Friday, May 24, 2013

ಬೆಂಗಳೂರಿನ ಮಲೆಗಳಲ್ಲಿ ಮದುಮಗಳು


ಯಾವುದೇ ಕಥೆ, ಕಾದಂಬರಿ, ನಾಟಕ, ಸಿನೆಮಾಗಳಲ್ಲಿ ಮುಖ್ಯವಾಗುವುದು ಪಾತ್ರ ರಚನೆ. ಒಳ್ಳೆಯ ಪಾತ್ರ ಸೃಷ್ಠಿಯಾದರೆ, ನಂತರ ಪಾತ್ರಗಳೇ ಕಥೆಯನ್ನು ನಡೆಸಿಕೊಂಡು ಹೋಗುತ್ತವೆ.  ವೈದೇಹಿಯವರು ತಮ್ಮ ಕಥೆಗಳ ಬಗ್ಗೆ ಹೇಳುತ್ತಾ, ಒಮ್ಮೆ, ನಾನು ಕಥೆಗಾರ್ತಿಯಲ್ಲಾ, ಬರಹಗಾರ್ತಿ. ನಾನು ಬರೀತಾ ಹೋಗುತ್ತೇನೆ. ನಂತರ ಅದು ಕಥೆಯಾಗುತ್ತದೆ ಎಂದು ಹೇಳಿದ್ದರು.  ಅಕ್ಷರಶಃ ಅವರ ಮಾತು ನಿಜ ಎಂದೆನಿಸುತ್ತದೆ.  ಅವರ ಕಥೆಯ ಪಾತ್ರವಾದ ‘ಅಕ್ಕು’,  ಕಾರಂತರ ‘ಮೂಕಜ್ಜಿ’, ತೇಜಸ್ವಿಯವರ ‘ಕರ್ವಾಲೋ’, ‘ಮಂದಣ್ಣ’, ‘ಕಿವಿ’, ಕಂಬಾರರ ‘ಶಿಖರ ಸೂರ್ಯ’, ಹೀಗೆ....... ಯಾವುದೇ ಕಾದಂಬರಿಯ ಯಶಸ್ವಿ, ಅವುಗಳಲ್ಲಿನ ಪಾತ್ರ ರಚನೆಯಲ್ಲಿ ಹಾಗೂ ಪಾತ್ರ ಪೋಷಣೆಯಲ್ಲಿರುತ್ತದೆ. ಒಮ್ಮೆ ಆ ಪಾತ್ರಗಳು ಓದುಗರ, ವೀಕ್ಷಕರ ಮನಸ್ಸಿನಲ್ಲಿ ನಾಟಿಬಿಟ್ಟರೆ, ಆಮೇಲೆ ತಾನಾಗಿಯೇ ಅವು ಓದಿಸಿಕೊಂಡು ಹೋಗುತ್ತವೆ. ಪಾತ್ರಗಳು ನಮ್ಮೊಡನೆ ಮಾತಾಡತೊಡಗುತ್ತವೆ.  ನಾವು ಕೂಡ ಅವುಗಳೊಂದಿಗೆ ಪಾತ್ರವಾಗಿ ಸಂಭಾಷಿಸಲು ಶುರು ಮಾಡುತ್ತೇವೆ. ಅವುಗಳೊಂದಿಗೆ ಒಬ್ಬರಾಗಿಬಿಡುತ್ತೇವೆ.  

ಇತ್ತೀಚೆಗೆ ನನಗೆ ಕಥೆಗಳು ಚಿತ್ರಕಥೆಗಳಾಗಿ ಬದಲಾಗುವ ಪ್ರಕ್ರಿಯೆಯ ಬಗ್ಗೆ ತೀವ್ರ ಕುತೂಹಲ. ಕಥೆಗಳಲ್ಲಿ ನಮ್ಮ ಕಲ್ಪನೆಯಲ್ಲಿ ಮೂಡುವ ಪಾತ್ರಗಳು, ವ್ಯಕ್ತಿ ಚಿತ್ರಣಗಳು ದೃಶ್ಯ ಮಾಧ್ಯಮದಲ್ಲಿ ಬೇರೆಯದೇ (ತನ್ನ ಮಿತಿಗಳಿಂದಾಗಿಯೋ ಅಥವಾ ನಿರ್ದೇಶಕನ ಕಲ್ಪನೆಯ ಮಿತಿಯಿಂದಾಗಿಯೋ?!) ಆಗಿ ಮೂಡುವಾಗ ಆಗುವ ಬದಲಾವಣೆಗಳು ಇತ್ಯಾದಿ ನನ್ನನ್ನು ಹೆಚ್ಚು ಆಕರ್ಷಿಸುತ್ತಿದೆ.  ಹೀಗಾಗಿ ಸಾಹಿತ್ಯವೊಂದು ಅದರಲ್ಲೂ ಕುವೆಂಪುರವರ ೭೫೦ ಪುಟಗಳ ಬೃಹತ್ ಕಾದಂಬರಿ ‘ಮಲೆಗಳಲ್ಲಿ ಮದುಮಗಳು’ ರಂಗರೂಪಾಂತರವಾಗಿ ಬೆಂಗಳೂರಿನಲ್ಲಿ ಪ್ರದರ್ಶಿತವಾಗುತ್ತಿದೆಯೆಂದು ತಿಳಿದಾಗ ನಾನು ಮಾಡಿದ ಮೊಟ್ಟಮೊದಲ ಕೆಲಸ, ಪುಸ್ತಕವನ್ನು ಓದಲು ಶುರು ಮಾಡಿದ್ದು. (ಇದುವರೆವಿಗೂ ಕುವೆಂಪುರವರ ಪುಸ್ತಕಗಳನ್ನು ನಾನು ಏಕೆ ಓದಿರಲಿಲ್ಲವೆಂಬುದನ್ನೂ ಈ ಹಿಂದೆ ಬರೆದಿದ್ದೇನೆ). 

ಮಲೆನಾಡಿನ ೧೫೦ ವರ್ಷಗಳ ಹಿಂದಿನ ಪರಿಸರ, ಕಾಡು, ಮಳೆ, ಜನಜೀವನ, ಎಲ್ಲಕ್ಕಿಂತ ಮುಖ್ಯವಾಗಿ ಅಲ್ಲಿಯ ಭಾಷೆ, ಒಕ್ಕಲಿಗರ ದರ್ಬಾರು, ಬ್ರಾಹ್ಮಣಿಕೆಯ ಆಡಂಬರ, ಕ್ರೈಸ್ತರ ಮತಾಂತರದ ಹುನ್ನಾರ, ಸಾಬರ ದೌರ್ಜನ್ಯ ಇವುಗಳ ಮಧ್ಯೆ ನಲುಗುವ ದಲಿತರ / ಹೊಲೆಯರ ‘ನಾಯಿ’ ಪಾಡು, ಶ್ರೀಮಂತರ ದಬ್ಬಾಳಿಕೆ, ಬಡವರ ನೋವು, ಗಂಡಸರ ಕಾಮುಕತನ, ಹೆಂಗಸರ ಮೇಲಿನ ಅತ್ಯಾಚಾರ....  ಇವೆಲ್ಲದರ ನಡುವೆ ಎಲ್ಲೋ ಒಂದು ಕಡೆ ಕುವೆಂಪುರವರ ಎಂದಿನ ‘ವಿಶ್ವ ಮಾನವ ತತ್ವ’ ಚಿಗುರುವ ಕನಸು, ಆಶಾವಾದ, ಪ್ರೀತಿ, ಪ್ರೇಮ, ಇವೆಲ್ಲವುಗಳೂ ನಾಜೂಕಾಗಿ ಪಾತ್ರಗಳ ಮೂಲಕ ಜೀವಂತಿಕೆಯಲ್ಲಿ ಮೆರೆಯುವುದು ‘ಮಲೆಗಳಲ್ಲಿ ಮದುಮಗಳು’ ಕಾದಂಬರಿಯ ವೈಶಿಷ್ಟ್ಯ! ವಿವೇಕಾನಂದರ ಬಗೆಗಿನ ಅಥವಾ ರಾಮಕೃಷ್ಣ ಆಶ್ರಮದ ಕಡೆಗಿನ ಕುವೆಂಪುರವರ ಆಕರ್ಷಣೆ ಎಲ್ಲೋ ಒಂದಷ್ಟು ಪುಟಗಳಲ್ಲಿ ಮೂಡಿ ಬಂದಿರುವುದನ್ನು (ಬಲವಂತವಾಗಿಯೇ ತುರುಕಿದಂತೆ ನನಗೆ ತೋರಿತು!) ಹೊರತು ಪಡಿಸಿದರೆ, ಮಿಕ್ಕಂತೆ ಎಲ್ಲಾ ಪಾತ್ರಗಳೂ, ತಮ್ಮಷ್ಟಕ್ಕೆ ತಾವೇ  ಕಥೆಯನ್ನು ಮುಂದುವರಿಸಿಕೊಂಡು ಹೋಗುತ್ತವೆ. ಪಾತ್ರಗಳೇ ತಮ್ಮ ಕಥೆಯ ಅಂತ್ಯವನ್ನು ಕಂಡುಕೊಳ್ಳುತ್ತವೆ. ಈ ಕಾದಂಬರಿಯಲ್ಲಿ ಎರಡು ಎಳೆಗಳಲ್ಲಿ ಕಥೆಯು ಶುರುವಾಗುತ್ತದೆ, ಮಧ್ಯೆ ಮಧ್ಯೆ ಸಣ್ಣ, ಪುಟ್ಟ ಉಪಕಥೆಗಳು, ಪಾತ್ರಗಳು ಮುಖ್ಯ ಕಥೆಗೆ ತಿರುವನ್ನು ಕೊಡುತ್ತವೆ.

ಕಥೆಯ ಮುಖ್ಯಪಾತ್ರಗಳಾದ ಗುತ್ತಿ, ಆತನ ನಾಯಿ ‘ಹುಲಿಯಾ’, ಆತನ ಪ್ರೇಮಿ ತಿಮ್ಮಿ, ಆಕೆಗೆ ನಿಶ್ಚಯವಾಗಿರುವ (ಆಳು ಬೇರೆ ಕಡೆ ಹೋಗಬಾರದೆಂಬ ತಮ್ಮ ಗೌಡರ ಆದೇಶದಿಂದಾಗಿ!) ಬಚ್ಚಾ, ಆತನ ಮಾಲೀಕನ ಕ್ರೈಸ್ತ ಮತದೆಡೆಗಿನ ಆಕರ್ಷಣೆ, ಆಧುನಿಕನಾಗಬೇಕೆಂಬ ಹಂಬಲ, ತಿಮ್ಮಿಗೆ ಯಾವ ಗಂಡಾದರೂ ಪರವಾಗಿಲ್ಲ, ಆದರೆ ತಮ್ಮ ಜಾತಿಯವನೇ ಆಗಿರಬೇಕೆಂಬ ಬಯಕೆ, ತಿಮ್ಮಿಯ ತಾಯಿಗೆ ತನ್ನ ತವರುಮನೆಯವನಾದ ಗುತ್ತಿಗೆ ಮದುವೆ ಮಾಡಿಸಬೇಕೆಂಬ ಆಸೆ, ಬಚ್ಚಾನಿಗೆ ಕೊಡಲು ವಿರೋಧವೇನಿಲ್ಲದಿದ್ದರೂ, ಆತ ಕ್ರೈಸ್ತನಾಗುವ ಭಯದಿಂದ ಇಷ್ಟವಿಲ್ಲದಿದ್ದರೂ, ಆ ಊರ ಗೌಡನ ಒಕ್ಕಲಾದದಕ್ಕಾಗಿ ಒಪ್ಪಿಗೆ ನೀಡುವ ತಿಮ್ಮಿಯ ತಂದೆ, ಪರೋಕ್ಷವಾಗಿ ‘ತಿಮ್ಮಿ’ ತಪ್ಪಿಸಿಕೊಳ್ಳಲು ಸಹಾಯ ಮಾಡುವ ತಾಯಿ, ಇವೆಲ್ಲದರ ನಡುವೆ ಓಡಿಹೋಗಿಯಾದರೂ ತಿಮ್ಮಿಯನ್ನು ಪಡೆಯಲೇಬೇಕೆಂಬ ಗುತ್ತಿಯ ಪ್ರಬಲ ಉತ್ಸಾಹ, ಅವಳನ್ನು ತನ್ನವಳನ್ನಾಗಿಸಿಕೊಳ್ಳಲು ಆತ ಪಡುವ ಕಷ್ಟ, ತಿಮ್ಮಿಯ ಸಹಕಾರ, ಈ ಮಧ್ಯೆ ತಮ್ಮ ತಮ್ಮ ಆಳುಗಳಿಗಾಗಿ ಊರ ಗೌಡರ ಮಧ್ಯೆ ನಡೆಯುವ ಅನೇಕ ರಾಜಕೀಯ ಚದುರಂಗದಾಟಗಳು, ಇಲ್ಲಿ ಬೇರೊಬ್ಬರ ತಪ್ಪಿಗೆ ಬಲಿಯಾಗುವ ಗುತ್ತಿ, ಪೋಲೀಸರ ಭಯದಿಂದ ಆತನ ಓಡಿಹೋಗುವ ಹವಣಿಕೆ, ಜೊತೆಯಲ್ಲಿ ಪ್ರೀತಿಸಿ ಮದುವೆಯಾದವಳನ್ನು ಕೂಡ ತನ್ನೊಟ್ಟಿಗೆ ಎಷ್ಟೇ ಕಷ್ಟವಾದರೂ ಕರೆದೊಯ್ಯುವ ಹಂಬಲ, ಈ ಎಲ್ಲಾ ಗೋಜಲುಗಳಿಂದ ಊರು ಬಿಟ್ಟು ಹೋಗುವ ಗುತ್ತಿ, ಇವೆಲ್ಲದರ ನಡುವೆ ಬೇಡ, ಬೇಡವೆಂದರೂ ತನ್ನ ಮಾಲೀಕ ಗುತ್ತಿಯನ್ನು ನಿಷ್ಠೆಯಿಂದ ಹಿಂಬಾಲಿಸುವ ಹುಲಿಯಾ.....  ಕೊನೆಗೂ ಆಕೆಯನ್ನು ಪಡೆದರೂ ತನ್ನ ಜೀವದಂತಿದ್ದ ‘ಹುಲಿಯಾ’ ನನ್ನು ಕರೆದೊಯ್ಯಲಾಗದೇ ಅನುಭವಿಸುವ ಅಸಹಾಯಕತೆ, ಹುಲಿಯಾ ನದಿಯಲ್ಲಿ ಈಜಲಾಗದೇ ಬಲಿಯಾಗುವುದು, ಗುತ್ತಿಗೆ ಹುಲಿಯಾನನ್ನು ಕಳೆದುಕೊಂಡ ನೋವು, ಇವೆಲ್ಲದರ ನಡುವೆ ನಮಗೆ ಮರುಕ ಹುಟ್ಟಿಸುವುದು ಹುಲಿಯಾ ನ ಸಾವೇ ಹೊರತು, ತನ್ನೂರನ್ನು ಬಿಟ್ಟು ಬಂದ ಗುತ್ತಿ, ತಿಮ್ಮಿ ಪರದೇಶಿಯಾಗುವುದಲ್ಲ!  ಮತ್ತೊಂದೆಡೆ ಮಾಲೀಕನಿಗಾಗಿಯೇ ಕ್ರೈಸ್ತನಾಗುವ  ಹೊಲೆಯ ‘ಬಚ್ಚಾ’!, ಕ್ರೈಸ್ತ ಮತದವರ ರೀತಿ ರಿವಾಜನ್ನು ಬಹಳವಾಗಿ ಇಷ್ಟ ಪಟ್ಟರೂ, ತನ್ನ ಜೀವನ ಶೈಲಿಯಲ್ಲಿ ಅವೆಲ್ಲವನ್ನೂ ಅಳವಡಿಸಿಕೊಂಡರೂ, ಜೊತೆಗೆ ಕ್ರೈಸ್ತ ಹುಡುಗಿಯೊಟ್ಟಿಗೆ ಸಂಬಂಧ ಬೆಳೆಸಿದರೂ ಕೂಡ ಜಾತಿ ಬಿಡಲೊಲ್ಲದ ‘ಬಚ್ಚಾ’ನ ಮಾಲೀಕ! ತನ್ನ ಹೆಂಡತಿಯ ತಮ್ಮ ಮುಕುಂದಯ್ಯನ ಸಹಾಯದಿಂದ ಕ್ರೈಸ್ತನಾಗದೇ ತಪ್ಪಿಸಿಕೊಂಡರೂ, ತನ್ನ ಆಳುಗಳನ್ನು ಕ್ರಿಸ್ತರನ್ನಾಗಿಸುವ ‘ಒಡೆಯ’! ಇಲ್ಲಿ ‘ಒಡೆಯ’ ಗೆದ್ದರೂ, ಬಲಿಯಾಗುವುದು ‘ಆಳುಗಳು’!

ಮತ್ತೊಂದು ಕಥೆ ಮುಕುಂದಯ್ಯ ಹಾಗೂ ಚಿನ್ನಕ್ಕಳ ಮದುವೆ ಪ್ರಸಂಗ.  ಇದು ಕೂಡ ಒಂದು ರೀತಿಯಲ್ಲಿ ನಾಯಿಗುತ್ತಿಯ ಕಥೆಯನ್ನೇ ಹೋಲಿದರೂ ಕೂಡ, ಇಲ್ಲಿ ಆತನ ಒಕ್ಕಲುಗಳು ಹಾಗೂ ಬಾಲ್ಯ ಸ್ನೇಹಿತರೂ ಕೂಡ ಆದ ಐತ ಮತ್ತು ಆತನ ಹೆಂಡತಿ ಪೀಂಚಲು ತಮ್ಮ ಒಡೆಯನ ಸಹಾಯಕ್ಕೆ ಒದಗುತ್ತಾರೆ.  ಅದರಲ್ಲೂ ಬುದ್ಧಿವಂತೆ, ಸ್ಪ್ರುರದ್ರೂಪಿ ಪೀಂಚಲೂ, ಮುಕುಂದ ಹಾಗೂ ಚಿನ್ನಕ್ಕಳ ನಡುವೆ ಮಧ್ಯವರ್ತಿಯಾಗುತ್ತಾಳೆ. ಚಿಕ್ಕಂದಿನಿಂದಲೂ ಮುಕುಂದನಿಗೆ ಮನಸೋತಿರುವ ಚಿನ್ನಕ್ಕ, ತನ್ನ ತಂದೆ ಮಾಡಿರುವ ಸಾಲಕ್ಕೆ ಹೊಣೆಯಾಗಿ, ಶ್ರೀಮಂತ ಮುದುಕನನ್ನು ಮದುವೆಯಾಗುವ ಸಂದರ್ಭ ಒದಗುತ್ತದೆ,  ಆಕೆ, ಪೀಂಚಲೂ ಹಾಗೂ ನಾಗಕ್ಕನ ಸಹಾಯದಿಂದ ಹೇಗೆ ಓಡಿಬಂದು ಮುಕುಂದಯ್ಯನನ್ನು ಮದುವೆಯಾಗುತ್ತಾಳೆಂಬುದು ಕಾದಂಬರಿಯ ಮತ್ತೊಂದು ಎಳೆ. ಇಲ್ಲಿ ಐತ ಹಾಗೂ ಪೀಂಚಲುವಿನ ಪ್ರೇಮ ದಾಂಪತ್ಯ, ಆ ಕಾಲದಲ್ಲಿ ಒಡೆಯ ಹಾಗೂ ಹೆಣ್ಣಾಳುಗಳ ನಡುವಿದ್ದ ಲೈಂಗಿಕ ಸಂಬಂಧಗಳು, ಮುಕುಂದಯ್ಯ ಹಾಗೂ ಪೀಂಚಲುವಿನ ಸ್ನೇಹ ಸಂಬಂಧದ ಬಗ್ಗೆ ಅನುಮಾನ ಹುಟ್ಟಿಸುವ ಐತನ ಗೆಳೆಯ / ಸೇರೆಗಾರ ಚೀಂಕ್ರ, ಇದನ್ನು ಪ್ರೀತಿಯಿಂದಲೇ ಪರಿಹರಿಸುವ ಪೀಂಚಲು, ಐತ ಹಾಗೂ ಪೀಂಚಲುವಿನ ದಾಂಪತ್ಯ ವಾಹ್! ಅನಿಸಿಬಿಡುತ್ತದೆ. ಮುಕುಂದ ಹಾಗೂ ಚಿನ್ನಕ್ಕನ ಕಥೆ ಸುಖಾಂತ್ಯವಾದರೂ ಕೂಡ, ಇದರಿಂದಾಗುವ ಮುಕುಂದಯ್ಯನ ಆಸ್ತಿ ವಿಭಜನೆ, ಚಿನ್ನಕ್ಕಳ ತಂದೆಯ ಸಾವು, ನಾಗಕ್ಕಳ ಮರುವೈಧವ್ಯ ವಿಷಾದ ಹುಟ್ಟಿಸುತ್ತದೆ.  

ಈ ಮಧ್ಯೆ ಗಂಡಸರ ಲೈಂಗಿಕ ಬಯಕೆಗಾಗಿ ಬಲಿಯಾಗುವ ಹೆಣ್ಣುಗಳ ಕಥೆಗಳು (ಉಪಕಥೆಗಳಾಗಿದ್ದರೂ, ಪಾತ್ರಗಳು ನಮ್ಮನ್ನು ಸೆಳೆದುಕೊಳ್ಳುತ್ತವೆ)  - ನಾಗಕ್ಕ, ಕಾವೇರಿ, ಚೀಂಕ್ರನ ಹೆಂಡತಿ ದೇಯಿ, ಚೀಂಕ್ರನ ಪಕ್ಕದ ಮನೆಯ ಅಕ್ಕಣಿ. ಮುಕುಂದಯ್ಯನ ಅಕ್ಕ, ತಂಗಿಯರು....... ವಿಧವೆ ನಾಗಕ್ಕ, ತನ್ನ ಅತ್ತೆಯಿಂದಲೇ (ಜೀವನೋಪಾಯಕ್ಕಾಗಿ) ಮೋಸಕ್ಕೊಳಗಾಗಿ ಬಲವಂತವಾಗಿ ಚಿನ್ನಕ್ಕನ ತಂದೆಯೊಟ್ಟಿಗೆ ಕೂಡಿಕೆಯಾಗುವುದು, ಆತನೋ ಮೋಟುಗಾಲಿನವನಾದರೂ, ಹೆಣ್ಣಿನ ಸೆರಗು ಕಂಡೊಡನೆ ಜೊಲ್ಲು ಸುರಿಸುತ್ತಾ ಹಿಂದೆ ಓಡುವಾತ, ಮಹಾನ್ ಹೆಣ್ಣುಬಾಕ! ಮತ್ತೊಮ್ಮೆ ಅದೇ ಮೋಸ ನಾಗಕ್ಕಳ ಅತ್ತೆಗೆ ತಿರುಮಂತ್ರವಾಗಿ ಅವಳೇ ಮೋಸ ಹೋಗುವಂಥ ಪರಿಸ್ಥಿತಿ!, ಅತ್ತೆಯ ಮೋಸಕ್ಕೆ ಬಲಿಯಾದರೂ ಕೂಡ ನಾಗಕ್ಕಳಿಗೆ ಇದೊಂದು ವರವಾಗಿ ಪರಿಣಮಿಸುವುದು, ಚಿನ್ನಕ್ಕಳಿಗೆ ಮಲತಾಯಿಯಾದರೂ, ತಾಯಿಗಿಂತಲೂ ಹೆಚ್ಚಿಗೆ ಪ್ರೀತಿಸುವ ನಾಗಕ್ಕ, ಚಿನ್ನಕ್ಕಳು ಮುಕುಂದಯ್ಯನನ್ನು ಕೂಡಲು ಸಹಾಯ ಮಾಡುವ ಮೃದು ಹೃದಯಿ ನಾಗಕ್ಕ, ಓಡಿ ಹೋದ ಚಿನ್ನಕ್ಕ ವಾಪಾಸು ಬರುವಾಗ ತಂದೆಯ ಸಾವಿನಿಂದ ವಿಚಲಿತಳಾದರೂ, ಮತ್ತೊಮ್ಮೆ ವಿಧವೆಯಾದ ನಾಗಕ್ಕ ಆಕೆಗೆ ಬೆಂಬಲವಾಗಿ ನಿಲ್ಲುವುದು, ಇಬ್ಬರೂ ಸೇರಿ ತಂದೆಯ ಸಾಲವನ್ನು ಗದ್ದೆಯಲ್ಲಿ ದುಡಿದು ತೀರಿಸಲು ಮನಸು ಮಾಡುವುದು, ಒಬ್ಬಂಟಿ ನಾಗಕ್ಕಳ ಧೈರ್ಯವನ್ನು ಸೂಚಿಸುತ್ತದೆ.

ಕಾವೇರಿಯ ತಾಯಿ ಮಗಳನ್ನು ಕಾಮುಕರಿಂದ ಎಷ್ಟೇ ರಕ್ಷಿಸಿ ಆಕೆಗೊಂದು ಉತ್ತಮ ಜೀವನ ಕಲ್ಪಿಸಿಕೊಡಬೇಕೆಂದು ಏನೆಲ್ಲಾ ಮಾಡಿದರೂ, ಮುಗ್ಧೆ ಕಾವೇರಿಯ ಮೇಲಿನ ಅತ್ಯಾಚಾರ, ಆಗೆಲ್ಲಾ ಮನೆಯಲ್ಲಿ ಗಂಡಸರ ಬೆಂಬಲವಿಲ್ಲದಿದ್ದರೆ, ಅಂತಹ ಹೆಣ್ಣುಮಕ್ಕಳನೆಲ್ಲಾ ವೈಶ್ಯೆಯರನ್ನಾಗಿಸುತ್ತಿದ್ದ ಗಂಡಸರ ಮನೋಭಾವ!, ಊರಿನ ಗೌಡನೊಬ್ಬ ಪ್ರೀತಿಯಿಂದಲೇ, ಕಾವೇರಿಯನ್ನು ಆಕರ್ಷಿಸಿಕೊಂಡು ಮಾನಸಿಕ ಅತ್ಯಾಚಾರ ಮಾಡಿದರೆ, ಇದರಿಂದ ಬಸವಳಿದ ಕಾವೇರಿಯ ಮೇಲಿನ ಉಳಿದ ಗಂಡಸರ ದೈಹಿಕ ಅತ್ಯಾಚಾರ, ಕಂಗೆಟ್ಟ ಪುಟ್ಟ ಕಾವೇರಿ ಮಾಡಿಕೊಳ್ಳುವ ಆತ್ಮಹತ್ಯೆ, ಅಕ್ಕಪಕ್ಕದವರು ಕಾವೇರಿ ಮುಂಚಿನಿಂದಲೂ ಚೆಲ್ಲುಚೆಲ್ಲಾಗಿದ್ದಳು ಎಂದು ಮಾತಾಡಿಕೊಳ್ಳಬಾರದೆಂದು, ಕಾವೇರಿಯ ತಾಯಿ ಅಂತಕ್ಕ ಮಗಳು ಅತ್ಯಾಚಾರಕ್ಕೆ ಬಲಿಯಾದಳು ಎಂದು ತಿಳಿದರೂ ಕೂಡ, ಪೋಲೀಸರಿಗೆ ಹೇಳುವ ಸುಳ್ಳು ಹೇಳಿಕೆ! (ಆಗಿನಿಂದಲೂ ಈ ಕಾಲದವರೆಗೂ ಅತ್ಯಾಚಾರಗೊಂಡ ಹೆಣ್ಣುಮಕ್ಕಳೇ ಅಪರಾಧಿಗಳಾಗಿ ಕಾಣುವಂಥ ಮನಸ್ಥಿತಿ :( ) ಎಲ್ಲವೂ ಮರುಕ ಹುಟ್ಟಿಸುತ್ತದೆ. 

