Sunday, December 30, 2012

ನಾವು ಹೇಳುವುದಾದರೂ ಯಾರಿಗೇ? :(


ಸ್ವಪ್ನ ಸಾರಸ್ವತದಲ್ಲಿ ಒಂದು ಮಾತಿದೆ, ನಾಗ್ಡೋ ಬೇತಾಳ ಹೇಳುವುದು ‘ಮಾತುಗಳು ಅರ್ಥ ಕಳೆದುಕೊಳ್ಳುತ್ತವೆ! ಶಾಪಗಳು ತಗಲುವುದಿಲ್ಲ, ಅಂಥ ಕಾಲ ಬರುತ್ತದೆ! :( ಹ್ಮ್. ಅಂಥ ಕಾಲ ಬಂದಿದೆ.  ಮೊನ್ನೆ ಡೆಲ್ಲಿ ರೇಪ್ ನಂಥ ಭೀಕರ ದೌರ್ಜನ್ಯ ವಾಗಿರಬಹುದು ಅಥವಾ ಪ್ರತಿ ನಿತ್ಯ ನಡೆಯುತ್ತಿರುವ ಇಂತಹ ಅಮಾನುಷ ಘಟನೆಗಳನ್ನು ನೋಡುತ್ತಿದ್ದಾಗಲೆಲ್ಲಾ ನನಗೆ ಇದೇ ಮಾತು ನೆನಪಿಗೆ ಬರುತ್ತದೆ.

ನಾನು ಸಣ್ಣವಳಾಗಿದ್ದಾಗ, ಅಜ್ಜನ ಊರಿಗೆ ಹೋಗಿದ್ದಾಗ (ಮಂಗಳೂರಿನ ಬಳಿಯ ಪುಟ್ಟ ಹಳ್ಳಿ)  ಬಾಗಿಲುಗಳಿಗೆ ಚಿಲಕವೇ ಹಾಕುತ್ತಿರಲಿಲ್ಲ,  ಮನೆಗಳಲ್ಲಿ ಅಲ್ಮೇರಾ ಇವುಗಳು ಕೂಡ ಮರದ್ದೇ ಆಗಿದ್ದು, ಬೀಗ ಎಂಬುದೆಲ್ಲಾ ನಾನು ನೋಡಿರಲಿಲ್ಲ. ತಾಮ್ರದ ಬಿಂದಿಗೆಗಳು ಹಾಗೇಯೇ ಬಾವಿ ಕಟ್ಟೆಯ ಬಳಿ ಇಟ್ಟು ಬರುತ್ತಿದ್ದರು. ನಾನು ಬೆಂಗಳೂರಿನಿಂದ ಹೋಗುತ್ತಿದ್ದರಿಂದ ನನಗೆ ಇವೆಲ್ಲವೂ ಆಶ್ಚರ್ಯ!  ಅಣ್ಣನನ್ನು ಕೇಳಿದ್ದಕ್ಕೆ, ಯಾರೂ ತೆಗೆದುಕೊಂಡು ಹೋಗುವುದಿಲ್ಲ, ಅಷ್ಟು ನಂಬಿಕೆ ಇದೆ ಎಂದು ಹೇಳುತ್ತಿದ್ದ.  ಆದರೆ ಆಗ ಬೆಂಗಳೂರಿನಲ್ಲಿ ಸ್ವಲ್ಪ ಕಳ್ಳತನದ ಭಯವಿತ್ತು.  ಆದರೂ ಸಿಕ್ಕಿದನ್ನಷ್ಟೇ ಅಂದರೆ, ಕಿಟಕಿಯಲ್ಲಿಟ್ಟ ವಾಚು, ರೇಡಿಯೋ,  ಹೊರಗೆ ಒಣಗಿ ಹಾಕಿದ ಬಟ್ಟೆಗಳು, ಇಂತಹವುಗಳನ್ನೇ ತೆಗೆದುಕೊಂಡು ಹೋಗುತ್ತಿದ್ದರೇ ವಿನಃ ಮನೆಗೆ ನುಗ್ಗಿ, ದೋಚಲು ಅಥವಾ ಮನೆಯವರನ್ನು ಕೊಲೆ ಮಾಡಲು ಭಯವಾಗುತ್ತಿತ್ತು.  ಏಕೆಂದರೆ ಒಂದು ಕೂಗು ಹಾಕಿದ ತಕ್ಷಣ ಅಕ್ಕ, ಪಕ್ಕದ ಮನೆಯವರೆಲ್ಲರೂ ಸೇರಿ, ಕಳ್ಳನನ್ನು ಚಚ್ಚಿ ಹಾಕುತ್ತಿದ್ದರು. ಇನ್ನೂ ಜಿಂಡಾಲ್ ಮುಂತಾದ ಕ್ವಾರ್ಟರ್ಸ್ ಮನೆಗಳಲ್ಲಿ (ಬೆಂಗಳೂರಿನಲ್ಲಿಯೂ ಕೂಡ) ಹೊರಗೆ ಎಲ್ಲಿಗೆ ಹೋಗುವಾಗಲೂ ಚಿಲಕ ಹಾಕುವ ಪದ್ಧತಿ ಇರುತ್ತಿರಲಿಲ್ಲ. ನೆರೆಹೊರೆಯವರಲ್ಲಿ ಅಷ್ಟೊಂದು ನಂಬಿಕೆ ಆಗ. 

ಇನ್ನೂ ಮನೆಯಲ್ಲಿ ಕೆಲಸದವಳನ್ನು ಇಟ್ಟುಕೊಳ್ಳುವ ಪದ್ಧತಿ ಕೂಡ ಇರಲಿಲ್ಲ. ಮನೆಯವರೇ ಮಕ್ಕಳಾದಿಯಾಗಿ ಎಲ್ಲರೂ ಸೇರಿಕೊಂಡು ಮನೆಕೆಲಸವನ್ನೆಲ್ಲಾ ಮಾಡಿಕೊಳ್ಳುತ್ತಿದ್ದರು. ಮನೆಯಲ್ಲಿನ ದೊಡ್ಡವರು ಎಲ್ಲಿಗಾದರೂ ಹೋಗುವುದಾದರೆ, ಮಕ್ಕಳು ಶಾಲೆಯಿಂದ ಬಂದ ಮೇಲೆ ಪಕ್ಕದ ಮನೆಯವರು ನೋಡಿಕೊಳ್ಳುತ್ತಿದ್ದರು.  ಒಬ್ಬರಿಗೊಬ್ಬರು ಸಹಾಯ ಮಾಡುತ್ತಿದ್ದರು.  ಎಲ್ಲರಲ್ಲಿಯೂ ಒಂದು ಬದ್ಧತೆ ಇತ್ತು.  ಸಹಕಾರವಿತ್ತು. ಕಿತ್ತಾಡಿದರೂ ಅದು ಆ ಕ್ಷಣಕಷ್ಟೇ ಆಗಿರುತ್ತಿತ್ತು. ನಂತರ ಒಂದಿಷ್ಟು ದಿವಸಗಳಾದ ಮೇಲೆ, ಯಾವುದೋ ಜಾತ್ರೆಯೋ, ಹಬ್ಬವೋ ಬಂದಾಗ ಮತ್ತೆ ಒಂದಾಗುತ್ತಿದ್ದರು. ಮಕ್ಕಳು ಕೂಡ ಹೊಡೆದಾಡಿಕೊಂಡರೂ, ಒಂದಷ್ಟು ಕ್ಷಣಗಳಾದ ಮೇಲೆ ಮತ್ತೆ ಒಂದುಗೂಡಿ ಆಡುತ್ತಿದ್ದರು. ಇಲ್ಲಿ ಅವರು ಶ್ರೀಮಂತರು, ನಾವು ಬಡವರು, ಅವರು ಓದಿದವರು, ನಾವು ಅನಕ್ಷರಸ್ಥರು ಎಂಬ ಭೇಧ ಭಾವ ಇರುತ್ತಿರಲಿಲ್ಲ. ಮಕ್ಕಳು ಮನೆಯಲ್ಲಿ ಗಲಾಟೆ ಮಾಡದಿದ್ದರೇ ಸೈ, ಹೊರಗೆ ಹೋಗಿ ಆಡಿಕೊಳ್ಳಲಿ ಎಂಬುದಷ್ಟೇ ದೊಡ್ಡವರು ಯೋಚಿಸುತ್ತಿದ್ದರು. ಅಣ್ಣ ಒಮ್ಮೆ ಕೆಟ್ಟ ಪದವನ್ನು ಕಲಿತು ಬಂದಾಗ ಅಮ್ಮ ಬಾಸುಂಡೆ ಬರುವಂತೆ ಬಾರಿಸಿದ್ದು ನನಗೆ ಈಗಲೂ ನೆನಪಿದೆ.  ಅಮ್ಮ ಒಂದಕ್ಷರವೂ ಪಕ್ಕದ ಮನೆಯ ಹುಡುಗನಿಗೆ ಬೈದಿರಲಿಲ್ಲ. ನಮ್ಮ ಮನೆಯಲ್ಲಿ ಇಷ್ಟು ಸಂಸ್ಕಾರವಿದ್ದು ನೀನು ಕಲಿತಿದ್ದು ಹೇಗೆ? ಎಂಬುದಷ್ಟೇ ಅವಳ ಪ್ರಶ್ನೆಯಾಗಿತ್ತು! ಅಷ್ಟೇ ಕೊನೆ, ಅಣ್ಣ ಇವತ್ತಿಗೂ ಎಷ್ಟೇ ಕೋಪ ಬಂದರೂ, ಕೆಟ್ಟ ಪದಗಳನ್ನು ಉಪಯೋಗಿಸುವುದಿಲ್ಲ. ಅವನಿಗೆ ಹೊಡೆದದ್ದು ನೋಡಿದ ನನಗೇ ಬುದ್ಧಿ ಕಲಿಯಲು ಅಷ್ಟೇ ಸಾಕಿತ್ತು!

ಬಾಯಿ ಮಾತಿನ ಆಧಾರದ ಮೇಲೆ ಅಪ್ಪ, ಅವರ ಕಸಿನ್ ಒಬ್ಬನಿಗೆ ತಾವು ಕೆಲಸ ಮಾಡುತ್ತಿದ್ದ ಜಾಗದಲ್ಲೇ ಕೆಲಸ ಕೊಡಿಸಿದ್ದರು.  ಆತ ಕಲೆಕ್ಟ್ ಮಾಡಿದ ಹಣವನ್ನೆಲ್ಲಾ ಸರಿಯಾಗಿ ಬ್ಯಾಂಕ್ ಗೆ ಕಟ್ಟದೇ, ಸ್ನೇಹಿತನ ಮಾತು ಕೇಳಿ ಹಣವನ್ನು ಹಾಳು ಮಾಡಿಕೊಂಡು ಓಡಿ ಹೋದ.  ಅಪ್ಪ ಕಷ್ಟ ಪಟ್ಟು, ಬಡ್ಡಿ, ಚಕ್ರಬಡ್ಡಿ ಎಂದು ಸಾಲ ತಂದು ಮಾತು ಉಳಿಸಿಕೊಂಡಿದ್ದರು.  ಹಾಗೆಯೇ ಯಾವುದೇ ಸಹಿ ಮಾಡಿಸಿಕೊಳ್ಳದೇ ಸಾಲ ಕೊಟ್ಟಿದ್ದವರಿಗೂ ಕೂಡಾ ತಮ್ಮೆಲ್ಲಾ ಶಕ್ತಿ ಮೀರಿ (ಹೆಂಡತಿ, ಮಕ್ಕಳಿಗೆ ತೊಂದರೆಯಾದರೂ ಕೂಡ), ಹಣ ತೀರಿಸಿದ್ದರು. ನಾನು ಆಗ ಬಹಳ ಸಣ್ಣವಳು.  ನನಗೇ ತಿಳಿದಂತೆ, ಅಪ್ಪ ತನ್ನನ್ನು ಈ ಸ್ಥಿತಿಗೆ ತಂದಿಟ್ಟ ತನ್ನ ತಮ್ಮನನ್ನು ಒಮ್ಮೆಯೂ ಬೈದುಕೊಂಡಿರಲಿಲ್ಲ. ಅಪಾರವಾಗಿ ನೊಂದಿದ್ದರು. ಅಮ್ಮ ಕೂಡ ನಾನು ಹಿಂದೆ ಮಾಡಿದ ಯಾವುದೋ ಕರ್ಮ ಎಂದೇ ನೊಂದುಕೊಳ್ಳುತ್ತಿದ್ದಳು ಹೊರತು ಅದನ್ನು ಲೋಕದ ಮೇಲೆ ತೀರಿಸಿಕೊಂಡಿರಲಿಲ್ಲ. ಇದೇ ಚಿಂತೆಯಲ್ಲಿ ಅನಾರೋಗ್ಯದಿಂದ ತೀರಿಕೊಂಡ ನಂತರ, ಉಳಿದಿದ್ದ ಅಲ್ಪಸ್ವಲ್ಪ ಸಾಲವನ್ನು ಅಣ್ಣ ತೀರಿಸಿದ್ದ. ಅಪ್ಪನಿಗೆ ಅವರು ಕೊಟ್ಟಿದ್ದಾರೆ ಎಂಬ ಯಾವುದೇ ಪ್ರೂಫ್ ಇಲ್ಲದಿದ್ದರೂ ಮಾತು ಮುಖ್ಯವಾಗಿತ್ತು. ಅಷ್ಟರಮಟ್ಟಿಗಿನ ಬದ್ಧತೆ ಎಲ್ಲರಲ್ಲಿಯೂ ಇತ್ತು.   ಅವರು ಮಾಡಿದ್ದು ಅವರಿಗೇ ಎಂದಷ್ಟೇ ಹೇಳಿ ತನ್ನೆಲ್ಲಾ ಸಿಟ್ಟನ್ನು ತೀರಿಸಿಕೊಳ್ಳುತ್ತಿದ್ದ ಅಮ್ಮ, ಈಗಲೂ ತನ್ನ ಆ ಮೈದುನನನ್ನು (ತನ್ನಿಡೀ ಬದುಕೇ ಆತನಿಂದ ಹಾಳಾಗಿದ್ದರೂ!) ಮಾತನಾಡಿಸುತ್ತಾಳೆ ಎಂದರೆ ಎಂಥವರಿಗಾದರೂ ಆಶ್ಚರ್ಯವಾಗಬಹುದು.

ಹಾಗಾದರೇ ಹೆಣ್ಣಿನ ಮೇಲೆ ಈ ಹಿಂದೆ ದೌರ್ಜನ್ಯ ಆಗುತ್ತಿರಲಿಲ್ಲವೇ?  ರಾಮಾಯಣ, ಮಹಾಭಾರತ ಕಾಲದಿಂದಲೂ ಹೆಣ್ಣಿನ ಮೇಲೆ ಈ ತರಹದ ಹಿಂಸೆ / ದೌರ್ಜನ್ಯ ನಡೆಯುತ್ತಿತ್ತು. ಆದರೆ ನಮಗೆ ತಿಳಿಯುತ್ತಿರಲಿಲ್ಲ. ತಿಳಿದರೂ, ನಮಗೆಲ್ಲಾ ದ್ರೌಪದಿಯನ್ನು ಕೆಣಕಿದ ದುರ್ಯೋಧನ, ದುಶ್ಯಾಸನ, ಕೀಚಕರ ಗತಿ ಹೀಗಾಯಿತು, ಹೆಣ್ಣನ್ನು ಕೆಣಕಿದರೆ ಹೀಗಾಗುವುದು ಎಂಬ ನೀತಿ ಪಾಠ ಮನೆ, ಮನೆಯಲ್ಲೂ ನಡೆಯುತ್ತಿತ್ತು.  ಪ್ರತಿ ವರ್ಷ ಹೋಳಿಹುಣ್ಣಿಮೆಯಂದು ಕಾಮದಹನ ನಡೆದಾಗ ಹೇಳುತ್ತಿದ್ದ ಎಷ್ಟೋ ವಾಕ್ಯಗಳು ಆಗ  (ಕಾಮಣ್ಣ ಮಕ್ಕಳೇ, ಕಾಳೇ, ಸೂಳೇ ಮಕ್ಕಳೇ... ಅರ್ಧರ್ಧ ನೆನಪಿದೆ) ನನಗೆ (ಚಿಕ್ಕವಳಿದ್ದದ್ದರಿಂದ) ಅರ್ಥವಾಗದಿದ್ದರೂ, ಯುವಕರಿಗೆ ನೀತಿಪಾಠವಾಗಿರುತ್ತಿತ್ತು. ಸಮಾಜದಲ್ಲಿ ನಾವು ಹೇಗಿರಬೇಕು? ಎಂಬುದನ್ನು ಸೂಚ್ಯವಾಗಿ, ಸೂಕ್ಷ್ಮವಾಗಿ ತಿಳಿಸುತ್ತಿದ್ದರು. ದೇವಸ್ಥಾನಗಳಲ್ಲಿ ನಡೆಯುವ ಪೂಜೆ, ಪುನಸ್ಕಾರಗಳು, ಮೈಮೇಲೆ ಬರುವ ದೇವರು, ದೆವ್ವ ಎಲ್ಲವೂ ನೀತಿ ಹೇಳುತ್ತಿತ್ತೇ ಹೊರತು ಕೆಟ್ಟದ್ದು ಮಾಡಿ ಎಂದೆಲ್ಲೂ ಹೇಳುತ್ತಿರಲಿಲ್ಲ.  ಹಾಗೂ ಎಲ್ಲರೂ ಭಯಭಕ್ತಿಯಿಂದಲೇ ಇವೆಲ್ಲಾ ಸಮಾರಂಭಗಳಲ್ಲಿ ಪಾಲ್ಗೊಳ್ಳುತ್ತಿದ್ದರು. ಒಳ್ಳೆಯವರಿಗೆ ಒಳ್ಳೆಯದೇ ಆಗುತ್ತದೆ, ಕೆಟ್ಟದು ಮಾಡಿದರೆ ದೇವರು ಶಿಕ್ಷೆ ಕೊಡುತ್ತಾನೆ ಎಂಬ ಭಯವಿತ್ತು. ಏನೇ ದೌರ್ಜನ್ಯಗಳು ಬೆಳಕಿಗೆ ಬರುವಷ್ಟು ದಿನಗಳು ಮಾತ್ರ ಅಪರಾಧಿಗಳು ಸುರಕ್ಷಿತರಾಗಿರುತ್ತಿದ್ದರು. ಸಿಕ್ಕಿ ಬೀಳುವೆನೆಂಬ ಭಯ, ಜೊತೆಗೆ ಹೀಗೆ ಮಾಡಿದೆನೆಂಬ  ಗಿಲ್ಟ್  ಅವರಿಗೆ ಕಾಡುತ್ತಿರುತ್ತಿತ್ತು.  ಹೀಗೆಲ್ಲಾ ಪೈಶಾಚಿಕ ಕೃತ್ಯ ನಡೆಸಿ, ಆರಾಮಾಗಿ ಬೆಳಿಗ್ಗೆ ಎದ್ದು ಕೆಲಸಕ್ಕೆ ಹೋಗುವಂಥ ಕ್ರೂರ ಮನಸ್ಥಿತಿ ಇರಲಿಲ್ಲ!

ಇನ್ನೂ ಶಾಲೆಗಳಲ್ಲಂತೂ ದಿನಕ್ಕೊಂದು ಕಥೆ, ಅದರ ನೀತಿ ಪಾಠವನ್ನು ನಾವು ಬರೆದುಕೊಂಡು ಹೋಗಬೇಕಿತ್ತು. ಚೆನ್ನಾಗಿ ಓದುತ್ತಿದ್ದವರೇ ಶಾಲಾ ಲೀಡರ್ ಗಳಾಗುತ್ತಿದ್ದರು. ತಂಟೆ ಮಾಡಿದವರಿಗೆ, ಸೋಮಾರಿತನ ಮಾಡುವವರಿಗೆ ಬಾರು ಕೋಲಿನಿಂದ ಅಂಗೈಗೆ ಪೆಟ್ಟು  ಬೀಳುತ್ತಿತ್ತು.  ಪ್ರತಿ ಬಾರಿಯು ಮೊದಲಿಗನಾಗಿ ಬಂದು, ಒಮ್ಮೆ ಯಾವುದೇ ಕಾರಣಕ್ಕಾಗಿ, ಆ ಸ್ಥಾನದಿಂದ ಕೆಳಗಿಳಿದರೆ, ನಿರ್ದಾಕ್ಷಿಣ್ಯವಾಗಿ ಆತನ ಲೀಡರ್ ಷಿಪ್ ಕಿತ್ತುಕೊಳ್ಳಲಾಗುತಿತ್ತು. ಯಾವುದೇ ರೀತಿಯ ವಶೀಲಿ ನಡೆಯುತ್ತಿರಲಿಲ್ಲ. ಹುಡುಗಿಯರು ಒಟ್ಟಿಗೆ ಕುಳಿತರೆ, ಹುಡುಗರು ಒಟ್ಟಿಗೆ ಕುಳಿತರೆ ಗಲಾಟೆಯಾಗುವುದೆಂದು, ಒಬ್ಬ ಹುಡುಗ, ಒಬ್ಬ ಹುಡುಗಿ ಹೀಗೆ. ಪಕ್ಕದಲ್ಲಿ ಕೂಡಿಸುತ್ತಿದ್ದರು. ಹೈಸ್ಕೂಲುಗಳಲ್ಲಿಯೂ ಹೀಗೆ ಇರುತ್ತಿತ್ತು. ಯಾರಾದರೂ ತಪ್ಪು ಮಾಡಿದರೆ, ಸರಿ ಮಾಡಿದವ / ದವಳ ಕಾಲ ಕೆಳಗೆ ತೂರಿಸುತ್ತಿದ್ದರು.  ಇಂಥ ಶಿಕ್ಷೆಗಳಿಗೆಲ್ಲಾ ಹುಡುಗ, ಹುಡುಗಿ ಎಂಬ ಭೇಧ ಭಾವ ಇರುತ್ತಿರಲಿಲ್ಲ. ಪಕ್ಕದಲ್ಲಿ ಕೂತಾಕ್ಷಣ, ಲೈಂಗಿಕ ಬಯಕೆಗಳಾಗಲೀ, ತೀಟೆಗಳಾಗಲೀ, ದೈಹಿಕವಾಗಿ ಬಯಸುತ್ತಿದ್ದದ್ದಾಗಲೀ, ಇವ್ಯಾವುದೂ ಕಾಡುತ್ತಿರಲಿಲ್ಲ. ಶಿಕ್ಷಕ / ಶಿಕ್ಷಕಿಯರನ್ನು ಕಂಡರೆ ಆರಾಧನಾ ಭಾವ ಇರುತ್ತಿತ್ತೇ ಹೊರತು ಲೈಂಗಿಕ ಆಸೆಗಳು ಅರಳುತ್ತಿರಲಿಲ್ಲ. ಮದುವೆಯಾಗದೇ ಇವೆಲ್ಲವೂ ತಪ್ಪು ಎನ್ನುವ ಭಾವ ಹೆಚ್ಚು ಕಡಿಮೆ ಎಲ್ಲರಲ್ಲಿಯೂ ಇತ್ತು.  ಲೈಂಗಿಕ ಶೋಷಣೆಗೆ ಹೆಣ್ಣು ಮಕ್ಕಳು, ತಮ್ಮ ಮನೆಯವರಿಂದಲೇ, ದೊಡ್ಡವರಿಂದಲೇ ಬಲಿಯಾಗುತ್ತಿದ್ದರೇ ಹೊರತು, ಮತ್ತೊಬ್ಬ ಸಹಪಾಠಿ ಮಾಡುತ್ತಿದ್ದದ್ದು ಅತಿ ವಿರಳ. ಯಾವುದೇ ಶಾಲಾ ದಿನಾಚರಣೆಗಳೂ ಸುಮ್ಮನೇ ಕಾಟಾಚಾರಕ್ಕೆ ಮಾಡುತ್ತಿರಲಿಲ್ಲ. ನನಗೆ ಈಗಲೂ ವಿಶ್ವ ವಿನೂತನ ಹಾಡು ನಿನ್ನೆ, ಮೊನ್ನೆ ಹಾಡಿದಂತಿದೆ. ಅಷ್ಟು ತಲ್ಲೀನರಾಗಿ ಹಾಡುತ್ತಿದ್ದೆವು. ಭಗತ್ ಸಿಂಗ್, ಅಜಾದ್ ಇವರೆಲ್ಲರ ಹೆಸರು ಕೇಳಿದರೆ ಮೈಮನವೆಲ್ಲಾ ರೋಮಾಂಚನವಾಗುತ್ತಿತ್ತು.

