ಪರ್ವ ಓದಲು ಶುರು ಮಾಡಿದಂದಿನಿಂದ ಬೇರಾವುದನ್ನೂ ಓದಲಾಗಲೇ ಇಲ್ಲ. ಪರ್ವ - ನನ್ನ ಇಷ್ಟು ವರ್ಷಗಳ ಓದಿನಲ್ಲಿ ನನ್ನ ಮನದ ಮೇಲೆ ಬಹು ಪರಿಣಾಮ ಬೀರಿದ ಪುಸ್ತಕ. ಕುಳಿತಿದ್ದರೂ, ನಿಂತಿದ್ದರೂ, ಕನಸಿನಲ್ಲೂ, ಪಾತ್ರಗಳ ಗುಂಗು. ಪ್ರತಿಯೊಂದು ಪಾತ್ರದ ಚಿತ್ರಣವನ್ನು ಓದುತ್ತಿದ್ದಾಗಲೂ ನಾನೇ ಆ ಪಾತ್ರವೇನೋ ಎಂಬಂತಹ, ನನ್ನ ಬಗ್ಗೆಯೇ ಬರೆದಿದ್ದಾರೋ ಎಂಬಂತಹ ಭಾವ ಮನದೊಳಗೆ ಆವರಿಸಿಬಿಡುತ್ತಿತ್ತು. ನಾನೇ ಕುಂತಿ ಯಾಗಿದ್ದೆ, ನಾನೇ ದ್ರೌಪದಿಯಾಗಿದ್ದೆ, ನಾನೇ ಎಲ್ಲವೂ ಆಗಿದ್ದೆ. ಪ್ರತಿಯೊಂದು ಪಾತ್ರವನ್ನು ಕಲ್ಪನೆಯಲ್ಲಿ ಅನುಭವಿಸುತ್ತಿದ್ದೆ. ಹಾಗಾಗಿ ಆಯಾ ದಿನಗಳಂದು ಕನಸಿನಲ್ಲಿಯೂ ಕೂಡ ನಾನೇ ಆ ಪಾತ್ರವಾಗಿದ್ದೆ. ಯಾಕೆ ಹೀಗೆ ನನ್ನ ಮನಸ್ಸನ್ನು ಪರ್ವ ಕಾಡಿತು? ಎಂಬ ಪ್ರಶ್ನೆ ಮನವನ್ನು ಬಹಳ ಕಾಡತೊಡಗಿತು. ಉತ್ತರ ನನಗೆ ಹೊಳೆದಿದ್ದೇನೆಂದರೆ ಬಹುಶಃ ಚಿಕ್ಕಂದಿನಿಂದಲೂ ಅಮ್ಮ, ಮಾವ, ಅಜ್ಜಿಯ ಬಾಯಿಯಲ್ಲಿ ಕೇಳಿದ ಮಹಾಭಾರತದ ಕಥೆಗಳು, ಕುಂತಿ, ಭೀಷ್ಮ, ಪಾಂಡವರು ಎಲ್ಲದಕ್ಕಿಂತ ಹೆಚ್ಚಾಗಿ ಶಾಲೆಗಳಲ್ಲಿ ಸ್ಪರ್ಧೆಗಾಗಿ ಬಾಯಿ ಪಾಠ ಮಾಡಿದ್ದ ಭಗವದ್ಗೀತೆ, ಅದರಲ್ಲಿನ ಕೃಷ್ಣನ ಪಾತ್ರ, ಇವರೆಲ್ಲಾ ನಮಗೆ ಚಿರಪರಿಚಿತರೇನೋ ಎಂಬಂತಹ ಭಾವ ಮೂಡಿಸಿತ್ತೆಂದು ಕಾಣುತ್ತದೆ. ನನಗೆ ಗೊತ್ತಿಲ್ಲದೆಯೇ ನನ್ನ ಮನದ ಕಲ್ಪನೆಯಲ್ಲಿ ಇವರೆಲ್ಲರ ಬಗ್ಗೆಯೂ ಒಂದು ಚಿತ್ರಣವನ್ನು ಕಟ್ಟಿಕೊಂಡಿದ್ದೆನೆಂದು ತೋರುತ್ತದೆ. ಜೊತೆಗೆ ಭೈರಪ್ಪನವರ ಬರವಣಿಗೆಯ ಶೈಲಿ (ಇವರ ಬಗ್ಗೆ ಮಾತನಾಡಲು ತೀರಾ ಚಿಕ್ಕವಳು) ಒಂದೊಂದು ಪಾತ್ರವೂ ತನ್ನ ಅಸ್ತಿತ್ವ, ತನ್ನ ಅನಿಸಿಕೆ, ಅಭಿಪ್ರಾಯ, ತನ್ನ ಚಿಂತನೆಗಳನ್ನು ಹೇಳಿದಾಗ ಮನಸ್ಸನ್ನುಬಹು ಗಾಢವಾಗಿ ತಟ್ಟಿ ಮನ ಚಿಂತಿಸಲು ಶುರುಮಾಡತೊಡಗಿತು.