ಈಗಾಗಲೇ ಅನೇಕ ಮಕ್ಕಳ ತಾಯಿಯಾಗಿ ಬಸವಳಿದ ತುಂಬು ಗರ್ಭಿಣಿಯ ಕಾಮುಕ ಗಂಡ ಚೀಂಕ್ರ, ಮತ್ತಿನಲ್ಲಿ ಆಕೆಯ ಮೇಲೆ ನಡೆಸುವ ಬಲವಂತದ ಸಂಭೋಗದಿಂದ ಸಾಯುವ ಆಕೆ, ಮಕ್ಕಳಿಲ್ಲದ ಅಕ್ಕಣಿ, ಪಕ್ಕದ ಮನೆಯ ಚೀಂಕ್ರನ ಮಕ್ಕಳನ್ನು ನೋಡಿಕೊಳ್ಳುವ ಹಾಗೂ ರೋಗಿ ಗಂಡನನ್ನು ಸಂಬಾಳಿಸುತ್ತಲೇ, ಚೀಂಕ್ರ ಬೀಸಿದ ಹಣದ ಬಲೆಗೆ ಬೀಳುವ ಅಕ್ಕಣಿ, ಚೀಂಕ್ರ ತನ್ನ ಗಂಡ ಪಿಜಿಣನನ್ನು ನಿಧಾನವಾಗಿ ಕೊಲ್ಲುತ್ತಿರುವ ಮೋಸದ ಅರಿವಾಗದೇ, ತನ್ನನ್ನು, ತನ್ನ ಗಂಡನನ್ನು ಕೈತುಂಬಾ ಹಣ ಕೊಟ್ಟು ನೋಡಿಕೊಳ್ಳುತ್ತಿರುವ ಕೃತಜ್ಞತೆಯಿಂದ ತನ್ನ ದೇಹವನ್ನು ಕೂಡ ಚೀಂಕ್ರನಿಗೆ ಒಪ್ಪಿಸುವ ಪಾಪದ ಅಕ್ಕಣಿ, ಅಕ್ಕಣಿಯ ಬಯಕೆಗಳನ್ನು ಈಡೇರಿಸಲಾಗದಂಥ ನಿಶ್ಯಕ್ತ ಗಂಡ ಇದನ್ನೊಪ್ಪಿಕೊಳ್ಳದೇ ನೇಣು ಹಾಕಿಕೊಳ್ಳುವುದು, ತಾನು ಮಾಡಿದ ತಪ್ಪೇನು? ಎಂಬ ಅರಿವಾಗದೇ ದಿಗ್ಬ್ರಮೆಗೊಳಗಾಗುವ ಅಕ್ಕಣಿ, 

ತಿರುಪತಿಗೆ ಹೋದ ಗಂಡ ೭,೮ ವರ್ಷಗಳಾದರೂ ವಾಪಾಸ್ಸು ಬರದೇ, ಕಂಗಾಲಾಗಿರುವ ಮುಕುಂದಯ್ಯನ ಅಕ್ಕ ರಂಗಮ್ಮ ಹೆಗ್ಗಡಿತಿ, ಆಸ್ತಿಯ ಆಸೆಗಾಗಿ ಅಣ್ಣನ ಹೆಂಡತಿಯನ್ನೇ ಹುಚ್ಚು ಹೆಗ್ಗಡಿತಿಯಾಗಿ ಬೇಕೆಂದೇ ಬಿಂಬಿಸುವ ಮೈದುನ, ಪಕ್ಕದ ಮನೆಯಲ್ಲಿ ಬ್ರಾಹ್ಮಣರಂತೆಯೇ ವರ್ತಿಸುವ ಮತ್ತೊಬ್ಬ ದಾಯಾದಿ ಶಂಕರ ಹೆಗ್ಗಡೆ, ದೊಡ್ಡಮಗನನ್ನು ಕಳೆದುಕೊಂಡು ಕೊರಗುವ ಜಿಪುಣ ಸುಬ್ಬಣ್ಣ ಹೆಗ್ಗಡೆ, ಇವುಗಳೆಲ್ಲದರ ನಡುವೆ ತಂದೆಯಿಲ್ಲದೇ ಕಂಗಾಲಾಗಿರುವ ಪುಟ್ಟ ಮಗು ಧರ್ಮುವಿನ ವಿಚಾರ ಧಾರೆ, ಕೊನೆಗೆ ಕಳೆದು ಹೋದ ಗಂಡನ ಕಳೇಬರ ತಂದಾಗ ಅದರ ಮೇಲೆಯೇ ಜೀವ ಬಿಡುವ ರಂಗಮ್ಮ ಹೆಗ್ಗಡಿತಿ, ಹೆಣ್ಣಿಗಾಗಿ ಕ್ರೈಸ್ತ ಮತಾಂತರಕ್ಕೆ ಒಪ್ಪಿಕೊಳ್ಳುವಂಥ ಹಾಗೂ ಹಿಂದೂಗಳು ಅನುಸರಿಸುವ ಎಲ್ಲಾ ಪದ್ದತಿಗಳನ್ನೂ ಗೊಡ್ಡು ಎಂದು ಹೀಗಳೆಯುತ್ತಾ, ಆಧುನಿಕ ಜಗತ್ತಿನ ಆಕರ್ಷಣೆಗೊಳಗಾಗಿರುವ ಗಂಡ ದೇವಯ್ಯನನ್ನು ಸಂಬಾಳಿಸಲು ತೋರದ, ದಿನವಿಡೀ ಕೊರಗುವ ಸೌಮ್ಯ ಸ್ವಭಾವದ ಹೆಂಡತಿ ರಂಗಮ್ಮಳ ತಂಗಿ. ಸ್ವಲ್ಪ ದಿವಸಗಳ ಚೇತರಿಕೆಗೆಂದು ತವರುಮನೆಗೆ ಬಂದಿದ್ದ ರಂಗಮ್ಮಳು, ತನ್ನ ತಂಗಿಯ ಮಗನನ್ನು ‘ಸ್ವಾಮಿ, ಸ್ವಾಮಿ ಎಂದು ಕರೆಯುತ್ತಾ ಪ್ರೀತಿಸುವುದು, ಆ ಮಗುವು ಕೂಡ ತನ್ನ ದೊಡ್ಡಮ್ಮನನ್ನು ಹಚ್ಚಿಕೊಳ್ಳುವುದು ಎಲ್ಲವೂ ವಿಚಿತ್ರವೆಂದು ಕಾಣುತ್ತದೆ.

ಇಲ್ಲಿ ಮತ್ತೊಂದು ಅಸಂಗತ ಕಥೆ, ಇಡೀ ಕಾದಂಬರಿಗೆ ಮುಖ್ಯ ತಿರುವನ್ನು, ಬಹುಶಃ ಮುಕುಂದಯ್ಯನಿಗೆ ಚಿನ್ನಕ್ಕಳನ್ನು ಮದುವೆಯಾಗಲು ಆತ್ಮ ಸ್ಥೈರ್ಯವನ್ನು ನೀಡುತ್ತದೆ.  ರಂಗಮ್ಮನ ತಂಗಿಗೆ ಹುಟ್ಟಿರುವ ಪುಟ್ಟ ಮಗನೇ ರಂಗಮ್ಮನ ಗಂಡನೆಂದೂ, ಮುಕುಂದಯ್ಯ ಹಾಗೂ ಚಿನ್ನಕ್ಕಳಿಗೆ ಹುಟ್ಟುವ ಮಗಳು ‘ರಂಗಮ್ಮ’ ಮತ್ತೆ ಇವನನ್ನು ಮದುವೆಯಾಗುತ್ತಾಳೆಂದು ಹಾಗೂ ಹಿಂದಿನ ಜನ್ಮದಲ್ಲಿಯೂ ಮುಕುಂದಯ್ಯ ಹಾಗೂ ಚಿನ್ನಕ್ಕ ದಂಪತಿಗಳಾಗಿದ್ದರೆಂದು, ಭೂತ, ವರ್ತಮಾನ, ಭವಿಷ್ಯ ಹೇಳುವ ಗಡ್ಡದಯ್ಯ ಎಂಬ ಪಾತ್ರ ಕಾದಂಬರಿಯಲ್ಲಿ ಕಾಣುತ್ತದೆ. ಆತನ ಅತೀಂದ್ರಿಯ ಜ್ಞಾನ, ‘ವಿವೇಕಾನಂದರು ಭರತ ಖಂಡವನ್ನೆಲ್ಲ ಸಂಚರಿಸಿ, ಬೋಧಿಸಿ ಹಿಂದೂ ಧರ್ಮವು ಬ್ರಾಹ್ಮಣ ಪುರೋಹಿತರಿಂದ ಪಾರಾಗಿ, ಕ್ರೈಸ್ತಾದಿ ಮತ ಪ್ರಚಾರಕರಿಗೆ ದುರ್ಗಮವಾಗಿ......’ ಇತ್ಯಾದಿ ಹೇಳುವ ಮಾತುಗಳು, ಆತ ಮುಕುಂದಯ್ಯನನ್ನು ಉದ್ಧೇಶಿಸಿ, ಆತನ ವಂಶದಲ್ಲಿ ಮುಂದೆ ಹುಟ್ಟಲಿರುವ ಸಂತಾನವು ಸ್ವಾಮಿ ವಿವೇಕಾನಂದರ ಯುಗ ಧರ್ಮ ಶಕ್ತಿಗೆ ಸೇವೆ ಸಲ್ಲಿಸುವುದು ಇತ್ಯಾದಿ, ಬಹುಶಃ ಕುವೆಂಪುರವರು ಕಾದಂಬರಿಯಲ್ಲಿ ಹೇಳಬೇಕೆಂದಿದ್ದ ಮುಖ್ಯ ಮಾತುಗಳೆಲ್ಲವನ್ನೂ ಅಂದರೆ ತಮ್ಮ ವಿಶ್ವ ಮಾನವ ತತ್ವವನ್ನು, ಗಡ್ಡದಯ್ಯನ ಪಾತ್ರದ ಮೂಲಕ ಹೇಳಿಸಿದ್ದಾರೆ ಎಂದೆನಿಸುವುದು.  ಕಾದಂಬರಿಯನ್ನು ಓದುವಾಗ ಇನ್ನೂ ಅನೇಕ ಪಾತ್ರಗಳು ನಮ್ಮ ಸುತ್ತಮುತ್ತಲೆಲ್ಲೋ ಇವೆಯೇನೋ? ಎನ್ನುವಂಥ ಭಾಸವನ್ನು ಮೂಡಿಸಿಬಿಡುತ್ತವೆ. ಪಾತ್ರಗಳು ಕಣ್ಮುಂದೆ ಜೀವಂತಿಕೆಯಲ್ಲಿ ಕುಣಿಯುತ್ತವೆ. ಮತ್ತೊಮ್ಮೆ, ಮಗದೊಮ್ಮೆ ಓದುತ್ತಲೇ ಇರಬೇಕೆಂಬ ಆಸೆಯನ್ನು ಕೂಡ ಹುಟ್ಟು ಹಾಕುತ್ತವೆ.

ಕಾದಂಬರಿಯ ರಂಗರೂಪಾಂತರದಲ್ಲಿ ನನಗೆ ಕಂಡ ಬದಲಾವಣೆಗಳು, ವ್ಯತ್ಯಾಸಗಳು ಎಲ್ಲೋ ಮನಸ್ಸಿನ ಮೂಲೆಯಲ್ಲಿ, ಇದು ಕುವೆಂಪುರವರ ‘ಮಲೆಗಳಲ್ಲಿ ಮದುಮಗಳು’ ಹೌದೇ?! ಎಂದೆನಿಸಿದ್ದು ಸುಳ್ಳಲ್ಲ. ಇಡೀ ಕಾದಂಬರಿಗೆ ತಿರುವನ್ನು ಕೊಟ್ಟ ಮುಖ್ಯ ಪಾತ್ರವಾದ ‘ಗಡ್ಡದಯ್ಯ’ ಇಲ್ಲಿ ಇಲ್ಲವೇ ಇಲ್ಲ.  ಕಾವೇರಿಯ ಆತ್ಮಹತ್ಯೆಯ ನಂತರ ಅಂತಕ್ಕ ಅಳುತ್ತಾ, ಶಾಪ ಹಾಕುವಾಗ (ಕಾವೇರಿಯನ್ನು ಮದುವೆಯಾಗಲೆಂದು ಬಂದಿದ್ದ ಕಿಟ್ಟಯ್ಯನಿಗೆ), ಮೂಗಿಗೆ ಕೈಹಾಕುತ್ತಾ, ತಿರುವುತ್ತಾ,  ಮುಖ ಸಪ್ಪೆ ಮಾಡಿಕೊಂಡು ನಿಲ್ಲುವ ಕಿಟ್ಟಯ್ಯ ಶೆಟ್ಟಿಯ ನಟನೆ ಹೆಚ್ಚು ಆಪ್ತವೆನಿಸಿ, ತಮಾಷೆಯೆನಿಸಿ ಚಪ್ಪಾಳೆ ಗಿಟ್ಟಿಸಿದರೆ, ಕಾವೇರಿಯ ಅತ್ಯಾಚಾರದ ಘಟನೆ ಇದರಿಂದಾಗಿ ಹೈಲೈಟ್ ಆಗದಿರುವುದು ವಿಷಾದವೆನಿಸಿತು. ಕಿಟ್ಟಯ್ಯ ಶೆಟ್ಟಿಯ ಪಾತ್ರ ಕಾದಂಬರಿಯಲ್ಲಿ ಮುಖ್ಯವೆನಿಸಿರಲಿಲ್ಲ. 

ಕಾದಂಬರಿಯಲ್ಲಿ ಮುಕುಂದಯ್ಯ, ಶಂಕರ ಹೆಗ್ಡೆ, ರಂಗಮ್ಮ ಹೆಗ್ಗಡಿತಿ, ಆಕೆಯ ತಂಗಿ ಇವುಗಳೆಲ್ಲಾ ಸ್ವಲ್ಪ ಮಟ್ಟಿಗೆ ಸೌಮ್ಯ ಪಾತ್ರಗಳು, ಆದರೆ ನಾಟಕದಲ್ಲಿ ಮುಕುಂದಯ್ಯ ಪೇಲವ, ಶಂಕರ ಹೆಗ್ಡೆ ಹಾಸ್ಯಾಸ್ಪದ, ರಂಗಮ್ಮ ನಾಟಕೀಯ, ಆಕೆಯ ತಂಗಿ ಗಯ್ಯಾಳಿ ಯಾಗಿ ಕಾಣಿಸುತ್ತಾರೆ.  ಇನ್ನೂ ಬ್ರಾಹ್ಮಣರೆಲ್ಲರೂ ಹಾಸ್ಯಾಸ್ಪದವಾಗಿ ಕಾಣುವಂತೆ ಅಂದರೆ ಬ್ರಾಹ್ಮಣರೆಲ್ಲರನ್ನೂ ಲೇವಡಿ ಮಾಡುವಂತ ಸನ್ನಿವೇಶವನ್ನು ಸೃಷ್ಠಿ ಮಾಡಿದ್ದಾರೆ. ಸಾಬರೆಲ್ಲರೂ ಹೊಡಿ, ಬಡಿ, ಕೊಲ್ಲು, ದೋಚು, ಮೋಸ ಮಾಡು ಎನ್ನುವಂಥವರು ಎಂಬ ಪಾತ್ರರಚನೆಗಳನ್ನು ಕುವೆಂಪು ಸೃಷ್ಠಿಸಿದ್ದರೆ, ಬಹುಶಃ ಅಲ್ಪಸಂಖ್ಯಾತರನ್ನು ಎತ್ತಿ ಹಿಡಿಯಲೆಂದೋ ಏನೋ? ಅವರಲ್ಲಿಯೂ ಮಾನವೀಯತೆ ಇದೆ, ನಾವು ಬಡವರು, ಶ್ರೀಮಂತರ ದಬ್ಬಾಳಿಕೆಯಿಂದ ಹೀಗಾಗಿದ್ದೇವೆ ಎಂಬ ಕಾದಂಬರಿಯಲ್ಲಿಲ್ಲದ ಸನ್ನಿವೇಶವೊಂದು ಸೃಷ್ಠಿಯಾಗಿದೆ. ಇನ್ನೂ ಕ್ರೈಸ್ತ ಮತಾಂತರವನ್ನು ಬಲವಂತದಿಂದ ಮಾಡದೇ, ಉಪಾಯದಿಂದ ಮಾಡಬೇಕೆನ್ನುವ ದೊಡ್ಡ ಪಾದ್ರಿಯ ಸಲಹೆ ಅಲ್ಲಿ ಕ್ರೈಸ್ತರ ಮತಾಂತರದ ಹುನ್ನಾರವನ್ನು ಅರ್ಥ ಪಡಿಸಿದರೆ, ಇಲ್ಲಿ ಆ ಇಡೀ ಸನ್ನಿವೇಶ ತಮಾಷೆಯಂತೆ ಚಿತ್ರಣಗೊಂಡು ದೊಡ್ಡ ಪಾದ್ರಿ ಇತ್ಯಾದಿಯಾಗಿ ಎಲ್ಲರೂ ಹಾಸ್ಯಾಸ್ಪದವಾಗಿ ಕಾಣುತ್ತಾರೆ.  ಹ್ಮ್ . ನಿಜ. ಇಲ್ಲಿ ಯಾರೂ ಮುಖ್ಯರಲ್ಲ! ಯಾರೂ ಅಮುಖ್ಯರಲ್ಲ, ಯಾವುದೂ ಯಕಶ್ಚಿತವಲ್ಲ.

ನಾಟಕವನ್ನು ಪ್ರಾರಂಭಿಸಿದ ರೀತಿ ಬಹಳ ಚಂದವಾಗಿದೆ.  ಶಾಪದ ಉಂಗುರ ಸಿಕ್ಕ ಜೋಗಿಯೊಬ್ಬ ಕಥೆಯನ್ನು ಹೇಳುತ್ತಾ ಹೋಗುವುದು ದೃಶ್ಯಗಳನ್ನು ಕಟ್ಟಿಕೊಡುತ್ತಾ ಹೋಗುತ್ತದೆ. ಕಾವೇರಿಯ ಅತ್ಯಾಚಾರಕ್ಕೆ ಕಾರಣವಾಗಿರುವ ಈ ಉಂಗುರದಿಂದ ಕಥೆ ಶುರುವಾಗುವುದು ಇಡೀ ಕಾದಂಬರಿಯ ಆಶಯವಾದ ವಿಶ್ವ ಮಾನವ ತತ್ವವನ್ನು (ನನ್ನ ಊಹೆಯೇ?!) ತೆಳುವಾಗಿಸುತ್ತದೆಯೇನೋ? ಕಾದಂಬರಿಯಲ್ಲಿಲ್ಲದ ಮತ್ತೊಂದು ಸನ್ನಿವೇಶ ಈ ಸನ್ಯಾಸಿ, ಗೋಸಾಯಿ, ಬೈರಾಗಿಗಳನ್ನು ಸುತ್ತಲೂ ಧ್ಯಾನಮಗ್ನರಾಗಿರುವಂತೆ ಮಾಡಿ, ಕೆಲವರು ವಿಕಾರವಾಗಿ ನಗುವಂತೆ, ಮತ್ತೆ ಕೆಲವರು ಕಾದಂಬರಿಯ ಶುರುವಿನಲ್ಲಿ ಕುವೆಂಪುರವರು ಬರೆದಿರುವ ಮಾತುಗಳನ್ನು ಹೇಳುವಂತೆ ಹಾಗೂ ಹಿನ್ನೆಲೆಯಲ್ಲಿ ಕೆಟ್ಟದಾದ ಸಂಗೀತ ಸಂಯೋಜನೆ ಎಲ್ಲವೂ ಸಮಾಧಿ ಸ್ಥಳಕ್ಕೆ ಹೋದಂತೆ ಭಾಸವಾಗಿ ತಮಾಷೆಯಾಗಿ ಕಾಣುವುದು.  ಈ ಸನ್ನಿವೇಶದ ಅಗತ್ಯತೆಯೇ ನನಗೆ ಕಾಣಲಿಲ್ಲ. 

ಕಾದಂಬರಿಯಲ್ಲಿನ ಮತ್ತೊಂದು ಮುಖ್ಯ ಪಾತ್ರವಾದ ರಂಗಮ್ಮ ಹೆಗ್ಗಡಿತಿಗೆ, ತನ್ನ ತಂಗಿಯ ಮಗನೇ, ತನ್ನ ಸ್ವಾಮಿಯಂತೆ ಕಂಡುಬರುವುದು, ಹಾಗೂ ಆ ಮಗುವು ಕೂಡ ಈಕೆಯನ್ನು ಹಚ್ಚಿಕೊಳ್ಳುವ ಸನ್ನಿವೇಶಗಳು ಕಣ್ಣೀರು ತರಿಸುತ್ತವೆ.  ಕಾದಂಬರಿಯ ತಿರುವಿಗೆ ಅರ್ಥ ಕೊಡುತ್ತವೆ.  ಆದರೆ ಅದನ್ನು ಚಿತ್ರಿಸದೇ, ಆಕೆಯ ಮಾವ ಸುಬ್ಬಣ್ಣ ಹೆಗ್ಗಡೆ ಆ ಪುಟ್ಟ ಮಗುವಿನಲ್ಲಿ ತನ್ನ ಮಗನನ್ನು ಕಾಣುವಂತೆ ಚಿತ್ರಿಸಿರುವ ಸನ್ನಿವೇಶಗಳು ಸುಬ್ಬಣ್ಣ ಹೆಗ್ಗಡೆಯನ್ನು, ಆ ಪಾತ್ರಧಾರಿಯನ್ನು ಹೈಲೈಟ್ ಆಗಿಸಿ, ರಂಗಮ್ಮಳ ನಟನೆ ತೀರಾ ನಾಟಕೀಯವಾಗಿ ಕಾಣುತ್ತವೆ. ಗಡ್ಡದಯ್ಯನ ಮೂಲಕ ಇಡೀ ವಿವೇಕಾನಂದರ ತತ್ವಗಳನ್ನು ಹೇಳಿಸಿರುವುದು, ಗಡ್ಡದಯ್ಯ ಮುಕುಂದಯ್ಯ ಹಾಗೂ ದೇವಯ್ಯನ ಜೊತೆ ಆಗಿದ್ದ ಮತಾಂತರ, ಕ್ರೈಸ್ತರು, ಬ್ರಾಹ್ಮಣರ ಪದ್ಧತಿಗಳು, ಮೂಢನಂಬಿಕೆಗಳ ಬಗ್ಗೆ ನಡೆಸಿರುವ ಗಹನವಾದ ಚರ್ಚೆ ನಮಗೆ ಕಾದಂಬರಿಯ ಆಶಯವನ್ನು ತಿಳಿ ಹೇಳಿದರೆ, ಇಲ್ಲಿ ಸುಮ್ಮನೆ ೨ ನಿಮಿಷಗಳ ಕಾಲ ಬಂದು ಹೋಗುವ ವಿವೇಕಾನಂದರ ಪಾತ್ರಧಾರಿ, ಹಾಗೂ ಚಿಕಾಗೋದಲ್ಲಿನ ಅವರ ಭಾಷಣವನ್ನು ಹಿನ್ನೆಲೆಯಲ್ಲಿ ಕೇಳಿಸುವುದು ವೀಕ್ಷಕರಿಗೆ ಅರ್ಥವಾಗುವುದೇ ಇಲ್ಲ.  ಕಾದಂಬರಿಯ ಕೊನೆಯಲ್ಲಿ ಗುತ್ತಿಯ ನಾಯಿ ‘ಹುಲಿಯಾ’ ನದಿಯಲ್ಲಿ ಮುಳುಗಿ ಹೋಗುವುದನ್ನು ಓದುತ್ತಾ, ಓದುತ್ತಾ, ಅಳಲು ಶುರು ಮಾಡುವ ಓದುಗರು, ಇಲ್ಲಿ ಓಹ್! ನಾಟಕ ಮುಗಿಯಿತು ಎಂಬಂತೆ ಎದ್ದು ಬರುವುದು ನಾಟಕದ ದುರಂತ :( 

ಮೊದಲನೆಯದಾಗಿ ರಂಗ ಸಜ್ಜಿಕೆ. ಇಡೀ ಮಲೆನಾಡಿನ ಪರಿಸರವನ್ನು ಕಣ್ಣಮುಂದೆ ತಂದಿಡಲು ಪ್ರಯತ್ನ ಪಟ್ಟಿರುವ ಶಶಿಧರ ಅಡಪ ಅವರಿಗೆ ಮೆಚ್ಚುಗೆ ವ್ಯಕ್ತಪಡಿಸಲೇ ಬೇಕು. ಆದರೆ ರಂಗಸಜ್ಜಿಕೆಯಲ್ಲಿನ ಮತ್ತೊಂದು ಭಾಗವಾದ ವೀಕ್ಷಕರ ಸ್ಥಳವನ್ನು ಕೂಡ ಅವರು  ಅಷ್ಟೇ ಮುತುವರ್ಜಿಯಿಂದ ಸಜ್ಜುಗೊಳಿಸಿದ್ದರೆ ಇನ್ನಷ್ಟು ಕಳೆಗಟ್ಟುತ್ತಿತ್ತು ಎಂಬುದು ನನ್ನ ಅನಿಸಿಕೆ.  ಸುಮಾರು ೯ ಗಂಟೆಗಳ ನಾಟಕವು ೪ ಸ್ಥಳಗಳಲ್ಲಿ ನಡೆಯುವುದು ಹಾಗೂ ಆ ಬದಲಾವಣೆಗೆ ಕೇವಲ ೧೫ ನಿಮಿಷಗಳ ವಿರಾಮ ದೊರೆತು, ಓಡಿ ಹೋಗಿ, ಸೀಟನ್ನು ಹಿಡಿದಿಟ್ಟುಕೊಳ್ಳಬೇಕಾದ ಪರಿಸ್ಥಿತಿ, ವಯಸ್ಸಾದವರಿಗೆ ಅನಾನುಕೂಲವಾಗಿದ್ದನ್ನು ಕಣ್ಣಾರೆ ಕಂಡೆ. ಮೂರು ಘಂಟೆಗಳ ಕಾಲ ಕಲ್ಲಿನ ಮೇಲೆ ಕುಳಿತುಕೊಂಡು ನೋಡುವುದು ನಿಜಕ್ಕೂ ಕಷ್ಟಕರ. ಆದರೆ ಅದನ್ನು ಮರೆಯುವಂತೆ ಮಾಡುವುದು ನಾಟಕದ ಪ್ಲಸ್ ಪಾಯಿಂಟ್! ಕಲಾಗ್ರಾಮದ ಪರಿಸರ ಕೂಡ ನಾಟಕ ನೋಡಲು ಪೂರಕವಾಗಿರುವುದು ಒಳ್ಳೆಯ ಅಂಶ. 

ಸಂಗೀತ ಸಂಯೋಜನೆ - ಮಲೆನಾಡಿನ ದೃಶ್ಯ ವೈಭವವನ್ನು ಕಳೆಗಟ್ಟುವಂತೆ ನಿರ್ಮಿಸಿದವರು, ಸಂಗೀತ ಸಂಯೋಜನೆಯಲ್ಲಿಯೂ ಕೂಡ ಅಲ್ಲಿಯದೇ ಗ್ರಾಮ್ಯ ಸಂಗೀತವನ್ನು ಅಳವಡಿಸಿಕೊಂಡಿದ್ದರೆ ಬಹಳ ಚೆನ್ನಾಗಿರುತ್ತಿತ್ತು. ಹಂಸಲೇಖರ ಸ್ವರ ಸಂಗೀತ ಸುಮ್ಮನೆ ಕೇಳಿದರೆ ಖುಷಿ ಕೊಡುತ್ತದೆಯಾದರೂ, ನಾಟಕದಲ್ಲಿ ಹಿನ್ನೆಲೆ ಸಂಗೀತವಾಗಿ ಉಪಯೋಗಿಸಿಕೊಂಡಾಗ ಅಭಾಸವಾಗಿಬಿಡುತ್ತದೆ.  ನಾಟಕಕ್ಕೂ, ಸಂಗೀತಕ್ಕೂ ಸ್ವಲ್ಪವೂ ಹೊಂದಿಕೆಯಾಗದೇ ಕಿರಿಕಿರಿಯಾಗುತ್ತದೆ.  ಸಿನೆಮಾ ಹಾಡುಗಳ ರೀತಿಯಲ್ಲಿ ಮೂಡಿ ಬಂದಿರುವ ಎಲ್ಲಾ ಹಾಡುಗಳೂ, ಮಲೆನಾಡಿನ ಪರಿಸರವನ್ನು ಆಧುನಿಕವಾಗಿಸಿ, ಪರಿಸರವನ್ನು ಕಲುಷಿತಗೊಳಿಸುತ್ತದೆ. ಕಾವೇರಿಯ ಪಾತ್ರದ ಸಂದರ್ಭದಲ್ಲಿ ಹಿನ್ನೆಲೆಯಲ್ಲಿ ತೋರಿಸುವ ನೃತ್ಯ ಕೂಡ ಅಸಂಬದ್ಧವಾಗಿ ಕಾಣುತ್ತದೆ. ಮಲೆನಾಡಿನ ಇಂಬಳಗಳನ್ನು ತೋರಿಸಿರುವ ರೀತಿ ಚಂದವಾಗಿದ್ದರೆ, ಗೊಬ್ಬರದ ಹುಳು ಅಷ್ಟೇನೂ ಆಕರ್ಷಿಸುವುದಿಲ್ಲ.

ಇನ್ನೂ ಕಾದಂಬರಿಯ ಮುಖ್ಯ ವೈಶಿಷ್ಟ್ಯವಾದ ಮಲೆನಾಡಿನ ‘ಭಾಷೆ’ ನಾಟಕದಲ್ಲಿ ಸರಿಯಾಗಿ ಕಂಡೂ ಬರದೇ ಬೇಸರವಾಗುತ್ತದೆ. ಬೆಂಗಳೂರು, ಮಂಗಳೂರು, ಮೈಸೂರು, ಮಲೆನಾಡು ಎಲ್ಲಾ ರೀತಿಯ ಸಂಭಾಷಣೆಯ ಶೈಲಿಯು ಮೂಡಿ ಬಂದು,  ಸಂಪೂರ್ಣವಾಗಿ ಕಲಸಿಹೋಗಿ, ಮನಸಿಗೆ ವಿಪರೀತವಾಗಿ ಕಿರಿಕಿರಿಯಾಗಿಬಿಡುತ್ತದೆ. ಮಲೆನಾಡಿನ ಪರಿಸರವನ್ನು ದೃಶ್ಯಿಸಲು, ಪಾತ್ರಧಾರಿಗಳ ವೇಷಭೂಷಣಗಳಿಗೆ ಗಮನ ಕೊಟ್ಟ ನಿರ್ದೇಶಕರು, ಭಾಷೆಗೇಕೆ ಒತ್ತು ಕೊಡಲಿಲ್ಲವೆಂಬ ಪ್ರಶ್ನೆ ಕಾಡುತ್ತದೆ. ಓದುವಾಗ ಮನಸ್ಸಿನಲ್ಲಿ ಮೂಡಿದ ಪಾತ್ರಗಳು, ಇಲ್ಲೀ ನಾಟಕದಲ್ಲಿ ನಟಿಸುವಾಗ ಹೊಂದಾಣಿಕೆಯಾಗದಿದ್ದದ್ದು ನನ್ನ ಕಲ್ಪನೆಯ ತಪ್ಪೇ?  ನಟಿಸಿದ ಪಾತ್ರಧಾರಿಗಳ ತಪ್ಪೇ?  ನಿರ್ದೇಶಕರದ್ದೇ?  ತಿಳಿಯಲಿಲ್ಲ.  ಕಾದಂಬರಿಯಲ್ಲಿ ಪೀಂಚಲು ಮಿಂಚಿದರೆ, ನಾಟಕದಲ್ಲಿ ‘ಐತ’, ಅಲ್ಲಿ ಮುಕುಂದಯ್ಯನಾದರೆ, ಇಲ್ಲಿ ಮಿಂಚುವ ತಿಮ್ಮಪ್ಪ ಹೆಗ್ಗಡೆ, ಕಾದಂಬರಿಯಲ್ಲಿ ಕಾಣುವ ಜಿಪುಣ ಸುಬ್ಬಣ್ಣ ಹೆಗ್ಗಡೆ, ಇಲ್ಲಿ ವಿಶಾಲ ಹೃದಯದವನಾಗಿ ಕಾಣುವುದು, ಅಲ್ಲಿ ಸಣ್ಣವನಾದರೂ ವಿಚಾರವಂತಿಕೆಯುಳ್ಳ ಧರ್ಮುವನ್ನು ಕಂಡು ಆಶ್ಚರ್ಯವೆನಿಸಿದರೆ , ನಾಟಕದಲ್ಲಿ ಹಾಲುಗಲ್ಲದ, ಹುಡುಗಾಟದ ಪುಟ್ಟ ಹುಡುಗನಾಗಿ ವಾತ್ಸಲ್ಯ ಉಕ್ಕಿಸುವುದು, ಇನ್ನೂ ಕಾದಂಬರಿಯಲ್ಲಿ ಕಂಡಂತೆಯೇ ಇರುವ ಪಾತ್ರಗಳೆಂದರೆ ಗುತ್ತಿ, ನಾಗಕ್ಕ, ನಾಗತ್ತೆ, ಚಿನ್ನಕ್ಕಳ ಅಜ್ಜಿ, ಸಾಬರು, ಐಗಳು ಅದರಲ್ಲೂ ಚೀಂಕ್ರ ಹಾಗೂ ಚಿನ್ನಕ್ಕಳ ತಂದೆಯ ಪಾತ್ರಗಳು ಕಣ್ಣಿಗೆ ಕಟ್ಟಿದಂತೆಯೇ ನಾಟಕದಲ್ಲಿ ಅದ್ಭುತವಾಗಿ ನಟಿಸಿವೆ.

