ. ನಾನು ಈ ಜಗತ್ತನ್ನೂ ನೋಡಿಯೇ ನೋಡುತ್ತೇನೆ. ಆದರೆ ನನ್ನಮ್ಮ ಯಾರು? ಎಂಬ ನನ್ನ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ! ಈ ಜಗತ್ತಿಗೆ ಕಾಲಿಟ್ಟ ಕ್ಷಣವೇ ನನ್ನಮ್ಮನನ್ನು ಹುಡುಕುತ್ತೇನೆ. ಅಯ್ಯೋ! ನನಗೇನಾಗುತ್ತಿದೆ. ಯಾರೋ ನನ್ನನ್ನು ಹೊರತಳ್ಳಿದಂತೆ ಭಾಸವಾಗುತ್ತಿದೆ. ಉಸಿರು ಕಟ್ಟುತ್ತಿದೆ. ಓ! ಹೊರಗೆ ಬಂದೇ ಬಿಟ್ಟೆ. ನಾನು ಯಾರ ಕೈಯಲ್ಲಿದ್ದೇನೆ? ಇವಳೇ ನನ್ನಮ್ಮ! ಛೇ! ಇರಲಾರದು, ಸರಸರನೆ ನನ್ನ ಹೊಕ್ಕುಳಬಳ್ಳಿಯನ್ನು ಕಡಿದು ನನ್ನನ್ನು ಇಲ್ಲಿರುವ ಟ್ರೇಗೆ ಇಷ್ಟು ಒರಟಾಗಿ ಬಿಸುಟ ಈಕೆ ನನ್ನಮ್ಮನೇ. ಸಾಧ್ಯವೇ ಇಲ್ಲ. ಇದ್ಯಾರಿದು! ಇವಳಿರಬಹುದೇ ನನ್ನಮ್ಮ. ಬಿಳಿ ಅಂಗಿ ಧರಿಸಿದ ಈಕೆ ಮತ್ತೊಬ್ಬಳ ಬಳಿ ನನ್ನ ಬಗ್ಗೆ ಆಡಿಕೊಂಡು ನಗುತ್ತಿದ್ದಾಳೆ! ನಾನ್ಯಾವುದೋ ಪಾಪದ ಫಲವಂತೆ! ಇಲ್ಲಾ, ನನ್ನ ಬಗ್ಗೆ ಇಷ್ಟು ಅಸಹ್ಯವಾಗಿ ತಮಾಷೆ ಮಾಡಿ ನಗುತ್ತಿರುವ ಈಕೆ ನನ್ನಮ್ಮನಾಗಿರಲು ಸಾಧ್ಯವೇ ಇಲ್ಲ.

ಈಗ ಧಡೂತಿ ಹೆಂಗಸೊಬ್ಬಳು ರೇಷ್ಮೇ ಸೀರೆಯನ್ನು ಧರಿಸಿ, ಹಸನ್ಮುಖಳಾಗಿ ನನ್ನನ್ನು ನೋಡಲೆಂದೇ ಬಂದಳು. ನರ್ಸಿಂಗ್ ಹೋಂ ನ ಮಾಲೀಕಳಂತೆ. ಅವಳು ನನ್ನನ್ನು ನೋಡುತ್ತಾ ನಗುತ್ತಿರುವುದನ್ನು ನೋಡಿದರೆ ಖಂಡಿತವಾಗಿಯೂ ಇವಳೇ ನನ್ನಮ್ಮನಿರಬೇಕು. ನೋಡಲು ಬಹು ಚಂದ ಇದ್ದಾಳೆ. ನನ್ನ ಬಗ್ಗೆ ಆಕೆ ತೆಗೆದುಕೊಳ್ಳುತ್ತಿರುವ ಕಾಳಜಿ ನೋಡಿದರೆ ಇವಳೇ ನನ್ನಮ್ಮ ಎಂದೆನಿಸುತ್ತಿದೆ. ಆದರೆ ಇವಳ ಕಣ್ಘಳು ಮಾತ್ರ ಬೇರೆನೋ ಹೇಳುವಂತೆ ಇದೆ. ಅಯ್ಯೋ ಇದೇನಿದು! ಈಕೆ ನನ್ನಮ್ಮನಾಗಲು ಸಾಧ್ಯವಿಲ್ಲ. ನನ್ನನ್ನು ಮಾರಾಟ ಮಾಡಲು ನಿಂತಿರುವ ದಲ್ಲಾಳಿಯಂತಿದ್ದಾಳೆ. ನನ್ನನ್ನು ಮಾರಿದರೆ ಅವಳಿಗೆಷ್ಟು ಹಣ ಸಿಗಬಹುದೆಂಬ ಎಣಿಕೆಯಲ್ಲಿದ್ದಾಳೆ. ಆದರೂ ಬೇರೆಯವರೊಂದಿಗೆ ಹೋಲಿಸಿದರೆ ನನ್ನಮ್ಮನನ್ನು ಹುಡುಕಲು ನನಗೆ ಸಹಾಯ ಮಾಡಲು ಬಂದಿರುವ ದೇವತೆಯಂತೆ ಕಾಣುತ್ತಿದ್ದಾಳೆ. ಇವಳು ನನ್ನ ಅಮ್ಮನಾಗಲು ಬಂದಿರುವವಳೊಡನೆ ಹಣದ ಚೌಕಾಸಿಗಾಗಿ ನಿಂತಿದ್ದಾಳೆ. ಛೇ! ಇವಳನ್ನು ದೇವತೆಯೊಡನೆ ಹೋಲಿಸಿದೆನಲ್ಲಾ. ಅಯ್ಯೋ! ಸರಿಯಾದ ಹಣ ಗಿಟ್ಟಲಿಲ್ಲವೆಂದು ಅವಳನ್ನು ಕಳಿಸಿಯೇ ಬಿಟ್ಟಳು. 

