ಹೀಗೊಂದು Disclaimer
ಒಂದಷ್ಟು ತಿಂಗಳುಗಳ ಹಿಂದೆ ಯಾವುದೋ ತರಬೇತಿ ಕಾರ್ಯಕ್ರಮಕ್ಕೆ ಹೋಗಿ ಬಂದಾಗ, ಮುಖತಃ ಪರಿಚಯವಾದ ಒಂದಷ್ಟು ವ್ಯಕ್ತಿಗಳು, ಅವರವರೇ ಪುಸ್ತಕ ರಿಲೀಸ್ ಮಾಡುವುದರಿಂದ ಹಿಡಿದು ದೂರದರ್ಶನ ಅಥವಾ ಇನ್ನಿತರ ಖಾಸಗಿ ಚಾನೆಲ್ ಗಳಲ್ಲಿ ಕಾರ್ಯಕ್ರಮ ನೀಡುತ್ತಿದ್ದದ್ದು, ಒಬ್ಬರನ್ನೊಬ್ಬರು ‘ಪ್ರೊಮೋಟ್’ ಮಾಡಿಕೊಳ್ಳುತ್ತಿದ್ದರಿಂದ ಬೇಸತ್ತು, ಯಾರನ್ನೂ ಟ್ಯಾಗ್ ಮಾಡದೇ ಸ್ಟೇಟಸ್ ಒಂದನ್ನು ಹಾಕಿಕೊಂಡಿದ್ದೆ. ನನ್ನ ಆ ಸ್ಟೇಟಸ್ ನಿಂದ ನೊಂದ ಅವರೆಲ್ಲರೂ ತಮ್ಮ, ತಮ್ಮ ವಾಲ್ ಗಳಲ್ಲಿ ಅನಾವಶ್ಯಕ ನನ್ನನ್ನು ‘ಟ್ಯಾಗ್’ ಮಾಡಿ, ಬೈದುಕೊಂಡಿದ್ದರು. ಮಾಧ್ಯಮಗಳು ಮತ್ತು ಫೇಸ್ ಬುಕ್ಕಿನಲ್ಲಿ ಈಗಾಗಲೇ ಚಿರಪರಿಚಿತರಾಗಿದ್ದುದರಿಂದ, ಅವರ ಒಂದಷ್ಟು ಬೆಂಬಲಿಗರು (ಈ ಲಿಸ್ಟಿನಲ್ಲಿ ಖ್ಯಾತ ಲೇಖಕ, ಲೇಖಕಿಯರ ಜೊತೆಗೆ ನನ್ನಂಥ ಒಂದಷ್ಟು ಅನಾಮಧೇಯರು ಇದ್ದರು) ಬಾಯಿಗೆ ಬಂದದ್ದು ಮಾತನಾಡಿದಾಗಲೇ, ‘ಓಹೋ! ನಾನೊಂದು ದೊಡ್ಡ ಹುತ್ತಕ್ಕೆ ಕೈ ಹಾಕಿದ್ದೇನೆ!’ ಎಂಬುದು ತಿಳಿದದ್ದು!
ಆದರೆ ನನ್ನಲ್ಲಿ ಪ್ರಾಮಾಣಿಕತೆ ಇದ್ದುದರಿಂದಲೋ ಅಥವಾ ಯಾವುದೇ ಹಿಡನ್ ಅಜೆಂಡಾ ಇಲ್ಲದಿದುದರಿಂದಲೋ ಅಥವಾ ಅವರ ಇನ್ಯಾವುದಾದರೂ ‘ಹುನ್ನಾರ’ವೋ ಅಥವಾ ನಾನೊಂದು ಯಕಶ್ಚಿತ್ ‘ಸಾಮಾನ್ಯ’ಳು ಎನ್ನಿಸಿದುದರಿಂದಲೋ ಅಥವಾ ನನ್ನ ವಾದ ವೈಖರಿಯಿಂದಲೋ! ನನ್ನನ್ನು ಬ್ಲಾಕ್ ಮಾಡಲಾಯಿತು. ಮತ್ಯಾರೋ ಬೇಕೆಂದೇ ನನ್ನನ್ನು ‘ಅನ್ ಫ್ರೆಂಡ್’ ಮಾಡಿ, ನಾನೇ ‘ಅವರನ್ನು’ ಅನ್ಫ್ರೆಂಡ್ ಮಾಡಿದೆ’ ಎಂದು ಹಬ್ಬಿಸಿದರು. ನನ್ನನ್ನು ‘ಬ್ಲಾಕ್’ ಮಾಡಿದ ಮೇಲೂ, ನನ್ನ ಮೇಲಿನ ವೈಯಕ್ತಿಕ ಪ್ರಹಾರಗಳು ನಡೆದೇ ಇದ್ದವು. ಆದರೆ ಉತ್ತರಿಸಲು ‘ಬ್ಲಾಕ್’ ಆಗಿದ್ದೆಯಾದ್ದರಿಂದ ಸಾಧ್ಯವಾಗಿರಲಿಲ್ಲ. ಇದು ಕೂಡ ದೌರ್ಜನ್ಯವೇ ಅಲ್ಲವೇ? ಇರಲಿ.