ಬೃಹತ್ ಅಂದರೆ ಸುಮಾರು ೭೫೦ ಪುಟಗಳ ಕಾದಂಬರಿಯನ್ನು (ಅಷ್ಟನ್ನು ಓದಲೂ ಸುಮಾರು ದಿವಸಗಳು ಬೇಕೆಂದಿರುವಾಗ!), ಕೇವಲ ೯ ಗಂಟೆಗಳ ಅವಧಿಯ ನಾಟಕದ ಮೂಲಕ ಎಲ್ಲಾ ಜನರಿಗೂ ಅರ್ಥವಾಗುವಂತೆ ದೃಶ್ಯ ರೂಪಕ್ಕೆ ಅಳವಡಿಸುವುದು ನಿಜಕ್ಕೂ ಕಷ್ಟಸಾಧ್ಯದ ಕೆಲಸ.  ಹಾಗಿರುವಾಗ ಇದನ್ನು ತಕ್ಕಮಟ್ಟಿಗೆ ಸಾಧಿಸಿದ ಸಿ.ಬಸವಲಿಂಗಯ್ಯ ಹಾಗೂ ತಂಡದವರು ನಿಜಕ್ಕೂ ಅಭಿನಂದನಾರ್ಹರು.  ಮಲೆನಾಡಿನಲ್ಲಿಯೇ ‘ಮಲೆ, ಮಳೆ’ ಇಲ್ಲವಾಗುತ್ತಿರುವ ಈ ಗ್ಲೋಬಲೈಸೇಷನ್ ಕಾಲದಲ್ಲಿ, ಬೆಂಗಳೂರಿನಂತಹ ‘ಮೆಟ್ರೋ’ ಪರಿಸರದಲ್ಲಿ ‘ಮದುಮಗಳ’ನ್ನು ಕರೆತಂದ ಅವರ ಸಾಹಸ ಮೆಚ್ಚಬೇಕಾದದ್ದೇ!  ಬಹಳಷ್ಟು ಜನ ನಾಟಕ ವೀಕ್ಷಿಸಿದ ಮಂದಿ, ನಂತರ ಪುಸ್ತಕವನ್ನು ಓದಿದ್ದು ಅಥವಾ ಓದಬೇಕೆಂದು ಆಶಿಸಿದ್ದು! ಈ ಮೂಲಕ ಮತ್ತೊಮ್ಮೆ ‘ಮಲೆಗಳಲ್ಲಿ ಮದುಮಗಳು’ ಪುಸ್ತಕವನ್ನು ಓದುವಂತೆ ಮಾಡಿದ ಯಶಸ್ವಿ ಅವರಿಗೆ ಸಲ್ಲತಕ್ಕದ್ದು!

ಕುವೆಂಪುರವರ ಕಾದಂಬರಿಯ ರಂಗ ರೂಪಾಂತರವೆಂದು ಬಿಂಬಿಸಿದ್ದಕ್ಕಾಗಿಯೇ ಹಾಗೂ ಬಹಳಷ್ಟು ಜನರು ಕಾದಂಬರಿಯನ್ನು ಓದದೇ ಬಂದದ್ದು ನಾಟಕದ ಯಶಸ್ಸಿಗೆ ಕಾರಣವಾಯಿತೆಂದು ಹೇಳಿದರೆ ತಪ್ಪಾಗಲಾರದು. ಕಾದಂಬರಿಯನ್ನು ಓದಿ ಮುಗಿಸಿದಾಗ ಒಂದನ್ನು ಪಡೆಯಲು, ಮತ್ತೊಂದನ್ನು ಕಳೆದುಕೊಳ್ಳಲೇಬೇಕೆಂಬ ಅನಿಸಿಕೆ / ವಿಷಾದ ಮೂಡಿದರೆ, ನಾಟಕವನ್ನು ನೋಡಿ ಬರುವಾಗ ನಮಗೆ ಯಾವ ಘಟನೆಗಳೂ ಕೂಡ ಮುಖ್ಯವಲ್ಲ, ಎಲ್ಲವೂ ಕಮರ್ಶಿಯಲೈಸ್ ಆಗಿಬಿಟ್ಟಿವೆ, ನಾಟಕದ ಅನೇಕ ಮಾತುಗಳು ಕೂಡ ಚಪ್ಪಾಳೆ ಗಿಟ್ಟಿಸುತ್ತವೆ ಹೊರತು ಮನಸ್ಸಿನಲ್ಲಿ ಚಿಂತನೆಯನ್ನು ಹುಟ್ಟು ಹಾಕುವುದಿಲ್ಲವಲ್ಲ ಎಂಬ ಕಳವಳವನ್ನು ಹುಟ್ಟು ಹಾಕುವುದು ಬದಲಾದ ಮನಸ್ಥಿತಿಯೇ?  ಯಾವುದಕ್ಕೂ ಮೊದಲಿಲ್ಲ, ಕೊನೆಯಿಲ್ಲ :(

Thursday, April 25, 2013

ಕಂಬಾರರ ‘ಶಿಖರ ಸೂರ್ಯ’ - ಕುವೆಂಪು ಅವರ ‘ಮಲೆಗಳಲ್ಲಿ ಮದುಮಗಳು’


ನನಗೆ ಕುವೆಂಪು ಎಂದರೆ ಚಿಕ್ಕಂದಿನಿಂದಲೂ ಅಷ್ಟಕಷ್ಟೆ. ಅಂದರೆ ಗೌರವ ಮಿಶ್ರಿತ ಭಯ (ಸ್ವಲ್ಪ ಗೌರವ, ಜಾಸ್ತಿ ಭಯ!) ಯಾಕೆಂದರೆ ಪರೀಕ್ಷೆಗಳಲ್ಲಿ ಕುವೆಂಪು ಅವರ ಪರಿಚಯವನ್ನು ವಿವರಿಸಿ ಎಂದು ೫ ಮಾರ್ಕಿಗೆ ಪ್ರಶ್ನೆ ಇದ್ದೇ ಇರುತ್ತಿತ್ತು.  ಕುವೆಂಪು - ಇವರ ಪೂರ್ಣ ನಾಮ ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ! ಇವರ ಕಾವ್ಯ ನಾಮ ಕುವೆಂಪು. ಇವರು ಬರೆದಿರುವ ಶ್ರೀ ರಾಮಾಯಣ ದರ್ಶನಂ ಎಂಬ ಕೃತಿಗೆ ಜ್ಞಾನಪೀಠ ಪ್ರಶಸ್ತಿ ದೊರಕಿದೆ. ಇವರು ನಮ್ಮ ರಾಷ್ಟ್ರ ಕವಿ. ಇವರು ಬರೆದ ಕಾದಂಬರಿಗಳು ಮಲೆಗಳಲ್ಲಿ ಮದುಮಗಳು, ಕಾನೂರು ಸುಬ್ಬಮ್ಮ ಹೆಗ್ಗಡಿತಿ. ಇದನ್ನು ಶಾಲೆಯಲ್ಲಿ ಚಿಕ್ಕವಳಿದ್ದಾಗ ಎಷ್ಟು ಸಲ ಬಾಯಿಪಾಠ ಮಾಡಿದ್ದೇನೋ! ಗೊತ್ತಿಲ್ಲ. ಇವರ ಕವನಗಳಾದ ‘ಬಾರಿಸು ಕನ್ನಡ ಡಿಂಡಿಮವ, ಜಯ ಭಾರತ ಜನನಿಯ ತನುಜಾತೆ, ಎಲ್ಲಾದರೂ ಇರು, ಎಂತಾದರೂ ಇರು, ಓ ನನ್ನ ಚೇತನ’, ಇವೆಲ್ಲವೂ ಶಾಲೆಯಲ್ಲಿ ಪ್ರತಿಭಾಪ್ರದರ್ಶನದಲ್ಲಿ ಪ್ರತಿಯೊಬ್ಬರ ನಾಲಿಗೆಯಲ್ಲಿ ಇಷ್ಟ ಬಂದ ರಾಗದಲ್ಲಿ ನಲಿದಾಡುತ್ತಿದ್ದವು. 

ಕುವೆಂಪು ಅವರ ಕೃತಿಗಳ ಹೆಸರನ್ನು ಕೇಳಿಯೇ ಭಯಪಡುತ್ತಿದ್ದ ನಾನು, ಅವರ ಕವನಗಳಲ್ಲಿರುತ್ತಿದ್ದ ಅರ್ಥವಾಗದ ಕ್ಲಿಷ್ಥ ಪದಗಳು, ಅವರ ಮೇಲಿದ್ದ ಭಯ ಇವೆಲ್ಲವುಗಳಿಂದಾಗಿ, ಅವರ ಕೃತಿಗಳು ನನ್ನನೆಂದೂ ಆಕರ್ಷಿಸಲಿಲ್ಲ.  ತೇಜಸ್ವಿಯವರ ಕೃತಿಗಳನ್ನು ೫ ನೇ ಕ್ಲಾಸಿನಲ್ಲಿದ್ದಾಗಲೇ ಓದುತ್ತಿದ್ದ ನಾನು, ಕುವೆಂಪು ಅವರ ರಕ್ತಾಕ್ಷಿ ನಾಟಕವನ್ನು ಹೊರತುಪಡಿಸಿದರೆ, ಯಾವುದನ್ನೂ ಇದುವರೆವಿಗೂ ಓದಿಲ್ಲ. ಶಾಲೆಯ ವಾರ್ಷಿಕೋತ್ಸವದಲ್ಲಿ ಪಾತ್ರ ವಹಿಸಲಿಕ್ಕಾಗಿ ಮಾತ್ರ ‘ರಕ್ತಾಕ್ಷಿ’ ಯನ್ನು ಓದಿದ್ದದ್ದು. ಕಾಲೇಜಿನ ಸಮಯದಲ್ಲಿ ಕಾನೂರು ಸುಬ್ಬಮ್ಮ ಹೆಗ್ಗಡಿತಿ, ಮಲೆಗಳಲ್ಲಿ ಮದುಮಗಳು ಪುಸ್ತಕಗಳನ್ನು ಎರವಲು ತಂದು ಓದಿದ್ದರೂ, ಅಷ್ಟಾಗಿ ಅರ್ಥವಾಗದೇ ಅರ್ಧಕ್ಕೆ ಕೈಬಿಟ್ಟಿದ್ದೆ!  ಕುವೆಂಪು ಅವರನ್ನು ನಾನು ದೂರವಿಟ್ಟಿದ್ದರಲ್ಲಿ ನನ್ನ ಶಿಕ್ಷಕರ ಪಾಲು ಕೂಡ ಇತ್ತೆನ್ನಿ!  ನಮ್ಮ ರಸ ಋಷಿ ಕುವೆಂಪು, ಅವರ ಕೃತಿಗಳು ಅಮೋಘ ಹಾಗೇ, ಹೀಗೆ  ಎಂದೆಲ್ಲಾ ವರ್ಣಿಸಿ, ವರ್ಣಿಸಿ, ನಮ್ಮಂಥವರು ಓದುವಂಥದ್ದಲ್ಲ ಎಂಬ ಭಾವ ಚಿಕ್ಕಂದಿನಲ್ಲಿಯೇ ಮೂಡಿಬಿಟ್ಟಿತ್ತು. ಕೀಳರಿಮೆ ಉಂಟಾಗಿಬಿಟ್ಟಿತ್ತು!.

ಇತ್ತೀಚೆಗೆ ನಾನು ಕಂಬಾರರ ‘ಶಿಖರ ಸೂರ್ಯ’ ಓದಿದ್ದೆ.  ಆ ಪುಸ್ತಕದ ಬೆನ್ನುಡಿಯಲ್ಲಿ ಲೇಖಕರೊಬ್ಬರು (ಹೆಸರು ನೆನಪಿಲ್ಲ), ‘ಮಲೆಗಳಲ್ಲಿ ಮದುಮಗಳು’ ಕಾದಂಬರಿಯಷ್ಟೇ ಉತ್ಕೃಷ್ಟ ಕೃತಿ ‘ಶಿಖರ ಸೂರ್ಯ’ ಎಂದು ಹೊಗಳಿದ್ದರು. ಹಾಗಾಗಿ ಅದನ್ನೂ ಕೂಡ ಓದಲು ಭಯವಾದರೂ, ಓದುತ್ತಾ ಹೋದಂತೆ ‘ಶಿಖರ ಸೂರ್ಯ’ ಮನದಲ್ಲಿ ಅಚ್ಚಾಗಿಬಿಟ್ಟಿತು.  ನಾಲ್ಕೈದು ದಿವಸಗಳು ‘ಶಿಖರ ಸೂರ್ಯ’ ಪಾತ್ರ ನನ್ನನ್ನು ಕೂತಲ್ಲಿ, ನಿಂತಲ್ಲಿ ಬಹಳವಾಗಿ ಕಾಡಿಸಿತ್ತು. ‘ಶಿಖರ ಸೂರ್ಯ’ನ ಮಹತ್ವಾಕಾಂಕ್ಷೆ, ಚಾಣಾಕ್ಷತನ, ಪ್ರೀತಿ, ಪ್ರೇಮ, ವಾತ್ಸಲ್ಯವನ್ನು ಬದಿಗಿಟ್ಟು, ತನ್ನ ಮಹತ್ವಾಕಾಂಕ್ಷೆ ಪೂರೈಸಿಕೊಳ್ಳಲು, ಎಲ್ಲಾ ತ್ಯಾಗಕ್ಕೂ ಸಿದ್ಧನಾಗುವುದು, ಮೋಸ, ವಂಚನೆ, ಬುದ್ಧಿವಂತಿಕೆ, ಹೆಣ್ಣಿನಾಸೆ, ಕೊನೆಗೆ ತನ್ನೆಲ್ಲಾ ದುರಾಸೆ, ಮೋಸಕ್ಕೆ ತಾನೇ ಬಲಿಯಾಗುತ್ತಾನೆ.  ಆತನ ಅಂತ್ಯಕ್ಕೆ ಆತನೇ ಕಾರಣವಾಗುವುದು ಪಾತ್ರ ದೃಷ್ಠಿಯಿಂದ ದುರಂತವಾದರೂ, ಕೆಟ್ಟವರ ಅಂತ್ಯ ಮಾತ್ರ ಕೆಟ್ಟದ್ದೇ ಆಗಿರುತ್ತದೆ ಎಂಬ ತತ್ವ ಮನಸ್ಸಿಗೆ ಸಾಂತ್ವನ ನೀಡುವುದು. ಹಾಗೂ ಆತನ ಮಗಳು, ಅಳಿಯ ಒಳ್ಳೆಯತನದ ಪ್ರತೀಕಗಳಂತೆ ಕಂಡು ಬಂದು, ಕಥೆ ಸುಖಾಂತ್ಯಗೊಳ್ಳುತ್ತದೆ.  ಇಡೀ ಕಾದಂಬರಿ ಓದುವಾಗ ‘ಶಿಖರ ಸೂರ್ಯ’ ಪಾತ್ರ ರಚನೆ ಅದ್ಬುತವಾಗಿದ್ದೂ, ಮನಸ್ಸನ್ನು ಸೂರೆಗೊಂಡರೂ ಕೂಡ, ಇದೊಂದು ಕಾಲ್ಪನಿಕ ಕಾದಂಬರಿ ಮಾತ್ರ, ನಿಜ ಜೀವನದಲ್ಲಿ ಇಂಥದ್ದು ನಡೆಯಲಾರದು ಎಂಬ ಎಚ್ಚರ ಅನುಕ್ಷಣವೂ ಓದುಗರಲ್ಲಿರುವಂತೆ ಸನ್ನಿವೇಶಗಳೂ ರಚನೆಗೊಂಡಿವೆ.  ಹಾಗಾಗಿ ಓದಲು ಮುದ ನೀಡಿದರೂ, ತಲ್ಲೀನರಾಗುವುದು ಸಾಧ್ಯವಿಲ್ಲ. ಇದು ಇಡೀ ಕಾದಂಬರಿಯ ‘ಮಿತಿ’ ಯಾಗಿಬಿಡುತ್ತದೆ.

‘ಶಿಖರ ಸೂರ್ಯ’ ವನ್ನು ‘ಮಲೆಗಳಲ್ಲಿ ಮದುಮಗಳು’ ಜೊತೆ ಹೋಲಿಸಿ ನೋಡಿದ್ದಾರೆ ಎಂಬುದನ್ನು ತಿಳಿದಕೂಡಲೇ ಆ ತಕ್ಷಣವೇ ಕುವೆಂಪು ಅವರ ಆ ಪುಸ್ತಕವನ್ನು ಓದಬೇಕು ಎಂಬ ಹಪಾಹಪಿ ಶುರುವಾಯಿತು.  ಅಷ್ಟರಲ್ಲಿ ‘ಮಲೆಗಳಲ್ಲಿ ಮದುಮಗಳು’ ನಾಟಕ ಬೆಂಗಳೂರಿನಲ್ಲಿ ಪ್ರದರ್ಶಿತಗೊಳ್ಳಲು ಅನುವಾಗಿದೆ ಎಂಬ ವಿಷಯ ಈ ಸಂದರ್ಭದಲ್ಲಿ ತಿಳಿದು ಬಂದಿತು. ಎರಡು ವರ್ಷಗಳ ಹಿಂದೆ ‘ಮಲೆಗಳಲ್ಲಿ ಮದುಮಗಳು’ ಕೃತಿಯನ್ನು ಸಿ. ಬಸವಲಿಂಗಯ್ಯನವರು ರಂಗಪ್ರಯೋಗವಾಗಿ ಅಳವಡಿಸಿದ್ದಾರೆ, ಮೈಸೂರಿನ ರಂಗಾಯಣದಲ್ಲಿ ಪ್ರದರ್ಶಿತಗೊಳ್ಳುತ್ತಿದೆ, ಇಡೀ ರಾತ್ರಿ ೯ ಗಂಟೆಗಳ ಸಮಯವಂತೆ, ಬಹಳ ಚೆನ್ನಾಗಿದೆಯಂತೆ ಎಂಬುದನ್ನೆಲ್ಲಾ ಸ್ನೇಹಿತರ ಬಾಯಲ್ಲಿ ಕೇಳಿ, ಖುಷಿಗೊಂಡ ನಾನು ಇನ್ನಿಲ್ಲದಂತೆ ಆ ನಾಟಕಕ್ಕೆ ಹೋಗಲು ಪ್ರಯತ್ನ ಮಾಡಿದ್ದೆ.  ಆದರೆ ಟಿಕೇಟ್ ದೊರಕದೆ ನಿರಾಶಳಾಗಿದ್ದೆ.  ಮತ್ತೆ ಇದೀಗ ಬೆಂಗಳೂರಿನಲ್ಲಿ ಪ್ರದರ್ಶಿತಗೊಳ್ಳುತ್ತಿದೆ ಎಂದಾಗ ಮೊಟ್ಟ ಮೊದಲಿಗೆ ನಾನು ಮಾಡಿದ್ದು ಮತ್ತೊಮ್ಮೆ ಆ ಪುಸ್ತಕವನ್ನು ಓದಲು ಶುರು ಮಾಡಿದ್ದು.  ಸುಮಾರು ೭೫೦ ಪುಟಗಳ ಆ ಪುಸ್ತಕವನ್ನು ನಾನು ೩ ದಿವಸಗಳಲ್ಲಿಯೇ ಓದಿ ಮುಗಿಸಿಬಿಟ್ಟೆ!  ಅಷ್ಟು ಸರಳವಾಗಿ ಬರೆದಿದ್ದಾರೆಯೇ ಕುವೆಂಪು?  ನನಗೆ ಆಶ್ಚರ್ಯ.  ಯೋಚಿಸಿದಾಗ ಹೊಳೆದಿದ್ದು - ಇತ್ತೀಚಿಗೆ ಹೆಚ್ಚಾಗಿರುವ ನನ್ನ ಹಾಗೂ ಮಲೆನಾಡಿನ ಬಾಂಧವ್ಯ, ತೀರ್ಥಹಳ್ಳಿ ಗೆಳೆಯರೊಂದಿಗೆ ಒಡನಾಡಿ, ಮಾತಾಡಿ, ಸರಳ ಸುಲಲಿತ, ನನ್ನದೇ ಮನೆ ಭಾಷೆಯೇನೋ ಎನ್ನುವಂತಾಗಿರುವ ಅಲ್ಲಿಯ ಗೌಡ್ರು ಭಾಷೆ!, ಹೋಗಿ ಬಂದು, ಸುಲಭವಾಗಿ ಅರ್ಥವಾಗುವ ಭೌಗೋಳಿಕ ಪ್ರದೇಶಗಳು, ಹೀಗೆ... ಅನೇಕ ಕಾರಣಗಳಿಂದ ಮಲೆಗಳಲ್ಲಿ ಮದುಮಗಳು (ನಮ್ಮ ಮನೆಯ ಕಥೆಯೇನೋ ಎಂಬಂತೆ) ಆರಾಮವಾಗಿ ಓದುವಂತಾಯಿತು. ಮಲೆನಾಡಿಗರಿಗೆ ಕಥೆ, ಕವನಗಳ ಬಗ್ಗೆ ಆಸಕ್ತಿ ಹೆಚ್ಚಲು ಇಂತಹ ಕೃತಿಗಳು ಕಾರಣವಾಗಿರಬಹುದು ಎಂದು ಕೂಡ ಅನಿಸಿತು.  

‘ಶಿಖರ ಸೂರ್ಯ’ ಕ್ಕೆ ಹೋಲಿಸಿದರೆ  ‘ಮಲೆಗಳಲ್ಲಿ ಮದುಮಗಳು’ ಓದುವಾಗ ಪ್ರತಿಯೊಂದು ಪಾತ್ರವೂ ಅದ್ಭುತವಾಗಿ ರಚನೆಯಾಗಿರುವುದಲ್ಲದೆ, ಓದುತ್ತಾ ಹೋದಂತೆ ನಾವೇ ಆ ಪಾತ್ರಗಳಾಗಿರುತ್ತೇವೆ.  ನಿಧಾನವಾಗಿ ಮಲೆನಾಡಿನ ಪರಿಸರ, ಕಾಡು, ಮಳೆ, ಬೇಟೆ, ಅಲ್ಲಿನ ಒಕ್ಕಲಿಗರು, ಹೊಲೆಯರು, ಹಸಲರು, ಅಡಿಕೆ ತೋಟ, ಗುಡಿಸಲು, ಜನರ ದಿನಚರಿಯಾಗಿರುವ ಕಳ್ಳು ಕುಡಿತ, ಇವೆಲ್ಲವೂ ಮತ್ತೇರಿಸುತ್ತವೆ. ಸ್ವಲ್ಪ ಮಟ್ಟಿಗೆ ಮಲೆನಾಡಿನ ಜನಜೀವನ ಹಾಗೂ ಒಕ್ಕಲಿಗರ ಭಾಷೆಯ ಬಗ್ಗೆ ತಿಳುವಳಿಕೆ ಇದ್ದರಂತೂ, ಸಮಯ ಕಳೆದದ್ದೇ ಗೊತ್ತಾಗುವುದಿಲ್ಲ. ೧೫೦ ವರ್ಷಗಳ ಹಿಂದಿನ ಕಾಲ್ಪನಿಕ?! ‘ಕಥೆ’ ಅತ್ಯಂತ ನೈಜತೆಯಿಂದ ಕಣ್ಣ ಮುಂದೆ ಕುಣಿಯುತ್ತದೆ. ಎರಡು ಮುಖ್ಯ ಕಥೆಗಳ ನಡುವೆ, ಅಲ್ಲಲ್ಲಿ ಉಪಕಥೆಗಳು ಇಣುಕುತ್ತವೆ. ಗುತ್ತಿ, ಆತನ ನಾಯಿ ಹುಲಿಯ, ಆತ ತನ್ನ ಪ್ರೇಮಿ ‘ತಿಮ್ಮಿ’ ಯನ್ನು ಅಪಹರಿಸುವ ಪ್ರಯತ್ನ, ‘ತಿಮ್ಮಿ’ ಯನ್ನು ಮತ್ತೊಬ್ಬ ‘ಬಚ್ಚ’ ಎಂಬಾತನಿಗೆ ಮದುವೆ ಮಾಡಿಕೊಡಲು (ಆತ ಕ್ರೈಸ್ತನಾಗುವ ಹವಣಿಕೆಯಲ್ಲಿದ್ದಾನೆಂದು ತಿಳಿದು ಇಷ್ಟವಿಲ್ಲದಿದ್ದರೂ) ಆ ಊರ ಗೌಡನ ಒಕ್ಕಲಾದದಕ್ಕಾಗಿ ಒಪ್ಪಿಗೆ ನೀಡುವ ಆಕೆಯ ತಂದೆ, ತಾಯಿ, ಪರೋಕ್ಷವಾಗಿ ‘ತಿಮ್ಮಿ’ ತಪ್ಪಿಸಿಕೊಳ್ಳಲು ಸಹಾಯ ಮಾಡುವ ಆಕೆಯ ತಾಯಿ, ಈ ಮಧ್ಯೆ ನಡೆಯುವ ತಮ್ಮ ತಮ್ಮ ಆಳುಗಳಿಗಾಗಿ ನಡೆಯುವ ಅನೇಕ ರಾಜಕೀಯ (ಗೌಡರ ಮಧ್ಯೆ) ಕಾರಣಗಳು, ಅಲ್ಲಿ ಬೇರೊಬ್ಬರ ತಪ್ಪಿಗೆ ಬಲಿಯಾಗುವ ಗುತ್ತಿ, ಪೋಲೀಸರ ಭಯದಿಂದ ಆತನ ಓಡಿ ಹೋಗುವ ಹವಣಿಕೆ, ಜೊತೆಯಲ್ಲಿ ಪ್ರೀತಿಸಿ, ಮದುವೆಯಾದವಳನ್ನು ಕೂಡ ತನ್ನೊಟ್ಟಿಗೆ ಎಷ್ಟೇ ಕಷ್ಟವಾದರೂ ಕರೆದೊಯ್ಯುವ ಹಂಬಲ, ಇವೆಲ್ಲದರ ನಡುವೆ ಬೇಡ, ಬೇಡವೆಂದರೂ ತನ್ನ ಮಾಲೀಕ ಗುತ್ತಿಯನ್ನು ನಿಷ್ಟೆಯಿಂದ ಹಿಂಬಾಲಿಸುವ ಹುಲಿಯ....  ಗುತ್ತಿ ಈ ಎಲ್ಲ ಗೋಜಲುಗಳಿಂದ ತಪ್ಪಿಸಿಕೊಂಡು ತನ್ನ ಪತ್ನಿಯನ್ನು ಕರೆದುಕೊಂಡು ಊರು ಬಿಟ್ಟೇ ಹೋದರೂ, ಹುಲಿಯನನ್ನು ಕರೆದುಕೊಂಡು ಹೋಗಲಾಗದ ಆತನ ಅಸಹಾಯಕತೆ ಹಾಗೂ ಮಳೆಯಿಂದಾಗಿ ತುಂಬಿ ಹರಿಯುತ್ತಿದ್ದ ರಾಮತೀರ್ಥದಲ್ಲಿ ಈಜಲು ಸಾಧ್ಯವಾಗದೇ ಬಲಿಯಾಗುವ ಹುಲಿಯ, ಕಣ್ಣಲ್ಲಿ ನೀರು ತರಿಸುತ್ತದೆ.

