Wednesday, August 6, 2014

ಸ್ಪರ್ಧೆ ಎಲ್ಲಿಲ್ಲ? (ಡಬ್ಬಿಂಗ್ ಬೇಡಾ ಎಂದಾಗ ಬರೆದದ್ದು )

ನಮ್ಮ ಏರಿಯಾದಲ್ಲಿ ೯೬-೯೮ರಲ್ಲಿ ಇದ್ದಿದ್ದೇ ಒಂದು ಆಸ್ಪತ್ರೆ. ೩ ಕಿ.ಮೀ ದೂರದಲ್ಲಿ ಮತ್ತೊಂದು ಸಣ್ಣ ನರ್ಸಿಂಗ್ ಹೋಂ. ಈ ಆಸ್ಪತ್ರೆಯಲ್ಲಿ ಎರ್ರಾಬಿರ್ರಿ ಬಿಲ್ ಮಾಡತೊಡಗಿದಾಗ, ನಮ್ಮ ಕ್ಲಿನಿಕ್ ಗೆ ಬರ್ತಿದ್ದ ರೋಗಿಗಳಿಗೆ ಆಗುತ್ತಿದ್ದ ತೊಂದರೆ ನೋಡಿ ನಾವು ಒಂದು ನರ್ಸಿಂಗ್ ಹೋಂ ಶುರು ಮಾಡಿದೆವು. ನಮ್ಮಲ್ಲಿ ಕಡಿಮೆ ಚಾರ್ಜು ಇದ್ದುದರಿಂದ ಸಿಕ್ಕಾಪಟ್ಟೆ ಪೇಶಂಟ್ಸ್ ಕೂಡ ಬಂದರು. ನಮ್ಮಲ್ಲಿ ಕೆಲಸಕ್ಕೆಂದು ಬಂದ ಡಾಕ್ಟರ್ಸ್ ಪಕ್ಕದಲ್ಲೇ ಕ್ಲಿನಿಕ್ ಗಳು, ಕನ್ಸಲ್ಟೆಂಟ್ಸ್ ಹೊಸ, ಹೊಸ ಆಸ್ಪತ್ರೆಗಳನ್ನು ಕಟ್ಟೋಕೆ ಶುರು ಮಾಡಿದರು. ಕೆಲವರು ಉಳಕೊಂಡರು. ಕೆಲವು ಕ್ಲಿನಿಕ್ / ಆಸ್ಪತ್ರೆಗಳು ನಡೆಸಲಾಗದೇ ಮುಚ್ಚಿ ಹೋದವು. ನಮ್ಮ ಚಿಕ್ಕ ನರ್ಸಿಂಗ್ ಹೋಂ ಎದುರೇ ಮಲ್ಟಿ ಸ್ಪೆಷಾಲಿಟಿ ಡೇ ಕ್ಲಿನಿಕ್, ಆರ್ಥೋ ಸೆಂಟರ್, ೬೦ ಬೆಡ್ ಗಳ ಆಸ್ಪತ್ರೆ, ಪಕ್ಕದಲ್ಲೇ ಮತ್ತೊಂದು ಆಸ್ಪತ್ರೆ ಎಲ್ಲವೂ ಶುರು ಆದವು. ಇತ್ತೀಚೆಗೆ ಒಂದು ದೊಡ್ಡ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಶುರುವಾಗಿದೆ. ಎಡವಿ ಬಿದ್ದರೆ ಒಂದು ಕ್ಲಿನಿಕ್, ಆಸ್ಪತ್ರೆಗಳು ನಮ್ಮ ಏರಿಯಾದಲ್ಲಿ ಈ ೧೫ ವರ್ಷಗಳಲ್ಲಿ ಶುರುವಾಗಿವೆ. ಆಸ್ಪತ್ರೆಗಳು / ಕ್ಲಿನಿಕ್ ಗಳು ಇನ್ನು ಮುಂದೆ ಈ ಏರಿಯಾದಲ್ಲಿ ಬೇಡಾ, ನಮ್ಮ ಹೊಟ್ಟೆಗೆ ಹೊಡಿಬೇಡಿ, ಅಂತಾ ಯಾರಿಗೆ ನಿಷೇಧ ಹಾಕೋದು ನಾವು?  ಇದೆಲ್ಲಾ ಯಾಕೆ ಹೇಳ್ತಿದ್ದೀನಿ ಅಂದುಕೊಂಡ್ರಾ? ಡಬ್ಬಿಂಗ್ ಬಂದ್ರೆ ಕನ್ನಡ ಚಿತ್ರರಂಗದ ಕಥೆ ಅಷ್ಟೇ, ಕಲಾವಿದರ ಹೊಟ್ಟೆಗೆ ಹೊಡೀತೀವಿ, ನಾವು ಬೇರೆ ಭಾಷೆಗಳ ಎದುರು ನಿಲ್ಲೋಕೆ ಆಗೋಲ್ಲ ಅಂತಾ ಹೇಳ್ತಿರೋರಿಗೆ ಇದೊಂದು ಉದಾಹರಣೆಯಷ್ಟೇ!  ಎಲ್ಲಾ ಫೀಲ್ಡ್ ಗಳಲ್ಲೂ ಸ್ಪರ್ಧೆ ಇರೋದೇ! ಎದುರಿಸಬೇಕು ನಾವು. ಅವತ್ತಿಂದ ಇವತ್ತಿನ ತನಕ ನಮಗೆ, ನಮ್ಮ ಹೊಟ್ಟೆಗೆ!  ಇಷ್ಟೆಲ್ಲಾ ಆಸ್ಪತ್ರೆಗಳಾಗಿದ್ದರೂ ತೊಂದರೆಯಾಗಿಲ್ಲ ಅಂತಾ ಹೇಳೋಕಷ್ಟೇ.

ಅಮ್ಮನ ಹುಟ್ಟಿದ ಹಬ್ಬದ ದಿನ (ಅವಧಿಯಲ್ಲಿ ಬಂದದ್ದು)