ರಾತ್ರೋರಾತ್ರಿ ನನ್ನ ಈ ಒಂದು ಸ್ಟೇಟಸ್, ಜೊತೆಗೆ ಒಂದಷ್ಟು ಕಮೆಂಟ್ಸ್ ಬಹಳಷ್ಟು ಗೆಳೆಯರನ್ನು (ಕಂಡರಿಯದ/ಕೇಳರಿಯದ) ಗಿಟ್ಟಿಸಿತು. ಇನ್ ಬಾಕ್ಸಿನಲ್ಲಿ ಅನುಕಂಪದ ಮಾತುಗಳು ಬಂದು ಮುಟ್ಟಿದವು. ನಾವಿದ್ದೇವೆ, ನಿನ್ನ ಜಗಳವನ್ನು ಮುಂದುವರೆಸೆಂದು ಹುರಿದುಂಬಿಸುವ ಮಾತುಗಳು ಬಂದವು. ಆದರೆ ನನ್ನ ಸ್ಟೇಟಸ್ ‘ಗುಂಪುಗಾರಿಕೆ’ಯ ವಿರುದ್ಧವಾಗಿತ್ತು. ಹಾಗಾಗಿ ನನ್ನನ್ನು ಯಾವುದೇ ‘ಗುಂಪಿಗೆ’ ಸೇರಿಸಿಕೊಳ್ಳುವ ಅವರ ಪ್ರಯತ್ನ ಸಫಲವಾಗಲಿಲ್ಲ. ನನ್ನಲ್ಲಿ ಪ್ರಾಮಾಣಿಕತೆ ಇತ್ತು, ಕಳಕಳಿ ಇತ್ತು ಹಾಗೂ ನನ್ನ ಸ್ಟೇಟಸ್ ಯಾವುದೇ ವ್ಯಕ್ತಿಗತ ದ್ವೇಷವಾಗಿರಲಿಲ್ಲ. ಆದರೂ ಕೂಡ ಸಿಕ್ಕಿದವರೆಲ್ಲರಿಗೂ, ಕೇಳಿದವರೆಲ್ಲರಿಗೂ ‘ಜಸ್ಟಿಫೈ’ ಮಾಡುವಂತ ಪರಿಸ್ಥಿತಿ ಬಂದೊದಗಿತು.
ಕೊನೆಗೊಮ್ಮೆ ನಾವು ಇಂತಹದೊಂದು ಸ್ಟೇಟಸ್ ಹಾಕಿಕೊಂಡಿಲ್ಲವೆಂಬಂತೇ / ಇಂತಹದೊಂದು ಪ್ರಕರಣವೇ ಆಗಿಲ್ಲವೆಂಬಂತೇ, ಎಲ್ಲರೂ ತಮ್ಮ, ತಮ್ಮ ಸ್ಟೇಟಸ್ ಗಳನ್ನೂ, ಕಾಮೆಂಟುಗಳನ್ನು ‘ಡಿಲೀಟ್’ ಮಾಡಿ ಸುಮ್ಮನಾಗಿಬಿಟ್ಟರು. ಆದರೆ ನನಗೆ ಮಾತ್ರ ಈ ಘಟನೆ, ಮಾಧ್ಯಮದವರ ಅಥವಾ ಸ್ವಘೋಷಿತ ಕವಿ/ಬರಹಗಾರರ ಅಥವಾ ಅವರ ಬೆಂಬಲಿಗರ ಮತ್ತು ಈ ಘಟನೆಯನ್ನು ತಮ್ಮ ಬೇಳೆ ಬೇಯಿಸಿಕೊಳ್ಳುವುದರ ಕಡೆ ತಿರುಚುವ ರಾಜಕೀಯ ವ್ಯಕ್ತಿಗಳ ಮುಖವಾಡವನ್ನು ತೆರೆದಿಟ್ಟಿತು. ನನ್ನವರು ಎಂದೇ ತಿಳಿದಿದ್ದ ಅನೇಕರು ಕೂಡ ‘ಸಾಂಸ್ಕೃತಿಕ ರಂಗದಲ್ಲಿ ಸಿಕ್ಕಾಪಟ್ಟೆ ರಾಜಕೀಯವಿದೆ. ಅವರ ಸುದ್ಧಿಗೆ ಯಾಕೆ ಹೋದೆ?’ ಎಂದು ನನಗೆ ಬುದ್ಧಿ ಹೇಳಿದರು. ಅಂದಿನಿಂದ ನಾನು ಅಕ್ಷರಶಃ ಈ ಫೇಸ್ ಬುಕ್ಕಿನಲ್ಲಿ ಏಕಾಂಗಿಯಾದೆ. ಯಾರೊಂದಿಗೂ ಚಾಟ್ ಮಾಡುವುದು ಸಲ್ಲ! ಎಂದರ್ಥ ಮಾಡಿಕೊಂಡೆ. ನನಗೆ ಸಹಾಯ ಮಾಡಲೆಂದು ಬರುವವರನ್ನು ದೂರವಿಟ್ಟೆ. ಇದರ ಹಿಂದೆ ಮತ್ತ್ಯಾವುದೋ ‘ಹುನ್ನಾರ’ವಿರಬಹುದೆಂಬುದನ್ನು ಅರ್ಥ ಮಾಡಿಕೊಂಡೆ. ಇದು ನಾನು ಕಲಿತ ಪಾಠ.
ಇಷ್ಟೆಲ್ಲಾ ಈಗೇಕೆ? ಮೊನ್ನೆಯ ‘ಪ್ರಭಾ’ ಮತ್ತು ‘ವಿ.ಆರ್. ಭಟ್’ ಅವರ ಪ್ರಕರಣ. ಅಲ್ಲಿ ನಾನು ಹಾಕಿದ ಸ್ಟೇಟಸ್ ಉಂಟು ಮಾಡಿದ ಕಿರಿಕಿರಿ! ಈ ಇಬ್ಪರ ಹೆಸರನ್ನು ಅದುವರೆವಿಗೂ ಕೇಳೇ ಇರಲಿಲ್ಲ. ಅವರಿಬ್ಬರ ಬೆಂಬಲಿಗರಂತೂ ಗೊತ್ತೇ ಇರಲಿಲ್ಲ. ಪ್ರಭಾ ಅವರು ಅರ್ಥವಿಲ್ಲದ / ಚರ್ವಿತಚರ್ವಣ / ಹಳಸಲಾದ ಸ್ಟೇಟಸ್ ಒಂದನ್ನು ಹಾಕಿಕೊಂಡಿದ್ದರು. ಅದರ ಬಗ್ಗೆ ನನಗೆ ತರ್ಕ ಮಾಡಲು ಇಷ್ಟವೂ ಇಲ್ಲ ಹಾಗೂ ಜಾತಿಯ ಬಗ್ಗೆ ಮಾತಾಡುವುದೇ ಅಸಹ್ಯ ಎಂಬ ಮನಸ್ಥಿತಿ ನನ್ನದಾದ್ದರಿಂದ ಈ ಬಗ್ಗೆ ಮಾತಾಡುವುದಿಲ್ಲ. ವಿಆರ್ ಭಟ್ ಅವರ ವೈಯಕ್ತಿಕ ಪ್ರೊಫೈಲ್ ಎಷ್ಟೇ ಗಟ್ಟಿಯಾಗಿರಲಿ, ಪತ್ರಕರ್ತನಾಗೇ ಇರಲಿ ಆದರೆ ಅವರು ಮಾಡಿದ್ದು ಅಕ್ಷಮ್ಯ ಅಪರಾಧ. ‘ಹೆಣ್ಣೊಬ್ಬಳ’ ಬಗ್ಗೆ ಅಷ್ಟು ಕೆಟ್ಟದಾಗಿ ಯಾರೂ ಕೂಡ ಮಾತಾಡಬಾರದು. ಗಾಯವಾದ ಭಾಗಕ್ಕೆ ಸೂಜಿಯಿಂದ ತಿವಿದಂತಿತ್ತು ಅವರ ಮಾತುಗಳು. ಹಾಗಾಗಿ ಅವರಿಗೆ ಶಿಕ್ಷೆಯಾಗಬೇಕು. ಇದರಲ್ಲಿ ಎರಡು ಮಾತಿಲ್ಲ.
