ನಾನ್ಯಾರು? ಇಂದಿಗೂ ನನಗೆ ಇದೊಂದು ಬಗೆಹರಿಯದ ಸಂಗತಿ. ಸೇಲಮ್ ಬಳಿಯ ನಮಕಲ್ಲ್ ತಾಲೂಕಿನ ಪುಟ್ಟದೊಂದು ಹಳ್ಳಿಯಲ್ಲಿ ಹುಟ್ಟಿದ ನನಗೆ ಅಪ್ಪ ಅಮ್ಮ ಇಟ್ಟ ಹೆಸರು ದೊರೈಸ್ವಾಮಿ. ಆದರೆ ನನಗೆಂದಿಗೂ ಈ ನನ್ನ ಹೆಸರು ಆಪ್ತವೆನಿಸಲೇ ಇಲ್ಲ! ನನಗೆ ಇಬ್ಬರು ಅಣ್ಣಂದಿರು, ಒಬ್ಬಳು ಅಕ್ಕ. ನಾನೇ ಎಲ್ಲರಿಗಿಂತ ಕೊನೆಯವನಾದ ಕಾರಣ ಎಲ್ಲರ ಪ್ರೀತಿ, ಆದರ ನನಗೊಂದಿಷ್ಟು ಹೆಚ್ಚೇ ಸಿಗುತ್ತಿತ್ತು. ನಮ್ಮದೊಂದು ಹಳೆಯ ಎರಡಂತಸ್ತಿನ ಮನೆಯಲ್ಲಿ ನಮ್ಮ ವಾಸ. ನಮ್ಮಪ್ಪನ ಬಳಿ ಎರಡು ಲಾರಿಗಳು ಹಾಗೂ ೫ ಎಕರೆ ಒಣಭೂಮಿ ಇತ್ತು. ಅಪ್ಪ ಲಾರಿ ಡ್ರೈವರ್, ದೊಡ್ಡಣ್ಣ ಅವರ ಬಳಿ ಕ್ಲೀನರ್ ಆಗಿ ಸಂಸಾರ ನಡೆಸಲು ಸಹಾಯ ಮಾಡುತ್ತಿದ್ದ. ಅಪ್ಪ ಸುತ್ತ ಮುತ್ತಲಿನ ಹಳ್ಳಿಗಳಲ್ಲಿ ಹಾಲನ್ನು ಸಂಗ್ರಹಿಸಿ, ಹತ್ತಿರದ ಹಾಲಿನ ಕಾರ್ಖಾನೆಗೆ ಸರಬರಾಜು ಮಾಡುತ್ತಿದ್ದ. ಇದಕ್ಕಾಗಿ ಈತ ಮುಂಜಾನೆ ಐದಕ್ಕೆ ಹೊರಟರೆ ಮನೆಗೆ ರಾತ್ರಿ ಹತ್ತು ಗಂಟೆಯ ತನಕವೂ ಎಡೆಬಿಡದಂತೆ ದುಡಿಯುತ್ತಿದ್ದ. ಅಣ್ಣಂದಿರು ಕೂಡ ಈತನಿಗೆ ಸಹಾಯ ಮಾಡುತ್ತಿದ್ದರು. ಅವರು ಬರುವ ಹೊತ್ತಿಗೆ ನಾನು ಹಾಗೂ ನನ್ನಕ್ಕ ಇಬ್ಬರೂ ಆಗಲೇ ನಿದ್ರಾವಸ್ಥೆಯಲ್ಲಿರುತ್ತಿದ್ದೆವು. ಅಪ್ಪ ಬಂದೊಡನೆಯೇ ಊಟ ಮುಗಿಸಿ, ನನಗೊಂದಿಷ್ಟು ಮೊಸರನ್ನ ಕಲಿಸಿ, ನನ್ನನ್ನು ಅಕ್ಕರೆಯಿಂದ ಎಬ್ಬಿಸಿ ಉಣಿಸುತ್ತಿದ್ದ.
