Sunday, October 13, 2013

ಹೊಸತನದಿಂದ ಕಾಣುವ ಆದರೆ ಕಾಡದ ‘ಜಟ್ಟ’

ಕನ್ನಡ ಚಿತ್ರರಂಗದಲ್ಲಿ ಪ್ರಯೋಗಗಳೇ ನಡೆಯುತ್ತಿಲ್ಲ, ಡಬ್ಬಿಂಗ್ ಬೇಕೇ? ಬೇಡವೇ? ರಿಮೇಕ್, ಸ್ವಮೇಕ್ ಇತ್ಯಾದಿ ಗಲಾಟೆಗಳ ನಡುವೆ ಅಲ್ಲೊಂದು, ಇಲ್ಲೊಂದು ಚಿತ್ರ ಸಿಕ್ಕಾಪಟ್ಟೆ ಶಬ್ಧ ಮಾಡುತ್ತಿವೆ.  ತನ್ನ ಚಿತ್ರದ ನಾಯಕಿಯ ಬಳಿ ಡಬಲ್ ಮೀನಿಂಗ್ ಮಾತುಗಳನ್ನು ಹೇಳಿಸಿ, ‘ಕಿರು ಚಿತ್ರ’ ದಂತೆ ಫೇಸ್ ಬುಕ್ ನಲ್ಲಿ, ಯೂ ಟ್ಯೂಬ್ ನಲ್ಲಿ ಒಂದಷ್ಟು ಕಾಲ ವಿಜೃಂಭಿಸಿ,  ಬಾಕ್ಸ್ ಆಫೀಸ್ ನಲ್ಲಿ ಗೆದ್ದ ಸಿಂಪಲಾಗೊಂದು ಲವ್ ಸ್ಟೋರಿ ಇರಬಹುದು ಅಥವಾ ಪ್ಲಾನಿಂಗ್ ಸಮಯದಿಂದ ಹಿಡಿದು ಡಿಸ್ಟ್ರಿಬ್ಯೂಷನ್, ವಿಮರ್ಷೆ, ಸಂವಾದ ಎಂದೆಲ್ಲಾ ಪ್ರತಿಯೊಂದು ಹಂತವನ್ನು ವೀಕ್ಷಕರನ್ನು ‘ಇದು ನಿಮ್ಮದೇ ಚಿತ್ರ!’ ಎಂದು ಮೋಡಿಗೊಳಿಸಿದ ‘ಲೂಸಿಯಾ’ ಇರಬಹುದು, ಎಲ್ಲವೂ ಕೂಡ ಕನ್ನಡ ಚಿತ್ರರಂಗದಲ್ಲಿ ಬದಲಾವಣೆಯನ್ನು ತರಬಹುದೇನೋ? ಎನ್ನುವ ಆಸೆಯನ್ನು ಹುಟ್ಟು ಹಾಕಿದ ಚಿತ್ರಗಳು. ಈ ಸಾಲಿಗೆ ಸೇರುವ ಮತ್ತೊಂದು ಚಿತ್ರ ‘ಜಟ್ಟ’.

ಪ್ರಕೃತಿಯ ವಿನಾಶ, ಕಾಡು ಜನರ ತೊಳಲಾಟ, ನಗರದ ಜನರ ತಳಮಳ, ಶ್ರೀಮಂತ ಜನರ ದುರಾಸೆ, ದುರ್ಬಲ ವರ್ಗದವರ ಅಸಹಾಯಕತೆ, ಧರ್ಮದ ಹೆಸರಿನಲ್ಲಿ ಮುಗ್ಧರನ್ನು ಬಲಿಗೊಡುವ ಸ್ವಾರ್ಥ, ಅಧಿಕಾರದ ಮೋಹ, ಪ್ರಸ್ತುತ ಪರಿಸ್ಥಿತಿಯಲ್ಲಿ ನರಳುತ್ತಿರುವ ಗಂಡು ಹೆಣ್ಣಿನ ಸಂಬಂಧಗಳು, ಸ್ತ್ರೀವಾದ, ಇವೆಲ್ಲವೂ ಪಾಶ್ಚಾತ್ಯ ಸಂಸ್ಕೃತಿ ಅನುಕರಣೆಯಿಂದಲೇ ಆಗುತ್ತಿರಬಹುದೆಂಬ ಅನುಮಾನ, ಹೀಗೆ.... ಹತ್ತು, ಹಲವಾರು ಸಮಸ್ಯೆಗಳನ್ನು ‘ಜಟ್ಟ’ ಮಾತಾಡುತ್ತದೆ. ಆದರೆ ‘ಜಟ್ಟ’ ಚಿತ್ರದ ಸಮಸ್ಯೆ ಏನೆಂದರೆ ಅದು ತೆಗೆದುಕೊಂಡಿರುವ ವಿಷಯಗಳೂ, ದೃಶ್ಯ ಮಾಧ್ಯಮದಲ್ಲಿ ಚಿತ್ರೀಕರಿಸಲು ಬಹಳ ಕಷ್ಟ.  ಕೆಲವು ಮಾತುಗಳನ್ನು ದೀರ್ಘವಾಗಿ ಭಾಷಣದಂತೆಯೇ ಹೇಳಿಸಬೇಕಾಗುವುದು ಚಿತ್ರದ ಬಹುಮುಖ್ಯ ತೊಡಕು!  ನಾಟಕಗಳಲ್ಲಿ ಇಂತಹವುದನ್ನು ಹೇಳಿ ಗೆದ್ದವರು ಬಹು ಮಂದಿ.  ಆದರೆ ‘ಸಿನೆಮಾ’ ಗಳಲ್ಲಿ ದೃಶ್ಯಗಳಲ್ಲಿ ಕಥೆಯನ್ನು ಹೇಳಬೇಕಾಗುವುದು ಅತ್ಯಂತ ಪ್ರಮುಖ ಅಂಶ.  ಇದನ್ನು ನಿರ್ದೇಶಕರು ಅರ್ಥ ಮಾಡಿಕೊಳ್ಳುವುದರಲ್ಲಿ ಎಡವಿದರೇ? ಅಥವಾ ನಾಟಕಗಳನ್ನು ನಿರ್ದೇಶನ ಮಾಡುವುದರಲ್ಲಿಯೇ ಪಳಗಿದುದರಿಂದಾಗಿ ‘ಸಿನೆಮಾ’ ಚಿತ್ರೀಕರಣದಲ್ಲಿ ಅಥವಾ ಸಿನೆಮಾ ಕಂಟೆಂಟ್ ಆಯ್ಕೆ ಮಾಡಿಕೊಳ್ಳುವಲ್ಲಿ ನಿರ್ದೇಶಕರು ಸೋತರೇ? ತಿಳಿಯದು.

ಹಾಗಾದರೆ ‘ಜಟ್ಟ’ ಚಿತ್ರ ಚೆನ್ನಾಗಿದೆಯೇ? ಇಲ್ಲವೇ?  ಇದನ್ನು ಹೇಳುವುದು ಭಯಂಕರ ಕಷ್ಟ. ‘ಲೂಸಿಯಾ’ ಸಂವಾದದಲ್ಲಿ ಅರ್ಬನ್ ಎಲೈಟ್ ಪ್ರೇಕ್ಷಕನ ಇಗೋ ತಣಿಸಿದ ಚಿತ್ರ ‘ಲೂಸಿಯಾ’ ! ಎಂದು ಸರಳವಾಗಿ ಗೆಳೆಯನೊಬ್ಬ ಹೇಳಿದಂತೆ, ‘ಜಟ್ಟ’ ಚಿತ್ರವನ್ನು ಅಷ್ಟು ಸುಲಭವಾಗಿ ವರ್ಗೀಕರಿಸಲಾಗುವುದಿಲ್ಲ. ಮೈಸೂರು, ಮಂಡ್ಯ, ಬೆಂಗಳೂರು, ಮಂಗಳೂರು, ಕುಂದಾಪುರ, ಮಲೆನಾಡು, ಉತ್ತರ ಕನ್ನಡ ಹೀಗೆ ಎಲ್ಲಾ ಜನರಿಗೂ ತಲುಪುವಂತಹ ಬೇರೆ, ಬೇರೆ ಕನ್ನಡ ಭಾಷೆಯ ಪ್ರಯೋಗವಿದೆ. ನಾಯಕನ ಬಾಯಲ್ಲಿ ಕೃತಕವಾಗಿ ಕೇಳಿಸುವ ಭಾಷೆ,  ಆತನ ಹೆಂಡತಿಯ ಪಾತ್ರಧಾರಿಯ ಮಾತುಗಳಲ್ಲಿ  ಚಂದವಾಗಿ ನೈಜತೆಯಿಂದ ಕೇಳಿಬರುತ್ತದೆ. ಇನ್ನೂ ನಾಯಕಿಯ ಪಾತ್ರಧಾರಿಯ ವರ್ತನೆ ಫೆಮಿನಿಸ್ಟ್ ಎಂದು ತೋರಿಸಿದರೂ ಕೂಡ, ಆಕೆ ಡ್ರಗ್ ಅಡಿಕ್ಟ್ ಎಂದು ತೋರಿಸಲೋ ಅಥವಾ ಮಾತುಗಳನ್ನು ಒತ್ತಿ ಒತ್ತಿ ಹೇಳುವ ನಾಟಕದ ಶೈಲಿಯೋ?! ತಿಳಿಯದು, ಅತ್ಯಂತ ಕೃತಕವಾಗಿ ಆಕೆ ಎಳೆದೆಳೆದು ಮಾತಾಡುವ ಪರಿ ಬೇಸರ ಹುಟ್ಟಿಸಿಬಿಡುತ್ತದೆ.  ಮಾತಾಡದೇ ಇರುವ ದೃಶ್ಯಗಳಲ್ಲಿ ಆಕೆಯ ನಟನೆ ಮಾಡುವ ಮೋಡಿ, ಅವಳು ಮಾತಾಡಲು ತೊಡಗಿದೊಡನೆ ಕಿರಿಕಿರಿ ಆಗಿಬಿಡುತ್ತದೆ. ಹಾಗಾಗಿ ಆಕೆ ಪ್ರತಿಪಾದಿಸುವ ‘ಸ್ತ್ರೀ ವಾದ’ದಲ್ಲಿ ಹುರುಳಿದ್ದರೂ ಕೂಡ, ಮನಸ್ಸಿಗೆ ನಾಟುವುದೇ ಇಲ್ಲ. ಇದು ಚಿತ್ರದ ಅತ್ಯಂತ ನೆಗೆಟಿವ್ ಪಾಯಿಂಟ್.

ನಾಯಕನಿಗೆ ಆತನ ಸಮಸ್ಯೆ (ಪ್ರಸ್ತುತ ಚಿತ್ರರಂಗದ ಪರಿಸ್ಥಿತಿಯನ್ನು ನೆನಪಿಸಿಕೊಂಡರೆ ನಿರ್ದೇಶಕನ ಸಮಸ್ಯೆ ಕೂಡ!) ಏನೆಂಬುದೇ ತಿಳಿಯದು. ತನ್ನನ್ನು ಭೇಟಿ ಮಾಡಿದ ಪ್ರತಿಯೊಬ್ಬರಿಂದಲೂ ಆತ, ತನ್ನ ಸಮಸ್ಯೆಗೆ ಪರಿಹಾರ ಹುಡುಕುತ್ತಾನೆ, ಅವರು ನೀಡಿದ ಪರಿಹಾರವನ್ನು ಬಲವಾಗಿಯೇ ನಂಬುತ್ತಾನೆ. ಹೀಗೆಯೇ ತನ್ನ ಹೆಂಡತಿ ಓಡಿಹೋಗಿದ್ದು ಕೂಡ ಪಾಶ್ಚಾತ್ಯ ಸಂಸ್ಕೃತಿ ಆಕರ್ಷಣೆಯಿಂದಲೇ (ಬೇರೆಯವರು ಹೇಳಿದ್ದನ್ನು) ಎಂದು ಬಲವಾಗಿ ನಂಬುವ ಈತ, ಪುರುಷ ದ್ವೇಷಿ ಸ್ತ್ರೀವಾದಿಯೊಬ್ಬಳನ್ನು ಬುದ್ಧಿ ಕಲಿಸಲೆಂದೇ ಕೂಡಿಹಾಕುತ್ತಾನೆ.  ಆದರೆ ಇವರಿಬ್ಬರ ವಾದಗಳು, ತರ್ಕಗಳು ಮತ್ತೊಬ್ಬರನ್ನು ಸೋಲಿಸುತ್ತಲೇ ಹೋಗುತ್ತವೆ! ನಾಯಕ ಇವಳ ಮಾತುಗಳಿಂದಲೇ ಬದಲಾಗುತ್ತಾನೆ ಎಂಬುದನ್ನು ಒಂದು ಕಡೆ ಬಿಂಬಿಸುತ್ತಲೇ, ಮತ್ತೊಂದು ಕಡೆ ಈತನನ್ನು, ಈತನ ಪ್ರಾಮಾಣಿಕತೆಗೆ ಮೆಚ್ಚುವ ಈತನ ಅಧಿಕಾರಿಯ ಪ್ರೀತಿ ಬದಲಾಯಿಸುತ್ತದೆ ಎಂಬುದನ್ನು ಕೂಡ ತೋರಿಸಲಾಗುತ್ತದೆ. ಹಾಗಾಗಿ ನಾಯಕಿ ಮತ್ತು ಜಟ್ಟನ ಅಧಿಕಾರಿ ಈ ಎರಡೂ ಪಾತ್ರಗಳೂ ನಾಯಕನನ್ನು ಜೊತೆಜೊತೆಗೆ ವೀಕ್ಷಕರನ್ನು ಗೊಂದಲಗೊಳಿಸುತ್ತವೆ! ಇಡೀ ಜಗತ್ತೇ ನೆಗೆಟಿವ್ ಗುಣಗಳಿಂದ ತುಂಬಿವೆ ಎಂದು ಹೇಳುತ್ತಾ ಅರಣ್ಯಾಧಿಕಾರಿಯೊಬ್ಬನೇ ಅತ್ಯಂತ ಪ್ರಾಮಾಣಿಕ, ಆತನನ್ನೊಬ್ಬ ಫಕೀರ ಎಂಬಂತೆ ಚಿತ್ರೀಕರಿಸಿರುವುದು ಕೂಡ ಅಭಾಸ ಎನಿಸುತ್ತದೆ. ‘ಜಟ್ಟ’ ಚಿತ್ರದ ನಾಯಕನಾದರೂ, ನಾಯಕನಂತೆ ಮೋಡಿ ಮಾಡುವುದು ಆತನ ಅಧಿಕಾರಿ ಎಂಬುದು ಕಥೆಗಾರ / ನಿರ್ದೇಶಕನನ್ನು ಮೀರಿ ಪಾತ್ರಗಳು ಹೇಗೆ ಬೆಳೆದುಬಿಡುತ್ತವೆ?! ಎಂಬುದಕ್ಕೊಂದು ಉದಾಹರಣೆ.

ಅರಣ್ಯಾಧಿಕಾರಿಯ ಪಾತ್ರಧಾರಿಯ ಧ್ವನಿ ಬಹಳ ಚೆನ್ನಾಗಿದೆ (ಬಹುಶಃ ಗಿರಿರಾಜ್ ಅವರದೇ ಇರಬಹುದು!) ಕೆಲವೊಮ್ಮೆ ಸುಂದರಕೃಷ್ಣ ಅರಸ್ ಅವರ ಧ್ವನಿಯನ್ನು ನೆನಪಿಗೆ ತಂದಿತು.  ಚಿತ್ರದಲ್ಲಿ ಪಾತ್ರದ ಮಹತ್ವ ಅರಿತು ನೈಜತೆಯಿಂದ ನಟಿಸಿದವರು ಮೂವರೇ ೧. ಅರಣ್ಯಾಧಿಕಾರಿ ೨. ಕಿಶೋರ್, ೩. ಪಾವನ ಳ ಪ್ರೇಮಿ.  ಹಾಡುಗಳು ಸಿ.ಅಶ್ವಥ್ ಅವರನ್ನು ನೆನಪಿಗೆ ತಂದಿತಾದರೂ, ಸಾಹಿತ್ಯ ನೆನಪಿಗೆ ತಂದುಕೊಳ್ಳುವುದು ಬಹಳ ಕಷ್ಟ. (ಕವನವಾಗಿ ಓದಿಕೊಂಡಾಗ ಹಲವು ಹೊಳಹುಗಳು ಸಿಗುತ್ತವೆ).  ದೃಶ್ಯ ಮಾಧ್ಯಮವನ್ನು ಇನ್ನೂ ಚೆನ್ನಾಗಿ ಬಳಸಿಕೊಳ್ಳಬಹುದಿತ್ತು.  ಸಿನೆಮಾಗಿಂತ ನಾಟಕವಾಗಿಯೇ ಕಂಡಿದ್ದು ನನ್ನ ತಿಳುವಳಿಕೆಯ ಮಿತಿಯೋ? ಅರಿಯದು.  ಆದರೆ ಅದದೇ ಪೇಲವ ಕನ್ನಡ ಚಿತ್ರಗಳಿಗಿಂತ ಹೊಸತನದಿಂದ ಕಂಗೊಳಿಸುತ್ತಿರುವುದು ಚಿತ್ರದ ಪ್ಲಸ್ ಪಾಯಿಂಟ್. ‘ಜಟ್ಟ’ ಚಿತ್ರಕಥೆಯಲ್ಲಿ ಹೊಸತನವಿದೆ.  ಆದರೂ ಚಿತ್ರವು ವೀಕ್ಷಕರನ್ನು ತಲುಪದಿದ್ದರೆ, ಖರ್ಚು ಮಾಡಿದ ಹಣ ವಾಪಾಸ್ಸು ಬರದಿದ್ದರೆ ಪ್ರಯೋಜನವಾದರೂ ಏನು? 

‘ಲೂಸಿಯಾ’ ಅರ್ಥವಾಯಿತೋ, ಇಲ್ಲವೋ! ಒಟ್ಟಿನಲ್ಲಿ ‘ಲೂಸಿಯಾ’ ತಂಡದ ಶ್ರಮ (ಇದೇ ಅವರ ಕೊನೆಯ ಚಿತ್ರವೇನೋ ಎಂಬಂಥ ಉತ್ಸಾಹ) ಚಿತ್ರದ ಪ್ರಾರಂಭದಿಂದ ಹಿಡಿದು, ಬಿಡುಗಡೆಯಾದ ಮೇಲೂ, ಅವರೆಲ್ಲರೂ ನಡೆಸಿದ ಮಾರ್ಕೆಟಿಂಗ್ ತಂತ್ರ, ಜೊತೆಗೆ ಲಂಡನ್ ನಲ್ಲಿ ಗೆದ್ದ ಮೊದಲ ಚಿತ್ರ, ಇಂಗ್ಲೀಷ್ ಸಬ್ ಟೈಟಲ್ ಎಂದೆಲ್ಲಾ ಅನೇಕ ತಂತ್ರಗಳಿಂದ ವೀಕ್ಷಕರನ್ನು ಬೇಸ್ತು ಬೀಳಿಸಿ, ಒಟ್ಟಿನಲ್ಲಿ ಇಡೀ ಚಿತ್ರದುದ್ದಕ್ಕೂ, ನಂತರವೂ ಭಯಂಕರ ಹೈಪ್ ಜೊತೆಗೆ ಹಣವನ್ನೂ ಕೂಡ ಗಳಿಸಿಕೊಂಡಿತು. ಚಿತ್ರರಂಗ ಕಲಾಮಾಧ್ಯಮವಷ್ಟೇ ಅಲ್ಲಾ, ಉದ್ಯಮವೂ ಕೂಡ ಎಂಬುದನ್ನು ಸಾಬೀತು ಮಾಡಿಬಿಟ್ಟಿತು.  ಯಾರೂ ಏನಾದರೂ ಮಾತಾಡಿಕೊಳ್ಳಲಿ, ನನಗೇ ಅದರ ಹಂಗಿಲ್ಲ, ವೀಕ್ಷಕರನ್ನು ಆಕರ್ಷಿಸುವುದಷ್ಟೇ ನನ್ನ ಕೆಲಸ ಎಂಬ ನಿರ್ದೇಶಕರ ಉತ್ಸಾಹ, ನಿರ್ಮಾಪಕರ ಭಾಗವಹಿಸುವಿಕೆ, ತಂಡದ ಇನ್ನಿತರರ ಸಹಕಾರವಿದ್ದರೆ, ಇನ್ನೊಂದಿಷ್ಟು ಇಂತಹ ಒಳ್ಳೆಯ ಚಿತ್ರಗಳು ಮೂಡಿಬಂದು, ಕನ್ನಡ ಚಿತ್ರರಂಗವನ್ನು ಉಳಿಸುವುದೇನೋ ಎನ್ನುವ ಆಸೆ ‘ಲೂಸಿಯಾ’ ನೋಡುವಾಗ ಅನ್ನಿಸಿತ್ತು.

‘ಜಟ್ಟ’ ಚಿತ್ರವು ಬಹುಶಃ ಸಾಹಿತ್ಯ ಇಷ್ಟ ಪಡುವಂತಹ, ಅದರಲ್ಲೂ ದೇವನೂರು, ಸಿದ್ದಲಿಂಗಯ್ಯ ನವರ ಅಭಿಮಾನಿಗಳಿಗೆ ಇಷ್ಟವಾಗಬಹುದೇನೋ? ಆದರೆ ‘ಜಟ್ಟ’ ಆರಂಭದಿಂದಲೂ ಯಾವುದೇ ರೀತಿಯ ಮಾರ್ಕೆಟಿಂಗ್ ತಂತ್ರವಿಲ್ಲದೆ, ಕೊನೆಕೊನೆಗೆ ನಿರ್ದೇಶಕರೊಬ್ಬರದೇ ಉತ್ಸಾಹದಿಂದ (ಒಂದೇ ಥಿಯೇಟರ್ ನಲ್ಲಿ ಪ್ರದರ್ಶಿತವಾಗಬೇಕಾಗಿದ್ದದ್ದು), ಅನೇಕ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಂಡಿದ್ದಲ್ಲದೆ, ಎರಡನೇ ದಿವಸಕ್ಕೆ ಮಲ್ಟಿಪ್ಲೆಕ್ಸ್ ಗಳಿಂದ ಹೊರಬಂದುಬಿಟ್ಟಿತು! ಮಂತ್ರಿ ಮಾಲ್ ನಲ್ಲಿ ಕೇವಲ ಬೆರಳೆಣಿಕೆಯಷ್ಟು ಮಂದಿ ‘ಜಟ್ಟ’ ವನ್ನು ನೋಡುತ್ತಿರುವುದನ್ನು ಕಂಡು ಸಂಕಟವಾಯಿತು.  ಆಗ ಅನ್ನಿಸಿದ್ದು ಇಷ್ಟೇ - ‘ಸಿನೆಮಾ’ ಎಂಬುದು ಉದ್ಯಮವೂ ಹೌದು, ಕಲಾಮಾಧ್ಯಮವೂ ಹೌದು ಎಂಬುದನ್ನು ಒಪ್ಪಿಕೊಂಡು, ಇದೊಂದು ದುಬಾರಿ ಕಲಾಮಾಧ್ಯಮವಾದ್ದರಿಂದ, ಹಣ ಹಾಕುವ ನಿರ್ಮಾಪಕನನ್ನು ಕೂಡ ವಿಶ್ವಾಸಕ್ಕೆ ತೆಗೆದುಕೊಳ್ಳುವುದು ಇಂತಹ ಕಲಾಕೃತಿಗಳು ವೀಕ್ಷಕರನ್ನು ಮುಟ್ಟಲು ಅವಶ್ಯ ಎಂದೆನಿಸಿಬಿಟ್ಟಿತು! :(

Wednesday, September 11, 2013

ಲೂಸಿಯಾ - ಕಪ್ಪು, ಬಿಳುಪು, ಬಣ್ಣಗಳ ನಡುವೆ!

ಲೂಸಿಯಾ - ಈ ಹೆಸರಿನ ಸ್ಪಾನಿಷ್ ಚಿತ್ರವೊಂದು ೧೯೬೮ರಲ್ಲಿ ಬಿಡುಗಡೆಯಾಗಿತ್ತು. ಅದೊಂದು ಕಪ್ಪು ಬಿಳುಪು ಚಿತ್ರವಾಗಿತ್ತು.  ಲೂಸಿಯಾ ಅಂದರೆ ಬೆಳಕು! ಕತ್ತಲೆಯಲ್ಲಿ  ಕಪ್ಪು / ಬಿಳುಪು ಮಾತ್ರ ಕಾಣುವ ಬಣ್ಣಗಳು ಬೆಳಕಿನಲ್ಲಿ ಬಂದಾಗ ಅದರ ನಿಜ ಬಣ್ಣಗಳು ಬಯಲಾಗುವಂತೆಯೇ, ಬಣ್ಣ ಬಣ್ಣದ ಕನಸು ಹಾಗೂ ಕಪ್ಪು ಬಿಳುಪಿನ ವಾಸ್ತವಗಳ ನಡುವೆ ಲೂಸಿಯಾ ಚಿತ್ರ ಓಡಾಡುತ್ತದೆ. ಚಿತ್ರಕಥೆ ಏನಿರಬಹುದು? ಚಿತ್ರದ ಬಗ್ಗೆ ಏನೂ ಬರೆಯಬಹುದು? ಎಂದು ಯೋಚಿಸಬಹುದಷ್ಟೇ ಹೊರತು ಅಷ್ಟು ಸುಲಭವಾಗಿ ಚಿತ್ರದ ಬಗ್ಗೆ ಬರೆಯಲು ಥಟ್ ಎಂದು ಹೊಳೆಯುವುದಿಲ್ಲ. ಹಾಗಾಗಿಯೇ ಬಹಳಷ್ಟು ಜನ ಚಿತ್ರ ನೋಡಿದವರೂ ಕಥೆಯ ಬಗ್ಗೆ ಬರೆದಿಲ್ಲವೇನೋ? ಎನ್ನುವ ಅನುಮಾನದೊಂದಿಗೆ, ಕೆಲವರು ತಮ್ಮ ರಿವ್ಯೂಗಳಲ್ಲಿ ಬರೆದಷ್ಟೇ ಸಿಂಪಲ್ ಆಗಿ ಚಿತ್ರಕಥೆ ಇದೆಯೇ? ಎನ್ನುವ ಪ್ರಶ್ನೆಯ ಜೊತೆಜೊತೆಗೆ ಇಂತಹದೊಂದು ಕಥೆಗೆ ಪವನ್ ಯಾಕೆ ೨ ವರ್ಷಗಳು ತೆಗೆದುಕೊಂಡರು? ಗಾಂಧಿ ನಗರದ ಕನ್ನಡ ನಿರ್ಮಾಪಕರು ಹಣ ಹಾಕಲು ಯಾಕೆ ಮುಂದೆ ಬರಲಿಲ್ಲ?  ನಟಿಸಲು ನಮ್ಮ ಪ್ರಸಿದ್ಧ ನಟರು ಯಾಕೆ ನಿರ್ಧರಿಸಲಿಲ್ಲ? ಪ್ರತಿಯೊಂದು ಕೆಲಸವನ್ನೂ ಕೂಡ ಹೊಸಬರ ಬಳಿಯಲ್ಲಿಯೇ ಮಾಡಿಸಲು ಪವನ್ ನಿರ್ಧರಿಸಿದ್ದಾದರೂ ಏಕೆ?  ನಿರ್ದೇಶಕ, ಸ್ಕ್ರಿಪ್ಟ್, ಸಂಕಲನ, ಕ್ಯಾಮೇರಾ ವರ್ಕ್, ಹಾಡುಗಳು, ಸಂಗೀತ ಎಲ್ಲವೂ ಅದ್ಭುತ ಟೀಮ್ ವರ್ಕ್ ಆಗಿದ್ದರೆ ಮಾತ್ರ ಅಂತಹ ಚಿತ್ರ, ಅತ್ಯುತ್ತಮ ಚಿತ್ರವಾಗುತ್ತದೆ ಎನ್ನುವ ಸತ್ಯ, ಅದರಲ್ಲೂ ಮುಖ್ಯವಾಗಿ ನಿರ್ದೇಶಕನಿಗಿರಬೇಕಾದ ತಾಳ್ಮೆ, ಆಸಕ್ತಿ, ಡೆಡಿಕೇಶನ್ ಎಲ್ಲವೂ ತಿಳಿಯಬೇಕಾದರೆ ‘ಲೂಸಿಯಾ’ ನೋಡಬೇಕು.

ಈ ಹಿಂದೆ, ಹೆಸರಿಲ್ಲದ ನಾವು ನಾಲ್ಕೈದು ಮಂದಿ, ಹೀಗೆಯೇ ಪಬ್ಲಿಕ್ ಫಂಡಿನಿಂದ ಚಿತ್ರವೊಂದನ್ನು ಮಾಡಲು ಹೊರಟು, ಕಥೆ ಆರಿಸುವ ಹಂತದಲ್ಲಿಯೇ ಗುಂಪು ಬೇರೆ, ಬೇರೆಯಾಗಿ ಆ ಸಿನೆಮಾ ಮುಂದುವರೆಯಲೇ ಇಲ್ಲ. ಹಾಗಾಗಿ ಪಬ್ಲಿಕ್ ಫಂಡ್ ನಿಂದ ‘ಲೂಸಿಯಾ’ ಚಿತ್ರವು ನಿರ್ಮಾಣವಾಗುತ್ತಿದೆ ಎಂದು ತಿಳಿದಾಗಿನಿಂದ ನನಗೆ ಅದರ ಪ್ರತಿಯೊಂದು ಕಾರ್ಯವೈಖರಿಯ ಬಗ್ಗೆ ಅತ್ಯಂತ ಆಸಕ್ತಿ. ಹಣ ಹೇಗೆ ಸಂಗ್ರಹಿಸುತ್ತಾರೆ ಎಂಬಲ್ಲಿಂದ ಹಿಡಿದು, ಚಿತ್ರ ಪ್ರದರ್ಶನದವರೆಗೂ ಪವನ್ ನೀಡುತ್ತಿದ್ದ ಪ್ರತಿಯೊಂದು ಮಾಹಿತಿಯನ್ನು ಸುಮಾರು ಬಾರಿ ಓದುತ್ತಿದ್ದೆ. ಮೊದಲಿಗೆ ಆಸಕ್ತಿಯುಳ್ಳ ಪ್ರೇಕ್ಷಕರ ಬಳಿಯೇ ಹಣವನ್ನು ಸಂಗ್ರಹಿಸಿ, ನಂತರ ಪ್ರತಿಯೊಬ್ಬ ವ್ಯಕ್ತಿಯನ್ನು ಅಳೆದು, ತೂಗಿ, ಚಿತ್ರಕ್ಕೆ ಸರಿಹೊಂದುತ್ತಾರೋ ಇಲ್ಲವೋ ಎಂದು ವೋಟಿಂಗ್ ಮೂಲಕವೇ  ಸಾಮಾಜಿಕ ಜಾಲ ತಾಣಗಳಲ್ಲಿ ವಿಚಾರಿಸಿ, ಅವರನ್ನು ಚಿತ್ರದಲ್ಲಿ ತೊಡಗಿಸಿಕೊಂಡು, ಹಾಡುಗಳನ್ನು ಸುಮಾರು ದಿನಗಳಿಂದಲೇ ಎಲ್ಲರಿಗೂ ಕೇಳಿಸಿ, ಇಂಟರ್ ನೆಟ್ ಮಾರ್ಕೆಟಿಂಗ್ ಮಾಡಿಕೊಂಡು, ಒಮ್ಮೊಮ್ಮೆ ತೀರಾ ಇಷ್ಟೊಂದು ಪಬ್ಲಿಸಿಟಿ ಬೇಕಿತ್ತೇ? ಎನ್ನುವ ಜಿಗುಪ್ಸೆ ಹುಟ್ಟಿಸಿ, ಪವನ್ ಕುಮಾರ್ ತಮ್ಮ ಕನಸು ‘ಲೂಸಿಯಾ’ ವನ್ನು ನೈಜವನ್ನಾಗಿಸಲು ಪಟ್ಟ ಪರಿಪಾಡಲಿಗೆ ಅವರನ್ನು ಭೇಷ್ ಅನ್ನಲೇಬೇಕು. ಪ್ರತಿಬಾರಿಯೂ ‘ಲೂಸಿಯಾ’ ಹೊಸದೊಂದು ಹೆಸರು ಮಾಡಿದ ಕೂಡಲೇ, ನಾನೇ ಆ ಜಾಗದಲ್ಲಿ ನಿಂತಂತೆ ಸಂಭ್ರಮಿಸಿದ್ದು ಸುಳ್ಳಲ್ಲ! ಸ್ಕ್ರಿಪ್ಟ್ ಹಂತದಿಂದ ಹಿಡಿದು ಚಿತ್ರವು ಥಿಯೇಟರ್ ಗಳಿಗೆ ಬಿಡುಗಡೆ ಆಗುವವರೆಗೂ ತಾವು ಪಟ್ಟ ಕಷ್ಟವೆಲ್ಲವನ್ನೂ ಫೇಸ್ ಬುಕ್ಕಿನಲ್ಲಿ, ತಮ್ಮ ಬ್ಲಾಗ್ ನಲ್ಲಿ ಬರೆಯುತ್ತಿದ್ದ ‘ಪವನ್’ ಗೆ ನಿಜವಾಗಿಯೂ ಚಿತ್ರದ ನಾಯಕನಂತೇ ‘Insomnia' ಆಗಿತ್ತೇ ಎಂದು ಚಿತ್ರ ನೋಡುವಾಗ ನನಗೆ ಅನಿಸಿದ್ದು ಕೂಡ ಸುಳ್ಳಲ್ಲ! :-) 

ರಾತ್ರಿ ನಿದ್ದೆ ಬರದ ನಾಯಕ, ನಿದ್ದೆಗಾಗಿ ಕನಸಿನ ಗುಳಿಗೆ?! ತೆಗೆದುಕೊಂಡು, ತನ್ನ ಕನಸುಗಳಲ್ಲಿ ತನಗನಿಸಿದಂತೆ ಸಹಜವಾಗಿ ಬದುಕುವ ಪಾತ್ರ! ಇಲ್ಲಿ ಒಬ್ಬ ಹೆಸರಾಂತ ನಾಯಕ ನಟ, ಮತ್ತೊಬ್ಬ ಥಿಯೇಟರಿನಲ್ಲಿ ಟಾರ್ಚ್ ಬಿಡುವ ಮುಗ್ಧ ಹುಡುಗ.  ‘ಇರುವುದೆಲ್ಲವ ಬಿಟ್ಟು ಇರದುದೆಡೆಗೆ ತುಡಿವುದೇ ಜೀವನ’ ಎಂಬಂತೆ, ಹೆಸರಾಂತ ನಾಯಕನಟನ ಪಾತ್ರಧಾರಿಗೆ ಒಂಟಿತನ ಬೇಕು, ತನ್ನ ಕೀರ್ತಿ ಅಥವಾ ಹಣಕ್ಕಾಗಿ ಹಿಂದೆ ಬೀಳದ, ಸಹಜ ಪ್ರೀತಿ ಬೇಕು. (ಚಿತ್ರದಲ್ಲಿ ಪದೇ, ಪದೇ ಆತ, ನಾಯಕಿಗೆ ನೀನು ಆಕ್ಟಿಂಗ್ ಮಾಡಬೇಡ ಎಂದು ಹೇಳುತ್ತಿರುತ್ತಾನೆ, ಅವಳು ಏಕೆ? ಎಂದು ಕೇಳಿದರೆ ಆಕೆಗೆ ಉತ್ತರ ಕೊಡುವುದಿಲ್ಲ. ಅದರ ಅರ್ಥ ನಾನು ಮಾಡಿಕೊಂಡಿದ್ದು ಹೀಗೆ - ಆತನಿಗೆ ಸಹಜ ಪ್ರೀತಿಯ ಅವಶ್ಯಕತೆ ಇರುತ್ತದೆ, ಆದರೆ ಮಾತಿನಲ್ಲೆಲ್ಲೂ ಅದನ್ನು ಹೇಳಿಸುವುದಿಲ್ಲ!) ಆದರೆ ಮತ್ತೊಬ್ಬ ಮುಗ್ಧ ಹುಡುಗನಿಗೆ ಕೀರ್ತಿ, ಹಣ ಎಲ್ಲವೂ ಬೇಕು ಆದರೆ ಅದು ತನ್ನ ಪ್ರೀತಿಯ ಹುಡುಗಿಯನ್ನು ಪಡೆಯಲು ಮಾತ್ರ. ನಾಯಕಿಯ ಪಾತ್ರ ಕೂಡ ಎರಡು ಶೇಡ್ ನಲ್ಲಿ ನಡೆಯುತ್ತದೆ. ಈ ಎರಡೂ ಕಥೆಗಳು, ಎರಡೂ ಶೇಡ್ ಗಳಾಗಿ ಅಂದರೆ ಕಪ್ಪು / ಬಿಳುಪು ಹಾಗೂ ಕಲರ್ ನಲ್ಲಿ ಒಂದಕ್ಕೊಂದು ಪೂರಕವಾಗಿ ನಡೆಯುತ್ತಾ ಹೋಗುತ್ತದೆ.   ಚಿತ್ರದುದ್ದಕ್ಕೂ ಬರುವ ಪಾತ್ರಧಾರಿಗಳು ಎರಡು ಕಥೆಗಳಲ್ಲಿಯೂ ಆಯಾಯ ಕಥೆಗೆ ಪೂರಕವಾಗಿ ತಮ್ಮ ತಮ್ಮ ಪಾತ್ರ ನಿರ್ವಹಿಸುತ್ತಾ ಹೋಗುತ್ತಾರೆ. ಯಾವುದೂ ನೈಜ? ಯಾವುದೂ ಕನಸು? ಯಾರ ಕನಸಿನಲ್ಲಿ ಯಾರೂ ಬರುತ್ತಿದ್ದಾರೆ? ಎಂಬುದು ಅರ್ಧ ಚಿತ್ರದವರೆಗೂ ಗೊತ್ತಾಗುವುದಿಲ್ಲ. ಮಧ್ಯಂತರದ ನಂತರ ಚಿತ್ರ ಬಿಡಿಸಿಕೊಳ್ಳುತ್ತಾ ಹೋಗುತ್ತದೆ. ಕೊನೆಗೆ ನಾಯಕನಟನ ಆಸೆಯಂತೆ, ಎಲ್ಲರೂ ಸಹಜವಾಗಿ ಬದುಕುತ್ತಾರೆ ಎಂಬಲ್ಲಿಗೆ ಮುಗಿಯುತ್ತದೆ.

ಇಷ್ಟೇನೇ ಕಥೆ? ಇಲ್ಲಾ ‘ಲೂಸಿಯಾ’ ಚಿತ್ರವನ್ನು ನೋಡಬೇಕಾಗಿರುವುದು, ದೃಶ್ಯಗಳಲ್ಲಿ ಅದನ್ನು ಹೆಣೆದಿರುವ ರೀತಿಗಾಗಿ! ಮೊದಲಿಗೆ ಚಲನಚಿತ್ರ ಯಶಸ್ವಿ ಎನಿಸಬೇಕಾದರೆ, ಪಾತ್ರ ರಚನೆ ಗಟ್ಟಿಯಿರಬೇಕು, ಸ್ಕ್ರಿಪ್ಟ್ ನಲ್ಲಿ ಹಿಡಿತವಿರಬೇಕು, ಸಂಕಲನಕೊಂದು ನಿರ್ದಿಷ್ಠ ವೇಗವಿರಬೇಕು, ನಿರ್ದೇಶಕರು ಹೇಳಿದ್ದನ್ನು ಅವರು ಹೇಳಿದಂತೆಯೇ,  ಛಾಯಾಗ್ರಾಹಕರು ಕಣ್ಮುಂದೆ ಇಳಿಸಬೇಕು. ಇನ್ನುಳಿದಂತೆ ಸಂಗೀತ, ಹಾಡುಗಳು, ಮಾತುಗಳು ಚಿತ್ರಕಥೆಗೆ ಪೂರಕವಾಗುತ್ತವೆಯೇ ಹೊರತು ಮುಖ್ಯವಾಗುವುದಿಲ್ಲ. ಈ ಎಲ್ಲವೂ ‘ಲೂಸಿಯಾ’ ದಲ್ಲಿ ಚೆನ್ನಾಗಿ ಮೇಳೈಸಿವೆ.  ಕೊನೆಯ ೨೦ ನಿಮಿಷಗಳು ಸ್ವಲ್ಪ ನಿಧಾನವಿದ್ದಿದ್ದರೆ?! ಇನ್ನೂ ಚೆನ್ನಾಗಿ ಅರ್ಥವಾಗುತ್ತಿತ್ತೇನೇನೋ? ಎಂದು ಮನ ಬಯಸಿದೊಡನೆಯೇ, ನಮ್ಮ ಆಸೆಗಳಿಗೆ ಕಡಿವಾಣವೇ ಇಲ್ಲವೇ? ಎಂದು ಮತ್ತೆ ನಮ್ಮನ್ನು ನಾವೇ ಬೈದುಕೊಳ್ಳುವಂತಾಗಿಬಿಡುತ್ತದೆ.  ‘ಲೂಸಿಯಾ’ ಚಿತ್ರದ ಅತ್ಯುತ್ತಮ ಭಾಗ ಅದರ ಸ್ಕ್ರಿಪ್ಟ್ ಹಾಗೂ ಸಂಕಲನ.  ಎರಡೆರಡು ಶೇಡ್ ಗಳಿರುವಂತಹ ಸ್ಕ್ರಿಪ್ಟ್ ಬರೆಯಲು ಹಾಗೂ ಚಿತ್ರೀಕರಣದ ನಂತರ ಅದನ್ನು ಒಂದಾದ ನಂತರ ಸರಿಯಾಗಿ ಜೋಡಿಸುವುದು ಕೂಡ ಬಹಳ ಕಷ್ಟ ಜೊತೆಗೆ ತುಂಬಾ ತಾಳ್ಮೆ ಬೇಕು.  ಅದನ್ನು ಯಶಸ್ವಿಯಾಗಿ ನಿರ್ವಹಿಸಿದ ನಿರ್ದೇಶಕ ಹಾಗೂ ಸಂಕಲನಕಾರ ಇಬ್ಬರಿಗೂ ಅಭಿನಂದನೆಗಳು. ಬಹುಶಃ ‘ಲೂಸಿಯಾ’ ಚಿತ್ರದ ಸಂಕಲನದ ನಂತರ ಬಹುದಿನಗಳವರೆಗೆ, ಕನಸಿನಲ್ಲಿಯೂ ಕೂಡ ‘ಲೂಸಿಯಾ’ ಎಡಿಟರ್ ನನ್ನು ಹೆದರಿಸಿರಬಹುದು. ಅವರಿಗೂ ಕೂಡ ಸ್ವಲ್ಪ ದಿನಗಳು ‘Insomnia' ಆಗಿತ್ತೋ, ಏನೋ?

