ಇತ್ತೀಚಿನ ದಿನಗಳಲ್ಲಿ ನನ್ನನ್ನು ಬಹಳವಾಗಿ ಕಾಡಿದ ಪುಟ್ಟ ಕಥೆಯಿದು. ಪಾರ್ಕಿನಲ್ಲಿ ಒಬ್ಬ ವ್ಯಕ್ತಿ ತನ್ನ ಮಗಳು ಸೈಕಲ್ ತುಳಿಯುತ್ತಿರುವುದನ್ನು ನೋಡುತ್ತಾ ಕುಳಿತಿರುತ್ತಾನೆ. ಪಕ್ಕದಲ್ಲಿ ಕುಳಿತ ಮಹಿಳೆ ಅಲ್ಲಿಯೇ ಆಟವಾಡುತ್ತಿದ್ದ ಬಾಲಕನನ್ನು ತೋರಿಸಿ ‘ನನ್ನ ಮಗ’ ಎನ್ನುತ್ತಾಳೆ. ‘ಸುಂದರ ಬಾಲಕ’ ಎನ್ನುವ ಈತ ತನ್ನ ಮಗಳನ್ನು ಪರಿಚಯಿಸುತ್ತಾನೆ. ಸ್ವಲ್ಪ ಹೊತ್ತಿನ ನಂತರ ಮಗಳನ್ನು ಕುರಿತು ಹೊರಡೋಣವೇ ಎನ್ನುತ್ತಾನೆ. ಮಗಳು ‘ಪ್ಲೀಸ್ ೫ ನಿಮಿಷ ಅಷ್ಟೆ ಅಪ್ಪಾ’ ಎನ್ನುತ್ತಾಳೆ. ‘ಸರಿ’ ಎನ್ನುತ್ತಾ ಮತ್ತೆ ಈತ ಕುಳಿತುಕೊಳ್ಳುತ್ತಾನೆ. ಹೀಗೆ ಹಲವಾರು ಬಾರಿ ನಡೆಯುತ್ತದೆ.
ಇದನೆಲ್ಲಾ ನೋಡುತ್ತಾ ಪಕ್ಕದಲ್ಲೇ ಕುಳಿತಿದ್ದ ಮಹಿಳೆ ‘ನಿಮಗೆ ಬಹಳ ತಾಳ್ಮೆ’ ಎನ್ನುತ್ತಾಳೆ. ಅದಕ್ಕೆ ಆ ವ್ಯಕ್ತಿ ನೋವಿನಿಂದ ‘ತಾಳ್ಮೆಯೆಲ್ಲಾ ಏನೂ ಇಲ್ಲ. ಈಗ್ಗೆ ಕೆಲವು ದಿನಗಳ ಹಿಂದೆ ಅವಳ ಅಣ್ಣ ಸೈಕಲ್ ತುಳಿಯುತ್ತಿದ್ದಾಗ ಲಾರಿಯೊಂದು ಗುದ್ದಿದ ಕಾರಣ ತೀರಿಹೋದ. ಆಗ ಆತನಿಗಾಗಿ ನಾನು ಹೆಚ್ಚಿನ ಸಮಯ ಕೊಡಲಿಲ್ಲ. ಈಗ ಆತ ಕನಿಷ್ಟ ಪಕ್ಷ ೫ ನಿಮಿಷಕ್ಕಾದರೂ ಸಿಗುವುದಾದರೆ ಅವನಿಗಾಗಿ ನನ್ನೆಲ್ಲವನ್ನೂ ಕೊಡಲು ಸಿದ್ದನಿದ್ದೇನೆ. ಆದರೆ ಇದು ಸಾಧ್ಯವೇ?