ಅವತ್ತು ಯಾವತ್ತೋ ವಿಶ್ವ ಅಮ್ಮಂದಿರ ದಿನವಂತೆ! ನಮ್ಮ ಭಾರತದಲ್ಲಿ ಇರೋ, ಇಲ್ಲದೆ ಇರೋ ಮೂರು ಮುಕ್ಕಾಲು ಕೋಟಿ ದೇವತೆಗಳಿಗೊಂದು ಹಬ್ಬ ಮಾಡಿಕೊಂಡು, ಆ ಆಚರಣೆ, ಈ ಸಂಪ್ರದಾಯವೆಂದು ಬಂಧುಬಾಂದವರೆಲ್ಲರೂ ಒಡಗೂಡಿ ಹಬ್ಬಗಳನ್ನು ಸಂಭ್ರಮದಿಂದ ಆಚರಿಸುವಾಗ, ಈ ಅಪ್ಪಂದಿರ, ಅಮ್ಮಂದಿರ, ಪ್ರೇಮಿಗಳ ದಿನವೆಂದು ಬಲವಂತವಾಗಿ ನೆನಪಿಸಿಕೊಂಡು ಶುಭಾಶಯಗಳಿಗಷ್ಟೇ ಸೀಮಿತವಾಗಿಬಿಡುವ ಈ ಪಾಶ್ಚಾತ್ಯ ಅನುಕರಣೆ ನನಗೇನೂ ಅಷ್ಟೊಂದು ಇಷ್ಟವಿಲ್ಲ. ಸಂಬಂಧಗಳ ಬಗ್ಗೆ ಯಾವುದೇ ರೀತಿಯ ಭಾವನಾತ್ಮಕ ಒಡನಾಟ ಅಷ್ಟೇನೂ ಇರದ ಪಾಶ್ಚಾತ್ಯರಿಗೆ ಈ ದಿನಗಳೆಲ್ಲವೂ ಮುಖ್ಯವಾಗಿರಬಹುದೇನೋ? ಆದರೂ ನಮ್ಮ ಜನರೆಲ್ಲರೂ ಈ ಎಲ್ಲಾ ಪಾಶ್ಚಾತ್ಯ ದಿನಗಳಿಗೆ ಮುಗಿ ಬಿದ್ದು, ಶುಭಾಶಯಗಳನ್ನು ಹೇಳುವುದನ್ನು ಕಂಡಾಗ ನನಗೆ ಆಶ್ಚರ್ಯವಾಗುವುದು. ಅದರಲ್ಲೂ ಈ ಸಾಮಾಜಿಕ ಜಾಲತಾಣಗಳಿಗೆ ಜನರು ಆಕರ್ಷಿತರಾದ ಮೇಲಂತೂ, ಮನೆಯಲ್ಲೇ ಇರುವ ಗಂಡನಿಗೂ, ಮಕ್ಕಳಿಗೂ ಕೂಡ ಫ಼ೇಸ್ ಬುಕ್ ನಲ್ಲೇ ಮದುವೆಯ, ಹುಟ್ಟಿದ ಹಬ್ಬದ ಶುಭಾಶಯಗಳನ್ನು ಹೇಳುವುದನ್ನು ಕಂಡರೆ ಅಳುವುದೋ, ನಗುವುದೋ ನೀವೇ ಹೇಳಿ!
ಇದನ್ನೆಲ್ಲಾ ನಾನೇಕೆ ಇಂದು ಬರೆಯುತ್ತಿದ್ದೇನೆ? ವಿಶೇಷವಾಗಿ ಬಾಪು ಸತ್ತ ದಿವಸದಂದು! ಚಿಕ್ಕಂದಿನಲ್ಲಿ ಪರೀಕ್ಷೆಗೆ ಓದುವಾಗ, ನಾನೆಂದು ಗಾಂಧೀಜಿಯವರು ಸತ್ತದ್ದು ಜನವರಿ ೩೦ ರಂದು ಎಂದು ಬಾಯಿಪಾಠ ಮಾಡಿದ್ದೇ ಇಲ್ಲ. ಏಕೆಂದರೆ ಜನವರಿ ೩೦ ಅಮ್ಮ ಹುಟ್ಟಿದ ದಿವಸ! :-) ಪೋರ ಬಂದರಿನಲ್ಲಿ ಗಾಂಧೀಜಿಯವರ ಜನನ ಹಾಗೇ, ಹೀಗೆ ಎಂದೆಲ್ಲಾ ಆಗಾಗ ನೆನಪಿಸಿಕೊಳ್ಳುತ್ತಿದ್ದರೂ, ಸತ್ತದ್ದು ಎಂಬ ಪ್ರಶ್ನೆ ಮೂಡಿದ ಕೂಡಲೇ ಮುಖದಲ್ಲಿ ಮುಗುಳ್ನಗೆ ಮೂಡಿಬಿಡುತ್ತಿತ್ತು. ಈಗ ನನ್ನ ಮಕ್ಕಳಿಗೂ ಕೂಡ ಗಾಂಧೀಜಿ ಸತ್ತ ದಿವಸ ಎಂದರೆ ಅವರ ‘ದೊಡ್ಡ’ ಹುಟ್ಟಿದ ದಿವಸವೆಂದೇ ನೆನಪು! ಅಕ್ಕನ ಮಗಳು ಗಾಂಧಿ ಜಯಂತಿಯಂದು ಹುಟ್ಟಿದ ಮೇಲೆ, ಈ ಎರಡು ದಿನಗಳನ್ನು ನೆನಪಿಟ್ಟುಕೊಳ್ಳುವುದು ಸಲೀಸು! :-) ಬಹುತೇಕರ ಮನೆಯಲ್ಲಿ ಅಪ್ಪನನ್ನು ಬಹುವಚನದಲ್ಲಿಯೂ, ಅಮ್ಮನನ್ನು ಏಕವಚನದಲ್ಲಿಯೂ ಕರೆಯುತ್ತಾರೆ. ಆದರೆ ನಮ್ಮನೆಯಲ್ಲಿ ಅಮ್ಮನನ್ನು ಕೂಡಾ ಬಹುವಚನದಲ್ಲಿಯೇ ಮಾತನಾಡಿಸುತ್ತೇವೆ. ನನ್ನ ಶಾಲೆಯ ಗೆಳತಿಯರೆಲ್ಲರಿಗೂ ಇದೊಂದು ಬೆರಗು! :-)
ಅಮ್ಮನಿಗೆ ನಾವು ಒಟ್ಟು ಐದು ಜನ ಮಕ್ಕಳು. ನಾವೆಂದೂ ಆಕೆಯ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸಿದವರಲ್ಲ. ಆಗೊಂದು, ಈಗೊಂದು ತಮ್ಮ ಅಮ್ಮನ ಬಗ್ಗೆ, ಅಪ್ಪನ ಬಗ್ಗೆ, ಬಹಳಷ್ಟು ಲೇಖನಗಳು ಬರುತ್ತಿದ್ದನ್ನು ಓದುತ್ತಿದ್ದರೂ ಕೂಡ, ನಮಗೆಂದೂ ನಮ್ಮಮ್ಮನ ಬಗ್ಗೆ ಬರೆಯಬೇಕೆಂದು ಅಥವಾ ಹೇಳಿಕೊಳ್ಳಬೇಕೆಂದು ಅನಿಸಿರಲಿಲ್ಲ. ಇದನ್ನೆಲ್ಲಾ ಬರೆಯುವುದು ವೈಯಕ್ತಿಕ, ನಮ್ಮ ಬಗ್ಗೆಯೇ ಹೇಳಿಕೊಳ್ಳುವ ಹೆಚ್ಚುಗಾರಿಕೆ ಏಕೆ? ನಾವೇನೂ ಸೆಲೆಬ್ರಿಟಿಗಳೇ? ಎಂದೇ ನನ್ನ ಭಾವನೆಯಿತ್ತು. ಈಗ ಇದೆಲ್ಲವನ್ನೂ ಬರೆಯುತ್ತಿದ್ದೇನೆ ಎಂಬುದು ಕೂಡ ಯಾರಿಗೂ ತಿಳಿದಿಲ್ಲ. ಬಹುಶಃ ಗೊತ್ತಾಗಿದ್ದರೆ ಬಿಡುತ್ತಿದ್ದರೋ ಇಲ್ಲವೋ? ಅಮ್ಮನಿಗೆ ಇದು ನಿಜವಾಗಿಯೂ ಸರ್ಪ್ರೈಸ್. ಆದರೆ ಖುಷಿ ಪಡುತ್ತಾರೋ? ಹೆಮ್ಮೆ ಪಡುತ್ತಾರೋ? ಅಥವಾ ಯಾಕೆ ಬರೆಯೋಕೆ ಹೋದೆ? ಎಂದು ಬೇಸರಿಸುತ್ತಾರೋ? ಗೊತ್ತಿಲ್ಲ. ಆದರೂ ಆಕೆ ಬೇರೆಯವರಿಗೆ ಸೆಲೆಬ್ರಿಟಿ ಅಲ್ಲದಿದ್ದರೂ, ನನಗೆ, ಆಕೆಯ ಮಕ್ಕಳಿಗೆ, ಅವರು ದೊಡ್ಡ, ನಿಜವಾದ ಸೆಲೆಬ್ರಿಟಿ! ಹಾಗಾಗಿ ಅಮ್ಮನಿಗೊಂದು ನನ್ನ ಕಡೆಯಿಂದ ಹುಟ್ಟುಹಬ್ಬಕ್ಕೆ ಈ ಪುಟ್ಟ ಗಿಫ್ಟ್.
ಅಮ್ಮ ಎಂದ ಕೂಡಲೇ ನನಗೆ ಮೊದಲಿಗೆ ನೆನಪಾಗುವುದು ಸುಮಾರು ನನಗೆ ೫, ೬ ವರ್ಷಗಳಿದ್ದಾಗ ಶೃಂಗೇರಿಯ ಶಾರದಾಮಾತೆಯ?! (ನೆನಪಿಲ್ಲ) ಪಾದಗಳ ಫೋಟೋ ನಮ್ಮ ದೇವರ ಕೋಣೆಯಲ್ಲಿದ್ದದ್ದು! ಅದರ ಮೇಲೆ ಅಮ್ಮನವರ ಪಾದ ಎಂದು ಬರೆದಿತ್ತು. ನಾನು ಬೆಳಿಗ್ಗೆ ಎದ್ದ ಕೂಡಲೇ ಆ ಫೋಟೋಗೆ ಎದ್ದು ನಮ್ಮಮ್ಮನ ಪಾದಗಳೆಂದು ನಮಸ್ಕರಿಸುತ್ತಿದ್ದೆ. ಮನೆಗೆ ಬಂದವರೆಲ್ಲರಿಗೂ, ನಮ್ಮಮ್ಮನ ಪಾದಗಳೆಂದು ಹೇಳಿಯೇ, ಆ ಫೋಟೋವನ್ನು ಪರಿಚಯಿಸುತ್ತಿದ್ದೆ! ಎಲ್ಲರೂ ನಗುತ್ತಿದ್ದದ್ದು ಅರಿವಿಗೆ ಬಂದರೂ, ಯಾಕೆ ನಗುತ್ತಿದ್ದಾರೆ? ಎಂಬುದು ಅರ್ಥವಾಗುತ್ತಿರಲಿಲ್ಲ. ತದನಂತರ ೪, ೫ ನೇ ತರಗತಿಯವರೆವಿಗೂ ಯಾವುದೇ ಪರೀಕ್ಷೆ (ಕಿರು, ಅರೆ, ವಾರ್ಷಿಕ) ಗಳ ದಿವಸ, ಬಹಳ ಉತ್ಸಾಹದಲ್ಲಿ ಅಮ್ಮನಿಗೆ ನಮಸ್ಕಾರ ಮಾಡಿ ಹೋಗುತ್ತಿದ್ದದ್ದು! ಸ್ವಲ್ಪ ತಿಳುವಳಿಕೆ?! ಬಂದ ನಂತರ ಇದೆಲ್ಲಕ್ಕೂ ಫುಲ್ ಸ್ಟಾಪ್ ಬಿತ್ತು. ಆಗಲೋ, ಈಗಲೋ ಒಮ್ಮೊಮ್ಮೆ ಇದ್ದಕ್ಕಿದ್ದಂತೆ ಹಬ್ಬ, ಹರಿದಿನಗಳಂದು ನಮಸ್ಕಾರ ಮಾಡುವುದುಂಟು (ಮಕ್ಕಳಿಗೆ ಇದೆಲ್ಲವೂ ತಿಳಿದಿರಬೇಕು ಎನ್ನುವ ಕಾರಣಕ್ಕಾಗಿ)
ಅಮ್ಮ ಸ್ವಾತಂತ್ರ ಪೂರ್ವದಲ್ಲಿ ಹುಟ್ಟಿದವರು. ಸ್ವಾತಂತ್ರ್ಯ ಬಂದಾಗ ಬಹುಶಃ ಅವರಿಗೆ ೪ ವರ್ಷವೆನಿಸುತ್ತದೆ. ಅವರ ಅಕ್ಕನ ಶಾಲೆಯಲ್ಲಿ ಬೂಂದಿ ಕಾಳು ಕೊಟ್ಟಿದ್ದರೆಂದು ಅವರು ಹೇಳುತ್ತಿದ್ದ ನೆನಪು. ಅಮ್ಮನ ಅಣ್ಣ ಗಾಂಧಿ ತತ್ವಗಳಿಂದ ಆಕರ್ಷಿತರಾದವರು. ಅವರು ಚರಕ ತಂದು, ನೂಲನ್ನು ಕೂಡ ನೇಯುತ್ತಿದ್ದರಂತೆ. ಇವತ್ತಿಗೂ ಕೂಡ ಅಮ್ಮನ ಅಣ್ಣ ತನ್ನ ಕೆಲಸವನ್ನು ತಾನೇ ಮಾಡಿಕೊಳ್ಳಬೇಕು, ಯಾರ ಮೇಲೂ ಡಿಪೆಂಡ್ ಆಗಬಾರದೆಂದೇ ಬಯಸುವವರು. ಅಮ್ಮ ಕೂಡ ಅವರ ಅಣ್ಣನಂತೆಯೇ ಗಾಂಧಿ ತತ್ವಗಳಿಂದ, ಆದರ್ಶಗಳಿಂದ ಪ್ರೇರಿತರಾದವರು. ಅದಕ್ಕಿಂತಲೂ ಹೆಚ್ಚಿಗೆ ತನ್ನ ಅಣ್ಣನ ತತ್ವಗಳಿಂದ ಪ್ರೇರಿತರಾದವರು. ತನ್ನ ಆದರ್ಶವನ್ನು ತನ್ನ ತಂಗಿಯ ಮಕ್ಕಳು ಪಾಲಿಸುತ್ತಿದ್ದಾರೆಂದು ಮಾವನಿಗೆ ನಮ್ಮ ಮೇಲೆ ಪ್ರೀತಿ, ಅಮ್ಮನಿಗೆ ತನ್ನಣ್ಣನ ಮೆಚ್ಚಿಗೆ ಗಳಿಸಿರುವರೆಂಬ ಹೆಮ್ಮೆ. ನಾನೋ ಅಥವಾ ನನ್ನ ಮಕ್ಕಳು, ಮನೆಯ ಕೆಲಸದವಳಿಗೆ ನಾವು ಮಾಡಿಕೊಳ್ಳಬಹುದಾದ ಕೆಲಸವನ್ನು ಹೇಳಿದರೆ, ಅಮ್ಮನಿಗೆ ಸಿಡಿಮಿಡಿ. ‘ನಿಮ್ಮ ನಿಮ್ಮ ಕೆಲಸ ನೀವೇ ಮಾಡಿಕೊಳ್ಳಿ, ಯಾಕೆ ಬೇರೆಯವರ ಮೇಲೆ ಅವಲಂಬನೆಯಾಗ್ತೀರಿ’ ಎಂಬುವುದು ಅವರ ತರ್ಕ. ನನ್ನ ಕೈಕಾಲು ಗಟ್ಟಿಯಿರುವವರೆಗೂ ಯಾರ ಮನೆಯಲ್ಲಿ ತನ್ನ ಅಗತ್ಯವಿರುತ್ತದೆಯೋ (ಕೆಲಸ ಮಾಡಲು!) ಅಲ್ಲಿರುತ್ತೇನೆ. ಯಾರ ಮೇಲೂ ಭಾರವಾಗದೇ, ಹೀಗೆ ಕೆಲಸ ಮಾಡುತ್ತಿರುವಾಗಲೇ ತೀರಿಕೊಳ್ಳಬೇಕೆಂಬುದು ಅಮ್ಮನ ಜೀವನದ ಮಹದಾಸೆ :-)
ಆಗಿನ ಕಾಲದಲ್ಲಿ ‘ಅಮ್ಮ’ ಎಸ್ ಎಸ್ ಎಲ್ ಸಿ ಓದಿದ್ದು (ಹಾಗಂದರೆ, ಅವರ ರೆಡಿ ಉತ್ತರ ಅದು ಎಸ್ ಎಸ್ ಎಲ್ ಸಿ ಯಲ್ಲಾ, ಆಗ ೧೧ನೇ ತರಗತಿಯಿತ್ತು ಎಂಬುದು) ವಿಶೇಷ. ತುಳುನಾಡಿನಲ್ಲಿ ನಮ್ಮ ಜನರಲ್ಲಿ ವರದಕ್ಷಿಣೆ ಎಂಬ ಪಿಡುಗು ಇಲ್ಲದಿದ್ದರೂ, ಚಿನ್ನದ ಬಯಕೆ ಹೆಚ್ಚು. ಅಮ್ಮನನ್ನು ಮದುವೆ ಮಾಡಿಕೊಡುವಾಗ, ಅಮ್ಮನನ್ನು ನೋಡಲು ಬಂದವರೊಬ್ಬರೂ ‘ಚಿನ್ನ’ ಹೆಚ್ಚಿಗೆ ಕೇಳಿದರೆಂದು ಅಮ್ಮನ ಅಮ್ಮ ಆ ಹುಡುಗನನ್ನು ತಿರಸ್ಕರಿಸಿದ್ದರಂತೆ. ‘ನನ್ನ ಮಗಳನ್ನು ಎಸ್ ಎಸ್ ಎಲ್ ಸಿ ತನಕ ಓದಿಸಿರುವುದೇ ದೊಡ್ಡ ಬಂಗಾರ’ ಎಂದು ಹೇಳಿ ಅವರನ್ನು ವಾಪಾಸು ಕಳಿಸಿದ್ದರಂತೆ. ಅಪ್ಪ ನೋಡಲು ಚಂದವಿದ್ದುದರಿಂದ, ಬೆಂಗಳೂರಿನಲ್ಲಿ ಒಳ್ಳೆಯ ಕೆಲಸವಿದೆ ಎಂದು ಮದುವೆ ಮಾಡಿಕೊಟ್ಟರು. ಆದರೆ ಮದುವೆಯಾಗಿ ಬಂದ ನಂತರವೇ, ಅಪ್ಪನಿಗೆ ಸರಿಯಾದ ಕೆಲಸವಿಲ್ಲ ಎಂದು ತಿಳಿದ ಅಮ್ಮ, ನಂತರ ಜೀವನದಲ್ಲಿ ನೆಲೆಸಲು ಪಟ್ಟಿದೆಲ್ಲಾ ದೊಡ್ಡ ಪರಿಪಾಟಲು.
ತನ್ನ ಜೀವನದ ಅತ್ಯಂತ ಸಂಕಷ್ಟದ ದಿನಗಳಲ್ಲಿ, ನೆರೆಹೊರೆಯವರಿಗಾಗಲೀ ಅಥವಾ ನೆಂಟರಿಷ್ಟರಿಗಾಗಲೀ ಕೇರ್ ಮಾಡದೇ ಮಕ್ಕಳಿಗಾಗಿ ತನ್ನೆಲ್ಲಾ ಸುಖವನ್ನೂ ಧಾರೆಯೆರೆದದ್ದು ಅಮ್ಮ. ಅಮ್ಮ ತನ್ನೆಲ್ಲಾ ಕಷ್ಟಗಳನ್ನು ನೆಗ್ಲೆಕ್ಟ್ ಮಾಡಿದ್ದು, ನಮಗೋಸ್ಕರ, ನಮ್ಮನ್ನು ಒಂದು ನೆಲೆಗೆ ತರುವುದಕೋಸ್ಕರ. ಅಮ್ಮ ಹೊರಹೋಗಿ ದುಡಿಯುವುದು ಅಪ್ಪನಿಗಿಷ್ಟವಿಲ್ಲದ್ದರಿಂದ, ಮನೆಯಲ್ಲಿಯೇ ಕುಳಿತು, ಪುಡಿಗಾಸಿಗಾಗಿ ದುಡಿಯುತ್ತಿದ್ದರು. ಸಣ್ಣ ವಯಸ್ಸಿನಲ್ಲಿಯೇ ವಿಧವೆಯಾದ ಆಕೆ, ನಮ್ಮನ್ನು ಬೆಳೆಸಲು ಕಷ್ಟಪಟ್ಟದ್ದು ದೊಡ್ಡ ಸಾಹಸವೇ ಸೈ. ನಿಮಗೆ ವಿದ್ಯೆ ಕಲಿಸಿದ್ದು ಬಿಟ್ಟರೆ ನಾನ್ಯಾವ ಆಸ್ತಿಯನ್ನು ಕೊಡಲಿಲ್ಲ ಎಂದಾಕೆ ಒಮ್ಮೊಮ್ಮೆ ಕೊರಗುವುದ್ದಿದೆ. ಆಗೆಲ್ಲಾ ನಾವೆಲ್ಲರೂ ‘ನಾವು ಒಬ್ಬೊಬ್ಬರೂ ಇಷ್ಟು ಕೋಟಿ ಬಾಳುತ್ತಿದ್ದೇವೆ’ ಎಂದು ತಮಾಷೆ ಕೂಡ ಮಾಡುವುದಿದೆ. ಆಕೆಯೇ ತನ್ನೆಲ್ಲಾ ಈ ಜೀವನ ಚರಿತ್ರೆಯನ್ನು ಬರೆಯುತ್ತಿರುವುದರಿಂದ, ಆಕೆಯ ಜೀವನದ ಬಗ್ಗೆ ನಾನು ಬರೆಯುವುದು ಸರಿಯಾಗದು.
