Wednesday, August 6, 2014

ಹೀಗೆ ಸ್ಕೂಲ್ ಗಳ ಬಗ್ಗೆ

ಪ್ರಾಬ್ಲಮ್ ಇರೋದು ನಮ್ಮ ಶಾಲೆಗಳೆಲ್ಲಾ ಕಾರ್ಪೋರೇಟ್ ಸ್ಕೂಲ್ ಗಳಾಗಿರುವುದರಿಂದ. ಹಣ ಮಾಡುವುದಷ್ಟೇ ಇವುಗಳ ಮೂಲ ಉದ್ದೇಶ. ಹಾಗಾಗಿ ಆ ಸ್ಕೂಲಿನಲ್ಲಿ ಜರ್ಮನ್, ಫ್ರೆಂಚ್ ತರಾನೇ "ಕನ್ನಡ" ಕಲಿಸ್ತಾರಂತೆ! ಅನ್ನೋದು ದೊಡ್ಡ ವಿಷಯ, ದುಡ್ಡಿನ ವಿಷಯವಾದರೆ, ತಾನಾಗಿಯೇ ಕನ್ನಡ ಕಲಿಸೋಕೆ ಮುಂದೆ ಬರ್ತಾರೆ ಇವರೆಲ್ಲಾ. ಹಾಗಾಗಿ ಇವರನ್ನು ನಂಬಿ ಪ್ರಯೋಜನವಿಲ್ಲ.
ನಾವು ಮಾಡಬೇಕಿರುವುದು ನಮ್ಮಮಕ್ಕಳಿಗೆ ನಮ್ಮ, ನಮ್ಮ ಭಾಷೆಗಳ ಮೇಲಿನ ಪ್ರೀತಿಯನ್ನು ಹೆಚ್ಚಿಸುವುದು. ಅವರೊಂದಿಗೆ ಅದೇ ಭಾಷೆಯಲ್ಲಿ ಮಾತನಾಡುವುದು, ಅದೇ ಭಾಷೆಯನ್ನು ಕೇಳಿಸುವುದು. ಮೊದಲ 3 ವರ್ಷಗಳು ನಾವು ಯಾವ ಭಾಷೆಯಲ್ಲಿ ಮಕ್ಕಳೊಡನೆ ಮಾತನಾಡುತ್ತೇವೆ, ಅದೇ ಮಕ್ಕಳ ಮಾತೃಭಾಷೆಯಾಗುತ್ತದೆ. ಕನ್ನಡ ಮಾತಾಡಿ, ಕನ್ನಡ ಡಬ್ಬಿಂಗ್ ತನ್ನಿ, ಕನ್ನಡ ಕೇಳಿಸಿ. ಓದೋಕೆ ಒಳ್ಳೆಯ ಪುಸ್ತಕಗಳನ್ನು ನೀಡಿ, ಬರೆಯೋದು ತಾನಾಗಿಯೇ ಕಲಿತಾರೆ. 

