Wednesday, August 29, 2012

ನನ್ನ ಮನಸ್ಸು


ಸ್ವಭಾವತಃ ಭಾವುಕವಾಗಿ ಯೋಚಿಸುವ ನನಗೆ ನನ್ನ ಸುತ್ತಮುತ್ತಲಿನವರ ಸ್ವಾರ್ಥ, ತಾವು ಮೇಲೆರಲು ಮತ್ತೊಬ್ಬರನ್ನು ತುಳಿಯುವ ಬಯಕೆ, ಹಣ ಬದುಕಿನಲ್ಲಿ ಏನೇನೆಲ್ಲವನ್ನು ಮಾಡಬಲ್ಲುದು, ರಾಜಕೀಯ, ಆಸೆ, ಅಸೂಯೆ, ಇವೆಲ್ಲವನ್ನೂ ನೋಡಿ ನೋಡಿ ರೋಸಿ ಹೋಗಿದ್ದೆ. ನನ್ನೆಲ್ಲಾ ಅನಿಸಿಕೆಗಳನ್ನು, ಕೊರಗುಗಳನ್ನು ಹಂಚಿಕೊಳ್ಳಲು ಸ್ನೇಹಿತರ್ಯಾರು ಇರಲಿಲ್ಲ. ಈ ರೀತಿಯ ಬದುಕಿನ ಏಕತಾನತೆಯಿಂದ ಬೇಸತ್ತ ನಾನು ಈ ಇಂಟರ್ ನೆಟ್ ಸಂಪರ್ಕಕ್ಕೆ ಬಂದಿದ್ದು ಆಕಸ್ಮಿಕ. ಸಂಬಂಧಿಕರೊಬ್ಬರು ತಾನು ಯಾವಾಗಲೂ ಸಂಪದ ಎಂಬ ಬ್ಲಾಗ್ ನಲ್ಲಿ (ಫೇಸ್ ಬುಕ್ ನ ಕನ್ನಡ ಮಾದರಿ) ಬರೆಯುವುದಾಗಿಯೂ ಹೇಳಿದಾಗ ಕುತೂಹಲಕ್ಕೆಂದು ನೋಡಿದ್ದು ನಾನು. ಆ ಸಮಯದಲ್ಲಿ ಮಂಗಳೂರಿನಲ್ಲಿ ಪ್ರಮೋದ್ ಮುತಾಲಿಕ್ ರ ಸ್ವಘೋಷಿತ ಸಂಸ್ಕೃತಿಯ ರಕ್ಷಣಾ ದಾಳಿಯಾಗಿತ್ತು. ಸಂಪದದಲ್ಲಿ ಯಾರೋ ಪುರುಷ ಮಹಾಶಯನೊಬ್ಬ ಮಂಗಳೂರು ಪಬ್ ದಾಳಿಯನ್ನು ಸಮರ್ಥಿಸುತ್ತಾ, ನಮ್ಮ ಸಂಸ್ಕೃತಿ, ನಮ್ಮ ಸಂಸ್ಕೃತಿ ಎಂದು ಬೊಬ್ಬೆ ಹೊಡೆಯುತ್ತಾ, ಹೆಣ್ಣು ಮಕ್ಕಳನ್ನು ಅತ್ಯಂತ ಕೀಳಾಗಿ, ಅಶ್ಲೀಲ ಮಾತುಗಳಿಂದ ತೆಗಳುವಾಗ, ರೊಚ್ಚಿಗೆದ್ದು ಅದಕ್ಕೆ ಕಮೆಂಟಿಸಿದ್ದು ನಾನು! ಸಂಪದದಲ್ಲಿ ಅದುವರೆವಿಗೂ ಮಹಿಳೆಯರು ಯಾರೂ ಅಷ್ಟೊಂದು ಸಕ್ರಿಯವಾಗಿ ಭಾಗವಹಿಸುತ್ತಿರಲಿಲ್ಲ. ಅದರಲ್ಲೂ ಈ ರೀತಿಯ ಅಶ್ಲೀಲ ಬೈಗುಳಗಳನ್ನು ಎದುರಿಸುವವರಂತೂ ಇರಲೇ ಇಲ್ಲ. ಹಾಗಾಗಿ ನನ್ನ ಆ ಒಂದು ಕಮೆಂಟ್ ಹಾಗೂ ನನ್ನ ‘ಇಂಚರ’ ಎಂಬ ಹೆಸರು?! ಬಹುಶಃ ಇತರ ಸಂಪದಿಗರನ್ನು ಆಕರ್ಷಿಸಿತು. ನಾವೆಲ್ಲರೂ ಒಟ್ಟಾಗಿ ಆ ಮನುಷ್ಯನನ್ನು ಸಂಪದದಿಂದ ಹೊರಗೆ ಹಾಕಿದ್ದೆವು. ನಾನು ಸಂಪದಕ್ಕೆ ಬಂದದ್ದು ಹೀಗೆ. ಆಗ ನನಗೆ ಈ ಸೋಷಿಯಲ್ ನೆಟ್ ವರ್ಕಿಂಗ್ ಬಗ್ಗೆ ಆಗಲೀ ಅಂಥವಾ ಬ್ಲಾಗ್ ಗಳ ಬಗ್ಗೆಯಾಗಲೀ ಸ್ವಲ್ಪವೂ ತಿಳಿದಿರಲಿಲ್ಲ. ಫೇಸ್ ಬುಕ್, ಗೂಗಲ್ ಪ್ಲಸ್ ಇವ್ಯಾವುದೂ ಕೂಡ ಇರಲಿಲ್ಲ. ನನ್ನ ಬರವಣಿಗೆಯಂತೂ ಸೊನ್ನೆ. ಚಿಕ್ಕಂದಿನಿಂದಲೂ ಪುಸ್ತಕಗಳನ್ನು ಓದುವ ಗೀಳಿತ್ತು ಬಿಟ್ಟರೆ, ಯಾವುದೇ ಕವನಗಳಾಗಲೀ ಅಥವಾ ಸಣ್ಣ ಪುಟ್ಟ ಕಥೆಗಳನ್ನಾಗಲೀ ನಾನು ಬರೆದಿರಲಿಲ್ಲ. ಬರೆಯುವ ಪ್ರಯತ್ನ ಕೂಡ ಮಾಡಿರಲಿಲ್ಲ. ಇನ್ನಿತರ ಸಂಪದಿಗರ ಲೇಖನಗಳಿಗೆ ಪ್ರತಿಕ್ರಿಯಿಸುತ್ತಾ ನಾನು ಕೂಡ ಚುಟುಕು ಚುಟುಕಾಗಿ ಬರೆಯಲು ಶುರು ಮಾಡಿದೆ. ಅದಕ್ಕೆ ಸಿಗುತ್ತಿದ್ದ ಖುಷಿ ಖುಷಿಯ ಪ್ರತಿಕ್ರಿಯೆಗಳು ನನಗೆ ಆಸ್ಕರ್ ಅವಾರ್ಡ್ ನಂತೆ ಭಾಸವಾಗುತ್ತಿತ್ತು. ಸ್ಪೂರ್ತಿಯಿಂದ ಇನ್ನಷ್ಟು ಬರಹಗಳನ್ನು, ಅದಕ್ಕೆ ಲೇವಡಿ ಮಾಡುವವರಿಗೆ ಚುರುಕಾಗಿ, ಪ್ರೀತಿ ತೋರಿಸುವವರಿಗೆ ಇನ್ನಷ್ಟು ಪ್ರೀತಿ, ಪ್ರಶ್ನಿಸುವವರಿಗೆ ತಮಾಷೆಯ ಉತ್ತರಗಳು... ಓಹ್! ನಾನು ನಾನಾಗೇ ಇರಲಿಲ್ಲ. ನನ್ನ ಲೋಕ ಬೇರೆಯಾಗಿತ್ತು. ಖುಷಿ, ಖುಷಿ, ಖುಷಿ ಇಷ್ಟೇ ನನ್ನ ದಿನಚರಿ. ಹೊಗಳಿಕೆಗೆ ಮಣಿಯದವರಾರು? ಹೀಗಾಗಿ ಸಂಪದದಲ್ಲಿ ಬರೆಯುವುದೇ (ಬಹಳಷ್ಟು ಪ್ರತಿಕ್ರಿಯೆಗಳು ಬರುವುದರಿಂದ) ನನಗೆ ಖುಷಿ ಎನಿಸಿಬಿಟ್ಟಿತು. ಜೊತೆಗೆ ಹುಟ್ಟು ಸೋಮಾರಿಯಾದ ನಾನು ನನ್ನದೇ ಆದ ಹೊಸದೊಂದು ಬ್ಲಾಗ್ ತೆರೆಯಲು ಮನಸ್ಸು ಮಾಡಲಿಲ್ಲ. 

ಈ ಬರಹಗಳು, ಮತ್ತೊಬ್ಬರ ಬರಹಗಳಿಗೆ ನನ್ನ ಪ್ರತಿಕ್ರಿಯೆಗಳು, ಹೀಗೆ ಸಮಾನಮನಸ್ಕರೊಂದಿಷ್ಟು ಜನ ಆತ್ಮೀಯರಾದರು. ಮನೆಯವರಂತೆಯೇ ಭಾಸವಾಗಿಬಿಟ್ಟರು. ಯಾವುದೇ ರೀತಿಯ ಕನಸುಗಳಿಲ್ಲದೆ, ಗುರಿಯಿಲ್ಲದೆ ಹಾಯಾಗಿದ್ದ ನನಗೆ, ಗೆಳೆಯರ ಕನಸುಗಳನ್ನು ಕೇಳಿದಾಗ ಅರೆ! ನನಗೆ ಈ ರೀತಿಯ ಯಾವುದೇ ಗುರಿ ಇಲ್ಲದಿರುವುದಕ್ಕೆ ಬೇಸರ ಶುರುವಾಗಿದೆಯೇ? ಎಂಬ ಪ್ರಶ್ನೆ, ಯಾವುದಾದರೊಂದು ಚಟುವಟಿಕೆಯಲ್ಲಿ ತೊಡಗಬೇಕೆನ್ನುವ ಆಶಯ, ಯಾವ ಕಲಾತ್ಮಕ ಚಟುವಟಿಕೆ ಶುರು ಮಾಡಲಿ? ಎಂಬ ಚಿಂತೆ, ಎಲ್ಲವೂ ಒಟ್ಟೊಟ್ಟಿಗೆ ದಾಳಿ ಮಾಡತೊಡಗಿದವು. ಸಮಾನಮನಸ್ಕರೆಲ್ಲರೂ ಸೇರಿ ಒಟ್ಟಿಗೆ ಯಾವುದಾದರೊಂದು ಪ್ರಾಜೆಕ್ಟ್ ಶುರು ಮಾಡೋಣವೆಂದು ಪ್ರಾರಂಭಿಸಿ, ನಂತರ ಟೀಮ್ ವರ್ಕ್ ನಲ್ಲಿ ಎಲ್ಲರೂ ಸೋತು, ಪ್ರಾಜೆಕ್ಟ್ ಕೂಡ ಮೂಲೆ ಸೇರಿತು. ಮನೆಯವರಂತೆಯೇ ಕಂಡಿದ್ದ ಸ್ನೇಹಿತರಲ್ಲೂ ಸ್ವಾರ್ಥ ಕಂಡಾಗ, ಅವರೆಲ್ಲರೂ ನನ್ನನ್ನು ಭಾವುಕಳೆಂದು, ಯಾವುದೇ ಕೆಲಸಕ್ಕೆ ಪ್ರಯೋಜನವಿಲ್ಲವೆಂದು ಹೀಯಾಳಿಸಿದಾಗ, ಮತ್ತೊಬ್ಬ ಆತ್ಮೀಯ ಸ್ನೇಹಿತ ಈ ಪ್ರಾಜೆಕ್ಟ್ ನಿಂದಾಗಿ ಕಾರಣವೇ ಕೊಡದೇ ದೂರ ಹೋದಾಗ, ಅರಳಿದ್ದ ಮನ ಮತ್ತೆಂದಿಗೂ ಅರಳಲಾರೆನೆಂಬಂತೆ ಮುದುಡಿತು. ಮತ್ತೆ ಏಕಾಂಗಿಯಾದೆ. ಈ ಎಲ್ಲಾ ಬ್ಲಾಗ್ ಪ್ರಪಂಚಗಳಿಂದ ದೂರವಾದೆ. ಒಂದಷ್ಟು ದಿನಗಳು ಅತ್ತೆ, ಕೊರಗಿದೆ, ಸೊರಗಿದೆ, ನಾನು ಕೂಡ ಪ್ರೊಫೆಷನಲ್ ಎಂದು ತೋರಿಸಿಕೊಳ್ಳಲು ಪರಿಚಯದವರೊಬ್ಬರ ಸಹಾಯದಿಂದ ಕಿರು ಚಿತ್ರವೊಂದನ್ನು ಶುರು ಮಾಡಿದೆ. ಅದು ಕೂಡ ಅವರ ಮನಸ್ಸಿಲ್ಲದ ಮನಸ್ಸಿನಿಂದಾಗಿಯೋ ಅಥವಾ ನಿಜವಾಗಿಯೂ ಚಿತ್ರ ಚೆಂದ ಬಂದಿಲ್ಲವೋ? ನಾನಂತೂ ಈ ವಿಷಯದಲ್ಲಿ ತೀರಾ ಅನನುಭವಿ, ಆ ಕಿರುಚಿತ್ರ ಎಡಿಟಿಂಗ್ ಹಂತದಲ್ಲಿಯೇ ನಿಂತು ಹೋಯಿತು. ಸ್ನೇಹಿತರನೇಕರು ನಿನ್ನ ಭಾವುಕತೆಯೇ ನಿನ್ನ ದೌರ್ಬಲ್ಯವೆಂದು, ನೀನೇನನ್ನು ಸಾಧಿಸಲಾರೆಯೆಂದು ಹೀಯಾಳಿಸಿದಾಗ ಮೇಲೇರಲಾರೆಯೆಂಬಂತೆ ತೀರಾ ಒಳಕ್ಕಿಳಿದುಬಿಟ್ಟೆ. ನಾನು ಯಾವುದಕ್ಕೂ ಪ್ರಯೋಜನವಿಲ್ಲವೆಂದು, ನನ್ನ ಬದುಕಿಗೆ ಅರ್ಥವಿಲ್ಲದಂತಾಗಿದೆಯೆಂದು ಕೊರಗು ಶುರುವಾಯಿತು. ನಾನು ಯಾವಾಗಲೂ ಹೀಗೆ, ತೀರಾ ನನ್ನೊಳಗೆ ನಾನಿಳಿದುಬಿಟ್ಟಾಗ, ನನ್ನನ್ನು ನಾನೇ ವಿಶ್ಲೇಷಿಸಿಕೊಂಡು, ನನ್ನ ಒಪ್ಪುತಪ್ಪುಗಳೆಲ್ಲವನ್ನೂ ನಾನೇ ನನ್ನೊಳಗೆ ಸರಿ ಮಾಡಿಕೊಂಡು ಮತ್ತೆ ಉತ್ಸಾಹದಿಂದ ಮತ್ತೊಂದು ಬದುಕಿಗೆ ಸಜ್ಜಾಗಿಬಿಡುತ್ತೇನೆ. ಈ ಸಲವೂ ಹೀಗೆ, ಶುರುವಾಯಿತು ಕಮಾಡಿಟಿ ಟ್ರೇಡಿಂಗ್ (ಇದನ್ನು ಮತ್ತೊಮ್ಮೆ ಬರೆಯುತ್ತೇನೆ) ಹಾಗೂ ಅದರಲ್ಲಿನ ಏಕತಾನತೆಯಿಂದ ಹೊರಬರಲು (ದಿನವಿಡೀ ಆನ್ಲೈನ್ ಇರಬೇಕಾದ ಕಾರಣ) ಫೇಸ್ ಬುಕ್ ಪಯಣ. ಹಾ! ಮರೆತೆ! ವೈದೇಹಿಯವರ ಅಲೆಗಳಲ್ಲಿ ಅಂತರಂಗ ಕೂಡ ಮತ್ತೆ ನಾನು ಎದ್ದು ನಿಲ್ಲಲು ಸಹಕಾರ ಕೊಟ್ಟಿತು. 

ಫೇಸ್ ಬುಕ್ ನಲ್ಲಿ ಗೆಳತಿಯೊಬ್ಬಳು ಪರಿಚಯಿಸಿದ ಅಂತಃಪುರದ ಗುಂಪು. ಈಗಾಗಲೇ ಇಂತಹದೊಂದು ಗುಂಪಿನಿಂದ ನೊಂದಿದ್ದ ನನಗೆ, ಮತ್ತೆ ಇದ್ಯಾವುದೂ ಬೇಡವಾಗಿತ್ತು. ಆದರೂ ಈ ಮನಸ್ಸು ಬಿಡಬೇಕಲ್ಲಾ?! ಅವರೆಲ್ಲರು ಭೇಟಿಯಾಗಲು ನಿರ್ಧರಿಸಿದಾಗ, ನೀನು ಕೂಡ ಹೋಗು ಎಂದು ಪ್ರೇರೇಪಿಸಿತು. ಭೇಟಿಯಾದಾಗ ಒಂದಿಷ್ಟು ಅಳುಕು, ಅಸಡ್ಡೆ, ಸಂಕೋಚ ಎಲ್ಲವೂ ಇದ್ದರೂ, ಪರಿಚಯಿಸಿಕೊಂಡಾಗ ಎಲ್ಲರೂ ತೋರಿದ ಆತ್ಮೀಯತೆ, ನಾನು ಕಳೆದುಕೊಂಡಿದ್ದನ್ನು ಮತ್ತೆ ಪಡೆದೆ ಎಂಬಂತೆ ಭಾಸವಾಯಿತು. ಅಂದಿನಿಂದ ತುಸು ಹೆಚ್ಚೇ ಅಂತಃಪುರಕ್ಕೆ ಭೇಟಿ ನೀಡತೊಡಗಿದೆ. ಇದರಿಂದ ಅವರೆಲ್ಲರ ಬ್ಲಾಗ್ಸ್, ವಿಚಾರಧಾರೆಗಳನ್ನು ಓದುವ ಅವಕಾಶವಾಯಿತು. ಓದಿದಾಗ ಹಲವು ಬಾರಿ ಅರೆ! ಇದು ನನ್ನನಿಸಿಕೆಯೂ ಹೌದು, ನಾನು ಕೂಡ ಹೀಗೆ ಬರೆಯಬೇಕೆಂದುಕೊಂಡಿದ್ದೆ, ಇವೆಲ್ಲವೂ ನನ್ನನ್ನು ಕೂಡ ಅವರಿಗೆ ಕಾಡಿದಷ್ಟೇ ಕಾಡಿದ್ದವು, ನನ್ನ ಭಾವುಕತೆ ನನ್ನ ದೌರ್ಬಲ್ಯವಲ್ಲ, ಬರಹಗಾರ್ತಿಯೊಬ್ಬಳಿಗೆ ಇರಬೇಕಾದ ಅಂಶ ಇದೊಂದು ಎಂಬುದು ಮನದಟ್ಟಾಯಿತು. ಮುಖ್ಯವಾಗಿ ಉಷಾ ಕಟ್ಟೆಮನೆಯವರ ಮೌನ ಕಣಿವೆಯಂತೂ ಹಗಲು ರಾತ್ರಿ ನನ್ನನ್ನು ಕಾಡತೊಡಗಿತು. ಭಾವುಕತೆಯಿದ್ದರೆ ಮಾತ್ರ ಯಾವ ವಿಷಯವನ್ನಾಗಲೀ ವಿಶ್ಲೇಷಿಸಿ ಬರೆಯಲು ಸಾಧ್ಯ ಎಂದೆನಿಸತೊಡಗಿತು. ಇಲ್ಲದಿದ್ದರೆ ನಮ್ಮ ಬರಹ ತೀರಾ ಸಪ್ಪೆಯಾಗಿ, ಯಾಂತ್ರಿಕವಾಗಿಬಿದುತ್ತದೆಯೆಂದು ಅನಿಸತೊಡಗಿತು. ಮನಸ್ಸಿನಿಂದ ಯೋಚಿಸಿ ಬರೆಯುವಾಗ ಅದು ಬಹಳಷ್ಟು ಜನರನ್ನು ತಲುಪುತ್ತದೆಯೆಂದು ತೋರಿತು. ಇದೆಲ್ಲಕ್ಕೆ ಕಲಶಪ್ರಾಯವೆಂಬಂತೆ ಅಗ್ನಿ ಶ್ರೀಧರ್ ಅವರ ಪುಸ್ತಕ ಆಧುನಿಕ ಮಾಂತ್ರಿಕರ ಜಾಡಿನಲ್ಲಿ ತೀರಾ ನನ್ನನ್ನು ಕಾಡಿತು. ಅದರಲ್ಲಿನ ವಿಚಾರಧಾರೆಗಳೆಲ್ಲವೂ ನನ್ನ ತಲೆಯಲ್ಲಿ ಹಲವು ಬಾರಿ ಬಂದಿದ್ದರೂ ಕೂಡ, ಅದನ್ನು ಪ್ರಕಟಿಸಿದರೆ ಎಲ್ಲಿ ಹಾಸ್ಯಸ್ಪದವಾಗುವುದೋ ಎಂದು ಮುಚ್ಚಿಟ್ಟಿದ್ದೆ. ಹಾ! ನನ್ನಂತೆಯೇ ಯೋಚಿಸುವವರು ಹಲವರಿದ್ದಾರೆ. ನನ್ನ ಭಾವುಕತೆ ಕ್ಷುಲ್ಲಕವೇನಲ್ಲ ಎಂದೆನಿಸಿ ಮನಸ್ಸಿಗೆ ಉಲ್ಲಾಸ ಮೂಡಿತು. ಆತ್ಮವಿಶ್ವಾಸ ಮೈದೋರಿತು. ನನ್ನದೇ ಒಂದು ಬ್ಲಾಗ್ ಶುರು ಮಾಡಿದೆ. ಅಲ್ಲಿ ಇಲ್ಲಿ ಬರೆದಿದ್ದ ಬರಹಗಳೆಲ್ಲವನ್ನೂ ಒಂದೇ ದಿವಸ ತಂದು ಇದರಲ್ಲಿ ಹಾಕಿದೆ. ಅದರಲ್ಲಿ ನನ್ನ ಮನ ಕಲಕಿದ / ಯೋಚಿಸಲು ಪ್ರೇರೇಪಿಸಿದ ಒಂದಷ್ಟು (ಈಗ ಬರಹದ ಶೈಲಿ ತೀರಾ ಕೆಟ್ಟದಾಗಿದೆ ಎಂದೆನಿಸಿದರೂ, ಹೆತ್ತವರಿಗೆ ಹೆಗ್ಗಣ ಮುದ್ದು! :-) ) ಬರಹಗಳನ್ನು ಅಂತಃಪುರದಲ್ಲಿ ಎಲ್ಲಾ ಸಖಿಯರ ಅವಗಾಹನೆಗಿಟ್ಟೆ. 

ಅಂತಃಪುರದ ಸಖಿ ಹಾಗೂ ವಿ.ಕ.ದಲ್ಲಿರುವ ಶ್ರೀದೇವಿ ಕಳಸದ ಅವರು ನನ್ನ ಬ್ಲಾಗ್ ಅನ್ನು ಬ್ಲಾಗಿಲರು ಕಾಲಮಿನಲ್ಲಿ ಪ್ರಕಟಿಸುವರೆಂಬುದನ್ನು ಕನಸು ಮನಸಿನಲ್ಲಿಯೂ ಎಣಿಸಿರಲಿಲ್ಲ. ಹಿಂದಿನ ದಿನ ಸರಿ ರಾತ್ರಿಯ ತನಕ ಅಂತಃಪುರದಲ್ಲಿ ಒಬ್ಬರನ್ನೊಬ್ಬರು ಕೀಟಲೆ ಮಾಡುತ್ತಾ ಇರುವಾಗಲೂ ಆಕೆ ಒಂದಿಷ್ಟು ಹಿಂಟ್ ಕೂಡ ಕೊಟ್ಟಿರಲಿಲ್ಲ. ಇಂತಹದೊಂದು ಸರ್ಪೈಸ್ ಗಾಗಿ ಕಾಯುವ ನನಗೆ, ನನ್ನ ಜೀವನದಲ್ಲಿ ಯಾರೂ ಕೂಡ ಇಂತಹ ಸುಂದರ ಸರ್ಪೈಸ್ ಕೊಟ್ಟಿರಲಿಲ್ಲ. ನಿಜಕ್ಕೂ ನನಗಿದೊಂದು ದೊಡ್ಡ ಉಡುಗೊರೆ. ಇದರೊಂದಿಗೆ ನನ್ನಲ್ಲೂ ಕೂಡ ಬರಹಗಾರ್ತಿ ಇದ್ದಾಳೇನೋ ಎನ್ನುವ ಕೌತುಕ, ಇದೆಲ್ಲದರ ಜೊತೆಗೆ ಪತ್ರಿಕೆಯಲ್ಲಿ ನನ್ನದೊಂದು ಬರಹ ಬಂದ ಮೇಲೆ ಇನ್ನಷ್ಟು ಬರೆಯಲು ಉತ್ಸಾಹ, ಆದರೆ ಅಷ್ಟು ಸುಲಭವೇನಲ್ಲ ಎನ್ನುವ ಮನಸ್ಸಿನ ಎಚ್ಚರಿಕೆ, ಹೆಚ್ಚಿದ ಜವಾಬ್ದಾರಿ ಎಲ್ಲವೂ ಸೇರಿ ಕಲಸುಮೆಲೋಗರವಾಗಿ ಇದೆಲ್ಲವನ್ನೂ ಬರೆದುಬಿಟ್ಟರೆ ನನ್ನ ತಳಮಳ ಕಡಿಮೆಯಾಗಬಹುದು ಎಂದು ಎಲ್ಲವನ್ನೂ ದಾಖಲಿಸಿದ್ದೇನೆ :-) ಒಂದೊಂದಾಗಿ ನನ್ನ ಅನುಭವಗಳೆಲ್ಲವನ್ನೂ, ಪ್ರಚಲಿತ ವಿದ್ಯಮಾನಗಳ ಬಗೆಗಿನ ನನ್ನ ಅನಿಸಿಕೆಗಳನ್ನು ಬರೆಯಬೇಕೆಂದು ಕೂಡ ನಿರ್ಧರಿಸಿದ್ದೇನೆ. ತೀರಾ ಆಲಸಿಯಾದ ನಾನು ಏನೆಲ್ಲವನ್ನೂ ಬರೆಯಬಲ್ಲೆನೋ? ಅಥವಾ ನಿಲ್ಲಿಸಿಯೇಬಿಡುತ್ತೇನೆಯೋ ಗೊತ್ತಿಲ್ಲ. ಸದ್ಯಕ್ಕಂತೂ ಪತ್ರಿಕೆಯಲ್ಲಿ ನನ್ನ ಬ್ಲಾಗ್ ಬಗ್ಗೆ ಬಂದಿದೆ ಎನ್ನುವ ಹೆಮ್ಮೆ, ಹುಮ್ಮಸ್ಸಿದೆ. ಎಷ್ಟು ದಿವಸಗಳು ಹೀಗೆ? ನೋಡೋಣ.

Monday, August 27, 2012

ಈ ಪಂಚ ಕನ್ಯೆಯರನ್ನು ನಿತ್ಯವೂ ಸ್ಮರಿಸಿದರೆ ಮಹಾಪಾತಕ ನಾಶನಂ!

ಬೆಳಿಗ್ಗೆ ಎದ್ದ ಕೂಡಲೇ ಅಮ್ಮ ಸುಮಾರು ಶ್ಲೋಕಗಳನ್ನು ಹೇಳಿಕೊಡ್ತಿದ್ದಳು. ಅವುಗಳ ಅರ್ಥದ ಬಗ್ಗೆ ಯಾರೂ ತಲೆಕೆಡಿಸಿಕೊಳ್ತಾರೆ. ಅವಳು ಹೇಳಿಕೊಡ್ತಿದ್ದಳು. ನಾವು ಹೇಳಿ ಸ್ನಾನಕ್ಕೆ ಓಡಿ ಹೋಗ್ತಿದ್ವಿ. ಆಮೇಲಾಮೇಲೆ ಶಾಲೆ, ಕಾಲೇಜು, ಆಟ, ಪಾಠಗಳ ಮಧ್ಯೆ ಇದೆಲ್ಲಾ ಯಾರಿಗೆ ನೆನಪಿರುತ್ತೆ? ಮರತೇ ಹೋಯಿತು. ಮೊನ್ನೆ ಯಾವುದೋ ಪುಸ್ತಕ ಹುಡುಕಲು ಹೋದಾಗ ಅಮ್ಮನ ಈ ಹಳತು ಶ್ಲೋಕದ ಪುಸ್ತಕ ಸಿಕ್ಕಿತು. ಮುಂಜಾನೆ ಎದ್ದು ಹೇಳಲೇ ಬೇಕಾದಂತಹ ಶ್ಲೋಕಗಳು. ಅದ್ರಲ್ಲಿ ಒಂದು 

ಅಹಲ್ಯಾ ದ್ರೌಪದೀ ಸೀತಾ ತಾರಾ ಮಂಡೋದರೀ ತಥಾ! 
ಪಂಚಕನ್ಯಾಸ್ಮರೇನಿತ್ಯಂ ಮಹಾಪಾತಕ ನಾಶನಂ.

