ಅವತ್ತು ಯಾವತ್ತೋ ವಿಶ್ವ ಅಮ್ಮಂದಿರ ದಿನವಂತೆ! ನಮ್ಮ ಭಾರತದಲ್ಲಿ ಇರೋ, ಇಲ್ಲದೆ ಇರೋ ಮೂರು ಮುಕ್ಕಾಲು ಕೋಟಿ ದೇವತೆಗಳಿಗೊಂದು ಹಬ್ಬ ಮಾಡಿಕೊಂಡು, ಆ ಆಚರಣೆ, ಈ ಸಂಪ್ರದಾಯವೆಂದು ಬಂಧುಬಾಂದವರೆಲ್ಲರೂ ಒಡಗೂಡಿ ಹಬ್ಬಗಳನ್ನು ಸಂಭ್ರಮದಿಂದ ಆಚರಿಸುವಾಗ, ಈ ಅಪ್ಪಂದಿರ, ಅಮ್ಮಂದಿರ, ಪ್ರೇಮಿಗಳ ದಿನವೆಂದು ಬಲವಂತವಾಗಿ ನೆನಪಿಸಿಕೊಂಡು ಶುಭಾಶಯಗಳಿಗಷ್ಟೇ ಸೀಮಿತವಾಗಿಬಿಡುವ ಈ ಪಾಶ್ಚಾತ್ಯ ಅನುಕರಣೆ ನನಗೇನೂ ಅಷ್ಟೊಂದು ಇಷ್ಟವಿಲ್ಲ. ಸಂಬಂಧಗಳ ಬಗ್ಗೆ ಯಾವುದೇ ರೀತಿಯ ಭಾವನಾತ್ಮಕ ಒಡನಾಟ ಅಷ್ಟೇನೂ ಇರದ ಪಾಶ್ಚಾತ್ಯರಿಗೆ ಈ ದಿನಗಳೆಲ್ಲವೂ ಮುಖ್ಯವಾಗಿರಬಹುದೇನೋ? ಆದರೂ ನಮ್ಮ ಜನರೆಲ್ಲರೂ ಈ ಎಲ್ಲಾ ಪಾಶ್ಚಾತ್ಯ ದಿನಗಳಿಗೆ ಮುಗಿ ಬಿದ್ದು, ಶುಭಾಶಯಗಳನ್ನು ಹೇಳುವುದನ್ನು ಕಂಡಾಗ ನನಗೆ ಆಶ್ಚರ್ಯವಾಗುವುದು. ಅದರಲ್ಲೂ ಈ ಸಾಮಾಜಿಕ ಜಾಲತಾಣಗಳಿಗೆ ಜನರು ಆಕರ್ಷಿತರಾದ ಮೇಲಂತೂ, ಮನೆಯಲ್ಲೇ ಇರುವ ಗಂಡನಿಗೂ, ಮಕ್ಕಳಿಗೂ ಕೂಡ ಫ಼ೇಸ್ ಬುಕ್ ನಲ್ಲೇ ಮದುವೆಯ, ಹುಟ್ಟಿದ ಹಬ್ಬದ ಶುಭಾಶಯಗಳನ್ನು ಹೇಳುವುದನ್ನು ಕಂಡರೆ ಅಳುವುದೋ, ನಗುವುದೋ ನೀವೇ ಹೇಳಿ!
ಇದನ್ನೆಲ್ಲಾ ನಾನೇಕೆ ಇಂದು ಬರೆಯುತ್ತಿದ್ದೇನೆ? ವಿಶೇಷವಾಗಿ ಬಾಪು ಸತ್ತ ದಿವಸದಂದು! ಚಿಕ್ಕಂದಿನಲ್ಲಿ ಪರೀಕ್ಷೆಗೆ ಓದುವಾಗ, ನಾನೆಂದು ಗಾಂಧೀಜಿಯವರು ಸತ್ತದ್ದು ಜನವರಿ ೩೦ ರಂದು ಎಂದು ಬಾಯಿಪಾಠ ಮಾಡಿದ್ದೇ ಇಲ್ಲ. ಏಕೆಂದರೆ ಜನವರಿ ೩೦ ಅಮ್ಮ ಹುಟ್ಟಿದ ದಿವಸ! ಪೋರ ಬಂದರಿನಲ್ಲಿ ಗಾಂಧೀಜಿಯವರ ಜನನ ಹಾಗೇ, ಹೀಗೆ ಎಂದೆಲ್ಲಾ ಆಗಾಗ ನೆನಪಿಸಿಕೊಳ್ಳುತ್ತಿದ್ದರೂ, ಸತ್ತದ್ದು ಎಂಬ ಪ್ರಶ್ನೆ ಮೂಡಿದ ಕೂಡಲೇ ಮುಖದಲ್ಲಿ ಮುಗುಳ್ನಗೆ ಮೂಡಿಬಿಡುತ್ತಿತ್ತು. ಈಗ ನನ್ನ ಮಕ್ಕಳಿಗೂ ಕೂಡ ಗಾಂಧೀಜಿ ಸತ್ತ ದಿವಸ ಎಂದರೆ ಅವರ ‘ದೊಡ್ಡ’ ಹುಟ್ಟಿದ ದಿವಸವೆಂದೇ ನೆನಪು! ಅಕ್ಕನ ಮಗಳು ಗಾಂಧಿ ಜಯಂತಿಯಂದು ಹುಟ್ಟಿದ ಮೇಲೆ, ಈ ಎರಡು ದಿನಗಳನ್ನು ನೆನಪಿಟ್ಟುಕೊಳ್ಳುವುದು ಸಲೀಸು! ಬಹುತೇಕರ ಮನೆಯಲ್ಲಿ ಅಪ್ಪನನ್ನು ಬಹುವಚನದಲ್ಲಿಯೂ, ಅಮ್ಮನನ್ನು ಏಕವಚನದಲ್ಲಿಯೂ ಕರೆಯುತ್ತಾರೆ. ಆದರೆ ನಮ್ಮನೆಯಲ್ಲಿ ಅಮ್ಮನನ್ನು ಕೂಡಾ ಬಹುವಚನದಲ್ಲಿಯೇ ಮಾತನಾಡಿಸುತ್ತೇವೆ. ನನ್ನ ಶಾಲೆಯ ಗೆಳತಿಯರೆಲ್ಲರಿಗೂ ಇದೊಂದು ಬೆರಗು!
