ಸೊಳ್ಳೆ ಕಥೆ!
ಒಂದಾನೊಂದು ಕಾಲದಲ್ಲಿ ಜಗತ್ತು ಬಹಳ ಶಾಂತವಾಗಿತ್ತು. ನಮ್ಮೊಳಗಿರುವ ಗಲೀಜಿನಿಂದಲೋ ಅಥವಾ ವಿದೇಶಿಯರ ಕೈವಾಡದಿಂದಲೋ?! ಒಂದಷ್ಟು ಸೊಳ್ಳೆಗಳು ಸೃಷ್ಠಿಯಾದವು. ಈ ಸೊಳ್ಳೆಗಳು ತಮ್ಮ ಸಂತಾನಾಭಿವೃದ್ಧಿಗಾಗಿಯೇ ರಕ್ತ ಹೀರುವ ಉದ್ದೇಶವನ್ನು ನಂಬದ ಜನರು, ಸೊಳ್ಳೆಗಳ ಈ ಆಟಾಟೋಪಕ್ಕೆ ಏನೇನೋ ಹೆಸರಿಟ್ಟರು. ರೈಟಿಸ್ಟ್ ಗಳು ಇವೆಲ್ಲಾ ಲೆಫ್ಟಿಸ್ಟ್ ಗಳ ಹುನ್ನಾರವೆಂದೂ, ಲೆಫ್ಟಿಸ್ಟ್ ಗಳು ರೈಟಿಸ್ಟ್ ಗಳ ಆಷಾಢಭೂತಿತನವನ್ನು, ಲೆಫ್ಟಿಸ್ಟ್ ಗಳ ಒಳಗಿರುವ ರೈಟಿಸ್ಟ್ ಗಳನ್ನು, ರೈಟಿಸ್ಟ್ ಗಳ ಒಳಗಿರುವ ಲೆಫ್ಟಿಸ್ಟ್ ಗಳನ್ನು ಹೀಗಳೆಯುತ್ತಾ ಕುಳಿತರು. ಸೊಳ್ಳೆಗಳ ನಿರ್ಮೂಲನಕ್ಕೆಂದು ಒಂದಷ್ಟು ಗುಂಪುಗಳು ಈ ಜನರ ಮಧ್ಯೆಯೇ ರಚಿತವಾದವು. ಆ ಗುಂಪುಗಳು ಕಳಪೆಮಟ್ಟದ ಸ್ಪ್ರೇಗಳನ್ನು ಕೊಂಡುಕೊಂಡದ್ದರಿಂದ, ಸೊಳ್ಳೆಗಳು ಅವುಗಳನ್ನು ತಿಂದು, ತೇಗಿ ಇನ್ನಷ್ಟು ಕೊಬ್ಬಿದವು. ಇನ್ನೂ ನನ್ನಂತಹ ಒಂದಷ್ಟು ಜನರು, ಸೊಳ್ಳೆಗಳನ್ನು ಹೊಡೆದು ಕೊಂದರೆ ಲೆಫ್ಟಿಸ್ಟ್ ಗಳಾಗಿಬಿಡುವುದು ಅಥವಾ ಸೊಳ್ಳೆ ಪರದೆ ಹಾಕಿ ಕೂತರೆ ರೈಟಿಸ್ಟ್ ಗಳಾಗಿಬಿಡುವುದರ ಮರ್ಮದ ರಹಸ್ಯ ಬೇಧನ ಮಾಡಲು ಹೊರಟು, ಸೊಳ್ಳೆಗಳ ಉದ್ದೇಶವನ್ನು ಅರಿತು ಹತಾಶಗೊಂಡರು. ಸೊಳ್ಳೆಗಳನ್ನು ನಿರ್ಮೂಲನ ಮಾಡುವುದಷ್ಟೇ ನಮ್ಮ ಉದ್ದೇಶವಾಗಿರಬೇಕು ಎಂಬುದನ್ನು ಸಾರಿ, ಸಾರಿ ಹೇಳಿದರೂ ಜನರು ನಂಬದೇ, ಹೀಗೇ ಹೇಳಿದವರನ್ನು ಕೂಡ ತಮಗೆ ತೋಚಿದ ಗುಂಪಿಗೆ ಸೇರಿಸುತ್ತಾ, ಬ್ರಾಂಡ್ ಮಾಡುತ್ತಾ ಹೊರಟರು.
