ಮನುಷ್ಯ ಸಂಘಜೀವಿ. ಆತ ಒಂಟಿಯಾಗಿ ಬದುಕಲೊಲ್ಲ! ಅಪ್ಪ, ಅಮ್ಮ, ಅಣ್ಣ, ತಮ್ಮ, ಅಕ್ಕ, ತಂಗಿ ಹೀಗೆ... ಹುಟ್ಟಿನಿಂದಲೇ ಆತನ ಸುತ್ತಲೂ ತನ್ನವರ ವರ್ತುಲ ಸುತ್ತಿಕೊಂಡಿರುತ್ತದೆ. ಆದರೆ ಈ ತರಹದ ರಕ್ತಸಂಬಂಧಗಳಲ್ಲದೆ, ಕೆಲವೊಂದು ಸಂಬಂಧಗಳು ಹೀಗೆಯೇ ಹತ್ತಿರವಾಗಿಬಿಡುತ್ತವೆ. ಅದಕ್ಕೊಂದು ನಿರ್ದಿಷ್ಟವಾದ ಕಾರಣಗಳಾಗಲೀ, ಘಟನೆಗಳಾಗಲೀ ಇರುವುದಿಲ್ಲ. ಇಂತಹ ಗೆಳೆತನವೆಂದರೆ ಬರೇಯ ಟೈಮ್ ಪಾಸ್ ಅಲ್ಲ. ಅಪ್ಪನ ರಕ್ಷಣೆ, ಅಮ್ಮನ ವಾತ್ಸಲ್ಯ, ಅಣ್ಣನ ಕೀಟಲೆ, ತಮ್ಮನ ತುಂಟತನ, ಅಕ್ಕ, ತಂಗಿಯರ ಕಾಳಜಿ, ಗಂಡನ ಪ್ರೀತಿ, ಮಕ್ಕಳ ಮುಗ್ದತೆ ಎಲ್ಲವೂ ಒಂದಿಡೀ ಗೆಳೆತನದಲ್ಲಿಯೇ ಸಿಕ್ಕಿಬಿಡುವುದು.
ಈ ಗೆಳೆತನಗಳಲ್ಲೂ ಎಷ್ಟೊಂದು ಬಗೆಗಳಿವೆ! ಸಿಕ್ಕಾಗ ಹೈ, ಹಲೋ, ಮುಗುಳ್ನಗೆಗಷ್ಟೇ ಸೀಮಿತವಾದ ಗೆಳೆತನ, ಆತ್ಮೀಯ ಗೆಳೆತನ, ಕುಡಿತ, ಸಿಗರೇಟ್ ಅಥವಾ ಸಿನೆಮಾ ಮುಂತಾದ ಮೋಜುಗಳಿಗಾಗಿ ಅವಲಂಬಿತವಾದ ಗೆಳೆತನ, ಯಾವುದಾದರೂ ಕೆಲಸಕಷ್ಟೇ ಮುಖ್ಯವಾಗಿರುವ ಗೆಳೆತನ, ಟೈಮ್ ಪಾಸ್ ಗೆಳೆತನ ಹೀಗೆ....... ಆತ್ಮೀಯ ಗೆಳೆತನ ಅಥವಾ ಬೆಸ್ಟ್ ಫ್ರೆಂಡ್ಸ್ ನಲ್ಲಿರುವಷ್ಟು ಮಾಧುರ್ಯ ಇನ್ಯಾವುದೇ ರಕ್ತ ಸಂಬಂಧಗಳಲ್ಲೂ ಕೂಡ ಸಿಗುವುದಿಲ್ಲ. ಜೀವನದಲ್ಲಿ ಇಂತಹ ಒಂದು ಸಂಬಂಧ ಸಿಕ್ಕರೂ ಸಾಕು, ಆ ಜೀವನ ಸಾರ್ಥಕ. ಹಾಗಾದರೆ ಇಂತಹ ಆತ್ಮೀಯ ಗೆಳೆಯರನ್ನು ಗುರುತಿಸುವುದು ಹೇಗೆ?