ಮತ್ತೊಂದು ಮುಖ್ಯ ಕಥೆಯಾದ ಮುಕುಂದಯ್ಯ ಹಾಗೂ ಚಿನ್ನಕ್ಕನ ಮದುವೆ ಕೂಡ ಸ್ವಲ್ಪ ಮಟ್ಟಿಗೆ ಗುತ್ತಿಯ ಕಥೆಯನ್ನೇ ಹೋಲಿದರೂ, ಮುಕುಂದಯ್ಯನಿಗೆ ತನ್ನ ಚಿಕ್ಕಂದಿನ ಒಡನಾಡಿಗಳು ಹಾಗೂ ಪ್ರಸ್ತುತ ಆಳುಗಳಾದ ಐತ ಹಾಗೂ ಪೀಂಚಲುವಿನ ಸಹಾಯದಿಂದ ಅವರ ಕಥೆಯು ಸುಖಾಂತ್ಯವನ್ನು ಕಾಣುತ್ತದೆ.  ಈವೆರಡು ಕಥೆಗಳ ನಡುವೆ ಮನೆಮನೆಗಳಲ್ಲಿ ನಡೆಯುವಂತೆ ಅನೇಕ ಉಪಕಥೆಗಳು ನಡೆಯುತ್ತವೆ. ಕಾವೇರಿಯ ಅತ್ಯಾಚಾರ, ಸಾಬರುಗಳ ಅನಾಚಾರ, ಕ್ರೈಸ್ತರ ಮತಾಂತರದ ಹುನ್ನಾರ, ಶ್ರೀಮಂತ ಬ್ರಾಹ್ಮಣರ ದಬ್ಬಾಳಿಕೆ, ನಾಗಕ್ಕ, ನಾಗತ್ತೆಯ ಬದುಕಿನ ಗೋಳು, ಇವೆಲ್ಲದರ ನಡುವೆ ಐತ ಹಾಗೂ ಪೀಂಚಲುವಿನ ಪ್ರೇಮ ದಾಂಪತ್ಯ (ಇದ್ದರೇ ಹೀಗಿರಬೇಕು ಎನ್ನುವಂಥ), ಅದರಲ್ಲೂ ಪೀಂಚಲುವಿನ ಪಾತ್ರ ಮೆಚ್ಚುಗೆಯಾಗುತ್ತದೆ. ಇಲ್ಲಿನ ಪಾದ್ರಿ, ಜನರನ್ನು ಬಲವಂತವಾಗಿ ಕ್ರೈಸ್ತರಾಗಿ ಮತಾಂತರಗೊಳಿಸುತ್ತಿದ್ದನ್ನು ನೋಡಿ ಹೇಳುವ ಬಿಳಿ ಪಾದ್ರಿ (ವಿದೇಶಿ)ಯ ಮಾತುಗಳು - ಔಷಧೋಪಚಾರ, ವಿದ್ಯಾಭ್ಯಾಸ ಮೊದಲಾದ ಸಹಾಯಗಳ ಮೂಲಕ ಜನರ ಮನಸ್ಸನ್ನು ಗೆದ್ದು ತರುವಾಯವೇ ಅವರಷ್ಟಕ್ಕೇ ಅವರು ಮತಾಂತರಗೊಳ್ಳುವಂತೆ ಮಾಡಬೇಕು ಎಂಬುದು, ಇದುವರೆವಿಗೂ ನನಗೆ ಹೊಳೆಯದಿದ್ದ ಆಲೋಚನೆಯನ್ನು ಹುಟ್ಟು ಹಾಕಿತು.  ನಮ್ಮಲ್ಲಿ ದಲಿತರು, ಬಡವರು ಏಕೆ ಕ್ರೈಸ್ತರಾಗುತ್ತಿದ್ದಾರೆ? ಎಂಬುದಕ್ಕೆ ಉತ್ತರವನ್ನು ಕೂಡ ನೀಡಿತು!  ಮತ್ತೊಂದು ಅಂಶ ನನಗೆ ಕಂಡು ಬಂದದ್ದು - ಹೆಂಗಸರು ತಮ್ಮ ಕಾಮ ತೃಷೆ ತೀರಿಸಲು ಮಾತ್ರ ಎಂಬ ಗೌಡರು, ಹೊಲೆಯರೆನ್ನದೆ ಎಲ್ಲ ಗಂಡಸರ ಧೋರಣೆ! ಹೆಂಡತಿಯಲ್ಲದಿದ್ದರೆ ಕೂಡಿಕೆಯಾದರೂ ಸರೀ ಒಟ್ಟಿನಲ್ಲಿ ಹೆಣ್ಣಿನ ಸಂಗ ಸುಖಕ್ಕಾಗಿ (ಆಕೆಯ ಮನಸ್ಸನ್ನರಿಯದೆ!) ಹಂಬಲಿಸುವುದು ನನಗೊಂದಿಷ್ಟು ಕಳವಳ, ಆತಂಕ ಹುಟ್ಟಿಸಿತು. ಗೆಳೆಯನೊಬ್ಬ ದೆಹಲಿಯ ಅತ್ಯಾಚಾರವಾದಾಗ ಹೇಳುತ್ತಿದ್ದ ಮಾತುಗಳು ಬೇಡಬೇಡವೆಂದರೂ ನೆನಪಾಗಿ (ನಮ್ಮ ಸಮಾಜದಲ್ಲಿ ಯಾವತ್ತಿಗೂ ಹೆಣ್ಣು ಕಮಾಡಿಟಿ!, ಆ ಮನಸ್ಥಿತಿ ಸರಿಯಾಗದೇ ಇಂತದ್ದನ್ನು ತಡೆಯಲಾಗದು...) ದುಃಖವಾಯಿತು.

ಇವೆಲ್ಲವೂ ಬದುಕಿನಲ್ಲಿ ನಡೆಯುವಂಥದ್ದೇ, ಎಲ್ಲೂ ಉತ್ರೇಕ್ಷೆಯಾಗಲೀ, ಕಲ್ಪನೆಯಾಗಲೀ ಇಲ್ಲವೇ ಇಲ್ಲ ಎಂದು ಅನಿಸುತ್ತಿರುವಾಗಲೇ, ಮಧ್ಯೆ ಗಡ್ಡದಯ್ಯ ಎಂಬ ಪಾತ್ರವು ಕಾದಂಬರಿಯಲ್ಲಿ ಕಾಣಿಸುತ್ತದೆ. ಆತನ ಅತೀಂದ್ರಿಯ ಜ್ಞಾನ, ‘ವಿವೇಕಾನಂದರು ಭರತ ಖಂಡವನ್ನೆಲ್ಲ ಸಂಚರಿಸಿ, ಬೋಧಿಸಿ ಹಿಂದೂ ಧರ್ಮವು ಬ್ರಾಹ್ಮಣ ಪುರೋಹಿತರಿಂದ ಪಾರಾಗಿ, ಕ್ರೈಸ್ತಾದಿ ಮತ ಪ್ರಚಾರಕರಿಗೆ ದುರ್ಗಮವಾಗಿ......’ ಇತ್ಯಾದಿ ಹೇಳುವ ಮಾತುಗಳು, ಆತ ಮುಕುಂದಯ್ಯನನ್ನು ಉದ್ಧೇಶಿಸಿ, ಆತನ ವಂಶದಲ್ಲಿ ಮುಂದೆ ಹುಟ್ಟಲಿರುವ ಮಗು ರಾಮಕೃಷ್ಣ ಪಂಥವನ್ನು ಉದ್ದರಿಸುವುದು ..... ಎಂಬಿತ್ಯಾದಿ ಮಾತುಗಳು ನನಗೆ ಕಸಿವಿಸಿಯನ್ನುಂಟು ಮಾಡಿತು.  ಮನಸ್ಸಿನ ಒಂದು ಮೂಲೆಯಲ್ಲಿ, ‘ಕುವೆಂಪು’ ಅವರು ತಮ್ಮನ್ನು ಉದ್ದೇಶಿಸಿಕೊಂಡೇ ಹೀಗಂದಿರಬಹುದೇ? ಎಂಬ ಅನುಮಾನ ಕಾಡತೊಡಗಿತು.  ಎರಡೂ ಕಾದಂಬರಿಗಳು ಸುಖಾಂತ್ಯವನ್ನೇ ಕಂಡಿದ್ದರೂ ಕೂಡ, ‘ಮಲೆಗಳಲ್ಲಿ ಮದುಮಗಳು’ ಓದಿ ಮುಗಿಸಿದೊಡನೇ ಒಂದು ರೀತಿಯ ವಿಷಾದ ಮನವನ್ನು ಆವರಿಸುತ್ತದೆ. ಒಂದನ್ನು ಪಡೆಯಲು ಮತ್ತೊಂದನ್ನು ಕಳೆದುಕೊಳ್ಳುವುದು ಅವಶ್ಯ ಎಂಬ ಸತ್ಯದ ಅರಿವಾಗಿ ಸಂಕಟ ಶುರುವಾಗುತ್ತದೆ!

Friday, March 15, 2013

ಸಿಂಪಲ್ಲಾಗೊಂದು......................


ಟಿವಿಯಲ್ಲಿ ಆಗ ತಾನೇ ಪ್ರಾರಂಭಗೊಂಡಿದ್ದ ದೈನಿಕ ಧಾರಾವಾಹಿಗಳನ್ನು ಇಷ್ಟ ಪಟ್ಟು, ತಮ್ಮೆಲ್ಲಾ ಕೆಲಸ ಕಾರ್ಯಗಳನ್ನು ಬಿಟ್ಟು ನೋಡುತ್ತಿದ್ದ ಹೆಂಗಳೆಯರು, ಐಟಿ, ಬಿಟಿ ಇಂಡಸ್ಟ್ರಿಗಳಿಂದಾಗಿ ಏರು ಪೇರಾದ ಸಮಯದ ಅಭಾವ, ಜೊತೆಗೆ ಅಲ್ಪಸ್ವಲ್ಪ ಸಮಯ ದೊರೆತಾಗ ಬೇರೆ ಭಾಷೆಯ ಚಿತ್ರಗಳ ಪೈರಸಿ ಸಿಡಿಗಳನ್ನು ಮನೆಯಲ್ಲಿಯೇ ನೋಡುವ ವ್ಯವಸ್ಥೆ, ಜೊತೆಗೆ ಅದದೇ ರವಿಚಂದ್ರನ್ ಚಿತ್ರಗಳಲ್ಲಿನ  ಹೀರೋಯಿನ್ ಗಳ ಆಪಲ್?! ಹೊಕ್ಕುಳುಗಳು,  ಉಪೇಂದ್ರರ ಹುಚ್ಚುತನ, ಶಿವರಾಜ್ ಕುಮಾರ್, ರಾಧಿಕಾ ಅಣ್ಣ ತಂಗಿ ಸೆಂಟಿಮೆಂಟ್, ರಮೇಶ್ ನ ತ್ಯಾಗ ರಾಜ ಚಿತ್ರಗಳು, ಸುದೀಪ್, ದರ್ಶನ್ ನ ಲಾಂಗು ಮಚ್ಚು ಚಿತ್ರಗಳು, ಜಗ್ಗೇಶ್, ಸಾಧು ಕೋಕಿಲ ರವರ ಹಳಸಲು ಹಾಸ್ಯ ನೋಡಿ ಬೇಸತ್ತಿದ್ದ ಕನ್ನಡದ ಜನತೆ, ಚಿತ್ರಮಂದಿರಗಳತ್ತ ಬೆನ್ನು ಹಾಕಿಬಿಟ್ಟಿದ್ದರು.  

ಇಂಥ ಸಮಯದಲ್ಲಿ ರಿಲೀಸ್ ಆದ ‘ಮುಂಗಾರು ಮಳೆ’ ಚಿತ್ರ, ಛಾಯಾಗ್ರಹಣದಿಂದ ಹಿಡಿದು ಹಾಡುಗಳ ತನಕವೂ ಎಲ್ಲವೂ ಹೊಸತನದಿಂದ ಕೂಡಿತ್ತು. ಅನಂತನಾಗ್ ಅವರ ಸಹಜ ನಟನೆ, ಗಣೇಶ್ ನಗುನಗುತ್ತಲೇ ಮಾತಾಡುವ ಪರಿ, ಅದಕ್ಕೆ ತಕ್ಕಂತೆ ಇದ್ದ ಸಂಭಾಷಣೆ,  ಬಳಸಿಕೊಂಡಂತಹ ಪ್ರಾಪ್ಸ್ (ಮೊಲ, ಮಳೆ, ಮುಂತಾದವು), ಪೋಷಕ ಪಾತ್ರದವರ ಅದ್ಭುತ ನಟನೆ ಎಲ್ಲವೂ ಕೂಡ ‘ಮುಂಗಾರು ಮಳೆ’ ಒಂದು ದೃಶ್ಯಕಾವ್ಯದಂತೇ ಪ್ರತಿಯೊಬ್ಬರನ್ನೂ ಮೋಡಿ ಮಾಡಿಬಿಟ್ಟಿತು. ಇಷ್ಟೊಂದು ಮಂದಿ ವೀಕ್ಷಕರು ಇಷ್ಟು ದಿವಸ ಎಲ್ಲಿ ಅಡಗಿದ್ದರು? ಎಂದು ಕನ್ನಡ ಚಿತ್ರರಂಗ ಮೂಗಿನ ಮೇಲೆ ಬೆರಳಿಟ್ಟು ನೋಡಿತ್ತು. ನಿರ್ದೇಶಕ ಮಾತ್ರ ಈ ಚಿತ್ರದ ಅದ್ಭುತ ಯಶಸ್ಸಿಗೆ ಕಾರಣವಾಗಿರಲಿಲ್ಲ.  ಈ ಚಿತ್ರಕ್ಕಾಗಿ ದುಡಿದ ಪ್ರತಿಯೊಬ್ಬರೂ ಕೂಡ ಒಬ್ಬರಿಗೊಬ್ಬರು ಪೂರಕವಾಗಿ ಕೆಲಸ ಮಾಡಿದ್ದರು. ಈ ಚಿತ್ರವು ಪ್ರಪ೦ಚದಾದ್ಯಂತ ಮಲ್ಟಿಪ್ಲೆಕ್ಸ್ ಗಳಲ್ಲಿ ಒಂದು ವರ್ಷ! ಓಡಿದ ಮೊದಲ ಚಿತ್ರ ಎಂಬ ಹೆಸರು ಕೂಡ ಗಳಿಸಿಕೊಂಡುಬಿಟ್ಟಿತು. ಈಗಲೂ ಕೂಡ ಈ ಚಿತ್ರವನ್ನು ನೋಡುತ್ತಿದ್ದರೆ ಯಾವುದಾದರೂ ಸಾಹಿತ್ಯವನ್ನು ಓದುತ್ತಿರುವ ಭಾಸವಾಗುತ್ತದೆ.  ಚಿತ್ರದಷ್ಟೇ ಪ್ರಖ್ಯಾತಿಯಾಗಿದ್ದು ಅದರ ಮೇಕಿಂಗ್ ಬಗೆಗಿನ ಪುಸ್ತಕ. ಇನ್ನು ಮುಂದೆ ಕನ್ನಡ ಚಿತ್ರರಂಗದವರನ್ನು ಹಿಡಿಯುವವರೇ ಇಲ್ಲ ಎನ್ನುವಂಥ ಆಶಾಭಾವನೆಯನ್ನು ಈ ಚಿತ್ರ ಹುಟ್ಟುಹಾಕಿದ್ದಂತೂ ಸುಳ್ಳಲ್ಲ. 

ದುರಂತವೆಂದರೆ ಮುಂಗಾರು ಮಳೆ ಚಿತ್ರ ರಿಲೀಸ್ ಆಗಿ ೬, ೭ ವರ್ಷಗಳು ಕಳೆದರೂ ಕೂಡ ಅಂತಹದೊಂದು ಘಟನೆ ಕನ್ನಡ ಚಿತ್ರರಂಗದಲ್ಲಿ ಪುನರಾವರ್ತನೆಯಾಗದೇ ಇದ್ದದ್ದು, ಅಂತಹದೊಂದು ಚಮತ್ಕಾರಕ್ಕಾಗಿ ಈಗಲೂ ಹಗಲಿರುಳು ಪ್ರಯತ್ನ ಪಡುತ್ತಿರುವ ಕನ್ನಡ ನಿರ್ಮಾಪಕ, ನಿರ್ದೇಶಕರು! ಆದರೆ ಪರಿಸ್ಥಿತಿ ಮಾತ್ರ ಶೋಚನೀಯ. ಅಲ್ಲೊಂದು, ಇಲ್ಲೊಂದು ಆಶಾದಾಯಕ ಬೆಳವಣಿಗೆ ಕಂಡು ಬಂದರೂ ಕೂಡ, ಯಾರಿಗೂ ಕೂಡ ‘ಮುಂಗಾರು ಮಳೆ’ ಎಫೆಕ್ಟ್ ನಿಂದ ಹೊರಗೆ ಬರಲಾಗಲಿಲ್ಲ. ನಮ್ಮ ಸಿನೆಮಾರಂಗದಲ್ಲೊಂದು ಮೂಢನಂಬಿಕೆ. ಉದಾಹರಣೆಗೆ  ಬುಧವಾರ ಚಿತ್ರದ ಶೂಟಿಂಗ್ ಶುರುವಾಗಿದ್ದು, ಆ ಚಿತ್ರ ೧೦೦ ದಿವಸಗಳು ಓಡಿಬಿಟ್ಟರೆ, ಇನ್ನು ಮುಂದೆ ಆ ನಿರ್ಮಾಪಕ, ನಿರ್ದೇಶಕ, ನಟ, ನಟಿಯರು ತಮ್ಮ ಮುಂದಿನ ಚಿತ್ರಗಳನ್ನೆಲ್ಲಾ ಬುಧವಾರವೇ ಶುರು ಮಾಡುತ್ತಾರೆ, ಅಥವಾ ಆ ಹೀರೋಯಿನ್ ಳ ಐಟಮ್ ಡಾನ್ಸ್ ಇದ್ದು ಆ ಚಿತ್ರ ಸಕ್ಸಸ್ ಆದರೆ, ಇನ್ನು ಮುಂದಿನ ಚಿತ್ರಗಳಲ್ಲಿ ಬೇಕಂತಲೇ ಆಕೆಯ ನೃತ್ಯವನ್ನು ತುರುಕುತ್ತಾರೆ.... ಹೀಗೆ.  ಮುಂಗಾರು ಮಳೆ ಚಿತ್ರದ ಅತ್ಯದ್ಭುತ ಯಶಸ್ಸಿನಿಂದಾಗಿ ಕನ್ನಡ ಚಿತ್ರರಂಗದಲ್ಲಿ ಈ ಮೊದಲೇ ಇದ್ದ ಈ ಮೂಢನಂಬಿಕೆಗೆ ಇಂಬು ಸಿಕ್ಕಿ, ಆ ಚಿತ್ರದಲ್ಲಿದ್ದ ಡೈಲಾಗ್ಸ್ ಆಗಬಹುದು ಅಥವಾ ಹಾಡುಗಳಾಗಬಹುದು, ನಟ, ನಟಿ, ನಿರ್ದೇಶಕರಾಗಿರಬಹುದು, ಈ ಕಾರಣಕ್ಕಾಗಿಯೇ ಆ ಚಿತ್ರಕ್ಕೆ ಯಶಸ್ಸು ಸಿಕ್ಕಿದೆಯೆಂದು ತಮಗನ್ನಿಸಿದ ಕಾರಣಗಳನ್ನಿಟ್ಟುಕೊಂಡು ಈಗಲೂ ಅದರ ನಿಟ್ಟಿನಲ್ಲೇ ತಯಾರಾಗುತ್ತಿರುವ ಚಿತ್ರಗಳು! ಅದರಲ್ಲೊಂದು ‘ಸಿಂಪಲ್ಲಾಗೊಂದು ಲವ್ ಸ್ಟೋರಿ’!

ಸಾಮಾಜಿಕ ತಾಣದಲ್ಲಿ ಮೊದಲಿಗೆ ‘ಕಿರು ಚಿತ್ರ’ ದಂತೆ ಟ್ರೇಲರ್ ರಿಲೀಸ್ ಮಾಡಿ, ಅದರ ಅತ್ಯದ್ಭುತ ಯಶಸ್ಸಿನಿಂದ ಸ್ಪೂರ್ತಿಗೊಂಡು, ತಯಾರಾದ ಈ ಚಿತ್ರ, ಹೊಸದೊಂದು ಟ್ರೆಂಡ್ ಹುಟ್ಟು ಹಾಕಿತು. ಫೇಸ್ ಬುಕ್ ವಾಲ್ ಗೆ ಅಂಟಿಕೊಂಡಿರುವ ಜನರು ಚಿತ್ರದ ಟ್ರೇಲರ್ ಅನ್ನು ಮುಗಿಬಿದ್ದು ನೋಡಿ, ತಾ ಮುಂದೆ, ನಾ ಮುಂದೆ ಎಂಬಂತೆ ಶೇರ್ ಮಾಡಿದರು. ಚಿತ್ರದ ಮುಹೂರ್ತ ಶುರುವಾಗುವ ಮೊದಲೇ ಯಶಸ್ಸಾಗುವ ಎಲ್ಲಾ ಲಕ್ಷಣಗಳು ಈ ಮೂಲಕ ಕಂಡುಬಂದಿತು. ಟ್ರೇಲರ್ ನಲ್ಲಿದ್ದ ಪಟಾಕಿಯಂಥ ಡೈಲಾಗ್ಸ್, ಚಿನಕುರಳಿಯಂಥ ನಾಯಕ, ನಾಯಕಿ, ಒಳ್ಳೇ ಕ್ಯಾಮೆರಾ ವರ್ಕ್ ಎಲ್ಲವೂ ಕೂಡ ಚಿತ್ರದ ಬಿಡುಗಡೆಯಾಗುವ ಮುನ್ನವೇ, ಚಿತ್ರ ಎಂದು ಬಿಡುಗಡೆಯಾದೀತೋ? ಎಂಬ ಕಾತುರವನ್ನು ಪ್ರೇಕ್ಷಕರಲ್ಲಿ ಉಂಟು ಮಾಡಿತು. ತಂಡದಲ್ಲಿ ಪ್ರತಿಯೊಬ್ಬರೂ ಹೊಸಬರಾಗಿದ್ದರಿಂದ ಸಾಮಾಜಿಕ ತಾಣಗಳನ್ನು ತಮ್ಮ ಪಬ್ಲಿಸಿಟಿಗಾಗಿ ಬಳಸಿಕೊಂಡಿದ್ದು, ಆ ಮೂಲಕ ಕನ್ನಡ ಚಿತ್ರರಂಗಕ್ಕೆ ಆಶಾದಾಯಕ ಬೆಳವಣಿಗೆಯನ್ನು ಉಂಟು ಮಾಡಿದ್ದು, ಎಲ್ಲವನ್ನೂ ಗಮನಿಸಿ ನೋಡಿದಾಗ ಈ ಚಿತ್ರತಂಡದ ಶ್ರಮಕ್ಕೆ ಅಭಿನಂದನೆಯನ್ನು ಸಲ್ಲಿಸಲೇಬೇಕು. ತಮಗೆ ದೊರೆತ ಈ ಅಭೂತ ಪೂರ್ವ ಬೆಂಬಲವನ್ನು ಈ ಚಿತ್ರತಂಡದವರು ಒಂದಿಷ್ಟು ಪ್ರಯತ್ನ ಪಟ್ಟಿದ್ದರೆ, ಕನ್ನಡ ಚಿತ್ರರಂಗದಲ್ಲಿ ಮುಂಗಾರು ಮಳೆಯಂತೆ ಮತ್ತೊಂದು ಪವಾಡ ನಡೆಯುತ್ತಿತ್ತು. ವಿಪರ್ಯಾಸವೆಂದರೆ, ಚಿತ್ರವು ‘ಮುಂಗಾರು ಮಳೆ ಭಾಗ ೨’ ರಂತೆ ಕಾಣುವುದು!.  

ಮುಂಗಾರು ಮಳೆ ಚಿತ್ರದಲ್ಲಿ ನಾಯಕನ ಪ್ರೀತಿ ಸೋತು, ನಾಯಕಿ ಮತ್ತೊಂದು ಮದುವೆಯಾಗುವ ಸಂದರ್ಭದಲ್ಲಿ,  ‘ಮೊಲ’ ಸತ್ತಾಗ ಮಣ್ಣು ಮಾಡಿ ಹೊರಡುವ ನಾಯಕ ಎಲ್ಲಿಗೆ ಹೋದ? ಎಂದೇನಾದರೂ ಕನ್ನಡ ಪ್ರೇಕ್ಷಕರು ತಲೆಕೆಡಿಸಿಕೊಂಡಿದ್ದರೆ, ಅದಕ್ಕೆ ಉತ್ತರವಾಗಿ ಈ ಚಿತ್ರದಲ್ಲಿ ತಂಗಿಯ ಬಲವಂತಕ್ಕಾಗಿ, ಮತ್ತೊಬ್ಬ ನಾಯಕಿಯ ಮನೆ ಮುಂದೆ ಪ್ರೊಪೋಸ್ ಮಾಡಲು ಕಾಣಿಸಿಕೊಳ್ಳುತ್ತಾನೆ. ನಾಯಕನ ತಂಗಿ ‘ರೇಡಿಯೋ ಜಾಕಿ’. ಈಗಾಗಲೇ ಎಲ್ಲ ದೃಶ್ಯಗಳನ್ನು ತೆರೆಯ ಮೇಲೆ ನೋಡಿದ್ದರೂ, ಮತ್ತೊಮ್ಮೆ ಆಕೆಯ ಬಾಯಲ್ಲಿ ಚಿತ್ರದಲ್ಲಿ ಏನಾಗುತ್ತಿದೆ? ಎಂಬುದನ್ನು ನಿರ್ದೇಶಕರು ಹೇಳಿಸುತ್ತಾರೆ! ನಾಯಕ ರೇಡಿಯೋ ಜಾಕಿಯ ಅಣ್ಣನಾಗಿರುವುದರಿಂದಲೋ ಏನೋ?  ಪ್ರತಿಯೊಂದು ದೃಶ್ಯಗಳು ವಾಚ್ಯವಾಗಿಬಿಡುತ್ತವೆ. ಸನ್ನಿವೇಶಕ್ಕೂ, ಸಂಭಾಷಣೆಗೂ ಸಂಬಂಧವೇ ಇಲ್ಲದೇ, ಪ್ರತಿಯೊಂದು ವಾಕ್ಯ ರಚನೆಯನ್ನೂ ಪಂಚಿಂಗ್ ಆಗಿಸುವ ಯತ್ನದಲ್ಲಿ, ಶಿಳ್ಳೆ ಪಡೆಯುವ ಪ್ರಯತ್ನದಲ್ಲಿ, ಯಾವ ದೃಶ್ಯಗಳೂ ಕೂಡ ಮನಸ್ಸಿನಲ್ಲಿ ಅಚ್ಚೊತ್ತುವುದಿಲ್ಲ. ಇದರ ಜೊತೆಗೆ ನಾಯಕನ ಮನಸ್ಸಿನ ಆಲೋಚನೆಗಳೆಲ್ಲವನ್ನೂ ವಾಚ್ಯವಾಗಿಸಿರುವುದು ಅಸಹನೀಯವಾಗಿಬಿಡುತ್ತದೆ. ದೃಶ್ಯಮಾಧ್ಯಮಗಳ ಔಚಿತ್ಯವೇನು? ಎಂದು ಪ್ರಶ್ನಿಸಿಕೊಳ್ಳುವಂತೆ ಮಾಡಿಬಿಡುತ್ತದೆ. ರೇಡಿಯೋ ನಾಟಕಗಳಿಗೂ, ಈ ಚಿತ್ರಕ್ಕೂ ವ್ಯತ್ಯಾಸವೇ ಇಲ್ಲವೆನಿಸಿ ಕಿರಿಕಿರಿಯಾಗುತ್ತದೆ. ಉದಾಹರಣೆಗೆ - ಈ ಚಿತ್ರದ ದೃಶ್ಯವೊಂದರಲ್ಲಿ ನಾಯಕಿ, ನಾಯಕನ ಕೈ ಅಕಸ್ಮಾತ್ತಾಗಿ ಹಿಡಿಯುತ್ತಾಳೆ.  ಆಗ ಆತನಿಗೆ ರೋಮಾಂಚನವಾಗುತ್ತದೆ.  ಅದನ್ನು ದೃಶ್ಯರೂಪದಲ್ಲಿಯೇ, ನಟನೆಯಲ್ಲಿಯೇ  ತೋರಿಸಲು ಸಾಧ್ಯ.  ಆದರೆ ಬ್ಯಾಕ್ ಗ್ರೌಂಡ್ ನಲ್ಲಿ ಅದನ್ನು ಕೂಡ ವಾಚ್ಯವಾಗಿಸುತ್ತಾರೆ.   

ನಾಯಕ ಆಗಾಗ ‘ಮುಂಗಾರು ಮಳೆ’ ಯ ಭಾಷಣೆ ಅಥವಾ ಚಿತ್ರದ ಸನ್ನಿವೇಶಗಳನ್ನು (ಉದಾ - ತನ್ನ ಹಳೆಯ ಪ್ರೇಯಸಿ, ತನ್ನ ಎದೆಯ ಮೇಲೆ ಕಾಲಿಟ್ಟು ಹೋದಳು! / ಚಿತ್ರದ ನಾಯಕಿಯ ಹೆಸರು ‘ನಂದಿನಿ’ ಎನ್ನುತ್ತಾ, ‘ಬಂಧನ ಹಾಗೂ ಮುಂಗಾರು ಮಳೆಯ ನಾಯಕಿಯರ ಹೆಸರು ಕೂಡ ನಂದಿನಿ ಆಗಿತ್ತು ಎಂದು ನೆನಪಿಸುತ್ತಾ, ಲೇವಡಿ ಮಾಡುವುದು ಹೀಗೆ.... ದೃಶ್ಯಗಳಲ್ಲೂ ಬೇಕಿದ್ದರೂ, ಬೇಡದಿದ್ದರೂ ಸುಮ್ಮನೆ ಮಳೆಯ ದೃಶ್ಯಗಳನ್ನು ತೋರಿಸುವುದು, ‘ಪಂಚರಂಗಿ’, ‘ಡ್ರಾಮಾ’ ಮುಂತಾದ ಚಿತ್ರಗಳಲ್ಲಿ ಬ್ಯಾಕ್ ಗ್ರೌಂಡ್ ನಲ್ಲಿ ಭಾಗವತರ ಹಾಗೇ, ಸೂತ್ರಧಾರಿಯ ಹಾಗೇ ಮಾತನಾಡಿದ ಸಂಭಾಷಣೆಗಳೂ, ಯಥಾವತ್ತಾಗಿ ಅದೇ ಶೈಲಿಯಲ್ಲಿ ಈ ಚಿತ್ರದಲ್ಲಿ ಪ್ರತಿಯೊಂದು ಸನ್ನಿವೇಶಗಳಲ್ಲೂ ಮರುಕಳಿಸುತ್ತವೆ.  ಬಹುಶಃ ಪ್ರೇಕ್ಷಕರಿಗೆ ‘ಸ್ವಗತ’ ಅರ್ಥವಾಗುವುದಿಲ್ಲ ಎಂದೋ? ಅಥವಾ ತಪ್ಪಾಗಿ ತಿಳಿದುಕೊಂಡರೆ? ಎಂದೋ ನಿರ್ದೇಶಕರು ಭಾವಿಸಿರಬಹುದು.  ಕಥೆಗೆ ಸಂಬಂಧವಿಲ್ಲದೇ ಇರುವ ದೃಶ್ಯಗಳನ್ನು, ಬೇಡದಿರುವ ದೃಶ್ಯಗಳನ್ನು ಅನಗತ್ಯವಾಗಿ ತುರುಕಿರುವುದು (ನಾಯಕಿ ಮಶ್ರೂಮ್ ಬೆಳೆಯುವುದು, ‘ಇಂತಿ ನಿನ್ನ ಪ್ರೀತಿಯ’ ಚಿತ್ರದಲ್ಲಿಲ್ಲದ ತುಣುಕುಗಳನ್ನು ಆ ಚಿತ್ರದ್ದು ಎಂಬಂತೆ ತೋರಿಸುವುದು...ಹೀಗೆ).  ಕಥೆ, ಸಂಭಾಷಣೆ, ನಿರ್ದೇಶನ, ಛಾಯಾಗ್ರಹಣ ಎಲ್ಲದರಲ್ಲೂ ಕೂಡ (ನಾಯಕ, ನಾಯಕಿಯ ನಟನೆಯ ಹೊರತು) ಯೋಗರಾಜ ಭಟ್ಟರನ್ನು ತದ್ರೂಪು ಅನುಕರಿಸಿರುವುದು ವಿಷಾದನೀಯ.