ಮುಂದಾ?
ಏನೂ ಇಲ್ಲ, ಸದ್ಯಕ್ಕಿರುವ ಕೃತಕ ಸಲ್ಯೂಷನ್ - ವಾತಾವರಣದಲ್ಲಿ ಬಿಸಿ ಹೆಚ್ಚಿರುವುದರಿಂದ, ಕೃತಕ ಏರ್ ಕಂಡೀಷನರ್ ಬಳಸಿ, ವಾತಾವರಣವನ್ನು ತಂಪಾಗಿಸಿಕೊಂಡು, ಹೊದಿಕೆ ಹೊದ್ದು, ಸೊಳ್ಳೆಗಳೇ ಇಲ್ಲವೆಂದು ನಮ್ಮನ್ನು ನಾವೇ ನಂಬಿಸಿಕೊಳ್ಳುತ್ತಾ ಸುಮ್ಮನೆ ಕೂರುವುದೊಂದೇ ಉಪಾಯ — feeling ತಂಪು, ತಂಪು, ಕೂಲ್, ಕೂಲ್! ಎಂಥ ಹಾಟ್ ಮಗಾ?! :-).
ಜಗತ್ತಿನಲ್ಲಿ ಸೊಳ್ಳೆಗಳ ಹುಟ್ಟಿನ ಬಗ್ಗೆ, ಅವುಗಳ ದಾಂಧಲೆ ಬಗ್ಗೆ ಹೇಳಿದ್ದೆ ಅಲ್ವಾ? ಇವತ್ತು ನೊಣಗಳ ಕಥೆ ನೋಡೋಣ
ಗಲೀಜು ಇರುವೆಡೆ ನೊಣಗಳು ಕೂಡ ಇದ್ದೇ ಇರುತ್ತಲ್ಲವೇ? ಅವುಗಳಿಗಂತೂ ಸುಮಾರು ೬೫ ಮಿಲಿಯನ್ ವರ್ಷಗಳ ಇತಿಹಾಸವಿದೆಯಂತೆ! ನೊಣಗಳು ಬದುಕುವುದಾದರೂ ಹೇಗೆ? ಹೇಸಿಗೆ ತಿಂದು, ತೇಗಿದರೇ ಮಾತ್ರ ಬದುಕುತ್ತವೆ. ಹಾಗಾಗಿ ಎಲ್ಲಿ ಹೇಸಿಗೆ, ಕಸ, ಗಲೀಜು ತುಂಬಿರುತ್ತದೆಯೋ ಅಲ್ಲೆಲ್ಲಾ, ನೊಣಗಳ ಹಾವಳಿ ವಿಪರೀತ. ನೊಣಗಳ ಹಾವಳಿ ತಪ್ಪಿಸಲು ನಮ್ಮ ಮನೆ ಅಂಗಳ ಸ್ವಚ್ಛವಾಗಿಟ್ಟುಕೊಳ್ಳಬೇಕೇ ಹೊರತು, ನೊಣಗಳನ್ನು ದೂಷಿಸುವುದಲ್ಲ ಅಲ್ಲವೇ?