ಅಮ್ಮನಿಗೆ ನಾವು ಒಟ್ಟು ಐದು ಜನ ಮಕ್ಕಳು. ನಾವೆಂದೂ ಆಕೆಯ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸಿದವರಲ್ಲ. ಆಗೊಂದು, ಈಗೊಂದು ತಮ್ಮ ಅಮ್ಮನ ಬಗ್ಗೆ, ಅಪ್ಪನ ಬಗ್ಗೆ, ಬಹಳಷ್ಟು ಲೇಖನಗಳು ಬರುತ್ತಿದ್ದನ್ನು ಓದುತ್ತಿದ್ದರೂ ಕೂಡ, ನಮಗೆಂದೂ ನಮ್ಮಮ್ಮನ ಬಗ್ಗೆ ಬರೆಯಬೇಕೆಂದು ಅಥವಾ ಹೇಳಿಕೊಳ್ಳಬೇಕೆಂದು ಅನಿಸಿರಲಿಲ್ಲ. ಇದನ್ನೆಲ್ಲಾ ಬರೆಯುವುದು ವೈಯಕ್ತಿಕ, ನಮ್ಮ ಬಗ್ಗೆಯೇ ಹೇಳಿಕೊಳ್ಳುವ ಹೆಚ್ಚುಗಾರಿಕೆ ಏಕೆ? ನಾವೇನೂ ಸೆಲೆಬ್ರಿಟಿಗಳೇ? ಎಂದೇ ನನ್ನ ಭಾವನೆಯಿತ್ತು. ಈಗ ಇದೆಲ್ಲವನ್ನೂ ಬರೆಯುತ್ತಿದ್ದೇನೆ ಎಂಬುದು ಕೂಡ ಯಾರಿಗೂ ತಿಳಿದಿಲ್ಲ. ಬಹುಶಃ ಗೊತ್ತಾಗಿದ್ದರೆ ಬಿಡುತ್ತಿದ್ದರೋ ಇಲ್ಲವೋ? ಅಮ್ಮನಿಗೆ ಇದು ನಿಜವಾಗಿಯೂ ಸರ್ಪ್ರೈಸ್. ಆದರೆ ಖುಷಿ ಪಡುತ್ತಾರೋ? ಹೆಮ್ಮೆ ಪಡುತ್ತಾರೋ? ಅಥವಾ ಯಾಕೆ ಬರೆಯೋಕೆ ಹೋದೆ? ಎಂದು ಬೇಸರಿಸುತ್ತಾರೋ? ಗೊತ್ತಿಲ್ಲ. ಆದರೂ ಆಕೆ ಬೇರೆಯವರಿಗೆ ಸೆಲೆಬ್ರಿಟಿ ಅಲ್ಲದಿದ್ದರೂ, ನನಗೆ, ಆಕೆಯ ಮಕ್ಕಳಿಗೆ, ಅವರು ದೊಡ್ಡ, ನಿಜವಾದ ಸೆಲೆಬ್ರಿಟಿ! ಹಾಗಾಗಿ ಅಮ್ಮನಿಗೊಂದು ನನ್ನ ಕಡೆಯಿಂದ ಹುಟ್ಟುಹಬ್ಬಕ್ಕೆ ಈ ಪುಟ್ಟ ಗಿಫ್ಟ್.
ಅಮ್ಮ ಎಂದ ಕೂಡಲೇ ನನಗೆ ಮೊದಲಿಗೆ ನೆನಪಾಗುವುದು ಸುಮಾರು ನನಗೆ ೫, ೬ ವರ್ಷಗಳಿದ್ದಾಗ ಶೃಂಗೇರಿಯ ಶಾರದಾಮಾತೆಯ?! (ನೆನಪಿಲ್ಲ) ಪಾದಗಳ ಫೋಟೋ ನಮ್ಮ ದೇವರ ಕೋಣೆಯಲ್ಲಿದ್ದದ್ದು! ಅದರ ಮೇಲೆ ಅಮ್ಮನವರ ಪಾದ ಎಂದು ಬರೆದಿತ್ತು. ನಾನು ಬೆಳಿಗ್ಗೆ ಎದ್ದ ಕೂಡಲೇ ಆ ಫೋಟೋಗೆ ಎದ್ದು ನಮ್ಮಮ್ಮನ ಪಾದಗಳೆಂದು ನಮಸ್ಕರಿಸುತ್ತಿದ್ದೆ. ಮನೆಗೆ ಬಂದವರೆಲ್ಲರಿಗೂ, ನಮ್ಮಮ್ಮನ ಪಾದಗಳೆಂದು ಹೇಳಿಯೇ, ಆ ಫೋಟೋವನ್ನು ಪರಿಚಯಿಸುತ್ತಿದ್ದೆ! ಎಲ್ಲರೂ ನಗುತ್ತಿದ್ದದ್ದು ಅರಿವಿಗೆ ಬಂದರೂ, ಯಾಕೆ ನಗುತ್ತಿದ್ದಾರೆ? ಎಂಬುದು ಅರ್ಥವಾಗುತ್ತಿರಲಿಲ್ಲ. ತದನಂತರ ೪, ೫ ನೇ ತರಗತಿಯವರೆವಿಗೂ ಯಾವುದೇ ಪರೀಕ್ಷೆ (ಕಿರು, ಅರೆ, ವಾರ್ಷಿಕ) ಗಳ ದಿವಸ, ಬಹಳ ಉತ್ಸಾಹದಲ್ಲಿ ಅಮ್ಮನಿಗೆ ನಮಸ್ಕಾರ ಮಾಡಿ ಹೋಗುತ್ತಿದ್ದದ್ದು! ಸ್ವಲ್ಪ ತಿಳುವಳಿಕೆ?! ಬಂದ ನಂತರ ಇದೆಲ್ಲಕ್ಕೂ ಫುಲ್ ಸ್ಟಾಪ್ ಬಿತ್ತು. ಆಗಲೋ, ಈಗಲೋ ಒಮ್ಮೊಮ್ಮೆ ಇದ್ದಕ್ಕಿದ್ದಂತೆ ಹಬ್ಬ, ಹರಿದಿನಗಳಂದು ನಮಸ್ಕಾರ ಮಾಡುವುದುಂಟು (ಮಕ್ಕಳಿಗೆ ಇದೆಲ್ಲವೂ ತಿಳಿದಿರಬೇಕು ಎನ್ನುವ ಕಾರಣಕ್ಕಾಗಿ)
ಅಮ್ಮ ಸ್ವಾತಂತ್ರ ಪೂರ್ವದಲ್ಲಿ ಹುಟ್ಟಿದವರು. ಸ್ವಾತಂತ್ರ್ಯ ಬಂದಾಗ ಬಹುಶಃ ಅವರಿಗೆ ೪ ವರ್ಷವೆನಿಸುತ್ತದೆ. ಅವರ ಅಕ್ಕನ ಶಾಲೆಯಲ್ಲಿ ಬೂಂದಿ ಕಾಳು ಕೊಟ್ಟಿದ್ದರೆಂದು ಅವರು ಹೇಳುತ್ತಿದ್ದ ನೆನಪು. ಅಮ್ಮನ ಅಣ್ಣ ಗಾಂಧಿ ತತ್ವಗಳಿಂದ ಆಕರ್ಷಿತರಾದವರು. ಅವರು ಚರಕ ತಂದು, ನೂಲನ್ನು ಕೂಡ ನೇಯುತ್ತಿದ್ದರಂತೆ. ಇವತ್ತಿಗೂ ಕೂಡ ಅಮ್ಮನ ಅಣ್ಣ ತನ್ನ ಕೆಲಸವನ್ನು ತಾನೇ ಮಾಡಿಕೊಳ್ಳಬೇಕು, ಯಾರ ಮೇಲೂ ಡಿಪೆಂಡ್ ಆಗಬಾರದೆಂದೇ ಬಯಸುವವರು. ಅಮ್ಮ ಕೂಡ ಅವರ ಅಣ್ಣನಂತೆಯೇ ಗಾಂಧಿ ತತ್ವಗಳಿಂದ, ಆದರ್ಶಗಳಿಂದ ಪ್ರೇರಿತರಾದವರು. ಅದಕ್ಕಿಂತಲೂ ಹೆಚ್ಚಿಗೆ ತನ್ನ ಅಣ್ಣನ ತತ್ವಗಳಿಂದ ಪ್ರೇರಿತರಾದವರು. ತನ್ನ ಆದರ್ಶವನ್ನು ತನ್ನ ತಂಗಿಯ ಮಕ್ಕಳು ಪಾಲಿಸುತ್ತಿದ್ದಾರೆಂದು ಮಾವನಿಗೆ ನಮ್ಮ ಮೇಲೆ ಪ್ರೀತಿ, ಅಮ್ಮನಿಗೆ ತನ್ನಣ್ಣನ ಮೆಚ್ಚಿಗೆ ಗಳಿಸಿರುವರೆಂಬ ಹೆಮ್ಮೆ. ನಾನೋ ಅಥವಾ ನನ್ನ ಮಕ್ಕಳು, ಮನೆಯ ಕೆಲಸದವಳಿಗೆ ನಾವು ಮಾಡಿಕೊಳ್ಳಬಹುದಾದ ಕೆಲಸವನ್ನು ಹೇಳಿದರೆ, ಅಮ್ಮನಿಗೆ ಸಿಡಿಮಿಡಿ. ‘ನಿಮ್ಮ ನಿಮ್ಮ ಕೆಲಸ ನೀವೇ ಮಾಡಿಕೊಳ್ಳಿ, ಯಾಕೆ ಬೇರೆಯವರ ಮೇಲೆ ಅವಲಂಬನೆಯಾಗ್ತೀರಿ’ ಎಂಬುವುದು ಅವರ ತರ್ಕ. ನನ್ನ ಕೈಕಾಲು ಗಟ್ಟಿಯಿರುವವರೆಗೂ ಯಾರ ಮನೆಯಲ್ಲಿ ತನ್ನ ಅಗತ್ಯವಿರುತ್ತದೆಯೋ (ಕೆಲಸ ಮಾಡಲು!) ಅಲ್ಲಿರುತ್ತೇನೆ. ಯಾರ ಮೇಲೂ ಭಾರವಾಗದೇ, ಹೀಗೆ ಕೆಲಸ ಮಾಡುತ್ತಿರುವಾಗಲೇ ತೀರಿಕೊಳ್ಳಬೇಕೆಂಬುದು ಅಮ್ಮನ ಜೀವನದ ಮಹದಾಸೆ