ನನಗಾಗ ೧೦ ವರ್ಷ. ನಮ್ಮ ಹಳ್ಳಿಯಲ್ಲಿ ೫ನೇ ತರಗತಿಯ ತನಕ ಓದಲು ಶಾಲೆಯಿತ್ತು. ಅದಕ್ಕಿಂತ ಹೆಚ್ಚಿಗೆ ಓದುವವರು, ನಮಕಲ್ಲ್ ಟೌನಿಗೆ ಹೋಗಬೇಕಿತ್ತು. ಅಣ್ಣಂದಿರು ಹಾಗೂ ಅಕ್ಕ ಟೌನಿನಲ್ಲಿ ಓದುತ್ತಿದ್ದರು. ನಾನು ನೆರೆಹೊರೆಯ ಹುಡುಗಿಯರೊಂದಿಗೆ ಹಳ್ಳಿಯ ಶಾಲೆಗೆ ಹೋಗಿಬರುತ್ತಿದ್ದೆ. ನನಗೆ ಆ ಹುಡುಗಿಯರ ಆಟಗಳು ಅಚ್ಚುಮೆಚ್ಚಿನದಾಗಿದ್ದವು. ನನಗೆ ಹುಡುಗಿಯರ ಹಾಗೇ ಅಕ್ಕ ಏಳುವ ಮುನ್ನವೇ ಎದ್ದು, ಮನೆಬಾಗಿಲಿಗೆ ನೀರು ಹಾಕಿ, ಕಸ ಗುಡಿಸಿ, ರಂಗೋಲೆ ಹಾಕುವುದು ಅತ್ಯಂತ ನೆಚ್ಚಿನ ಕಾಯಕವಾಗಿತ್ತು. ಅಮ್ಮನಿಗೆ ಅಡುಗೆ ಮನೆಯಲ್ಲಿ ಸಹಾಯ ಮಾಡುವುದು, ಇನ್ನಿತರ ಮನೆ ಕೆಲಸಗಳಾದ ಕಸ ಗುಡಿಸು, ಪಾತ್ರೆ ತೊಳೆ, ಇಂತಹ ಕೆಲಸಗಳೆಲ್ಲವೂ ನನ್ನ ಓರಗೆಯ ಹುಡುಗಿಯರ ಹಾಗೇ ನನಗೂ ಕೂಡ ಇಷ್ಟವಾಗಿದ್ದವು. ಶಾಲೆಯಿಂದ ಬಂದೊಡನೆ ಅಕ್ಕನ ಉದ್ದನೆಯ ಲಂಗ, ರವಿಕೆ ತೊಟ್ಟು, ತಲೆಗೆ ಟವಲ್ಲನ್ನು ಜಡೆಯಂತೆ ಸುತ್ತಿ, ನವ ವಧುವಿನ ಹಾಗೇ ನಾಚುತ್ತಾ ನಡೆಯುವುದು ನನ್ನ ಹವ್ಯಾಸವಾಗಿತ್ತು. ಸುತ್ತಮುತ್ತಲಿನವರು ನನ್ನ ಈ ಅವತಾರವನ್ನು ನೋಡುತ್ತಾ, ತಮಾಷೆ ಮಾಡುತ್ತಾ, ದೊಡ್ಡವನಾದ ಮೇಲೆ ಸರಿ ಹೋಗುತ್ತಾನೆ ಎಂದು ಹೇಳುತ್ತಿದ್ದರೇ ಹೊರತು ಯಾರೂ ಕೂಡ ಗಂಭೀರವಾಗಿ ತೆಗೆದುಕೊಳ್ಳುತ್ತಿರಲಿಲ್ಲ. ಆದರೆ ಶಾಲೆಯಲ್ಲಿನ ನನ್ನ ಇನ್ನಿತರ ಸಹಪಾಠಿಗಳು ಮಾತ್ರ ನನ್ನನ್ನು ನಂಬರ್ ೯, ಹೆಣ್ಣಿಗ ಎಂದು ಛೇಡಿಸುತ್ತಿದ್ದರು. ಮತ್ತೂ ಹಲವರು, ‘ಏಕೆ ನೀನು ಹುಡುಗಿಯರ ವಸ್ತ್ರಗಳನ್ನು ಧರಿಸುತ್ತೀಯಾ? ನಿನ್ನ ನಡವಳಿಕೆ, ನಡುಗೆ ಏಕೆ ಹುಡುಗಿಯಂತಿದೆ? ನೀನು ಹುಡುಗನಲ್ಲವೇ? ಎಂದೆಲ್ಲಾ ಕೇಳುತ್ತಿದ್ದರು. ಆದರೂ ನನಗೆ ಹುಡುಗಿಯಂತೆ ಇರುವುದು ಇಷ್ಟವಾಗುತ್ತಿತ್ತು. ನನ್ನ ಮನೆಯ ಎದುರು ಕಾಲೇಜು ಹುಡುಗನೊಬ್ಬ ಇದ್ದ. ನನ್ನ ಶಾಲಾ ಪಾಠಗಳಲ್ಲಿ ನನಗೇನಾದರೂ ಅನುಮಾನವಿದ್ದರೆ ಕೇಳಿ ಪರಿಹರಿಸಿಕೊಳ್ಳುತ್ತಿದ್ದೆ. ಆಗೆಲ್ಲಾ ಆತ ನನ್ನ ಕೆನ್ನೆ ಚಿವುಟಿ, ನನ್ನ ತಬ್ಬಿಕೊಂಡು ಮುತ್ತಿಡುವಾಗಲೆಲ್ಲಾ ನನಗದು ಇಷ್ಟವಾಗುತ್ತಿತ್ತು. ಆತ ನನ್ನನ್ನು ಹೆಣ್ಣಿಗ ಎಂದು ಕರೆದು ಮುದ್ದಿಡುವಾಗಲೆಲ್ಲಾ ನವಿರಾದ ನಾಚಿಕೆಯೊಂದು ನನ್ನನ್ನು ಆವರಿಸುತ್ತಿತ್ತು.