ಮೊದಲ ೩೦ ಪುಟಗಳನ್ನು ಬಹು ಬೇಸರದಲ್ಲಿಯೇ ತಿರುವಿ ಹಾಕಿದ ನಾನು, ಪರ್ವ ಚೆನ್ನಾಗಿಲ್ಲ ಎಂದು ನಿಶ್ಚಯಿಸಿ ನಿಲ್ಲಿಸಿಬಿಡಲೇ ಎಂದೆಣಿಸಿದ್ದೆ. ಕುಂತಿಯ ಪಾತ್ರದ ಚಿತ್ರಣ ಶುರುವಾದಾಗ ಸ್ವಲ್ಪ ಸ್ವಲ್ಪ ಇಷ್ಟವಾಗತೊಡಗಿದ್ದು, ಆಕೆಯ ಭಾವನೆಗಳು, ಪಾಂಡುರಾಜನ ನಿರ್ವೀಯತೆ, ನಿಯೋಗದಂತಹದಕ್ಕೆ ತನ್ನನ್ನು ತಾನು ಒಪ್ಪಿಕೊಂಡಿದ್ದು, ಮರುತ್ತನಲ್ಲಿ ಅನುರಾಗ, ಇಂದ್ರನಲ್ಲಿ ಸುಖ, ಮಾದ್ರಿಗೆ ಅವಳಿ ಮಕ್ಕಳಾದಾಗ ಅಸೂಯೆ…. ಓಹ್! ನಾನೇ ಕುಂತಿಯಾಗಿಬಿಟ್ಟಿದ್ದೆ. ಈಗ ಓದಿಗೊಂದು ಗತಿ ಸಿಕ್ಕಿತು. ಒಂದೇ ಉಸಿರಿನಲ್ಲಿ ಓದತೊಡಗಿದ ನಾನು ಪೂರ್ತಿ ಓದಿಯೇ ನಿಲ್ಲಿಸಿದ್ದು. ಪೂರ್ತಿ ಓದಿದ ಮೇಲೆ ಬಹುಶಃ ಒಂದು ದಿನ ಪೂರ್ತಿ ಏನು ಮಾಡಲು ತೋಚಲಿಲ್ಲ. ದೇಹಕ್ಕೋ, ಮನಸ್ಸಿಗೋ ಸುಸ್ತಾಗಿದ್ದು ಏನೊಂದು ತಿಳಿಯದ ಹಿಂದೆಂದೂ ಆಗಿರದಂತಹ ವಿಚಿತ್ರ ಅನುಭವ! ಹಸಿವು, ನೀರಡಿಕೆಗಳೊಂದು ತಿಳಿಯದಂತಹ ವಿಚಿತ್ರ ಸ್ಥಿತಿ! ನಾನ್ಯಾರು ಎಂಬುದನ್ನೇ ಮರೆತುಬಿಟ್ಟಿದ್ದೆ. ಈ ಮಹಾಭಾರತದ ಯುದ್ಧದಿಂದ ಆದ ಪ್ರಯೋಜನವೇನು? ಯಾರಿಗೆ ಏನು ದೊರಕಿತು? ಯಾರ ಗೆಲುವು, ಯಾರ ಸೋಲು? ಪಾಂಡವರು ಗೆದ್ದರೇ? ಯಾರೂ ಗೆಲ್ಲಲಿಲ್ಲ. ಬರೀ ಸಾವು, ನೋವು, ನಷ್ಟ. ಇಷ್ಟೆಯೇ ಜೀವನ?