ಆಗಿನ ಕಾಲದಲ್ಲಿ ‘ಅಮ್ಮ’ ಎಸ್ ಎಸ್ ಎಲ್ ಸಿ ಓದಿದ್ದು (ಹಾಗಂದರೆ, ಅವರ ರೆಡಿ ಉತ್ತರ ಅದು ಎಸ್ ಎಸ್ ಎಲ್ ಸಿ ಯಲ್ಲಾ, ಆಗ ೧೧ನೇ ತರಗತಿಯಿತ್ತು ಎಂಬುದು) ವಿಶೇಷ. ತುಳುನಾಡಿನಲ್ಲಿ ನಮ್ಮ ಜನರಲ್ಲಿ ವರದಕ್ಷಿಣೆ ಎಂಬ ಪಿಡುಗು ಇಲ್ಲದಿದ್ದರೂ, ಚಿನ್ನದ ಬಯಕೆ ಹೆಚ್ಚು. ಅಮ್ಮನನ್ನು ಮದುವೆ ಮಾಡಿಕೊಡುವಾಗ, ಅಮ್ಮನನ್ನು ನೋಡಲು ಬಂದವರೊಬ್ಬರೂ ‘ಚಿನ್ನ’ ಹೆಚ್ಚಿಗೆ ಕೇಳಿದರೆಂದು ಅಮ್ಮನ ಅಮ್ಮ ಆ ಹುಡುಗನನ್ನು ತಿರಸ್ಕರಿಸಿದ್ದರಂತೆ. ‘ನನ್ನ ಮಗಳನ್ನು ಎಸ್ ಎಸ್ ಎಲ್ ಸಿ ತನಕ ಓದಿಸಿರುವುದೇ ದೊಡ್ಡ ಬಂಗಾರ’ ಎಂದು ಹೇಳಿ ಅವರನ್ನು ವಾಪಾಸು ಕಳಿಸಿದ್ದರಂತೆ. ಅಪ್ಪ ನೋಡಲು ಚಂದವಿದ್ದುದರಿಂದ, ಬೆಂಗಳೂರಿನಲ್ಲಿ ಒಳ್ಳೆಯ ಕೆಲಸವಿದೆ ಎಂದು ಮದುವೆ ಮಾಡಿಕೊಟ್ಟರು. ಆದರೆ ಮದುವೆಯಾಗಿ ಬಂದ ನಂತರವೇ, ಅಪ್ಪನಿಗೆ ಸರಿಯಾದ ಕೆಲಸವಿಲ್ಲ ಎಂದು ತಿಳಿದ ಅಮ್ಮ, ನಂತರ ಜೀವನದಲ್ಲಿ ನೆಲೆಸಲು ಪಟ್ಟಿದೆಲ್ಲಾ ದೊಡ್ಡ ಪರಿಪಾಟಲು.
ತನ್ನ ಜೀವನದ ಅತ್ಯಂತ ಸಂಕಷ್ಟದ ದಿನಗಳಲ್ಲಿ, ನೆರೆಹೊರೆಯವರಿಗಾಗಲೀ ಅಥವಾ ನೆಂಟರಿಷ್ಟರಿಗಾಗಲೀ ಕೇರ್ ಮಾಡದೇ ಮಕ್ಕಳಿಗಾಗಿ ತನ್ನೆಲ್ಲಾ ಸುಖವನ್ನೂ ಧಾರೆಯೆರೆದದ್ದು ಅಮ್ಮ. ಅಮ್ಮ ತನ್ನೆಲ್ಲಾ ಕಷ್ಟಗಳನ್ನು ನೆಗ್ಲೆಕ್ಟ್ ಮಾಡಿದ್ದು, ನಮಗೋಸ್ಕರ, ನಮ್ಮನ್ನು ಒಂದು ನೆಲೆಗೆ ತರುವುದಕೋಸ್ಕರ. ಅಮ್ಮ ಹೊರಹೋಗಿ ದುಡಿಯುವುದು ಅಪ್ಪನಿಗಿಷ್ಟವಿಲ್ಲದ್ದರಿಂದ, ಮನೆಯಲ್ಲಿಯೇ ಕುಳಿತು, ಪುಡಿಗಾಸಿಗಾಗಿ ದುಡಿಯುತ್ತಿದ್ದರು. ಸಣ್ಣ ವಯಸ್ಸಿನಲ್ಲಿಯೇ ವಿಧವೆಯಾದ ಆಕೆ, ನಮ್ಮನ್ನು ಬೆಳೆಸಲು ಕಷ್ಟಪಟ್ಟದ್ದು ದೊಡ್ಡ ಸಾಹಸವೇ ಸೈ. ನಿಮಗೆ ವಿದ್ಯೆ ಕಲಿಸಿದ್ದು ಬಿಟ್ಟರೆ ನಾನ್ಯಾವ ಆಸ್ತಿಯನ್ನು ಕೊಡಲಿಲ್ಲ ಎಂದಾಕೆ ಒಮ್ಮೊಮ್ಮೆ ಕೊರಗುವುದ್ದಿದೆ. ಆಗೆಲ್ಲಾ ನಾವೆಲ್ಲರೂ ‘ನಾವು ಒಬ್ಬೊಬ್ಬರೂ ಇಷ್ಟು ಕೋಟಿ ಬಾಳುತ್ತಿದ್ದೇವೆ’ ಎಂದು ತಮಾಷೆ ಕೂಡ ಮಾಡುವುದಿದೆ. ಆಕೆಯೇ ತನ್ನೆಲ್ಲಾ ಈ ಜೀವನ ಚರಿತ್ರೆಯನ್ನು ಬರೆಯುತ್ತಿರುವುದರಿಂದ, ಆಕೆಯ ಜೀವನದ ಬಗ್ಗೆ ನಾನು ಬರೆಯುವುದು ಸರಿಯಾಗದು.