ನಂತರ ಪಾತ್ರ ನಿರ್ವಹಣೆ, ನೀನಾಸಂ ಸತೀಶ್ ಅವರಿಗೆ ಇಂತಹ ಪಾತ್ರ ಹೇಳಿ ಮಾಡಿಸಿದಂತಿರುತ್ತದೆಯಾದ್ದರಿಂದ ಅವರದೆಲ್ಲೂ ನಟನೆ ಎನಿಸುವುದೇ ಇಲ್ಲ. ಸಿನೆಮಾ ನಾಯಕ ನಟನ ಪಾತ್ರದಲ್ಲಿ ಸ್ವಲ್ಪ ನಟನೆ ಕಾಣುತ್ತದೆಯಷ್ಟೇ. ಪರಮಾತ್ಮ ಚಿತ್ರದ ‘ಮೂಗು ಬೊಟ್ಟಾಗಿ ಹುಟ್ಟಿದ್ರೆ ನಾನು ಇವಳ ಮೂತೀಲೇ ಇರಬಹುದಿತ್ತು ಎಂದೆನ್ನಿಸುವಂತಹ ಚಂದದ ಮೂಗಿನ, ಮೂಗುಬೊಟ್ಟಿನ ಒಡತಿ ಶೃತಿ ಹರಿಹರನ್ ಕೂಡ ಎರಡೂ ಶೇಡ್ ಗಳಲ್ಲೂ ಅತ್ಯಂತ ನೈಜವಾಗಿ ನಟಿಸಿದ್ದಾರೆ. ಅದರಲ್ಲೂ ಐಟಮ್ ನೃತ್ಯದಲ್ಲಂತೂ ಬಹು ಚೆಂದ ಕಾಣುತ್ತಾರೆ. ಇನ್ನುಳಿದವರ್ಯಾರೂ ಕೂಡ ಬೇಸರ ಹುಟ್ಟಿಸುವುದಿಲ್ಲ ಡಿಟೆಕ್ಟಿವ್ ಪಾತ್ರಧಾರಿಯ ಹೊರತು! ಹಾಡುಗಳನ್ನು ಈ ಮೊದಲಿಗೆ ಬಾಯಿಪಾಠವಾಗುವಷ್ಟು ‘ಪವನ್’ ಫೇಸ್ ಬುಕ್ಕಿನಲ್ಲಿ, ಟ್ವಿಟರಿನಲ್ಲಿ, ಅಲ್ಲಿ, ಇಲ್ಲಿ ಕೇಳಿಸಿಬಿಟ್ಟದ್ದರಿಂದ, ಜೊತೆಗೆ ಚಿತ್ರಕಥೆಯನ್ನು ಅರ್ಥ ಮಾಡಿಕೊಳ್ಳುವತ್ತಲೇ ನಾವು ನಮ್ಮೆಲ್ಲಾ ಗಮನವನ್ನು ಕೊಡುವುದರಿಂದ, ಓಹ್! ಈ ಹಾಡು ಈ ಸನ್ನಿವೇಶದಲ್ಲಿ ಬರುತ್ತದೆಯೇ? ಎನ್ನಿಸುತ್ತದೆ ಅಷ್ಟೇ. ಆದರೆ ಹಾಡುಗಳಾಗಬಹುದು, ಸಂಗೀತವಾಗಬಹುದು, ಡೈಲಾಗ್ಸ್ ಆಗಬಹುದು, ಯಾವುದೂ ಕೂಡ ಎಲ್ಲೂ ಬೇಕಾಗಿ ತುರುಕಿದಂತಿಲ್ಲ. ಚಿತ್ರಕ್ಕೆ ಪೂರಕವಾಗಿಯೇ ಇದೆ.  ಎರಡೂ ಶೇಡ್ ಗಳಿಗೂ ಹೊಂದುವಂತೆ ಹಾಡುಗಳನ್ನು ಬರೆದ ತೇಜಸ್ವಿ, ಭಟ್ಟರನ್ನು ಮೆಚ್ಚಲೇ ಬೇಕು.  (ಭಟ್ಟರನ್ನು ಲೇವಡಿ ಮಾಡುವ ಮಾತು ಚಪ್ಪಾಳೆ ಗಿಟ್ಟಿಸುತ್ತದೆ),

ಛಾಯಾಗ್ರಹಣವಂತೂ ದೃಶ್ಯಗಳು ಕಣ್ಮುಂದೆ ನಡೆಯುತ್ತಿರುವಷ್ಟು ಚೆನ್ನಾಗಿದೆ.  ಕತ್ತಲು ಬೆಳಕಿನ ಹೊಯ್ದಾಟ, ಬಣ್ಣಗಳ ಮಿಶ್ರಣ, ಕನಸಿಗೂ ವಾಸ್ತವಕ್ಕೂ ಇರುವ ವ್ಯತ್ಯಾಸದ ಚಿತ್ರಣ  ಬಹಳ ಚೆಂದ ಕಾಣುತ್ತದೆ.  ಇತ್ತೀಚೆಗೆ ಕನ್ನಡ ಚಿತ್ರಗಳಲ್ಲಿ  ಕಿವಿ ತೂತಾಗುವಷ್ಟು ಮಾತುಗಳು, ಚಿತ್ರಕ್ಕೆ ಬೇಕೋ, ಬೇಡವೋ, ಆ ಕ್ಷಣಕ್ಕೆ ಚಪ್ಪಾಳೆ, ಶಿಳ್ಳೆ ಗಿಟ್ಟಿಸಲೆಂದೇ ತುರುಕುವ ಅಶ್ಲೀಲ ಮಾತುಗಳು, ಅದೇ ಹಳಸಲು ಕಥೆ, ಡೈಲಾಗ್ಸ್, ಹಾಸ್ಯ, ಕೀಳು ಅಭಿರುಚಿಯ ನೃತ್ಯಗಳು,  ಐಟಮ್ ಸಾಂಗ್ ಗಳು, ಮಚ್ಚು, ಲಾಂಗುಗಳ ಸುರಿ ‘ಮಳೆ’, ಕೃತಕ ನಟನೆ, ವಿದೇಶದಲ್ಲಿ  ಚಿತ್ರೀಕರಣ, ಶಕ್ತಿಯೇ ಇಲ್ಲದ, ತೆಳು ಕಾಯದ ನಾಯಕ ನಟ, ಕ್ಷಣ ಮಾತ್ರದಲ್ಲಿ ನಾಲ್ಕೈದು ಗೂಂಡಾಗಳನ್ನು ಸದೆಬಡಿಯುವುದು ಕಂಡು ಬೇಸತ್ತ ಮಂದಿಗೆ ಹಾಲಿವುಡ್ ಮಟ್ಟದ ಕಥೆ ‘ಲೂಸಿಯಾ’ ವನ್ನು ಉಣಬಡಿಸಿದ್ದಾರೆ ನಿರ್ದೇಶಕ ‘ಪವನ್’ ಮತ್ತು ತಂಡದವರು. ಚಿತ್ರದ ಶೀರ್ಷಿಕೆ ಹಾಗೂ ಕಥೆಗೆ ಸಂಬಂಧವೇ ಇಲ್ಲದ ಶಿಪ್ ಆಫ್ ಥೀಸಿಯಸ್, ನಿರ್ದಿಷ್ಟ ಉದ್ದೇಶವೇ ಇಲ್ಲದ, ಅತ್ಯಂತ ಕಳಪೆ ಕಥೆಯ ‘ಮದ್ರಾಸ್ ಕಫೆ’ ಚಿತ್ರಗಳು ‘ಲೂಸಿಯಾ’ ಚಿತ್ರದ ಮುಂದೆ ಅತ್ಯಂತ ಪೇಲವವಾಗಿ ಕಾಣುತ್ತದೆ. ಇದು ನಿಜವಾಗಿಯೂ ಇಡೀ ಕನ್ನಡ ಚಿತ್ರರಂಗದ ಆಶಾದಾಯಕ ಬೆಳವಣಿಗೆ. 

ಆದರೆ ಹಣಗಳಿಕೆಯೊಂದೇ ಚಿತ್ರದ ಯಶಸ್ಸಿನ ಮಾಪನವಾಗಿರುವಾಗ, ‘ಲೂಸಿಯಾ’ ಹಣ ಮಾಡಬಲ್ಲುದೇ? ಸಾಮಾನ್ಯ ಕನ್ನಡ ಪ್ರೇಕ್ಷಕರಿಗೆ ಚಿತ್ರವು ಅರ್ಥವಾಗುತ್ತದೆಯೇ? ಅಕ್ಕ, ಪಕ್ಕ ಕುಳಿತ ಕೆಲ ಪ್ರೇಕ್ಷಕರು ೧೦ ನಿಮಿಷಕೊಮ್ಮೆ ಅರ್ಥವಾಗದು ಎಂದು ಗೊಣಗಿಕೊಳ್ಳುತ್ತಿರುವಾಗ? ಇನ್ನೆಂಥ ಚಿತ್ರ ಬೇಕು? ಇವರಿಗೆ ಎಂದು ಕಸಿವಿಸಿ ಆಯಿತು. ‘ಲೂಸಿಯಾ’  ಮೊದಲ ವಾರದಲ್ಲಿಯೇ ಹಣ ಗಳಿಕೆಯಲ್ಲಿ ಮುಗ್ಗರಿಸುತ್ತದೆಯೇ? ತಮ್ಮೆಲ್ಲಾ ಶಕ್ತಿ ಮೀರಿ,  ಇಂತಹದೊಂದು ಚಿತ್ರ ಮಾಡುವಂಥ ಹುಚ್ಚು ಧೈರ್ಯ ‘ಪವನ್’ ಗೆ ಬೇಕಿತ್ತೇ? ಈಗಾಗಲೇ ಪ್ರೇಕ್ಷಕರಿಂದ ಚೈನ್ ಲಿಂಕ್ ಮಾದರಿಯಲ್ಲಿ ಡಿಸ್ಟ್ರಿಬ್ಯೂಷನ್ ಗಾಗಿ ಹಣವನ್ನು ಪಡೆದಿರುವ ನಿರ್ದೇಶಕನಿಗೆ ಈ ಚಿತ್ರ ಲಾಭವನ್ನು ನೀಡುತ್ತದೆಯೇ? ಹಾಗೆಯೇ ಮಾಯಾನಗರಿ ಗಾಂಧಿನಗರಕ್ಕೆ ಸಡ್ಡು ಹೊಡೆದು ನಿಂತ ‘ಪವನ್ ಮತ್ತು ತಂಡ’ದವರಿಗೆ ಇನ್ನಷ್ಟು ಇಂತಹ ಚಿತ್ರಗಳನ್ನು ಮಾಡಲು ಗಾಂಧಿನಗರದಿಂದಲೇ ಪ್ರೋತ್ಸಾಹ ಸಿಕ್ಕೀತೇ? ಇನ್ನಷ್ಟು ಹೊಸ ಆಲೋಚನೆಗಳಿಗೆ ಈ ಪ್ರಯೋಗ ಕಾರಣವಾಗಬಲ್ಲುದೇ?  ಇನ್ನಷ್ಟು ಬಣ್ಣಬಣ್ಣದ ಕನಸುಗಳು ನನಸಾಗುತ್ತವೆಯೇ?  ಇವೆಲ್ಲಾ ಪ್ರಶ್ನೆಗಳೂ ಇನ್ನೂ ಕಾಡುತ್ತಲೇ ಇವೆ......... ! ‘ಲೂಸಿಯಾ’ ಚಿತ್ರ ನೋಡ್ತಾ, ನೋಡ್ತಾ, ನೋಡ್ತಾ, ನೋಡ್ತಾ ಆಲೋಚನೆಗಳು ಕಣಮ್ಮಿ! ನಾನ್ಸೆನ್ಸ್ ಅಂದ್ರಾ? :-) ‘ಲೂಸಿಯಾ’ ನೋಡಿ ನೀ ಮಾಯೆಯೊಳಗೋ, ಮಾಯೆ ನಿನ್ನೊಳಗೋ?...... ಅಂತಾ ಧಿಡೀರ್ ತತ್ವಜ್ಞಾನಿಗಳಾಗಿಬಿಡ್ತೀರಿ!  

Wednesday, August 14, 2013

Ship of Theseus! - ಚಿತ್ರದ ಬಗ್ಗೆ!

Ship of Theseus ಎಂಬುವುದೊಂದು ಪ್ರಾಚೀನ ಸಿದ್ಧಾಂತ. ಇದನ್ನು ಮೊದಲಿಗೆ ಗ್ರೀಕ್ ನ ಪುರಾತನ ತತ್ವಜ್ಞಾನಿಯಾದ ಪ್ಲುಟಾರ್ಕ್ ಪ್ರತಿಪಾದಿಸಿದನಂತೆ.  ಕ್ರೀಟಿ ಎಂಬ ದ್ವೀಪದಿಂದ ಅಥೆನ್ಸ್ ನ ರಾಜನಾದ ಥೀಸಿಯಸ್ ಮತ್ತು ಸಂಗಡಿಗರು ವಾಪಾಸ್ಸು ಬಂದ ಹಡಗನ್ನು ಅಥೆನ್ಸ್ ನ ಜನತೆ, ಆತನ ನೆನಪಿಗಾಗಿ ಸಂರಕ್ಷಿಸಿದ್ದರು. ಕಾಲಕ್ರಮೇಣ, ಆ ಹಡಗಿನ ಭಾಗಗಳು ನಶಿಸಿಹೋಗುತ್ತಿದ್ದಾಗಲೆಲ್ಲಾ, ಹಾಳಾದ ಬಿಡಿಭಾಗಗಳ ಬದಲಿಗೆ ಹೊಸತು ಬಿಡಿಭಾಗಗಳನ್ನು ಜೋಡಿಸಿದರು. ಕೊನೆಗೊಮ್ಮೆ ಪೂರ್ತಿ ಹಡಗು ಹೊಸಭಾಗಗಳಿಂದ ಶೃಂಗರಿಸಲ್ಪಟ್ಟಿತು.  ಈಗ ಅದು ಥೀಸಿಯಸ್ ಬಂದಂಥ ಹಡಗೇ? ಅಥವಾ ಹೊಸತೇ?  ಹಳತು ತೆಗೆದು ಹಾಕಿದಂಥ ಭಾಗಗಳನ್ನು ಜೋಡಿಸಿ ಮತ್ತೊಂದು ಹಡಗು ಮಾಡಿದರೆ? ಅದು ಯಾವುದು?  ಹೀಗೆ ಶುರುವಾದ ತರ್ಕ Ship of Theseus ಎಂದೇ ಪ್ರಸಿದ್ಧಿಯಾಯಿತು!  ಈ ಸಿದ್ಧಾಂತದ ಮೂಲಭೂತ ಪ್ರಶ್ನೆಯೆಂದರೆ ಒಂದು ವಸ್ತುವಿನ ಪ್ರತಿಯೊಂದು ಭಾಗಗಳನ್ನು ಬದಲಾಯಿಸಿದ ನಂತರ, ಆ ವಸ್ತು ಬದಲಾಗುತ್ತದೆಯೇ? ಅಥವಾ ಅದು ಹಳೆಯ ಅದೇ ವಸ್ತುವೇ? ಎಂಬುವುದು! ಇನ್ನೂ ಸರಿಯಾದ ಉತ್ತರವೇ ಸಿಗದೇ, ಪ್ರಶ್ನೆಗಳ ಮೇಲೆ ಪ್ರಶ್ನೆಗಳನ್ನೇ ಹುಟ್ಟು ಹಾಕುತ್ತಿರುವ, ಅತ್ಯಂತ ವಿರೋಧಾಭಾಸದ ಫಿಲಾಸಫಿ!

ಇದೇ ಹೆಸರನ್ನು ಇಟ್ಟುಕೊಂಡು, ಅತ್ತ ಇಂಗ್ಲೀಷ್ ಅಲ್ಲದ, ಇತ್ತ ಹಿಂದಿಯೂ ಅಲ್ಲದ, ಅರಬ್ಬೀ ಭಾಷೆಯಿಂದ ಹಿಡಿದು ನಮ್ಮ ಕನ್ನಡದ ಭಾಷೆಯ ತುಣುಕಿನವರೆಗೂ, ಬಹು ಭಾಷೆಗಳ ಮಿಶ್ರಣದೊಂದಿಗೆ, ಇಂಗ್ಲೀಷ್ ಸಬ್ ಟೈಟಲ್ ಹೊತ್ತು ಬಂದಂಥ ಚಿತ್ರ Ship of Theseus! ಆನಂದ್ ಗಾಂಧಿ ನಿರ್ದೇಶನದ, ಬಹುತೇಕ ವಿಮರ್ಶಕರೆಲ್ಲರ ಮೆಚ್ಚುಗೆ ಗಳಿಸಿದ, ಪ್ರಸಿದ್ಧರಲ್ಲದ ತಾರಾಗಣದೊಂದಿಗೆ, ಯಾವುದೇ ಹಾಡು, ನೃತ್ಯಗಳ ಗೋಜಿಲ್ಲದೆ, ಕಡಿಮೆ ವೆಚ್ಚದಲ್ಲಿ ನಿರ್ಮಾಣಗೊಂಡ ಚಿತ್ರವಿದು!  ತೆರೆಗೆ ಬಂದಿದ್ದು ಕೂಡ ಅಂತಹ ಅದ್ಧೂರಿ ಜಾಹೀರಾತಿಲ್ಲದೆ, ಬಾಯಿಂದ ಬಾಯಿಗೆ ಮೆಚ್ಚುಗೆ ಮಾತುಗಳು ಹರಡಿ, ಪ್ರಸಿದ್ಧಿ ಪಡೆದ ಚಿತ್ರ!  ಇರಾನಿಯನ್ ಚಿತ್ರದಂತೆ ಅತ್ಯಂತ ನೈಜವಾಗಿ, ಯಾವುದೇ ಅಬ್ಬರ, ಆಡಂಬರವಿಲ್ಲದೆ ನಿಶ್ಯಬ್ಧವಾಗಿ ನೋಡಿಸಿಕೊಳ್ಳುವ ಚಿತ್ರ! ಆರಂಭದಲ್ಲಿ ಸ್ವಲ್ಪವೂ ಅರ್ಥವಾಗದೇ ಗೋಜಲಾದ ದಾರದುಂಡೆಯಂತೆ ಕಾಣುವ ಚಿತ್ರ, ಇದ್ದಕಿದ್ದಂತೆ ಕ್ಲೈಮಾಕ್ಸ್ ನಲ್ಲಿ ಸರಳವಾಗಿ ಬಿಡಿಸಿಕೊಂಡುಬಿಡುತ್ತದೆ, ಹಾಗೆಯೇ ಪ್ರೇಕ್ಷಕರ ಮನಸ್ಸಿನಲ್ಲಿ ಉತ್ತರವನ್ನು ನೀಡದೇ, ಪ್ರಶ್ನೆಗಳಿಗೇ, ಪ್ರಶ್ನೆಗಳನ್ನೇ ಕೇಳುತ್ತಾ ಹೋಗುತ್ತದೆ (ಚಿತ್ರ ಮುಗಿದ ನಂತರವೂ!)

ಮೂರು ಕಿರುಚಿತ್ರಗಳಂತೆ ಶುರುವಿಗೆ ಭಾಸವಾದರೂ, ಆ ಮೂರು ಚಿತ್ರಗಳನ್ನು ಅಂಗ ಮರುಜೋಡಣೆ ಎಂಬ ಒಂದು ಎಳೆಯಲ್ಲಿ ಜೋಡಿಸಲಾಗಿದೆ! ಮೊದಲಿಗೆ ಅಂಧ ಫೋಟೋಗ್ರಾಫರ್! ಅರಬ್ಬಿ! ಹೆಣ್ಣುಮಗಳ ಕಥೆ ಶುರುವಾಗುತ್ತದೆ. ಅರಬ್ಬಿ ಹೆಣ್ಣು! ಅಂಧಳು ಕೂಡಾ! ಆದರೆ ಆಕೆಯ ವೃತ್ತಿ ಫೋಟೋಗ್ರಫಿ?! ಫೋಟೋ ಹೇಗೆ ತೆಗೆಯುತ್ತಾಳೆ? ಇದು ಸಾಧ್ಯವೇ?.....  ಹೀಗೇ ಅನೇಕಾನೇಕ ಪ್ರಶ್ನೆಗಳು ಮನಸ್ಸಿನಲ್ಲಿ ಮೂಡುತ್ತವೆ. ಆಕೆ ಧ್ವನಿಯನ್ನು ಆಧರಿಸಿ ತೆಗೆದಂಥ ಫೋಟೋಗಳು, ಆಕೆಯ ಜೊತೆಗಾರನ ಸಹಾಯದಿಂದ ಸಂಕಲನಗೊಂಡು, ಪ್ರಸಿದ್ಧಿ ಪಡೆಯುತ್ತವೆ. ಮೃತ ದಾನಿಯಿಂದ ಪಡೆದ ಕಣ್ಣುಗಳನ್ನು ಆಕೆಗೆ ಜೋಡಿಸಲಾಗುತ್ತದೆ.  ಅದುವರೆವಿಗೂ ತನ್ನ ಫೋಟೋಗ್ರಫಿ ವೃತ್ತಿಯನ್ನು ಚಾಲೇಜಿಂಗ್ ಆಗಿ ತೆಗೆದುಕೊಂಡಿದ್ದ ಆಕೆಗೆ, ಕಣ್ಣು ಕಾಣಿಸಿದೊಡನೆಯೇ ಮನಕ್ಕೆ ನಿರಾಸೆ ಕವಿಯುತ್ತದೆ. ತನ್ನ ವೃತ್ತಿಯಲ್ಲಿ ಬೇಸರ ಶುರುವಾಗುತ್ತದೆ. ಆನಂತರ ಆಕೆ ತೆಗೆದ ಯಾವ ಫೋಟೋಗಳು ಅವಳಿಗೆ ಮನಸ್ಸಿಗೆ ಖುಷಿ ನೀಡದೇ, ಎಲ್ಲವನ್ನೂ ಅವಳು ಅಳಿಸಿಬಿಡುತ್ತಾಳೆ.  ಕೊನೆಗೊಮ್ಮೆ ಕಣ್ಣಿಗೆ ಪಟ್ಟಿ ಕಟ್ಟಿ ತೆಗೆದ ಫೋಟೋಗಳಿಂದ ಒಂದಿಷ್ಟು ನೆಮ್ಮದಿ ಸಿಕ್ಕರೂ ಕೂಡ ಅವಳಿಗೆ ಈ ಹೊಸ ಜೀವನಕ್ಕೆ ಹೊಂದಿಕೊಳ್ಳಲು ಕಷ್ಟವಾಗಿಬಿಡುತ್ತದೆ. ಕೊನೆಗೊಮ್ಮೆ ಹಿಮಾಲಯದ ತಪ್ಪಲಲ್ಲಿ ಒಂಟಿಯಾಗಿ ಫೋಟೋ ತೆಗೆಯಲು ಹೊರಟವಳು, ಅಲ್ಲಿನ ಸೌಂದರ್ಯವನ್ನು ತನ್ನ ಕಣ್ಣುಗಳಿಂದಲೇ ನೋಡುತ್ತಾ, ಫೋಟೋ ತೆಗೆಯುವುದು ನಿರರ್ಥಕ ಎಂದು ಸುಮ್ಮನಾಗಿಬಿಡುತ್ತಾಳೆ. ನಂತರ ಆಕೆ ಏನಾದಳು?  ಫೋಟೋಗ್ರಫಿಯನ್ನು ಮುಂದುವರಿಸಿದಳೇ? ಇಲ್ಲವೇ? ತಿಳಿಯುವುದೇ ಇಲ್ಲ! ಅದುವರೆವಿಗೂ ಕಷ್ಟಕರ ಅನ್ನಿಸಿದ್ದ ವೃತ್ತಿ, ಸುಲಭವಾದೊಡನೆಯೇ ಬಹುಶಃ ಅವಳಿಗೆ ಅದರಲ್ಲಿ ಆಸಕ್ತಿ ಕಡಿಮೆ ಆಯಿತು ಎಂದರ್ಥ ಮಾಡಿಕೊಳ್ಳಬಹುದು.  ಮುಂದೆ ಅವಳು ಫೋಟೋಗ್ರಫಿಯನ್ನು ಬಿಟ್ಟುಬಿಡುತ್ತಾಳೆ ಎಂದೆನಿಸಿತು.

ಮತ್ತೊಂದು ಕಥೆ ಶುರುವಾಗುವುದು ಮೈತ್ರೇಯ ಎಂಬ ಜೈನ? / ಬುದ್ಧ? (ನನಗೆ ತಿಳಿಯಲಿಲ್ಲ) ಧರ್ಮೀಯನದು. ಪ್ರಾಣಿಗಳ ಮೇಲೆ ಪ್ರಯೋಗ ನಡೆಸಿ, ಮಾರ್ಕೆಟ್ ಗೆ ಮನುಷ್ಯರ ಬಳಕೆಗೆ ತರುವಂಥ ಔಷಧಿಗಳು ಹಾಗೂ ಕಾಸ್ಮೆಟಿಕ್ಸ್ ಗಳಿಗೆ ಈತನ ವಿರೋಧವಿದೆ.  ಈತ ಅದಕ್ಕಾಗಿ ಕೋರ್ಟ್ ನಲ್ಲಿ ಕೇಸ್ ಕೂಡ ನಡೆಸಿರುತ್ತಾನೆ. ವಿಪರ್ಯಾಸವೆಂದರೆ ಈತನಿಗೆ ಲಿವರ್ ಸೈರೋಸಿಸ್ ಎಂಬ ಕಾಯಿಲೆಯಾಗುತ್ತದೆ. ಇದಕ್ಕೆ ಬೇರೆಯವರ ಲಿವರ್ ಮರುಜೋಡಣೆ ಜೊತೆಗೆ ಔಷಧಿಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಆತನೆಷ್ಟೇ ಪ್ರಯತ್ನ ಪಟ್ಟರೂ, ಗಿಡಮೂಲಿಕೆಗಳ ಔಷಧಿಗಳನ್ನು ತಿಂದರೂ, ಅಮರಣಾಂತ ಉಪವಾಸ ಮಾಡಿ ಸಾಯುತ್ತೇನೆ, ಆದರೆ ಔಷಧಿ ಮಾತ್ರ ತೆಗೆದುಕೊಳ್ಳುವುದಿಲ್ಲ ಎಂಬ ದೃಢ ನಿರ್ಧಾರ ತೆಗೆದುಕೊಳ್ಳುತ್ತಾನೆ.  ಮರಿ ಲಾಯರ್ ನೊಬ್ಬ (ಆತನು ಕೂಡ ಇವನ ಐಡಿಯಾಲಜಿಗಳಿಗೆ, ದೃಢ ನಿರ್ಧಾರಗಳಿಗೆ ಮನಸೋತವನು), ಇವನ ಅಮರಣಾಂತ ಉಪವಾಸ ತಡೆಯಲು ಏನೆಲ್ಲಾ ಬುದ್ಧಿ ಹೇಳುತ್ತಾನೆ, ತರ್ಕ ಮಾಡುತ್ತಾನೆ (ಇದನ್ನು ನೋಡುವಾಗ ನನಗನ್ನಿಸಿದ್ದು - ಸ್ವಗತ ತೋರಿಸಲು ಕಷ್ಟವಾಗಿ, ಬಹುಶಃ ಈ ಪಾತ್ರದ ಮೂಲಕ ಮೈತ್ರೇಯನ ಮಾತುಗಳನ್ನು, ತರ್ಕಗಳನ್ನು ತೋರಿಸಿದ್ದಾರೆಯೇ?) ಈ ಲಾಯರ್ ಮೈತ್ರೇಯನ ಮನ ಒಲಿಸುವಲ್ಲಿ ಸೋಲುತ್ತಾನೆ. ಆದರೆ ಮೈತ್ರೇಯನಿಗೆ,  ಕೊನೆಗಳಿಗೆಯಲ್ಲಿ ತನ್ನ ಜೀವದ ಹಿಂಸೆ ತಡೆಯಲಾಗದೇ, ಬದುಕಬೇಕೆಂಬ ಬಯಕೆಗೆ ಸೋತು,  ಲಿವರ್ ಟ್ರಾನ್ಸ್ ಪ್ಲಾಂಟ್ ಗೆ ಒಪ್ಪಿಕೊಳ್ಳುತ್ತಾನೆ.  ತನ್ನ ಜೀವ ಉಳಿಸಿಕೊಳ್ಳಲು, ತನ್ನ ಸಿದ್ಧಾಂತದೊಂದಿಗೆ ರಾಜಿ ಮಾಡಿಕೊಳ್ಳುವ ಈತ ಮುಂದೇನಾಗುತ್ತಾನೆ?  ಯಾರಿಗೂ ತಿಳಿಯದು. ಬಹುಶಃ ಆತ ಔಷಧ ಉತ್ಪಾದಕರ ಮೇಲೆ ಹಾಕಿರುವ ಕೇಸ್ ವಾಪಾಸ್ಸು ಪಡೆದಿರಬಹುದು!

ಮತ್ತೊಬ್ಬ ಶೇರ್ ಬ್ರೋಕರ್, ಈತನ ಪ್ರಪಂಚ ಹಣ ಮಾಡುವುದಷ್ಟೇ ಆಗಿರುತ್ತದೆ.  ಈತನಿಗೊಬ್ಬಳು ಕನ್ನಡದ ‘ಅಜ್ಜಿ’! ಆಕೆ ಸ್ವಾತಂತ್ರ್ಯ ಕಾಲದ ಆಕ್ಟಿವಿಸ್ಟ್!  ಆಕೆಗೆ ತನ್ನ ಮೊಮ್ಮಗನ ಮೇಲೆ ಅಸಮಾಧಾನವಿರುತ್ತದೆ.  ಆತನ ಕಿಡ್ನಿ ತೊಂದರೆಯಾಗಿ, ದಾನಿಯಿಂದ ಕಿಡ್ನಿ ಪಡೆದು ಹುಷಾರಾಗಿರುತ್ತಾನೆ. ಅಷ್ಟರಲ್ಲಿ ಆತನ ‘ಅಜ್ಜಿ’ಯ ಕಾಲು ಮುರಿದು ಅವಳು ಆಸ್ಪತ್ರೆ ಸೇರಿಕೊಳ್ಳುತ್ತಾಳೆ. ದಿನಗೂಲಿ ಮಾಡುವವನೊಬ್ಬನ ಅಪೆಡಿಂಕ್ಸ್ ಆಪರೇಷನ್ ನಡೆದು, ಆತನ ಕಿಡ್ನಿ ಅಪಹರಿಸಿ ಮತ್ತೊಬ್ಬರಿಗೆ ಜೋಡಿಸಿರುತ್ತಾರೆ.  ತನಗೆ ಜೋಡಿಸಿರುವ ಕಿಡ್ನಿ ಆತನದೇ ಇರಬಹುದೆನ್ನುವ ಸಂಶಯದಲ್ಲಿ, ಆತನ ಸಹಾಯಕ್ಕೆ ಒದಗುವ ಇವನು, ಇವನ ಸಮಯವೇ ಇವನ ಹಣ ಹಾಗೂ ಹಣ ಸಂಪಾದನೆಯೇ ಇವನ ಸಿದ್ಧಾಂತವಾಗಿದ್ದರೂ ಕೂಡ, ಅವೆಲ್ಲವನ್ನೂ ತ್ಯಜಿಸಿ (ಅಜ್ಜಿಯ ಮಾತುಗಳಿಂದ ತನಗಾಗುತ್ತಿದ್ದ ಗಿಲ್ಟ್ ನಿಂದ ಹೊರಬರಲು)  ಆ ದಿನಗೂಲಿಯವನ ಕಿಡ್ನಿ ಹುಡುಕುತ್ತಾ ಹೊರಡುತ್ತಾನೆ. ವಿದೇಶದಲ್ಲಿದ್ದ ಒಬ್ಬ ವ್ಯಕ್ತಿ ಅಪಾರ ಹಣ ಖರ್ಚು ಮಾಡಿ, ಈ ಜೀವಂತ ವ್ಯಕ್ತಿಯಿಂದ ಕಿಡ್ನಿ ಖರೀದಿ ಮಾಡಿರುತ್ತಾನೆ. ಆತನಿಗೆ ಭಾರತದಲ್ಲಿ ಇದು ಸಾಮಾನ್ಯ ಎನ್ನುವ ಚಿತ್ರಣವಿರುತ್ತದೆ! ಆದರೆ ಆಸ್ಪತ್ರೆಯವರು ಮೋಸದಿಂದ ಕಿಡ್ನಿ ಪಡೆದಿದ್ದಾರೆ ಎನ್ನುವ ಅರಿವಾಗುವ ವಿದೇಶೀಯ, ಈ ಶೇರ್ ಬ್ರೋಕರ್ ನ ಸಲಹೆ ಕೇಳುತ್ತಾನೆ. ಹಾಗೂ ಈತ ಹೇಳಿದ ಕಂಡೀಷನ್ ಗಳೆಲ್ಲವನ್ನೂ ಒಪ್ಪುತ್ತಾನೆ ಕೂಡ.  ಆದರೆ ಅಷ್ಟರಲ್ಲಿ ವಿದೇಶೀಯನ ಕಡೆಯ ವಕೀಲನೊಬ್ಬ, ಭಾರತದಲ್ಲಿ ಈ ಕೂಲಿಕಾರನಿಗೆ ಆತ ಕಂಡರಿಯದಷ್ಟು ಹಣ ಕೊಟ್ಟು ಆತನ ಬಾಯಿ ಮುಚ್ಚಿಸುತ್ತಾನೆ.  ಶೇರ್ ಬ್ರೋಕರ್ ತನ್ನ ಸಿದ್ಧಾಂತವನ್ನು ಒಡೆದು, ಈ ಬಡವನ ಸಹಾಯಕ್ಕೊದಗಿದರೂ ಕೂಡ, ಆತ ಜಯಶಾಲಿಯಾಗುವುದಿಲ್ಲ. ಕೊನೆಗೂ ಹಣವೇ ಗೆಲ್ಲುತ್ತದೆ! ಚಿತ್ರದ ಕೊನೆಯಲ್ಲಿ ಈ ಮೂವರಿಗೂ ಒಬ್ಬನೇ ಮೃತ ವ್ಯಕ್ತಿಯಿಂದ ಅಂಗಾಂಗಗಳನ್ನು ಜೋಡಿಸಿರುತ್ತಾರೆ ಎಂಬುದು ತಿಳಿಯುತ್ತದೆ. 

ಚಿತ್ರವನ್ನು ನೋಡುತ್ತಿದ್ದಂತೆ ಮೊದಲಿಗೆ ಅನ್ನಿಸಿದ್ದು, ಇದಕ್ಕಿಟ್ಟಿರುವ ಹೆಸರಿನ ಬಗ್ಗೆ ಗೊಂದಲ, ಇಲ್ಲಿ ವ್ಯಕ್ತಿಯ ಎಲ್ಲಾ ಅಂಗಗಳನ್ನು ಬದಲಾಯಿಸಿರುವುದಿಲ್ಲ ಹಾಗಾಗಿ ಶಿಪ್ ಆಫ್ ಥೀಸಿಯಸ್ ಎಂಬ ಹೆಸರೇ ಸರಿಯಿಲ್ಲ ಎನ್ನುವ ಅನಿಸಿಕೆಯ ಜೊತೆಗೆ ಆ ಮೂವರೂ ತಾವು ನಂಬಿಕೊಂಡಿರುವ ಸಿದ್ಧಾಂತಗಳು, ಅದರಿಂದಾಗಿ ಅನುಭವಿಸುವ ಅಸಹಾಯಕತೆ, ನೋವು, ಗಿಲ್ಟ್, ತಮ್ಮ ಸಿದ್ಧಾಂತಗಳನ್ನು ಸರಿಯಾದ ನಿಟ್ಟಿನಲ್ಲಿ ನಡೆಸಲು, ಅದರೊಂದಿಗೆ ಮಾಡಿಕೊಳ್ಳುವ ರಾಜಿ, ಆದರೂ ಅನುಭವಿಸುವ ಸೋಲು! ಇಲ್ಲಿ ವ್ಯಕ್ತಿಗಳು ಗೆದ್ದರೇ? ಸಿದ್ಧಾಂತಗಳು ಗೆದ್ದವೇ? ಒಟ್ಟಿನಲ್ಲಿ ಚಿತ್ರವು ಕ್ಲೈಮಾಕ್ಸ್ ನಲ್ಲಿ ಬಿಡಿಸಿಕೊಂಡರೂ, ತಲೆಯಲ್ಲಿ ಮೂಡುವ ಪ್ರಶ್ನೆಗಳು, ಮನದಲ್ಲಿ ಉಂಟಾಗುವ ಗೊಂದಲಗಳು, ಗೋಜಲುಗೋಜಲೆನಿಸಿ, ತಲೆಯ ತುಂಬಾ ಶಿಪ್ ಆಫ್ ಥೀಸಿಯಸ್! ಚಿತ್ರ, ಪಾತ್ರಧಾರಿಗಳು, ಅವರ ಸಿದ್ಧಾಂತಗಳು, ಅವರ ಸ್ವಗತಗಳು, ಅವು ಎತ್ತುವ ಪ್ರಶ್ನೆಗಳು, ಸಿಗದ ಉತ್ತರಗಳು! :-) ಬಹುಶಃ ದೃಶ್ಯ ಮಾಧ್ಯಮದ ಯಶಸ್ಸೇ? ಇದು ಎಂದೆನಿಸುತ್ತದೆ. ಅಷ್ಟರಲ್ಲಿ ಭರ್ತಿಯಾಗದ ಸೀಟುಗಳು, ಅಲ್ಲೊಬ್ಬರು, ಇಲ್ಲೊಬ್ಬರು ಪ್ರೇಕ್ಷಕರು, ಬಾಕ್ಸ್ ಆಫೀಸಿನಲ್ಲಿ ಹಣ ಮಾಡೀತೇ? ಇಲ್ಲವೇ? ಎನ್ನುವ ಪ್ರಶ್ನೆ ಮೂಡಿ, ಚಿತ್ರ ಗೆದ್ದಿತೇ? ಎಂದು ಅನುಮಾನಿಸುವಂತಾಗುತ್ತದೆ. ಈ ಚಿತ್ರವನ್ನು ಥಿಯೇಟರ್ ನಲ್ಲಿ ನೋಡುವುದಕ್ಕಿಂತ, ಹೋಮ್ ಥಿಯೇಟರ್ ನಲ್ಲಿ ನೋಡಿದ್ದರೆ ಇನ್ನೂ ಹೆಚ್ಚಿಗೆ ಅರ್ಥವಾಗುತ್ತಿತ್ತು ಅನ್ನುವ ಅನಿಸಿಕೆಯು ಮೂಡಿ, ಒಟ್ಟಿನಲ್ಲಿ ಫುಲ್ ಕನ್ ಫ್ಯೂಷನ್!  ಇದಕ್ಕೆ ಕನ್ ಫ್ಯೂಷಿಯಸ್ ಎನ್ನುವ ಹೆಸರನ್ನು ಇಟ್ಟಿದ್ದರೆ ಹೆಚ್ಚು ಸೂಕ್ತವಾಗಿ, ಅರ್ಥಪೂರ್ಣವಾಗಿರುತ್ತಿತ್ತೇನೋ?! ಗೊತ್ತಿಲ್ಲ.,

Tuesday, June 25, 2013

ಕನಸುಗಳನು ಕಾಣುವುದ ಕಲಿತೆ!

