Monday, August 27, 2012

ನಾ ಓದಿದ ಪುಸ್ತಕ - ಪಾ.ವೆಂ. ಆಚಾರ್ಯರ ಆಯ್ದ ಹರಟೆಗಳು

ನಾನು ಕೂಡಾ ಎಲ್ಲಾ ಪುಸ್ತಕ ಪ್ರೇಮಿಗಳಂತೆ! ಓದಿದ್ದಕ್ಕಿಂತ ಹೆಚ್ಚಾಗಿ ಆ ಪುಸ್ತಕ ಓದಬೇಕು, ಈ ಪುಸ್ತಕ ಓದಬೇಕು ಎನ್ನುವ ಪಟ್ಟಿಯೇ ದೊಡ್ಡದು! ಜೊತೆಗೆ ಒಮ್ಮೆ ಓದಲು ಕುಳಿತರೆ, ಆ ಪುಸ್ತಕ ಪೂರ್ತಿ ಮುಗಿಯುವ ತನಕ ಕುಳಿತಲ್ಲಿಂದ ಏಳಲು ಮನಸ್ಸೇ ಬಾರದು. ಹಾಗಾಗಿ ದೊಡ್ಡ ಪುಸ್ತಕಗಳನ್ನು ಓದುವ ಸಾಹಸವೇ ಮಾಡುವುದಿಲ್ಲ. ಮಾಡಿದರೂ ಅದೆಲ್ಲಾ ರಜವಿರುವಾಗ ಮಾತ್ರ. ಏನಿದ್ದರೂ ಸಣ್ಣ ಕಥೆಗಳು, ಚುಟುಕಗಳು, ಪ್ರಬಂಧಗಳು. ಅದರಲ್ಲೂ ಈ ಲಘು ಹರಟೆಗಳೆಂದರೆ ಬಲು ಪ್ರೀತಿ. ಸಮಯ ಸಿಕ್ಕಾಗಲೆಲ್ಲಾ ಯಾವುದನ್ನು ಓದಬೇಕು ಎಂದು ಯೋಚನೆ ಮಾಡುವುದರಲ್ಲೇ ನನ್ನ ವೇಳೆ ಕಳೆಯುವುದರಲ್ಲಿ ನನಗೆ ಹೆಚ್ಚಿನ ಪರಿಣತಿ! ಇಲ್ಲವೇ ತಿರುಪತಿ ಚೌರದ ಹಾಗೆ ಎಲ್ಲಾ ಪುಸ್ತಕಗಳನ್ನು ಅರ್ಧರ್ಧ ಓದುವ ಚಟ. ಆದರೆ ಈ ಸಲ ಮಾತ್ರ ಹಾಗಾಗಗೊಡಲಿಲ್ಲ. ಸಿಕ್ಕ ಅಲ್ಪ ಕಾಲದಲ್ಲೇ ಒಂದು ಪೂರ್ತಿ ಪುಸ್ತಕವನ್ನು ಓದಬೇಕೆಂದು ನಿಶ್ಚಯಿಸಿ, ಆರಿಸಿಕೊಂಡ ಪುಸ್ತಕ ’ಪಾ.ವೆಂ. ಆಚಾರ್ಯರ ಆಯ್ದ ಹರಟೆಗಳು’. ಕಸ್ತೂರಿಯಲ್ಲಿ ಅವರ ‘ಪದಾರ್ಥ ಚಿಂತಾಮಣಿ’ ಯನ್ನು ಓದಿದ್ದೆ ಅಷ್ಟೆ. ಈ ಹರಟೆಗಳ ಸಂಗ್ರಹವನ್ನು ಪ್ರೊ. ಅ.ರಾ.ಮಿತ್ರ, ಡಾ. ಶ್ರೀನಿವಾಸ ಹಾವನೂರ ರವರು ಸಂಕಲನಗೊಳಿಸಿ, ಪ್ರಿಸಮ್ ಬುಕ್ ನವರು ಮುದ್ರಿಸಿದ್ದಾರೆ. 

