ಹುಡುಗರು ಬುದ್ಧಿವಂತರಾಗುತ್ತಿದ್ದಾರೆ - ಸೈಡ್ ಪ್ಲೀಸ್, ಸೈಡ್ ಪ್ಲೀಸ್. ನಾವೇನೂ ಕಡಿಮೆಯಿಲ್ಲ, ಹೇಗಾದರೂ ಮಾಡಿ ಹಳ್ಳದಲ್ಲೀ ಬೀಳಿಸಿಯೇ ಬೀಳಿಸುತ್ತೀವಿ ಎಂಬಂತಹ ಹುಡುಗಿಯರು ;-) ಇದು ಪಂಚರಂಗಿಯ ತಿರುಳುಗಳು.
ಮಧ್ಯಮ ವರ್ಗದವರ ಗೊಂದಲಗಳು, ಫಾರೀನ್ ಕನಸುಗಳು, ಹುಟ್ಟಿದಂದಿನಿಂದ ಶುರುವಾಗುವ ಟೆನ್ಷನ್ ಗಳು, ಮಕ್ಕಳ ಬದುಕನ್ನು ಅಪ್ಪ, ಅಮ್ಮಂದಿರೇ ಬದುಕುತ್ತಾರೆ, ಮಕ್ಕಳು ಹುಟ್ಟುವುದೇ ತಮ್ಮ ಕನಸುಗಳನ್ನು ನೆರವೇರಿಸಲು ಎಂದು ಭಾವಿಸಿರುವ ಈಗಿನ ಎಲ್ಲಾ ಮಧ್ಯಮ ವರ್ಗಗಳ ಕುಟುಂಬದ ಕಥೆ ‘ಪಂಚರಂಗಿ’. ಒಂದು ಕಡೆ ಹೀರೋಯಿನ್ ಅಕ್ಕ ಪಿಯುಸಿ ಫೈಲ್ ಆದರೂ ಫಾರೀನಿನಲ್ಲಿ ನೆಲೆಸಿರುವ ಹುಡುಗನನ್ನು ಮದುವೆಯಾಗುವ ಕನಸು ಕಾಣುವ ಹಾಗೂ ಅದಕ್ಕಾಗಿ ಇಂಗ್ಲೀಷ್ ಭಾಷೆಯನ್ನು ರಾಪಿಡೆಕ್ಸ್ ಪುಸ್ತಕದಿಂದ ಕಲಿಯುತ್ತಿರುವ ಹುಡುಗಿ! ಈಕೆಯನ್ನು ಮದುವೆಯಾಗಲು ಬರುವ ನಾಯಕನ ಅಣ್ಣ ಪಕ್ಕಾ ಮಧ್ಯಮವರ್ಗದ ಮಕ್ಕಳ ನಕಲು! ತಾನು ಪ್ರೀತಿಸಿದ್ದರೂ, ಅದನ್ನು ಅಪ್ಪ ಅಮ್ಮಂದಿರಿಗೆ ಹೇಳಲು ಹೆದರುವವನು, ಇಷ್ಟವಿಲ್ಲದಿದ್ದರೂ ಅವರಿಗಾಗಿಯೇ ವಿದೇಶದಲ್ಲಿ ನೆಲೆಸಿರುವವನು, ಅಪ್ಪ, ಅಮ್ಮನಿಗಾಗಿಯೇ ತನ್ನೆಲ್ಲಾ ಕನಸುಗಳನ್ನು ಮುಚ್ಚಿಟ್ಟುಕೊಂಡು ಬದುಕಿದ್ದರೂ ಸತ್ತಿರುವವನು. ಇಂತಹದಕ್ಕೆಲ್ಲಾ ರೆಬೆಲ್ ಆದ ನಾಯಕ ಮನೆಯಲ್ಲಿ ತಿರಸ್ಕೃತನಾದವನು.