ಆಶ್ಚರ್ಯವಾಯಿತು. ಅಮ್ಮನನ್ನು ಹುಡುಕಿಕೊಂಡು ಹೋದೆ. ಆ ಶ್ಲೋಕ ಕೆಲವರು ಸೀತಾ ಎಂದು ಸೇರಿಸಿ ಹೇಳುತ್ತಾರೆ ಮತ್ತೆ ಕೆಲವರು ಸೀತೆಯ ಬದಲಿಗೆ ಕುಂತೀ ಹೇಳ್ತಾರೆ ಎಂದರು! ನನಗೇ ಈ ಐವರು ಮಹಿಳೆಯರ ಕಥೆಯಲ್ಲಿನ ಸಾಮಾನ್ಯ ಅಂಶಗಳನ್ನು ಗಣನೆಗೆ ತೆಗೆದುಕೊಂಡರೆ, ಸೀತೆಗಿಂತ ಕುಂತಿಯೇ ಹೆಚ್ಚು ಸೂಕ್ತ ಎನಿಸಿತು. ಈ ಐವರು ಅಂದ್ರೆ ಅಹಲ್ಯಾ, ದ್ರೌಪದೀ, ಕುಂತೀ, ತಾರಾ, ಮಂಡೋದರಿ ಐವರು ಮಹಿಳೆಯರು ಒಬ್ಬನಿಗಿಂತ ಹೆಚ್ಚು ಗಂಡಸರೊಟ್ಟಿಗೆ ದೈಹಿಕ ಸಂಬಂಧವನ್ನು ಇಟ್ಟುಕೊಂಡಿದ್ದವರು! ಅದು ಹೇಗೆ ಮತ್ತೆ ಇವರೆಲ್ಲರೂ ಪಂಚಕನ್ಯೆಯರು?!! ಮತ್ತೆ ಅಮ್ಮನಿಗೆ ಕಾಟ ಕೊಡಲು ಶುರು ಮಾಡಿದೆ. ನಾವು ಚಿಕ್ಕವರಾಗಿದ್ದಾಗಲೂ ನಮ್ಮ ತಲೆ ತಿಂದಿದ್ದ ಪ್ರಶ್ನೆ ಇದು, ಆದರೆ ನಾವು ನಿಮ್ಮ ತರಹ ಪ್ರಶ್ನೆಗಳನ್ನು ಕೇಳ್ತಾ ಇರಲಿಲ್ಲ, ಸಾಕು ಎದ್ದು ಹೋಗೇ ಎಂದು ಹೇಳಿ ಹೋದಳು. 

ಕನ್ಯೆಯರು ಎಂದರೆ ಮದುವೆ ವಯಸ್ಸಿಗೂ ಕೂಡ ಬರದಂತಹ ಕುಮಾರಿಯರು. ಮತ್ತೊಂದು ಅರ್ಥ ತಮ್ಮ ಪಾವಿತ್ರತೆಯನ್ನು ಕಾಪಾಡಿಕೊಂಡಿರುವವರು. ಈ ಐವರೂ ಕುಮಾರಿಯರು ಕೂಡಾ ಅಲ್ಲಾ ಹಾಗೂ ಪರ ಪುರುಷನೊಟ್ಟಿಗೆ ದೈಹಿಕ ಸಂಬಂಧವಿದ್ದವರು. ಅದು ಹೇಗೆ ಮತ್ತೆ ಕನ್ಯೆಯರೆನ್ನುತ್ತಾರೆ? ಸಂದರ್ಭಾನುಸಾರವಾಗಿ ಸಮಯೋಚಿತವಾದ ಹಾಗೂ ಧೀರ ನಿರ್ಧಾರಗಳನ್ನು ಕೈಗೊಂಡಿದ್ದವರು ಈ ಐವರು. ಹಾಗಾಗಿಯೇ ಇಂತಹ ಉನ್ನತ ಪಟ್ಟವನ್ನು ನೀಡಲಾಯಿತೇ? ಅಥವಾ ಪುರುಷ ಪ್ರಧಾನ ಸಮಾಜದಲ್ಲಿ ಈ ಐವರು ಅನುಭವಿಸಿದ್ದು ಅಂತಿಂತಹ ಕಷ್ಟಗಳಲ್ಲ. ಈಗ ಆಗಿದ್ದರೆ ಡೈವೋರ್ಸ್ ಎಂಬ ಸುಲಭದ ಮಾರ್ಗವಿದೆಯಲ್ಲವೇ? ಮದುವೆಯಾಗಿದ್ದರೂ, ಧೀರೋಧಾತ್ತ ಗಂಡಂದಿರಿದ್ದರೂ, ಪರ ಪುರುಷನ ಸಂಘ ಮಾಡಬೇಕಾಯಿತು. ಪುರುಷನ ಉದಾಸೀನತೆಗೆ, ದಬ್ಬಾಳಿಕೆಗೆ, ಮೋಸಕ್ಕೆ, ಮಹತ್ವಾಕಾಂಕ್ಷೆಗೆ, ದುರಾಸೆಗೆ ಬಲಿಯಾದವರು ಇವರು. ಬಹುಶಃ ಅದರಿಂದ ಇವರನ್ನು ಮೇಲಕ್ಕೆ ಕೂರಿಸಿ, ಕಣ್ಣೊರೆಸುವ ತಂತ್ರವಾಯಿತೇ? ಸಂದರ್ಭಕ್ಕನುಗುಣವಾಗಿ ದೈಹಿಕ ಸಂಬಂಧಗಳನ್ನು ಇಟ್ಟುಕೊಳ್ಳುವುದು ತಪ್ಪೇನಲ್ಲ ಎನ್ನುವುದು ಈ ಶ್ಲೋಕದಲ್ಲಿ ಸೂಚ್ಯವಾಗುತ್ತಿಲ್ಲವೇ? 

ಮುಂದುವರೆಯುವುದು

(ಸಂಪದದಲ್ಲಿhttp://sampada.net/blog/inchara123/21/01/2011/30071 ಬರೆದು (ವಿಷಯದ ಮೇಲೆ ಹಿಡಿತವಿಲ್ಲದೆ) ಸಿಕ್ಕಾಪಟ್ಟೆ ಗಲಾಟೆ ಆಗಿಬಿಟ್ಟಿತು. ಆಮೇಲೆ ಇದನ್ನು ನಾನು ಮುಂದುವರೆಸಲೇ ಇಲ್ಲ! )

ಸಾವು ?!!!

ಸಾವು ಎಂದೊಡನೆಯೇ ಎಲ್ಲರೂ ಬೆಚ್ಚಿ ಬೀಳ್ತೀವಿ ಅಲ್ವಾ? ಏ, ಬಿಡ್ತು ಅನ್ನು, ಅಶ್ವಿನಿ ದೇವತೆಗಳಿದ್ದಾರೆ, ಅಸ್ತು ಅಂದು ಬಿಡ್ತಾರೆ ಎಂದು ಹೆದರಿಸುತ್ತೇವೆ. ಹುಟ್ಟಿದವರೆಲ್ಲರೂ ಸಾಯಲೇ ಬೇಕು. ಯಾರೂ ಇಲ್ಲಿ ಶಾಶ್ವತವಲ್ಲ. ವಿಜ್ಞಾನ ಎಷ್ಟೇ ಮುಂದುವರಿದಿದೆ ಎಂದರೂ, ನಮಗ್ಯಾರಿಗೂ ಸಾವನ್ನು ಗೆಲ್ಲಲಾಗಿಲ್ಲ. ಸ್ವಲ್ಪ ಮಟ್ಟಿಗೆ ಸಾವನ್ನು ಮುಂದೂಡಬಹುದೇ ಹೊರತು ಸಾಯುವುದೇ ಇಲ್ಲ ಎನ್ನಲಾಗದು. ಇಷ್ಟಿದ್ದರೂ ನಾವೆಲ್ಲರೂ ಹೀಗ್ಯಾಕೆ? ಪ್ರತಿಯೊಂದಕ್ಕೂ ಹುಟ್ಟಿದ ದಿನದಿಂದ ಹಿಡಿದು ಪ್ರತಿಯೊಂದು ಗಳಿಗೆಯನ್ನೂ ನಮ್ಮ ಕ್ಯಾಮೆರಾಗಳಲ್ಲಿ ದಾಖಲಿಸಲು ಇಷ್ಟ ಪಡುವ ನಾವು ಅದೇ ಸಾವನ್ನು ಮಾತ್ರ ಫೋಟೋದಲ್ಲಿ ಹಿಡಿದಿಟ್ಟುಕೊಳ್ಳಲಾರೆವು. ಸಂಭ್ರಮದಿಂದ ಕಳಿಸಿಕೊಡಲಾರೆವು. ನಮ್ಮ ಪ್ರೀತಿ ಪಾತ್ರರು ನರಳುತ್ತಾ ಬಿದ್ದಿದ್ದರೂ, ಜೀವದೊಂದಿಗೆ ಹೋರಾಡುತ್ತಿದ್ದರೂ, ಅವರನ್ನು ಕಳೆದುಕೊಳ್ಳುತ್ತೇವೆಂಬ ಭಯ ನಮ್ಮನ್ನು ಕಾಡುತ್ತಲೇ ಇರುತ್ತದೆ. ನಾವು ಬದುಕಿರುವುದರ ಬಗ್ಗೆ ನಮಗೆ ಗ್ಯಾರಂಟಿಯಿಲ್ಲ. ಆದರೂ ಅವರನ್ನು ಹೇಗಾದರೂ ಮಾಡಿ, ಏನಾದರೂ ಮಾಡಿ ಉಳಿಸಿಕೊಳ್ಳುತ್ತೇವೆಂದು ಪಣ ತೊಡುತ್ತೇವೆ!

ಇದ್ದಾಗ ದ್ವೇಷದಿಂದ, ಜಗಳವಾಡುತ್ತಾ ಕಾಲ ಕಳೆದಿದ್ದ ನಮಗೆ, ಆ ವ್ಯಕ್ತಿಯ ಸಾವು, ಇಲ್ಲದ ಪ್ರೀತಿಯನ್ನು ತಂದುಬಿಡುತ್ತದೆ! ಅವರಿದ್ದಾಗ ನಾವ್ಯಾಕೆ ಅವರಿಗಾಗಿ ಬದಲಾಗಬೇಕು? ನಾನೇ ಸರಿ, ನನ್ನದೇನೂ ತಪ್ಪಿಲ್ಲ, ಬೇಕಿದ್ದರೆ ಅವನೇ ತಗ್ಗಿ ಬರಲಿ, ಸತ್ತರೂ ಸರಿ ಆತನ ಮುಖ ನೋಡೋಲ್ಲ ಎನ್ನುವಂತಹ ಹಟವೇ ನಮಗೆ ಮುಖ್ಯವಾಗಿರುತ್ತದೆ. ಆದರೆ ಆ ವ್ಯಕ್ತಿಯ ಸಾವು, ನಮ್ಮನ್ನು ಚಡಪಡಿಸುವಂತೆ ಮಾಡಿಬಿಡುತ್ತದೆ. ಇದ್ದಕ್ಕಿದ್ದಂತೆ ಆ ವ್ಯಕ್ತಿ ನಮಗೆ ಮಹಾನ್ ವ್ಯಕ್ತಿಯ ಹಾಗೇ ಕಾಣಿಸಿಕೊಳ್ಳುತ್ತಾರೆ. ಅವರ ಗೈರು ಹಾಜರಿ ನಮಗೆ ಎದ್ದು ತೋರುತ್ತದೆ. ಅವರಿಲ್ಲದೆ ನಾವು ಬದುಕಲಾರೆವು ಎನ್ನುವಂತಹ ಸ್ಥಿತಿಯನ್ನು ಉಂಟುಮಾಡುತ್ತದೆ. ಇದಲ್ಲವೇ ವಿಪರ್ಯಾಸ! ಇದ್ದಾಗಲೇ ಸರಿ ಮಾಡಿಕೊಂಡಿದ್ದರೆ?! ಈ ‘ರೆ’ ನಮ್ಮನ್ನು, ನಾವು ಸಾಯುವವರೆಗೂ ಬೆನ್ನು ಹತ್ತುತ್ತದೆ. ಹೋಗಲಿ, ಈ ಸಾವಿಂದ ಪಾಠ ಕಲಿಯುತ್ತೇವೆಯೇ? ಮತ್ತದೇ ಹಠ, ಮತ್ತದೇ ಜಗಳ ಮತ್ತೊಬ್ಬರೊಂದಿಗೆ!

ಹಿಂದಿನ ಕಾಲದಲ್ಲಿಯಾದರೆ, ಅವಿಭಕ್ತ ಕುಟುಂಬ, ಮನೆ ತುಂಬ ಮಕ್ಕಳು, ಮೊಮ್ಮಕ್ಕಳು. ಯಾರಾದರೂ ಅಕಾಲ ಮೃತ್ಯುಗೀಡಾದರೆ, ಉಳಿದವರು ಆ ಮಕ್ಕಳನ್ನು ತಮ್ಮ ಮಕ್ಕಳೊಟ್ಟಿಗೆ ಸಾಕುತ್ತಿದ್ದರು. ಈ ಜನ್ಮದಲ್ಲಿ ಸತ್ತವರ ಋಣ ‘ಇಷ್ಟೇ ಇದ್ದಿದ್ದು’! ಎಂದು ಕ್ಷಣ ಮಾತ್ರದಲ್ಲಿ ಆ ನೋವನ್ನು ಅರಗಿಸಿಕೊಂಡು ಮುಂದಿನ ಕೆಲಸಕ್ಕೆ ತಯಾರಿ ನಡೆಸುತ್ತಿದ್ದರು. ಅಲ್ಲೊಂದು, ಇಲ್ಲೊಂದು ತೀರಾ ತೊಂದರೆಗೊಳಗಾದವರು ಇದ್ದರೆ ಹೊರತು ಅಂತಹ ಅನಾಥ ಪ್ರಜ್ಞೆ ಕಾಡುತ್ತಿರಲಿಲ್ಲ. ಆದರೆ ಈಗ ನಮ್ಮ ಪ್ರೀತಿ ಪಾತ್ರರ ಅಕಾಲ ಮೃತ್ಯು ನಮಗೆ ಎಂತಹ ಶಾಕ್ ನೀಡುತ್ತದೆಯೆಂದರೆ, ಎಷ್ಟೋ ಕುಟುಂಬಗಳು ಆ ವ್ಯಕ್ತಿಯ ಸಾವಿನ ನಂತರ ಬೀದಿಗೆ ಬಂದುಬಿಡುತ್ತವೆ. ಸತ್ತಾಗ ಬಂದು, ಲೊಚಗುಟ್ಟಿ, ಕಣ್ಣೊರೆಸಿಕೊಂಡು ಹೋದವರು, ಆ ವ್ಯಕ್ತಿಯ ಕುಟುಂಬದವರು ಇನ್ನೂ ಬದುಕಿದ್ದಾರೆ ಎನ್ನುವುದನ್ನು ಮರೆತುಬಿಡುತ್ತಾರೆ. ಆ ಇನ್ಯೂರೆನ್ಸ್, ಈ ಇನ್ಶೂರೆನ್ಸ್ ಎಂದು ಕೆಲವರಿಗೆ, ಜೀವನ ನಿರ್ವಹಿಸಲು ತೊಂದರೆಯಾಗದಿದ್ದರೂ, ಸಂಬಂಧಗಳಿಗೆ ಬೆಲೆಯೇ ಇಲ್ಲದಿರುವ ಅಥವಾ ಇದ್ದಾಗ ನಾವು, ನಮ್ಮ ಮಕ್ಕಳು ಎಂದಿರುವ ಕುಟುಂಬಗಳು ಅಕ್ಷರಶಃ ಅನಾಥವಾಗಿಬಿಡುತ್ತವೆ. 

ಅಕಾಲ ಮೃತ್ಯುವನ್ನು ಎದುರಿಸುವುದು ಹಿಂಸೆಯೇ ಸರಿ. ಆದರೆ ಹಣ್ಣು ಹಣ್ಣು ಮುದುಕರು, ಈ ಜೀವನದಲ್ಲಿ ನಮ್ಮ ಕೆಲಸವೆಲ್ಲಾ ಮುಗೀತು, ಇನ್ಯಾಕೆ ಸಾವು ಬರಲಿಲ್ಲವೋ? ಎಂದು ಗೋಳಾಡುತ್ತಿರುವವರು ಅಥವಾ ವರ್ಷಾನುಗಟ್ಟಲೆ ಬಹು ಹಿಂಸೆಯಿಂದ, ಕಿಡ್ನಿ ಫೇಲ್ಯೂರ್, ಲಿವರ್ ಪ್ರಾಬ್ಲಮ್, ಹಾರ್ಟ್ ಪ್ರಾಬ್ಲಮ್ ಎಂದು ಹತ್ತು ಹಲವಾರು ಕಾಯಿಲೆಗಳಿಂದ ನರಳುತ್ತಿರುವವರಿಗೆ ಸಾವು ನಿಜವಾಗಲೂ ಅವರಿಗೆ ಮುಕ್ತಿ ನೀಡುತ್ತದೆ. ಅಯ್ಯೋ! ಅವರು ನರಳುವುದನ್ನು ನೋಡಲಾಗುವುದಿಲ್ಲ, ಬೇಗ ಸಾವು ಬರಬಾರದೇ? ಎಂದು ಕಂಡ ಕಂಡ ದೇವರಿಗೆಲ್ಲಾ ಕೈಮುಗಿದಿರುತ್ತೇವೆ. ಇಷ್ಟೆಲ್ಲಾ ಗೊತ್ತಿದ್ದರೂ ಅವರು ನಿಜವಾಗಲೂ ಸತ್ತೇ ಬಿಟ್ಟಾಗ, ಇಷ್ಟು ಬೇಗ ಸಾವು ಬರಬಾರದಿತ್ತು ಎಂದು ಮತ್ತೆ ಅದೇ ದೇವರಿಗೆ ಶಪಿಸುತ್ತೇವೆ! ನಾವ್ಯಾಕೆ ಹೀಗೆ?

ಸ್ವಲ್ಪ ಎಚ್ಚರಿಕೆ ವಹಿಸಿದರೆ, ಕೆಲವು ಅಪಘಾತಗಳನ್ನು ತಡೆಯಬಹುದು. ಕುಡಿದು, ಗಾಡಿ ಓಡಿಸದಿರುವುದು, ವಿದ್ಯುತ್ ರಿಪೇರಿ ಮಾಡುವಾಗ ಮೈನ್ ಆಫ್ ಮಾಡಲು ಉದಾಸೀನ ಮಾಡದಿರುವುದು ಹೀಗೆ. ಹಾಗೆಯೇ ಎಷ್ಟೋ ಕಾಯಿಲೆಗಳನ್ನು ಕೂಡ ನಮ್ಮ ಜೀವನ ಶೈಲಿಯಲ್ಲಿ ಬದಲಾವಣೆ ಮಾಡಿಕೊಳ್ಳುವ ಮೂಲಕ ತಡೆಗಟ್ಟಬಹುದು. ಶುದ್ದ ಆಹಾರ, ಶುದ್ಧ ನೀರು, ಸ್ವಚ್ಛ ವಾತಾವರಣ, ಕ್ರಮಬದ್ಧ ಜೀವನ, ವಾಕಿಂಗ್ ಇವುಗಳಿಂದ ಹತ್ತು ಹಲವಾರು ಕಾಯಿಲೆಗಳು ದೂರವಾಗುತ್ತವೆ. ಇನ್ನೂ ಹೃದಯ, ಕಿಡ್ನಿ, ಲಿವರ್ ಕಾಯಿಲೆಗಳಿಂದ ನರಳುವವರು, ಸರಿಯಾದ ಔಷಧ ಹಾಗೂ ಪಥ್ಯ ಮಾಡಿದರೆ ಯಾವಾಗ ಸಾವು ಬರುತ್ತದಪ್ಪಾ? ಎಂದು ಕಾಯದ ರೀತಿ, ದೇಹವನ್ನು ಬಾಧಿಸದ ರೀತಿ ನೋಡಿಕೊಳ್ಳಬಹುದು. ಇದ್ಯಾವುದನ್ನೂ ಮಾಡದೇ, ಕೇರ್ ಲೆಸ್ ಮಾಡಿ, ಇನ್ನೆಷ್ಟು ದಿವಸಗಳು ಬದುಕಿರ್ತೇವೆ, ಬದುಕಿರ್ತಾರೆ ಬಿಡಿ, ಎಲ್ಲರೂ ಒಂದಲ್ಲ ಒಂದು ದಿವಸ ಹೋಗುವವರೇ ಎಂದು ಉಡಾಫೆ ಮಾತಾಡಿ, ಕೊನೆಗೊಂದು ದಿವಸ ಸಾವು ಕದ ತಟ್ಟಿದಾಗ, ನಾವು ಕಳುಹಿಸಲಾರೆವು ಎಂದು ಹಟ ಮಾಡುವುದಕ್ಕೆ ಏನೆನ್ನೋಣ?

ಇದೆಲ್ಲವನ್ನೂ ಬರೀತಿದ್ದರೂ, ಮನಸ್ಸಿನ ಮೂಲೆಯಲ್ಲಿ ಒಂದು ಅಳುಕು. ಇಷ್ಟೆಲ್ಲಾ ಮಾತನಾಡುವ ನಾನು, ನನ್ನ ಪ್ರೀತಿ ಪಾತ್ರರ ಅಗಲಿಕೆಯನ್ನು ತಡೆದುಕೊಳ್ಳುವೆನೇ? ಊಹು! ಬಹಳ ಕಷ್ಟ. ಆದರೆ ಒಂದಂತೂ ಸ್ಪಷ್ಟವಾಗಿ ಹೇಳುತ್ತೇನೆ. ಇರುವುದು ಒಂದಷ್ಟು ದಿವಸಗಳು. ಅದನ್ನಿಷ್ಟು ಸಹನೀಯ ಬದುಕಾಗಿಸೋಣ. ಸುಂದರವಾಗಿಸೋಣ, ಈ ಹಟ, ದ್ವೇಷ, ಜಗಳ, ಕಾದಾಟ ಬಿಟ್ಟು ಇದ್ದಾಗಲೇ ಸರಿ ಮಾಡಿಕೊಳ್ಳೋಣ. ಸತ್ತ ಮೇಲೆ ಕೊರಗುವುದನ್ನು ಬಿಡೋಣ. ಯಾರಿಗೆ ಗೊತ್ತು? ಇವತ್ತೋ! ನಾಳೆಯೋ! ಸಾವಿಂದ ಕರೆ ಬರಬಹುದು. ಸ್ವೀಕರಿಸಲು ಮಾನಸಿಕರಾಗಿ ಸಿದ್ಧರಾಗೋಣ, ಅಲ್ವೇ? ಏನಂತೀರಿ

ಏಕೆ ಹೀಗಾಯಿತೋ?


ಈ ನಡುವೆ ಮನಸ್ಸಿಗೆ ಸಿಕ್ಕಾಪಟ್ಟೆ ಹಿಂಸೆ. ಯಾವಾಗ ತಲೆ ಒಡೆದು ಚೂರಾಗುತ್ತೋ ಗೊತ್ತಿಲ್ಲ. ಅಷ್ಟು ಟೆನ್ಷನ್ ಆಗುತ್ತೆ. ಇದನ್ನು ಯಾರ ಹತ್ತಿರಾನೂ ಹೇಳಿಕೊಳ್ಳೋದಿಕ್ಕೆ ಆಗೊಲ್ಲ. ತೀರಾ ಅಂದ್ರೆ ತೀರಾ ಒಂಟಿಯಾಗಿದ್ದ ನಾನು ಅಕಸ್ಮಾತ್ತಾಗಿ ನಿನಗೆ ಪರಿಚಯವಾದೆ. ನಿನ್ನ ಪರಿಚಯವಾದ ಮೇಲೆ ನನ್ನ ಕ್ರಿಯೇಟಿವಿಟಿಗೆ ಒಂದರ್ಥ ಬಂದಿದ್ದು. ಅತ್ಯಂತ ಕಡಿಮೆ ಅವಧಿಯಲ್ಲಿ ನನ್ನ ಜೀವವಾದೆ. ಅಪ್ಪ, ಅಮ್ಮನನ್ನು ಕಳೆದುಕೊಂಡು ಅನಾಥಳಾಗಿದ್ದ ನನಗೆ ಆಸರೆಯಾದೆ. ಇಬ್ಬರೂ ಬಹಳ ಕ್ಲೋಸ್ ಆದೆವು. ಯಾವುದೂ ಗುಟ್ಟಿರಬಾರದು, ಮುಕ್ತವಾಗಿ ಮಾತನಾಡಬೇಕೆಂದುಕೊಂಡೆವು. ಇಬ್ಬರನ್ನೂ ಕಳೆದುಕೊಂಡಿದ್ದ ನನಗೆ, ಯಾವಾಗಲೂ ನಿನ್ನನ್ನು ಕಳೆದುಕೊಳ್ಳುವ ಭಯ ಕಾಡುತ್ತಲೇ ಇತ್ತು. ನಿನಗದನ್ನೂ ಹೇಳುತ್ತಲೂ ಇದ್ದೆ. ಆದರೆ ನೀನು ಮಾತ್ರ ಜೀವ ಹೋದರೂ ನಿನ್ನ ಕೈ ಬಿಡಲಾರೆನೆಂದು ಹೇಳುತ್ತಿದ್ದಾಗ ಆ ಕಣ್ಣುಗಳಲ್ಲಿನ ಕಾಂತಿಗೆ ನಾನು ಮಾರುಹೋಗಿದ್ದೆ. ನೀನು ಜೊತೆಯಿದ್ದಾಗ ಇಡೀ ಜಗತ್ತನ್ನೇ ಗೆಲ್ಲಬಲ್ಲನೆಂಬ ಹುರುಪಿತ್ತು. ಅಹಂ ಇತ್ತು. ನಮ್ಮಿಬ್ಬರ ಸಂಬಂಧದಲ್ಲಿ ಒಂದಿನಿತೂ ಕಪಟವಿರಲಿಲ್ಲ. ಒಂದು ಗಳಿಗೆಯೂ ಮಾತನಾಡದೇ ಇರಲಾರೆವು ಎಂಬಂತಿದ್ದ ನಮ್ಮ ಈ ಸಂಬಂಧ, ಸುಮಾರು ೩-೪ ತಿಂಗಳುಗಳಿಂದ ಮಾತನಾಡದೇ ಇರುವಂತಾಗಿದ್ದು ನನಗೀಗಲೂ ನಂಬಲು ಸಾಧ್ಯವಿಲ್ಲ. 

ಬಡತನದಲ್ಲೇ ಬೆಳೆದ ನನಗೆ ನಿನ್ನ ಕಷ್ಟ ಚೆನ್ನಾಗಿ ಅರ್ಥವಾಗುತ್ತಿತ್ತು. ನೀನು ನಿನ್ನ ಗುರಿಸಾಧನೆಗಾಗಿ ಕಷ್ಟ ಪಡುವುದನ್ನು ನನಗೆ ನೋಡಲಾಗುತ್ತಿರಲಿಲ್ಲ. ಹಾಗಾಗೀ ನಿನಗೆ ಅವಕಾಶ ಕೊಡಿಸುವೆನೆಂದೆನೇ ಹೊರತು ನಿನ್ನ ಸ್ವಾಭಿಮಾನಕ್ಕೆ ಧಕ್ಕೆ ತರಲೆಂದಲ್ಲ. ಪ್ರತಿಭೆ ಇದ್ದರೆ ಮಾತ್ರ ಅವಕಾಶವು ಸಿಗುವುದು ಎನ್ನುವುದನ್ನು ನೀನ್ಯಾಕೆ ಅರ್ಥ ಮಾಡಿಕೊಳ್ಳಲಿಲ್ಲ. ಇಂತಹ ಒಂದು ಅವಕಾಶಕ್ಕಾಗಿ ಹಲವರು ತಮ್ಮ ಸ್ವಾಭಿಮಾನಕ್ಕೆ ಎಳ್ಳು ನೀರು ಬಿಟ್ಟು ಅಂಗಲಾಚಿ, ಬೇಡಿ ದೊರಕಿಸಿಕೊಳ್ಳುತ್ತಾರೆ. ಆದರೆ ನಮ್ಮ ಮನೆ ಬಾಗಿಲಿಗೆ ಅವಕಾಶ ಹುಡುಕಿಕೊಂಡು ಬಂದಿತ್ತು. ಅದು ನಿನಗೆ ಅವಮಾನವೆಂದೇಕೇ ಭಾವಿಸಿದೆ. ಇದೊಂದರಿಂದಲೇ ನಿನ್ನ ಉದ್ಧಾರವೆಂದು ನನಗೆ ಯಾವತ್ತಿಗೂ ಅನಿಸಿಲ್ಲ. ನೀನು ಅಂದುಕೊಂಡಿದ್ದನ್ನೂ ಸಾಧಿಸಿಯೇ ಸಾಧಿಸುತ್ತಿ ಅನ್ನುವ ಭರವಸೆ ನನಗಿತ್ತು. ನೀನು ಏನೆಂದು ಅರ್ಥ ಮಾಡಿಕೊಂಡೆಯೋ? ನನಗರ್ಥವಾಗದೇ ಹೋಯಿತು. ಒಬ್ಬರನ್ನೊಬ್ಬರು ಬಹಳ ಅರ್ಥ ಮಾಡಿಕೊಂಡಿದ್ದೇವೆಂದು ಬೀಗುತ್ತಿದ್ದ ನಮಗೆ, ನಾವು ಅಪರಿಚಿತರಾಗೇ ಇದ್ದೆವು! ಒಂದೇ ಒಂದು ಬಾರಿ, ನೀನು ನನ್ನೊಂದಿಗೆ ಮಾತನಾಡಿದ್ದರೆ ನನಗೆ ಸಾಕಾಗಿತ್ತು. ಇನ್ನೆಂದಿಗೂ ನಿನ್ನ ದಾರಿಯಲ್ಲಿ ಅಡ್ಡ ಬರುತ್ತಿರಲಿಲ್ಲ. ನೀನು ನನಗೆ ಆ ಅವಕಾಶವನ್ನು ಕೊಡಲಿಲ್ಲ. 