ಯಾವುದೇ ಕಪಟ, ಸುಳ್ಳು, ಮೋಸ ಅರಿಯದ ಅಥವಾ ನಮ್ಮ ಮುಂದೆ ಯಾವುದೇ ಸುಳ್ಳು ಅಂಗಿ ತೊಟ್ಟುಕೊಳ್ಳದೇ, ಯಾವುದೇ ಅಹಂಕಾರವಿಲ್ಲದೆ, ನಮ್ಮ ಆತ್ಮದಂತೆ ಇದ್ದುಬಿಡುವುದು. ಈ ಸಂಬಂಧದಲ್ಲಿ ಕೊಡು, ಕೊಳ್ಳುವ ಹಂಬಲವಿರುವುದಿಲ್ಲ, ಜಗಳವಾಡಿದರೂ ಅದು ಆ ವಿಷಯಕಷ್ಟೇ ಆಗಿರುತ್ತದೆಯೇ ಹೊರತು, ಮರುಕ್ಷಣ ಹೆಗಲ ಮೇಲೆ ಕೈ ಹಾಕಿಕೊಂಡು, ನಗುತ್ತಾ ಹೊರಗೆ ಹೋದಾಗ, ಎಲ್ಲರಿಗೂ ಆಶ್ಚರ್ಯವಾಗಬಹುದು. ಇವನ ಹತ್ತಿರ ನಿರ್ಭಯವಾಗಿ ಎಲ್ಲಾ ಖಾಸಗಿ ವಿಷಯಗಳನ್ನೂ ಹೇಳಬಹುದು ಅನ್ನುವ ನಂಬಿಕೆ ಇರಬೇಕು. ಅಂತಹದೊಂದು ಗೆಳೆತನ, ನಿಮ್ಮದಾಗಿದ್ದರೆ ಯಾವುದೇ ಕಾರಣಕ್ಕೂ, ಅದನ್ನು ಬಲಿ ಕೊಡಬೇಡಿ!
ಇವುಗಳನೆಲ್ಲಾ ಮುಂಚೆಯೇ ಯೋಚಿಸಿ, ಲಾಭನಷ್ಟಗಳನ್ನು ಕಾಲ್ಕುಲೇಟ್ ಮಾಡಿ, ಇಂತಹ ಗೆಳೆತನ ಪ್ರಾರಂಭಿಸಿದರೆ ಅದೊಂದು ರೀತಿಯ ವ್ಯವಹಾರ ಆಗಿಬಿಡುತ್ತದೆ. ಅದನ್ನು ಸ್ನೇಹವೆಂದು ಕರೆಯಲಾಗುವುದಿಲ್ಲ. ಆದರೆ ಯಾವುದೋ ಒಂದು ಘಟನೆಯಲ್ಲಿಯೋ, ಸಂದರ್ಭದಲ್ಲಿಯೋ ಆಕೆ / ಆತ ನಮಗೆ ಇಷ್ಟವಾಗಬಹುದು, ನಮಗೆ ತೀರಾ ಹತ್ತಿರದವಳಂತೆ, ಎಷ್ಟೋ ದಿವಸಗಳ ಪರಿಚಯದಂತೆ, ಕಂಡಕೂಡಲೇ ಇಷ್ಟವಾಗಿಬಿಡಬಹುದು. ಯಾವುದೇ ಹಿಡನ್ ಅಜೆಂಡಾ ಇಲ್ಲದೇ ಆಕೆ ನಮಗೆ ಹತ್ತಿರವಾಗಬಹುದು. ನಂತರ ಆ ಸಂಬಂಧ ಬೆಳೆಯುತ್ತಾ ಹೋಗುತ್ತದೆ. ವ್ಯಕ್ತಿ ಒಬ್ಬ ತನ್ನ ಅನುಭವಗಳ ಮೂಲಕ ಹೇಗೆ ಬೆಳೆಯುತ್ತ ಹೋಗುತ್ತಾನೋ ಹಾಗೆಯೇ ಈ ಸಂಬಂಧಗಳು ಕೂಡ ತಮ್ಮದೇ ಅನುಭವಗಳ ಮೂಲಕ ಬೆಳೆಯುತ್ತಾ ಹೋಗುತ್ತವೆ.
ಕಾಲಕ್ರಮೇಣ ಹುಡುಗ, ಹುಡುಗಿಯ ನಡುವೆ ಇರುವ ಇಂತಹ ಗೆಳೆತನ, ಪ್ರೀತಿ ಪ್ರೇಮಕ್ಕೆ ಬದಲಾಗಿ ಜೀವನ ಸಂಗಾತಿಗಳಾಗಬಹುದು. ಇವರು ನಮ್ಮ ಜೀವನದ ಅತಿ ಮುಖ್ಯ ಭಾಗವಾಗಿಬಿಡಬಹುದು ಅಥವಾ ಶುರುವಾದಾಗ ಇದ್ದ ಮಾಧುರ್ಯ, ಕಾಲಕಳೆದಂತೆ ಹಾಳಾಗಿಬಿಡಬಹುದು. ನೀನು ಬೇರೆ, ನಾನು ಬೇರೆ ಅಲ್ಲಾ, ನನ್ನ ಆತ್ಮ ನೀನು ಎಂದು ಯಾರಲ್ಲೂ ಹೇಳಿಕೊಳ್ಳದ ಗುಟ್ಟುಗಳೆಲ್ಲಾ, ಈತನೊಂದಿಗೆ ಶೇರ್ ಮಾಡಿಕೊಂಡಿದ್ದೆ ಎಂಬುದು ನಮ್ಮನ್ನು ಅಣಕಿಸಲು ಶುರು ಮಾಡಬಹುದು. ಒಟ್ಟಿನಲ್ಲಿ ಇವೆಲ್ಲವೂ ನಮ್ಮ ಜೀವನದ, ನಾವು ನಂಬಿಕೊಂಡು ಬಂದಂಥ ಮೌಲ್ಯಗಳು, ಆದ್ಯತೆಗಳು, ಜೊತೆಜೊತೆಗೆ ನಮ್ಮ ಗೆಳೆಯರ ಆದ್ಯತೆಗಳು, ನಂಬಿಕೆಗಳ ಮೇಲೆ ಅವಲಂಬಿತವಾಗಿರುತ್ತವೆ.
ಸ್ಕೂಲಿನ ಹಂತದವರೆಗೂ ಅಪ್ಪ, ಅಮ್ಮನ ಹಾಗೂ ಶಿಕ್ಷಕರ ಅಧೀನದಲ್ಲಿರುವಾಗ ಯಾರೊಂದಿಗೂ ಅಷ್ಟೊಂದು ಬಲಿಯದ ಸ್ನೇಹ ಸಂಬಂಧ, ಇದ್ದಕಿದ್ದಂತೆ ಕಾಲೇಜಿಗೆ ಬಂದ ಮೇಲೆ ಪಂಜರದಿಂದ ಹೊರ ಬಂದ ಹಕ್ಕಿಯಂತಾಗುವ ಮನಸ್ಥಿತಿ, ಕಂಡಕಂಡವರನ್ನು ಸ್ನೇಹಿತರಂತೆ ಭಾವಿಸತೊಡಗುತ್ತದೆ. ಆದರೆ ಯಾವುದೇ ಬದ್ಧತೆ ಇಲ್ಲದೆ ಉಂಟಾಗುವ ಇಂತಹ ಸ್ನೇಹ ಸಂಬಂಧಗಳು ಹಾಗೆಯೇ, ಅಷ್ಟೇ ಬೇಗ ಮುರಿದು ಬೀಳುತ್ತವೆ. ಹಾಗಾದರೆ ಇದಕ್ಕೆ ಕಾರಣಗಳೇನು? ಇಂತಹ ಸ್ನೇಹಗಳಿಗೆ ಬೆಲೆ ಇಲ್ಲವೇ? ಸ್ನೇಹವನ್ನು ಕಾಪಾಡಿಕೊಳ್ಳುವುದು ಹೇಗೆ? ಅವರನ್ನು ನಮ್ಮ ಎಷ್ಟು ಹತ್ತಿರಕ್ಕೆ ಬಿಟ್ಟುಕೊಳ್ಳಬೇಕು? ನಮ್ಮ ನಡುವೆ ಎಷ್ಟು ಅಂತರವನ್ನು ಇಟ್ಟುಕೊಳ್ಳಬೇಕು? ಇದೆಲ್ಲವನ್ನೂ ಯೋಚಿಸಬೇಕಾಗುತ್ತದೆ.