ಕೊನೆಯ ಮಗಳಾದ್ದರಿಂದ ಹಾಗೂ ಅಪ್ಪ ಬೇಗ ತೀರಿಕೊಂಡದ್ದರಿಂದ, ನಾನು ಅಮ್ಮನ ಮೇಲೆ ಎಲ್ಲಕ್ಕೂ ಭಯಂಕರ ಅವಲಂಬಿತಳಾಗಿದ್ದೆ. ಹಾಗಾಗಿ, ಆಕೆಯ ಪ್ರೀತಿ ಬೇರೆಯವರಿಗೆ ಹೋಲಿಸಿದರೆ ನನಗೊಂದಿಷ್ಟು ಹೆಚ್ಚೇ! ಆದರೂ ಒಮ್ಮೊಮ್ಮೆ ಮಕ್ಕಳಲ್ಲಿ ಆಕೆಗೆ ಯಾರ ಮೇಲೆ ಹೆಚ್ಚು ಪ್ರೀತಿ? ಎಂಬುವ ತರ್ಕ ಬಂದಾಗಲೆಲ್ಲಾ, ಅಮ್ಮ ಹೇಳುತ್ತಿದ್ದದ್ದು ಇಷ್ಟೇ – ಪ್ರೀತಿ ಎಲ್ಲರ ಮೇಲೂ ಸಮನಾಗಿಯೇ ಇರುತ್ತದೆ. ಆದರೆ ನನ್ನ ಮಕ್ಕಳಲ್ಲಿ ಯಾರಿಗೆ ಬೇರೆಯವರಿಗಿಂತ ಹೆಚ್ಚಿನ ಕಷ್ಟ ಇರುತ್ತದೆಯೋ ಅವರ ಮೇಲೆ ಒಂದಿಷ್ಟು ಹೆಚ್ಚಿನ ಗಮನವಿರುತ್ತದೆ. ಅದು ಪ್ರೀತಿ ಎನ್ನುವುದಕ್ಕಿಂತ ‘ಕಳಕಳಿ’ ಎನ್ನಬಹುದು ಎಂದುತ್ತರ ಅವರ ಬಳಿ ಯಾವಾಗಲೂ ರೆಡಿ! ಆದರೂ ಅಮ್ಮನಿಗೆ ನನ್ನ ‘ದೊಡ್ಡಣ್ಣ’ನ ಮೇಲೆ ಹೆಚ್ಚಿನ ಪ್ರೀತಿ! ಎಂಬ ಗುಮಾನಿ ನಮ್ಮೆಲ್ಲರದು!
ವಿದ್ಯೆಯ ಬೆಲೆ ಅರಿತಿದ್ದ ಅಮ್ಮ, ಎಷ್ಟೇ ಬಡತನವಿದ್ದರೂ, ಪುಸ್ತಕಗಳನ್ನು ಕೊಳ್ಳಲು ತೊಂದರೆ ಮಾಡುತ್ತಿರಲಿಲ್ಲ. ಚಿಕ್ಕ ವಯಸ್ಸಿನಲ್ಲಿ ಮಾತೃ ಭಾಷೆಯಲ್ಲಿ ಮಕ್ಕಳು ವಿದ್ಯೆ ಕಲಿಯಬೇಕು, ನಂತರ ಹೈಸ್ಕೂಲಿಗೆ ಬಂದ ಮೇಲೆ ಇಂಗ್ಲೀಷ್ ಕಲಿಯಬಹುದು ಎಂದು ತನ್ನಣ್ಣ ಹೇಳಿದ ಮೇಲೆ, ನಾವೆಲ್ಲರೂ ೭ ನೇ ತರಗತಿಯವರೆಗೂ ಓದಿದ್ದು ಕನ್ನಡ ಶಾಲೆಯಲ್ಲಿಯೇ. ಶಾಲೆಗೆ ಹೋಗಿ ಕಲಿಯುವುದಕ್ಕಿಂತ ಹೆಚ್ಚಿಗೆ ಕಥೆ, ಕಾದಂಬರಿಗಳನ್ನು ಓದಿಯೂ ಕಲಿಯಬಹುದು ಎಂಬುದರ ಅರಿವಿದ್ದ ಅಮ್ಮ, ನಮಗೆಂದೂ ಯಾವುದೇ ಪುಸ್ತಕವನ್ನು ಓದಲು ತೊಂದರೆ ಮಾಡುತ್ತಿರಲಿಲ್ಲ. ಪರೀಕ್ಷೆಯ ದಿವಸವೂ ಕೂಡ ನಾವು ಮ್ಯಾಗಜೀನ್ ಗಳನ್ನು ಓದುತ್ತಿದ್ದೆವು. ಟಿವಿ ನೋಡುತ್ತಿದ್ದೆವು. ಅಮ್ಮನ ಡೈಲಾಗ್ ಇಷ್ಟೇ ‘ನೀವು ಓದುವುದು ನಿಮಗಾಗಿ, ನಿಮ್ಮ ಒಳಿತಿಗಾಗಿ’. ನಮಗೆ ಇಷ್ಟೇ ಸಾಕಿತ್ತು. ಪರೀಕ್ಷೆ ಸಮಯದಲ್ಲೂ ಕೂಡ ಇವರು ಇನ್ನಿತರ ಪುಸ್ತಕಗಳನ್ನು ಓದುತ್ತಾರೆ / ಅವರಮ್ಮ ಬಿಡುತ್ತಾರೆ!, ಎಂಬುದು ನಮ್ಮ ಕಸಿನ್ ಗಳಿಗೆ ಆಶ್ಚರ್ಯದ ವಿಷಯವಾಗಿತ್ತು. ಇದೇ ನಿಯಮವನ್ನು ನಾನೀಗ ನನ್ನ ಮಕ್ಕಳಿಗೂ ಕೂಡ ಪಾಲಿಸುತ್ತಿದ್ದೇನೆ. ಯಾವುದೇ ಪರೀಕ್ಷೆಯ / ಮಾರ್ಕುಗಳ ಒತ್ತಡವಿಲ್ಲದೆ, ಕೇವಲ ಓದಿಗಾಗಿ, ಓದಿನ ಪರೀಕ್ಷೆಗಾಗಿ ನನ್ನ ಮಕ್ಕಳು ಕೂಡ ಪರೀಕ್ಷೆ ಬರೆಯುತ್ತಿದ್ದಾರೆ!