ಪಾ.ವೆಂ. ಆಚಾರ್ಯರ ಹರಟೆಗಳ ಕಥಾನಾಯಕ ’ಲಾಂಗೂಲಾಚಾರ್ಯ’ರು. ಈ ಲಾಂಗೂಲಾಚಾರ್ಯರಿಗೆ ತಿಳಿಯದ ವಿಷಯವೇ ಇಲ್ಲ. ಒಂದು ರೀತಿಯ ತ್ರಿಲೋಕ ಜ್ನಾನಿ. ಪುರಾಣದಿಂದ ಹಿಡಿದು ಇತ್ತೀಚಿನ ವಿಜ್ನಾನದ ಅವಿಷ್ಕಾರಗಳ ತನಕ, ಎಲ್ಲವೂ ಇವರ ಹರಟೆಯ ಬಾಯಿಗೆ ಸಿಕ್ಕಿ ನಲುಗಿವೆ. ರಾಜಕಾರಣಿಗಳನ್ನು ನೋಡಿದರೆ ಈ ಲಾಂಗೂಲಾಚಾರ್ಯರಿಗೆ ಬಹಳ ಪ್ರೀತಿ. ಏಕೆಂದರೆ ರಾಜಕಾರಣಿಗಳೇ ಇಲ್ಲದಿದ್ದರೆ ಅವರ ಹರಟೆಗಳು ಅಷ್ಟೊಂದು ಕಳೆಗಟ್ಟುತ್ತಿದ್ದವೇ? ಅಷ್ಟೇ ಪ್ರೀತಿ ಹೆಂಡತಿಯರ ಮೇಲೆ! ಹಾಗೆಂದ ಕೂಡಲೇ ನೀವೆಲ್ಲಾ ತಿಳಿಯಬೇಕಿಲ್ಲ. ಲಾಂಗೂಲಾಚಾರ್ಯರಿಗೆ ಶ್ರೀ ಕೃಷ್ಣನ ಹಾಗೆ ಅಷ್ಟೊಂದು ಹೆಂಡತಿಯರಿದ್ದರೇ ಎಂದು. ಆದರೂ ಅವರು ಅಷ್ಟೊಂದು ನೈಜವಾಗಿ ಬರೆದಿರುವುದನ್ನು ಓದಿದಾಗ ಅವರ ಅನುಭವವಿರಬಹುದೇ ಎನ್ನುವ ಸಂಶಯವೊಂದು ಮನದಲ್ಲಿ ಸುಳಿಯದೇ ಇರಲಾರದು. ಅವರ ‘ಮದುವೆಯಾದರೂ ಸುಖ ಪಡುವುದು ಹೇಗೆ?" ಎಂಬ ಪ್ರಬಂಧವನ್ನು ಪ್ರತಿಯೊಬ್ಬ ಗಂಡಸರೂ ತಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಯಾವ ಡೈವೋರ್ಸ್ಗಳು ನಮ್ಮ ನಾಡಿನಲ್ಲಿ ಆಗಲಿಕ್ಕಿಲ್ಲ! ಅಷ್ಟು ತರ್ಕಬದ್ಧವಾಗಿ, ವಿಚಾರಬದ್ಧವಾಗಿ ತಮ್ಮ ಅನಿಸಿಕೆಗಳನ್ನು ಮಂಡಿಸಿದ್ದಾರೆ. ಲಾಂಗೂಲಾಚಾರ್ಯರಿಗೆ ಹರಟೆ ಮಾಡಲು ಪ್ರಿಯವಾದ ಇನ್ನೊಂದು ವಿಷಯವೆಂದರೆ ನಮ್ಮ ನಾಡಿನಲ್ಲಿರುವ ಅಸಂಖ್ಯಾತ ದೇವರುಗಳು. ಆ ದೇವರುಗಳು ಶಾಪ ಕೊಟ್ಟಾರೆಂಬ ಭಯವೂ ಇಲ್ಲದೇ ಹರಟಿರುವುದನ್ನು ನೋಡಿದಾಗ ಇವರಿಗೆ ಯಾರ ಭಯವೂ ಇಲ್ಲವೇ? ಎಂದೆನಿಸುವುದು. ಒಟ್ಟಿನಲ್ಲಿ ತಿಳಿಹಾಸ್ಯದ ನಡುವೆ ಮೊನಚಾದ ವ್ಯಂಗ್ಯ, ಅದರಲ್ಲಿರುವ ಸತ್ಯ, ನಮ್ಮನ್ನು ಓದಿ ಮುಗಿಸಿದ ಮೇಲೆಯೂ ಬಿಡದೆ ಬೆಂಬತ್ತುವುದು ಸುಳ್ಳಲ್ಲ. 