ಮುಂದೇನು? ನನಗೂ ಗೊತ್ತಿಲ್ಲ :-(

ನಮ್ಮನೆ ಕೆಲಸದವಳು!

ಮನೆ ಕೆಲಸದವಳು ಕೆಲಸ ಬಿಟ್ಟಿದ್ದು, ನನಗೂ ಅಮ್ಮನಿಗೂ ತಲೆನೋವಾಗಿತ್ತು. ಎಲ್ಲಾ ಕೆಲಸಗಳನ್ನು ಇಬ್ಬರೇ ಮಾಡಿಕೊಳ್ಳುತ್ತಿದ್ದೆವು. ಆಗೊಬ್ಬಳು ಕೆಲಸಕ್ಕೆ ಸೇರಿಕೊಂಡಳು. ನೋಡಲು ಬಹಳ ನೀಟಾಗಿದ್ದಳು. ಮನದಲ್ಲಿ ಇವಳಿಗೆ ಮನೆಕೆಲಸಕ್ಕೆ ಬರುವಂತಹ ಅನಿವಾರ್ಯತೆ ಏನಿರಬಹುದು? ಅನ್ನೋ ಕುತೂಹಲ ನನಗೆ. ಇಷ್ಟು ದಿನಗಳಲ್ಲಿ ಗಂಡ ಸರಿಯಿಲ್ಲ, ಅದೂ, ಇದೂ ಅಂತಾ ಕೇಳಿರುವ ನನಗೆ, ಇವಳ ಮನೆ, ಕಷ್ಟದ ಕಥೆ ಏನಿರಬಹುದು? ಅನ್ನೋ ಕುತೂಹಲ. ಮದುವೆಯಾಗಿದೆ. ಮೂವರು ಗಂಡು ಮಕ್ಕಳು ಅಂದಳು. ದೊಡ್ಡವನಿಗೆ ೯ ವರ್ಷ, ಮಧ್ಯದವನು ೭, ಚಿಕ್ಕವನಿನ್ನೂ ೪ ವರ್ಷ ಅಂದಳು. ನಾನದಕ್ಕೆ ಎರಡು ಗಂಡುಮಕ್ಕಳಿದ್ದರಲ್ವೇ? ಮತ್ಯಾಕೆ ಮೂರನೆಯದು? ಅಂದೆ. ಅದಕ್ಕೆ ಅವಳು ’ಏನಕ್ಕಾ? ಹೀಗಂತೀರಿ? ಹೆಣ್ಣು ಮಕ್ಕಳು ಮನೆಗೆ ಬೇಡವೇ?! ಅಂದಳು. ಓ! ಹೆಣ್ಣು ಮಕ್ಕಳು ಬೇಕು ಅನ್ನೋರು ಇದ್ದಾರೆ ಅಂತಾ ಅಂದುಕೊಂಡು, ಗಂಡನಿಗೇನು ಕೆಲಸ? ಅಂದೆ. ಅವನದೊಂದು ಸ್ವಂತ ಲೇತಿಂಗ್ ಮೇಶಿನ್ ಇದೆ. ಜೊತೆಗೆ ಬೇರೆಯವರ ಅಂಗಡಿಗೂ ಹೋಗಿ ಕೆಲಸ ಮಾಡಿಕೊಡ್ತಾರೆ ಅಂತಂದಳು. ತಿಂಗಳಿಗೆ ಸುಮಾರು ರೂ. ೧೫,೦೦೦ ದುಡೀತಾರೆ! ಅಂದಳು. ಮಕ್ಕಳು ಇನ್ನೂ ಚಿಕ್ಕವರು ಅಂತಾ ಹೇಳ್ತೀದ್ದೀ. ಗಂಡನಿಗೆ ಇಷ್ಟು ಸಂಪಾದನೆಯಾಗುತ್ತೆ. ಮತ್ತೆ ಬೇರೆಯವರ ಮನೆಕೆಲಸಕ್ಕೆ ಬಂದು, ಮಕ್ಕಳನ್ನು ನೋಡಿಕೊಳ್ಳುವುದು ಕಷ್ಟವಲ್ವೇ? ಅದೂ ಕೂಡ ಮನೆಕೆಲ್ಸಕ್ಕೆ ಬರ್ತಾ ಇದ್ದೀಯಾ, ಗಂಡ ಬೈಯೊಲ್ವಾ? ಅಥವಾ ಗಂಡ ಏನಾದ್ರೂ ಕುಡಿಯೋ ಚಟ ಅಂತಾ ಸಂಪಾದಿಸಿದ್ದು ಹಾಳು ಮಾಡ್ತಾನಾ? ಅಂತಂದೆ. ಅಯ್ಯೋ! ಅಕ್ಕಾ, ನಾನು ಓದಿರೋದು ೬ ನೇ ಕ್ಲಾಸಿನ ತನಕ ವಷ್ಟೇ. ಅಪ್ಪ, ಅಮ್ಮ ನಾನು ಚಿಕ್ಕವಳಿದ್ದಾಗಲೇ ತೀರಿ ಹೋದರು. ಆಗ ಅಣ್ಣನ ಮಕ್ಕಳನ್ನು ನೋಡಿಕೊಳ್ಳಲೆಂದು ನನ್ನನ್ನು ಸ್ಕೂಲ್ ಬಿಡಿಸಿಬಿಟ್ಟರು. ನನಗಿನ್ನಾವ ಕೆಲಸ ಸಿಗುತ್ತೆ? ಮತ್ತೆ ಮನೆ ಕೆಲಸ ಮಾಡೋದು ಅಂದರೆ ಕೀಳಿನ ಕೆಲಸ ಅಂತಾ ಯಾಕೆ ಹೇಳ್ತೀರಾ? ನಾನು ನನಗೆ ಏನಾದರೂ ಒಡವೆ ಮಾಡಿಸಿಕೊಳ್ಳಬೇಕಾಗಿ ಬಂದರೆ ಗಂಡನ ಹತ್ತಿರ ಕೇಳುವುದು ಎಷ್ಟು ಸರಿ? ಅಂದಳು. ನಾನದಕ್ಕೆ ಓ! ಒಡವೆ ಮಾಡಿಸಿಕೊಳ್ಳೋಕೋಸ್ಕರ, ಮತ್ತೊಬ್ಬರ ಮನೆಯ ಕೆಲಸ ಮಾಡ್ತಿದ್ದೀಯಾ? ಅಂತಂದೆ. ಅದಕ್ಕೆ ‘ಅಷ್ಟೇ ಅಲ್ಲಾ ಅಕ್ಕಾ. ಈಗ ನೋಡಿ, ಸಂಜೆ ಮನೆಗೆ ಹೋದಾಗ ಮಕ್ಕಳಿಗೆ ಏನಾದರೂ ತಿಂಡಿ ತೊಗೊಂಡು ಹೋಗಬಹುದಾ? ನನ್ನ ದುಡ್ಡು ಅನ್ನೋದು ಎಷ್ಟು ಖುಷಿ ಕೊಡುತ್ತೆ ಗೊತ್ತಾ? ಏನೋ ಕಷ್ಟಕಾಲ ಅಂತಾ ಬಂದುಬಿಡ್ತು ಅಥವಾ ಮಕ್ಕಳ ಸ್ಕೂಲ್ ಫೀಸ್ ಕಟ್ಟಬೇಕಾಗಿ ಬಂತು, ಆಗ ನಾನು ಈ ಹಣವನ್ನು ನನ್ನ ಗಂಡನಿಗೆ ಕೊಡಬಹುದಾ? ಅಂದಳು. ಮತ್ತೆ ನನ್ನ ಕುತೂಹಲವಿನ್ನೂ ಇಂಗಿರಲಿಲ್ಲ. ‘ಈ ತಿಂಗಳ ಸಂಬಳ ಗಂಡನಿಗೆ ಹೋಗಿ ಕೊಟ್ಟೆಯಾ? ಅಂದೆ. ಇಲ್ಲಾ, ಅವರು ಕೇಳಲಿಲ್ಲಾ, ನಾನು ಕೊಡಲಿಲ್ಲ. ಈಗ ದುಡೀತಾ ಇದ್ದಾರೆ, ಮುಂದೆ ಕಷ್ಟ ಬಂದಾಗ ಇದೇ ಹಣವನ್ನು ಉಳಿತಾಯ ಮಾಡಿರ್ತೀನಿ. ಅಂದಳು. ನನಗೆ ತಿಳಿದಿರುವ ಎಲ್ಲಾ ವಿದ್ಯಾವಂತ, ಅಸಹಾಯಕ ಹೆಣ್ಣು ಮಕ್ಕಳೊಟ್ಟಿಗೆ, ಮನವು ಇವಳನ್ನು ಹೋಲಿಸತೊಡಗಿತು.

ಮೌನ ಮಾತಾದಾಗ!


ನಿನಗೆ ರಿಜೆಕ್ಷನ್ ಬಗ್ಗೆ ಗೊತ್ತಿದೆಯಾ?  ಇಲ್ಲದಿದ್ದರೆ ಒಮ್ಮೆ ಓದಿನೋಡು. ಒಂದು ಸಲ ವ್ಯಕ್ತಿ, ಯಾರಿಂದಾದ್ರೂ ಅವಳ/ನ ತಪ್ಪಿಲ್ಲದೆ, ರಿಜೆಕ್ಟ್ ಆಗಿಬಿಟ್ಟರೆ especially emotionally rejection  ಅನುಭವಿಸಿಬಿಟ್ಟರೆ, ಅವರಿಗೆ ಅದರಿಂದ ಮೇಲೇಳಲು ಸಾಧ್ಯವಿಲ್ಲವೇ ಇಲ್ಲ.  ಅದು ನನಗೆ ನನ್ನ ಅತಿ ಸಣ್ಣ ವಯಸ್ಸಿನಿಂದ ಆಗಿದೆ.  ಜೀವ ಭಯಕ್ಕಿಂತ ಹೆಚ್ಚಾಗಿ ಪ್ರತಿ ಕ್ಷಣವೂ ನಾನು ರಿಜೆಕ್ಷನ್ ಪದಕ್ಕೆ ಹೆದರುತ್ತೇನೆ.  ಹಾಗಾಗಿಯೇ ನಾನು ಅಷ್ಟು ಸರಿ / ತಪ್ಪು ಅಂತಾ ಯೋಚಿಸುವುದು.  ನಾನು ರಿಜೆಕ್ಟ್ ಆಗಿಬಿಡುವುದರಿಂದ / ಆಗಿರುವುದರಿಂದ ನನಗೆ ನಾನು ಯಾವಾಗಲೂ ತಪ್ಪಿತಸ್ಥ ಸ್ಥಾನಕ್ಕೆ ಬಂದುಬಿಡುತ್ತೇನೆ. ಅಂದರೆ ನಾನೇನೋ ತಪ್ಪು ಮಾಡಿರಬೇಕು. ಅದಕ್ಕೆ ಇವರು ನನ್ನಿಂದ ದೂರ ಹೋಗಿಬಿಡ್ತಾರೆ ಅಂತಾ ಅನ್ನಿಸಿಬಿಡುತ್ತೆ. ಆಗ ಮತ್ತಷ್ಟು ಎಚ್ಚರಿಕೆಯಿಂದ ಇರಲು ಪ್ರಯತ್ನಿಸುತ್ತೇನೆ. ಪ್ರತಿಯೊಂದು ಹೆಜ್ಜೆಯನ್ನು ಇನ್ನಷ್ಟು ಹುಷಾರಾಗಿ ಇಡಲು ಬಯಸುತ್ತೇನೆ.  ಆಗಲೂ ಕೂಡ ನನ್ನಿಂದ ದೂರ ಹೋದಾಗ ಇನ್ನಷ್ಟು ಭಯ, ಇದು ನನಗಾಗಿರುವ ಭೀಕರ ಅಥವಾ ಭಯಂಕರ ಅನುಭವ.ಇದರಿಂದ ಒಂದಷ್ಟು ಜನರನ್ನು ಅವರು ನನ್ನನ್ನು ರಿಜೆಕ್ಟ್ ಮಾಡುವ ಮೊದಲೇ ನಾನು ಮಾಡಿಬಿಡುತ್ತೇನೆ.  ನನಗೆ ಯಾರ ತಪ್ಪು ಕಾಣೊಲ್ಲ ಅಂತಲ್ಲ.  ಕಂಡರೂ ಕಾಣದಂತೆ ಹೆಚ್ಚಾಗಿ ಇರುವುದು ಆ ವ್ಯಕ್ತಿಗಳು ನನ್ನಿಂದ ದೂರ ಹೋಗಿಬಿಟ್ಟರೆ ಎನ್ನುವ ಕಾರಣದಿಂದ ಅಷ್ಟೆ.  ಇಷ್ಟೆಲ್ಲಾ ಯೋಚಿಸಿದರೂ, ಹೆದರಿದರೂ ನಾನು ಅತ್ಯಂತ ಪ್ರೀತಿಸುತ್ತಿದ್ದವರು ಎಲ್ಲರೂ ನನ್ನನ್ನು ರಿಜೆಕ್ಟ್ ಮಾಡಿದ್ದು ನನಗೆ ಸಿಕ್ಕಾ ಪಟ್ಟೆ ನೋವು ಕೊಟ್ಟ ವಿಷಯ.  ಮತ್ತೆ ಇನ್ನೊಂದು ವಿಷಯ ಅಂದ್ರೆ ನನಗೆ ಎಲ್ಲರೂ ಬೇಕು, ಜಗಳವಾಡೋದು ನಾವು ವಿಷಯದ ಜೊತೆಗೆ ಮಾತ್ರ, ವ್ಯಕ್ತಿಯ ಜೊತೆಗಲ್ಲ ಅನ್ನೋದು ನನ್ನ ಒಪಿನಿಯನ್.  ಆದ್ರೆ ಎಲ್ಲರೂ ನನ್ನ ಜೊತೆ ಅರ್ಗ್ಯು ಮಾಡೋವಾಗಲೋ ಅಥವಾ ನನಗೆ ವಿರುದ್ಧ ಮಾತನಾಡಬೇಕಾದಾಗಲೂ ನಾನು ಅಷ್ಟು ಮುಖ್ಯನೇ ಅಲ್ಲ ಅನ್ನೋ ತರಹ ನನ್ನನ್ನು ರಿಜೆಕ್ಟ್ ಮಾಡಿಬಿಡ್ತಾರೆ. ಆ ನೋವು ನನಗೆ ತಡೆಯೋಕ್ಕಾಗದಿಲ್ಲ.  

ಹೀಗೆ ನನ್ನ ಪಾಡಿಗೆ ಒಂಟಿಯಾಗಿದ್ದಾಗ ನಿನ್ನ ಪರಿಚಯವಾಗಿದ್ದು ನಿಧಿ ಸಿಕ್ಕಷ್ಟು ಸಂತೋಷವಾಯಿತು.  ನನ್ನ ಮೂಕ ಧ್ವನಿಗೆ ನೀ ಜೀವ ಕೊಟ್ಟಿದ್ದೆ. ಇಬ್ಬರೂ ಸಕತ್ ಕ್ಲೋಸ್ ಆದೆವು.  ನಿನ್ನ ಕನಸುಗಳನ್ನು ಹಂಚಿಕೊಳ್ಳುವಾಗ, ನಿನ್ನ ದುಡ್ಡಿನ ಕಷ್ಟ ಹೇಳಿಕೊಂಡಾಗ ಏನಾದರೂ ಸಹಾಯ ಮಾಡಬೇಕು. ಅದು ಖಂಡಿತವಾಗಿಯೂ ಕರುಣೆಯಿಂದಲ್ಲ.  ನಿನ್ನ ಟ್ಯಾಲೆಂಟಿಗೆ ಯಾರು ಬೆಲೆ ಕೊಟ್ಟಿಲ್ಲ ಅಂತ ಅನ್ನಿಸುತ್ತಿತ್ತು.  ನನಗಂತೂ ಯಾವ ಕನಸುಗಳೂ ಇಲ್ಲ.  ಹಾಗಾಗಿ ನಿನ್ನ ಕನಸುಗಳನ್ನು ಸಾಕಾರ ಮಾಡಲು ನಿನ್ನೊಟ್ಟಿಗೆ ಬಂದೆ ಹೊರತು ಇನ್ನಾವ ಕೆಟ್ಟ ಉದ್ದೇಶವೂ ಇರಲಿಲ್ಲ. ಇದರಲ್ಲಿ ನಾನು ಲೀಡರ್ ಆಗುವ ಅಥವಾ ಭಾಗವಹಿಸುವ ಯಾವುದೇ ಮನಸ್ಸು ಇರಲಿಲ್ಲ.  ನಿನ್ನ ಕನಸುಗಳೂ ನೆರವೇರಿ, ನಿನಗಾಗುವ ಸಂತೋಷದಲ್ಲಿ ನನ್ನನ್ನು ನಾನು ಕಂಡುಕೊಳ್ಳುವ ಪ್ರಯತ್ನವಷ್ಟೇ ಆಗಿತ್ತು. ಎಂದೂ ಮಾತನಾಡಿಸದ ನಿನ್ನ ಮನೆಯವರು ನನ್ನನ್ನು ಮಾತನಾಡಿಸುವಾಗ ಮನದಲ್ಲೆಲ್ಲೋ ಅನುಮಾನ ಸುಳಿದರೂ ‘ಮಗ ಸೆಟಲ್ ಆಗಬೇಕೆಂಬ ಮನಸ್ಸು ಯಾವ ತಂದೆ, ತಾಯಂದಿರಿಗಿರುವುದಿಲ್ಲ. ನಾನೇ ಸರಿಯಿಲ್ಲವೆಂದು ಬೈದುಕೊಂಡುಬಿಡುತ್ತಿದ್ದೆ.  ಆದರೆ ನಿನಗಿಂತ ನಿನ್ನ ಮನೆಯವರೇ ಹೆಚ್ಚು ಹತ್ತಿರವಾಗಿದ್ದು ಮಾತ್ರ ಆಶ್ಚರ್ಯ.  

ನಿನ್ನ ಜೊತೆ ಇರುವ ಅವಕಾಶ ಸಿಗುತ್ತೆ / ಮನೆಯಲ್ಲಿ ಹೇಳಲು ಒಂದು ನೆಪವಿರುತ್ತೆ ಅಂತಾನೇ ನಾನು ಮೊದಲಿಗೆ ಈ ಪ್ರಾಜೆಕ್ಟ್ ಒಪ್ಪಿಕೊಂಡಿದ್ದು.  ನಿನ್ನ ಕನಸುಗಳು ಅದು ನನ್ನೊಟ್ಟಿಗೆ ಸಾಕಾರಗೊಳ್ಳುವ ಕಾಲ ಬಂದೇ ಬಿಟ್ಟಿತು ಎಂದು ಹಿಗ್ಗಿ ಹೀರೇಕಾಯಿ ಆಗಿಬಿಟ್ಟೆ.  ನಿನಗಿಂತಲೂ ಹೆಚ್ಚಿನ ಆಸಕ್ತಿಯಿಂದ ಈ ಪ್ರಾಜೆಕ್ಟ್ ನಲ್ಲಿ ತೊಡಗಿಕೊಂಡೆ.  ನನ್ನ ಮನೆಯವರೆಲ್ಲರ ಕೆಂಗಣ್ಣಿಗೂ ಗುರಿಯಾದೆ.  ಅದೇನದು? ಯಾವಾಗಲೂ ಮನೆಯಿಂದ ಹೊರಗಿರುವುದು? ಅವನನ್ನು ಕಂಡರೆ ನನಗಾಗುವುದಿಲ್ಲವೆಂದು ಮೊದಲಬಾರಿಗೆ ಅಮ್ಮ ಸಿಡಿಮಿಡಿಗುಟ್ಟಿದಾಗ, ಎಂದೂ ಹೆಚ್ಚು ಮಾತನಾಡದ ನಾನು ಅಂದು ಭೂಮಿ, ಆಕಾಶ ಒಂದು ಮಾಡಿದ್ದೆ.  ಅಮ್ಮನಿಗೆ ಆಶ್ಚರ್ಯ, ಸಂಕಟ, ನೊವು ಎಲ್ಲವೂ ಬಹುಶಃ ಒಟ್ಟಿಗೆ ಅನುಭವವಾಗಿತ್ತೇನೋ? ಅಂದಿನಿಂದ ಪೂರ್ತಿ ಮೌನಿಯಾಗಿಬಿಟ್ಟಳು.  ಆ ಘಟನೆಯಾದ ಮೇಲೆ ಇನ್ನೂ ಹೆಚ್ಚಿನ ಆಸಕ್ತಿಯಿಂದ ಪ್ರಾಜೆಕ್ಟ್ ನಲ್ಲಿ ತೊಡಗಿಕೊಂಡೆ. ಇದು ನನಗೆ ನನ್ನ ಆತ್ಮ ಗೌರವದ ಪ್ರಶ್ನೆಯಾಗಿಬಿಟ್ಟಿತು.  ನನ್ನ ಗೆಳೆಯ ವೇಸ್ಟ್ ಬಾಡಿಯಲ್ಲ.  ಅವನಲ್ಲಿ ಟ್ಯಾಲೆಂಟ್ ಇದೆ ಎಂದು ಸಾರಿ ಸಾರಿ ಜಗತ್ತಿಗೆಲ್ಲಾ ಗೊತ್ತಾಗುವಂತೆ ಮಾಡಬೇಕಾದ ಅನಿವಾರ್ಯತೆಯನ್ನು ಹುಟ್ಹಾಕಿಬಿಡ್ತು.  

ಇದುವರೆವಿಗೂ ಹೆಚ್ಚಿನ ಪ್ರಾಜೆಕ್ಟ್ ಗಳನ್ನು ನೀನು ಅರ್ಧ ಅರ್ಧಕ್ಕೆ ಏನೇನೋ ಸಿಲ್ಲಿ ಕಾರಣ ಕೊಟ್ಟು ಬಿಟ್ಟುಬಿಡುತ್ತಿದ್ದೆ.  ಅದು ಹಾಗಲ್ಲ ಎಂದು ನಾನು ಹೇಳಿದರೆ ವಾದ ಮಾಡುತ್ತಿದ್ದೆ. ನಾನು ನಿನ್ನ ಜೊತೆ ಟೀಮ್ ನಲ್ಲಿದ್ದರೆ ನೀನು ಇದನ್ನು ಬಿಡದಂತೆ ನೋಡಿಕೊಳ್ಳಬಹುದು. ನೀನು ಜಗಳವಾಡಿದರೂ, ಬೈದರೂ ನಾನಾದ್ರೆ ಸಹಿಸಿಕೊಳ್ಳಬಹುದು.  ನಿನ್ನ ಪ್ರತಿಭೆ ಜಗತ್ತಿಗೆ ಗೊತ್ತಾಗಿಬಿಟ್ಟರೆ ಆಮೇಲೆ ನಿನ್ನ ಈ ಸ್ವಭಾವ (ಹೊಂದಾಣಿಕೆಯಿಲ್ಲದ) ವನ್ನು ಜಗತ್ತು ಒಪ್ಪಿಕೊಂಡುಬಿಡುತ್ತದೆ. ಹಾಗಾಗಿ ನಾನು ಈ ಟೀಮ್ ನಲ್ಲಿ, ನನಗೆ ನೀನು ಎಷ್ಟೋ ಅವಮಾನಗಳನ್ನು ಮಾಡಿದರೂ ಸಹಿಸಿಕೊಂಡು ಇರಬೇಕೆಂದೇ ನಾನು ಪ್ರಾಜೆಕ್ಟ್ ಗೆ ಬರೋಕೆ ಪ್ರೇರೇಪಿಸಿದ್ದು. ನಿಧಾನವಾಗಿ ಒಂದೊಂದೇ ವಿಷಯಗಳು ನಿನ್ನ ಬಗ್ಗೆ ತಿಳಿಯುತ್ತಾ ಬಂತು.  ನನ್ನ ಹತ್ತಿರ ಹೇಳಿದ ಮಾತುಗಳನ್ನೆಲ್ಲಾ  ನೀನು ನನ್ನ ಗೆಳತಿಯರ ಬಳಿ ಕೂಡ ಹೇಳುತ್ತಿದ್ದೆ ಎಂದು ಗೊತ್ತಾದಾಗ, ನನಗಾದ ನೋವನ್ನು ನಾ ಯಾರಲ್ಲಿ ಹೇಳಿಕೊಳ್ಳಲಿ? ಎಲ್ಲಾ ಹುಡುಗಿಯರು ನಿನಗೆ ಒಂದೇ ರೀತಿ ಹಾಗೂ ನನ್ನನ್ನು ಕೂಡ ನೀನು ಅದೇ ಸ್ಥಾನದಲ್ಲಿ ಇರಿಸಿದ್ದೆ ಎಂಬುದರ ಅರಿವಾದಾಗ ಆದ ಸಂಕಟವೆಷ್ಟು?  ನಿನ್ನ ಗೆಳೆತನ ಬಿಡದಷ್ಟು ಇಲ್ಲಿ ಮನೆಯಲ್ಲಿ ಸಿಕ್ಕಿಹಾಕಿಕೊಂಡಿದ್ದೆ. ನಿನ್ನನ್ನು ಬಿಟ್ಟುಬಿಡುವುದು ಸುಲಭವಾಗಿದ್ದರೂ, ಮನೆಯಲ್ಲಿ ನನಗದು ಪ್ರೆಸ್ಟೀಜ್ ವಿಷಯವಾಗಿತ್ತು.  ಹಾಗಾಗಿಯೇ ನಿನ್ನನ್ನು ಬದಲಾಯಿಸಲು ಪ್ರಯತ್ನಿಸಿದೆ. ನಿನಗದು ಇಷ್ಟವಾಗಲಿಲ್ಲವೇನೋ?

ಇನ್ನೂ ಪ್ರಾಜೆಕ್ಟ್ ವಿಷಯ, ನಾನು ಬಂದಿದ್ದೇ  ನಿನಗಾಗಿ ಅನ್ನೋದನ್ನು ಹೇಳಿದ್ದೀನಿ.  ಆಮೇಲಾಮೇಲೆ ಅದು ನನ್ನ ಪ್ರೆಸ್ಟೀಜ್ ವಿಷಯವಾಯಿತು. ನೀನು ನನ್ನ ಗೆಳತಿಯ ಹತ್ತಿರ ಇವಳು ಪ್ರಾಜೆಕ್ಟ್ ನಲ್ಲಿರುವ ತನಕ ನಾನು ಬರುವುದಿಲ್ಲ ಎಂದೆಯಂತೆ.  ನನಗೆ ಮಾತನಾಡಲು ಕೂಡ ಅವಕಾಶ ಕೊಡದೆ ನೀನು ಹೀಗೆ ಮಾಡಿದ್ದು ಯಾಕೆ ಎಂಬುದು ನನಗೆ ಈಗ ಕಾಡುತ್ತಿದೆ.  ನಾನು ಪ್ರಾಜೆಕ್ಟ್ ಗೆ ಮುಖ್ಯ ಅಂತಾ ನನಗನ್ನಿಸಿಯೇ ಇಲ್ಲ.  ನಿನ್ನ ಬಗ್ಗೆ ಕನ್ಸರ್ನ್ ಇರುವುದು ಪ್ರಾಜೆಕ್ಟ್ ಗಾಗಿ ಅನ್ನೋದಿಕ್ಕಿಂತ ಹೆಚ್ಚಾಗಿ ಅಯ್ಯೋ ನಿನ್ನ  ಆ ಒಂದು ತಪ್ಪು ಅಥವಾ ವೀಕ್ ನೆಸ್ ನಿಂದಾಗಿ ಒಳ್ಳೆಯ ಅವಕಾಶವನ್ನು ಬಿಟ್ಟುಬಿಡ್ತಾ ಇದ್ದೀಯಾ ಅನ್ನೋದಷ್ಟೆ. ನಾನಾದರೆ ಅಡ್ಜಸ್ಟ್ ಮಾಡಿಕೊಳ್ಳಬಹುದು, ಬೇರೆಯವರಾದ್ರೆ ಆಗೊಲ್ಲ ಅಂತ ಅಷ್ಟೆ.  ಅದನ್ನು ಕೂಡ ಯೋಚಿಸಿ, ಯೋಚಿಸಿ ಬಿಟ್ಟೇ ಬಿಟ್ಟಿದ್ದೀನಿ.  ಅವರವರಿಗೆ ಅವರವರ ತಪ್ಪುಗಳು ಗೊತ್ತಾಗಬೇಕೇ ಹೊರತು ಮತ್ತೊಬ್ಬರಿಂದ ತಿದ್ದುವುದು ಸಾಧ್ಯವಿಲ್ಲ ಅನ್ನೋದು ಅರ್ಥವಾಗಿದೆ. 