ನನ್ನಮ್ಮ ಯಾರಿರಬಹುದು? ಯಾರಿಗಾದರೂ ಗೊತ್ತಿದೆಯೇ? ನನ್ನಮ್ಮನನ್ನು ಹುಡುಕಿಕೊಡಿ ಪ್ಲೀಸ್.

ಪ್ಲೀಸ್ ೫ ನಿಮಿಷ ಅಷ್ಟೇ

ಇತ್ತೀಚಿನ ದಿನಗಳಲ್ಲಿ ನನ್ನನ್ನು ಬಹಳವಾಗಿ ಕಾಡಿದ ಪುಟ್ಟ ಕಥೆಯಿದು. ಪಾರ್ಕಿನಲ್ಲಿ ಒಬ್ಬ ವ್ಯಕ್ತಿ ತನ್ನ ಮಗಳು ಸೈಕಲ್ ತುಳಿಯುತ್ತಿರುವುದನ್ನು ನೋಡುತ್ತಾ ಕುಳಿತಿರುತ್ತಾನೆ. ಪಕ್ಕದಲ್ಲಿ ಕುಳಿತ ಮಹಿಳೆ ಅಲ್ಲಿಯೇ ಆಟವಾಡುತ್ತಿದ್ದ ಬಾಲಕನನ್ನು ತೋರಿಸಿ ‘ನನ್ನ ಮಗ’ ಎನ್ನುತ್ತಾಳೆ. ‘ಸುಂದರ ಬಾಲಕ’ ಎನ್ನುವ ಈತ ತನ್ನ ಮಗಳನ್ನು ಪರಿಚಯಿಸುತ್ತಾನೆ. ಸ್ವಲ್ಪ ಹೊತ್ತಿನ ನಂತರ ಮಗಳನ್ನು ಕುರಿತು ಹೊರಡೋಣವೇ ಎನ್ನುತ್ತಾನೆ. ಮಗಳು ‘ಪ್ಲೀಸ್ ೫ ನಿಮಿಷ ಅಷ್ಟೆ ಅಪ್ಪಾ’ ಎನ್ನುತ್ತಾಳೆ. ‘ಸರಿ’ ಎನ್ನುತ್ತಾ ಮತ್ತೆ ಈತ ಕುಳಿತುಕೊಳ್ಳುತ್ತಾನೆ. ಹೀಗೆ ಹಲವಾರು ಬಾರಿ ನಡೆಯುತ್ತದೆ.

ಇದನೆಲ್ಲಾ ನೋಡುತ್ತಾ ಪಕ್ಕದಲ್ಲೇ ಕುಳಿತಿದ್ದ ಮಹಿಳೆ ‘ನಿಮಗೆ ಬಹಳ ತಾಳ್ಮೆ’ ಎನ್ನುತ್ತಾಳೆ. ಅದಕ್ಕೆ ಆ ವ್ಯಕ್ತಿ ನೋವಿನಿಂದ ‘ತಾಳ್ಮೆಯೆಲ್ಲಾ ಏನೂ ಇಲ್ಲ. ಈಗ್ಗೆ ಕೆಲವು ದಿನಗಳ ಹಿಂದೆ ಅವಳ ಅಣ್ಣ ಸೈಕಲ್ ತುಳಿಯುತ್ತಿದ್ದಾಗ ಲಾರಿಯೊಂದು ಗುದ್ದಿದ ಕಾರಣ ತೀರಿಹೋದ. ಆಗ ಆತನಿಗಾಗಿ ನಾನು ಹೆಚ್ಚಿನ ಸಮಯ ಕೊಡಲಿಲ್ಲ. ಈಗ ಆತ ಕನಿಷ್ಟ ಪಕ್ಷ ೫ ನಿಮಿಷಕ್ಕಾದರೂ ಸಿಗುವುದಾದರೆ ಅವನಿಗಾಗಿ ನನ್ನೆಲ್ಲವನ್ನೂ ಕೊಡಲು ಸಿದ್ದನಿದ್ದೇನೆ. ಆದರೆ ಇದು ಸಾಧ್ಯವೇ?

 ಈಗ ಮತ್ತೆ  ಆ ತಪ್ಪನ್ನು ಮತ್ತೆ ಮಾಡಲು ನಾನು ತಯಾರಿಲ್ಲ. ನನ್ನ ಮಗಳು ೫ ನಿಮಿಷ ಆಡಲು ಸಮಯ ಬೇಡುತ್ತಿದ್ದರೆ, ನನಗೆ ಅವಳ ಆಟ ನೋಡಲು ೫ ನಿಮಿಷ ಸಿಗುತ್ತಿದೆ! ನಮಗೆ ಯಾರಿಗಾದರೂ ಏನನ್ನಾದರೂ ಹೇಳಬೇಕೆಂದಿದ್ದರೆ ಸಮಯ ವ್ಯರ್ಥ ಮಾಡದೇ ಆ ಗಳಿಗೆಯೇ ಹೇಳಿಬಿಡಬೇಕೆಂಬ ನೀತಿಯುಳ್ಳ ಈ ಕಥೆ ಮನಸ್ಸನ್ನು ತುಂಬಾ ಕಾಡಿತು