ಮಾಧ್ಯಮಗಳು ಗಮನವನ್ನು ಕೊಡುತ್ತಿರಲಿಲ್ಲವೋ? ಘಟನೆಗಳೇ ನಡೆಯುತ್ತಿರಲಿಲ್ಲವೋ? (ನಾನು ಚಿಕ್ಕವಳಿದ್ದರಿಂದ ಓದುತ್ತಿರಲಿಲ್ಲವೋ?) ಒಟ್ಟಿನಲ್ಲಿ ಇಷ್ಟೊಂದು ರೇಪ್ ಘಟನೆಗಳು ನಮ್ಮ  ಗಮನಕ್ಕೆ ಬರುತ್ತಿರಲಿಲ್ಲ. ಇನ್ನೂ ಸಿನೆಮಾಗಳಾಗಬಹುದು, ಪುಸ್ತಕಗಳಾಗಬಹುದು ಯಾವುದೇ ಕಲಾ ಮಾಧ್ಯಮಗಳಲ್ಲಿಯೂ ಅಪರಾಧಿಗಳ ಅಂತ್ಯ ಭೀಕರವಾಗಿರುತ್ತಿತ್ತು. ಆತ ಚಿತ್ರದುದ್ದಕ್ಕೂ ಎಷ್ಟೇ ಕಷ್ಟ ಪಟ್ಟರೂ, ಯಾವುದೇ ತಪ್ಪು ಮಾಡದ ನಾಯಕನೇ ಅಂತ್ಯದಲ್ಲಿ ಗೆಲ್ಲುತ್ತಿದ್ದ! ಪ್ರತಿಯೊಬ್ಬರೂ ತಮ್ಮನ್ನು ನಾಯಕನ ಪಾತ್ರದಲ್ಲಿಯೇ ಗುರುತಿಸಿಕೊಳ್ಳುತ್ತಿದ್ದರು. ಆ ಮೂಲಕ ನೀಚ ಕೆಲಸಗಳನ್ನು ಮಾಡಿದ ವಿಲನ್ ನನ್ನು ಕೊಚ್ಚಿ ಕೊಲ್ಲುತ್ತಿದ್ದರು. ಬಲಾತ್ಕಾರಕ್ಕೆ ಒಳಗಾಗುವ ನಾಯಕನ ತಂಗಿ, ಆ ಕಾಮುಕನನ್ನು ಕೊಲ್ಲುವ ನಾಯಕ! ಒಂದೇ, ಎರಡೇ!  ನಮ್ಮ ಚಿತ್ರ ನಟಿ ತಾರಾ ಎಷ್ಟು ಚಿತ್ರಗಳಲ್ಲಿ ಬಲಾತ್ಕಾರಕ್ಕೊಳಗಾಗಿ ಸತ್ತಿಲ್ಲ?!  ಉಪ್ಪಾ ತಿಂದ ಮೇಲೆ ನೀರ ಕುಡಿಯಲೇ ಬೇಕು ಎನ್ನುತ್ತಿದ್ದ ಚಿತ್ರರಂಗ ಇದ್ದಕಿದ್ದಂತೆ ತಪ್ಪು ಮಾಡದವ್ರು ಯಾರವ್ರೇ? ಅಂತಾ ಹಾಡಲು ಶುರು ಮಾಡಿತು. ಸಮಾಜದಿಂದ ಚಿತ್ರಗಳು ತಯಾರಾಗುತ್ತವೆಯೋ? ಚಿತ್ರಗಳಿಂದ ಸಮಾಜ ಪ್ರಭಾವಿತವಾಗುತ್ತದೆಯೋ? ಅರಿಯದು! ಒಟ್ಟಿನಲ್ಲಿ ಇದ್ದಕ್ಕಿದ್ದಂತೆ ಎಲ್ಲವೂ ಬದಲಾಯಿತು.  ನಮ್ಮ ಟಿವಿ ಧಾರಾವಾಹಿಗಳಿಂದ ಹಿಡಿದು ಚಲನಚಿತ್ರಗಳವರೆಗೂ ಎಲ್ಲದರಲ್ಲಿಯೂ ಮೌಲ್ಯಗಳು ಕುಸಿಯಿತು.

ಹಾಗಾದರೇ ಇಷ್ಟೆಲ್ಲಾ ಇದ್ದದ್ದು ಹಠಾತ್ತಾಗಿ ಬದಲಾಗಿದ್ದು ಹೇಗೆ?  ನಾವೇಕೇ ಇಷ್ಟು ಕ್ರೂರಿಗಳಾಗಿದ್ದೇವೆ?  ನಮ್ಮೆಲ್ಲರಿಗೂ ಏನಾಗುತ್ತಿದೆ?  ನಮ್ಮ ಮುಂದಿನ ಪೀಳಿಗೆಗೆ ನಾವು ಕೊಡುತ್ತಿರುವುದು ಏನನ್ನೂ?  ಏನನ್ನೂ ನಾವು ಸೂಚಿಸುತ್ತಿದ್ದೇವೆ? ಬೆಳಿಗ್ಗೆ ೧೦ ರಿಂದ ೫ ಗಂಟೆಯವರೆಗೂ ಕೆಲಸ, ನಂತರ ಏನಾದರೂ ಹವ್ಯಾಸ, ಹಾಡು, ಹಸೆ, ಹರಿಕಥೆ, ದೇವಸ್ಥಾನ, ನೆರೆಹೊರೆಯವರು ಎಂದಿದ್ದ ಹಿರಿಯರು, ಶಾಲೆಗೆ ಹೋಗಿ ಬಂದು, ರಾತ್ರಿಯ ತನಕ ಆಡುತ್ತಿದ್ದ ಮಕ್ಕಳು, ಒಟ್ಟಿನಲ್ಲಿ ಎಲ್ಲರಲ್ಲೂ ಸಮಾಧಾನದ ಸ್ಥಿತಿ ಇರುತ್ತಿತ್ತು.  ಹಣದ ಕೊರತೆ ಇದ್ದರೂ ಕೂಡ ಯಾರಲ್ಲೂ ಒತ್ತಡವಿರುತ್ತಿರಲಿಲ್ಲ.  ಇದ್ದಕಿದ್ದಂತೆ ಗ್ಲೋಬಲೈಸೇಷನ್ ಎಂದು ಅಥವಾ ಐಟಿ, ಬಿಟಿ, ಬಿಪಿಒ ಉದ್ಯಮಗಳು ಶುರುವಾದ ಮೇಲಂತೂ ಇದ್ದಕ್ಕಿದ್ದಂತೆ, ಮನೆ-ಮಠಗಳ, ಸಮಾಜದ ಸ್ಥಿತಿ ಬದಲಾಗಿಬಿಟ್ಟಿತು. ಚೈನಾ ವಸ್ತುಗಳು ಕಡಿಮೆ ಕ್ವಾಲಿಟೀ, ಕಡಿಮೆ ಹಣಕ್ಕೆ ಸ್ಪರ್ಧೆ ಕೊಡಲು ಶುರುವಾದೊಡನೆಯೇ, ನಾವು ಕೂಡ ಕಡಿಮೆ ಕ್ವಾಲಿಟೀ ವಸ್ತುಗಳನ್ನು ಉತ್ಪಾದಿಸಲು ಶುರು ಮಾಡಿದೆವು! ಎಲ್ಲರ ಬಳಿಯೂ ಹಣ ಓಡಾಡತೊಡಗಿತು. ಮಕ್ಕಳಾದಿಯಾಗಿ ಎಲ್ಲರಲ್ಲೂ ಒತ್ತಡ, ಧಾವಂತ. ಯಾರಿಗೂ ನಾವು ಏನು ಮಾಡುತ್ತಿದ್ದೇವೆ?  ಯಾವುದರ ಹಿಂದೆ ಓಡುತ್ತಿದ್ದೇವೆ? ಯಾವುದರ ಬಗ್ಗೆಯೂ ತಲೆಕೆಡಿಸಿಕೊಳ್ಳುವಷ್ಟು ಪುರುಸೊತ್ತಿಲ್ಲ. ಒಟ್ಟಿನಲ್ಲಿ ಹಿಂದೆ, ಮುಂದೆ, ಅಕ್ಕ, ಪಕ್ಕ ಎಲ್ಲೂ ನೋಡಬೇಡಾ, ನಿಲ್ಲಬೇಡಾ, ಓಡು, ಅಷ್ಟೇ ಎಂದು ಹಿರಿಯರು ಕಿರಿಯರಿಗೆ ಬೋಧನೆ ಮಾಡಲಾರಂಭಿಸಿದರು. ಕಿರಿಯರು ಓಡಲಾರಂಭಿಸಿದರು.

ಹವ್ಯಾಸಗಳಿಂದ ಹಿಡಿದು ಪ್ರತಿಯೊಂದು ವಿದ್ಯೆಯೂ ಕಲಿಯಲೂ / ಕಲಿಸಲೂ ಹಣ ಮಾಡುವ ದಂಧೆಯಾಯಿತು.   ಸಂಬಂಧಗಳಿಂದ ಹಿಡಿದು ಎಲ್ಲಾ ವಿಷಯಗಳಲ್ಲೂ ಗುಣಮಟ್ಟ ಕಡಿಮೆ ಆಯಿತು. ಹಣದ ಹೊರತು ಎಲ್ಲಾ ವಿಷಯಗಳಲ್ಲಿಯೂ ಜನರು ರಾಜಿಯಾಗತೊಡಗಿದರು. ಮಾತುಗಳಿಗಂತೂ ಬೆಲೆಯೇ ಇಲ್ಲವಾಯಿತು. ಮಕ್ಕಳು ಉಸಿರು ಕಟ್ಟಿ ಪಾಠವಷ್ಟೇ ಓದಿ, ಅಂಕಗಳನಷ್ಟೇ ತೆಗೆದು, ಲಕ್ಷಾಂತರ ರೂಪಾಯಿ ಸಂಬಳ ತರುವ ಕೆಲಸ ಸೇರಲಾರಂಭಿಸಿದರು. ಬೆಳಿಗ್ಗೆ ೫ ಗಂಟೆಗೆದ್ದರೆ, ರಾತ್ರಿ ೧೧ ಗಂಟೆಯ ತನಕವೂ ಮಕ್ಕಳಿಗೆ ತಮ್ಮಷ್ಟಕ್ಕೆ ತಾವು ಜೀವಿಸುವ ಹಕ್ಕೇ ಇಲ್ಲವಾಯಿತು. ನಿದ್ದೆಯಲ್ಲಿಯೂ ಕೂಡ ಅಪ್ಪ, ಅಮ್ಮಂದಿರ ಕನಸುಗಳನ್ನೇ ಮಕ್ಕಳು ಕಾಣುವಂತಾದರು. ಮಕ್ಕಳಾದಿಯಾಗಿ ಎಲ್ಲರೂ ರೇಸುಕುದುರೆಗಳಾದರು. ಎಲ್ಲರಿಗೂ ಎಲ್ಲ ಕಡೆಯಿಂದ ಒತ್ತಡ. ಎಲ್ಲದರ ಬೆಲೆ ಹೆಚ್ಚಾಯಿತು. ಸಂಬಂಧಗಳಿಗೆ ಬೆಲೆ ಕಡಿಮೆ ಆಯಿತು. ಬುದ್ಧಿವಂತರು ಎರಡೆರಡು ಕೆಲಸ ಮಾಡುವವರಾದರು. ಹಣ ಬಿಸಾಕಿದರೆ ಮನೆ ಕೆಲಸದವಳು ಸಿಗುತ್ತಾಳೆ ಎಂಬ ಮನೋಭಾವ, ಅವಿದ್ಯಾವಂತ ಬಡವರು ಇನ್ನೊಂದಿಷ್ಟು ಹೆಚ್ಚಿಗೆ ಬಡವರಾದರು. ಅವರಲ್ಲಿ ಆತಂಕ, ಗೊಂದಲ, ನಿರಾಸೆ, ಕಿರಿಕಿರಿ, ಈ ಬುದ್ಧಿವಂತರ ಮೇಲೆ ಸಿಟ್ಟು! ಹೆಚ್ಚಾಯಿತು. ಒಟ್ಟಿನಲ್ಲಿ ಈ ಎಲ್ಲಾ ಬದಲಾವಣೆಗಳಿಂದ ಎಲ್ಲವನ್ನೂ, ಎಲ್ಲರನ್ನೂ ಉಡಾಫೆಯಿಂದ ನೋಡುವ ಮನಸ್ಥಿತಿ ಉಂಟಾಯಿತು. ಅಕ್ಕಪಕ್ಕದ ಮನೆಯ ಅಥವಾ ನಮ್ಮ ಮನೆಯವರ ಸಮಸ್ಯೆಗಳಿಗೆ ತಲೆ ಬಿಸಿ ಯಾರು ಮಾಡಿಕೊಳ್ಳುತ್ತಾರೆ? ಎನ್ನುವ ಬೇಜವಾಬ್ದಾರಿ ಶುರುವಾಯಿತು.

ಇಲ್ಲಿ ಯುವಕ / ಯುವತಿಯರ ಮನಸ್ಥಿತಿಯ ಬಗ್ಗೆ ಕೂಡ ಮಾತಾಡಲೇ ಬೇಕು. ಅಪ್ಪ, ಅಮ್ಮಂದಿರು ಕೊಡುವ ಸಾವಿರಾರು ರೂಪಾಯಿಗಳ ಪಾಕೆಟ್ ಮನಿ, ಅದನ್ನು ಖರ್ಚು ಮಾಡಲು ಬೇಕಾದಷ್ಟು ಹಾದಿಗಳು, ಇವತ್ತು ಯಾರಿಗಾದರೂ ಆಕರ್ಷಿತರಾಗುವುದು, ನಾಳೆ ಐ ಲವ್ ಯೂ, ನಾಡಿದ್ದು ಡೇಟಿಂಗ್, ಅಪ್ಪ, ಅಮ್ಮ ಹುಡುಕಿದ ಹುಡುಗ ಅಕಸ್ಮಾತ್ ತನ್ನ ಹುಡುಗನಿಗಿಂತ ‘ಬೆಲೆ’ ಬಾಳುವವನಾಗಿದ್ದರೆ, ಇವನಿಗೆ ಗುಡ್ ಬೈ!, ನೊಂದ ಯುವಕರ ಮನಸ್ಥಿತಿ ಹೀಗೆ - ಸಿಕ್ಕಿದ ಎಲ್ಲಾ ಹುಡುಗಿಯರನ್ನು ‘ಮಜಾ’ ಮಾಡಿ ಕೈಕೊಡುವುದು! ಪ್ರೀತಿ, ಪ್ರೇಮ, ವಿಶ್ವಾಸ, ನಂಬಿಕೆ ಯಾವುದಕ್ಕೂ ಅರ್ಥವೇ ಗೊತ್ತಿರದ ಸ್ಥಿತಿ.  ಬುದ್ಧಿ ಹೇಳಲು ಅಪ್ಪ ಅಮ್ಮಂದಿರಿಗೆ ಪುರುಸೊತ್ತಿಲ್ಲ! ಕೇಳುವ ತಾಳ್ಮೆ ಯುವ ಜನಾಂಗಕ್ಕಿಲ್ಲ! ಯಾರಿಗೂ ಯಾವುದರ ಭಯವೂ ಇಲ್ಲ!  ಇನ್ನೂ ಶಾಲಾ ಮಕ್ಕಳನ್ನು ಕಂಡರಂತೂ ಶಿಕ್ಷಕರೇ ಹೆದರಬೇಕು. ಬುದ್ಧಿ ಮಾತು ಕೇಳದಿದ್ದರೆ ನಮ್ಮ ಮಕ್ಕಳನ್ನು ಹೊಡೀರಿ, ಬಡೀರಿ ಎನ್ನುತ್ತಿದ್ದ ಅಪ್ಪ, ಅಮ್ಮಂದಿರೆಲ್ಲಿ?  ಮಕ್ಕಳು ಹೋಮ್ ವರ್ಕ್ ಮಾಡಿಲ್ಲ ಎಂದು ಶಿಕ್ಷಕರು ಬುದ್ಧಿ ಮಾತು ಹೇಳ ಹೊರಟರೆ, ಅವರ ಮೇಲೆ ಕೇಸು ಹಾಕುವ ಅಪ್ಪ, ಅಮ್ಮಂದಿರೆಲ್ಲಿ? ಮಕ್ಕಳು ಎಷ್ಟೇ ತಪ್ಪು ಮಾಡಿದರೂ ಅವರಿಗೆ ಪೋಷಕರಾಗಲೀ, ಶಿಕ್ಷಕರಾಗಲೀ ಶಿಕ್ಷೆ ನೀಡುವಂತಿಲ್ಲ! ಆಗ ಪೈಶಾಚಿಕ ಪ್ರವೃತ್ತಿ ಬಲಿಯದೇ ಇನ್ನೇನಾಗುತ್ತದೆ? ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೇ? ಎಂಬ ಗಾದೆ ಮಾತು ನಮಗೇಕೆ ಮರೆತು ಹೋಯಿತು? ನಾವು ಮಾಡುವ ಕೆಲಸದಲ್ಲಿನ ಆತ್ಮ ತೃಪ್ತಿಗಿಂತ ತಿಂಗಳ ಕೊನೆಗೆ ಸಿಗುವ ಸಂಬಳ ಹೆಚ್ಚಾಯಿತಲ್ಲವೇ? ಎಲ್ಲರ ಮನಸ್ಥಿತಿಯೂ ಹೀಗೆ ಆಗಿಬಿಟ್ಟಿದೆಯಲ್ಲವೇ? 

ಇಂತಹ ಒಂದು ಘಟನೆ ನಡೆದ ಕೂಡಲೇ ಪರಿಹಾರ ಕಂಡುಹಿಡಿಯುವುದನ್ನು ಬಿಟ್ಟು, ಸಮಸ್ಯೆಯ ಮೂಲವೆಲ್ಲಿದೆ? ಎಂಬುದನ್ನು ಹುಡುಕುವುದನ್ನು ಬಿಟ್ಟು, ಪ್ರತಿಯೊಬ್ಬರಿಗೂ ತಮ್ಮ, ತಮ್ಮ ಒತ್ತಡಗಳನ್ನು ಹೊರಹಾಕುವುದೇ ಮುಖ್ಯವಾಗಿರುವಾಗ! ಪ್ರತಿಯೊಬ್ಬರೂ ತಮ್ಮ, ತಮ್ಮ ಅನುಭವಗಳ ಮೂಸೆಯಲ್ಲಿಯೇ ಮತ್ತೊಬ್ಬರನ್ನು ಜಡ್ಜ್ ಮಾಡುತ್ತಿರುವಾಗ! ಪ್ರತಿಯೊಬ್ಬರಿಗೂ ತಾವು ಮಾತನಾಡುವುದು ಶೋ ಆಫ್ ಆಗಿರುವಾಗ, ಬದಲಾವಣೆ ಆಗುವುದೆಲ್ಲಿಂದ?! ಗಂಡೊಬ್ಬ ತಪ್ಪು ಮಾಡಿದರೇ, ಇಡೀ ಗಂಡು ಜನಾಂಗವನ್ನು ನಾಶ ಮಾಡಲು ಪಣ ತೊಡುವ ಹೆಂಗಸರು, ಹೆಣ್ಣೊಬ್ಬಳಿಂದ ಆದ ಅನಾಹುತಕ್ಕೆ, ಇಡೀ ಹೆಣ್ಣು ಕುಲವನ್ನೇ ಬಲಾತ್ಕಾರ ಮಾಡುವ ಗಂಡಸರು, ತಮ್ಮ ತಮ್ಮ ಸ್ವಾರ್ಥಕ್ಕಾಗಿ, ತಮ್ಮ ತಮ್ಮ ಹಿತಕ್ಕಾಗಿ, ಸುಮ್ಮನೇ ಸುಳ್ಳು ರೇಪ್ ಕೇಸುಗಳನ್ನು ಹಾಕುವ ತಾಯಂದಿರು ಒಂದು ಕಡೆ, ತಮ್ಮ ಲೈಂಗಿಕ ತೃಷೆಗಾಗಿ ಮಗಳನ್ನು ಬಿಡದಾ ಅಪ್ಪಂದಿರು ಒಂದು ಕಡೆ, ತಾಯ್ತಂದೆಯರ ಒತ್ತಡ ತಡೆಯಲಾರದೇ ಮಕ್ಕಳು ಮಾಡಿಕೊಳ್ಳುವ ಆತ್ಯಹತ್ಯೆಗಳು, ವಿದೇಶ ಪಯಣಕ್ಕಾಗಿ ಅಪ್ಪ, ಅಮ್ಮಂದಿರನ್ನು ವೃದ್ಧಾಶ್ರಮಕ್ಕೋ ಅಥವಾ ಒಂಟಿಯಾಗಿ ಕೊಲೆಯಾಗಲೂ ಬಿಟ್ಟು ಹೋಗುವ ಮಕ್ಕಳು, ಇವೆಲ್ಲಕ್ಕೂ ಪರಿಹಾರ ಹೇಗೆ? ಬೇಲಿಯೇ ಎದ್ದು ಹೊಲ ಮೇಯ್ದರೇ? 

ಇನ್ನೂ ಜನಧ್ವನಿಯಾಗಿ, ನೊಂದವರಿಗೆ ಬೆನ್ನೆಲುಬು ಆಗಿ ನಾವಿದ್ದೇವೆ ಎಂದು ನಿಲ್ಲಬೇಕಾದ ಮಾಧ್ಯಮಗಳು ಕೂಡ ತಾ ಮುಂದೇ, ನಾ ಮುಂದೇ ಎಂದು ತಮ್ಮ ತಮ್ಮ ಹೆಚ್ಚುಗಾರಿಕೆಯನ್ನೂ ಸುದ್ಧಿ ನೀಡುವುದರಲ್ಲೇ ನಿರತರಾಗಿರುವಾಗ?!, ರಾಜಕೀಯ ಪಕ್ಷಗಳು ಇಂತಹ ವಿಷಯಗಳ ಮೂಲಕ ಒಬ್ಬರ ಮೇಲೊಬ್ಬರು ಕೆಸರೆರಚಿ, ತಮ್ಮ ಬೇಳೆ ಬೇಯಿಸಿಕೊಳ್ಳುವುದರಲ್ಲೇ ಆಸಕ್ತರಾಗಿರುವಾಗ?!, ವಕೀಲರು ಇಂತಹ ಕೇಸುಗಳಲ್ಲಿ ಹೇಗೆ ವಾದ ಮಾಡಿ ಅಪರಾಧಿಗಳನ್ನು ಗೆಲ್ಲಿಸಬಹುದು? ಎಂಬ ತಮ್ಮ ಜಾಣ್ಮೆಯ ಪ್ರದರ್ಶನ ಮಾಡುತ್ತಿರುವಾಗ?! ಮಠ, ದೇವಸ್ಥಾನಗಳು ತಮ್ಮ ಶ್ರೀಮಂತಿಕೆಯನ್ನು, ತಮ್ಮ ಖ್ಯಾತಿಯನ್ನು ಹೆಚ್ಚಿಸಿಕೊಳ್ಳುವುದರಲ್ಲೇ ಮಗ್ನರಾಗಿರುವಾಗ?! ಸಿನೆಮಾಗಳು, ಟಿವಿ ಧಾರವಾಹಿಗಳು, ಪುಸ್ತಕಗಳು ನಾವೆಷ್ಟು ದುಡ್ಡು ಮಾಡುತ್ತಿದ್ದೇವೆ? ಎಂದು ತಮ್ಮ ಟಿಆರ್ ಪಿ ಹೆಚ್ಚಿಸುವ ಪ್ರಯತ್ನದಲ್ಲಿಯೇ ತೊಡಗಿರುವಾಗ?!
ನಾವು ಹೇಳುವುದಾದರೂ ಯಾರಿಗೇ?