ರಜಾದಿನಗಳಲೆಲ್ಲಾ ಮಕ್ಕಳು ಅಲ್ಲಿನ ಗುಡ್ಡದ ಮೇಲೆ ಆಕಳನ್ನು ಮೇಯಿಸಲು ಕರೆದುಕೊಂಡು ಹೋಗುತ್ತಿದ್ದೆವು. ಅಲ್ಲಿ ಹಾಡು ಹೇಳಿಕೊಳ್ಳುತ್ತಾ, ನಾನು ಹುಡುಗಿಯಂತೆ ಎಂದು ಕಲ್ಪಿಸಿಕೊಂಡು ಮನದಣಿಯೆ ಕುಣಿಯುವುದು ನನಗೆ ಬಹಳ ಖುಷಿ ಕೊಡುತ್ತಿತ್ತು.ತರಗತಿಯಲ್ಲಿ ನನ್ನ ಓರಗೆಯ ಗೆಳತಿಯರನ್ನು ನೋಡುವುದರಲ್ಲಿಯೇ ಮಗ್ನನಾಗಿಬಿಡುತ್ತಿದ್ದೆ. ಅವರ ಜಡೆ, ಜಡೆಗೆ ಕಟ್ಟಿದ ರಿಬ್ಬನ್, ಅವರ ಲಂಗ, ರವಿಕೆ, ಅವರು ಆ ಜಡೆಯನ್ನು ಹೆಣೆದು, ಮಲ್ಲಿಗೆ, ಕನಕಾಂಬರ ಹೂ ಮುಡಿದಿರುವ ಪರಿ ಇವೆಲ್ಲವನ್ನು ನೋಡುತ್ತಿದ್ದರೆ ನನಗೆ ಈ ಭಾಗ್ಯವಿಲ್ಲವಲ್ಲ ಎಂದು ಅಸೂಯೆಯಾಗುತ್ತಿತ್ತು. ನನಗೆ ಪಾಠದ ಕಡೆ ಲಕ್ಷ್ಯವೇ ಇರುತ್ತಿರಲಿಲ್ಲ. ಟೀಚರ್ ನನ್ನ ತೊಡೆ ಚಿವುಟಿ, ಒಂಟಿ ಕಾಲಿನಲ್ಲಿ ಬೆಂಚಿನ ಮೇಲೆ ನಿಲ್ಲುವ ಶಿಕ್ಷೆ ನೀಡುತ್ತಿದ್ದರು. ಅನೇಕಾನೇಕ ಬಾರಿ ಈ ಶಿಕ್ಷೆ ನಾನು ಹುಡುಗಿಯ ಹಾಗೇ ವರ್ತಿಸುವುದಕ್ಕಾಗಿಯೇ ಆಗಿರುತ್ತಿತ್ತು. ಆದರೆ ನನಗೆ ಮಾತ್ರ ನಾನು ಹುಡುಗಿಯರ ಹಾಗೇ ನಾನು ವರ್ತಿಸುತ್ತಿದ್ದೇನೆ ಎಂದನಿಸುವುದಕ್ಕಿಂತ ಹೆಚ್ಚಾಗಿ ನಾನು ಹುಡುಗಿಯೇ ಎಂದೆನಿಸುತ್ತಿತ್ತು! ನಾನು ಏಳನೆಯ ತರಗತಿಯಲ್ಲಿದ್ದಾಗ ಶಾಲಾ ವಾರ್ಷಿಕೋತ್ಸವಕ್ಕೆ ನಾಟಕಕ್ಕಾಗಿ ಸತ್ಯ ಹರಿಶ್ಚಂದ್ರನ ಹೆಂಡತಿಯ ಪಾತ್ರ ಮಾಡಬೇಕಾಯಿತು. ಇದಾದ ನಂತರ ಹೈಸ್ಕೂಲ್ ವಿದ್ಯಾರ್ಥಿಗಳು ನನ್ನನ್ನು ಛೇಡಿಸುವುದು ಹೆಚ್ಚಾಯಿತು. ಅವರು ನನ್ನ ಹಣೆಗೆ, ಎದೆಗೆ ಮುಷ್ಠಿಯಿಂದ ಗುದ್ದುವುದು, ಚಿವುಟುವುದು, ಅಶ್ಲೀಲವಾಗಿ ಮಾತನಾಡುವುದು ಹೀಗೆ ಶುರು