ಈಗ ಮತ್ತೆ ಆ ತಪ್ಪನ್ನು ಮತ್ತೆ ಮಾಡಲು ನಾನು ತಯಾರಿಲ್ಲ. ನನ್ನ ಮಗಳು ೫ ನಿಮಿಷ ಆಡಲು ಸಮಯ ಬೇಡುತ್ತಿದ್ದರೆ, ನನಗೆ ಅವಳ ಆಟ ನೋಡಲು ೫ ನಿಮಿಷ ಸಿಗುತ್ತಿದೆ! ನಮಗೆ ಯಾರಿಗಾದರೂ ಏನನ್ನಾದರೂ ಹೇಳಬೇಕೆಂದಿದ್ದರೆ ಸಮಯ ವ್ಯರ್ಥ ಮಾಡದೇ ಆ ಗಳಿಗೆಯೇ ಹೇಳಿಬಿಡಬೇಕೆಂಬ ನೀತಿಯುಳ್ಳ ಈ ಕಥೆ ಮನಸ್ಸನ್ನು ತುಂಬಾ ಕಾಡಿತು
ಇದೇ ಗುಂಗಿನಲ್ಲಿದ್ದ ನನಗೆ ಗೆಳೆಯನೊಬ್ಬ ಹೇಳಿದ ಮತ್ತೊಂದು ಘಟನೆ ಇದಕ್ಕೆ ಪೂರಕವಾಗಿತ್ತು. ಆತನ ಗೆಳೆಯ ನಾಟ್ಯ ಕಲಾವಿದ ಜೊತೆಗೆ ಚಿತ್ರಕಲೆಯಲ್ಲಿಯೂ ಕೂಡ ನೈಪುಣ್ಯತೆ ಹೊಂದಿದ್ದವರು. ಇವನು ಅವರಿಗೆ ನಾಟ್ಯದ ಭಂಗಿಗಳ ಚಿತ್ರಗಳನ್ನು ರಚಿಸಿಕೊಡುವಂತೆ ಕೇಳಿಕೊಂಡಿದ್ದನಂತೆ. ಇನ್ನೂ ಬಹಳ ಸಮಯವಿದೆ, ಇವತ್ತು ಮಾಡಿಕೊಡುತ್ತೇನೆ, ನಾಳೆ ಮಾಡಿಕೊಡುತ್ತೇನೆ ಎಂದಾತ ಹಠಾತ್ತನೆ ಮೊನ್ನೆ ತೀರಿಹೋದರಂತೆ! ನನ್ನ ಗೆಳೆಯ ಬಹಳವಾಗಿ ನೊಂದಿದ್ದ. ಹೀಗಾಗುತ್ತೆಯೆಂದು ಗೊತ್ತಿದ್ದರೆ ಹೇಗಾದರೂ ದುಂಬಾಲು ಬಿದ್ದು ಅವರ ಬಳಿ ಚಿತ್ರ ಬರೆಸಿಯೇ ಬಿಡುತ್ತಿದ್ದೆನೆಂದು ಅಳುತ್ತಿದ್ದ.
ನಾವ್ಯಾಕೆ ಹೀಗೆ? ನಮ್ಮ ಪ್ರೀತಿಪಾತ್ರರಿಗೆ ಪ್ರೀತಿ ತೋರಿಸಲು ಕೂಡ ನಮ್ಮ ಬಳಿಯಲ್ಲಿ ಸಮಯವಿರುವುದಿಲ್ಲ. ಯಾವುದೋ ಆಸೆಗೆ, ಮೋಹಕ್ಕೆ ಬಲಿಬಿದ್ದು ಓಡುತ್ತೇವೆ, ಓಡುತ್ತೇವೆ. ಸಾಕಾಗಿ ನಿಂತಾಗ ನಮ್ಮ ಹಿಂದೆ ಯಾರೂ ಇರುವುದೇ ಇಲ್ಲ. ಆಗ ಕಳೆದುಕೊಂಡದ್ದಕ್ಕೆ ಮರುಗಬಹುದೇ ವಿನಃ ಮತ್ತೆ ಆ ಕಾಲ ನಮಗೆ ಸಿಗುವುದೇ ಇಲ್ಲ. ಇನ್ನಾದರೂ ನಾವೆಲ್ಲರೂ ಎಚ್ಚೆತ್ತು ನಾವು ಪ್ರೀತಿಸುವ, ನಮ್ಮನ್ನೂ ಪ್ರೀತಿಸುವ ಜೀವಗಳಿಗೆ ಒಂದು ಕೃತಜ್ಞತೆಯನ್ನು ಹೇಳೋಣವೇ? ಆ ಕೆಲಸ ಇಂದೇ, ಈಗಲೇ ಇನ್ನೈದು ನಿಮಿಷಗಳಲ್ಲಿಯೇ ಮಾಡೋಣವೇ?
No comments:
Post a Comment