ಪ್ರಭಾ ಅವರು ನಾನೊಬ್ಬಳು ನೊಂದಿರುವ ‘ಹೆಣ್ಣು’, ಇಂತಹ ಘಟನೆಗಳು ಪುನರಾವರ್ತನೆಯಾಗಬಾರದು ಎಂದು ಹೋರಾಟಕ್ಕೆ ನಿಂತರು. ವಿ.ಆರ್ ಮೇಲೆ ಕೇಸ್ ಹಾಕಿದರು. ಎಲ್ಲವೂ ಸರಿ. ಆದರೆ ಅದೇ ರೀತಿ ಅವರ ಸ್ಟೇಟಸ್ ಗಳಲ್ಲಿ ಇನ್ನಿತರರು ಪ್ರಭಾ ಅವರನ್ನು ಬೆಂಬಲಿಸುವ ಭರದಲ್ಲಿ ವಿ.ಆರ್ ಅವರ ಮನೆಯ ಹೆಣ್ಣುಮಕ್ಕಳ ಮೇಲೆ ಅಸಭ್ಯವಾಗಿ ಮಾತಾಡಿದರು. ವಿ.ಆರ್ ಭಟ್ ಅವರನ್ನು ಕಡಿದು, ಕೊಚ್ಚುವ ಮಾತುಗಳನ್ನು ಆಡಿದರು. ಮಚ್ಚು, ಲಾಂಗು ತೆಗೆದುಕೊಂಡು ಕಾನೂನನ್ನು ಕೈಗೆ ತೆಗೆದುಕೊಳ್ಳುವುದಕ್ಕೆ! ನಮ್ಮದು ಕನ್ನಡ ಚಿತ್ರಗಳಲ್ಲ, ಬದುಕು ಎಂದರಿಯದಷ್ಟು ದಡ್ಡರು ಯಾರೂ ಅಲ್ಲಿ ಇರಲಿಲ್ಲ. ಅತ್ಯಾಚಾರ ಪ್ರಚೋದನೆ ತಪ್ಪಾದರೆ, ಕೊಲೆಯ ಪ್ರಚೋದನೆ ಕೂಡ ತಪ್ಪೇ ಅಲ್ಲವೇ?
ಶತಶತಮಾನಗಳಿಂದ ಬಾಯಿ ಮುಚ್ಚಿ ಕುಳಿತಿದ್ದ, ಗ್ಲಾಮರ್ ಗಷ್ಟೇ, ಗಾಸಿಪ್ ಗಷ್ಟೇ ಸೀಮಿತವಾಗಿದ್ದ ನಮ್ಮ ಹೆಣ್ಣುಮಕ್ಕಳು, ಇತ್ತೀಚಿಗಿನ ದಿನಗಳಲ್ಲಿ ಮುಕ್ತವಾಗಿ ಮಾತಾಡಲು ಶುರುಮಾಡಿದ್ದಾರೆ. ಅವರನ್ನು ಪುರುಷಧೋರಣೆ ನಿಂದಿಸಿದಾಗಲೆಲ್ಲಾ, ನನ್ನಲ್ಲಿನ ‘ಹೆಣ್ಣು’ ಜಾಗೃತಳಾಗಿದ್ದಾಳೆ. ನನ್ನ ಗುಂಪುಗಾರಿಕೆ ಸ್ಟೇಟಸ್ ನ ವಿರುದ್ಧ, ನನ್ನ ವಿರುದ್ಧ ಹೋರಾಡಿದ್ದ ವ್ಯಕ್ತಿಗೆ, ಹಲವರು ಅಸಹ್ಯವಾಗಿ, ಹೊಲಸಾಗಿ ನಿಂದಿಸಿದಾಗಲೂ ನಾನು ಆಕೆಯನ್ನು ಸಪೋರ್ಟ್ ಮಾಡಿದ್ದೇನೆ. ಈಗ ವಿಆರ್ ಭಟ್ ಅವರ ಮೇಲೆ ಕೇಸ್ ಹಾಕಿ ಕೋಮು ಸೌಹಾರ್ದದ ಜೊತೆಗೆ ನೊಂದ ಹೆಣ್ಣುಮಕ್ಕಳ ಪರವಾಗಿ ನಿಂತಿರುವ ಪತ್ರಿಕೆಯ ಮಾಲಕಿ, ತಮ್ಮ ಪತ್ರಿಕೆಯಲ್ಲಿ ಹಲವಾರು ಹೆಣ್ಣುಮಕ್ಕಳ ವೈಯಕ್ತಿಕ ಘನತೆಗೆ ಧಕ್ಕೆ ತಂದಾಗ ಅಸಹ್ಯಿಸಿದ್ದೇನೆ. ಅದನ್ನು ಖಂಡಿಸಿಯೂ ಇದ್ದೇನೆ. ಕಾನೂನಿನ ಮೂಲಕ ಹೋರಾಡುತ್ತೇವೆಯೆಂದು ಆ ಹೆಣ್ಣುಮಕ್ಕಳು ಸ್ಟೇಟಸ್ ಹಾಕಿಕೊಂಡಾಗ ಸಂತೋಷಪಟ್ಟಿದ್ದೇನೆ.
ಪುರುಷಧೋರಣೆಯನ್ನು ಖಂಡಿಸಿ ಹೋರಾಟ ನಡೆಸಲು ಮುಂದಾದ ಪ್ರಭಾ, ತನ್ನಂತೇ ಇನ್ನಿತರ ಹೆಣ್ಣುಮಕ್ಕಳು ಬೈಗಳಕ್ಕೆ ಈಡಾದಾಗ, ಅದು ಕೂಡ ಅವರ ಸ್ಟೇಟಸ್ ನಲ್ಲಿಯೇ, ಒಂದಿಷ್ಟು ಖಂಡಿಸದೇ ಇದ್ದದ್ದು, ನಿಜವಾಗಿಯೂ ನನಗೆ ನೋವಾಯಿತು. ನಾನವರ ಗಮನಕ್ಕೆ ತಂದ ಮೇಲೂ ಕೂಡ ಅವರದನ್ನು ‘ನೆಗ್ಲೆಕ್ಟ್’ ಮಾಡಿದ್ದು ಯಾವ ಮನಸ್ಥಿತಿ? ಸಂತ್ರಸ್ಥೆಗಲ್ಲದೆ ಬೇರೆಯವರಿಗೆ ಆ ನೋವು ಅರ್ಥವಾಗುವುದೇ? ಟಿವಿ ಸಂದರ್ಶನದಲ್ಲಿ ಆಂಕರ್ ಕೇಳಿದ ಈ ಪ್ರಶ್ನೆಗೆ ‘ಕೋಪದ ಭರದಲ್ಲಿ ಮಾತಾಡ್ತಾರೆ! ಏನೂ ಮಾಡಲಾಗುವುದು? ಎಂಬಂತ ಬೇಜವಾಬ್ದಾರಿ ಹೇಳಿಕೆ ನೀಡಿದರೆ, ಪ್ರಭಾ ಅವರು ‘ಹೆಣ್ಣು’ ಎಂದೇ ಸಪೋರ್ಟ್ ಮಾಡಿದ್ದ ನನ್ನಂತವರಿಗೆ ಬೇಸರವಾಗಬಾರದೇ? ಪುರುಷಧೋರಣೆ ವಿರುದ್ಧ ಹೋರಾಡುವ ‘ಹೆಣ್ಣು’ ಪಕ್ಷಾತೀತಳಾಗಿ ಇರಬೇಕಲ್ಲವೇ? ಶೇಕಡಾವಾರು ಲೆಕ್ಕದಲ್ಲಿ ಹೇಳುವುದಾದರೆ, ವಿಆರ್ ಭಟ್ ಮಾತುಗಳಿಗೆ ಅಸಹ್ಯಿಸಿದವರೇ ಬಹಳ ಮಂದಿ. ಯಾವ ಹೆಣ್ಣು ಕೂಡ ವಿಆರ್ ಭಟ್ ನನ್ನು ಸಪೋರ್ಟ್ ಮಾಡಲಿಲ್ಲ.