ಹಿಂದೆ ಒಮ್ಮೆ ವಸುಧೇಂದ್ರ ಅವರು ಕನ್ನಡ ಚಿತ್ರಗಳ ಬಗ್ಗೆ ಮಾತನಾಡುತ್ತಾ -‘ದೃಶ್ಯ ಮಾಧ್ಯಮಗಳಲ್ಲಿ ಒಂದಿಷ್ಟು ಮೌನವಿರಬೇಕು. ಆಗಲೇ ಆ ಚಿತ್ರವು ನಮ್ಮೊಂದಿಗೆ ಸಂಭಾಷಿಸಲು ಸಾದ್ಯ.  ಆದರೆ ನಮ್ಮ ಕನ್ನಡ ಚಿತ್ರಗಳು ತುಂಬಾ ವಾಚ್ಯವಾಗಿಬಿಟ್ಟಿವೆ. ಪ್ರೇಕ್ಷಕರಿಗೆ ಯಾವುದನ್ನು ಫೀಲ್ ಮಾಡಲು ಸಾಧ್ಯವಿಲ್ಲದಂತಾಗಿದೆ’ ಎಂದಿದ್ದರು.  ಈ ಚಿತ್ರವನ್ನು ನೋಡುತ್ತಿದ್ದಂತೆ, ವಸುಧೇಂದ್ರ ಅವರ ಮಾತುಗಳು ಅಕ್ಷರಶಃ ನಿಜವೆನಿಸುತ್ತದೆ. ಚಿತ್ರಕಥೆಯ ದೃಶ್ಯಗಳಿಗೆ ತಾರ್ಕಿಕ ಕಾರಣಗಳಿಲ್ಲದೆ, ಮುಂಜಾನೆ ಎದ್ದೊಡನೆ ಎಲ್ಲವನ್ನೂ ಮರೆಯುವ ನಾಯಕಿಯಂತೆಯೇ, ಪ್ರೇಕ್ಷಕರು ಕೂಡ ಥಿಯೇಟರ್ ನಿಂದ ಆಚೆ ಬಂದೊಡನೆಯೇ ಎಲ್ಲವನ್ನೂ ಮರೆತುಬಿಡುವುದರಲ್ಲಿ ಆಶ್ಚರ್ಯವಿಲ್ಲ.  ಆದರೆ ತಲೆಯ ಮೇಲೆ ಒಡೆದಂತೆ ಸಂಭಾಷಣೆಗಳೂ, ಪ್ರೇಕ್ಷಕರ ಕಿವಿಗಳಲ್ಲಿ,  ನಿದ್ದೆಯಲ್ಲಿಯೂ, ಕನಸಿನಲ್ಲಿಯೂ ಮೊಳಗುತ್ತಲೇ ಇರುವುದು ಚಿತ್ರದ ಪ್ಲಸ್ ಪಾಯಿಂಟೋ, ನೆಗೆಟಿವ್ ಪಾಯಿಂಟೋ ಅರ್ಥವಾಗದೇ, ಕಕ್ಕಾಬಿಕ್ಕಿಯಾಗುವ ಸರದಿ ಕನ್ನಡ ಪ್ರೇಕ್ಷಕರಿಗೆ! :-) ಅತಿ ನಿರೀಕ್ಷೆ ಹುಟ್ಟಿಸಿದ್ದ ‘ಸಿಂಪಲ್ಲಾಗೊಂದು ಲವ್ ಸ್ಟೋರಿ’, ಚಿತ್ರಕಥೆಯಲ್ಲಿ ಸಿಂಪಲ್ ಆಗಿಬಿಡುವುದು, ಚಿತ್ರದ ಸೋಲು :( 

Sunday, February 24, 2013

ಪ್ರೇಮವೇ ದೈವ, ಪ್ರೇಮವೇ ಜೀವ ಎನ್ನುವ ಗೊಂಬೆಗಳ ಲವ್


ಸಿನೆಮಾ ಆಗಬಹುದು, ಸಾಹಿತ್ಯ ಆಗಬಹುದು, ನಾಟಕ ಆಗಬಹುದು ಈ ಯಾವುದೇ ಕಲಾ ಮಾಧ್ಯಮಗಳೂ ಕೂಡ ವೀಕ್ಷಕರಿಗೆ ಒಂದೊಂದು ರೀತಿಯಲ್ಲಿ ಕಥೆ ಹೇಳುತ್ತಾ ಹೋಗುತ್ತವೆ. ಕಥಾವಸ್ತುವಿನಲ್ಲಿ ಹೊಸತನವಿಲ್ಲದಿದ್ದರೂ, ನಮಗೆ ಇಷ್ಟವಾಗುವುದು ಅದರ ನಿರೂಪಣೆಯಲ್ಲಿ.  ಮಹಾಭಾರತ ಕಥೆಯನ್ನು ಚಿಕ್ಕಂದಿನಿಂದ ಕೇಳಿದ್ದರೂ ಕೂಡ, ಭೈರಪ್ಪನವರ ‘ಪರ್ವ’ ಓದಿದಾಗ ನಮಗೆ ಇಡೀ ಕಥಾವಸ್ತುವೇ ಹೊಸದಂತೆ ಕಾಣುವುದು ಸುಳ್ಳಲ್ಲ. ಪ್ರತಿಯೊಬ್ಬ ಕಲಾವಿದ ಕೂಡ ತನಗೆ ಒಗ್ಗುವ ಕಲಾಪ್ರಕಾರದಲ್ಲಿ ವೀಕ್ಷಕರಿಗೆ ತನ್ನ ಕಲ್ಪನೆಯನ್ನು, ತನ್ನ ಅನುಭವಗಳನ್ನು ಉಣಬಡಿಸಲು ಪ್ರಯತ್ನಿಸುತ್ತಾನೆ. ಅದರ ರುಚಿ ಪ್ರತಿಯೊಬ್ಬರಿಗೂ ಇಷ್ಟವಾದರೆ ಆತ ಗೆದ್ದಂತೆ! ಆದರೆ ಹಾಗಾಗಲು ಬಹಳ ಕಷ್ಟ,  ಒಬ್ಬರಿಗೆ ಸಕ್ಕರೆ ಕಡಿಮೆಯಾದಂತೆ, ಮತ್ತೊಬ್ಬರಿಗೆ ಉಪ್ಪು ಹೆಚ್ಚಾದಂತೆ.... ಹೀಗೆ...  ಲೋಕೋಭಿನ್ನರುಚಿಃ :-)  
   
ಎಲ್ಲಾ ಪಶು, ಪಕ್ಷಿ, ಪ್ರಾಣಿಗಳಲ್ಲಿಯೂ ಅಮ್ಮನಿಗೊಂದು ವಿಶಿಷ್ಠ ಸ್ಥಾನವಿದೆ.  ನಮ್ಮನ್ನು ಹೆತ್ತು, ಪೊರೆಯುವ ಆಕೆ, ತನಗೆ ಎಷ್ಟೇ ಕಷ್ಟವಿದ್ದರೂ, ತನ್ನ ಮಕ್ಕಳ ಕಣ್ಣಲ್ಲಿ ಖುಷಿಯನ್ನು ಕಾಣಬಯಸುವವಳು, ಆ ಖುಷಿಯನ್ನು ಕಂಡೂ ತನ್ನೆಲ್ಲಾ ದುಃಖ ದುಮ್ಮಾನಗಳನ್ನು ಮರೆಯುವವಳು ‘ಅಮ್ಮ’. ಹಾಗೆಂದೇ ‘ಕೆಟ್ಟ ಮಗನಿರಬಹುದು, ಕೆಟ್ಟ ತಾಯಿಯೆಂದಿಗೂ ಇರಲು ಸಾಧ್ಯವಿಲ್ಲ’ ಎಂಬ ಮಾತುಗಳಿಂದ ಹಿಡಿದು ತಾಯಿಗಿಂತ ಬೇರೆ ದೇವರಿಲ್ಲ, ಬೇರೆ ಬಂಧುವಿಲ್ಲ ಎಂಬ ಮಾತುಗಳೂ ತಾಯಿಯ ಹಿರಿಮೆಯನ್ನು ಎತ್ತಿ ಹಿಡಿಯುತ್ತವೆ.  ನಮ್ಮ ಸಿನೆಮಾಗಳಲ್ಲಿಯೂ ಕೂಡ ಗಂಡು, ಹೆಣ್ಣಿನ ಪ್ರೇಮ ತೋರಿಸುವಂತೆಯೇ, ತಾಯಿಯ ವಾತ್ಸಲ್ಯದ ಕುರಿತಾಗಿ ಬೇಕಾದಷ್ಟು ಸಿನೆಮಾಗಳು ಬಂದಿವೆ.  ಅಮ್ಮ ನೀನೇನೇ ಅಂದರೂ ನೀ ನನ್ನ ದೇವರು ಎಂಬ ‘ಅಣ್ಣಯ್ಯ’ ಚಿತ್ರದಿಂದ ಹಿಡಿದು, ಮೈ ಮದರ್ ಇಂಡಿಯಾ ಎಂಬ ಕಲಿಯುಗ ಭೀಮ ಚಿತ್ರದವರೆಗೂ, ಅಮ್ಮ ಎಂದರೆ ಏನೋ ಹರುಷವೂ, ಅಮ್ಮ ನೀನು ನಕ್ಕರೆ ಎಂಬ ಹಾಡುಗಳಿಂದ ಹಿಡಿದು,  ಸಾವೇ ಬಂದರೂ, ಮಣ್ಣೇ ಆದರೂ ತಾಯಿ ಪ್ರೀತಿಗೆಂದೂ ಕೊನೆ ಇಲ್ಲ, ತಾಯೀನೇ ಎಲ್ಲಾ ಎಂಬ ಜೋಗಿ ಚಿತ್ರದ ಹಾಡಿನ ತನಕ ತಾಯಿಯ ಮಹಿಮೆಯನ್ನು ಸಾರುವ ಅನೇಕಾನೇಕ ಚಿತ್ರಗಳು ಬಂದಿವೆ.  ಬಾಕ್ಸ್ ಆಫೀಸಿನಲ್ಲಿ ಗೆದ್ದಿವೆ. ಈ ನಿಟ್ಟಿನಲ್ಲಿ ಕಥಾವಸ್ತು ಹಳತಾದರೂ ಕೂಡ, ಈ ‘ಅಮ್ಮ’ ಎಂಬ ಎಮೋಷನ್ ಬಳಸಿಯೇ ಹೊಸತನದಲ್ಲಿ ನಿರೂಪಿತವಾಗಿರುವ ಚಿತ್ರ ‘ಗೊಂಬೆಗಳ ಲವ್’. 

ಸಾಹಿತ್ಯದಲ್ಲಿಯಾದರೆ ನಾವು ನಮ್ಮ ಕಲ್ಪನೆಗಳನ್ನು ಪುಂಖಾನುಪುಂಖವಾಗಿ ಪುಟಗಟ್ಟಲೆ ಹರಿಯಬಿಡಬಹುದು. ಓದುಗರಿಗೆ ಕೂಡ ತಮಗೆ ಸಮಯವಿದ್ದಾಗ, ತಮ್ಮ ಕಲ್ಪನೆಯಲ್ಲಿ ದೃಶ್ಯಗಳನ್ನು ಮೂಡಿಸಿಕೊಂಡು ಓದಬಹುದು. ನಾಟಕಗಳಲ್ಲಿ ಪಾತ್ರಗಳು ವೀಕ್ಷಕರ ಕಣ್ಣಮುಂದಿರುತ್ತವೆ. ಪಾತ್ರಗಳ ಮಾತುಗಳಲ್ಲಿಯೇ ಇಡೀ ಸನ್ನಿವೇಶವನ್ನು ತೋರಿಸಬೇಕಾಗುತ್ತದೆ. ಮಾತುಗಳಲ್ಲಿಯೇ ಅರಮನೆ ಕಟ್ಟುವುದು ನಾಟಕಗಳಿಗೆ ಅವಶ್ಯ. ಆದರೆ ಸಿನೆಮಾಗಳಿಗೆ ನಾಟಕಗಳಂತೆ ಇತಿಮಿತಿಯಿಲ್ಲ, ಸಾಹಿತ್ಯಗಳಂತೆ ಸಮಯವಿಲ್ಲ.  ಸಿನೆಮಾಗಳು ದೃಶ್ಯಗಳನ್ನು ಚಿತ್ರಿಸುವುದರ ಮೂಲಕ ಕಥೆಯನ್ನು ಹೇಳಬೇಕು. ಇದು ಪ್ಲಸ್ ಪಾಯಿಂಟ್ ಹಾಗೂ ನೆಗೆಟಿವ್ ಪಾಯಿಂಟ್ ಕೂಡ. ಸಿನೆಮಾಗಳಲ್ಲಿ ‘ಸ್ವಗತ’ವನ್ನು ಚಿತ್ರಿಸುವುದು ಅತ್ಯಂತ ಕಷ್ಟಕರ. ಹಾಗಾಗಿಯೇ ಅನೇಕ ಪಾತ್ರಗಳ ಸೃಷ್ಠಿ ಅವಶ್ಯವಾಗುತ್ತದೆ. ಜೊತೆಗೆ ಚಿತ್ರಕಥೆಯಲ್ಲಿ ಬಿಗಿಯಿರಬೇಕಾಗುತ್ತದೆ ಹಾಗೂ ಇದೆಲ್ಲವೂ ಅತ್ಯಂತ ಹಣ ಖರ್ಚಿನ ಬಾಬತ್ತು. ಉದಾಹರಣೆಗೆ ಹೇಳುವುದಾದರೆ ಮುಂಗಾರು ಮಳೆಯಲ್ಲಿ ಗಣೇಶನೊಟ್ಟಿಗಿದ್ದ ಮೊಲದ ಮೂಲಕ ತನ್ನೆಲ್ಲಾ ಸ್ವಗತವನ್ನು ಆತ ಅದರೊಟ್ಟಿಗೆ ಹಂಚಿಕೊಳ್ಳುವುದು ಅಥವಾ ಕಠಾರಿವೀರ (ಉಪೇಂದ್ರ) ಚಿತ್ರದಲ್ಲಿ ಚಿತ್ರಿಸಿರುವ ಸ್ವರ್ಗ....ಹೀಗೆ.   ‘ಗೊಂಬೆಗಳ ಲವ್’ ಚಿತ್ರದ ಬಗ್ಗೆ ಮಾತಾಡುವುದಾದರೆ ಇಡೀ ಚಿತ್ರದ ಕಥಾನಿರೂಪಣೆಯ ಅತ್ಯಂತ ಪ್ರಮುಖ ಘಟ್ಟಗಳಲ್ಲಿ ದೃಶ್ಯಗಳನ್ನು ಸಿಂಬಾಲಿಕ್ ಆಗಿ ನಿರೂಪಿಸಿರುವುದು ಚಿತ್ರದ ಮುಖ್ಯ ಹೈಲೈಟ್. ತಮ್ಮ ಸೀಮಿತ ಬಜೆಟ್ಟಿನಲ್ಲಿ, ಹೊಸ ತಂಡದೊಂದಿಗೆ ಇಂತಹ ಚಿತ್ರವೊಂದನ್ನು ಅತ್ಯುತ್ತಮ ರೀತಿಯಲ್ಲಿ ನಿರ್ದೇಶಿಸಿದ ನಿರ್ದೇಶಕ ಸಂತೋಷ್ ಅವರನ್ನು ಇದಕ್ಕಾಗಿ ಅಭಿನಂದಿಸಲೇಬೇಕು.

ಇತ್ತೀಚಿನ ದಿನಗಳಲ್ಲಿ ದುನಿಯಾ ‘ಸೂರಿ’ ಅವರನ್ನು ಬಿಟ್ಟರೆ, ದೃಶ್ಯಗಳನ್ನು ಅತ್ಯಂತ ಚೆಂದದಲ್ಲಿ ನಿರೂಪಿಸಿದವರು ‘ಸಂತೋಷ್’ ಎಂದರೆ ತಪ್ಪಾಗಲಾರದು. ನಿರ್ದೇಶಕ ‘ಸಂತೋಷ್’ ದೃಶ್ಯ ರೂಪಕಗಳನ್ನು ಅತ್ಯಂತ ಸಮರ್ಥವಾಗಿ ಬಳಸಿಕೊಂಡಿದ್ದಾರೆ.  ಚಿತ್ರ ಶುರುವಾಗುವುದೇ ಅತ್ಯಂತ ವಿಶಿಷ್ಠ ರೀತಿಯಲ್ಲಿ.  ಮನೆಯ ದೇವರ ಫೋಟೋಗೆಂದು ತರಿಸುವ ಹೂವು ಕೆಳಗೆ ಬಿದ್ದು (ಗೇಟಿನ ಬಳಿ) ಗಲೀಜಾಗಿದೆಯೆಂದು, ತರಾತುರಿಯಲ್ಲಿ ತನ್ನ ಕೆಲಸಕ್ಕೆಂದು ಹೊರಡುತ್ತಿರುವ ಪೋಲೀಸ್ ಪೇದೆಯೊಬ್ಬಳು, ತನಗಾಗಿ ಕಾಯುತ್ತಿರುವ ತನ್ನ ಮೇಲಾಧಿಕಾರಿಯ ಬೈಗುಳವನ್ನು ಕೇಳುತ್ತಲೇ ಅದನ್ನು ಹಿಸುಕಿ, ಮುದ್ದೆ ಮಾಡಿ ಎಸೆದು ಹೋಗುತ್ತಾಳೆ.  ಮೊಳಕ್ಕೆ ೩೦ ರೂಪಾಯಿ ಎಂದು ಮಂಗಳಮುಖಿಯೊಬ್ಬಳು, ಹೂವು ಹೊಸದಾಗಿಯೇ ಇದೆಯೆಂದು, ಅದನ್ನು ಸ್ವಲ್ಪ ಸರಿ ಮಾಡಿಕೊಂಡು ಮುಡಿದುಕೊಂಡು ಹೋಗುತ್ತಾಳೆ.  ಪೋಲೀಸ್ ಪೇದೆ ಮೃದು ಸ್ವಭಾವದವಳಾಗಿದ್ದರೂ, ತನ್ನ ವೃತ್ತಿಯ ಕಾರಣ ಕಠೋರ ಹೃದಯಿಯಂತೆ ತೋರಿಸಿಕೊಳ್ಳಬೇಕಾದ ಅನಿವಾರ್ಯತೆ ಹಾಗೂ ಮಂಗಳಮುಖಿಯ ದೇಹ ಗಂಡಾಗಿದ್ದರೂ, ತನ್ನ ವೃತ್ತಿಗಾಗಿ ಹೆಂಗಸಂತೇ ಕಾಣಿಸಿಕೊಳ್ಳಬೇಕಾದ ಪರಿಸ್ಥಿತಿಯನ್ನು ಒಂದೆರಡು ನಿಮಿಷಗಳಲ್ಲಿಯೇ ಸಣ್ಣ ಕಥೆಯಂತೆ ಮನಸ್ಸಿಗೆ ಮುಟ್ಟಿಬಿಡುತ್ತದೆ. ಈ ಮಹಿಳಾ ಪೋಲೀಸ್ ಕೇಳುವ ‘ಬದುಕೆಂದರೇನು?’ ಎಂಬಲ್ಲಿಂದ ಚಿತ್ರವು ಒಂದು ಥ್ರಿಲ್ಲರ್ ನಂತೆ ಕಾಣಿಸಿಕೊಳ್ಳತೊಡಗುತ್ತದೆ. ಆಕೆಯ ಈ ಪ್ರಶ್ನೆಗೆ ಚಿತ್ರವು ಉತ್ತರ ಹೇಳುವ ಪ್ರಯತ್ನ ಶುರು ಮಾಡುತ್ತದೆ.

ಹುಡುಗಿ ಮುನಿಸಿಕೊಂಡಿದ್ದಾಳೆಂದು ಹುಡುಗ ಆಕೆಯನ್ನು ಅನುನಯಿಸುತ್ತಿದ್ದಾಗ, ಹಾದು ಹೋಗುವ ಐಸ್ ಕ್ರೀಮ್ ಗಾಡಿ, ಪರೋಕ್ಷವಾಗಿ ಹುಡುಗ ಐಸ್ ಹಚ್ಚುತ್ತಿದ್ದಾನೆಂದು ಹೇಳಿದಂತೆ ಅನಿಸುತ್ತದೆ.  ಹಾಗೆಯೇ ಮತ್ತೊಂದು ದೃಶ್ಯದಲ್ಲಿ ಕೋಪಗೊಂಡಿರುವ ಪ್ರೇಮಿಗಳು, ಮನಸ್ಸಿನಲ್ಲಿ ಪ್ರೀತಿ ಇದ್ದರೂ ಕೂಡ ತಮ್ಮ ಅಹಂ ಬಿಟ್ಟು ಮಾತಾಡಲೊಲ್ಲರು. ಆಗ ಈಕೆಯನ್ನು ಉರಿಸಲೆಂದು, ತಮಟೆಯವಳಿಗೆ ಹಣ ಕೊಟ್ಟು ಟಪ್ಪಾಂಗುಚ್ಚಿ ಡಾನ್ಸ್ ಮಾಡುವ ನಾಯಕ,  ತನ್ನ ಅಹಂ ಬಿಡಲೊಲ್ಲದ ನಾಯಕಿ, ಈತನ ನೃತ್ಯಕ್ಕೆ ಶಿಳ್ಳೆ ಹಾಕಿ, ಆತನನ್ನೇ ಉರಿಸುವ ನಾಯಕಿ, ಅಪ್ಪ ಮದುವೆಗೆ ವಿರೋಧ ಮಾಡುತ್ತಾನೆಂದು ಓಡಿ ಹೋಗುವ ಹವಣಿಕೆಯಲ್ಲಿರುವ ಪ್ರೇಮಿಗಳ ಪ್ರಯತ್ನಕ್ಕೆ ನಾಯಕಿಯ ತಾಯಿ ಕಣ್ಣೀರು ಸುರಿಸಿ ಹಾಳುಮಾಡುವಾಗ, ಹಿಂಬದಿಯಲ್ಲಿ ತೋರಿಸುವ ಹುಚ್ಚನೊಬ್ಬನ ಬಡಬಡಿಕೆ, ತಾಳ್ಮೆಯಿಂದ ಅದನ್ನು ಕೇಳಿಸಿಕೊಳ್ಳುತ್ತಿರುವ ಮನೆಯವನು, ಅವನನ್ನು ಕಡಿವಾಣ ಹಾಕಿ ಬಂಧಿಸುವುದು ಕೂಡ ಪರೋಕ್ಷವಾಗಿ ಓಡಿಹೋಗಿ ಮದುವೆ ಮಾಡಿಕೊಳ್ಳುವ ಪ್ರೇಮಿಗಳ (ಭವಿಷ್ಯದ ಯೋಚನೆ ಇಲ್ಲದೆ) ಹುಚ್ಚುತನವನ್ನು, ಅದನ್ನು ತಡೆಹಾಕುವುದನ್ನು ಸೂಚಿಸುವುದು. ಮಗಳನ್ನು ಮದುವೆಯಾಗಿ ಓಡಿ ಹೋದ ಎಂದು ಊರೆಲ್ಲಾ ಅಪ್ಪ ಹುಡುಕುತ್ತಿದ್ದರೆ, ಒಂದೇ ಒಂದು ಶಾಟ್ ನಲ್ಲಿ ೩ ಟೀ ಕಪ್ ಗಳನ್ನು ತೋರಿಸುವ ಮೂಲಕ ಆತ ಮನೆಯಲ್ಲಿದ್ದಾನೆ ಎನ್ನುವುದಿರಬಹುದು, ಪ್ರೇಮಿಗಳಿಬ್ಬರೂ ಒಂದಾಗುವಾಗ ತೋರಿಸುವ ೨   ಕಪ್ ಗಳ ಮಿಲನ ಹೀಗೆ.... ಬಹಳಷ್ಟು ಪ್ರಮುಖ ದೃಶ್ಯಗಳು ಕಥೆ ಹೇಳುತ್ತಿರುವಾಗ, ಹಿಂಬದಿಯಲ್ಲಿ ಮತ್ತೊಂದು ದೃಶ್ಯದ ಮೂಲಕ (ಪಿಕ್ಚರ್ ಇನ್ ಪಿಕ್ಚರ್) ಸಿಂಬಾಲಿಕ್ ಆಗಿ ಹೇಳುವ ಪ್ರಯತ್ನ ಮಾಡಿರುವುದು ಶ್ಲಾಘನೀಯ.

ಅದುವರೆವಿಗೂ ಬರೀ ಪ್ರೇಮಿಗಳ ಕಥೆಯಂತೆ ಭಾಸವಾಗುತ್ತಿದ್ದ ಚಿತ್ರಕಥೆ, ಮಧ್ಯಂತರದ ನಂತರ ಊಹಿಸಲು ಸಾಧ್ಯವಿಲ್ಲದಂತೆ ಬದಲಾಗಿಬಿಡುತ್ತದೆ.  ಪಂಡರೀಬಾಯಿ ನಂತರ ತೆರವಾದ ಕನ್ನಡ ಚಿತ್ರರಂಗದ ‘ಅಮ್ಮ’ನ ಸ್ಥಾನಕ್ಕೆ ‘ಶೃತಿ’ ಚೆಂದ ಕಾಣಬಹುದೇನೋ?! ಎನ್ನುವಷ್ಟು ಪರಿಣಾಮಕಾರಿಯಾಗಿ ನಟಿ ‘ಶೃತಿ’ ಅಮ್ಮನ ಪಾತ್ರಕ್ಕೆ ನೈಜತೆ ತುಂಬಿದ್ದಾರೆ. ನಾಯಕಿಯ ಅಣ್ಣನ ಪಾತ್ರಧಾರಿ ಶಾರೂಖ್ ಖಾನ್ ನಂತೆ ನಟಿಸುವುದು, ನಾಯಕಿಯ, ನಾಯಕನ ನಟನೆಯಲ್ಲಿ ಕಂಡುಬರುವ ಅಸಹಜ ನಟನೆ, ದೃಶ್ಯಗಳನ್ನು ನಿರೂಪಿಸುವಾಗ ಎಲ್ಲೂ ಕಾಣಿಸದಿರುವ ಇತರ ಜನರು ಅಥವಾ ಪಾತ್ರಗಳು, ಪ್ರೇಮಿಗಳ ನಡುವೆ ದೇಹಕ್ಕಿಂತ ಮನಸ್ಸೇ ಹೆಚ್ಚು ಏಕೆ ಮಾತಾಡುತ್ತದೆ? ಎಂಬುದು ಅದುವರೆವಿಗೂ ಹೊಳೆಯದೇ ಇದ್ದದ್ದು ಅಥವಾ ಪೋಲೀಸ್ ಇನ್ಸ್ ಪೆಕ್ಟರ್ ಮಹಿಳಾ ಪೋಲೀಸ್ ಗೆ ತಂದುಕೊಡುವ ಇಡ್ಲಿ ಪಾಕೆಟ್ ನ ಅರ್ಥ (ನನಗೇ ಈ ದೃಶ್ಯ ಯಾಕೆ ಅಂತಾ ಅರ್ಥವಾಗಿರಲೇ ಇಲ್ಲ)  ಥಟ್ ಅಂತಾ ತಲೆಗೆ ಹೊಳೆಯುತ್ತದೆ. ಈ ಎಲ್ಲಕ್ಕೂ ಒಂದು ತಾರ್ಕಿಕ ಕಾರಣ / ಉತ್ತರ ಮಧ್ಯಂತರದ ನಂತರ ವೀಕ್ಷಕರಿಗೆ ಸಿಗುತ್ತದೆ. ಮೃದು ಹೃದಯಿ ಪೋಲೀಸ್ ಪೇದೆ, ಹಣ, ಅಧಿಕಾರವಿದ್ದರೂ ನಿಸ್ಸಹಾಯಕನಾಗುವ ಪೋಲೀಸ್ ಇನ್ಸ್ ಪೆಕ್ಟರ್, ನಮಗ್ಯಾಕೆ ಜವಾಬ್ದಾರಿ? ಎಂದು ಸಹಾಯಕ್ಕೆ ಒದಗದ ನೆರೆಹೊರೆಯವರು, ಅಂತಃಕರಣ ಅವಶ್ಯವಾಗಿರಬೇಕಾದ ವೈದ್ಯರ ಹಣದಾಸೆ, ಎಷ್ಟೋ ವರ್ಷಗಳ ನಂತರ ಬಯಸಿ, ಬಯಸಿ, ಹುಟ್ಟಿದ ಮಗು ಅಂಗವಿಕಲನೆಂದು ಗೊತ್ತಾದ ತಕ್ಷಣವೇ ಆಚೆಗೆಸೆ ಎಂದು ಹೇಳುವ ತಂದೆ, ಹೆಂಡತಿಯನ್ನು ಕೆಲಸಕ್ಕೆ ಕಳುಹಿಸಿ, ಆಕೆಯನ್ನು ಅನುಮಾನ ಪಡುವ ಗಂಡ, ಮಾತೆತ್ತಿದರೆ ಹೊಡಿ, ಬಡಿ ಎಂದು ಹೇಳುವ ಗೆಳೆಯ, ಗಂಡಸರೆಲ್ಲರೂ ಸರಿ ಇಲ್ಲ ಎಂದು ಹೇಳುವ ಗೆಳತಿ ಇವರೆಲ್ಲರ ನಡುವೆಯೇ ಬದುಕಲು ಪ್ರೇಮವೇ ದೈವ, ಪ್ರೇಮವೇ ಜೀವ ಎಂದು ಸಾರುವ ತಾಯಿ, ತನ್ನ ಅಂಗವಿಕಲ ಮಗುವಿಗಾಗಿಯೇ, ಆ ಮಗುವಿನ ಖುಷಿಗಾಗಿಯೇ ತನ್ನೀಡಿ ಬದುಕನ್ನು ಮೀಸಲಿಡುವುದು, ‘ನೀವು ಹೊರಗಡೆ ಏಟು ತಿಂದರೆ, ನಾವು ಒಳಗಡೆ ತಿನ್ನುತ್ತಿರುತ್ತೇವೆ ಕಣೋ’ ಎಂದು ನಾಯಕನಿಗೆ ತಮಗೂ ನೋವಾಗುತ್ತಿರುತ್ತದೆ ಎಂದು ಸೂಕ್ಷ್ಮವಾಗಿಯೇ ಬುದ್ಧಿ ಹೇಳುವ ನಾಯಕಿ (ಹುಡುಗಿಯರೆಲ್ಲಾ ಮೋಸಗಾರ್ತಿಯರು ಎಂದಾಗ), ಪ್ರೀತಿಯಿಂದಲೇ ಎಲ್ಲರನ್ನು ಗೆಲ್ಲಬಹುದು ಎನ್ನುವ ಹುಮ್ಮಸ್ಸಿರುವ ನಾಯಕ, ಒಟ್ಟಿನಲ್ಲಿ ಪ್ರೀತಿ / ಪ್ರೇಮ ಬದುಕಿನಲ್ಲಿ ಇಲ್ಲವೆಂದರೆ  ನಾವೆಲ್ಲರೂ ಬದುಕಿದ್ದು ಕೂಡ ಜೀವಚ್ಛವಗಳಂತೆ ಎನ್ನುವ ಚಿತ್ರದ ಅಂತ್ಯ ಬದುಕಲು ಮನುಷ್ಯನಿಗೆ ಬೇಕಿರುವುದು ಒಂದಿಷ್ಟು ಪ್ರೀತಿ ಎಂದು ಆ ಮಹಿಳಾ ಪೋಲೀಸ್ ಬಿಕ್ಕಿಬಿಕ್ಕಿ ಅಳುವ ಮೂಲಕ ಕೊನೆಯಾಗುತ್ತದೆ.. ಬದುಕಿನಲ್ಲಿ ಎಷ್ಟೇ ಕಷ್ಟವಿರಲಿ, ಪ್ರೀತಿಯಿದ್ದರೆ ಎಲ್ಲವನ್ನೂ ನಗುನಗುತ್ತಲೇ ಗೆಲ್ಲಬಹುದು ಎನ್ನುವುದು ಈ ಚಿತ್ರದ ನೀತಿಪಾಠವಾಗುತ್ತದೆ.