ವಯಸ್ಸು ೧೬-೧೭ ಇರಬೇಕು.  ಅವನ ಕಣ್ಣಲ್ಲಿ ಅದೇನೋ ಜಗತ್ತನ್ನೇ ಗೆಲ್ಲಬಲ್ಲನೆಂಬ ಅದಮ್ಯವಾದ ಆತ್ಮ ವಿಶ್ವಾಸ, ಹಳೇ ಡ್ರೆಸ್, ಕೆದರಿದ ಕೂದಲು. ಕೆಲಸ ಹುಡುಕಿಕೊಂಡು ಬಂದಿದ್ದ.  ಇವನ ಕೈಯಲ್ಲಿ ಎಂತಹ ಕೆಲಸ ಮಾಡಿಸುವುದು, ಇನ್ನೂ ೧೮ ತುಂಬಿಲ್ಲ.  ಕಾನೂನಿನ ಪ್ರಕಾರ ಅಪರಾಧವಾಗಬಹುದೇನೋ ಎನ್ನುವುದು ನನ್ನ ಚಿಂತೆ.  ಅವನಾದರೋ ‘ಯಾವ ಕೆಲಸ ಕೊಟ್ಟರೂ ಮಾಡುತ್ತೇನೆ ಮೇಡಮ್. ದಯವಿಟ್ಟು ನನಗೊಂದು ಕೆಲಸ ಕೊಡಿ, ಎಸ್ ಎಸ್ ಎಲ್ ಸಿ ೮೦% ನಲ್ಲಿ ಪಾಸಾಗಿದ್ದೀನಿ, ತಂದೆ ತೀರಿ ಹೋದರು, ಮನೆಯಲ್ಲಿ ಬಹಳ ಕಷ್ಟ, ನಾನೇ ಮೊದಲ ಮಗ, ಮುಂದೆ ಓದಲು ಸಾಧ್ಯವಾಗುತ್ತಿಲ್ಲ’ ಎಂದೆಲ್ಲಾ ಹೇಳುತ್ತಿದ್ದ.  ನಾನು ಕೂಡ ಕಷ್ಟ ಪಟ್ಟು, ಪಾರ್ಟ್ ಟೈಮ್ ಕೆಲಸ ಮಾಡಿಕೊಂಡು,  ಸ್ಕಾಲರ್ ಶಿಪ್ ನಲ್ಲಿ ಓದಿದ್ದರಿಂದ ಮನ ಕರಗಿ ಕೆಲಸ ಕೊಡಲು ಒಪ್ಪಿಕೊಂಡರೂ, ಬೇರೆಯವರೆಲ್ಲರ ವಿರೋಧ.  ‘ಮೇಡಮ್, ಇವನಿಗೆ ಇನ್ನೂ ೧೭ ತುಂಬಿಲ್ಲ, ಎಲ್ಲೂ ಕೆಲಸ ಮಾಡಿದ ಅನುಭವವಿಲ್ಲ. ಅಂತಹವನಿಗೆ ಕ್ಯಾಷಿಯರ್ ಕೆಲಸ ಕೊಡುತ್ತೀರಾ?  ಇವನೇನಾದರೂ ಕಲೆಕ್ಷನ್ ಎತ್ತಿಕೊಂಡು ಓಡಿಹೋದರೆ? ಅವನ ಕಣ್ಣುಗಳಲಿದ್ದ ಆತ್ಮವಿಶ್ವಾಸ ಕಂಡು ಕೊನೆಗೂ ಕ್ಯಾಶಿಯರ್ ಕೆಲಸ ಕೊಟ್ಟೇಬಿಟ್ಟೆ.  ಮೊದಲ ದಿವಸವೇ ಒಳ್ಳೆ ಬಟ್ಟೆ ಕೊಂಡುಕೊಳ್ಳಲು ಹಾಗೂ ಸಂಜೆ ಕಾಲೇಜು ಸೇರಲು ಮುಂಗಡ ಹಣ ಕೂಡ ಕೊಟ್ಟೆ.  
ಮಾರನೇ ದಿವಸ ಇನ್ನೂ ಹೆಚ್ಚಿನ ಆತ್ಮವಿಶ್ವಾಸದಿಂದ ಕೆಲಸಕ್ಕೆ ಸಮಯಕ್ಕೆ ಸರಿಯಾಗಿ ಬಂದ.  ಹೇಳಿಕೊಟ್ಟದನ್ನೆಲ್ಲಾ ಥಟ್ಟನೆ ಕಲಿತುಬಿಡುತ್ತಿದ್ದ.  ಬುದ್ಧಿವಂತ. ಎಷ್ಟೇ ಕಷ್ಟವಾದರೂ ಕಾಲೇಜು ಮಾತ್ರ ಬಿಡದಿರುವಂತೆ ದಿವಸವೂ ಬುದ್ಧಿ ಹೇಳುತ್ತಿದ್ದೆ.  ಬೇಕಿದ್ದರೆ ನಾನೇ ಕಾಲೇಜು ಪುಸ್ತಕಗಳನ್ನೂ ಹಾಗೂ ಫೀಸನ್ನು ಕೊಡುವೆನೆಂದು ಕೂಡ ಭರವಸೆ ಕೊಡುತ್ತಿದ್ದೆ.  ನಾನು ಹಾಗೇ ಕಷ್ಟ ಪಟ್ಟಿದ್ದಕ್ಕೆ ಇಂದೀಗ ಒಂದು ಸಂಸ್ಥೆಯ ಮಾಲೀಕಳಾಗಿದ್ದೇನೆಂದು ಹೇಳುವಾಗ ಆತನ ಕಣ್ಣಲ್ಲಿ ಕೂಡ ಕನಸುಗಳು ಮೂಡುತ್ತಿದ್ದವು.  ಅವನ ಆಸೆಗಳನ್ನೂ, ಮನೆಯಲ್ಲಿನ ಕಷ್ಟಗಳನ್ನೂ ಹೇಳಿಕೊಳ್ಳುತ್ತಿದ್ದ.  ನನಗೆ ಕಂಡಂತಹ ಪರಿಹಾರವನ್ನೂ ನಾನು ನೀಡುತ್ತಿದ್ದೆ.  ಹೀಗೆ ಸುಮಾರು ೮ ತಿಂಗಳು ಕಳೆಯಿತು.  ಒಂದು ದಿವಸ ಹೇಳದೇ ಕೇಳದೇ ಪರಾರಿಯಾದ. ಯಾಕೆಂದು ನನಗೆ ತಿಳಿಯಲೇ ಇಲ್ಲ. ಎಲ್ಲರೂ ನಾವಂದೇ ಹೇಳಿದ್ದೆವೆಂದು, ನಾ ಅವರ ಮಾತನ್ನು ಕೇಳಿಸಿಕೊಳ್ಳಲೇ ಇಲ್ಲವೆಂದು ಮೂದಲಿಸಿದರು. ಬೇಸರವಾಯಿತು.  ನಾನು ಅವನನ್ನು ನಂಬಿದ್ದೇ ತಪ್ಪಾಯಿತೇನೋ ಎಂದು ಕೂಡ ಅನ್ನಿಸಿತು.  ಆದರೆ ಒಂದು ಸಮಾಧಾನವೇನೆಂದರೆ ಆತ ಹಿಂದಿನ ದಿನದ ಕಲೆಕ್ಷನ್ ನನಗೆ ಒಪ್ಪಿಸಿ ಹೊರಟು ಹೋಗಿದ್ದ. ದುಡ್ಡು ಕದ್ದಿರಲಿಲ್ಲ.
ಇಂದು ನಾನು ಕೆಲಸದಲ್ಲಿ ಮಗ್ನಳಾಗಿದ್ದೆ.  ಒಬ್ಬ ಯುವಕ (ಮೆಡಿಕಲ್ ರೆಪ್) ಸುಮಾರು ೨೬ ವರ್ಷಗಳಾಗಿರಬಹುದು.  ನನ್ನ ಗಂಡ (ಡಾಕ್ಟರ್) ನನ್ನು ಭೇಟಿ ಮಾಡುವ ಸಲುವಾಗಿ ಬಂದು ಕುಳಿತಿದ್ದ.  ಅವನತ್ತ ನೋಡಿದೆ.  ಯಾಕೋ ಅವನು ನನ್ನ  ಕಣ್ಣುಗಳನ್ನು ತಪ್ಪಿಸುತ್ತಿರುವಂತೆ ಭಾಸವಾಯಿತು.  ಬಹುಶಃ ರಶ್ ಇದ್ದಾಗಲೂ ಡಿಸ್ಟರ್ಬ್ ಮಾಡುವೆನೆಂದು ನಾನು ಹೇಳುತ್ತೇನೆ ಎಂದಿರಬಹುದೇನೋ ಅಂದುಕೊಂಡು ಸುಮ್ಮನಾಗಿಬಿಟ್ಟೆ.  ಒಳಗೆ ಹೋದವನೇ ಅವರನ್ನು ಮಾತನಾಡಿಸಿ, ತಕ್ಷಣ ಹೊರಗೆ ಬಂದು ಒಂದು ಕ್ಷಣವೂ ನಿಲ್ಲದಂತೆ ಹೊರಟುಬಿಟ್ಟ.  ಇವರು ನನ್ನನ್ನು ಒಳಕರೆದು ಅವನು ಅದೇ ಕ್ಯಾಶಿಯರ್ ಕೆಲಸ ಮಾಡುತ್ತಿದ್ದ ಹುಡುಗ, ಯಾಕೆ ಮಾತನಾಡಿಸಲಿಲ್ಲ? ಎಂದರು.  ಓಡಿ ಹೋಗಿ ಮಾತನಾಡಿಸಿದೆ.  ತಕ್ಷಣ ಅಳಲು ಶುರು ಮಾಡಿದ.  ನಂತರ ಸುಧಾರಿಸಿಕೊಂಡು, ಜೀವನದಲ್ಲಿ ನಾನು ಏನನ್ನಾದರೂ ಸಾಧಿಸಿ ನಿಮ್ಮ ಬಳಿಗೆ ಬರುವವನಿದ್ದೆ ಮೇಡಮ್. ನಿಮಗೆ ನನ್ನ ಗುರುತಾಗಲಿಲ್ಲ ಎಂದು ತಿಳಿಯಿತು. ಹಾಗಾಗಿ ಮಾತನಾಡಿಸಲಿಲ್ಲ ಎಂದ.  ನಂತರ ಭಾವುಕನಾಗಿ ಇದುವರೆವಿಗೂ ನಾನೇನಾಗಿದ್ದೇನೆ ಎಲ್ಲದಕ್ಕೂ ನೀವೇ ಕಾರಣ.  ಈಗಲೂ ಅಷ್ಟೇ ಐಎ ಎಸ್ ಪರೀಕ್ಷೆ ಕಟ್ಟಿದ್ದೇನೆ. ಹೊಟ್ಟೆಪಾಡಿಗಾಗಿ ಈ ಕೆಲಸ, ಮನೆಯಲ್ಲಿ ಎಲ್ಲ ಕಷ್ಟಗಳು ನೀಗಿದವು.  ಅಂದು ಮನೆಯಲ್ಲಿ ಆದ ಯಾವುದೋ ಗಲಾಟೆಯಿಂದಾಗಿ ನಿಮಗೂ ಕೂಡ ತಿಳಿಸದಂತೆ ಊರಿಗೆ ಹೊರಟುಬಿಟ್ಟೆ.  ಅಲ್ಲಿಂದ ಬಂದ ನಂತರದ ಮೂರು ವರ್ಷಗಳು ಬಹಳ ಕಷ್ಟವಾಯಿತು.  ಆದ್ರೂ ಎಷ್ಟೇ ಕಷ್ಟವಾದರೂ ಓದನ್ನು ನಿಲ್ಲಿಸಬೇಡ ಎಂದಿದ್ದ ನಿಮ್ಮ ಬುದ್ಧಿ ಮಾತಿನಿಂದಾಗಿ ಓದನ್ನು ಮಾತ್ರ ನಿಲ್ಲಿಸಲೇ ಇಲ್ಲ.  ಗೆಳೆಯರೆಲ್ಲರೂ ನಿನ್ನ ಕೆರಿಯರ್ ರೂಪಿಸಿದ ಅವರನ್ನು ಒಂದು ಬಾರಿ ಭೇಟಿಯಾಗಿ ಕೃತಜ್ಞತೆಯನ್ನು ಹೇಳಿ ಬಾ ಎಂದು ಹೇಳುತ್ತಲೇ ಇದ್ದರು.  ನಾನು ಐ ಎ ಎಸ್ ಪರೀಕ್ಷೆ ಪಾಸ್ ಮಾಡಿದ ದಿವಸ ಬಂದು ಭೇಟಿಯಾಗಿ ಆಶೀರ್ವಾದ ಪಡೆಯಬೇಕೆಂದಿದ್ದೆ.  ಆದರೆ ಇಂದೇ ನಿಮ್ಮ ಭೇಟಿಯಾಗಿಬಿಟ್ಟಿತು. ಸಾಧಿಸಿಯೇ ಸಾಧಿಸುತ್ತೇನೆ ಮೇಡಮ್.  ಬೆಂಗಳೂರಿನಲ್ಲಿ ಕೆಲಸ ಕೊಟ್ಟು ಕನಸುಗಳನ್ನು ಕಾಣುವುದನ್ನು ಕಲಿಸಿದವರು ನೀವು! ಎಂದೆಲ್ಲಾ ಹೇಳುತ್ತಲೇ ಇದ್ದ. ನನ್ನ ಕಣ್ಣಲ್ಲಿ ಮಾತ್ರ ಆನಂದ ಭಾಷ್ಪ.

ಇರುವುದೆಲ್ಲವ ಬಿಟ್ಟು ಇರದುದೆಡೆಗೆ ತುಡಿವುದೇ ............. ಲೈಫು ಇಷ್ಟೇನೇ

(ಕನ್ನಡದ ಪ್ರತಿಭಾವಂತ ನಟ, ಚಿತ್ರಕಥೆಗಾರ ಪವನ್ ಕುಮಾರ್ ಇಲ್ಲಿ ತಮ್ಮ ಪಂಚರಂಗಿ ಅನುಭವವನ್ನ ಹಂಚಿಕೊಂಡಿದ್ದಾರೆ. ಇಂಗ್ಲೀಷಿನಿಂದ ಇದನ್ನ ಕನ್ನಡೀಕರಿಸಿದ್ದು ನಾನು)

ನಮ್ಮ ಹೊಸ ಚಲನಚಿತ್ರ ‘ಪಂಚರಂಗಿ’ ಭರ್ಜರಿ ಆರಂಭವನ್ನು ಪಡೆದುಕೊಂಡಿತು. ಈ ರೀತಿಯ ಪ್ರಚಂಡ ಆರಂಭದ ಯಶಸ್ಸನ್ನು ನಾನಾಗಲೀ, ನಮ್ಮ ತಂಡವಾಗಲೀ ನಿರೀಕ್ಷಿಸಿಯೇ ಇರಲಿಲ್ಲ!   ನಾನು ಪವನ್ ಕುಮಾರ್, ಪಂಚರಂಗಿ ಯ ಕಥೆ, ಚಿತ್ರಕಥೆ ಬರೆದವರಲ್ಲಿ ಒಬ್ಬ!  ಜೊತೆಗೆ ಈ ಚಿತ್ರದ ‘ಲಕಿ’ ಪಾತ್ರಧಾರಿ ಕೂಡ ನಾನೇ.  ನಾವು ಪಂಚರಂಗಿಯನ್ನು ತೆರೆಗೆ ತರುವ ಮುನ್ನಾ ಏನಾಯಿತು, ಹೇಗಾಯಿತು ಎನ್ನುವುದನ್ನು ನಿಮ್ಮ ಮುಂದಿಡಲು ಇಚ್ಚಿಸುತ್ತೇನೆ.

ಮನಸಾರೆ ಚಿತ್ರವು ಸೆಪ್ಟೆಂಬರ್ ೨೦೦೯ ರಲ್ಲಿ ಬಿಡುಗಡೆಯಾಯಿತು.  ಮನಸಾರೆ ಚಿತ್ರದ ಯಶಸ್ಸನ್ನು ಸ್ವಲ್ಪ ಮಟ್ಟಿಗೆ ನಿರೀಕ್ಷಿಸಿದ್ದೆವು ಕೂಡ.  ಈ ಚಿತ್ರಕ್ಕೆ ಸುರಿದ ಪ್ರಶಂಸೆಯ ಸುರಿಮಳೆ, ನನಗೆ ಸ್ವರ್ಗಕ್ಕೆ ಮೂರೇ ಗೇಣು ಎಂದಂತೆ ಭಾಸವಾಗಿದ್ದು ಮಾತ್ರ ಸುಳ್ಳಲ್ಲ.  ಮನಸಾರೆ ಕಥೆ, ಚಿತ್ರಕಥೆ ಬರೆಯುವಾಗಿನ ಕ್ಷಣಗಳು ನನಗೆ ವೈಯಕ್ತಿಕವಾಗಿ ಅತ್ಯಂತ ಖುಷಿ ಕೊಟ್ಟಂತಹ ಕ್ಷಣಗಳು.  ನಾನು ಈ ಚಿತ್ರ ನಿರ್ಮಾಣ ಕಾರ್ಯದಲ್ಲಿ ಅತೀ ಉತ್ಸುಕತೆಯಿಂದ ಭಾಗವಹಿಸಿದ್ದೇನೆ.  ಇದರ ಕಥೆ, ಚಿತ್ರಕಥೆಯಲ್ಲಿನ ಕ್ಷಣಕ್ಷಣದ ಬದಲಾವಣೆಗಳು, ಹಾಸ್ಯ ಮಿಶ್ರಿತ ಫಿಲಾಸಫಿ, ಇದೆಲ್ಲವೂ ನನ್ನನ್ನು ಜೀವಂತಿಕೆಯಲ್ಲಿಟ್ಟಿತ್ತು ಎಂದರೆ ತಪ್ಪಾಗಲಾರದು. ಈ ಚಿತ್ರ ಬಿಡುಗಡೆಯಾದ ನಂತರ ಮತ್ತೇನು?  ನಾನೇನು ಮಾಡಲಿ?  ನನಗೆ ಮತ್ತೆ ಜೀವಂತಿಕೆಯಲ್ಲಿ ಪುಟಿಯುವಂತಹ ಅವಕಾಶ ದೊರೆಯುತ್ತದೆಯೇ?  ಅದು ಅಷ್ಟು ಸುಲಭವೇ?  ಇದೆಲ್ಲವೂ ನನ್ನನ್ನು ಕಾಡುತ್ತಿತ್ತು.  ಮನಸಾರೆ ಚಿತ್ರದ ಪ್ರೊಮೋಷನ್ ಗಾಗಿ ನಾವು ಇಡೀ ಕರ್ನಾಟಕವನ್ನು ಸುತ್ತುತ್ತಿದ್ದೆವು.  ಆ ಸಂದರ್ಭದಲ್ಲಿ ಹಳ್ಳಿಯೊಂದಕ್ಕೆ ಭೇಟಿ ಕೊಟ್ಟು ಅಲ್ಲಿನ ಪ್ರೇಕ್ಷಕರನ್ನು ಮಾತನಾಡಿಸಿ, ಅವರ ಅಭಿಪ್ರಾಯಗಳನ್ನು ಕೇಳುತ್ತಿದ್ದೆವು.  ಅವರನ್ನು ನೋಡುತ್ತಿದ್ದರೆ, ನನಗೆ ನಾವು ಅವರನ್ನು ಮೋಸ ಮಾಡುತ್ತಿದ್ದೇವೆ ಎಂದೆನಿಸತೊಡಗಿತು! ನಾವು ಅಂದರೆ ಚಿತ್ರ ನಿರ್ದೇಶಕರು ಅತ್ಯಂತ ಬುದ್ಧಿವಂತಿಕೆಯಿಂದ ಅಥವಾ ನಾವು ಹಾಗೆಂದುಕೊಂಡು! ಮಾಡಿರುವ ಚಲನಚಿತ್ರವು ಆ ಹಳ್ಳಿಯ ಮುಗ್ಧ ಜನರಿಗೆ ತಟ್ಟುವುದೇ? ಅವರಿಗೆ ಬೇಕಾಗಿರುವುದು ಭಾವುಕತೆಯಿಂದ ಕೂಡಿರುವ, ಯಾವುದೂ ಗೂಢಾರ್ಥವಿಲ್ಲದ ತಿಳಿಯಾದ ಚಲನಚಿತ್ರ ಎಂಬುದು ನನಗೆ ಅರಿವಾಗತೊಡಗಿತು.  ಮನಸಾರೆಯಲ್ಲಿ ಬುದ್ಧಿವಂತಿಕೆ ಸ್ವಲ್ಪ ಹೆಚ್ಚಾಗೇ ಮೂಡಿತ್ತು ಎಂದೆನಿಸಿತು. ನಮ್ಮ ಚಲನ ಚಿತ್ರಗಳ ಪ್ರೇಕ್ಷಕರು ಹೆಚ್ಚಾಗಿ ಬೆಂಗಳೂರಿನ ಹೊರಗಡೆ ಇರುವಂತಹ ಜನರಾಗಿರುವುದರಿಂದ,ನಾವಿನ್ನೂ ನಮ್ಮ ಮುಂದಿನ ಚಿತ್ರಗಳಲ್ಲಿ ಚಿಂತನೀಯ ಕ್ಷಣಗಳಿಗಿಂತ ರಂಜನೀಯ ಕ್ಷಣಗಳಿಗೆ ಪ್ರಾಮುಖ್ಯತೆ ಕೊಡಬೇಕು, ಹಾಗೇ, ಹೀಗೇ..... ಇದೇ ಗುಂಗಿನಲ್ಲಿದ್ದ ನಾವಿಬ್ಬರೂ ಅಂದರೆ ಯೋಗರಾಜ್ ಭಟ್ ಹಾಗೂ ನಾನು ನಮ್ಮ ಮುಂದಿನ ಚಿತ್ರ ಶುರು ಮಾಡಿದೆವ

ನಾವಿಬ್ಬರೂ ಸರಿಸುಮಾರು ೨೦ ಚಿತ್ರ ಕಥೆಗಳನ್ನು ಬರೆದಿರಬಹುದು.  ಯಾವುದೂ ಕೂಡ ತೃಪ್ತಿಯೇ ಕೊಡುತ್ತಿಲ್ಲ.  ನಿಧಾನವಾಗಿ ನನಗೆ ನಿರಾಸೆಯಾಗತೊಡಗಿತು. ಹಿಂದಿನ ಭೇಟಿಯಲ್ಲಿ ಆದಂತಹ ಚರ್ಚೆ, ಸರಿ ಎಂದು ಕಂಡಿದ್ದು, ಮರುದಿವಸ ಛೇ! ಸರಿಯಿಲ್ಲ, ಬದಲಾಯಿಸೋಣ, ಹೀಗೇ.. ಇಬ್ಬರೂ ಒಮ್ಮತಕ್ಕೆ ಬರಲೇ ಆಗುತ್ತಿರಲಿಲ್ಲ.  ನಾನಂತು ತೀರಾ ಹತಾಶನಾಗಿಬಿಟ್ಟೆ.  ಈ  ಚಲನಚಿತ್ರರಂಗ ನನ್ನಂತಹವರಿಗಲ್ಲ.  ಆದರೂ ಬಿಟ್ಟುಬಿಡುವುದು ಅಷ್ಟು ಸುಲಭದ ಮಾತಲ್ಲ.  ತಲೆಯೊಳಗಿನ ಆಲೋಚನೆಗಳನ್ನೆಲ್ಲವನ್ನೂ ಕಾರ್ಯರೂಪಕ್ಕೆ ಇಳಿಸಬೇಕೆನ್ನುವಾಗ ಬರುವ ತೊಡಕುಗಳು, ಓಹ್! ಇನ್ನೂ ನನ್ನ ಕೈಯಲ್ಲಿ ಸಾಧ್ಯವಿಲ್ಲ. ಹೀಗೇ ಸುಮಾರು ೩ ತಿಂಗಳುಗಳ ಕಾಲ ಕುಂಟುತ್ತಾ ಸಾಗಿತು. ಸಣ್ಣದೊಂದು ಭೇಟಿ, ಚರ್ಚೆ ಎಲ್ಲವನ್ನೂ ಬದಲಾಯಿಸಿಬಿಟ್ಟಿತು.  ಒಂದು ದಿನ, ಜಯಂತ್ ಕಾಯ್ಕಿಣಿಯವರು ನಮ್ಮ ಆಫೀಸಿಗೆ ಬಂದಿದ್ದರು.  ನಾವು ಕಥೆ ಬರೆಯಲು ಕಷ್ಟ ಪಡುತ್ತಿರುವುದನ್ನು ಸ್ವತಃ ಬರಹಗಾರರಾದ ಅವರು ಅರ್ಥ ಮಾಡಿಕೊಳ್ಳಬಲ್ಲರವರಾಗಿದ್ದರು. ಅಲ್ಲೊಂದು ಅಸಹನೀಯ ಗಾಢ ಮೌನ ಕ್ಷಣ ಕಾಲ ಆವರಿಸಿತು.  ನಂತರ ಮೆಲ್ಲನೆ ಅವರು ಬಾಯ್ಬಿಟ್ಟರು. ಅವರಿಗೇ ಅರಿವಿಲ್ಲದಂತೆ ಅವರೊಂದು ಪದವನ್ನು ಬಳಸಿದರು.  ಅದು ‘ಸಮುದಾಯ’.  ಅವರ ಪ್ರಕಾರ ಮನಸಾರೆ ಜನಸಮುದಾಯಕ್ಕೆ ಬಹಳ ಇಷ್ಟವಾಗಿದ್ದು ಏಕೆಂದರೆ ಅದರಲ್ಲಿ ಪಾತ್ರಗಳು ಹೆಚ್ಚಿದ್ದುವು. ಹಾಗಾಗಿ ಪ್ರೇಕ್ಷಕನಿಗೆ ಇದು ಖುಷಿ ಕೊಡುತ್ತದೆ. ಪಾತ್ರಗಳು ಹೆಚ್ಚಿದ್ದಾಗ, ಆ ಬೇರೆ, ಬೇರೆ ಪಾತ್ರಗಳ ಬೇರೆ ಗುಣ ಲಕ್ಷಣಗಳು, ತಾವು ಕಂಡಂತಹ ಅಥವಾ ತಾವೇ ಆಗಿರಬಹುದಂತಹ ಗುಣಲಕ್ಷಣಗಳನ್ನು ಈ ಪಾತ್ರಗಳಲ್ಲಿ ಹುಡುಕುತ್ತಾರೆ. ಅಂತಹ ಚಲನಚಿತ್ರವು ಅವರಿಗೆ  ಹೆಚ್ಚಿನ ಮಟ್ಟದಲ್ಲಿ ತಲುಪುತ್ತದೆ. ಯಾವುದೇ ಕಥೆ / ಚಿತ್ರಕಥೆ ಜನರಿಗೆ ಮುಟ್ಟಬೇಕಾದರೆ ಅದರಲ್ಲಿ ಒಂದಿಡೀ ಸಮುದಾಯದ ಗುಣ ಲಕ್ಷಣಗಳಿರಬೇಕು. ಹಾಗಾಗಬೇಕಾದರೆ ಪಾತ್ರಗಳು ಹೆಚ್ಚಿರಬೇಕು.  ಅವರು ಹೇಳುತ್ತಲೇ ಇದ್ದರು.  ನಾವಿಬ್ಬರೂ ಸುಮ್ಮನೇ ಕೇಳುತ್ತಾ ಕುಳಿತಿದ್ದೆವು. ಆ ಕ್ಷಣಕ್ಕಂತೂ ನಮ್ಮ ಬುದ್ಧಿ ಬಂದಾಗಿತ್ತು.  ಆದರೆ ಅವರು ನಮ್ಮ ತಲೆಯೊಳಗೆ ಹುಳವನ್ನು ಬಿಟ್ಟಿದ್ದಾಗಿತ್ತು.  ಆ ರಾತ್ರಿಯೆಲ್ಲಾ ನಾನು ನನ್ನ ಇಷ್ಟದ ಸಿನೆಮಾಗಳನ್ನೆಲ್ಲವನ್ನೂ ನೆನಪಿಸಿಕೊಂಡೆ.  ಜಯಂತ್ ಅವರು ಹೇಳಿದ್ದೂ ನೂರಕ್ಕೆ ನೂರು ಸರಿಯಾಗಿತ್ತು.  ಬಹುತೇಕ ಅದ್ಭುತ ಸಿನೆಮಾಗಳಲ್ಲಿ ಪಾತ್ರಗಳ ರಚನೆ ಅದ್ಭುತವಾಗಿತ್ತು.  ಅಂದು ನಾನು ಮನದಲ್ಲೇ ನಿರ್ಣಯಿಸಿಕೊಂಡೆ.  ನಮ್ಮ ಮುಂದಿನ ಚಿತ್ರದಲ್ಲಿ ಪಾತ್ರಗಳ ರಚನೆಗೆ ಹೆಚ್ಚಿನ ಪ್ರಾಮುಖ್ಯತೆ ಸಿಗಬೇಕು.  ಜಯಂತ್ ಅವರಂದಂತೆ ಇಡೀ ಸಮುದಾಯದ ಫೀಲ್ ಇರಬೇಕು.  ಬೆಳಿಗ್ಗೆ ಎದ್ದೊಡನೆ ಇದೆಲ್ಲವನ್ನೂ ಯೋಗರಾಜ್ ಅವರಿಗೆ ಹೇಳಿದೆ.  ಆದರೆ ಮತ್ತವೇ ಪ್ರಶ್ನೆಗಳು!  ಈ ಸಮುದಾಯದ ಫೀಲ್ ಅಥವಾ ಸೆನ್ಸ್ ಅನ್ನು ಎಲ್ಲಿಂದ ತರುವುದು? ಎಲ್ಲಿದ್ದೆವೋ ಮತ್ತೆ ಅಲ್ಲೇ ಬಂದು ನಿಂತೆವು!

ಸ್ವಲ್ಪ ದಿನಗಳು ಕಳೆದವು.  ನಾವು ಮೊದಲಿಗೆ ಚಿತ್ರಕಥೆಯನ್ನು ಬರೆದು, ನಂತರ ಪಾತ್ರಧಾರಿಗಳನ್ನು ಹುಡುಕುತ್ತಿದ್ದೆವು.  ಆದರೆ ಈ ಸಲ ಮೊದಲಿಗೆ ಪಾತ್ರ ರಚನೆ ಹಾಗೂ ಅದಕ್ಕೆ ಹೊಂದುವ ಪಾತ್ರಧಾರಿಗಳನ್ನು ಆರಿಸಿ, ನಂತರ ಕಥೆಯನ್ನು ಬರೆಯುವ ಯೋಜನೆ ಹಾಕಿಕೊಂಡೆವು. ನಾನೊಂದಷ್ಟು ಪಾತ್ರಗಳನ್ನು ಹಾಗೂ ಅದಕ್ಕೆ ಹೊಂದುವ ನಮ್ಮಿಷ್ಟದ ನಟ ನಟಿಯರ ಹೆಸರುಗಳನ್ನು ಬರೆದುಕೊಂಡ.  ನಂತರ ಈ ಎಲ್ಲ ಪಾತ್ರಗಳನ್ನು ಒಟ್ಟಿಗೆ ಪೋಣಿಸುವುದು ಹೇಗೆ? ಎಂದು ಯೋಚಿಸಲು ಶುರು ಮಾಡಿದೆ. ‘ಮದುವೆ’ ಯ ಘಟನೆ ತೆಗೆದುಕೊಂಡರೆ ಹೇಗೆ? ಬೇಡ, ನಮ್ಮ ಬಹುತೇಕ ಎಲ್ಲಾ ಸಿನೆಮಾಗಳಲ್ಲೂ ಈ ಮದುವೆ ಯ ಘಟನೆ ಬಂದು ಹಳತಾಗಿದೆ.  ನನಗೆ ಈ ಪಾತ್ರಗಳನ್ನು ಪೋಣಿಸುವ ಘಟನೆಗೆ ಅಷ್ಟೊಂದು ಮಹತ್ವ ಕೊಡುವುದು ಬೇಡವಾಗಿತ್ತು. ನೀನು ಘಟನೆಗೆ ಮಹತ್ವ ಕೊಡದಿದ್ದರೆ ಸಿನೆಮಾದಲ್ಲಿ ಕಥೆ ಯೇ ಇರುವುದಿಲ್ಲ ಎಂದು ಯೋಗರಾಜ್ ಹೇಳಿದರು. ಈ ಐಡಿಯಾವೂ ವೇಸ್ಟಾಯಿತು ಅಂತಂದುಕೊಂಡೆ. ಅಷ್ಟರಲ್ಲಿ ಇಬ್ಬರಿಗೂ ನಾವ್ಯಾಕೆ ಇದನ್ನು ಪ್ರಯೋಗ ಮಾಡಿ ನೋಡಬಾರದು? ಎಂಬ ಭಯಂಕರವಾದ ಆಸೆ ಹುಟ್ಟಿತು! ಸರಿ, ಮತ್ತೆ ಇದರ ಬಗ್ಗೆ ಬಾರಿ, ಬಾರಿ ಚರ್ಚೆಗಳು ನಡೆದವು.  ಕೊನೆಗೊಂದು ಒಮ್ಮತಕ್ಕೆ ಬಂದೆವು. ಅದೇನೆಂದರೆ  ಈ  ಹದಿನಾರು ಪಾತ್ರಗಳ ಸುತ್ತ ಸಣ್ಣದೊಂದು ಕಥೆ, ಆದರೆ ಸವಿಸ್ತಾರವಾದ ಚಿತ್ರಕಥೆಯನ್ನು ರಚಿಸುವುದು. ನೀವು ಈ ಪ್ರಯೋಗವನ್ನು ಗಮನಿಸಿದರೆ ಅರ್ಥವಾಗಬಹುದು, ನಮ್ಮ ಕೆಲಸ ಕಥೆಯನ್ನು ಕಟ್ಟುವುದಲ್ಲ, ಬದಲಿಗೆ ಈ ಪಾತ್ರಗಳ ನಡುವೆ ಕಥೆಯೊಂದನ್ನು ಸೃಷ್ಟಿ ಮಾಡುವುದಾಗಿತ್ತು.  ಆದರೆ  ಈ ನಮ್ಮ ಜೀವನದ ಫಿಲಾಸಫಿಗಳು,  ದಾರ್ಶನಿಕ ತತ್ವಗಳು ,  ನಾವು ನಂಬಿಕೊಂಡಿರುವ ನೀತಿಗಳು, ನಮ್ಮನ್ನು  ಅಷ್ಟು ಬೇಗ ಬಿಟ್ಟು ಬಿಡುವುದೇ?  ಇದರಿಂದ ಬರೀ ರಂಜನೀಯ ಚಿತ್ರವನ್ನು ಮಾತ್ರ ಕೊಡುವುದೆಂದೂ ಆಗಿದ್ದ ನಮ್ಮ ಹೊಸ ನೀತಿಯು ನಿಧಾನವಾಗಿ ಹಾಳಾಗತೊಡಗಿತು.

ಕೊನೆಗೆ ನಮ್ಮ ಶೂಟಿಂಗ್ ಸ್ಕ್ರಿಪ್ಟ್ ನಲ್ಲಿ ೧೫೦ ನಿಮಿಷಗಳ ಚಿತ್ರಕಥೆ ಇತ್ತು.  ಆದರೆ ಕಥೆಯೆಲ್ಲಿ?  ನಮ್ಮ ತಲೆಯೊಳಗೆ ಪರ, ವಿರೋಧಿ ಎರಡು ಬಣಗಳೂ ಕೆಲಸ  ಮಾಡುತ್ತಿದ್ದವು.  ಒಂದು ದಿವಸ ನಾನು ಅತ್ಯಂತ ದೊಡ್ಡ ತಪ್ಪು ಮಾಡುತ್ತಿದ್ದೇನೆ ಎಂದು ನನಗನ್ನಿಸಿದರೆ, ಮತ್ತೊಂದು ದಿವಸ ಯೋಗರಾಜ್ ಅವರಿಗೆ ಅನಿಸುತ್ತಿತ್ತು. ನಾವಿಬ್ಬರೂ ಒಬ್ಬರನ್ನೊಬ್ಬರು ಒಪ್ಪಿಸುತ್ತಿದ್ದೆವು. ಇದೇ ಗೊಂದಲದಲ್ಲಿ ಇಡೀ ಚಿತ್ರದ ಚಿತ್ರೀಕರಣವಾಗುತ್ತಿತ್ತು.  ನಾವಿಬ್ಬರೂ ಯಾವಾಗಲೂ ಏನೋ ದೊಡ್ಡ ಅನಾಹುತ ಮಾಡಿದವರಂತೆ ಚಿಂತಾಕ್ರಾಂತರಾಗೇ ಇರುತ್ತಿದ್ದೆವು.  ಆದರೆ ನಮ್ಮ ಪಾತ್ರಧಾರಿಗಳು, ದೃಶ್ಯಗಳ ಚಿತ್ರೀಕರಣವನ್ನು ಆನಂದಿಸುತ್ತಿದ್ದದನ್ನು ನೋಡಿದಾಗ, ನಮಗೆಲ್ಲೋ ಮನಸ್ಸಿನ ಮೂಲೆಯಲ್ಲಿ ಆಶಾಕಿರಣವೊಂದು ಕಾಣುತ್ತಿತ್ತು.  ಮಂಗಳೂರಿನಲ್ಲಿ ಸುಮಾರು ೧೦೦ ನಿಮಿಷಗಳ ಚಿತ್ರೀಕರಣವನ್ನು ಮುಗಿಸಿದೆವು.  ಇನ್ನೂ ೩೦ ನಿಮಿಷಗಳ ಚಿತ್ರಕಥೆ ಬೆಂಗಳೂರಿನಲ್ಲಿ ಚಿತ್ರೀಕೃತವಾಗಬೇಕಿತ್ತು.  ಬೆಂಗಳೂರಿಗೆ ವಾಪಾಸ್ಸು ಬಂದ ನಾವು, ಇಲ್ಲಿ ಶೂಟಿಂಗ್ ಶೆಡ್ಯೂಲ್ ಅನ್ನು ಪ್ಲಾನ್ ಮಾಡುತ್ತಿದ್ದೆವು.  ಅಷ್ಟರಲ್ಲಿ ತವಕ ತಡೆಯಲಾರದ ಯೋಗರಾಜ್ ಅವರು ಎಡಿಟರ್ ನೊಟ್ಟಿಗೆ ಕುಳಿತು ಮಂಗಳೂರಿನಲ್ಲಿ ಚಿತ್ರೀಕರಣಗೊಂಡ ದೃಶ್ಯಗಳ ಎಡಿಟಿಂಗ್ ಮುಗಿಸಿಬಿಟ್ಟರು.  ಇದಾದ ನಂತರ, ನಮ್ಮ ಮುಂದಿನ ಯೋಜನೆಗಳು ಸಂಪೂರ್ಣ ಬದಲಾಗಿಬಿಟ್ಟಿತು.

