Wednesday, August 14, 2013

Ship of Theseus! - ಚಿತ್ರದ ಬಗ್ಗೆ!

Ship of Theseus ಎಂಬುವುದೊಂದು ಪ್ರಾಚೀನ ಸಿದ್ಧಾಂತ. ಇದನ್ನು ಮೊದಲಿಗೆ ಗ್ರೀಕ್ ನ ಪುರಾತನ ತತ್ವಜ್ಞಾನಿಯಾದ ಪ್ಲುಟಾರ್ಕ್ ಪ್ರತಿಪಾದಿಸಿದನಂತೆ.  ಕ್ರೀಟಿ ಎಂಬ ದ್ವೀಪದಿಂದ ಅಥೆನ್ಸ್ ನ ರಾಜನಾದ ಥೀಸಿಯಸ್ ಮತ್ತು ಸಂಗಡಿಗರು ವಾಪಾಸ್ಸು ಬಂದ ಹಡಗನ್ನು ಅಥೆನ್ಸ್ ನ ಜನತೆ, ಆತನ ನೆನಪಿಗಾಗಿ ಸಂರಕ್ಷಿಸಿದ್ದರು. ಕಾಲಕ್ರಮೇಣ, ಆ ಹಡಗಿನ ಭಾಗಗಳು ನಶಿಸಿಹೋಗುತ್ತಿದ್ದಾಗಲೆಲ್ಲಾ, ಹಾಳಾದ ಬಿಡಿಭಾಗಗಳ ಬದಲಿಗೆ ಹೊಸತು ಬಿಡಿಭಾಗಗಳನ್ನು ಜೋಡಿಸಿದರು. ಕೊನೆಗೊಮ್ಮೆ ಪೂರ್ತಿ ಹಡಗು ಹೊಸಭಾಗಗಳಿಂದ ಶೃಂಗರಿಸಲ್ಪಟ್ಟಿತು.  ಈಗ ಅದು ಥೀಸಿಯಸ್ ಬಂದಂಥ ಹಡಗೇ? ಅಥವಾ ಹೊಸತೇ?  ಹಳತು ತೆಗೆದು ಹಾಕಿದಂಥ ಭಾಗಗಳನ್ನು ಜೋಡಿಸಿ ಮತ್ತೊಂದು ಹಡಗು ಮಾಡಿದರೆ? ಅದು ಯಾವುದು?  ಹೀಗೆ ಶುರುವಾದ ತರ್ಕ Ship of Theseus ಎಂದೇ ಪ್ರಸಿದ್ಧಿಯಾಯಿತು!  ಈ ಸಿದ್ಧಾಂತದ ಮೂಲಭೂತ ಪ್ರಶ್ನೆಯೆಂದರೆ ಒಂದು ವಸ್ತುವಿನ ಪ್ರತಿಯೊಂದು ಭಾಗಗಳನ್ನು ಬದಲಾಯಿಸಿದ ನಂತರ, ಆ ವಸ್ತು ಬದಲಾಗುತ್ತದೆಯೇ? ಅಥವಾ ಅದು ಹಳೆಯ ಅದೇ ವಸ್ತುವೇ? ಎಂಬುವುದು! ಇನ್ನೂ ಸರಿಯಾದ ಉತ್ತರವೇ ಸಿಗದೇ, ಪ್ರಶ್ನೆಗಳ ಮೇಲೆ ಪ್ರಶ್ನೆಗಳನ್ನೇ ಹುಟ್ಟು ಹಾಕುತ್ತಿರುವ, ಅತ್ಯಂತ ವಿರೋಧಾಭಾಸದ ಫಿಲಾಸಫಿ!