ಕೊನೆಯ ಮಗಳಾದ್ದರಿಂದ ಹಾಗೂ ಅಪ್ಪ ಬೇಗ ತೀರಿಕೊಂಡದ್ದರಿಂದ, ನಾನು ಅಮ್ಮನ ಮೇಲೆ ಎಲ್ಲಕ್ಕೂ ಭಯಂಕರ ಅವಲಂಬಿತಳಾಗಿದ್ದೆ. ಹಾಗಾಗಿ, ಆಕೆಯ ಪ್ರೀತಿ ಬೇರೆಯವರಿಗೆ ಹೋಲಿಸಿದರೆ ನನಗೊಂದಿಷ್ಟು ಹೆಚ್ಚೇ! ಆದರೂ ಒಮ್ಮೊಮ್ಮೆ ಮಕ್ಕಳಲ್ಲಿ ಆಕೆಗೆ ಯಾರ ಮೇಲೆ ಹೆಚ್ಚು ಪ್ರೀತಿ? ಎಂಬುವ ತರ್ಕ ಬಂದಾಗಲೆಲ್ಲಾ, ಅಮ್ಮ ಹೇಳುತ್ತಿದ್ದದ್ದು ಇಷ್ಟೇ – ಪ್ರೀತಿ ಎಲ್ಲರ ಮೇಲೂ ಸಮನಾಗಿಯೇ ಇರುತ್ತದೆ. ಆದರೆ ನನ್ನ ಮಕ್ಕಳಲ್ಲಿ ಯಾರಿಗೆ ಬೇರೆಯವರಿಗಿಂತ ಹೆಚ್ಚಿನ ಕಷ್ಟ ಇರುತ್ತದೆಯೋ ಅವರ ಮೇಲೆ ಒಂದಿಷ್ಟು ಹೆಚ್ಚಿನ ಗಮನವಿರುತ್ತದೆ. ಅದು ಪ್ರೀತಿ ಎನ್ನುವುದಕ್ಕಿಂತ ‘ಕಳಕಳಿ’ ಎನ್ನಬಹುದು ಎಂದುತ್ತರ ಅವರ ಬಳಿ ಯಾವಾಗಲೂ ರೆಡಿ! :-)ಆದರೂ ಅಮ್ಮನಿಗೆ ನನ್ನ ‘ದೊಡ್ಡಣ್ಣ’ನ ಮೇಲೆ ಹೆಚ್ಚಿನ ಪ್ರೀತಿ! ಎಂಬ ಗುಮಾನಿ ನಮ್ಮೆಲ್ಲರದು!
ವಿದ್ಯೆಯ ಬೆಲೆ ಅರಿತಿದ್ದ ಅಮ್ಮ, ಎಷ್ಟೇ ಬಡತನವಿದ್ದರೂ, ಪುಸ್ತಕಗಳನ್ನು ಕೊಳ್ಳಲು ತೊಂದರೆ ಮಾಡುತ್ತಿರಲಿಲ್ಲ. ಚಿಕ್ಕ ವಯಸ್ಸಿನಲ್ಲಿ ಮಾತೃ ಭಾಷೆಯಲ್ಲಿ ಮಕ್ಕಳು ವಿದ್ಯೆ ಕಲಿಯಬೇಕು, ನಂತರ ಹೈಸ್ಕೂಲಿಗೆ ಬಂದ ಮೇಲೆ ಇಂಗ್ಲೀಷ್ ಕಲಿಯಬಹುದು ಎಂದು ತನ್ನಣ್ಣ ಹೇಳಿದ ಮೇಲೆ, ನಾವೆಲ್ಲರೂ ೭ ನೇ ತರಗತಿಯವರೆಗೂ ಓದಿದ್ದು ಕನ್ನಡ ಶಾಲೆಯಲ್ಲಿಯೇ. ಶಾಲೆಗೆ ಹೋಗಿ ಕಲಿಯುವುದಕ್ಕಿಂತ ಹೆಚ್ಚಿಗೆ ಕಥೆ, ಕಾದಂಬರಿಗಳನ್ನು ಓದಿಯೂ ಕಲಿಯಬಹುದು ಎಂಬುದರ ಅರಿವಿದ್ದ ಅಮ್ಮ, ನಮಗೆಂದೂ ಯಾವುದೇ ಪುಸ್ತಕವನ್ನು ಓದಲು ತೊಂದರೆ ಮಾಡುತ್ತಿರಲಿಲ್ಲ. ಪರೀಕ್ಷೆಯ ದಿವಸವೂ ಕೂಡ ನಾವು ಮ್ಯಾಗಜೀನ್ ಗಳನ್ನು ಓದುತ್ತಿದ್ದೆವು. ಟಿವಿ ನೋಡುತ್ತಿದ್ದೆವು. ಅಮ್ಮನ ಡೈಲಾಗ್ ಇಷ್ಟೇ ‘ನೀವು ಓದುವುದು ನಿಮಗಾಗಿ, ನಿಮ್ಮ ಒಳಿತಿಗಾಗಿ’. ನಮಗೆ ಇಷ್ಟೇ ಸಾಕಿತ್ತು. ಪರೀಕ್ಷೆ ಸಮಯದಲ್ಲೂ ಕೂಡ ಇವರು ಇನ್ನಿತರ ಪುಸ್ತಕಗಳನ್ನು ಓದುತ್ತಾರೆ / ಅವರಮ್ಮ ಬಿಡುತ್ತಾರೆ!, ಎಂಬುದು ನಮ್ಮ ಕಸಿನ್ ಗಳಿಗೆ ಆಶ್ಚರ್ಯದ ವಿಷಯವಾಗಿತ್ತು. ಇದೇ ನಿಯಮವನ್ನು ನಾನೀಗ ನನ್ನ ಮಕ್ಕಳಿಗೂ ಕೂಡ ಪಾಲಿಸುತ್ತಿದ್ದೇನೆ. ಯಾವುದೇ ಪರೀಕ್ಷೆಯ / ಮಾರ್ಕುಗಳ ಒತ್ತಡವಿಲ್ಲದೆ, ಕೇವಲ ಓದಿಗಾಗಿ, ಓದಿನ ಪರೀಕ್ಷೆಗಾಗಿ ನನ್ನ ಮಕ್ಕಳು ಕೂಡ ಪರೀಕ್ಷೆ ಬರೆಯುತ್ತಿದ್ದಾರೆ! ;)
ಅಮ್ಮನಲ್ಲಿ ನನಗಿಷ್ಟವಾಗುವ ಗುಣ ‘ಯಾವುದೇ ವಸ್ತುವನ್ನು ಹಾಳು ಮಾಡದಿರುವುದು’. ಇವತ್ತಿಗೂ ಕೂಡ ತನ್ನಪ್ಪನನ್ನು ನೆನಪಿಸಿಕೊಳ್ಳುತ್ತಲೇ, ಎಲ್ಲಾ ವೃತ್ತಪತ್ರಿಕೆಗಳನ್ನೂ ಎತ್ತಿಟ್ಟು, ಪೇಪರ್ ನವನು ಬಂದಾಗ ಕೊಡುವುದು. ಅಮ್ಮನ ಅಣ್ಣನಿಗೆ ಪೇಪರ್ ಹಾಳು ಮಾಡುವುದು ಇಷ್ಟವಾಗುತ್ತಿರಲಿಲ್ಲವಂತೆ. ನಾವ್ಯಾರೂ ಎಂದಿಗೂ ಪೇಪರ್ ಅಥವಾ ಯಾವುದೇ ಹಾಳೆಯನ್ನು ಹರಿಯುವುದು ಮಾಡುತ್ತಿರಲಿಲ್ಲ. ಅಮ್ಮನಿಗಿದು ಯಾವಾಗಲೂ ಹೆಮ್ಮೆಯ ವಿಷಯ. ಆಕೆಯ ಮತ್ತೊಂದು ಗುಣ, ನೀರು ವೇಸ್ಟ್ ಮಾಡದಿರುವುದು. ಅಕ್ಕಿ ಬಸಿದ ನೀರು, ತರಕಾರಿ ತೊಳೆದ ನೀರು ಎಲ್ಲವನ್ನೂ ಮುಂಚೆ ಒಂದು ಬಕೆಟ್ಟಿನಲ್ಲಿ ಸಂಗ್ರಹಿಸಿ, ಮನೆಯ ಮುಂದೆ ಬರುವ ಹಸುವಿಗೆ ಕೊಡುತ್ತಿದ್ದರು. ಆದರೆ ಈಗ ಯಾವುದೇ ಹಸುಗಳು ಮನೆಯ ಮುಂದೆ ಬರುವುದಿಲ್ಲವಾದ್ದರಿಂದ, ಅದನೆಲ್ಲವನ್ನೂ ಸಂಗ್ರಹಿಸಿ, ಗಿಡಗಳಿಗೆ ಉಣಿಸುವುದು ಆಕೆಯ ಅತ್ಯಂತ ಪ್ರಿಯವಾದ ಹವ್ಯಾಸ. ಪ್ರತಿ ಬಾರಿಯೂ ಬಕೆಟ್ ತುಂಬಿದ ತಕ್ಷಣ, ಅದನ್ನು ಕೆಳ ಮಾಳಿಗೆಗೆ ಕೊಂಡು ಹೋಗುವುದನ್ನು ನೋಡಲಾರದೇ, ನಾನು ನನ್ನ ಮನೆ ಕಟ್ಟುವಾಗ ವೇಸ್ಟ್ ವಾಟರ್ ಪ್ಲಾಂಟ್ ಕಟ್ಟಿಬಿಟ್ಟೆ!
ಮತ್ತೊಂದು ಆಕೆಯ ಗುಣ ‘ಬೇರೆಯವರಿಗೆ ತೊಂದರೆ ಮಾಡದಿರುವುದು’, ಈ ‘ತೊಂದರೆ ಮಾಡದಿರುವುದು’ ಎನ್ನುವ ಪಾಲಿಸಿಯೇ, ಬಹಳಷ್ಟು ಬಾರಿ ನಮಗೆಲ್ಲಾ ತೊಂದರೆ ಮಾಡಿರುವುದು ಸುಳ್ಳಲ್ಲ! :-) ಆಗೆಲ್ಲಾ ನಾವು ಕೋಪ ಮಾಡಿಕೊಂಡು ಕೂಗಾಡಿದರೂ, ಒಳ ಮನಸ್ಸಿನಲ್ಲಿ ‘ಪಾಪ, ಅಮ್ಮನದೇನು ತಪ್ಪು? ತೊಂದರೆ ಮಾಡಬಾರದೆಂದೇ ಅವರು ಹಾಗೆ ನಡೆದುಕೊಂಡಿದ್ದಾರೆ, ನಾನು ಹೀಗೆ ಕೂಗಾಡಬಾರದಿತ್ತು’ ಎಂದೆಲ್ಲಾ ಅನಿಸಿ, ಭಯಂಕರ ಗಿಲ್ಟ್ ಕಾಡಿಬಿಡುತ್ತಿತ್ತು. ಈ ‘ತೊಂದರೆ ಮಾಡದಿರುವುದು’ ಗುಣದ ಮತ್ತೊಂದು ರೂಪ, ‘ಅರ್ಜೆಂಟ್’. ಮನೆಯಲ್ಲಿ ೫ ಜನ ಮಕ್ಕಳು, ಜೊತೆಗೆ ಎಲ್ಲಾ ಕೆಲಸಗಳನ್ನು ಅವರೇ ಮಾಡಿಕೊಳ್ಳಬೇಕಾಗಿದ್ದರಿಂದ ಬೇಗ, ಬೇಗ ಮಾಡಿಬಿಡುವುದು ಅವರಿಗೆ ಅಭ್ಯಾಸವಾಗಿಬಿಟ್ಟಿತ್ತು. ಆದರೆ ನಾನೋ ತದ್ವಿರುದ್ದ! ಸ್ವಲ್ಪ ನಿಧಾನ. ‘ಹೋದ ಮನೆಯಲ್ಲೂ ಹೀಗೆ ಮಾಡು’ ಎಂದು ಎಷ್ಟು ಸಲ ಅವರ ಬಳಿ ಈ ವಿಷಯದಲ್ಲಿ ಬೈಸಿಕೊಂಡಿದ್ದೇನೋ? ಲೆಕ್ಕವೇ ಇಲ್ಲ. ಆಗೆಲ್ಲಾ ಅಮ್ಮನ ತರಹದ ಅರ್ಜೆಂಟ್ ಅತ್ತೆ ಸಿಗಬಾರದು ಎಂದು ನಾನು ಕೂಡ ಬೈದುಕೊಂಡಿದ್ದೇನೆ. ನಾನು ಹೊಕ್ಕಿರುವ ಮನೆಯವರು, ನನಗಿಂತಲೂ ನಿಧಾನ ಆಗಿರುವುದರಿಂದ, ಅಮ್ಮನಂತಹ ಅರ್ಜೆಂಟ್ ಅತ್ತೆ ಸಿಗಲಿಲ್ಲ. ಏನು ಅರ್ಜೆಂಟ್ ಮಾಡ್ತಿ? ಎಂದು ಇವರು ಬೈದಾಗಲೆಲ್ಲಾ, ನನ್ನ ಮುಖದಲ್ಲೊಂದು ಮುಗುಳ್ನಗೆ! :-)
ಸುಳ್ಳು ಹೇಳದಿರುವುದು, ಪ್ರಾಮಾಣಿಕತೆಯ ಬೆಲೆ, ಹಣದ ಮೌಲ್ಯ ಇವೆಲ್ಲವನ್ನೂ ಅಮ್ಮ ತಾನು ಪಾಲಿಸಿದ್ದಲ್ಲದೇ, ನಮಗೂ ಕೂಡಾ ಜೊತೆಗೆ ಈಗ ನಮ್ಮ ಮಕ್ಕಳಿಗೂ ಹೇಳಿಕೊಡುತ್ತಿರುವುದನ್ನು ನೋಡಿದಾಗ ಬಹಳ ಖುಷಿಯಾಗುತ್ತದೆ. ‘ಸುಖಕ್ಕೆ ಹೊಂದಿಕೊಂಡ ಜೀವ, ಕಷ್ಟ ಬಂದರೆ ತಡೆದುಕೊಳ್ಳಲಾರದು, ಆದರೇ ಕಷ್ಟದ ಅರಿವಿದ್ದರೆ, ಸುಖಕ್ಕೆ ಹೊಂದಿಕೊಳ್ಳುವುದು ಸುಲಭ ’ ಎನ್ನುತ್ತಾ, ನಮ್ಮೆಲ್ಲರನ್ನೂ ಯಾವುದೇ ವಾತಾವರಣಕ್ಕೆ ಹೊಂದಿಕೊಳ್ಳುವಂತೆ ಬೆಳೆಸಿದರು. ಈಗ ನಾವೆಲ್ಲರೂ ಆರಾಮದಾಯಕ ಜೀವನ (ಆಕೆಯಿಂದಾಗಿಯೇ) ನಡೆಸುತ್ತಿದ್ದರೂ, ತಾನು ಮಾತ್ರ ಈಗಲೂ ಬಸ್ಸಿನಲ್ಲಿಯೇ ನೆಂಟರಿಷ್ಟರ ಮನೆಗೆ ಓಡಾಡುತ್ತಾ, ಎರಡು, ಮೂರು ಸ್ಟಾಪ್ ಗಳಾದರೆ ನಡೆಯುತ್ತಲೇ ಹಣವನ್ನು ಉಳಿಸುತ್ತಾ, ‘ನಾನು ಆ ಹಣವನ್ನು ಉಳಿಸಿದರೆ, ಅದು ಯಾರದೋ ಕಷ್ಟಕ್ಕಾಗುವುದು’ ಎನ್ನುತ್ತಾ, ನೆಂಟರಿಷ್ಟರು ಯಾರಾದರೂ ಹಣಕಾಸಿನ ತೊಂದರೆಯಲ್ಲಿದ್ದರೆ, ತಾನುಳಿಸಿದ ಈ ಹಣವನ್ನು ಅವರಿಗೆ ನೀಡುತ್ತಾ, ಒಮ್ಮೊಮ್ಮೆ ನನಗೆ ಸಿಟ್ಟು ಬಂದರೂ, ಯೋಚಿಸಿ ನೋಡುವಾಗ, ಯಾವುದೇ ಸಿದ್ಧಾಂತಗಳ ಹಾವಳಿಯಿಲ್ಲದೆ, ದೊಡ್ಡ, ದೊಡ್ಡ ಮಾತುಗಳಿಲ್ಲದೆ, ತಣ್ಣಗೆ ಆಕೆ ಮಾಡುತ್ತಿರುವ ಸಮುದಾಯದ ಒಳಿತನ್ನು ನೋಡಿದಾಗ ಹೆಮ್ಮೆಯಾಗುತ್ತದೆ.
ಲೈಫ್ ಆಫ್ ಪೈ ಚಿತ್ರ ನೋಡಿದಾಗಿನಿಂದ ಒಂದೇ ಸಮನೆ ನನಗೆ ಕಾಡಿದ್ದು ಅಪ್ಪ, ಅಮ್ಮ. ಅದ್ರಲ್ಲೂ ಮುಖ್ಯವಾಗಿ ಅಮ್ಮ ನಮ್ಮ ಜೀವನದಲ್ಲಿ ಎಂತಹ ಪ್ರಮುಖ ಪಾತ್ರ ವಹಿಸುತ್ತಾಳೆ ಅಲ್ಲವೇ? ಎಂಬುದು. ಆ ಚಿತ್ರದ ನಾಯಕ ತನ್ನ ಜೀವನದುದ್ದಕ್ಕೂ, ಎಂತಹ ಕಷ್ಟ ಬಂದರೂ, ಒಂಟಿಯಾಗಿಬಿಟ್ಟರೂ ತನ್ನಮ್ಮ ಹೇಳಿಕೊಟ್ಟ ಪಾಠಗಳನ್ನೇ ಉಪಯೋಗಿಸುತ್ತ, ಜೀವನದಲ್ಲಿ ಜಯಶಾಲಿಯಾಗುತ್ತಾನೆ. ಅದು ತಪ್ಪೋ, ಸರಿಯೋ ಎನ್ನುವ ಯಾವ ಜಿಜ್ಞಾಸೆಯೂ ಇಲ್ಲದೇ, ಆತ ತನ್ನಮ್ಮನ ಮಾತುಗಳನ್ನು ಸಂಪೂರ್ಣವಾ ಗಿ ನಂಬಿಬಿಡುತ್ತಾನೆ. ಚಿತ್ರ ನೋಡುತ್ತಾ, ನೋಡುತ್ತಾ, ನನ್ನ ಅಮ್ಮ ನನ್ನ ಮೇಲೆ ಬೀರಿದ ಪ್ರಭಾವ ಎಂತಹುದು? ಎಂದು ಯೋಚಿಸಿದಾಗ ಅನ್ನಿಸಿದ್ದು ಇಷ್ಟೇ – ನನ್ನಮ್ಮ ಎಂದಿಗೂ ತನಗಿದ್ದ ಬಂಧುಬಾಂದವರ ಮೇಲಿನ ಸಿಟ್ಟಾಗಲೀ, ದ್ವೇಷವಾಗಲೀ, ಅಸೂಯೆಯಾಗಲೀ, ಇಂತಹ ಯಾವುದೇ ನೆಗಟಿವ್ ಅಂಶಗಳನ್ನು ಮಕ್ಕಳಿಗೆಂದಿಗೂ ತಿಳಿಸುತ್ತಿರಲಿಲ್ಲ. ತನ್ನ ಅಭಿಪ್ರಾಯ ಮಂಡಿಸುವಾಗ ಆಕೆ ಹೇಳುತ್ತಿದ್ದದ್ದು ಇಷ್ಟೇ – “ನನಗೆ ಇವರ ಬಗ್ಗೆ ಹೀಗನ್ನಿಸುತ್ತಿದೆ, ಬಹುಶಃ ನನ್ನ ಅನಿಸಿಕೆ ತಪ್ಪಿರಬಹುದು, ನೀವು ಯೋಚಿಸಿ ನಿರ್ಧರಿಸಿ!” ಹಾಗಾಗೀ ನಾವು ಯಾರ ಬಗ್ಗೆಯೂ, ಯಾವುದೇ ಪೂರ್ವಾಗ್ರಹ ಪೀಡಿತರಾಗದೇ, ನಮ್ಮಷ್ಟಕ್ಕೇ ನಾವೇ ಮನುಷ್ಯರನ್ನು ಅರ್ಥ ಮಾಡಿಕೊಳ್ಳುತ್ತಾ ಹೋದೆವು. ಈಗಲೂ ನಾವು ಯಾವುದೇ ವಿಷಯವನ್ನು ಮಾತಾಡುವಾಗ, ಪೂರ್ವಾಗ್ರಹ ಪೀಡಿತರಾಗದೇ ಮಾತನಾಡಲು ಅಮ್ಮನೇ ಕಾರಣ.
ಇನ್ನೂ ಬಹಳಷ್ಟು ಆಕೆಯ ಬಗ್ಗೆ ಬರೆಯುವುದಿದೆ. ಮತ್ತೊಮ್ಮೆ ಸಮಯವಾದಾಗ ಬರೆಯುತ್ತೇನೆ. ಜೀವನದಲ್ಲಿ ನಾವು ಇಷ್ಟು ಮುಂದೆ ಬಂದಿದ್ದರೆ, ನಾವೀಗ ನಡೆಸುತ್ತಿರುವ ಆರಾಮದಾಯಕ, ಐಷಾರಾಮದ ಜೀವನ, ಪಾಲಿಸುತ್ತಿರುವ ಮೌಲ್ಯಗಳು ಎಲ್ಲಕ್ಕೂ ಅವರೇ ಕಾರಣ. ಮನೆಯೇ ಮೊದಲ ಪಾಠಶಾಲೆ, ತಾಯಿಯೇ ಮೊದಲ ಗುರು ಎಂಬ ಗಾದೆ ಮಾತನ್ನು ಅಕ್ಷರಶಃ ಪಾಲಿಸಿದ ಆಕೆ, ಈಗ ಮೊಮ್ಮಕ್ಕಳಿಗೂ ಕೂಡ ಗುರುವಾಗಿರುವುದು ನನ್ನ ಭಾಗ್ಯ!. ‘ಅಜ್ಜಿ ಸಾಕಿದ ಮಗು’ ಎಂಬಂತೆ ಆಗಬೇಡಿರೋ ಎಂದು ನನ್ನ ಮಕ್ಕಳಿಗೆ ಹೇಳುತ್ತಲೇ, ಮಕ್ಕಳಿಗೆ ನನಗಿಂತಲೂ ಹೆಚ್ಚಿಗೆ ಅಮ್ಮನಾಗಿದ್ದಾರೆ. ಅಮ್ಮನ ಕೈಲಿ ಬೆಳೆದ, ಬೆಳೆಯುತ್ತಿರುವ ಅದೃಷ್ಠಶಾಲಿ ಮೊಮ್ಮಕ್ಕಳು, ನನ್ನ ಮಕ್ಕಳು. ಹೊಸ ಚಿಗುರು, ಹಳೆ ಬೇರು ಕೂಡಿರಲು ಮರ ಸೊಗಸು ಎಂಬಂತಿದೆ ನಮ್ಮ ಮನೆ! :-) ಹುಟ್ಟುಹಬ್ಬದ ಶುಭಾಶಯಗಳು ಹೇಳುವುದು ಕೃತಕ ಎಂಬುದು ಯಾವಾಗಲೂ ಅಮ್ಮನ ಹೇಳಿಕೆ. ೭೦ವರ್ಷ ತುಂಬುತ್ತಿರುವ ಈ ಹೊತ್ತಿನಲ್ಲಿ, ನನ್ನ ಕಿರಿ ಮಗ ಯಾವಾಗಲೂ ಹೇಳುವಂತೆ, ಅವನ ಮಗ ಹುಟ್ಟುವವರೆಗೂ ಅಮ್ಮ ನಮ್ಮೊಂದಿಗೆ ಇರಲಿ, ಕೈಕಾಲು ಗಟ್ಟಿಯಾಗಿಯೇ ಇರಲಿ! :-)