ನಾವು, ಜಯಂತ್ ಹಾಗೂ ಅವರ ಮಗ ಎಲ್ಲರೂ ಕುಳಿತು ಈ ನೂರು ನಿಮಿಷಗಳ ಸಿನೆಮಾವನ್ನು ನೋಡಿದೆವು.  ಅವರಿಬ್ಬರಂತೂ ಇಡೀ ಚಿತ್ರವನ್ನು ನೋಡುತ್ತಿದ್ದಾಗ ಬಿದ್ದು, ಬಿದ್ದು ನಗುತ್ತಿದ್ದರು.  ಅಷ್ಟೊಂದು ನಗುವಂತಹದ್ದು ಏನಿದೆ ಈ ಚಿತ್ರದಲ್ಲಿ? ನಮ್ಮ ತಲೆಯಲ್ಲಿ ಪ್ರಶ್ನೆಗಳು ಮೂಡುತ್ತಿದ್ದಂತೂ ನಿಜ.  ನಂತರ ಅವರಿಗೆ ಇನ್ನೂ ೩೦ ನಿಮಿಷಗಳ ಚಿತ್ರೀಕರಣ ಬಾಕಿಯಿದೆ ಎಂದೆವು.  ಆದರೆ ಜಯಂತ್, ಅವರ ಮಗ ಹಾಗೂ ಎಡಿಟರ್ ಈ ಮೂವರ ಪ್ರಶ್ನೆ ಒಂದೇ ಆಗಿತ್ತು.  ಇನ್ನೂ ೩೦ ನಿಮಿಷಗಳ ಚಿತ್ರೀಕರಣದ ಅವಶ್ಯಕತೆ ಇದೆಯೇ?  ಚಿತ್ರ ಕ್ಕೆ ಕಥೆಯ ಚೌಕಟ್ಟನ್ನು ಕೊಡಬೇಕೆಂದರೆ ಈ ೩೦ ನಿಮಿಷಗಳ ಶೂಟಿಂಗ್ ಅವಶ್ಯಕತೆ ಇದೆ ಎಂದು ನಾವಿಬ್ಬರೂ ವಾದಿಸುತ್ತಲೇ ಬಂದೆವು.  ನಮಗಂತೂ ಈ ಚಿತ್ರ ಇಷ್ಟಕ್ಕೆ ತೃಪ್ತಿ ಕೊಟ್ಟಿದೆ.  ಇದಕ್ಕಿಂತ ಹೆಚ್ಚಿನದನ್ನೇನನ್ನು ನೋಡಲು ನಾವು ಬಯಸುವುದಿಲ್ಲ ಎಂದು ಆ ಮೂವರೂ ಹೇಳಿ ಹೊರಟರು.  ಶೂಟಿಂಗ್ ಮಾಡಬೇಕೆಂದಿದ್ದನ್ನು ಸದ್ಯಕ್ಕಂತೂ ನಿಲ್ಲಿಸಿದೆವು.  ಮತ್ತೆ ಎಲ್ಲರೂ ಆಫೀಸಿನಲ್ಲಿ ಸ್ಕ್ರಿಪ್ಟ್ ಹಿಡಿದು ಚರ್ಚೆ ಆರಂಭಿಸಿದೆವು. ಈ ನೂರು ನಿಮಿಷಗಳಲ್ಲಿ ನಿಜವಾಗಿಯೂ ನಾವು ಕಥೆಯನ್ನು ನಿರೂಪಿಸಿದ್ದೇವೆಯೇ?  ಗೊತ್ತಿಲ್ಲ.  ಚಿತ್ರಕಥೆಯ ಮೇಲೆ ಮತ್ತೊಂದಷ್ಟು ಕೆಲಸಗಳು ನಡೆದವು.  ಇಷ್ಟೆಲ್ಲಾ ಆದ ಮೇಲೆ ನಮಗನ್ನಿಸಿದ್ದೇನೆಂದರೆ ನಾವೊಂದು ಅತಿ ಸಣ್ಣ ಎಳೆಯುಳ್ಳ ಕಥೆಯೊಂದನ್ನು, ಪ್ರಬಲ ಪಾತ್ರಗಳೊಂದಿಗೆ ನಿರೂಪಿಸಿದ್ದೇವೆ. ಇದು ಪ್ರೇಕ್ಷಕರಿಗೆ ರಂಜನೆ ಕೊಡಬಲ್ಲುದು ಎಂದೆನಿಸಿತು.  ಅಷ್ಟಕ್ಕೆ ಬಿಡಬೇಕೇ? ಪ್ರೇಕ್ಷಕರಿಗೆ ಕಥೆ ಅಪೂರ್ಣ ಎನಿಸುವುದೇ? ಮತ್ತೆ ೫೦ - ೬೦ ಲಕ್ಷ ರೂಪಾಯಿಗಳನ್ನು ಹಾಕಿ ಉಳಿದ ಕಥೆಯನ್ನು ಚಿತ್ರೀಕರಿಸಬೇಕೆ?  ಮತ್ತೆ ಗೊಂದಲಗಳು, ಪ್ರಶ್ನೆಗಳು! ಬೆಂಬಿಡದೇ ಕಾಡತೊಡಗಿತು. ಕೊನೆಗೆ ಅಂತಃಸ್ಪೂರ್ತಿಯಿಂದ, ಮಾಮೂಲೀ ಸಿದ್ದ ತತ್ವಗಳುಳ್ಳ ಕಥೆಗಿಂತ, ನಾವು ಆನಂದಿಸುತ್ತಿದ್ದ ಈ ಪ್ರಯೋಗವನ್ನೇ ಪ್ರೇಕ್ಷಕರ ಮುಂದಿಡಲು ನಿರ್ಣಯ ತೆಗೆದುಕೊಂಡೆವು.  ಇಂತಹ ಅಪಾಯವನ್ನು ಮೈಮೇಲೆಳೆದುಕೊಳ್ಳಲು ಸಿದ್ದರಾದೆವು.  ನಾಲ್ಕು ಹಾಡುಗಳ ಚಿತ್ರೀಕರಣ ಹಾಗೂ ಈ ಚಿತ್ರಕಥೆಗ ತಾರ್ಕಿಕವಾಗಿ ಬೇಕಾಗಿದ್ದ ಕೆಲವೊಂದು ದೃಶ್ಯಗಳನ್ನು ಶೂಟ್ ಮಾಡಿಕೊಂಡೆವು.  ಇದೆಲ್ಲವೂ ಸೇರಿ ೧೨೮ ನಿಮಿಷಗಳ ಚಿತ್ರವು ಸಿದ್ದವಾಯಿತು.  ನಂತರದ ದಿನಗಳಲ್ಲಿ ಯೋಗರಾಜ್ ಆಗಲೀ ಅಥವಾ ಸುಬ್ರಹ್ಮಣ್ಯ ಅವರಾಗಲೀ ಕಣ್ಣು ಮುಚ್ಚಿ ನಿದ್ರೆ ಮಾಡಲೇ ಇಲ್ಲ.  ನಾನಂತೂ ಚಿತ್ರರಂಗವನ್ನೇ ಬಿಟ್ಟು, ಓಡಿ ಹೋಗುವ ಪ್ಲಾನ್ ಮಾಡುತ್ತಿದ್ದೆ.  ಯಾವುದೋ ನನ್ನ ಕ್ವಾಲಿಫಿಕೇಷನ್ ಗೆ ಒಂದು ಬಿಪಿಒ ಕೆಲಸ ಸಿಕ್ಕಿದರೂ ಸಾಕು, ಹೋಗಿ ಸೇರಿಕೊಂಡುಬಿಡೋಣ ಎಂದು ಯೋಚಿಸುತ್ತಿದ್ದೆ. ಈ ಪ್ರಯೋಗವನ್ನು ನಮ್ಮ ಪ್ರೇಕ್ಷಕರು ಒಪ್ಪಿಕೊಳ್ಳದಿದ್ದರೆ  ನಮ್ಮ ಉದ್ಯೋಗಕ್ಕೆ ಇದರಿಂದ ಸಂಚಕಾರ ಬರುತ್ತಿತ್ತು. ನಾವೇನು ಮಾಡಿದ್ದೇವೆ ಅನ್ನೋದನ್ನು ಯೋಚಿಸುವಷ್ಟರಲ್ಲಿ ಮೊದಲ ಕಾಪಿ ಬಂದುಬಿಟ್ಟಿತು.  ಚಿತ್ರದ ಪ್ರೀಮಿಯರ್ ಶೋ ನಲ್ಲಿ ನೆರೆದಿದ್ದ ಪ್ರತಿಯೊಬ್ಬರೂ ಚಿತ್ರವನ್ನು ಆನಂದಿಸುತ್ತಿದ್ದರೂ, ನನಗೇನೋ ಆತಂಕ.  ನಮ್ಮ ಮುಗ್ಧ ಪ್ರೇಕ್ಷಕರು ಇದನ್ನು ಹೇಗೆ ಒಪ್ಪಿಕೊಳ್ಳುತ್ತಾರೆ?  ಅದರ ಉತ್ತರ ನಿಮ್ಮ ಮುಂದೆ ಇದೆ. ನನಗೆ ತೃಪ್ತಿಯಾಗಿದೆ.

ಈಗ ಇದೆಲ್ಲವನ್ನೂ ನಾನೇಕೆ ಬರೆಯುತ್ತಿದ್ದೇನೆಂದರೆ, ನಾವೆಲ್ಲರೂ ಚಿತ್ರ ಬಿಡುಗಡೆಯಾದ ನಂತರ ಕೇಳಿದ್ದೇನೆಂದರೆ ಚಿತ್ರ ಚೆನ್ನಾಗಿದೆ, ಆದರೆ ಅದರಲ್ಲಿ ಕಥೆಯಿಲ್ಲ.  ನಾನು ಹೇಳುವುದೇನೆಂದರೆ ಈ ಚಿತ್ರದಲ್ಲಿ ಕಥೆ ಇಲ್ಲವೆಂದೇ ಅದು ಅಷ್ಟು ಚೆನ್ನಾಗಿದೆ.  ಸತ್ಯ ಹೇಳಬೇಕೆಂದರೆ ಈ ಚಿತ್ರದಲ್ಲಿ ಕಥೆಯಿದೆ.  ಒಬ್ಬ ನಿರಾಶಾವಾದಿ ಯುವಕ, ಜೀವನದಲ್ಲಿ ಬೇಸತ್ತವನು, ಇವನನ್ನು ಬದಲಾಯಿಸುವ ಯುವತಿ ಆಶಾವಾದಿ.  ಇವರಿಬ್ಬರೂ ಒಂದು ಘಟನೆಯಲ್ಲಿ ಭೇಟಿಯಾಗುತ್ತಾರೆ.  ಒಬ್ಬರು ಮತ್ತೊಬ್ಬರ ಕಾಲೇಳೆಯಲು ಪ್ರಯತ್ನಿಸುತ್ತಾರೆ.  ಈ ಪ್ರಯತ್ನದಲ್ಲಿ ಪರಸ್ಪರ ಆಕರ್ಷಣೆಗೊಳಗಾಗುತ್ತಾರೆ.  ಇವನ ಗೊಂದಲಗಳಿಗೆ ಪರಿಹಾರವನ್ನು ಸೂಚಿಸುವ ಅವಳು.  ಇದು ಕಥೆ ಅಲ್ಲವೇ?  ಯಾಕೆ ಯಾವಾಗಲೂ ಕಥೆ ಯೆಂದರೆ ದೊಡ್ಡ ದೊಡ್ಡ ದನ್ನೇ ಹುಡುಕುತ್ತೇವೆ ನಾವು?  ಒಂದು ಚಿತ್ರದುದ್ದಕ್ಕೂ ಪಾತ್ರಗಳು ವಿಜೃಂಭಿಸುತ್ತವೆ,  ಅವುಗಳ ಗೊಂದಲ, ಅದಕ್ಕೊಂದು ಪರಿಹಾರ ಇಷ್ಟಿದ್ದರೆ ಸಾಕಲ್ಲವೇ? ನಾನು ನನ್ನ ಕೆಲಸವನ್ನು ಸಮರ್ಥಿಸಿಕೊಳ್ಳಲು ಯತ್ನಿಸುತ್ತಿಲ್ಲ.  ಇದರಲ್ಲಿ ತಪ್ಪಿದ್ದರೆ ಖಂಡಿತವಾಗಿಯೂ ತಿದ್ದಿಕೊಳ್ಳಬಯಸುತ್ತೇನೆ.  ಆದರೆ ನಿಮ್ಮೆಲ್ಲರಿಗೂ ಮುಕ್ತ ಮನದಿಂದ ಈ ಬಗ್ಗೆ ಯೋಚಿಸಲು ಹಾಗೂ ಯಾವುದೇ ದೊಡ್ಡ ಕಥೆಯನ್ನು ಹುಡುಕದೇ ಚಲನಚಿತ್ರಗಳನ್ನು ನೋಡಿ ಎಂದಷ್ಟೇ ಹೇಳಬಲ್ಲೆ. ಕೊನೆಯ ಪಕ್ಷ ಪಂಚರಂಗಿಯನ್ನಾದರೂ ಈ ದೃಷ್ಟಿಯಿಂದ ನೋಡಿ  ಎಂದು ಕೇಳಿಕೊಳ್ಳುತ್ತೇನೆ. ನಾವು ಉಳಿದ ೩೦ ನಿಮಿಷಗಳ ಚಿತ್ರೀಕರಣ ಮಾಡಿದಿದ್ದರೆ, ಇದೇ ಪ್ರೇಕ್ಷಕರು ‘ಅದೇ ಹಳೆಯ ಕಥೆ! ಸೆಕೆಂಡ್ ಹಾಫ್ ಬೋರ್, ಹುಡುಗ ಹುಡುಗಿಯನ್ನು ಪ್ರೀತಿಸುತ್ತಾನೆ, ಅವಳನ್ನು ಕಳೆದುಕೊಳ್ಳುತ್ತಾನೆ, ಮತ್ತೆ ಅವಳಿಗಾಗಿ ವಾಪಾಸ್ಸು ಬರುತ್ತಾನೆ’ ಎಂದೆನ್ನುತ್ತಿದ್ದರು. ಈಗ ಸಿಕ್ಕಿದಂತಹ ಸಕರಾತ್ಮಕವಾದ ಪ್ರತಿಕ್ರಿಯಗಳಂತೂ ಖಂಡಿತವಾಗಿಯೂ ಸಿಗುತ್ತಿರಲಿಲ್ಲ.

ದಯವಿಟ್ಟು ಚಿತ್ರವನ್ನು ಆನಂದಿಸಿ, ಅದರಲ್ಲಿನ ತತ್ವಗಳನ್ನು ಆಲೋಚಿಸಿ, ಸುಮ್ಮನೆ ನಕ್ಕುಬಿಡಿ, ನಿಮ್ಮ ಜೀವನವನ್ನು ಮುನ್ನಡೆಸಿ.  ಪಂಚರಂಗಿಯಲ್ಲಿ ಸಾಮಾನ್ಯ ಸಿದ್ದ ಸೂತ್ರವುಳ್ಳ ಕಥೆಯನ್ನು ಹುಡುಕುವ ವ್ಯರ್ಥ ಪ್ರಯತ್ನ ಪಡಬೇಡಿ.  ನಾವು ನಿಜವಾಗಿಯೂ ಜೀವಮಾನದ ಶ್ರೇಷ್ಠ ಚಿತ್ರವನ್ನು ನಿಮ್ಮ ಮುಂದಿಡಲು ಬಯಸಿಲ್ಲ.  ಅದನ್ನು ಮಾಡುವುದು ಹೇಗೆಂಬುದು ಕೂಡ ನಮಗೆ ತಿಳಿದಿಲ್ಲ. ನಿಮ್ಮೆಲ್ಲರನ್ನೂ ಒಂದಷ್ಟು ಕ್ಷಣಗಳು ನಗಿಸಬೇಕು ಹಾಗೂ ನಾವು ಹೇಗೆ ಬದುಕುತ್ತಿದ್ದೇವೆ ಎಂಬ ಸಣ್ಣದೊಂದು ಆಲೋಚನೆಯನ್ನು ಹುಟ್ಟು ಹಾಕುವುದಷ್ಟೇ ನಮ್ಮ ಉದ್ದೇಶ. ಈ ನಮ್ಮ ಉದ್ದೇಶ ನೆರವೇರುತ್ತಿದೆ ಎಂದಷ್ಟೇ ಹೇಳಬಲ್ಲೆ.  ನೀವ್ಯಾಕೆ ಒಂದು ಚಲನಚಿತ್ರವು ಕಥೆಯನ್ನು ಹೇಳಲೇಬೇಕೆಂದು ಪಟ್ಟು ಹಿಡಿಯುತ್ತೀರಿ?

ಆದರೆ ಈ ನಮ್ಮೆಲ್ಲರ ಲೈಫ್ ಹಂಗೇನೇ. ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ - ಲೈಫು ಇಷ್ಟೇನೇ

Friday, May 24, 2013

ಬೆಂಗಳೂರಿನ ಮಲೆಗಳಲ್ಲಿ ಮದುಮಗಳು


ಯಾವುದೇ ಕಥೆ, ಕಾದಂಬರಿ, ನಾಟಕ, ಸಿನೆಮಾಗಳಲ್ಲಿ ಮುಖ್ಯವಾಗುವುದು ಪಾತ್ರ ರಚನೆ. ಒಳ್ಳೆಯ ಪಾತ್ರ ಸೃಷ್ಠಿಯಾದರೆ, ನಂತರ ಪಾತ್ರಗಳೇ ಕಥೆಯನ್ನು ನಡೆಸಿಕೊಂಡು ಹೋಗುತ್ತವೆ.  ವೈದೇಹಿಯವರು ತಮ್ಮ ಕಥೆಗಳ ಬಗ್ಗೆ ಹೇಳುತ್ತಾ, ಒಮ್ಮೆ, ನಾನು ಕಥೆಗಾರ್ತಿಯಲ್ಲಾ, ಬರಹಗಾರ್ತಿ. ನಾನು ಬರೀತಾ ಹೋಗುತ್ತೇನೆ. ನಂತರ ಅದು ಕಥೆಯಾಗುತ್ತದೆ ಎಂದು ಹೇಳಿದ್ದರು.  ಅಕ್ಷರಶಃ ಅವರ ಮಾತು ನಿಜ ಎಂದೆನಿಸುತ್ತದೆ.  ಅವರ ಕಥೆಯ ಪಾತ್ರವಾದ ‘ಅಕ್ಕು’,  ಕಾರಂತರ ‘ಮೂಕಜ್ಜಿ’, ತೇಜಸ್ವಿಯವರ ‘ಕರ್ವಾಲೋ’, ‘ಮಂದಣ್ಣ’, ‘ಕಿವಿ’, ಕಂಬಾರರ ‘ಶಿಖರ ಸೂರ್ಯ’, ಹೀಗೆ....... ಯಾವುದೇ ಕಾದಂಬರಿಯ ಯಶಸ್ವಿ, ಅವುಗಳಲ್ಲಿನ ಪಾತ್ರ ರಚನೆಯಲ್ಲಿ ಹಾಗೂ ಪಾತ್ರ ಪೋಷಣೆಯಲ್ಲಿರುತ್ತದೆ. ಒಮ್ಮೆ ಆ ಪಾತ್ರಗಳು ಓದುಗರ, ವೀಕ್ಷಕರ ಮನಸ್ಸಿನಲ್ಲಿ ನಾಟಿಬಿಟ್ಟರೆ, ಆಮೇಲೆ ತಾನಾಗಿಯೇ ಅವು ಓದಿಸಿಕೊಂಡು ಹೋಗುತ್ತವೆ. ಪಾತ್ರಗಳು ನಮ್ಮೊಡನೆ ಮಾತಾಡತೊಡಗುತ್ತವೆ.  ನಾವು ಕೂಡ ಅವುಗಳೊಂದಿಗೆ ಪಾತ್ರವಾಗಿ ಸಂಭಾಷಿಸಲು ಶುರು ಮಾಡುತ್ತೇವೆ. ಅವುಗಳೊಂದಿಗೆ ಒಬ್ಬರಾಗಿಬಿಡುತ್ತೇವೆ.  

ಇತ್ತೀಚೆಗೆ ನನಗೆ ಕಥೆಗಳು ಚಿತ್ರಕಥೆಗಳಾಗಿ ಬದಲಾಗುವ ಪ್ರಕ್ರಿಯೆಯ ಬಗ್ಗೆ ತೀವ್ರ ಕುತೂಹಲ. ಕಥೆಗಳಲ್ಲಿ ನಮ್ಮ ಕಲ್ಪನೆಯಲ್ಲಿ ಮೂಡುವ ಪಾತ್ರಗಳು, ವ್ಯಕ್ತಿ ಚಿತ್ರಣಗಳು ದೃಶ್ಯ ಮಾಧ್ಯಮದಲ್ಲಿ ಬೇರೆಯದೇ (ತನ್ನ ಮಿತಿಗಳಿಂದಾಗಿಯೋ ಅಥವಾ ನಿರ್ದೇಶಕನ ಕಲ್ಪನೆಯ ಮಿತಿಯಿಂದಾಗಿಯೋ?!) ಆಗಿ ಮೂಡುವಾಗ ಆಗುವ ಬದಲಾವಣೆಗಳು ಇತ್ಯಾದಿ ನನ್ನನ್ನು ಹೆಚ್ಚು ಆಕರ್ಷಿಸುತ್ತಿದೆ.  ಹೀಗಾಗಿ ಸಾಹಿತ್ಯವೊಂದು ಅದರಲ್ಲೂ ಕುವೆಂಪುರವರ ೭೫೦ ಪುಟಗಳ ಬೃಹತ್ ಕಾದಂಬರಿ ‘ಮಲೆಗಳಲ್ಲಿ ಮದುಮಗಳು’ ರಂಗರೂಪಾಂತರವಾಗಿ ಬೆಂಗಳೂರಿನಲ್ಲಿ ಪ್ರದರ್ಶಿತವಾಗುತ್ತಿದೆಯೆಂದು ತಿಳಿದಾಗ ನಾನು ಮಾಡಿದ ಮೊಟ್ಟಮೊದಲ ಕೆಲಸ, ಪುಸ್ತಕವನ್ನು ಓದಲು ಶುರು ಮಾಡಿದ್ದು. (ಇದುವರೆವಿಗೂ ಕುವೆಂಪುರವರ ಪುಸ್ತಕಗಳನ್ನು ನಾನು ಏಕೆ ಓದಿರಲಿಲ್ಲವೆಂಬುದನ್ನೂ ಈ ಹಿಂದೆ ಬರೆದಿದ್ದೇನೆ). 

ಮಲೆನಾಡಿನ ೧೫೦ ವರ್ಷಗಳ ಹಿಂದಿನ ಪರಿಸರ, ಕಾಡು, ಮಳೆ, ಜನಜೀವನ, ಎಲ್ಲಕ್ಕಿಂತ ಮುಖ್ಯವಾಗಿ ಅಲ್ಲಿಯ ಭಾಷೆ, ಒಕ್ಕಲಿಗರ ದರ್ಬಾರು, ಬ್ರಾಹ್ಮಣಿಕೆಯ ಆಡಂಬರ, ಕ್ರೈಸ್ತರ ಮತಾಂತರದ ಹುನ್ನಾರ, ಸಾಬರ ದೌರ್ಜನ್ಯ ಇವುಗಳ ಮಧ್ಯೆ ನಲುಗುವ ದಲಿತರ / ಹೊಲೆಯರ ‘ನಾಯಿ’ ಪಾಡು, ಶ್ರೀಮಂತರ ದಬ್ಬಾಳಿಕೆ, ಬಡವರ ನೋವು, ಗಂಡಸರ ಕಾಮುಕತನ, ಹೆಂಗಸರ ಮೇಲಿನ ಅತ್ಯಾಚಾರ....  ಇವೆಲ್ಲದರ ನಡುವೆ ಎಲ್ಲೋ ಒಂದು ಕಡೆ ಕುವೆಂಪುರವರ ಎಂದಿನ ‘ವಿಶ್ವ ಮಾನವ ತತ್ವ’ ಚಿಗುರುವ ಕನಸು, ಆಶಾವಾದ, ಪ್ರೀತಿ, ಪ್ರೇಮ, ಇವೆಲ್ಲವುಗಳೂ ನಾಜೂಕಾಗಿ ಪಾತ್ರಗಳ ಮೂಲಕ ಜೀವಂತಿಕೆಯಲ್ಲಿ ಮೆರೆಯುವುದು ‘ಮಲೆಗಳಲ್ಲಿ ಮದುಮಗಳು’ ಕಾದಂಬರಿಯ ವೈಶಿಷ್ಟ್ಯ! ವಿವೇಕಾನಂದರ ಬಗೆಗಿನ ಅಥವಾ ರಾಮಕೃಷ್ಣ ಆಶ್ರಮದ ಕಡೆಗಿನ ಕುವೆಂಪುರವರ ಆಕರ್ಷಣೆ ಎಲ್ಲೋ ಒಂದಷ್ಟು ಪುಟಗಳಲ್ಲಿ ಮೂಡಿ ಬಂದಿರುವುದನ್ನು (ಬಲವಂತವಾಗಿಯೇ ತುರುಕಿದಂತೆ ನನಗೆ ತೋರಿತು!) ಹೊರತು ಪಡಿಸಿದರೆ, ಮಿಕ್ಕಂತೆ ಎಲ್ಲಾ ಪಾತ್ರಗಳೂ, ತಮ್ಮಷ್ಟಕ್ಕೆ ತಾವೇ  ಕಥೆಯನ್ನು ಮುಂದುವರಿಸಿಕೊಂಡು ಹೋಗುತ್ತವೆ. ಪಾತ್ರಗಳೇ ತಮ್ಮ ಕಥೆಯ ಅಂತ್ಯವನ್ನು ಕಂಡುಕೊಳ್ಳುತ್ತವೆ. ಈ ಕಾದಂಬರಿಯಲ್ಲಿ ಎರಡು ಎಳೆಗಳಲ್ಲಿ ಕಥೆಯು ಶುರುವಾಗುತ್ತದೆ, ಮಧ್ಯೆ ಮಧ್ಯೆ ಸಣ್ಣ, ಪುಟ್ಟ ಉಪಕಥೆಗಳು, ಪಾತ್ರಗಳು ಮುಖ್ಯ ಕಥೆಗೆ ತಿರುವನ್ನು ಕೊಡುತ್ತವೆ.

ಕಥೆಯ ಮುಖ್ಯಪಾತ್ರಗಳಾದ ಗುತ್ತಿ, ಆತನ ನಾಯಿ ‘ಹುಲಿಯಾ’, ಆತನ ಪ್ರೇಮಿ ತಿಮ್ಮಿ, ಆಕೆಗೆ ನಿಶ್ಚಯವಾಗಿರುವ (ಆಳು ಬೇರೆ ಕಡೆ ಹೋಗಬಾರದೆಂಬ ತಮ್ಮ ಗೌಡರ ಆದೇಶದಿಂದಾಗಿ!) ಬಚ್ಚಾ, ಆತನ ಮಾಲೀಕನ ಕ್ರೈಸ್ತ ಮತದೆಡೆಗಿನ ಆಕರ್ಷಣೆ, ಆಧುನಿಕನಾಗಬೇಕೆಂಬ ಹಂಬಲ, ತಿಮ್ಮಿಗೆ ಯಾವ ಗಂಡಾದರೂ ಪರವಾಗಿಲ್ಲ, ಆದರೆ ತಮ್ಮ ಜಾತಿಯವನೇ ಆಗಿರಬೇಕೆಂಬ ಬಯಕೆ, ತಿಮ್ಮಿಯ ತಾಯಿಗೆ ತನ್ನ ತವರುಮನೆಯವನಾದ ಗುತ್ತಿಗೆ ಮದುವೆ ಮಾಡಿಸಬೇಕೆಂಬ ಆಸೆ, ಬಚ್ಚಾನಿಗೆ ಕೊಡಲು ವಿರೋಧವೇನಿಲ್ಲದಿದ್ದರೂ, ಆತ ಕ್ರೈಸ್ತನಾಗುವ ಭಯದಿಂದ ಇಷ್ಟವಿಲ್ಲದಿದ್ದರೂ, ಆ ಊರ ಗೌಡನ ಒಕ್ಕಲಾದದಕ್ಕಾಗಿ ಒಪ್ಪಿಗೆ ನೀಡುವ ತಿಮ್ಮಿಯ ತಂದೆ, ಪರೋಕ್ಷವಾಗಿ ‘ತಿಮ್ಮಿ’ ತಪ್ಪಿಸಿಕೊಳ್ಳಲು ಸಹಾಯ ಮಾಡುವ ತಾಯಿ, ಇವೆಲ್ಲದರ ನಡುವೆ ಓಡಿಹೋಗಿಯಾದರೂ ತಿಮ್ಮಿಯನ್ನು ಪಡೆಯಲೇಬೇಕೆಂಬ ಗುತ್ತಿಯ ಪ್ರಬಲ ಉತ್ಸಾಹ, ಅವಳನ್ನು ತನ್ನವಳನ್ನಾಗಿಸಿಕೊಳ್ಳಲು ಆತ ಪಡುವ ಕಷ್ಟ, ತಿಮ್ಮಿಯ ಸಹಕಾರ, ಈ ಮಧ್ಯೆ ತಮ್ಮ ತಮ್ಮ ಆಳುಗಳಿಗಾಗಿ ಊರ ಗೌಡರ ಮಧ್ಯೆ ನಡೆಯುವ ಅನೇಕ ರಾಜಕೀಯ ಚದುರಂಗದಾಟಗಳು, ಇಲ್ಲಿ ಬೇರೊಬ್ಬರ ತಪ್ಪಿಗೆ ಬಲಿಯಾಗುವ ಗುತ್ತಿ, ಪೋಲೀಸರ ಭಯದಿಂದ ಆತನ ಓಡಿಹೋಗುವ ಹವಣಿಕೆ, ಜೊತೆಯಲ್ಲಿ ಪ್ರೀತಿಸಿ ಮದುವೆಯಾದವಳನ್ನು ಕೂಡ ತನ್ನೊಟ್ಟಿಗೆ ಎಷ್ಟೇ ಕಷ್ಟವಾದರೂ ಕರೆದೊಯ್ಯುವ ಹಂಬಲ, ಈ ಎಲ್ಲಾ ಗೋಜಲುಗಳಿಂದ ಊರು ಬಿಟ್ಟು ಹೋಗುವ ಗುತ್ತಿ, ಇವೆಲ್ಲದರ ನಡುವೆ ಬೇಡ, ಬೇಡವೆಂದರೂ ತನ್ನ ಮಾಲೀಕ ಗುತ್ತಿಯನ್ನು ನಿಷ್ಠೆಯಿಂದ ಹಿಂಬಾಲಿಸುವ ಹುಲಿಯಾ.....  ಕೊನೆಗೂ ಆಕೆಯನ್ನು ಪಡೆದರೂ ತನ್ನ ಜೀವದಂತಿದ್ದ ‘ಹುಲಿಯಾ’ ನನ್ನು ಕರೆದೊಯ್ಯಲಾಗದೇ ಅನುಭವಿಸುವ ಅಸಹಾಯಕತೆ, ಹುಲಿಯಾ ನದಿಯಲ್ಲಿ ಈಜಲಾಗದೇ ಬಲಿಯಾಗುವುದು, ಗುತ್ತಿಗೆ ಹುಲಿಯಾನನ್ನು ಕಳೆದುಕೊಂಡ ನೋವು, ಇವೆಲ್ಲದರ ನಡುವೆ ನಮಗೆ ಮರುಕ ಹುಟ್ಟಿಸುವುದು ಹುಲಿಯಾ ನ ಸಾವೇ ಹೊರತು, ತನ್ನೂರನ್ನು ಬಿಟ್ಟು ಬಂದ ಗುತ್ತಿ, ತಿಮ್ಮಿ ಪರದೇಶಿಯಾಗುವುದಲ್ಲ!  ಮತ್ತೊಂದೆಡೆ ಮಾಲೀಕನಿಗಾಗಿಯೇ ಕ್ರೈಸ್ತನಾಗುವ  ಹೊಲೆಯ ‘ಬಚ್ಚಾ’!, ಕ್ರೈಸ್ತ ಮತದವರ ರೀತಿ ರಿವಾಜನ್ನು ಬಹಳವಾಗಿ ಇಷ್ಟ ಪಟ್ಟರೂ, ತನ್ನ ಜೀವನ ಶೈಲಿಯಲ್ಲಿ ಅವೆಲ್ಲವನ್ನೂ ಅಳವಡಿಸಿಕೊಂಡರೂ, ಜೊತೆಗೆ ಕ್ರೈಸ್ತ ಹುಡುಗಿಯೊಟ್ಟಿಗೆ ಸಂಬಂಧ ಬೆಳೆಸಿದರೂ ಕೂಡ ಜಾತಿ ಬಿಡಲೊಲ್ಲದ ‘ಬಚ್ಚಾ’ನ ಮಾಲೀಕ! ತನ್ನ ಹೆಂಡತಿಯ ತಮ್ಮ ಮುಕುಂದಯ್ಯನ ಸಹಾಯದಿಂದ ಕ್ರೈಸ್ತನಾಗದೇ ತಪ್ಪಿಸಿಕೊಂಡರೂ, ತನ್ನ ಆಳುಗಳನ್ನು ಕ್ರಿಸ್ತರನ್ನಾಗಿಸುವ ‘ಒಡೆಯ’! ಇಲ್ಲಿ ‘ಒಡೆಯ’ ಗೆದ್ದರೂ, ಬಲಿಯಾಗುವುದು ‘ಆಳುಗಳು’!

ಮತ್ತೊಂದು ಕಥೆ ಮುಕುಂದಯ್ಯ ಹಾಗೂ ಚಿನ್ನಕ್ಕಳ ಮದುವೆ ಪ್ರಸಂಗ.  ಇದು ಕೂಡ ಒಂದು ರೀತಿಯಲ್ಲಿ ನಾಯಿಗುತ್ತಿಯ ಕಥೆಯನ್ನೇ ಹೋಲಿದರೂ ಕೂಡ, ಇಲ್ಲಿ ಆತನ ಒಕ್ಕಲುಗಳು ಹಾಗೂ ಬಾಲ್ಯ ಸ್ನೇಹಿತರೂ ಕೂಡ ಆದ ಐತ ಮತ್ತು ಆತನ ಹೆಂಡತಿ ಪೀಂಚಲು ತಮ್ಮ ಒಡೆಯನ ಸಹಾಯಕ್ಕೆ ಒದಗುತ್ತಾರೆ.  ಅದರಲ್ಲೂ ಬುದ್ಧಿವಂತೆ, ಸ್ಪ್ರುರದ್ರೂಪಿ ಪೀಂಚಲೂ, ಮುಕುಂದ ಹಾಗೂ ಚಿನ್ನಕ್ಕಳ ನಡುವೆ ಮಧ್ಯವರ್ತಿಯಾಗುತ್ತಾಳೆ. ಚಿಕ್ಕಂದಿನಿಂದಲೂ ಮುಕುಂದನಿಗೆ ಮನಸೋತಿರುವ ಚಿನ್ನಕ್ಕ, ತನ್ನ ತಂದೆ ಮಾಡಿರುವ ಸಾಲಕ್ಕೆ ಹೊಣೆಯಾಗಿ, ಶ್ರೀಮಂತ ಮುದುಕನನ್ನು ಮದುವೆಯಾಗುವ ಸಂದರ್ಭ ಒದಗುತ್ತದೆ,  ಆಕೆ, ಪೀಂಚಲೂ ಹಾಗೂ ನಾಗಕ್ಕನ ಸಹಾಯದಿಂದ ಹೇಗೆ ಓಡಿಬಂದು ಮುಕುಂದಯ್ಯನನ್ನು ಮದುವೆಯಾಗುತ್ತಾಳೆಂಬುದು ಕಾದಂಬರಿಯ ಮತ್ತೊಂದು ಎಳೆ. ಇಲ್ಲಿ ಐತ ಹಾಗೂ ಪೀಂಚಲುವಿನ ಪ್ರೇಮ ದಾಂಪತ್ಯ, ಆ ಕಾಲದಲ್ಲಿ ಒಡೆಯ ಹಾಗೂ ಹೆಣ್ಣಾಳುಗಳ ನಡುವಿದ್ದ ಲೈಂಗಿಕ ಸಂಬಂಧಗಳು, ಮುಕುಂದಯ್ಯ ಹಾಗೂ ಪೀಂಚಲುವಿನ ಸ್ನೇಹ ಸಂಬಂಧದ ಬಗ್ಗೆ ಅನುಮಾನ ಹುಟ್ಟಿಸುವ ಐತನ ಗೆಳೆಯ / ಸೇರೆಗಾರ ಚೀಂಕ್ರ, ಇದನ್ನು ಪ್ರೀತಿಯಿಂದಲೇ ಪರಿಹರಿಸುವ ಪೀಂಚಲು, ಐತ ಹಾಗೂ ಪೀಂಚಲುವಿನ ದಾಂಪತ್ಯ ವಾಹ್! ಅನಿಸಿಬಿಡುತ್ತದೆ. ಮುಕುಂದ ಹಾಗೂ ಚಿನ್ನಕ್ಕನ ಕಥೆ ಸುಖಾಂತ್ಯವಾದರೂ ಕೂಡ, ಇದರಿಂದಾಗುವ ಮುಕುಂದಯ್ಯನ ಆಸ್ತಿ ವಿಭಜನೆ, ಚಿನ್ನಕ್ಕಳ ತಂದೆಯ ಸಾವು, ನಾಗಕ್ಕಳ ಮರುವೈಧವ್ಯ ವಿಷಾದ ಹುಟ್ಟಿಸುತ್ತದೆ.  

ಈ ಮಧ್ಯೆ ಗಂಡಸರ ಲೈಂಗಿಕ ಬಯಕೆಗಾಗಿ ಬಲಿಯಾಗುವ ಹೆಣ್ಣುಗಳ ಕಥೆಗಳು (ಉಪಕಥೆಗಳಾಗಿದ್ದರೂ, ಪಾತ್ರಗಳು ನಮ್ಮನ್ನು ಸೆಳೆದುಕೊಳ್ಳುತ್ತವೆ)  - ನಾಗಕ್ಕ, ಕಾವೇರಿ, ಚೀಂಕ್ರನ ಹೆಂಡತಿ ದೇಯಿ, ಚೀಂಕ್ರನ ಪಕ್ಕದ ಮನೆಯ ಅಕ್ಕಣಿ. ಮುಕುಂದಯ್ಯನ ಅಕ್ಕ, ತಂಗಿಯರು....... ವಿಧವೆ ನಾಗಕ್ಕ, ತನ್ನ ಅತ್ತೆಯಿಂದಲೇ (ಜೀವನೋಪಾಯಕ್ಕಾಗಿ) ಮೋಸಕ್ಕೊಳಗಾಗಿ ಬಲವಂತವಾಗಿ ಚಿನ್ನಕ್ಕನ ತಂದೆಯೊಟ್ಟಿಗೆ ಕೂಡಿಕೆಯಾಗುವುದು, ಆತನೋ ಮೋಟುಗಾಲಿನವನಾದರೂ, ಹೆಣ್ಣಿನ ಸೆರಗು ಕಂಡೊಡನೆ ಜೊಲ್ಲು ಸುರಿಸುತ್ತಾ ಹಿಂದೆ ಓಡುವಾತ, ಮಹಾನ್ ಹೆಣ್ಣುಬಾಕ! ಮತ್ತೊಮ್ಮೆ ಅದೇ ಮೋಸ ನಾಗಕ್ಕಳ ಅತ್ತೆಗೆ ತಿರುಮಂತ್ರವಾಗಿ ಅವಳೇ ಮೋಸ ಹೋಗುವಂಥ ಪರಿಸ್ಥಿತಿ!, ಅತ್ತೆಯ ಮೋಸಕ್ಕೆ ಬಲಿಯಾದರೂ ಕೂಡ ನಾಗಕ್ಕಳಿಗೆ ಇದೊಂದು ವರವಾಗಿ ಪರಿಣಮಿಸುವುದು, ಚಿನ್ನಕ್ಕಳಿಗೆ ಮಲತಾಯಿಯಾದರೂ, ತಾಯಿಗಿಂತಲೂ ಹೆಚ್ಚಿಗೆ ಪ್ರೀತಿಸುವ ನಾಗಕ್ಕ, ಚಿನ್ನಕ್ಕಳು ಮುಕುಂದಯ್ಯನನ್ನು ಕೂಡಲು ಸಹಾಯ ಮಾಡುವ ಮೃದು ಹೃದಯಿ ನಾಗಕ್ಕ, ಓಡಿ ಹೋದ ಚಿನ್ನಕ್ಕ ವಾಪಾಸು ಬರುವಾಗ ತಂದೆಯ ಸಾವಿನಿಂದ ವಿಚಲಿತಳಾದರೂ, ಮತ್ತೊಮ್ಮೆ ವಿಧವೆಯಾದ ನಾಗಕ್ಕ ಆಕೆಗೆ ಬೆಂಬಲವಾಗಿ ನಿಲ್ಲುವುದು, ಇಬ್ಬರೂ ಸೇರಿ ತಂದೆಯ ಸಾಲವನ್ನು ಗದ್ದೆಯಲ್ಲಿ ದುಡಿದು ತೀರಿಸಲು ಮನಸು ಮಾಡುವುದು, ಒಬ್ಬಂಟಿ ನಾಗಕ್ಕಳ ಧೈರ್ಯವನ್ನು ಸೂಚಿಸುತ್ತದೆ.