ಮುಂಗಾರು ಮಳೆಯಲ್ಲಿ ಚಿತ್ರದ ಆರಂಭದಲ್ಲಿಯೇ ಹಳ್ಳದಲ್ಲಿ ಬೀಳುವ ನಾಯಕ ಪಟ್ಟ ಪರಿಪಾಡಲು ನೋಡಿದ ಪಂಚರಂಗಿಯ ‘ನಾಯಕ’ ಇಲ್ಲಿ ತಪ್ಪಿಸಿಕೊಂಡು ಓಡಾಡುತ್ತಾನೆ. ನಾಯಕಿ ಪ್ರೀತಿಸುತ್ತಿದ್ದಾಳೆ ಎಂದು ತಿಳಿದು ಆ ಬಲೆಯೊಳಗೆ ಸಿಲುಕಲು ಇಷ್ಟವಿರದ ಮಹಾನ್ ಪಲಾಯನವಾದಿ‘ಗಳು’ . ಲೈಫ್ ಇಷ್ಟೇನೇ ಎನ್ನುವುದು ಇವನ ಫಿಲಾಸಫಿ. ಜೀವನವೇ ಈತನಿಗೆ ಮಹಾನ್ ಬೋರು‘ಗಳು’.ನಗುವುದ ಮರೆತಿವೆ ಹೃದಯಗಳು, ಒಂದು ಒಳ್ಳೆ ನಗುವಿಗೆ ಮೀನಿಂಗ್‌ಫುಲ್ ಬದುಕಿಗೆ ಎಲ್ಲೈತಪ್ಪ ಇಲ್ಲಿ ಜಾಗಗಳು? ಇದು ಈತನ ಪ್ರಶ್ನೆಗಳು! ಇದಕ್ಕೆಲ್ಲಾ ಕಾರಣ ಹಿರಿಯರು‘ಗಳು’ ಎಂದು ದೂಷಿಸುತ್ತಲೇ ಕೂರುವುದು ಈತನ ಕೆಲಸ‘ಗಳು’. ವಿರುದ್ಧ ಧ್ರುವಗಳು ಆಕರ್ಷಿತವಾಗಿಯೇ ಆಗುತ್ತವೆ ಎಂಬಂತೆ ಆಶಾವಾದಿ ನಾಯಕಿ. ಅವಳಿಗೆ ಲೈಫ್ ಎಂದರೆ ‘ಹೀಗೇನೇ’!. ಜೀವನವನ್ನು ಎಂಜಾಯ್ ಮಾಡಬೇಕು, ಮನಸ್ಸಿಗೆ ಹಿಡಿಸದ ವಿಷಯಗಳನ್ನು ನೋಡದಂತಿರಬೇಕು, ಅದಕ್ಕೆ ಕೊರೊಗೋದು ಯಾಕೆ? ಯಾರನ್ನಾದ್ರೂ ದೂಷಿಸಬೇಕು ಯಾಕೆ? ಎನ್ನುವುದು ಇವಳ ಪಾಲಿಸಿ. ಇವರಿಬ್ಬರ ನಡುವಿನ ಪ್ರೀತಿಯ ದೃಶ್ಯಾವಳಿಯ ಒಂದು ಘಟನೆಯ ಚಿತ್ರಣ ‘ಪಂಚರಂಗಿ’.