Tuesday, February 12, 2013

ಡ್ರಾಮ ಚಿತ್ರ


ಮುಂಗಾರುಮಳೆ, ಗಾಳಿಪಟ ಚಿತ್ರಗಳಿಂದ ಬೆಂಗಳೂರಿನ ಸಾಫ್ಟ್ ವೇರ್ ಇಂಜಿನಿಯರುಗಳ ಮನ ಗೆದ್ದ ಭಟ್ಟರು, ತಮ್ಮ ಚಿತ್ರಗಳು ಯಾವ ಸೆಂಟರುಗಳಲ್ಲಿ ಓಡಿಲ್ಲವೋ ಆ ಸೆಂಟರುಗಳನ್ನು ಗಮನದಲ್ಲಿಟ್ಟುಕೊಂಡು ತಮ್ಮ ಮುಂದಿನ ಚಿತ್ರಗಳಲ್ಲಿ ಸಂಭಾಷಣೆ ಬದಲಾಯಿಸುತ್ತಾರೇನೋ ಅನ್ನೋ ಡೌಟು! ;-)  ಮನಸಾರೆ ಮೂಲಕ ಉತ್ತರ ಕರ್ನಾಟಕದವರನ್ನು, ಪಂಚರಂಗಿ ಮೂಲಕ ಮಂಗಳೂರಿನವರನ್ನು ಸೆಳೆದ ಭಟ್ಟರ ‘ಡ್ರಾಮಾ’ ಈ ಬಾರಿ ಮಂಡ್ಯದ ಜನರಿಗಾಗಿ.  ಮಂಡ್ಯದ ಗಂಡು ಅಂಬರೀಶ್ ಚಿತ್ರದ ಸೂತ್ರಧಾರ, ನಾಯಕ ಮತ್ತದೇ ಮಂಡ್ಯದ ಯಶ್! ಜೊತೆಗೆ ಮಂಡ್ಯದ ಭಾಷೆ!  ಆದರೂ ಅಂಬರೀಶ್ ಅವರ ಡೈಲಾಗ್ ಡೆಲಿವರಿ, ರಾಜು ತಾಳಿಕೋಟಿಯವರನ್ನು ನೆನಪಿಗೆ ತರಿಸುತ್ತದೆ, ಯಶ್ ರ ನಟನೆ ನೋಡಿದಾಗ, ಈ ಪಾತ್ರ ಗಣೇಶ್ ಗೆ ಹೆಚ್ಚು ಸೂಕ್ತವಾಗುತ್ತಿತ್ತೇನೋ? ಎಂದೆನಿಸುತ್ತದೆ. ಇಡೀ ‘ಡ್ರಾಮಾ’ ದುದ್ದಕ್ಕೂ ರಾರಾಜಿಸುವುದು ಮಾತ್ರ ನೀನಾಸಂ ಸತೀಶ್, ತಮ್ಮ ಮುಂದಿನ ಚಿತ್ರವಾದ ‘ಲುಸಿಯಾ’ ಗೆ ಈ ಮೂಲಕ ತಳಹದಿ ಹಾಕಿಕೊಂಡಿದ್ದಾರೆ.  ಸುಚೇಂದ್ರ ಪ್ರಸಾದ್ ಅವರಿಗೆ ಬಹಳ ದಿನಗಳ ನಂತರ ಅದ್ಭುತ ಪಾತ್ರ! ಅವರ ಬಾಯಲ್ಲಿ ಶುದ್ಧ ಕನ್ನಡ ಕೇಳಲು ಇಷ್ಟವಾದರೂ, ವೀಕ್ಷಕರಿಗೆ ಅದು ತಲುಪದೇ ಇರುವುದು ಅವರ ಪಾತ್ರರಚನೆಯಲ್ಲಿನ ದೋಷ! ಅಂಬರೀಶ್ ಸೂತ್ರಧಾರನಾಗಿ (ವಯಸ್ಸಿಗೆ ತಕ್ಕಂಥ ಪಾತ್ರ) ಚೆಂದ ಕಾಣುತ್ತಾರೆ. ಭಟ್ಟರು ತಮ್ಮ ಈ ಹಿಂದಿನ ಯಶಸ್ಸಿನ ಎಲ್ಲಾ ಸೂತ್ರಗಳನ್ನು ‘ಡ್ರಾಮಾ’ ದಲ್ಲೂ ಬಳಸಿದ್ದಾರೆ. ಕಥೆಯೇ ಇಲ್ಲದ ಒಳ್ಳೇ ಚಿತ್ರಕಥೆ, ಇಷ್ಟವಾಗುವ ಕಲರ್ ಫುಲ್ ಛಾಯಾಗ್ರಹಣ, ಕೆಲಕಾಲ ಮಾತ್ರ ಪಡ್ಡೇ ಹುಡುಗರಿಗೆ ಇಷ್ಟವಾಗುವ  ಭಟ್ಟರ ಹಾಡುಗಳು, ನಿಧಾನವಾಗಿ ಮೋಡಿ ಮಾಡುವ ಕಾಯ್ಕಿಣಿಯ ಹಾಡುಗಳು! ಹೊರಗೆ ಬಂದ ನಂತರ ನಾವೇನು ನೋಡಿದೆವು? ಎಂಬುದನ್ನು ಮರೆತು ಹೋದರೂ, ಥಿಯೇಟರಿನಲ್ಲಿ ಕೂತಷ್ಟು ಕಾಲ ನಗಿಸುವ ಭಟ್ಟರ ಡೈಲಾಗ್ ಗಳು! ಹ್ಮ್....... ಟೈಮ್ ಪಾಸ್ ಚಿತ್ರ! :-)

ನಮಗೇನಾಗಿದೆ?


ಇತ್ತೀಚಿನ ‘ಡೆಲ್ಲಿ ಅತ್ಯಾಚಾರ’ ಪ್ರಕರಣ ಇಡೀ ಭಾರತದಲ್ಲಿ ಒಂದು ದೊಡ್ಡ ಸಂಚಲನವನ್ನುಂಟು ಮಾಡಿತು. ಅಂದು ಮುಂಬೈನಲ್ಲಿ ‘ಕಸಬ್’ ಸಿಕ್ಕಸಿಕ್ಕವರನ್ನು ಕೊಂದದ್ದಕಿಂತಲೂ, ತಾಜ್ ಹೋಟೇಲ್ ನಲ್ಲಿ ಆದ ಉಗ್ರರ ದಾಳಿಗಿಂತಲೂ, ಒಂದಿಷ್ಟು ಹೆಚ್ಚಿನ ‘ಸುದ್ಧಿ’ಯನ್ನು ಈ ಭೀಕರ ಕೃತ್ಯ ಮಾಡಿತು! ಇಂತಹ ನಾಚಿಕೆಗೇಡಿನ ಕೃತ್ಯ ಮಾಡಿದ ಅಪರಾಧಿಗಳಿಗೆ ಗಲ್ಲು ಶಿಕ್ಷೆ ಕೊಡಬೇಕು ಎಂಬುದರಿಂದ ಹಿಡಿದು, ಅವರ ಪುರುಷತ್ವದ ಹರಣವಾಗಬೇಕು, ಅವರ ‘ಆಯುಧ’ವನ್ನು ನಿಷ್ಕ್ರಿಯಗೊಳಿಸಬೇಕು ಎನ್ನುವವರೆಗೂ ಆಕ್ರೋಶದ ಮಾತುಗಳು ಕೇಳಿಬಂದವು.  ಈ ಪ್ರಕರಣ ಅತ್ಯಂತ ಅಸಹ್ಯ, ಭೀಭತ್ಸ, ಪೈಶಾಚಿಕ ಹಾಗೂ ಅಮಾನವೀಯ ಎಂಬುದರಲ್ಲಿ ಎರಡು ಮಾತಿಲ್ಲ! ಆದರೆ ಇಂತಹದೊಂದು ರೇಪ್ ಪ್ರಕರಣ ಇದೇ ಮೊದಲ ಬಾರಿಗೆ ಆದಂತೆ ಬಿಂಬಿಸಿದ್ದು ಮಾತ್ರ ಅಸಹನೀಯ! 

ಹಿಂದೆ ಕೂಡ ಹೆಣ್ಣಿನ ಮೇಲೆ ದೌರ್ಜನ್ಯವಿತ್ತು. ನಮಗ್ಯಾರಿಗೂ ಗೊತ್ತಾಗುತ್ತಿರಲಿಲ್ಲ. ‘ಹೆಣ್ಣಿನ ಮೇಲೆ’ ಮಾತ್ರ! ಎಂದು ಹೇಳುವುದಕ್ಕಿಂತ    ಸಮಾಜದಲ್ಲಿ ದುರ್ಬಲ ವರ್ಗಗಳ ಮೇಲಿನ ದೌರ್ಜನ್ಯ ಎಂದಿಗೂ ಇತ್ತು, ಇಂದಿಗೂ ಇದೆ! ನಾನು ಚಿಕ್ಕವಳಿದ್ದಾಗ ‘ರೂಪ’ ಎಂಬಾಕೆಯನ್ನು ಸತಿ ಸಹಗಮನ ಮಾಡಿದ  ಕ್ರೂರ ಘಟನೆ ನನಗೆ ಇಂದಿಗೂ ಮನದಲ್ಲಿ ಅಚ್ಚೊತ್ತಿದೆ.  ಎಷ್ಟೋ ಮನೆಗಳಲ್ಲಿ ಇವತ್ತಿಗೂ ಕೂಡ ನಡೆಯುವ ಹಿಂಸೆ, ಹೊರಗೆ ಯಾರಿಗೂ ಗೊತ್ತಾಗುವುದೇ ಇಲ್ಲ. ಹೆಣ್ಣಿನ ಮೇಲೆ ಮಾತ್ರವಲ್ಲ, ಗಂಡಿನ ಮೇಲೆಯೂ ಕೂಡ ಇಂತಹುದ್ದೇ ಲೈಂಗಿಕ ಶೋಷಣೆಗಳು, ಮಕ್ಕಳ ಮೇಲೆ, ಎಲ್ಲ ದುರ್ಬಲರ ಮೇಲೂ ನಡೆಯುತ್ತಲೇ ಇದೆ. ಅಪ್ಪ, ಅಮ್ಮ, ಚಿಕ್ಕಪ್ಪ, ಚಿಕ್ಕಮ್ಮ, ಹೀಗೆ ಮನೆಯವರೇ ಲೈಂಗಿಕ ಶೋಷಣೆ ಮಾಡುತ್ತಾರೆ. ಅದು ಡೆಲ್ಲಿ ರೇಪ್ ಗಿಂತಲೂ ಭೀಕರ! ಮನೆಯವರೇ ಹೀಗೆ ಮಾಡಿದರೆ, ಮುಂದೆ ಯಾರನ್ನೂ ನಂಬಲಾಗುವುದು? ಹಿಂಸೆಯಲ್ಲಿನ ಪ್ರಮಾಣ ಹೆಚ್ಚು ಕಡಿಮೆಯಾಗಿರಬಹುದೇ ಹೊರತು, ಹಿಂಸೆ ಹಿಂಸೆಯೇ. ನಮ್ಮ ಅರಿವಿಗೆ, ಬೆಳಕಿಗೆ ಬಂದದಷ್ಟೇ ನಮಗೆ ತಿಳಿಯುವುದು. ಮೊದಲಿಗೆ ಯಾವುದೇ ‘ಜವಾಬ್ದಾರಿ’ ಇಲ್ಲದೇ, ಕೇವಲ, ತಮ್ಮ ಮಾಧ್ಯಮಗಳ ಹೆಚ್ಚುಗಾರಿಕೆ ತೋರಿಸಿಕೊಳ್ಳಲಷ್ಟೇ ತಾ ಮುಂದೆ, ನಾ ಮುಂದೆ ಎಂದು ಇಂಥ ‘ಗಂಭೀರ’ ವಿಷಯಗಳನ್ನು ತೋರಿಸುವ ಮೀಡಿಯಾಗಳ ಬಗ್ಗೆಯೇ ನನ್ನ ಧಿಕ್ಕಾರವಿದೆ. 

ಈಗ ಮಾಧ್ಯಮಗಳು ತಮ್ಮ, ತಮ್ಮ ಟಿ ಆರ್ ಪಿ ಹೆಚ್ಚಿಸಿಕೊಳ್ಳಲಷ್ಟೇ ಈ ತರಹದ ಸೆನ್ಸಿಟಿವ್ ಇಶ್ಯೂಗಳನ್ನು ಮೊದಲಿಗೆ ಹೆಡ್ ಲೈನ್ಸ್, ಸೆನ್ಶೇಷನಲ್ ಎಂದು ತೋರಿಸುತ್ತವೆ! ಅದರಲ್ಲೂ ಮುಖ್ಯವಾಗಿ ರೇಡಿಯೋ, ಟಿವಿಯವರು ನಡೆದುಕೊಳ್ಳುವ ರೀತಿ ನೋಡಿದರೆ ಅಸಹ್ಯವಾಗುತ್ತದೆ. ಮೊನ್ನೆ ಎಫ್ ಎಮ್ ೧೦೪ ಚಾನೆಲ್ ನಲ್ಲಿ ಹಾಡುಗಳ ಮಧ್ಯೆ, ಮಧ್ಯೆ ರೇಡಿಯೋ ಜಾಕಿ ಒಬ್ಬಳು ಈ ರೇಪ್ ವಿಷಯ ಮಾತನಾಡುತ್ತಿದ್ದಳು! ‘ಡೆಲ್ಲಿ ರೇಪ್’ ಬಗ್ಗೆ ನಿಮ್ಮ ಒಪಿನಿಯನ್ ತಿಳಿಸಿ ಎಂದು ಆಕೆ ಹಾಕಿದ ಹಾಡು ಯಾವುದೋ ಸೆಕ್ಸಿ ಐಟಮ್ ಸಾಂಗ್! ಇಂಥ ಗಂಭೀರ, ಸೆನ್ಸಿಟಿವ್ ವಿಷಯವನ್ನು ಹಾಡುಗಳ ಮಧ್ಯೆ ಚರ್ಚಿಸುವುದು! ಎಲ್ಲಿ? ಹೇಗೆ? ಎಷ್ಟು ಮಾತನಾಡಬೇಕು ಎಂಬುದರ ಅರಿವಿಲ್ಲ ಇವರ್ಯಾರಿಗೂ?! ಮುಖ್ಯವಾಗಿ ಇಂತಹ ವಿಷಯಗಳನ್ನು, ಇಂತಹವರು ಹೀಗೆ ಬೇಕಾಬಿಟ್ಟಿ ಮಾತನಾಡುವುದನ್ನು ನಿಷೇಧಿಸಬೇಕು. ಇವರಿಂದ ವಿಷಯದ ಗಂಭೀರತೆ ಹಾಳಾಗಿಬಿಡುತ್ತದೆ. 

ಇಷ್ಟೇ ಅಲ್ಲಾ, ಇಷ್ಟೆಲ್ಲಾ ಆದ ಮೇಲೂ ಅದರಿಂದ ಅಪರಾಧಿಗೆ ಸಿಕ್ಕ ಪನಿಶ್ ಮೆಂಟ್ ಏನು? ಯಾರಿಗೂ ಗೊತ್ತಾಗೊಲ್ಲ. ಯಾಕೆಂದರೆ ಅಪರಾಧಿ ಸಿಕ್ಕು, ಆತನ ಅಪರಾಧಗಳು ಕೋರ್ಟಿನಲ್ಲಿ ರುಜುವಾತಾಗುವಷ್ಟರಲ್ಲಿ, ಬಹುಶಃ ವಿಕ್ಟಿಮ್ ಗೂ ಕೂಡ ಅಪರಾಧ ಏನಾಗಿತ್ತು? ಅನ್ನುವುದು ಮರೆತೇ ಹೋಗಿರುತ್ತದೆಯೇನೋ? ಅಥವಾ ಗೆದ್ದೆ ಎಂದು ಬೀಗಲು ಆಗದಷ್ಟು ಮಾನಸಿಕ ತೊಂದರೆಗಳಿಗೀಡಾಗಿರುತ್ತಾರೆ :(.  ಆಕೆ ಒಮ್ಮೆ ‘ರೇಪ್’ ದೈಹಿಕವಾಗಿ ಅನುಭವಿಸಿದ್ದರೆ, ಪದೇ, ಪದೇ ಮಾಧ್ಯಮಗಳಲ್ಲಿ, ಕೋರ್ಟ್ ಗಳಲ್ಲಿ, ನಮ್ಮೆಲ್ಲರ ಬಾಯಿಗಳಲ್ಲಿ ಎಷ್ಟು ಬಾರಿ ‘ರೇಪ್’ ಆಗುತ್ತಾಳೋ?  ಆ ನೋವಿಗೆ ನಮ್ಮಲ್ಲಿ ಉತ್ತರವಿದೆಯೇ?  ನಾವು ಕೂಡ ಅಷ್ಟೇ. ಎಲ್ಲಾ ಚಾನೆಲ್ ಗಳನ್ನು ನೋಡುವುದು, ಬಾಯಿಗೆ ಬಂದಂತೆ ಮಾತನಾಡಿಕೊಳ್ಳುವುದು, ಒಂದಿಷ್ಟು ದಿವಸಗಳು ಕೂಗಾಡುವುದು, ಹಾರಾಡುವುದು ಅಷ್ಟೇ.  ಪ್ರಕರಣದ ಕಾವು ಆರಿದ ನಂತರ, ನಮ್ಮ ಕೆಲಸ, ನಮ್ಮ ಪಾಡು. ಇದರ ಬಗ್ಗೆಯೂ ನನ್ನನ್ನು ಒಳಗೊಂಡಂತೆ ಎಲ್ಲರ ಮೇಲೂ ನನಗೆ ತಿರಸ್ಕಾರವಿದೆ.  

ಇಂತಹ ಪ್ರಕರಣಗಳು ಘಟಿಸಿದೊಡನೆಯೇ ರಾಜಕೀಯ ಪಕ್ಷಗಳು ತಮ್ಮ ಬೇಳೆ ಬೇಯಿಸಿಕೊಳ್ಳಲು, ಸ್ವಹಿತಕ್ಕಾಗಿ ಪ್ರಯತ್ನ ಶುರು ಮಾಡಿಬಿಡುತ್ತಾರೆ. ಮಂಗಳೂರಿನ ಪಬ್ ಪ್ರಕರಣದಲ್ಲಿ ಸಂಸ್ಕೃತಿ ಎಂದು ಬೊಬ್ಬೆ ಹೊಡೆದ ಮುತಾಲಿಕ್ ಮತ್ತು ಸಂಘಟಿಗರು, ಅವರಿಗೆ ಪಿಂಕ್ ಚೆಡ್ಡಿಗಳನ್ನು ಕಳಿಸುವ ಮೂಲಕ ನಾವೇನೋ ಸಾಧಿಸಿದೆವು ಎಂದು ಬೀಗಿದ ರೇಣುಕಾ ಚೌಧರಿ ಮುಂತಾದವರು ಇಂತಹ ಘಟನೆಗಳು ನಡೆದಾಗ, ತಮಗೆ ಸಂಬಂಧವೇ ಇಲ್ಲದಂತೆ ನಟಿಸುವಾಗ ಅವರ ಬಗ್ಗೆ ಹೇಸಿಗೆಯಾಗುತ್ತದೆ. ಇಂತಹ ಅತ್ಯಾಚಾರಗಳು ನಡೆದ ಕೂಡಲೇ, ಆ ದೌರ್ಜನ್ಯಕ್ಕೊಳಗಾದ ಹೆಣ್ಣನ್ನು ಇನ್ನೊಂದಿಷ್ಟು ನೋಯಿಸುವ, ಇಡೀ ಹೆಣ್ಣು ಕುಲವನ್ನೇ ಅಶ್ಲೀಲವಾಗಿ ನೋಡುವ ಗಂಡಸರು, ಇಡೀ ಗಂಡಸರನ್ನೆಲ್ಲಾ ಅಪರಾಧಿಗಳಂತೆ, ಅವರಿಗೆಲ್ಲಾ ಶಿಕ್ಷೆ ಆಗಬೇಕು ಎಂದು ಕುದಿಯುವ ಹೆಂಗಸರು! ಇಲ್ಲಿ ಒಬ್ಬರ ತಪ್ಪು, ಇಡೀ ಒಂದು ಸಮುದಾಯದ ತಪ್ಪಾಗಿ ಬಿಂಬಿತವಾಗಿಬಿಡುತ್ತದೆ. ಇಲ್ಲಿ ಒಂದು ಒಳ್ಳೆಯ, ಆರೋಗ್ಯಕರ ಸಮಾಜದ ನಿರ್ಮಾಣಕ್ಕೆ, ನಮ್ಮ ಪೀಳಿಗೆ ಮುಂದುವರಿಯಲು ನಮಗೆ ಗಂಡು, ಹೆಣ್ಣು, ಇಬ್ಬರೂ ಬೇಕು ಎಂಬುದನ್ನೇ ನಾವು ಮರೆತಂತಿದ್ದೇವೆ. ನಮ್ಮ ನಮ್ಮ ವೈಯಕ್ತಿಕ ಅಭಿಪ್ರಾಯಗಳನ್ನು ಹಿಡಿದು, ಇಡೀ ಸಮಾಜದ ಸಮಸ್ಯೆಗೆ ಇದೇ ಪರಿಹಾರ ಎಂಬಂತೆ ಮಾತನಾಡಲು ತೊಡಗುತ್ತೇವೆ. 

ಇನ್ನೂ ನಾವು ಸಮಾಜದ ಅಂಗವೆಂದು, ನಮ್ಮಿಂದಲೇ ಸಮಾಜವೆಂದು ತಿಳಿಯದ ಕೆಲವು ತಟಸ್ಥ ಮಂದಿಗಳಿದ್ದಾರೆ. ಇವರು ತಮ್ಮ ಸುರಕ್ಷಿತ ವಲಯವನ್ನು ಬಿಟ್ಟು ಬರಲೊಲ್ಲರು! ತಮ್ಮ ಮನೆಯಲ್ಲಿ ಕಸ ಬಿದ್ದಿದ್ದರೆ, ಪಕ್ಕದ ಮನೆಗೆ ಎಸೆದು ಸುಮ್ಮನಾಗುವಂಥವರು! ಅದೃಷ್ಟವಶಾತ್ ನಾವು, ನಮ್ಮ ಮನೆಯವರು ಇಂಥ ದುರ್ಘಟನೆಗಳಿಗೆ ಈಡಾಗಿಲ್ಲ ಎಂದರಿಯದ ಇವರು, ಪರಿಸ್ಥಿತಿಯ ಸೂಕ್ಷ್ಮತೆ ಅರಿಯದೆ, ಯಾವುದಕ್ಕೂ ಬೆಂಬಲ ಕೊಡದವರು. ವೈಯಕ್ತಿಕ ಸಮಸ್ಯೆಗೂ, ಸಾಮಾಜಿಕ ಪಿಡುಗಿಗೂ ವ್ಯತ್ಯಾಸ ತಿಳಿಯದವರು ಇವರು! ನಾವು, ನಮ್ಮ ಮನೆ, ನಮ್ಮ ಮಕ್ಕಳು, ನಮ್ಮ ಮಕ್ಕಳನ್ನು ಸಂಸೃತಿ, ಸಂಸ್ಕಾರ ಎಂದು ಚೆಂದದಲ್ಲಿ ಬೆಳೆಸುತ್ತಿದ್ದೇವೆ ಎನ್ನುವ ಹುಂಬತನದಲ್ಲಿರುವವರು.   ಆದರೆ ಇದೇ ನಮ್ಮ ಮಕ್ಕಳು ಸಮಾಜಕ್ಕೆ ತೆರೆದುಕೊಂಡಾಗ ಇಂತಹ ಪ್ರಕರಣಗಳನ್ನು ಡೈಜೆಸ್ಟ್ ಮಾಡಿಕೊಳ್ಳುವುದಾದರೂ ಹೇಗೆ? ನಮ್ಮ ಮಕ್ಕಳಿಗೆ ನಾವು ಎಂತಹ ಕ್ರೂರ ಕೆಲಸ ಮಾಡಿದರೂ, ನಿನಗೇನು ಶಿಕ್ಷೆ ಆಗದು ಎಂಬುದನ್ನು ನಾವು ಈ ಮೂಲಕ ಹೇಳಿಕೊಡುತ್ತಿಲ್ಲವೇ? ನಾವು ಎಷ್ಟೇ ನಮ್ಮ ಮಕ್ಕಳನ್ನು ಹುಷಾರಾಗಿ ನೋಡಿಕೊಂಡರೂ, ನಮಗೆ ಅರಿವಿಲ್ಲದಂತೆ ನಮ್ಮ ಮಕ್ಕಳು ಸಮಾಜದಲ್ಲಿನ ಒಳಿತು ಕೆಡಕುಗಳತ್ತಾ ಆಕರ್ಷಿತರಾಗುವುದಿಲ್ಲವೇ? ನಮ್ಮಿಂದಲೇ ಸಮಾಜ ಅಲ್ಲವೇ? ಇದಾವುದನ್ನೂ ಯೋಚಿಸದೇ, ನೀನೇನೂ ಬೇಕಿದ್ರೂ ಮಾಡಿಕೋ?  ನನಗೂ ಇದಕ್ಕೂ ಸಂಬಂಧವಿಲ್ಲ ಎಂದು ಹೇಳುತ್ತಾ ತಮ್ಮ ಸ್ವಹಿತ, ತಮ್ಮ ಸ್ವಾರ್ಥ, ತಮ್ಮ ಏಳಿಗೆ, ಉದ್ದಾರ ನೋಡಿಕೊಳ್ಳುವವರು. ಇವರಿಗೆ ಇಂತಹ ಪ್ರಕರಣಗಳೂ ಯಾವುದೂ ಕೂಡ ಬಾದಿಸದು.

ಹಾಗಾದರೆ ನಾವು ಮಾಡಬೇಕಾದುದೇನು? ಪ್ರತಿಯೊಬ್ಬ ಮನುಷ್ಯನೂ ವೈಯಕ್ತಿಕ ಹಿತಾಸಕ್ತಿಯನ್ನು ಬಿಟ್ಟು, ಸಮಾಜಕ್ಕಾಗಿ, ತಮ್ಮ ಮುಂದಿನ ಪೀಳಿಗೆಗಾಗಿ, ಇಂತಹ ಪ್ರಕರಣಗಳಾದಾಗ ಒಗ್ಗಟ್ಟಿನಿಂದ ಒಮ್ಮನಸಿನಿಂದ ಸಮಾಜದ ಹಿತದೃಷ್ಟಿಯಿಂದ ಕೆಲಸ ಮಾಡಬೇಕಿದೆ. ಅಲ್ಲಿ ಅಂದೂ ರೇಪ್ ಆದಾಕೆಯನ್ನು ಬಸ್ಸಿನಿಂದ ಹೊರಗೆ ಎಸೆದಾಗ, ಯಾರೊಬ್ಬರೂ! ಆಕೆಯನ್ನು ರಕ್ಷಿಸಿಕೊಳ್ಳಲು ಅಂದರೆ, ಆಸ್ಪತ್ರೆಗೆ ಸೇರಿಸಲು ಬರಲಿಲ್ಲವೆಂದರೆ.....? ಎಷ್ಟು ನೋವಾಗಬಹುದು? ಹೇಳಿ, ನಮ್ಮನೆಯವರು ಈ ತರಹದ ಘಟನೆಗಳಲ್ಲಿ ಸಿಕ್ಕಿಕೊಂಡಾಗಲೇ ನಮಗೆ ಆ ನೋವಿನ ಅನುಭವ ಆಗಬೇಕೆ? ಅಷ್ಟು ಕ್ರೂರಿಗಳೇ ನಾವು? ವೋಟುದಾರರಿಂದ ಹಿಡಿದು ರಾಜಕೀಯ ಪಕ್ಷಗಳ ತನಕವೂ ಹಾಗೂ ಪೋಲೀಸ್ ವ್ಯವಸ್ಥೆಯಿಂದ ಹಿಡಿದು ಕೋರ್ಟುಗಳವರೆಗೂ, ಪ್ರತಿಯೊಬ್ಬರೂ ಸ್ವಾರ್ಥವನ್ನು ಮರೆತು, ಸ್ವಹಿತವನ್ನು ಬಿಟ್ಟು, ಯಾವುದೇ ಹಿಡನ್ ಅಜೆಂಡಾ ಇಲ್ಲದೆ ಕೆಲಸ ಮಾಡುವ ಅವಶ್ಯಕತೆ ಈಗ ಅತ್ಯಗತ್ಯ. 