ಇದೇ ಗುಂಗಿನಲ್ಲಿದ್ದ ನನಗೆ ಗೆಳೆಯನೊಬ್ಬ ಹೇಳಿದ ಮತ್ತೊಂದು ಘಟನೆ ಇದಕ್ಕೆ ಪೂರಕವಾಗಿತ್ತು. ಆತನ ಗೆಳೆಯ ನಾಟ್ಯ ಕಲಾವಿದ ಜೊತೆಗೆ ಚಿತ್ರಕಲೆಯಲ್ಲಿಯೂ ಕೂಡ ನೈಪುಣ್ಯತೆ ಹೊಂದಿದ್ದವರು. ಇವನು ಅವರಿಗೆ ನಾಟ್ಯದ ಭಂಗಿಗಳ ಚಿತ್ರಗಳನ್ನು ರಚಿಸಿಕೊಡುವಂತೆ ಕೇಳಿಕೊಂಡಿದ್ದನಂತೆ. ಇನ್ನೂ ಬಹಳ ಸಮಯವಿದೆ, ಇವತ್ತು ಮಾಡಿಕೊಡುತ್ತೇನೆ, ನಾಳೆ ಮಾಡಿಕೊಡುತ್ತೇನೆ ಎಂದಾತ ಹಠಾತ್ತನೆ ಮೊನ್ನೆ ತೀರಿಹೋದರಂತೆ! ನನ್ನ ಗೆಳೆಯ ಬಹಳವಾಗಿ ನೊಂದಿದ್ದ. ಹೀಗಾಗುತ್ತೆಯೆಂದು ಗೊತ್ತಿದ್ದರೆ ಹೇಗಾದರೂ ದುಂಬಾಲು ಬಿದ್ದು ಅವರ ಬಳಿ ಚಿತ್ರ ಬರೆಸಿಯೇ ಬಿಡುತ್ತಿದ್ದೆನೆಂದು ಅಳುತ್ತಿದ್ದ.

ನಾವ್ಯಾಕೆ ಹೀಗೆ? ನಮ್ಮ ಪ್ರೀತಿಪಾತ್ರರಿಗೆ ಪ್ರೀತಿ ತೋರಿಸಲು ಕೂಡ ನಮ್ಮ ಬಳಿಯಲ್ಲಿ ಸಮಯವಿರುವುದಿಲ್ಲ. ಯಾವುದೋ ಆಸೆಗೆ, ಮೋಹಕ್ಕೆ ಬಲಿಬಿದ್ದು ಓಡುತ್ತೇವೆ, ಓಡುತ್ತೇವೆ. ಸಾಕಾಗಿ ನಿಂತಾಗ ನಮ್ಮ ಹಿಂದೆ ಯಾರೂ ಇರುವುದೇ ಇಲ್ಲ. ಆಗ ಕಳೆದುಕೊಂಡದ್ದಕ್ಕೆ ಮರುಗಬಹುದೇ ವಿನಃ ಮತ್ತೆ ಆ ಕಾಲ ನಮಗೆ ಸಿಗುವುದೇ ಇಲ್ಲ. ಇನ್ನಾದರೂ ನಾವೆಲ್ಲರೂ ಎಚ್ಚೆತ್ತು ನಾವು ಪ್ರೀತಿಸುವ, ನಮ್ಮನ್ನೂ ಪ್ರೀತಿಸುವ ಜೀವಗಳಿಗೆ ಒಂದು ಕೃತಜ್ಞತೆಯನ್ನು ಹೇಳೋಣವೇ? ಆ ಕೆಲಸ ಇಂದೇ, ಈಗಲೇ ಇನ್ನೈದು ನಿಮಿಷಗಳಲ್ಲಿಯೇ ಮಾಡೋಣವೇ?