ನೀನು ಇಲ್ಲದೆ ಬದುಕುವುದಕ್ಕೆ ಆಗೊಲ್ಲ ಅನ್ನುವಂತಹ ಸಂಬಂಧ ನಮ್ಮದಾಗಿರಲಿಲ್ಲ. ಆದರೆ ನೀನೂ ಕೂಡ ಇದ್ದರೆ ಈ ಬಾಳು ಸೊಗಸು ಎನ್ನುವಂತಹದಾಗಿತ್ತು ಎಂದು ನಂಬಿದ್ದೆ. ಬಹಳಷ್ಟು ಯೋಚಿಸಿ ಈ ನಿರ್ಧಾರ ಕೈಗೊಂಡಿದ್ದೀನಿ.  ನನ್ನ ಕೈಲಾದಷ್ಟು ಪ್ರಾಜೆಕ್ಟ್ ಗಾಗಿ ನಾನು ಕೆಲಸ ಮಾಡಿದ್ದೀನಿ.  ನಾವು ನಾವು ನಮ್ಮನ್ನೇ ಪರಿಶೀಲಿಸಿ ನೋಡಿಕೊಂಡಾಗ, ವಿಮರ್ಶಿಸಿ ಕೊಂಡಾಗ ನಮಗೆ ಗೊತ್ತಾಗುತ್ತದೆ ನಾವೇನು ಪ್ರಾಜೆಕ್ಟ್ ಗಾಗಿ ಮಾಡಿದ್ದೀವಿ ಅನ್ನೋದು.  ಸೋ ನನ್ನ ಟೈಮ್ ಗೂ ಬೆಲೆಯಿದೆ ಹಾಗೆಯೇ ನಿನ್ನ ಟೈಮ್ ಗೂ ಕೂಡ ನಾನು ಬೆಲೆ ಕೊಟ್ಟಿದ್ದೀನಿ ಅನ್ನೋದು ನನ್ನ ಅಭಿಪ್ರಾಯ.  ಅಕಸ್ಮಾತ್ ನಿನ್ನ ಟೈಮ್ ವೇಸ್ಟ್ ಮಾಡಿದ್ದರೆ ಕ್ಷಮೆಯಿರಲಿ.  ನೀನೇ ಅಲ್ಟಿಮೇಟ್ ಅಂತಾ ನಾನ್ಯಾವತ್ತೂ ಅಂದುಕೊಂಡಿಲ್ಲ. ಈ ಪ್ರಾಜೆಕ್ಟ್ ನೀನು ಇಲ್ಲದಿದ್ರೂ ನಡೆಯುತ್ತೆ ನನಗದು ಗೊತ್ತು. ಆದರೆ  ನಿನಗೆ ಇದಕ್ಕಿಂತ ಹೆಚ್ಚಿನ / ಒಳ್ಳೆಯ

ಅವಕಾಶ ನಿನ್ನನ್ನು ನೀನು ಪ್ರೂವ್ ಮಾಡೋಕೆ ಸಿಗೊಲ್ಲ ಅಂತಾ ಅಷ್ಟೆ ನನ್ನ ಕಳಕಳಿ.  ಅದಕ್ಕೋಸ್ಕರ ಎಲ್ಲ ರೀತಿಯ ಪ್ರಯೋಗಗಳನ್ನು ಮಾಡಿದೆ. ಕೊನೆಗೆ ಎಮೋಷನಲ್ ಬ್ಲಾಕ್ ಮೇಲ್ ಕೂಡ ಮಾಡಿದೆ. ನಿನಗದು ಟಾರ್ಚರ್ ಅನ್ನಿಸಿರುತ್ತೆ.  ಆದರೆ ನಿಜವಾಗಿಯೂ ನಿನಗೆ ಅರಿವಾದಾಗ ನಾನು ನಿನ್ನ ಕೈಗೆ ಸಿಗದಂತೆ ಬಹಳ ದೂರ ಹೋಗಿರ್ತೀನಿ. ಇಷ್ಟು ಕೂಡ ಮಾತನಾಡಿದ್ದು ಮುಂದೆ, ಮುಂದೆ ಇದು  ನಿನ್ನ  ಕೆಲಸಕ್ಕೆ ಅಫೆಕ್ಟ್ ಆಗದಿರಲಿ ಎನ್ನುವ ಉದ್ಧೇಶವಷ್ಟೇ.  

ಗುಡ್ ಬೈ :-(

ಹುಡುಗರು ಬುದ್ಧಿವಂತರಾಗುತ್ತಿದ್ದಾರೆ - ಸೈಡ್ ಪ್ಲೀಸ್, ಸೈಡ್ ಪ್ಲೀಸ್ಹುಡುಗರು ಬುದ್ಧಿವಂತರಾಗುತ್ತಿದ್ದಾರೆ - ಸೈಡ್ ಪ್ಲೀಸ್, ಸೈಡ್ ಪ್ಲೀಸ್. ನಾವೇನೂ ಕಡಿಮೆಯಿಲ್ಲ, ಹೇಗಾದರೂ ಮಾಡಿ ಹಳ್ಳದಲ್ಲೀ ಬೀಳಿಸಿಯೇ ಬೀಳಿಸುತ್ತೀವಿ ಎಂಬಂತಹ ಹುಡುಗಿಯರು ;-) ಇದು ಪಂಚರಂಗಿಯ ತಿರುಳುಗಳು.

ಮಧ್ಯಮ ವರ್ಗದವರ ಗೊಂದಲಗಳು, ಫಾರೀನ್ ಕನಸುಗಳು, ಹುಟ್ಟಿದಂದಿನಿಂದ ಶುರುವಾಗುವ ಟೆನ್ಷನ್ ಗಳು, ಮಕ್ಕಳ ಬದುಕನ್ನು ಅಪ್ಪ, ಅಮ್ಮಂದಿರೇ ಬದುಕುತ್ತಾರೆ, ಮಕ್ಕಳು ಹುಟ್ಟುವುದೇ ತಮ್ಮ ಕನಸುಗಳನ್ನು ನೆರವೇರಿಸಲು ಎಂದು ಭಾವಿಸಿರುವ ಈಗಿನ ಎಲ್ಲಾ ಮಧ್ಯಮ ವರ್ಗಗಳ ಕುಟುಂಬದ ಕಥೆ ‘ಪಂಚರಂಗಿ’. ಒಂದು ಕಡೆ ಹೀರೋಯಿನ್ ಅಕ್ಕ ಪಿಯುಸಿ ಫೈಲ್ ಆದರೂ ಫಾರೀನಿನಲ್ಲಿ ನೆಲೆಸಿರುವ ಹುಡುಗನನ್ನು ಮದುವೆಯಾಗುವ ಕನಸು ಕಾಣುವ ಹಾಗೂ ಅದಕ್ಕಾಗಿ ಇಂಗ್ಲೀಷ್ ಭಾಷೆಯನ್ನು ರಾಪಿಡೆಕ್ಸ್ ಪುಸ್ತಕದಿಂದ ಕಲಿಯುತ್ತಿರುವ ಹುಡುಗಿ! ಈಕೆಯನ್ನು ಮದುವೆಯಾಗಲು ಬರುವ ನಾಯಕನ ಅಣ್ಣ ಪಕ್ಕಾ ಮಧ್ಯಮವರ್ಗದ ಮಕ್ಕಳ ನಕಲು! ತಾನು ಪ್ರೀತಿಸಿದ್ದರೂ, ಅದನ್ನು ಅಪ್ಪ ಅಮ್ಮಂದಿರಿಗೆ ಹೇಳಲು ಹೆದರುವವನು, ಇಷ್ಟವಿಲ್ಲದಿದ್ದರೂ ಅವರಿಗಾಗಿಯೇ ವಿದೇಶದಲ್ಲಿ ನೆಲೆಸಿರುವವನು, ಅಪ್ಪ, ಅಮ್ಮನಿಗಾಗಿಯೇ ತನ್ನೆಲ್ಲಾ ಕನಸುಗಳನ್ನು ಮುಚ್ಚಿಟ್ಟುಕೊಂಡು ಬದುಕಿದ್ದರೂ ಸತ್ತಿರುವವನು. ಇಂತಹದಕ್ಕೆಲ್ಲಾ ರೆಬೆಲ್ ಆದ ನಾಯಕ ಮನೆಯಲ್ಲಿ ತಿರಸ್ಕೃತನಾದವನು.

ಮುಂಗಾರು ಮಳೆಯಲ್ಲಿ ಚಿತ್ರದ ಆರಂಭದಲ್ಲಿಯೇ ಹಳ್ಳದಲ್ಲಿ ಬೀಳುವ ನಾಯಕ ಪಟ್ಟ ಪರಿಪಾಡಲು ನೋಡಿದ ಪಂಚರಂಗಿಯ ‘ನಾಯಕ’ ಇಲ್ಲಿ ತಪ್ಪಿಸಿಕೊಂಡು ಓಡಾಡುತ್ತಾನೆ. ನಾಯಕಿ ಪ್ರೀತಿಸುತ್ತಿದ್ದಾಳೆ ಎಂದು ತಿಳಿದು ಆ ಬಲೆಯೊಳಗೆ ಸಿಲುಕಲು ಇಷ್ಟವಿರದ ಮಹಾನ್ ಪಲಾಯನವಾದಿ‘ಗಳು’ . ಲೈಫ್ ಇಷ್ಟೇನೇ ಎನ್ನುವುದು ಇವನ ಫಿಲಾಸಫಿ. ಜೀವನವೇ ಈತನಿಗೆ ಮಹಾನ್ ಬೋರು‘ಗಳು’.ನಗುವುದ ಮರೆತಿವೆ ಹೃದಯಗಳು, ಒಂದು ಒಳ್ಳೆ ನಗುವಿಗೆ ಮೀನಿಂಗ್‌ಫುಲ್ ಬದುಕಿಗೆ ಎಲ್ಲೈತಪ್ಪ ಇಲ್ಲಿ ಜಾಗಗಳು? ಇದು ಈತನ ಪ್ರಶ್ನೆಗಳು! ಇದಕ್ಕೆಲ್ಲಾ ಕಾರಣ ಹಿರಿಯರು‘ಗಳು’ ಎಂದು ದೂಷಿಸುತ್ತಲೇ ಕೂರುವುದು ಈತನ ಕೆಲಸ‘ಗಳು’. ವಿರುದ್ಧ ಧ್ರುವಗಳು ಆಕರ್ಷಿತವಾಗಿಯೇ ಆಗುತ್ತವೆ ಎಂಬಂತೆ ಆಶಾವಾದಿ ನಾಯಕಿ. ಅವಳಿಗೆ ಲೈಫ್ ಎಂದರೆ ‘ಹೀಗೇನೇ’!. ಜೀವನವನ್ನು ಎಂಜಾಯ್ ಮಾಡಬೇಕು, ಮನಸ್ಸಿಗೆ ಹಿಡಿಸದ ವಿಷಯಗಳನ್ನು ನೋಡದಂತಿರಬೇಕು, ಅದಕ್ಕೆ ಕೊರೊಗೋದು ಯಾಕೆ? ಯಾರನ್ನಾದ್ರೂ ದೂಷಿಸಬೇಕು ಯಾಕೆ? ಎನ್ನುವುದು ಇವಳ ಪಾಲಿಸಿ. ಇವರಿಬ್ಬರ ನಡುವಿನ ಪ್ರೀತಿಯ ದೃಶ್ಯಾವಳಿಯ ಒಂದು ಘಟನೆಯ ಚಿತ್ರಣ ‘ಪಂಚರಂಗಿ’. 

ಈ ಎರಡು ಜೋಡಿಗಳನ್ನು ನೋಡಿದಾಗ ನಮ್ಮ ಮನೆಯಲ್ಲೇ ಇಂತಹದ್ದು ನಡೆಯುತ್ತಿವೆ ಎಂದನ್ನಿಸಿದರೂ ಮೆಚ್ಚುಗೆ ಪಡೆಯುವುದು ಮತ್ತೊಂದು ಜೋಡಿ - ಕೆಲಸದವಳು ಹಾಗೂ ಬಸ್ ಡ್ರೈವರ್ ನ ನಡುವಿನ ಪ್ರೀತಿ! ಈ ಮಧ್ಯಮ ವರ್ಗದವರಿಗೆ ಇರುವಂತಹ ಗೊಂದಲಗಳು, ಟೆನ್ಷನ್ ಗಳು ಯಾವುವೂ ಇವರನ್ನು ಕಾಡುವುದಿಲ್ಲ. ಅವನು ಹಿಂಜರಿಯದೇ ಇವಳಿಗೆ ಪ್ರೊಪೋಸ್ ಮಾಡಿಬಿಡುತ್ತಾನೆ. ಇವಳು ಒಪ್ಪಿಕೊಂಡುಬಿಡುತ್ತಾಳೆ. ಮದುವೆ ಕೂಡ ಆಗಿಬಿಡುತ್ತಾರೆ. ಈಕೆಯ ಅಣ್ಣ ‘ನನಗೆ ಒಂದು ಮಾತು ಹೇಳಿದ್ದರೆ, ನಾನೇ ಮದುವೆ ಮಾಡ್ತಿದ್ದೆ’ ಎನ್ನುವ ಮಾತು ಅವರು ಬದುಕಿನತ್ತ ನೋಡುವ ದೃಷ್ಟಿಯನ್ನು ತೆರೆದಿಟ್ಟು ಬಿಡುತ್ತದೆ. ನಾಯಕಿಯ ಅಕ್ಕ ಇಂಗ್ಲೀಷ್ ಕಲಿಯಲು ತಂದಿಟ್ಟುಕೊಂಡಿರುವ ರಾಪಿಡೆಕ್ಸ್ ಪುಸ್ತಕವನ್ನು ಓದಿ ಇಂಗ್ಲೀಷ್ ಕಲಿಯುವ ಈ ಕೆಲಸದವಳು, ಅಕ್ಕ ತಂಗಿಯರ ಜಗಳವನ್ನು ನಿರ್ಲಿಪ್ತವಾಗಿ ನೋಡುವ ಬಗೆ, ಬಸ್ ಡ್ರೈವರ್ ನ ಜೊತೆ ನಡೆಯುವ ಸಂಭಾಷಣೆಗಳು ಎಲ್ಲವೂ ಅವಳನ್ನು ಚಿತ್ರದ ಹೈಲೈಟ್ ಮಾಡಿಬಿಡುತ್ತವೆ.

ಚಿತ್ರದ ಮತ್ತೊಂದು ಮುಖ್ಯ ಪಾತ್ರ ಅನಂತನಾಗ್ ರವರದ್ದು. ಅಲೆಮಾರಿಯ ಪಾತ್ರ. ಈ ಪಾತ್ರಕ್ಕೆ ಅವರೇ ಸೂಕ್ತ ಅನ್ನಿಸಿಬಿಡುತ್ತದೆ. ಒಂದು ದೃಶ್ಯದಲ್ಲಿ ದಿಗಂತ್ ವರ್ಸಸ್ ಅನಂತನಾಗ್ ಸಂಭಾಷಣೆ (‘ಗಳು’ ‘ಗಳು’) ಬಹಳ ಚೆನ್ನಾಗಿ ಮೂಡಿಬಂದಿದೆ. ಮತ್ತೊಮ್ಮೆ ಈ ದೃಶ್ಯವನ್ನು ನೋಡಬೇಕೆಂದು ಮನ ಬಯಸುತ್ತದೆ. ಚಿತ್ರದ ಹಾಡುಗಳಂತೂ ಬಹಳ ಚೆನ್ನಾಗಿವೆ. ಶ್ರೇಯಾ ಘೋಷಾಲ್ ಹಾಡಿರುವ ‘ನಿನ್ನಯ ಒಲವಿನ’ ಬಹಳ ಇಂಪಾಗಿದೆ. ಚಿತ್ರದ ಪ್ರತಿಯೊಂದು ಡೈಲಾಗ್ ಗಳೂ ಒಂದೊಂದು ಕಥೆಯನ್ನು ಹೇಳುತ್ತವೆ. ಮುಂಗಾರು ಮಳೆ ತರಹ, ಮನಸಾರೆ ತರಹ, ಗಾಳಿ ಪಟ ತರಹ ಇದೆ ಅನ್ನಬಾರದೆಂದು

ಭಟ್ಟರು ಹುಷಾರಾಗಿ ಮೊದಲೇ ಟೈಟಲ್ ಸಾಂಗ್ ನಲ್ಲಿ ‘ಅರೆರೆರೆ ಪಂಚರಂಗಿ, ಅದೇ ಮೋಡ, ಅದೇ ಬಾನು, ಆದರೆ ಸೋನೆ ಬೇರೆ, ಸೋನೆಯ ಗಂಧ ಬೇರೆ ಎಂದು ಹೇಳಿಸಿಬಿಟ್ಟಿದ್ದಾರೆ. 

ಹೆಚ್ಚಾಗಿ ಕನ್ನಡದ ಕಮರ್ಷಿಯಲ್ ಸಿನೆಮಾಗಳು ಶುರುವಿನಲ್ಲೇ ಮಾತಾಡಿ, ಕೊನೆಗೊಂದು ಕ್ಲೈಮಾಕ್ಸ್ ಕೊಟ್ಟು ಮಧ್ಯದಲ್ಲಿ ತುಂಬಿಸುವ ಕೆಲಸ ಮಾಡುತ್ತವೆ. ಇತ್ತೀಚೆಗೆ ಬರುತ್ತಿರುವ ಎಲ್ಲಾ ಸಿನೆಮಾಗಳು ಮಧ್ಯಂತರದ ನಂತರ ಬಹಳ ಎಳೆದಂತೆ ಭಾಸವಾಗಿಬಿಡುತ್ತವೆ. ಆದರೆ ‘ಪಂಚರಂಗಿ’ಯಲ್ಲಿ ಆರಂಭದಲ್ಲಿ ಏನೂ ಅರ್ಥವಾಗದ್ದು, ಮಧ್ಯಂತರದಲ್ಲಿ ಸ್ವಲ್ಪ ಏನೋ ಇದೆ ಅಂತಾ ಅನ್ನಿಸಿ, ಅದು ಏನು? ಅನ್ನೋದು ಕ್ಲೈಮಾಕ್ಸ್ ನಲ್ಲಿ ಗೊತ್ತಾಗುತ್ತದೆ. ಅದುವರೆವಿಗೂ ಭಟ್ಟರು ಏನು ಹೇಳೋದಿಕ್ಕೆ ಹೊರಟಿದ್ದಾರೆ ಅನ್ನೋದು ಅಷ್ಟಾಗಿ ಅರ್ಥವಾಗುವುದೇ ಇಲ್ಲ. ಇದಕ್ಕೆಲ್ಲಾ ಉತ್ತರಗಳು ಪಂಚರಂಗಿಯ ಕೊನೆಯ ೨೦ ನಿಮಿಷಗಳು. ಹಾಗಾಗಿ ಪಂಚರಂಗಿಯ ಕಥೆ ಶುರುವಾಗೋದು ಕ್ಲೈಮಾಕ್ಸ್ ನಲ್ಲಿ ಎಂದು ಹೇಳಬಹುದೇನೋ? ಕಮರ್ಶಿಯಲ್ ಸಿನೆಮಾ ಎಂಬುದನ್ನು ಮೀರಿ ಬೆಳೆಯುತ್ತಿದ್ದಾರೆ ಭಟ್ಟರು ಎನ್ನುವುದನ್ನು ಪಂಚರಂಗಿ ಹೇಳುತ್ತದೆ. ಇದೊಂದು ತರಹದ ಆರ್ಟ್ ಹಾಗೂ ಕಮರ್ಷಿಯಲ್ ನಡುವಿನ ಬ್ರಿಡ್ಜ್ ಸಿನೆಮಾ ಎನ್ನಬಹುದೇನೋ?

ಕವಲು - ನನ್ನನಿಸಿಕೆ

ಭೈರಪ್ಪನವರ ಪ್ರತಿ ಕಾದಂಬರಿಗಳಲ್ಲೂ ಈ ಲೈಂಗಿಕ ಅತೃಪ್ತಿ, ವಿವಾಹ ಬಾಹಿರ, ಅನೈತಿಕ ಸಂಬಂಧಗಳು ಎದ್ದು ಕಾಣುತ್ತವೆ. ಇದು ತೀರಾ ‘ಅತಿರೇಕ’ ಆಯಿತು, ಹೀಗೆಲ್ಲಾ ನಿಜವಾಗಲೂ ನಡೆಯುತ್ತಾ? ಎಂದೆಲ್ಲಾ ಪ್ರಶ್ನೆಗಳನ್ನು ಹಾಕಿಕೊಂಡರೂ, ಮನಸ್ಸಿನ ಒಂದು ಮೂಲೆಯಲ್ಲಿ ‘ನಿಜ’. ಗಂಡು ಹೆಣ್ಣಿನ ಒಡಕುಗಳಿಗೆ ಈ ಲೈಂಗಿಕ ಅತೃಪ್ತಿ ಎಂಬುದು ಅತ್ಯಂತ ಮುಖ್ಯ ಕಾರಣ ಎಂದು ಕೂಡ ಮೂಡುತ್ತದೆ. ‘ಅಂಚು’ ವಿನಲ್ಲಿ ಇಡೀ ಪುಟ ಪುಟದಲ್ಲೂ ‘ಶೂನ್ಯ’ ಎಂಬ ಭಾವ ಕಾಡುವ ಹಾಗೆ, ‘ಕವಲು’ ನಲ್ಲಿ ಪ್ರತಿ ಪುಟ ಪುಟದಲ್ಲೂ ‘ಸೆಕ್ಸ್’ ವಿಜೃಂಭಿಸುತ್ತದೆ. ತೀರಾ ಅಸಹ್ಯ ಹುಟ್ಟುವಷ್ಟು ಬಾರಿ ಗಂಡು-ಹೆಣ್ಣು ಭೇಟಿಯಾಗುವುದೇ ಸೆಕ್ಸ್ ಎಂಬ ಕಾರಣಕ್ಕೇ?! ಇದರಾಚೆಗೆ ಇನ್ನ್ಯಾವ ಕಾರಣಗಳೂ ಅಥವಾ ಸಂಬಂಧಗಳು ಇರಬಾರದೇ? ಇರುವುದಿಲ್ಲವೇ? ಎಂದೆನಿಸಿಬಿಡುತ್ತದೆ. ಇದರಿಂದಾಗಿ ಭೈರಪ್ಪನವರು ಏನು ಹೇಳಲು ಹೊರಟಿದ್ದಾರೆ ಎಂಬುದು ಗೋಚರವಾಗುವುದೇ ಇಲ್ಲ. ಹಾಗಾಗಿಯೇ ‘ಕವಲು’ ತೀರಾ ಪೇಲವ ಹಾಗೂ ಸಿನಿಮೀಯವಾಗಿದೆ ಎಂದೆನಿಸುತ್ತದೆ. ನಾಲ್ಕೈದು ಪಾತ್ರಗಳು, ಅವುಗಳ ನಡುವೆ ನಡೆಯುವ ಘರ್ಷಣೆಗಳು, ತಪ್ಪು ಮಾಡಿದವರಿಗೆ ಶಿಕ್ಷೆಯಾಗುವುದು, ಒಳ್ಳೆಯವರಿಗೆ ಒಳ್ಳೆಯದಾಗುವುದು, ಇವೆಲ್ಲಕ್ಕೂ ಒಂದು ಲಾಜಿಕಲ್ ಕ್ಲೈಮಾಕ್ಸ್, ಇದನ್ನು ಓದಿ ಮುಗಿಸಿದಾಗ ಹಿಂದಿ ಚಲನಚಿತ್ರವೊಂದನ್ನು ನೋಡಿದಂತೆ ಭಾಸವಾಗುವುದು ಸುಳ್ಳಲ್ಲ! ‘ಕವಲು’ ಕೃತಿ ಹಾಗೂ ಇದರ ಬಗ್ಗೆ ಪೇಪರ್ ಗಳಲ್ಲಿ, ಬ್ಲಾಗ್ ಗಳಲ್ಲಿ ಬಂದಂತಹ ವಿಮರ್ಶೆಗಳನ್ನು ಓದಿದಾಗ, ಯಾರೂ ಭೈರಪ್ಪನವರ ಆಲೋಚನೆಗಳನ್ನು ಸರಿಯಾಗಿ ಅರ್ಥ ಮಾಡಿಕೊಂಡಿಲ್ಲ ಎಂದು ನನಗನ್ನಿಸಿತು. ಬಹುಶಃ ಮೊದಲಿಗೆ ವಿಮರ್ಶೆಗಳನ್ನು ಓದಿ, ನಂತರ ‘ಕವಲು’ ಓದಿದ ಕಾರಣವೋ ಏನೋ, ಈ ವಿಭಿನ್ನ ದೃಷ್ಟಿಕೋನ! 

ಯಾವಾಗಲೂ ಭೈರಪ್ಪನವರ ಕಾದಂಬರಿಗಳಲ್ಲಿ ಪಾತ್ರಗಳು ಒಂದು ಇಮೇಜ್ ಅನ್ನು ಕಟ್ಟಿಕೊಡುತ್ತವೆ. ನಾವು ಆ ಇಮೇಜ್ ಗಳಲ್ಲೇ ಇಡೀ ಕಾದಂಬರಿಯನ್ನು ಓದಿಕೊಂಡು ಹೋಗುತ್ತೇವೆ. ನಮಗೆ ಅದರಲ್ಲಿನ ಪಾತ್ರಗಳು ಬರೇಯ ಪಾತ್ರಗಳಾಗೇ ಉಳಿಯುವುದಿಲ್ಲ. ನಮ್ಮ ನಿಮ್ಮ ನಡುವೆ ಇರುವ ಹಾಗೇ ತೋರುತ್ತದೆ. ಕೆಲವೊಮ್ಮೆ ನಾವೇ ಆ ಪಾತ್ರಗಳಾದಂತೆ ಭಾಸವಾಗಿಬಿಡುತ್ತದೆ!. ಭೈರಪ್ಪನವರು ಅವರ ಕಾದಂಬರಿಗಳಲ್ಲಿ ತಾವೇ ಪಾತ್ರವಾಗಿ ಬರೆಯುತ್ತಾ ಹೋಗುತ್ತಾರೆ. ಹಾಗಾಗಿಯೇ ಅವರಿಗೆ ‘ಮಂಗಳೆ’ ‘ಇಳಾ’ ಯೂ ಸರಿ, ‘ಜಯಕುಮಾರ’ ‘ವಿನಯ’ ನೂ ಸರಿ ಎನಿಸುತ್ತದೆ. ಭೈರಪ್ಪನವರ ಕಾದಂಬರಿಗಳಲ್ಲಿ ಹೆಚ್ಚಾಗಿ ಯಾವಾಗಲೂ ಶೋಷಣೆಗೊಳಗಾದ / ಆಗುವ ‘ಅಬಲೆ’ ಹೆಣ್ಣು, ಶಕ್ತಿಯ ಪ್ರತೀಕದಂತೆ, ‘ಸಬಲೆ’ಯಂತೆ ಬಿಂಬಿತವಾಗುತ್ತಾಳೆ. ಹಾಗಾಗಿಯೇ ಇವರು ಸ್ತ್ರೀ ಪರ ‘ವಾದಿ’ ಎನಿಸುತ್ತಾರೆ. ಆದರೆ ‘ಕವಲು’ ನಲ್ಲಿ ಕಥೆ ಶುರುವಾಗುವುದು ‘ಸಬಲೆ’ ಹೆಣ್ಣಿನಿಂದ! ಇಲ್ಲಿ ಸಬಲೆ ಹೆಣ್ಣು (ಮಂಗಳಾ / ಇಳಾ) ಎಷ್ಟೇ ಕಾನೂನು / ಕಟ್ಟಳೆಗಳನ್ನು ತಮ್ಮ ಉಪಯೋಗಕ್ಕೆ ಬಳಸಿಕೊಂಡರೂ ಕೊನೆಗೆ ಶೋಷಿತರಾಗುವುದು, ‘ಅಬಲೆ’ಯರಾಗುವುದು ನಮ್ಮ ಕಣ್ಣಿಗೆ ಕಾಣುವುದೇ ಇಲ್ಲ! ಈ ಕಾದಂಬರಿಯಲ್ಲೂ ಕೂಡ ನನಗೆ ಭೈರಪ್ಪನವರು ‘ಸ್ತ್ರೀ ಪರ’ ಎಂದೇ ತೋರುತ್ತದೆ. ಭೈರಪ್ಪನವರು ಕೂಡ ಒಬ್ಬ ಫೆಮಿನಿಸ್ಟ್ ಎಂದೇ ಹೇಳಬಹುದು. 