ನನಗೆ ಬಹಳ ಇಷ್ಟವಾದದ್ದು ಅವರ ‘ಸಂತೋಷ ಘಾತಕರು’ ಎಂಬ ಪ್ರಬಂಧ. ಲಾಂಗೂಲಾಚಾರ್ಯರ ಅಭಿಮತದಲ್ಲಿ ಮಾನವನ ಸಂತೋಷದ ಪರಮಶತ್ರುಗಳೆಂದರೆ ವಿಜ್ನಾನಿಗಳಂತೆ. ಅವರು ಬಾಂಬುಗಳನ್ನು ಕಂಡುಹಿಡಿದಕ್ಕಾಗಿ ಅಲ್ಲವಂತೆ. ಬಡ ಮನುಷ್ಯ ಪ್ರಾಣಿಯ ಚಿಕ್ಕ ಪುಟ್ಟ ಸಂತೋಷಗಳನ್ನು ವಿಜ್ನಾನಿಗಳು ಕಸಿದುಕೊಳ್ಳುತ್ತಾರಂತೆ. ಅದು ಹೇಗೆಂದರೆ ಯಾರಾದರೂ ತಮ್ಮ ಏಕಮಾತ್ರ ಮನೋರಂಜನೆಯಾದ ಸಿಗರೇಟನ್ನು ಸೇದುತ್ತಾ ಕುಳಿತಿರುತ್ತಾರೆಂದುಕೊಳ್ಳಿ. ಆಗ ಈ ವಿಜ್ನಾನಿಯು ಅವರ ಮೇಲೆ ಸತ್ತ, ತಾರು ಬಳಿದ ಒಂದು ಇಲಿಯನ್ನು ಎಸೆದು, ಸಿಗರೇಟಿನ ತಾರು ಬಳಿದದ್ದಕ್ಕೆ ಆ ಇಲಿಯು ಸತ್ತು ಹೋಯಿತು ಎಂದು ಹೆದರಿಸುವನಂತೆ. ಅದರ ಹಾಗೆಯೇ ನೀನು ಕೂಡಾ ಕ್ಯಾನ್ಸರ್ ಬಂದು ಸಾಯುವುದಾಗಿಯೂ ಹೇಳಿ, ಜೊತೆ ಅವರಿಗೆ ಸಮಾಧಾನಪಡಿಸಲು ತಾನಿನ್ನು ಮನುಷ್ಯನ ಮೇಲೆ ಇದನ್ನು ಪ್ರಯೋಗ ಮಾಡಿಲ್ಲವೆಂದು ಹೇಳಿ ಜಾರಿಕೊಳ್ಳುವನಂತೆ. ಹಾಗೆ ಬರೆಯುತ್ತಾ ಲಾಂಗೂಲಾಚಾರ್ಯರು ಹೇಳುತ್ತಾರೆ ‘ವಿಜ್ನಾನಿಯ ಮಾತಿಗೆ ಅಂಜಿ ನಾವು ಸಿಗರೇಟ್ ಬಿಡುತ್ತೇವೆಂದಲ್ಲ. ನಾವು ಯಥಾಪ್ರಕಾರ ಅದನ್ನು ಮುಂದುವರಿಸುತ್ತಲೇ ಹೋಗಿ, ಕ್ಯಾನ್ಸರಿಗಾಗಲೀ, ಯಮ ಧರ್ಮನಿಗಾಗಲಿ ಸೊಪ್ಪು ಹಾಕುವುದಿಲ್ಲವೆಂದು ತೋರಿಸಿಕೊಡುತ್ತೇವೆ. ಆದರೆ ಸಿಗರೇಟು ಸೇದುವುದರಲ್ಲಿದ್ದ ಆನಂದ ಮಾತ್ರ ಅಲ್ಲಿಗೆ ಮುಕ್ತಾಯವಾಗುವುದು. ಪ್ರತಿಬಾರಿ ಸಿಗರೇಟ್ ಸೇದುವಾಗಲೂ, ನಮ್ಮ ಕಣ್ಣ ಮುಂದೆ ಆ ಸತ್ತ ಇಲಿ; ಅದರ ಮೈಮೇಲಿನ ಕೃಷ್ಣ ಲೇಪ, ನಮ್ಮ ಸ್ವಂತ ಹೆಣ ದಿಗ್ಗೆಂದು ಪ್ರತ್ಯಕ್ಷವಾಗುವುದು ಮತ್ತು ನಾವು ಅವಡುಕಚ್ಚಿ ಇನ್ನಷ್ಟು ರಭಸದಿಂದ ಸಿಗರೇಟಿನ ಹೊಗೆಯನ್ನೆಳೆದುಕೊಳ್ಳುತ್ತೇವೆ. ದುಶ್ಚಟಗಳೆಂದು ಗೊತ್ತಾದರೂ ಕೂಡಾ ಅವುಗಳಿಂದ ಬಿಡಿಸಿ ಕೊಳ್ಳುವುದು ಬಹಳ ಕಷ್ಟ ಎನ್ನುವುದನ್ನು ಹೇಳುವ ಈ ಹರಟೆ ಬಹಳ ಇಷ್ಟವಾಯಿತು.