ಮಕ್ಕಳನ್ನು ಯಾವ ಭಾಷೆಯಲ್ಲಿ ಓದಿಸಬೇಕು ಅನ್ನುವ ಸಮಸ್ಯೆ ಇವತ್ತು, ನಿನ್ನೆಯದಲ್ಲ! 50 ವರ್ಷಗಳ ಹಿಂದೆ ನಮ್ಮಮ್ಮ ಕೂಡಾ ತಲೆ ಕೆಡಿಸಿಕೊಂಡಿದ್ದರು. ಹೈಸ್ಕೂಲಿನಲ್ಲಿ ಇಂಗ್ಲೀಷ್ ಪ್ರಾಧ್ಯಾಪಕರಾದ ಅವರಣ್ಣ ಹೇಳಿದಂತೆ ನಾವೆಲ್ಲರೂ ಏಳನೇ ತರಗತಿಯ ತನಕ ಕನ್ನಡದಲ್ಲಿ ಓದಿ, ನಂತರ ಇಂಗ್ಲೀಷ್ ತೆಗೆದುಕೊಂಡಿದ್ದೆವು. ನಮ್ಮ ಮಕ್ಕಳ ಕಾಲಕ್ಕೆ ಈಗ 4,5 ಮಾದರಿಯ ಶಿಕ್ಷಣ ವ್ಯವಸ್ಥೆ! - ರಾಜ್ಯದೊಂದು, ಸಿಬಿಎಸ್ ಇ, ಐಸಿಎಸ್ ಇ ಇನ್ನೂ ಇಂತಹ ಹಲವಾರು ಸಿಲಬಸ್ ಗಳು ಮಕ್ಕಳ ನಿದ್ದೆ ಕೆಡಿಸುತ್ತಿವೆ. ಬಡವ, ಬಲ್ಲಿದ, ಪೇಟೆ ಮತ್ತು ಹಳ್ಳಿ ಮಕ್ಕಳನ್ನು ಕೂಡಾ ನಮ್ಮ ಈಗಿರೋ ಶಿಕ್ಷಣ ತಲೆಕೆಡಿಸ್ತಿದೆ. ಜೊತೆಗೆ ಟಿವಿ, ಇಂಟರ್ ನೆಟ್ ಕೂಡಾ. ಹೀಗಿರುವಾಗ ಸುಪ್ರೀಂ ಕೋರ್ಟು ಕನ್ನಡದಲ್ಲೇ ಕಲಿಸಬೇಕು ಅಂತಾ ರೂಲ್ ಮಾಡಿದ್ದರೆ ಏನಾಗ್ತಿತ್ತು? ಒತ್ತಾಯದಿಂದ ನಮ್ಮ ಮಕ್ಕಳು ಕನ್ನಡ ಕಲಿತು ಎಲ್ಲಾ ಕಡೆ ಕನ್ನಡ ಡಿಂಡಿಮ ಬಾರಿಸ್ತಾರೆ? ಅಂತೀರಾ? ಚೀನಾದಲ್ಲಿ ತಮಗೆ ಇಂಗ್ಲೀಷ್ ಬಂದಿದ್ದರೆ ಎಷ್ಟು ಚಂದ ಇರುತಿತ್ತು? ಅದೊಂದೇ ನಮ್ಮ ಕೊರತೆ, ಇಲ್ಲವಾಗಿದ್ದರೆ ಅಮೇರಿಕಾವನ್ನು ಮೀರಿಸುತಿದ್ದೆವು ಅಂತಾ ಗೈಡ್ ಹೇಳ್ತಿದ್ದ! ಅಲ್ಲಿ ಕೂಡಾ ಈಗ ಮಕ್ಕಳಿಗೆ ಇಂಗ್ಲೀಷ್ ಪಾಠ ನಡೆಯುತ್ತಿದೆ! 

ಹಾಗಾದರೆ ಏನು ಮಾಡಬೇಕು? ಏನಿಲ್ಲಾ, ಮಕ್ಕಳಿಗೆ ಯಾವುದೇ ಭಾಷೆಯಾದರೂ ಪ್ರೀತಿಸಲು ಹೇಳಿಕೊಡಬೇಕು. ತಪ್ಪಿಲ್ಲದಂತೆ ಕಲಿಯಲು ಪ್ರೇರೇಪಿಸಬೇಕು. ಮಾತು ಕಲಿಯುವ ಸಮಯದಲ್ಲಿ ನಮ್ಮ ಮಾತೃ ಭಾಷೆಯಲ್ಲಿಯೇ ಮಾತಾಡಬೇಕು. ಅವರಿಗೆ ಭಾಷೆಯ ಮಹತ್ವ ತಿಳಿಸಿಕೊಡಬೇಕು. ಆಗ ಯಾವುದೇ ಭಾಷೆ ಕಲಿತರೂ ಚಂದ ಕಲಿಯುತ್ತಾರೆ. 

ತುಳುವನ್ನೇ ಕೇಳಿಸಿಕೊಂಡು ಬೆಳೆದ ಒಬ್ಬ ಮಗನಿಗೆ ಪಾಠ ಮಾಡುವಾಗ ಅರ್ಥ ಗಳನ್ನು ತುಳುವಿನಲ್ಲಿಯೇ ಹೇಳಬೇಕು, ಮತ್ತೊಬ್ಬ ಮಾತು ಕಲಿಯುವಾಗ ಕನ್ನಡ ಹೆಚ್ಚು ಕೇಳಿಸಿಕೊಂಡದ್ದರಿಂದ, ಕನ್ನಡದಲ್ಲಿಯೇ ವಿವರಿಸಬೇಕು. ಕೈಲಾಸಂ ಆಗ್ಲೇ ಹೇಳಿದ್ದರು - ಮಕ್ಕಳ ಸ್ಕೂಲ್ ಮನೇಲಲ್ವೇ! 



No comments:

Post a Comment