ಇನ್ನೂ ರೇಪಿಸ್ಟ್ ಗಳಿಗೆ ಕೊಡುವ ಮರಣದಂಡನೆಯಿಂದ ಏನೂ ಪ್ರಯೋಜನವಿಲ್ಲ! ತಮ್ಮ ಆತ್ಮಸಾಕ್ಷಿಗೆ ಹೆದರದ ಅವರು, ಇನ್ನೆಂಥ ಶಿಕ್ಷೆಗೆ ಹೆದರಿಯಾರು? ಈ ಹಿಂದೆಯಾದರೆ ದೇವರು ಎನ್ನುವ ಭಯದಿಂದ ಹಿಡಿದು ಎಲ್ಲವೂ ಭಯದಿಂದಲೇ ನಡೆಯುತ್ತಿತ್ತು. ಎಲ್ಲರೂ ತಮ್ಮ ಆತ್ಮಗಳಿಗೆ ಹೆದರುತ್ತಿದ್ದರು. ಈಗಿರುವ ಉಡಾಫೆ ಸ್ಥಿತಿಯಿಂದ ಅಪರಾಧಿಗಳಲ್ಲಿ ಭಯವಿಲ್ಲ. ತದ್ವಿರುದ್ದವಾಗಿ ಯಾವ ತಪ್ಪನ್ನೂ ಮಾಡದೇ ಧೈರ್ಯವಾಗಿರಬೇಕಾಗಿದ್ದ ಮುಗ್ಧರಲ್ಲಿ ಭಯವಿದೆ. ಆತ್ಮಪ್ರಜ್ಞೆಯಿಲ್ಲದ ವ್ಯಕ್ತಿಗಳಿಂದ ತುಂಬಿಹೋಗುತ್ತಿರುವ ಸಮಾಜವೂ ಮತ್ತಷ್ಟು ಹಾಳಾಗುತ್ತಿದೆ.  ಭಯದಿಂದ ಯಾವ ಕೆಲಸವನ್ನು ನಾವು ಮಾಡಲು / ಮಾಡಿಸಲು ಸಾಧ್ಯವಿಲ್ಲ. ಆದರೆ ಇಂತಹ ವಿಷಯಗಳಲ್ಲಿ ಎಲ್ಲರಲ್ಲೂ ಸೀರಿಯಸ್ ನೆಸ್ ಬಂದರೆ, ಎಲ್ಲರೂ ಸೆನ್ಸಿಬಲ್ ಆದರೆ, ಎಲ್ಲರೂ ತಮ್ಮ, ತಮ್ಮ ಆತ್ಮದೊಳಗೆ ಸಂಚರಿಸಲು ಶುರು ಮಾಡಿದರೆ.... ಸ್ವಲ್ಪವಾದರೂ ಪ್ರಯೋಜನವಾಗಬಹುದು.  ದುಡ್ಡಿಂದಲೇ ಎಲ್ಲವೂ ಅಲ್ಲ! ಅನ್ನುವ ಮನಸ್ಥಿತಿ ಉಂಟಾದರೆ, ಮಾತುಗಳಿಗೂ ಬೆಲೆ ಇದೆ ಎನ್ನುವುದು ಅರ್ಥವಾದರೆ, ಮಕ್ಕಳಿಗೆ ನಾವು ಕಲಿಸಬೇಕಿರುವುದು ಮೌಲ್ಯಗಳು ಎಂಬುದರ ಅರಿವಾದರೆ, ಸ್ವಾರ್ಥವಿಲ್ಲದೇ ನಾನು ಏನಾದರೂ ಸಮಾಜಕ್ಕೆ ಒಳಿತು ಮಾಡಬೇಕೆಂಬ ಮನಸ್ಥಿತಿ ಉಂಟಾದರೇ..... ಸ್ವಲ್ಪವಾದರೂ ಹದಗೆಟ್ಟಿರುವ ಈ ಸಮಾಜವನ್ನು ನಾವೆಲ್ಲರೂ ಸರಿಪಡಿಸಬಹುದು. ಯುದ್ಧಕಾಲೇ ಶಸ್ತ್ರಾಭ್ಯಾಸ ಮಾಡದೇ, ಮನೆ ಮನಗಳಲ್ಲಿ ಬದಲಾವಣೆ ತರಬೇಕಾದ ಜರೂರು ಈ ಹೊತ್ತಿಗಿದೆ.

Thursday, November 29, 2012

ಸಿನೆಮಾಗಳನ್ನು ಓದುವುದು!


ಚಿಕ್ಕಂದಿನಿಂದ ನಾನು ಸಿನೆಮಾಗಳನ್ನು ನೋಡಿದಕ್ಕಿಂತ ಪುಸ್ತಕಗಳನ್ನು ಓದಿದ್ದೇ ಹೆಚ್ಚು.  ಸಿನೆಮಾಗಳನ್ನು ನೋಡುವುದು ಒಳ್ಳೆಯದಲ್ಲ, ಪುಸ್ತಕಗಳನ್ನು ಓದುವುದು ಒಳ್ಳೆಯ ಹವ್ಯಾಸ ಎನ್ನುವಂತಹ ವಾತಾವರಣದಲ್ಲಿದ್ದ ನನಗೆ ಸಿನೆಮಾಗಳು ಎಂದರೆ ಅಷ್ಟಕಷ್ಟೆ.  ಬೆಂಗಳೂರಿಗೆ ಯಾರಾದರೂ ನೆಂಟರು ಬಂದರೆ ಅವರೊಟ್ಟಿಗೆ ಕನ್ನಡ ಸಿನೆಮಾಗಳಿಗೆ ಹೋಗಿ ಬಂದರೆ ಮುಗಿಯಿತು. ನಾಟಕಗಳನ್ನಂತೂ ನೋಡಿಯೇ ಇಲ್ಲವೆನ್ನುವಷ್ಟು ಕಡಿಮೆ.  ಸಿನೆಮಾಗಳು ಮನರಂಜನೆಗಾಗಿ ಮಾತ್ರ ಎಂದೇ ತಿಳಿದಿದ್ದೆ ನಾನು.  ಪುಸ್ತಕಗಳನ್ನು ಓದಿದಾಗ ಸಿಕ್ಕಂಥ ಒಳನೋಟಗಳು, ಅವುಗಳು ಬೀರಿದ ಪ್ರಭಾವಗಳು, ಚಿಂತನೆಗಳು, ಎಂದಿಗೂ ನನಗೆ ಸಿನೆಮಾಗಳನ್ನು ನೋಡಿದಾಗ ಸಿಕ್ಕಿಲ್ಲ. ಒಬ್ಬಳೇ ಕುಳಿತು, ಪುಸ್ತಕಗಳನ್ನು ಓದುತ್ತಾ, ಅವುಗಳಲ್ಲಿನ ದೃಶ್ಯಗಳನ್ನು, ಪಾತ್ರಧಾರಿಗಳನ್ನು ಕಲ್ಪಿಸುತ್ತಾ, ಯೋಚಿಸುತ್ತಾ, ಅವು ನನ್ನೊಳಗೆ ದೃಶ್ಯಗಳನ್ನು ಮೂಡಿಸುವಾಗ, ಅದನ್ನು ನೋಡುತ್ತಾ ಖುಷಿ ಪಡುತ್ತಿದ್ದೆ.  ಸಿನೆಮಾಗಳಲ್ಲಿಯಾದರೋ ಈ ಮೊದಲೇ ಯಾರದೋ ಕಲ್ಪನೆಯಲ್ಲಿ ದೃಶ್ಯಗಳು ಚಿತ್ರಿತಗೊಂಡಿರುವುದರಿಂದ, ಅದನ್ನು ಕುರಿತು ಅಲೋಚಿಸುವುದೇನು? ಕಲ್ಪಿಸಿಕೊಳ್ಳುವುದೇನು?  ಇದು ನನ್ನ ಸಮಸ್ಯೆ. ಹೀಗಾಗಿ ನಾನು ನೋಡಿರುವ ಯಾವುದೇ ಸಿನೆಮಾಗಳು, ನಾನು ಓದಿರುವ ಪುಸ್ತಕಗಳಷ್ಟು ಪ್ರಭಾವವನ್ನು ನನ್ನ ಮೇಲೆ ಬೀರಿಲ್ಲ.

ಇನ್ನೂ ಕನ್ನಡ ಸಿನೆಮಾಗಳೋ, ನಮ್ಮ ಥಿಯೇಟರ್ ಗಳಲ್ಲಿ ತುಂಬಾ ದಿವಸಗಳು ಇದ್ದರೆ ಮಾತ್ರ ಒತ್ತಾಯಕ್ಕೆ ಹೋಗಿಬರುತ್ತಿದ್ದದ್ದಷ್ಟೆ. ‘ಮುಂಗಾರು ಮಳೆ’ ಸಿನೆಮಾವನ್ನು ನಾನು ನೋಡಿದ್ದು, ‘ಸುಧಾ’ ವಾರಪತ್ರಿಕೆಯಲ್ಲಿ ಯೋಗರಾಜ್ ಭಟ್ಟರ ಸಿನೆಮಾ ಮೇಕಿಂಗ್ ಬಗೆಗಿನ ಆರ್ಟಿಕಲ್ ಓದಿ, ಅವರ ಬರಹದ ಶೈಲಿಯಿಂದ ಪ್ರಭಾವಿತಳಾಗಿ! ಟೈಟಲ್ ಚೆನ್ನಾಗಿಲ್ಲ ಅನ್ನೋ ಕಾರಣಕ್ಕೆ ಎಷ್ಟೋ ಕನ್ನಡ ಸಿನೆಮಾಗಳು ಬಾಕ್ಸ್ ಆಫೀಸ್ ನಲ್ಲಿ ಗೆದ್ದಿದ್ದರೂ ನಾನು ನೋಡೇ ಇಲ್ಲ. ಎಷ್ಟೋ ಬಾರಿ ಟಿವಿಗಳಲ್ಲಿ ಬರೇ ಸಿನೆಮಾದ ಬಗ್ಗೆಯೇ ಬಂದಾಗ ಬೇಜಾರಾಗಿ ಟಿವಿ ಆರಿಸಿದ್ದು ಕೂಡ ಉಂಟು. ಇನ್ನೂ ನಮ್ಮ ಕನ್ನಡದ ಹೆಸರಾಂತ ನಟರ ಸಿನೆಮಾಗಳನ್ನು ನೋಡಿದಾಗ ಇಷ್ಟು ಸಿಲ್ಲಿ ಸಿನೆಮಾಗಳನ್ನು ಏಕೆ ಮಾಡುತ್ತಾರೆ? ಕಥೆ ಓದಿರುವುದಿಲ್ಲವೇ? ಸಿನೆಮಾದ ಬಗ್ಗೆ ಏನೂ ಗೊತ್ತಿಲ್ಲದ ನನಗೇ ಇದರ ಹುಳುಕುಗಳು ಕಂಡುಬರುವುದಾದರೆ, ಇವರಿಗೆ ಇದರ ಅರಿವೇಕೆ ಆಗುವುದಿಲ್ಲಾ? ಇವರೆಲ್ಲಾ ಏಕೆ ಹೀಗೆ? ಕನ್ನಡದಲ್ಲಿ ಪ್ರಜ್ಞಾವಂತ ಸಿನೆಮಾ ನೋಡುಗರಿಲ್ಲವೇ? ಇಷ್ಟೇ ನನ್ನ ಆಲೋಚನೆಗಳು. ನಂತರ ನನಗ್ಯಾಕೆ? ಎಂದು ಮರೆತುಬಿಡುತ್ತಿದ್ದೆ.

ಸಂವಾದ.ಕಾಮ್ ನ ರೂವಾರಿಯಾದ ಶೇಖರ್ ಪೂರ್ಣರವರನ್ನು ಭೇಟಿಯಾಗುವವರೆಗೂ ನನ್ನ ಆಲೋಚನೆಗಳು ಇಷ್ಟಕ್ಕೆ ಸೀಮಿತವಾಗಿದ್ದವು. ಅವರು ಸಿನೆಮಾಗಳನ್ನು ವಿಮರ್ಶಿಸುವ ರೀತಿ, ಶೈಲಿ, ಒಂದು ಸಿನೆಮಾವನ್ನು ಒಡೆದು, ಕಟ್ಟಬೇಕು ಎನ್ನುವ ಅವರ ಮಾತು ನನ್ನ ಮೇಲೆ ಪ್ರಭಾವ ಬೀರಿತು. ಅವರು ಹೇಳಿದ ಬಹಳಷ್ಟು ಮಾತುಗಳು ಅರ್ಥವಾಗದಿದ್ದರೂ!, ‘ಸಿನೆಮಾಗಳನ್ನು ಓದುವುದು’ ಎಂಬ ಪರಿಕಲ್ಪನೆಯೇ ನನ್ನಲ್ಲಿ ಕುತೂಹಲವನ್ನುಂಟು ಮಾಡಿತು. ನಾನು ಇವರ ಹಾಗೇ ಎಲ್ಲಾ ಸಿನೆಮಾಗಳನ್ನು ನೋಡಿಯೇಬಿಡಬೇಕೆಂಬ ಆಸೆ ಕೂಡ ಮೂಡಿಸಿತು. ನಮ್ಮ ಸಿನೆಮಾದಲ್ಲಿನ ವಸ್ತು (ಕಂಟೆಂಟ್) ಪ್ರತಿಯೊಬ್ಬರನ್ನೂ ಚಿಂತನೆಗೀಡಾಗುವಂತೆ ಮಾಡಬೇಕು. ಸಿನೆಮಾ ನೋಡಿ, ವಾಪಾಸ್ಸು ಹೋಗುವಾಗ ಈ ವಿಷಯ ಜನರನ್ನು ಕಾಡಬೇಕು. ವಾದಗಳಾಗಬೇಕು, ಚರ್ಚೆಗಳಾಗಬೇಕು. ನಮ್ಮ ಮುಂದಿನ ಪೀಳಿಗೆಗೆ ಇದೆಲ್ಲವನ್ನೂ ದಾಖಲಿಸಬೇಕು. ಟೆಕ್ಸ್ಟ್ ಕ್ರಿಯೇಟ್ ಮಾಡಬೇಕು! ಇದು ಅವರ ಆಶಯವಾಗಿತ್ತು.  ಈ ಎಲ್ಲಾ ಅವರ ಮಾತುಗಳನ್ನು ಕೇಳುತ್ತಾ, ಚರ್ಚಿಸುತ್ತಾ ಹೋದಂತೆ ಇದೆಲ್ಲವೂ ನಮ್ಮೆಲ್ಲರ ಆಶಯವಾಗಿ ಬದಲಾಗಿತ್ತು.  ಸಿನೆಮಾದ ಗಂಧಗಾಳಿಯೂ ಇಲ್ಲದ ನನಗೆ ಇದರಿಂದಾಗಿ ಕಥೆಯೊಂದು ಚಿತ್ರಕಥೆಯಾಗಿ, ಸಿನೆಮಾ ಆಗುವಲ್ಲಿನ ಪ್ರಕ್ರಿಯೆಯ ಬಗ್ಗೆ ಅತ್ಯಂತ ಆಸಕ್ತಿ ಮೂಡಿತು. ಕೂತಲ್ಲಿ, ನಿಂತಲ್ಲಿ  ಓದಿದ ಕಥೆಗಳೆಲ್ಲವನ್ನೂ ಚಿತ್ರಕಥೆ ಮಾಡಬಹುದೇ ಎಂದು ಆಲೋಚಿಸಲು ಮನವು ತೊಡಗಿತು. 

ಪುಸ್ತಕಗಳನ್ನು ಓದುವಾಗ, ಹೇಗೆ ಕಲ್ಪನೆಯಲ್ಲಿ ನಾವು ಓದುತ್ತಿರುವ ವಿಷಯಗಳ ದೃಶ್ಯಗಳನ್ನು ಮೂಡಿಸಿಕೊಳ್ಳುತ್ತಾ ಹೋಗುತ್ತೇವೆಯೋ ಹಾಗೆಯೇ ನಿರ್ದೇಶಕನೊಬ್ಬ ತನಗೆ ಹೊಳೆದ / ಓದಿದ / ಬರೆದ ಕಥೆಯೊಂದನ್ನು, ತನ್ನ ಕಲ್ಪನೆಯಲ್ಲಿಯೇ ದೃಶ್ಯಗಳಾಗಿ ಮೂಡಿಸಿ, ಚಿತ್ರಕಥೆಯನ್ನು ಬರೆದು, ಅದನ್ನು ದೃಶ್ಯರೂಪವಾಗಿಸಿ ನಮ್ಮ ಮುಂದಿಡುತ್ತಾನೆ. ಕಥೆ ಬರೆಯುವಾಗ, ಅದನ್ನು ಚಿತ್ರಕಥೆಯಾಗಿಸುವಲ್ಲಿ ಎಡವದ ನಿರ್ದೇಶಕ, ಅದನ್ನು ತೆರೆಯ ಮೇಲೆ ದೃಶ್ಯಗಳಾಗಿ ಮೂಡಿಸುವ ಪ್ರಕ್ರಿಯೆಗಳಲ್ಲಿನ ಇತಿಮಿತಿಗಳಿಂದ ಹಲವು ಬಾರಿ ಎಡವಲು ಬಹುದು, ತನ್ನ ಕಲ್ಪನೆಯಂತೆಯೇ ಮೂಡಿಸಲು ಕಷ್ಟವಾಗಬಹುದು ಅಥವಾ ಕಲ್ಪನೆಗಿಂತ ಇನ್ನೂ ಚೆನ್ನಾಗೇ ಮೂಡಿಸಬಹುದು!  ಇದು ಆತನ ಚಾಕಚಕ್ಯತೆಯನ್ನು ಅವಲಂಬಿಸಿರುತ್ತದೆ. ಕಥೆಯೊಂದು, ಚಿತ್ರಕಥೆಯಾಗಿ, ನಂತರ ಸಿನೆಮಾ ಆಗುವುದರಿಂದ, ಈ ಕಲಾಪ್ರಕ್ರಿಯೆಯಲ್ಲಿ ನಿರ್ದೇಶಕ ಮುಖ್ಯವಾದರೂ ಕೂಡ, ಇದೊಂದು ಟೀಮ್ ವರ್ಕ್. ನಿರ್ದೇಶಕನ ಕಲ್ಪನೆಯನ್ನು ಸಾಕಾರಗೊಳಿಸುವಲ್ಲಿ ಛಾಯಾಗ್ರಾಹಕನಿಂದ ಹಿಡಿದು, ಎಡಿಟರ್ ತನಕ ಪ್ರತಿಯೊಬ್ಬರೂ ಕಷ್ಟಪಡುತ್ತಾರೆ.  ಬರಹಗಾರ / ಕಥೆಗಾರ ತನ್ನ ಕಲ್ಪನೆಯನ್ನು ಬರೆಯುವಷ್ಟು ಸುಲಭವಾಗಿ ನಿರ್ದೇಶಕ ಚಿತ್ರಿಸಲಾರ.  ಬರಹಗಾರನಿಗಿರುವಷ್ಟು ಸ್ವಾತಂತ್ರ್ಯವಾಗಲೀ, ಕಲ್ಪನಾವಿಸ್ತಾರವಾಗಲೀ, ನಿರ್ದೇಶಕನಿಗೆ ಸಾಧ್ಯವಿಲ್ಲ. ಸಿನೆಮಾ ನಿರ್ಮಾಣ ಎಂಬುದು ದುಬಾರಿ ಕಲಾಪ್ರಕಾರವಾದ್ದರಿಂದ ನಿರ್ದೇಶಕ ಬಹಳಷ್ಟು ಬಾರಿ ತನ್ನ ಕಲ್ಪನೆಯೊಂದಿಗೆ ರಾಜಿಯಾಗಬೇಕಾಗುತ್ತದೆ. ಹಾಗಾಗೀ ಸಿನೆಮಾ ನಿರ್ದೇಶಿಸುವುದು, ಬರೆಯುವುದಕ್ಕಿಂತಲೂ ಅತ್ಯಂತ ಕಷ್ಟದ ಕೆಲಸ!  

ಸಿನೆಮಾ ಎಂಬುದು ನಮ್ಮ ಸಂಸ್ಕೃತಿಯಲ್ಲಿ ಕಾಲಾನುಕಾಲದಿಂದ ಹಾಸುಹೊಕ್ಕಾಗಿವೆ ಹಾಗೂ ಬೇರೆ ಎಲ್ಲಾ ಕಲಾಪ್ರಕಾರಗಳಿಗಿಂತ ಹೆಚ್ಚು ಜನರನ್ನು ತಟ್ಟುತ್ತವೆ.  ಸಿನೆಮಾ ನೋಡಲು ಬರುವ ವೀಕ್ಷಕರು, ಹಣ ಕೊಟ್ಟು ಬರುವುದರಿಂದ ಗ್ರಾಹಕರು ಕೂಡ ಆಗುತ್ತಾರೆ. ಸಿನೆಮಾ ನಿರ್ಮಾಣವು ದುಬಾರಿಯೂ ಹಾಗೂ ವೀಕ್ಷಕರು ಗ್ರಾಹಕರೂ ಆಗುವುದರಿಂದ ಇದೊಂದು ದೊಡ್ಡ ಉದ್ಯಮವಾಗಿದೆ.  ಹಾಗಾಗಿ ನಮ್ಮ ಹೆಚ್ಚಿನ ಸಿನೆಮಾಗಳು ಹಣ ಮಾಡುವ ದಂಧೆಯಾಗಿಬಿಟ್ಟಿವೆ. ಸಿನೆಮಾ ಒಂದು ಕಲಾಪ್ರಕಾರ ಎಂಬುದನ್ನು ಮರೆತಿರುವ ನಿರ್ಮಾಪಕರು, ಹೆಸರಾಂತ ನಾಯಕನಟನಿಗಾಗಿ ಕೋಟ್ಯಾಂತರ ರೂಪಾಯಿಗಳನ್ನು (ಕಥೆಯನ್ನು ಕೂಡ ಕೇಳದೆ!) ಖರ್ಚು ಮಾಡಲು ರೆಡಿ ಇರುತ್ತಾರೆ. ವೀಕ್ಷಕರಿಗೆ ಕಥೆಯನ್ನು ದೃಶ್ಯವಾಗಿಸುತ್ತಿದ್ದೇವೆ ಎಂಬ ಕಲ್ಪನೆಯೇ ಇರದಂತೆ, ಹಣಕ್ಕಾಗಿಯೇ ಸಿನೆಮಾಗಳು ನಿರ್ಮಾಣಗೊಳ್ಳುತ್ತಿವೆ. ಹೀಗಾಗಿ ಚಲನಚಿತ್ರಗಳ ಗುಣಮಟ್ಟ ಸೊರಗುತ್ತಿವೆ. ಇದಕೆಲ್ಲಾ ಯಾರು ಕಾರಣ? ಸಿನೆಮಾವನ್ನು ಉದ್ದಿಮೆಯಾಗಿ ನೋಡುತ್ತಿರುವ ನಿರ್ಮಾಪಕರೇ? ಗುಣಮಟ್ಟದಲ್ಲಿ ರಾಜಿಯಾಗುತ್ತಿರುವ ನಿರ್ದೇಶಕರೇ?  ತಮ್ಮ ಹೆಸರನ್ನು ಬಳಸಿಕೊಳ್ಳಲು ಅನುವು ಮಾಡಿಕೊಟ್ಟು, ಹಣ ಮಾಡುತ್ತಿರುವ ನಾಯಕನಟರೇ? ತಮ್ಮ ನಾಯಕನಟನಿಗಾಗಿಯೇ ಚಿತ್ರವನ್ನು ನೋಡುತ್ತಿರುವ ವೀಕ್ಷಕರೇ? ಬದಲಾವಣೆ ಯಾರಲ್ಲಿ ತರುವುದು?  ನಿಜ! ಇದು ಕೂಡ ಒಂದು ಟೀಮ್ ವರ್ಕ್. ಸಿನೆಮಾವು ಉನ್ನತ ಕಲಾಪ್ರಕಾರ ಎಂಬುದರ ಅರಿವು ಎಲ್ಲರಲ್ಲಿಯೂ ಮೂಡಬೇಕು. ಆ ನಿಟ್ಟಿನಲ್ಲಿ ಸಂವಾದ.ಕಾಮ್ ರವರ ಕೆಲವು ಕಾರ್ಯಕ್ರಮಗಳು ಶ್ಲಾಘನೀಯ.