ನಾನು ಹಾಗೂ ಟಿವಿ ಪ್ರೋಗ್ರಾಮು

ಇತ್ತೀಚೆಗಷ್ಟೆ ಕೆಲಸದ ಏಕತಾನತೆಯಿಂದ ಬೇಸರಗೊಂಡು ಬೇರೆ ಕೆಲಸ ಸೇರಿಕೊಂಡಿದ್ದೆ. ಎಲ್ಲರನ್ನೂ ಆಕರ್ಷಕವಾಗಿ ಕಾಣುವಂತೆ, ಅವರ ಸೌಂದರ್ಯವನ್ನು ಇನ್ನೂ ಹೆಚ್ಚಿಸುವ ಒಂದು ಸಂಸ್ಥೆ. ಅಲ್ಲಿ ಮ್ಯಾನೇಜರ್ ಎಂಬ ಪೋಸ್ಟ್ ಬೇರೆ ಆಕರ್ಷಕವಾಗಿ ಕಂಡಿತ್ತು. ಅಲ್ಲಿ ನನ್ನ ಪ್ರತಿಭೆಯನ್ನು ತೋರಿಸಲು ಒಂದು ಅವಕಾಶವೂ ಸಿಗ ಬಹುದೆಂಬ ಆಶಯದಿಂದ ಆ ಸಂಸ್ಥೆಗೆ ಸೇರಿದೆ. ನನಗೊಪ್ಪಿಸಿದ ಕೆಲಸವನ್ನು ಬಹಳ ಅಚ್ಚುಕಟ್ಟಾಗಿ ಮಾಡಲು ಶುರುಮಾಡಿದೆ. ಇದೇ ಸಂಸ್ಥೆಯ ಬಗ್ಗೆ ಒಂದು ಎಪಿಸೋಡ್ ಮಾಡಲು ಟಿ.ವಿ.ಯೊಂದು ಯೋಜನೆ ಮಾಡಿತು. ಸಂಸ್ಥೆಯಲ್ಲಿ ಕೆಲಸ ಮಾಡುವವರೆಲ್ಲರ ಮಾತೃಭಾಷೆ ಹಿಂದಿ (ನನ್ನನ್ನು ಬಿಟ್ಟು). ನಿರ್ದೇಶಕರು ಕೂಡಾ ಹಿಂದಿಯವರೇ. ಸರಿ! ಯಾರಿದ್ದಾರೆ ಕನ್ನಡದಲ್ಲಿ ಮಾತನಾಡಲು? ನಾನಿಲ್ಲವೇ? ನಾನೇ ಆಯ್ಕೆಯಾದೆ (ಸ್ಪರ್ಧಿಸಲು ಯಾರಾದರಿದ್ದಲ್ಲವೇ :-)) ಬಯಸದೇ ಬಂದ ಭಾಗ್ಯ! ಎಲ್ಲರೆದುರು ನನಗೇನೂ ಇಷ್ಟವಿಲ್ಲ, ನಿಮ್ಮ ದಾಕ್ಷಿಣ್ಯಕ್ಕಾಗಿ ಒಪ್ಪಿಕೊಂಡಿದ್ದೇನೆ ಎನ್ನುವ ಧೋರಣೆ ತೋರಿದರೂ ಒಳಗೊಳಗೆ ಬಹಳ ಖುಶಿ, ನಾನು ಟಿ.ವಿ.ಯಲ್ಲಿ ಬರುತ್ತೀನಿ ಅಂತಾ. ಟಿ.ವಿ. ಶೋಗಳಲ್ಲಿ ಭಾಗವಹಿಸುವುದು, ರೇಡಿಯೋಗಳಲ್ಲಿ ಪ್ರೋಗ್ರಾಮ್ ನೀಡುವುದು (ಚಿಕ್ಕವಳಾಗಿದ್ದಾಗ ಒಂದು ರೇಡಿಯೋ ಕಾರ್ಯಕ್ರಮ ಕೂಡಾ ನೀಡಿದ್ದೆ ;-)), ಪೇಪರಿನಲ್ಲಿ ಫೋಟೋ ಬರುವುದು (ಶ್ರದ್ಧಾಂಜಲಿಯಲ್ಲ ;-)), ಇದೆಲ್ಲವೂ ನಮಗೆ ಎಷ್ಟು ಖುಶಿ ಕೊಡುತ್ತೆ ಅಲ್ಲ್ವಾ :-) ನನಗಂತೂ ಬಹಳ ಖುಶಿಯಾಯಿತು. ಪೀಠಿಕೆನೇ ಜಾಸ್ತಿ ಆಯಿತಲ್ವಾ (ಏನು ಮಾಡೋದು? ಎಲ್ಲಾ ಈ ಧಾರಾವಾಹಿಗಳ ಪ್ರಭಾವ :-) ಹಾಗಂದ ಕೂಡಲೇ ಹೆದರಿಕೊಳ್ಳಬೇಡಿ! ಇದನ್ನಂತೂ ೨-೩ ಕಂತು ಮಾಡೋಲ್ಲ :-)) ಒಂದು ಒಳ್ಳೆಯ ದಿವಸ ಗೊತ್ತಾಯಿತು. ನಾನು ಕೂಡಾ ಜೀವನದಲ್ಲಿ ಮೊದಲ ಬಾರಿಗೆ ಮೇಕಪ್ ಮಾಡಿಕೊಳ್ಳುವ, ಟಿ.