ನನ್ನ ಮುಂದಿರುವ ಪ್ರಶ್ನೆ - ಪ್ರಭಾ ಅವರು ಹೋರಾಡುತ್ತಿರುವುದು ಯಾರ ವಿರುದ್ಧ? ಪುರೋಹಿತಶಾಹಿಗಳ ವಿರುದ್ಧವೇ? ಹೆಣ್ಣನ್ನು ಚೀಪಾಗಿ ನೋಡಿದ ಪುರುಷ ಧೋರಣೆಯ ವಿರುದ್ಧವೇ? ಇದರ ಕ್ಲಾರಿಟಿ ಅವರಿಗಿದ್ದರೆ ನಂತರದ ಹೋರಾಟದ ನಡೆಯನ್ನು ತೀರ್ಮಾನಿಸಬಹುದು. ಬ್ರಾಹ್ಮಣ್ಯದ ವಿರುದ್ಧದ ಹೋರಾಟವಾದರೆ, ಬ್ರಾಹ್ಮಣರು ಕೂಡ ಕೇಸ್ ಹಾಕುತ್ತಾರೆ ಅವರಿಗಿಷ್ಟವಿದ್ದರೆ. ಅದು ಅವರ ಹಕ್ಕಿನ ಪ್ರಶ್ನೆ ಕೂಡ. ಇವರ ಮಾತುಗಳಿಗೆ ಇವರೇ ಜವಾಬ್ದಾರರು. ಇವರು ಅದನ್ನು ಎದುರಿಸಬೇಕು. ಪುರುಷಧೋರಣೆಯ ವಿರುದ್ಧವಾದರೆ, ಈಗಾಗಲೇ ಎಲ್ಲಾ ಹೆಣ್ಣುಮಕ್ಕಳು ಪ್ರಭಾರನ್ನು ಈ ವಿಷಯದಲ್ಲಿ ಸಪೋರ್ಟ್ ಮಾಡಿದ್ದಾರೆ. ಮಾಡುತ್ತಾರೆ.
ಇಷ್ಟಾದರೂ ‘ಪ್ರಭಾ’ ಅವರನ್ನು ಬೆಂಬಲಿಸುತ್ತಿರುವ ಮಂದಿ, ಅದನ್ನು ಮೌನವಾಗಿಯೇ ಒಪ್ಪುತ್ತಿರುವ ‘ಪ್ರಭಾ’ ಹೇಳುತ್ತಿರುವುದಾದರೂ ಏನು? ಕೆಲವು ‘ಜಾಗೃತ’ ಹೆಣ್ಣುಮಕ್ಕಳು ವಿಆರ್ ಭಟ್ ರನ್ನು ಬೆಂಬಲಿಸುತ್ತಿದ್ದಾರೆ, ಅವಳು RSS ನವಳು, ಅದಕ್ಕೆ ವಿಆರ್ ಭಟ್ ಮನೆಯವರನ್ನು ಸಪೋರ್ಟ್ ಮಾಡುತ್ತಿದ್ದಾಳೆ! ಇತ್ಯಾದಿ. ಇಲ್ಲಿ ಪಕ್ಷ ಏನು ಬಂತು? ನೊಂದ ಹೆಣ್ಣು ಎಂದ ಮೇಲೆ ಇತ್ತ ಕಡೆಯೂ ಅದೇ, ಅತ್ತ ಕಡೆಯೂ ಅದೇ. ಕೇವಲ ‘ಭಟ್’ ಎಂಬುದಕ್ಕಾಗಿ ಇವರ ಹೋರಾಟವಾದರೆ, ‘ನನ್ನ’ ಸಪೋರ್ಟ್ ಇರದು. ಆದರೆ ನೊಂದ ‘ಹೆಣ್ಣು’ಮಕ್ಕಳ ಪರವಾದರೆ, ಎಲ್ಲಾ ‘ಹೆಂಗಸರು’ ಎದ್ದು ನಿಂತಾರು! ಇಡೀ ಪ್ರಕರಣವನ್ನು ರಾಜ್ಯದ ಅತ್ಯಂತ ಸೆನ್ಸೇಷನಲ್ ನ್ಯೂಸ್ ಎಂಬುದಾಗಿ ಪ್ರಕಟಿಸಿದ ಮಾಧ್ಯಮದವರಾಗಬಹುದು ಅಥವಾ ಪ್ರತಿಭಟಿಸಿದವರಾಗಬಹುದು, ಇವರ ವೈಯಕ್ತಿಕ ಹಿತಾಸಕ್ತಿಗಳೇನಿರಬಹುದು? ಎಂಬುದನ್ನೆಲ್ಲಾ ನೋಡುತ್ತಾ, ಯೋಚಿಸುತ್ತಾ ಕುಳಿತಿದ್ದ ನನ್ನಂತಹವರಿಗೆ ನಿಜವಾಗಿಯೂ ಸಮಾಜದ ದುರ್ವ್ಯವಸ್ಥೆಗೆ ಬೇಸರವಾಗದಿರದು.