ಇದೇ ಹೆಸರನ್ನು ಇಟ್ಟುಕೊಂಡು, ಅತ್ತ ಇಂಗ್ಲೀಷ್ ಅಲ್ಲದ, ಇತ್ತ ಹಿಂದಿಯೂ ಅಲ್ಲದ, ಅರಬ್ಬೀ ಭಾಷೆಯಿಂದ ಹಿಡಿದು ನಮ್ಮ ಕನ್ನಡದ ಭಾಷೆಯ ತುಣುಕಿನವರೆಗೂ, ಬಹು ಭಾಷೆಗಳ ಮಿಶ್ರಣದೊಂದಿಗೆ, ಇಂಗ್ಲೀಷ್ ಸಬ್ ಟೈಟಲ್ ಹೊತ್ತು ಬಂದಂಥ ಚಿತ್ರ Ship of Theseus! ಆನಂದ್ ಗಾಂಧಿ ನಿರ್ದೇಶನದ, ಬಹುತೇಕ ವಿಮರ್ಶಕರೆಲ್ಲರ ಮೆಚ್ಚುಗೆ ಗಳಿಸಿದ, ಪ್ರಸಿದ್ಧರಲ್ಲದ ತಾರಾಗಣದೊಂದಿಗೆ, ಯಾವುದೇ ಹಾಡು, ನೃತ್ಯಗಳ ಗೋಜಿಲ್ಲದೆ, ಕಡಿಮೆ ವೆಚ್ಚದಲ್ಲಿ ನಿರ್ಮಾಣಗೊಂಡ ಚಿತ್ರವಿದು!  ತೆರೆಗೆ ಬಂದಿದ್ದು ಕೂಡ ಅಂತಹ ಅದ್ಧೂರಿ ಜಾಹೀರಾತಿಲ್ಲದೆ, ಬಾಯಿಂದ ಬಾಯಿಗೆ ಮೆಚ್ಚುಗೆ ಮಾತುಗಳು ಹರಡಿ, ಪ್ರಸಿದ್ಧಿ ಪಡೆದ ಚಿತ್ರ!  ಇರಾನಿಯನ್ ಚಿತ್ರದಂತೆ ಅತ್ಯಂತ ನೈಜವಾಗಿ, ಯಾವುದೇ ಅಬ್ಬರ, ಆಡಂಬರವಿಲ್ಲದೆ ನಿಶ್ಯಬ್ಧವಾಗಿ ನೋಡಿಸಿಕೊಳ್ಳುವ ಚಿತ್ರ! ಆರಂಭದಲ್ಲಿ ಸ್ವಲ್ಪವೂ ಅರ್ಥವಾಗದೇ ಗೋಜಲಾದ ದಾರದುಂಡೆಯಂತೆ ಕಾಣುವ ಚಿತ್ರ, ಇದ್ದಕಿದ್ದಂತೆ ಕ್ಲೈಮಾಕ್ಸ್ ನಲ್ಲಿ ಸರಳವಾಗಿ ಬಿಡಿಸಿಕೊಂಡುಬಿಡುತ್ತದೆ, ಹಾಗೆಯೇ ಪ್ರೇಕ್ಷಕರ ಮನಸ್ಸಿನಲ್ಲಿ ಉತ್ತರವನ್ನು ನೀಡದೇ, ಪ್ರಶ್ನೆಗಳಿಗೇ, ಪ್ರಶ್ನೆಗಳನ್ನೇ ಕೇಳುತ್ತಾ ಹೋಗುತ್ತದೆ (ಚಿತ್ರ ಮುಗಿದ ನಂತರವೂ!)

ಮೂರು ಕಿರುಚಿತ್ರಗಳಂತೆ ಶುರುವಿಗೆ ಭಾಸವಾದರೂ, ಆ ಮೂರು ಚಿತ್ರಗಳನ್ನು ಅಂಗ ಮರುಜೋಡಣೆ ಎಂಬ ಒಂದು ಎಳೆಯಲ್ಲಿ ಜೋಡಿಸಲಾಗಿದೆ! ಮೊದಲಿಗೆ ಅಂಧ ಫೋಟೋಗ್ರಾಫರ್! ಅರಬ್ಬಿ! ಹೆಣ್ಣುಮಗಳ ಕಥೆ ಶುರುವಾಗುತ್ತದೆ. ಅರಬ್ಬಿ ಹೆಣ್ಣು! ಅಂಧಳು ಕೂಡಾ! ಆದರೆ ಆಕೆಯ ವೃತ್ತಿ ಫೋಟೋಗ್ರಫಿ?! ಫೋಟೋ ಹೇಗೆ ತೆಗೆಯುತ್ತಾಳೆ? ಇದು ಸಾಧ್ಯವೇ?.....  ಹೀಗೇ ಅನೇಕಾನೇಕ ಪ್ರಶ್ನೆಗಳು ಮನಸ್ಸಿನಲ್ಲಿ ಮೂಡುತ್ತವೆ. ಆಕೆ ಧ್ವನಿಯನ್ನು ಆಧರಿಸಿ ತೆಗೆದಂಥ ಫೋಟೋಗಳು, ಆಕೆಯ ಜೊತೆಗಾರನ ಸಹಾಯದಿಂದ ಸಂಕಲನಗೊಂಡು, ಪ್ರಸಿದ್ಧಿ ಪಡೆಯುತ್ತವೆ. ಮೃತ ದಾನಿಯಿಂದ ಪಡೆದ ಕಣ್ಣುಗಳನ್ನು ಆಕೆಗೆ ಜೋಡಿಸಲಾಗುತ್ತದೆ.  ಅದುವರೆವಿಗೂ ತನ್ನ ಫೋಟೋಗ್ರಫಿ ವೃತ್ತಿಯನ್ನು ಚಾಲೇಜಿಂಗ್ ಆಗಿ ತೆಗೆದುಕೊಂಡಿದ್ದ ಆಕೆಗೆ, ಕಣ್ಣು ಕಾಣಿಸಿದೊಡನೆಯೇ ಮನಕ್ಕೆ ನಿರಾಸೆ ಕವಿಯುತ್ತದೆ. ತನ್ನ ವೃತ್ತಿಯಲ್ಲಿ ಬೇಸರ ಶುರುವಾಗುತ್ತದೆ. ಆನಂತರ ಆಕೆ ತೆಗೆದ ಯಾವ ಫೋಟೋಗಳು ಅವಳಿಗೆ ಮನಸ್ಸಿಗೆ ಖುಷಿ ನೀಡದೇ, ಎಲ್ಲವನ್ನೂ ಅವಳು ಅಳಿಸಿಬಿಡುತ್ತಾಳೆ.  ಕೊನೆಗೊಮ್ಮೆ ಕಣ್ಣಿಗೆ ಪಟ್ಟಿ ಕಟ್ಟಿ ತೆಗೆದ ಫೋಟೋಗಳಿಂದ ಒಂದಿಷ್ಟು ನೆಮ್ಮದಿ ಸಿಕ್ಕರೂ ಕೂಡ ಅವಳಿಗೆ ಈ ಹೊಸ ಜೀವನಕ್ಕೆ ಹೊಂದಿಕೊಳ್ಳಲು ಕಷ್ಟವಾಗಿಬಿಡುತ್ತದೆ. ಕೊನೆಗೊಮ್ಮೆ ಹಿಮಾಲಯದ ತಪ್ಪಲಲ್ಲಿ ಒಂಟಿಯಾಗಿ ಫೋಟೋ ತೆಗೆಯಲು ಹೊರಟವಳು, ಅಲ್ಲಿನ ಸೌಂದರ್ಯವನ್ನು ತನ್ನ ಕಣ್ಣುಗಳಿಂದಲೇ ನೋಡುತ್ತಾ, ಫೋಟೋ ತೆಗೆಯುವುದು ನಿರರ್ಥಕ ಎಂದು ಸುಮ್ಮನಾಗಿಬಿಡುತ್ತಾಳೆ. ನಂತರ ಆಕೆ ಏನಾದಳು?  ಫೋಟೋಗ್ರಫಿಯನ್ನು ಮುಂದುವರಿಸಿದಳೇ? ಇಲ್ಲವೇ? ತಿಳಿಯುವುದೇ ಇಲ್ಲ! ಅದುವರೆವಿಗೂ ಕಷ್ಟಕರ ಅನ್ನಿಸಿದ್ದ ವೃತ್ತಿ, ಸುಲಭವಾದೊಡನೆಯೇ ಬಹುಶಃ ಅವಳಿಗೆ ಅದರಲ್ಲಿ ಆಸಕ್ತಿ ಕಡಿಮೆ ಆಯಿತು ಎಂದರ್ಥ ಮಾಡಿಕೊಳ್ಳಬಹುದು.  ಮುಂದೆ ಅವಳು ಫೋಟೋಗ್ರಫಿಯನ್ನು ಬಿಟ್ಟುಬಿಡುತ್ತಾಳೆ ಎಂದೆನಿಸಿತು.