ನಮ್ಮ ಅತ್ಯುತ್ತಮ ಸ್ನೇಹವನ್ನು ಕಾಪಾಡಿಕೊಳ್ಳಲು ನಮಗೆ ಮುಖ್ಯವಾಗಿ ಬೇಕಾಗಿರುವುದು ಪರಸ್ಪರರಲ್ಲಿ ನಂಬಿಕೆ, ನಿಸ್ವಾರ್ಥತೆ ಹಾಗೂ ಆಪ್ತತೆ. ನೀವೆಷ್ಟು ಆಪ್ತತೆಯಿಂದ, ನಂಬಿಕೆಯಿಂದ, ನಿಸ್ವಾರ್ಥತೆಯಿಂದ ನಿಮ್ಮ ಗೆಳೆಯನನ್ನು ಆದರಿಸುತ್ತೀರೋ ಅಲ್ಲಿಯವರೆಗೂ ಆ ಗೆಳೆತನಕ್ಕೆ ಕುಂದಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಬದ್ಧತೆ ಬೇಕಾಗುತ್ತದೆ. ಹಾಗೆಯೇ ಒಬ್ಬರಿಗೊಬ್ಬರು ನಾವು ನೀಡುವ ಸ್ವಾತಂತ್ರ್ಯ. ಗೆಳೆತನವೆಂದಿಗೂ ಉಸಿರುಕಟ್ಟಿಸುವ ವಾತಾವರಣವನ್ನು ನಿರ್ಮಾಣ ಮಾಡಬಾರದು. ನಿಮ್ಮ ಗುಟ್ಟುಗಳನ್ನು, ನಿಮ್ಮ ಖಾಸಗಿ ವಿಷಯಗಳನ್ನು ಆತನ ಬಳಿ ಹಂಚಿಕೊಂಡಿದ್ದನ್ನು, ಆತ ಬೇರೆಲ್ಲೂ ಹೇಳದೇ, ನಿಮ್ಮಷ್ಟೇ ಅಂತಹ ವಿಷಯಗಳಿಗೆ ಗೌರವ ಕೊಡುವವನಾಗಿರಬೇಕು. ಆತ ಅಂಥವನಾಗಿರದಿದ್ದಲ್ಲಿ, ಒಂದು ಮಟ್ಟಿಗಿನ ಅಂತರ ಕಾಪಾಡಿಕೊಳ್ಳುವುದೇ ಒಳಿತು.
ಇಂತಹ ಒಂದು ಸುಂದರ, ಅಪರೂಪದ ಸ್ನೇಹ, ಕೆಲವೊಮ್ಮೆ ಕೆಲವು ಸ್ವಾರ್ಥಪರ ಜನರಿಂದ ಹಾಳಾಗಿಬಿಡುತ್ತದೆ ಅಥವಾ ಸೊರಗಿಬಿಡುತ್ತದೆ. ಹಾಗಾದಾಗ ನಮ್ಮ ಆತ್ಮಗೌರವವನ್ನು ಬದಿಗಿಟ್ಟು, ಸ್ನೇಹವನ್ನು ಕಾಪಾಡಿಕೊಳ್ಳಲು ಒಂದಷ್ಟು ಹೋರಾಡಬೇಕಾಗುತ್ತದೆ, ಹೆಣಗಬೇಕಾಗುತ್ತದೆ, ಅದು ಕೂಡ ನಮಗಾಗಿಯೇ, ಅಯ್ಯೋ! ಇವನಿಗಾಗಿ ಇಷ್ಟೆಲ್ಲಾ ಮಾಡಬೇಕಲ್ಲಾ ಎಂದು ಕೊರಗದೆ, ನನಗಾಗಿ ಎಂದು ಸಂತಸದಿಂದ ಪ್ರಯತ್ನ ಪಡಬೇಕಾಗುತ್ತದೆ. ಆದರೆ ಅದನ್ನು ಕೂಡ ಒಂದು ಹಂತದವರೆಗೂ ಮಾತ್ರ ಮಾಡಲು ಸಾಧ್ಯ. ನಮಗಿರುವಷ್ಟೇ ಆಸಕ್ತಿ, ಪ್ರೀತಿ, ಆ ಗೆಳೆಯನಲ್ಲಿಯೂ ಇರಬೇಕಾಗುತ್ತದೆ. ಏಕೆಂದರೆ ಎರಡು ಕೈ ಸೇರಿದರೆ ಮಾತ್ರ ಚಪ್ಪಾಳೆ ಅಲ್ಲವೇ? ಆಗಲಿಲ್ಲವೇ? ನಿರಾಸೆ ಬೇಡ, ಜೀವನದುದ್ದಕ್ಕೂ, ನಮ್ಮಲ್ಲಿ ಜೀವನ ಉತ್ಸಾಹ ಇರುವ ತನಕವೂ, ನಾವು ಜೀವನವನ್ನು ಪ್ರೀತಿಸುವಷ್ಟು ದಿನವೂ, ನಮಗೆ ಸ್ನೇಹ, ಸ್ನೇಹಿತರು ದೊರಕುತ್ತಲೇ ಹೋಗುತ್ತಾರೆ.
(ವಿಜಯ ಕರ್ನಾಟಕದಲ್ಲಿ ಬಂದದ್ದು)
ತುಂಬಾನೇ ಇಷ್ಟವಾಯಿತು ಬರಹ...
ReplyDelete