ಅಮ್ಮನಲ್ಲಿ ನನಗಿಷ್ಟವಾಗುವ ಗುಣ ‘ಯಾವುದೇ ವಸ್ತುವನ್ನು ಹಾಳು ಮಾಡದಿರುವುದು’. ಇವತ್ತಿಗೂ ಕೂಡ ತನ್ನಪ್ಪನನ್ನು ನೆನಪಿಸಿಕೊಳ್ಳುತ್ತಲೇ, ಎಲ್ಲಾ ವೃತ್ತಪತ್ರಿಕೆಗಳನ್ನೂ ಎತ್ತಿಟ್ಟು, ಪೇಪರ್ ನವನು ಬಂದಾಗ ಕೊಡುವುದು. ಅಮ್ಮನ ಅಣ್ಣನಿಗೆ ಪೇಪರ್ ಹಾಳು ಮಾಡುವುದು ಇಷ್ಟವಾಗುತ್ತಿರಲಿಲ್ಲವಂತೆ. ನಾವ್ಯಾರೂ ಎಂದಿಗೂ ಪೇಪರ್ ಅಥವಾ ಯಾವುದೇ ಹಾಳೆಯನ್ನು ಹರಿಯುವುದು ಮಾಡುತ್ತಿರಲಿಲ್ಲ. ಅಮ್ಮನಿಗಿದು ಯಾವಾಗಲೂ ಹೆಮ್ಮೆಯ ವಿಷಯ. ಆಕೆಯ ಮತ್ತೊಂದು ಗುಣ, ನೀರು ವೇಸ್ಟ್ ಮಾಡದಿರುವುದು. ಅಕ್ಕಿ ಬಸಿದ ನೀರು, ತರಕಾರಿ ತೊಳೆದ ನೀರು ಎಲ್ಲವನ್ನೂ ಮುಂಚೆ ಒಂದು ಬಕೆಟ್ಟಿನಲ್ಲಿ ಸಂಗ್ರಹಿಸಿ, ಮನೆಯ ಮುಂದೆ ಬರುವ ಹಸುವಿಗೆ ಕೊಡುತ್ತಿದ್ದರು. ಆದರೆ ಈಗ ಯಾವುದೇ ಹಸುಗಳು ಮನೆಯ ಮುಂದೆ ಬರುವುದಿಲ್ಲವಾದ್ದರಿಂದ, ಅದನೆಲ್ಲವನ್ನೂ ಸಂಗ್ರಹಿಸಿ, ಗಿಡಗಳಿಗೆ ಉಣಿಸುವುದು ಆಕೆಯ ಅತ್ಯಂತ ಪ್ರಿಯವಾದ ಹವ್ಯಾಸ. ಪ್ರತಿ ಬಾರಿಯೂ ಬಕೆಟ್ ತುಂಬಿದ ತಕ್ಷಣ, ಅದನ್ನು ಕೆಳ ಮಾಳಿಗೆಗೆ ಕೊಂಡು ಹೋಗುವುದನ್ನು ನೋಡಲಾರದೇ, ನಾನು ನನ್ನ ಮನೆ ಕಟ್ಟುವಾಗ ವೇಸ್ಟ್ ವಾಟರ್ ಪ್ಲಾಂಟ್ ಕಟ್ಟಿಬಿಟ್ಟೆ!
ಮತ್ತೊಂದು ಆಕೆಯ ಗುಣ ‘ಬೇರೆಯವರಿಗೆ ತೊಂದರೆ ಮಾಡದಿರುವುದು’, ಈ ‘ತೊಂದರೆ ಮಾಡದಿರುವುದು’ ಎನ್ನುವ ಪಾಲಿಸಿಯೇ, ಬಹಳಷ್ಟು ಬಾರಿ ನಮಗೆಲ್ಲಾ ತೊಂದರೆ ಮಾಡಿರುವುದು ಸುಳ್ಳಲ್ಲ! ಆಗೆಲ್ಲಾ ನಾವು ಕೋಪ ಮಾಡಿಕೊಂಡು ಕೂಗಾಡಿದರೂ, ಒಳ ಮನಸ್ಸಿನಲ್ಲಿ ‘ಪಾಪ, ಅಮ್ಮನದೇನು ತಪ್ಪು? ತೊಂದರೆ ಮಾಡಬಾರದೆಂದೇ ಅವರು ಹಾಗೆ ನಡೆದುಕೊಂಡಿದ್ದಾರೆ, ನಾನು ಹೀಗೆ ಕೂಗಾಡಬಾರದಿತ್ತು’ ಎಂದೆಲ್ಲಾ ಅನಿಸಿ, ಭಯಂಕರ ಗಿಲ್ಟ್ ಕಾಡಿಬಿಡುತ್ತಿತ್ತು. ಈ ‘ತೊಂದರೆ ಮಾಡದಿರುವುದು’ ಗುಣದ ಮತ್ತೊಂದು ರೂಪ, ‘ಅರ್ಜೆಂಟ್’. ಮನೆಯಲ್ಲಿ ೫ ಜನ ಮಕ್ಕಳು, ಜೊತೆಗೆ ಎಲ್ಲಾ ಕೆಲಸಗಳನ್ನು ಅವರೇ ಮಾಡಿಕೊಳ್ಳಬೇಕಾಗಿದ್ದರಿಂದ ಬೇಗ, ಬೇಗ ಮಾಡಿಬಿಡುವುದು ಅವರಿಗೆ ಅಭ್ಯಾಸವಾಗಿಬಿಟ್ಟಿತ್ತು. ಆದರೆ ನಾನೋ ತದ್ವಿರುದ್ದ! ಸ್ವಲ್ಪ ನಿಧಾನ. ‘ಹೋದ ಮನೆಯಲ್ಲೂ ಹೀಗೆ ಮಾಡು’ ಎಂದು ಎಷ್ಟು ಸಲ ಅವರ ಬಳಿ ಈ ವಿಷಯದಲ್ಲಿ ಬೈಸಿಕೊಂಡಿದ್ದೇನೋ? ಲೆಕ್ಕವೇ ಇಲ್ಲ. ಆಗೆಲ್ಲಾ ಅಮ್ಮನ ತರಹದ ಅರ್ಜೆಂಟ್ ಅತ್ತೆ ಸಿಗಬಾರದು ಎಂದು ನಾನು ಕೂಡ ಬೈದುಕೊಂಡಿದ್ದೇನೆ. ನಾನು ಹೊಕ್ಕಿರುವ ಮನೆಯವರು, ನನಗಿಂತಲೂ ನಿಧಾನ ಆಗಿರುವುದರಿಂದ, ಅಮ್ಮನಂತಹ ಅರ್ಜೆಂಟ್ ಅತ್ತೆ ಸಿಗಲಿಲ್ಲ. ಏನು ಅರ್ಜೆಂಟ್ ಮಾಡ್ತಿ? ಎಂದು ಇವರು ಬೈದಾಗಲೆಲ್ಲಾ, ನನ್ನ ಮುಖದಲ್ಲೊಂದು ಮುಗುಳ್ನಗೆ!