ವಿಯಲ್ಲಿ ಕಾಣಿಸಿಕೊಳ್ಳುವ ಸಂಭ್ರಮದಲ್ಲಿ ರಾತ್ರಿಯೆಲ್ಲಾ ನಿದ್ದೆ ಮಾಡದೇ, ಸಂಭಾಷಣೆಯನ್ನು ಪ್ರಾಕ್ಟೀಸ್ ಮಾಡುತ್ತಾ ಕುಳಿತೆ! ಮನೆಯವರ ಕೈಯಲ್ಲಿ ‘ನಿನ್ನದ್ಯಾಕೋ ಅತಿಯಾಯಿತು’ ಎಂದು ಬೈಸಿಕೊಂಡರೂ, ಆ ಬೈಗುಳ ಕಿವಿಯವರೆವಿಗೂ ತಲುಪಲೇ ಇಲ್ಲ :-) ಯಾವಾಗ ಬೆಳಗಾಗುವುದೋ, ಯಾವಾಗ ಮೇಕಪ್ ಮಾಡಿಕೊಳ್ಳುವುದೋ, ಸಂಭಾಷಣೆಯನ್ನು ಒಪ್ಪಿಸುವುದು, ಕನ್ನಡಿಯ ಮುಂದೆ ಪ್ರಾಕ್ಟೀಸ್ ಕೂಡಾ ಮಾಡಿದ್ದಾಯಿತು! ಬೆಳಗೆದ್ದ ಕೂಡಲೇ ಮಾಡಿದ ಮೊದಲ ಕೆಲಸ, ಗೆಳೆಯ-ಗೆಳತಿಯರಿಗೆಲ್ಲಾ ನನ್ನ ಪ್ರೋಗ್ರಾಮ್ ಇದೆ, ನೋಡಿ ಎಂದು ಮೆಸೇಜ್ ಕೂಡಾ ಕಳಿಸಿದ್ದಾಯಿತು. ನಂತರ ಬೇಗ ಬೇಗ ರೆಡಿಯಾಗಿ ಎಲ್ಲರಿಗಿಂತಲೂ ಮೊದಲಿಗೆ ನಮ್ಮ ಸಂಸ್ಥೆಗೆ ಹೋದೆ. ಮೇಕಪ್ ಮಾಡಿಸಿಕೊಂಡೆ. ನನ್ನ ಮುಖದ ಗುರುತು ನನಗೆ ಸಿಗಲಿಲ್ಲ :-) (ಮೊದಲ ಬಾರಿಗೆ ಮೇಕಪ್ ಮಾಡಿದ್ದರಿಂದ ಹೀಗನ್ನಿಸುತ್ತಿದೆ ಅಂತಾ ಎಲ್ಲರೂ ಸಮಾಧಾನ ಮಾಡಿದರು. ನಾನಿನ್ನು ಮಾತಾಡಬೇಕಿತ್ತಲ್ವಾ;-) ಅದಕ್ಕೆ ಬೆಣ್ಣೆ ಹಚ್ಚುತ್ತಿರಬೇಕಂದುಕೊಂಡೆ). ತಿಂಡಿ ತಿಂದು, ನೀರು ಕೂಡಾ ಕುಡಿದು ಮೇಕಪ್ ಗಾಗಿ ಕುಳಿತಿದ್ದೆ. (ಲಿಪ್ ಸ್ಟಿಕ್ ಹೋಗಿಬಿಟ್ಟರೆ) ನಾನು ರೆಡಿಯಾದೆ. ೧೧ ಗಂಟೆಗೆ ಬರುವುದಾಗಿ ತಿಳಿಸಿದ್ದ ರೆಕಾರ್ಡಿಂಗ್ ಟೀಮಿನವರು ೧೨.೩೦ ಯಾದರೂ ಬರಲೇ ಇಲ್ಲ. ಫೋನ್ ಮಾಡಿದ್ದಕ್ಕೆ ಬೇರೆ ಕಡೆ ರೆಕಾರ್ಡಿಂಗ್ ನಡೆಯುತ್ತಿದೆ. ಅದು ಮುಗಿದ ತಕ್ಷಣವೇ ಬರುವುದಾಗಿ ತಿಳಿಸಿದರು. ೩ ಗಂಟೆಯಾದರೂ ಪತ್ತೇ ಇಲ್ಲಾ. ಬೆಳಿಗ್ಗೆ ತರಾತುರಿಯಲ್ಲಿ (ಖುಶಿಯಲ್ಲಿ), ಸರಿಯಾಗಿ ತಿಂಡಿ ತಿಂದಿರಲಿಲ್ಲ. ಹೊಟ್ಟೆ ಚುರುಗುಟ್ಟುತ್ತಿತ್ತು. ಊಟ ಮಾಡೋಣವೆಂದುಕೊಂಡರೆ ಮೇಕಪ್ ಬೇರೆ ಕರಗಿಹೋಗುವುದೆಂಬ ಭಯ ಒಂದು ಕಡೆ, ಆತಂಕದಲ್ಲಿ ಪ್ರಾಕ್ಟೀಸ್ ಮಾಡಿದ್ದ ಮಾತುಗಳೆಲ್ಲವೂ ಮರೆತು ಹೋದಂತಾಗುತ್ತಿತ್ತು. ೫ ಗಂಟೆ ಆಯಿತು. ಯಾರ ಸುದ್ದಿಯೂ ಇಲ್ಲಾ. ಕಡೆಗೆ ಧೈರ್ಯ ಮಾಡಿ ನಾನೇ ಫೋನ್ ಮಾಡಿದೆ. ಇವತ್ತ್ಯಾಕೋ ಬರಲು ಸಾಧ್ಯವಾಗುತ್ತಿಲ್ಲಾ. ಕ್ಷಮಿಸಿ. ಇನ್ನೊಮ್ಮೆ ನೋಡುವ ಅಂತಾ ಹೇಳಿಬಿಡೋದಾ! ಇನ್ನೂ ಯಾವತ್ತು ಮುಹೂರ್ತ ಕೂಡಿ ಬರುತ್ತೋ? :-(