ಮತ್ತೊಂದು ಕಥೆ ಶುರುವಾಗುವುದು ಮೈತ್ರೇಯ ಎಂಬ ಜೈನ? / ಬುದ್ಧ? (ನನಗೆ ತಿಳಿಯಲಿಲ್ಲ) ಧರ್ಮೀಯನದು. ಪ್ರಾಣಿಗಳ ಮೇಲೆ ಪ್ರಯೋಗ ನಡೆಸಿ, ಮಾರ್ಕೆಟ್ ಗೆ ಮನುಷ್ಯರ ಬಳಕೆಗೆ ತರುವಂಥ ಔಷಧಿಗಳು ಹಾಗೂ ಕಾಸ್ಮೆಟಿಕ್ಸ್ ಗಳಿಗೆ ಈತನ ವಿರೋಧವಿದೆ.  ಈತ ಅದಕ್ಕಾಗಿ ಕೋರ್ಟ್ ನಲ್ಲಿ ಕೇಸ್ ಕೂಡ ನಡೆಸಿರುತ್ತಾನೆ. ವಿಪರ್ಯಾಸವೆಂದರೆ ಈತನಿಗೆ ಲಿವರ್ ಸೈರೋಸಿಸ್ ಎಂಬ ಕಾಯಿಲೆಯಾಗುತ್ತದೆ. ಇದಕ್ಕೆ ಬೇರೆಯವರ ಲಿವರ್ ಮರುಜೋಡಣೆ ಜೊತೆಗೆ ಔಷಧಿಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಆತನೆಷ್ಟೇ ಪ್ರಯತ್ನ ಪಟ್ಟರೂ, ಗಿಡಮೂಲಿಕೆಗಳ ಔಷಧಿಗಳನ್ನು ತಿಂದರೂ, ಅಮರಣಾಂತ ಉಪವಾಸ ಮಾಡಿ ಸಾಯುತ್ತೇನೆ, ಆದರೆ ಔಷಧಿ ಮಾತ್ರ ತೆಗೆದುಕೊಳ್ಳುವುದಿಲ್ಲ ಎಂಬ ದೃಢ ನಿರ್ಧಾರ ತೆಗೆದುಕೊಳ್ಳುತ್ತಾನೆ.  ಮರಿ ಲಾಯರ್ ನೊಬ್ಬ (ಆತನು ಕೂಡ ಇವನ ಐಡಿಯಾಲಜಿಗಳಿಗೆ, ದೃಢ ನಿರ್ಧಾರಗಳಿಗೆ ಮನಸೋತವನು), ಇವನ ಅಮರಣಾಂತ ಉಪವಾಸ ತಡೆಯಲು ಏನೆಲ್ಲಾ ಬುದ್ಧಿ ಹೇಳುತ್ತಾನೆ, ತರ್ಕ ಮಾಡುತ್ತಾನೆ (ಇದನ್ನು ನೋಡುವಾಗ ನನಗನ್ನಿಸಿದ್ದು - ಸ್ವಗತ ತೋರಿಸಲು ಕಷ್ಟವಾಗಿ, ಬಹುಶಃ ಈ ಪಾತ್ರದ ಮೂಲಕ ಮೈತ್ರೇಯನ ಮಾತುಗಳನ್ನು, ತರ್ಕಗಳನ್ನು