ಇವುಗಳಲ್ಲೊಂದು ‘ಸಿನೆಮಾ ಓದುವುದು!’. ಪುಸ್ತಕವೊಂದನ್ನು ಓದುತ್ತಾ, ಓದುತ್ತಾ ಕಲ್ಪನೆಯಲ್ಲಿ ನಾವು ಹೇಗೆ ಅವುಗಳನ್ನು ದೃಶ್ಯಗಳನ್ನಾಗಿಸಿಕೊಳ್ಳುತ್ತೇವೆಯೋ, ಆ ದೃಶ್ಯಗಳು ನಮಗೊಂದು ಒಳನೋಟಗಳನ್ನು ಹೇಗೆ ಕೊಡುತ್ತವೆಯೋ? ಹಾಗೆಯೇ, ಸಿನೆಮಾಗಳ ದೃಶ್ಯಗಳನ್ನು ನೋಡುತ್ತ, ನೋಡುತ್ತಾ, ಕಲ್ಪನೆಯಲ್ಲಿ ಅವು ಕೊಡುವ ಒಳಾರ್ಥಗಳನ್ನು ಓದುವುದು!  ಪುಸ್ತಕಗಳನ್ನು ಓದುವುದರಿಂದ, ಆ ಮೂಲಕ ಅವು ಕೊಡುವ ಒಳನೋಟಗಳನ್ನು ಅರ್ಥ ಮಾಡಿಕೊಳ್ಳುತ್ತಾ, ನಮ್ಮ ಜ್ಞಾನವನ್ನು ಹೇಗೆ ಹೆಚ್ಚಿಸಿಕೊಳ್ಳುತ್ತೇವೆಯೋ ಹಾಗೆಯೇ ಸಿನೆಮಾಗಳನ್ನು ನೋಡುತ್ತಾ, ಅವುಗಳ ಒಳಾರ್ಥಗಳಿಂದ ನಮ್ಮ ಜ್ಞಾನವನ್ನು ವೃದ್ಧಿ ಮಾಡಿಕೊಳ್ಳಲು ಸಾಧ್ಯ! ಪುಸ್ತಕಗಳು ಬೀರುವಷ್ಟೇ ಅಥವಾ ಅದಕ್ಕಿಂತಲೂ ಹೆಚ್ಚಿನ ಪ್ರಭಾವವನ್ನು ಸಿನೆಮಾಗಳು ಕೂಡ ಬೀರಬಲ್ಲುದು. ಸಾಲು ಸಾಲಾಗಿ ಕನ್ನಡ ಚಿತ್ರಗಳು ಬಾಕ್ಸ್ ಆಫೀಸಿನಲ್ಲಿ ಸೋಲುತ್ತಿರುವ ಈ ಸಂದರ್ಭದಲ್ಲಿ ಇಂತಹ ಕಾರ್ಯಕ್ರಮಗಳು ಅಗತ್ಯವಾಗಿದೆ.  ‘ಸಿನೆಮಾಗಳನ್ನು ಓದುವುದರ’ ಮೂಲಕ ಪ್ರಜ್ಞಾವಂತ ವೀಕ್ಷಕರು ಹುಟ್ಟಿಕೊಳ್ಳುತ್ತಾರೆ. ಎಲ್ಲಿ ಪ್ರಜ್ಞಾವಂತ ವೀಕ್ಷಕರು ಇರುತ್ತಾರೋ, ಆಗ ಸಿನೆಮಾ ನಿರ್ಮಾಣದ ತಂಡಗಳು ಕೂಡ ಪ್ರಜ್ಞಾವಂತರಾಗಿಯೇ ಕೆಲಸ ಮಾಡಬೇಕಾದ ಅಗತ್ಯ ಹುಟ್ಟಿಕೊಳ್ಳುತ್ತದೆ. ಈ ಮೂಲಕ ನಮ್ಮ  ಸಿನೆಮಾಗಳು ಕೂಡ ಅತ್ಯುತ್ತಮ ಕಲಾಪ್ರಕಾರವಾಗಿ ನಮ್ಮ ಸಂಸ್ಕೃತಿಯಲ್ಲಿ ನೆಲೆ ನಿಲ್ಲುತ್ತವೆ. ಈ ಆಶಯದಲ್ಲಿಯೇ ಸಂವಾದ.ಕಾಮ್ ಹಾಗೂ ಗೆಳೆಯರು, ತಾವು ಓದಿದ ಸಿನೆಮಾಗಳನ್ನು, ಪುಸ್ತಕದ ಮೂಲಕ ಮುಂದಿಡುತ್ತಿದ್ದಾರೆ.  ಅವರು ಅದನ್ನು ಹೇಗಾದರೂ ಓದಿರಲಿ,  ಅವರು ಓದಿದ್ದು ನಮಗರ್ಥವಾಗದಿದ್ದರೂ, ಅಥವಾ ಅದೇ ಸಿನೆಮಾಗಳನ್ನು ನಾವು ನೋಡುವಾಗ, ಅವರು ಬರೆದಿರುವುದಕ್ಕಿಂತ ಭಿನ್ನವಾಗಿಯೇ ನಾವು ಓದಿಕೊಂಡರೂ, ‘ಸಿನೆಮಾಗಳನ್ನು ಓದಲು ಸಾಧ್ಯ!’ ಎಂಬುದು ನಮಗೆಲ್ಲರಿಗೂ ಅರ್ಥವಾದರೆ, ಅವರ ಈ ಪ್ರಯತ್ನಕ್ಕೊಂದು ಜಯ.  


Sunday, November 11, 2012

ದೀಪಾವಳಿಯ ಸಂಭ್ರಮ


ದೀಪಾವಳಿ ಎಂದೊಡನೆಯೇ ನನಗೆ ಮೊದಲು ನೆನಪಾಗುವುದು ದೀಪಾವಳಿ ವಿಶೇಷಾಂಕ ಹಾಗೂ ಎಣ್ಣೆಸ್ನಾನ. ಮನೆ ತುಂಬಾ ಮಕ್ಕಳಿದ್ದರಿಂದ, ಗಲಾಟೆ ಆಗುತ್ತದೆಯೆಂದು ಅಮ್ಮ ಮೊದಲೇ ಒಂದು ರೂಲ್ ಮಾಡಿಟ್ಟಿದ್ದಳು.  ದೊಡ್ಡವರಿಗೆ ಅಂದರೆ ನನ್ನ ಅಣ್ಣಂದಿರಿಗೆ ಎಲ್ಲದಕ್ಕೂ ಪ್ರಾಮುಖ್ಯತೆ ಹೆಚ್ಚು.   ದೊಡ್ಡ ಅಣ್ಣಂದಿರಿಗೆ ಅಮ್ಮನ ರೂಲ್ ನಿಂದಾಗಿ ಮೊದಲಿಗೆ ವಿಶೇಷಾಂಕ ಓದಲು ಸಿಗುತ್ತಿತ್ತು. ಅಕ್ಕ ಸ್ವಲ್ಪ ಬಜಾರಿ. ಹಾಗಾಗಿ ಅವಳಿಗಂತೂ ಯಾವ ರೂಲ್ ಕೂಡ ಅನ್ವಯ ಆಗುತ್ತಿರಲಿಲ್ಲ.  ಆದರೆ ಮಿಕ್ಕೆಲ್ಲಕ್ಕೂ ಬಜಾರಿತನವನ್ನು ಉಪಯೋಗಿಸಿಕೊಳ್ಳುತ್ತಿದ್ದ ಅಕ್ಕ, ಪುಸ್ತಕಗಳ ತಂಟೆಗೆ ಮಾತ್ರ ಬರುತ್ತಿರಲಿಲ್ಲ.  ಇನ್ನೂ  ಕೊನೆಯ ಅಣ್ಣನಿಗೂ, ನನಗೂ ವಯಸ್ಸಿನ ಅಂತರ ಸ್ವಲ್ಪ ಕಡಿಮೆಯಾದ್ದರಿಂದ ಅವನ ದೊಡ್ಡತನಕ್ಕೆ ನನ್ನ ಬಳಿ ಬೆಲೆ ಇರಲಿಲ್ಲ. ಎಣ್ಣೆಸ್ನಾನಕ್ಕೆ ಬೇಗ ಎದ್ದವರೂ ಮಿಕ್ಕೆಲ್ಲರ ಸ್ನಾನ ಆಗುವವರೆಗೆ ಪುಸ್ತಕವನ್ನು ಯಾವುದೇ ಅಡಚಣೆ ಇಲ್ಲದೆ ಓದಲಾಗುತ್ತಿತ್ತು.  ನನಗೂ, ಕೊನೆಯ ಅಣ್ಣನಿಗೂ ಬೇಗ ಏಳುವುದರಿಂದ ಹಿಡಿದು ಎಣ್ಣೆ ಹಚ್ಚುವಾಗಿನ ಸಂಭ್ರಮ, ಸ್ನಾನ ಎಲ್ಲದರಲ್ಲಿಯೂ ಸ್ಪರ್ಧೆ ಇರುತ್ತಿತ್ತು.  ಅಮ್ಮ ಈ ರಂಪರಾಮಾಯಣವೇ ಬೇಡವೆಂದು ಇಬ್ಬರಿಗೂ ಒಟ್ಟಿಗೆ ಎಣ್ಣೆ ಹಚ್ಚಿ, ನೆನೆಯಲು ಬಿಡುತ್ತಿದ್ದಳು. ಇಬ್ಬರೂ ಎಣ್ಣೆ ಹಚ್ಚಿದ ನಂತರ ಮೈ ಮೇಲೆಲ್ಲಾ ಜಾಮಿಟ್ರಿಯ ಚಿತ್ರಗಳನ್ನು ಬರೆದುಕೊಂಡು ಸಂಭ್ರಮಿಸುತಿದ್ದೆವು.  ನಂತರ ಬಿಸಿ ನೀರಿನ ಸ್ನಾನ!

ಆಗ ಬೆಂಗಳೂರಿನಲ್ಲಿ ನೀರಿಗೆ ಕೊರತೆಯಿರಲಿಲ್ಲ. ನಾವಿದ್ದದ್ದು ಮೆಜೆಸ್ಟಿಕ್ ನ ವಠಾರವೊಂದರಲ್ಲಿ. ದಿನದ ೨೪ ಗಂಟೆಗಳೂ! ನೀರು ಕೊಳಾಯಿಗಳಲ್ಲಿ ಬರುತ್ತಲೇ ಇತ್ತು. ನೀರು ತುಂಬುವ ಹಬ್ಬವೆಂದು ಅಕ್ಕಪಕ್ಕದ ಮನೆಯವರೆಲ್ಲರೂ ಸೇರಿ ಹಿಂದಿನ ದಿವಸವೇ ಬೀದಿಗಳಿಂದ ಹಿಡಿದು, ಇಡೀ ಮನೆ, ಬಚ್ಚಲು ಮನೆ ಎಲ್ಲವನ್ನೂ ತೊಳೆದು, ಹಂಡೆಯನ್ನು ಅತ್ಯಂತ ಚಂದದಲ್ಲಿ ತೊಳೆದು ನೀರು ತುಂಬಿಸಲಾಗುತ್ತಿತ್ತು. ಬಡವ ಬಲ್ಲಿದ ಬೇಧವಿಲ್ಲದೆ ಎಲ್ಲರೂ ಅತ್ಯಂತ ಖುಷಿಯಿಂದ ಬೀದಿ ತೊಳೆಯುವುದರಲ್ಲಿ ಪಾಲ್ಗೊಳ್ಳುತ್ತಿದ್ದರು. ಸೂರ್ಯೋದಯಕ್ಕೂ ಮುನ್ನಾ ಸ್ನಾನ ಆಗಬೇಕಾದದ್ದರಿಂದ (ನರಕಾಸುರನ ಕಥೆಯಲ್ಲಿದೆ ಅಂತೆ),  ಮೊದಲ ಹಂಡೆ ಬಿಸಿ ನೀರು ‘ಬಂಗಾರದ ನೀರು’ ಎಂದು ಅಮ್ಮ ಮೊದಲೇ ಹುರಿದುಂಬಿಸಿ, ನನಗೂ ಮತ್ತೂ ಕೊನೆ ಅಣ್ಣನಿಗೂ ಇದರಲ್ಲಿಯೂ ಸ್ಪರ್ಧೆ! ಅಂತೂ ಇಂತೂ ಇಬ್ಬರನ್ನು ಒಟ್ಟಿಗೆ ಕೂಡಿಸಿ ನೀರೆರೆಯಲು ಆರಂಭಿಸುತ್ತಿದ್ದಳು ಅಮ್ಮ.  ಆಕೆ ಇಡೀ ತಲೆಗೂದಲು ಕೈಗೆ ಬರುವಂತೆ ಸೀಗೆಕಾಯಿ ಹಾಕಿ ಉಜ್ಜಿ, ಉಜ್ಜಿ, ರಪ, ರಪ ಎಂದು ಕೈ ಅಡ್ಡ ಇಟ್ಟು ಚೊಂಬಿನಿಂದ ನೀರನ್ನು ತಲೆಯ ಮೇಲೆ ಹಾಕುತ್ತಿದ್ದ ಶೈಲಿಗೆ ಕಣ್ಣುಗಳಲ್ಲಿ ಸೀಗೆಕಾಯಿ ಹೋಗಿ ಕಣ್ಣುರಿಯಲು ಆರಂಭವಾಗುತ್ತಿತ್ತು. ಆದರೂ ಆ ಚಳಿಗೆ ತಲೆಯ ಮೇಲೆ ಬಿಸಿನೀರು ಬೀಳುತ್ತಿದ್ದದ್ದು, ಎಷ್ಟು ಹಂಡೆ ನೀರು ಖಾಲಿಯಾದರೂ ಎದ್ದೇಳಲು ಮನಸ್ಸೇ ಬರುತ್ತಿರಲಿಲ್ಲ. ಕೊನೆಗೆ ನೀರು ಹಾಕಿ, ಹಾಕಿ ಸೋತ ಅಮ್ಮನೇ ನಮ್ಮನ್ನು ಕಳಿಸಬೇಕಿತ್ತು! ಆಕೆ ಉಜ್ಜುವಾಗ ಉರಿಯಾಗಿ ನಾವೇನಾದರೂ ಸ್ವಲ್ಪ ನಕಾರ ಮಾಡಿದರೆ, ತನ್ನ ತವರು ಮನೆಯ ದೀಪಾವಳಿಯ ಸಂಭ್ರಮ, ತನ್ನ ಅಪ್ಪ ಬಾವಿಯಲ್ಲಿ ನೀರು ಸೇದಿ ಹಾಕುತ್ತಿದ್ದದ್ದು, ತನ್ನ ಅಮ್ಮ ಹಾಕುತ್ತಿದ್ದ ಕುದಿಯುತ್ತಿತ್ತು ಎಂದೇ ಹೇಳಬಹುದಾದಷ್ಟು ಬಿಸಿನೀರು ಎಲ್ಲವನ್ನೂ ಹೇಳುತ್ತಾ ಕೊನೆಗೆ ಆಕೆಯ ದೊಡ್ಡಪ್ಪ ಈ ಸಮಯದಲ್ಲಿ ಬಂದರೆ ತನಗಾಗುತ್ತಿದ್ದ ಭಯ, ಆತ ತಲೆ, ಮೈ ಉಜ್ಜುತ್ತಿದ್ದ ಶೈಲಿ, ಅದರಿಂದ ಮೈಕೈ ಎಲ್ಲವೂ ಕೆಂಪಾಗಿ ಉರಿಯುತ್ತಿದ್ದದ್ದು ಇದೆಲ್ಲವನ್ನು ಪ್ರತಿ ವರ್ಷವೂ ಆಕೆ ಹೇಳಿ, ಹೇಳಿ, ನಮಗದು ಬಾಯಿ ಪಾಠವಾಗಿಬಿಡುತ್ತಿತ್ತು. ಈಗ ಆಕೆಯ ಮೈಯಲ್ಲಿ ಕಸುವಿಲ್ಲ, ಬಹುಶಃ ಆಕೆ ಮನಸ್ಸು ಮಾಡಿದರೂ, ಸಮಯವಿಲ್ಲದ ನಮಗೆ, ದೂರದೇಶದಲ್ಲಿರುವ ಅಣ್ಣನಿಗೆ?! ನಮ್ಮಲ್ಲಿ ತಾಳ್ಮೆಯಿಲ್ಲ. ಎಲ್ಲವೂ ನೆನಪು ಮಾತ್ರ. ಆದರೂ ಅಮ್ಮ ಈಗಲೂ ಎಣ್ಣೆ ಸ್ನಾನ ಮಾಡಿಕೊಳ್ಳಲು ಹಠ ಮಾಡುವ ಮೊಮ್ಮಕ್ಕಳಿಗೆ, ತನ್ನ ತವರುಮನೆ ಕತೆ ಹೇಳದೇ ಬಿಡಳು. ಅವರಿಗೂ ಆ ಕತೆ ಬಾಯಿಪಾಠವಾಗುತ್ತಿದೆ.

ಸ್ನಾನ ಮಾಡಿದ ಕೂಡಲೇ ಓಡಿ ಹೋಗಿ ಒಂದೇ ಒಂದು ಬಿಜಲಿ ಪಟಾಕಿ ಹಚ್ಚುವುದು. ಇಡೀ ವಠಾರದಲ್ಲಿ ಎಲ್ಲಾ ಗೆಳೆಯರಿಗೂ ಸ್ಪರ್ಧೆ, ಬೆಳಿಗ್ಗೆ ಬೇಗ ಎದ್ದು ಸ್ನಾನ ಮಾಡಿ ಯಾರು ಪಟಾಕಿ ಹಚ್ಚುವರು ಅವರಿಗೊಂದು ಹೆಮ್ಮೆ!  ಮೊದಮೊದಲಿಗೆ ಅಪ್ಪನ ಸಂಬಳ ಚೆನ್ನಾಗಿದ್ದಾಗ ಡಬ್ಬ, ಡಬ್ಬ ಪಟಾಕಿ ತರುವುದು ಆತನಿಗೊಂದು ಖಯಾಲಿ.  ಇಡೀ ವಠಾರಕ್ಕೆ ನಮ್ಮ ಮನೆಯಲ್ಲಿಯೇ ಹೆಚ್ಚಿನ ಪಟಾಕಿ ತರುತ್ತಿದ್ದದ್ದು. ಕರಾವಳಿಯಿಂದ ಬಂದ ಅಮ್ಮನಿಗೆ ಪಟಾಕಿ ಹೊಡೆಯುವುದು ಅಷ್ಟೊಂದು ಇಷ್ಟವಿಲ್ಲದ್ದು, ಪದ್ಧತಿಯಿಲ್ಲದಕ್ಕೋ ಅಥವಾ ಹಣ ಸುಖಾಸುಮ್ಮನೇ ದಂಡವಾಗುತ್ತಿದೆ ಎನ್ನುವ ಸಂಕಟಕ್ಕೋ, ಅಪ್ಪ ಕುಡಿದು ಪಟಾಕಿ  ಹಚ್ಚುತ್ತಾರೆ ಎನ್ನುವ ನೋವಿಗೋ ಅಪ್ಪ, ಅಮ್ಮನಿಗೆ ಈ ವಿಷಯದಲ್ಲಿ ಸ್ವಲ್ಪ ಕಿರಿಕ್ ಆಗುತ್ತಿತ್ತು.  ಜಗಳ ಇಷ್ಟವಿಲ್ಲದ ಅಮ್ಮ ಇದಕ್ಕೆ ಕಂಡುಕೊಂಡ ಉಪಾಯವೆಂದರೆ, ದೀಪಾವಳಿಯ ೩ ರಾತ್ರಿಗಳು ಕೂಡಾ ಮನೆಮಂದಿಯನ್ನೆಲ್ಲಾ ಕರೆದುಕೊಂಡು ಹೊಸದಾಗಿ ರಿಲೀಸ್ ಆದ ಸಿನೆಮಾಗಳಿಗೆ ಹೋಗುವುದು.  ಆದರೂ ಸಿನೆಮಾಕ್ಕೆ ಹೋಗಿ ಬಂದು, ಕುಡಿದು, ಅದೇ ಮತ್ತಿನಲ್ಲಿ ವಠಾರದ ಮಂದಿಯನ್ನೆಲ್ಲಾ ಎಬ್ಬಿಸಿ, ಪಟಾಕಿ ಹಚ್ಚುತ್ತಿದ್ದ ಅಪ್ಪ!  ಈಗಲೂ ನನಗೆ ಪಟಾಕಿ ಎಂದರೆ ಕಣ್ಮುಂದೆ ಬರುವುದು ಅಪ್ಪ ತರುತ್ತಿದ್ದ ಸಾವಿರ ಪಟಾಕಿಗಳ ಸರಮಾಲೆ, ನಮ್ಮ ಮನೆಯ ಬಳಿ ಇಟ್ಟರೆ ವಠಾರದ ಅರ್ಧಕ್ಕೂ ಅದರ ಉದ್ಧ, ಅದರ ಶಬ್ಧ! ಇಷ್ಟನ್ನು ಬಿಟ್ಟರೆ ನಾನು ತೀರಾ ಚಿಕ್ಕವಳಿದ್ದರಿಂದ ಇದ್ಯಾವುದೂ ನನ್ನ ಗಮನಕ್ಕೆ ಬರುತ್ತಲೇ ಇರಲಿಲ್ಲ. ಈಗ ಹಿಂದಿರುಗಿ ನೋಡಿದಾಗ ನಾನು ಅಪ್ಪನ ಕಾಲದಲ್ಲಿ ಅಷ್ಟೊಂದು ಪಟಾಕಿ ಹೊಡೆದದ್ದು ಇಲ್ಲವೆನ್ನಬೇಕು. ಅಣ್ಣಂದಿರೇ ಹೆಚ್ಚು ಮಜಾ ಅನುಭವಿಸಿದ್ದರು.

ಅಪ್ಪನಿಗೆ ಆತನ ಸಂಬಂಧಿಕರು ಮೋಸ ಮಾಡಿ, ಅದೇ ಕೊರಗಿನಲ್ಲಿ ತೀರಿಕೊಂಡರು.  ಆತ ತೀರಿಕೊಂಡ ನಂತರ ಸಣ್ಣ ವಯಸ್ಸಿಗೆ ದುಡಿಯಲು ಶುರು ಮಾಡಿದ ಅಣ್ಣಂದಿರು ಕೊಡುತ್ತಿದ್ದ ೫ ರೂಪಾಯಿಗಳು, ನಮಗೆ ಅತ್ಯಮೂಲ್ಯವಾಗಿ ಕಾಣಿಸುತಿತ್ತು. ಅಕ್ಕ ಹಾಗೂ ನಾನು, ನಮಗೆ ಪಟಾಕಿ ಬೇಡವೆಂದು ೫ ರೂಪಾಯಿಗಳಲ್ಲಿ ನಮಗೆ ಬೇಕಾದ ಸರ, ಕ್ಲಿಪ್, ಬಳೆ ಇತ್ಯಾದಿಗಳನ್ನು ಕೊಂಡುಕೊಳ್ಳುತ್ತಿದ್ದೆವು. ಒಮ್ಮೆ ದೀಪಾವಳಿಯ ಹಿಂದಿನ ದಿವಸ, ಕ್ಲಿಪ್ ತರಲು ಹೋದಾಗ, ಏನಾಯಿತೋ ಏನೋ ಗೊತ್ತಿಲ್ಲ, ಬಳೆ ಅಂಗಡಿಯಲ್ಲಿ ಒಂದರ ಮೇಲೊಂದು ಪೇರಿಸಿಟ್ಟಿದ್ದ ಗಾಜಿನ ಬಳೆಗಳು ಕೆಳಗೆ ಬಿದ್ದು ಚೂರುಚೂರಾಗಿಬಿಟ್ಟಿತ್ತು. ಅದರ ಪಕ್ಕದಲ್ಲೇ ಇದ್ದ ನನಗೆ ‘ಶುಕ್ರವಾರ ಬೇರೆ, ಸಂಜೆಯ ಹೊತ್ತು, ಜೊತೆಗೆ ದೀಪಾವಳಿ! ಬಳೆಗಳಿಗೆ ಒರಗಿ ಬೀಳಿಸಿಬಿಟ್ಟೆಯಾ? ಎಂದೂ ಎರ್ರಾಬಿರ್ರಿ ಅಂಗಡಿಯವಳ ಕೈಯಲ್ಲಿ ಬೈಸಿಕೊಂಡು, ನಾನಲ್ಲವೆಂದೂ ಹೇಳಿದರೂ ಆಕೆ ನಂಬದೆ, ಅಲ್ಲಿಂದ ಓಡಿಸಿಬಿಟ್ಟಿದ್ದಳು.  ಅದೇ ನೋವಿನಲ್ಲಿ ಮತ್ತೊಂದು ಅಂಗಡಿಗೆ ಹೋಗಿ ಕ್ಲಿಪ್, ಬಳೆಗಳನ್ನು ಮನೆಗೆ ತಂದು, ಚಿಲ್ಲರೆ ನೋಡಿದಾಗ, ಆತ ೧೦ ರೂಪಾಯಿಗಳನ್ನು ನನಗೆ ಹೆಚ್ಚಿಗೆ ವಾಪಸ್ಸು ಕೊಟ್ಟಿದ್ದು ನೋಡಿ, ಬೇರೆಯವರ ಹಣ ಇಟ್ಟುಕೊಳ್ಳಬಾರದೆಂದು ಯೋಚಿಸಿ (ಎಷ್ಟೇ ಆಸೆಯಾದರೂ!), ಆತನಿಗೆ ವಾಪಾಸು ಕೊಟ್ಟಿದ್ದು, ಅಮ್ಮ ಕಲಿಸಿದ ನಿಯತ್ತಾಗಿತ್ತು. ಅದೊಂದು ಸಾರ್ಥಕತೆಯನ್ನು ಕೊಟ್ಟಿತ್ತು. 