ತಮ್ಮನ್ನು ತಾವೇ ಮಹಿಳಾವಾದಿಗಳೆಂದು ಕರೆದುಕೊಳ್ಳುವವರಿಗೆ ನನ್ನ ಪ್ರಶ್ನೆ "ಫೆಮಿನಿಸ್ಮ್’ ಎಂದರೇನು? ಪ್ರಸ್ತುತ ಸಮಾಜದಲ್ಲಿ ಸ್ತ್ರೀವಾದ ಎಂಬುದನ್ನು ಹೆಚ್ಚಿನ ಸ್ತ್ರೀವಾದಿಗಳು ತಪ್ಪಾಗಿ ಅರ್ಥೈಸಿಕೊಳ್ತಿದ್ದಾರೇನೋ ಎಂದೆನಿಸುತ್ತದೆ. ಇಲ್ಲಿ ಮಂಗಳೆಯ ‘ಬರಿ ಹಣೆ’, ಬರಿ ಕಿವಿ, ಬಳೆ ಇಲ್ಲ, ಸಲ್ವಾರ್ ಕಮೀಜ್, ವೈಧ್ಯವ್ಯ ಅಥವಾ ಸೂತಕದ ಕಳೆ ಹಾಗೂ ವೈಜಯಂತಿಯ ಕುಂಕುಮ, ಮಲ್ಲಿಗೆಹೂವು ಇವೆಲ್ಲವೂ ಈ ಕಾದಂಬರಿಯಲ್ಲಿ ಇದ್ದರೂ ಅದನ್ನು ಡಿಬೇಟ್ ಮಾಡಿ ಎಲ್ಲಾ ಸ್ತ್ರೀ ವಾದಿಗಳು ತಮಗೆ ಅದು ಅನ್ವಯಿಸಿದ್ದೆಂದು ಬೈಯುವುದು ಅನಾವಶ್ಯಕ! ಇದು ಒಂದು ಹೆಣ್ಣನ್ನು ಹೀಗೆ ಇರಬೇಕು, ಎಂದು ಜಯಕುಮಾರ್ ನೋಡುವ ಚಿತ್ರಣ ಅಷ್ಟೆ. ಈ ವಿಷಯಕ್ಕೆ ಹೆಚ್ಚಿನ ಗಮನ ಕೊಡುವ ಅವಶ್ಯಕತೆಯೇ ಇಲ್ಲ. ಮಂಗಳೆ, ಇಳಾ ಇವರೆಲ್ಲರೂ ಸ್ವಘೋಷಿತ ಮಹಾನ್ ಸ್ತ್ರೀವಾದಿಗಳು. ಎಲ್ಲಾ ಸ್ತ್ರೀ ಪರ ಕಾನೂನುಗಳನ್ನು ಅರೆದು ಕುಡಿದಿದ್ದೇವೆ, ಇದರ ಮೂಲಕ ಗಂಡಸರನ್ನು ಆಟ ಆಡಿಸಿ ಗೆಲ್ಲುತ್ತೇವೆ ಎನ್ನುವಂತಹವರು. ಇವರಿಗೆಲ್ಲಾ ತಾವು ಫೆಮಿನಿಸ್ಟ್ಸ್ ಎಂದು ಕರೆದುಕೊಳ್ಳುವ ಹಂಬಲವಷ್ಟೆ. ಸಮಾಜದಲ್ಲಿ ಸ್ತ್ರೀವಾದಿಗಳೆಂದು ಕರೆದುಕೊಂಡರೆ ಸಿಗುವ ಪ್ರತಿಷ್ಠೆ / ಕೀರ್ತಿಗಾಗಿ ಅದರ ಮುಖವಾಡ ಹಾಕಿಕೊಂಡಿರುವವರು. ಆದರೆ ಆಂತರ್ಯದಲ್ಲಿ ಎಲ್ಲಿಯೂ ಫೆಮಿನಿಸ್ಮ್ ಅನ್ನುವುದು ಇವರಲ್ಲಿ ಕಾಣುವುದೇ ಇಲ್ಲ. ತಮ್ಮ ಸ್ವಾರ್ಥಕ್ಕಾಗಿ ಈ ಕಾನೂನುಗಳನ್ನು ಬಳಸಿಕೊಳ್ಳುವಂತಹವರು. ಇವರನ್ನು ನಿಜವಾಗಿಯೂ ಮೋಸ ಮಾಡುವುದು ಯಾರು? ಅದೇ ಮುಖವಾಡ ಹಾಕಿಕೊಂಡಂತಹ ಹಾಗೂ ಅದೇ ಸ್ತ್ರೀ ಪರ ಕಾನೂನುಗಳನ್ನು ತಮ್ಮ ಸ್ವಾರ್ಥಕ್ಕೆ ಬಳಸಿಕೊಂಡಂತಹ, ಈ ಮೂಲಕ ಸ್ತ್ರೀಯರನ್ನು ಶೋಷಣೆ ಮಾಡುವ ‘ಸ್ತ್ರೀವಾದಿ’ಗಳು ನಮ್ಮ ಗಮನಕ್ಕೆ ಬರುವುದೇ ಇಲ್ಲ. ಲಂಚ ತೆಗೆದುಕೊಳ್ಳುವ ಪೋಲೀಸ್ ಅಧಿಕಾರಿಣಿ, ಫೀಸ್ ತೆಗೆದುಕೊಳ್ಳುವ ಸ್ನೇಹಿತೆ ಲಾಯರ್ , ಕೆಲಸ ಮಾಡಿಸಿಕೊಂಡು ರೇಪ್ ಮಾಡುವ ಮತ್ತೊಬ್ಬ ಸ್ತ್ರೀವಾದಿ ನಮ್ಮ ಕಣ್ಣಿಗೆ ಕಾಣುವುದೇ ಇಲ್ಲ. ಈ ಸ್ವಘೋಷಿತ ಸ್ತ್ರೀವಾದಿಗಳು (ಇಳಾ, ಮಂಗಳೆ), ಇಷ್ಟೆಲ್ಲಾ ಸ್ತ್ರೀ ಪರ ಕಾನೂನುಗಳು ಇದ್ದರೂ ಗೆಲ್ಲಲಾಯಿತೇ? ಕೊನೆಗೂ ಇವರನ್ನು ಗಂಡಸರು ತಮ್ಮ ಹಣ / ಜಾಣತನದಿಂದ ಇದೇ ಕಾನೂನಿನ ಹುಳುಕುಗಳನ್ನು ಹಿಡಿದು ಶೋಷಣೆ ಮಾಡುತ್ತಾರೆ (೨ನೇ ಮದುವೆಯಾಗುವುದು ಸಲ್ಲ, ಹಾಗೇ ಹೀಗೇ). ಇದು ಮೇಲ್ನೋಟಕ್ಕ ಗೊತ್ತಾಗುವುದೇ ಇಲ್ಲ. ನಮ್ಮ ದೇಶದಲ್ಲಿ ಭ್ರಷ್ಟಚಾರ ಇರುವ ತನಕ ಯಾವುದೇ ಕಾನೂನು ಕಟ್ಟಳೆ ಮಾಡಿದರೂ ಯಾರೂ ಬೇಕಾದರೂ ತಪ್ಪಿಸಿಕೊಂಡುಬಿಡಬಹುದೆಂದು ಸೂಚ್ಯವಾಗಿ ಭೈರಪ್ಪನವರು ಹೇಳುತ್ತಾರೆ. 

‘ಕವಲು’ ನಲ್ಲಿ ನನಗೆ ನಿಜವಾದ ಫೆಮಿನಿಸ್ಟ್ ಅನ್ನಿಸಿದ್ದು ‘ವೈಜಯಂತಿ’. ಕುಂಕುಮ, ಮಲ್ಲಿಗೆ ಹೂವು ಮುಡಿದಾಕ್ಷಣ ಆಕೆ ಫೆಮಿನಿಸ್ಟ್ ಅಲ್ಲಾ ಎನ್ನುವುದು ನನಗೆ ಹಾಸ್ಯಾಸ್ಪದವಾಗಿ ತೋರುತ್ತದೆ. ತನ್ನ ಹುಳುಕುಗಳನ್ನು ಎಲ್ಲಿಯೂ ಗಂಡನಿಗೆ ಬಿಟ್ಟುಕೊಡದ ಈಕೆ ಮನೆಯಲ್ಲಿ, ಫ್ಯಾಕ್ಟರಿಯಲ್ಲಿ, ಮಗಳನ್ನು ಬೆಳೆಸುವಲ್ಲಿ ಎಲ್ಲೆಲ್ಲಿಯೂ ಕಾಣಿಸಿಬಿಡುತ್ತಾಳೆ. ಗಂಡನಿಗೆ ಇದು ತಿಳಿಯುವುದೇ ಇಲ್ಲ. ಜಯಕುಮಾರ್ ನನ್ನು ಮಂಗಳೆ ಗಿಂತ ಹೆಚ್ಚಾಗಿ ಶೋಷಣೆ ಮಾಡುವುದು ನನ್ನ ಪ್ರಕಾರ ವೈಜಯಂತಿ. ಈಕೆಯ ಮುಂದೆ ಅವನು ಡಮ್ಮಿಯಾಗಿಬಿಡ್ತಾನೆ. ಅವನ ಅಸ್ತಿತ್ವಕ್ಕೆ ಬೆಲೆಯೇ ಇಲ್ಲ. ಹಾಗಾಗಿಯೇ ಆಕೆ ಸತ್ತ ನಂತರ, ಆತನ ಫ್ಯಾಕ್ಟರಿ ಮುಚ್ಚಿ ಹೋಗಿಬಿಡುತ್ತದೆ. ಇದೇ ವೈಜಯಂತಿ ಬದುಕಿದ್ದರೆ ಫ್ಯಾಕ್ಟರಿ ಚೆನ್ನಾಗಿ ಇರುತ್ತಿತ್ತು, ಮಗಳನ್ನು ಚೆನ್ನಾಗಿ ಓದಿಸುತ್ತಿದ್ದಳು, ಜಯಕುಮಾರ್ ಇಷ್ಟು ಹಾಳಾಗುತ್ತಿರಲಿಲ್ಲ ಎಂಬಂತಹ ಶಾಶ್ವತ ಫೀಲಿಂಗ್ ಅನ್ನು ಹುಟ್ಟಿಸಿಬಿಡುತ್ತಾಳೆ. ಈ ಮೂಲಕ ನಿಜವಾದ ಫೆಮಿನಿಸ್ಮ್ ಅನ್ನು ಎತ್ತಿ ಹಿಡಿಯುತ್ತಾಳೆ. ಜಯಕುಮಾರ್ ನ ಜೀವನದ ಪ್ರತಿ ಹೆಜ್ಜೆ ಹೆಜ್ಜೆಯಲ್ಲೂ ನೆನಪಾಗಿ ಕಾಡುತ್ತಾಳೆ. ಆತ ಎರಡನೇ ಮದುವೆಯಾದರೂ, ಇವಳ ನೆನಪಿನಲ್ಲೇ ಕೊರಗುವಂತೆ ಮಾಡಿಬಿಡುತ್ತಾಳೆ.

ಊರು ಕೇರಿ - ಡಾ.ಸಿದ್ದಲಿಂಗಯ್ಯನವರ ಆತ್ಮಕಥನಡಾ.ಸಿದ್ದಲಿಂಗಯ್ಯನವರ ಊರು ಕೇರಿ - ಆತ್ಮಕಥನ ಓದ್ತಿದ್ದೆ. ಬಹಳ ಚೆನ್ನಾಗಿದೆ. ಅದರಲ್ಲಿನ ಒಂದು ಪುಟ ನನ್ನ ಗಮನವನ್ನು ಬಹಳ ಸೆಳೆಯಿತು. ಅದು ಹೀಗಿದೆ

ಶ್ರೀರಾಮಪುರದಲ್ಲಿ ಕನ್ನಡಿಗರು ಮತ್ತು ತಮಿಳರು ಒಟ್ಟಿಗೆ ಜೀವನ ಮಾಡುತ್ತಾರೆ. ಪಂಡಿತ ಶಿವಮೂರ್ತಿ ಶಾಸ್ತ್ರಿಗಳು, ವಾಟಾಳ್ ನಾಗರಾಜರ ಭಾಷಣಗಳಿಂದ ಪ್ರೇರಿತರಾದ ಜನ ಹೋರಾಟಕ್ಕಿಳಿದರು. ಬೆಂಗಳೂರಿನಿಂದ ಮುಂಬೈ ಕಡೆಗೆ ಹೋಗುತ್ತಿದ್ದ ರೈಲನ್ನು ತಡೆಯುವ ಚಳುವಳಿಯನ್ನು ಹಮ್ಮಿಕೊಂಡರು. ಈ ರೈಲು ತಡೆ ಚಳುವಳಿಗೆ ಸಾವಿರಾರು ಜನ ಸೇರಿದರು. ಮಹಾಜನ್ ವರದಿ ಜಾರಿಯಾಗಲಿ ಎಂಬುದು ಜನರ ಪ್ರಧಾನ ಘೋಷಣೆ ಆಗಿತ್ತು. ಪ್ರಾಣವನ್ನಾದರೂ ಕೊಟ್ಟೇವು, ಬೆಳಗಾವಿಯನ್ನು ಕೊಡುವುದಿಲ್ಲ ಎಂದು ಜನ ಒಕ್ಕೊರಲಿನಿಂದ ಕೂಗುತ್ತಿದ್ದರು. ಆ ದಿನದ ಚಳುವಳಿಯ ಮುಖ್ಯ ನಾಯಕರು ಐದು ಜನ ರೈಲು ಹಳಿಗಳ ಮೇಲೆ ಅಡ್ಡಲಾಗಿ ಮಲಗಿಬಿಟ್ಟರು. ರೈಲು ಬರುವ ಸದ್ದು ಕೇಳಿಸಿತು. ರೈಲು ಹಳಿಗಳ ಎರಡೂ ಪಕ್ಕದಲ್ಲಿ ನೆರೆದಿದ್ದ ಜನರ ಹೃದಯ ಹೊಡೆದುಕೊಳ್ಳತೊಡಗಿತು. ಘೋಷಣೆ ಮುಗಿಲು ಮುಟ್ಟಿದವು. ರೈಲು ಬರುವುದು ಕಾಣತೊಡಗಿತು. ಜನರ ಆತಂಕ ಹೇಳತೀರದು. ಹಳಿಗಳ ಮೇಲೆ ಮಲಗಿದ್ದವರಲ್ಲಿ ಒಬ್ಬರು ದೂರದಲ್ಲಿ ರೈಲು ಕಾಣುತ್ತಿದ್ದಂತೆ ಪ್ರಾಣಭೀತಿಯಿಂದ ಮೆಲ್ಲಗೆ ಎದ್ದು ಪಕ್ಕಕ್ಕೆ ಬಂದು ಬೆವರು ಒರೆಸಿಕೊಳ್ಳತೊಡಗಿದರು. ಇನ್ನೇನು ರೈಲು ಬಂದೇಬಿಟ್ಟಿತ ಎನ್ನುವಷ್ಟರಲ್ಲಿ ಇನ್ನು ಮೂವರು ಎದ್ದು ಬಂದು ಜನರಲ್ಲಿ ಸೇರಿಕೊಂಡರು. ರೈಲು ಹಳಿಗಳ ಮೇಲೆ ಉಳಿದವರೊಬ್ಬರೇ. ಅವರು ಮಹಾಜನ್ ವರದಿ ಜಾರಿಯಾಗಲಿ ಎಂದು ಕೂಗುತ್ತಾ ಅವರೊಬ್ಬರೇ ಮಲಗಿದ್ದರು. ಕರುಣೆಯಿಲ್ಲದ ರೈಲು ಅವರ ಮೇಲೆ ಹರಿಯಿತು. ಜನ ಕಣ್ಣೀರು ಹಾಕಿದರು. ಆ ದಿನ ರೈಲು ತಡೆ ಹೋರಾಟದಲ್ಲಿ ಬಲಿಯಾದವರು ಗೋವಿಂದರಾಜು. ಅವರು ತಮಿಳರು. ರೈಲು ಹಳಿಗಳ ಮೇಲೆ ಮಲಗಿದ್ದು ರೈಲು ಬರುತ್ತಿದ್ದಂತೆ ಎದ್ದು ಓಡಿದ ನಾಲ್ಕು ಜನ ಅಚ್ಚ ಕನ್ನಡಿಗರು.

ಪರ್ವ - ನನ್ನದೊಂದು ಅನಿಸಿಕೆ!


ಪರ್ವ ಓದಲು ಶುರು ಮಾಡಿದಂದಿನಿಂದ ಬೇರಾವುದನ್ನೂ ಓದಲಾಗಲೇ ಇಲ್ಲ.    ಪರ್ವ -  ನನ್ನ ಇಷ್ಟು ವರ್ಷಗಳ ಓದಿನಲ್ಲಿ ನನ್ನ ಮನದ ಮೇಲೆ ಬಹು ಪರಿಣಾಮ ಬೀರಿದ ಪುಸ್ತಕ.  ಕುಳಿತಿದ್ದರೂ, ನಿಂತಿದ್ದರೂ, ಕನಸಿನಲ್ಲೂ, ಪಾತ್ರಗಳ ಗುಂಗು.  ಪ್ರತಿಯೊಂದು ಪಾತ್ರದ ಚಿತ್ರಣವನ್ನು ಓದುತ್ತಿದ್ದಾಗಲೂ ನಾನೇ ಆ ಪಾತ್ರವೇನೋ ಎಂಬಂತಹ, ನನ್ನ ಬಗ್ಗೆಯೇ ಬರೆದಿದ್ದಾರೋ ಎಂಬಂತಹ ಭಾವ ಮನದೊಳಗೆ ಆವರಿಸಿಬಿಡುತ್ತಿತ್ತು.  ನಾನೇ ಕುಂತಿ ಯಾಗಿದ್ದೆ, ನಾನೇ ದ್ರೌಪದಿಯಾಗಿದ್ದೆ, ನಾನೇ ಎಲ್ಲವೂ ಆಗಿದ್ದೆ.  ಪ್ರತಿಯೊಂದು ಪಾತ್ರವನ್ನು ಕಲ್ಪನೆಯಲ್ಲಿ ಅನುಭವಿಸುತ್ತಿದ್ದೆ. ಹಾಗಾಗಿ ಆಯಾ ದಿನಗಳಂದು ಕನಸಿನಲ್ಲಿಯೂ ಕೂಡ ನಾನೇ ಆ ಪಾತ್ರವಾಗಿದ್ದೆ.  ಯಾಕೆ ಹೀಗೆ ನನ್ನ ಮನಸ್ಸನ್ನು ಪರ್ವ ಕಾಡಿತು? ಎಂಬ ಪ್ರಶ್ನೆ ಮನವನ್ನು ಬಹಳ ಕಾಡತೊಡಗಿತು.  ಉತ್ತರ ನನಗೆ ಹೊಳೆದಿದ್ದೇನೆಂದರೆ ಬಹುಶಃ ಚಿಕ್ಕಂದಿನಿಂದಲೂ ಅಮ್ಮ, ಮಾವ, ಅಜ್ಜಿಯ ಬಾಯಿಯಲ್ಲಿ ಕೇಳಿದ ಮಹಾಭಾರತದ ಕಥೆಗಳು, ಕುಂತಿ, ಭೀಷ್ಮ, ಪಾಂಡವರು ಎಲ್ಲದಕ್ಕಿಂತ ಹೆಚ್ಚಾಗಿ ಶಾಲೆಗಳಲ್ಲಿ ಸ್ಪರ್ಧೆಗಾಗಿ ಬಾಯಿ ಪಾಠ ಮಾಡಿದ್ದ ಭಗವದ್ಗೀತೆ, ಅದರಲ್ಲಿನ ಕೃಷ್ಣನ ಪಾತ್ರ, ಇವರೆಲ್ಲಾ ನಮಗೆ ಚಿರಪರಿಚಿತರೇನೋ ಎಂಬಂತಹ ಭಾವ ಮೂಡಿಸಿತ್ತೆಂದು ಕಾಣುತ್ತದೆ.  ನನಗೆ ಗೊತ್ತಿಲ್ಲದೆಯೇ ನನ್ನ ಮನದ ಕಲ್ಪನೆಯಲ್ಲಿ ಇವರೆಲ್ಲರ ಬಗ್ಗೆಯೂ ಒಂದು ಚಿತ್ರಣವನ್ನು ಕಟ್ಟಿಕೊಂಡಿದ್ದೆನೆಂದು ತೋರುತ್ತದೆ.  ಜೊತೆಗೆ ಭೈರಪ್ಪನವರ ಬರವಣಿಗೆಯ ಶೈಲಿ (ಇವರ ಬಗ್ಗೆ ಮಾತನಾಡಲು ತೀರಾ ಚಿಕ್ಕವಳು) ಒಂದೊಂದು ಪಾತ್ರವೂ ತನ್ನ ಅಸ್ತಿತ್ವ, ತನ್ನ ಅನಿಸಿಕೆ, ಅಭಿಪ್ರಾಯ, ತನ್ನ ಚಿಂತನೆಗಳನ್ನು ಹೇಳಿದಾಗ ಮನಸ್ಸನ್ನುಬಹು ಗಾಢವಾಗಿ ತಟ್ಟಿ ಮನ ಚಿಂತಿಸಲು ಶುರುಮಾಡತೊಡಗಿತು. 
ಮೊದಲ ೩೦ ಪುಟಗಳನ್ನು ಬಹು ಬೇಸರದಲ್ಲಿಯೇ ತಿರುವಿ ಹಾಕಿದ ನಾನು, ಪರ್ವ ಚೆನ್ನಾಗಿಲ್ಲ ಎಂದು ನಿಶ್ಚಯಿಸಿ ನಿಲ್ಲಿಸಿಬಿಡಲೇ ಎಂದೆಣಿಸಿದ್ದೆ.  ಕುಂತಿಯ ಪಾತ್ರದ ಚಿತ್ರಣ ಶುರುವಾದಾಗ ಸ್ವಲ್ಪ ಸ್ವಲ್ಪ ಇಷ್ಟವಾಗತೊಡಗಿದ್ದು, ಆಕೆಯ ಭಾವನೆಗಳು, ಪಾಂಡುರಾಜನ ನಿರ್ವೀಯತೆ, ನಿಯೋಗದಂತಹದಕ್ಕೆ ತನ್ನನ್ನು ತಾನು ಒಪ್ಪಿಕೊಂಡಿದ್ದು, ಮರುತ್ತನಲ್ಲಿ ಅನುರಾಗ, ಇಂದ್ರನಲ್ಲಿ ಸುಖ, ಮಾದ್ರಿಗೆ ಅವಳಿ ಮಕ್ಕಳಾದಾಗ ಅಸೂಯೆ…. ಓಹ್! ನಾನೇ ಕುಂತಿಯಾಗಿಬಿಟ್ಟಿದ್ದೆ.  ಈಗ ಓದಿಗೊಂದು ಗತಿ ಸಿಕ್ಕಿತು.  ಒಂದೇ ಉಸಿರಿನಲ್ಲಿ ಓದತೊಡಗಿದ ನಾನು ಪೂರ್ತಿ ಓದಿಯೇ ನಿಲ್ಲಿಸಿದ್ದು.  ಪೂರ್ತಿ ಓದಿದ ಮೇಲೆ ಬಹುಶಃ ಒಂದು ದಿನ ಪೂರ್ತಿ ಏನು ಮಾಡಲು ತೋಚಲಿಲ್ಲ. ದೇಹಕ್ಕೋ, ಮನಸ್ಸಿಗೋ ಸುಸ್ತಾಗಿದ್ದು ಏನೊಂದು ತಿಳಿಯದ ಹಿಂದೆಂದೂ ಆಗಿರದಂತಹ ವಿಚಿತ್ರ ಅನುಭವ!    ಹಸಿವು, ನೀರಡಿಕೆಗಳೊಂದು ತಿಳಿಯದಂತಹ ವಿಚಿತ್ರ ಸ್ಥಿತಿ!  ನಾನ್ಯಾರು ಎಂಬುದನ್ನೇ ಮರೆತುಬಿಟ್ಟಿದ್ದೆ.  ಈ ಮಹಾಭಾರತದ ಯುದ್ಧದಿಂದ ಆದ ಪ್ರಯೋಜನವೇನು? ಯಾರಿಗೆ ಏನು ದೊರಕಿತು? ಯಾರ ಗೆಲುವು,  ಯಾರ ಸೋಲು? ಪಾಂಡವರು ಗೆದ್ದರೇ? ಯಾರೂ ಗೆಲ್ಲಲಿಲ್ಲ.  ಬರೀ ಸಾವು, ನೋವು, ನಷ್ಟ.  ಇಷ್ಟೆಯೇ ಜೀವನ? 
ಇಡೀ ಪರ್ವದುದ್ಧಕ್ಕೂ ಕಂಡು ಬಂದಿದ್ದು, ಜೂಜು, ಮದ್ಯ, ತೀರದ ಲೈಂಗಿಕ ತೃಷೆ!  ಸಾಮ್ರಾಜ್ಯ ವಿಸ್ತರಣೆ, ಯುದ್ಧ, ಸಾವು, ನೋವು, ನಷ್ಟ, ಋತುಸ್ರಾವ ನಷ್ಟವಾದರೆ ನರಕಕ್ಕೆ ಹೋಗುವ ಭಯ! ಹೆಂಗಸರೆಂದರೆ ಮಕ್ಕಳನ್ನು ಹುಟ್ಟಿಸುವ ಯಂತ್ರಗಳೇನೋ ಎಂಬಂತೆ ಭಾಸವಾಗುತ್ತದೆ. ಹೆಣ್ಣು ಬರೀ ಸಂತಾನ  ಬೆಳೆಸುವ ಸಾಧನವಾದರೆ ಮದುವೆಯಾಗುವ ಜಂಜಾಟ ಏಕೆ ಬೇಕು ಎಂಬುದು ಮನಸ್ಸಿಗೆ ಒಂದು ಕ್ಷಣ ಅನ್ನಿಸದೆ ಇರುವುದಿಲ್ಲ. 