(ಸಂಪದದಲ್ಲಿ http://sampada.net/blog/inchara123/29/06/2009/22091 ಬರೆದು, ಯಾರೋ ಮಹಾನ್ ಕನ್ನಡಿಗ ನಾನು ಪ್ರೋಗ್ರಾಮೂ ಅಂತಾ ಬರೆದೆ ಅಂತಾ ಕಿತ್ತಾಡಿ, ಸುಮಾರು ೩ ಪೇಜಿನಷ್ಟು ಕಮೆಂಟ್ಸ್ ಗಳು ಆಗಿಬಿಟ್ಟಿದ್ದವು. ನಾನು ಚೆನ್ನಾಗಿ ಬರೆದಿಲ್ಲವಾದರೂ, ಫೇಮಸ್ಸು ಆಗಿಬಿಟ್ಟೆ :-) )

ನಿನಗಾಗಿ ಕಾಯುತ್ತಿರುವ

ಪ್ರೀತಿಯ ಗೆಳೆಯಾ, 

ಇಂದೇಕೋ ನಿನ್ನ ನೆನಪಾಗುತ್ತಿದೆ :-( ಆದರೆ ನೀನೆಲ್ಲಿದ್ದಿ? ಹೇಗಿದ್ದೀ? ಇದ್ಯಾವುದರ ಬಗ್ಗೆಯೂ ನನಗೆ ತಿಳಿದಿಲ್ಲ. ನೀನು ಯಾಕೆ ಹೀಗೆ ಮಾಡಿದೆ? ಇದಕ್ಕೂ ನನ್ನ ಬಳಿ ಉತ್ತರವಿಲ್ಲ. ನಾನು ನಿನಗೆ ಬೇಕಾದಷ್ಟು ಸಲ ನೋವನ್ನುಂಟು ಮಾಡಿದ್ದೇನೆ. ಬೇಸರ ಮಾಡಿದ್ದೇನೆ. ಕಿರಿಕಿರಿ ಮಾಡಿದ್ದೇನೆ. ಇವೆಲ್ಲವುಗಳನ್ನೆಲ್ಲಾ ಕ್ಷಮಿಸುತ್ತಾ ಬಂದ ನೀನು, ನನ್ನ ಬಳಿ ಮಾತು ನಿಲ್ಲಿಸಿದ್ದಕ್ಕೆ ಕಾರಣವೇ ತಿಳಿಯಲಿಲ್ಲ. ನಗುನಗುತ್ತಲೇ ‘ನಿನ್ನ ಮಾತುಗಳಲ್ಲಿ ಪ್ರೀತಿ, ಕಾಳಜಿ, ತುಂಟತನ ಎಲ್ಲವೂ ತುಂಬಿದೆ. ನನಗೆ ನಿನ್ನೊಂದಿಗೆ ಮಾತಾಡುವುದೇ ಅತ್ಯಂತ ಮಧುರ ಕ್ಷಣ’ವೆಂದ ನೀನು ಆ ಮಧುರ ಕ್ಷಣಗಳನ್ನು ಮರೆತು ಹೋದದೆಲ್ಲಿಗೆ? ನಾನಾಗೇ ಕರೆ ನೀಡುವವರೆಗೆ ನೀನು ನನಗೆ ಕರೆ ನೀಡಬಾರದು ಎಂದಿದ್ದಾದರೂ ಏಕೆ? ನಾ ನಿನಗೆ ಕೊಟ್ಟ ಮಾತಿನಂತೆ ಇದುವರೆಗೂ ನಿನಗೆ ಕರೆ ನೀಡಿಲ್ಲ, ನೀನೆಲ್ಲಿರುವೆ ಎಂಬುದು ತಿಳಿಯಲಿಲ್ಲ. ಹೀಗೇಕೆ ಮಾಡಿದೆ? ತಪ್ಪುಗಳನ್ನು ಮಾಡಿದಾಗಲೂ ನೀಡದಿದ್ದ ಶಿಕ್ಷೆಯನ್ನು ಈಗ ಕೊಡುವ ಅಗತ್ಯವಿತ್ತೇ? ನನಗೆ ನೀನ್ಯಾರೆಂದು ಅರ್ಥವಾಗಿರದಿದ್ದರೂ, ನಿನಗೆ ನಾನ್ಯಾರೆಂದು ಅರ್ಥವಾಗಿದ್ದೆ ಅಲ್ಲವೇ? ನೀ ಹತ್ತಿರವಿದ್ದರೆ ನನಗೆಂದಿಗೂ ಬುದ್ಧಿ ಬರುವುದಿಲ್ಲವೆಂದುಕೊಂಡೆಯಾ? ಎಲ್ಲವೂ ಕೊನೆಯಿರದ ಪ್ರಶ್ನೆಗಳು! ಉತ್ತರಿಸಲು ನೀನೆದುರಿಗೆ ಇಲ್ಲ.