ಸೊಳ್ಳೆಗಳಿಗೆ ನೊಣಗಳನ್ನು ಕಂಡರೆ ಅಸೂಯೆ, ಈ ನೊಣಗಳು ಗಟ್ಟಿಗರು, ನಮ್ಮಷ್ಟು ಸುಲಭವಾಗಿ ಸಾಯುವವರಲ್ಲ, ಸಂಗೀತ ಹಾಡುತ್ತಾ ಜನರನ್ನು ಮರುಳು ಮಾಡುತ್ತಾ ರೋಗಗಳನ್ನು ಎಷ್ಟು ಸುಲಭವಾಗಿ ಹರಡಿಬಿಡುತ್ತವೆ, ಆದರೆ ನಾವು ಜನರ ರಕ್ತ ಹೀರಲೇ ಬೇಕು, ಹಾಗಾಗಿ ನಮ್ಮ ಕೆಲಸ ಕಷ್ಟ ಎಂಬುದು ಸೊಳ್ಳೆಗಳ ಆಗ್ರಹ. ಇಡೀ ಜಗತ್ತಿನ ಹೇಸಿಗೆಯನ್ನು ತಿಂದು, ಸ್ವಚ್ಛ ಮಾಡುತ್ತಿದ್ದೇವೆಂಬ ಅಹಂ ನೊಣಗಳದ್ದು. ಆದರೆ ನಮ್ಮ ಜನರೋ ತಮ್ಮ ತಮ್ಮ ಮನೆಯ ಗಲೀಜನ್ನು ಸ್ವಚ್ಛಗೊಳಿಸದೇ, ಮತ್ತೊಬ್ಬರ ಮನೆಯ ಕಾಂಪೌಂಡ್ ನೋಡುತ್ತಾ ಕುಳಿತಿರುವುದು, ಹಾಗೂ ಇದರಿಂದ ಇನ್ನಷ್ಟು ಸೊಳ್ಳೆ, ನೊಣಗಳ ಹುಟ್ಟಿಗೆ ಕಾರಣವಾಗುತ್ತಿರುವುದು ಬೇಸರದ ಸಂಗತಿ
ಸಾಂಕ್ರಮಿಕ ರೋಗಗಳು ಇಬ್ಬರಿಂದಲೂ ಹರಡುತ್ತಿವೆ, ಇವರಿಬ್ಬರನ್ನೂ ನಿರ್ಮೂಲನಗೊಳಿಸಬೇಕು, ಮತ್ತು ಹೇಗೆ? ಎಂಬುದರ ಬಗ್ಗೆ ಚರ್ಚೆಯಾಗದೇ, ಸೊಳ್ಳೆಗಳ ಶಕ್ತಿ ಹೆಚ್ಚೊ? ನೊಣಗಳದ್ದೋ? ಎಂಬ ಚರ್ಚೆಯಾಗುತ್ತಿರುವುದು ನಿಜವಾಗಿಯೂ ಶೋಚನೀಯ ಪರಿಸ್ಥಿತಿ !
‘x' ಎಂದರೆ ಅಸಹ್ಯ, ಕ್ರೂರ, ಭೀಬತ್ಸ. ಹಾಗೆಯೇ ‘D' ಎಂದರೆ ಅಸಹನೆ, ನಿಂದನೆ, ದಬ್ಬಾಳಿಕೆ. ಸೊಳ್ಳೆಯೊಂದಕ್ಕೆ ‘x' ಎಂದು ಹೇಳಿದರೆ ಮರ್ಮಾಘಾತವಾಗುವುದು. ಹಾಗೆಯೇ ನೊಣಕ್ಕೆ ‘D' ಎಂದರೆ ತಡೆಯಲಾರದಷ್ಟು ಸಿಟ್ಟು ಬರುವುದು. ಹೀಗಿದ್ದಾಗ ಸುಖಾಸುಮ್ಮನೆ ಸೊಳ್ಳೆಯೊಂದು ನೊಣಕ್ಕೆ ‘D' ಎಂದಿತು. ನೊಣವು ನನ್ನನ್ನು ‘D’ ಎನ್ನುತ್ತೀಯೇ? ಹಾಗಾದರೆ ನೀನು ‘x' ಎಂದಿತು. ‘x' ಎಂದರೆ ಸೊಳ್ಳೆಗೆ ಆಘಾತವಾಗುವುದು ಎಂದು ತಿಳಿದೇ ಹೇಳಿತು. ನಂತರ ನಡೆದದ್ದು ಕೋಲಾಹಲ. ಈ ಕೋಲಾಹಲದಲ್ಲಿ ಜನರಿಗೆ ಯಾರನ್ನು ಸಪೋರ್ಟ್ ಮಾಡಬೇಕೆನ್ನುವುದು ಸಮಸ್ಯೆ! ಜನರಿಗೆ ಸೊಳ್ಳೆಯೂ ಹಾಗೂ ನೊಣ ಎರಡೂ ಕೂಡ ರೋಗವನ್ನು ಹಬ್ಬಿಸುವುದರಿಂದ ಎರಡೂ ಕೂಡ ನಾಶವಾಗಲಿ ಎಂಬ ಬಯಕೆ. ಒಂದು ಒಳ್ಳೆಯ ಸೊಳ್ಳೆ ಬ್ಯಾಟ್ (ನೊಣವನ್ನು ಸಾಯಿಸುವಂತದ್ದು) ತೊಗೊಬೇಕು ಅರ್ಜೆಂಟಾಗಿ! :)
No comments:
Post a Comment