ತೋರಿಸಿದ್ದಾರೆಯೇ?) ಈ ಲಾಯರ್ ಮೈತ್ರೇಯನ ಮನ ಒಲಿಸುವಲ್ಲಿ ಸೋಲುತ್ತಾನೆ. ಆದರೆ ಮೈತ್ರೇಯನಿಗೆ,  ಕೊನೆಗಳಿಗೆಯಲ್ಲಿ ತನ್ನ ಜೀವದ ಹಿಂಸೆ ತಡೆಯಲಾಗದೇ, ಬದುಕಬೇಕೆಂಬ ಬಯಕೆಗೆ ಸೋತು,  ಲಿವರ್ ಟ್ರಾನ್ಸ್ ಪ್ಲಾಂಟ್ ಗೆ ಒಪ್ಪಿಕೊಳ್ಳುತ್ತಾನೆ.  ತನ್ನ ಜೀವ ಉಳಿಸಿಕೊಳ್ಳಲು, ತನ್ನ ಸಿದ್ಧಾಂತದೊಂದಿಗೆ ರಾಜಿ ಮಾಡಿಕೊಳ್ಳುವ ಈತ ಮುಂದೇನಾಗುತ್ತಾನೆ?  ಯಾರಿಗೂ ತಿಳಿಯದು. ಬಹುಶಃ ಆತ ಔಷಧ ಉತ್ಪಾದಕರ ಮೇಲೆ ಹಾಕಿರುವ ಕೇಸ್ ವಾಪಾಸ್ಸು ಪಡೆದಿರಬಹುದು!

ಮತ್ತೊಬ್ಬ ಶೇರ್ ಬ್ರೋಕರ್, ಈತನ ಪ್ರಪಂಚ ಹಣ ಮಾಡುವುದಷ್ಟೇ ಆಗಿರುತ್ತದೆ.  ಈತನಿಗೊಬ್ಬಳು ಕನ್ನಡದ ‘ಅಜ್ಜಿ’! ಆಕೆ ಸ್ವಾತಂತ್ರ್ಯ ಕಾಲದ ಆಕ್ಟಿವಿಸ್ಟ್!  ಆಕೆಗೆ ತನ್ನ ಮೊಮ್ಮಗನ ಮೇಲೆ ಅಸಮಾಧಾನವಿರುತ್ತದೆ.  ಆತನ ಕಿಡ್ನಿ ತೊಂದರೆಯಾಗಿ, ದಾನಿಯಿಂದ ಕಿಡ್ನಿ ಪಡೆದು ಹುಷಾರಾಗಿರುತ್ತಾನೆ. ಅಷ್ಟರಲ್ಲಿ ಆತನ ‘ಅಜ್ಜಿ’ಯ ಕಾಲು ಮುರಿದು ಅವಳು ಆಸ್ಪತ್ರೆ ಸೇರಿಕೊಳ್ಳುತ್ತಾಳೆ. ದಿನಗೂಲಿ ಮಾಡುವವನೊಬ್ಬನ ಅಪೆಡಿಂಕ್ಸ್ ಆಪರೇಷನ್ ನಡೆದು, ಆತನ ಕಿಡ್ನಿ ಅಪಹರಿಸಿ ಮತ್ತೊಬ್ಬರಿಗೆ ಜೋಡಿಸಿರುತ್ತಾರೆ.  