ಸುಳ್ಳು ಹೇಳದಿರುವುದು, ಪ್ರಾಮಾಣಿಕತೆಯ ಬೆಲೆ, ಹಣದ ಮೌಲ್ಯ ಇವೆಲ್ಲವನ್ನೂ ಅಮ್ಮ ತಾನು ಪಾಲಿಸಿದ್ದಲ್ಲದೇ, ನಮಗೂ ಕೂಡಾ ಜೊತೆಗೆ ಈಗ ನಮ್ಮ ಮಕ್ಕಳಿಗೂ ಹೇಳಿಕೊಡುತ್ತಿರುವುದನ್ನು ನೋಡಿದಾಗ ಬಹಳ ಖುಷಿಯಾಗುತ್ತದೆ. ‘ಸುಖಕ್ಕೆ ಹೊಂದಿಕೊಂಡ ಜೀವ, ಕಷ್ಟ ಬಂದರೆ ತಡೆದುಕೊಳ್ಳಲಾರದು, ಆದರೇ ಕಷ್ಟದ ಅರಿವಿದ್ದರೆ, ಸುಖಕ್ಕೆ ಹೊಂದಿಕೊಳ್ಳುವುದು ಸುಲಭ ’ ಎನ್ನುತ್ತಾ, ನಮ್ಮೆಲ್ಲರನ್ನೂ ಯಾವುದೇ ವಾತಾವರಣಕ್ಕೆ ಹೊಂದಿಕೊಳ್ಳುವಂತೆ ಬೆಳೆಸಿದರು. ಈಗ ನಾವೆಲ್ಲರೂ ಆರಾಮದಾಯಕ ಜೀವನ (ಆಕೆಯಿಂದಾಗಿಯೇ) ನಡೆಸುತ್ತಿದ್ದರೂ, ತಾನು ಮಾತ್ರ ಈಗಲೂ ಬಸ್ಸಿನಲ್ಲಿಯೇ ನೆಂಟರಿಷ್ಟರ ಮನೆಗೆ ಓಡಾಡುತ್ತಾ, ಎರಡು, ಮೂರು ಸ್ಟಾಪ್ ಗಳಾದರೆ ನಡೆಯುತ್ತಲೇ ಹಣವನ್ನು ಉಳಿಸುತ್ತಾ, ‘ನಾನು ಆ ಹಣವನ್ನು ಉಳಿಸಿದರೆ, ಅದು ಯಾರದೋ ಕಷ್ಟಕ್ಕಾಗುವುದು’ ಎನ್ನುತ್ತಾ, ನೆಂಟರಿಷ್ಟರು ಯಾರಾದರೂ ಹಣಕಾಸಿನ ತೊಂದರೆಯಲ್ಲಿದ್ದರೆ, ತಾನುಳಿಸಿದ ಈ ಹಣವನ್ನು ಅವರಿಗೆ ನೀಡುತ್ತಾ, ಒಮ್ಮೊಮ್ಮೆ ನನಗೆ ಸಿಟ್ಟು ಬಂದರೂ, ಯೋಚಿಸಿ ನೋಡುವಾಗ, ಯಾವುದೇ ಸಿದ್ಧಾಂತಗಳ ಹಾವಳಿಯಿಲ್ಲದೆ, ದೊಡ್ಡ, ದೊಡ್ಡ ಮಾತುಗಳಿಲ್ಲದೆ, ತಣ್ಣಗೆ ಆಕೆ ಮಾಡುತ್ತಿರುವ ಸಮುದಾಯದ ಒಳಿತನ್ನು ನೋಡಿದಾಗ ಹೆಮ್ಮೆಯಾಗುತ್ತದೆ.
