Monday, August 27, 2012

ನಮ್ಮನೆ ಕೆಲಸದವಳು!

ಮನೆ ಕೆಲಸದವಳು ಕೆಲಸ ಬಿಟ್ಟಿದ್ದು, ನನಗೂ ಅಮ್ಮನಿಗೂ ತಲೆನೋವಾಗಿತ್ತು. ಎಲ್ಲಾ ಕೆಲಸಗಳನ್ನು ಇಬ್ಬರೇ ಮಾಡಿಕೊಳ್ಳುತ್ತಿದ್ದೆವು. ಆಗೊಬ್ಬಳು ಕೆಲಸಕ್ಕೆ ಸೇರಿಕೊಂಡಳು. ನೋಡಲು ಬಹಳ ನೀಟಾಗಿದ್ದಳು. ಮನದಲ್ಲಿ ಇವಳಿಗೆ ಮನೆಕೆಲಸಕ್ಕೆ ಬರುವಂತಹ ಅನಿವಾರ್ಯತೆ ಏನಿರಬಹುದು? ಅನ್ನೋ ಕುತೂಹಲ ನನಗೆ. ಇಷ್ಟು ದಿನಗಳಲ್ಲಿ ಗಂಡ ಸರಿಯಿಲ್ಲ, ಅದೂ, ಇದೂ ಅಂತಾ ಕೇಳಿರುವ ನನಗೆ, ಇವಳ ಮನೆ, ಕಷ್ಟದ ಕಥೆ ಏನಿರಬಹುದು? ಅನ್ನೋ ಕುತೂಹಲ. ಮದುವೆಯಾಗಿದೆ. ಮೂವರು ಗಂಡು ಮಕ್ಕಳು ಅಂದಳು. ದೊಡ್ಡವನಿಗೆ ೯ ವರ್ಷ, ಮಧ್ಯದವನು ೭, ಚಿಕ್ಕವನಿನ್ನೂ ೪ ವರ್ಷ ಅಂದಳು. ನಾನದಕ್ಕೆ ಎರಡು ಗಂಡುಮಕ್ಕಳಿದ್ದರಲ್ವೇ? ಮತ್ಯಾಕೆ ಮೂರನೆಯದು? ಅಂದೆ. ಅದಕ್ಕೆ ಅವಳು ’ಏನಕ್ಕಾ? ಹೀಗಂತೀರಿ? ಹೆಣ್ಣು ಮಕ್ಕಳು ಮನೆಗೆ ಬೇಡವೇ?! ಅಂದಳು. ಓ! ಹೆಣ್ಣು ಮಕ್ಕಳು ಬೇಕು ಅನ್ನೋರು ಇದ್ದಾರೆ ಅಂತಾ ಅಂದುಕೊಂಡು, ಗಂಡನಿಗೇನು ಕೆಲಸ? ಅಂದೆ. ಅವನದೊಂದು ಸ್ವಂತ ಲೇತಿಂಗ್ ಮೇಶಿನ್ ಇದೆ. ಜೊತೆಗೆ ಬೇರೆಯವರ ಅಂಗಡಿಗೂ ಹೋಗಿ ಕೆಲಸ ಮಾಡಿಕೊಡ್ತಾರೆ ಅಂತಂದಳು. ತಿಂಗಳಿಗೆ ಸುಮಾರು ರೂ. ೧೫,೦೦೦ ದುಡೀತಾರೆ! ಅಂದಳು. ಮಕ್ಕಳು ಇನ್ನೂ ಚಿಕ್ಕವರು ಅಂತಾ ಹೇಳ್ತೀದ್ದೀ. ಗಂಡನಿಗೆ ಇಷ್ಟು ಸಂಪಾದನೆಯಾಗುತ್ತೆ. ಮತ್ತೆ ಬೇರೆಯವರ ಮನೆಕೆಲಸಕ್ಕೆ ಬಂದು, ಮಕ್ಕಳನ್ನು ನೋಡಿಕೊಳ್ಳುವುದು ಕಷ್ಟವಲ್ವೇ? ಅದೂ ಕೂಡ ಮನೆಕೆಲ್ಸಕ್ಕೆ ಬರ್ತಾ ಇದ್ದೀಯಾ, ಗಂಡ ಬೈಯೊಲ್ವಾ? ಅಥವಾ ಗಂಡ ಏನಾದ್ರೂ ಕುಡಿಯೋ ಚಟ ಅಂತಾ ಸಂಪಾದಿಸಿದ್ದು ಹಾಳು ಮಾಡ್ತಾನಾ? ಅಂತಂದೆ. ಅಯ್ಯೋ! ಅಕ್ಕಾ, ನಾನು ಓದಿರೋದು ೬ ನೇ ಕ್ಲಾಸಿನ ತನಕ ವಷ್ಟೇ. ಅಪ್ಪ, ಅಮ್ಮ ನಾನು ಚಿಕ್ಕವಳಿದ್ದಾಗಲೇ ತೀರಿ ಹೋದರು. ಆಗ ಅಣ್ಣನ ಮಕ್ಕಳನ್ನು ನೋಡಿಕೊಳ್ಳಲೆಂದು