ಈ ಎರಡು ಜೋಡಿಗಳನ್ನು ನೋಡಿದಾಗ ನಮ್ಮ ಮನೆಯಲ್ಲೇ ಇಂತಹದ್ದು ನಡೆಯುತ್ತಿವೆ ಎಂದನ್ನಿಸಿದರೂ ಮೆಚ್ಚುಗೆ ಪಡೆಯುವುದು ಮತ್ತೊಂದು ಜೋಡಿ - ಕೆಲಸದವಳು ಹಾಗೂ ಬಸ್ ಡ್ರೈವರ್ ನ ನಡುವಿನ ಪ್ರೀತಿ! ಈ ಮಧ್ಯಮ ವರ್ಗದವರಿಗೆ ಇರುವಂತಹ ಗೊಂದಲಗಳು, ಟೆನ್ಷನ್ ಗಳು ಯಾವುವೂ ಇವರನ್ನು ಕಾಡುವುದಿಲ್ಲ. ಅವನು ಹಿಂಜರಿಯದೇ ಇವಳಿಗೆ ಪ್ರೊಪೋಸ್ ಮಾಡಿಬಿಡುತ್ತಾನೆ. ಇವಳು ಒಪ್ಪಿಕೊಂಡುಬಿಡುತ್ತಾಳೆ. ಮದುವೆ ಕೂಡ ಆಗಿಬಿಡುತ್ತಾರೆ. ಈಕೆಯ ಅಣ್ಣ ‘ನನಗೆ ಒಂದು ಮಾತು ಹೇಳಿದ್ದರೆ, ನಾನೇ ಮದುವೆ ಮಾಡ್ತಿದ್ದೆ’ ಎನ್ನುವ ಮಾತು ಅವರು ಬದುಕಿನತ್ತ ನೋಡುವ ದೃಷ್ಟಿಯನ್ನು ತೆರೆದಿಟ್ಟು ಬಿಡುತ್ತದೆ. ನಾಯಕಿಯ ಅಕ್ಕ ಇಂಗ್ಲೀಷ್ ಕಲಿಯಲು ತಂದಿಟ್ಟುಕೊಂಡಿರುವ ರಾಪಿಡೆಕ್ಸ್ ಪುಸ್ತಕವನ್ನು ಓದಿ ಇಂಗ್ಲೀಷ್ ಕಲಿಯುವ ಈ ಕೆಲಸದವಳು, ಅಕ್ಕ ತಂಗಿಯರ ಜಗಳವನ್ನು ನಿರ್ಲಿಪ್ತವಾಗಿ ನೋಡುವ ಬಗೆ, ಬಸ್ ಡ್ರೈವರ್ ನ ಜೊತೆ ನಡೆಯುವ ಸಂಭಾಷಣೆಗಳು ಎಲ್ಲವೂ ಅವಳನ್ನು ಚಿತ್ರದ ಹೈಲೈಟ್ ಮಾಡಿಬಿಡುತ್ತವೆ.
ಚಿತ್ರದ ಮತ್ತೊಂದು ಮುಖ್ಯ ಪಾತ್ರ ಅನಂತನಾಗ್ ರವರದ್ದು. ಅಲೆಮಾರಿಯ ಪಾತ್ರ. ಈ ಪಾತ್ರಕ್ಕೆ ಅವರೇ ಸೂಕ್ತ ಅನ್ನಿಸಿಬಿಡುತ್ತದೆ. ಒಂದು ದೃಶ್ಯದಲ್ಲಿ ದಿಗಂತ್ ವರ್ಸಸ್ ಅನಂತನಾಗ್ ಸಂಭಾಷಣೆ (‘ಗಳು’ ‘ಗಳು’) ಬಹಳ ಚೆನ್ನಾಗಿ ಮೂಡಿಬಂದಿದೆ. ಮತ್ತೊಮ್ಮೆ ಈ ದೃಶ್ಯವನ್ನು ನೋಡಬೇಕೆಂದು ಮನ ಬಯಸುತ್ತದೆ. ಚಿತ್ರದ ಹಾಡುಗಳಂತೂ ಬಹಳ ಚೆನ್ನಾಗಿವೆ. ಶ್ರೇಯಾ ಘೋಷಾಲ್ ಹಾಡಿರುವ ‘ನಿನ್ನಯ ಒಲವಿನ’ ಬಹಳ ಇಂಪಾಗಿದೆ. ಚಿತ್ರದ ಪ್ರತಿಯೊಂದು ಡೈಲಾಗ್ ಗಳೂ ಒಂದೊಂದು ಕಥೆಯನ್ನು ಹೇಳುತ್ತವೆ. ಮುಂಗಾರು ಮಳೆ ತರಹ, ಮನಸಾರೆ ತರಹ, ಗಾಳಿ ಪಟ ತರಹ ಇದೆ ಅನ್ನಬಾರದೆಂದು
ಭಟ್ಟರು ಹುಷಾರಾಗಿ ಮೊದಲೇ ಟೈಟಲ್ ಸಾಂಗ್ ನಲ್ಲಿ ‘ಅರೆರೆರೆ ಪಂಚರಂಗಿ, ಅದೇ ಮೋಡ, ಅದೇ ಬಾನು, ಆದರೆ ಸೋನೆ ಬೇರೆ, ಸೋನೆಯ ಗಂಧ ಬೇರೆ ಎಂದು ಹೇಳಿಸಿಬಿಟ್ಟಿದ್ದಾರೆ.