ಇನ್ನೂ ಅಣ್ಣನ ಪಾಲಾದ ೫ ರೂಪಾಯಿಗೆ ತರುತ್ತಿದ್ದ ಪಟಾಕಿ, ನಮ್ಮಿಬ್ಬರಿಗೆ ಸಾಕಾಗುತ್ತಿತ್ತು. ಇಬ್ಬರೂ ಬೆಳ್ಳಂಬೆಳಗ್ಗೆ ಹಣ ಹಿಡಿದು, ಚಿಕ್ಕ ಲಾಲ್ ಬಾಗ್ ಗೆ ಹೋಗಿ, ಯಾವುದನ್ನೂ ಕೊಂಡುಕೊಂಡರೆ ಹೆಚ್ಚಿನ ಪಟಾಕಿ ದೊರೆಯುವುದು ಎಂಬುದನ್ನೆಲ್ಲಾ ಯೋಚಿಸಿ, ಚರ್ಚಿಸಿ, ಆಟಮ್ ಬಾಂಬ್ ಗಳೆಲ್ಲಾ ಆತನಿಗೆ, ಸುರುಸುರುಬತ್ತಿ ಅಂಥವೆಲ್ಲಾ ನನಗೆ ಎಂದು ನಿರ್ಧರಿಸಿ ತರುವಷ್ಟರಲ್ಲಿ ಮಧ್ಯಾಹ್ನವಾಗಿರುತ್ತಿತ್ತು. ಒಂದೇ ದಿವಸ ಹೊಡೆದು ಮುಗಿಸಿದರೆ ಇನ್ನೂ ಉಳಿದ ೨ ದಿವಸಗಳಿಗೆ ಏನು ಮಾಡುವುದು? ಎಂದು ಅಣ್ಣ ಇಷ್ಟಿಷ್ಟೇ ಪಟಾಕಿ ಹೊಡೆಯುತ್ತಿದ್ದ. ಸರ ಪಟಾಕಿ ತಂದು ಅದನ್ನು ಬಿಡಿಸಿಟ್ಟುಕೊಂಡು ಒಂದೊಂದೇ ಪಟಾಕಿ ಹೊಡೆಯುತ್ತಿದ್ದೆವು. ಆದರೂ ಅರ್ಧ ಗಂಟೆಯಲ್ಲಿ ನಮ್ಮಲ್ಲಿರುವ ಪಟಾಕಿ ಮುಗಿದು ಬಿಡುತ್ತಿತ್ತು. ಇನ್ನುಳಿದ ಸಮಯವನ್ನೇನು ಮಾಡುವುದು? ನಮ್ಮ ವಠಾರದ ಹಿಂದೆ ಒಂದಷ್ಟು ಶ್ರೀಮಂತ ಹಿಂದಿಯವರ ಮನೆಗಳಿದ್ದವು.  ಅವರ ಮನೆಯ ಮುಂದೆ ಆಚೀಚೆ ಒಂದಷ್ಟು ಹೊತ್ತು ಸುಳಿದಾಡುವುದು, ಅವರು ಪಟಾಕಿ ಹೊಡೆಯುವಾಗ ನಿಂತು ನೋಡುವುದು, ಅವರಿಗೆ ಕರುಣೆ ಉಕ್ಕಿ ಬಂದು ಕೊಟ್ಟರೆ ನಾವು ಕೂಡ ಹೊಡೆಯುವುದು, ಇಲ್ಲವಾದರೆ ಠುಸ್ ಆದ ಅವರ ಪಟಾಕಿಗಳೆಲ್ಲವನ್ನೂ ಆರಿಸಿ ತಂದು, ಅದರ ಮದ್ಧನ್ನು ಒಂದು ಪೇಪರಿಗೆ ನಿಧಾನವಾಗಿ ಸುರಿದು, ಆ ಪೇಪರ್ ಗೆ ಬೆಂಕಿ ಹಚ್ಚಿ ಮಜಾ ನೋಡುವುದು!  ಒಮ್ಮೆಯಂತೂ ಹೀಗೆ ಪೇಪರ್ ಗೆ ಸುರಿದ ಮದ್ಧು ಹೆಚ್ಚಾಗಿ, ಅಣ್ಣನ ಮುಖದ ಹತ್ತಿರದವರೆಗೆ ಬೆಂಕಿ ಬಂದು, ಭಯವಾಗಿತ್ತು.  ಪುಣ್ಯಕ್ಕೆ ಯಾವುದೇ ರೀತಿಯ ಹಾನಿಯಾಗಿರಲಿಲ್ಲ. ಈಗ ಪಟಾಕಿ ಹೊಡೆಯುವ ಮನೆಗಳ ಮುಂದೆ, ಮಕ್ಕಳು ಸುಳಿದಾಡುತ್ತಿದ್ದರೆ ಏಕೋ ಏನೋ, ಆ ಮುಖಗಳಲ್ಲಿ ನನಗೆ, ನನ್ನ ಹಾಗೂ ಅಣ್ಣನ ಮುಖಗಳೇ ಕಾಣಿಸುತ್ತವೆ.  ನಮ್ಮ ಮನೆಯಲ್ಲಿರುವ ಪಟಾಕಿಗಳನ್ನು ಒಂದಿಷ್ಟೂ ಹೆಚ್ಚಿಗೆ ಕೊಟ್ಟು ಕಳುಹಿಸುವಾಗ, ಮನಕ್ಕೆ ತೃಪ್ತಿ ದೊರೆಯುತ್ತದೆ.

ವಠಾರದ ಮಕ್ಕಳೆಲ್ಲರಿಗೂ ರಜೆಯಾದ್ದರಿಂದ ನಮ್ಮನ್ನು ಹೇಳುವವರು, ಕೇಳುವವರು ಯಾರೂ ಇರುತ್ತಿರಲಿಲ್ಲ.  ಅಲ್ಲೊಂದು ಮೂಲೆಯಲ್ಲಿ ಅಜ್ಜಿ, ತಾತ ಇಬ್ಬರೇ ಮನೆ ಮಾಡಿಕೊಂಡಿದ್ದರು. ಅವರಿಗೆ ಮಕ್ಕಳಿರಲಿಲ್ಲ.  ತಾತನಿಗೆ ಏಳಲು ಕೂಡ ಆಗುತ್ತಿರಲಿಲ್ಲ. ಮಲಗೇ ಇದ್ದರೂ, ತಾತನ ರೋಷಕ್ಕೇನೂ ಕಡಿಮೆ ಇರಲಿಲ್ಲ. ಮಕ್ಕಳು ಆಟ ಆಡಿದರೂ, ಬೈಯುವುದು, ಕೂಗಿಕೊಳ್ಳುವುದು ಎಲ್ಲವನ್ನೂ ಮಾಡುತ್ತಿದ್ದರು.  ಹಾಗಾಗಿ ದೀಪಾವಳಿ ಬಂದರೆ ಅವರ ಮೇಲೆ ಸೇಡು ತೀರಿಸಿಕೊಳ್ಳುವ ಚಟ ಎಲ್ಲಾ ಮಕ್ಕಳಿಗೂ! ಅವರ ಮನೆಯ ಮುಂದೆ ಬೇಕಂತಲೇ ಈರುಳ್ಳಿ ಬಾಂಬುಗಳನ್ನು ಇಟ್ಟು ಹೊಡೆಯುವುದು, ಆಚೀಚೆ ಪೋಲೀಸರು ಓಡಾಡುವ ಸಮಯದಲ್ಲಿ ಸೆಗಣಿಯಲ್ಲಿ ಪಟಾಕಿ ಇಟ್ಟು ಹೊಡೆಯುವುದು, ಡಬ್ಬದೊಳಗೆ ಪಟಾಕಿ ಇಟ್ಟು ಹೊಡೆಯುವುದು, ಒಂದೇ, ಎರಡೇ, ಇದೆಲ್ಲವೂ ತಪ್ಪು ಎಂಬುದೂ ನಮಗೆ ತಿಳಿದಿರಲಿಲ್ಲಾ.  ಯಾರೂ ಎಷ್ಟು ಕಿತಾಪತಿ ಮಾಡಿ ಪಟಾಕಿ ಹೊಡೆಯುತ್ತಾರೋ ಎಂಬುದಷ್ಟೇ ಮುಖ್ಯವಾಗಿತ್ತು.  ನಾವು ಮಕ್ಕಳು ಎಷ್ಟೇ ಕಿತ್ತಾಟ ಮಾಡಿಕೊಂಡರೂ, ನಮ್ಮ ಈ ಕಿತಾಪತಿ ವಿಷಯಗಳು ದೊಡ್ಡವರ ಬಳಿ ಹೋಗುತ್ತಿರಲಿಲ್ಲ. ಅಜ್ಜಿ ಬಂದು ದೂರುವಾಗ ನಾವೆಲ್ಲರೂ ಒಗ್ಗಟ್ಟಿನಿಂದ ನಮಗೇನೂ ತಿಳಿಯದು ಎಂಬಂತೆ ಮುಖ ಮಾಡಿಕೊಂಡು ಮುಗ್ಧರಂತೆ ನಿಲ್ಲುತ್ತಿದ್ದದ್ದು, ದೊಡ್ಡವರಿಗೆ ಪಾಪ! ಆಕೆಗೆ ಮಕ್ಕಳಿಲ್ಲದ ಹೊಟ್ಟೆ ಉರಿಗೆ, ಈ ಮಕ್ಕಳ ಮೇಲೆ ದ್ವೇಷ ಸಾಧಿಸುತ್ತಾಳೆ! ಎಂಬಷ್ಟು ಅಜ್ಜಿ ತಪ್ಪಿತಸ್ಥೆಯಾಗಿಬಿಡುತ್ತಿದ್ದಳು. ಈಗಿನ ಮಕ್ಕಳೆಲ್ಲರಿಗೂ ಈ ಪಟಾಕಿ, ಮಕ್ಕಳ ಗುಂಪು, ಆಟ ಎಲ್ಲವೂ ವಿಡಿಯೋಗಳ ಒಳಗಿನ ಕ್ಲಿಪ್ಪಿಂಗ್ಸ್ ಗಳಂತೆ, ಜೊತೆಗೆ ಶಾಲೆಯಲ್ಲಿ ಹೇಳಿ ಕೊಡುವ ಪಟಾಕಿಯಿಂದಾಗುವ ಪರಿಸರ ಹಾನಿ, ಅರ್ಥವಾಗುತ್ತದೆಯೋ ಇಲ್ಲವೋ, ಟೀಚರ್ಸ್ ಗಳನ್ನು ಮೆಚ್ಚಿಸಬೇಕೆನ್ನುವ ಹಂಬಲ, ಎಲ್ಲಕ್ಕಿಂತ ಹೆಚ್ಚಾಗಿ ಬಿಪಿಒ ಕಂಪೆನಿಗಳು, ಸಾಫ್ಟ್ ವೇರ್ ಕಂಪೆನಿಗಳು ನಮ್ಮ ಹಬ್ಬಗಳಿಗೆ ನೀಡದ ರಜೆಗಳು (ಅಮೇರಿಕಾದಲ್ಲಿ ರಜೆ ಇದ್ದರೆ ಮಾತ್ರ ಇಲ್ಲಿಯವರಿಗೂ ಇರುವ ರಜೆ!), ಈ ಎಲ್ಲಾ ಥ್ರಿಲ್ ಗಳನ್ನು ಕಡಿಮೆ ಮಾಡುತ್ತಿವೆ ಎಂದರೆ ತಪ್ಪಾಗಲಾರದು. ಈಗ ದೀಪಾವಳಿ ಎಂದರೆ ಮತ್ತೊಂದು ರಜೆಯಷ್ಟೇ!

Monday, October 29, 2012

ಉತ್ಸವ - ಭಾಗ ೧


ತುಮಕೂರಿನ ಬಳಿಯೊಂದು ಪುಟ್ಟ ಹಳ್ಳಿ, ಅಲ್ಲೊಂದು ಪುಟ್ಟದೊಂದು ಗುಡಿ. ಈ ಗುಡಿಯ ಆಡಳಿತ, ಪೂಜೆ, ಕೆಲಸ, ಕಾರ್ಯಗಳೆಲ್ಲವನ್ನೂ ಪುಟ್ಟ ಕುಟುಂಬ ವರ್ಗವೊಂದು ನೋಡಿಕೊಳ್ಳುತ್ತದೆ.  ಈ ಕುಟುಂಬ ವರ್ಗವು ರಾಮಾನುಜಚಾರ್ಯರ ಅನುನಾಯಿಗಳಾದ ಆಳ್ವಾರುಗಳಿಗೆ ಸೇರಿದ್ದು.  ಇವರನ್ನು ಸಾತಾನಿ ವೈಷ್ಣವರೆಂದು ಕೂಡ ಕರೆಯಲಾಗುವುದು.  ಈ ಗುಡಿಯಲ್ಲಿ ಯಾವುದೇ ಉದ್ಭವ ಮೂರ್ತಿಯಿಲ್ಲ. ತಿರುಪತಿ ವೆಂಕಟರಮಣ ತಮ್ಮ ದೈವವೆಂದು ಹಾಗೂ ಅಲ್ಲಿಗೆ ಯಾವತ್ತಿಗೂ ಹೋಗಿ ಬರಲು ಸಾಧ್ಯವಿಲ್ಲವೆಂದು, ಅಲ್ಲಿಂದ ತಂದ ಕಲ್ಲೊಂದನ್ನು ಇಲ್ಲಿ ಪ್ರತಿಷ್ಠಾಪಿಸಿ, ಕಳ್ಳ ಒಕ್ಕಲು ಮಾಡಿಕೊಂಡಿರುವರು! ರಂಗನಾಥನ ಗುಡಿಯೆಂದು ಹಳ್ಳಿಯಲ್ಲಿ ಪ್ರಸಿದ್ಧಿ.  ಆ ಗುಡಿಯಿರುವ ಜಾಗದ ಮಾಲೀಕರು ಲಿಂಗಾಯಿತರು! ತಮ್ಮ ಕಾಲದ ನಂತರ ಮಕ್ಕಳು ಗಲಾಟೆ ಮಾಡಿ, ಗುಡಿಯನ್ನು ಎಬ್ಬಿಸಿದರೆ ತೊಂದರೆಯಾಗುವುದೆಂದು, ತಾವಿದ್ದ ಕಾಲದಲ್ಲಿಯೇ, ರಿಜಿಸ್ಟ್ರೇಷನ್ ಮಾಡಿಸಲೆಂದು ಹಟ ಮಾಡಿ, ದೇವಸ್ಥಾನದ ಟ್ರಸ್ಟಿಗೆ ಇತ್ತೀಚೆಗೆ ಈ ಜಾಗವನ್ನು ಬಿಟ್ಟುಕೊಟ್ಟಿರುವರು. 

ಜಾಗ ತಮ್ಮದಾದ ಮೇಲೆ, ಇಲ್ಲಿ ಹಬ್ಬ, ಹುಣ್ಣಿಮೆಗಳನ್ನು ಆಚರಿಸದಿದ್ದಲ್ಲಿ, ದೇವರು ಕೋಪ ಮಾಡಿಕೊಳ್ಳುವುದಿಲ್ಲವೇ?! ತಮ್ಮ ದೇವರನ್ನು ಕೂಡ ಪ್ರಖ್ಯಾತಿಗೊಳಿಸಬೇಕಲ್ಲವೇ?! ಇತ್ಯಾದಿ ಜಿಜ್ಞಾಸೆಗಳಿಂದ ಹಾಗೂ ಈಗ ಎಲ್ಲೆಡೆ ನಡೆಯುವಂತೆ ದೇವಸ್ಥಾನದ ಜೀರ್ಣೋದ್ಧಾರದ ಕೆಲಸ ನಡೆಸಲು ತೀರ್ಮಾನವಾಯಿತು, ಆ ದೇವಸ್ಥಾನದ ಮೇಲೆ ಹಕ್ಕಿರುವ ಹತ್ತಿಪ್ಪತ್ತು ಕುಟುಂಬ ವರ್ಗದವರೆಲ್ಲರನ್ನೂ ಭೇಟಿ ಮಾಡಿ, ಇದು ನಿಮ್ಮ ಕುಟುಂಬದ ದೇವರೆಂದು ಇದಕ್ಕೆ ತಮ್ಮ ಶಕ್ತಾನುಸಾರ ಬೆಂಬಲ ವ್ಯಕ್ತಪಡಿಸಬೇಕೆಂದು ಮನದಟ್ಟುಪಡಿಸಲಾಯಿತು. ಬೇರೆ ಬೇರೆ ಊರಿನಲ್ಲಿ ನೆಲೆಸಿದ್ದು, ಒಂದೇ ಕುಟುಂಬ ವರ್ಗಕ್ಕೆ ಸೇರಿದವರಾದರೂ, ಬಂದು ಹೋಗುವ ಬಳಕೆಯಿಲ್ಲದ ಕಾರಣ, ದೂರವೇ ಆಗಿರುವ ಕುಟುಂಬದವರೆಲ್ಲರನ್ನೂ, ಈ ಕಾರಣದಿಂದ ಒಟ್ಟುಗೂಡಿಸಿ, ಈ ದೇವರಿಗೆ ಅವರು ಹರಕೆ ಹೊತ್ತಿದ್ದಕ್ಕೆ, ಮಗಳಿಗೆ ಮದುವೆ ಆಯಿತು ಎಂದೂ, ಇವರು ಯಾವುದೇ ಶುಭ ಕೆಲಸಕ್ಕೂ ಮುನ್ನ ಈ ದೇವಸ್ಥಾನಕ್ಕೆ ಬಂದು ಹೋಗುವರು, ಹಾಗಾಗಿಯೇ ಇವರಿಗೆ ಒಳ್ಳೆದಾಯಿತು ಎಂದೂ, ದೇವಸ್ಥಾನಕ್ಕೂ, ತಮಗೂ ಸಂಬಂಧವೇ ಇಲ್ಲದಂತಿದ್ದ ಒಂದೇ ಕುಟುಂಬಕ್ಕೆ ಸೇರಿದವರಿಗೆಲ್ಲರಿಗೂ ವಿವರಿಸಿ, ಹಣ ಸಂಗ್ರಹಿಸಿದ್ದಾಯಿತು.  

ಉತ್ಸವ ಮೂರ್ತಿ (ರಂಗನಾಥ) ಯನ್ನು ಪ್ರತಿಷ್ಠಾಪಿಸುವ ದಿವಸ ನಡೆದ ಉತ್ಸವ ಹೀಗಿತ್ತು.  ಮೂರ್ತಿಯನ್ನು ಶುದ್ಧಗೊಳಿಸಿ, ಎಲ್ಲಾ ತರಹದ ಮೈಲಿಗೆಯನ್ನು ತೊಳೆದು, ಶುಚಿ ಮಾಡಿ, ಪೂಜಿಸಿ, ಅಭಿಷೇಕ ಮಾಡಿ, ನಂತರ ಇಡೀ ಹಳ್ಳಿಯಲ್ಲಿ ಈ ದೇವರ ಮೂರ್ತಿಯ ಮೆರವಣಿಗೆ.  ಈ ಮೆರವಣಿಗೆಗಾಗಿ ಕೊಳದಪ್ಪಲೆ ಬಾಳೆಹಣ್ಣಿನ ರಸಾಯನ ತಯಾರು ಮಾಡುತ್ತಾರೆ. ಪ್ರಸಾದಕೆಂದು ಅಲ್ಲ! ಮೆರವಣಿಗೆ ಶುರುವಾದಾಗ ಬಹುಶಃ ಕೊರಗ ಜಾತಿಯ (?!) ಜನರು ಸುಮಾರು ೭, ೮ ಮಂದಿ ಟಮಟೆ ಬಾರಿಸಲು ತೊಡಗುತ್ತಾರೆ. ಇವರನ್ನು ಯಾವುದೋ ಹಳ್ಳಿಯಿಂದ ಉತ್ಸವಕೆಂದೇ ಕರೆಸಲಾಗಿತ್ತು.  ಟಮಟೆ ಬಾರಿಸುತ್ತಾ, ಬಾರಿಸುತ್ತಾ, ಅವರಲ್ಲೇ ೩ ಮಂದಿ ವಿಶೇಷ ವಸ್ತ್ರಧಾರಿಗಳಾಗಿ ಕೈಯಲೊಂದು ಖಡ್ಗ, ಗುರಾಣಿ ಹಿಡಿದು ಆವೇಶಭರಿತರಾಗುತ್ತಾರೆ.  ಈ ಮೂವರಿಗೊಬ್ಬ ನಾಯಕ, ಆತನ ಕೈಯಲೊಂದು ಎಲೆಗಳಿರುವ ಸಣ್ಣ ಗಿಡದ ಕೊಂಬೆ (ಎಕ್ಕದ್ದೋ / ಹಲಸಿನದ್ದೋ?! ತಿಳಿಯಲಿಲ್ಲ).  ಆತ ಇವರನ್ನು ಎಂಥದೋ ಭಾಷೆಯಲ್ಲಿ ನಿಯಂತ್ರಿಸುತ್ತಿರುತ್ತಾನೆ. ಆಗಾಗ ಆ ಕೊಂಬೆಯಿಂದ ಹೊಡೆಯುತ್ತಿರುತ್ತಾನೆ.

ಮುಂದೆ ಟಮಟೆ ಬಾರಿಸುವವರು, ಅವರ ಹಿಂದೆ ಈ ಆವೇಶ ಭರಿತರಾದ ಮೂವರು, ಅವರ ಆವೇಶವನ್ನುನಿರ್ದೇಶಿಸುವ ನಾಯಕ, ಅವರ ಹಿಂದೆ ಈ ಬಾಳೆಹಣ್ಣಿನ ರಸಾಯನ ತಿನ್ನಿಸಲು ಉತ್ಸವದ ರೂವಾರಿ ಅಥವಾ ಉತ್ಸಾಹಿ ಯುವಕರು, ಅವರ ಹಿಂದೆ ದೇವಸ್ಥಾನ ಆಡಳಿತ ಮಂಡಲಿಯ ಮುಖ್ಯಸ್ಥರು, ನಂತರ ಉತ್ಸವ ಮೂರ್ತಿಯ ಪಲ್ಲಕ್ಕಿ, ಇದರ ಹಿಂದೆ ಭಕ್ತರು! ಹೀಗೆ ಮೆರವಣಿಗೆ ಮುನ್ನಡೆಯುತ್ತದೆ. ಈ ಕೈಯಲ್ಲಿ ಖಡ್ಗ, ಗುರಾಣಿ ಹಿಡಿದು ಟಮಟೆಯ ಶಬ್ಧಕ್ಕೆ ಆವೇಶಭರಿತರಾದ ಮೂವರು, ಹನುಮಂತನ ಹಾಗೆ ಮುಖ ಮಾಡುತ್ತಾ, ಸುತ್ತ ನೆರೆದಿರುವವರನ್ನೂ ಹೆದರಿಸುತ್ತಾ, ರಸಾಯನ ನೋಡಿದ ಕೂಡಲೇ, ಅದಕ್ಕೆ ಬಾಯಿ ಹಾಕುತ್ತಾ (ಕೈಯಲ್ಲಿ ಮುಟ್ಟಲಾರರು) ಮುಂದೆ, ಮುಂದೆ ಹೋಗುತ್ತಿರುತ್ತಾರೆ. ಕೈಯಲೊಂದು ತಪ್ಪಲೆ ರಸಾಯನ ಹಿಡಿದು, ಇವರನ್ನು ಆಟವಾಡಿಸುತ್ತಾ, ಅವರಂತೆಯೇ ತಾನು ಕೂಡ ಕುಣಿಯುತ್ತಾ, ಸ್ವಲ್ಪ, ಸ್ವಲ್ಪ ರಸಾಯನವನ್ನು ಕೈಯಲ್ಲಿ ತಿನ್ನಿಸುವುದು ಉತ್ಸವದ ರೂವಾರಿಯ ಕೆಲಸ! ಸ್ವಲ್ಪ ಹೆಚ್ಚಿಗೆ ಇವರನ್ನು ಆಟವಾಡಿಸಿದ ತಪ್ಪಿಗಾಗಿ (ಆ ವ್ಯಕ್ತಿ ಬೇಕೆಂದೇ ಮಾಡಿದ್ದೋ? ತಿಳಿಯಲಿಲ್ಲ),  ರೊಚ್ಚಿಗೆದ್ದ ಆ ಮೂವರಲ್ಲಿ ಒಬ್ಬ, ಈತನನ್ನು ಹಿಡಿದು, ಬೀಳಿಸಿ, ಹೊಡೆದು, ಮೂರ್ಚೆ ಹೋಗಿದ್ದ! ಸಿಟ್ಟಾದ ನಾಯಕ ನಾವಿನ್ನೂ ಮುಂದುವರೆಯುವುದಿಲ್ಲವೆಂದು ಮುಷ್ಕರ ಹೂಡಿದ ಕಾರಣ, ದೇವಸ್ಥಾನದ ಮುಖ್ಯಸ್ಥರು ಎಲ್ಲರ ಕ್ಷಮೆ ಕೇಳಿ, ನಂತರ ಮೆರವಣಿಗೆ ಮೊದಲಿನ ಹಾಗೇ ಮುಂದುವರೆಯಿತು.  