ಇನ್ನೊಂದು ಹರಟೆ ವಿಧಾನ ಸೌಧದ ಮೇಲೆ ಬರೆದಿರುವ ‘ಸರ್ಕಾರದ ಕೆಲಸ ದೇವರ ಕೆಲಸ’ ದ ಮೇಲೆ ನಡೆಯುತ್ತದೆ. ಲಾಂಗೂಲಾಚಾರ್ಯರು ಹೀಗೆ ಹೇಳುತ್ತಾರೆ ‘ಸರ್ಕಾರದ ಕೆಲಸ ದೇವರ ಕೆಲಸ’ ವೆಂದೊಡನೆ ನಮಗೇನು ತಿಳಿಯುತ್ತದೆ? ದೇವರ ದರ್ಶನಕ್ಕೆ ಹೋಗುವಾಗ ನಾವೇನು ಮಾಡುತ್ತೇವೆ? ಕಾಣಿಕೆ ಒಯ್ಯುತ್ತೇವೆ, ದಕ್ಷಿಣೆಗಾಗಿ ಹಣ ಒಯ್ಯುತ್ತೇವೆ. ಹಾಗಾಗಿ ಯಾವುದೇ ಸರಕಾರದ ಕೆಲಸವಾಗಬೇಕಾದರೂ ದಕ್ಷಿಣೆ ಅಗತ್ಯ ಎಂದು ನಮಗೆ ಮನದಟ್ಟಾಗುವುದು. ಇದಲ್ಲದೆ ದೇವಸ್ಥಾನಕ್ಕೆ ಹೋದಾಗ ಪ್ರದಕ್ಷಿಣೆ ಕೂಡಾ ಹಾಕುತ್ತೇವೆ. ಹಾಗೆಯೇ ಸರಕಾರಿ ಕಚೇರಿಗಳಲ್ಲಿಯೂ ಕೂಡ ನಾವು ಪ್ರದಕ್ಷಿಣೆ ಹಾಕದ ಹೊರತು ನಮ್ಮ ಕೆಲಸವಾಗುವಂತಿಲ್ಲ. ಹೀಗೆ ಮುಂದುವರೆಯುತ್ತದೆ ನಮ್ಮ ಲಾಂಗೂಲಾಚಾರ್ಯರ ತರ್ಕ.ಮಡದಿಯನ್ನು ಅರ್ಥಮಾಡಿಕೊಳ್ಳುವುದರ ಬಗ್ಗೆ ನಮ್ಮ ಲಾಂಗೂಲಾಚಾರ್ಯರು ಎಲ್ಲಾ ಗಂಡಂದಿರಿಗೂ ಕಿವಿಮಾತು ಹೇಳುತ್ತಾರೆ. ಅದು ಏನೆಂದರೆ ‘ನಿಮ್ಮ ತಲೆಯನ್ನು ಆದಷ್ಟು ಕಾಲ ನಿಮ್ಮ ಹೆಗಲ ಮೇಲೆ ಉಳಿಸಿಕೊಂಡು, ಅವಳ ನಿಷ್ಟಾನಿಷ್ಟಗಳು ಏನು? ಅವಳ ದೌರ್ಬಲ್ಯಗಳೇನು, ಅವಳ ಹುಸಿಕೋಪಕ್ಕೂ, ಹಸಿಕೋಪಕ್ಕು ಏನೇನು ವ್ಯತ್ಯಾಸಗಳು? ಎಂಬುದರ ಬಗ್ಗೆ ಒಂದು ದಿನಚರಿಯನ್ನು ಬರೆಯಬೇಕಂತೆ. ಪ್ರತಿ ಮಡದಿಗೂ ಅವಳದೇ ಕಾನೂನುಗಳು ಇರುತ್ತವೆ. ಅವುಗಳನ್ನು ಅರಿತುಕೊಳ್ಳುವುದರಲ್ಲಿ ಅರ್ಧಾಯುಷ್ಯ ಹೋಗಬಹುದು, ಅಷ್ಟರಲ್ಲಿ ಅವಳ ಕಾನೂನುಗಳೇ ಬದಲಾಗಿರಬಹುದು!