Tuesday, August 5, 2014

ನೊಣ ಮತ್ತು ಸೊಳ್ಳೆ ಕಥೆ!


ಸೊಳ್ಳೆ ಕಥೆ! 





ಒಂದಾನೊಂದು ಕಾಲದಲ್ಲಿ ಜಗತ್ತು ಬಹಳ ಶಾಂತವಾಗಿತ್ತು. ನಮ್ಮೊಳಗಿರುವ ಗಲೀಜಿನಿಂದಲೋ ಅಥವಾ ವಿದೇಶಿಯರ ಕೈವಾಡದಿಂದಲೋ?! ಒಂದಷ್ಟು ಸೊಳ್ಳೆಗಳು ಸೃಷ್ಠಿಯಾದವು. ಈ ಸೊಳ್ಳೆಗಳು ತಮ್ಮ ಸಂತಾನಾಭಿವೃದ್ಧಿಗಾಗಿಯೇ ರಕ್ತ ಹೀರುವ ಉದ್ದೇಶವನ್ನು ನಂಬದ ಜನರು, ಸೊಳ್ಳೆಗಳ ಈ ಆಟಾಟೋಪಕ್ಕೆ ಏನೇನೋ ಹೆಸರಿಟ್ಟರು. ರೈಟಿಸ್ಟ್ ಗಳು ಇವೆಲ್ಲಾ ಲೆಫ್ಟಿಸ್ಟ್ ಗಳ ಹುನ್ನಾರವೆಂದೂ, ಲೆಫ್ಟಿಸ್ಟ್ ಗಳು ರೈಟಿಸ್ಟ್ ಗಳ ಆಷಾಢಭೂತಿತನವನ್ನು, ಲೆಫ್ಟಿಸ್ಟ್ ಗಳ ಒಳಗಿರುವ ರೈಟಿಸ್ಟ್ ಗಳನ್ನು, ರೈಟಿಸ್ಟ್ ಗಳ ಒಳಗಿರುವ ಲೆಫ್ಟಿಸ್ಟ್ ಗಳನ್ನು ಹೀಗಳೆಯುತ್ತಾ ಕುಳಿತರು. ಸೊಳ್ಳೆಗಳ ನಿರ್ಮೂಲನಕ್ಕೆಂದು ಒಂದಷ್ಟು ಗುಂಪುಗಳು ಈ ಜನರ ಮಧ್ಯೆಯೇ ರಚಿತವಾದವು. ಆ ಗುಂಪುಗಳು ಕಳಪೆಮಟ್ಟದ ಸ್ಪ್ರೇಗಳನ್ನು ಕೊಂಡುಕೊಂಡದ್ದರಿಂದ, ಸೊಳ್ಳೆಗಳು ಅವುಗಳನ್ನು ತಿಂದು, ತೇಗಿ ಇನ್ನಷ್ಟು ಕೊಬ್ಬಿದವು. ಇನ್ನೂ ನನ್ನಂತಹ ಒಂದಷ್ಟು ಜನರು, ಸೊಳ್ಳೆಗಳನ್ನು ಹೊಡೆದು ಕೊಂದರೆ ಲೆಫ್ಟಿಸ್ಟ್ ಗಳಾಗಿಬಿಡುವುದು ಅಥವಾ ಸೊಳ್ಳೆ ಪರದೆ ಹಾಕಿ ಕೂತರೆ ರೈಟಿಸ್ಟ್ ಗಳಾಗಿಬಿಡುವುದರ ಮರ್ಮದ ರಹಸ್ಯ ಬೇಧನ ಮಾಡಲು ಹೊರಟು, ಸೊಳ್ಳೆಗಳ ಉದ್ದೇಶವನ್ನು ಅರಿತು ಹತಾಶಗೊಂಡರು. ಸೊಳ್ಳೆಗಳನ್ನು ನಿರ್ಮೂಲನ ಮಾಡುವುದಷ್ಟೇ ನಮ್ಮ ಉದ್ದೇಶವಾಗಿರಬೇಕು ಎಂಬುದನ್ನು ಸಾರಿ, ಸಾರಿ ಹೇಳಿದರೂ ಜನರು ನಂಬದೇ, ಹೀಗೇ ಹೇಳಿದವರನ್ನು ಕೂಡ ತಮಗೆ ತೋಚಿದ ಗುಂಪಿಗೆ ಸೇರಿಸುತ್ತಾ, ಬ್ರಾಂಡ್ ಮಾಡುತ್ತಾ ಹೊರಟರು.

ಮುಂದಾ?


ಏನೂ ಇಲ್ಲ, ಸದ್ಯಕ್ಕಿರುವ ಕೃತಕ ಸಲ್ಯೂಷನ್ - ವಾತಾವರಣದಲ್ಲಿ ಬಿಸಿ ಹೆಚ್ಚಿರುವುದರಿಂದ, ಕೃತಕ ಏರ್ ಕಂಡೀಷನರ್ ಬಳಸಿ, ವಾತಾವರಣವನ್ನು ತಂಪಾಗಿಸಿಕೊಂಡು, ಹೊದಿಕೆ ಹೊದ್ದು, ಸೊಳ್ಳೆಗಳೇ ಇಲ್ಲವೆಂದು ನಮ್ಮನ್ನು ನಾವೇ ನಂಬಿಸಿಕೊಳ್ಳುತ್ತಾ ಸುಮ್ಮನೆ ಕೂರುವುದೊಂದೇ ಉಪಾಯ  — feeling ತಂಪು, ತಂಪು, ಕೂಲ್, ಕೂಲ್! ಎಂಥ ಹಾಟ್ ಮಗಾ?! :-).


ಜಗತ್ತಿನಲ್ಲಿ ಸೊಳ್ಳೆಗಳ ಹುಟ್ಟಿನ ಬಗ್ಗೆ, ಅವುಗಳ ದಾಂಧಲೆ ಬಗ್ಗೆ ಹೇಳಿದ್ದೆ ಅಲ್ವಾ? ಇವತ್ತು ನೊಣಗಳ ಕಥೆ ನೋಡೋಣ 




ಗಲೀಜು ಇರುವೆಡೆ ನೊಣಗಳು ಕೂಡ ಇದ್ದೇ ಇರುತ್ತಲ್ಲವೇ? ಅವುಗಳಿಗಂತೂ ಸುಮಾರು ೬೫ ಮಿಲಿಯನ್ ವರ್ಷಗಳ ಇತಿಹಾಸವಿದೆಯಂತೆ! ನೊಣಗಳು ಬದುಕುವುದಾದರೂ ಹೇಗೆ? ಹೇಸಿಗೆ ತಿಂದು, ತೇಗಿದರೇ ಮಾತ್ರ ಬದುಕುತ್ತವೆ. ಹಾಗಾಗಿ ಎಲ್ಲಿ ಹೇಸಿಗೆ, ಕಸ, ಗಲೀಜು ತುಂಬಿರುತ್ತದೆಯೋ ಅಲ್ಲೆಲ್ಲಾ, ನೊಣಗಳ ಹಾವಳಿ ವಿಪರೀತ. ನೊಣಗಳ ಹಾವಳಿ ತಪ್ಪಿಸಲು ನಮ್ಮ ಮನೆ ಅಂಗಳ ಸ್ವಚ್ಛವಾಗಿಟ್ಟುಕೊಳ್ಳಬೇಕೇ ಹೊರತು, ನೊಣಗಳನ್ನು ದೂಷಿಸುವುದಲ್ಲ ಅಲ್ಲವೇ?

ಸೊಳ್ಳೆಗಳಿಗೆ ನೊಣಗಳನ್ನು ಕಂಡರೆ ಅಸೂಯೆ, ಈ ನೊಣಗಳು ಗಟ್ಟಿಗರು, ನಮ್ಮಷ್ಟು ಸುಲಭವಾಗಿ ಸಾಯುವವರಲ್ಲ, ಸಂಗೀತ ಹಾಡುತ್ತಾ ಜನರನ್ನು ಮರುಳು ಮಾಡುತ್ತಾ ರೋಗಗಳನ್ನು ಎಷ್ಟು ಸುಲಭವಾಗಿ ಹರಡಿಬಿಡುತ್ತವೆ, ಆದರೆ ನಾವು ಜನರ ರಕ್ತ ಹೀರಲೇ ಬೇಕು, ಹಾಗಾಗಿ ನಮ್ಮ ಕೆಲಸ ಕಷ್ಟ ಎಂಬುದು ಸೊಳ್ಳೆಗಳ ಆಗ್ರಹ. ಇಡೀ ಜಗತ್ತಿನ ಹೇಸಿಗೆಯನ್ನು ತಿಂದು, ಸ್ವಚ್ಛ ಮಾಡುತ್ತಿದ್ದೇವೆಂಬ ಅಹಂ ನೊಣಗಳದ್ದು. ಆದರೆ ನಮ್ಮ ಜನರೋ ತಮ್ಮ ತಮ್ಮ ಮನೆಯ ಗಲೀಜನ್ನು ಸ್ವಚ್ಛಗೊಳಿಸದೇ, ಮತ್ತೊಬ್ಬರ ಮನೆಯ ಕಾಂಪೌಂಡ್ ನೋಡುತ್ತಾ ಕುಳಿತಿರುವುದು, ಹಾಗೂ ಇದರಿಂದ ಇನ್ನಷ್ಟು ಸೊಳ್ಳೆ, ನೊಣಗಳ ಹುಟ್ಟಿಗೆ ಕಾರಣವಾಗುತ್ತಿರುವುದು ಬೇಸರದ ಸಂಗತಿ

ಸಾಂಕ್ರಮಿಕ ರೋಗಗಳು ಇಬ್ಬರಿಂದಲೂ ಹರಡುತ್ತಿವೆ, ಇವರಿಬ್ಬರನ್ನೂ ನಿರ್ಮೂಲನಗೊಳಿಸಬೇಕು, ಮತ್ತು ಹೇಗೆ? ಎಂಬುದರ ಬಗ್ಗೆ ಚರ್ಚೆಯಾಗದೇ, ಸೊಳ್ಳೆಗಳ ಶಕ್ತಿ ಹೆಚ್ಚೊ? ನೊಣಗಳದ್ದೋ? ಎಂಬ ಚರ್ಚೆಯಾಗುತ್ತಿರುವುದು ನಿಜವಾಗಿಯೂ ಶೋಚನೀಯ ಪರಿಸ್ಥಿತಿ ! 




ಭಾಗ ೨

 ‘x' ಎಂದರೆ ಅಸಹ್ಯ, ಕ್ರೂರ, ಭೀಬತ್ಸ. ಹಾಗೆಯೇ ‘D' ಎಂದರೆ ಅಸಹನೆ, ನಿಂದನೆ, ದಬ್ಬಾಳಿಕೆ.  ಸೊಳ್ಳೆಯೊಂದಕ್ಕೆ ‘x' ಎಂದು ಹೇಳಿದರೆ ಮರ್ಮಾಘಾತವಾಗುವುದು.  ಹಾಗೆಯೇ ನೊಣಕ್ಕೆ ‘D' ಎಂದರೆ ತಡೆಯಲಾರದಷ್ಟು ಸಿಟ್ಟು ಬರುವುದು.  ಹೀಗಿದ್ದಾಗ ಸುಖಾಸುಮ್ಮನೆ ಸೊಳ್ಳೆಯೊಂದು ನೊಣಕ್ಕೆ ‘D' ಎಂದಿತು. ನೊಣವು ನನ್ನನ್ನು ‘D’ ಎನ್ನುತ್ತೀಯೇ? ಹಾಗಾದರೆ ನೀನು ‘x' ಎಂದಿತು.  ‘x' ಎಂದರೆ ಸೊಳ್ಳೆಗೆ ಆಘಾತವಾಗುವುದು ಎಂದು ತಿಳಿದೇ ಹೇಳಿತು. ನಂತರ ನಡೆದದ್ದು ಕೋಲಾಹಲ.  ಈ ಕೋಲಾಹಲದಲ್ಲಿ ಜನರಿಗೆ ಯಾರನ್ನು ಸಪೋರ್ಟ್ ಮಾಡಬೇಕೆನ್ನುವುದು ಸಮಸ್ಯೆ!  ಜನರಿಗೆ ಸೊಳ್ಳೆಯೂ ಹಾಗೂ ನೊಣ ಎರಡೂ ಕೂಡ ರೋಗವನ್ನು ಹಬ್ಬಿಸುವುದರಿಂದ ಎರಡೂ ಕೂಡ ನಾಶವಾಗಲಿ ಎಂಬ ಬಯಕೆ.  ಒಂದು ಒಳ್ಳೆಯ ಸೊಳ್ಳೆ ಬ್ಯಾಟ್ (ನೊಣವನ್ನು ಸಾಯಿಸುವಂತದ್ದು) ತೊಗೊಬೇಕು ಅರ್ಜೆಂಟಾಗಿ! :) 


ಅತ್ಯಾಚಾರ ಅಂದ್ರೆ ಬರೀ ಲೈಂಗಿಕ ಅತ್ಯಾಚಾರ ಮಾತ್ರನಾ?

ಅತ್ಯಾಚಾರ ಅಂದ್ರೆ ಬರೀ ಲೈಂಗಿಕ ಅತ್ಯಾಚಾರ ಮಾತ್ರನಾ?

ಈ ಲೈಂಗಿಕ ಅತ್ಯಾಚಾರವನ್ನು ಅತ್ಯಂತ ಕ್ರೂರಿಯಾಗಿ ಚಿತ್ರಿಸಿ ನಮ್ಮ ಮಕ್ಕಳು ಮತ್ತು ಹೆಂಗಸರನ್ನು ಇನ್ನಷ್ಟು ಭಯ ಪಡಿಸಿ, ಮೂಲೆಯಲ್ಲಿ ಕೂರುವಂತೆ ಮಾಡುತ್ತಿದ್ದೇವೆ.

ಮೊನ್ನೆ ಟೌನ್ ಹಾಲ್ ಬಳಿಯ ಪ್ರತಿಭಟನೆ ಮತ್ತು ಉಷಾ ಆಂಟಿಯವರ ಬುಕ್ ರಿಲೀಸ್ ಎರಡನ್ನೂ ಕಂಬೈನ್ ಮಾಡಿಕೊಂಡು ಒಬ್ಬಳೇ ಹೊರಟಿದ್ದೆ. ಆಗ ಸಮಯ ಸಂಜೆ ೫.೩೦ ಗಂಟೆ. ಟೌನ್ ಹಾಲ್ ನಿಂದ ನಯನ ಸಭಾಂಗಣ (ಇರುವುದು ಕನ್ನಡ ಭವನದೊಳಗೆ) ದ ತನಕ ಹೋಗುವಷ್ಟರಲ್ಲಿ ನನ್ನ ತಲೆಯೊಳಗೆ ಸುಳಿದ ಆಲೋಚನೆಗಳು ಸಾವಿರಾರು. ಎಲ್ಲವೂ ಅತ್ಯಾಚಾರಕ್ಕೆ ಸಂಬಂಧಿಸಿದ್ದೆ. ನನಗೆ ನಯನ ಸಭಾಂಗಣ ಇರುವುದೆಲ್ಲಿ ಎಂದು ಗೊತ್ತಿರಲಿಲ್ಲ. ಸಂಸ ಬಯಲು ರಂಗಮಂದಿರದ ಬಳಿ ೪,೫ ಮಂದಿ ಕುಳಿತಿದ್ದರು. ಅವರ ಬಳಿ ಕೇಳಲು ಭಯ. ಆದರೂ ಕೇಳಿದೆ. ಅವರು ಪಕ್ಕದಲ್ಲಿಯೇ ಮುಂದಕ್ಕೆ ಹೋಗಿ ಎಂದರು. ಸಂಸ ಬಯಲು ಮಂದಿರದಿಂದ ನಯನ ಸಭಾಂಗಣಕ್ಕೆ ಹೋಗುವವರೆಗೂ ನಿರ್ಜನ ಪ್ರದೇಶ. ಆಗಲೇ ಕತ್ತಲು ಮುತ್ತಿಕೊಳ್ಳುತ್ತಿತ್ತು. ಅವರು ಹಿಂದೆ ಬಂದರೆ? ಈಗೇನಾದರೂ ಮಾಡಿದರೆ? ನನ್ನನ್ನು ನಾನು ಹೇಗೆ ಪ್ರೊಟೆಕ್ಟ್ ಮಾಡಿಕೊಳ್ಳುವುದು? ಇದು ನನ್ನ ತಲೆಯಲ್ಲಿ ನಡೆದ ತಾಕಲಾಟ. ಕನ್ನಡ ಭವನದೊಳಗೆ ಪ್ರವೇಶ ಮಾಡಿದೆ. ಅಲ್ಲಿಂದ ಕೆಳ ಮಹಡಿಗಿಳಿದು, ಹೋಗುವಷ್ಟರಲ್ಲಿ ಅಕ್ಷರಶಃ ಹೆದರಿಕೆಯಿಂದ ಬೆವರಿದೆ. ಏಕೆಂದರೆ ಅಲ್ಲಿ ಒಬ್ಬರೂ ಇರಲಿಲ್ಲ. ಆ ಜಾಗದಲ್ಲಿ ಏನೂ ಬೇಕಿದ್ದರೂ ಆಗಬಹುದಿತ್ತು. ಈ ಭಯ ನನಗೆ ಹಿಂದೆಂದೂ ಕಾಡಿರಲಿಲ್ಲ. ನಾನು ರಾತ್ರಿ ಹೊತ್ತು ಒಬ್ಬೊಬ್ಬಳೇ ಓಡಾಡುವಾಗ ‘ಚೈನ್ ಸ್ನಾಚ್’ ಮಾಡುತ್ತಾರೆಂದು ಕಳ್ಳತನಕ್ಕೆ ಹೆದರುತ್ತಿದ್ದೆ ಹೊರತು ‘ರೇಪ್’ ಆಗಬಹುದು ಎಂದು ಹೆದರಿರಲಿಲ್ಲ!  