ಹೆಚ್ಚಾಗಿ ಕನ್ನಡದ ಕಮರ್ಷಿಯಲ್ ಸಿನೆಮಾಗಳು ಶುರುವಿನಲ್ಲೇ ಮಾತಾಡಿ, ಕೊನೆಗೊಂದು ಕ್ಲೈಮಾಕ್ಸ್ ಕೊಟ್ಟು ಮಧ್ಯದಲ್ಲಿ ತುಂಬಿಸುವ ಕೆಲಸ ಮಾಡುತ್ತವೆ. ಇತ್ತೀಚೆಗೆ ಬರುತ್ತಿರುವ ಎಲ್ಲಾ ಸಿನೆಮಾಗಳು ಮಧ್ಯಂತರದ ನಂತರ ಬಹಳ ಎಳೆದಂತೆ ಭಾಸವಾಗಿಬಿಡುತ್ತವೆ. ಆದರೆ ‘ಪಂಚರಂಗಿ’ಯಲ್ಲಿ ಆರಂಭದಲ್ಲಿ ಏನೂ ಅರ್ಥವಾಗದ್ದು, ಮಧ್ಯಂತರದಲ್ಲಿ ಸ್ವಲ್ಪ ಏನೋ ಇದೆ ಅಂತಾ ಅನ್ನಿಸಿ, ಅದು ಏನು? ಅನ್ನೋದು ಕ್ಲೈಮಾಕ್ಸ್ ನಲ್ಲಿ ಗೊತ್ತಾಗುತ್ತದೆ. ಅದುವರೆವಿಗೂ ಭಟ್ಟರು ಏನು ಹೇಳೋದಿಕ್ಕೆ ಹೊರಟಿದ್ದಾರೆ ಅನ್ನೋದು ಅಷ್ಟಾಗಿ ಅರ್ಥವಾಗುವುದೇ ಇಲ್ಲ. ಇದಕ್ಕೆಲ್ಲಾ ಉತ್ತರಗಳು ಪಂಚರಂಗಿಯ ಕೊನೆಯ ೨೦ ನಿಮಿಷಗಳು. ಹಾಗಾಗಿ ಪಂಚರಂಗಿಯ ಕಥೆ ಶುರುವಾಗೋದು ಕ್ಲೈಮಾಕ್ಸ್ ನಲ್ಲಿ ಎಂದು ಹೇಳಬಹುದೇನೋ? ಕಮರ್ಶಿಯಲ್ ಸಿನೆಮಾ ಎಂಬುದನ್ನು ಮೀರಿ ಬೆಳೆಯುತ್ತಿದ್ದಾರೆ ಭಟ್ಟರು ಎನ್ನುವುದನ್ನು ಪಂಚರಂಗಿ ಹೇಳುತ್ತದೆ. ಇದೊಂದು ತರಹದ ಆರ್ಟ್ ಹಾಗೂ ಕಮರ್ಷಿಯಲ್ ನಡುವಿನ ಬ್ರಿಡ್ಜ್ ಸಿನೆಮಾ ಎನ್ನಬಹುದೇನೋ?
No comments:
Post a Comment