ಲೈಫ್ ಆಫ್ ಪೈ ಚಿತ್ರ ನೋಡಿದಾಗಿನಿಂದ ಒಂದೇ ಸಮನೆ ನನಗೆ ಕಾಡಿದ್ದು ಅಪ್ಪ, ಅಮ್ಮ. ಅದ್ರಲ್ಲೂ ಮುಖ್ಯವಾಗಿ ಅಮ್ಮ ನಮ್ಮ ಜೀವನದಲ್ಲಿ ಎಂತಹ ಪ್ರಮುಖ ಪಾತ್ರ ವಹಿಸುತ್ತಾಳೆ ಅಲ್ಲವೇ? ಎಂಬುದು. ಆ ಚಿತ್ರದ ನಾಯಕ ತನ್ನ ಜೀವನದುದ್ದಕ್ಕೂ, ಎಂತಹ ಕಷ್ಟ ಬಂದರೂ, ಒಂಟಿಯಾಗಿಬಿಟ್ಟರೂ ತನ್ನಮ್ಮ ಹೇಳಿಕೊಟ್ಟ ಪಾಠಗಳನ್ನೇ ಉಪಯೋಗಿಸುತ್ತ, ಜೀವನದಲ್ಲಿ ಜಯಶಾಲಿಯಾಗುತ್ತಾನೆ. ಅದು ತಪ್ಪೋ, ಸರಿಯೋ ಎನ್ನುವ ಯಾವ ಜಿಜ್ಞಾಸೆಯೂ ಇಲ್ಲದೇ, ಆತ ತನ್ನಮ್ಮನ ಮಾತುಗಳನ್ನು ಸಂಪೂರ್ಣವಾ ಗಿ ನಂಬಿಬಿಡುತ್ತಾನೆ. ಚಿತ್ರ ನೋಡುತ್ತಾ, ನೋಡುತ್ತಾ, ನನ್ನ ಅಮ್ಮ ನನ್ನ ಮೇಲೆ ಬೀರಿದ ಪ್ರಭಾವ ಎಂತಹುದು? ಎಂದು ಯೋಚಿಸಿದಾಗ ಅನ್ನಿಸಿದ್ದು ಇಷ್ಟೇ – ನನ್ನಮ್ಮ ಎಂದಿಗೂ ತನಗಿದ್ದ ಬಂಧುಬಾಂದವರ ಮೇಲಿನ ಸಿಟ್ಟಾಗಲೀ, ದ್ವೇಷವಾಗಲೀ, ಅಸೂಯೆಯಾಗಲೀ, ಇಂತಹ ಯಾವುದೇ ನೆಗಟಿವ್ ಅಂಶಗಳನ್ನು ಮಕ್ಕಳಿಗೆಂದಿಗೂ ತಿಳಿಸುತ್ತಿರಲಿಲ್ಲ. ತನ್ನ ಅಭಿಪ್ರಾಯ ಮಂಡಿಸುವಾಗ ಆಕೆ ಹೇಳುತ್ತಿದ್ದದ್ದು ಇಷ್ಟೇ – “ನನಗೆ ಇವರ ಬಗ್ಗೆ ಹೀಗನ್ನಿಸುತ್ತಿದೆ, ಬಹುಶಃ ನನ್ನ ಅನಿಸಿಕೆ ತಪ್ಪಿರಬಹುದು, ನೀವು ಯೋಚಿಸಿ ನಿರ್ಧರಿಸಿ!” ಹಾಗಾಗೀ ನಾವು ಯಾರ ಬಗ್ಗೆಯೂ, ಯಾವುದೇ ಪೂರ್ವಾಗ್ರಹ ಪೀಡಿತರಾಗದೇ, ನಮ್ಮಷ್ಟಕ್ಕೇ ನಾವೇ ಮನುಷ್ಯರನ್ನು ಅರ್ಥ ಮಾಡಿಕೊಳ್ಳುತ್ತಾ ಹೋದೆವು. ಈಗಲೂ ನಾವು ಯಾವುದೇ ವಿಷಯವನ್ನು ಮಾತಾಡುವಾಗ, ಪೂರ್ವಾಗ್ರಹ ಪೀಡಿತರಾಗದೇ ಮಾತನಾಡಲು ಅಮ್ಮನೇ ಕಾರಣ.
ಇನ್ನೂ ಬಹಳಷ್ಟು ಆಕೆಯ ಬಗ್ಗೆ ಬರೆಯುವುದಿದೆ. ಮತ್ತೊಮ್ಮೆ ಸಮಯವಾದಾಗ ಬರೆಯುತ್ತೇನೆ. ಜೀವನದಲ್ಲಿ ನಾವು ಇಷ್ಟು ಮುಂದೆ ಬಂದಿದ್ದರೆ, ನಾವೀಗ ನಡೆಸುತ್ತಿರುವ ಆರಾಮದಾಯಕ, ಐಷಾರಾಮದ ಜೀವನ, ಪಾಲಿಸುತ್ತಿರುವ ಮೌಲ್ಯಗಳು ಎಲ್ಲಕ್ಕೂ ಅವರೇ ಕಾರಣ. ಮನೆಯೇ ಮೊದಲ ಪಾಠಶಾಲೆ, ತಾಯಿಯೇ ಮೊದಲ ಗುರು ಎಂಬ ಗಾದೆ ಮಾತನ್ನು ಅಕ್ಷರಶಃ ಪಾಲಿಸಿದ ಆಕೆ, ಈಗ ಮೊಮ್ಮಕ್ಕಳಿಗೂ ಕೂಡ ಗುರುವಾಗಿರುವುದು ನನ್ನ ಭಾಗ್ಯ!. ‘ಅಜ್ಜಿ ಸಾಕಿದ ಮಗು’ ಎಂಬಂತೆ ಆಗಬೇಡಿರೋ ಎಂದು ನನ್ನ ಮಕ್ಕಳಿಗೆ ಹೇಳುತ್ತಲೇ, ಮಕ್ಕಳಿಗೆ ನನಗಿಂತಲೂ ಹೆಚ್ಚಿಗೆ ಅಮ್ಮನಾಗಿದ್ದಾರೆ. ಅಮ್ಮನ ಕೈಲಿ ಬೆಳೆದ, ಬೆಳೆಯುತ್ತಿರುವ ಅದೃಷ್ಠಶಾಲಿ ಮೊಮ್ಮಕ್ಕಳು, ನನ್ನ ಮಕ್ಕಳು. ಹೊಸ ಚಿಗುರು, ಹಳೆ ಬೇರು ಕೂಡಿರಲು ಮರ ಸೊಗಸು ಎಂಬಂತಿದೆ ನಮ್ಮ ಮನೆ! ಹುಟ್ಟುಹಬ್ಬದ ಶುಭಾಶಯಗಳು ಹೇಳುವುದು ಕೃತಕ ಎಂಬುದು ಯಾವಾಗಲೂ ಅಮ್ಮನ ಹೇಳಿಕೆ. ೭೦ವರ್ಷ ತುಂಬುತ್ತಿರುವ ಈ ಹೊತ್ತಿನಲ್ಲಿ, ನನ್ನ ಕಿರಿ ಮಗ ಯಾವಾಗಲೂ ಹೇಳುವಂತೆ, ಅವನ ಮಗ ಹುಟ್ಟುವವರೆಗೂ ಅಮ್ಮ ನಮ್ಮೊಂದಿಗೆ ಇರಲಿ, ಕೈಕಾಲು ಗಟ್ಟಿಯಾಗಿಯೇ ಇರಲಿ!
No comments:
Post a Comment