ತೀರ ಕಾಡಿದ ಪಾತ್ರಗಳು - ಕುಂತಿ, ಗಾಂಧಾರಿ, ದ್ರೌಪದಿ, ಕೃಷ್ಣ, ಕರ್ಣ, ಮರುತ್ತ, ಭೀಮ, ಅರ್ಜುನ, ಭೀಷ್ಮ, ದ್ರೋಣ.
ಅವಿವಾಹಿತ ತಾಯಿಯಾದವಳನ್ನು ಒಪ್ಪುತ್ತಿದ್ದ ಸಮಾಜಕ್ಕೆ ಕುಂತಿಯ ಕಾಲದಲ್ಲಿ ಸ್ವಲ್ಪ ಸ್ವಲ್ಪ ಬದಲಾವಣೆಯಾಗುತ್ತದೆ.  ಹಾಗಾಗಿಯೇ ಕರ್ಣನ ಜನನವನ್ನು ಕುಂತಿಯ ತಂದೆ ತಾಯಿ ಮುಚ್ಚಿಡುತ್ತಾರೆ. ಪಾಂಡುರಾಜನ ಲೈಂಗಿಕ ಅಶಕ್ತತೆ ಮೊದಲ ದಿನವೇ ಗೊತ್ತಾದರೂ ಮುಚ್ಚಿಡುವ ಕುಂತಿ, ಮಾದ್ರಿಯನ್ನು ವಧು ದಕ್ಷಿಣೆ ಕೊಟ್ಟು, ಆಕೆಯನ್ನು ಒಂದು ವಸ್ತುವಿನಂತೆ ಕೊಂಡುಕೊಂಡು ಬರುವ ಪದ್ಧತಿ,  ಚಿಕಿತ್ಸೆಗಾಗಿ ಹಿಮಾಲಯಕ್ಕೆ ಹೊರಡುವ ಪಾಂಡು ಮಹಾರಾಜ, ಅವರನ್ನು ಹಿಂಬಾಲಿಸುವ ಪತ್ನಿಯರು, ಇತ್ತ ದೃತರಾಷ್ಟ್ರ ನಿಗೆ ಪಟ್ಟ ಕಟ್ಟಿ ಅವನಿಗೆ ಗಾಂಧಾರಿಯನ್ನು ಮದುವೆ ಮಾಡಿಸುವ ಭೀಷ್ಮ!   ಅವರಿಗೆ ಮಕ್ಕಳಾದರೆ ತಾನು ದಿಗ್ವಿಜಯ ಮಾಡಿ ವಿಸ್ತರಿಸಿದ ಸಾಮ್ರಾಜ್ಯ ತನ್ನ ಕೈ ತಪ್ಪಿಹೋಗುವುದೆಂಬ ಪಾಂಡು ರಾಜನ ಭಯ.   ತನಗೊಬ್ಬ ಕಾನೀನ ಪುತ್ರ ನಿದ್ದಾನೆಂದೂ ತಿಳಿಸುವ ಕುಂತಿ, (ಮದುವೆಗೆ ಮುಂಚೆಯೇ ಹುಟ್ಟಿದ ಪುತ್ರ ಕರ್ಣ),   ಆದರೆ ಅವನ ಸ್ವೀಕಾರ ಮದುವೆಯಲ್ಲೇ ಆಗಿದ್ದರೇ ಜನ ಒಪ್ಪುತ್ತಿದ್ದರೆಂದೂ ತನ್ನ ನಿಸ್ಸಹಾಯಕತೆಯನ್ನು  ತೋಡಿಕೊಳ್ಳುವ ಪಾಂಡು, ಪತಿಯು ಅಶಕ್ತನಾದರೆ ಅಥವಾ ಮಕ್ಕಳಿಲ್ಲದೆ ಸತ್ತರೆ ಅವನ ವಂಶಾಭಿವೃದ್ಧಿಗಾಗಿ ಅವನ ಹೆಂಡತಿಗೆ ನಿಯೋಗ ಮಾಡಿಸಬಹುದೆಂದು ಕುಂತಿಯನ್ನು ಒಪ್ಪಿಸುತ್ತಾನೆ.  ಆದರೆ ಅದರ ಜೊತೆಗೊಂದು ಅಸಾಧ್ಯದ ಪ್ರಮಾಣ ‘ಈ ಪುರುಷನೊಡನೆ ನಾನು ಮೋಹಗೊಳ್ಳುವುದಿಲ್ಲ, ಅವನು ಸಮೀಪಸ್ಥನಾಗಿರುವಾಗ ನನ್ನ ಮನಸ್ಸೆಲ್ಲಾ ಪತಿಯಲ್ಲಿ ಲೀನವಾಗಿರುತ್ತದೆ, ಸಂತಾನಾಪೇಕ್ಷೆಯ ವಿನಾ ನನ್ನಲ್ಲಿ ಬೇರೆ ಬಯಕೆ ಇರುವುದಿಲ್ಲ, ಗರ್ಭ ಕಟ್ಟಿದುದು ಖಚಿತವಾದ ತಕ್ಷಣ ನಾನು ಈತನನ್ನು ಪಿತೃಸಮಾನವೆಂದು ಭಾವಿಸಿ ದೂರವಾಗುತ್ತೇನೆ!’  ದೇವ ಲೋಕದ ಧರ್ಮಾಧಿಕಾರಿಯಾದ ಯಮನೊಂದಿಗೆ ನಿಯೋಗ, ಧರ್ಮನ ಜನನ, ಆದರೆ ಮಗು ತೀರ ಗಂಭೀರ, ಹಾಗೂ ಮೈಕಟ್ಟು ಸಣ್ಣದಾಗಿರುವುದರಿಂದ ಪಾಂಡುರಾಜನಿಗೆ ತನಗೆ ಕೀರ್ತಿ ದೊರಕಿಸಿಕೊಡುವಂತಹ ಕ್ಷತ್ರಿಯ  ವೀರಪುತ್ರನ ಬಯಕೆ.  ಮತ್ತೆ ದೇವಲೋಕದ ಸೈನ್ಯಾಧಿಕಾರಿಯಾದ ಮರುತ್ತನೊಂದಿಗೆ ಕುಂತಿಯ ನಿಯೋಗ, ಮತ್ತೆ ಪ್ರಮಾಣ.  ಬಲಿಷ್ಟನಾದ , ಎತ್ತರದ, ದೊಡ್ಡ ದೇಹದವನಾದರೂ ಮರುತ್ತ ಮಗುವಿನಂತೆ ಕುಂತಿಯ ತೋಳಿನಲ್ಲಿ ಕ್ಷೇಮ ಭಾವ ದೊರಕಿತೆಂದು ಹೇಳುವಾಗ ಕುಂತಿಗೆ ಅವನಲ್ಲಿ ಉಂಟಾಗುವ ಅನುರಾಗ.  ಆಕೆ ತನ್ನೊಂದಿಗೆ ಬರುವುದಾದರೆ ಇನ್ನಾವ ಹೆಂಗಸರ ಸಂಗವನ್ನೂ ಮಾಡುವುದಿಲ್ಲವೆಂಬ ಭಾಷೆ ನೀಡುವ ಮರುತ್ತ. ‘ಸ್ವಯಂವರಕ್ಕೆ ಬೇಕಾದವರು, ಬೇಡವಾದವರು ಎಲ್ಲರೂ ಬಂದಿರುತ್ತಾರೆ.  ಎಲ್ಲ ರಾಜರೂ ಒಟ್ಟು ಸೇರುವ ಸಮಾರಂಭವಾದುದರಿಂದ ಜೂಜಾಡುವವರು, ಮದ್ಯಪಾನಕ್ಕೆ ಜೊತೆ ಬಯಸುವವರೆಲ್ಲರೂ ತುಂಬುತ್ತಾರೆ.  ಇವಳ ಕೈ ಹಿಡಿದರೆ ತಾನು ಸಾರ್ಥಕನೆಂಬ ಅನನ್ಯ ಉತ್ಕಟತೆಯಿಂದ ಯಾರೂ ಬಂದಿರುವುದಿಲ್ಲ.  ಈಗ ಅವರನ್ನೆಲ್ಲಾ ಮೀರಿಸಿರುವ ಈ ವೀರ್ಯವಂತನು ತನಗಾಗಿ ಸ್ತ್ರೀಸಂಗ ವ್ಯಸನವನ್ನು ತ್ಯಜಿಸಿ ನನ್ನ ಹಸ್ತವನ್ನು ಯಾಚಿಸುತ್ತಿದ್ದಾನೆ. ಹೆಣ್ತನದ ಸಾರ್ಥಕತೆಯ ಅನುಭವ.     
ಆತನೊಂದಿಗೆ ಹೊರಟುಬಿಟ್ಟರೇ ಎಂಬ ಭಯದಿಂದ ಇತ್ತ ವಚನವನ್ನು ನೆನಪಿಸಿ ತನ್ನ ಇಡೀ ಸುಖದ ಬಲಿಯನ್ನು ಬೇಡಿದ ಸ್ವಾರ್ಥಿ ಗಂಡ.  ಇಂದ್ರನ ಮಾತುಗಳಿಗೆ ಬಲಿಯಾದ ಪಾಂಡು, ಮತ್ತೆ ಇಂದ್ರನೊಂದಿಗೆ ನಿಯೋಗಕ್ಕೆ ಸಿದ್ಧಳಾದ ಕುಂತಿ.  ಆದರೆ ಈತ ಹಿಂದಿನವರಂತೆ ಹೆಂಡತಿಯಾಗೆಂದು ಕೇಳಲಿಲ್ಲ, ಭಾವನೆಗಳಲ್ಲಿ ಕಟ್ಟಿ ಹಾಕಲಿಲ್ಲ, ಸಂಗಡ ಬಾ ಎಂಬ ಧರ್ಮಸಂಕಟವನ್ನುಂಟು ಮಾಡಲಿಲ್ಲ.  ಒಂದು ರೀತಿಯ ನಿರಾಳ ಹಾಗೂ ಸಂತೃಪ್ತ ಭಾವ, ಅರ್ಜುನನ ಜನನ.  ಮಾದ್ರಿಯ ಋತುಸ್ರಾವ ನಷ್ಟವಾಗುತ್ತಿದ್ದರಿಂದ ಕುಂತಿಗೆ ಅವಳ ಮೇಲೆ ಕರುಣೆ, ಅಶ್ವಿನಿ ವೈದ್ಯರಿಂದ ನಿಯೋಗ. ಅವಳಿ ಪುತ್ರ ನಕುಲ, ಸಹದೇವ ರ ಜನನ.  ತನ್ನದಕ್ಕಿಂತ ಇವಳ ಹೊಟ್ಟೆ ಶಕ್ತಿಯುತವಾದದ್ದೆಂದು ಕುಂತಿಗೆ ಅಸೂಯೆ, ಇನ್ನೊಮ್ಮೆ ಅವಕಾಶ ಸಿಕ್ಕರೆ ಅವಳ ಸ್ಥಾನ ತನ್ನದನ್ನು ಮೀರಿಬಿಟ್ಟರೆ ಎಂಬ ಅಸೂಯೆಯಿಂದ ಧರ್ಮವು ಲಂಪಟತನವಾಗಬಾರದೆಂಬ ಕಾರಣ ಕೊಟ್ಟು ನಿಯೋಗ ಸಾಕೆಂದ ಕುಂತಿ. ಲೈಂಗಿಕ ಅತೃಪ್ತಿಯಿಂದಾಗಿ ಪಾಂಡು ರಾಜನ ಮರಣ, ತಾನೇ ಅದಕ್ಕೆ ಕಾರಣಳಾದೆನೆಂದು ಮಾದ್ರಿಯ ಸಹಗಮನ. 
ಪರ್ವ ಓದಿದ ನನ್ನ ಅನುಭವವನ್ನು ಬರೆಯತೊಡಗಿದರೆ ಮತ್ತೊಂದು ಪರ್ವವೇ ಆಗಿಬಿಡಬಹುದೆಂಬ ಸಂಶಯವೂ ಇದೆ. ಪರ್ವದ ಪ್ರತಿಯೊಂದು ವಾಕ್ಯವನ್ನೂ ಇಲ್ಲಿ ಉಲ್ಲೇಖಿಸುವ ಮನಸ್ಸಾಗುತ್ತದೆ. ಕುಂತಿಯ ಬಗ್ಗೆ ಮಾತ್ರ ಬರೆಯಲು ಸಾಧ್ಯವಾಯಿತು ನನಗೆ

ಪರ್ವದಿಂದ ಆಯ್ದ ಮಾತುಗಳು

ಯಾವುದೋ ಕಾಲದ ವ್ಯಕ್ತಿ ಸಂಗತಿಗಳು ನಮ್ಮ ಕಾಲದವಾಗಿ, ನಮಗೆ ತೀರ ಹತ್ತಿರದವಾಗಿ ಮಾರ್ಪಡುವ ಕಲಾಕೌಶಲವನ್ನು ಈ ಕಾದಂಬರಿ ತೋರಿಸುತ್ತದೆ. ನಾನು ಬರೆಯುತ್ತಿರುವುದು ಭಾರತ ಪಾತ್ರಗಳ ಕಥೆಯನ್ನಲ್ಲ. ಮಾನವ ಅನುಭವದ ವಿವಿಧ ಮುಖ, ರೂಪ, ಮಾನವಸಂಬಂಧ ಸ್ವರೂಪ, ಮತ್ತು ವಿವೇಚನೆಗಳನ್ನು ಎಂಬ ಪ್ರಜ್ಞೆ ನನಗೆ ಉದ್ದಕ್ಕೂ ಇತ್ತು. ಒಂದೊಂದು ಹೊಸ ಪಾತ್ರ ಅಥವಾ ಸನ್ನಿವೇಶವನ್ನು ಬರೆಯುವಾಗಲೂ ಇವುಗ ಹೊಸ ಹೊಸ ಆಯಾಮವನ್ನು ಗೋಚರಿಸುತ್ತಿದ್ದವು. ಸಿದ್ಧತೆಯ ಹಲವು ಮಜಲುಗಳಲ್ಲಿ ನನ್ನ ಕಲ್ಪನೆಗೆ ಗೋಚರಿಸಿದ್ದುದ್ದಕ್ಕಿಂತ ಅಭಿವ್ಯಕ್ತ ಕಾದಂಬರಿಯಾಗಿ ಇದು ತಾಳಿರುವ ಸ್ವರೂಪ ಮತ್ತು ಒಟ್ಟಂದದ ಅರ್ಥಗಳು ಸಂಪೂರ್ಣ ಬೇರೆಯಾಗಿವೆ. ಪರ್ವ ಬರೆದ ಅನುಭವವು ನನ್ನಲ್ಲಿ ಹೊಸ ಭಾವ ತಂದಿತ್ತು. ನನಗೆ ಹೊಸ ಹುಟ್ಟು ಕೊಟ್ಟಿತ್ತು. ರೂಢಿಯೇ ನಮ್ಮ ಬಹುತೇಕ ನಂಬಿಕೆಗಳ ಮೂಲ. ಇವನ್ನೆಲ್ಲ ಬಿಟ್ಟು ಜೀವನದ ಕೊನೆಯ ಸಾವಿನ ದೃಷ್ಟಿಯಿಂದ ಜೀವನವನ್ನು ನೋಡಿದರೆ ಹೊಸ ಅರಿವು ಹುಟ್ಟಬಹುದು ಎಂಬ ಭಾವ ಬೆಳೆದಿತ್ತು.

ಮದುವೆಗೆ ಮೊದಲು ಹುಡುಗಿಗೆ ಮಗುವಾಗುವುದೂ ತಪ್ಪಂತೆ, ನಿಯೋಗವೂ ಸರಿಯಲ್ಲವಂತೆ. ಹಿರಿಯ ಪದ್ದತಿಯೇ ತಪ್ಪೇ, ಹೆಂಗಸಿನ ಒಂದೊಂದು ಋತುಚಕ್ರ ಕಾಲದಲ್ಲಿಯೂ ಬೀಜ ಬಿತ್ತದೆ ಹಾಳು ಬಿಟ್ಟರೆ ಭೂಮಿಯನ್ನು ಬರಡು ಮಾಡಿದಷ್ಟು ಪಾಪ, ಗಂಡ ಊರಿನಲ್ಲಿ ಇಲ್ಲದಿದ್ದರೆ ಗುರು ಪತ್ನಿಯರು ಶಿಷ್ಯನನ್ನೇ ಕರೆದ ಗುರುಪತ್ನಿಯರ ಕಥೆಯಿದೆ! ಕಾನೀನ ಪುತ್ರ ಒಪ್ಪಿಗೆ, ಹೆಮ್ಮೆ ಕೂಡ (ಶಲ್ಯರಾಜ, ಮಾದ್ರಿಯ ಅಣ್ಣ)

ಕುರುಕುಲ ಬೆಳೆಯಬೇಡವೇ? ಈ ವಂಶಕ್ಕೆ ಸೊಸೆಯಾಗಿ ಬಂದ ನೀನು ಹೀಗನ್ನಬಹುದೇ? (ಪಾಂಡು)

ಸೊಸೆಯ ಮಕ್ಕಳು ಮಗನ ಮಕ್ಕಳೇಕೆ ಆಗುವುದಿಲ್ಲ? ಯುದ್ಧದಲ್ಲಿ ಗೆಲ್ಲಲಾರದು, ಕುಂತಿ ಸೋಲುವುದಿಲ್ಲ. ವಧುದಕ್ಷಿಣೆ ಪಡೆದು ಮದುವೆಯಾದ ಹೆಣ್ಣು ಗಾಂಧಾರಿ. ದೇವಜನರಲ್ಲಿ ಯಾವ ಹೆಂಗಸು ತನ್ನ ಗಣದ ಯಾವ ಗಂಡಸನ್ನಾದರೂ ಕೂಡಬಹುದು. ಗಂಡಸೇ ಆಗಲಿ, ಹೆಂಗಸೇ ಆಗಲಿ ಯಾರು ಯಾರನ್ನು ಕರೆದರೂ ನಿರಾಕರಿಸುವಂತಿಲ್ಲ. ಗಂಡಸು ಹೆಂಗಸು ಇಬ್ಬರಿಗೂ ಸಮಾನ ಅಧಿಕಾರ. ಹುಟ್ಟುವ ಮಕ್ಕಳು ಇಡೀ ಗಣಕ್ಕೆ ಸೇರಿದವು. ಎಲ್ಲರಿಗೆ ಎಲ್ಲರೂ ಗಂಡಂದಿರು, ಹೆಂಡತಿಯರು. ಸಂಕೋಚವಿಲ್ಲ, ನಾಚಿಕೆಯಿಲ್ಲ. ಭೇದ ಮಾಡಿದರೆ ಗಣಮುಖ್ಯನು ಶಿಕ್ಷಿಸುತ್ತಾನೆ. 

ಪತಿಯು ಅಶಕ್ತನಾದರೆ, ಅಥವಾ ಮಕ್ಕಳಿಲ್ಲದೆ ಸತ್ತರೆ ಅವನ ವಂಶಾಭಿವೃದ್ಧಿಗಾಗಿ ಅವನ ಹೆಂಡತಿಗೆ ನಿಯೋಗ ಮಾಡಿಸುವುದು. ಪಾಂಡು ರಾಜ ನನ್ನಿಂದ ಪ್ರಮಾಣ ಮಾಡಿಸಿಕೊಂಡ. ಈ ಪುರುಷನೊಡನೆ ನಾನು ಮೋಹಗೊಳ್ಳುವುದಿಲ್ಲ. ಅವನು ಸಮೀಪಸ್ಥನಾಗಿರುವಾಗ ನನ್ನ ಮನಸ್ಸೆಲ್ಲಾ ಪತಿಯಲ್ಲಿ ಲೀನವಾಗಿರುತ್ತದೆ. ಸಂತಾನಾಪೇಕ್ಷೆಯ ವಿನಾ ನನ್ನಲ್ಲಿ ಬೇರೆ ಬಯಕೆ ಇರುವುದಿಲ್ಲ. ಗರ್ಭ ಕಟ್ಟಿದುದು ಖಚಿತವಾದ ತಕ್ಷಣ ನಾನು ಈತನನ್ನು ಪಿತೃಸಮಾನನೆಂದು ಭಾವಿಸಿ ದೂರವಾಗುತ್ತೇನೆ. (ಕುಂತಿ)

ಯಮ ಹೇಳಿದ್ದು ‘ರಾತ್ರಿಗೆ ತನಗೆ ಯಾವ ಗಂಡ ಬರುತ್ತಾನೋ, ಯಾವ ಹೆಂಡತಿ ಬರುತ್ತಾಳೋ ನಮ್ಮಲ್ಲಿ ಯಾರಿಗೂ ಗೊತ್ತಿರುವುದಿಲ್ಲ. ನಮ್ಮ ಹೆಂಗಸರು ಸುಖಕ್ಕೆ ತಗಾದೆ ಮಾಡುತ್ತಾರೆ. ನಿನ್ನ ಹಾಗೆ ಸೇವೆ ಮಾಡುವಿದಿಲ್ಲ. ಪಾಂಡು ಧರ್ಮಾಧಿಕಾರಿಗೆ ಭಾರಿ ಔತಣವೇರ್ಪಡಿಸಿ ಕೃತಜ್ಞತೆ ಸಲ್ಲಿಸಿದ. 

ಊಟವಾಗುವ ವೇಳೆಗೆ ಸಂಜೆಯಾಗಿತ್ತು. ಅವನನ್ನು ಪಕ್ಕದ ಗುಡಿಸಿಲಿನಲ್ಲಿ ಮಲಗಲು ವ್ಯವಸ್ಥೆ ಮಾಡಿದ್ದ. ತಾನು ಮಾತ್ರ ತನ್ನ ವಂಶದ ಮೊಳಕೆಯ ಹೊಟ್ಟೆಯನ್ನು ತನ್ನ ಕೈಯಿಂದ ಸವರಿ ಸವರಿ ಹಿಗ್ಗುವುದಕ್ಕೆ. ನನ್ನ ದುಃಖ ದುಮ್ಮಾನ ತಿರಸ್ಕಾರಗಳನ್ನು ಯಾರು ಅರಿಯಬೇಕು? ಬೆಳಗೆದ್ದು ಅತಿಥಿ ಹೊರಡುವಾಗ ಗಟ್ಟಿಯಾಗಿ ಕಾಲು ಹಿಸುಕಿ ನಮಸ್ಕರಿಸಿದೆ. ಧರ್ಮಾಧಿಕಾರಿ, ನಿನ್ನ ಮಗಳಿಗೆ ಆಶೀರ್ವದಿಸು. (ಕುಂತಿ)

ಕ್ಷತ್ರಿಯನಿಗೆ ಕೀರ್ತಿ ಬರುವುದು ವೀರಪುತ್ರನಿಂದ. ನಿನ್ನಂತಹ ದೊಡ್ಡ ಹೆಂಗಸಿನ ಹೊಟ್ಟೆಯಲ್ಲಿ ಇಷ್ಟು ಸಾಮಾನ್ಯ ಕಟ್ಟಿನ ಮಗು ಹುಟ್ಟಿದರ ಕಾರಣ ವೀರ್ಯದ್ದೇ. ಸರಿಯಾದ ವೀರ್ಯವಂತನಿಂದ ಸ್ವೀಕರಿಸಿ ನೀನು ಒಬ್ಬ ಬಲಶಾಲಿ ಮಗನನ್ನು ಹೆತ್ತು ಕೊಟ್ಟರೆ ನನಗೆ ಸಮಾಧಾನ. ಹೆಂಗಸಿನ ತೋಳಿನಲ್ಲಿರುವಾಗ ಇಂತಹ ಕ್ಷೇಮಭಾವ ಇರುತ್ತದೆಂದು ಇವತ್ತಿನ ತನಕ ಗೊತ್ತೇ ಇರಲಿಲ್ಲ. ಮಗುವಿನಂತೆ ರಕ್ಷಣೆ ಬಯಸಿ ಗಂಡಸಿನ ತೋಳಿನಲ್ಲಿ ಹುದುಗಿಕೊಳ್ಳುವ ಹೆಂಗಸಿನಿಂದ ಏನು ಸಿಕ್ಕುತ್ತೆ ಹುಡಿಮಣ್ಣು? (ಮರುತ್ತ)

ಸ್ವಯಂವರದಲ್ಲಿ ನನ್ನ ಕೈಹಿಡಿಯಲೆಂದು ನೂರು ಜನ ರಾಜ, ರಾಜಕುಮಾರರು ಸೇರಿದ್ದರು. ಆಗಲೂ ನನ್ನಲ್ಲಿ ಪ್ರಾಮುಖ್ಯದ ಭಾವ ಹುಟ್ಟಿತ್ತು. ಆದರೆ ಈಗ ಅರ್ಥವಾಗುತ್ತಿತ್ತು. ಸ್ವಯಂವರಕ್ಕೆ ಬೇಕಾದವರು, ಬೇಡವಾದವರು ಎಲ್ಲರೂ ಬಂದಿರುತ್ತಾರೆ. ಎಲ್ಲ ರಾಜರೂ ಒಟ್ಟು ಸೇರುವ ಸಮಾರಂಭವಾದುದರಿಂದ ಜೂಜಾಡುವವರು, ಮದ್ಯಪಾನಕ್ಕೆ ಜೊತೆ ಬಯಸುವವರೆಲ್ಲರೂ ತುಂಬುತ್ತಾರೆ. ಇವಳ ಕೈಹಿಡಿದರೆ ತಾನು ಸಾರ್ಧಕನೆಂಬ ಅನನ್ಯ ಉತ್ಕಟತೆಯಿಂದ ಯಾರೂ ಬಂದಿರುವುದಿಲ್ಲ. ಈಗ ಅವರನ್ನೆಲ್ಲ ಮೀರಿಸಿರುವ ಈ ವೀರ್ಯವಂತನು ಪರಮಭಕ್ತಿಯಿಂದ ನನ್ನ ಹಸ್ರವನ್ನು ಯಾಚಿಸುತ್ತಿದ್ದಾನೆ. ತನ್ನ ಗಣದ ಇತರ ಸ್ತ್ರೀ ಸಂಗವನ್ನು ವರ್ಜಿಸುವುದಾಗಿ ಭಾಷೆ ಇಡಲು ಸಿದ್ಧನಾಗಿದ್ದನೆ. ಇತರ ಸ್ತ್ರೀಸಂಗ ವ್ಯಸನವು ನಮ್ಮ ಆರ್ಯಾವರ್ತದ ಯಾವ ಕ್ಷತ್ರಿಯನಿಗಿಲ್ಲ? ನಾನೇ ಧನ್ಯಳು. ಪ್ರಮಾಣ ಮಾಡಿದ ಪತ್ನೀಧರ್ಮವನ್ನು ಮುಂದುಮಾಡಿ ನನ್ನ ಇಡೀ ಸುಖದ ಬಲಿ ಬೇಡಿದ ಗಂಡ. (ಕುಂತಿ)

ಈ ಇಂದ್ರ ಚಲುವನಷ್ಟೇ ಅಲ್ಲ, ಚತುರ ಕೂಡ. ಬರೀ ಶರೀರಶಕ್ತಿಯಲ್ಲ, ಕಲಾಪ್ರಪೂರ್ಣ. ಆದರೆ ಗಾಢತೆಯಲ್ಲಿ ಮುಳುಗದೆಯೇ ರತಿಯ ಮಾಧುರಯವನ್ನು ಸೃಷ್ತಿಸಿ, ಪರಸ್ಪರರಿಗೆ ಉಣಿಸಬಹುದೆಂಬ ಅರಿವನ್ನು ನಲ್ಲಿ ಹುಟ್ಟಿಸಿದ. ಇವನು ಬರೀ ಲಂಪಟನೇನೋ ಎಂದು ನನಗೆ ಒಮ್ಮೊಮ್ಮೆ ಸಿಟ್ಟು ಬರುತ್ತಿತ್ತು. ನಾನಿನ್ನ ದಾಸ ಎಂದು ಮತ್ತೆ ಮತ್ತೆ ಗೆಲ್ಲುತ್ತಿದ್ದ. ಪರ್ವತದ ನೀರಸ ವರ್ಷಗಳಲ್ಲಿ ರಸ ತುಂಬಿದ, ನನ್ನ ಮೈ ನನಗೇ ಹೂವಿನಂತೆ ಹಗುರವೆನೆಸಿದ ದಿನಗಳು ಅವು. ತನ್ನ ಹೆಂಡತಿಯಾಗೆಂದು ಕೇಳಲಿಲ್ಲ. ಭಾವನೆಯ ಭಾರದಲ್ಲಿ ಕಟ್ಟಿ ಹಾಕಲಿಲ್ಲ. ಸಂಗಡ ಬಾ ಎಂಬ ಧರ್ಮಸಂಕಟಕ್ಕೆ ಎಳೆಯಲಿಲ್ಲ. 

ಇವಳ ಹೊಟ್ಟೆ ನನ್ನದಕ್ಕಿಂತ ಹೆಚ್ಚು ಶಕ್ತಿಯುತವಾದುದೆ? ಇನ್ನೊಮ್ಮೆ ಅವಕಾಶ ಕೊಟ್ಟು ಆಗಲೂ ಅವಳು ಅವಳಿ ಬೆಳೆಸಿಕೊಂಡರೆ ಅವಳ ಸ್ಥಾನ ನನ್ನದನ್ನು ಮೀರುತ್ತದೆ. ಇನ್ನು ಅವಳು ಕೇಳಿದರೂ ಸಮ್ಮತಿಸಕೂಡದು. ಧರ್ಮವು ಲಂಪಟತನವಗಬಾರದು. (ಕುಂತಿಯ ಮತ್ಸರ)

(ಪರ್ವದಿಂದ ಆಯ್ದ ಮಾತುಗಳು)

ಅಮು ಮತ್ತು ಪರ್ಜಾನಿಯಾ ಚಿತ್ರಗಳುಪುಸ್ತಕಗಳಂತೆಯೇ ನಾನು ನೋಡಬೇಕಾಗಿರುವ ಸಿನೆಮಾಗಳ ಪಟ್ಟಿಯೂ ಬಹಳ ದೊಡ್ಡದೇ ಇದೆ. ಅದರಲ್ಲೂ ವಿವಾದಗಳ ಸುತ್ತ ಚಿತ್ರಣಗೊಂಡಿರುವ ಸಿನೆಮಾಗಳೆಂದರೆ ನನಗೆ ಸ್ವಲ್ಪ ಆಸಕ್ತಿ ಹೆಚ್ಚು. ಭಾರತದಲ್ಲಿ ಕೋಮುಗಲಭೆಯೋ ಅಥವಾ ಜನರಲ್ಲಿ ಆತಂಕ ಹುಟ್ಟಿಸಬಹುದೆಂದೂ ಸರಕಾರ ಬಹಿಷ್ಕರಿಸಿರುವ ಸಿನೆಮಾಗಳು, ಇನ್ನೂ ಕೆಲವು ಸಿನೆಮಾಗಳು ಡಿವಿಡಿಗಾಗಿಯೇ ತಯಾರಾಗಿರುವುದು (ಅಂದರೆ ಮನೆಯಲ್ಲಿ ಕುಳಿತು ಡಿವಿಡಿ ನೋಡುವ ಪ್ರೇಕ್ಷಕ ವರ್ಗಕ್ಕಾಗಿ), ಮತ್ತೆ ಕೆಲವು ಸಿನೆಮಾಗಳು ವಿದೇಶದಲ್ಲಿ ತಯಾರಾಗಿ ಅಲ್ಲಿಯೇ ಪ್ರದರ್ಶಿತಗೊಂಡಿರುವಂತಹದ್ದು (ಮುಖ್ಯವಾಗಿ ಕೊರಿಯಾದ ಸಿನೆಮಾಗಳು). ಇಂತಹ ಸಿನೆಮಾಗಳೆಂದರೆ ನನಗೇನೋ ಆಕರ್ಷಣೆ, ನನ್ನನ್ನು ಬಹುವಾಗಿ ಸೆಳೆಯುತ್ತವೆ. ಅದೇನೂ ಕಾಕತಾಳೀಯವೋ ಗೊತ್ತಿಲ್ಲ, ಈ ವಾರ ನೋಡಿದ ೨ ಸಿನೆಮಾಗಳಲ್ಲಿಯೂ ಸಾಮ್ಯತೆ ಬಹಳವಿತ್ತು. . 