ಇಡೀ ಹಳ್ಳಿಯಲೊಂದು ಸುತ್ತು ಹಾಕಿದ ಉತ್ಸವ ಮೂರ್ತಿಗಳ ಮೆರವಣಿಗೆ, ಹಳ್ಳಿಯಲ್ಲಿದ್ದ ಎಲ್ಲಾ ದೇವಸ್ಥಾನಗಳನ್ನು ದರ್ಶಿಸಿ, ಪೂಜೆ ಮಾಡಿಸಿಕೊಂಡು ತನ್ನ ಸ್ವಸ್ಥಾನಕ್ಕೆ ಮರಳುತ್ತಿತ್ತು. ಆಗ ನಡೆದ ವೈಚಿತ್ರ್ಯವೆಂದರೆ, ಉತ್ಸವ ಮೂರ್ತಿಗಳ ಪಲ್ಲಕ್ಕಿ, ಸುಮಾರು ೨೦ ಮಂದಿ ಅದನ್ನು ಹೊತ್ತಿದ್ದರು ಕೂಡ ಇದ್ದಕ್ಕಿದ್ದಂತೆ ಹಿಂದಕ್ಕೆ ಎಳೆಯತೊಡಗಿತು.  ಯಾರಿಗೂ ಏನೂ ಅರ್ಥವಾಗಲಿಲ್ಲ. ಎಷ್ಟೇ ಕಷ್ಟ ಪಟ್ಟರೂ ಪಲ್ಲಕ್ಕಿಯನ್ನು ಹೊತ್ತವರಿಗೆ ಮುನ್ನಡೆಯಲಾಗಲಿಲ್ಲ.  ಆಗ  ಹಳ್ಳಿಯ ಜನರಲ್ಲಿ ಯಾರೋ ಒಬ್ಬರು, ಅಲ್ಲೊಂದು ಈಶ್ವರನ ಪುಟ್ಟಗುಡಿಯಿದೆ ಎಂದು, ಬಹುಶಃ ಅಲ್ಲಿಗೆ ಹೋಗಬೇಕೆಂದು ಸೂಚಿಸಿದರು. ಪಲ್ಲಕ್ಕಿ ಅತ್ತ ಸಲೀಸಾಗಿ ನಡೆಯಿತು.  ಅಲ್ಲಿ ಪೂಜಿಸಿಕೊಂಡು ಬಂದ ಮೇಲೆ ಉತ್ಸವ ದೇವರ ಪಲ್ಲಕ್ಕಿ , ತನ್ನ ದೇವಸ್ಥಾನಕ್ಕೆ ಯಾವುದೇ ಅಡಚಣೆಯಿಲ್ಲದೆ ಮರಳಿತು.

ದೇವಸ್ಥಾನದ ಮುಂಭಾಗದಲ್ಲಿ ಬಟ್ಟೆಯೊಂದನ್ನು ಹಾಸಿ, ಉಳಿದಿದ್ದ ರಸಾಯನವನ್ನೆಲ್ಲಾ (ಸುಮಾರು ೧೦, ೧೫ ಕೆಜಿ ಬಾಳೆಹಣ್ಣಿದ್ದಿರಬಹುದು!) ಅದರ ಮೇಲೆ ಸುರಿದರು.  ಈ ಆವೇಶ ಭರಿತ ಮೂವರು (ಮೆರವಣಿಗೆ ಸಮಯದಲ್ಲಿ ಮೂರು ಸಲ ತಂಡದ ಮಂದಿ ಬದಲಾಗಿದ್ದರು) ಓಡಿ ಬಂದು, ಅಲ್ಲಿದ್ದ ರಸಾಯನವನ್ನೆಲ್ಲಾ ಬಾಯಿ ತುಂಬಾ ಮುಕ್ಕಿ (ಪೂರ್ತಿ ಖಾಲಿ ಆಯಿತು), ಸೀದಾ ದೇವಸ್ಥಾನದ ಒಳಗೆ ಓಡಿ, ಮೂರ್ಚೆ ಹೋದರು! ಈ ಮೂವರಲ್ಲಿ ಒಬ್ಬಾತನಿಗೆ ಸುಮಾರು ೭೦ ವರ್ಷ ವಯಸ್ಸಾಗಿದ್ದು, ಆತ ಕೂಡ ಕೆಜಿಗಟ್ಟಲೆ ರಸಾಯನ ತಿಂದದ್ದು ಆಶ್ಚರ್ಯ ಪಡಬೇಕಾದದ್ದೇ! ನಂತರ ಅವರ ತಲೆಗೆ ತಣ್ಣೀರು ತಟ್ಟಿ ಶುಶ್ರೂಷೆ ನಡೆಸಲಾಯಿತು.  ಪ್ರಜ್ಞೆ ಬಂದ ನಂತರ ಬಟ್ಟೆ ಬದಲಾಯಿಸಿ, ತಮ್ಮ ಕೆಲಸಕ್ಕೆ ತಕ್ಕ ಕಾಣಿಕೆ ಪಡೆದು, ಇಷ್ಟು ಹೊತ್ತಿನ ತನಕ ನಡೆದದ್ದಕ್ಕೂ, ತಮಗೂ ಸಂಬಂಧವೇ ಇಲ್ಲದಂತೆ ಅವರು ಹೊರಟರು. ಉತ್ಸವ ಮುಗಿಯಿತು. ಮೂರ್ತಿಗಳು ಪ್ರತಿಷ್ಠಾಪಿತಗೊಂಡವು. ಉತ್ಸವ ಮುಗಿದ ನಂತರ ಈ ಜನರು ದೇವಸ್ಥಾನದ ಒಳಗೆ ಹೋಗಬಾರದು.

ಉತ್ಸವದಂದು ನೆರೆದಿದ್ದವರೆಲ್ಲರಿಗೂ (ಜಾತಿ ಭೇಧವಿಲ್ಲದೆ) ಊಟೋಪಚಾರದ ವ್ಯವಸ್ಥೆ. ದೇವಸ್ಥಾನದ ಕುಟುಂಬ ವರ್ಗದವರಿಗೆ ಮೊದಲು ಬಡಿಸಬೇಕೋ? ಹಳ್ಳಿಯ ಜನರಿಗೆ ಮೊದಲು ಬಡಿಸಬೇಕೋ? ಎಂಬ ಚರ್ಚೆ ನಡೆಯುವಷ್ಟರಲ್ಲಿಯೇ, ಊಟಕ್ಕೆ ಬಹು ತಡವಾಗಿದ್ದ ಕಾರಣ, ಸ್ಥಳ ಸಿಕ್ಕಲೆಲ್ಲಾ, ಎಲ್ಲಾ ಜನರು ಕುಳಿತರು. ಬೇರೆ ಜಾತಿಯ / ‘ಕೀಳು’ ಜಾತಿಯ ಅಥವಾ ಹಾಕಿದ್ದ ಬಟ್ಟೆ ನೀಟಾಗಿಲ್ಲದೆ ಕೀಳಾಗಿ ಕಾಣಿಸಿದ್ದೋ ಗೊತ್ತಿಲ್ಲ, ಅಂಥ ಮಕ್ಕಳನ್ನು ಮಾತ್ರ ಬೆದರಿಸಿ, ಎಬ್ಬಿಸಿ, ಓಡಿಸಿ, ಕುಟುಂಬ ವರ್ಗದ ಜನ ಊಟಕ್ಕೆ ಮೊದಲ ಪಂಕ್ತಿಗೆ ಕುಳಿತರು. ಕೊಳಕು, ಕೊಳಕಾಗಿದ್ದ ದೊಡ್ಡವರು ಮಾತ್ರ ಭಂಡತನದಿಂದ ಪಾಯಸದೂಟ ಮಾಡಲು ಕುಳಿತೇ ಇದ್ದರು. ಇರಿಸು ಮುರಿಸು ಮಾಡಿಕೊಂಡು ಎಲ್ಲರೂ ಅವರ ಜೊತೆಯಲ್ಲಿಯೇ ಊಟಕ್ಕೆ ಕುಳಿತರು.  ಹಳ್ಳಿಯ ಜನಕ್ಕೆ ಮುದ್ದೇ ಮಾಡಿಸಬೇಕು, ಅನ್ನದಿಂದ ಪೂರೈಸೊಲ್ಲ ಎನ್ನುವ ಒಮ್ಮತದ ಅಭಿಪ್ರಾಯ ಬರುವ ಹೊತ್ತಿಗೆ ಎಲ್ಲರ ಊಟಾ ಮುಗಿದಿತ್ತು.  ಬೇರೆ ಜಾತಿಯವರು ಮೊದಲಿಗೆ ಕುಳಿತದಕ್ಕೆ, ನಾವು ಊಟ ಮಾಡುವುದಿಲ್ಲ, ಫಲಾಹಾರ ಮಾತ್ರ ಎಂದು ಒಂದಷ್ಟು ಜನ ಬಾಳೆಹಣ್ಣು (ರಸಾಯನ ಮಾಡಲು ತಂದು, ಉಳಿದಿದ್ದ :-), ಹಣ್ಣಿಗೆ ದೋಷವಿಲ್ಲ ಅಲ್ಲವೇ?  ) ತಿಂದು ಮುಗಿಸಿದರು.  ಅಡುಗೆ ವ್ಯವಸ್ಥೆ ಸರಿಯಿಲ್ಲವೆಂದು ಇನ್ನೊಂದಷ್ಟು ಜನ ದೂರಿದರು. ಅಂತೂ ಇಂತೂ ಉತ್ಸವ ಮುಗಿಯಿತು.  

ಉತ್ಸವ ನಡೆದ ಮೇಲೆ ಬಂದ ಮೊದಲ ದಸರಾಹಬ್ಬವನ್ನು ಆಚರಿಸದಿದ್ದರೆ ಹೇಗೆ?  ವಿಜಯದಶಮಿಯ ದಿನ ಮತ್ತೆ ಉತ್ಸವ ಹೊರಟಿತು. ಈ ಬಾರಿ ಓಲಗ ಊದುವವರು ಬಂದರು.  ಓಲಗ ಶುರುವಾದ ನಂತರ ಉತ್ಸವ ಮೂರ್ತಿಯನ್ನು ಹೊತ್ತು ಹಳ್ಳಿಯ ಹಾದಿ ಬೀದಿಗಳಲೆಲ್ಲಾ ಮೆರವಣಿಗೆ ಬಂತು.  ಶಿವನ ದೇವಸ್ಥಾನದಲ್ಲಿಯೂ, ಕಾಳಿಯ (ದೇವಿಯ) ದೇವಸ್ಥಾನದಲ್ಲಿಯೂ ಈ ಉತ್ಸವ ದೇವರ ಪೂಜೆ ನಡೆಯಿತು.  ಹಣೆಗೆ ದೊಡ್ಡದಾಗಿ ವಿಭೂತಿ ಬಳಿದುಕೊಂಡು, ತಾವು ಲಿಂಗಾಯಿತರೆಂದು ಜಗಜ್ಜಾಹೀರುಗೊಳಿಸುತ್ತಿದ್ದ ಮಂದಿಯು ಕೂಡ, ಅಷ್ಟೇ ಭಯಭಕ್ತಿಯಿಂದ, ಈ ‘ರಂಗನಾಥ’ ದೇವರಿಗೆ ಹಣ್ಣುಕಾಯಿ ಮಾಡಿಸಿದರು. ನೆಲಕ್ಕೆ ಅಪ್ಪಳಿಸಿದ ತೆಂಗಿನಕಾಯಿಯನ್ನು, ‘ಕೀಳು ಜಾತಿಯ ಜನರು ಮಾತ್ರ ಆರಿಸಿಕೊಂಡು ತಿನ್ನಬೇಕು, ನಾವೆಲ್ಲಾ ಅಲ್ಲಾ! ಎಂದು ಜೋರು ಮಾಡುತ್ತಿದ್ದ ಅಜ್ಜಿಯೊಬ್ಬರು, ಚೂರುಚೂರಾಗಿ ಕೆಳಗೆ ಬಿದ್ದಿರುವ ಕಾಯಿಯನ್ನು ಆಸೆಕಂಗಳಿಂದ ನೋಡುತ್ತಿದ್ದ ವೈಷ್ಣವರ ಮಗುವೊಂದು, ‘ನಾವು ತಿನ್ನಬಾರದಂತೆ? ಆದರೆ ಈಗ ನೋಡಿ, ನಾಯಿಯೊಂದು ತಿನ್ನುತ್ತಿದೆ! ಇದೀಗ ನಿಮ್ಮ ದೇವರಿಗೆ ಅಪಮಾನವಾದಂತಲ್ಲವೇ? ಎಂದು ವಾದಿಸುತ್ತಿದ್ದ ೧೨ ವರ್ಷ ವಯಸ್ಸಿನ ಪೋರನ ಹೊಟ್ಟೆಉರಿ ಒಂದು ಕಡೆ, ಇದ್ಯಾವುದೋ ತಮಗೆ ಸಂಬಂಧಿಸಿದಲ್ಲವೆಂಬಂತೆ, ಭಕ್ತಿ ಪರವಶರಾಗಿದ್ದ ಆತನ ಅಪ್ಪ, ಅಮ್ಮ!  

ನಂತರ ಮೆರವಣಿಗೆ ತಾತ್ಕಾಲಿಕವಾಗಿ ನಿರ್ಮಿಸಿದ್ದ ಬನ್ನಿಮಂಟಪದ ಕಡೆಗೆ ತೆರಳಿತು.  ತೆಂಗಿನ ಸೋಗೆ ಹಾಕಿ ಮಾಡಿದ್ದ ಚಪ್ಪರ, ಅದರಡಿಯಲ್ಲಿ ಹಾಸಿದ್ದ ಬಟ್ಟೆ ಮೇಲೆ ಉತ್ಸವ ದೇವರು ಕುಳಿತರು. ಅದಕ್ಕಾಗಿ ಇದ್ದ ಛತ್ರಿಯಡಿ, ಭಕ್ತರು ಅದನ್ನು ಹಿಡಿದು, ತಾವೇ ನಿಂತರು.  ಚಪ್ಪರದಡಿ ಒಂದು ಗುಳಿ ಈ ಮೊದಲೇ ತೋಡಿಟ್ಟಿದ್ದರು.  ಪಕ್ಕದಲ್ಲೇ ಬಾಳೇ ಗಿಡವೊಂದನ್ನು, ಅದಕ್ಕೆ ಬನ್ನಿ ಮರದ ಟೊಂಗೆಗಳನ್ನು ಕಟ್ಟಿಟ್ಟಿದ್ದರು.  ಈ ಬಾಳೆಗಿಡವನ್ನು ತೋಡಿಟ್ಟಿದ್ದ ಗುಳಿಯಲ್ಲಿ ನೆಟ್ಟರು.  ದೇವಸ್ಥಾನದ ಮುಖ್ಯಸ್ಥರು ಕತ್ತಿಯನ್ನು ಪೂಜೆ ಮಾಡಿ ಒಂದೇ ಏಟಿಗೆ ಬಾಳೇಗಿಡವನ್ನು ಕಡಿದರು. ಅದು ನೆಲಕ್ಕೆ ಒರಗುವ ಮುನ್ನವೇ, ಅದರಲ್ಲಿದ್ದ ಬನ್ನಿ ಎಲೆಗಳಿಗೆ ಕಿತ್ತಾಟ ನಡೆದು (ಬನ್ನೀ ಎಲೆಗಳು ನೆಲಕ್ಕೆ ಬೀಳುವ ಮುನ್ನವೇ ಪಡೆದರೆ, ಅದು ಚಿನ್ನವಂತೆ!), ಸಿಕ್ಕಿದವರಿಗೇ ಸೀರುಂಡೆ ಎಂದಂತೆ, ಸಿಕ್ಕಷ್ಟು ಹಳ್ಳಿಯವರೆಲ್ಲರೂ ತೆಗೆದುಕೊಂಡರು.  ಮನೆಗೆ ತೆರಳಿದ ನಂತರ ಅದನ್ನು ಹಿರಿಯರಿಗಿತ್ತು, ಅವರಿಗೆ ನಮಸ್ಕರಿಸಿ, ಬನ್ನಿ ಕೊಡ್ತೇವೆ, ಬಂಗಾರ ನೀಡಿ ಎಂದರೆ, ಕಿರಿಯರ ಬಾಳು ಬಂಗಾರವಂತೆ! 

(ಮುಂದುವರಿಯುವುದು)

Monday, October 15, 2012

ಇಂಗ್ಲೀಷ್ ಭಾಷೆಯ ದಾಳಿಯಿಂದ ಸೊರಗುತ್ತಿರುವ ಇನ್ನಿತರ ಭಾಷೆಗಳು - ಇಂಗ್ಲೀಷ್ ವಿಂಗ್ಲೀಷ್


ಶಶಿ - ಅತ್ಯಂತ ಸಾಮಾನ್ಯ ಹೆಣ್ಣು ಮಗಳು. ಅತ್ತೆ, ಗಂಡ, ಮಕ್ಕಳಿಗೆ ರುಚಿಯಾದ ಅಡುಗೆ ಮಾಡಿ, ಅವರಿಗೆ ಉಣಬಡಿಸುವುದರಲ್ಲಿಯೇ ಸಾರ್ಥಕ್ಯ ಕಂಡವಳು.  ಜೊತೆಗೊಂದಿಷ್ಟು ಪುಡಿಕಾಸು ಸಂಪಾದಿಸಲು, ತನಗೆ ಗೊತ್ತಿರುವಂಥ ವಿದ್ಯೆಯಾದ ಅಡುಗೆಯಿಂದಲೇ, ಮದುವೆ ಮುಂತಾದ ಸಮಾರಂಭಗಳಿಗೆ ಲಡ್ಡು ತಾನೇ ಕೈಯಾರೆ ತಯಾರಿಸಿ, ಅಲ್ಲಿಗೆ ಹೋಗಿ ಕೊಟ್ಟು ಬರುವಂಥವಳು.  ಆ ಹಣವನ್ನು ಆಪದ್ಧನವೆಂದು ಕಾದಿರಿಸುವವಳೇ ಹೊರತು, ತನ್ನ ಬಟ್ಟೆಬರೆ, ಅಲಂಕಾರಗಳಿಗೆ ಖರ್ಚು ಮಾಡುವಂಥವಳಲ್ಲ!  ಒಟ್ಟಿಗೆ ಬಾಳುವುದಕ್ಕೆ ಸಂಗಾತಿ ಪರಿಪೂರ್ಣನಾಗಿರಬೇಕಿಲ್ಲ, ಒಬ್ಬರಿಗೊಬ್ಬರು ಪೂರಕವಾಗಿದ್ದರೆ ಸಾಕು ಎಂಬುದು ಇವಳ ತತ್ವ. ಮಕ್ಕಳನ್ನು ಬೆಳೆಸುವಲ್ಲಿಯೂ ಆಕೆ ನಿರಾಳ. ಟೀನೇಜ್ ಮಗಳು ತುಂಡುಬಟ್ಟೆ ಹಾಕಿಕೊಂಡು, ಕಾಫೀ ಡೇ ಹೋಗುವುದನ್ನು ಅತೀ ಸಾಮಾನ್ಯ ವಿಷಯದಂತೆ ಸ್ವೀಕರಿಸುವಷ್ಟು, ತನ್ನ ಮುಂದೆಯೇ ತನ್ನ ಗಂಡ, ಪರ ನಾರಿಯನ್ನು ಹಗ್ ಮಾಡುವುದನ್ನು ಒಪ್ಪಿಕೊಳ್ಳುವಷ್ಟು, ಆಧುನಿಕ ಮನೋಧರ್ಮ ಇವಳಲ್ಲಿದೆ.  ಗೇ, ಲೆಸ್ಬಿಯನ್ ಸಂಬಂಧಗಳನ್ನು ಒಪ್ಪಿಕೊಳ್ಳಲು ಹಿಂದೆ ಮುಂದೆ ನೋಡುವಂಥ ಸುಶಿಕ್ಷಿತ ಮನೋವರ್ಗದ ನಡುವೆ, ಅವರದು ಹೃದಯವಲ್ಲವೇ? ಅವರು ಕೂಡ ಪ್ರೀತಿಸಲು, ಬದುಕಲು ಅರ್ಹರು ಎನ್ನುವಂಥ, ಗಂಡ, ಮಕ್ಕಳ ಆಧುನಿಕ ಮನಸ್ಸನ್ನು ಯಾವುದೇ ತಂಟೆ, ತಕರಾರಿಲ್ಲದೆ ಒಪ್ಪಿಕೊಳ್ಳುವಂಥ ವಿಶಾಲ ಮನಸ್ಸು ಈಕೆಯದು. ಈ ಆಧುನಿಕ ಜಗತ್ತಿನಲ್ಲಿ ಇದ್ದು ಕೂಡ ಇರದಂಥವಳು. ಸಂಬಂಧಗಳನ್ನು ಅರ್ಥ ಮಾಡಿಕೊಳ್ಳಲು, ಭಾವನೆಗಳನ್ನು ವ್ಯಕ್ತ ಪಡಿಸಲು ಭಾಷೆಯ ಹಂಗೇಕೆ? ತಾವೇ ಅವರ ಜಾಗದಲ್ಲಿ ನಿಂತು ನೋಡಿದರೆ ಅವರು ಅರ್ಥವಾಗುತ್ತಾರೆ ಎನ್ನುವ ಮನೋಭಾವದವಳು.  ಆದರೆ ಈಕೆಯನ್ನು, ಈಕೆಯ ಮನಸ್ಸನ್ನು ಅರ್ಥ ಮಾಡಿಕೊಳ್ಳದ ಗಂಡ ಮತ್ತು ಮಗಳು, ಈಕೆಯದು ಗೊಡ್ಡು ಸ್ವಭಾವವೆಂದು, ಈ ಜಗತ್ತಿನಲ್ಲಿ ಬದುಕಲು ಕೂಡ ಅನರ್ಹವೆಂದೂ, ಇಂಗ್ಲೀಷ್ ಭಾಷೆ ಬರದ ಈಕೆ ಅಡುಗೆಮನೆಯಲಿರಷ್ಟೇ ಲಾಯಕ್ಕೆಂದೂ, ಸಮಯ ಸಿಕ್ಕಾಗಲೆಲ್ಲಾ ಪರಿಹಾಸ್ಯ ಮಾಡುವ ಗಂಡ, ಅದನ್ನು ತನ್ನ ಉಪಯೋಗಕ್ಕೆ ಬಳಸಿಕೊಳ್ಳುವ ಮಗಳು, ಇವರೀರ್ವರ ಅಪಹಾಸ್ಯದಿಂದ ನೋವಾದರೂ, ಸಂಕಟವಾದರೂ, ತೋರಿಸಿಕೊಳ್ಳದ ಸಂಯಮಿ.  