ಕಾವೇರಿಯ ತಾಯಿ ಮಗಳನ್ನು ಕಾಮುಕರಿಂದ ಎಷ್ಟೇ ರಕ್ಷಿಸಿ ಆಕೆಗೊಂದು ಉತ್ತಮ ಜೀವನ ಕಲ್ಪಿಸಿಕೊಡಬೇಕೆಂದು ಏನೆಲ್ಲಾ ಮಾಡಿದರೂ, ಮುಗ್ಧೆ ಕಾವೇರಿಯ ಮೇಲಿನ ಅತ್ಯಾಚಾರ, ಆಗೆಲ್ಲಾ ಮನೆಯಲ್ಲಿ ಗಂಡಸರ ಬೆಂಬಲವಿಲ್ಲದಿದ್ದರೆ, ಅಂತಹ ಹೆಣ್ಣುಮಕ್ಕಳನೆಲ್ಲಾ ವೈಶ್ಯೆಯರನ್ನಾಗಿಸುತ್ತಿದ್ದ ಗಂಡಸರ ಮನೋಭಾವ!, ಊರಿನ ಗೌಡನೊಬ್ಬ ಪ್ರೀತಿಯಿಂದಲೇ, ಕಾವೇರಿಯನ್ನು ಆಕರ್ಷಿಸಿಕೊಂಡು ಮಾನಸಿಕ ಅತ್ಯಾಚಾರ ಮಾಡಿದರೆ, ಇದರಿಂದ ಬಸವಳಿದ ಕಾವೇರಿಯ ಮೇಲಿನ ಉಳಿದ ಗಂಡಸರ ದೈಹಿಕ ಅತ್ಯಾಚಾರ, ಕಂಗೆಟ್ಟ ಪುಟ್ಟ ಕಾವೇರಿ ಮಾಡಿಕೊಳ್ಳುವ ಆತ್ಮಹತ್ಯೆ, ಅಕ್ಕಪಕ್ಕದವರು ಕಾವೇರಿ ಮುಂಚಿನಿಂದಲೂ ಚೆಲ್ಲುಚೆಲ್ಲಾಗಿದ್ದಳು ಎಂದು ಮಾತಾಡಿಕೊಳ್ಳಬಾರದೆಂದು, ಕಾವೇರಿಯ ತಾಯಿ ಅಂತಕ್ಕ ಮಗಳು ಅತ್ಯಾಚಾರಕ್ಕೆ ಬಲಿಯಾದಳು ಎಂದು ತಿಳಿದರೂ ಕೂಡ, ಪೋಲೀಸರಿಗೆ ಹೇಳುವ ಸುಳ್ಳು ಹೇಳಿಕೆ! (ಆಗಿನಿಂದಲೂ ಈ ಕಾಲದವರೆಗೂ ಅತ್ಯಾಚಾರಗೊಂಡ ಹೆಣ್ಣುಮಕ್ಕಳೇ ಅಪರಾಧಿಗಳಾಗಿ ಕಾಣುವಂಥ ಮನಸ್ಥಿತಿ :( ) ಎಲ್ಲವೂ ಮರುಕ ಹುಟ್ಟಿಸುತ್ತದೆ. 

ಈಗಾಗಲೇ ಅನೇಕ ಮಕ್ಕಳ ತಾಯಿಯಾಗಿ ಬಸವಳಿದ ತುಂಬು ಗರ್ಭಿಣಿಯ ಕಾಮುಕ ಗಂಡ ಚೀಂಕ್ರ, ಮತ್ತಿನಲ್ಲಿ ಆಕೆಯ ಮೇಲೆ ನಡೆಸುವ ಬಲವಂತದ ಸಂಭೋಗದಿಂದ ಸಾಯುವ ಆಕೆ, ಮಕ್ಕಳಿಲ್ಲದ ಅಕ್ಕಣಿ, ಪಕ್ಕದ ಮನೆಯ ಚೀಂಕ್ರನ ಮಕ್ಕಳನ್ನು ನೋಡಿಕೊಳ್ಳುವ ಹಾಗೂ ರೋಗಿ ಗಂಡನನ್ನು ಸಂಬಾಳಿಸುತ್ತಲೇ, ಚೀಂಕ್ರ ಬೀಸಿದ ಹಣದ ಬಲೆಗೆ ಬೀಳುವ ಅಕ್ಕಣಿ, ಚೀಂಕ್ರ ತನ್ನ ಗಂಡ ಪಿಜಿಣನನ್ನು ನಿಧಾನವಾಗಿ ಕೊಲ್ಲುತ್ತಿರುವ ಮೋಸದ ಅರಿವಾಗದೇ, ತನ್ನನ್ನು, ತನ್ನ ಗಂಡನನ್ನು ಕೈತುಂಬಾ ಹಣ ಕೊಟ್ಟು ನೋಡಿಕೊಳ್ಳುತ್ತಿರುವ ಕೃತಜ್ಞತೆಯಿಂದ ತನ್ನ ದೇಹವನ್ನು ಕೂಡ ಚೀಂಕ್ರನಿಗೆ ಒಪ್ಪಿಸುವ ಪಾಪದ ಅಕ್ಕಣಿ, ಅಕ್ಕಣಿಯ ಬಯಕೆಗಳನ್ನು ಈಡೇರಿಸಲಾಗದಂಥ ನಿಶ್ಯಕ್ತ ಗಂಡ ಇದನ್ನೊಪ್ಪಿಕೊಳ್ಳದೇ ನೇಣು ಹಾಕಿಕೊಳ್ಳುವುದು, ತಾನು ಮಾಡಿದ ತಪ್ಪೇನು? ಎಂಬ ಅರಿವಾಗದೇ ದಿಗ್ಬ್ರಮೆಗೊಳಗಾಗುವ ಅಕ್ಕಣಿ, 

ತಿರುಪತಿಗೆ ಹೋದ ಗಂಡ ೭,೮ ವರ್ಷಗಳಾದರೂ ವಾಪಾಸ್ಸು ಬರದೇ, ಕಂಗಾಲಾಗಿರುವ ಮುಕುಂದಯ್ಯನ ಅಕ್ಕ ರಂಗಮ್ಮ ಹೆಗ್ಗಡಿತಿ, ಆಸ್ತಿಯ ಆಸೆಗಾಗಿ ಅಣ್ಣನ ಹೆಂಡತಿಯನ್ನೇ ಹುಚ್ಚು ಹೆಗ್ಗಡಿತಿಯಾಗಿ ಬೇಕೆಂದೇ ಬಿಂಬಿಸುವ ಮೈದುನ, ಪಕ್ಕದ ಮನೆಯಲ್ಲಿ ಬ್ರಾಹ್ಮಣರಂತೆಯೇ ವರ್ತಿಸುವ ಮತ್ತೊಬ್ಬ ದಾಯಾದಿ ಶಂಕರ ಹೆಗ್ಗಡೆ, ದೊಡ್ಡಮಗನನ್ನು ಕಳೆದುಕೊಂಡು ಕೊರಗುವ ಜಿಪುಣ ಸುಬ್ಬಣ್ಣ ಹೆಗ್ಗಡೆ, ಇವುಗಳೆಲ್ಲದರ ನಡುವೆ ತಂದೆಯಿಲ್ಲದೇ ಕಂಗಾಲಾಗಿರುವ ಪುಟ್ಟ ಮಗು ಧರ್ಮುವಿನ ವಿಚಾರ ಧಾರೆ, ಕೊನೆಗೆ ಕಳೆದು ಹೋದ ಗಂಡನ ಕಳೇಬರ ತಂದಾಗ ಅದರ ಮೇಲೆಯೇ ಜೀವ ಬಿಡುವ ರಂಗಮ್ಮ ಹೆಗ್ಗಡಿತಿ, ಹೆಣ್ಣಿಗಾಗಿ ಕ್ರೈಸ್ತ ಮತಾಂತರಕ್ಕೆ ಒಪ್ಪಿಕೊಳ್ಳುವಂಥ ಹಾಗೂ ಹಿಂದೂಗಳು ಅನುಸರಿಸುವ ಎಲ್ಲಾ ಪದ್ದತಿಗಳನ್ನೂ ಗೊಡ್ಡು ಎಂದು ಹೀಗಳೆಯುತ್ತಾ, ಆಧುನಿಕ ಜಗತ್ತಿನ ಆಕರ್ಷಣೆಗೊಳಗಾಗಿರುವ ಗಂಡ ದೇವಯ್ಯನನ್ನು ಸಂಬಾಳಿಸಲು ತೋರದ, ದಿನವಿಡೀ ಕೊರಗುವ ಸೌಮ್ಯ ಸ್ವಭಾವದ ಹೆಂಡತಿ ರಂಗಮ್ಮಳ ತಂಗಿ. ಸ್ವಲ್ಪ ದಿವಸಗಳ ಚೇತರಿಕೆಗೆಂದು ತವರುಮನೆಗೆ ಬಂದಿದ್ದ ರಂಗಮ್ಮಳು, ತನ್ನ ತಂಗಿಯ ಮಗನನ್ನು ‘ಸ್ವಾಮಿ, ಸ್ವಾಮಿ ಎಂದು ಕರೆಯುತ್ತಾ ಪ್ರೀತಿಸುವುದು, ಆ ಮಗುವು ಕೂಡ ತನ್ನ ದೊಡ್ಡಮ್ಮನನ್ನು ಹಚ್ಚಿಕೊಳ್ಳುವುದು ಎಲ್ಲವೂ ವಿಚಿತ್ರವೆಂದು ಕಾಣುತ್ತದೆ.

ಇಲ್ಲಿ ಮತ್ತೊಂದು ಅಸಂಗತ ಕಥೆ, ಇಡೀ ಕಾದಂಬರಿಗೆ ಮುಖ್ಯ ತಿರುವನ್ನು, ಬಹುಶಃ ಮುಕುಂದಯ್ಯನಿಗೆ ಚಿನ್ನಕ್ಕಳನ್ನು ಮದುವೆಯಾಗಲು ಆತ್ಮ ಸ್ಥೈರ್ಯವನ್ನು ನೀಡುತ್ತದೆ.  ರಂಗಮ್ಮನ ತಂಗಿಗೆ ಹುಟ್ಟಿರುವ ಪುಟ್ಟ ಮಗನೇ ರಂಗಮ್ಮನ ಗಂಡನೆಂದೂ, ಮುಕುಂದಯ್ಯ ಹಾಗೂ ಚಿನ್ನಕ್ಕಳಿಗೆ ಹುಟ್ಟುವ ಮಗಳು ‘ರಂಗಮ್ಮ’ ಮತ್ತೆ ಇವನನ್ನು ಮದುವೆಯಾಗುತ್ತಾಳೆಂದು ಹಾಗೂ ಹಿಂದಿನ ಜನ್ಮದಲ್ಲಿಯೂ ಮುಕುಂದಯ್ಯ ಹಾಗೂ ಚಿನ್ನಕ್ಕ ದಂಪತಿಗಳಾಗಿದ್ದರೆಂದು, ಭೂತ, ವರ್ತಮಾನ, ಭವಿಷ್ಯ ಹೇಳುವ ಗಡ್ಡದಯ್ಯ ಎಂಬ ಪಾತ್ರ ಕಾದಂಬರಿಯಲ್ಲಿ ಕಾಣುತ್ತದೆ. ಆತನ ಅತೀಂದ್ರಿಯ ಜ್ಞಾನ, ‘ವಿವೇಕಾನಂದರು ಭರತ ಖಂಡವನ್ನೆಲ್ಲ ಸಂಚರಿಸಿ, ಬೋಧಿಸಿ ಹಿಂದೂ ಧರ್ಮವು ಬ್ರಾಹ್ಮಣ ಪುರೋಹಿತರಿಂದ ಪಾರಾಗಿ, ಕ್ರೈಸ್ತಾದಿ ಮತ ಪ್ರಚಾರಕರಿಗೆ ದುರ್ಗಮವಾಗಿ......’ ಇತ್ಯಾದಿ ಹೇಳುವ ಮಾತುಗಳು, ಆತ ಮುಕುಂದಯ್ಯನನ್ನು ಉದ್ಧೇಶಿಸಿ, ಆತನ ವಂಶದಲ್ಲಿ ಮುಂದೆ ಹುಟ್ಟಲಿರುವ ಸಂತಾನವು ಸ್ವಾಮಿ ವಿವೇಕಾನಂದರ ಯುಗ ಧರ್ಮ ಶಕ್ತಿಗೆ ಸೇವೆ ಸಲ್ಲಿಸುವುದು ಇತ್ಯಾದಿ, ಬಹುಶಃ ಕುವೆಂಪುರವರು ಕಾದಂಬರಿಯಲ್ಲಿ ಹೇಳಬೇಕೆಂದಿದ್ದ ಮುಖ್ಯ ಮಾತುಗಳೆಲ್ಲವನ್ನೂ ಅಂದರೆ ತಮ್ಮ ವಿಶ್ವ ಮಾನವ ತತ್ವವನ್ನು, ಗಡ್ಡದಯ್ಯನ ಪಾತ್ರದ ಮೂಲಕ ಹೇಳಿಸಿದ್ದಾರೆ ಎಂದೆನಿಸುವುದು.  ಕಾದಂಬರಿಯನ್ನು ಓದುವಾಗ ಇನ್ನೂ ಅನೇಕ ಪಾತ್ರಗಳು ನಮ್ಮ ಸುತ್ತಮುತ್ತಲೆಲ್ಲೋ ಇವೆಯೇನೋ? ಎನ್ನುವಂಥ ಭಾಸವನ್ನು ಮೂಡಿಸಿಬಿಡುತ್ತವೆ. ಪಾತ್ರಗಳು ಕಣ್ಮುಂದೆ ಜೀವಂತಿಕೆಯಲ್ಲಿ ಕುಣಿಯುತ್ತವೆ. ಮತ್ತೊಮ್ಮೆ, ಮಗದೊಮ್ಮೆ ಓದುತ್ತಲೇ ಇರಬೇಕೆಂಬ ಆಸೆಯನ್ನು ಕೂಡ ಹುಟ್ಟು ಹಾಕುತ್ತವೆ.

ಕಾದಂಬರಿಯ ರಂಗರೂಪಾಂತರದಲ್ಲಿ ನನಗೆ ಕಂಡ ಬದಲಾವಣೆಗಳು, ವ್ಯತ್ಯಾಸಗಳು ಎಲ್ಲೋ ಮನಸ್ಸಿನ ಮೂಲೆಯಲ್ಲಿ, ಇದು ಕುವೆಂಪುರವರ ‘ಮಲೆಗಳಲ್ಲಿ ಮದುಮಗಳು’ ಹೌದೇ?! ಎಂದೆನಿಸಿದ್ದು ಸುಳ್ಳಲ್ಲ. ಇಡೀ ಕಾದಂಬರಿಗೆ ತಿರುವನ್ನು ಕೊಟ್ಟ ಮುಖ್ಯ ಪಾತ್ರವಾದ ‘ಗಡ್ಡದಯ್ಯ’ ಇಲ್ಲಿ ಇಲ್ಲವೇ ಇಲ್ಲ.  ಕಾವೇರಿಯ ಆತ್ಮಹತ್ಯೆಯ ನಂತರ ಅಂತಕ್ಕ ಅಳುತ್ತಾ, ಶಾಪ ಹಾಕುವಾಗ (ಕಾವೇರಿಯನ್ನು ಮದುವೆಯಾಗಲೆಂದು ಬಂದಿದ್ದ ಕಿಟ್ಟಯ್ಯನಿಗೆ), ಮೂಗಿಗೆ ಕೈಹಾಕುತ್ತಾ, ತಿರುವುತ್ತಾ,  ಮುಖ ಸಪ್ಪೆ ಮಾಡಿಕೊಂಡು ನಿಲ್ಲುವ ಕಿಟ್ಟಯ್ಯ ಶೆಟ್ಟಿಯ ನಟನೆ ಹೆಚ್ಚು ಆಪ್ತವೆನಿಸಿ, ತಮಾಷೆಯೆನಿಸಿ ಚಪ್ಪಾಳೆ ಗಿಟ್ಟಿಸಿದರೆ, ಕಾವೇರಿಯ ಅತ್ಯಾಚಾರದ ಘಟನೆ ಇದರಿಂದಾಗಿ ಹೈಲೈಟ್ ಆಗದಿರುವುದು ವಿಷಾದವೆನಿಸಿತು. ಕಿಟ್ಟಯ್ಯ ಶೆಟ್ಟಿಯ ಪಾತ್ರ ಕಾದಂಬರಿಯಲ್ಲಿ ಮುಖ್ಯವೆನಿಸಿರಲಿಲ್ಲ. 

ಕಾದಂಬರಿಯಲ್ಲಿ ಮುಕುಂದಯ್ಯ, ಶಂಕರ ಹೆಗ್ಡೆ, ರಂಗಮ್ಮ ಹೆಗ್ಗಡಿತಿ, ಆಕೆಯ ತಂಗಿ ಇವುಗಳೆಲ್ಲಾ ಸ್ವಲ್ಪ ಮಟ್ಟಿಗೆ ಸೌಮ್ಯ ಪಾತ್ರಗಳು, ಆದರೆ ನಾಟಕದಲ್ಲಿ ಮುಕುಂದಯ್ಯ ಪೇಲವ, ಶಂಕರ ಹೆಗ್ಡೆ ಹಾಸ್ಯಾಸ್ಪದ, ರಂಗಮ್ಮ ನಾಟಕೀಯ, ಆಕೆಯ ತಂಗಿ ಗಯ್ಯಾಳಿ ಯಾಗಿ ಕಾಣಿಸುತ್ತಾರೆ.  ಇನ್ನೂ ಬ್ರಾಹ್ಮಣರೆಲ್ಲರೂ ಹಾಸ್ಯಾಸ್ಪದವಾಗಿ ಕಾಣುವಂತೆ ಅಂದರೆ ಬ್ರಾಹ್ಮಣರೆಲ್ಲರನ್ನೂ ಲೇವಡಿ ಮಾಡುವಂತ ಸನ್ನಿವೇಶವನ್ನು ಸೃಷ್ಠಿ ಮಾಡಿದ್ದಾರೆ. ಸಾಬರೆಲ್ಲರೂ ಹೊಡಿ, ಬಡಿ, ಕೊಲ್ಲು, ದೋಚು, ಮೋಸ ಮಾಡು ಎನ್ನುವಂಥವರು ಎಂಬ ಪಾತ್ರರಚನೆಗಳನ್ನು ಕುವೆಂಪು ಸೃಷ್ಠಿಸಿದ್ದರೆ, ಬಹುಶಃ ಅಲ್ಪಸಂಖ್ಯಾತರನ್ನು ಎತ್ತಿ ಹಿಡಿಯಲೆಂದೋ ಏನೋ? ಅವರಲ್ಲಿಯೂ ಮಾನವೀಯತೆ ಇದೆ, ನಾವು ಬಡವರು, ಶ್ರೀಮಂತರ ದಬ್ಬಾಳಿಕೆಯಿಂದ ಹೀಗಾಗಿದ್ದೇವೆ ಎಂಬ ಕಾದಂಬರಿಯಲ್ಲಿಲ್ಲದ ಸನ್ನಿವೇಶವೊಂದು ಸೃಷ್ಠಿಯಾಗಿದೆ. ಇನ್ನೂ ಕ್ರೈಸ್ತ ಮತಾಂತರವನ್ನು ಬಲವಂತದಿಂದ ಮಾಡದೇ, ಉಪಾಯದಿಂದ ಮಾಡಬೇಕೆನ್ನುವ ದೊಡ್ಡ ಪಾದ್ರಿಯ ಸಲಹೆ ಅಲ್ಲಿ ಕ್ರೈಸ್ತರ ಮತಾಂತರದ ಹುನ್ನಾರವನ್ನು ಅರ್ಥ ಪಡಿಸಿದರೆ, ಇಲ್ಲಿ ಆ ಇಡೀ ಸನ್ನಿವೇಶ ತಮಾಷೆಯಂತೆ ಚಿತ್ರಣಗೊಂಡು ದೊಡ್ಡ ಪಾದ್ರಿ ಇತ್ಯಾದಿಯಾಗಿ ಎಲ್ಲರೂ ಹಾಸ್ಯಾಸ್ಪದವಾಗಿ ಕಾಣುತ್ತಾರೆ.  ಹ್ಮ್ . ನಿಜ. ಇಲ್ಲಿ ಯಾರೂ ಮುಖ್ಯರಲ್ಲ! ಯಾರೂ ಅಮುಖ್ಯರಲ್ಲ, ಯಾವುದೂ ಯಕಶ್ಚಿತವಲ್ಲ.

ನಾಟಕವನ್ನು ಪ್ರಾರಂಭಿಸಿದ ರೀತಿ ಬಹಳ ಚಂದವಾಗಿದೆ.  ಶಾಪದ ಉಂಗುರ ಸಿಕ್ಕ ಜೋಗಿಯೊಬ್ಬ ಕಥೆಯನ್ನು ಹೇಳುತ್ತಾ ಹೋಗುವುದು ದೃಶ್ಯಗಳನ್ನು ಕಟ್ಟಿಕೊಡುತ್ತಾ ಹೋಗುತ್ತದೆ. ಕಾವೇರಿಯ ಅತ್ಯಾಚಾರಕ್ಕೆ ಕಾರಣವಾಗಿರುವ ಈ ಉಂಗುರದಿಂದ ಕಥೆ ಶುರುವಾಗುವುದು ಇಡೀ ಕಾದಂಬರಿಯ ಆಶಯವಾದ ವಿಶ್ವ ಮಾನವ ತತ್ವವನ್ನು (ನನ್ನ ಊಹೆಯೇ?!) ತೆಳುವಾಗಿಸುತ್ತದೆಯೇನೋ? ಕಾದಂಬರಿಯಲ್ಲಿಲ್ಲದ ಮತ್ತೊಂದು ಸನ್ನಿವೇಶ ಈ ಸನ್ಯಾಸಿ, ಗೋಸಾಯಿ, ಬೈರಾಗಿಗಳನ್ನು ಸುತ್ತಲೂ ಧ್ಯಾನಮಗ್ನರಾಗಿರುವಂತೆ ಮಾಡಿ, ಕೆಲವರು ವಿಕಾರವಾಗಿ ನಗುವಂತೆ, ಮತ್ತೆ ಕೆಲವರು ಕಾದಂಬರಿಯ ಶುರುವಿನಲ್ಲಿ ಕುವೆಂಪುರವರು ಬರೆದಿರುವ ಮಾತುಗಳನ್ನು ಹೇಳುವಂತೆ ಹಾಗೂ ಹಿನ್ನೆಲೆಯಲ್ಲಿ ಕೆಟ್ಟದಾದ ಸಂಗೀತ ಸಂಯೋಜನೆ ಎಲ್ಲವೂ ಸಮಾಧಿ ಸ್ಥಳಕ್ಕೆ ಹೋದಂತೆ ಭಾಸವಾಗಿ ತಮಾಷೆಯಾಗಿ ಕಾಣುವುದು.  ಈ ಸನ್ನಿವೇಶದ ಅಗತ್ಯತೆಯೇ ನನಗೆ ಕಾಣಲಿಲ್ಲ. 

ಕಾದಂಬರಿಯಲ್ಲಿನ ಮತ್ತೊಂದು ಮುಖ್ಯ ಪಾತ್ರವಾದ ರಂಗಮ್ಮ ಹೆಗ್ಗಡಿತಿಗೆ, ತನ್ನ ತಂಗಿಯ ಮಗನೇ, ತನ್ನ ಸ್ವಾಮಿಯಂತೆ ಕಂಡುಬರುವುದು, ಹಾಗೂ ಆ ಮಗುವು ಕೂಡ ಈಕೆಯನ್ನು ಹಚ್ಚಿಕೊಳ್ಳುವ ಸನ್ನಿವೇಶಗಳು ಕಣ್ಣೀರು ತರಿಸುತ್ತವೆ.  ಕಾದಂಬರಿಯ ತಿರುವಿಗೆ ಅರ್ಥ ಕೊಡುತ್ತವೆ.  ಆದರೆ ಅದನ್ನು ಚಿತ್ರಿಸದೇ, ಆಕೆಯ ಮಾವ ಸುಬ್ಬಣ್ಣ ಹೆಗ್ಗಡೆ ಆ ಪುಟ್ಟ ಮಗುವಿನಲ್ಲಿ ತನ್ನ ಮಗನನ್ನು ಕಾಣುವಂತೆ ಚಿತ್ರಿಸಿರುವ ಸನ್ನಿವೇಶಗಳು ಸುಬ್ಬಣ್ಣ ಹೆಗ್ಗಡೆಯನ್ನು, ಆ ಪಾತ್ರಧಾರಿಯನ್ನು ಹೈಲೈಟ್ ಆಗಿಸಿ, ರಂಗಮ್ಮಳ ನಟನೆ ತೀರಾ ನಾಟಕೀಯವಾಗಿ ಕಾಣುತ್ತವೆ. ಗಡ್ಡದಯ್ಯನ ಮೂಲಕ ಇಡೀ ವಿವೇಕಾನಂದರ ತತ್ವಗಳನ್ನು ಹೇಳಿಸಿರುವುದು, ಗಡ್ಡದಯ್ಯ ಮುಕುಂದಯ್ಯ ಹಾಗೂ ದೇವಯ್ಯನ ಜೊತೆ ಆಗಿದ್ದ ಮತಾಂತರ, ಕ್ರೈಸ್ತರು, ಬ್ರಾಹ್ಮಣರ ಪದ್ಧತಿಗಳು, ಮೂಢನಂಬಿಕೆಗಳ ಬಗ್ಗೆ ನಡೆಸಿರುವ ಗಹನವಾದ ಚರ್ಚೆ ನಮಗೆ ಕಾದಂಬರಿಯ ಆಶಯವನ್ನು ತಿಳಿ ಹೇಳಿದರೆ, ಇಲ್ಲಿ ಸುಮ್ಮನೆ ೨ ನಿಮಿಷಗಳ ಕಾಲ ಬಂದು ಹೋಗುವ ವಿವೇಕಾನಂದರ ಪಾತ್ರಧಾರಿ, ಹಾಗೂ ಚಿಕಾಗೋದಲ್ಲಿನ ಅವರ ಭಾಷಣವನ್ನು ಹಿನ್ನೆಲೆಯಲ್ಲಿ ಕೇಳಿಸುವುದು ವೀಕ್ಷಕರಿಗೆ ಅರ್ಥವಾಗುವುದೇ ಇಲ್ಲ.  ಕಾದಂಬರಿಯ ಕೊನೆಯಲ್ಲಿ ಗುತ್ತಿಯ ನಾಯಿ ‘ಹುಲಿಯಾ’ ನದಿಯಲ್ಲಿ ಮುಳುಗಿ ಹೋಗುವುದನ್ನು ಓದುತ್ತಾ, ಓದುತ್ತಾ, ಅಳಲು ಶುರು ಮಾಡುವ ಓದುಗರು, ಇಲ್ಲಿ ಓಹ್! ನಾಟಕ ಮುಗಿಯಿತು ಎಂಬಂತೆ ಎದ್ದು ಬರುವುದು ನಾಟಕದ ದುರಂತ :( 

ಮೊದಲನೆಯದಾಗಿ ರಂಗ ಸಜ್ಜಿಕೆ. ಇಡೀ ಮಲೆನಾಡಿನ ಪರಿಸರವನ್ನು ಕಣ್ಣಮುಂದೆ ತಂದಿಡಲು ಪ್ರಯತ್ನ ಪಟ್ಟಿರುವ ಶಶಿಧರ ಅಡಪ ಅವರಿಗೆ ಮೆಚ್ಚುಗೆ ವ್ಯಕ್ತಪಡಿಸಲೇ ಬೇಕು. ಆದರೆ ರಂಗಸಜ್ಜಿಕೆಯಲ್ಲಿನ ಮತ್ತೊಂದು ಭಾಗವಾದ ವೀಕ್ಷಕರ ಸ್ಥಳವನ್ನು ಕೂಡ ಅವರು  ಅಷ್ಟೇ ಮುತುವರ್ಜಿಯಿಂದ ಸಜ್ಜುಗೊಳಿಸಿದ್ದರೆ ಇನ್ನಷ್ಟು ಕಳೆಗಟ್ಟುತ್ತಿತ್ತು ಎಂಬುದು ನನ್ನ ಅನಿಸಿಕೆ.  ಸುಮಾರು ೯ ಗಂಟೆಗಳ ನಾಟಕವು ೪ ಸ್ಥಳಗಳಲ್ಲಿ ನಡೆಯುವುದು ಹಾಗೂ ಆ ಬದಲಾವಣೆಗೆ ಕೇವಲ ೧೫ ನಿಮಿಷಗಳ ವಿರಾಮ ದೊರೆತು, ಓಡಿ ಹೋಗಿ, ಸೀಟನ್ನು ಹಿಡಿದಿಟ್ಟುಕೊಳ್ಳಬೇಕಾದ ಪರಿಸ್ಥಿತಿ, ವಯಸ್ಸಾದವರಿಗೆ ಅನಾನುಕೂಲವಾಗಿದ್ದನ್ನು ಕಣ್ಣಾರೆ ಕಂಡೆ. ಮೂರು ಘಂಟೆಗಳ ಕಾಲ ಕಲ್ಲಿನ ಮೇಲೆ ಕುಳಿತುಕೊಂಡು ನೋಡುವುದು ನಿಜಕ್ಕೂ ಕಷ್ಟಕರ. ಆದರೆ ಅದನ್ನು ಮರೆಯುವಂತೆ ಮಾಡುವುದು ನಾಟಕದ ಪ್ಲಸ್ ಪಾಯಿಂಟ್! ಕಲಾಗ್ರಾಮದ ಪರಿಸರ ಕೂಡ ನಾಟಕ ನೋಡಲು ಪೂರಕವಾಗಿರುವುದು ಒಳ್ಳೆಯ ಅಂಶ. 

ಸಂಗೀತ ಸಂಯೋಜನೆ - ಮಲೆನಾಡಿನ ದೃಶ್ಯ ವೈಭವವನ್ನು ಕಳೆಗಟ್ಟುವಂತೆ ನಿರ್ಮಿಸಿದವರು, ಸಂಗೀತ ಸಂಯೋಜನೆಯಲ್ಲಿಯೂ ಕೂಡ ಅಲ್ಲಿಯದೇ ಗ್ರಾಮ್ಯ ಸಂಗೀತವನ್ನು ಅಳವಡಿಸಿಕೊಂಡಿದ್ದರೆ ಬಹಳ ಚೆನ್ನಾಗಿರುತ್ತಿತ್ತು. ಹಂಸಲೇಖರ ಸ್ವರ ಸಂಗೀತ ಸುಮ್ಮನೆ ಕೇಳಿದರೆ ಖುಷಿ ಕೊಡುತ್ತದೆಯಾದರೂ, ನಾಟಕದಲ್ಲಿ ಹಿನ್ನೆಲೆ ಸಂಗೀತವಾಗಿ ಉಪಯೋಗಿಸಿಕೊಂಡಾಗ ಅಭಾಸವಾಗಿಬಿಡುತ್ತದೆ.  ನಾಟಕಕ್ಕೂ, ಸಂಗೀತಕ್ಕೂ ಸ್ವಲ್ಪವೂ ಹೊಂದಿಕೆಯಾಗದೇ ಕಿರಿಕಿರಿಯಾಗುತ್ತದೆ.  ಸಿನೆಮಾ ಹಾಡುಗಳ ರೀತಿಯಲ್ಲಿ ಮೂಡಿ ಬಂದಿರುವ ಎಲ್ಲಾ ಹಾಡುಗಳೂ, ಮಲೆನಾಡಿನ ಪರಿಸರವನ್ನು ಆಧುನಿಕವಾಗಿಸಿ, ಪರಿಸರವನ್ನು ಕಲುಷಿತಗೊಳಿಸುತ್ತದೆ. ಕಾವೇರಿಯ ಪಾತ್ರದ ಸಂದರ್ಭದಲ್ಲಿ ಹಿನ್ನೆಲೆಯಲ್ಲಿ ತೋರಿಸುವ ನೃತ್ಯ ಕೂಡ ಅಸಂಬದ್ಧವಾಗಿ ಕಾಣುತ್ತದೆ. ಮಲೆನಾಡಿನ ಇಂಬಳಗಳನ್ನು ತೋರಿಸಿರುವ ರೀತಿ ಚಂದವಾಗಿದ್ದರೆ, ಗೊಬ್ಬರದ ಹುಳು ಅಷ್ಟೇನೂ ಆಕರ್ಷಿಸುವುದಿಲ್ಲ.

ಇನ್ನೂ ಕಾದಂಬರಿಯ ಮುಖ್ಯ ವೈಶಿಷ್ಟ್ಯವಾದ ಮಲೆನಾಡಿನ ‘ಭಾಷೆ’ ನಾಟಕದಲ್ಲಿ ಸರಿಯಾಗಿ ಕಂಡೂ ಬರದೇ ಬೇಸರವಾಗುತ್ತದೆ. ಬೆಂಗಳೂರು, ಮಂಗಳೂರು, ಮೈಸೂರು, ಮಲೆನಾಡು ಎಲ್ಲಾ ರೀತಿಯ ಸಂಭಾಷಣೆಯ ಶೈಲಿಯು ಮೂಡಿ ಬಂದು,  ಸಂಪೂರ್ಣವಾಗಿ ಕಲಸಿಹೋಗಿ, ಮನಸಿಗೆ ವಿಪರೀತವಾಗಿ ಕಿರಿಕಿರಿಯಾಗಿಬಿಡುತ್ತದೆ. ಮಲೆನಾಡಿನ ಪರಿಸರವನ್ನು ದೃಶ್ಯಿಸಲು, ಪಾತ್ರಧಾರಿಗಳ ವೇಷಭೂಷಣಗಳಿಗೆ ಗಮನ ಕೊಟ್ಟ ನಿರ್ದೇಶಕರು, ಭಾಷೆಗೇಕೆ ಒತ್ತು ಕೊಡಲಿಲ್ಲವೆಂಬ ಪ್ರಶ್ನೆ ಕಾಡುತ್ತದೆ. ಓದುವಾಗ ಮನಸ್ಸಿನಲ್ಲಿ ಮೂಡಿದ ಪಾತ್ರಗಳು, ಇಲ್ಲೀ ನಾಟಕದಲ್ಲಿ ನಟಿಸುವಾಗ ಹೊಂದಾಣಿಕೆಯಾಗದಿದ್ದದ್ದು ನನ್ನ ಕಲ್ಪನೆಯ ತಪ್ಪೇ?  ನಟಿಸಿದ ಪಾತ್ರಧಾರಿಗಳ ತಪ್ಪೇ?  ನಿರ್ದೇಶಕರದ್ದೇ?  ತಿಳಿಯಲಿಲ್ಲ.  ಕಾದಂಬರಿಯಲ್ಲಿ ಪೀಂಚಲು ಮಿಂಚಿದರೆ, ನಾಟಕದಲ್ಲಿ ‘ಐತ’, ಅಲ್ಲಿ ಮುಕುಂದಯ್ಯನಾದರೆ, ಇಲ್ಲಿ ಮಿಂಚುವ ತಿಮ್ಮಪ್ಪ ಹೆಗ್ಗಡೆ, ಕಾದಂಬರಿಯಲ್ಲಿ ಕಾಣುವ ಜಿಪುಣ ಸುಬ್ಬಣ್ಣ ಹೆಗ್ಗಡೆ, ಇಲ್ಲಿ ವಿಶಾಲ ಹೃದಯದವನಾಗಿ ಕಾಣುವುದು, ಅಲ್ಲಿ ಸಣ್ಣವನಾದರೂ ವಿಚಾರವಂತಿಕೆಯುಳ್ಳ ಧರ್ಮುವನ್ನು ಕಂಡು ಆಶ್ಚರ್ಯವೆನಿಸಿದರೆ , ನಾಟಕದಲ್ಲಿ ಹಾಲುಗಲ್ಲದ, ಹುಡುಗಾಟದ ಪುಟ್ಟ ಹುಡುಗನಾಗಿ ವಾತ್ಸಲ್ಯ ಉಕ್ಕಿಸುವುದು, ಇನ್ನೂ ಕಾದಂಬರಿಯಲ್ಲಿ ಕಂಡಂತೆಯೇ ಇರುವ ಪಾತ್ರಗಳೆಂದರೆ ಗುತ್ತಿ, ನಾಗಕ್ಕ, ನಾಗತ್ತೆ, ಚಿನ್ನಕ್ಕಳ ಅಜ್ಜಿ, ಸಾಬರು, ಐಗಳು ಅದರಲ್ಲೂ ಚೀಂಕ್ರ ಹಾಗೂ ಚಿನ್ನಕ್ಕಳ ತಂದೆಯ ಪಾತ್ರಗಳು ಕಣ್ಣಿಗೆ ಕಟ್ಟಿದಂತೆಯೇ ನಾಟಕದಲ್ಲಿ ಅದ್ಭುತವಾಗಿ ನಟಿಸಿವೆ.

ಬೃಹತ್ ಅಂದರೆ ಸುಮಾರು ೭೫೦ ಪುಟಗಳ ಕಾದಂಬರಿಯನ್ನು (ಅಷ್ಟನ್ನು ಓದಲೂ ಸುಮಾರು ದಿವಸಗಳು ಬೇಕೆಂದಿರುವಾಗ!), ಕೇವಲ ೯ ಗಂಟೆಗಳ ಅವಧಿಯ ನಾಟಕದ ಮೂಲಕ ಎಲ್ಲಾ ಜನರಿಗೂ ಅರ್ಥವಾಗುವಂತೆ ದೃಶ್ಯ ರೂಪಕ್ಕೆ ಅಳವಡಿಸುವುದು ನಿಜಕ್ಕೂ ಕಷ್ಟಸಾಧ್ಯದ ಕೆಲಸ.  ಹಾಗಿರುವಾಗ ಇದನ್ನು ತಕ್ಕಮಟ್ಟಿಗೆ ಸಾಧಿಸಿದ ಸಿ.ಬಸವಲಿಂಗಯ್ಯ ಹಾಗೂ ತಂಡದವರು ನಿಜಕ್ಕೂ ಅಭಿನಂದನಾರ್ಹರು.  ಮಲೆನಾಡಿನಲ್ಲಿಯೇ ‘ಮಲೆ, ಮಳೆ’ ಇಲ್ಲವಾಗುತ್ತಿರುವ ಈ ಗ್ಲೋಬಲೈಸೇಷನ್ ಕಾಲದಲ್ಲಿ, ಬೆಂಗಳೂರಿನಂತಹ ‘ಮೆಟ್ರೋ’ ಪರಿಸರದಲ್ಲಿ ‘ಮದುಮಗಳ’ನ್ನು ಕರೆತಂದ ಅವರ ಸಾಹಸ ಮೆಚ್ಚಬೇಕಾದದ್ದೇ!  ಬಹಳಷ್ಟು ಜನ ನಾಟಕ ವೀಕ್ಷಿಸಿದ ಮಂದಿ, ನಂತರ ಪುಸ್ತಕವನ್ನು ಓದಿದ್ದು ಅಥವಾ ಓದಬೇಕೆಂದು ಆಶಿಸಿದ್ದು! ಈ ಮೂಲಕ ಮತ್ತೊಮ್ಮೆ ‘ಮಲೆಗಳಲ್ಲಿ ಮದುಮಗಳು’ ಪುಸ್ತಕವನ್ನು ಓದುವಂತೆ ಮಾಡಿದ ಯಶಸ್ವಿ ಅವರಿಗೆ ಸಲ್ಲತಕ್ಕದ್ದು!