ಚಿಕ್ಕವಯಸ್ಸಿನಲ್ಲಿ ಗೆಳೆತನದ ಅವಶ್ಯಕತೆ ನನಗೆಂದಿಗೂ ಇರಲಿಲ್ಲ. ಅಂದರೆ ನನಗೆ ಯಾರೂ ಫೆಂಡ್ಸ್ ಇರಲೇ ಇಲ್ಲವೆಂದಲ್ಲ. ಬೇಕಾದಷ್ಟು ಇದ್ದರು. ಪ್ರತಿ ಬರ್ತ್ ಡೇ ಬಂದಾಗಲೂ ನನಗಿಷ್ಟು ಗ್ರೀಟಿಂಗ್ಸ್ ಬಂತು ಎಂದು ಹೇಳಿಕೊಳ್ಳೋದು ನನಗೊಂದು ಒಂದು ಹೆಮ್ಮೆಯ ವಿಷಯವಾಗಿತ್ತು. ಆದರೆ ಕ್ಯಾಂಟಿಟಿ ಇದ್ದರೂ ಅದ್ಯಾವುದರಲ್ಲೂ ಕ್ವಾಲಿಟೀ ಇರಲಿಲ್ಲ. ಅಂದರೆ ನಿಜವಾದ ಗೆಳೆತನವೆಂದರೇನು ಅನ್ನೋದು ಗೊತ್ತಿರಲಿಲ್ಲ. ಆದರೆ ನಿನ್ನ ಜೊತೆಗೆ ಆದ ಗೆಳೆತನ, ಗೆಳೆತನ ಎಂದರೇನು ಅನ್ನುವುದನ್ನು ಕಲಿಸಿತು. ನಾನು ಬಹಳ ಸಂಕೋಚ ಹಾಗೂ ನಾನೇನಕ್ಕೂ ಪ್ರಯೋಜನವಿಲ್ಲ ಎಂಬ ಕೀಳರಿಮೆಯಿಂದ ಬಳಲುತ್ತಿದ್ದೆ. ನನ್ನ ಅಮ್ಮನ ಬಳಿಯೂ ಮುಕ್ತವಾಗಿ ಮಾತನಾಡಲಾಗುತ್ತಿರಲಿಲ್ಲ. ಅಷ್ಟು ಸಂಕೋಚವಿದ್ದ ನನಗೆ, ಅದೇನೋ ಗೊತ್ತಿಲ್ಲ! ನೀನು ಕೇಳುತ್ತಿದ್ದೇಯೋ ಇಲ್ಲವೋ? ನಾನಂತೂ ಪ್ರತಿಯೊಂದನ್ನೂ ಮುಜುಗರವಿಲ್ಲದೆ ನಿನ್ನ ಬಳಿ ಹೇಳಿಕೊಳ್ಳುತ್ತಿದ್ದೆ. ನಾನೇನನ್ನೂ ಹೇಳಬಯಸಿದ್ದೇನೆ ಎನ್ನುವುದು ನನ್ನ ಕಣ್ಣುಗಳನ್ನು ನೋಡಿಯೇ ನೀನರ್ಥ ಮಾಡಿಕೊಳ್ಳುತ್ತಿದ್ದೆ. ಅಂತಹ ನನ್ನನ್ನು ಪೂರ್ತಿ ಅರ್ಥ ಮಾಡಿಕೊಳ್ತಿದ್ದ ನಿನ್ನಂಥ ಗೆಳೆಯನನ್ನು ದಿನದ ೨೪ ಗಂಟೆಗಳು ಜೊತೆ ಇರೋ ತರಹ ಮಾಡಿಕೊಂಡರೆ ಜೀವನ ಸೊಗಸು, ಗೆಳೆಯನೇ ಗಂಡನಾದರೆ ಸ್ವರ್ಗಕ್ಕೆ ಮೂರೇ ಗೇಣು ಎಂದು ತೀರಾ ಸಂಕುಚಿತವಾಗಿ ಯೋಚಿಸಿದೆ. ನಾನು ಪ್ರೊಪೋಸ್ ಮಾಡಿದರೆ, ನಿನಗೆ ಏನನ್ನಿಸಬಹುದು? ನೀನು ತಿರಸ್ಕರಿಸಿದರೆ ಒಂದು ಸುಂದರ ಗೆಳೆತನ ಹಾಳಾಗುತ್ತಲ್ವಾ? ಒಬ್ಬರ ಮುಖ ಮತ್ತೊಬ್ಬರು ನೋಡಲು ಸಾಧ್ಯವೇ? ಉಹೂ, ಇದ್ಯಾವುದನ್ನೂ ನಾನು ಯೋಚಿಸಲೇ ಇಲ್ಲ. ನನ್ನ ಜೊತೆಗಿದ್ದ ಇನ್ನಿತರ ಗೆಳತಿಯರ ಒತ್ತಾಯವೂ ನನ್ನಲ್ಲಿದ್ದ ಒಂದಷ್ಟು ಅಳುಕನ್ನು ದೂರ ಮಾಡಿತು. ಅವನು ತಿರಸ್ಕರಿಸಲು ಸಾಧ್ಯವೇ ಇಲ್ಲಾ ಅನ್ನೋ ಅಹಂ ನನ್ನ ತಲೆಗೇರಿತ್ತು. ಒಪ್ಪಿಕೊಂಡೇ ಒಪ್ಪಿಕೊಳ್ತಾನೆ ಅನ್ನೋದು ನನ್ನ ಬಲವಾದ ನಂಬಿಕೆಯಾಗಿತ್ತು. ಪ್ರೊಪೋಸ್ ಮಾಡಿಬಿಟ್ಟೆ. ಆದರೆ ನೀನು ಒಪ್ಪಲಿಲ್ಲ. ರಿಜೆಕ್ಟ್ ಮಾಡಿಬಿಟ್ಟೆ. ರಿಜೆಕ್ಟ್ ಮಾಡಿ ದೂರವಾಗಿದ್ದರೆ, ಬಹುಶಃ ನನಗೆ ನಿನ್ನ ಹಾಗೂ ನಿನ್ನ ಗೆಳೆತನದ ವ್ಯಾಲ್ಯೂ ಅರ್ಥವಾಗ್ತಾ ಇರಲಿಲ್ಲ. ಆದರೆ ಅಲ್ಲೂ ನೀನು ಗೆಳೆತನಕ್ಕೆ ಎಷ್ಟು ಬೆಲೆ ಕೊಟ್ಟೆ ಅಂದರೆ, ದಿನದ ೨೪ ಗಂಟೆಗಳು ಜೊತೆಯಲ್ಲಿ ಇಲ್ಲದಿದ್ದರೂ, ಅವಶ್ಯಕತೆ ಇದ್ದಾಗ ನಾನು ನಿನ್ನ ಹಿಂದೆ ಇದ್ದೇ ಇರ್ತೀನಿ ಅನ್ನೋದನ್ನು ತೋರಿಸಿಬಿಟ್ಟೆ. ನನ್ನ ಯಾವ ಸಂತೋಷದಲ್ಲೂ ಡೈರೆಕ್ಟಾಗಿ ಪಾಲ್ಗೊಳ್ಳದಿದ್ದರೂ, ನನ್ನ ದುಃಖದಲ್ಲಿ ಮಾತ್ರ ೧೦೦% ಭಾಗವಹಿಸಿದೆ. ನನ್ನ ಜೀವನದ ಪ್ರತಿ ಗಳಿಗೆಯಲ್ಲೂ ದೈಹಿಕವಾಗಿ ನನ್ನ ಜೊತೆ ಇಲ್ಲದಿದ್ದರೂ, ಮಾನಸಿಕವಾಗಿ ಹೆಜ್ಜೆ, ಹೆಜ್ಜೆಗೂ ನನ್ನ ಜೊತೆಗೆ ನೀನಿದ್ದಿ. ಇವತ್ತಿಗೂ ನನ್ನ ಪ್ರತಿಯೊಂದು ಸಂಕಟದ ಗಳಿಗೆಯಲ್ಲೂ ನೀನು ಹೇಳಿದ ಮಾತುಗಳು ಕಿವಿಯಲ್ಲಿ ಅನುರಣಿಸುತ್ತವೆ. ಮೈಕೊಡವಿಕೊಂಡು ಮೇಲೆಳಲು ಪ್ರೇರೇಪಿಸುತ್ತವೆ. ಆದರೆ ಇಂತಹ ಒಂದು ಗೆಳೆತನವನ್ನು ನಾನು ಅಪಾರ್ಥ ಮಾಡಿಕೊಂಡೆ ಅನ್ನೋ ಗಿಲ್ಟ್ ನನ್ನನ್ನು ಸಿಕ್ಕಾಪಟ್ಟೆ ನಿನ್ನಿಂದ ದೂರ ಓಡಿಸಿಬಿಟ್ಟಿತು. ನೀನು ನನ್ನ ಜೀವದ ಗೆಳೆಯನಾಗಿದ್ದೆ. ನನ್ನೆಲ್ಲಾ ಕಷ್ಟಗಳನ್ನೂ ನಿನ್ನ ಬಳಿ ಹೇಳಿಕೊಂಡು ಆ ಗೆಳೆತನದ ಪ್ರಯೋಜನವನ್ನೇನೋ ಪಡೆದುಕೊಂಡೆ. ನನ್ನ ಅನುಭವದ ಗಾತ್ರವನ್ನು ಹಿಗ್ಗಿಸಿಕೊಂಡೆ. ಆದರೆ ದುರಂತವೆಂದರೆ, ನಾನು ಯಾವಾಗಲೂ ಈ ಗೆಳೆತನದ ರಿಸೀವರ್ ಮಾತ್ರ ಆಗಿಬಿಟ್ಟೆ. ನಾನೆಂದಿಗೂ ನಿನ್ನ ಗೆಳತಿಯಾಗಲಿಲ್ಲ. ನೀನೆಂದಿಗೂ ನಿನ್ನ ಕಷ್ಟಗಳೇನು? ನೋವೇನು? ಇದ್ಯಾವುದನ್ನೂ ನನ್ನ ಬಳಿ ಹಂಚಿಕೊಳ್ಳಲು ಸಾಧ್ಯವಾಗಲಿಲ್ಲ. ಈ ವಿಷಯದಲ್ಲಿ ನನ್ನನ್ನು ದೂರವಿಟ್ಟುಬಿಟ್ಟೆ. 