ತನಗೆ ಜೋಡಿಸಿರುವ ಕಿಡ್ನಿ ಆತನದೇ ಇರಬಹುದೆನ್ನುವ ಸಂಶಯದಲ್ಲಿ, ಆತನ ಸಹಾಯಕ್ಕೆ ಒದಗುವ ಇವನು, ಇವನ ಸಮಯವೇ ಇವನ ಹಣ ಹಾಗೂ ಹಣ ಸಂಪಾದನೆಯೇ ಇವನ ಸಿದ್ಧಾಂತವಾಗಿದ್ದರೂ ಕೂಡ, ಅವೆಲ್ಲವನ್ನೂ ತ್ಯಜಿಸಿ (ಅಜ್ಜಿಯ ಮಾತುಗಳಿಂದ ತನಗಾಗುತ್ತಿದ್ದ ಗಿಲ್ಟ್ ನಿಂದ ಹೊರಬರಲು)  ಆ ದಿನಗೂಲಿಯವನ ಕಿಡ್ನಿ ಹುಡುಕುತ್ತಾ ಹೊರಡುತ್ತಾನೆ. ವಿದೇಶದಲ್ಲಿದ್ದ ಒಬ್ಬ ವ್ಯಕ್ತಿ ಅಪಾರ ಹಣ ಖರ್ಚು ಮಾಡಿ, ಈ ಜೀವಂತ ವ್ಯಕ್ತಿಯಿಂದ ಕಿಡ್ನಿ ಖರೀದಿ ಮಾಡಿರುತ್ತಾನೆ. ಆತನಿಗೆ ಭಾರತದಲ್ಲಿ ಇದು ಸಾಮಾನ್ಯ ಎನ್ನುವ ಚಿತ್ರಣವಿರುತ್ತದೆ! ಆದರೆ ಆಸ್ಪತ್ರೆಯವರು ಮೋಸದಿಂದ ಕಿಡ್ನಿ ಪಡೆದಿದ್ದಾರೆ ಎನ್ನುವ ಅರಿವಾಗುವ ವಿದೇಶೀಯ, ಈ ಶೇರ್ ಬ್ರೋಕರ್ ನ ಸಲಹೆ ಕೇಳುತ್ತಾನೆ. ಹಾಗೂ ಈತ ಹೇಳಿದ ಕಂಡೀಷನ್ ಗಳೆಲ್ಲವನ್ನೂ ಒಪ್ಪುತ್ತಾನೆ ಕೂಡ.  ಆದರೆ ಅಷ್ಟರಲ್ಲಿ ವಿದೇಶೀಯನ ಕಡೆಯ ವಕೀಲನೊಬ್ಬ, ಭಾರತದಲ್ಲಿ ಈ ಕೂಲಿಕಾರನಿಗೆ ಆತ ಕಂಡರಿಯದಷ್ಟು ಹಣ ಕೊಟ್ಟು ಆತನ ಬಾಯಿ ಮುಚ್ಚಿಸುತ್ತಾನೆ.  ಶೇರ್ ಬ್ರೋಕರ್ ತನ್ನ ಸಿದ್ಧಾಂತವನ್ನು ಒಡೆದು, ಈ ಬಡವನ ಸಹಾಯಕ್ಕೊದಗಿದರೂ ಕೂಡ, ಆತ ಜಯಶಾಲಿಯಾಗುವುದಿಲ್ಲ. ಕೊನೆಗೂ ಹಣವೇ ಗೆಲ್ಲುತ್ತದೆ! ಚಿತ್ರದ ಕೊನೆಯಲ್ಲಿ ಈ ಮೂವರಿಗೂ ಒಬ್ಬನೇ ಮೃತ ವ್ಯಕ್ತಿಯಿಂದ ಅಂಗಾಂಗಗಳನ್ನು ಜೋಡಿಸಿರುತ್ತಾರೆ ಎಂಬುದು ತಿಳಿಯುತ್ತದೆ. 