ಕುವೆಂಪುರವರ ಕಾದಂಬರಿಯ ರಂಗ ರೂಪಾಂತರವೆಂದು ಬಿಂಬಿಸಿದ್ದಕ್ಕಾಗಿಯೇ ಹಾಗೂ ಬಹಳಷ್ಟು ಜನರು ಕಾದಂಬರಿಯನ್ನು ಓದದೇ ಬಂದದ್ದು ನಾಟಕದ ಯಶಸ್ಸಿಗೆ ಕಾರಣವಾಯಿತೆಂದು ಹೇಳಿದರೆ ತಪ್ಪಾಗಲಾರದು. ಕಾದಂಬರಿಯನ್ನು ಓದಿ ಮುಗಿಸಿದಾಗ ಒಂದನ್ನು ಪಡೆಯಲು, ಮತ್ತೊಂದನ್ನು ಕಳೆದುಕೊಳ್ಳಲೇಬೇಕೆಂಬ ಅನಿಸಿಕೆ / ವಿಷಾದ ಮೂಡಿದರೆ, ನಾಟಕವನ್ನು ನೋಡಿ ಬರುವಾಗ ನಮಗೆ ಯಾವ ಘಟನೆಗಳೂ ಕೂಡ ಮುಖ್ಯವಲ್ಲ, ಎಲ್ಲವೂ ಕಮರ್ಶಿಯಲೈಸ್ ಆಗಿಬಿಟ್ಟಿವೆ, ನಾಟಕದ ಅನೇಕ ಮಾತುಗಳು ಕೂಡ ಚಪ್ಪಾಳೆ ಗಿಟ್ಟಿಸುತ್ತವೆ ಹೊರತು ಮನಸ್ಸಿನಲ್ಲಿ ಚಿಂತನೆಯನ್ನು ಹುಟ್ಟು ಹಾಕುವುದಿಲ್ಲವಲ್ಲ ಎಂಬ ಕಳವಳವನ್ನು ಹುಟ್ಟು ಹಾಕುವುದು ಬದಲಾದ ಮನಸ್ಥಿತಿಯೇ?  ಯಾವುದಕ್ಕೂ ಮೊದಲಿಲ್ಲ, ಕೊನೆಯಿಲ್ಲ :(

Thursday, April 25, 2013

ಕಂಬಾರರ ‘ಶಿಖರ ಸೂರ್ಯ’ - ಕುವೆಂಪು ಅವರ ‘ಮಲೆಗಳಲ್ಲಿ ಮದುಮಗಳು’


ನನಗೆ ಕುವೆಂಪು ಎಂದರೆ ಚಿಕ್ಕಂದಿನಿಂದಲೂ ಅಷ್ಟಕಷ್ಟೆ. ಅಂದರೆ ಗೌರವ ಮಿಶ್ರಿತ ಭಯ (ಸ್ವಲ್ಪ ಗೌರವ, ಜಾಸ್ತಿ ಭಯ!) ಯಾಕೆಂದರೆ ಪರೀಕ್ಷೆಗಳಲ್ಲಿ ಕುವೆಂಪು ಅವರ ಪರಿಚಯವನ್ನು ವಿವರಿಸಿ ಎಂದು ೫ ಮಾರ್ಕಿಗೆ ಪ್ರಶ್ನೆ ಇದ್ದೇ ಇರುತ್ತಿತ್ತು.  ಕುವೆಂಪು - ಇವರ ಪೂರ್ಣ ನಾಮ ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ! ಇವರ ಕಾವ್ಯ ನಾಮ ಕುವೆಂಪು. ಇವರು ಬರೆದಿರುವ ಶ್ರೀ ರಾಮಾಯಣ ದರ್ಶನಂ ಎಂಬ ಕೃತಿಗೆ ಜ್ಞಾನಪೀಠ ಪ್ರಶಸ್ತಿ ದೊರಕಿದೆ. ಇವರು ನಮ್ಮ ರಾಷ್ಟ್ರ ಕವಿ. ಇವರು ಬರೆದ ಕಾದಂಬರಿಗಳು ಮಲೆಗಳಲ್ಲಿ ಮದುಮಗಳು, ಕಾನೂರು ಸುಬ್ಬಮ್ಮ ಹೆಗ್ಗಡಿತಿ. ಇದನ್ನು ಶಾಲೆಯಲ್ಲಿ ಚಿಕ್ಕವಳಿದ್ದಾಗ ಎಷ್ಟು ಸಲ ಬಾಯಿಪಾಠ ಮಾಡಿದ್ದೇನೋ! ಗೊತ್ತಿಲ್ಲ. ಇವರ ಕವನಗಳಾದ ‘ಬಾರಿಸು ಕನ್ನಡ ಡಿಂಡಿಮವ, ಜಯ ಭಾರತ ಜನನಿಯ ತನುಜಾತೆ, ಎಲ್ಲಾದರೂ ಇರು, ಎಂತಾದರೂ ಇರು, ಓ ನನ್ನ ಚೇತನ’, ಇವೆಲ್ಲವೂ ಶಾಲೆಯಲ್ಲಿ ಪ್ರತಿಭಾಪ್ರದರ್ಶನದಲ್ಲಿ ಪ್ರತಿಯೊಬ್ಬರ ನಾಲಿಗೆಯಲ್ಲಿ ಇಷ್ಟ ಬಂದ ರಾಗದಲ್ಲಿ ನಲಿದಾಡುತ್ತಿದ್ದವು. 

ಕುವೆಂಪು ಅವರ ಕೃತಿಗಳ ಹೆಸರನ್ನು ಕೇಳಿಯೇ ಭಯಪಡುತ್ತಿದ್ದ ನಾನು, ಅವರ ಕವನಗಳಲ್ಲಿರುತ್ತಿದ್ದ ಅರ್ಥವಾಗದ ಕ್ಲಿಷ್ಥ ಪದಗಳು, ಅವರ ಮೇಲಿದ್ದ ಭಯ ಇವೆಲ್ಲವುಗಳಿಂದಾಗಿ, ಅವರ ಕೃತಿಗಳು ನನ್ನನೆಂದೂ ಆಕರ್ಷಿಸಲಿಲ್ಲ.  ತೇಜಸ್ವಿಯವರ ಕೃತಿಗಳನ್ನು ೫ ನೇ ಕ್ಲಾಸಿನಲ್ಲಿದ್ದಾಗಲೇ ಓದುತ್ತಿದ್ದ ನಾನು, ಕುವೆಂಪು ಅವರ ರಕ್ತಾಕ್ಷಿ ನಾಟಕವನ್ನು ಹೊರತುಪಡಿಸಿದರೆ, ಯಾವುದನ್ನೂ ಇದುವರೆವಿಗೂ ಓದಿಲ್ಲ. ಶಾಲೆಯ ವಾರ್ಷಿಕೋತ್ಸವದಲ್ಲಿ ಪಾತ್ರ ವಹಿಸಲಿಕ್ಕಾಗಿ ಮಾತ್ರ ‘ರಕ್ತಾಕ್ಷಿ’ ಯನ್ನು ಓದಿದ್ದದ್ದು. ಕಾಲೇಜಿನ ಸಮಯದಲ್ಲಿ ಕಾನೂರು ಸುಬ್ಬಮ್ಮ ಹೆಗ್ಗಡಿತಿ, ಮಲೆಗಳಲ್ಲಿ ಮದುಮಗಳು ಪುಸ್ತಕಗಳನ್ನು ಎರವಲು ತಂದು ಓದಿದ್ದರೂ, ಅಷ್ಟಾಗಿ ಅರ್ಥವಾಗದೇ ಅರ್ಧಕ್ಕೆ ಕೈಬಿಟ್ಟಿದ್ದೆ!  ಕುವೆಂಪು ಅವರನ್ನು ನಾನು ದೂರವಿಟ್ಟಿದ್ದರಲ್ಲಿ ನನ್ನ ಶಿಕ್ಷಕರ ಪಾಲು ಕೂಡ ಇತ್ತೆನ್ನಿ!  ನಮ್ಮ ರಸ ಋಷಿ ಕುವೆಂಪು, ಅವರ ಕೃತಿಗಳು ಅಮೋಘ ಹಾಗೇ, ಹೀಗೆ  ಎಂದೆಲ್ಲಾ ವರ್ಣಿಸಿ, ವರ್ಣಿಸಿ, ನಮ್ಮಂಥವರು ಓದುವಂಥದ್ದಲ್ಲ ಎಂಬ ಭಾವ ಚಿಕ್ಕಂದಿನಲ್ಲಿಯೇ ಮೂಡಿಬಿಟ್ಟಿತ್ತು. ಕೀಳರಿಮೆ ಉಂಟಾಗಿಬಿಟ್ಟಿತ್ತು!.

ಇತ್ತೀಚೆಗೆ ನಾನು ಕಂಬಾರರ ‘ಶಿಖರ ಸೂರ್ಯ’ ಓದಿದ್ದೆ.  ಆ ಪುಸ್ತಕದ ಬೆನ್ನುಡಿಯಲ್ಲಿ ಲೇಖಕರೊಬ್ಬರು (ಹೆಸರು ನೆನಪಿಲ್ಲ), ‘ಮಲೆಗಳಲ್ಲಿ ಮದುಮಗಳು’ ಕಾದಂಬರಿಯಷ್ಟೇ ಉತ್ಕೃಷ್ಟ ಕೃತಿ ‘ಶಿಖರ ಸೂರ್ಯ’ ಎಂದು ಹೊಗಳಿದ್ದರು. ಹಾಗಾಗಿ ಅದನ್ನೂ ಕೂಡ ಓದಲು ಭಯವಾದರೂ, ಓದುತ್ತಾ ಹೋದಂತೆ ‘ಶಿಖರ ಸೂರ್ಯ’ ಮನದಲ್ಲಿ ಅಚ್ಚಾಗಿಬಿಟ್ಟಿತು.  ನಾಲ್ಕೈದು ದಿವಸಗಳು ‘ಶಿಖರ ಸೂರ್ಯ’ ಪಾತ್ರ ನನ್ನನ್ನು ಕೂತಲ್ಲಿ, ನಿಂತಲ್ಲಿ ಬಹಳವಾಗಿ ಕಾಡಿಸಿತ್ತು. ‘ಶಿಖರ ಸೂರ್ಯ’ನ ಮಹತ್ವಾಕಾಂಕ್ಷೆ, ಚಾಣಾಕ್ಷತನ, ಪ್ರೀತಿ, ಪ್ರೇಮ, ವಾತ್ಸಲ್ಯವನ್ನು ಬದಿಗಿಟ್ಟು, ತನ್ನ ಮಹತ್ವಾಕಾಂಕ್ಷೆ ಪೂರೈಸಿಕೊಳ್ಳಲು, ಎಲ್ಲಾ ತ್ಯಾಗಕ್ಕೂ ಸಿದ್ಧನಾಗುವುದು, ಮೋಸ, ವಂಚನೆ, ಬುದ್ಧಿವಂತಿಕೆ, ಹೆಣ್ಣಿನಾಸೆ, ಕೊನೆಗೆ ತನ್ನೆಲ್ಲಾ ದುರಾಸೆ, ಮೋಸಕ್ಕೆ ತಾನೇ ಬಲಿಯಾಗುತ್ತಾನೆ.  ಆತನ ಅಂತ್ಯಕ್ಕೆ ಆತನೇ ಕಾರಣವಾಗುವುದು ಪಾತ್ರ ದೃಷ್ಠಿಯಿಂದ ದುರಂತವಾದರೂ, ಕೆಟ್ಟವರ ಅಂತ್ಯ ಮಾತ್ರ ಕೆಟ್ಟದ್ದೇ ಆಗಿರುತ್ತದೆ ಎಂಬ ತತ್ವ ಮನಸ್ಸಿಗೆ ಸಾಂತ್ವನ ನೀಡುವುದು. ಹಾಗೂ ಆತನ ಮಗಳು, ಅಳಿಯ ಒಳ್ಳೆಯತನದ ಪ್ರತೀಕಗಳಂತೆ ಕಂಡು ಬಂದು, ಕಥೆ ಸುಖಾಂತ್ಯಗೊಳ್ಳುತ್ತದೆ.  ಇಡೀ ಕಾದಂಬರಿ ಓದುವಾಗ ‘ಶಿಖರ ಸೂರ್ಯ’ ಪಾತ್ರ ರಚನೆ ಅದ್ಬುತವಾಗಿದ್ದೂ, ಮನಸ್ಸನ್ನು ಸೂರೆಗೊಂಡರೂ ಕೂಡ, ಇದೊಂದು ಕಾಲ್ಪನಿಕ ಕಾದಂಬರಿ ಮಾತ್ರ, ನಿಜ ಜೀವನದಲ್ಲಿ ಇಂಥದ್ದು ನಡೆಯಲಾರದು ಎಂಬ ಎಚ್ಚರ ಅನುಕ್ಷಣವೂ ಓದುಗರಲ್ಲಿರುವಂತೆ ಸನ್ನಿವೇಶಗಳೂ ರಚನೆಗೊಂಡಿವೆ.  ಹಾಗಾಗಿ ಓದಲು ಮುದ ನೀಡಿದರೂ, ತಲ್ಲೀನರಾಗುವುದು ಸಾಧ್ಯವಿಲ್ಲ. ಇದು ಇಡೀ ಕಾದಂಬರಿಯ ‘ಮಿತಿ’ ಯಾಗಿಬಿಡುತ್ತದೆ.

‘ಶಿಖರ ಸೂರ್ಯ’ ವನ್ನು ‘ಮಲೆಗಳಲ್ಲಿ ಮದುಮಗಳು’ ಜೊತೆ ಹೋಲಿಸಿ ನೋಡಿದ್ದಾರೆ ಎಂಬುದನ್ನು ತಿಳಿದಕೂಡಲೇ ಆ ತಕ್ಷಣವೇ ಕುವೆಂಪು ಅವರ ಆ ಪುಸ್ತಕವನ್ನು ಓದಬೇಕು ಎಂಬ ಹಪಾಹಪಿ ಶುರುವಾಯಿತು.  ಅಷ್ಟರಲ್ಲಿ ‘ಮಲೆಗಳಲ್ಲಿ ಮದುಮಗಳು’ ನಾಟಕ ಬೆಂಗಳೂರಿನಲ್ಲಿ ಪ್ರದರ್ಶಿತಗೊಳ್ಳಲು ಅನುವಾಗಿದೆ ಎಂಬ ವಿಷಯ ಈ ಸಂದರ್ಭದಲ್ಲಿ ತಿಳಿದು ಬಂದಿತು. ಎರಡು ವರ್ಷಗಳ ಹಿಂದೆ ‘ಮಲೆಗಳಲ್ಲಿ ಮದುಮಗಳು’ ಕೃತಿಯನ್ನು ಸಿ. ಬಸವಲಿಂಗಯ್ಯನವರು ರಂಗಪ್ರಯೋಗವಾಗಿ ಅಳವಡಿಸಿದ್ದಾರೆ, ಮೈಸೂರಿನ ರಂಗಾಯಣದಲ್ಲಿ ಪ್ರದರ್ಶಿತಗೊಳ್ಳುತ್ತಿದೆ, ಇಡೀ ರಾತ್ರಿ ೯ ಗಂಟೆಗಳ ಸಮಯವಂತೆ, ಬಹಳ ಚೆನ್ನಾಗಿದೆಯಂತೆ ಎಂಬುದನ್ನೆಲ್ಲಾ ಸ್ನೇಹಿತರ ಬಾಯಲ್ಲಿ ಕೇಳಿ, ಖುಷಿಗೊಂಡ ನಾನು ಇನ್ನಿಲ್ಲದಂತೆ ಆ ನಾಟಕಕ್ಕೆ ಹೋಗಲು ಪ್ರಯತ್ನ ಮಾಡಿದ್ದೆ.  ಆದರೆ ಟಿಕೇಟ್ ದೊರಕದೆ ನಿರಾಶಳಾಗಿದ್ದೆ.  ಮತ್ತೆ ಇದೀಗ ಬೆಂಗಳೂರಿನಲ್ಲಿ ಪ್ರದರ್ಶಿತಗೊಳ್ಳುತ್ತಿದೆ ಎಂದಾಗ ಮೊಟ್ಟ ಮೊದಲಿಗೆ ನಾನು ಮಾಡಿದ್ದು ಮತ್ತೊಮ್ಮೆ ಆ ಪುಸ್ತಕವನ್ನು ಓದಲು ಶುರು ಮಾಡಿದ್ದು.  ಸುಮಾರು ೭೫೦ ಪುಟಗಳ ಆ ಪುಸ್ತಕವನ್ನು ನಾನು ೩ ದಿವಸಗಳಲ್ಲಿಯೇ ಓದಿ ಮುಗಿಸಿಬಿಟ್ಟೆ!  ಅಷ್ಟು ಸರಳವಾಗಿ ಬರೆದಿದ್ದಾರೆಯೇ ಕುವೆಂಪು?  ನನಗೆ ಆಶ್ಚರ್ಯ.  ಯೋಚಿಸಿದಾಗ ಹೊಳೆದಿದ್ದು - ಇತ್ತೀಚಿಗೆ ಹೆಚ್ಚಾಗಿರುವ ನನ್ನ ಹಾಗೂ ಮಲೆನಾಡಿನ ಬಾಂಧವ್ಯ, ತೀರ್ಥಹಳ್ಳಿ ಗೆಳೆಯರೊಂದಿಗೆ ಒಡನಾಡಿ, ಮಾತಾಡಿ, ಸರಳ ಸುಲಲಿತ, ನನ್ನದೇ ಮನೆ ಭಾಷೆಯೇನೋ ಎನ್ನುವಂತಾಗಿರುವ ಅಲ್ಲಿಯ ಗೌಡ್ರು ಭಾಷೆ!, ಹೋಗಿ ಬಂದು, ಸುಲಭವಾಗಿ ಅರ್ಥವಾಗುವ ಭೌಗೋಳಿಕ ಪ್ರದೇಶಗಳು, ಹೀಗೆ... ಅನೇಕ ಕಾರಣಗಳಿಂದ ಮಲೆಗಳಲ್ಲಿ ಮದುಮಗಳು (ನಮ್ಮ ಮನೆಯ ಕಥೆಯೇನೋ ಎಂಬಂತೆ) ಆರಾಮವಾಗಿ ಓದುವಂತಾಯಿತು. ಮಲೆನಾಡಿಗರಿಗೆ ಕಥೆ, ಕವನಗಳ ಬಗ್ಗೆ ಆಸಕ್ತಿ ಹೆಚ್ಚಲು ಇಂತಹ ಕೃತಿಗಳು ಕಾರಣವಾಗಿರಬಹುದು ಎಂದು ಕೂಡ ಅನಿಸಿತು.  

‘ಶಿಖರ ಸೂರ್ಯ’ ಕ್ಕೆ ಹೋಲಿಸಿದರೆ  ‘ಮಲೆಗಳಲ್ಲಿ ಮದುಮಗಳು’ ಓದುವಾಗ ಪ್ರತಿಯೊಂದು ಪಾತ್ರವೂ ಅದ್ಭುತವಾಗಿ ರಚನೆಯಾಗಿರುವುದಲ್ಲದೆ, ಓದುತ್ತಾ ಹೋದಂತೆ ನಾವೇ ಆ ಪಾತ್ರಗಳಾಗಿರುತ್ತೇವೆ.  ನಿಧಾನವಾಗಿ ಮಲೆನಾಡಿನ ಪರಿಸರ, ಕಾಡು, ಮಳೆ, ಬೇಟೆ, ಅಲ್ಲಿನ ಒಕ್ಕಲಿಗರು, ಹೊಲೆಯರು, ಹಸಲರು, ಅಡಿಕೆ ತೋಟ, ಗುಡಿಸಲು, ಜನರ ದಿನಚರಿಯಾಗಿರುವ ಕಳ್ಳು ಕುಡಿತ, ಇವೆಲ್ಲವೂ ಮತ್ತೇರಿಸುತ್ತವೆ. ಸ್ವಲ್ಪ ಮಟ್ಟಿಗೆ ಮಲೆನಾಡಿನ ಜನಜೀವನ ಹಾಗೂ ಒಕ್ಕಲಿಗರ ಭಾಷೆಯ ಬಗ್ಗೆ ತಿಳುವಳಿಕೆ ಇದ್ದರಂತೂ, ಸಮಯ ಕಳೆದದ್ದೇ ಗೊತ್ತಾಗುವುದಿಲ್ಲ. ೧೫೦ ವರ್ಷಗಳ ಹಿಂದಿನ ಕಾಲ್ಪನಿಕ?! ‘ಕಥೆ’ ಅತ್ಯಂತ ನೈಜತೆಯಿಂದ ಕಣ್ಣ ಮುಂದೆ ಕುಣಿಯುತ್ತದೆ. ಎರಡು ಮುಖ್ಯ ಕಥೆಗಳ ನಡುವೆ, ಅಲ್ಲಲ್ಲಿ ಉಪಕಥೆಗಳು ಇಣುಕುತ್ತವೆ. ಗುತ್ತಿ, ಆತನ ನಾಯಿ ಹುಲಿಯ, ಆತ ತನ್ನ ಪ್ರೇಮಿ ‘ತಿಮ್ಮಿ’ ಯನ್ನು ಅಪಹರಿಸುವ ಪ್ರಯತ್ನ, ‘ತಿಮ್ಮಿ’ ಯನ್ನು ಮತ್ತೊಬ್ಬ ‘ಬಚ್ಚ’ ಎಂಬಾತನಿಗೆ ಮದುವೆ ಮಾಡಿಕೊಡಲು (ಆತ ಕ್ರೈಸ್ತನಾಗುವ ಹವಣಿಕೆಯಲ್ಲಿದ್ದಾನೆಂದು ತಿಳಿದು ಇಷ್ಟವಿಲ್ಲದಿದ್ದರೂ) ಆ ಊರ ಗೌಡನ ಒಕ್ಕಲಾದದಕ್ಕಾಗಿ ಒಪ್ಪಿಗೆ ನೀಡುವ ಆಕೆಯ ತಂದೆ, ತಾಯಿ, ಪರೋಕ್ಷವಾಗಿ ‘ತಿಮ್ಮಿ’ ತಪ್ಪಿಸಿಕೊಳ್ಳಲು ಸಹಾಯ ಮಾಡುವ ಆಕೆಯ ತಾಯಿ, ಈ ಮಧ್ಯೆ ನಡೆಯುವ ತಮ್ಮ ತಮ್ಮ ಆಳುಗಳಿಗಾಗಿ ನಡೆಯುವ ಅನೇಕ ರಾಜಕೀಯ (ಗೌಡರ ಮಧ್ಯೆ) ಕಾರಣಗಳು, ಅಲ್ಲಿ ಬೇರೊಬ್ಬರ ತಪ್ಪಿಗೆ ಬಲಿಯಾಗುವ ಗುತ್ತಿ, ಪೋಲೀಸರ ಭಯದಿಂದ ಆತನ ಓಡಿ ಹೋಗುವ ಹವಣಿಕೆ, ಜೊತೆಯಲ್ಲಿ ಪ್ರೀತಿಸಿ, ಮದುವೆಯಾದವಳನ್ನು ಕೂಡ ತನ್ನೊಟ್ಟಿಗೆ ಎಷ್ಟೇ ಕಷ್ಟವಾದರೂ ಕರೆದೊಯ್ಯುವ ಹಂಬಲ, ಇವೆಲ್ಲದರ ನಡುವೆ ಬೇಡ, ಬೇಡವೆಂದರೂ ತನ್ನ ಮಾಲೀಕ ಗುತ್ತಿಯನ್ನು ನಿಷ್ಟೆಯಿಂದ ಹಿಂಬಾಲಿಸುವ ಹುಲಿಯ....  ಗುತ್ತಿ ಈ ಎಲ್ಲ ಗೋಜಲುಗಳಿಂದ ತಪ್ಪಿಸಿಕೊಂಡು ತನ್ನ ಪತ್ನಿಯನ್ನು ಕರೆದುಕೊಂಡು ಊರು ಬಿಟ್ಟೇ ಹೋದರೂ, ಹುಲಿಯನನ್ನು ಕರೆದುಕೊಂಡು ಹೋಗಲಾಗದ ಆತನ ಅಸಹಾಯಕತೆ ಹಾಗೂ ಮಳೆಯಿಂದಾಗಿ ತುಂಬಿ ಹರಿಯುತ್ತಿದ್ದ ರಾಮತೀರ್ಥದಲ್ಲಿ ಈಜಲು ಸಾಧ್ಯವಾಗದೇ ಬಲಿಯಾಗುವ ಹುಲಿಯ, ಕಣ್ಣಲ್ಲಿ ನೀರು ತರಿಸುತ್ತದೆ.

ಮತ್ತೊಂದು ಮುಖ್ಯ ಕಥೆಯಾದ ಮುಕುಂದಯ್ಯ ಹಾಗೂ ಚಿನ್ನಕ್ಕನ ಮದುವೆ ಕೂಡ ಸ್ವಲ್ಪ ಮಟ್ಟಿಗೆ ಗುತ್ತಿಯ ಕಥೆಯನ್ನೇ ಹೋಲಿದರೂ, ಮುಕುಂದಯ್ಯನಿಗೆ ತನ್ನ ಚಿಕ್ಕಂದಿನ ಒಡನಾಡಿಗಳು ಹಾಗೂ ಪ್ರಸ್ತುತ ಆಳುಗಳಾದ ಐತ ಹಾಗೂ ಪೀಂಚಲುವಿನ ಸಹಾಯದಿಂದ ಅವರ ಕಥೆಯು ಸುಖಾಂತ್ಯವನ್ನು ಕಾಣುತ್ತದೆ.  ಈವೆರಡು ಕಥೆಗಳ ನಡುವೆ ಮನೆಮನೆಗಳಲ್ಲಿ ನಡೆಯುವಂತೆ ಅನೇಕ ಉಪಕಥೆಗಳು ನಡೆಯುತ್ತವೆ. ಕಾವೇರಿಯ ಅತ್ಯಾಚಾರ, ಸಾಬರುಗಳ ಅನಾಚಾರ, ಕ್ರೈಸ್ತರ ಮತಾಂತರದ ಹುನ್ನಾರ, ಶ್ರೀಮಂತ ಬ್ರಾಹ್ಮಣರ ದಬ್ಬಾಳಿಕೆ, ನಾಗಕ್ಕ, ನಾಗತ್ತೆಯ ಬದುಕಿನ ಗೋಳು, ಇವೆಲ್ಲದರ ನಡುವೆ ಐತ ಹಾಗೂ ಪೀಂಚಲುವಿನ ಪ್ರೇಮ ದಾಂಪತ್ಯ (ಇದ್ದರೇ ಹೀಗಿರಬೇಕು ಎನ್ನುವಂಥ), ಅದರಲ್ಲೂ ಪೀಂಚಲುವಿನ ಪಾತ್ರ ಮೆಚ್ಚುಗೆಯಾಗುತ್ತದೆ. ಇಲ್ಲಿನ ಪಾದ್ರಿ, ಜನರನ್ನು ಬಲವಂತವಾಗಿ ಕ್ರೈಸ್ತರಾಗಿ ಮತಾಂತರಗೊಳಿಸುತ್ತಿದ್ದನ್ನು ನೋಡಿ ಹೇಳುವ ಬಿಳಿ ಪಾದ್ರಿ (ವಿದೇಶಿ)ಯ ಮಾತುಗಳು - ಔಷಧೋಪಚಾರ, ವಿದ್ಯಾಭ್ಯಾಸ ಮೊದಲಾದ ಸಹಾಯಗಳ ಮೂಲಕ ಜನರ ಮನಸ್ಸನ್ನು ಗೆದ್ದು ತರುವಾಯವೇ ಅವರಷ್ಟಕ್ಕೇ ಅವರು ಮತಾಂತರಗೊಳ್ಳುವಂತೆ ಮಾಡಬೇಕು ಎಂಬುದು, ಇದುವರೆವಿಗೂ ನನಗೆ ಹೊಳೆಯದಿದ್ದ ಆಲೋಚನೆಯನ್ನು ಹುಟ್ಟು ಹಾಕಿತು.  ನಮ್ಮಲ್ಲಿ ದಲಿತರು, ಬಡವರು ಏಕೆ ಕ್ರೈಸ್ತರಾಗುತ್ತಿದ್ದಾರೆ? ಎಂಬುದಕ್ಕೆ ಉತ್ತರವನ್ನು ಕೂಡ ನೀಡಿತು!  ಮತ್ತೊಂದು ಅಂಶ ನನಗೆ ಕಂಡು ಬಂದದ್ದು - ಹೆಂಗಸರು ತಮ್ಮ ಕಾಮ ತೃಷೆ ತೀರಿಸಲು ಮಾತ್ರ ಎಂಬ ಗೌಡರು, ಹೊಲೆಯರೆನ್ನದೆ ಎಲ್ಲ ಗಂಡಸರ ಧೋರಣೆ! ಹೆಂಡತಿಯಲ್ಲದಿದ್ದರೆ ಕೂಡಿಕೆಯಾದರೂ ಸರೀ ಒಟ್ಟಿನಲ್ಲಿ ಹೆಣ್ಣಿನ ಸಂಗ ಸುಖಕ್ಕಾಗಿ (ಆಕೆಯ ಮನಸ್ಸನ್ನರಿಯದೆ!) ಹಂಬಲಿಸುವುದು ನನಗೊಂದಿಷ್ಟು ಕಳವಳ, ಆತಂಕ ಹುಟ್ಟಿಸಿತು. ಗೆಳೆಯನೊಬ್ಬ ದೆಹಲಿಯ ಅತ್ಯಾಚಾರವಾದಾಗ ಹೇಳುತ್ತಿದ್ದ ಮಾತುಗಳು ಬೇಡಬೇಡವೆಂದರೂ ನೆನಪಾಗಿ (ನಮ್ಮ ಸಮಾಜದಲ್ಲಿ ಯಾವತ್ತಿಗೂ ಹೆಣ್ಣು ಕಮಾಡಿಟಿ!, ಆ ಮನಸ್ಥಿತಿ ಸರಿಯಾಗದೇ ಇಂತದ್ದನ್ನು ತಡೆಯಲಾಗದು...) ದುಃಖವಾಯಿತು.

ಇವೆಲ್ಲವೂ ಬದುಕಿನಲ್ಲಿ ನಡೆಯುವಂಥದ್ದೇ, ಎಲ್ಲೂ ಉತ್ರೇಕ್ಷೆಯಾಗಲೀ, ಕಲ್ಪನೆಯಾಗಲೀ ಇಲ್ಲವೇ ಇಲ್ಲ ಎಂದು ಅನಿಸುತ್ತಿರುವಾಗಲೇ, ಮಧ್ಯೆ ಗಡ್ಡದಯ್ಯ ಎಂಬ ಪಾತ್ರವು ಕಾದಂಬರಿಯಲ್ಲಿ ಕಾಣಿಸುತ್ತದೆ. ಆತನ ಅತೀಂದ್ರಿಯ ಜ್ಞಾನ, ‘ವಿವೇಕಾನಂದರು ಭರತ ಖಂಡವನ್ನೆಲ್ಲ ಸಂಚರಿಸಿ, ಬೋಧಿಸಿ ಹಿಂದೂ ಧರ್ಮವು ಬ್ರಾಹ್ಮಣ ಪುರೋಹಿತರಿಂದ ಪಾರಾಗಿ, ಕ್ರೈಸ್ತಾದಿ ಮತ ಪ್ರಚಾರಕರಿಗೆ ದುರ್ಗಮವಾಗಿ......’ ಇತ್ಯಾದಿ ಹೇಳುವ ಮಾತುಗಳು, ಆತ ಮುಕುಂದಯ್ಯನನ್ನು ಉದ್ಧೇಶಿಸಿ, ಆತನ ವಂಶದಲ್ಲಿ ಮುಂದೆ ಹುಟ್ಟಲಿರುವ ಮಗು ರಾಮಕೃಷ್ಣ ಪಂಥವನ್ನು ಉದ್ದರಿಸುವುದು ..... ಎಂಬಿತ್ಯಾದಿ ಮಾತುಗಳು ನನಗೆ ಕಸಿವಿಸಿಯನ್ನುಂಟು ಮಾಡಿತು.  ಮನಸ್ಸಿನ ಒಂದು ಮೂಲೆಯಲ್ಲಿ, ‘ಕುವೆಂಪು’ ಅವರು ತಮ್ಮನ್ನು ಉದ್ದೇಶಿಸಿಕೊಂಡೇ ಹೀಗಂದಿರಬಹುದೇ? ಎಂಬ ಅನುಮಾನ ಕಾಡತೊಡಗಿತು.  ಎರಡೂ ಕಾದಂಬರಿಗಳು ಸುಖಾಂತ್ಯವನ್ನೇ ಕಂಡಿದ್ದರೂ ಕೂಡ, ‘ಮಲೆಗಳಲ್ಲಿ ಮದುಮಗಳು’ ಓದಿ ಮುಗಿಸಿದೊಡನೇ ಒಂದು ರೀತಿಯ ವಿಷಾದ ಮನವನ್ನು ಆವರಿಸುತ್ತದೆ. ಒಂದನ್ನು ಪಡೆಯಲು ಮತ್ತೊಂದನ್ನು ಕಳೆದುಕೊಳ್ಳುವುದು ಅವಶ್ಯ ಎಂಬ ಸತ್ಯದ ಅರಿವಾಗಿ ಸಂಕಟ ಶುರುವಾಗುತ್ತದೆ!

Friday, March 15, 2013

ಸಿಂಪಲ್ಲಾಗೊಂದು......................


ಟಿವಿಯಲ್ಲಿ ಆಗ ತಾನೇ ಪ್ರಾರಂಭಗೊಂಡಿದ್ದ ದೈನಿಕ ಧಾರಾವಾಹಿಗಳನ್ನು ಇಷ್ಟ ಪಟ್ಟು, ತಮ್ಮೆಲ್ಲಾ ಕೆಲಸ ಕಾರ್ಯಗಳನ್ನು ಬಿಟ್ಟು ನೋಡುತ್ತಿದ್ದ ಹೆಂಗಳೆಯರು, ಐಟಿ, ಬಿಟಿ ಇಂಡಸ್ಟ್ರಿಗಳಿಂದಾಗಿ ಏರು ಪೇರಾದ ಸಮಯದ ಅಭಾವ, ಜೊತೆಗೆ ಅಲ್ಪಸ್ವಲ್ಪ ಸಮಯ ದೊರೆತಾಗ ಬೇರೆ ಭಾಷೆಯ ಚಿತ್ರಗಳ ಪೈರಸಿ ಸಿಡಿಗಳನ್ನು ಮನೆಯಲ್ಲಿಯೇ ನೋಡುವ ವ್ಯವಸ್ಥೆ, ಜೊತೆಗೆ ಅದದೇ ರವಿಚಂದ್ರನ್ ಚಿತ್ರಗಳಲ್ಲಿನ  ಹೀರೋಯಿನ್ ಗಳ ಆಪಲ್?! ಹೊಕ್ಕುಳುಗಳು,  ಉಪೇಂದ್ರರ ಹುಚ್ಚುತನ, ಶಿವರಾಜ್ ಕುಮಾರ್, ರಾಧಿಕಾ ಅಣ್ಣ ತಂಗಿ ಸೆಂಟಿಮೆಂಟ್, ರಮೇಶ್ ನ ತ್ಯಾಗ ರಾಜ ಚಿತ್ರಗಳು, ಸುದೀಪ್, ದರ್ಶನ್ ನ ಲಾಂಗು ಮಚ್ಚು ಚಿತ್ರಗಳು, ಜಗ್ಗೇಶ್, ಸಾಧು ಕೋಕಿಲ ರವರ ಹಳಸಲು ಹಾಸ್ಯ ನೋಡಿ ಬೇಸತ್ತಿದ್ದ ಕನ್ನಡದ ಜನತೆ, ಚಿತ್ರಮಂದಿರಗಳತ್ತ ಬೆನ್ನು ಹಾಕಿಬಿಟ್ಟಿದ್ದರು.  

ಇಂಥ ಸಮಯದಲ್ಲಿ ರಿಲೀಸ್ ಆದ ‘ಮುಂಗಾರು ಮಳೆ’ ಚಿತ್ರ, ಛಾಯಾಗ್ರಹಣದಿಂದ ಹಿಡಿದು ಹಾಡುಗಳ ತನಕವೂ ಎಲ್ಲವೂ ಹೊಸತನದಿಂದ ಕೂಡಿತ್ತು. ಅನಂತನಾಗ್ ಅವರ ಸಹಜ ನಟನೆ, ಗಣೇಶ್ ನಗುನಗುತ್ತಲೇ ಮಾತಾಡುವ ಪರಿ, ಅದಕ್ಕೆ ತಕ್ಕಂತೆ ಇದ್ದ ಸಂಭಾಷಣೆ,  ಬಳಸಿಕೊಂಡಂತಹ ಪ್ರಾಪ್ಸ್ (ಮೊಲ, ಮಳೆ, ಮುಂತಾದವು), ಪೋಷಕ ಪಾತ್ರದವರ ಅದ್ಭುತ ನಟನೆ ಎಲ್ಲವೂ ಕೂಡ ‘ಮುಂಗಾರು ಮಳೆ’ ಒಂದು ದೃಶ್ಯಕಾವ್ಯದಂತೇ ಪ್ರತಿಯೊಬ್ಬರನ್ನೂ ಮೋಡಿ ಮಾಡಿಬಿಟ್ಟಿತು. ಇಷ್ಟೊಂದು ಮಂದಿ ವೀಕ್ಷಕರು ಇಷ್ಟು ದಿವಸ ಎಲ್ಲಿ ಅಡಗಿದ್ದರು? ಎಂದು ಕನ್ನಡ ಚಿತ್ರರಂಗ ಮೂಗಿನ ಮೇಲೆ ಬೆರಳಿಟ್ಟು ನೋಡಿತ್ತು. ನಿರ್ದೇಶಕ ಮಾತ್ರ ಈ ಚಿತ್ರದ ಅದ್ಭುತ ಯಶಸ್ಸಿಗೆ ಕಾರಣವಾಗಿರಲಿಲ್ಲ.  ಈ ಚಿತ್ರಕ್ಕಾಗಿ ದುಡಿದ ಪ್ರತಿಯೊಬ್ಬರೂ ಕೂಡ ಒಬ್ಬರಿಗೊಬ್ಬರು ಪೂರಕವಾಗಿ ಕೆಲಸ ಮಾಡಿದ್ದರು. ಈ ಚಿತ್ರವು ಪ್ರಪ೦ಚದಾದ್ಯಂತ ಮಲ್ಟಿಪ್ಲೆಕ್ಸ್ ಗಳಲ್ಲಿ ಒಂದು ವರ್ಷ! ಓಡಿದ ಮೊದಲ ಚಿತ್ರ ಎಂಬ ಹೆಸರು ಕೂಡ ಗಳಿಸಿಕೊಂಡುಬಿಟ್ಟಿತು. ಈಗಲೂ ಕೂಡ ಈ ಚಿತ್ರವನ್ನು ನೋಡುತ್ತಿದ್ದರೆ ಯಾವುದಾದರೂ ಸಾಹಿತ್ಯವನ್ನು ಓದುತ್ತಿರುವ ಭಾಸವಾಗುತ್ತದೆ.  ಚಿತ್ರದಷ್ಟೇ ಪ್ರಖ್ಯಾತಿಯಾಗಿದ್ದು ಅದರ ಮೇಕಿಂಗ್ ಬಗೆಗಿನ ಪುಸ್ತಕ. ಇನ್ನು ಮುಂದೆ ಕನ್ನಡ ಚಿತ್ರರಂಗದವರನ್ನು ಹಿಡಿಯುವವರೇ ಇಲ್ಲ ಎನ್ನುವಂಥ ಆಶಾಭಾವನೆಯನ್ನು ಈ ಚಿತ್ರ ಹುಟ್ಟುಹಾಕಿದ್ದಂತೂ ಸುಳ್ಳಲ್ಲ. 

ದುರಂತವೆಂದರೆ ಮುಂಗಾರು ಮಳೆ ಚಿತ್ರ ರಿಲೀಸ್ ಆಗಿ ೬, ೭ ವರ್ಷಗಳು ಕಳೆದರೂ ಕೂಡ ಅಂತಹದೊಂದು ಘಟನೆ ಕನ್ನಡ ಚಿತ್ರರಂಗದಲ್ಲಿ ಪುನರಾವರ್ತನೆಯಾಗದೇ ಇದ್ದದ್ದು, ಅಂತಹದೊಂದು ಚಮತ್ಕಾರಕ್ಕಾಗಿ ಈಗಲೂ ಹಗಲಿರುಳು ಪ್ರಯತ್ನ ಪಡುತ್ತಿರುವ ಕನ್ನಡ ನಿರ್ಮಾಪಕ, ನಿರ್ದೇಶಕರು! ಆದರೆ ಪರಿಸ್ಥಿತಿ ಮಾತ್ರ ಶೋಚನೀಯ. ಅಲ್ಲೊಂದು, ಇಲ್ಲೊಂದು ಆಶಾದಾಯಕ ಬೆಳವಣಿಗೆ ಕಂಡು ಬಂದರೂ ಕೂಡ, ಯಾರಿಗೂ ಕೂಡ ‘ಮುಂಗಾರು ಮಳೆ’ ಎಫೆಕ್ಟ್ ನಿಂದ ಹೊರಗೆ ಬರಲಾಗಲಿಲ್ಲ. ನಮ್ಮ ಸಿನೆಮಾರಂಗದಲ್ಲೊಂದು ಮೂಢನಂಬಿಕೆ. ಉದಾಹರಣೆಗೆ  ಬುಧವಾರ ಚಿತ್ರದ ಶೂಟಿಂಗ್ ಶುರುವಾಗಿದ್ದು, ಆ ಚಿತ್ರ ೧೦೦ ದಿವಸಗಳು ಓಡಿಬಿಟ್ಟರೆ, ಇನ್ನು ಮುಂದೆ ಆ ನಿರ್ಮಾಪಕ, ನಿರ್ದೇಶಕ, ನಟ, ನಟಿಯರು ತಮ್ಮ ಮುಂದಿನ ಚಿತ್ರಗಳನ್ನೆಲ್ಲಾ ಬುಧವಾರವೇ ಶುರು ಮಾಡುತ್ತಾರೆ, ಅಥವಾ ಆ ಹೀರೋಯಿನ್ ಳ ಐಟಮ್ ಡಾನ್ಸ್ ಇದ್ದು ಆ ಚಿತ್ರ ಸಕ್ಸಸ್ ಆದರೆ, ಇನ್ನು ಮುಂದಿನ ಚಿತ್ರಗಳಲ್ಲಿ ಬೇಕಂತಲೇ ಆಕೆಯ ನೃತ್ಯವನ್ನು ತುರುಕುತ್ತಾರೆ.... ಹೀಗೆ.  ಮುಂಗಾರು ಮಳೆ ಚಿತ್ರದ ಅತ್ಯದ್ಭುತ ಯಶಸ್ಸಿನಿಂದಾಗಿ ಕನ್ನಡ ಚಿತ್ರರಂಗದಲ್ಲಿ ಈ ಮೊದಲೇ ಇದ್ದ ಈ ಮೂಢನಂಬಿಕೆಗೆ ಇಂಬು ಸಿಕ್ಕಿ, ಆ ಚಿತ್ರದಲ್ಲಿದ್ದ ಡೈಲಾಗ್ಸ್ ಆಗಬಹುದು ಅಥವಾ ಹಾಡುಗಳಾಗಬಹುದು, ನಟ, ನಟಿ, ನಿರ್ದೇಶಕರಾಗಿರಬಹುದು, ಈ ಕಾರಣಕ್ಕಾಗಿಯೇ ಆ ಚಿತ್ರಕ್ಕೆ ಯಶಸ್ಸು ಸಿಕ್ಕಿದೆಯೆಂದು ತಮಗನ್ನಿಸಿದ ಕಾರಣಗಳನ್ನಿಟ್ಟುಕೊಂಡು ಈಗಲೂ ಅದರ ನಿಟ್ಟಿನಲ್ಲೇ ತಯಾರಾಗುತ್ತಿರುವ ಚಿತ್ರಗಳು! ಅದರಲ್ಲೊಂದು ‘ಸಿಂಪಲ್ಲಾಗೊಂದು ಲವ್ ಸ್ಟೋರಿ’!