ನೀನು ದೂರವಾದ ಬಳಿಕ ಗೆಳೆತನವೆಂದರೇನು ಎನ್ನುವುದು ಅರ್ಥವಾಗುತ್ತಿದೆ. ಗೆಳೆತನವೆಂದರೆ ಬರೇಯ ಟೈಮ್ ಪಾಸ್ ಅಲ್ಲ. ಅಪ್ಪನ ರಕ್ಷಣೆ, ಅಮ್ಮನ ವಾತ್ಸಲ್ಯ, ಅಣ್ಣನ ಕೀಟಲೆ, ತಮ್ಮನ ತುಂಟತನ, ಅಕ್ಕ, ತಂಗಿಯರ ಕಾಳಜಿ, ಗಂಡನ ಪ್ರೀತಿ, ಮಕ್ಕಳ ಮುಗ್ದತೆ ಎಲ್ಲವೂ ಒಂದಿಡೀ ಗೆಳೆತನದಲ್ಲಿಯೇ ಸಿಕ್ಕಿಬಿಡುವುದು. ಅದನ್ನು ನಾನು ಗಂಡನೆಂಬ ಬಂಧನದಲ್ಲಿ ಸಿಲುಕಿಸಿಬಿಡಲು ಯೋಚಿಸಿದ್ದಾದರೂ ಹೇಗೆ? ನನಗೆ ಈ ಗಿಲ್ಟ್ ನಿಂದ ಹೊರಬರಲು ಸಾಧ್ಯವಾಗಲೇ ಇಲ್ಲ. ಇಂದು ನಿನ್ನ ಹುಟ್ಟಿದ ಹಬ್ಬ. ಯಾರು ಮರೆತರೂ, ನಾನು ಮರೆಯಲಾರೆನೆಂದು ನಿನಗೂ ಕೂಡ ಗೊತ್ತಿರುತ್ತದೆ. ಇಂದಾದರೂ ನೀನು ಕರೆ ಮಾಡುವೆಯೆಂದು ನಂಬಿದ್ದೇನೆ. ನಿನ್ನ ಕರೆಗಾಗಿ ಕಾಯುತ್ತಿರುವ .................