ಉಷಾ ಆಂಟಿಯವರ ಪುಸ್ತಕಗಳು ರಿಲೀಸ್ ಆದವು. ಎಲ್ಲರೂ ಮಾತಾಡುತ್ತಿದ್ದರು. ಆಗ ನನ್ನ ತಲೆಯಲ್ಲಿ ನಾನು ಹೆದರಿದ ವಿಷಯವೇ! ನನಗೆಂದಿಗೂ ನನಗೆ ಸಿಕ್ಕ ಗೆಳೆಯರು ಈ ಮನಸ್ಥಿತಿಯವರಾಗಿರಲಿಲ್ಲ. ನನ್ನ ಅಣ್ಣಂದಿರು ಈ ಮನಸ್ಥಿತಿಯವರಲ್ಲ. ನನ್ನ ನೆಂಟರಿಷ್ಟರು ಈ ಮನಸ್ಥಿತಿಯವರಲ್ಲಾ. ಇಷ್ಟು ವರ್ಷಗಳೂ ಇಲ್ಲದ ಈ ಭಯ ಈಗ ಹುಟ್ಟಿದ್ದು ಏಕೆ? ನನ್ನ ಮನಸ್ಸನ್ನು ಕಂಟ್ರೋಲ್ ಮಾಡಿಕೊಳ್ಳಲು ನನಗೆ ಸುಮಾರು ಹೊತ್ತು ಬೇಕಾಯಿತು. 

ಈಗ ಯೋಚಿಸಿ , ನನ್ನ ಮನಸ್ಸಿನ ಮೇಲಾದ ಅತ್ಯಾಚಾರಕ್ಕೆ ಯಾರು ಹೊಣೆ? ಸಮಾಜವೇ, ಯಾರೋ ಕೆಲವು ಮಂದಿಗಳೇ? ಗಂಟೆಗೊಂದು, ನಿಮಿಷಕೊಂದು ಅತ್ಯಾಚಾರದ ಮುದ್ರೆಯೊತ್ತಿ (ಆಗಿರುತ್ತದೆಯೋ, ಇಲ್ಲವೋ) ಕೇವಲ ಟಿ ಆರ್ ಪಿ ಗಾಗಿ ನಮ್ಮೆಲ್ಲರನ್ನೂ ಹೆದರಿಸುತ್ತಿರುವ ಮಾಧ್ಯಮದವರೇ? ನೀವೇ? ನಾನೇ? 
ಗಾಡಿ ಕಲಿಯಲು ಹೊರಟಾಗ ಆಕ್ಸಿಡೆಂಟಿನ ಭಯ ನನಗೆ. ಆಗ ನನ್ನ ಗೆಳೆಯನೊಬ್ಬ ಹೇಳಿದ ಮಾತು (ಸುಮಾರು ವರುಷಗಳ ಹಿಂದಿನ ಮಾತು) ಈಗಲೂ ನೆನಪಿದೆ. ಲೆಕ್ಕದಷ್ಟು ಆಕ್ಸಿಡೆಂಟ್ ಗಳು ಆಗುತ್ತವೆ. ಲಕ್ಷಾಂತರ ಮಂದಿ ಸುರಕ್ಷಿತವಾಗಿ ಮನೆ ಸೇರುತ್ತಿರುತ್ತಾರೆ. ನೀನು ಸುರಕ್ಷಿತವಾಗಿ ಮನೆ ಸೇರುತ್ತಿರುವವರನ್ನು ಗಮನಿಸು. ಆಕ್ಸಿಡೆಂಟ್ ಆಗುತ್ತಿರುವವರನಲ್ಲ! ಆಗ ಭಯ ಕಡಿಮೆಯಾಗುತ್ತದೆ. ಗಾಡಿ ಕಲಿಯಲು ಆಗುತ್ತದೆ. 

ನಮ್ಮ ಮಕ್ಕಳನ್ನು ಸುರಕ್ಷಿತವಾಗಿರಲು ಕಲಿಸಬೇಕೇ ಹೊರತು ಜೀವನದ ಗಾಡಿ ಧೈರ್ಯವಾಗಿ ಓಡಿಸುವಂತೆ ಪ್ರೇರೇಪಿಸಬೇಕೇ ಹೊರತು ಈಗಾಗಲೇ ರೇಸ್ ಕುದುರೆಗಳಾಗಿರುವ ಅವರನ್ನು ಖೈದಿಗಳಾಗಿಸುವುದಲ್ಲ ಅಲ್ಲವೇ? ಈಗಷ್ಟೇ ತಮ್ಮ ಸೇಫರ್ ಜ಼ೋನ್ ನಿಂದ ಹೊರ ಬರುತ್ತಿರುವ ಹೆಂಗಸರನ್ನು ಭಯಬೀತರನ್ನಾಗಿಸುವುದು ಅಲ್ಲ ಅಲ್ಲವೇ?

ರೇಪ್ ಅನ್ನೋದು ಒಂದು ಮನಸ್ಥಿತಿ. ಶಿಕ್ಷೆಯಾಗುತ್ತದೆ ನನಗೆ ಎಂದು ಯೋಚಿಸುವ ಗಂಡಸರ್ಯಾರು ರೇಪ್ ಮಾಡುವುದಿಲ್ಲ! ಗಂಡಸರು ಕೂಡ ವಿಕ್ಟಿಮ್ಸ್ ಎಂದು ಏಕೆ ಯೋಚಿಸುವುದಿಲ್ಲ. ಮೊನ್ನೆ ಒಬ್ಬರು ಆರ್ಟಿಕಲ್ ಬರೆದಿದ್ದರು. ಹೆಸರು ಮರೆತಿದ್ದೇನೆ. ಹುಡುಗಿಗೆ ಋತುಸ್ರಾವ ಶುರುವಾದಾಗ ಮನೆಮಂದಿ ಎಲ್ಲರೂ ಆಕೆಯನ್ನು ಕೇರ್ ತೆಗೆದುಕೊಳ್ಳುತ್ತೇವೆ. ಆಕೆಗೆ ವಿವರಿಸುತ್ತೇವೆ. ಹೇಗಿರಬೇಕು? ಎಂಬುದನ್ನೆಲ್ಲಾ ಬಿಡಿಸಿ ಹೇಳುತ್ತೇವೆ. ಹೊರಗೆ ಆಡಲು ಹೋದಾಗಿಂದ ಹಿಡಿದು ಮನೆ ಸೇರುವ ತನಕ ಯಾರಾದರೊಬ್ಬರನ್ನು ಕಾವಲು ಇಡಿಸುತ್ತೇವೆ. ಇಲ್ಲವೇ ನಮ್ಮ ಕಣ್ಣು, ಕಿವಿಗಳೇ ಕಾವಲುಗಾರರಾಗಿರುತ್ತವೆ. ಆದರೆ ಬಾಲಕನೊಬ್ಬ ದೊಡ್ಡವನಾಗುವುದು ನಮಗೆ ತಿಳಿಯುವುದೇ ಇಲ್ಲ! ಆತನ ಬದಲಾವಣೆಯನ್ನು ಗಮನಿಸುವುದೇ ಇಲ್ಲ, ಆತನ ಮನಸ್ಸಿನಲ್ಲಿ ಕೋಲಾಹಲ ನಡೆಯುತ್ತಿರಬಹುದೆಂಬ ಕಲ್ಪನೆಯೇ ಇಲ್ಲ. 
ನನ್ನ ಪುಟ್ಟ ಮಗನ (೭ ವರ್ಷ ಆಗ ಅವನಿಗೆ) ಸ್ಕೂಲ್ ಡೇ ತರಬೇತಿ ನಡೆಯುತ್ತಿತ್ತು. ಒಮ್ಮೆ ಸಿಟ್ಟು ಮಾಡಿಕೊಂಡು ಬಂದ. ನಾನು ಡ್ಯಾನ್ಸ್ ಮಾಡುವುದೇ ಇಲ್ಲ ನಾಡಿದ್ದು ಎಂದ. ವಿಚಾರಿಸಿದ್ದಕ್ಕೆ ತಿಳಿಯಿತು. ಹೆಣ್ಣು ಮಕ್ಕಳಿಗೆಲ್ಲಾ ಡ್ರೆಸ್ ಬದಲಾಯಿಸಲು ಪ್ರೈವಸೀ ಅಂತೆ. ಹುಡುಗರು ಎಲ್ಲರ ಮುಂದೆ ಬದಲಾಯಿಸಬೇಕು. ಆ ಹುಡುಗಿಯರು ನಮ್ಮ ‘ಇನ್ನರ್ ವೇರ್’ ನೋಡಿ ನಗ್ತಾರೆ ಗೊತ್ತಾ? ನಮಗೇನು ಮರ್ಯಾದೆ ಇರೊಲ್ವಾ? ನಮ್ಮ ಪ್ರೈವೇಟ್ ಪಾರ್ಟ್ ಅವರ್ಯಾಕೆ ನೋಡಬೇಕು? ಕೊಟ್ಟರೆ ನಮಗೂ ಪ್ರೈವಸಿ ಕೊಡಬೇಕು. ಹೀಗ್ಯಾಕೆ ಅವರಿಗೊಂದು ರೂಲ್ಸ್, ನಮಗೊಂದು ರೂಲ್ಸ್? ಎಂದ. ಅದಕ್ಕೆ ನನ್ನ ದೊಡ್ಡ ಮಗ ‘ತಣ್ಣಗೆ, ಅಮ್ಮ, ಈ ಹುಡುಗಿಯರೇ ಜಾಸ್ತಿ ಈ ವಿಷಯದಲ್ಲಿ ನಗೋದು. ತಮಾಷೆ ಮಾಡೋದು. ಆಮೇಲೆ ಏನಾದರೂ ಸ್ವಲ್ಪ ಹೆಚ್ಚು ಕಡಿಮೆಯಾದರೆ, ನಮ್ಮ ಮೇಲೆ ಎತ್ತಾಕಿಬಿಡ್ತಾರೆ. ಕೊನೆಗೆ ನಮಗೆ ಟೀಚರ್ಸ್ ಬೈಯೋದು. ಇವರಿಗೂ ಪ್ರೈವಸಿ ಕೊಡೋಕೆ ಟೀಚರ್ ಗೆ ಕನ್ ವಿನ್ಸ್ ಮಾಡಿ. ಅವನು ಹೇಳ್ತಿರೋದರಲ್ಲಿ, ಕೇಳ್ತಿರೋದರಲ್ಲಿ ತಪ್ಪೇನಿದೆ? ಎಂದ. ಆಮೇಲೆ ಆ ವರ್ಷದಿಂದ ಇಬ್ಬರಿಗೂ ಪ್ರೈವಸಿ ಸಿಕ್ಕಿತು.

ಸಮಾಜದಲ್ಲಿ ಯಾವಾಗಲೂ ಪಾಸಿಟಿವ್ ಮೈಂಡ್ ಸೆಟ್ ಶುರು ಮಾಡಬೇಕೇ ಹೊರತು ನೆಗೆಟಿವ್ ನನ್ನು ಎತ್ತಿ ತೋರಿಸುವುದಲ್ಲ. ನಮ್ಮಿಂದ ಸಮಾಜ. ಸಮಾಜದಿಂದ ನಾವಲ್ಲ. ಎರಡು ಉದಾಹರಣೆಗಳು. ೧. ನಮ್ಮ ಮನೆ ಬಹಳ ದೂರವಿದೆ. ಅಕಸ್ಮಾತ್ ರಾತ್ರಿ ತಡವಾಗಿಬಿಟ್ಟರೆ ವಾಪಾಸು ಆಟೋದಲ್ಲೇ ಬರಬೇಕು. ನನಗೆ ಮತ್ತು ಅಮ್ಮನಿಗೆ ಆಗಲೇ ಹೇಳಿದಂತೆ ಕಳ್ಳರ ಭಯವೇ ಹೆಚ್ಚು. (ಚಿನ್ನ ಅಷ್ಟೊಂದು ಹಾಕಿಕೊಳ್ತಿರಾ? ಎಂದು ಕೇಳಬೇಡಿ  ) ಮೊಬೈಲ್ ಕಿತ್ತುಕೊಂಡರೆ? ನಾವು ಹಾಕಿಕೊಂಡಿರೋದು ಚಿನ್ನದಲ್ಲಾ ಅಂತಾ ಅವರಿಗೆ ಹೇಗೆ ಗೊತ್ತಾಗುತ್ತದೆ? ಹೊಡೆದುಬಿಟ್ಟರೆ? ಹೀಗೆಲ್ಲಾ. ಅದಕ್ಕೆ ನಾವಿಬ್ಬರೂ ಕಂಡುಕೊಂಡಿರೋ ಉಪಾಯ. ಆ ಆಟೋದವರನ್ನು ಪರಿಚಯಿಸಿಕೊಳ್ಳುವುದು. ಉದ್ದಕ್ಕೂ ಅವರೊಂದಿಗೆ ಅವರ ಕಷ್ಟ, ನಷ್ಟಗಳನ್ನು ವಿಚಾರಿಸುತ್ತಾ ಬರುವುದು. ನಮ್ಮ ಮನೆಗೆ ಬರುವಷ್ಟರಲ್ಲಿ ಆತ ಪರಿಚಯವಾಗಿಬಿಟ್ಟಿರುತ್ತಾನೆ. ನನಗೆ ಹುಷಾರಾಗಿ ಹೋಗಿ ಮೇಡಮ್ ಎಂದು ನಿರ್ದೇಶಿಸುವಷ್ಟರ ಮಟ್ಟಿಗೆ. Uma Sekhar ಮತ್ತು Anuradha B Rao ಈ ಇಬ್ಬರೂ ಕೂಡ ಹೀಗೆಯೇ. ಆತ್ಮೀಯವಾಗಿ ಆತನೊಂದಿಗೆ ಮಾತಾಡುತ್ತಾ, ತಮಾಷೆಯಾಗಿಯೇ ಜಗಳವಾಡುತ್ತಾ, ಸುರಕ್ಷಿತವಾಗಿ ಮನೆ ತಲುಪುತ್ತಾರೆ. ನಮ್ಮನ್ನು ನಂಬಿದ್ದಾರೆ ಇವರು ಎಂದಾದ ಕೂಡಲೇ ಆ ಅಪರಿಚಿತ ಗಂಡಿನಲ್ಲಿ ನಮ್ಮನ್ನು ಸುರಕ್ಷಿತವಾಗಿ ತಲುಪಿಸಬೇಕು ಎನ್ನುವ ಭಾವ ಹುಟ್ಟಿಬಿಡುತ್ತದೆ. ನನ್ನ ಪ್ರಕಾರ ಇದು ‘ಪಾಸಿಟಿವ್ ಮೈಂಡ್ ಸೆಟ್’ 

ಅದೇ ನನ್ನ ಮಕ್ಕಳ ತರಗತಿಗಳಲ್ಲಿ ಗಂಡು ಮಕ್ಕಳನ್ನು ಪ್ರಚೋದಿಸುತ್ತಲೇ ಅಥವಾ ಅವರನ್ನು ಕಾಡಿಸುತ್ತಲೇ ಇರುವ ಕೆಲವೊಂದು ಹೆಣ್ಣುಮಕ್ಕಳು, ಟೀಚರ್ ಬಂದೊಡನೆಯೇ ಅಥವಾ ಸಿಕ್ಕಿಬಿದ್ದಾಗ ಅಳುತ್ತಾ ನಿಂತುಬಿಡುತ್ತಾರೆಯಂತೆ. ಏನೂ ಮಾದದೇ ಸುಮ್ಮನಿದ್ದ ಗಂಡು ಮಕ್ಕಳಿಗೆ ಬೈಗುಳ. ನನ್ನ ದೊಡ್ಡ ಮಗ ಹೇಳ್ತಾನೆ ‘ಅಬ್ಬಾ! ಈ ಗರ್ಲ್ಸ್ ಭಯಂಕರ ಡೇಂಜರಸ್ ಅಮ್ಮಾ. ಅದೆಲ್ಲಿರುತ್ತೋ? ಕಣ್ಣೀರು. ಪುಳಕ್ ಅಂತಾ ಬಂದುಬಿಡುತ್ತೆ. ನಮಗೆ ಡೌಟ್ ಆಗಿಬಿಡುತ್ತದೆ, ನಾವೇನಾದರೂ ಮಾಡಿದೆವಾ? ಅಂತಾ. ಅವರ ಸುದ್ಧಿಗೆ ಹೋಗೊಲ್ಲಾ ನಾವು’ ಎಂದು ಹೇಳುತ್ತಾನೆ. ಇದು ನನ್ನ ಪ್ರಕಾರ ಈ ಗಂಡು ಮಕ್ಕಳಿಗೆ ಹೆಣ್ಣು ಮಕ್ಕಳ ವಿಷಯದಲ್ಲಿ ನೆಗೆಟಿವ್ ನೆಸ್ ಕ್ರಿಯೇಟ್ ಆಗ್ತಿದೆ.
ನಮ್ಮ ಸಮಾಜ ಬೆಳೆಯಲು ನಮಗೆ ಇಬ್ಬರೂ ಬೇಕಲ್ವಾ? ಗಂಡು ಮಕ್ಕಳೆಲ್ಲಾ ರೇಪಿಸ್ಟ್ ಗಳಾಗಿಬಿಡ್ತಾರೆ? ಹೆಣ್ಣು ಮಕ್ಕಳೆಲ್ಲಾ ವಿಕ್ಟಿಮ್ಸ್ ಗಳಾಗಿಬಿಡ್ತಾರೆ? ಅನ್ನೋ ಭಯ ಯಾಕೆ ಹುಟ್ಟು ಹಾಕ್ತಿದ್ದೀವಿ? ಯಾಕೆ ಯಾವುದೊಂದನ್ನೂ ‘ಡೀಪ್’ ಆಗಿ ಯೋಚಿಸೊಲ್ಲ. ಅನುಭವಿಸಿರುವವರಿಗೆ ಸಾಂತ್ವನ ಹೇಳಬೇಕು. ನಿಜ. ಧೈರ್ಯ ನೀಡಬೇಕು. ಅಂತವರಿಗೆ ಶಿಕ್ಷೆ ಆಗಬೇಕು. ಎಲ್ಲವೂ ನಿಜ. ಸರಿ. ಆದರೆ ಹಾಗೆಯೇ ಇಂತಹದೊಂದು ಭೀಕರ ಕೃತ್ಯ ಏಕಾಯಿತು? ಎಂದು ಏಕೆ ಯೋಚಿಸುತ್ತಿಲ್ಲ. ವಿಕ್ಟಿಮ್ಸ್ ಮತ್ತು ಅವರ ಮನೆಯವರಿಗೆ ಕುಳಿತು ಯೋಚಿಸಲು ಸಾಧ್ಯವಾಗುವುದಿಲ್ಲ. ಆದರೆ ಉಳಿದವರು ಅವರಿಗೆ ಬೆಂಬಲ ನೀಡುತ್ತಲೇ, ಈ ಕೆಲಸವನ್ನು ಮಾಡಬಹುದಲ್ವಾ?