ಹೀಗಿದ್ದ ಶಶಿಗೆ ಅಕಸ್ಮಾತ್ತಾಗಿ ಅಮೇರಿಕಾಗೆ ಒಂಟಿಯಾಗಿ ಹೋಗುವ ಸಂದರ್ಭ ಒದಗಿಬರುತ್ತದೆ.  ಅದುವರೆವಿಗೂ ಒಬ್ಬಂಟಿಯಾಗಿ ಎಲ್ಲಿಗೂ ಹೋಗಿರದಿದ್ದ ಈಕೆ, ತನ್ನ ಜಗತ್ತನ್ನು ಬಿಟ್ಟು ಹೋಗುವುದರ ಸಂಕಟದ ಜೊತೆಗೆ, ಒಂಟಿಯಾಗಿ ಭಾಷೆ ಬರದ ನಾಡಿನಲ್ಲಿ ಬದುಕುವುದು ಹೇಗೆ? ಎಂಬ ಕಳವಳ ಕಾಡತೊಡಗುತ್ತದೆ.  ಇಂಗ್ಲೀಷ್ ಭಾಷೆಯ ಅರಿವಿಲ್ಲದೆ ತನ್ನ ಜಗತ್ತನ್ನು ಸಂಭಾಳಿಸುತ್ತಿದ್ದ ಈಕೆಗೆ, ಅಮೇರಿಕಾದಲ್ಲಿ ಇಂಗ್ಲೀಷ್ ಬರದೇ ಇರುವುದು ಬಹು ದೊಡ್ಡ ತೊಡಕಾಗಿಬಿಡುತ್ತದೆ.  ಅದಕ್ಕೆ ಪೂರಕವಾಗಿ ಕಾಫಿ ಶಾಪ್ ಒಂದರಲ್ಲಿ ನಡೆಯುವ ಘಟನೆ, ಆಕೆಯ ಆತ್ಮವಿಶ್ವಾಸಕ್ಕೆ ಧಕ್ಕೆ ತಂದುಬಿಡುತ್ತದೆ.  ೪ ವಾರಗಳಲ್ಲಿ ಇಂಗ್ಲೀಷ್ ಕಲಿಸುವ ಕೋರ್ಸಿಗೆ ಸೇರುವ ಶಶಿ, ಅಲ್ಲಿ ಇವಳಂತೆಯೇ ಭಾಷೆಯ ತೊಡಕಿನಿಂದ ತೊಂದರೆ ಅನುಭವಿಸಿ, ಇಂಗ್ಲೀಷ್ ಕಲಿಯಲು ಬರುವ ಇನ್ನಿತರರು, ತನ್ನ ಕಾಲ ಮೇಲೆ ತಾನು ನಿಲ್ಲಲು ಸಹಾಯ ಮಾಡಿರುವ ಇವಳ ಅಡುಗೆ ಬಗ್ಗೆ ಇವಳಿಗೆ ಪ್ರೀತಿಯಿದ್ದರೂ, ಗಂಡ ಮತ್ತು ಮಗಳು ಅಪಹಾಸ್ಯ ಮಾಡಿ, ಅದರ ಬಗ್ಗೆ ಕೀಳರಿಮೆ ಬೆಳೆಸಿಕೊಂಡಿರುವ ಶಶಿಗೆ, ನೀನೊಬ್ಬಳು ಉದ್ಯಮಿ ಎಂದು ಅರಿವು ಮೂಡಿಸುವ ಆಕೆಯ ಟೀಚರ್, ನಿನ್ನ ಅಡುಗೆ ಕೆಲಸ ಕಲೆಯೆಂದೂ ಅಭಿಮಾನ ಮೂಡಿಸುವ, ಇವಳಂತೆಯೇ ಅಡುಗೆಯನ್ನೇ ತನ್ನ ಕೆಲಸ ಮಾಡಿಕೊಂಡಿರುವ ಫ್ರೆಂಚ್ ಗೆಳೆಯ, ಆತ ಇವಳತ್ತ ಆಕರ್ಷಿತನಾಗುವುದು, ಭಾಷೆ ಬರದಿದ್ದರೂ, ತಮ್ಮ ತಮ್ಮ ಭಾಷೆಗಳಲ್ಲಿಯೇ ತಮ್ಮೆಲ್ಲಾ ಮನಸ್ಸಿನ ಭಾವನೆಗಳನ್ನು ಹಂಚಿಕೊಳ್ಳುವುದು, ಇವರಿಬ್ಬರ ನಡುವೆ ನಡೆಯುವಂಥ ಘಟನೆಗಳು, ಈಕೆಯನ್ನು ಹೆಜ್ಜೆಹೆಜ್ಜೆಗೂ ಹುರಿದುಂಬಿಸುವ, ಅಮೇರಿಕಾದಲ್ಲೇ ಹುಟ್ಟಿ, ಬೆಳೆದಿರುವ ಅಕ್ಕನ ಮಗಳು, ಇವಳಲ್ಲಿ ಆತ್ಮವಿಶ್ವಾಸ ಚಿಗುರುವಂತೆ ಮಾಡುವುದು. ತನ್ನ ಬಗ್ಗೆ ತನಗೆ ಪ್ರೀತಿಯುಂಟುವಂತೆ ಮಾಡಿದ ಫ್ರೆಂಚ್ ಗೆಳೆಯನನ್ನು ಆಯ್ಕೆ ಮಾಡುತ್ತಾಳಾ? ಅಥವಾ ತನ್ನ ಹಿಂದಿನ ಜೀವನಕ್ಕೆ ಮರಳುತ್ತಾಳಾ? ಇದು ಇಂಗ್ಲೀಷ್ ವಿಂಗ್ಲೀಷ್ ಚಿತ್ರದ ಕ್ಲೈಮಾಕ್ಸ್.

ಭಾರತದಲ್ಲೇ ನೆಲೆಸಿರುವಂಥ ಆಧುನಿಕ ಸುಶಿಕ್ಷಿತ ವರ್ಗದ ಮನಸ್ಥಿತಿ ಹಾಗೂ ಅಮೇರಿಕಾದಲ್ಲಿ ನೆಲೆಸಿರುವ ಅನಿವಾಸಿ ಭಾರತೀಯರ ಮನಸ್ಥಿತಿ ಚಿತ್ರದಲ್ಲಿ ಚೆಂದವಾಗಿ ನಿರೂಪಿತಗೊಂಡಿದೆ. ಅಮೇರಿಕಾದಲ್ಲಿದ್ದರೂ, ಹಾಕಿಕೊಳ್ಳುವ ಬಟ್ಟೆಯಿಂದ ಹಿಡಿದು, ನಡವಳಿಕೆಯಾಗಬಹುದು, ಸಂಭೋದನೆಯಾಗಬಹುದು, ಭಾರತದ ಸಂಸ್ಕೃತಿ, ಭಾಷೆಯನ್ನು ಮರೆಯದ  ಅನಿವಾಸಿ ಭಾರತೀಯರು,  ಅಲ್ಲಿಯೇ ಜನಿಸಿ, ಅಮೇರಿಕನ್ ಸಿಟಿಜನ್ ಶಿಪ್ ಪಡೆದು, ಬೆಳೆದಿರುವ ಅವರ ಮಕ್ಕಳು ಕೂಡ ಭಾರತೀಯ ಸಂಸ್ಕೃತಿಯಂತೆಯೇ ಬದುಕಲು ಆಸೆ ಪಡುವುದು, ಮತ್ತೊಂದು ಕಡೆ ಭಾರತದಲ್ಲಿಯೇ ಜನಿಸಿ, ಅಮೇರಿಕಾದ ಗಂಧಗಾಳಿ ಇಲ್ಲದೆ ಇಲ್ಲಿಯೇ ಬೆಳೆದಿದ್ದರೂ, ಉಡುಗೆ, ತೊಡುಗೆ, ಊಟ ಉಪಚಾರ, ಭಾಷೆಯ ಉಚ್ಚಾರ ಎಲ್ಲದರಲ್ಲೂ ಅಮೇರಿಕನರನ್ನು ಅನುಕರಿಸಲು ಪ್ರಯತ್ನ ಪಡುವುದು ಎಲ್ಲೋ ಒಂದು ಕಡೆ ನಮ್ಮ ಭಾರತೀಯ ಸಂಸ್ಕೃತಿ ಬೆಳೆಯುತ್ತಿದೆಯಲ್ಲಾ ಎನ್ನುವ ಆಸೆಯನ್ನು ಬಿತ್ತಿದರೂ, ಇಲ್ಲಿ, ಭಾರತದಲ್ಲಿ,  ಆಧುನಿಕ ಮನೋಭಾವವೆಂದರೆ ಅಮೇರಿಕನವರದ್ದು ಮಾತ್ರ ಎಂದು ಮಕ್ಕಳಾದಿಯಾಗಿ ಎಲ್ಲರೂ ಒಪ್ಪಿಕೊಳ್ಳುವುದು, ಇಲ್ಲವೇ ನೀನು ಬದುಕಲು ಅನರ್ಹ ಅಥವಾ ಅಡುಗೆ ಮನೆಗಷ್ಟೇ ಲಾಯಕ್ಕು ಎಂಬುದು ನಮ್ಮಲ್ಲಾಗುತ್ತಿರುವ ಸಂಕುಚಿತ ಭಾವನೆಯನ್ನು ಹಾಗೂ ಹೀಗೆ ಇರದಿದ್ದವರು ಕೀಳರಿಮೆಗೆ ಒಳಗಾಗುವ, ಇಂಥವರೆಲ್ಲರೂ ತಮ್ಮ ಚಿಪ್ಪಿನೊಳಗೆ ಹುದುಗಿಬಿಡುವಂಥ ಅಪಾಯವನ್ನು, ತನ್ಮೂಲಕ ನಮ್ಮ ಸಮಾಜದ ಬೆಳವಣಿಗೆ ಕುಂಠಿತವಾಗಬಹುದೇನೋ ಎನ್ನುವ ಆತಂಕವನ್ನು ಎತ್ತಿ ತೋರಿಸುತ್ತದೆ.  ಕೇರಳದಲ್ಲಿ ನೆಲೆಸಲು ಮಲೆಯಾಳಂ, ತಮಿಳುನಾಡಿನಲ್ಲಿ ನೆಲೆಸಲು ತಮಿಳು, ಕನ್ನಡನಾಡಿನಲ್ಲಿ ನೆಲೆಸಲು ಕನ್ನಡ (?!) ಬೇಕು ಎಂಬುದನ್ನು ಬಿಟ್ಟು, ಇಂಗ್ಲೀಷ್ ಭಾಷೆ ಮಾತ್ರ ಮುಖ್ಯ, ಇನ್ನುಳಿದ ಭಾಷೆಗಳೆಲ್ಲವೂ ನಗಣ್ಯ ಎನ್ನುವ ಮನೋಭಾವ ಭಾರತೀಯರಲ್ಲಿ ಮಾತ್ರವಲ್ಲ, ಫ್ರೆಂಚ್, ಆಫ್ರಿಕನ್, ಚೈನೀಸ್, ಪಾಕೀಸ್ತಾನೀಯರು ಎಲ್ಲರಲ್ಲೂ ಮೂಡುತ್ತಿದೆ ಎನ್ನುವುದು ಕೂಡ ಆತಂಕದ ವಿಷಯವೇ ಆಗಿದೆ. ಚಿತ್ರದ ನಾಯಕಿಯಾದ ಶಶಿ ಒಂದು ಕಡೆ ಹೇಳುವ ಮಾತು, "ನನಗೆ ಪ್ರೀತಿಗಿಂತಲೂ ಒಂದಿಷ್ಟೂ ಗೌರವ ಬೇಕು!"  ಈ ಮಾತು ನಮಗೆಲ್ಲರಿಗೂ ಭಾಷೆಯ ವಿಷಯದಲ್ಲಿ ಪಾಠವಾದರೆ, ನಮ್ಮ ನಮ್ಮ ಭಾಷೆಗಳ ಮೇಲೆ ನಮಗೆ ಪ್ರೀತಿಗಿಂತಲೂ, ಗೌರವ ಮೂಡಿದರೆ ಬಹುಶಃ ಅಳಿಯುತ್ತಿರುವ ಎಲ್ಲಾ ಭಾಷೆಗಳೂ ಉಳಿಯುವುದು.

ಮಿಕ್ಕಿದಂತೆ, ಶ್ರೀದೇವಿಯ ನಟನೆ ಹಾಗೂ ಅದಕ್ಕೆ ಪೂರಕವಾದ ಇನ್ನಿತರರ ನಟನೆ ನಿಜಕ್ಕೂ ಪ್ರಶಂಸನೀಯ. ‘ಶಶಿ’ ಪಾತ್ರದ ಪರಕಾಯ ಪ್ರವೇಶ, ಶ್ರೀದೇವಿಗೆ ಶ್ರೀದೇವಿಯೇ ಸಾಟಿ.  ಈ ಹಿಂದಿನ ಚಿತ್ರಗಳಲ್ಲಿ ಬಳುಕುವ ಬಳ್ಳಿಯಂತಿದ್ದ ಸುಂದರಿ ಶ್ರೀದೇವಿ, ಈ ಚಿತ್ರದಲ್ಲಿ ಆಹಾರವಿಲ್ಲದೆ ಸೊರಗಿದಂತಾಗಿರುವುದನ್ನು ನೋಡಲು ಅಸಹನೀಯವಾಗಿದ್ದರೂ, ‘ಶಶಿ’ ಪಾತ್ರಕ್ಕೆ ಆಕೆ ಹೀಗೆ ಸೊರಗಿದಂತಿರುವುದೇ ಸರಿ ಎಂದೆನಿಸುತ್ತದೆ. ಇಂಗ್ಲೀಷ್ ಭಾಷೆಯ ದಾಳಿಯಿಂದಾಗಿ ಮಿಕ್ಕೆಲ್ಲಾ ಭಾಷೆಗಳು ಸೊರಗಿರುವುದನ್ನು ಪರೋಕ್ಷವಾಗಿ ಸೂಚಿಸುತ್ತಿದೆಯೇನೋ ಎಂದೆನಿಸುತ್ತದೆ!   ಅಮಿತಾಭ್ ಅವರದೂ ಅತಿಥಿ ಪಾತ್ರವಾದರೂ, ಸಿಕ್ಕ ಐದು ನಿಮಿಷಗಳಲ್ಲಿಯೇ ಮನಸೆಳೆದು ಬಿಡುತ್ತಾರೆ.  ಫ್ರೆಂಚ್ ಪಾತ್ರಧಾರಿಯ ನಿಶ್ಯಬ್ದ ತುಟಿಯಂಚಿನ ನಗೆ ಇಡೀ ಚಿತ್ರಕೊಂದು ಮೆರುಗು ನೀಡುತ್ತದೆ.  

Friday, October 12, 2012

‘ಹಲಗೆ ಬಳಪ’ ಓದಿದ ಮೇಲೆ


All my best thoughts were stolen by the ancients!  - Ralph Waldo Emerson.  ಜೋಗಿ ಅವರ ಹಲಗೆ ಬಳಪ ಓದುತ್ತಾ, ಓದುತ್ತಾ ನನಗೆ, ಅದರಲ್ಲಿದ್ದ ಈ ವಾಕ್ಯ ಮಾತ್ರ ಸಿಕ್ಕಾಪಟ್ಟೆ ಮನಸ್ಸಿಗೆ ಹಿಡಿಸಿಬಿಡ್ತು.  ಹೊಸ ಬರಹಗಾರರಿಗೆ ಜೋಗಿಯವರ ಪಾಠಗಳು ಬರೆಯಲು ಪ್ರೇರೇಪಿಸುತ್ತೋ ಇಲ್ಲವೋ ಗೊತ್ತಿಲ್ಲ! ಓದಲಂತೂ ಬಹಳ ಖುಷಿ ಕೊಡುತ್ತದೆ. ಎಲ್ಲರ ಮೊದಲ ಬರಹಗಳ ಅನುಭವವನ್ನು ಓದುತ್ತಾ, ನಾನೇ ಅವರಾಗಿ, ಈ ಎಲ್ಲಾ ಅನುಭವಗಳೂ, ನನಗೂ ಆಗಿತ್ತಲ್ಲಾ?  ನನಗೇಕೆ ಬರೆಯೋಕೆ ಆಗಿಲ್ಲ? ಎನ್ನುವ ಕಳವಳದ ಜೊತೆಜೊತೆಗೆ ಓಹ್! ಇವರಂಥವರಿಗೂ ಕೂಡಾ ಹೀಗೆಲ್ಲಾ ಗೊಂದಲ / ಆತಂಕ ಆಗಿತ್ತಾ? ಹಾಗಿದ್ದರೆ ನಾನು ಕೂಡ ಒಳ್ಳೆಯ ಬರಹಗಾರ್ತಿಯಾಗಬಲ್ಲೆ! ಎನ್ನುವ ಹುಮ್ಮಸ್ಸನ್ನು ಕೂಡ ಹುಟ್ಟಿಸಿತು. ಹಲಗೆ ಬಳಪದ ಪುಟಪುಟವೂ ಅರೆರೆ! ಎಷ್ಟು ಚಂದ ಬರೆದಿದ್ದಾರೆ? ಎಂದು ಸಂತೋಷಿಸುತ್ತಾ,  ನನ್ನ ಆಲೋಚನೆಗಳು ಬಹು ಮಟ್ಟಿಗೆ ಈ ಲೇಖಕರನ್ನು ಹೋಲುತ್ತವೆ, ಹೇ, ನನಗೂ ಕೂಡ ಇಂಥ ಅನುಭವ ಆಗಿದೆಯಲ್ಲಾ? ಎಂದೆಲ್ಲಾ ನನ್ನನ್ನು ನಾನೇ ಅವರೊಂದಿಗೆ ಹೋಲಿಸಿಕೊಳ್ಳುತ್ತಾ, ಓಹ್! ಇಷ್ಟೊಂದು ಪುಸ್ತಕಗಳನ್ನು ಓದಿದ್ದಾರಾ? ಎಂದು ಆಶ್ಚರ್ಯ ಪಡುತ್ತಾ, ಪುಸ್ತಕಗಳನ್ನು ಓದಲು ಇಷ್ಟು ಸೀರಿಯಸ್ ನೆಸ್ ಬೇಕಾಗುತ್ತಾ? ಎಂದು ಚಿಂತಿಸುತ್ತಾ, ಕವನಗಳನ್ನು ಬರೆಯುವುದು ಇಷ್ಟು ಸುಲಭವೇ? ಎಂದು ನಿಡುಸುಯ್ಯುತ್ತಾ, ನಾಟಕಗಳನ್ನು ನಾನೆಂದಿಗೂ ಓದಿಯೇ ಇಲ್ಲ, ಓದಬೇಕು ಎಂದು ಆಲೋಚಿಸುತ್ತಾ, ಒಂದೇ ಉಸಿರಿಗೆ ಪೂರ್ತಿ ಪುಸ್ತಕ ಓದಿದೆ.  ನಂತರಾ, ಮತ್ತೊಮ್ಮೆ, ಮಗದೊಮ್ಮೆ ಎಂದು ೨, ೩ ಬಾರಿ ಓದಿದ್ದಾಯಿತು! ಈಗ ತಲೆಯ ತುಂಬಾ ಪದಗಳ, ವಾಕ್ಯಗಳ ಮೆರವಣಿಗೆ! ಅಲ್ಲಲ್ಲಾ ಜಾತ್ರೆ! 

ಇದನ್ನು ತಕ್ಷಣ ಬ್ಲಾಗ್ ನಲ್ಲಿ ಇಳಿಸಿಬಿಟ್ಟರೆ, ಮನಸ್ಸಿಗೆ ಒಂದಷ್ಟು ನೆಮ್ಮದಿಯಾಗಬಹುದೇನೋ ಎಂದು ಬರೆಯಲು ಕುಳಿತೆ. ಆದರೆ ಬರೆಯಲು ಕುಳಿತರೆ ಮಾತ್ರ ಒಂದಕ್ಷರವೂ ನಿನ್ನ ತಲೆಯಲ್ಲಿ ಮೂಡಲೊಲ್ಲೆ ಎನ್ನುವ ಹಠ ಯಾಕೆ ಮಾಡುತ್ತವೋ? ನನಗೆ ಅಕ್ಷರಗಳ ಮೇಲೆ ಸಿಟ್ಟು! ಆದರೆ ಅಕ್ಷರ ಪ್ರೀತಿ ಇದ್ದರೆ ಮಾತ್ರ ಒಳ್ಳೆ ಬರಹಗಾರನಾಗಬಹುದೆಂಬ ಅದ್ರಲ್ಲಿದ್ದ ಮತ್ತೊಬ್ಬ ಲೇಖಕರ ಕಿವಿಮಾತು! ಹಾಗೂ ಹೀಗೂ ಅಕ್ಷರಗಳ ಮೇಲೆ ಪ್ರೀತಿ ಹುಟ್ಟಿಸಿಕೊಂಡು ಬರೆಯಲು ಕುಳಿತರೆ ಏನು ಬರೆಯೋದು? ಯಾವುದರ ಬಗ್ಗೆ ಬರೆಯೋದು? ಮತ್ತೆ ಗೊಂದಲ ಶುರು.  ಕವನ ಬರೆಯೋದಾ? ಕಥೆಯನ್ನೋ? ಬರೆಯೋದಕ್ಕೆ ಶುರು ಮಾಡಿ, ಆಮೇಲೆ ತನ್ನಷ್ಟಕ್ಕೆ ನಿಮ್ಮ ಪ್ರಕಾರ ಯಾವುದೆಂದು ತಿಳಿಯುತ್ತದೆ ಎಂಬುದನ್ನು ‘ಹಲಗೆ ಬಳಪ’ದಲ್ಲಿ ಓದಿದ ನೆನಪಾಗಿ, ಕವನ ಕಷ್ಟ, ಕಥೆಯನ್ನು ಬರೆಯೋಣ ಎಂದು ತೀರ್ಮಾನಿಸಿದೆ.  ಈಗ ಯಾರ ಕಥೆ ಬರೆಯೋದು? ನನ್ನ ಕಥೆಯನ್ನೇ?! ಅಕ್ಕಪಕ್ಕದವರದ್ದೇ? ‘ಹಲಗೆ ಬಳಪ’ ದಲ್ಲಿ ಜೋಗಿಯವರ ‘ಮುದ್ದಣ ಮೇಷ್ಟ್ರು’ ಲೇಖಕ ಯಾವತ್ತೂ ಔಟ್ ಸೈಡರ್ ಆಗಬಾರದು, ಒಳಗಿದ್ದು ಬರೆಯಬೇಕು! ಅಕ್ಕಪಕ್ಕದವರ ಪಾತ್ರದ ಒಳಹೊಕ್ಕು ಬರೆಯುವುದು ತೀರಾ ಕಷ್ಟ! ಏನು ಮಾಡುವುದು?  ಒಟ್ಟಿನಲ್ಲಿ ಬರೆಯಬೇಕು ಎಂಬ ಒತ್ತಡವಂತೂ ಇದೆ.  ಹಾಗಾದರೆ ಅಕ್ಕಪಕ್ಕದವರ ಕಥೆ ಬರೆಯಲು ನನ್ನ ಕೈಯಲ್ಲಿ ಸಾಧ್ಯವಿಲ್ಲ. ನನ್ನದೇ ಕಥೆ ಬರೆಯೋದು ಒಳ್ಳೆಯದು.  ಈಗ ಮತ್ತೆ ತಲೆ ತುಂಬಾ ಪ್ರಶ್ನೆಗಳು? ಎಲ್ಲಿಂದ ಶುರು ಮಾಡುವುದು? ಬಾಲ್ಯದಿಂದಲೇ?  ಕೆಲಸದ ಅನುಭವಗಳೇ? ಕಾಲೇಜಿನದೇ? ಮೊದಲ ಪ್ರೇಮ ವೈಫಲ್ಯದ ಬಗ್ಗೆಯೇ? ಬಗೆಹರಿಯದ ಸಮಸ್ಯೆ ಇದು.  ಕೊನೆಗೂ ಸಮಸ್ಯೆಗೊಂದು ಪರಿಹಾರ ಥಟ್ ಅಂತ ಹೊಳೆಯಿತು.  ನನ್ನಲ್ಲಿ ಓದಿನ ಅಭಿರುಚಿ ಶುರು ಆದದ್ದು ಹೇಗೆ?  ಹಾ! ವಿಷಯ ಸಿಕ್ಕಿತು. ಈಗ ಪದಗಳು ಕೂಡ ಸಿಕ್ಕಿದರೆ?! ಬರೆಯುವ ಕೆಲಸ ಸುಲಭ. 