ಒಂದು ಸಿನೆಮಾದಲ್ಲಿ ಇಂದಿರಾಗಾಂಧಿ ಹತ್ಯೆಯಾದಾಗ ನಡೆದ ಕೋಮು ಘರ್ಷಣೆಯ ಸಂದರ್ಭದ ತುಮುಲಗಳನ್ನೂ ಚಿತ್ರಿಸಿದ್ದರೆ, ಇನ್ನೊಂದರಲ್ಲಿ ಗೋಧ್ರಾ ಘಟನೆಯಾದ ಮೇಲೆ ಗುಜರಾತಿನಲ್ಲಿ ನಡೆದ ಕೋಮು ಗಲಭೆಯ ಚಿತ್ರಣ!. ಒಂದರಲ್ಲಿ ತಾಯಿ, ತಮ್ಮ, ತಂದೆಯನ್ನು ಕಳೆದುಕೊಂಡ ಮುಗ್ಧ ಹುಡುಗಿಯ ಮಾನಸಿಕ ಸಂಘರ್ಷ, ಮತ್ತೊಂದರಲ್ಲಿ ಮಗನನ್ನು ಕಳೆದುಕೊಂಡ ತಂದೆ, ತಾಯಿಯ ಸಂಕಟ! ಎರಡು ಸಿನೆಮಾಗಳಲ್ಲೂ ನಮ್ಮ ರಾಜಕಾರಣಿಗಳ ಭ್ರಷ್ಠತೆ, ಪೋಲಿಸ್ ಅಧಿಕಾರಿಗಳ ಅದಕ್ಷತೆ, ಸಾಮಾನ್ಯ ಜನರ ಅಸಹಾಯಕತೆ ಬಹಳ ಮನೋಜ್ನವಾಗಿ ಮೂಡಿಬಂದಿದೆ. ೧೯೮೪ರಲ್ಲಿ ಇಂದಿರಾಗಾಂಧಿಯವರನ್ನು ಅವರ ಸಿಖ್ ಅಂಗರಕ್ಷಕರು ಹತ್ಯೆ ಮಾಡಿದ ಮೇಲೆ ನಡೆದ ಕೋಮುಗಲಭೆ, ಸಾವಿರಾರು ಮುಗ್ಧ ಸಿಖ್ ರನ್ನು ಕೊಂದ ಘಟನೆಯ ಸುತ್ತ ನಡೆಯುವ ಚಿತ್ರಣದ ಸಿನೆಮಾದ ಈ ಹೆಸರು ‘ಅಮು’. ಮುಖ್ಯ ಪಾತ್ರದಲ್ಲಿ ನಟಿಸಿರುವ ಕೊಂಕಣ ಸೇನ್ ಈ ಸಿನೆಮಾದಲ್ಲಿ ೨೦ ವರ್ಷ ವಯಸ್ಸಿನ ಯುವತಿ ಪಾತ್ರಕ್ಕೆ ಜೀವ ತುಂಬಿದ್ದಾರೆ. ವಿದೇಶದಲ್ಲಿ ತಾಯಿಯೊಂದಿಗೆ ಬೆಳೆಯುವ ಆಕೆ, ತಾನೊಬ್ಬ ದತ್ತು ಮಗಳೆಂದು ತಿಳಿದಾಗ ತನ್ನ ಬೇರುಗಳನ್ನು ತಿಳಿಯಲು ಭಾರತಕ್ಕೆ ಬರುತ್ತಾಳೆ. ಅಲ್ಲಿನ ಸ್ಲಮ್ ವೊಂದಕ್ಕೆ ಭೇಟಿ ನೀಡಿದಾಗ, ಅದೇನೋ ಅಲ್ಲಿನ ಜನರೊಟ್ಟಿಗೆ ಅವಳಿಗೆ ಬಾಂಧವ್ಯ ಬೆಳೆಯುತ್ತದೆ. ಅವಳಿಗೆ ಆ ಸ್ಲಮ್ ನ ಪ್ರತಿಯೊಂದು ಭಾಗವೂ ಚಿರಪರಿಚಿತದಂತೆ ಭಾಸವಾಗುತ್ತದೆ. ಮಗಳನ್ನು ಬಿಟ್ಟಿರಲಾಗದೆ ತಾಯಿ ಕೂಡ ಭಾರತಕ್ಕೆ ಬಂದುಬಿಟ್ಟಾಗ, ಬಾರಿಬಾರಿಗೂ ಅಮ್ಮನನ್ನು ತನ್ನ ಮೂಲದ ಬಗ್ಗೆ ಕೇಳುತ್ತಾಳೆ. ಆದರೆ ಅಮ್ಮನ ನಿರಾಕರಣೆಯಿಂದ ಬೇಸತ್ತ ಅವಳಿಗೆ ಸಹಕಾರ ನೀಡಲು ಗೆಳೆಯನೊಬ್ಬ ದೊರಕುತ್ತಾನೆ. ಆತನ ತಂದೆಯೊಬ್ಬ ಪ್ರತಿಷ್ಠಿತ ಅಧಿಕಾರಿ. ತಾಯಿ ಈಕೆಗೆ ೧೯೮೧ ರಲ್ಲಿ ಸಾಂಕ್ರಮಿಕ ರೋಗದಿಂದಾಗಿ ಹೆತ್ತ ತಂದೆ, ತಾಯಿ ಸತ್ತಿದ್ದರೆಂದು ಹೇಳಿರುತ್ತಾಳೆ. ಆದರೆ ಅದು ಸುಳ್ಳೆಂದು, ಆಗ ಯಾವುದೇ ಸಾಂಕ್ರಮಿಕ ರೋಗವು ಹರಡಿರಲಿಲ್ಲವೆಂದು ಗೆಳೆಯನ ತಂದೆಯಿಂದಾಗಿ ಅಮು ವಿಗೆ ಗೊತ್ತಾಗುತ್ತದೆ. ದತ್ತು ತಾಯಿ ತನಗೇಕೆ ಸುಳ್ಳು ಹೇಳಿದಳೆಂದು ಮಾನಸಿಕ ತುಮುಲಕ್ಕೆ ಒಳಗಾಗುವ ಅಮು, ಸತ್ಯ ಕಂಡು ಹಿಡಿಯಲು ಮುಂದಾಗುತ್ತಾಳೆ. ಹುಡುಕುತ್ತಾ ಹೋದಂತೆ ಸತ್ಯ ತೆರೆಯುತ್ತಾ ಹೋಗುತ್ತದೆ. ಸುಖೀ ಸಿಖ್ ಕುಟುಂಬದಲ್ಲಿ ಹುಟ್ಟಿದ್ದ ಅಮುವಿಗೆ ಕೋಮು ಗಲಭೆಯಾದಾಗ ಸುಮಾರು ೪-೫ ವರ್ಷ, ಆಕೆಗೊಬ್ಬ ೨ ವರ್ಷದ ತಮ್ಮ! ತಮ್ಮ ಪಾಡಿಗೆ ಮನೆಯಲ್ಲಿದ್ದ ಸಿಖ್ ರನ್ನು, ಟ್ರೈನ್ ನಲ್ಲಿದ್ದವರನ್ನೂ, ಗಲಭೆಗೆ ಬೆದರಿ ಅಡಗಿಕೊಂಡಿದ್ದವರನ್ನೂ ದುಷ್ಕರ್ಮಿಗಳು ಹುಡುಕಿ ಹುಡುಕಿ ಸಾಯಿಸುವ ದೃಶ್ಯಗಳು ನೋಡುಗರ ಕಣ್ಣಲ್ಲಿ ನೀರು ತರಿಸುತ್ತದೆ. ಇವರಿಗೆ ಪೋಲಿಸ್ ಹಾಗೂ ಸರ್ಕಾರದ ಸಹಕಾರ! ಗಂಡ ಮತ್ತು ಚಿಕ್ಕ ಮಗನನ್ನು ಕಳೆದುಕೊಂಡ ಅಮು ಳ ತಾಯಿ ಹಾಗೂ ಅಮು ಇಬ್ಬರೂ ಪರಿಶ್ರಿತ ತಾಣದಲ್ಲಿ ಸಮಾಜ ಸೇವಕಿಯೊಬ್ಬಳನ್ನು ಭೇಟಿಯಾಗುತ್ತಾರೆ. ಇವರ ನಡುವೆ ಬಾಂಧವ್ಯವೊಂದು ಬೆಳೆಯುತ್ತದೆ. ಗಂಡ, ಮಗನನ್ನು ಬಚಾವ್ ಮಾಡಲು ಸಾಧ್ಯವಾಗಲಿಲ್ಲ ಎನ್ನುವ ಖಿನ್ನತೆಯಲ್ಲಿ ಬಳಲುವ ಅಮು ಳ ತಾಯಿ ‘ಅಮು’ ಳನ್ನು ಈ ಸಮಾಜ ಸೇವಕಿಗೆ ಒಪ್ಪಿಸಿ, ತಾನು ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ. ಅಮು ಎಲ್ಲವನ್ನೂ ಮರೆಯಬೇಕೆಂದು ಆಕೆಯ ದತ್ತು ತಾಯಿ ವಿದೇಶಕ್ಕೆ ಹೋಗಿ ನೆಲೆಸುತ್ತಾಳೆ. ಪೂರ್ತಿ ಚಿತ್ರ ನೋಡಿದ ಮೇಲೆ ನನಗೇಕೋ ಈ ಸಿನೆಮಾ ಸ್ವಲ್ಪ ಅಪೂರ್ಣವಾಗಿದೆಯೆಂದೆನಿಸಿತು. ಕಾರಣ ಮಾತ್ರ ಗೊತ್ತಾಗಲಿಲ್ಲ.

ಸುಮಾರು ೨೦೦೦ ಸಿಖ್ ಕುಟುಂಬಗಳು ಅಂದಿನ ಗಲಭೆಯಲ್ಲಿ ನೋವನ್ನನುಭವಿಸಿದ್ದಾರೆಂದು ಈ ಚಲನಚಿತ್ರದಲ್ಲಿ ಹೇಳುತ್ತಾರೆ. ಸರ್ಕಾರದ ಸಹಕಾರ ಈ ದುಷ್ಕರ್ಮಿಗಳಿಗೆ ಇತ್ತೆನ್ನುವ ಕಾರಣಕ್ಕಾಗಿಯೋ ಏನೋ ಗೊತ್ತಿಲ್ಲ, ಭಾರತದಲ್ಲಿ ಈ ಚಿತ್ರವನ್ನು ಥಿಯೇಟರ್ ಗಳಲ್ಲಿ ಬಿಡುಗಡೆ ಮಾಡಲು ಸರ್ಕಾರ ನಿಷೇಧಿಸಿತ್ತು!

ಇನ್ನೊಂದು ಚಿತ್ರ ‘ಪರ್ಝಾನಿಯ’. ಇದು ಗೋಧ್ರಾ ಘಟನೆಯ ನಂತರ ಗುಜರಾತಿನಲ್ಲಾದ ಗಲಭೆಯಲ್ಲಿ ನಡೆದ ಸತ್ಯ ಘಟನೆಯಾಧಾರಿತ ನಿರ್ಮಿತವಾದ ಸಿನೆಮಾವಂತೆ. ಈ ಚಿತ್ರದಲ್ಲೂ ಗಲಭೆಗೆ ಪೋಲಿಸ್ ಹಾಗು ಸರ್ಕಾರದ ಸಹಾಯವಿತ್ತು ಎಂದು ತೋರಿಸಿದ್ದಾರೆ. ಬಹುಶಃ ಇದಕ್ಕಾಗಿಯೇ ಏನೋ ಇದನ್ನು ಗುಜರಾತಿನಲ್ಲಿ ನಿಷೇಧಿಸಿದ್ದರಂತೆ. ಬಹುತೇಕ ಮುಸ್ಲಿಮ್ ಜನರೇ ಇರುವ ಕಾಲೋನಿಯಲ್ಲಿ ನೆಲೆಸಿರುವ ಒಂದು ಪಾರ್ಸಿ ಕುಟುಂಬ. ನಸಿರುದ್ದೀನ್ ಷಾ, ಸಾರಿಕಾ ಹಾಗೂ ಇಬ್ಬರು ಪುಟ್ಟ ಮಕ್ಕಳು ಪಾತ್ರಕ್ಕೆ ಜೀವ ತುಂಬಿದ್ದಾರೆ. ಮತ್ತೊಂದು ಪಾತ್ರ ವಿದೇಶಿಯನದು. ಆತ ತನ್ನ ಮನಶ್ಯಾಂತಿಗಾಗಿ ಭಾರತವನ್ನು, ಗಾಂಧೀಜಿಯವರ ಆದರ್ಶಗಳಿಗೆ ಮಾರು ಹೋಗಿ ಗುಜರಾತಿನಲ್ಲಿ ಬಂದು ಬಂದು ನೆಲೆಸಿರುತ್ತಾನೆ. ಈತ ಷಾ ನ ಗೆಳೆಯನಾಗುತ್ತಾನೆ. ಗೋಧ್ರಾ ಘಟನೆಯ ನಂತರ ಉದ್ರೇಕಿತ ಹಿಂದೂ ಜನರು ಮುಸ್ಲಿಮ್ ರನ್ನು ಹುಡುಕಿ ಕೊಲ್ಲುವ ಅನಾಗರೀಕ ವರ್ತನೆ! ಪೋಲಿಸರು ಈ ಕಾಲೋನಿಗೆ ಬಂದು ನಿಮಗೆಲ್ಲರಿಗೂ ರಕ್ಷಣೆ ಕೊಡುತ್ತಿದ್ದೇವೆ, ಯಾರೂ ಕೂಡ ಹೊರಗೆ ಬರಬೇಡಿ ಎಂದು ಹೇಳಿ ಹೋಗಿ, ದುಷ್ಕರ್ಮಿಗಳಿಗೆ ಈ ಕಾಲೋನಿಯನ್ನು ತೋರಿಸುತ್ತಾರೆ!. ಉದ್ರೇಕಿತರ ಅಮಾನವೀಯ ವರ್ತನೆ ನಿಜವಾಗಲೂ ಅಸಹ್ಯ ಬರಿಸುತ್ತದೆ. ಇಡೀ ಕಾಲೋನಿಗೆ ಬೆಂಕಿ ಹಚ್ಚುತ್ತಾರೆ ಹಾಗೂ ಸಾರಿಕಾ ತಾನು ಪಾರ್ಸಿಯೆಂದರೂ ಬಿಡದೆ ಬೆಂಬತ್ತುವವರನ್ನು ನೋಡಿ ಬೆದರಿದ ಆಕೆ ಅಲ್ಲಿಂದ ಓಡಿಹೋಗುವಾಗ ತನ್ನ ಮಗನನ್ನು ಕಳೆದುಕೊಳ್ಳುತ್ತಾಳೆ. ಗಂಡನ ಗೆಳೆಯನೇ ಪೋಲೀಸ್ ಅಧಿಕಾರಿಯಾಗಿದ್ದರೂ, ಆತ ಸರ್ಕಾರದ ಆದೇಶವಿದ್ದ ಕಾರಣ ಇವರಿಗೆ ಸಹಾಯ ಮಾಡುವುದಿಲ್ಲ. ಮನೆ, ಮಗನನ್ನು ಕಳೆದುಕೊಂಡ ದಂಪತಿಗಳು, ತಮ್ಮ ಪುತ್ರಿಯೊಂದಿಗೆ ಸಂತ್ರಸ್ತ್ರರ ತಾಣದಲ್ಲಿ ಬಂದು ನೆಲೆಸುತ್ತಾರೆ. ಈ ಗಲಭೆಗಳನ್ನೆಲ್ಲಾ ನೋಡಿ ಹತಾಷಗೊಂಡ ವಿದೇಶಿಯನಿಗೆ, ಆತನ ಮಾರ್ಗದರ್ಶಿ ಸಂತ್ರಸ್ತ್ರರನ್ನು ಸಂತ್ಯೈಸುವಂತೆ ಹಾಗೂ ಹೇಳಿಕೊಡುತ್ತಾನೆ. ನಿರಾಶ್ರಿತರ ತಾಣದಲ್ಲಿ ತನ್ನ ಗೆಳೆಯನನ್ನು ಕಂಡ ಆತ ಅವರನ್ನು ತನ್ನ ಮನೆಗೆ ಕರೆದು ತರುತ್ತಾನೆ. ಪ್ರತಿ ಬಾರಿಯೂ ಪೋಲೀಸ್ ರಿಂದ ತಮ್ಮ ಮಗನ ದೇಹ ಸಿಕ್ಕಿದೆ ಎಂಬ ಕರೆ ಬಂದಾಗ ಆತಂಕದಲ್ಲಿ ಹೋಗುವ ದಂಪತಿಯೂ, ಮೃತದೇಹ ಮಗನದ್ದಲ್ಲ ಅಂದಾಗ ನಿಟ್ಟುಸಿರುಬಿಡುತ್ತಾ, ಮಗದೊಮ್ಮೆ ತಮ್ಮ ಮಗನೆಲ್ಲಿರಬಹುದೆಂದು ಚಿಂತಿಸುವ ಪರಿ ನಮ್ಮಲ್ಲೂ ಪರ್ಝಾನ್ ಬದುಕಿರಲಿ ಎಂದು ಆಶಿಸುತ್ತದೆ. ಈ ದಂಪತಿಗಳ ಹಾಗೂ ವಿದೇಶಿಯ, ಜೊತೆಗೆ ಸಂತ್ರಸ್ತರ ಇದೆಲ್ಲದರ ನಡುವೆ ಇನ್ನೊಂದು ಕಡೆ ನೊಂದ ಮುಸ್ಲಿಮ್ ಜನರು ಪ್ರತೀಕಾರಕ್ಕಾಗಿ ಹಿಂದೂ ಜನರನ್ನು ಕೊಲ್ಲಲು ಯೋಜಿಸುತ್ತಿದ್ದಾಗ ಆ ಗುಂಪಿನ ನಾಯಕನ ಹೆಂಡತಿ ಹೇಳುವ ಮಾತು, ಹಗೆ ಸಾಧಿಸುವ ಪ್ರತಿಯೊಬ್ಬರಿಗೂ ಪಾಠದಂತಿದೆ! ಆಕೆಯನ್ನು ಹಿಂದೂವೊಬ್ಬ ಕಾಪಾಡಿರುತ್ತಾನೆ. ಅವಳು ತನ್ನ ಗಂಡನಿಗೆ ಮುಗ್ಧರ ವಿರುದ್ಧ ಹಗೆ ತೀರಿಸಿಕೊಳ್ಳುವುದಕ್ಕಿಂತ, ತಮ್ಮನ್ನು ಈ ಸ್ಥಿತಿಗೆ ತಂದವರ ವಿರುದ್ಧ ಸಾಕ್ಷಿ ಹೇಳಲು ಪ್ರೇರೆಪಿಸುತ್ತಾಳೆ. ಅವಳಿಂದಾಗಿ ಎಲ್ಲರೂ ದುಷ್ಕರ್ಮಿಗಳ ವಿರುದ್ಧ ಸಾಕ್ಷಿ ಹೇಳುವಂತಾಗಿ ಅವರು ಶಿಕ್ಷೆ ಅನುಭವಿಸುತ್ತಾರೆ. ಆದರೆ ಈ ದಂಪತಿಗಳಿಗೆ ಮಾತ್ರ ಮಗ ಸಿಗುವುದೇ ಇಲ್ಲ!. 

ಎರಡು ಚಿತ್ರಗಳನ್ನೂ ನೋಡಿದಾಗ ಮನಸ್ಸಿಗೆ ಹಿಂಸೆಯಾದರೂ, ಅದಕ್ಕಿಂತಲೂ ನನಗೆ ಬೇಸರವಾಗಿದ್ದೇನೆಂದರೆ ಎರಡು ಸಿನೆಮಾಗಳಲ್ಲೂ ತಮಗಾಗಿ ಬದುಕುಳಿದಿದ್ದ ಪುತ್ರಿಯ ಬಗ್ಗೆ ಯಾರೂ ಯೋಚಿಸುವುದೇ ಇಲ್ಲ. ಕಳೆದುಕೊಂಡ ಜೀವ, ಜೀವನದ ಚಿಂತೆಯಲ್ಲಿ, ನಮಗಾಗಿ ಬದುಕುಳಿದ ಜೀವದ ಬಗ್ಗೆ ನಾವ್ಯಾಕೆ ಕಾಳಜಿ ವಹಿಸುವುದಿಲ್ಲ ಎಂಬುದು ಮನಸ್ಸನ್ನು ಬಹಳ ಕಾಡತೊಡಗಿತು. ‘ಇರದುದೆಲ್ಲವ ಬಿಟ್ಟು ಇರದುದೆಡೆಗೆ ತುಡಿವುದೇ ಜೀವನ’ ಎಂಬ ಕಹಿ ಸತ್ಯದ ಅರಿವಾಗತೊಡಗಿತು.

ನನ್ನಮ್ಮನನ್ನು ಹುಡುಕಿಕೊಡಿ ಪ್ಲೀಸ್

ನನ್ನಮ್ಮನನ್ನು ಹುಡುಕಿಕೊಡಿ! ಹೌದು ನನ್ನಮ್ಮ ಕಾಣೆಯಾಗಿದ್ದಾಳೆ. 

ನನ್ನಮ್ಮನನ್ನು ನೀವು ಹುಡುಕಬೇಕೆಂದರೆ ನಾನ್ಯಾರು ಎಂದು ನಿಮಗೆ ಪರಿಚಯಿಸಿಕೊಳ್ಲಬೇಕು. ನಾನ್ಯಾರು? ನಾನೊಂದು ೯ ತಿಂಗಳ ಭ್ರೂಣ. ನನಗೊಬ್ಬ ಅಣ್ಣನಿದ್ದಾನಂತೆ. ಆದರೆ ನಮ್ಮಿಬ್ಬರ ಅಪ್ಪ ಮಾತ್ರ ಬೇರೆ ಬೇರೆ. ಅಣ್ಣನ ಅಪ್ಪ ಈಗೊಂದು ವರ್ಷದಿಂದ ವಿದೇಶದಲ್ಲಿ ಕೆಲಸ ಮಾಡುತ್ತಿದ್ದಾನಂತೆ! ಹಾಗಾಗಿಯೇ ನಾನು ಇವಳ ಒಡಲು ಸೇರಿದೆನೆಂದು ನನ್ನಮ್ಮ ಮತ್ತೊಬ್ಬ ಹೆಂಗಸಿನ ಹತ್ತಿರ ಹೇಳುತ್ತಿದ್ದನ್ನು ನಾನು ಕದ್ದು ಕೇಳಿಸಿಕೊಂಡೆ. ಸಂತೋಷದಿಂದ ಸಿಳ್ಳೆ ಹಾಕಿ ಕೂಗತೊಡಗಿದೆ ‘ಅಮ್ಮ! ನಾನೀ ಭೂಮಿಗೆ ಬರುತ್ತಿದ್ದೇನೆ‘. ಆದರೆ ‘ಇದೇನಿದು, ನನ್ನ ಕೂಗು ಅಮ್ಮನಿಗೆ ಸಂತೋಷ ತಂದಂತೆ ತೋರಲಿಲ್ಲ’. ‘ಅಯ್ಯೋ! ಅಮ್ಮಾ! ಆ ಮತ್ತೊಬ್ಬ ಹೆಂಗಸು ನನ್ನನ್ನು ಒತ್ತಿ ಒತ್ತಿ ನೋಡುತ್ತಿದ್ದಾಳೆ. ಯಾಕಿಷ್ಟು ನೋವು ಮಾಡಿದರೂ ನನ್ನಮ್ಮ ಅವಳಿಗೆ ಬೈಯುತ್ತಿಲ್ಲ. ಇವಳ್ಯಾಕೆ ಇಷ್ಟು ಚಿಂತೆಯಲ್ಲಿದ್ದಾಳೆ. ಅಮ್ಮ, ನಿನಗೆ ನನ್ನ ಬರುವಿಕೆ ಸಂತೋಷ ತರಲಿಲ್ಲವೇ? ಒತ್ತಿ, ಒತ್ತಿ ನೋಡಿದ ಆ ಹೆಂಗಸು ಹೇಳಿದಳು, ೫ ತಿಂಗಳಾಗಿದೆ. ಮುಖ ಕಿವುಚಿಕೊಂಡ ನನ್ನಮ್ಮನೆಂದಳು ‘ಅಯ್ಯೋ! ನಾನೆಲ್ಲಾ ಎಚ್ಚರಿಕೆ ತೆಗೆದುಕೊಂಡಿದ್ದರೂ ಹೀಗ್ಯಾಕೆ ಆಯಿತು? ಡಾಕ್ಟ್ರೇ ತೆಗೆಸಿಬಿಡಿ’ ಎಂದಳು! 

ಮೊಟ್ಟ ಮೊದಲ ಬಾರಿಗೆ ಅನಿಸಿತು ‘ಇಲ್ಲ, ಇವಳು ನನ್ನಮ್ಮನಲ್ಲ! ನಾನ್ಯಾಕೆ ಬಯಸಿ, ಬಯಸಿ ಇವಳ ಮಡಿಲಿಗೆ ಬಂದೆ. ನನ್ನನ್ನು ಬಯಸಿ, ಎಷ್ಟೋ ಹೆಂಗಸರು ಪೂಜೆ, ಪುನಸ್ಕಾರ ಮಾಡಿದ್ದರಲ್ಲಾ, ಅವರ ಒಡಲನ್ನು ನಾನ್ಯಾಕೆ ಸೇರಲಿಲ್ಲ? ಅತ್ತೆ, ಕಿರುಚಿದೆ ‘ಬೇಡಮ್ಮಾ, ನನ್ನನ್ನು ಕೊಲ್ಲಬೇಡ. ನನಗೆ ಈ ಭೂಮಿ ನೋಡುವ ಆಸೆಯಿದೆ. ನನ್ನನ್ನು ಬದುಕಲು ಬಿಡು.’ ಅವಳಿಗೆ ನನ್ನ ಧ್ವನಿ ಕೇಳಿಸಲೇ ಇಲ್ಲ. ಆ ಕ್ರೂರ ವೈದ್ಯರು ಹಣದಾಸೆಗಾಗಿ ನನ್ನ ಆಸೆ ಆಕಾಂಕ್ಷೆಗಳನ್ನೆಲ್ಲಾ ನುಚ್ಚು ನೂರು ಮಾಡುವಂತೆ, ನನ್ನನ್ನು ತೆಗೆಸಿಬಿಡಲು ಯಾವುದೋ ಮಾತ್ರೆಯನ್ನು ಈ ಹೆಂಗಸಿಗೆ ಕೊಟ್ಟರು. ಆದರೆ ಕಲಬೆರೆಕೆಯ ಮಾತ್ರೆಯಾದ ಅದಕ್ಕೆ ನನ್ನನ್ನು ಈ ಹೆಂಗಸಿನ ಹೊಟ್ಟೆಯಿಂದ ಹೊರದೂಡಲು ಸಾಧ್ಯವಾಗಲೇ ಇಲ್ಲ. ಇದುವರೆವಿಗೂ ಹಾಯಾಗಿ ಈಜಾಡಿಕೊಂಡಿದ್ದ ನನಗೆ ಈಗ ಚಿಂತೆಯೊಂದು ಶುರುವಾಯಿತು. ನನ್ನಮ್ಮ ಯಾರಿರಬಹುದು? ಅವಳನ್ನು ಹುಡುಕುವುದು ಹೇಗೆ? ಹೀಗೆ ಮತ್ತೆರಡು ತಿಂಗಳು ಕಳೆಯಿತು. ಈ ಹೆಂಗಸು ಮತ್ತೆ ಅದೇ ಡಾಕ್ಟರ ಬಳಿಗೆ ಹೋದಳು. ಇವಳ್ಯಾಕೆ ಇಷ್ಟೊಂದು ಆ ವೈದ್ಯರ ಹತ್ತಿರ ಕೂಗಾಡುತ್ತಿದ್ದಾಳೆ. ‘ಓ! ನಾನಿನ್ನೂ ಹೊರಬಂದಿಲ್ಲವೆಂದೇ? ಏ ಹೆಂಗಸೇ! ನಾನು ಈ ಭೂಮಿ ನೋಡುವ ಆಸೆಯಿಂದ ನಿನ್ನ ಒಡಲಿಗೆ ಬಂದಿದ್ದೇನೆ. ಯಾರಿಂದಲೂ ನನ್ನ ಈ ಆಸೆಯನ್ನು ಕಸಿದುಕೊಳ್ಳಲು ಸಾಧ್ಯವಿಲ್ಲ. ಆ ವೈದ್ಯೆ ತಾನೇನೂ ಮಾಡಲು ಸಾಧ್ಯವಿಲ್ಲವೆಂದು ತನ್ನ ಅಸಹಾಯಕತೆಯನ್ನು ಹೇಳಿದಳು. ನನ್ನ ಆಸೆಯನ್ನು ನೆರವೇರಿಸುತ್ತಿರುವ ಇವಳಿರಬಹುದೇ ನನ್ನಮ್ಮ? ನನ್ನನ್ನು ಸಾಯಿಸಲು ಪ್ರಯತ್ನಿಸಿದವಳಲ್ಲವೇ ಇವಳು! ಇಲ್ಲಾ, ಇವಳಲ್ಲ ನನ್ನಮ್ಮ. ನನ್ನನ್ನು ಹೊಟ್ಟೆಯಲ್ಲಿ ಹೊತ್ತ ಈ ಹೆಂಗಸು ಮತ್ತೊಬ್ಬ ವೈದ್ಯೆಯ ಬಳಿಗೆ ಹೋಗಲು ನಿಶ್ಚಯಿಸುವಷ್ಟರಲ್ಲಿ ಮತ್ತೆರಡು ತಿಂಗಳು ಕಳೆದಿತ್ತು. 