ನಿಜವಾಗಿಯೂ ಜನರಿಗೆ ನ್ಯಾಯ ಒದಗಿಸಬೇಕೆಂಬ ಅರಿವಿದ್ದರೆ, ಮಾಧ್ಯಮಗಳು ಜವಾಬ್ದಾರಿಯುತವಾಗಿ ಕಾರ್ಯಕ್ರಮಗಳನ್ನು ನಿರೂಪಿಸಲಿ.  ಇಂತಹ ಘಟನೆಗಳು ನಡೆದಾಗ, ಆ ದಿವಸ ಮನರಂಜನಾ ಕಾರ್ಯಕ್ರಮಗಳನ್ನು ನಿಲ್ಲಿಸಿ, ‘ಸೆನ್ಸಿಬಲ್’ ಆಗಿ ಮಾತನಾಡುವವರನ್ನು, ನಿಜವಾದ ಕಾಳಜಿ ಇರುವವರನ್ನು ಕರೆಸಿ, ಚರ್ಚಿಸಲಿ. ಅದನ್ನು ಫಾಲೋ ಅಪ್ ಮಾಡಿ ತೀರ್ಪು ಸಿಗುವ ತನಕ ಹೋರಾಡಲಿ. ‘ನೊಂದವರಿಗೆ’ ಆ ಸಮಯದಲ್ಲಿ ಅವಶ್ಯವಾಗಿ ಬೇಕಾದಂಥ ಎಲ್ಲಾ ಸಹಾಯಗಳನ್ನು ಮಾಡಲಿ.  ಜನರನ್ನು ಒಗ್ಗೂಡಿಸಲಿ, ಧನಸಹಾಯದಿಂದ ಹಿಡಿದು ಮಾನಸಿಕವಾಗಿ ನಾವಿದ್ದೇವೆ ಎಂಬ ಭರವಸೆಯನ್ನು ಅವರಲ್ಲಿ ಉಂಟು ಮಾಡಲಿ, ನಾನು ಒಂಟಿಯಲ್ಲ! ಅಪರಾಧಿಗಳಿಗೆ ಶಿಕ್ಷೆ ಆಗುತ್ತದೆಯೋ, ಇಲ್ಲವೋ, ನನ್ನೊಂದಿಗೆ ಇಡೀ ಸಮಾಜ ನಿಂತಿದೆ ಎಂಬ ನಂಬಿಕೆ ಇಂತಹ ಪ್ರಕರಣಗಳಲ್ಲಿ ನೊಂದವರಿಗೆ ಸಿಕ್ಕಿಬಿಟ್ಟರೆ, ಅವರಿಗಾಗುವ ಸಮಾಧಾನ, ಅವರಿಗೆ ಮುನ್ನುಗ್ಗಲು ಸಿಗುವ ಧೈರ್ಯ, ಇಡೀ ಸಮಾಜಕ್ಕೆ ಸಿಕ್ಕ ಜಯ. ಅಲ್ಲವೇ? 

ಅದರೊಟ್ಟಿಗೆ ಪದೇ, ಪದೇ ಇಂತಹ ಪ್ರಕರಣಗಳು ಜರುಗುತ್ತಿರುವುದು ಏಕೆ? ಎಂಬುದನ್ನು ಕೂಲಂಕುಷವಾಗಿ ಪರೀಶೀಲಿಸಬೇಕಾದ ಅಗತ್ಯವಿದೆ.  ಇಂತಹ ಕ್ರೂರ, ಆಕ್ರಮಣಕಾರಿ ಮನಸ್ಥಿತಿ ಉಂಟಾಗಲು ಕಾರಣಗಳೇನು?  ಹೆಣ್ಣನ್ನು ತುಳಿಯುವುದೇ ಮೂಲ ಉದ್ದೇಶವೇ? ಅಪರಾಧಿಗಳು ಚಿಕ್ಕವರಿದ್ದಾಗ ಏನಾದರೂ ಶೋಷಣೆಗೆ ಒಳಗಾಗಿದ್ದಾರೆಯೇ?  ಅಥವಾ ಬೇರೆ ಇನ್ನೇನಾದರೂ ಕಾರಣಗಳಿವೆಯೇ ಎಂಬುದನ್ನು ತಿಳಿದುಕೊಂಡರೆ, ಮೂಲದಲ್ಲಿಯೇ ತಿದ್ದಲು ಆಗಬಹುದೇನೋ? ಒಟ್ಟಿನಲ್ಲಿ ಸಂಘಜೀವಿ ಮನುಷ್ಯ ನಾನಾ ಕಾರಣಗಳಿಂದ ಒಂಟಿಯಾಗುತ್ತಿದ್ದಾನೆ!  ಹಣಕ್ಕಾಗಿ, ಐಷಾರಾಮದ ಜೀವನಕ್ಕಾಗಿ ಸ್ವಾರ್ಥಿಯಾಗುತ್ತಿದ್ದಾನೆ. ನಂಬಿಕೆ, ಪ್ರೀತಿ, ವಿಶ್ವಾಸ, ಸಂಘಟನೆ ಎಲ್ಲವೂ ಅರ್ಥ ಕಳೆದುಕೊಳ್ಳುತ್ತಿದೆ. ಕಾನೂನು ಸುವ್ಯವಸ್ಥೆಯಿಂದ ಹಿಡಿದು ಪ್ರತಿಯೊಂದು ಸಿಸ್ಟಮ್ ಗಳಲ್ಲಿಯೂ ನಿಷ್ಟಾವಂತ ಜನರು ಕಡಿಮೆಯಾಗುತ್ತಿದ್ದಾರೆ. ಹುಳುಕುಗಳೇ ರಾರಾಜಿಸುತ್ತಿದ್ದಾವೆ. ಒಂದಷ್ಟು ಹಣ ಚೆಲ್ಲಿದರೆ ಸಾಕು! ಪಾರಾಗಬಹುದು ಎನ್ನುವ ಮನೋಭಾವ, ಎಂತಹ ಕ್ರೂರ ಕೆಲಸಕ್ಕೂ ಅಡಿಯಿಡುವಂತೆ ಮಾಡುತ್ತಿದೆ. ನಮ್ಮ ಮಕ್ಕಳಿಗೆ ಸಮಾಜದಲ್ಲಿ ಇಂಥ ವಾತಾವರಣ ಇದ್ದರೆ ಅವರೇನು ಕಲಿಯುತ್ತಾರೆ?  ಎಲ್ಲರೂ ಯೋಚಿಸಬೇಕಾದ ವಿಷಯ. ಹಾ! ಒಮ್ಮತದಿಂದ, ಒಗ್ಗಟ್ಟಿನಿಂದ ಗಂಡು, ಹೆಣ್ಣು, ಬಡವ ಬಲ್ಲಿದ ಭೇಧವಿಲ್ಲದೇ ಮಾಡಬೇಕಾದ ಕೆಲಸ.

Sunday, December 30, 2012

ನಾವು ಹೇಳುವುದಾದರೂ ಯಾರಿಗೇ? :(


ಸ್ವಪ್ನ ಸಾರಸ್ವತದಲ್ಲಿ ಒಂದು ಮಾತಿದೆ, ನಾಗ್ಡೋ ಬೇತಾಳ ಹೇಳುವುದು ‘ಮಾತುಗಳು ಅರ್ಥ ಕಳೆದುಕೊಳ್ಳುತ್ತವೆ! ಶಾಪಗಳು ತಗಲುವುದಿಲ್ಲ, ಅಂಥ ಕಾಲ ಬರುತ್ತದೆ! :( ಹ್ಮ್. ಅಂಥ ಕಾಲ ಬಂದಿದೆ.  ಮೊನ್ನೆ ಡೆಲ್ಲಿ ರೇಪ್ ನಂಥ ಭೀಕರ ದೌರ್ಜನ್ಯ ವಾಗಿರಬಹುದು ಅಥವಾ ಪ್ರತಿ ನಿತ್ಯ ನಡೆಯುತ್ತಿರುವ ಇಂತಹ ಅಮಾನುಷ ಘಟನೆಗಳನ್ನು ನೋಡುತ್ತಿದ್ದಾಗಲೆಲ್ಲಾ ನನಗೆ ಇದೇ ಮಾತು ನೆನಪಿಗೆ ಬರುತ್ತದೆ.

ನಾನು ಸಣ್ಣವಳಾಗಿದ್ದಾಗ, ಅಜ್ಜನ ಊರಿಗೆ ಹೋಗಿದ್ದಾಗ (ಮಂಗಳೂರಿನ ಬಳಿಯ ಪುಟ್ಟ ಹಳ್ಳಿ)  ಬಾಗಿಲುಗಳಿಗೆ ಚಿಲಕವೇ ಹಾಕುತ್ತಿರಲಿಲ್ಲ,  ಮನೆಗಳಲ್ಲಿ ಅಲ್ಮೇರಾ ಇವುಗಳು ಕೂಡ ಮರದ್ದೇ ಆಗಿದ್ದು, ಬೀಗ ಎಂಬುದೆಲ್ಲಾ ನಾನು ನೋಡಿರಲಿಲ್ಲ. ತಾಮ್ರದ ಬಿಂದಿಗೆಗಳು ಹಾಗೇಯೇ ಬಾವಿ ಕಟ್ಟೆಯ ಬಳಿ ಇಟ್ಟು ಬರುತ್ತಿದ್ದರು. ನಾನು ಬೆಂಗಳೂರಿನಿಂದ ಹೋಗುತ್ತಿದ್ದರಿಂದ ನನಗೆ ಇವೆಲ್ಲವೂ ಆಶ್ಚರ್ಯ!  ಅಣ್ಣನನ್ನು ಕೇಳಿದ್ದಕ್ಕೆ, ಯಾರೂ ತೆಗೆದುಕೊಂಡು ಹೋಗುವುದಿಲ್ಲ, ಅಷ್ಟು ನಂಬಿಕೆ ಇದೆ ಎಂದು ಹೇಳುತ್ತಿದ್ದ.  ಆದರೆ ಆಗ ಬೆಂಗಳೂರಿನಲ್ಲಿ ಸ್ವಲ್ಪ ಕಳ್ಳತನದ ಭಯವಿತ್ತು.  ಆದರೂ ಸಿಕ್ಕಿದನ್ನಷ್ಟೇ ಅಂದರೆ, ಕಿಟಕಿಯಲ್ಲಿಟ್ಟ ವಾಚು, ರೇಡಿಯೋ,  ಹೊರಗೆ ಒಣಗಿ ಹಾಕಿದ ಬಟ್ಟೆಗಳು, ಇಂತಹವುಗಳನ್ನೇ ತೆಗೆದುಕೊಂಡು ಹೋಗುತ್ತಿದ್ದರೇ ವಿನಃ ಮನೆಗೆ ನುಗ್ಗಿ, ದೋಚಲು ಅಥವಾ ಮನೆಯವರನ್ನು ಕೊಲೆ ಮಾಡಲು ಭಯವಾಗುತ್ತಿತ್ತು.  ಏಕೆಂದರೆ ಒಂದು ಕೂಗು ಹಾಕಿದ ತಕ್ಷಣ ಅಕ್ಕ, ಪಕ್ಕದ ಮನೆಯವರೆಲ್ಲರೂ ಸೇರಿ, ಕಳ್ಳನನ್ನು ಚಚ್ಚಿ ಹಾಕುತ್ತಿದ್ದರು. ಇನ್ನೂ ಜಿಂಡಾಲ್ ಮುಂತಾದ ಕ್ವಾರ್ಟರ್ಸ್ ಮನೆಗಳಲ್ಲಿ (ಬೆಂಗಳೂರಿನಲ್ಲಿಯೂ ಕೂಡ) ಹೊರಗೆ ಎಲ್ಲಿಗೆ ಹೋಗುವಾಗಲೂ ಚಿಲಕ ಹಾಕುವ ಪದ್ಧತಿ ಇರುತ್ತಿರಲಿಲ್ಲ. ನೆರೆಹೊರೆಯವರಲ್ಲಿ ಅಷ್ಟೊಂದು ನಂಬಿಕೆ ಆಗ. 

ಇನ್ನೂ ಮನೆಯಲ್ಲಿ ಕೆಲಸದವಳನ್ನು ಇಟ್ಟುಕೊಳ್ಳುವ ಪದ್ಧತಿ ಕೂಡ ಇರಲಿಲ್ಲ. ಮನೆಯವರೇ ಮಕ್ಕಳಾದಿಯಾಗಿ ಎಲ್ಲರೂ ಸೇರಿಕೊಂಡು ಮನೆಕೆಲಸವನ್ನೆಲ್ಲಾ ಮಾಡಿಕೊಳ್ಳುತ್ತಿದ್ದರು. ಮನೆಯಲ್ಲಿನ ದೊಡ್ಡವರು ಎಲ್ಲಿಗಾದರೂ ಹೋಗುವುದಾದರೆ, ಮಕ್ಕಳು ಶಾಲೆಯಿಂದ ಬಂದ ಮೇಲೆ ಪಕ್ಕದ ಮನೆಯವರು ನೋಡಿಕೊಳ್ಳುತ್ತಿದ್ದರು.  ಒಬ್ಬರಿಗೊಬ್ಬರು ಸಹಾಯ ಮಾಡುತ್ತಿದ್ದರು.  ಎಲ್ಲರಲ್ಲಿಯೂ ಒಂದು ಬದ್ಧತೆ ಇತ್ತು.  ಸಹಕಾರವಿತ್ತು. ಕಿತ್ತಾಡಿದರೂ ಅದು ಆ ಕ್ಷಣಕಷ್ಟೇ ಆಗಿರುತ್ತಿತ್ತು. ನಂತರ ಒಂದಿಷ್ಟು ದಿವಸಗಳಾದ ಮೇಲೆ, ಯಾವುದೋ ಜಾತ್ರೆಯೋ, ಹಬ್ಬವೋ ಬಂದಾಗ ಮತ್ತೆ ಒಂದಾಗುತ್ತಿದ್ದರು. ಮಕ್ಕಳು ಕೂಡ ಹೊಡೆದಾಡಿಕೊಂಡರೂ, ಒಂದಷ್ಟು ಕ್ಷಣಗಳಾದ ಮೇಲೆ ಮತ್ತೆ ಒಂದುಗೂಡಿ ಆಡುತ್ತಿದ್ದರು. ಇಲ್ಲಿ ಅವರು ಶ್ರೀಮಂತರು, ನಾವು ಬಡವರು, ಅವರು ಓದಿದವರು, ನಾವು ಅನಕ್ಷರಸ್ಥರು ಎಂಬ ಭೇಧ ಭಾವ ಇರುತ್ತಿರಲಿಲ್ಲ. ಮಕ್ಕಳು ಮನೆಯಲ್ಲಿ ಗಲಾಟೆ ಮಾಡದಿದ್ದರೇ ಸೈ, ಹೊರಗೆ ಹೋಗಿ ಆಡಿಕೊಳ್ಳಲಿ ಎಂಬುದಷ್ಟೇ ದೊಡ್ಡವರು ಯೋಚಿಸುತ್ತಿದ್ದರು. ಅಣ್ಣ ಒಮ್ಮೆ ಕೆಟ್ಟ ಪದವನ್ನು ಕಲಿತು ಬಂದಾಗ ಅಮ್ಮ ಬಾಸುಂಡೆ ಬರುವಂತೆ ಬಾರಿಸಿದ್ದು ನನಗೆ ಈಗಲೂ ನೆನಪಿದೆ.  ಅಮ್ಮ ಒಂದಕ್ಷರವೂ ಪಕ್ಕದ ಮನೆಯ ಹುಡುಗನಿಗೆ ಬೈದಿರಲಿಲ್ಲ. ನಮ್ಮ ಮನೆಯಲ್ಲಿ ಇಷ್ಟು ಸಂಸ್ಕಾರವಿದ್ದು ನೀನು ಕಲಿತಿದ್ದು ಹೇಗೆ? ಎಂಬುದಷ್ಟೇ ಅವಳ ಪ್ರಶ್ನೆಯಾಗಿತ್ತು! ಅಷ್ಟೇ ಕೊನೆ, ಅಣ್ಣ ಇವತ್ತಿಗೂ ಎಷ್ಟೇ ಕೋಪ ಬಂದರೂ, ಕೆಟ್ಟ ಪದಗಳನ್ನು ಉಪಯೋಗಿಸುವುದಿಲ್ಲ. ಅವನಿಗೆ ಹೊಡೆದದ್ದು ನೋಡಿದ ನನಗೇ ಬುದ್ಧಿ ಕಲಿಯಲು ಅಷ್ಟೇ ಸಾಕಿತ್ತು!

ಬಾಯಿ ಮಾತಿನ ಆಧಾರದ ಮೇಲೆ ಅಪ್ಪ, ಅವರ ಕಸಿನ್ ಒಬ್ಬನಿಗೆ ತಾವು ಕೆಲಸ ಮಾಡುತ್ತಿದ್ದ ಜಾಗದಲ್ಲೇ ಕೆಲಸ ಕೊಡಿಸಿದ್ದರು.  ಆತ ಕಲೆಕ್ಟ್ ಮಾಡಿದ ಹಣವನ್ನೆಲ್ಲಾ ಸರಿಯಾಗಿ ಬ್ಯಾಂಕ್ ಗೆ ಕಟ್ಟದೇ, ಸ್ನೇಹಿತನ ಮಾತು ಕೇಳಿ ಹಣವನ್ನು ಹಾಳು ಮಾಡಿಕೊಂಡು ಓಡಿ ಹೋದ.  ಅಪ್ಪ ಕಷ್ಟ ಪಟ್ಟು, ಬಡ್ಡಿ, ಚಕ್ರಬಡ್ಡಿ ಎಂದು ಸಾಲ ತಂದು ಮಾತು ಉಳಿಸಿಕೊಂಡಿದ್ದರು.  ಹಾಗೆಯೇ ಯಾವುದೇ ಸಹಿ ಮಾಡಿಸಿಕೊಳ್ಳದೇ ಸಾಲ ಕೊಟ್ಟಿದ್ದವರಿಗೂ ಕೂಡಾ ತಮ್ಮೆಲ್ಲಾ ಶಕ್ತಿ ಮೀರಿ (ಹೆಂಡತಿ, ಮಕ್ಕಳಿಗೆ ತೊಂದರೆಯಾದರೂ ಕೂಡ), ಹಣ ತೀರಿಸಿದ್ದರು. ನಾನು ಆಗ ಬಹಳ ಸಣ್ಣವಳು.  ನನಗೇ ತಿಳಿದಂತೆ, ಅಪ್ಪ ತನ್ನನ್ನು ಈ ಸ್ಥಿತಿಗೆ ತಂದಿಟ್ಟ ತನ್ನ ತಮ್ಮನನ್ನು ಒಮ್ಮೆಯೂ ಬೈದುಕೊಂಡಿರಲಿಲ್ಲ. ಅಪಾರವಾಗಿ ನೊಂದಿದ್ದರು. ಅಮ್ಮ ಕೂಡ ನಾನು ಹಿಂದೆ ಮಾಡಿದ ಯಾವುದೋ ಕರ್ಮ ಎಂದೇ ನೊಂದುಕೊಳ್ಳುತ್ತಿದ್ದಳು ಹೊರತು ಅದನ್ನು ಲೋಕದ ಮೇಲೆ ತೀರಿಸಿಕೊಂಡಿರಲಿಲ್ಲ. ಇದೇ ಚಿಂತೆಯಲ್ಲಿ ಅನಾರೋಗ್ಯದಿಂದ ತೀರಿಕೊಂಡ ನಂತರ, ಉಳಿದಿದ್ದ ಅಲ್ಪಸ್ವಲ್ಪ ಸಾಲವನ್ನು ಅಣ್ಣ ತೀರಿಸಿದ್ದ. ಅಪ್ಪನಿಗೆ ಅವರು ಕೊಟ್ಟಿದ್ದಾರೆ ಎಂಬ ಯಾವುದೇ ಪ್ರೂಫ್ ಇಲ್ಲದಿದ್ದರೂ ಮಾತು ಮುಖ್ಯವಾಗಿತ್ತು. ಅಷ್ಟರಮಟ್ಟಿಗಿನ ಬದ್ಧತೆ ಎಲ್ಲರಲ್ಲಿಯೂ ಇತ್ತು.   ಅವರು ಮಾಡಿದ್ದು ಅವರಿಗೇ ಎಂದಷ್ಟೇ ಹೇಳಿ ತನ್ನೆಲ್ಲಾ ಸಿಟ್ಟನ್ನು ತೀರಿಸಿಕೊಳ್ಳುತ್ತಿದ್ದ ಅಮ್ಮ, ಈಗಲೂ ತನ್ನ ಆ ಮೈದುನನನ್ನು (ತನ್ನಿಡೀ ಬದುಕೇ ಆತನಿಂದ ಹಾಳಾಗಿದ್ದರೂ!) ಮಾತನಾಡಿಸುತ್ತಾಳೆ ಎಂದರೆ ಎಂಥವರಿಗಾದರೂ ಆಶ್ಚರ್ಯವಾಗಬಹುದು.

ಹಾಗಾದರೇ ಹೆಣ್ಣಿನ ಮೇಲೆ ಈ ಹಿಂದೆ ದೌರ್ಜನ್ಯ ಆಗುತ್ತಿರಲಿಲ್ಲವೇ?  ರಾಮಾಯಣ, ಮಹಾಭಾರತ ಕಾಲದಿಂದಲೂ ಹೆಣ್ಣಿನ ಮೇಲೆ ಈ ತರಹದ ಹಿಂಸೆ / ದೌರ್ಜನ್ಯ ನಡೆಯುತ್ತಿತ್ತು. ಆದರೆ ನಮಗೆ ತಿಳಿಯುತ್ತಿರಲಿಲ್ಲ. ತಿಳಿದರೂ, ನಮಗೆಲ್ಲಾ ದ್ರೌಪದಿಯನ್ನು ಕೆಣಕಿದ ದುರ್ಯೋಧನ, ದುಶ್ಯಾಸನ, ಕೀಚಕರ ಗತಿ ಹೀಗಾಯಿತು, ಹೆಣ್ಣನ್ನು ಕೆಣಕಿದರೆ ಹೀಗಾಗುವುದು ಎಂಬ ನೀತಿ ಪಾಠ ಮನೆ, ಮನೆಯಲ್ಲೂ ನಡೆಯುತ್ತಿತ್ತು.  ಪ್ರತಿ ವರ್ಷ ಹೋಳಿಹುಣ್ಣಿಮೆಯಂದು ಕಾಮದಹನ ನಡೆದಾಗ ಹೇಳುತ್ತಿದ್ದ ಎಷ್ಟೋ ವಾಕ್ಯಗಳು ಆಗ  (ಕಾಮಣ್ಣ ಮಕ್ಕಳೇ, ಕಾಳೇ, ಸೂಳೇ ಮಕ್ಕಳೇ... ಅರ್ಧರ್ಧ ನೆನಪಿದೆ) ನನಗೆ (ಚಿಕ್ಕವಳಿದ್ದದ್ದರಿಂದ) ಅರ್ಥವಾಗದಿದ್ದರೂ, ಯುವಕರಿಗೆ ನೀತಿಪಾಠವಾಗಿರುತ್ತಿತ್ತು. ಸಮಾಜದಲ್ಲಿ ನಾವು ಹೇಗಿರಬೇಕು? ಎಂಬುದನ್ನು ಸೂಚ್ಯವಾಗಿ, ಸೂಕ್ಷ್ಮವಾಗಿ ತಿಳಿಸುತ್ತಿದ್ದರು. ದೇವಸ್ಥಾನಗಳಲ್ಲಿ ನಡೆಯುವ ಪೂಜೆ, ಪುನಸ್ಕಾರಗಳು, ಮೈಮೇಲೆ ಬರುವ ದೇವರು, ದೆವ್ವ ಎಲ್ಲವೂ ನೀತಿ ಹೇಳುತ್ತಿತ್ತೇ ಹೊರತು ಕೆಟ್ಟದ್ದು ಮಾಡಿ ಎಂದೆಲ್ಲೂ ಹೇಳುತ್ತಿರಲಿಲ್ಲ.  ಹಾಗೂ ಎಲ್ಲರೂ ಭಯಭಕ್ತಿಯಿಂದಲೇ ಇವೆಲ್ಲಾ ಸಮಾರಂಭಗಳಲ್ಲಿ ಪಾಲ್ಗೊಳ್ಳುತ್ತಿದ್ದರು. ಒಳ್ಳೆಯವರಿಗೆ ಒಳ್ಳೆಯದೇ ಆಗುತ್ತದೆ, ಕೆಟ್ಟದು ಮಾಡಿದರೆ ದೇವರು ಶಿಕ್ಷೆ ಕೊಡುತ್ತಾನೆ ಎಂಬ ಭಯವಿತ್ತು. ಏನೇ ದೌರ್ಜನ್ಯಗಳು ಬೆಳಕಿಗೆ ಬರುವಷ್ಟು ದಿನಗಳು ಮಾತ್ರ ಅಪರಾಧಿಗಳು ಸುರಕ್ಷಿತರಾಗಿರುತ್ತಿದ್ದರು. ಸಿಕ್ಕಿ ಬೀಳುವೆನೆಂಬ ಭಯ, ಜೊತೆಗೆ ಹೀಗೆ ಮಾಡಿದೆನೆಂಬ  ಗಿಲ್ಟ್  ಅವರಿಗೆ ಕಾಡುತ್ತಿರುತ್ತಿತ್ತು.  ಹೀಗೆಲ್ಲಾ ಪೈಶಾಚಿಕ ಕೃತ್ಯ ನಡೆಸಿ, ಆರಾಮಾಗಿ ಬೆಳಿಗ್ಗೆ ಎದ್ದು ಕೆಲಸಕ್ಕೆ ಹೋಗುವಂಥ ಕ್ರೂರ ಮನಸ್ಥಿತಿ ಇರಲಿಲ್ಲ!

ಇನ್ನೂ ಶಾಲೆಗಳಲ್ಲಂತೂ ದಿನಕ್ಕೊಂದು ಕಥೆ, ಅದರ ನೀತಿ ಪಾಠವನ್ನು ನಾವು ಬರೆದುಕೊಂಡು ಹೋಗಬೇಕಿತ್ತು. ಚೆನ್ನಾಗಿ ಓದುತ್ತಿದ್ದವರೇ ಶಾಲಾ ಲೀಡರ್ ಗಳಾಗುತ್ತಿದ್ದರು. ತಂಟೆ ಮಾಡಿದವರಿಗೆ, ಸೋಮಾರಿತನ ಮಾಡುವವರಿಗೆ ಬಾರು ಕೋಲಿನಿಂದ ಅಂಗೈಗೆ ಪೆಟ್ಟು  ಬೀಳುತ್ತಿತ್ತು.  ಪ್ರತಿ ಬಾರಿಯು ಮೊದಲಿಗನಾಗಿ ಬಂದು, ಒಮ್ಮೆ ಯಾವುದೇ ಕಾರಣಕ್ಕಾಗಿ, ಆ ಸ್ಥಾನದಿಂದ ಕೆಳಗಿಳಿದರೆ, ನಿರ್ದಾಕ್ಷಿಣ್ಯವಾಗಿ ಆತನ ಲೀಡರ್ ಷಿಪ್ ಕಿತ್ತುಕೊಳ್ಳಲಾಗುತಿತ್ತು. ಯಾವುದೇ ರೀತಿಯ ವಶೀಲಿ ನಡೆಯುತ್ತಿರಲಿಲ್ಲ. ಹುಡುಗಿಯರು ಒಟ್ಟಿಗೆ ಕುಳಿತರೆ, ಹುಡುಗರು ಒಟ್ಟಿಗೆ ಕುಳಿತರೆ ಗಲಾಟೆಯಾಗುವುದೆಂದು, ಒಬ್ಬ ಹುಡುಗ, ಒಬ್ಬ ಹುಡುಗಿ ಹೀಗೆ. ಪಕ್ಕದಲ್ಲಿ ಕೂಡಿಸುತ್ತಿದ್ದರು. ಹೈಸ್ಕೂಲುಗಳಲ್ಲಿಯೂ ಹೀಗೆ ಇರುತ್ತಿತ್ತು. ಯಾರಾದರೂ ತಪ್ಪು ಮಾಡಿದರೆ, ಸರಿ ಮಾಡಿದವ / ದವಳ ಕಾಲ ಕೆಳಗೆ ತೂರಿಸುತ್ತಿದ್ದರು.  ಇಂಥ ಶಿಕ್ಷೆಗಳಿಗೆಲ್ಲಾ ಹುಡುಗ, ಹುಡುಗಿ ಎಂಬ ಭೇಧ ಭಾವ ಇರುತ್ತಿರಲಿಲ್ಲ. ಪಕ್ಕದಲ್ಲಿ ಕೂತಾಕ್ಷಣ, ಲೈಂಗಿಕ ಬಯಕೆಗಳಾಗಲೀ, ತೀಟೆಗಳಾಗಲೀ, ದೈಹಿಕವಾಗಿ ಬಯಸುತ್ತಿದ್ದದ್ದಾಗಲೀ, ಇವ್ಯಾವುದೂ ಕಾಡುತ್ತಿರಲಿಲ್ಲ. ಶಿಕ್ಷಕ / ಶಿಕ್ಷಕಿಯರನ್ನು ಕಂಡರೆ ಆರಾಧನಾ ಭಾವ ಇರುತ್ತಿತ್ತೇ ಹೊರತು ಲೈಂಗಿಕ ಆಸೆಗಳು ಅರಳುತ್ತಿರಲಿಲ್ಲ. ಮದುವೆಯಾಗದೇ ಇವೆಲ್ಲವೂ ತಪ್ಪು ಎನ್ನುವ ಭಾವ ಹೆಚ್ಚು ಕಡಿಮೆ ಎಲ್ಲರಲ್ಲಿಯೂ ಇತ್ತು.  ಲೈಂಗಿಕ ಶೋಷಣೆಗೆ ಹೆಣ್ಣು ಮಕ್ಕಳು, ತಮ್ಮ ಮನೆಯವರಿಂದಲೇ, ದೊಡ್ಡವರಿಂದಲೇ ಬಲಿಯಾಗುತ್ತಿದ್ದರೇ ಹೊರತು, ಮತ್ತೊಬ್ಬ ಸಹಪಾಠಿ ಮಾಡುತ್ತಿದ್ದದ್ದು ಅತಿ ವಿರಳ. ಯಾವುದೇ ಶಾಲಾ ದಿನಾಚರಣೆಗಳೂ ಸುಮ್ಮನೇ ಕಾಟಾಚಾರಕ್ಕೆ ಮಾಡುತ್ತಿರಲಿಲ್ಲ. ನನಗೆ ಈಗಲೂ ವಿಶ್ವ ವಿನೂತನ ಹಾಡು ನಿನ್ನೆ, ಮೊನ್ನೆ ಹಾಡಿದಂತಿದೆ. ಅಷ್ಟು ತಲ್ಲೀನರಾಗಿ ಹಾಡುತ್ತಿದ್ದೆವು. ಭಗತ್ ಸಿಂಗ್, ಅಜಾದ್ ಇವರೆಲ್ಲರ ಹೆಸರು ಕೇಳಿದರೆ ಮೈಮನವೆಲ್ಲಾ ರೋಮಾಂಚನವಾಗುತ್ತಿತ್ತು.