ಇಷ್ಟೆಲ್ಲಾ ನಡೆಯುತ್ತಿರುವಾಗ, ನಾನು ವಿಆರ್ ಭಟ್ ಅವರನ್ನು ಸಪೋರ್ಟ್ ಮಾಡಿದ್ದೇನೆಂದು ಬಹಳ ಮಂದಿ ನನ್ನನ್ನು ಹೀಯಾಳಿಸಿದರು (ಡಿಪ್ಲೋಮಾಟಿಕ್ ಆಗಿ). ಕೆಲವರು ಇನ್ ಬಾಕ್ಸಿಗೆ ಬಂದು ಈ ಹೋರಾಟ ಯಾವ ಸ್ವರೂಪ ಪಡೆಯುತ್ತದೆ? ಎನ್ನುವುದನ್ನು ವಿವರಿಸಿದರು. ಇನ್ನೊಂದಿಷ್ಟು ಮಂದಿ ಮೊಸಳೆ ಕಣ್ಣೀರು ಸುರಿಸುತ್ತಾ ಬಂದು ‘ನನ್ನ ಜಾತಿ’ ಯ ಬಗ್ಗೆ ವಿವರಣೆ ಪಡೆದರು. ಕಮೆಂಟುಗಳಲ್ಲಿ ಇನ್ಯಾರೋ ‘Read between the lines' ಎಂದು ಪಾಠ ಮಾಡಿದರು. ಪಾಠ ಕಲಿತ ‘ನಾನು’ ಅವರ ಪೋಸ್ಟ್ ಗಳನ್ನು, ಕಮೆಂಟುಗಳನ್ನು ಕೂಡ ಹಾಗೇಯೇ ಓದುತ್ತೇನೆ ಎಂಬುದನ್ನು ಮರೆತರು. ಪ್ರಭಾ ಅಥವಾ ಇನ್ಯಾರೇ ಇರಬಹುದು ಹೆಣ್ಣು ‘ಅಬಲೆ’ ಎಂದು ಬಿಂಬಿಸುವುದರಲ್ಲಿಯೇ ಎಲ್ಲರ ಮನಸ್ಸು! :( ಒಟ್ಟಿನಲ್ಲಿ ‘ನನ್ನನ್ನು’ ಕೂಡ ಒಂದು ಗುಂಪಿಗೆ ಸೇರಿಸುವ ಹಂಬಲ, ಹುಮ್ಮಸ್ಸು, ಬಯಕೆ ಎಲ್ಲರದೂ. ಅವರಿಗೆಲ್ಲಾ ತಿಳಿಯದ್ದು ವೈಯಕ್ತಿಕ ವಿಷಯಗಳನ್ನು ನಾನೆಂದಿಗೂ ಸಾಮಾಜಿಕ ಜಾಲ ತಾಣಗಳಲ್ಲಿ ಬರೆಯುವಾಗ ಮೂರನೇಯ ವ್ಯಕ್ತಿಯಾಗಿಯೇ ಬರೆಯುತ್ತೇನೆ. ನಾನು ಯಾವುದೇ ಗುಂಪಿನೊಡನೇ ಸೇರಿಕೊಳ್ಳಲು ಇಷ್ಟಪಡುವುದಿಲ್ಲ ಹಾಗೂ ಈಗ ಇಲ್ಲಿ ಬರೆಯುತ್ತಿರುವ ‘ನಾನು’ ನಾನಲ್ಲ ಎಂಬುದು.