ಮಾಡಿದರು. ಇಂತಹ ಹುಡುಗರನ್ನು ಕಂಡರೆ ಬೆದರುವುದು, ನನ್ನನ್ನು ಅಕ್ಕರೆಯಿಂದ ಕಾಣುವ ಹುಡುಗರತ್ತ ಆಕರ್ಷಿತನಾಗುತ್ತಾ, ನಾನು ಅವರನ್ನು ಪ್ರೀತಿಸುತ್ತಿದ್ದೇನೆ ಎನ್ನುವ ಕಲ್ಪನೆಯಲ್ಲಿ ಮುಳುಗಲು ಶುರು ಮಾಡಿದೆ.
ನಾನು ಹುಡುಗನಾಗಿದ್ದರೂ, ಇನ್ನಿತರ ಹುಡುಗರತ್ತ ಆಕರ್ಷಿತನಾಗುತ್ತಿದ್ದೇನೆ ಏಕೆ? ಇದು ಸರಿಯೇ, ತಪ್ಪೇ? ಈ ತರಹದ ಭಾವನೆಗಳು ನನ್ನಲ್ಲಿ ಮಾತ್ರವೇ ಮೂಡುತ್ತಿದೆಯೇ? ನಾನು ಹುಡುಗಿಯೇ? ಹುಡುಗನೇ? ಇದೆಲ್ಲವೂ ನನ್ನನ್ನು ಗೊಂದಲಕ್ಕುಂಟು ಮಾಡಿದವು. ಹಾಗಾಗಿ ನಾನು ಸ್ವಲ್ಪಸ್ವಲ್ಪವೇ ಓದಿನಿಂದ ವಿಮುಕ್ತನಾಗುತ್ತಾ, ಆಸಕ್ತಿ ಕಳೆದುಕೊಳ್ಳುತ್ತಾ ಹೋದೆ. ಇದ್ಯಾವುದನ್ನೂ ನಾನು ಅಪ್ಪ, ಅಮ್ಮನಲ್ಲಿ, ಅಣ್ಣಂದಿರಲ್ಲಿ ಹೇಳಲಾರದೇ ಹೋದೆ. ಹಾಗೂ ಹೀಗೂ ನಾನು ಹತ್ತನೇ ತರಗತಿಗೆ ಬಂದು ತಲುಪಿದೆ. ಈಗೀಗ ನನಗೆ ನಾನೊಂದು ಗಂಡಿನ ದೇಹದಲ್ಲಿ ಬಂಧಿಯಾಗಿರುವ ಹೆಣ್ಣೆಂದೇ ಭಾಸವಾಗುತ್ತಿತ್ತು. ಆದರೆ ಅದು ಹೇಗೆ ಸಾಧ್ಯ? ಹೀಗೂ ಇರುತ್ತದೆಯೇ? ನನ್ನನ್ನು ಈ ಪ್ರಪಂಚ ಹೆಣ್ಣೆಂದು ಸ್ವೀಕರಿಸುತ್ತದೆಯೇ? ಆ ದೇವರು ನನಗೇಕೆ ಇಂತಹ ಶಿಕ್ಷೆ ಕೊಟ್ಟ? ಈ ತರಹದ ದ್ವಂದ್ವದಲ್ಲಿ ಸಿಲುಕುವಂತೆ ಏಕೆ ಮಾಡಿದ? ಲೋಕದ ಕಣ್ಣಿಗೆ ನಾನು ಗಂಡು, ಆದರೆ ಅಂತರಂಗದಲ್ಲಿ ನಾನೊಬ್ಬಳು ಹೆಣ್ಣು! ಹೀಗೇಕೆ? ಹೀಗೇಕೆ? ಹಗಲು ರಾತ್ರಿ ನಾನು ಗೊಂದಲಗಳಲ್ಲಿ, ದ್ವಂದ್ವಗಳಲ್ಲಿ ಸಿಲುಕಿ ನರಳಿ ಹೋದೆ. ಈ ನರಳಾಟಕ್ಕಿಂತ ಸಾವಾದರೂ ಬರಬಾರದೇ? ಎಂದೆಲ್ಲಾ ಅನಿಸತೊಡಗಿತು. ಇದೆಲ್ಲವುದರ ಮಧ್ಯೆ ನನ್ನ ವಿದ್ಯೆ ಸೊರಗಿಹೋಯಿತು.