ಮೊನ್ನೆ ನಡೆದ ವಿಬ್ಗಯಾರ್ ಶಾಲೆಯ ಪ್ರಕರಣದಲ್ಲಿ ಆರೋಪಿಯಾದ ಟೀಚರ್ ಮಗಳು ಅದೇ ಶಾಲೆಯಲ್ಲಿ ಯುಕೆಜಿ ಓದುತ್ತಿದ್ದಳಂತೆ. ಅವಳನ್ನೀಗ ಶಾಲೆಯಿಂದ ಬಿಡಿಸಲಾಗಿದೆ. ಆ ಮಗುವಿನ ಭವಿಷ್ಯದ ಕಥೆಯೇನು? ಖೈದಿಗಳ ಮಕ್ಕಳು ಅನುಭವಿಸುತ್ತಿರುವ ಅತ್ಯಾಚಾರಗಳು ಕಡಿಮೆ ಇವೆಯೇ? ಇದಕ್ಕೆಲ್ಲಾ ಪರಿಹಾರ simultaneously ಹುಡುಕಬೇಕು.

ಕಠಿಣ ಶಿಕ್ಷೆ ಮತ್ತೊಂದು ಅಪರಾಧವನ್ನು ತಡೆಯಲಾರದು. ಅಪರಾಧಕ್ಕೆ ಹಲವಾರು ಕಾರಣಗಳಿರುತ್ತವೆ. ಅವುಗಳನ್ನು ತಿಳಿದುಕೊಳ್ಳಲು ಪ್ರಯತ್ನಿಸಬೇಕು. ಖಂಡಿತವಾಗಿಯೂ ವಿಕ್ಟಿಮ್ ಮತ್ತು ಅವರ ಮನೆಯವರು ಹೇಳಲಾಗದಷ್ಟು ನೊಂದಿರುತ್ತಾರೆ. ಅವರಿಗೆ ಸಾಂತ್ವನ ಹೇಳುವುದು ಮನುಷ್ಯರಾದವರೆಲ್ಲರ ಕರ್ತವ್ಯ.


Monday, August 4, 2014

ಗೆಳೆತನವೆಂದರೆ ಬರೀ ಟೈಮ್ ಪಾಸ್ ಅಲ್ಲಾ!

ಮನುಷ್ಯ ಸಂಘಜೀವಿ. ಆತ ಒಂಟಿಯಾಗಿ ಬದುಕಲೊಲ್ಲ! ಅಪ್ಪ, ಅಮ್ಮ, ಅಣ್ಣ, ತಮ್ಮ, ಅಕ್ಕ, ತಂಗಿ ಹೀಗೆ...  ಹುಟ್ಟಿನಿಂದಲೇ ಆತನ ಸುತ್ತಲೂ ತನ್ನವರ ವರ್ತುಲ ಸುತ್ತಿಕೊಂಡಿರುತ್ತದೆ. ಆದರೆ ಈ ತರಹದ ರಕ್ತಸಂಬಂಧಗಳಲ್ಲದೆ, ಕೆಲವೊಂದು ಸಂಬಂಧಗಳು ಹೀಗೆಯೇ ಹತ್ತಿರವಾಗಿಬಿಡುತ್ತವೆ.  ಅದಕ್ಕೊಂದು ನಿರ್ದಿಷ್ಟವಾದ ಕಾರಣಗಳಾಗಲೀ, ಘಟನೆಗಳಾಗಲೀ ಇರುವುದಿಲ್ಲ. ಇಂತಹ ಗೆಳೆತನವೆಂದರೆ ಬರೇಯ ಟೈಮ್ ಪಾಸ್ ಅಲ್ಲ. ಅಪ್ಪನ ರಕ್ಷಣೆ, ಅಮ್ಮನ ವಾತ್ಸಲ್ಯ, ಅಣ್ಣನ ಕೀಟಲೆ, ತಮ್ಮನ ತುಂಟತನ, ಅಕ್ಕ, ತಂಗಿಯರ ಕಾಳಜಿ, ಗಂಡನ ಪ್ರೀತಿ, ಮಕ್ಕಳ ಮುಗ್ದತೆ ಎಲ್ಲವೂ ಒಂದಿಡೀ ಗೆಳೆತನದಲ್ಲಿಯೇ ಸಿಕ್ಕಿಬಿಡುವುದು.

ಈ ಗೆಳೆತನಗಳಲ್ಲೂ ಎಷ್ಟೊಂದು ಬಗೆಗಳಿವೆ! ಸಿಕ್ಕಾಗ ಹೈ, ಹಲೋ, ಮುಗುಳ್ನಗೆಗಷ್ಟೇ ಸೀಮಿತವಾದ ಗೆಳೆತನ, ಆತ್ಮೀಯ ಗೆಳೆತನ, ಕುಡಿತ, ಸಿಗರೇಟ್ ಅಥವಾ ಸಿನೆಮಾ ಮುಂತಾದ ಮೋಜುಗಳಿಗಾಗಿ ಅವಲಂಬಿತವಾದ ಗೆಳೆತನ, ಯಾವುದಾದರೂ ಕೆಲಸಕಷ್ಟೇ ಮುಖ್ಯವಾಗಿರುವ ಗೆಳೆತನ, ಟೈಮ್ ಪಾಸ್ ಗೆಳೆತನ ಹೀಗೆ....... ಆತ್ಮೀಯ ಗೆಳೆತನ ಅಥವಾ ಬೆಸ್ಟ್ ಫ್ರೆಂಡ್ಸ್ ನಲ್ಲಿರುವಷ್ಟು ಮಾಧುರ್ಯ ಇನ್ಯಾವುದೇ ರಕ್ತ ಸಂಬಂಧಗಳಲ್ಲೂ ಕೂಡ ಸಿಗುವುದಿಲ್ಲ. ಜೀವನದಲ್ಲಿ ಇಂತಹ ಒಂದು ಸಂಬಂಧ ಸಿಕ್ಕರೂ ಸಾಕು, ಆ ಜೀವನ ಸಾರ್ಥಕ. ಹಾಗಾದರೆ ಇಂತಹ ಆತ್ಮೀಯ ಗೆಳೆಯರನ್ನು ಗುರುತಿಸುವುದು ಹೇಗೆ?

ಯಾವುದೇ ಕಪಟ, ಸುಳ್ಳು, ಮೋಸ ಅರಿಯದ ಅಥವಾ ನಮ್ಮ ಮುಂದೆ ಯಾವುದೇ ಸುಳ್ಳು ಅಂಗಿ ತೊಟ್ಟುಕೊಳ್ಳದೇ, ಯಾವುದೇ ಅಹಂಕಾರವಿಲ್ಲದೆ, ನಮ್ಮ ಆತ್ಮದಂತೆ ಇದ್ದುಬಿಡುವುದು.  ಈ ಸಂಬಂಧದಲ್ಲಿ ಕೊಡು, ಕೊಳ್ಳುವ ಹಂಬಲವಿರುವುದಿಲ್ಲ, ಜಗಳವಾಡಿದರೂ ಅದು ಆ ವಿಷಯಕಷ್ಟೇ ಆಗಿರುತ್ತದೆಯೇ ಹೊರತು, ಮರುಕ್ಷಣ ಹೆಗಲ ಮೇಲೆ ಕೈ ಹಾಕಿಕೊಂಡು, ನಗುತ್ತಾ ಹೊರಗೆ ಹೋದಾಗ, ಎಲ್ಲರಿಗೂ ಆಶ್ಚರ್ಯವಾಗಬಹುದು.  ಇವನ ಹತ್ತಿರ ನಿರ್ಭಯವಾಗಿ ಎಲ್ಲಾ ಖಾಸಗಿ ವಿಷಯಗಳನ್ನೂ ಹೇಳಬಹುದು ಅನ್ನುವ ನಂಬಿಕೆ ಇರಬೇಕು. ಅಂತಹದೊಂದು ಗೆಳೆತನ, ನಿಮ್ಮದಾಗಿದ್ದರೆ ಯಾವುದೇ ಕಾರಣಕ್ಕೂ, ಅದನ್ನು ಬಲಿ ಕೊಡಬೇಡಿ!

ಇವುಗಳನೆಲ್ಲಾ ಮುಂಚೆಯೇ ಯೋಚಿಸಿ, ಲಾಭನಷ್ಟಗಳನ್ನು ಕಾಲ್ಕುಲೇಟ್ ಮಾಡಿ, ಇಂತಹ ಗೆಳೆತನ ಪ್ರಾರಂಭಿಸಿದರೆ ಅದೊಂದು ರೀತಿಯ ವ್ಯವಹಾರ ಆಗಿಬಿಡುತ್ತದೆ.  ಅದನ್ನು ಸ್ನೇಹವೆಂದು ಕರೆಯಲಾಗುವುದಿಲ್ಲ.  ಆದರೆ ಯಾವುದೋ ಒಂದು ಘಟನೆಯಲ್ಲಿಯೋ, ಸಂದರ್ಭದಲ್ಲಿಯೋ ಆಕೆ / ಆತ ನಮಗೆ ಇಷ್ಟವಾಗಬಹುದು, ನಮಗೆ ತೀರಾ ಹತ್ತಿರದವಳಂತೆ, ಎಷ್ಟೋ ದಿವಸಗಳ ಪರಿಚಯದಂತೆ, ಕಂಡಕೂಡಲೇ ಇಷ್ಟವಾಗಿಬಿಡಬಹುದು. ಯಾವುದೇ ಹಿಡನ್ ಅಜೆಂಡಾ ಇಲ್ಲದೇ ಆಕೆ ನಮಗೆ ಹತ್ತಿರವಾಗಬಹುದು. ನಂತರ ಆ ಸಂಬಂಧ ಬೆಳೆಯುತ್ತಾ ಹೋಗುತ್ತದೆ. ವ್ಯಕ್ತಿ ಒಬ್ಬ ತನ್ನ ಅನುಭವಗಳ ಮೂಲಕ ಹೇಗೆ ಬೆಳೆಯುತ್ತ ಹೋಗುತ್ತಾನೋ ಹಾಗೆಯೇ ಈ ಸಂಬಂಧಗಳು ಕೂಡ ತಮ್ಮದೇ ಅನುಭವಗಳ ಮೂಲಕ ಬೆಳೆಯುತ್ತಾ ಹೋಗುತ್ತವೆ.

ಕಾಲಕ್ರಮೇಣ ಹುಡುಗ, ಹುಡುಗಿಯ ನಡುವೆ ಇರುವ ಇಂತಹ ಗೆಳೆತನ, ಪ್ರೀತಿ ಪ್ರೇಮಕ್ಕೆ ಬದಲಾಗಿ ಜೀವನ ಸಂಗಾತಿಗಳಾಗಬಹುದು. ಇವರು ನಮ್ಮ ಜೀವನದ ಅತಿ ಮುಖ್ಯ ಭಾಗವಾಗಿಬಿಡಬಹುದು ಅಥವಾ ಶುರುವಾದಾಗ ಇದ್ದ ಮಾಧುರ್ಯ, ಕಾಲಕಳೆದಂತೆ ಹಾಳಾಗಿಬಿಡಬಹುದು.  ನೀನು ಬೇರೆ, ನಾನು ಬೇರೆ ಅಲ್ಲಾ, ನನ್ನ ಆತ್ಮ ನೀನು ಎಂದು ಯಾರಲ್ಲೂ ಹೇಳಿಕೊಳ್ಳದ ಗುಟ್ಟುಗಳೆಲ್ಲಾ, ಈತನೊಂದಿಗೆ ಶೇರ್ ಮಾಡಿಕೊಂಡಿದ್ದೆ ಎಂಬುದು ನಮ್ಮನ್ನು ಅಣಕಿಸಲು ಶುರು ಮಾಡಬಹುದು.  ಒಟ್ಟಿನಲ್ಲಿ ಇವೆಲ್ಲವೂ ನಮ್ಮ ಜೀವನದ, ನಾವು ನಂಬಿಕೊಂಡು ಬಂದಂಥ ಮೌಲ್ಯಗಳು, ಆದ್ಯತೆಗಳು, ಜೊತೆಜೊತೆಗೆ ನಮ್ಮ ಗೆಳೆಯರ ಆದ್ಯತೆಗಳು, ನಂಬಿಕೆಗಳ ಮೇಲೆ ಅವಲಂಬಿತವಾಗಿರುತ್ತವೆ.  

ಸ್ಕೂಲಿನ ಹಂತದವರೆಗೂ ಅಪ್ಪ, ಅಮ್ಮನ ಹಾಗೂ ಶಿಕ್ಷಕರ ಅಧೀನದಲ್ಲಿರುವಾಗ ಯಾರೊಂದಿಗೂ ಅಷ್ಟೊಂದು ಬಲಿಯದ ಸ್ನೇಹ ಸಂಬಂಧ, ಇದ್ದಕಿದ್ದಂತೆ ಕಾಲೇಜಿಗೆ ಬಂದ ಮೇಲೆ ಪಂಜರದಿಂದ ಹೊರ ಬಂದ ಹಕ್ಕಿಯಂತಾಗುವ ಮನಸ್ಥಿತಿ, ಕಂಡಕಂಡವರನ್ನು ಸ್ನೇಹಿತರಂತೆ ಭಾವಿಸತೊಡಗುತ್ತದೆ. ಆದರೆ ಯಾವುದೇ ಬದ್ಧತೆ ಇಲ್ಲದೆ ಉಂಟಾಗುವ ಇಂತಹ ಸ್ನೇಹ ಸಂಬಂಧಗಳು ಹಾಗೆಯೇ, ಅಷ್ಟೇ ಬೇಗ ಮುರಿದು ಬೀಳುತ್ತವೆ. ಹಾಗಾದರೆ ಇದಕ್ಕೆ ಕಾರಣಗಳೇನು?  ಇಂತಹ ಸ್ನೇಹಗಳಿಗೆ ಬೆಲೆ ಇಲ್ಲವೇ? ಸ್ನೇಹವನ್ನು ಕಾಪಾಡಿಕೊಳ್ಳುವುದು ಹೇಗೆ?  ಅವರನ್ನು ನಮ್ಮ ಎಷ್ಟು ಹತ್ತಿರಕ್ಕೆ ಬಿಟ್ಟುಕೊಳ್ಳಬೇಕು?  ನಮ್ಮ ನಡುವೆ ಎಷ್ಟು ಅಂತರವನ್ನು ಇಟ್ಟುಕೊಳ್ಳಬೇಕು? ಇದೆಲ್ಲವನ್ನೂ ಯೋಚಿಸಬೇಕಾಗುತ್ತದೆ.

ನಮ್ಮ ಅತ್ಯುತ್ತಮ ಸ್ನೇಹವನ್ನು ಕಾಪಾಡಿಕೊಳ್ಳಲು ನಮಗೆ ಮುಖ್ಯವಾಗಿ ಬೇಕಾಗಿರುವುದು ಪರಸ್ಪರರಲ್ಲಿ ನಂಬಿಕೆ, ನಿಸ್ವಾರ್ಥತೆ ಹಾಗೂ ಆಪ್ತತೆ. ನೀವೆಷ್ಟು ಆಪ್ತತೆಯಿಂದ, ನಂಬಿಕೆಯಿಂದ, ನಿಸ್ವಾರ್ಥತೆಯಿಂದ ನಿಮ್ಮ ಗೆಳೆಯನನ್ನು ಆದರಿಸುತ್ತೀರೋ ಅಲ್ಲಿಯವರೆಗೂ ಆ ಗೆಳೆತನಕ್ಕೆ ಕುಂದಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಬದ್ಧತೆ ಬೇಕಾಗುತ್ತದೆ. ಹಾಗೆಯೇ ಒಬ್ಬರಿಗೊಬ್ಬರು ನಾವು ನೀಡುವ ಸ್ವಾತಂತ್ರ್ಯ.  ಗೆಳೆತನವೆಂದಿಗೂ ಉಸಿರುಕಟ್ಟಿಸುವ ವಾತಾವರಣವನ್ನು ನಿರ್ಮಾಣ ಮಾಡಬಾರದು.  ನಿಮ್ಮ ಗುಟ್ಟುಗಳನ್ನು, ನಿಮ್ಮ ಖಾಸಗಿ ವಿಷಯಗಳನ್ನು ಆತನ ಬಳಿ ಹಂಚಿಕೊಂಡಿದ್ದನ್ನು, ಆತ ಬೇರೆಲ್ಲೂ ಹೇಳದೇ, ನಿಮ್ಮಷ್ಟೇ ಅಂತಹ ವಿಷಯಗಳಿಗೆ ಗೌರವ ಕೊಡುವವನಾಗಿರಬೇಕು. ಆತ ಅಂಥವನಾಗಿರದಿದ್ದಲ್ಲಿ, ಒಂದು ಮಟ್ಟಿಗಿನ ಅಂತರ ಕಾಪಾಡಿಕೊಳ್ಳುವುದೇ ಒಳಿತು. 