ನನ್ನನ್ನು ಸ್ಕೂಲ್ ಬಿಡಿಸಿಬಿಟ್ಟರು. ನನಗಿನ್ನಾವ ಕೆಲಸ ಸಿಗುತ್ತೆ? ಮತ್ತೆ ಮನೆ ಕೆಲಸ ಮಾಡೋದು ಅಂದರೆ ಕೀಳಿನ ಕೆಲಸ ಅಂತಾ ಯಾಕೆ ಹೇಳ್ತೀರಾ? ನಾನು ನನಗೆ ಏನಾದರೂ ಒಡವೆ ಮಾಡಿಸಿಕೊಳ್ಳಬೇಕಾಗಿ ಬಂದರೆ ಗಂಡನ ಹತ್ತಿರ ಕೇಳುವುದು ಎಷ್ಟು ಸರಿ? ಅಂದಳು. ನಾನದಕ್ಕೆ ಓ! ಒಡವೆ ಮಾಡಿಸಿಕೊಳ್ಳೋಕೋಸ್ಕರ, ಮತ್ತೊಬ್ಬರ ಮನೆಯ ಕೆಲಸ ಮಾಡ್ತಿದ್ದೀಯಾ? ಅಂತಂದೆ. ಅದಕ್ಕೆ ‘ಅಷ್ಟೇ ಅಲ್ಲಾ ಅಕ್ಕಾ. ಈಗ ನೋಡಿ, ಸಂಜೆ ಮನೆಗೆ ಹೋದಾಗ ಮಕ್ಕಳಿಗೆ ಏನಾದರೂ ತಿಂಡಿ ತೊಗೊಂಡು ಹೋಗಬಹುದಾ? ನನ್ನ ದುಡ್ಡು ಅನ್ನೋದು ಎಷ್ಟು ಖುಷಿ ಕೊಡುತ್ತೆ ಗೊತ್ತಾ? ಏನೋ ಕಷ್ಟಕಾಲ ಅಂತಾ ಬಂದುಬಿಡ್ತು ಅಥವಾ ಮಕ್ಕಳ ಸ್ಕೂಲ್ ಫೀಸ್ ಕಟ್ಟಬೇಕಾಗಿ ಬಂತು, ಆಗ ನಾನು ಈ ಹಣವನ್ನು ನನ್ನ ಗಂಡನಿಗೆ ಕೊಡಬಹುದಾ? ಅಂದಳು. ಮತ್ತೆ ನನ್ನ ಕುತೂಹಲವಿನ್ನೂ ಇಂಗಿರಲಿಲ್ಲ. ‘ಈ ತಿಂಗಳ ಸಂಬಳ ಗಂಡನಿಗೆ ಹೋಗಿ ಕೊಟ್ಟೆಯಾ? ಅಂದೆ. ಇಲ್ಲಾ, ಅವರು ಕೇಳಲಿಲ್ಲಾ, ನಾನು ಕೊಡಲಿಲ್ಲ. ಈಗ ದುಡೀತಾ ಇದ್ದಾರೆ, ಮುಂದೆ ಕಷ್ಟ ಬಂದಾಗ ಇದೇ ಹಣವನ್ನು ಉಳಿತಾಯ ಮಾಡಿರ್ತೀನಿ. ಅಂದಳು. ನನಗೆ ತಿಳಿದಿರುವ ಎಲ್ಲಾ ವಿದ್ಯಾವಂತ, ಅಸಹಾಯಕ ಹೆಣ್ಣು ಮಕ್ಕಳೊಟ್ಟಿಗೆ, ಮನವು ಇವಳನ್ನು ಹೋಲಿಸತೊಡಗಿತು.

4 comments:

  1. ಆಗಸ್ಟ್ ತಿಂಗಳಲ್ಲಿ ೨೫ ಬರಹ. ನಿಜಕ್ಕೂ ನಿಸ್ಸೀಮರು ನೀವು. ಖುಷಿ ಆಯಿತು.
    ಮಾಲಾ

    ReplyDelete
    Replies
    1. ಮಾಲಾ, ಒಂದೇ ತಿಂಗಳಿನ ಬರಹಗಳಲ್ಲ. ಈ ತಿಂಗಳು ನಾನು ಏನನ್ನೂ ಬರೆದಿಲ್ಲ. ಇದೆಲ್ಲವೂ ಅಲ್ಲಿ, ಇಲ್ಲಿ ಇದ್ದ ನನ್ನ ಬರಹಗಳನ್ನು ಒಟ್ಟುಗೂಡಿಸಿ ಒಂದೇ ಬ್ಲಾಗಿನಲ್ಲಿ ಹಾಕೋಣವೆಂದು, ಹೊಸದಾದ ಬ್ಲಾಗ್ ಸೃಷ್ಟಿಸಿರುವುದು :-)

      Delete
  2. Thumba istavaithu..nim kelasaadkeya yochana pari..

    ReplyDelete