ಹಾಗಾದರೆ ಇಲ್ಲಿ ಬಳಸಿರುವ ‘ನಾನು’ ಯಾರು? ‘ನಾನು’ ಎಂದರೆ ‘ಅತ್ಯಂತ ಸಾಮಾನ್ಯ ವ್ಯಕ್ತಿ’!. ನಾನು ಯಾರದೋ ರಾಜಕೀಯ ದಾಳಗಳಿಗೆ ಬಲಿಯಾಗುವುದನ್ನು ಒಪ್ಪುವುದಿಲ್ಲ. ನನಗೆ ಯಾವುದೇ ಕಟ್ಟುಪಾಡುಗಳು, ಹುನ್ನಾರಗಳು, ಎಡ, ಬಲ ಎಂಬ ಸಿದ್ದಾಂತಗಳು ಕಾಡುವುದಿಲ್ಲ. ಹೆಸರಿನ ಅಥವಾ ಹಣ ಮಾಡುವ ಬಯಕೆಯಿಲ್ಲ. ನನಗೆ ಮಾಧ್ಯಮಗಳಲ್ಲಿ ಬರುವುದು ಕೂಡ ಬೇಕಿಲ್ಲ. ನನಗೆ ಬೇಕಿರುವುದು ಸಮಾಜದ ಸ್ವಾಸ್ತ್ಯ ಯಾರದೋ ರಾಜಕೀಯಕ್ಕೆ ಬಲಿಯಾಗುವುದಲ್ಲ. ಅಪ್ಪ ಹಾಕಿದ ಆಲದ ಮರಕ್ಕೆ ಜೋತು ಬೀಳುವ ವ್ಯಕ್ತಿತ್ವದ ಅವಶ್ಯಕತೆಯೂ ಇಲ್ಲಾ. ತಾತ ಮಾಡಿದ ತಪ್ಪಿಗೆ ಮೊಮ್ಮಕ್ಕಳು ಬಲಿಯಾಗುವ ಆಸೆಯಿಲ್ಲ. ಸಮಾಜದಲ್ಲಿ ಎಲ್ಲಕ್ಕಿಂತ ಹೆಚ್ಚಾಗಿ ತುಳಿತಕ್ಕೊಳಗಾಗಿರುವವರು ಬಡವರು, ರೈತರು. ಇವರನ್ನು ಮೇಲಕ್ಕೆತ್ತಬೇಕೆಂಬ ಹಪಾಹಪಿ. ಎಲ್ಲಾ ಜಾತಿ, ಮತ, ಧರ್ಮಗಳಲ್ಲೂ ಕೊಳಕಿದೆ, ಆದರೆ ಬೆಳೆಸಬೇಕಿರುವುದು ಅದರಲ್ಲಿನ ಪಾಸಿಟಿವ್ ಗುಣಗಳನ್ನಷ್ಟೆ ಎಂಬ ಅರಿವು, ಹೆಣ್ಣು ‘ಅಬಲೆ’ ಯಲ್ಲಾ, ಅವಳು ಗಂಡಿನಷ್ಟೇ ಸರಿಸಮಾನಳು ಎಂಬ ಪ್ರಜ್ಞೆ, ಯಾವುದೇ ಸಮಾಜದ ರೀತಿನೀತಿಗಳು ಮಕ್ಕಳಿಗೆ ಆದರ್ಶಪ್ರಾಯವಾಗಿರಬೇಕು. ನಮ್ಮ ಮಕ್ಕಳು ಚಂದವಾಗಿ, ಸುಂದರವಾಗಿ ಬೆಳೆಯಬೇಕೆಂದು ಅಪೇಕ್ಷೆ ಪಡುವಂತಹ ಮನಸ್ಥಿತಿಯಷ್ಟೇ. ‘ನನಗೆ’ ಬೇಕಿರುವುದು ನಿಜವಾಗಿಯೂ ‘ಗುಂಪುಗಾರಿಕೆ’ಯಲ್ಲ. ಸಮಾಜವನ್ನು ಬೆಳೆಸುವ, ಕಟ್ಟುವ ಒಂದೊಳ್ಳೆಯ ‘ಟೀಮ್’.