ಇಂತಹ ಒಂದು ಸುಂದರ, ಅಪರೂಪದ ಸ್ನೇಹ, ಕೆಲವೊಮ್ಮೆ ಕೆಲವು ಸ್ವಾರ್ಥಪರ ಜನರಿಂದ ಹಾಳಾಗಿಬಿಡುತ್ತದೆ ಅಥವಾ ಸೊರಗಿಬಿಡುತ್ತದೆ. ಹಾಗಾದಾಗ ನಮ್ಮ ಆತ್ಮಗೌರವವನ್ನು ಬದಿಗಿಟ್ಟು, ಸ್ನೇಹವನ್ನು ಕಾಪಾಡಿಕೊಳ್ಳಲು ಒಂದಷ್ಟು ಹೋರಾಡಬೇಕಾಗುತ್ತದೆ, ಹೆಣಗಬೇಕಾಗುತ್ತದೆ, ಅದು ಕೂಡ ನಮಗಾಗಿಯೇ, ಅಯ್ಯೋ! ಇವನಿಗಾಗಿ ಇಷ್ಟೆಲ್ಲಾ ಮಾಡಬೇಕಲ್ಲಾ ಎಂದು ಕೊರಗದೆ, ನನಗಾಗಿ ಎಂದು ಸಂತಸದಿಂದ ಪ್ರಯತ್ನ ಪಡಬೇಕಾಗುತ್ತದೆ. ಆದರೆ ಅದನ್ನು ಕೂಡ ಒಂದು ಹಂತದವರೆಗೂ ಮಾತ್ರ ಮಾಡಲು ಸಾಧ್ಯ.  ನಮಗಿರುವಷ್ಟೇ ಆಸಕ್ತಿ, ಪ್ರೀತಿ, ಆ ಗೆಳೆಯನಲ್ಲಿಯೂ ಇರಬೇಕಾಗುತ್ತದೆ.  ಏಕೆಂದರೆ ಎರಡು ಕೈ ಸೇರಿದರೆ ಮಾತ್ರ ಚಪ್ಪಾಳೆ ಅಲ್ಲವೇ? ಆಗಲಿಲ್ಲವೇ? ನಿರಾಸೆ ಬೇಡ, ಜೀವನದುದ್ದಕ್ಕೂ, ನಮ್ಮಲ್ಲಿ ಜೀವನ ಉತ್ಸಾಹ ಇರುವ ತನಕವೂ, ನಾವು ಜೀವನವನ್ನು ಪ್ರೀತಿಸುವಷ್ಟು ದಿನವೂ, ನಮಗೆ ಸ್ನೇಹ, ಸ್ನೇಹಿತರು ದೊರಕುತ್ತಲೇ ಹೋಗುತ್ತಾರೆ.


(ವಿಜಯ ಕರ್ನಾಟಕದಲ್ಲಿ ಬಂದದ್ದು) 

Saturday, July 26, 2014

ಹೆಜ್ಜೆ, ವ್ಯಾಸರಾಯ ಬಲ್ಲಾಳರ ಕಾದಂಬರಿಯಲ್ಲಿ ಇಷ್ಟವಾದದ್ದು


ಸಾವು ಭಿನ್ನತೆಯನ್ನು ಮರೆಸುವ ಸತ್ಯವೂ ಆಗುತ್ತದೆ, ಸ್ವಾರ್ಥವನ್ನು ಅಳಿಸದೆಯೂ ಒರೆಸುವ ಮುಖವಾಡವೂ ಆಗುತ್ತದೆ.

ಕಾರ್ಯಕಾರಣ ಜಿಜ್ಞಾಸೆ ಯಾವಾಗ ಶುರುವಾಗುತ್ತದೆಯೋ ಗೊತ್ತೇ.... ಮನಸ್ಸಿಗೆ ಕಸಿವಿಸಿಯಾಗುವಂತಹ ಯಾವುದೊಂದು ವಿಚಾರ ಸಂಭವಿಸಿದಾಗ. ಈ ಜಿಜ್ಞಾಸೆಗೆ ಉತ್ತರ ದೊರಕುವುದೂ ಮನಸ್ಸು ಕಂಡುಕೊಂಡ ಹಾಗೆ.... ಮನಸ್ಸೇ ಹೇಳುತ್ತೆ ಇದೇ ಕಾರಣ ಅಂತ. ಮನಸ್ಸು ಕಾಣುವ ಸಮಸ್ಯೆಗೆ ಮನಸ್ಸೇ ಕಾರಣ ಹೀಗಿರಬಹುದು ಅಂತ ತಿಳಿದುಕೊಂಡಾಗ ಮನಸ್ಸು ತನಗೆ ಬೇಕಾದ ತೀರ್ಮಾನ ತೊಗೊಳ್ಳತ್ತೆಯೇ ಹೊರತು ಸಮಸ್ಯೆಯನ್ನು ಅರ್ಥ ಮಾಡಿಕೊಂಡ ಹಾಗಲ್ಲ.


ಹೆಜ್ಜೆ ' ಯಲ್ಲಿ ಸಂದರ್ಭವೊಂದಿದೆ. ಇಡೀ ಮನೆಯಲ್ಲಿ ಕ್ರಾಂತಿಕಾರಕ ಬದಲಾವಣೆಗಳಾಗುತ್ತಿರುತ್ತವೆ. ಸಂಪ್ರದಾಯ ಮುರಿಯದ ಬ್ರಾಹ್ಮಣನ ಮನೆಯಲ್ಲಿ, ಆತನ ಮಕ್ಕಳು ಎಲ್ಲವನ್ನೂ ಮುರಿಯುತ್ತಾರೆ. 

ಸುಮಾರು ೧೯೩೮ರ ಸಮಯದಲ್ಲಿ ನಡೆಯುವ ಘಟನೆ. ಆಗ ಕಿರಿಯ ಮಗ (ಆತ ಕಮ್ಯುನಿಸ್ಟ್) ತನ್ನ ಹೆಂಡತಿಯ ಬಳಿ (ಆಕೆ ಗಾಂಧೀ ವಾದಿ) ಹೇಳುತ್ತಾನೆ - ಹಿಟ್ಲರ್ ಯುದ್ಧ ಸಾರಿದ, ಇಂಗ್ಲೆಂಡ್ ತಾನೂ ಯುದ್ಧದ ನಿರ್ಧಾರ ತೆಕೊಂಡಿತು. ಈ ನಿರ್ಧಾರ ತನ್ನ ಸಾಮ್ರಾಜ್ಯವನ್ನೇ ಅಲುಗಾಡಿಸೀತು ಎಂದು ಯೋಚನೆ ಅದು ಮಾಡಿಲ್ಲ. ಅಣ್ಣ ಮನೆ ಬಿಟ್ಟು ಹೋದ. ಅವನ ನಿರ್ಧಾರ ಮನೆಯನ್ನು ಯಾವ ರೀತಿ ಬದಲಾಯಿಸುತ್ತೆ ಅಂತಾ ಅವನಿಗೆ ತಿಳಿದಿಲ್ಲ. ಅಕ್ಕ ತಾನು ಯಾವ ನಿರ್ಧಾರ ತೆಗೊಬೇಕು ಅಂತಾ ತಿಳೀದೇ ಒದ್ದಾಡ್ತಿದ್ದಾಳೆ. ನಮಗೆಲ್ಲಾ ಇವು ಸಾಮಾನ್ಯ ಕುಟುಂಬಗಳಿಗೆ ಸಂಬಂಧಿಸಿದ ಪ್ರಶ್ನೆಗಳೂಂತ ಕಾಣತ್ತೆ. ಒಂದಕ್ಕೊಂದು ಹೊಂದಿಕೆ ಇಲ್ಲಾಂತ ಕಾಣುತ್ತೆ. ಆದರೆ ಇದೆಲ್ಲಾ ಒಂದು ಸಾಮಾಜಿಕ ವ್ಯವಸ್ಥೆ ಬದಲಾಗ್ತಾ ಇರೋ ಲಕ್ಷಣಾಂತ ನಮಗೆ ತೋರ್ತಾ ಇಲ್ಲಾ. ನಾವೆಲ್ಲಾ, ನಾವಾಗಲೀ ನಮ್ಮ ಕುಟುಂಬದವರಾಗಲೀ ಭದ್ರವಾಗೋದು ಹೇಗೇಂತ ಯೋಚನೆ ಮಾಡ್ತಾ ಇದ್ದೇವೆ. ಆದರೆ ಇಡಿಯ ಸಮಾಜಕ್ಕೆ, ಅಂದರೆ ಎಲ್ಲರಿಗೂ ನೆಮ್ಮದಿ ತರುವ ವ್ಯವಸ್ಥೆ ಏನಾದರೂ ಸಾಧ್ಯವೇ ಅಂತಾ ಯೋಚನೇನೇ ಮಾಡೊಲ್ಲ.

ಸ್ವಾತಂತ್ರ್ಯ ಪೂರ್ವದ ಮನ, ಮನೆಗಳ ತಾಕಲಾಟಗಳನ್ನು ವ್ಯಾಸರಾಯ ಬಲ್ಲಾಳರು ೨೦೦೦ ಇಸವಿಯಲ್ಲಿ ಬರೆದ ಕಾದಂಬರಿ. 

ಈಗ ನಡೆಯುತ್ತಿರುವ ಅತ್ಯಾಚಾರಗಳು, ಅಧಿಕಾರದ ದುರುಪಯೋಗ, ಹೊಡಿ, ಬಡಿ, ಕೊಲ್ಲು, ಕೊಚ್ಚು ನೋಡಿದಾಗ ಹೀಗೆ ಅನ್ನಿಸುತ್ತಿದೆ. ನಾವೆಲ್ಲಾ ತೀರಾ ಸ್ವಾರ್ಥಿಗಳಾಗುತ್ತಿದ್ದೇವೆ.

Thursday, June 5, 2014

ಸಹನೆ - ಹೆಣ್ಣಿನ ‘ಛದ್ಮವೇಷ’!

ದ್ರೌಪದಿ - ಮಹಾಭಾರತದಲ್ಲಿ ರಚಿತವಾಗಿರುವ ಅದ್ಭುತ ಪಾತ್ರ.  ಆಕೆಯ ಬಗ್ಗೆ ಅಸಂಖ್ಯಾತ ಕಥೆಗಳಿವೆ.  ದ್ರುಪದ ಮಹಾರಾಜ, ‘ದ್ರೋಣ’ನ ಮೇಲೆ ಸೇಡು ತೀರಿಸಿಕೊಳ್ಳಲು ಮಗನಿಗಾಗಿ ಪ್ರಾರ್ಥಿಸಿ ಯಜ್ಞ ನಡೆಸುವಾಗ ದೃಷ್ಟದುಮ್ಯನೊಟ್ಟಿಗೆ ಹುಟ್ಟಿದವಳು ದ್ರೌಪದಿ, ‘ಅಗ್ನಿಯ ಮಗಳು’. ಅದೇ ‘ದ್ರೋಣ’ ನ ಶಿಷ್ಯ ‘ಅರ್ಜುನ’, ದ್ರುಪದ ಇಟ್ಟಿದ್ದ ಸ್ವಯಂವರ ಪರೀಕ್ಷೆಯಲ್ಲಿ ಗೆದ್ದು, ಇವಳನ್ನು ವರಿಸಿದ.  ಅಲ್ಲೂ ಕೂಡ ಮೊದಲಿಗೆ ಬಾಣವನ್ನು ಎದೆಗೇರಿಸಿದ್ದು ‘ಕರ್ಣ’. ಕರ್ಣ, ಈ ಸ್ವಯಂವರ ಪರೀಕ್ಷೆ ಎದುರಿಸಿದ್ದು ತನಗಾಗಿಯಲ್ಲದೆ, ದುರ್ಯೋಧನನಿಗಾಗಿ. ಇದನ್ನು ತಿಳಿದ ದ್ರೌಪದಿ, ಕರ್ಣನ ಮೇಲೆ ಮನಸ್ಸಾಗಿದ್ದರೂ, ‘ಸೂತಪುತ್ರ’ ನೆಂದು ಎಲ್ಲರ ಮುಂದೆ ಜರಿದು, ಅವನನ್ನು ಮದುವೆಯಾಗಲು ನಿರಾಕರಿಸಿದಳು. ದುರ್ಯೋಧನನಿಗೆ ಈ ಘಟನೆಯಿಂದ ಈಕೆಯ ಮೇಲೆ ದ್ವೇಷ ಶುರುವಾಯಿತು. 

ಅರ್ಜುನನ ಮಡದಿಯಾಗಿ ಮನೆ ಸೇರಿದ ಅಪ್ರತಿಮ ಸೌಂದರ್ಯವತಿ ‘ದ್ರೌಪದಿ’, ಅತ್ತೆ ‘ಕುಂತಿ’ಯ ಯೋಜನೆಯಿಂದಾಗಿ, ಪಂಚಪಾಂಡವರ ಮಡದಿಯಾಗಿ  ‘ವಸ್ತು’ವಿನಂತೆ ಹಂಚಿಹೋದಳು. ಇಲ್ಲಿಂದ ಆಕೆಯ ಮೇಲಿನ ದೌರ್ಜನ್ಯ, ಆಕೆ ಅದನ್ನು ಎದುರಿಸುವ ಬಗೆ, ಅವಳ ಕಷ್ಟ, ಹೆಂಗಸರಿಗೆ ಅರ್ಥವಾದಷ್ಟು ಇನ್ಯಾರಿಗೂ ಆಗದು.  ವರ್ಷಕೊಮ್ಮೆ ಪತಿಯರನ್ನು ಬದಲಾಯಿಸುವ ಈಕೆ ನಂಬುವುದಾದರೂ ಯಾರನ್ನು? ಪ್ರೀತಿಸುವುದಾದರೂ ಯಾರನ್ನು? ಅಥವಾ ಒಬ್ಬ ಪಾಂಡವನನ್ನೇ ಪ್ರೀತಿಸಿದರೂ ಕೂಡ, ಬಲವಂತವಾಗಿಯಾದರೂ ರೂಲ್ಸ್ ಪ್ರಕಾರ ಉಳಿದ ನಾಲ್ವರನ್ನು ಕೂಡಲೇಬೇಕಿತ್ತಲ್ಲವೇ?  ದ್ರೌಪದಿ ಪ್ರತಿ ಬಾರಿ ಪತಿಯನ್ನು ಬದಲಾಯಿಸುವಾಗ, ‘ಕನ್ಯತ್ವ’ ಮರುಕಳಿಸುವ ವರ ಪಡೆದಿದ್ದಳು ಎನ್ನುವುದನ್ನು ಕೂಡ ಒಪ್ಪದಿದ್ದರೂ ಪ್ರೀತಿ ಇಲ್ಲದ ಮೇಲೆ ಸಂಭೋಗ, ಬರೀ ಕಾಮವಷ್ಟೇ!  ಹಾಗಾಗಿ ಆಕೆ ಐವರನ್ನು ಮದುವೆಯಾಗಿದ್ದರೂ ಕೂಡ, ‘ಕನ್ಯೆ’ ಎನ್ನುವುದರಲ್ಲಿ ತಪ್ಪಿಲ್ಲ.  

ಗಂಡಿಗೆ ತನ್ನೆಲ್ಲಾ ಚಿಂತೆಯನ್ನು ಮರೆಯಲು, ಒತ್ತಡವನ್ನು ಕಳೆದುಕೊಳ್ಳಲು ಸಂಭೋಗ ಬೇಕು. ಕುಡಿತದ ಮತ್ತಿನಲ್ಲಿ ತನ್ನೆಲ್ಲಾ ಕಷ್ಟಗಳನ್ನು ಕ್ಷಣ ಕಾಲ ಮರೆಯುವ ಹಾಗೆ, ಸಂಭೋಗದ ಮೂಲಕ ಕ್ಷಣಿಕ ಸುಖ ಕಂಡುಕೊಳ್ಳುತ್ತಾನೆ. ಆದರೆ ಹೆಣ್ಣಿಗೆ ಸಂಭೋಗ ಎಂಬುದು ಧ್ಯಾನಸ್ಥ ಸ್ಥಿತಿ, ಎಲ್ಲವನ್ನೂ ಮರೆತು, ಎಲ್ಲರನ್ನೂ ಮರೆತು, ತನ್ನೊಳಗೆ ತಾನು ಲೀನಳಾಗುವ ಸ್ಥಿತಿ. ಆತಂಕವೋ, ಚಿಂತೆಯೋ, ಅಶಾಂತಿಯೋ ಇದ್ದರೆ ಆಕೆಗೆ ಸಂಭೋಗದ ಬಯಕೆಯಿರುವುದಿಲ್ಲ. ಹಿಂದೆಂದೋ ಓದಿದ ಒಂದು ಜೋಕ್ ನೆನಪಾಗುತ್ತಿದೆ.  ಗಂಡ, ಹೆಂಡತಿ ಸಂಭೋಗಿಸುತ್ತಿರುವಾಗ, ಆಕೆ ತನ್ನ ಮನೆಯ ಮೇಲ್ಚಾವಣಿಗೆ ಯಾವ ಬಣ್ಣ ಹಾಕಿಸಬೇಕೆಂದು ಯೋಚಿಸುತ್ತಿದ್ದಳಂತೆ! ಆಗೆಲ್ಲಾ ಇಂತಹ ಜೋಕ್ಸ್ ಗೆ ನಕ್ಕರೂ, ಈಗ ಅದನ್ನೇ ಮರು ಯೋಚಿಸುವಾಗ ಅನಿಸುತ್ತದೆ - ಹೌದು, ಹೆಣ್ಣು ತನ್ನ ಅಸ್ತಿತ್ವವನ್ನು ಮರೆತು, ಅಲೌಕಿಕವಾಗಿ, ನಿಶ್ಚಿಂತೆಯಿಂದ, ಸಂಭೋಗದಲ್ಲಿ ಕೂಡಿಕೊಂಡರೆ ಮಾತ್ರ ಆಕೆಗೆ ಸಂತೃಪ್ತಿ ಸಿಗುತ್ತದೆ. 