ಇಡೀ ಪರ್ವದುದ್ಧಕ್ಕೂ ಕಂಡು ಬಂದಿದ್ದು, ಜೂಜು, ಮದ್ಯ, ತೀರದ ಲೈಂಗಿಕ ತೃಷೆ! ಸಾಮ್ರಾಜ್ಯ ವಿಸ್ತರಣೆ, ಯುದ್ಧ, ಸಾವು, ನೋವು, ನಷ್ಟ, ಋತುಸ್ರಾವ ನಷ್ಟವಾದರೆ ನರಕಕ್ಕೆ ಹೋಗುವ ಭಯ! ಹೆಂಗಸರೆಂದರೆ ಮಕ್ಕಳನ್ನು ಹುಟ್ಟಿಸುವ ಯಂತ್ರಗಳೇನೋ ಎಂಬಂತೆ ಭಾಸವಾಗುತ್ತದೆ. ಹೆಣ್ಣು ಬರೀ ಸಂತಾನ ಬೆಳೆಸುವ ಸಾಧನವಾದರೆ ಮದುವೆಯಾಗುವ ಜಂಜಾಟ ಏಕೆ ಬೇಕು ಎಂಬುದು ಮನಸ್ಸಿಗೆ ಒಂದು ಕ್ಷಣ ಅನ್ನಿಸದೆ ಇರುವುದಿಲ್ಲ.
ತೀರ ಕಾಡಿದ ಪಾತ್ರಗಳು - ಕುಂತಿ, ಗಾಂಧಾರಿ, ದ್ರೌಪದಿ, ಕೃಷ್ಣ, ಕರ್ಣ, ಮರುತ್ತ, ಭೀಮ, ಅರ್ಜುನ, ಭೀಷ್ಮ, ದ್ರೋಣ.
ಅವಿವಾಹಿತ ತಾಯಿಯಾದವಳನ್ನು ಒಪ್ಪುತ್ತಿದ್ದ ಸಮಾಜಕ್ಕೆ ಕುಂತಿಯ ಕಾಲದಲ್ಲಿ ಸ್ವಲ್ಪ ಸ್ವಲ್ಪ ಬದಲಾವಣೆಯಾಗುತ್ತದೆ. ಹಾಗಾಗಿಯೇ ಕರ್ಣನ ಜನನವನ್ನು ಕುಂತಿಯ ತಂದೆ ತಾಯಿ ಮುಚ್ಚಿಡುತ್ತಾರೆ. ಪಾಂಡುರಾಜನ ಲೈಂಗಿಕ ಅಶಕ್ತತೆ ಮೊದಲ ದಿನವೇ ಗೊತ್ತಾದರೂ ಮುಚ್ಚಿಡುವ ಕುಂತಿ, ಮಾದ್ರಿಯನ್ನು ವಧು ದಕ್ಷಿಣೆ ಕೊಟ್ಟು, ಆಕೆಯನ್ನು ಒಂದು ವಸ್ತುವಿನಂತೆ ಕೊಂಡುಕೊಂಡು ಬರುವ ಪದ್ಧತಿ, ಚಿಕಿತ್ಸೆಗಾಗಿ ಹಿಮಾಲಯಕ್ಕೆ ಹೊರಡುವ ಪಾಂಡು ಮಹಾರಾಜ, ಅವರನ್ನು ಹಿಂಬಾಲಿಸುವ ಪತ್ನಿಯರು, ಇತ್ತ ದೃತರಾಷ್ಟ್ರ ನಿಗೆ ಪಟ್ಟ ಕಟ್ಟಿ ಅವನಿಗೆ ಗಾಂಧಾರಿಯನ್ನು ಮದುವೆ ಮಾಡಿಸುವ ಭೀಷ್ಮ! ಅವರಿಗೆ ಮಕ್ಕಳಾದರೆ ತಾನು ದಿಗ್ವಿಜಯ ಮಾಡಿ ವಿಸ್ತರಿಸಿದ ಸಾಮ್ರಾಜ್ಯ ತನ್ನ ಕೈ ತಪ್ಪಿಹೋಗುವುದೆಂಬ ಪಾಂಡು ರಾಜನ ಭಯ. ತನಗೊಬ್ಬ ಕಾನೀನ ಪುತ್ರ ನಿದ್ದಾನೆಂದೂ ತಿಳಿಸುವ ಕುಂತಿ, (ಮದುವೆಗೆ ಮುಂಚೆಯೇ ಹುಟ್ಟಿದ ಪುತ್ರ ಕರ್ಣ), ಆದರೆ ಅವನ ಸ್ವೀಕಾರ ಮದುವೆಯಲ್ಲೇ ಆಗಿದ್ದರೇ ಜನ ಒಪ್ಪುತ್ತಿದ್ದರೆಂದೂ ತನ್ನ ನಿಸ್ಸಹಾಯಕತೆಯನ್ನು ತೋಡಿಕೊಳ್ಳುವ ಪಾಂಡು, ಪತಿಯು ಅಶಕ್ತನಾದರೆ ಅಥವಾ ಮಕ್ಕಳಿಲ್ಲದೆ ಸತ್ತರೆ ಅವನ ವಂಶಾಭಿವೃದ್ಧಿಗಾಗಿ ಅವನ ಹೆಂಡತಿಗೆ ನಿಯೋಗ ಮಾಡಿಸಬಹುದೆಂದು ಕುಂತಿಯನ್ನು ಒಪ್ಪಿಸುತ್ತಾನೆ. ಆದರೆ ಅದರ ಜೊತೆಗೊಂದು ಅಸಾಧ್ಯದ ಪ್ರಮಾಣ ‘ಈ ಪುರುಷನೊಡನೆ ನಾನು ಮೋಹಗೊಳ್ಳುವುದಿಲ್ಲ, ಅವನು ಸಮೀಪಸ್ಥನಾಗಿರುವಾಗ ನನ್ನ ಮನಸ್ಸೆಲ್ಲಾ ಪತಿಯಲ್ಲಿ ಲೀನವಾಗಿರುತ್ತದೆ, ಸಂತಾನಾಪೇಕ್ಷೆಯ ವಿನಾ ನನ್ನಲ್ಲಿ ಬೇರೆ ಬಯಕೆ ಇರುವುದಿಲ್ಲ, ಗರ್ಭ ಕಟ್ಟಿದುದು ಖಚಿತವಾದ ತಕ್ಷಣ ನಾನು ಈತನನ್ನು ಪಿತೃಸಮಾನವೆಂದು ಭಾವಿಸಿ ದೂರವಾಗುತ್ತೇನೆ!’ ದೇವ ಲೋಕದ ಧರ್ಮಾಧಿಕಾರಿಯಾದ ಯಮನೊಂದಿಗೆ ನಿಯೋಗ, ಧರ್ಮನ ಜನನ, ಆದರೆ ಮಗು ತೀರ ಗಂಭೀರ, ಹಾಗೂ ಮೈಕಟ್ಟು ಸಣ್ಣದಾಗಿರುವುದರಿಂದ ಪಾಂಡುರಾಜನಿಗೆ ತನಗೆ ಕೀರ್ತಿ ದೊರಕಿಸಿಕೊಡುವಂತಹ ಕ್ಷತ್ರಿಯ ವೀರಪುತ್ರನ ಬಯಕೆ. ಮತ್ತೆ ದೇವಲೋಕದ ಸೈನ್ಯಾಧಿಕಾರಿಯಾದ ಮರುತ್ತನೊಂದಿಗೆ ಕುಂತಿಯ ನಿಯೋಗ, ಮತ್ತೆ ಪ್ರಮಾಣ. ಬಲಿಷ್ಟನಾದ , ಎತ್ತರದ, ದೊಡ್ಡ ದೇಹದವನಾದರೂ ಮರುತ್ತ ಮಗುವಿನಂತೆ ಕುಂತಿಯ ತೋಳಿನಲ್ಲಿ ಕ್ಷೇಮ ಭಾವ ದೊರಕಿತೆಂದು ಹೇಳುವಾಗ ಕುಂತಿಗೆ ಅವನಲ್ಲಿ ಉಂಟಾಗುವ ಅನುರಾಗ. ಆಕೆ ತನ್ನೊಂದಿಗೆ ಬರುವುದಾದರೆ ಇನ್ನಾವ ಹೆಂಗಸರ ಸಂಗವನ್ನೂ ಮಾಡುವುದಿಲ್ಲವೆಂಬ ಭಾಷೆ ನೀಡುವ ಮರುತ್ತ. ‘ಸ್ವಯಂವರಕ್ಕೆ ಬೇಕಾದವರು, ಬೇಡವಾದವರು ಎಲ್ಲರೂ ಬಂದಿರುತ್ತಾರೆ. ಎಲ್ಲ ರಾಜರೂ ಒಟ್ಟು ಸೇರುವ ಸಮಾರಂಭವಾದುದರಿಂದ ಜೂಜಾಡುವವರು, ಮದ್ಯಪಾನಕ್ಕೆ ಜೊತೆ ಬಯಸುವವರೆಲ್ಲರೂ ತುಂಬುತ್ತಾರೆ. ಇವಳ ಕೈ ಹಿಡಿದರೆ ತಾನು ಸಾರ್ಥಕನೆಂಬ ಅನನ್ಯ ಉತ್ಕಟತೆಯಿಂದ ಯಾರೂ ಬಂದಿರುವುದಿಲ್ಲ. ಈಗ ಅವರನ್ನೆಲ್ಲಾ ಮೀರಿಸಿರುವ ಈ ವೀರ್ಯವಂತನು ತನಗಾಗಿ ಸ್ತ್ರೀಸಂಗ ವ್ಯಸನವನ್ನು ತ್ಯಜಿಸಿ ನನ್ನ ಹಸ್ತವನ್ನು ಯಾಚಿಸುತ್ತಿದ್ದಾನೆ. ಹೆಣ್ತನದ ಸಾರ್ಥಕತೆಯ ಅನುಭವ.