ಮಾಧ್ಯಮಗಳು ಗಮನವನ್ನು ಕೊಡುತ್ತಿರಲಿಲ್ಲವೋ? ಘಟನೆಗಳೇ ನಡೆಯುತ್ತಿರಲಿಲ್ಲವೋ? (ನಾನು ಚಿಕ್ಕವಳಿದ್ದರಿಂದ ಓದುತ್ತಿರಲಿಲ್ಲವೋ?) ಒಟ್ಟಿನಲ್ಲಿ ಇಷ್ಟೊಂದು ರೇಪ್ ಘಟನೆಗಳು ನಮ್ಮ  ಗಮನಕ್ಕೆ ಬರುತ್ತಿರಲಿಲ್ಲ. ಇನ್ನೂ ಸಿನೆಮಾಗಳಾಗಬಹುದು, ಪುಸ್ತಕಗಳಾಗಬಹುದು ಯಾವುದೇ ಕಲಾ ಮಾಧ್ಯಮಗಳಲ್ಲಿಯೂ ಅಪರಾಧಿಗಳ ಅಂತ್ಯ ಭೀಕರವಾಗಿರುತ್ತಿತ್ತು. ಆತ ಚಿತ್ರದುದ್ದಕ್ಕೂ ಎಷ್ಟೇ ಕಷ್ಟ ಪಟ್ಟರೂ, ಯಾವುದೇ ತಪ್ಪು ಮಾಡದ ನಾಯಕನೇ ಅಂತ್ಯದಲ್ಲಿ ಗೆಲ್ಲುತ್ತಿದ್ದ! ಪ್ರತಿಯೊಬ್ಬರೂ ತಮ್ಮನ್ನು ನಾಯಕನ ಪಾತ್ರದಲ್ಲಿಯೇ ಗುರುತಿಸಿಕೊಳ್ಳುತ್ತಿದ್ದರು. ಆ ಮೂಲಕ ನೀಚ ಕೆಲಸಗಳನ್ನು ಮಾಡಿದ ವಿಲನ್ ನನ್ನು ಕೊಚ್ಚಿ ಕೊಲ್ಲುತ್ತಿದ್ದರು. ಬಲಾತ್ಕಾರಕ್ಕೆ ಒಳಗಾಗುವ ನಾಯಕನ ತಂಗಿ, ಆ ಕಾಮುಕನನ್ನು ಕೊಲ್ಲುವ ನಾಯಕ! ಒಂದೇ, ಎರಡೇ!  ನಮ್ಮ ಚಿತ್ರ ನಟಿ ತಾರಾ ಎಷ್ಟು ಚಿತ್ರಗಳಲ್ಲಿ ಬಲಾತ್ಕಾರಕ್ಕೊಳಗಾಗಿ ಸತ್ತಿಲ್ಲ?!  ಉಪ್ಪಾ ತಿಂದ ಮೇಲೆ ನೀರ ಕುಡಿಯಲೇ ಬೇಕು ಎನ್ನುತ್ತಿದ್ದ ಚಿತ್ರರಂಗ ಇದ್ದಕಿದ್ದಂತೆ ತಪ್ಪು ಮಾಡದವ್ರು ಯಾರವ್ರೇ? ಅಂತಾ ಹಾಡಲು ಶುರು ಮಾಡಿತು. ಸಮಾಜದಿಂದ ಚಿತ್ರಗಳು ತಯಾರಾಗುತ್ತವೆಯೋ? ಚಿತ್ರಗಳಿಂದ ಸಮಾಜ ಪ್ರಭಾವಿತವಾಗುತ್ತದೆಯೋ? ಅರಿಯದು! ಒಟ್ಟಿನಲ್ಲಿ ಇದ್ದಕ್ಕಿದ್ದಂತೆ ಎಲ್ಲವೂ ಬದಲಾಯಿತು.  ನಮ್ಮ ಟಿವಿ ಧಾರಾವಾಹಿಗಳಿಂದ ಹಿಡಿದು ಚಲನಚಿತ್ರಗಳವರೆಗೂ ಎಲ್ಲದರಲ್ಲಿಯೂ ಮೌಲ್ಯಗಳು ಕುಸಿಯಿತು.

ಹಾಗಾದರೇ ಇಷ್ಟೆಲ್ಲಾ ಇದ್ದದ್ದು ಹಠಾತ್ತಾಗಿ ಬದಲಾಗಿದ್ದು ಹೇಗೆ?  ನಾವೇಕೇ ಇಷ್ಟು ಕ್ರೂರಿಗಳಾಗಿದ್ದೇವೆ?  ನಮ್ಮೆಲ್ಲರಿಗೂ ಏನಾಗುತ್ತಿದೆ?  ನಮ್ಮ ಮುಂದಿನ ಪೀಳಿಗೆಗೆ ನಾವು ಕೊಡುತ್ತಿರುವುದು ಏನನ್ನೂ?  ಏನನ್ನೂ ನಾವು ಸೂಚಿಸುತ್ತಿದ್ದೇವೆ? ಬೆಳಿಗ್ಗೆ ೧೦ ರಿಂದ ೫ ಗಂಟೆಯವರೆಗೂ ಕೆಲಸ, ನಂತರ ಏನಾದರೂ ಹವ್ಯಾಸ, ಹಾಡು, ಹಸೆ, ಹರಿಕಥೆ, ದೇವಸ್ಥಾನ, ನೆರೆಹೊರೆಯವರು ಎಂದಿದ್ದ ಹಿರಿಯರು, ಶಾಲೆಗೆ ಹೋಗಿ ಬಂದು, ರಾತ್ರಿಯ ತನಕ ಆಡುತ್ತಿದ್ದ ಮಕ್ಕಳು, ಒಟ್ಟಿನಲ್ಲಿ ಎಲ್ಲರಲ್ಲೂ ಸಮಾಧಾನದ ಸ್ಥಿತಿ ಇರುತ್ತಿತ್ತು.  ಹಣದ ಕೊರತೆ ಇದ್ದರೂ ಕೂಡ ಯಾರಲ್ಲೂ ಒತ್ತಡವಿರುತ್ತಿರಲಿಲ್ಲ.  ಇದ್ದಕಿದ್ದಂತೆ ಗ್ಲೋಬಲೈಸೇಷನ್ ಎಂದು ಅಥವಾ ಐಟಿ, ಬಿಟಿ, ಬಿಪಿಒ ಉದ್ಯಮಗಳು ಶುರುವಾದ ಮೇಲಂತೂ ಇದ್ದಕ್ಕಿದ್ದಂತೆ, ಮನೆ-ಮಠಗಳ, ಸಮಾಜದ ಸ್ಥಿತಿ ಬದಲಾಗಿಬಿಟ್ಟಿತು. ಚೈನಾ ವಸ್ತುಗಳು ಕಡಿಮೆ ಕ್ವಾಲಿಟೀ, ಕಡಿಮೆ ಹಣಕ್ಕೆ ಸ್ಪರ್ಧೆ ಕೊಡಲು ಶುರುವಾದೊಡನೆಯೇ, ನಾವು ಕೂಡ ಕಡಿಮೆ ಕ್ವಾಲಿಟೀ ವಸ್ತುಗಳನ್ನು ಉತ್ಪಾದಿಸಲು ಶುರು ಮಾಡಿದೆವು! ಎಲ್ಲರ ಬಳಿಯೂ ಹಣ ಓಡಾಡತೊಡಗಿತು. ಮಕ್ಕಳಾದಿಯಾಗಿ ಎಲ್ಲರಲ್ಲೂ ಒತ್ತಡ, ಧಾವಂತ. ಯಾರಿಗೂ ನಾವು ಏನು ಮಾಡುತ್ತಿದ್ದೇವೆ?  ಯಾವುದರ ಹಿಂದೆ ಓಡುತ್ತಿದ್ದೇವೆ? ಯಾವುದರ ಬಗ್ಗೆಯೂ ತಲೆಕೆಡಿಸಿಕೊಳ್ಳುವಷ್ಟು ಪುರುಸೊತ್ತಿಲ್ಲ. ಒಟ್ಟಿನಲ್ಲಿ ಹಿಂದೆ, ಮುಂದೆ, ಅಕ್ಕ, ಪಕ್ಕ ಎಲ್ಲೂ ನೋಡಬೇಡಾ, ನಿಲ್ಲಬೇಡಾ, ಓಡು, ಅಷ್ಟೇ ಎಂದು ಹಿರಿಯರು ಕಿರಿಯರಿಗೆ ಬೋಧನೆ ಮಾಡಲಾರಂಭಿಸಿದರು. ಕಿರಿಯರು ಓಡಲಾರಂಭಿಸಿದರು.

ಹವ್ಯಾಸಗಳಿಂದ ಹಿಡಿದು ಪ್ರತಿಯೊಂದು ವಿದ್ಯೆಯೂ ಕಲಿಯಲೂ / ಕಲಿಸಲೂ ಹಣ ಮಾಡುವ ದಂಧೆಯಾಯಿತು.   ಸಂಬಂಧಗಳಿಂದ ಹಿಡಿದು ಎಲ್ಲಾ ವಿಷಯಗಳಲ್ಲೂ ಗುಣಮಟ್ಟ ಕಡಿಮೆ ಆಯಿತು. ಹಣದ ಹೊರತು ಎಲ್ಲಾ ವಿಷಯಗಳಲ್ಲಿಯೂ ಜನರು ರಾಜಿಯಾಗತೊಡಗಿದರು. ಮಾತುಗಳಿಗಂತೂ ಬೆಲೆಯೇ ಇಲ್ಲವಾಯಿತು. ಮಕ್ಕಳು ಉಸಿರು ಕಟ್ಟಿ ಪಾಠವಷ್ಟೇ ಓದಿ, ಅಂಕಗಳನಷ್ಟೇ ತೆಗೆದು, ಲಕ್ಷಾಂತರ ರೂಪಾಯಿ ಸಂಬಳ ತರುವ ಕೆಲಸ ಸೇರಲಾರಂಭಿಸಿದರು. ಬೆಳಿಗ್ಗೆ ೫ ಗಂಟೆಗೆದ್ದರೆ, ರಾತ್ರಿ ೧೧ ಗಂಟೆಯ ತನಕವೂ ಮಕ್ಕಳಿಗೆ ತಮ್ಮಷ್ಟಕ್ಕೆ ತಾವು ಜೀವಿಸುವ ಹಕ್ಕೇ ಇಲ್ಲವಾಯಿತು. ನಿದ್ದೆಯಲ್ಲಿಯೂ ಕೂಡ ಅಪ್ಪ, ಅಮ್ಮಂದಿರ ಕನಸುಗಳನ್ನೇ ಮಕ್ಕಳು ಕಾಣುವಂತಾದರು. ಮಕ್ಕಳಾದಿಯಾಗಿ ಎಲ್ಲರೂ ರೇಸುಕುದುರೆಗಳಾದರು. ಎಲ್ಲರಿಗೂ ಎಲ್ಲ ಕಡೆಯಿಂದ ಒತ್ತಡ. ಎಲ್ಲದರ ಬೆಲೆ ಹೆಚ್ಚಾಯಿತು. ಸಂಬಂಧಗಳಿಗೆ ಬೆಲೆ ಕಡಿಮೆ ಆಯಿತು. ಬುದ್ಧಿವಂತರು ಎರಡೆರಡು ಕೆಲಸ ಮಾಡುವವರಾದರು. ಹಣ ಬಿಸಾಕಿದರೆ ಮನೆ ಕೆಲಸದವಳು ಸಿಗುತ್ತಾಳೆ ಎಂಬ ಮನೋಭಾವ, ಅವಿದ್ಯಾವಂತ ಬಡವರು ಇನ್ನೊಂದಿಷ್ಟು ಹೆಚ್ಚಿಗೆ ಬಡವರಾದರು. ಅವರಲ್ಲಿ ಆತಂಕ, ಗೊಂದಲ, ನಿರಾಸೆ, ಕಿರಿಕಿರಿ, ಈ ಬುದ್ಧಿವಂತರ ಮೇಲೆ ಸಿಟ್ಟು! ಹೆಚ್ಚಾಯಿತು. ಒಟ್ಟಿನಲ್ಲಿ ಈ ಎಲ್ಲಾ ಬದಲಾವಣೆಗಳಿಂದ ಎಲ್ಲವನ್ನೂ, ಎಲ್ಲರನ್ನೂ ಉಡಾಫೆಯಿಂದ ನೋಡುವ ಮನಸ್ಥಿತಿ ಉಂಟಾಯಿತು. ಅಕ್ಕಪಕ್ಕದ ಮನೆಯ ಅಥವಾ ನಮ್ಮ ಮನೆಯವರ ಸಮಸ್ಯೆಗಳಿಗೆ ತಲೆ ಬಿಸಿ ಯಾರು ಮಾಡಿಕೊಳ್ಳುತ್ತಾರೆ? ಎನ್ನುವ ಬೇಜವಾಬ್ದಾರಿ ಶುರುವಾಯಿತು.

ಇಲ್ಲಿ ಯುವಕ / ಯುವತಿಯರ ಮನಸ್ಥಿತಿಯ ಬಗ್ಗೆ ಕೂಡ ಮಾತಾಡಲೇ ಬೇಕು. ಅಪ್ಪ, ಅಮ್ಮಂದಿರು ಕೊಡುವ ಸಾವಿರಾರು ರೂಪಾಯಿಗಳ ಪಾಕೆಟ್ ಮನಿ, ಅದನ್ನು ಖರ್ಚು ಮಾಡಲು ಬೇಕಾದಷ್ಟು ಹಾದಿಗಳು, ಇವತ್ತು ಯಾರಿಗಾದರೂ ಆಕರ್ಷಿತರಾಗುವುದು, ನಾಳೆ ಐ ಲವ್ ಯೂ, ನಾಡಿದ್ದು ಡೇಟಿಂಗ್, ಅಪ್ಪ, ಅಮ್ಮ ಹುಡುಕಿದ ಹುಡುಗ ಅಕಸ್ಮಾತ್ ತನ್ನ ಹುಡುಗನಿಗಿಂತ ‘ಬೆಲೆ’ ಬಾಳುವವನಾಗಿದ್ದರೆ, ಇವನಿಗೆ ಗುಡ್ ಬೈ!, ನೊಂದ ಯುವಕರ ಮನಸ್ಥಿತಿ ಹೀಗೆ - ಸಿಕ್ಕಿದ ಎಲ್ಲಾ ಹುಡುಗಿಯರನ್ನು ‘ಮಜಾ’ ಮಾಡಿ ಕೈಕೊಡುವುದು! ಪ್ರೀತಿ, ಪ್ರೇಮ, ವಿಶ್ವಾಸ, ನಂಬಿಕೆ ಯಾವುದಕ್ಕೂ ಅರ್ಥವೇ ಗೊತ್ತಿರದ ಸ್ಥಿತಿ.  ಬುದ್ಧಿ ಹೇಳಲು ಅಪ್ಪ ಅಮ್ಮಂದಿರಿಗೆ ಪುರುಸೊತ್ತಿಲ್ಲ! ಕೇಳುವ ತಾಳ್ಮೆ ಯುವ ಜನಾಂಗಕ್ಕಿಲ್ಲ! ಯಾರಿಗೂ ಯಾವುದರ ಭಯವೂ ಇಲ್ಲ!  ಇನ್ನೂ ಶಾಲಾ ಮಕ್ಕಳನ್ನು ಕಂಡರಂತೂ ಶಿಕ್ಷಕರೇ ಹೆದರಬೇಕು. ಬುದ್ಧಿ ಮಾತು ಕೇಳದಿದ್ದರೆ ನಮ್ಮ ಮಕ್ಕಳನ್ನು ಹೊಡೀರಿ, ಬಡೀರಿ ಎನ್ನುತ್ತಿದ್ದ ಅಪ್ಪ, ಅಮ್ಮಂದಿರೆಲ್ಲಿ?  ಮಕ್ಕಳು ಹೋಮ್ ವರ್ಕ್ ಮಾಡಿಲ್ಲ ಎಂದು ಶಿಕ್ಷಕರು ಬುದ್ಧಿ ಮಾತು ಹೇಳ ಹೊರಟರೆ, ಅವರ ಮೇಲೆ ಕೇಸು ಹಾಕುವ ಅಪ್ಪ, ಅಮ್ಮಂದಿರೆಲ್ಲಿ? ಮಕ್ಕಳು ಎಷ್ಟೇ ತಪ್ಪು ಮಾಡಿದರೂ ಅವರಿಗೆ ಪೋಷಕರಾಗಲೀ, ಶಿಕ್ಷಕರಾಗಲೀ ಶಿಕ್ಷೆ ನೀಡುವಂತಿಲ್ಲ! ಆಗ ಪೈಶಾಚಿಕ ಪ್ರವೃತ್ತಿ ಬಲಿಯದೇ ಇನ್ನೇನಾಗುತ್ತದೆ? ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೇ? ಎಂಬ ಗಾದೆ ಮಾತು ನಮಗೇಕೆ ಮರೆತು ಹೋಯಿತು? ನಾವು ಮಾಡುವ ಕೆಲಸದಲ್ಲಿನ ಆತ್ಮ ತೃಪ್ತಿಗಿಂತ ತಿಂಗಳ ಕೊನೆಗೆ ಸಿಗುವ ಸಂಬಳ ಹೆಚ್ಚಾಯಿತಲ್ಲವೇ? ಎಲ್ಲರ ಮನಸ್ಥಿತಿಯೂ ಹೀಗೆ ಆಗಿಬಿಟ್ಟಿದೆಯಲ್ಲವೇ? 

ಇಂತಹ ಒಂದು ಘಟನೆ ನಡೆದ ಕೂಡಲೇ ಪರಿಹಾರ ಕಂಡುಹಿಡಿಯುವುದನ್ನು ಬಿಟ್ಟು, ಸಮಸ್ಯೆಯ ಮೂಲವೆಲ್ಲಿದೆ? ಎಂಬುದನ್ನು ಹುಡುಕುವುದನ್ನು ಬಿಟ್ಟು, ಪ್ರತಿಯೊಬ್ಬರಿಗೂ ತಮ್ಮ, ತಮ್ಮ ಒತ್ತಡಗಳನ್ನು ಹೊರಹಾಕುವುದೇ ಮುಖ್ಯವಾಗಿರುವಾಗ! ಪ್ರತಿಯೊಬ್ಬರೂ ತಮ್ಮ, ತಮ್ಮ ಅನುಭವಗಳ ಮೂಸೆಯಲ್ಲಿಯೇ ಮತ್ತೊಬ್ಬರನ್ನು ಜಡ್ಜ್ ಮಾಡುತ್ತಿರುವಾಗ! ಪ್ರತಿಯೊಬ್ಬರಿಗೂ ತಾವು ಮಾತನಾಡುವುದು ಶೋ ಆಫ್ ಆಗಿರುವಾಗ, ಬದಲಾವಣೆ ಆಗುವುದೆಲ್ಲಿಂದ?! ಗಂಡೊಬ್ಬ ತಪ್ಪು ಮಾಡಿದರೇ, ಇಡೀ ಗಂಡು ಜನಾಂಗವನ್ನು ನಾಶ ಮಾಡಲು ಪಣ ತೊಡುವ ಹೆಂಗಸರು, ಹೆಣ್ಣೊಬ್ಬಳಿಂದ ಆದ ಅನಾಹುತಕ್ಕೆ, ಇಡೀ ಹೆಣ್ಣು ಕುಲವನ್ನೇ ಬಲಾತ್ಕಾರ ಮಾಡುವ ಗಂಡಸರು, ತಮ್ಮ ತಮ್ಮ ಸ್ವಾರ್ಥಕ್ಕಾಗಿ, ತಮ್ಮ ತಮ್ಮ ಹಿತಕ್ಕಾಗಿ, ಸುಮ್ಮನೇ ಸುಳ್ಳು ರೇಪ್ ಕೇಸುಗಳನ್ನು ಹಾಕುವ ತಾಯಂದಿರು ಒಂದು ಕಡೆ, ತಮ್ಮ ಲೈಂಗಿಕ ತೃಷೆಗಾಗಿ ಮಗಳನ್ನು ಬಿಡದಾ ಅಪ್ಪಂದಿರು ಒಂದು ಕಡೆ, ತಾಯ್ತಂದೆಯರ ಒತ್ತಡ ತಡೆಯಲಾರದೇ ಮಕ್ಕಳು ಮಾಡಿಕೊಳ್ಳುವ ಆತ್ಯಹತ್ಯೆಗಳು, ವಿದೇಶ ಪಯಣಕ್ಕಾಗಿ ಅಪ್ಪ, ಅಮ್ಮಂದಿರನ್ನು ವೃದ್ಧಾಶ್ರಮಕ್ಕೋ ಅಥವಾ ಒಂಟಿಯಾಗಿ ಕೊಲೆಯಾಗಲೂ ಬಿಟ್ಟು ಹೋಗುವ ಮಕ್ಕಳು, ಇವೆಲ್ಲಕ್ಕೂ ಪರಿಹಾರ ಹೇಗೆ? ಬೇಲಿಯೇ ಎದ್ದು ಹೊಲ ಮೇಯ್ದರೇ? 

ಇನ್ನೂ ಜನಧ್ವನಿಯಾಗಿ, ನೊಂದವರಿಗೆ ಬೆನ್ನೆಲುಬು ಆಗಿ ನಾವಿದ್ದೇವೆ ಎಂದು ನಿಲ್ಲಬೇಕಾದ ಮಾಧ್ಯಮಗಳು ಕೂಡ ತಾ ಮುಂದೇ, ನಾ ಮುಂದೇ ಎಂದು ತಮ್ಮ ತಮ್ಮ ಹೆಚ್ಚುಗಾರಿಕೆಯನ್ನೂ ಸುದ್ಧಿ ನೀಡುವುದರಲ್ಲೇ ನಿರತರಾಗಿರುವಾಗ?!, ರಾಜಕೀಯ ಪಕ್ಷಗಳು ಇಂತಹ ವಿಷಯಗಳ ಮೂಲಕ ಒಬ್ಬರ ಮೇಲೊಬ್ಬರು ಕೆಸರೆರಚಿ, ತಮ್ಮ ಬೇಳೆ ಬೇಯಿಸಿಕೊಳ್ಳುವುದರಲ್ಲೇ ಆಸಕ್ತರಾಗಿರುವಾಗ?!, ವಕೀಲರು ಇಂತಹ ಕೇಸುಗಳಲ್ಲಿ ಹೇಗೆ ವಾದ ಮಾಡಿ ಅಪರಾಧಿಗಳನ್ನು ಗೆಲ್ಲಿಸಬಹುದು? ಎಂಬ ತಮ್ಮ ಜಾಣ್ಮೆಯ ಪ್ರದರ್ಶನ ಮಾಡುತ್ತಿರುವಾಗ?! ಮಠ, ದೇವಸ್ಥಾನಗಳು ತಮ್ಮ ಶ್ರೀಮಂತಿಕೆಯನ್ನು, ತಮ್ಮ ಖ್ಯಾತಿಯನ್ನು ಹೆಚ್ಚಿಸಿಕೊಳ್ಳುವುದರಲ್ಲೇ ಮಗ್ನರಾಗಿರುವಾಗ?! ಸಿನೆಮಾಗಳು, ಟಿವಿ ಧಾರವಾಹಿಗಳು, ಪುಸ್ತಕಗಳು ನಾವೆಷ್ಟು ದುಡ್ಡು ಮಾಡುತ್ತಿದ್ದೇವೆ? ಎಂದು ತಮ್ಮ ಟಿಆರ್ ಪಿ ಹೆಚ್ಚಿಸುವ ಪ್ರಯತ್ನದಲ್ಲಿಯೇ ತೊಡಗಿರುವಾಗ?!
ನಾವು ಹೇಳುವುದಾದರೂ ಯಾರಿಗೇ?

ಇನ್ನೂ ರೇಪಿಸ್ಟ್ ಗಳಿಗೆ ಕೊಡುವ ಮರಣದಂಡನೆಯಿಂದ ಏನೂ ಪ್ರಯೋಜನವಿಲ್ಲ! ತಮ್ಮ ಆತ್ಮಸಾಕ್ಷಿಗೆ ಹೆದರದ ಅವರು, ಇನ್ನೆಂಥ ಶಿಕ್ಷೆಗೆ ಹೆದರಿಯಾರು? ಈ ಹಿಂದೆಯಾದರೆ ದೇವರು ಎನ್ನುವ ಭಯದಿಂದ ಹಿಡಿದು ಎಲ್ಲವೂ ಭಯದಿಂದಲೇ ನಡೆಯುತ್ತಿತ್ತು. ಎಲ್ಲರೂ ತಮ್ಮ ಆತ್ಮಗಳಿಗೆ ಹೆದರುತ್ತಿದ್ದರು. ಈಗಿರುವ ಉಡಾಫೆ ಸ್ಥಿತಿಯಿಂದ ಅಪರಾಧಿಗಳಲ್ಲಿ ಭಯವಿಲ್ಲ. ತದ್ವಿರುದ್ದವಾಗಿ ಯಾವ ತಪ್ಪನ್ನೂ ಮಾಡದೇ ಧೈರ್ಯವಾಗಿರಬೇಕಾಗಿದ್ದ ಮುಗ್ಧರಲ್ಲಿ ಭಯವಿದೆ. ಆತ್ಮಪ್ರಜ್ಞೆಯಿಲ್ಲದ ವ್ಯಕ್ತಿಗಳಿಂದ ತುಂಬಿಹೋಗುತ್ತಿರುವ ಸಮಾಜವೂ ಮತ್ತಷ್ಟು ಹಾಳಾಗುತ್ತಿದೆ.  ಭಯದಿಂದ ಯಾವ ಕೆಲಸವನ್ನು ನಾವು ಮಾಡಲು / ಮಾಡಿಸಲು ಸಾಧ್ಯವಿಲ್ಲ. ಆದರೆ ಇಂತಹ ವಿಷಯಗಳಲ್ಲಿ ಎಲ್ಲರಲ್ಲೂ ಸೀರಿಯಸ್ ನೆಸ್ ಬಂದರೆ, ಎಲ್ಲರೂ ಸೆನ್ಸಿಬಲ್ ಆದರೆ, ಎಲ್ಲರೂ ತಮ್ಮ, ತಮ್ಮ ಆತ್ಮದೊಳಗೆ ಸಂಚರಿಸಲು ಶುರು ಮಾಡಿದರೆ.... ಸ್ವಲ್ಪವಾದರೂ ಪ್ರಯೋಜನವಾಗಬಹುದು.  ದುಡ್ಡಿಂದಲೇ ಎಲ್ಲವೂ ಅಲ್ಲ! ಅನ್ನುವ ಮನಸ್ಥಿತಿ ಉಂಟಾದರೆ, ಮಾತುಗಳಿಗೂ ಬೆಲೆ ಇದೆ ಎನ್ನುವುದು ಅರ್ಥವಾದರೆ, ಮಕ್ಕಳಿಗೆ ನಾವು ಕಲಿಸಬೇಕಿರುವುದು ಮೌಲ್ಯಗಳು ಎಂಬುದರ ಅರಿವಾದರೆ, ಸ್ವಾರ್ಥವಿಲ್ಲದೇ ನಾನು ಏನಾದರೂ ಸಮಾಜಕ್ಕೆ ಒಳಿತು ಮಾಡಬೇಕೆಂಬ ಮನಸ್ಥಿತಿ ಉಂಟಾದರೇ..... ಸ್ವಲ್ಪವಾದರೂ ಹದಗೆಟ್ಟಿರುವ ಈ ಸಮಾಜವನ್ನು ನಾವೆಲ್ಲರೂ ಸರಿಪಡಿಸಬಹುದು. ಯುದ್ಧಕಾಲೇ ಶಸ್ತ್ರಾಭ್ಯಾಸ ಮಾಡದೇ, ಮನೆ ಮನಗಳಲ್ಲಿ ಬದಲಾವಣೆ ತರಬೇಕಾದ ಜರೂರು ಈ ಹೊತ್ತಿಗಿದೆ.