ಸಾಮಾಜಿಕ ತಾಣದಲ್ಲಿ ಮೊದಲಿಗೆ ‘ಕಿರು ಚಿತ್ರ’ ದಂತೆ ಟ್ರೇಲರ್ ರಿಲೀಸ್ ಮಾಡಿ, ಅದರ ಅತ್ಯದ್ಭುತ ಯಶಸ್ಸಿನಿಂದ ಸ್ಪೂರ್ತಿಗೊಂಡು, ತಯಾರಾದ ಈ ಚಿತ್ರ, ಹೊಸದೊಂದು ಟ್ರೆಂಡ್ ಹುಟ್ಟು ಹಾಕಿತು. ಫೇಸ್ ಬುಕ್ ವಾಲ್ ಗೆ ಅಂಟಿಕೊಂಡಿರುವ ಜನರು ಚಿತ್ರದ ಟ್ರೇಲರ್ ಅನ್ನು ಮುಗಿಬಿದ್ದು ನೋಡಿ, ತಾ ಮುಂದೆ, ನಾ ಮುಂದೆ ಎಂಬಂತೆ ಶೇರ್ ಮಾಡಿದರು. ಚಿತ್ರದ ಮುಹೂರ್ತ ಶುರುವಾಗುವ ಮೊದಲೇ ಯಶಸ್ಸಾಗುವ ಎಲ್ಲಾ ಲಕ್ಷಣಗಳು ಈ ಮೂಲಕ ಕಂಡುಬಂದಿತು. ಟ್ರೇಲರ್ ನಲ್ಲಿದ್ದ ಪಟಾಕಿಯಂಥ ಡೈಲಾಗ್ಸ್, ಚಿನಕುರಳಿಯಂಥ ನಾಯಕ, ನಾಯಕಿ, ಒಳ್ಳೇ ಕ್ಯಾಮೆರಾ ವರ್ಕ್ ಎಲ್ಲವೂ ಕೂಡ ಚಿತ್ರದ ಬಿಡುಗಡೆಯಾಗುವ ಮುನ್ನವೇ, ಚಿತ್ರ ಎಂದು ಬಿಡುಗಡೆಯಾದೀತೋ? ಎಂಬ ಕಾತುರವನ್ನು ಪ್ರೇಕ್ಷಕರಲ್ಲಿ ಉಂಟು ಮಾಡಿತು. ತಂಡದಲ್ಲಿ ಪ್ರತಿಯೊಬ್ಬರೂ ಹೊಸಬರಾಗಿದ್ದರಿಂದ ಸಾಮಾಜಿಕ ತಾಣಗಳನ್ನು ತಮ್ಮ ಪಬ್ಲಿಸಿಟಿಗಾಗಿ ಬಳಸಿಕೊಂಡಿದ್ದು, ಆ ಮೂಲಕ ಕನ್ನಡ ಚಿತ್ರರಂಗಕ್ಕೆ ಆಶಾದಾಯಕ ಬೆಳವಣಿಗೆಯನ್ನು ಉಂಟು ಮಾಡಿದ್ದು, ಎಲ್ಲವನ್ನೂ ಗಮನಿಸಿ ನೋಡಿದಾಗ ಈ ಚಿತ್ರತಂಡದ ಶ್ರಮಕ್ಕೆ ಅಭಿನಂದನೆಯನ್ನು ಸಲ್ಲಿಸಲೇಬೇಕು. ತಮಗೆ ದೊರೆತ ಈ ಅಭೂತ ಪೂರ್ವ ಬೆಂಬಲವನ್ನು ಈ ಚಿತ್ರತಂಡದವರು ಒಂದಿಷ್ಟು ಪ್ರಯತ್ನ ಪಟ್ಟಿದ್ದರೆ, ಕನ್ನಡ ಚಿತ್ರರಂಗದಲ್ಲಿ ಮುಂಗಾರು ಮಳೆಯಂತೆ ಮತ್ತೊಂದು ಪವಾಡ ನಡೆಯುತ್ತಿತ್ತು. ವಿಪರ್ಯಾಸವೆಂದರೆ, ಚಿತ್ರವು ‘ಮುಂಗಾರು ಮಳೆ ಭಾಗ ೨’ ರಂತೆ ಕಾಣುವುದು!.  

ಮುಂಗಾರು ಮಳೆ ಚಿತ್ರದಲ್ಲಿ ನಾಯಕನ ಪ್ರೀತಿ ಸೋತು, ನಾಯಕಿ ಮತ್ತೊಂದು ಮದುವೆಯಾಗುವ ಸಂದರ್ಭದಲ್ಲಿ,  ‘ಮೊಲ’ ಸತ್ತಾಗ ಮಣ್ಣು ಮಾಡಿ ಹೊರಡುವ ನಾಯಕ ಎಲ್ಲಿಗೆ ಹೋದ? ಎಂದೇನಾದರೂ ಕನ್ನಡ ಪ್ರೇಕ್ಷಕರು ತಲೆಕೆಡಿಸಿಕೊಂಡಿದ್ದರೆ, ಅದಕ್ಕೆ ಉತ್ತರವಾಗಿ ಈ ಚಿತ್ರದಲ್ಲಿ ತಂಗಿಯ ಬಲವಂತಕ್ಕಾಗಿ, ಮತ್ತೊಬ್ಬ ನಾಯಕಿಯ ಮನೆ ಮುಂದೆ ಪ್ರೊಪೋಸ್ ಮಾಡಲು ಕಾಣಿಸಿಕೊಳ್ಳುತ್ತಾನೆ. ನಾಯಕನ ತಂಗಿ ‘ರೇಡಿಯೋ ಜಾಕಿ’. ಈಗಾಗಲೇ ಎಲ್ಲ ದೃಶ್ಯಗಳನ್ನು ತೆರೆಯ ಮೇಲೆ ನೋಡಿದ್ದರೂ, ಮತ್ತೊಮ್ಮೆ ಆಕೆಯ ಬಾಯಲ್ಲಿ ಚಿತ್ರದಲ್ಲಿ ಏನಾಗುತ್ತಿದೆ? ಎಂಬುದನ್ನು ನಿರ್ದೇಶಕರು ಹೇಳಿಸುತ್ತಾರೆ! ನಾಯಕ ರೇಡಿಯೋ ಜಾಕಿಯ ಅಣ್ಣನಾಗಿರುವುದರಿಂದಲೋ ಏನೋ?  ಪ್ರತಿಯೊಂದು ದೃಶ್ಯಗಳು ವಾಚ್ಯವಾಗಿಬಿಡುತ್ತವೆ. ಸನ್ನಿವೇಶಕ್ಕೂ, ಸಂಭಾಷಣೆಗೂ ಸಂಬಂಧವೇ ಇಲ್ಲದೇ, ಪ್ರತಿಯೊಂದು ವಾಕ್ಯ ರಚನೆಯನ್ನೂ ಪಂಚಿಂಗ್ ಆಗಿಸುವ ಯತ್ನದಲ್ಲಿ, ಶಿಳ್ಳೆ ಪಡೆಯುವ ಪ್ರಯತ್ನದಲ್ಲಿ, ಯಾವ ದೃಶ್ಯಗಳೂ ಕೂಡ ಮನಸ್ಸಿನಲ್ಲಿ ಅಚ್ಚೊತ್ತುವುದಿಲ್ಲ. ಇದರ ಜೊತೆಗೆ ನಾಯಕನ ಮನಸ್ಸಿನ ಆಲೋಚನೆಗಳೆಲ್ಲವನ್ನೂ ವಾಚ್ಯವಾಗಿಸಿರುವುದು ಅಸಹನೀಯವಾಗಿಬಿಡುತ್ತದೆ. ದೃಶ್ಯಮಾಧ್ಯಮಗಳ ಔಚಿತ್ಯವೇನು? ಎಂದು ಪ್ರಶ್ನಿಸಿಕೊಳ್ಳುವಂತೆ ಮಾಡಿಬಿಡುತ್ತದೆ. ರೇಡಿಯೋ ನಾಟಕಗಳಿಗೂ, ಈ ಚಿತ್ರಕ್ಕೂ ವ್ಯತ್ಯಾಸವೇ ಇಲ್ಲವೆನಿಸಿ ಕಿರಿಕಿರಿಯಾಗುತ್ತದೆ. ಉದಾಹರಣೆಗೆ - ಈ ಚಿತ್ರದ ದೃಶ್ಯವೊಂದರಲ್ಲಿ ನಾಯಕಿ, ನಾಯಕನ ಕೈ ಅಕಸ್ಮಾತ್ತಾಗಿ ಹಿಡಿಯುತ್ತಾಳೆ.  ಆಗ ಆತನಿಗೆ ರೋಮಾಂಚನವಾಗುತ್ತದೆ.  ಅದನ್ನು ದೃಶ್ಯರೂಪದಲ್ಲಿಯೇ, ನಟನೆಯಲ್ಲಿಯೇ  ತೋರಿಸಲು ಸಾಧ್ಯ.  ಆದರೆ ಬ್ಯಾಕ್ ಗ್ರೌಂಡ್ ನಲ್ಲಿ ಅದನ್ನು ಕೂಡ ವಾಚ್ಯವಾಗಿಸುತ್ತಾರೆ.   

ನಾಯಕ ಆಗಾಗ ‘ಮುಂಗಾರು ಮಳೆ’ ಯ ಭಾಷಣೆ ಅಥವಾ ಚಿತ್ರದ ಸನ್ನಿವೇಶಗಳನ್ನು (ಉದಾ - ತನ್ನ ಹಳೆಯ ಪ್ರೇಯಸಿ, ತನ್ನ ಎದೆಯ ಮೇಲೆ ಕಾಲಿಟ್ಟು ಹೋದಳು! / ಚಿತ್ರದ ನಾಯಕಿಯ ಹೆಸರು ‘ನಂದಿನಿ’ ಎನ್ನುತ್ತಾ, ‘ಬಂಧನ ಹಾಗೂ ಮುಂಗಾರು ಮಳೆಯ ನಾಯಕಿಯರ ಹೆಸರು ಕೂಡ ನಂದಿನಿ ಆಗಿತ್ತು ಎಂದು ನೆನಪಿಸುತ್ತಾ, ಲೇವಡಿ ಮಾಡುವುದು ಹೀಗೆ.... ದೃಶ್ಯಗಳಲ್ಲೂ ಬೇಕಿದ್ದರೂ, ಬೇಡದಿದ್ದರೂ ಸುಮ್ಮನೆ ಮಳೆಯ ದೃಶ್ಯಗಳನ್ನು ತೋರಿಸುವುದು, ‘ಪಂಚರಂಗಿ’, ‘ಡ್ರಾಮಾ’ ಮುಂತಾದ ಚಿತ್ರಗಳಲ್ಲಿ ಬ್ಯಾಕ್ ಗ್ರೌಂಡ್ ನಲ್ಲಿ ಭಾಗವತರ ಹಾಗೇ, ಸೂತ್ರಧಾರಿಯ ಹಾಗೇ ಮಾತನಾಡಿದ ಸಂಭಾಷಣೆಗಳೂ, ಯಥಾವತ್ತಾಗಿ ಅದೇ ಶೈಲಿಯಲ್ಲಿ ಈ ಚಿತ್ರದಲ್ಲಿ ಪ್ರತಿಯೊಂದು ಸನ್ನಿವೇಶಗಳಲ್ಲೂ ಮರುಕಳಿಸುತ್ತವೆ.  ಬಹುಶಃ ಪ್ರೇಕ್ಷಕರಿಗೆ ‘ಸ್ವಗತ’ ಅರ್ಥವಾಗುವುದಿಲ್ಲ ಎಂದೋ? ಅಥವಾ ತಪ್ಪಾಗಿ ತಿಳಿದುಕೊಂಡರೆ? ಎಂದೋ ನಿರ್ದೇಶಕರು ಭಾವಿಸಿರಬಹುದು.  ಕಥೆಗೆ ಸಂಬಂಧವಿಲ್ಲದೇ ಇರುವ ದೃಶ್ಯಗಳನ್ನು, ಬೇಡದಿರುವ ದೃಶ್ಯಗಳನ್ನು ಅನಗತ್ಯವಾಗಿ ತುರುಕಿರುವುದು (ನಾಯಕಿ ಮಶ್ರೂಮ್ ಬೆಳೆಯುವುದು, ‘ಇಂತಿ ನಿನ್ನ ಪ್ರೀತಿಯ’ ಚಿತ್ರದಲ್ಲಿಲ್ಲದ ತುಣುಕುಗಳನ್ನು ಆ ಚಿತ್ರದ್ದು ಎಂಬಂತೆ ತೋರಿಸುವುದು...ಹೀಗೆ).  ಕಥೆ, ಸಂಭಾಷಣೆ, ನಿರ್ದೇಶನ, ಛಾಯಾಗ್ರಹಣ ಎಲ್ಲದರಲ್ಲೂ ಕೂಡ (ನಾಯಕ, ನಾಯಕಿಯ ನಟನೆಯ ಹೊರತು) ಯೋಗರಾಜ ಭಟ್ಟರನ್ನು ತದ್ರೂಪು ಅನುಕರಿಸಿರುವುದು ವಿಷಾದನೀಯ.

ಹಿಂದೆ ಒಮ್ಮೆ ವಸುಧೇಂದ್ರ ಅವರು ಕನ್ನಡ ಚಿತ್ರಗಳ ಬಗ್ಗೆ ಮಾತನಾಡುತ್ತಾ -‘ದೃಶ್ಯ ಮಾಧ್ಯಮಗಳಲ್ಲಿ ಒಂದಿಷ್ಟು ಮೌನವಿರಬೇಕು. ಆಗಲೇ ಆ ಚಿತ್ರವು ನಮ್ಮೊಂದಿಗೆ ಸಂಭಾಷಿಸಲು ಸಾದ್ಯ.  ಆದರೆ ನಮ್ಮ ಕನ್ನಡ ಚಿತ್ರಗಳು ತುಂಬಾ ವಾಚ್ಯವಾಗಿಬಿಟ್ಟಿವೆ. ಪ್ರೇಕ್ಷಕರಿಗೆ ಯಾವುದನ್ನು ಫೀಲ್ ಮಾಡಲು ಸಾಧ್ಯವಿಲ್ಲದಂತಾಗಿದೆ’ ಎಂದಿದ್ದರು.  ಈ ಚಿತ್ರವನ್ನು ನೋಡುತ್ತಿದ್ದಂತೆ, ವಸುಧೇಂದ್ರ ಅವರ ಮಾತುಗಳು ಅಕ್ಷರಶಃ ನಿಜವೆನಿಸುತ್ತದೆ. ಚಿತ್ರಕಥೆಯ ದೃಶ್ಯಗಳಿಗೆ ತಾರ್ಕಿಕ ಕಾರಣಗಳಿಲ್ಲದೆ, ಮುಂಜಾನೆ ಎದ್ದೊಡನೆ ಎಲ್ಲವನ್ನೂ ಮರೆಯುವ ನಾಯಕಿಯಂತೆಯೇ, ಪ್ರೇಕ್ಷಕರು ಕೂಡ ಥಿಯೇಟರ್ ನಿಂದ ಆಚೆ ಬಂದೊಡನೆಯೇ ಎಲ್ಲವನ್ನೂ ಮರೆತುಬಿಡುವುದರಲ್ಲಿ ಆಶ್ಚರ್ಯವಿಲ್ಲ.  ಆದರೆ ತಲೆಯ ಮೇಲೆ ಒಡೆದಂತೆ ಸಂಭಾಷಣೆಗಳೂ, ಪ್ರೇಕ್ಷಕರ ಕಿವಿಗಳಲ್ಲಿ,  ನಿದ್ದೆಯಲ್ಲಿಯೂ, ಕನಸಿನಲ್ಲಿಯೂ ಮೊಳಗುತ್ತಲೇ ಇರುವುದು ಚಿತ್ರದ ಪ್ಲಸ್ ಪಾಯಿಂಟೋ, ನೆಗೆಟಿವ್ ಪಾಯಿಂಟೋ ಅರ್ಥವಾಗದೇ, ಕಕ್ಕಾಬಿಕ್ಕಿಯಾಗುವ ಸರದಿ ಕನ್ನಡ ಪ್ರೇಕ್ಷಕರಿಗೆ! :-) ಅತಿ ನಿರೀಕ್ಷೆ ಹುಟ್ಟಿಸಿದ್ದ ‘ಸಿಂಪಲ್ಲಾಗೊಂದು ಲವ್ ಸ್ಟೋರಿ’, ಚಿತ್ರಕಥೆಯಲ್ಲಿ ಸಿಂಪಲ್ ಆಗಿಬಿಡುವುದು, ಚಿತ್ರದ ಸೋಲು :( 

Sunday, February 24, 2013

ಪ್ರೇಮವೇ ದೈವ, ಪ್ರೇಮವೇ ಜೀವ ಎನ್ನುವ ಗೊಂಬೆಗಳ ಲವ್


ಸಿನೆಮಾ ಆಗಬಹುದು, ಸಾಹಿತ್ಯ ಆಗಬಹುದು, ನಾಟಕ ಆಗಬಹುದು ಈ ಯಾವುದೇ ಕಲಾ ಮಾಧ್ಯಮಗಳೂ ಕೂಡ ವೀಕ್ಷಕರಿಗೆ ಒಂದೊಂದು ರೀತಿಯಲ್ಲಿ ಕಥೆ ಹೇಳುತ್ತಾ ಹೋಗುತ್ತವೆ. ಕಥಾವಸ್ತುವಿನಲ್ಲಿ ಹೊಸತನವಿಲ್ಲದಿದ್ದರೂ, ನಮಗೆ ಇಷ್ಟವಾಗುವುದು ಅದರ ನಿರೂಪಣೆಯಲ್ಲಿ.  ಮಹಾಭಾರತ ಕಥೆಯನ್ನು ಚಿಕ್ಕಂದಿನಿಂದ ಕೇಳಿದ್ದರೂ ಕೂಡ, ಭೈರಪ್ಪನವರ ‘ಪರ್ವ’ ಓದಿದಾಗ ನಮಗೆ ಇಡೀ ಕಥಾವಸ್ತುವೇ ಹೊಸದಂತೆ ಕಾಣುವುದು ಸುಳ್ಳಲ್ಲ. ಪ್ರತಿಯೊಬ್ಬ ಕಲಾವಿದ ಕೂಡ ತನಗೆ ಒಗ್ಗುವ ಕಲಾಪ್ರಕಾರದಲ್ಲಿ ವೀಕ್ಷಕರಿಗೆ ತನ್ನ ಕಲ್ಪನೆಯನ್ನು, ತನ್ನ ಅನುಭವಗಳನ್ನು ಉಣಬಡಿಸಲು ಪ್ರಯತ್ನಿಸುತ್ತಾನೆ. ಅದರ ರುಚಿ ಪ್ರತಿಯೊಬ್ಬರಿಗೂ ಇಷ್ಟವಾದರೆ ಆತ ಗೆದ್ದಂತೆ! ಆದರೆ ಹಾಗಾಗಲು ಬಹಳ ಕಷ್ಟ,  ಒಬ್ಬರಿಗೆ ಸಕ್ಕರೆ ಕಡಿಮೆಯಾದಂತೆ, ಮತ್ತೊಬ್ಬರಿಗೆ ಉಪ್ಪು ಹೆಚ್ಚಾದಂತೆ.... ಹೀಗೆ...  ಲೋಕೋಭಿನ್ನರುಚಿಃ :-)  
   
ಎಲ್ಲಾ ಪಶು, ಪಕ್ಷಿ, ಪ್ರಾಣಿಗಳಲ್ಲಿಯೂ ಅಮ್ಮನಿಗೊಂದು ವಿಶಿಷ್ಠ ಸ್ಥಾನವಿದೆ.  ನಮ್ಮನ್ನು ಹೆತ್ತು, ಪೊರೆಯುವ ಆಕೆ, ತನಗೆ ಎಷ್ಟೇ ಕಷ್ಟವಿದ್ದರೂ, ತನ್ನ ಮಕ್ಕಳ ಕಣ್ಣಲ್ಲಿ ಖುಷಿಯನ್ನು ಕಾಣಬಯಸುವವಳು, ಆ ಖುಷಿಯನ್ನು ಕಂಡೂ ತನ್ನೆಲ್ಲಾ ದುಃಖ ದುಮ್ಮಾನಗಳನ್ನು ಮರೆಯುವವಳು ‘ಅಮ್ಮ’. ಹಾಗೆಂದೇ ‘ಕೆಟ್ಟ ಮಗನಿರಬಹುದು, ಕೆಟ್ಟ ತಾಯಿಯೆಂದಿಗೂ ಇರಲು ಸಾಧ್ಯವಿಲ್ಲ’ ಎಂಬ ಮಾತುಗಳಿಂದ ಹಿಡಿದು ತಾಯಿಗಿಂತ ಬೇರೆ ದೇವರಿಲ್ಲ, ಬೇರೆ ಬಂಧುವಿಲ್ಲ ಎಂಬ ಮಾತುಗಳೂ ತಾಯಿಯ ಹಿರಿಮೆಯನ್ನು ಎತ್ತಿ ಹಿಡಿಯುತ್ತವೆ.  ನಮ್ಮ ಸಿನೆಮಾಗಳಲ್ಲಿಯೂ ಕೂಡ ಗಂಡು, ಹೆಣ್ಣಿನ ಪ್ರೇಮ ತೋರಿಸುವಂತೆಯೇ, ತಾಯಿಯ ವಾತ್ಸಲ್ಯದ ಕುರಿತಾಗಿ ಬೇಕಾದಷ್ಟು ಸಿನೆಮಾಗಳು ಬಂದಿವೆ.  ಅಮ್ಮ ನೀನೇನೇ ಅಂದರೂ ನೀ ನನ್ನ ದೇವರು ಎಂಬ ‘ಅಣ್ಣಯ್ಯ’ ಚಿತ್ರದಿಂದ ಹಿಡಿದು, ಮೈ ಮದರ್ ಇಂಡಿಯಾ ಎಂಬ ಕಲಿಯುಗ ಭೀಮ ಚಿತ್ರದವರೆಗೂ, ಅಮ್ಮ ಎಂದರೆ ಏನೋ ಹರುಷವೂ, ಅಮ್ಮ ನೀನು ನಕ್ಕರೆ ಎಂಬ ಹಾಡುಗಳಿಂದ ಹಿಡಿದು,  ಸಾವೇ ಬಂದರೂ, ಮಣ್ಣೇ ಆದರೂ ತಾಯಿ ಪ್ರೀತಿಗೆಂದೂ ಕೊನೆ ಇಲ್ಲ, ತಾಯೀನೇ ಎಲ್ಲಾ ಎಂಬ ಜೋಗಿ ಚಿತ್ರದ ಹಾಡಿನ ತನಕ ತಾಯಿಯ ಮಹಿಮೆಯನ್ನು ಸಾರುವ ಅನೇಕಾನೇಕ ಚಿತ್ರಗಳು ಬಂದಿವೆ.  ಬಾಕ್ಸ್ ಆಫೀಸಿನಲ್ಲಿ ಗೆದ್ದಿವೆ. ಈ ನಿಟ್ಟಿನಲ್ಲಿ ಕಥಾವಸ್ತು ಹಳತಾದರೂ ಕೂಡ, ಈ ‘ಅಮ್ಮ’ ಎಂಬ ಎಮೋಷನ್ ಬಳಸಿಯೇ ಹೊಸತನದಲ್ಲಿ ನಿರೂಪಿತವಾಗಿರುವ ಚಿತ್ರ ‘ಗೊಂಬೆಗಳ ಲವ್’. 

ಸಾಹಿತ್ಯದಲ್ಲಿಯಾದರೆ ನಾವು ನಮ್ಮ ಕಲ್ಪನೆಗಳನ್ನು ಪುಂಖಾನುಪುಂಖವಾಗಿ ಪುಟಗಟ್ಟಲೆ ಹರಿಯಬಿಡಬಹುದು. ಓದುಗರಿಗೆ ಕೂಡ ತಮಗೆ ಸಮಯವಿದ್ದಾಗ, ತಮ್ಮ ಕಲ್ಪನೆಯಲ್ಲಿ ದೃಶ್ಯಗಳನ್ನು ಮೂಡಿಸಿಕೊಂಡು ಓದಬಹುದು. ನಾಟಕಗಳಲ್ಲಿ ಪಾತ್ರಗಳು ವೀಕ್ಷಕರ ಕಣ್ಣಮುಂದಿರುತ್ತವೆ. ಪಾತ್ರಗಳ ಮಾತುಗಳಲ್ಲಿಯೇ ಇಡೀ ಸನ್ನಿವೇಶವನ್ನು ತೋರಿಸಬೇಕಾಗುತ್ತದೆ. ಮಾತುಗಳಲ್ಲಿಯೇ ಅರಮನೆ ಕಟ್ಟುವುದು ನಾಟಕಗಳಿಗೆ ಅವಶ್ಯ. ಆದರೆ ಸಿನೆಮಾಗಳಿಗೆ ನಾಟಕಗಳಂತೆ ಇತಿಮಿತಿಯಿಲ್ಲ, ಸಾಹಿತ್ಯಗಳಂತೆ ಸಮಯವಿಲ್ಲ.  ಸಿನೆಮಾಗಳು ದೃಶ್ಯಗಳನ್ನು ಚಿತ್ರಿಸುವುದರ ಮೂಲಕ ಕಥೆಯನ್ನು ಹೇಳಬೇಕು. ಇದು ಪ್ಲಸ್ ಪಾಯಿಂಟ್ ಹಾಗೂ ನೆಗೆಟಿವ್ ಪಾಯಿಂಟ್ ಕೂಡ. ಸಿನೆಮಾಗಳಲ್ಲಿ ‘ಸ್ವಗತ’ವನ್ನು ಚಿತ್ರಿಸುವುದು ಅತ್ಯಂತ ಕಷ್ಟಕರ. ಹಾಗಾಗಿಯೇ ಅನೇಕ ಪಾತ್ರಗಳ ಸೃಷ್ಠಿ ಅವಶ್ಯವಾಗುತ್ತದೆ. ಜೊತೆಗೆ ಚಿತ್ರಕಥೆಯಲ್ಲಿ ಬಿಗಿಯಿರಬೇಕಾಗುತ್ತದೆ ಹಾಗೂ ಇದೆಲ್ಲವೂ ಅತ್ಯಂತ ಹಣ ಖರ್ಚಿನ ಬಾಬತ್ತು. ಉದಾಹರಣೆಗೆ ಹೇಳುವುದಾದರೆ ಮುಂಗಾರು ಮಳೆಯಲ್ಲಿ ಗಣೇಶನೊಟ್ಟಿಗಿದ್ದ ಮೊಲದ ಮೂಲಕ ತನ್ನೆಲ್ಲಾ ಸ್ವಗತವನ್ನು ಆತ ಅದರೊಟ್ಟಿಗೆ ಹಂಚಿಕೊಳ್ಳುವುದು ಅಥವಾ ಕಠಾರಿವೀರ (ಉಪೇಂದ್ರ) ಚಿತ್ರದಲ್ಲಿ ಚಿತ್ರಿಸಿರುವ ಸ್ವರ್ಗ....ಹೀಗೆ.   ‘ಗೊಂಬೆಗಳ ಲವ್’ ಚಿತ್ರದ ಬಗ್ಗೆ ಮಾತಾಡುವುದಾದರೆ ಇಡೀ ಚಿತ್ರದ ಕಥಾನಿರೂಪಣೆಯ ಅತ್ಯಂತ ಪ್ರಮುಖ ಘಟ್ಟಗಳಲ್ಲಿ ದೃಶ್ಯಗಳನ್ನು ಸಿಂಬಾಲಿಕ್ ಆಗಿ ನಿರೂಪಿಸಿರುವುದು ಚಿತ್ರದ ಮುಖ್ಯ ಹೈಲೈಟ್. ತಮ್ಮ ಸೀಮಿತ ಬಜೆಟ್ಟಿನಲ್ಲಿ, ಹೊಸ ತಂಡದೊಂದಿಗೆ ಇಂತಹ ಚಿತ್ರವೊಂದನ್ನು ಅತ್ಯುತ್ತಮ ರೀತಿಯಲ್ಲಿ ನಿರ್ದೇಶಿಸಿದ ನಿರ್ದೇಶಕ ಸಂತೋಷ್ ಅವರನ್ನು ಇದಕ್ಕಾಗಿ ಅಭಿನಂದಿಸಲೇಬೇಕು.

ಇತ್ತೀಚಿನ ದಿನಗಳಲ್ಲಿ ದುನಿಯಾ ‘ಸೂರಿ’ ಅವರನ್ನು ಬಿಟ್ಟರೆ, ದೃಶ್ಯಗಳನ್ನು ಅತ್ಯಂತ ಚೆಂದದಲ್ಲಿ ನಿರೂಪಿಸಿದವರು ‘ಸಂತೋಷ್’ ಎಂದರೆ ತಪ್ಪಾಗಲಾರದು. ನಿರ್ದೇಶಕ ‘ಸಂತೋಷ್’ ದೃಶ್ಯ ರೂಪಕಗಳನ್ನು ಅತ್ಯಂತ ಸಮರ್ಥವಾಗಿ ಬಳಸಿಕೊಂಡಿದ್ದಾರೆ.  ಚಿತ್ರ ಶುರುವಾಗುವುದೇ ಅತ್ಯಂತ ವಿಶಿಷ್ಠ ರೀತಿಯಲ್ಲಿ.  ಮನೆಯ ದೇವರ ಫೋಟೋಗೆಂದು ತರಿಸುವ ಹೂವು ಕೆಳಗೆ ಬಿದ್ದು (ಗೇಟಿನ ಬಳಿ) ಗಲೀಜಾಗಿದೆಯೆಂದು, ತರಾತುರಿಯಲ್ಲಿ ತನ್ನ ಕೆಲಸಕ್ಕೆಂದು ಹೊರಡುತ್ತಿರುವ ಪೋಲೀಸ್ ಪೇದೆಯೊಬ್ಬಳು, ತನಗಾಗಿ ಕಾಯುತ್ತಿರುವ ತನ್ನ ಮೇಲಾಧಿಕಾರಿಯ ಬೈಗುಳವನ್ನು ಕೇಳುತ್ತಲೇ ಅದನ್ನು ಹಿಸುಕಿ, ಮುದ್ದೆ ಮಾಡಿ ಎಸೆದು ಹೋಗುತ್ತಾಳೆ.  ಮೊಳಕ್ಕೆ ೩೦ ರೂಪಾಯಿ ಎಂದು ಮಂಗಳಮುಖಿಯೊಬ್ಬಳು, ಹೂವು ಹೊಸದಾಗಿಯೇ ಇದೆಯೆಂದು, ಅದನ್ನು ಸ್ವಲ್ಪ ಸರಿ ಮಾಡಿಕೊಂಡು ಮುಡಿದುಕೊಂಡು ಹೋಗುತ್ತಾಳೆ.  ಪೋಲೀಸ್ ಪೇದೆ ಮೃದು ಸ್ವಭಾವದವಳಾಗಿದ್ದರೂ, ತನ್ನ ವೃತ್ತಿಯ ಕಾರಣ ಕಠೋರ ಹೃದಯಿಯಂತೆ ತೋರಿಸಿಕೊಳ್ಳಬೇಕಾದ ಅನಿವಾರ್ಯತೆ ಹಾಗೂ ಮಂಗಳಮುಖಿಯ ದೇಹ ಗಂಡಾಗಿದ್ದರೂ, ತನ್ನ ವೃತ್ತಿಗಾಗಿ ಹೆಂಗಸಂತೇ ಕಾಣಿಸಿಕೊಳ್ಳಬೇಕಾದ ಪರಿಸ್ಥಿತಿಯನ್ನು ಒಂದೆರಡು ನಿಮಿಷಗಳಲ್ಲಿಯೇ ಸಣ್ಣ ಕಥೆಯಂತೆ ಮನಸ್ಸಿಗೆ ಮುಟ್ಟಿಬಿಡುತ್ತದೆ. ಈ ಮಹಿಳಾ ಪೋಲೀಸ್ ಕೇಳುವ ‘ಬದುಕೆಂದರೇನು?’ ಎಂಬಲ್ಲಿಂದ ಚಿತ್ರವು ಒಂದು ಥ್ರಿಲ್ಲರ್ ನಂತೆ ಕಾಣಿಸಿಕೊಳ್ಳತೊಡಗುತ್ತದೆ. ಆಕೆಯ ಈ ಪ್ರಶ್ನೆಗೆ ಚಿತ್ರವು ಉತ್ತರ ಹೇಳುವ ಪ್ರಯತ್ನ ಶುರು ಮಾಡುತ್ತದೆ.

ಹುಡುಗಿ ಮುನಿಸಿಕೊಂಡಿದ್ದಾಳೆಂದು ಹುಡುಗ ಆಕೆಯನ್ನು ಅನುನಯಿಸುತ್ತಿದ್ದಾಗ, ಹಾದು ಹೋಗುವ ಐಸ್ ಕ್ರೀಮ್ ಗಾಡಿ, ಪರೋಕ್ಷವಾಗಿ ಹುಡುಗ ಐಸ್ ಹಚ್ಚುತ್ತಿದ್ದಾನೆಂದು ಹೇಳಿದಂತೆ ಅನಿಸುತ್ತದೆ.  ಹಾಗೆಯೇ ಮತ್ತೊಂದು ದೃಶ್ಯದಲ್ಲಿ ಕೋಪಗೊಂಡಿರುವ ಪ್ರೇಮಿಗಳು, ಮನಸ್ಸಿನಲ್ಲಿ ಪ್ರೀತಿ ಇದ್ದರೂ ಕೂಡ ತಮ್ಮ ಅಹಂ ಬಿಟ್ಟು ಮಾತಾಡಲೊಲ್ಲರು. ಆಗ ಈಕೆಯನ್ನು ಉರಿಸಲೆಂದು, ತಮಟೆಯವಳಿಗೆ ಹಣ ಕೊಟ್ಟು ಟಪ್ಪಾಂಗುಚ್ಚಿ ಡಾನ್ಸ್ ಮಾಡುವ ನಾಯಕ,  ತನ್ನ ಅಹಂ ಬಿಡಲೊಲ್ಲದ ನಾಯಕಿ, ಈತನ ನೃತ್ಯಕ್ಕೆ ಶಿಳ್ಳೆ ಹಾಕಿ, ಆತನನ್ನೇ ಉರಿಸುವ ನಾಯಕಿ, ಅಪ್ಪ ಮದುವೆಗೆ ವಿರೋಧ ಮಾಡುತ್ತಾನೆಂದು ಓಡಿ ಹೋಗುವ ಹವಣಿಕೆಯಲ್ಲಿರುವ ಪ್ರೇಮಿಗಳ ಪ್ರಯತ್ನಕ್ಕೆ ನಾಯಕಿಯ ತಾಯಿ ಕಣ್ಣೀರು ಸುರಿಸಿ ಹಾಳುಮಾಡುವಾಗ, ಹಿಂಬದಿಯಲ್ಲಿ ತೋರಿಸುವ ಹುಚ್ಚನೊಬ್ಬನ ಬಡಬಡಿಕೆ, ತಾಳ್ಮೆಯಿಂದ ಅದನ್ನು ಕೇಳಿಸಿಕೊಳ್ಳುತ್ತಿರುವ ಮನೆಯವನು, ಅವನನ್ನು ಕಡಿವಾಣ ಹಾಕಿ ಬಂಧಿಸುವುದು ಕೂಡ ಪರೋಕ್ಷವಾಗಿ ಓಡಿಹೋಗಿ ಮದುವೆ ಮಾಡಿಕೊಳ್ಳುವ ಪ್ರೇಮಿಗಳ (ಭವಿಷ್ಯದ ಯೋಚನೆ ಇಲ್ಲದೆ) ಹುಚ್ಚುತನವನ್ನು, ಅದನ್ನು ತಡೆಹಾಕುವುದನ್ನು ಸೂಚಿಸುವುದು. ಮಗಳನ್ನು ಮದುವೆಯಾಗಿ ಓಡಿ ಹೋದ ಎಂದು ಊರೆಲ್ಲಾ ಅಪ್ಪ ಹುಡುಕುತ್ತಿದ್ದರೆ, ಒಂದೇ ಒಂದು ಶಾಟ್ ನಲ್ಲಿ ೩ ಟೀ ಕಪ್ ಗಳನ್ನು ತೋರಿಸುವ ಮೂಲಕ ಆತ ಮನೆಯಲ್ಲಿದ್ದಾನೆ ಎನ್ನುವುದಿರಬಹುದು, ಪ್ರೇಮಿಗಳಿಬ್ಬರೂ ಒಂದಾಗುವಾಗ ತೋರಿಸುವ ೨   ಕಪ್ ಗಳ ಮಿಲನ ಹೀಗೆ.... ಬಹಳಷ್ಟು ಪ್ರಮುಖ ದೃಶ್ಯಗಳು ಕಥೆ ಹೇಳುತ್ತಿರುವಾಗ, ಹಿಂಬದಿಯಲ್ಲಿ ಮತ್ತೊಂದು ದೃಶ್ಯದ ಮೂಲಕ (ಪಿಕ್ಚರ್ ಇನ್ ಪಿಕ್ಚರ್) ಸಿಂಬಾಲಿಕ್ ಆಗಿ ಹೇಳುವ ಪ್ರಯತ್ನ ಮಾಡಿರುವುದು ಶ್ಲಾಘನೀಯ.