ಮನೆ ತುಂಬಾ ಮಕ್ಕಳು. ಅಪ್ಪನಿಗಾದರೋ ಒಳ್ಳೆಯ ಕೆಲಸವಿರಲಿಲ್ಲ. ಹೊಟ್ಟೆ ತುಂಬಾ ತಿನ್ನಲು ಕೂಡ ಕಷ್ಟ. ತನ್ನ ತಾಯಿಯ ಮನೆಯಲ್ಲಿ ಓದಿನ ಬೆಲೆ ಅರಿತಿದ್ದ ಅಮ್ಮ ಎಂದಿಗೂ ಪುಸ್ತಕಗಳನ್ನು ಕೊಡಿಸಲು ಯೋಚಿಸುತ್ತಿರಲಿಲ್ಲ.  ಆಕೆಗೆ ಮಂಕುತಿಮ್ಮನ ಕಗ್ಗದಿಂದ ಹಿಡಿದು ಸುಮಾರಷ್ಟು ಸ್ತ್ರೋತ್ರಗಳು ಬಾಯಿಪಾಠವಾಗಿತ್ತು.  ಹಾಗಾಗಿ ಮನೆಗೆ ದಿನಪತ್ರಿಕೆ, ಸುಧಾ, ತರಂಗ, ಮಯೂರ, ಕಸ್ತೂರಿ, ಚಂದಮಾಮ ತರುವುದನ್ನೂ ತಪ್ಪಿಸುತ್ತಿರಲಿಲ್ಲ. ನಾನು ಮನೆಯಲ್ಲಿ ಕೊನೆಯವಳು.  ಮಕ್ಕಳು ಕಿತ್ತಾಡಬಾರದೆಂದು ಮನೆಯಲ್ಲಿ ದೊಡ್ಡವರು ಹೇಳಿದಂತೆ ಕೇಳಬೇಕೆಂದು ಅಮ್ಮನ ರೂಲ್ ಆಗಿತ್ತು. ಸುಧಾ, ತರಂಗ ತರಲು ಸಣ್ಣವಳಾದ ನಾನೇ ಹೋಗಬೇಕಿತ್ತು.  ಆದರೆ ಅದನ್ನು ಮೊದಲು ಓದುವ ಹಕ್ಕು ಮಾತ್ರ ಅಣ್ಣಂದಿರದಾಗಿತ್ತು.  ಪುಸ್ತಕವನ್ನು ತಂದು ಅಣ್ಣನ ಕೈಗೆ ಕೊಡುವಷ್ತರಲ್ಲಿ ಜೀವ ಬಾಯಿಗೆ ಬಂದಷ್ಟು ಸಂಕಟವಾಗಿಬಿಡ್ತಿತ್ತು.  ಅದಕ್ಕೆ ನಾನು ಕಂಡುಕೊಂಡ ಉಪಾಯವೆಂದರೆ ಅಂಗಡಿಯಿಂದ ಮನೆಗೆ ಬರುವಷ್ಟರಲ್ಲಿ, ನನಗೆ ಬೇಕಾದ ಅಂಕಣಗಳೆಲ್ಲವನ್ನೂ ರಸ್ತೆಯಲ್ಲಿ ಓದುತ್ತಾ ಬರುವುದು!  ಹೀಗೆ ಓದುತ್ತಾ ಬರುವಾಗ ಲೆಕ್ಕವಿಲ್ಲದಷ್ಟು ಬಾರಿ ಜನರಿಗೆ ಢಿಕ್ಕಿ ಹೊಡೆದು, ಅವರ ಕೈಯಲ್ಲಿ ಬೈಸಿಕೊಂಡು ಬರುತ್ತಿದ್ದೆ.  ಮನೆಯ ಬಳಿಯೇ ಪುಟ್ಟದೊಂದು ಲೈಬ್ರರಿ ಇತ್ತು.  ಅದರ ಓನರ್ ನ ಮಗ ನನ್ನ ಶಾಲೆಯಲ್ಲಿ ಸಹಪಾಠಿ.  ಹಾಗಾಗಿ ಅಲ್ಲಿಯೇ ಕುಳಿತು ಎಷ್ಟೋ ಪುಸ್ತಕಗಳನ್ನು ಓದುತ್ತಿದ್ದೆ. ಇನ್ನೂ ಯುಗಾದಿ ಹಾಗೂ ದೀಪಾವಳಿ ಸಮಯದಲ್ಲಿ ಬರುತ್ತಿದ್ದ ಸುಧಾ ವಿಶೇಷಾಂಕಗಳು! ಬೆಳಿಗ್ಗೆ ಬೇಗ ೪ ಗಂಟೆಗೆ ಎದ್ದು ಮೊದಲಿಗೆ ಯಾರು ಅಭ್ಯಂಜನ ಸ್ನಾನ ಮಾಡುವರೋ, ಅವರಿಗೆ ಆ ವಿಶೇಷಾಂಕ ಓದುವ ಹಕ್ಕು - ಅಮ್ಮನ ರೂಲ್!  ನನಗೂ, ಕೊನೆ ಅಣ್ಣನಿಗೂ ಬೇಗ ಏಳುವ ಸ್ಪರ್ಧೆ! ಪೆಚ್ಚು ಮುಖ ಹಾಕಿಕೊಳ್ಳುವ ನನ್ನನ್ನು ನೋಡಿ, ’ಹೋಗಲಿ ಬಾ! ಒಟ್ಟಿಗೆ ಓದೋಣ’ ಎನ್ನುತ್ತಿದ್ದ ಅಣ್ಣಾ. ಮಿಕ್ಕೆಲ್ಲಾ ದಿವಸಗಳಲ್ಲಿ ಇಷ್ಟೇ ದೋಸೆ ತಿನ್ನಬೇಕೆಂಬ ರೂಲ್ ಇದ್ದ ನಮಗೆ, ಅಂದು ಮಾತ್ರ ಎಷ್ಟು ಬೇಕಾದರೂ ದೋಸೆ ತಿನ್ನುವ ಅದೃಷ್ಟ. ದೋಸೆ ಮೆಲ್ಲುತ್ತಾ, ವಿಶೇಷಾಂಕವನ್ನು ಓದುತ್ತಾ, ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ ಸರ್ವಜ್ಞ! 

ನನಗೂ, ನನ್ನ ಕೊನೆಯ ಅಣ್ಣನಿಗೂ ೨ ವರ್ಷಗಳ ಅಂತರ. ನಾವಿಬ್ಬರೂ ಸ್ನೇಹಿತರಂತೆಯೇ ಬೆಳೆದವರು. ಶಾಲೆಗೆ ರಜೆ ಶುರುವಾದಾಗ ಅಣ್ಣನ ಒಂದೊಂದೇ ಹುಚ್ಚು ಪ್ರಕಟವಾಗುತ್ತಿತ್ತು.  ಆತನಿಗೆ ಕರಾಟೆಯ ಹುಚ್ಚು ಬಹಳ. ಅದಕ್ಕಾಗಿ ದೇಹವನ್ನು ಹುರಿಗೊಳಿಸಿಕೊಳ್ಳಲು ಸಾಕಷ್ಟು ಪ್ರಯತ್ನ ಪಡುತ್ತಿದ್ದ. ಅದರಲ್ಲೊಂದು ಬೆಳ್ಳಂಬೆಳಿಗ್ಗೆ ೪ ಗಂಟೆಗೆ ಕಬ್ಬನ್ ಪಾರ್ಕಿಗೆ ಜಾಗಿಂಗ್ ಹೋಗುವುದು.  ಅಕ್ಕಪಕ್ಕದ ಗೆಳೆಯರನ್ನೆಲ್ಲ ಹುರಿದುಂಬಿಸಿ, ನನ್ನನ್ನು ಕೂಡ ಎಳೆದುಕೊಂಡು ೪ ಗಂಟೆಗೆ ಹೋಗುತ್ತಿದ್ದ.  ನಾನಾದರೋ ಈ ಆಟ / ಎಕ್ಸರ್ಸೈಸ್ ಮುಂತಾದವುಗಳಲ್ಲಿ ಬಲು ಸೋಮಾರಿ.  ಹಾಗೂ ಹೀಗೂ ೭ ಗಂಟೆಯಾದೊಡನೆ, ಕಬ್ಬನ್ ಪಾರ್ಕಿನ ಸೆಂಟ್ರಲ್ ಲೈಬ್ರರಿ ನನ್ನನ್ನು ಸೆಳೆದುಕೊಂಡುಬಿಡುತ್ತಿತ್ತು. ಅಣ್ಣನಿಗೆ ನನಗಿಂತಲೂ ಓದುವ ಹಂಬಲ ಬಹಳ. ಆಗ ಅಲ್ಲಿ ಮನೆಗೆ ತರಲು ಕೂಡ ಪುಸ್ತಕಗಳನ್ನು ಕೊಡುತ್ತಿದ್ದರೆಂಬ ನೆನಪು. ನಾವಿಬ್ಬರೂ ಆಗ ೪,೫ ಕ್ಲಾಸಿನಲ್ಲಿದ್ದವರು. ಆ ವಯಸ್ಸಿನಲ್ಲಿ, ಅರ್ಥವಾಗುತ್ತಿತ್ತೋ, ಇಲ್ಲವೋ,  ಸೆಂಟ್ರಲ್ ಲೈಬ್ರರಿಯಲ್ಲಿ ನಾವಿಬ್ಬರೂ ಎಡತಾಕುತ್ತಿದ್ದದ್ದು ಮಾತ್ರ ಪತ್ತೇದಾರಿ ಕಾದಂಬರಿಗಳಿಗಾಗಿ.  ಅಲ್ಲಿಯೇ ಕುಳಿತು ಪತ್ತೇದಾರಿ ಕಾದಂಬರಿಗಳನ್ನು ಓದಿ (ಮನೆಗೆ ತರಲು ಅಮ್ಮನ ಭಯ), ಮಕ್ಕಳ ಪುಸ್ತಕಗಳನ್ನು ಮನೆಗೆ ತರುತ್ತಿದ್ದೆವು.  ಕಬ್ಬನ್ ಪಾರ್ಕಿನಲ್ಲಿರುವ ಮಯೂರ ಹೋಟೇಲ್ ನ ಜೋಕಾಲಿಯಲ್ಲಿ ಕುಳಿತು, ಪುಸ್ತಕಗಳನ್ನು ಓದಿದ ನೆನಪು ಇಂದಿಗೂ ಆಹ್ಲಾದಕರ.  ಹೀಗೆ ಒಮ್ಮೆ ಪತ್ತೆದಾರಿ ಸೆಕ್ಷನ್ ನಲ್ಲಿ, ಪುಸ್ತಕಗಳನ್ನು ಹುಡುಕುತ್ತಿರುವಾಗ, ವೃದ್ಧರೊಬ್ಬರು ನಾವು ಏನನ್ನು ಹುಡುಕುತ್ತಿದ್ದೇವೆ? ಎಂದು ವಿಚಾರಿಸಿ, ನಮ್ಮ ಉತ್ತರ ತಿಳಿದು, ತಲೆಗೊಂದು ಮೊಟಕಿ, "ಪತ್ತೇದಾರಿ ಪುಸ್ತಕಗಳನ್ನು ಈ ವಯಸ್ಸಿನಲ್ಲಿ ಓದುತ್ತೀರಾ?" ಎಂದು ಬೈದ ಮೇಲೆ, ನಾವೇನೋ ಅಪರಾಧ ಮಾಡುತ್ತಿದ್ದೇವೆ ಎಂಬ ಭಾವ ಮೂಡಿ ಅಂದಿನಿಂದ ನನ್ನ ಪತ್ತೇದಾರಿ ಕಾದಂಬರಿಗಳ ಓದುವಿಕೆಗೊಂದು ಪುಲ್ ಸ್ಟಾಪ್. ಆದರೂ ಸೆಂಟ್ರಲ್ ಲೈಬ್ರರಿ, ಅಲ್ಲಿನ ವಾತಾವರಣ, ಅಲ್ಲಿನ ಪುಸ್ತಕಗಳು ಮಾಡುತ್ತಿದ್ದ ಮೋಡಿ ಎಷ್ಟೇ ನೆನಪಿನಲ್ಲಿಲ್ಲವೆಂದು ನಾನು ಹೇಳಿದರೂ, ಹಾಗೆಯೇ ಕಣ್ಣಮುಂದೆ ಸುಳಿದಾಡುತ್ತದೆ.  

ಈಗಾಗಲೇ ಕಾಲೇಜಿನಲ್ಲಿ ಓದುತ್ತಿದ್ದ ಅಣ್ಣಂದಿರು ತರುತ್ತಿದ್ದ ಯಂಡಮೂರಿಯವರ ಪುಸ್ತಕಗಳು ರೋಚಕತೆ ಉಂಟುಮಾಡುತ್ತಿದ್ದವು, ಬೆಳದಿಂಗಳ ಬಾಲೆಯಂತೂ ಮನಸ್ಸಿನಲ್ಲಿ ಅಚ್ಚಾಗಿಬಿಟ್ಟಿತ್ತು. ಅದರಲ್ಲಿನ ಪದಬಂಧ, ಆಕೆ ಕೇಳುವ ಪ್ರಶ್ನೆಗಳೆಲ್ಲವನ್ನೂ, ಪುಸ್ತಕದಲ್ಲಿ ಬರೆದುಕೊಂಡು ಅದನ್ನು ನಾವೇ ‘ರೇವಂತ್’ ನಂತೆ ಬಗೆಹರಿಸುತ್ತಿದ್ದ ಪರಿ, ಓಹ್! ಈಗ ನೆನಪಿಸಿಕೊಂಡರೂ, ನಗೆಯೊಂದು ಮುಖದಲ್ಲಿ ಮೂಡುತ್ತದೆ. ಬೆಳಿಗ್ಗೆ ತಿಂಡಿ ತಿನ್ನುವಾಗಲೂ, ಊಟ ಮಾಡುವಾಗಲೂ ಈ ಪುಸ್ತಕವಂತೂ ಕೈಯಲಿದ್ದೇ ಇರುತ್ತಿತ್ತು. ಎಷ್ಟು ಸಲ ಓದಿದರೂ ಬೋರ್ ಆಗುತ್ತಿರಲಿಲ್ಲ.  ಹಾಗಾಗಿ ಈ ಕಥೆ ಚಲನಚಿತ್ರವಾಗಿ ಮೂಡಿ ಬಂದಾಗ, ಕುತೂಹಲಕೆಂದು ಹೋದವಳಿಗೆ ಅರ್ಧಕ್ಕೆ ಎದ್ದು ಬರಬೇಕೆಂದು ಅನಿಸಿಬಿಟ್ಟಿತ್ತು.  ಅನಂತನಾಗ್ ಆ ಪಾತ್ರಕ್ಕೆ ಸೂಕ್ತ ಎನಿಸಿದರೂ, ನನ್ನ ಕಲ್ಪನೆಯಲ್ಲಿನ ‘ಬೆಳದಿಂಗಳ ಬಾಲೆ’ ಯ ಪಾತ್ರಗಳು, ಮುಖ್ಯವಾಗಿ ‘ನಾಯಕಿ’ ಹಾಗೂ ಆಕೆಯ ‘ಧ್ವನಿ’ ಗೂ ಹಾಗೂ ಚಲನಚಿತ್ರದ ನಾಯಕಿಯ ಧ್ವನಿಗೂ ಸ್ವಲ್ಪವೂ ಹೋಲಿಕೆಯಿರಲಿಲ್ಲ. ಚಿತ್ರ ನೋಡಿ ಭ್ರಮನಿರಸನವಾಗಿಬಿಟ್ಟಿತ್ತು. ‘ಗುಲಾಬಿ ಟಾಕೀಸ್’ ಚಿತ್ರ ನೋಡಿದ ಮೇಲೆ, ಇತ್ತೀಚೆಗೆ ನಾನು ವೈದೇಹಿಯವರ ‘ಗುಲಾಬಿ ಟಾಕೀಸ್’ ಕಥೆ ಓದಿದೆ.  ಚಿತ್ರಕ್ಕೂ, ಕಥೆಗೂ ಸ್ವಲ್ಪವೂ ಹೋಲಿಕೆಯಿಲ್ಲವೆಂದೆನಿಸಿ ಬೇಸರವಾಯಿತು.  ಪುಸ್ತಕಗಳನ್ನು ಓದುತ್ತಾ, ಕಲ್ಪನೆಯಲ್ಲಿ ಆಯಾ ಪಾತ್ರಗಳನ್ನು ಸೃಷ್ಟಿಸುತ್ತಾ, ಕಲ್ಪನೆಯಲ್ಲಿಯೇ ಪುಸ್ತಕದ ದೃಶ್ಯಾವಳಿಗಳನ್ನು ನೋಡುವುದು ಸಿನೆಮಾಗಳಿಗಿಂತ ನನಗೆ ಹೆಚ್ಚು ಖುಷಿ ನೀಡುತ್ತದೆ. ಬಾಲ್ಯದಲ್ಲಿ ಮೋಡಿ ಮಾಡಿದ ಮತ್ತೊಂದು ಪುಸ್ತಕ ಪೂರ್ಣ ಚಂದ್ರ ತೇಜಸ್ವಿಯವರ ‘ಕರ್ವಾಲೋ’  ಒಂದೊಂದು ಪಾತ್ರಗಳು ಕಣ್ಣ ಮುಂದೆ ಜೀವಂತ, ಪ್ರೊಫೆಸರ್, ಮಂದಣ್ಣ, ಹಾರುವ ಓತಿ, ಅಲ್ಲಿನ ಪರಿಸರ, ಜೇನು ತೆಗೆಯುವ ಪ್ರಸಂಗ, ‘ಕಿವಿ’ ಯ ತರಲೆಗಳು, ಸುಮಾರು ೧೦೦, ೨೦೦ ಬಾರಿ ಆ ಪುಸ್ತಕವನ್ನು ಓದಿರಬಹುದೇನೋ?  ಪ್ರತಿ ವಾಕ್ಯಗಳು ಬಾಯಿಪಾಠವಾಗಿಬಿಟ್ಟಿತ್ತು.  ಆದರೂ ಅದನ್ನು ಓದುವಾಗೆಲ್ಲಾ ಆಗಷ್ಟೇ ನಮ್ಮ ಮುಂದೆ ಘಟನೆಗಳು ನಡೆದವೇನೋ? ಎನ್ನುವ ಭಾವ. ಮತ್ತೊಂದು ಪುಸ್ತಕ - ಬಹುಶಃ ತ್ರಿವೇಣಿಯವರದೇನೋ ಗೊತ್ತಿಲ್ಲ, ಅದರಲ್ಲಿನ ನಾಯಕಿ, ಆಕೆಗೆ ಮಲತಾಯಿ, ನಾಯಕಿಗೆ ಹುಚ್ಚು ಹಿಡಿಯುವುದು, ನಾಯಕನ ಹೆಸರು ರಾಜಶೇಖರ(?) ಆತ ಅವಳನ್ನು ಮಾನಸಿಕ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಟ್ರೀಟ್ ಮೆಂಟ್ ಕೊಡಿಸುವುದು, ಹೀಗೆ ಇದು ಕೂಡ ಮನಸ್ಸಿನಲ್ಲಿ ಅಚ್ಚೊತ್ತಿತ್ತು.  ಮನೆಗೆ ಬಂದ ನೆಂಟರೆಲ್ಲರೂ ನೀವು ಶಾಲೆಯ ಪುಸ್ತಕಗಳನ್ನು ಬಿಟ್ಟು, ಕಥೆ, ಕಾದಂಬರಿಗಳನ್ನು ಓದಲೇಕೆ ಬಿಡುತ್ತೀರಿ? ಎಂದು ಅಮ್ಮನಿಗೆ ಆಕ್ಷೇಪಿಸುತ್ತಿದ್ದರೂ, ಅಮ್ಮ ಮಾತ್ರ ನಮಗೆ ತಡೆಯನ್ನೊಡ್ಡುತ್ತಿರಲಿಲ್ಲ. 

ಹೀಗೆ ಪತ್ತೇದಾರಿ ಕಾದಂಬರಿಗಳಿಂದ ಶುರುವಾದ ನನ್ನ ಓದುವ ಚಟ, ಯಂಡಮೂರಿ, ತ್ರಿವೇಣಿ, ತೇಜಸ್ವಿಯವರಿಂದ ಆಕರ್ಷಿತಗೊಂಡು, ಗಂಭೀರ ಓದಿನತ್ತ ತಿರುಗಿದ್ದು ಭೈರಪ್ಪನವರ ‘ಪರ್ವ’ ಓದಿದ ನಂತರ.  ‘ಪರ್ವ’ ಓದಿದ ನಂತರ ನಾನು ಒಂದೆರಡು ತಿಂಗಳು ನಾನೇ ಆಗಿರಲಿಲ್ಲ. ಉಸಿರು ಕಟ್ಟಿದಂತೆ ಭೈರಪ್ಪನವರ ಎಲ್ಲಾ ಪುಸ್ತಕಗಳನ್ನು ಓದಿ ಮುಗಿಸಿ, ಒಮ್ಮೆಗೇ ಭೈರಪ್ಪನವರ ಎಲ್ಲಾ ಪುಸ್ತಕಗಳನ್ನು ಓದಬೇಡಾ, ಹುಚ್ಚು ಹಿಡಿದೀತು! ಎಂದು ಗೆಳೆಯನೊಬ್ಬನ ಕೈಲಿ ಬುದ್ಧಿ ಹೇಳಿಸಿಕೊಂಡಿದ್ದೆ.  ‘ಹಲಗೆ ಬಳಪ’ ದಲ್ಲಿ ರಾಘವೇಂದ್ರ ಜೋಷಿಯವರು ಬರೆದಂತೆ ನನಗೆ ಬರೆದವರಾರು? ಎಂಬುದು ಎಂದಿಗೂ ಮುಖ್ಯವಾಗಿರಲಿಲ್ಲ. ನನಗೆ ಪುಸ್ತಕಗಳ ಶೀರ್ಷಿಕೆ ಕೂಡ ನೆನಪಿರುತ್ತಿರಲಿಲ್ಲ. ಇಂದಿಗೂ ಕೂಡ.  ಯಾವುದೇ ಪುಸ್ತಕವಾದರೂ ನಡೆದೀತು, ಓದಲಷ್ಟೇ ಬೇಕಿತ್ತು. ಈಗಲೂ ಕೂಡ ಯಾರಾದರೂ ಆ ಪುಸ್ತಕ ಓದಿದ್ದೀರಾ? ಈ ಪುಸ್ತಕ ಓದಿದ್ದೀರಾ? ಎಂದು ಕೇಳಿದರೆ ತಕ್ಷಣ ನನಗೆ ನೆನಪಾಗುವುದಿಲ್ಲ. ಓದಿಲ್ಲವೆಂದುಕೊಂಡು ಮನೆಗೆ ತಂದು ಓದಲು ಶುರು ಮಾಡಿದಾಗ ಅರೆ! ಓದಿದ್ದೆ ಎಂಬ ಅರಿವಾಗುತ್ತದೆ.   ಇತ್ತೀಚೆಗೆ ಗೆಳೆಯನೊಬ್ಬ ತಾನು ಬರೆದವರು ಯಾರು ಎಂಬುದನ್ನು ತಿಳಿದುಕೊಂಡ ನಂತರವೇ ಪುಸ್ತಕವನ್ನು ಓದಲು ಶುರು ಮಾಡುವುದು ಎಂದಾಗ, ನನಗೂ ಕೂಡ ಜ್ಞಾನೋದಯವಾಗಿ ನೆನಪಿನಲ್ಲಿಟ್ಟುಕೊಳ್ಳಲು ಶುರು ಮಾಡಿದ್ದೇನೆ. ಪುಸ್ತಕವೊಂದನ್ನು ಓದಲು ಶುರು ಮಾಡಿದರೆ ಉಸಿರುಗಟ್ಟಿದಂತೆ ಓದುವುದು ನನ್ನ ಅಭ್ಯಾಸ.  ತಿಂಡಿ ತಿನ್ನುವಾಗ, ಊಟ ಮಾಡುವಾಗ ಎಲ್ಲ ಸಮಯದಲ್ಲಿಯೂ ಅದನ್ನು ಓದಿ ಮುಗಿಸಿದ ಮೇಲೆ ಸಮಾಧಾನ. ಅಕಸ್ಮಾತ್ ಎಲ್ಲಿಯಾದರೂ ಇದಕ್ಕೆ ಅಡಚಣೆ ಆಯಿತೋ ಅಥವಾ ಆ ಪುಸ್ತಕದ ಭಾವ ನನ್ನೊಳಗೆ ಇಳಿಯಲಿಲ್ಲವೋ, ನಂತರ ಆ ಪುಸ್ತಕವನ್ನು ಪೂರ್ತಿಯಾಗಿ ಓದಲಾಗುವುದೇ ಇಲ್ಲ. ಈ ಓದುವ ಕ್ರಮ ತಪ್ಪೋ, ಏನೋ ಎನ್ನುವ ಅಳುಕು ಮನದ ಮೂಲೆಯಲ್ಲಿತ್ತು. ಅದು ‘ಹಲಗೆ ಬಳಪ’ ಓದಿದ ನಂತರ ಮರೆಯಾಯಿತು.

Wednesday, October 3, 2012

ಭ್ರಮೆ!


ಭ್ರಮೆ ಹರಿಯಿತು!
ಮನ ಮಸುಕಾಯಿತು
ಓದಿದ್ದೆಷ್ಟೋ, ಬರೆದಿದ್ದೆಷ್ಟೋ
ಗುಲಾಮನಾದರೂ
ದೊರೆಯಲಿಲ್ಲ ಮುಕುತಿ
ಅನುಭವ ದಕ್ಕಲಿಲ್ಲ

ಸಂಬಂಧ ತೆಳುವಾಯಿತು
ಮಾತು ಬಡವಾಯಿತು
ಹಣ್ಣೆಲೆ ಮಾಗಲಿಲ್ಲ
ಚಿಗುರು ಬೆಳೆಯಲಿಲ್ಲ
ಓದಿಗೂ, ಪ್ರಬುದ್ಧತೆಗೂ
ಬಂಧ ಮೂಡಲಿಲ್ಲ

ಆಗಸ ಬಿಸಿಯಾಯಿತು
ನಳನಳಿಸುತ್ತಿದ್ದ
ಕಾಯಿ ಬಾಡಿತು
ತಂಪಾದ ಇಳೆ
ಬೀಸಿದ ಬಿರುಗಾಳಿಗೆ
ಕಾದು ಕೆಂಪಾಯಿತು

ಕತ್ತಲೆ ಕವಿಯಿತು
ಅರಮನೆಯಲ್ಲೀಗ
ಮೌನ ಮೆರವಣಿಗೆ
ಸೃಷ್ಟಿಸಿದವರಾರು?
ಅಳಿಸಿದವರಾರು?
ಅರಿವು ಮೂಡಲಿಲ್ಲ