ಆತನೊಂದಿಗೆ ಹೊರಟುಬಿಟ್ಟರೇ ಎಂಬ ಭಯದಿಂದ ಇತ್ತ ವಚನವನ್ನು ನೆನಪಿಸಿ ತನ್ನ ಇಡೀ ಸುಖದ ಬಲಿಯನ್ನು ಬೇಡಿದ ಸ್ವಾರ್ಥಿ ಗಂಡ. ಇಂದ್ರನ ಮಾತುಗಳಿಗೆ ಬಲಿಯಾದ ಪಾಂಡು, ಮತ್ತೆ ಇಂದ್ರನೊಂದಿಗೆ ನಿಯೋಗಕ್ಕೆ ಸಿದ್ಧಳಾದ ಕುಂತಿ. ಆದರೆ ಈತ ಹಿಂದಿನವರಂತೆ ಹೆಂಡತಿಯಾಗೆಂದು ಕೇಳಲಿಲ್ಲ, ಭಾವನೆಗಳಲ್ಲಿ ಕಟ್ಟಿ ಹಾಕಲಿಲ್ಲ, ಸಂಗಡ ಬಾ ಎಂಬ ಧರ್ಮಸಂಕಟವನ್ನುಂಟು ಮಾಡಲಿಲ್ಲ. ಒಂದು ರೀತಿಯ ನಿರಾಳ ಹಾಗೂ ಸಂತೃಪ್ತ ಭಾವ, ಅರ್ಜುನನ ಜನನ. ಮಾದ್ರಿಯ ಋತುಸ್ರಾವ ನಷ್ಟವಾಗುತ್ತಿದ್ದರಿಂದ ಕುಂತಿಗೆ ಅವಳ ಮೇಲೆ ಕರುಣೆ, ಅಶ್ವಿನಿ ವೈದ್ಯರಿಂದ ನಿಯೋಗ. ಅವಳಿ ಪುತ್ರ ನಕುಲ, ಸಹದೇವ ರ ಜನನ. ತನ್ನದಕ್ಕಿಂತ ಇವಳ ಹೊಟ್ಟೆ ಶಕ್ತಿಯುತವಾದದ್ದೆಂದು ಕುಂತಿಗೆ ಅಸೂಯೆ, ಇನ್ನೊಮ್ಮೆ ಅವಕಾಶ ಸಿಕ್ಕರೆ ಅವಳ ಸ್ಥಾನ ತನ್ನದನ್ನು ಮೀರಿಬಿಟ್ಟರೆ ಎಂಬ ಅಸೂಯೆಯಿಂದ ಧರ್ಮವು ಲಂಪಟತನವಾಗಬಾರದೆಂಬ ಕಾರಣ ಕೊಟ್ಟು ನಿಯೋಗ ಸಾಕೆಂದ ಕುಂತಿ. ಲೈಂಗಿಕ ಅತೃಪ್ತಿಯಿಂದಾಗಿ ಪಾಂಡು ರಾಜನ ಮರಣ, ತಾನೇ ಅದಕ್ಕೆ ಕಾರಣಳಾದೆನೆಂದು ಮಾದ್ರಿಯ ಸಹಗಮನ.
ಪರ್ವ ಓದಿದ ನನ್ನ ಅನುಭವವನ್ನು ಬರೆಯತೊಡಗಿದರೆ ಮತ್ತೊಂದು ಪರ್ವವೇ ಆಗಿಬಿಡಬಹುದೆಂಬ ಸಂಶಯವೂ ಇದೆ. ಪರ್ವದ ಪ್ರತಿಯೊಂದು ವಾಕ್ಯವನ್ನೂ ಇಲ್ಲಿ ಉಲ್ಲೇಖಿಸುವ ಮನಸ್ಸಾಗುತ್ತದೆ. ಕುಂತಿಯ ಬಗ್ಗೆ ಮಾತ್ರ ಬರೆಯಲು ಸಾಧ್ಯವಾಯಿತು ನನಗೆ
No comments:
Post a Comment