ಅದುವರೆವಿಗೂ ಬರೀ ಪ್ರೇಮಿಗಳ ಕಥೆಯಂತೆ ಭಾಸವಾಗುತ್ತಿದ್ದ ಚಿತ್ರಕಥೆ, ಮಧ್ಯಂತರದ ನಂತರ ಊಹಿಸಲು ಸಾಧ್ಯವಿಲ್ಲದಂತೆ ಬದಲಾಗಿಬಿಡುತ್ತದೆ.  ಪಂಡರೀಬಾಯಿ ನಂತರ ತೆರವಾದ ಕನ್ನಡ ಚಿತ್ರರಂಗದ ‘ಅಮ್ಮ’ನ ಸ್ಥಾನಕ್ಕೆ ‘ಶೃತಿ’ ಚೆಂದ ಕಾಣಬಹುದೇನೋ?! ಎನ್ನುವಷ್ಟು ಪರಿಣಾಮಕಾರಿಯಾಗಿ ನಟಿ ‘ಶೃತಿ’ ಅಮ್ಮನ ಪಾತ್ರಕ್ಕೆ ನೈಜತೆ ತುಂಬಿದ್ದಾರೆ. ನಾಯಕಿಯ ಅಣ್ಣನ ಪಾತ್ರಧಾರಿ ಶಾರೂಖ್ ಖಾನ್ ನಂತೆ ನಟಿಸುವುದು, ನಾಯಕಿಯ, ನಾಯಕನ ನಟನೆಯಲ್ಲಿ ಕಂಡುಬರುವ ಅಸಹಜ ನಟನೆ, ದೃಶ್ಯಗಳನ್ನು ನಿರೂಪಿಸುವಾಗ ಎಲ್ಲೂ ಕಾಣಿಸದಿರುವ ಇತರ ಜನರು ಅಥವಾ ಪಾತ್ರಗಳು, ಪ್ರೇಮಿಗಳ ನಡುವೆ ದೇಹಕ್ಕಿಂತ ಮನಸ್ಸೇ ಹೆಚ್ಚು ಏಕೆ ಮಾತಾಡುತ್ತದೆ? ಎಂಬುದು ಅದುವರೆವಿಗೂ ಹೊಳೆಯದೇ ಇದ್ದದ್ದು ಅಥವಾ ಪೋಲೀಸ್ ಇನ್ಸ್ ಪೆಕ್ಟರ್ ಮಹಿಳಾ ಪೋಲೀಸ್ ಗೆ ತಂದುಕೊಡುವ ಇಡ್ಲಿ ಪಾಕೆಟ್ ನ ಅರ್ಥ (ನನಗೇ ಈ ದೃಶ್ಯ ಯಾಕೆ ಅಂತಾ ಅರ್ಥವಾಗಿರಲೇ ಇಲ್ಲ)  ಥಟ್ ಅಂತಾ ತಲೆಗೆ ಹೊಳೆಯುತ್ತದೆ. ಈ ಎಲ್ಲಕ್ಕೂ ಒಂದು ತಾರ್ಕಿಕ ಕಾರಣ / ಉತ್ತರ ಮಧ್ಯಂತರದ ನಂತರ ವೀಕ್ಷಕರಿಗೆ ಸಿಗುತ್ತದೆ. ಮೃದು ಹೃದಯಿ ಪೋಲೀಸ್ ಪೇದೆ, ಹಣ, ಅಧಿಕಾರವಿದ್ದರೂ ನಿಸ್ಸಹಾಯಕನಾಗುವ ಪೋಲೀಸ್ ಇನ್ಸ್ ಪೆಕ್ಟರ್, ನಮಗ್ಯಾಕೆ ಜವಾಬ್ದಾರಿ? ಎಂದು ಸಹಾಯಕ್ಕೆ ಒದಗದ ನೆರೆಹೊರೆಯವರು, ಅಂತಃಕರಣ ಅವಶ್ಯವಾಗಿರಬೇಕಾದ ವೈದ್ಯರ ಹಣದಾಸೆ, ಎಷ್ಟೋ ವರ್ಷಗಳ ನಂತರ ಬಯಸಿ, ಬಯಸಿ, ಹುಟ್ಟಿದ ಮಗು ಅಂಗವಿಕಲನೆಂದು ಗೊತ್ತಾದ ತಕ್ಷಣವೇ ಆಚೆಗೆಸೆ ಎಂದು ಹೇಳುವ ತಂದೆ, ಹೆಂಡತಿಯನ್ನು ಕೆಲಸಕ್ಕೆ ಕಳುಹಿಸಿ, ಆಕೆಯನ್ನು ಅನುಮಾನ ಪಡುವ ಗಂಡ, ಮಾತೆತ್ತಿದರೆ ಹೊಡಿ, ಬಡಿ ಎಂದು ಹೇಳುವ ಗೆಳೆಯ, ಗಂಡಸರೆಲ್ಲರೂ ಸರಿ ಇಲ್ಲ ಎಂದು ಹೇಳುವ ಗೆಳತಿ ಇವರೆಲ್ಲರ ನಡುವೆಯೇ ಬದುಕಲು ಪ್ರೇಮವೇ ದೈವ, ಪ್ರೇಮವೇ ಜೀವ ಎಂದು ಸಾರುವ ತಾಯಿ, ತನ್ನ ಅಂಗವಿಕಲ ಮಗುವಿಗಾಗಿಯೇ, ಆ ಮಗುವಿನ ಖುಷಿಗಾಗಿಯೇ ತನ್ನೀಡಿ ಬದುಕನ್ನು ಮೀಸಲಿಡುವುದು, ‘ನೀವು ಹೊರಗಡೆ ಏಟು ತಿಂದರೆ, ನಾವು ಒಳಗಡೆ ತಿನ್ನುತ್ತಿರುತ್ತೇವೆ ಕಣೋ’ ಎಂದು ನಾಯಕನಿಗೆ ತಮಗೂ ನೋವಾಗುತ್ತಿರುತ್ತದೆ ಎಂದು ಸೂಕ್ಷ್ಮವಾಗಿಯೇ ಬುದ್ಧಿ ಹೇಳುವ ನಾಯಕಿ (ಹುಡುಗಿಯರೆಲ್ಲಾ ಮೋಸಗಾರ್ತಿಯರು ಎಂದಾಗ), ಪ್ರೀತಿಯಿಂದಲೇ ಎಲ್ಲರನ್ನು ಗೆಲ್ಲಬಹುದು ಎನ್ನುವ ಹುಮ್ಮಸ್ಸಿರುವ ನಾಯಕ, ಒಟ್ಟಿನಲ್ಲಿ ಪ್ರೀತಿ / ಪ್ರೇಮ ಬದುಕಿನಲ್ಲಿ ಇಲ್ಲವೆಂದರೆ  ನಾವೆಲ್ಲರೂ ಬದುಕಿದ್ದು ಕೂಡ ಜೀವಚ್ಛವಗಳಂತೆ ಎನ್ನುವ ಚಿತ್ರದ ಅಂತ್ಯ ಬದುಕಲು ಮನುಷ್ಯನಿಗೆ ಬೇಕಿರುವುದು ಒಂದಿಷ್ಟು ಪ್ರೀತಿ ಎಂದು ಆ ಮಹಿಳಾ ಪೋಲೀಸ್ ಬಿಕ್ಕಿಬಿಕ್ಕಿ ಅಳುವ ಮೂಲಕ ಕೊನೆಯಾಗುತ್ತದೆ.. ಬದುಕಿನಲ್ಲಿ ಎಷ್ಟೇ ಕಷ್ಟವಿರಲಿ, ಪ್ರೀತಿಯಿದ್ದರೆ ಎಲ್ಲವನ್ನೂ ನಗುನಗುತ್ತಲೇ ಗೆಲ್ಲಬಹುದು ಎನ್ನುವುದು ಈ ಚಿತ್ರದ ನೀತಿಪಾಠವಾಗುತ್ತದೆ.

Tuesday, February 12, 2013

ಡ್ರಾಮ ಚಿತ್ರ


ಮುಂಗಾರುಮಳೆ, ಗಾಳಿಪಟ ಚಿತ್ರಗಳಿಂದ ಬೆಂಗಳೂರಿನ ಸಾಫ್ಟ್ ವೇರ್ ಇಂಜಿನಿಯರುಗಳ ಮನ ಗೆದ್ದ ಭಟ್ಟರು, ತಮ್ಮ ಚಿತ್ರಗಳು ಯಾವ ಸೆಂಟರುಗಳಲ್ಲಿ ಓಡಿಲ್ಲವೋ ಆ ಸೆಂಟರುಗಳನ್ನು ಗಮನದಲ್ಲಿಟ್ಟುಕೊಂಡು ತಮ್ಮ ಮುಂದಿನ ಚಿತ್ರಗಳಲ್ಲಿ ಸಂಭಾಷಣೆ ಬದಲಾಯಿಸುತ್ತಾರೇನೋ ಅನ್ನೋ ಡೌಟು! ;-)  ಮನಸಾರೆ ಮೂಲಕ ಉತ್ತರ ಕರ್ನಾಟಕದವರನ್ನು, ಪಂಚರಂಗಿ ಮೂಲಕ ಮಂಗಳೂರಿನವರನ್ನು ಸೆಳೆದ ಭಟ್ಟರ ‘ಡ್ರಾಮಾ’ ಈ ಬಾರಿ ಮಂಡ್ಯದ ಜನರಿಗಾಗಿ.  ಮಂಡ್ಯದ ಗಂಡು ಅಂಬರೀಶ್ ಚಿತ್ರದ ಸೂತ್ರಧಾರ, ನಾಯಕ ಮತ್ತದೇ ಮಂಡ್ಯದ ಯಶ್! ಜೊತೆಗೆ ಮಂಡ್ಯದ ಭಾಷೆ!  ಆದರೂ ಅಂಬರೀಶ್ ಅವರ ಡೈಲಾಗ್ ಡೆಲಿವರಿ, ರಾಜು ತಾಳಿಕೋಟಿಯವರನ್ನು ನೆನಪಿಗೆ ತರಿಸುತ್ತದೆ, ಯಶ್ ರ ನಟನೆ ನೋಡಿದಾಗ, ಈ ಪಾತ್ರ ಗಣೇಶ್ ಗೆ ಹೆಚ್ಚು ಸೂಕ್ತವಾಗುತ್ತಿತ್ತೇನೋ? ಎಂದೆನಿಸುತ್ತದೆ. ಇಡೀ ‘ಡ್ರಾಮಾ’ ದುದ್ದಕ್ಕೂ ರಾರಾಜಿಸುವುದು ಮಾತ್ರ ನೀನಾಸಂ ಸತೀಶ್, ತಮ್ಮ ಮುಂದಿನ ಚಿತ್ರವಾದ ‘ಲುಸಿಯಾ’ ಗೆ ಈ ಮೂಲಕ ತಳಹದಿ ಹಾಕಿಕೊಂಡಿದ್ದಾರೆ.  ಸುಚೇಂದ್ರ ಪ್ರಸಾದ್ ಅವರಿಗೆ ಬಹಳ ದಿನಗಳ ನಂತರ ಅದ್ಭುತ ಪಾತ್ರ! ಅವರ ಬಾಯಲ್ಲಿ ಶುದ್ಧ ಕನ್ನಡ ಕೇಳಲು ಇಷ್ಟವಾದರೂ, ವೀಕ್ಷಕರಿಗೆ ಅದು ತಲುಪದೇ ಇರುವುದು ಅವರ ಪಾತ್ರರಚನೆಯಲ್ಲಿನ ದೋಷ! ಅಂಬರೀಶ್ ಸೂತ್ರಧಾರನಾಗಿ (ವಯಸ್ಸಿಗೆ ತಕ್ಕಂಥ ಪಾತ್ರ) ಚೆಂದ ಕಾಣುತ್ತಾರೆ. ಭಟ್ಟರು ತಮ್ಮ ಈ ಹಿಂದಿನ ಯಶಸ್ಸಿನ ಎಲ್ಲಾ ಸೂತ್ರಗಳನ್ನು ‘ಡ್ರಾಮಾ’ ದಲ್ಲೂ ಬಳಸಿದ್ದಾರೆ. ಕಥೆಯೇ ಇಲ್ಲದ ಒಳ್ಳೇ ಚಿತ್ರಕಥೆ, ಇಷ್ಟವಾಗುವ ಕಲರ್ ಫುಲ್ ಛಾಯಾಗ್ರಹಣ, ಕೆಲಕಾಲ ಮಾತ್ರ ಪಡ್ಡೇ ಹುಡುಗರಿಗೆ ಇಷ್ಟವಾಗುವ  ಭಟ್ಟರ ಹಾಡುಗಳು, ನಿಧಾನವಾಗಿ ಮೋಡಿ ಮಾಡುವ ಕಾಯ್ಕಿಣಿಯ ಹಾಡುಗಳು! ಹೊರಗೆ ಬಂದ ನಂತರ ನಾವೇನು ನೋಡಿದೆವು? ಎಂಬುದನ್ನು ಮರೆತು ಹೋದರೂ, ಥಿಯೇಟರಿನಲ್ಲಿ ಕೂತಷ್ಟು ಕಾಲ ನಗಿಸುವ ಭಟ್ಟರ ಡೈಲಾಗ್ ಗಳು! ಹ್ಮ್....... ಟೈಮ್ ಪಾಸ್ ಚಿತ್ರ! :-)

ನಮಗೇನಾಗಿದೆ?


ಇತ್ತೀಚಿನ ‘ಡೆಲ್ಲಿ ಅತ್ಯಾಚಾರ’ ಪ್ರಕರಣ ಇಡೀ ಭಾರತದಲ್ಲಿ ಒಂದು ದೊಡ್ಡ ಸಂಚಲನವನ್ನುಂಟು ಮಾಡಿತು. ಅಂದು ಮುಂಬೈನಲ್ಲಿ ‘ಕಸಬ್’ ಸಿಕ್ಕಸಿಕ್ಕವರನ್ನು ಕೊಂದದ್ದಕಿಂತಲೂ, ತಾಜ್ ಹೋಟೇಲ್ ನಲ್ಲಿ ಆದ ಉಗ್ರರ ದಾಳಿಗಿಂತಲೂ, ಒಂದಿಷ್ಟು ಹೆಚ್ಚಿನ ‘ಸುದ್ಧಿ’ಯನ್ನು ಈ ಭೀಕರ ಕೃತ್ಯ ಮಾಡಿತು! ಇಂತಹ ನಾಚಿಕೆಗೇಡಿನ ಕೃತ್ಯ ಮಾಡಿದ ಅಪರಾಧಿಗಳಿಗೆ ಗಲ್ಲು ಶಿಕ್ಷೆ ಕೊಡಬೇಕು ಎಂಬುದರಿಂದ ಹಿಡಿದು, ಅವರ ಪುರುಷತ್ವದ ಹರಣವಾಗಬೇಕು, ಅವರ ‘ಆಯುಧ’ವನ್ನು ನಿಷ್ಕ್ರಿಯಗೊಳಿಸಬೇಕು ಎನ್ನುವವರೆಗೂ ಆಕ್ರೋಶದ ಮಾತುಗಳು ಕೇಳಿಬಂದವು.  ಈ ಪ್ರಕರಣ ಅತ್ಯಂತ ಅಸಹ್ಯ, ಭೀಭತ್ಸ, ಪೈಶಾಚಿಕ ಹಾಗೂ ಅಮಾನವೀಯ ಎಂಬುದರಲ್ಲಿ ಎರಡು ಮಾತಿಲ್ಲ! ಆದರೆ ಇಂತಹದೊಂದು ರೇಪ್ ಪ್ರಕರಣ ಇದೇ ಮೊದಲ ಬಾರಿಗೆ ಆದಂತೆ ಬಿಂಬಿಸಿದ್ದು ಮಾತ್ರ ಅಸಹನೀಯ! 

ಹಿಂದೆ ಕೂಡ ಹೆಣ್ಣಿನ ಮೇಲೆ ದೌರ್ಜನ್ಯವಿತ್ತು. ನಮಗ್ಯಾರಿಗೂ ಗೊತ್ತಾಗುತ್ತಿರಲಿಲ್ಲ. ‘ಹೆಣ್ಣಿನ ಮೇಲೆ’ ಮಾತ್ರ! ಎಂದು ಹೇಳುವುದಕ್ಕಿಂತ    ಸಮಾಜದಲ್ಲಿ ದುರ್ಬಲ ವರ್ಗಗಳ ಮೇಲಿನ ದೌರ್ಜನ್ಯ ಎಂದಿಗೂ ಇತ್ತು, ಇಂದಿಗೂ ಇದೆ! ನಾನು ಚಿಕ್ಕವಳಿದ್ದಾಗ ‘ರೂಪ’ ಎಂಬಾಕೆಯನ್ನು ಸತಿ ಸಹಗಮನ ಮಾಡಿದ  ಕ್ರೂರ ಘಟನೆ ನನಗೆ ಇಂದಿಗೂ ಮನದಲ್ಲಿ ಅಚ್ಚೊತ್ತಿದೆ.  ಎಷ್ಟೋ ಮನೆಗಳಲ್ಲಿ ಇವತ್ತಿಗೂ ಕೂಡ ನಡೆಯುವ ಹಿಂಸೆ, ಹೊರಗೆ ಯಾರಿಗೂ ಗೊತ್ತಾಗುವುದೇ ಇಲ್ಲ. ಹೆಣ್ಣಿನ ಮೇಲೆ ಮಾತ್ರವಲ್ಲ, ಗಂಡಿನ ಮೇಲೆಯೂ ಕೂಡ ಇಂತಹುದ್ದೇ ಲೈಂಗಿಕ ಶೋಷಣೆಗಳು, ಮಕ್ಕಳ ಮೇಲೆ, ಎಲ್ಲ ದುರ್ಬಲರ ಮೇಲೂ ನಡೆಯುತ್ತಲೇ ಇದೆ. ಅಪ್ಪ, ಅಮ್ಮ, ಚಿಕ್ಕಪ್ಪ, ಚಿಕ್ಕಮ್ಮ, ಹೀಗೆ ಮನೆಯವರೇ ಲೈಂಗಿಕ ಶೋಷಣೆ ಮಾಡುತ್ತಾರೆ. ಅದು ಡೆಲ್ಲಿ ರೇಪ್ ಗಿಂತಲೂ ಭೀಕರ! ಮನೆಯವರೇ ಹೀಗೆ ಮಾಡಿದರೆ, ಮುಂದೆ ಯಾರನ್ನೂ ನಂಬಲಾಗುವುದು? ಹಿಂಸೆಯಲ್ಲಿನ ಪ್ರಮಾಣ ಹೆಚ್ಚು ಕಡಿಮೆಯಾಗಿರಬಹುದೇ ಹೊರತು, ಹಿಂಸೆ ಹಿಂಸೆಯೇ. ನಮ್ಮ ಅರಿವಿಗೆ, ಬೆಳಕಿಗೆ ಬಂದದಷ್ಟೇ ನಮಗೆ ತಿಳಿಯುವುದು. ಮೊದಲಿಗೆ ಯಾವುದೇ ‘ಜವಾಬ್ದಾರಿ’ ಇಲ್ಲದೇ, ಕೇವಲ, ತಮ್ಮ ಮಾಧ್ಯಮಗಳ ಹೆಚ್ಚುಗಾರಿಕೆ ತೋರಿಸಿಕೊಳ್ಳಲಷ್ಟೇ ತಾ ಮುಂದೆ, ನಾ ಮುಂದೆ ಎಂದು ಇಂಥ ‘ಗಂಭೀರ’ ವಿಷಯಗಳನ್ನು ತೋರಿಸುವ ಮೀಡಿಯಾಗಳ ಬಗ್ಗೆಯೇ ನನ್ನ ಧಿಕ್ಕಾರವಿದೆ. 

ಈಗ ಮಾಧ್ಯಮಗಳು ತಮ್ಮ, ತಮ್ಮ ಟಿ ಆರ್ ಪಿ ಹೆಚ್ಚಿಸಿಕೊಳ್ಳಲಷ್ಟೇ ಈ ತರಹದ ಸೆನ್ಸಿಟಿವ್ ಇಶ್ಯೂಗಳನ್ನು ಮೊದಲಿಗೆ ಹೆಡ್ ಲೈನ್ಸ್, ಸೆನ್ಶೇಷನಲ್ ಎಂದು ತೋರಿಸುತ್ತವೆ! ಅದರಲ್ಲೂ ಮುಖ್ಯವಾಗಿ ರೇಡಿಯೋ, ಟಿವಿಯವರು ನಡೆದುಕೊಳ್ಳುವ ರೀತಿ ನೋಡಿದರೆ ಅಸಹ್ಯವಾಗುತ್ತದೆ. ಮೊನ್ನೆ ಎಫ್ ಎಮ್ ೧೦೪ ಚಾನೆಲ್ ನಲ್ಲಿ ಹಾಡುಗಳ ಮಧ್ಯೆ, ಮಧ್ಯೆ ರೇಡಿಯೋ ಜಾಕಿ ಒಬ್ಬಳು ಈ ರೇಪ್ ವಿಷಯ ಮಾತನಾಡುತ್ತಿದ್ದಳು! ‘ಡೆಲ್ಲಿ ರೇಪ್’ ಬಗ್ಗೆ ನಿಮ್ಮ ಒಪಿನಿಯನ್ ತಿಳಿಸಿ ಎಂದು ಆಕೆ ಹಾಕಿದ ಹಾಡು ಯಾವುದೋ ಸೆಕ್ಸಿ ಐಟಮ್ ಸಾಂಗ್! ಇಂಥ ಗಂಭೀರ, ಸೆನ್ಸಿಟಿವ್ ವಿಷಯವನ್ನು ಹಾಡುಗಳ ಮಧ್ಯೆ ಚರ್ಚಿಸುವುದು! ಎಲ್ಲಿ? ಹೇಗೆ? ಎಷ್ಟು ಮಾತನಾಡಬೇಕು ಎಂಬುದರ ಅರಿವಿಲ್ಲ ಇವರ್ಯಾರಿಗೂ?! ಮುಖ್ಯವಾಗಿ ಇಂತಹ ವಿಷಯಗಳನ್ನು, ಇಂತಹವರು ಹೀಗೆ ಬೇಕಾಬಿಟ್ಟಿ ಮಾತನಾಡುವುದನ್ನು ನಿಷೇಧಿಸಬೇಕು. ಇವರಿಂದ ವಿಷಯದ ಗಂಭೀರತೆ ಹಾಳಾಗಿಬಿಡುತ್ತದೆ. 

ಇಷ್ಟೇ ಅಲ್ಲಾ, ಇಷ್ಟೆಲ್ಲಾ ಆದ ಮೇಲೂ ಅದರಿಂದ ಅಪರಾಧಿಗೆ ಸಿಕ್ಕ ಪನಿಶ್ ಮೆಂಟ್ ಏನು? ಯಾರಿಗೂ ಗೊತ್ತಾಗೊಲ್ಲ. ಯಾಕೆಂದರೆ ಅಪರಾಧಿ ಸಿಕ್ಕು, ಆತನ ಅಪರಾಧಗಳು ಕೋರ್ಟಿನಲ್ಲಿ ರುಜುವಾತಾಗುವಷ್ಟರಲ್ಲಿ, ಬಹುಶಃ ವಿಕ್ಟಿಮ್ ಗೂ ಕೂಡ ಅಪರಾಧ ಏನಾಗಿತ್ತು? ಅನ್ನುವುದು ಮರೆತೇ ಹೋಗಿರುತ್ತದೆಯೇನೋ? ಅಥವಾ ಗೆದ್ದೆ ಎಂದು ಬೀಗಲು ಆಗದಷ್ಟು ಮಾನಸಿಕ ತೊಂದರೆಗಳಿಗೀಡಾಗಿರುತ್ತಾರೆ :(.  ಆಕೆ ಒಮ್ಮೆ ‘ರೇಪ್’ ದೈಹಿಕವಾಗಿ ಅನುಭವಿಸಿದ್ದರೆ, ಪದೇ, ಪದೇ ಮಾಧ್ಯಮಗಳಲ್ಲಿ, ಕೋರ್ಟ್ ಗಳಲ್ಲಿ, ನಮ್ಮೆಲ್ಲರ ಬಾಯಿಗಳಲ್ಲಿ ಎಷ್ಟು ಬಾರಿ ‘ರೇಪ್’ ಆಗುತ್ತಾಳೋ?  ಆ ನೋವಿಗೆ ನಮ್ಮಲ್ಲಿ ಉತ್ತರವಿದೆಯೇ?  ನಾವು ಕೂಡ ಅಷ್ಟೇ. ಎಲ್ಲಾ ಚಾನೆಲ್ ಗಳನ್ನು ನೋಡುವುದು, ಬಾಯಿಗೆ ಬಂದಂತೆ ಮಾತನಾಡಿಕೊಳ್ಳುವುದು, ಒಂದಿಷ್ಟು ದಿವಸಗಳು ಕೂಗಾಡುವುದು, ಹಾರಾಡುವುದು ಅಷ್ಟೇ.  ಪ್ರಕರಣದ ಕಾವು ಆರಿದ ನಂತರ, ನಮ್ಮ ಕೆಲಸ, ನಮ್ಮ ಪಾಡು. ಇದರ ಬಗ್ಗೆಯೂ ನನ್ನನ್ನು ಒಳಗೊಂಡಂತೆ ಎಲ್ಲರ ಮೇಲೂ ನನಗೆ ತಿರಸ್ಕಾರವಿದೆ.  

ಇಂತಹ ಪ್ರಕರಣಗಳು ಘಟಿಸಿದೊಡನೆಯೇ ರಾಜಕೀಯ ಪಕ್ಷಗಳು ತಮ್ಮ ಬೇಳೆ ಬೇಯಿಸಿಕೊಳ್ಳಲು, ಸ್ವಹಿತಕ್ಕಾಗಿ ಪ್ರಯತ್ನ ಶುರು ಮಾಡಿಬಿಡುತ್ತಾರೆ. ಮಂಗಳೂರಿನ ಪಬ್ ಪ್ರಕರಣದಲ್ಲಿ ಸಂಸ್ಕೃತಿ ಎಂದು ಬೊಬ್ಬೆ ಹೊಡೆದ ಮುತಾಲಿಕ್ ಮತ್ತು ಸಂಘಟಿಗರು, ಅವರಿಗೆ ಪಿಂಕ್ ಚೆಡ್ಡಿಗಳನ್ನು ಕಳಿಸುವ ಮೂಲಕ ನಾವೇನೋ ಸಾಧಿಸಿದೆವು ಎಂದು ಬೀಗಿದ ರೇಣುಕಾ ಚೌಧರಿ ಮುಂತಾದವರು ಇಂತಹ ಘಟನೆಗಳು ನಡೆದಾಗ, ತಮಗೆ ಸಂಬಂಧವೇ ಇಲ್ಲದಂತೆ ನಟಿಸುವಾಗ ಅವರ ಬಗ್ಗೆ ಹೇಸಿಗೆಯಾಗುತ್ತದೆ. ಇಂತಹ ಅತ್ಯಾಚಾರಗಳು ನಡೆದ ಕೂಡಲೇ, ಆ ದೌರ್ಜನ್ಯಕ್ಕೊಳಗಾದ ಹೆಣ್ಣನ್ನು ಇನ್ನೊಂದಿಷ್ಟು ನೋಯಿಸುವ, ಇಡೀ ಹೆಣ್ಣು ಕುಲವನ್ನೇ ಅಶ್ಲೀಲವಾಗಿ ನೋಡುವ ಗಂಡಸರು, ಇಡೀ ಗಂಡಸರನ್ನೆಲ್ಲಾ ಅಪರಾಧಿಗಳಂತೆ, ಅವರಿಗೆಲ್ಲಾ ಶಿಕ್ಷೆ ಆಗಬೇಕು ಎಂದು ಕುದಿಯುವ ಹೆಂಗಸರು! ಇಲ್ಲಿ ಒಬ್ಬರ ತಪ್ಪು, ಇಡೀ ಒಂದು ಸಮುದಾಯದ ತಪ್ಪಾಗಿ ಬಿಂಬಿತವಾಗಿಬಿಡುತ್ತದೆ. ಇಲ್ಲಿ ಒಂದು ಒಳ್ಳೆಯ, ಆರೋಗ್ಯಕರ ಸಮಾಜದ ನಿರ್ಮಾಣಕ್ಕೆ, ನಮ್ಮ ಪೀಳಿಗೆ ಮುಂದುವರಿಯಲು ನಮಗೆ ಗಂಡು, ಹೆಣ್ಣು, ಇಬ್ಬರೂ ಬೇಕು ಎಂಬುದನ್ನೇ ನಾವು ಮರೆತಂತಿದ್ದೇವೆ. ನಮ್ಮ ನಮ್ಮ ವೈಯಕ್ತಿಕ ಅಭಿಪ್ರಾಯಗಳನ್ನು ಹಿಡಿದು, ಇಡೀ ಸಮಾಜದ ಸಮಸ್ಯೆಗೆ ಇದೇ ಪರಿಹಾರ ಎಂಬಂತೆ ಮಾತನಾಡಲು ತೊಡಗುತ್ತೇವೆ. 

ಇನ್ನೂ ನಾವು ಸಮಾಜದ ಅಂಗವೆಂದು, ನಮ್ಮಿಂದಲೇ ಸಮಾಜವೆಂದು ತಿಳಿಯದ ಕೆಲವು ತಟಸ್ಥ ಮಂದಿಗಳಿದ್ದಾರೆ. ಇವರು ತಮ್ಮ ಸುರಕ್ಷಿತ ವಲಯವನ್ನು ಬಿಟ್ಟು ಬರಲೊಲ್ಲರು! ತಮ್ಮ ಮನೆಯಲ್ಲಿ ಕಸ ಬಿದ್ದಿದ್ದರೆ, ಪಕ್ಕದ ಮನೆಗೆ ಎಸೆದು ಸುಮ್ಮನಾಗುವಂಥವರು! ಅದೃಷ್ಟವಶಾತ್ ನಾವು, ನಮ್ಮ ಮನೆಯವರು ಇಂಥ ದುರ್ಘಟನೆಗಳಿಗೆ ಈಡಾಗಿಲ್ಲ ಎಂದರಿಯದ ಇವರು, ಪರಿಸ್ಥಿತಿಯ ಸೂಕ್ಷ್ಮತೆ ಅರಿಯದೆ, ಯಾವುದಕ್ಕೂ ಬೆಂಬಲ ಕೊಡದವರು. ವೈಯಕ್ತಿಕ ಸಮಸ್ಯೆಗೂ, ಸಾಮಾಜಿಕ ಪಿಡುಗಿಗೂ ವ್ಯತ್ಯಾಸ ತಿಳಿಯದವರು ಇವರು! ನಾವು, ನಮ್ಮ ಮನೆ, ನಮ್ಮ ಮಕ್ಕಳು, ನಮ್ಮ ಮಕ್ಕಳನ್ನು ಸಂಸೃತಿ, ಸಂಸ್ಕಾರ ಎಂದು ಚೆಂದದಲ್ಲಿ ಬೆಳೆಸುತ್ತಿದ್ದೇವೆ ಎನ್ನುವ ಹುಂಬತನದಲ್ಲಿರುವವರು.   ಆದರೆ ಇದೇ ನಮ್ಮ ಮಕ್ಕಳು ಸಮಾಜಕ್ಕೆ ತೆರೆದುಕೊಂಡಾಗ ಇಂತಹ ಪ್ರಕರಣಗಳನ್ನು ಡೈಜೆಸ್ಟ್ ಮಾಡಿಕೊಳ್ಳುವುದಾದರೂ ಹೇಗೆ? ನಮ್ಮ ಮಕ್ಕಳಿಗೆ ನಾವು ಎಂತಹ ಕ್ರೂರ ಕೆಲಸ ಮಾಡಿದರೂ, ನಿನಗೇನು ಶಿಕ್ಷೆ ಆಗದು ಎಂಬುದನ್ನು ನಾವು ಈ ಮೂಲಕ ಹೇಳಿಕೊಡುತ್ತಿಲ್ಲವೇ? ನಾವು ಎಷ್ಟೇ ನಮ್ಮ ಮಕ್ಕಳನ್ನು ಹುಷಾರಾಗಿ ನೋಡಿಕೊಂಡರೂ, ನಮಗೆ ಅರಿವಿಲ್ಲದಂತೆ ನಮ್ಮ ಮಕ್ಕಳು ಸಮಾಜದಲ್ಲಿನ ಒಳಿತು ಕೆಡಕುಗಳತ್ತಾ ಆಕರ್ಷಿತರಾಗುವುದಿಲ್ಲವೇ? ನಮ್ಮಿಂದಲೇ ಸಮಾಜ ಅಲ್ಲವೇ? ಇದಾವುದನ್ನೂ ಯೋಚಿಸದೇ, ನೀನೇನೂ ಬೇಕಿದ್ರೂ ಮಾಡಿಕೋ?  ನನಗೂ ಇದಕ್ಕೂ ಸಂಬಂಧವಿಲ್ಲ ಎಂದು ಹೇಳುತ್ತಾ ತಮ್ಮ ಸ್ವಹಿತ, ತಮ್ಮ ಸ್ವಾರ್ಥ, ತಮ್ಮ ಏಳಿಗೆ, ಉದ್ದಾರ ನೋಡಿಕೊಳ್ಳುವವರು. ಇವರಿಗೆ ಇಂತಹ ಪ್ರಕರಣಗಳೂ ಯಾವುದೂ ಕೂಡ ಬಾದಿಸದು.

ಹಾಗಾದರೆ ನಾವು ಮಾಡಬೇಕಾದುದೇನು? ಪ್ರತಿಯೊಬ್ಬ ಮನುಷ್ಯನೂ ವೈಯಕ್ತಿಕ ಹಿತಾಸಕ್ತಿಯನ್ನು ಬಿಟ್ಟು, ಸಮಾಜಕ್ಕಾಗಿ, ತಮ್ಮ ಮುಂದಿನ ಪೀಳಿಗೆಗಾಗಿ, ಇಂತಹ ಪ್ರಕರಣಗಳಾದಾಗ ಒಗ್ಗಟ್ಟಿನಿಂದ ಒಮ್ಮನಸಿನಿಂದ ಸಮಾಜದ ಹಿತದೃಷ್ಟಿಯಿಂದ ಕೆಲಸ ಮಾಡಬೇಕಿದೆ. ಅಲ್ಲಿ ಅಂದೂ ರೇಪ್ ಆದಾಕೆಯನ್ನು ಬಸ್ಸಿನಿಂದ ಹೊರಗೆ ಎಸೆದಾಗ, ಯಾರೊಬ್ಬರೂ! ಆಕೆಯನ್ನು ರಕ್ಷಿಸಿಕೊಳ್ಳಲು ಅಂದರೆ, ಆಸ್ಪತ್ರೆಗೆ ಸೇರಿಸಲು ಬರಲಿಲ್ಲವೆಂದರೆ.....? ಎಷ್ಟು ನೋವಾಗಬಹುದು? ಹೇಳಿ, ನಮ್ಮನೆಯವರು ಈ ತರಹದ ಘಟನೆಗಳಲ್ಲಿ ಸಿಕ್ಕಿಕೊಂಡಾಗಲೇ ನಮಗೆ ಆ ನೋವಿನ ಅನುಭವ ಆಗಬೇಕೆ? ಅಷ್ಟು ಕ್ರೂರಿಗಳೇ ನಾವು? ವೋಟುದಾರರಿಂದ ಹಿಡಿದು ರಾಜಕೀಯ ಪಕ್ಷಗಳ ತನಕವೂ ಹಾಗೂ ಪೋಲೀಸ್ ವ್ಯವಸ್ಥೆಯಿಂದ ಹಿಡಿದು ಕೋರ್ಟುಗಳವರೆಗೂ, ಪ್ರತಿಯೊಬ್ಬರೂ ಸ್ವಾರ್ಥವನ್ನು ಮರೆತು, ಸ್ವಹಿತವನ್ನು ಬಿಟ್ಟು, ಯಾವುದೇ ಹಿಡನ್ ಅಜೆಂಡಾ ಇಲ್ಲದೆ ಕೆಲಸ ಮಾಡುವ ಅವಶ್ಯಕತೆ ಈಗ ಅತ್ಯಗತ್ಯ. 

ನಿಜವಾಗಿಯೂ ಜನರಿಗೆ ನ್ಯಾಯ ಒದಗಿಸಬೇಕೆಂಬ ಅರಿವಿದ್ದರೆ, ಮಾಧ್ಯಮಗಳು ಜವಾಬ್ದಾರಿಯುತವಾಗಿ ಕಾರ್ಯಕ್ರಮಗಳನ್ನು ನಿರೂಪಿಸಲಿ.  ಇಂತಹ ಘಟನೆಗಳು ನಡೆದಾಗ, ಆ ದಿವಸ ಮನರಂಜನಾ ಕಾರ್ಯಕ್ರಮಗಳನ್ನು ನಿಲ್ಲಿಸಿ, ‘ಸೆನ್ಸಿಬಲ್’ ಆಗಿ ಮಾತನಾಡುವವರನ್ನು, ನಿಜವಾದ ಕಾಳಜಿ ಇರುವವರನ್ನು ಕರೆಸಿ, ಚರ್ಚಿಸಲಿ. ಅದನ್ನು ಫಾಲೋ ಅಪ್ ಮಾಡಿ ತೀರ್ಪು ಸಿಗುವ ತನಕ ಹೋರಾಡಲಿ. ‘ನೊಂದವರಿಗೆ’ ಆ ಸಮಯದಲ್ಲಿ ಅವಶ್ಯವಾಗಿ ಬೇಕಾದಂಥ ಎಲ್ಲಾ ಸಹಾಯಗಳನ್ನು ಮಾಡಲಿ.  ಜನರನ್ನು ಒಗ್ಗೂಡಿಸಲಿ, ಧನಸಹಾಯದಿಂದ ಹಿಡಿದು ಮಾನಸಿಕವಾಗಿ ನಾವಿದ್ದೇವೆ ಎಂಬ ಭರವಸೆಯನ್ನು ಅವರಲ್ಲಿ ಉಂಟು ಮಾಡಲಿ, ನಾನು ಒಂಟಿಯಲ್ಲ! ಅಪರಾಧಿಗಳಿಗೆ ಶಿಕ್ಷೆ ಆಗುತ್ತದೆಯೋ, ಇಲ್ಲವೋ, ನನ್ನೊಂದಿಗೆ ಇಡೀ ಸಮಾಜ ನಿಂತಿದೆ ಎಂಬ ನಂಬಿಕೆ ಇಂತಹ ಪ್ರಕರಣಗಳಲ್ಲಿ ನೊಂದವರಿಗೆ ಸಿಕ್ಕಿಬಿಟ್ಟರೆ, ಅವರಿಗಾಗುವ ಸಮಾಧಾನ, ಅವರಿಗೆ ಮುನ್ನುಗ್ಗಲು ಸಿಗುವ ಧೈರ್ಯ, ಇಡೀ ಸಮಾಜಕ್ಕೆ ಸಿಕ್ಕ ಜಯ. ಅಲ್ಲವೇ? 

ಅದರೊಟ್ಟಿಗೆ ಪದೇ, ಪದೇ ಇಂತಹ ಪ್ರಕರಣಗಳು ಜರುಗುತ್ತಿರುವುದು ಏಕೆ? ಎಂಬುದನ್ನು ಕೂಲಂಕುಷವಾಗಿ ಪರೀಶೀಲಿಸಬೇಕಾದ ಅಗತ್ಯವಿದೆ.  ಇಂತಹ ಕ್ರೂರ, ಆಕ್ರಮಣಕಾರಿ ಮನಸ್ಥಿತಿ ಉಂಟಾಗಲು ಕಾರಣಗಳೇನು?  ಹೆಣ್ಣನ್ನು ತುಳಿಯುವುದೇ ಮೂಲ ಉದ್ದೇಶವೇ? ಅಪರಾಧಿಗಳು ಚಿಕ್ಕವರಿದ್ದಾಗ ಏನಾದರೂ ಶೋಷಣೆಗೆ ಒಳಗಾಗಿದ್ದಾರೆಯೇ?  ಅಥವಾ ಬೇರೆ ಇನ್ನೇನಾದರೂ ಕಾರಣಗಳಿವೆಯೇ ಎಂಬುದನ್ನು ತಿಳಿದುಕೊಂಡರೆ, ಮೂಲದಲ್ಲಿಯೇ ತಿದ್ದಲು ಆಗಬಹುದೇನೋ? ಒಟ್ಟಿನಲ್ಲಿ ಸಂಘಜೀವಿ ಮನುಷ್ಯ ನಾನಾ ಕಾರಣಗಳಿಂದ ಒಂಟಿಯಾಗುತ್ತಿದ್ದಾನೆ!  ಹಣಕ್ಕಾಗಿ, ಐಷಾರಾಮದ ಜೀವನಕ್ಕಾಗಿ ಸ್ವಾರ್ಥಿಯಾಗುತ್ತಿದ್ದಾನೆ. ನಂಬಿಕೆ, ಪ್ರೀತಿ, ವಿಶ್ವಾಸ, ಸಂಘಟನೆ ಎಲ್ಲವೂ ಅರ್ಥ ಕಳೆದುಕೊಳ್ಳುತ್ತಿದೆ. ಕಾನೂನು ಸುವ್ಯವಸ್ಥೆಯಿಂದ ಹಿಡಿದು ಪ್ರತಿಯೊಂದು ಸಿಸ್ಟಮ್ ಗಳಲ್ಲಿಯೂ ನಿಷ್ಟಾವಂತ ಜನರು ಕಡಿಮೆಯಾಗುತ್ತಿದ್ದಾರೆ. ಹುಳುಕುಗಳೇ ರಾರಾಜಿಸುತ್ತಿದ್ದಾವೆ. ಒಂದಷ್ಟು ಹಣ ಚೆಲ್ಲಿದರೆ ಸಾಕು! ಪಾರಾಗಬಹುದು ಎನ್ನುವ ಮನೋಭಾವ, ಎಂತಹ ಕ್ರೂರ ಕೆಲಸಕ್ಕೂ ಅಡಿಯಿಡುವಂತೆ ಮಾಡುತ್ತಿದೆ. ನಮ್ಮ ಮಕ್ಕಳಿಗೆ ಸಮಾಜದಲ್ಲಿ ಇಂಥ ವಾತಾವರಣ ಇದ್ದರೆ ಅವರೇನು ಕಲಿಯುತ್ತಾರೆ?  ಎಲ್ಲರೂ ಯೋಚಿಸಬೇಕಾದ ವಿಷಯ. ಹಾ! ಒಮ್ಮತದಿಂದ, ಒಗ್ಗಟ್ಟಿನಿಂದ ಗಂಡು, ಹೆಣ್ಣು, ಬಡವ ಬಲ್ಲಿದ ಭೇಧವಿಲ್ಲದೇ ಮಾಡಬೇಕಾದ ಕೆಲಸ.