ನಮ್ಮ ಲಾಂಗೂಲಾಚಾರ್ಯರ ಮತ್ತೊಂದು ತರ್ಕ ಆತ್ಮದ ಬಗ್ಗೆ! ‘ಮೋಕ್ಷವಾದ ಮೇಲೆ ಆತ್ಮ ಏನು ಮಾಡುತ್ತದೆ ಎಂಬ ಬಗ್ಗೆ ಬಹಳ ಭಿನ್ನಾಭಿಪ್ರಾಯಗಳಿವೆ. ಸುಖವಾಗಿ ಪೆನ್ಷನ್ ಅನುಭವಿಸುತ್ತಾ ಇರುತ್ತವೆಂದು ಹೇಳಲಾಗುತ್ತದೆ. ನಿವೃತ್ತ ಹೈಕೋರ್ಟ್ ಅಥವಾ ಸುಪ್ರಿಂ ಕೋರ್ಟ್ ನ್ಯಾಯಾಧೀಶರು ವಿಶೇಷ ಆಯೋಗಗಳ ಅಧ್ಯಕ್ಷರಾಗಿ ಮಾಡಲ್ಪಡುವಂತೆ ಕೆಲವು ಸಲ ಈ ಮುಕ್ತಾತ್ಮಗಳು ಪ್ರಪಂಚಕ್ಕೆ ಕಳಿಸಲ್ಪಡುವುದುಂಟು. ಇವರಿಗೆ ‘ಅವರಾತ ಪುರುಷರು’ ಎಂದು ಹೆಸರು’. ಹೇಗಿದೆ ನಮ್ಮ ಲಾಂಗೂಲಾಚಾರ್ಯರ ವರಸೆ?

ಹೇಳುತ್ತಾ ಹೋದರೆ ಮುಗಿಯದಷ್ಟು ಹರಟುವ ಚಟ ನಮ್ಮ ಲಾಂಗೂಲಾಚಾರ್ಯರಿಗೆ. ಹಾಗಾಗಿ ಎಲ್ಲರೂ ಅವರ ಹರಟೆಗಳನ್ನು ಓದಿ, ಕೃತಾರ್ಥರಾಗಬೇಕೆಂದು ಈ ಮೂಲಕ ತಿಳಿಸುತ್ತೇನೆ.

(ಜೂನ್ ೯, ೨೦೦೯ ರಂದು ಬರೆದದ್ದು - ಕಲರವ ಪತ್ರಿಕೆಗಾಗಿ)

No comments:

Post a Comment