ನಾನು ಪರೀಕ್ಷೆಯಲ್ಲಿ ಫೇಲ್ ಆದೆ.ಈ ಅಶಾಂತಿ, ನೋವು, ಗೊಂದಲಗಳನ್ನು ಕಡಿಮೆ ಮಾಡಿಕೊಳ್ಳಲು ಮನೆಯ ಹತ್ತಿರವಿದ್ದ ಕೋಟೆಯ ಬಳಿ ಯೋಚಿಸುತ್ತಾ ಕುಳಿತುಕೊಳ್ಳುತ್ತಿದ್ದೆ. ಹೀಗಿರುವಾಗ ಒಮ್ಮೆ ೪ ಜನ ಹುಡುಗರು ಲುಂಗಿ ಉಟ್ಟು ಅಲ್ಲಿಗೆ ಬಂದರು. ನಾನು ಹೆದರುತ್ತಾ ವಾಪಾಸ್ಸು ಬರಲು ಯೋಚಿಸುತ್ತಿದ್ದಾಗ, ಅವರು ಒಬ್ಬರನ್ನೊಬ್ಬರು ಹುಡುಗಿಯರ ಹಾಗೇ ಹೆಸರಿಡಿದು ಕರೆದುಕೊಳ್ಳುತ್ತಾ, ಸ್ತ್ರೀಯರ ಹಾಗೇ ನೃತ್ಯ ಮಾಡಲು ಶುರು ಮಾಡಿದರು. ಇವರು ಕೂಡ ನನ್ನ ಹಾಗೇಯೇ ಗಂಡಿನ ದೇಹದೊಳಗಿನ ಹೆಣ್ಣುಗಳೆಂದು ತೋರಿತು. ನಾನು ಕೂಡ ಇವರಲ್ಲೊಬ್ಬಳು ಎಂದೆನಿಸಿತು. ಅವರೊಂದಿಗೆ ಆಪ್ತತೆ ಮೂಡಿತು. ಇವರ ಪರಿಚಯವಾದ ನಂತರ ಟ್ಯೂಷನ್ನಿಗೆ ಹೋಗುವುದನ್ನು ಕಡಿಮೆ ಮಾಡಿ, ಕೋಟೆಯ ಬಳಿ ಹೋಗುವುದು ಹೆಚ್ಚಾಯಿತು. ಅವರೊಂದಿಗೆ ನಾನು ಕೂಡ ಹೆಣ್ಣಿನಂತೆ ನರ್ತಿಸುತ್ತಿದ್ದೆ.
(ಮುಂದುವರೆಯುವುದು…..)
ಆಧಾರ : The Truth about me - ರೇವತಿ
(ಮೇ ೧೦ ೨೦೧೧ ರಂದು ರೇವತಿಯವರ ಬಗ್ಗೆ ಬರೆದುಕೊಡಲು ಸ್ನೇಹಿತನೊಬ್ಬ ವಿನಂತಿಸಿಕೊಂಡಾಗ ಬರೆಯಲು ಶುರು ಮಾಡಿದ್ದು, ಆಮೇಲೆ ಮುಗಿಸಲಾಗಲೇ ಇಲ್ಲ :( )
No comments:
Post a Comment