ಚಿತ್ರವನ್ನು ನೋಡುತ್ತಿದ್ದಂತೆ ಮೊದಲಿಗೆ ಅನ್ನಿಸಿದ್ದು, ಇದಕ್ಕಿಟ್ಟಿರುವ ಹೆಸರಿನ ಬಗ್ಗೆ ಗೊಂದಲ, ಇಲ್ಲಿ ವ್ಯಕ್ತಿಯ ಎಲ್ಲಾ ಅಂಗಗಳನ್ನು ಬದಲಾಯಿಸಿರುವುದಿಲ್ಲ ಹಾಗಾಗಿ ಶಿಪ್ ಆಫ್ ಥೀಸಿಯಸ್ ಎಂಬ ಹೆಸರೇ ಸರಿಯಿಲ್ಲ ಎನ್ನುವ ಅನಿಸಿಕೆಯ ಜೊತೆಗೆ ಆ ಮೂವರೂ ತಾವು ನಂಬಿಕೊಂಡಿರುವ ಸಿದ್ಧಾಂತಗಳು, ಅದರಿಂದಾಗಿ ಅನುಭವಿಸುವ ಅಸಹಾಯಕತೆ, ನೋವು, ಗಿಲ್ಟ್, ತಮ್ಮ ಸಿದ್ಧಾಂತಗಳನ್ನು ಸರಿಯಾದ ನಿಟ್ಟಿನಲ್ಲಿ ನಡೆಸಲು, ಅದರೊಂದಿಗೆ ಮಾಡಿಕೊಳ್ಳುವ ರಾಜಿ, ಆದರೂ ಅನುಭವಿಸುವ ಸೋಲು! ಇಲ್ಲಿ ವ್ಯಕ್ತಿಗಳು ಗೆದ್ದರೇ? ಸಿದ್ಧಾಂತಗಳು ಗೆದ್ದವೇ? ಒಟ್ಟಿನಲ್ಲಿ ಚಿತ್ರವು ಕ್ಲೈಮಾಕ್ಸ್ ನಲ್ಲಿ ಬಿಡಿಸಿಕೊಂಡರೂ, ತಲೆಯಲ್ಲಿ ಮೂಡುವ ಪ್ರಶ್ನೆಗಳು, ಮನದಲ್ಲಿ ಉಂಟಾಗುವ ಗೊಂದಲಗಳು, ಗೋಜಲುಗೋಜಲೆನಿಸಿ, ತಲೆಯ ತುಂಬಾ ಶಿಪ್ ಆಫ್ ಥೀಸಿಯಸ್! ಚಿತ್ರ, ಪಾತ್ರಧಾರಿಗಳು, ಅವರ ಸಿದ್ಧಾಂತಗಳು, ಅವರ ಸ್ವಗತಗಳು, ಅವು ಎತ್ತುವ ಪ್ರಶ್ನೆಗಳು, ಸಿಗದ ಉತ್ತರಗಳು! :-) ಬಹುಶಃ ದೃಶ್ಯ ಮಾಧ್ಯಮದ ಯಶಸ್ಸೇ? ಇದು ಎಂದೆನಿಸುತ್ತದೆ. ಅಷ್ಟರಲ್ಲಿ ಭರ್ತಿಯಾಗದ ಸೀಟುಗಳು, ಅಲ್ಲೊಬ್ಬರು, ಇಲ್ಲೊಬ್ಬರು ಪ್ರೇಕ್ಷಕರು, ಬಾಕ್ಸ್ ಆಫೀಸಿನಲ್ಲಿ ಹಣ ಮಾಡೀತೇ? ಇಲ್ಲವೇ? ಎನ್ನುವ ಪ್ರಶ್ನೆ ಮೂಡಿ, ಚಿತ್ರ ಗೆದ್ದಿತೇ? ಎಂದು ಅನುಮಾನಿಸುವಂತಾಗುತ್ತದೆ. ಈ ಚಿತ್ರವನ್ನು ಥಿಯೇಟರ್ ನಲ್ಲಿ ನೋಡುವುದಕ್ಕಿಂತ, ಹೋಮ್ ಥಿಯೇಟರ್ ನಲ್ಲಿ ನೋಡಿದ್ದರೆ ಇನ್ನೂ ಹೆಚ್ಚಿಗೆ ಅರ್ಥವಾಗುತ್ತಿತ್ತು ಅನ್ನುವ ಅನಿಸಿಕೆಯು ಮೂಡಿ, ಒಟ್ಟಿನಲ್ಲಿ ಫುಲ್ ಕನ್ ಫ್ಯೂಷನ್!  ಇದಕ್ಕೆ ಕನ್ ಫ್ಯೂಷಿಯಸ್ ಎನ್ನುವ ಹೆಸರನ್ನು ಇಟ್ಟಿದ್ದರೆ ಹೆಚ್ಚು ಸೂಕ್ತವಾಗಿ, ಅರ್ಥಪೂರ್ಣವಾಗಿರುತ್ತಿತ್ತೇನೋ?! ಗೊತ್ತಿಲ್ಲ.,