ಪರ್ವದಲ್ಲಿ ದ್ರೌಪದಿಯ ಮನದ ಈ ತೊಳಲಾಟಗಳನ್ನು ಕೆಲವು ಕಡೆ ಚೆಂದವಾಗಿ ಚಿತ್ರಿಸಿದ್ದಾರೆ. ಯುದ್ಧದಲ್ಲಿ ಅವಳ ಮಕ್ಕಳು ಸತ್ತಾಗ, ಈ ಪಂಚಪಾಂಡವರು ಅಷ್ಟಾಗಿ ಗಮನಿಸುವುದಿಲ್ಲ, ಜೊತೆಗೆ ಆಕೆಯನ್ನು ಸಂತೈಸಲು ಬರುವುದಿಲ್ಲ, ನಮೈವರಲ್ಲಿ ಯಾರಿಗೆ ಹುಟ್ಟಿದವರೋ? ಏನೋ? ಎಂಬಂತಹ ಅವರ ಮನಸ್ಥಿತಿ, ಆ ಮಕ್ಕಳೊಡನೆ ಅವರಿಗೆ ಭಾವನಾತ್ಮಕ ಸಂಬಂಧವೇ ಇರುವುದಿಲ್ಲ. ಆದರೆ ಅದೇ ಭೀಮ ತನ್ನ ಮಗ ಘಟೋದ್ಗಜನನ್ನು ಹೊತ್ತೊಯ್ಯುವ ದೃಶ್ಯ, ಅಭಿಮನ್ಯು ಸತ್ತಾಗ ಅರ್ಜುನ ರೋದಿಸುವ ದೃಶ್ಯಗಳು, ದ್ರೌಪದಿಯ ಮನಸ್ಥಿತಿಯನ್ನು ಊಹಿಸಿಕೊಂಡರೆ ನಮ್ಮ ಮನವನ್ನು ಕಲಕಿಬಿಡುತ್ತದೆ. 

ಈಗ ‘ದ್ರೌಪದಿ’ ಯ ಬಗ್ಗೆ ಮಾತನಾಡುವಾಗ ಎಷ್ಟೇ ಆಕೆ ದಿಟ್ಟೆ, ವೀರವನಿತೆ, ಲೋಕವನ್ನು ಎದುರಿಸಿದವಳು ಎಂದು ಹೇಳಿದರೂ, ಆಗಿನ ಪರಿಸ್ಥಿತಿಯಲ್ಲಿ ಅವಳ ಬಗ್ಗೆ ಎಂತಹ ಕೀಳು ಅಭಿಪ್ರಾಯ ಇತ್ತು ಎಂಬುದಕ್ಕೆ ಅವಳ ವಸ್ತ್ರಾಪರಣದ ಘಟನೆಯೇ ಸಾಕ್ಷಿ.  ಐವರಿಗೆ ಹೆಂಡತಿಯಾದವಳು, ಆರನೆಯವರಿಗೋ ಅಥವಾ ಬೇರಾರಿಗೋ ಹೆಂಡತಿಯಾದರೆ ತಪ್ಪೇನು? ಎಂಬಂಥ ಅಸಹ್ಯ ಮನಸ್ಥಿತಿ ಉಳಿದ ಗಂಡಸರಿಗೆ ಇತ್ತು. ಆಕೆಯ ಮಾನವನ್ನು ಕಾಪಾಡಲು ಆಕೆಯ ಪಂಚಪಾಂಡವರು, ಮಹಾ ಶೂರರು ಅಸಹಾಯಕರಾಗಿದ್ದು ವಿಪರ್ಯಾಸ. ಇಂತಹ ಸಮಯದಲ್ಲಿ ಆಕೆಯನ್ನು ಕಾಪಾಡಲು ಬಂದವನು ‘ಕೃಷ್ಣ’ ಮಾತ್ರ.  ಹಾಗಾಗಿ ಎಲ್ಲಾ ಹೆಂಗಳೆಯರಿಗೂ ‘ಕೃಷ್ಣ’ನೆಂದರೆ ಪ್ರೀತಿ.  ಕೃಷ್ಣ ಹೆಂಗಳೆಯರ ಮನ ಅರಿತದ್ದರಿಂದಲೇ, ಆತ ಸಹಸ್ರಾರು ಮಹಿಳೆಯರಿಗೆ ಗಂಡನಾದರೂ ಕೂಡ, ಪ್ರತಿ ಹೆಣ್ಣು ಕೂಡ ‘ಕೃಷ್ಣ’ ನಂತಹ ಗಂಡ ಬೇಕೆಂದು ಹಪಹಪಿಸುತ್ತಿದ್ದದ್ದು, ರಾಮ ‘ಏಕ’ ಪತ್ನಿವ್ರತಸ್ಥ ನಾದದ್ದರಿಂದಲೇ ಗೌರವ ಪಡೆದದ್ದು.   

ಬಹಳ ದಿವಸಗಳ ಹಿಂದೆ ಪಂಚಕನ್ಯೆಯರ ಬಗ್ಗೆ ಬರೆಯಬೇಕೆಂದುಕೊಂಡಿದ್ದೆ.  ಒಂದಿಬ್ಬರ ಬಗ್ಗೆ ಬರೆದು ಬ್ಲಾಗ್ ನಲ್ಲಿ ಪ್ರಕಟಿಸಿಯೂ ಇದ್ದೆ. ‘ದ್ರೌಪದಿ’ ಯ ಬಗ್ಗೆ ಬರೆಯಲಾಗಿರಲಿಲ್ಲ.  ಅದಕ್ಕೆ ಅವಕಾಶ ದೊರೆತದ್ದು ಕಿರುಚಿತ್ರ ‘ಛದ್ಮವೇಷ’ ನೋಡಿದ ನಂತರ.  ಹೆಚ್ ಎಸ್ ವಿ ಯವರ ನಾಟಕದ ‘ಮೊನೋಲಾಗ್’ ಜೊತೆಜೊತೆಗೆ ಪ್ರಸ್ತುತ ಹೆಣ್ಣಿನ ಕಥೆಯೊಂದನ್ನು ಹೆಣೆದು, ಅದನ್ನು ನಿರೂಪಿಸಿರುವ ರೀತಿ ಚಂದ.  
ನಾಟಕದಲ್ಲಿ ದ್ರೌಪದಿಯ ಪಾತ್ರಧಾರಿ, ನಿಜಜೀವನದಲ್ಲಿ ಕುಡುಕ ಗಂಡ, ಇಬ್ಬರು ಮಕ್ಕಳೊಡನೆ ಬದುಕುವ ಹೆಣ್ಣುಮಗಳೊಬ್ಬಳು,  ಗಂಡನನ್ನು ಹೆಂಡತಿಗಿಂತ ಹೆಚ್ಚಾಗಿ ತಾಯಿಯಂತೆಯೇ ಸಲಹುವ ಇವಳಿಗೊಬ್ಬ ಆಟೋ ಡ್ರೈವರ್ ‘ತಮ್ಮ’.  ತನಗಿರುವಂತೆಯೇ ಈಕೆಗೂ ಕೂಡ  ಅನೈತಿಕ ಸಂಬಂಧ ಆ ಆಟೋಡ್ರೈವರ್ ನೊಟ್ಟಿಗಿರಬಹುದೆಂದು ಸಂಶಯಿಸುವ ಗಂಡ, ಮಕ್ಕಳಿಗೆ ಸುಭದ್ರ ಭವಿಷ್ಯ ಕಲ್ಪಿಸುವಲ್ಲಿ ನಿರತಳಾಗಿರುವ ಹೆಣ್ಣು ಮಗಳು ಈಕೆ, ಇವೆಲ್ಲದರ ನಡುವೆ ಬರುವಂತಹ ಮಕ್ಕಳ ಶಾಲೆಯಲ್ಲಿ ನಡೆಯುವ ‘ಛದ್ಮವೇಷ’ ಸ್ಪರ್ಧೆ, ಒಬ್ಬ ಮಗನನ್ನು ‘ರಾಮ’ನನ್ನಾಗಿಯೂ, ಮತ್ತೊಬ್ಬನನ್ನು ‘ಗಾಂಧಿ’ಯನ್ನಾಗಿಯೂ ರೆಡಿ ಮಾಡುವ ಅಮ್ಮ, ಅಲ್ಲಿ ಶಾಲೆಯಲ್ಲಿ ‘ಭಾರತಮಾತೆ’ ಯ ವೇಷ ಧರಿಸಿದ್ದ ಮಗುವನ್ನು ಕರೆದೊಯ್ಯಲು ಬರದ ಅವಳ ಬೇಜವಾಬ್ದಾರಿ ಪೋಷಕರು, ‘ಕೃಷ್ಣ’ನಂತೆ ತನಗೆ ಸಹಾಯ ಮಾಡುವವ ಎಂದೇ ನಂಬಿಕೊಂಡಿದ್ದ ಇವಳ ನಂಬಿಕೆಯನ್ನು ಹುಸಿ ಮಾಡುವ ಆಟೋ ಡ್ರೈವರ್,  ದ್ರೌಪದಿಯ ಕಾಲದಿಂದಲೂ ಹೆಣ್ಣು ಮಕ್ಕಳ ಶೋಷಣೆ ತಪ್ಪಿಲ್ಲ ಎನ್ನುವುದನ್ನು ನಿರೂಪಿಸುವ ಇವಳ ಮೇಲಿನ ಅತ್ಯಾಚಾರದ ಪ್ರಯತ್ನ, ಅದನ್ನು ಆಕೆ ಒಬ್ಬಂಟಿಯಾಗಿ ಎದುರಿಸುವ ಧೈರ್ಯ, ‘ಸಹನೆ - ಹೆಣ್ಣಿನ ಛದ್ಮವೇಷ’ ಎಂಬುವಲ್ಲಿಗೆ ಕಿರುಚಿತ್ರ ಮುಗಿಯುತ್ತದೆ.

ಚಿತ್ರದ ಟೆಕ್ನಿಕಲ್ ವಿಷಯಗಳ ಬಗ್ಗೆ ಮಾತಾಡುವುದು ಅನಗತ್ಯ.  ಅಲ್ಲಲ್ಲಿ ತುಂಡು, ತುಂಡಾದಂತೆ ಅನಿಸಿದರೂ, ಕೆಲವೊಂದು ಕಡೆ ನಾಟಕೀಯವೆನಿಸಿದರೂ ಕೂಡ ಚಿತ್ರವು ಏನನ್ನು ಹೇಳಬಯಸಿದೆ? ಅದನ್ನು ಚಂದವಾಗಿ ಹೇಳಿದೆ, ಮನಮುಟ್ಟುವಂತೆ ಹೇಳಿದೆ.  ಆದರೆ ಒಂದಷ್ಟು ಹಿರಿಯರು ಹೇಳಿದಂತೆ ‘ದೊಡ್ಡ’ ಚಿತ್ರವಾಗಿ, ತೆರೆಗೆ ಬಂದರೆ ಯಶಸ್ವಿಯಾಗುತ್ತದೆಯೇ? ಕಮರ್ಷಿಯಲೀ ಓಡುವುದೇ?  ಗೊತ್ತಿಲ್ಲ. ಛದ್ಮವೇಷದಲ್ಲಿ ಗಮನ ಸೆಳೆದದ್ದು ನಾಯಕಿ ಪಾತ್ರಧಾರಿಯ ಅಭಿನಯ, ಆಕೆ  ಸಂಭಾಷಿಸುವ ಶೈಲಿ, ಆ ಘಳಿಗೆಯಲ್ಲಿ ನಾವೇ ದ್ರೌಪದಿಯಾಗುತ್ತೇವೆ ಎಂಬುದರಲ್ಲಿ ಸಂಶಯವಿಲ್ಲ.  ವಸ್ತ್ರಾಪರಣದ ಸಂದರ್ಭದಲ್ಲಿ ಆಕೆ ಹೇಳುವ ಮಾತುಗಳು ‘ಕೃಷ್ಣ, ಅಂದು ನೀ ಬರಬಾರದಿತ್ತು, ಈ ದ್ರೌಪದಿ ಬೆತ್ತಲಾಗಬೇಕಿತ್ತು,  ಆ ಮೂಲಕ ಅಲ್ಲಿ ನೆರೆದಿದ್ದ ಸಮಸ್ತ ಗಂಡಸರು ಬೆತ್ತಲಾಗಬೇಕಿತ್ತು, ಇಡೀ ಸಮಾಜ ಅವರನ್ನು ಗೇಲಿ ಮಾಡುತ್ತಿತ್ತು.  ನೀ ಬಂದು ಕಾಪಾಡಿದ್ದು ನನ್ನನ್ನಲ್ಲ, ಅವರನ್ನು’ ಎಂಬಂತಹ ಮಾತುಗಳು, ಮನಸ್ಸನ್ನು ಚುಚ್ಚಿಬಿಡುತ್ತವೆ.  ಮರುಕ್ಷಣವೇ ಆಕೆಯ ಒಳಧ್ವನಿ ಆಕೆಯನ್ನು ಎಚ್ಚರಿಸುತ್ತದೆ ‘ಅವರನೆಲ್ಲಾ ತೆಗಳುತ್ತಿರುವೆಯಲ್ಲಾ? ನೀನೇಕೆ ಅಸಹಾಯಕಳಾಗಿ ಎರಡು ಕೈಮೇಲೆತ್ತಿ, ಕೃಷ್ಣನ ಮೊರೆಹೋದೆ, ಅಗ್ನಿಯ ಮಗಳು ನೀನೆಂಬುದನ್ನು ಮರೆತದ್ದು ಏಕೆ? ಎನ್ನುತ್ತದೆ. ಆ ಕ್ಷಣದಲ್ಲಿ ನಮಗೂ ಕೂಡ ‘ಹೌದಲ್ಲಾ? ಇದುವರೆವಿಗೂ ನಾವು ನಮ್ಮನ್ನು ರಕ್ಷಿಸಿ, ಎಂದೇ ಮೊರೆಹೋಗುತ್ತಿದ್ದೇವೆ ಹೊರತು ಬೇರೆಯವರು ನಮ್ಮನ್ನೇಕೆ ರಕ್ಷಿಸಬೇಕು? ನಮ್ಮನ್ನು ನಾವೇ ರಕ್ಷಿಸಿಕೊಳ್ಳಬೇಕಲ್ಲವೇ? ಎಂದೆನಿಸಿಬಿಡುತ್ತದೆ.

ಮಹಿಳೆಯರನ್ನು ದುರ್ಬಲರು ಎಂದು ಚಿತ್ರಿಸಿ, ಚಿತ್ರಿಸಿ, ನಿಜವಾಗಿಯೂ ನಾವೆಲ್ಲರೂ ದುರ್ಬಲರಾಗಿಬಿಟ್ಟಿದ್ದೇವೆ, ಈ ಹೊತ್ತಿನಲ್ಲಿ ಅತ್ಯಾಚಾರ ಅಥವಾ ಇನ್ಯಾವುದೇ ಶೋಷಣೆಗಳನ್ನು ತಪ್ಪಿಸಿಕೊಳ್ಳಲು ಅವಶ್ಯವಾಗಿಯೂ ಹೆಣ್ಣು ಸಮರ್ಥಳು, ಯಾರ ಮೇಲೂ ಡಿಪೆಂಡ್ ಆಗಬೇಕಂತಿಲ್ಲ, ಯಾಕೆ ಆಗಬೇಕು? ಎನ್ನುವ ಸತ್ಯ ಮುಖಕ್ಕೆ ಹೊಡೆದು ಎಬ್ಬಿಸುತ್ತದೆ. ಹೆಣ್ಣು ತಾಯಿಯಾಗಿ ಎಲ್ಲರನ್ನು ಸಲಹುತ್ತಾಳೆ ಎಂಬುದಾದರೆ ಅವಳನ್ನು ಕೂಡ ಅವಳೇ ಸಲುಹಬಲ್ಲಳು ಎಂದನ್ನಿಸಿ, ಮೈ ಹಗುರಾಗಿಬಿಡುತ್ತದೆ.  ಈ ತರಹದ ಒಂದು ಆಲೋಚನೆ, ಶಕ್ತಿ ಆ ಚಿತ್ರ ನೀಡಿತು ಎಂಬುದಂತೂ ಸುಳ್ಳಲ್ಲ.  ಪ್ರಸ್ತುತ ಸಮಾಜದಲ್ಲಿ ಹೆಣ್ಣಿನ ಶೋಷಣೆಗಳಿಗೆ, ಹೆಣ್ಣು ತನ್ನನ್ನು ತಾನು ದುರ್ಬಲಳು ಅಂದುಕೊಳ್ಳುವುದು ಕೂಡ ಕಾರಣ ಎಂದೆನಿಸಿಬಿಡುತ್ತದೆ. ಚಿತ್ರದ ಕೊನೆಯಲ್ಲಿ ಅತ್ಯಾಚಾರಿಗಳನ್ನು ಎದುರಿಸಿ ಗೆದ್ದು ಬಂದ ಇವಳನ್ನು ಸಂದರ್ಶಿಸುವವರಿಗೆ ಆಕೆ ನೀಡುವ ಹೇಳಿಕೆ, ಇಡೀ ಚಿತ್ರದ ಪ್ಲಸ್ ಪಾಯಿಂಟ್ ಆಗಿಬಿಡುತ್ತದೆ. ‘ನನಗಿಬ್ಬರು ಗಂಡು ಮಕ್ಕಳು, ಅವರು ಹೆಣ್ಣುಮಕ್ಕಳನ್ನು ಗೌರವಿಸುವಂತೆ ಬೆಳೆಸುತ್ತೇನೆ’ ಎಂಬುದು ಅಲ್ಲೂ ಕೂಡ ಹೆಣ್ಣಿನ ಜವಾಬ್ದಾರಿಯನ್ನು ಅರ್ಥ ಮಾಡಿಸುತ್ತದೆ.