ಇದಿಷ್ಟು ನನ್ನ ಫ್ಲಾಶ್ ಬ್ಯಾಕ್! ನಾನು ಈ ಭೂಮಿಗೆ ಬರುವುದನ್ನು ತಡೆಯಲು ಯಾರಿಂದಲೂ ಇನ್ನೂ ಸಾಧ್ಯವಿಲ್ಲ. ನಾನು ಈ ಜಗತ್ತನ್ನೂ ನೋಡಿಯೇ ನೋಡುತ್ತೇನೆ. ಆದರೆ ನನ್ನಮ್ಮ ಯಾರು? ಎಂಬ ನನ್ನ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ! ಈ ಜಗತ್ತಿಗೆ ಕಾಲಿಟ್ಟ ಕ್ಷಣವೇ ನನ್ನಮ್ಮನನ್ನು ಹುಡುಕುತ್ತೇನೆ. ಅಯ್ಯೋ! ನನಗೇನಾಗುತ್ತಿದೆ. ಯಾರೋ ನನ್ನನ್ನು ಹೊರತಳ್ಳಿದಂತೆ ಭಾಸವಾಗುತ್ತಿದೆ. ಉಸಿರು ಕಟ್ಟುತ್ತಿದೆ. ಓ! ಹೊರಗೆ ಬಂದೇ ಬಿಟ್ಟೆ. ನಾನು ಯಾರ ಕೈಯಲ್ಲಿದ್ದೇನೆ? ಇವಳೇ ನನ್ನಮ್ಮ! ಛೇ! ಇರಲಾರದು, ಸರಸರನೆ ನನ್ನ ಹೊಕ್ಕುಳಬಳ್ಳಿಯನ್ನು ಕಡಿದು ನನ್ನನ್ನು ಇಲ್ಲಿರುವ ಟ್ರೇಗೆ ಇಷ್ಟು ಒರಟಾಗಿ ಬಿಸುಟ ಈಕೆ ನನ್ನಮ್ಮನೇ. ಸಾಧ್ಯವೇ ಇಲ್ಲ. ಇದ್ಯಾರಿದು! ಇವಳಿರಬಹುದೇ ನನ್ನಮ್ಮ. ಬಿಳಿ ಅಂಗಿ ಧರಿಸಿದ ಈಕೆ ಮತ್ತೊಬ್ಬಳ ಬಳಿ ನನ್ನ ಬಗ್ಗೆ ಆಡಿಕೊಂಡು ನಗುತ್ತಿದ್ದಾಳೆ! ನಾನ್ಯಾವುದೋ ಪಾಪದ ಫಲವಂತೆ! ಇಲ್ಲಾ, ನನ್ನ ಬಗ್ಗೆ ಇಷ್ಟು ಅಸಹ್ಯವಾಗಿ ತಮಾಷೆ ಮಾಡಿ ನಗುತ್ತಿರುವ ಈಕೆ ನನ್ನಮ್ಮನಾಗಿರಲು ಸಾಧ್ಯವೇ ಇಲ್ಲ.

ಈಗ ಧಡೂತಿ ಹೆಂಗಸೊಬ್ಬಳು ರೇಷ್ಮೇ ಸೀರೆಯನ್ನು ಧರಿಸಿ, ಹಸನ್ಮುಖಳಾಗಿ ನನ್ನನ್ನು ನೋಡಲೆಂದೇ ಬಂದಳು. ನರ್ಸಿಂಗ್ ಹೋಂ ನ ಮಾಲೀಕಳಂತೆ. ಅವಳು ನನ್ನನ್ನು ನೋಡುತ್ತಾ ನಗುತ್ತಿರುವುದನ್ನು ನೋಡಿದರೆ ಖಂಡಿತವಾಗಿಯೂ ಇವಳೇ ನನ್ನಮ್ಮನಿರಬೇಕು. ನೋಡಲು ಬಹು ಚಂದ ಇದ್ದಾಳೆ. ನನ್ನ ಬಗ್ಗೆ ಆಕೆ ತೆಗೆದುಕೊಳ್ಳುತ್ತಿರುವ ಕಾಳಜಿ ನೋಡಿದರೆ ಇವಳೇ ನನ್ನಮ್ಮ ಎಂದೆನಿಸುತ್ತಿದೆ. ಆದರೆ ಇವಳ ಕಣ್ಘಳು ಮಾತ್ರ ಬೇರೆನೋ ಹೇಳುವಂತೆ ಇದೆ. ಅಯ್ಯೋ ಇದೇನಿದು! ಈಕೆ ನನ್ನಮ್ಮನಾಗಲು ಸಾಧ್ಯವಿಲ್ಲ. ನನ್ನನ್ನು ಮಾರಾಟ ಮಾಡಲು ನಿಂತಿರುವ ದಲ್ಲಾಳಿಯಂತಿದ್ದಾಳೆ. ನನ್ನನ್ನು ಮಾರಿದರೆ ಅವಳಿಗೆಷ್ಟು ಹಣ ಸಿಗಬಹುದೆಂಬ ಎಣಿಕೆಯಲ್ಲಿದ್ದಾಳೆ. ಆದರೂ ಬೇರೆಯವರೊಂದಿಗೆ ಹೋಲಿಸಿದರೆ ನನ್ನಮ್ಮನನ್ನು ಹುಡುಕಲು ನನಗೆ ಸಹಾಯ ಮಾಡಲು ಬಂದಿರುವ ದೇವತೆಯಂತೆ ಕಾಣುತ್ತಿದ್ದಾಳೆ. ಇವಳು ನನ್ನ ಅಮ್ಮನಾಗಲು ಬಂದಿರುವವಳೊಡನೆ ಹಣದ ಚೌಕಾಸಿಗಾಗಿ ನಿಂತಿದ್ದಾಳೆ. ಛೇ! ಇವಳನ್ನು ದೇವತೆಯೊಡನೆ ಹೋಲಿಸಿದೆನಲ್ಲಾ. ಅಯ್ಯೋ! ಸರಿಯಾದ ಹಣ ಗಿಟ್ಟಲಿಲ್ಲವೆಂದು ಅವಳನ್ನು ಕಳಿಸಿಯೇ ಬಿಟ್ಟಳು. 

ನನ್ನಮ್ಮ ಯಾರಿರಬಹುದು? ಯಾರಿಗಾದರೂ ಗೊತ್ತಿದೆಯೇ? ನನ್ನಮ್ಮನನ್ನು ಹುಡುಕಿಕೊಡಿ ಪ್ಲೀಸ್.

ಪ್ಲೀಸ್ ೫ ನಿಮಿಷ ಅಷ್ಟೇ

ಇತ್ತೀಚಿನ ದಿನಗಳಲ್ಲಿ ನನ್ನನ್ನು ಬಹಳವಾಗಿ ಕಾಡಿದ ಪುಟ್ಟ ಕಥೆಯಿದು. ಪಾರ್ಕಿನಲ್ಲಿ ಒಬ್ಬ ವ್ಯಕ್ತಿ ತನ್ನ ಮಗಳು ಸೈಕಲ್ ತುಳಿಯುತ್ತಿರುವುದನ್ನು ನೋಡುತ್ತಾ ಕುಳಿತಿರುತ್ತಾನೆ. ಪಕ್ಕದಲ್ಲಿ ಕುಳಿತ ಮಹಿಳೆ ಅಲ್ಲಿಯೇ ಆಟವಾಡುತ್ತಿದ್ದ ಬಾಲಕನನ್ನು ತೋರಿಸಿ ‘ನನ್ನ ಮಗ’ ಎನ್ನುತ್ತಾಳೆ. ‘ಸುಂದರ ಬಾಲಕ’ ಎನ್ನುವ ಈತ ತನ್ನ ಮಗಳನ್ನು ಪರಿಚಯಿಸುತ್ತಾನೆ. ಸ್ವಲ್ಪ ಹೊತ್ತಿನ ನಂತರ ಮಗಳನ್ನು ಕುರಿತು ಹೊರಡೋಣವೇ ಎನ್ನುತ್ತಾನೆ. ಮಗಳು ‘ಪ್ಲೀಸ್ ೫ ನಿಮಿಷ ಅಷ್ಟೆ ಅಪ್ಪಾ’ ಎನ್ನುತ್ತಾಳೆ. ‘ಸರಿ’ ಎನ್ನುತ್ತಾ ಮತ್ತೆ ಈತ ಕುಳಿತುಕೊಳ್ಳುತ್ತಾನೆ. ಹೀಗೆ ಹಲವಾರು ಬಾರಿ ನಡೆಯುತ್ತದೆ.

ಇದನೆಲ್ಲಾ ನೋಡುತ್ತಾ ಪಕ್ಕದಲ್ಲೇ ಕುಳಿತಿದ್ದ ಮಹಿಳೆ ‘ನಿಮಗೆ ಬಹಳ ತಾಳ್ಮೆ’ ಎನ್ನುತ್ತಾಳೆ. ಅದಕ್ಕೆ ಆ ವ್ಯಕ್ತಿ ನೋವಿನಿಂದ ‘ತಾಳ್ಮೆಯೆಲ್ಲಾ ಏನೂ ಇಲ್ಲ. ಈಗ್ಗೆ ಕೆಲವು ದಿನಗಳ ಹಿಂದೆ ಅವಳ ಅಣ್ಣ ಸೈಕಲ್ ತುಳಿಯುತ್ತಿದ್ದಾಗ ಲಾರಿಯೊಂದು ಗುದ್ದಿದ ಕಾರಣ ತೀರಿಹೋದ. ಆಗ ಆತನಿಗಾಗಿ ನಾನು ಹೆಚ್ಚಿನ ಸಮಯ ಕೊಡಲಿಲ್ಲ. ಈಗ ಆತ ಕನಿಷ್ಟ ಪಕ್ಷ ೫ ನಿಮಿಷಕ್ಕಾದರೂ ಸಿಗುವುದಾದರೆ ಅವನಿಗಾಗಿ ನನ್ನೆಲ್ಲವನ್ನೂ ಕೊಡಲು ಸಿದ್ದನಿದ್ದೇನೆ. ಆದರೆ ಇದು ಸಾಧ್ಯವೇ?

 ಈಗ ಮತ್ತೆ  ಆ ತಪ್ಪನ್ನು ಮತ್ತೆ ಮಾಡಲು ನಾನು ತಯಾರಿಲ್ಲ. ನನ್ನ ಮಗಳು ೫ ನಿಮಿಷ ಆಡಲು ಸಮಯ ಬೇಡುತ್ತಿದ್ದರೆ, ನನಗೆ ಅವಳ ಆಟ ನೋಡಲು ೫ ನಿಮಿಷ ಸಿಗುತ್ತಿದೆ! ನಮಗೆ ಯಾರಿಗಾದರೂ ಏನನ್ನಾದರೂ ಹೇಳಬೇಕೆಂದಿದ್ದರೆ ಸಮಯ ವ್ಯರ್ಥ ಮಾಡದೇ ಆ ಗಳಿಗೆಯೇ ಹೇಳಿಬಿಡಬೇಕೆಂಬ ನೀತಿಯುಳ್ಳ ಈ ಕಥೆ ಮನಸ್ಸನ್ನು ತುಂಬಾ ಕಾಡಿತು

ಇದೇ ಗುಂಗಿನಲ್ಲಿದ್ದ ನನಗೆ ಗೆಳೆಯನೊಬ್ಬ ಹೇಳಿದ ಮತ್ತೊಂದು ಘಟನೆ ಇದಕ್ಕೆ ಪೂರಕವಾಗಿತ್ತು. ಆತನ ಗೆಳೆಯ ನಾಟ್ಯ ಕಲಾವಿದ ಜೊತೆಗೆ ಚಿತ್ರಕಲೆಯಲ್ಲಿಯೂ ಕೂಡ ನೈಪುಣ್ಯತೆ ಹೊಂದಿದ್ದವರು. ಇವನು ಅವರಿಗೆ ನಾಟ್ಯದ ಭಂಗಿಗಳ ಚಿತ್ರಗಳನ್ನು ರಚಿಸಿಕೊಡುವಂತೆ ಕೇಳಿಕೊಂಡಿದ್ದನಂತೆ. ಇನ್ನೂ ಬಹಳ ಸಮಯವಿದೆ, ಇವತ್ತು ಮಾಡಿಕೊಡುತ್ತೇನೆ, ನಾಳೆ ಮಾಡಿಕೊಡುತ್ತೇನೆ ಎಂದಾತ ಹಠಾತ್ತನೆ ಮೊನ್ನೆ ತೀರಿಹೋದರಂತೆ! ನನ್ನ ಗೆಳೆಯ ಬಹಳವಾಗಿ ನೊಂದಿದ್ದ. ಹೀಗಾಗುತ್ತೆಯೆಂದು ಗೊತ್ತಿದ್ದರೆ ಹೇಗಾದರೂ ದುಂಬಾಲು ಬಿದ್ದು ಅವರ ಬಳಿ ಚಿತ್ರ ಬರೆಸಿಯೇ ಬಿಡುತ್ತಿದ್ದೆನೆಂದು ಅಳುತ್ತಿದ್ದ.

ನಾವ್ಯಾಕೆ ಹೀಗೆ? ನಮ್ಮ ಪ್ರೀತಿಪಾತ್ರರಿಗೆ ಪ್ರೀತಿ ತೋರಿಸಲು ಕೂಡ ನಮ್ಮ ಬಳಿಯಲ್ಲಿ ಸಮಯವಿರುವುದಿಲ್ಲ. ಯಾವುದೋ ಆಸೆಗೆ, ಮೋಹಕ್ಕೆ ಬಲಿಬಿದ್ದು ಓಡುತ್ತೇವೆ, ಓಡುತ್ತೇವೆ. ಸಾಕಾಗಿ ನಿಂತಾಗ ನಮ್ಮ ಹಿಂದೆ ಯಾರೂ ಇರುವುದೇ ಇಲ್ಲ. ಆಗ ಕಳೆದುಕೊಂಡದ್ದಕ್ಕೆ ಮರುಗಬಹುದೇ ವಿನಃ ಮತ್ತೆ ಆ ಕಾಲ ನಮಗೆ ಸಿಗುವುದೇ ಇಲ್ಲ. ಇನ್ನಾದರೂ ನಾವೆಲ್ಲರೂ ಎಚ್ಚೆತ್ತು ನಾವು ಪ್ರೀತಿಸುವ, ನಮ್ಮನ್ನೂ ಪ್ರೀತಿಸುವ ಜೀವಗಳಿಗೆ ಒಂದು ಕೃತಜ್ಞತೆಯನ್ನು ಹೇಳೋಣವೇ? ಆ ಕೆಲಸ ಇಂದೇ, ಈಗಲೇ ಇನ್ನೈದು ನಿಮಿಷಗಳಲ್ಲಿಯೇ ಮಾಡೋಣವೇ?


ನಾನು ಹಾಗೂ ಟಿವಿ ಪ್ರೋಗ್ರಾಮು

ಇತ್ತೀಚೆಗಷ್ಟೆ ಕೆಲಸದ ಏಕತಾನತೆಯಿಂದ ಬೇಸರಗೊಂಡು ಬೇರೆ ಕೆಲಸ ಸೇರಿಕೊಂಡಿದ್ದೆ. ಎಲ್ಲರನ್ನೂ ಆಕರ್ಷಕವಾಗಿ ಕಾಣುವಂತೆ, ಅವರ ಸೌಂದರ್ಯವನ್ನು ಇನ್ನೂ ಹೆಚ್ಚಿಸುವ ಒಂದು ಸಂಸ್ಥೆ. ಅಲ್ಲಿ ಮ್ಯಾನೇಜರ್ ಎಂಬ ಪೋಸ್ಟ್ ಬೇರೆ ಆಕರ್ಷಕವಾಗಿ ಕಂಡಿತ್ತು. ಅಲ್ಲಿ ನನ್ನ ಪ್ರತಿಭೆಯನ್ನು ತೋರಿಸಲು ಒಂದು ಅವಕಾಶವೂ ಸಿಗ ಬಹುದೆಂಬ ಆಶಯದಿಂದ ಆ ಸಂಸ್ಥೆಗೆ ಸೇರಿದೆ. ನನಗೊಪ್ಪಿಸಿದ ಕೆಲಸವನ್ನು ಬಹಳ ಅಚ್ಚುಕಟ್ಟಾಗಿ ಮಾಡಲು ಶುರುಮಾಡಿದೆ. ಇದೇ ಸಂಸ್ಥೆಯ ಬಗ್ಗೆ ಒಂದು ಎಪಿಸೋಡ್ ಮಾಡಲು ಟಿ.ವಿ.ಯೊಂದು ಯೋಜನೆ ಮಾಡಿತು. ಸಂಸ್ಥೆಯಲ್ಲಿ ಕೆಲಸ ಮಾಡುವವರೆಲ್ಲರ ಮಾತೃಭಾಷೆ ಹಿಂದಿ (ನನ್ನನ್ನು ಬಿಟ್ಟು). ನಿರ್ದೇಶಕರು ಕೂಡಾ ಹಿಂದಿಯವರೇ. ಸರಿ! ಯಾರಿದ್ದಾರೆ ಕನ್ನಡದಲ್ಲಿ ಮಾತನಾಡಲು? ನಾನಿಲ್ಲವೇ? ನಾನೇ ಆಯ್ಕೆಯಾದೆ (ಸ್ಪರ್ಧಿಸಲು ಯಾರಾದರಿದ್ದಲ್ಲವೇ :-)) ಬಯಸದೇ ಬಂದ ಭಾಗ್ಯ! ಎಲ್ಲರೆದುರು ನನಗೇನೂ ಇಷ್ಟವಿಲ್ಲ, ನಿಮ್ಮ ದಾಕ್ಷಿಣ್ಯಕ್ಕಾಗಿ ಒಪ್ಪಿಕೊಂಡಿದ್ದೇನೆ ಎನ್ನುವ ಧೋರಣೆ ತೋರಿದರೂ ಒಳಗೊಳಗೆ ಬಹಳ ಖುಶಿ, ನಾನು ಟಿ.ವಿ.ಯಲ್ಲಿ ಬರುತ್ತೀನಿ ಅಂತಾ. ಟಿ.ವಿ. ಶೋಗಳಲ್ಲಿ ಭಾಗವಹಿಸುವುದು, ರೇಡಿಯೋಗಳಲ್ಲಿ ಪ್ರೋಗ್ರಾಮ್ ನೀಡುವುದು (ಚಿಕ್ಕವಳಾಗಿದ್ದಾಗ ಒಂದು ರೇಡಿಯೋ ಕಾರ್ಯಕ್ರಮ ಕೂಡಾ ನೀಡಿದ್ದೆ ;-)), ಪೇಪರಿನಲ್ಲಿ ಫೋಟೋ ಬರುವುದು (ಶ್ರದ್ಧಾಂಜಲಿಯಲ್ಲ ;-)), ಇದೆಲ್ಲವೂ ನಮಗೆ ಎಷ್ಟು ಖುಶಿ ಕೊಡುತ್ತೆ ಅಲ್ಲ್ವಾ :-) ನನಗಂತೂ ಬಹಳ ಖುಶಿಯಾಯಿತು. ಪೀಠಿಕೆನೇ ಜಾಸ್ತಿ ಆಯಿತಲ್ವಾ (ಏನು ಮಾಡೋದು? ಎಲ್ಲಾ ಈ ಧಾರಾವಾಹಿಗಳ ಪ್ರಭಾವ :-) ಹಾಗಂದ ಕೂಡಲೇ ಹೆದರಿಕೊಳ್ಳಬೇಡಿ! ಇದನ್ನಂತೂ ೨-೩ ಕಂತು ಮಾಡೋಲ್ಲ :-)) ಒಂದು ಒಳ್ಳೆಯ ದಿವಸ ಗೊತ್ತಾಯಿತು. ನಾನು ಕೂಡಾ ಜೀವನದಲ್ಲಿ ಮೊದಲ ಬಾರಿಗೆ ಮೇಕಪ್ ಮಾಡಿಕೊಳ್ಳುವ, ಟಿ.ವಿಯಲ್ಲಿ ಕಾಣಿಸಿಕೊಳ್ಳುವ ಸಂಭ್ರಮದಲ್ಲಿ ರಾತ್ರಿಯೆಲ್ಲಾ ನಿದ್ದೆ ಮಾಡದೇ, ಸಂಭಾಷಣೆಯನ್ನು ಪ್ರಾಕ್ಟೀಸ್ ಮಾಡುತ್ತಾ ಕುಳಿತೆ! ಮನೆಯವರ ಕೈಯಲ್ಲಿ ‘ನಿನ್ನದ್ಯಾಕೋ ಅತಿಯಾಯಿತು’ ಎಂದು ಬೈಸಿಕೊಂಡರೂ, ಆ ಬೈಗುಳ ಕಿವಿಯವರೆವಿಗೂ ತಲುಪಲೇ ಇಲ್ಲ :-) ಯಾವಾಗ ಬೆಳಗಾಗುವುದೋ, ಯಾವಾಗ ಮೇಕಪ್ ಮಾಡಿಕೊಳ್ಳುವುದೋ, ಸಂಭಾಷಣೆಯನ್ನು ಒಪ್ಪಿಸುವುದು, ಕನ್ನಡಿಯ ಮುಂದೆ ಪ್ರಾಕ್ಟೀಸ್ ಕೂಡಾ ಮಾಡಿದ್ದಾಯಿತು! ಬೆಳಗೆದ್ದ ಕೂಡಲೇ ಮಾಡಿದ ಮೊದಲ ಕೆಲಸ, ಗೆಳೆಯ-ಗೆಳತಿಯರಿಗೆಲ್ಲಾ ನನ್ನ ಪ್ರೋಗ್ರಾಮ್ ಇದೆ, ನೋಡಿ ಎಂದು ಮೆಸೇಜ್ ಕೂಡಾ ಕಳಿಸಿದ್ದಾಯಿತು. ನಂತರ ಬೇಗ ಬೇಗ ರೆಡಿಯಾಗಿ ಎಲ್ಲರಿಗಿಂತಲೂ ಮೊದಲಿಗೆ ನಮ್ಮ ಸಂಸ್ಥೆಗೆ ಹೋದೆ. ಮೇಕಪ್ ಮಾಡಿಸಿಕೊಂಡೆ. ನನ್ನ ಮುಖದ ಗುರುತು ನನಗೆ ಸಿಗಲಿಲ್ಲ :-) (ಮೊದಲ ಬಾರಿಗೆ ಮೇಕಪ್ ಮಾಡಿದ್ದರಿಂದ ಹೀಗನ್ನಿಸುತ್ತಿದೆ ಅಂತಾ ಎಲ್ಲರೂ ಸಮಾಧಾನ ಮಾಡಿದರು. ನಾನಿನ್ನು ಮಾತಾಡಬೇಕಿತ್ತಲ್ವಾ;-) ಅದಕ್ಕೆ ಬೆಣ್ಣೆ ಹಚ್ಚುತ್ತಿರಬೇಕಂದುಕೊಂಡೆ). ತಿಂಡಿ ತಿಂದು, ನೀರು ಕೂಡಾ ಕುಡಿದು ಮೇಕಪ್ ಗಾಗಿ ಕುಳಿತಿದ್ದೆ. (ಲಿಪ್ ಸ್ಟಿಕ್ ಹೋಗಿಬಿಟ್ಟರೆ) ನಾನು ರೆಡಿಯಾದೆ. ೧೧ ಗಂಟೆಗೆ ಬರುವುದಾಗಿ ತಿಳಿಸಿದ್ದ ರೆಕಾರ್ಡಿಂಗ್ ಟೀಮಿನವರು ೧೨.೩೦ ಯಾದರೂ ಬರಲೇ ಇಲ್ಲ. ಫೋನ್ ಮಾಡಿದ್ದಕ್ಕೆ ಬೇರೆ ಕಡೆ ರೆಕಾರ್ಡಿಂಗ್ ನಡೆಯುತ್ತಿದೆ. ಅದು ಮುಗಿದ ತಕ್ಷಣವೇ ಬರುವುದಾಗಿ ತಿಳಿಸಿದರು. ೩ ಗಂಟೆಯಾದರೂ ಪತ್ತೇ ಇಲ್ಲಾ. ಬೆಳಿಗ್ಗೆ ತರಾತುರಿಯಲ್ಲಿ (ಖುಶಿಯಲ್ಲಿ), ಸರಿಯಾಗಿ ತಿಂಡಿ ತಿಂದಿರಲಿಲ್ಲ. ಹೊಟ್ಟೆ ಚುರುಗುಟ್ಟುತ್ತಿತ್ತು. ಊಟ ಮಾಡೋಣವೆಂದುಕೊಂಡರೆ ಮೇಕಪ್ ಬೇರೆ ಕರಗಿಹೋಗುವುದೆಂಬ ಭಯ ಒಂದು ಕಡೆ, ಆತಂಕದಲ್ಲಿ ಪ್ರಾಕ್ಟೀಸ್ ಮಾಡಿದ್ದ ಮಾತುಗಳೆಲ್ಲವೂ ಮರೆತು ಹೋದಂತಾಗುತ್ತಿತ್ತು. ೫ ಗಂಟೆ ಆಯಿತು. ಯಾರ ಸುದ್ದಿಯೂ ಇಲ್ಲಾ. ಕಡೆಗೆ ಧೈರ್ಯ ಮಾಡಿ ನಾನೇ ಫೋನ್ ಮಾಡಿದೆ. ಇವತ್ತ್ಯಾಕೋ ಬರಲು ಸಾಧ್ಯವಾಗುತ್ತಿಲ್ಲಾ. ಕ್ಷಮಿಸಿ. ಇನ್ನೊಮ್ಮೆ ನೋಡುವ ಅಂತಾ ಹೇಳಿಬಿಡೋದಾ! ಇನ್ನೂ ಯಾವತ್ತು ಮುಹೂರ್ತ ಕೂಡಿ ಬರುತ್ತೋ? :-(

(ಸಂಪದದಲ್ಲಿ http://sampada.net/blog/inchara123/29/06/2009/22091 ಬರೆದು, ಯಾರೋ ಮಹಾನ್ ಕನ್ನಡಿಗ ನಾನು ಪ್ರೋಗ್ರಾಮೂ ಅಂತಾ ಬರೆದೆ ಅಂತಾ ಕಿತ್ತಾಡಿ, ಸುಮಾರು ೩ ಪೇಜಿನಷ್ಟು ಕಮೆಂಟ್ಸ್ ಗಳು ಆಗಿಬಿಟ್ಟಿದ್ದವು. ನಾನು ಚೆನ್ನಾಗಿ ಬರೆದಿಲ್ಲವಾದರೂ, ಫೇಮಸ್ಸು ಆಗಿಬಿಟ್ಟೆ :-) )

ನಿನಗಾಗಿ ಕಾಯುತ್ತಿರುವ

ಪ್ರೀತಿಯ ಗೆಳೆಯಾ, 

ಇಂದೇಕೋ ನಿನ್ನ ನೆನಪಾಗುತ್ತಿದೆ :-( ಆದರೆ ನೀನೆಲ್ಲಿದ್ದಿ? ಹೇಗಿದ್ದೀ? ಇದ್ಯಾವುದರ ಬಗ್ಗೆಯೂ ನನಗೆ ತಿಳಿದಿಲ್ಲ. ನೀನು ಯಾಕೆ ಹೀಗೆ ಮಾಡಿದೆ? ಇದಕ್ಕೂ ನನ್ನ ಬಳಿ ಉತ್ತರವಿಲ್ಲ. ನಾನು ನಿನಗೆ ಬೇಕಾದಷ್ಟು ಸಲ ನೋವನ್ನುಂಟು ಮಾಡಿದ್ದೇನೆ. ಬೇಸರ ಮಾಡಿದ್ದೇನೆ. ಕಿರಿಕಿರಿ ಮಾಡಿದ್ದೇನೆ. ಇವೆಲ್ಲವುಗಳನ್ನೆಲ್ಲಾ ಕ್ಷಮಿಸುತ್ತಾ ಬಂದ ನೀನು, ನನ್ನ ಬಳಿ ಮಾತು ನಿಲ್ಲಿಸಿದ್ದಕ್ಕೆ ಕಾರಣವೇ ತಿಳಿಯಲಿಲ್ಲ. ನಗುನಗುತ್ತಲೇ ‘ನಿನ್ನ ಮಾತುಗಳಲ್ಲಿ ಪ್ರೀತಿ, ಕಾಳಜಿ, ತುಂಟತನ ಎಲ್ಲವೂ ತುಂಬಿದೆ. ನನಗೆ ನಿನ್ನೊಂದಿಗೆ ಮಾತಾಡುವುದೇ ಅತ್ಯಂತ ಮಧುರ ಕ್ಷಣ’ವೆಂದ ನೀನು ಆ ಮಧುರ ಕ್ಷಣಗಳನ್ನು ಮರೆತು ಹೋದದೆಲ್ಲಿಗೆ? ನಾನಾಗೇ ಕರೆ ನೀಡುವವರೆಗೆ ನೀನು ನನಗೆ ಕರೆ ನೀಡಬಾರದು ಎಂದಿದ್ದಾದರೂ ಏಕೆ? ನಾ ನಿನಗೆ ಕೊಟ್ಟ ಮಾತಿನಂತೆ ಇದುವರೆಗೂ ನಿನಗೆ ಕರೆ ನೀಡಿಲ್ಲ, ನೀನೆಲ್ಲಿರುವೆ ಎಂಬುದು ತಿಳಿಯಲಿಲ್ಲ. ಹೀಗೇಕೆ ಮಾಡಿದೆ? ತಪ್ಪುಗಳನ್ನು ಮಾಡಿದಾಗಲೂ ನೀಡದಿದ್ದ ಶಿಕ್ಷೆಯನ್ನು ಈಗ ಕೊಡುವ ಅಗತ್ಯವಿತ್ತೇ? ನನಗೆ ನೀನ್ಯಾರೆಂದು ಅರ್ಥವಾಗಿರದಿದ್ದರೂ, ನಿನಗೆ ನಾನ್ಯಾರೆಂದು ಅರ್ಥವಾಗಿದ್ದೆ ಅಲ್ಲವೇ? ನೀ ಹತ್ತಿರವಿದ್ದರೆ ನನಗೆಂದಿಗೂ ಬುದ್ಧಿ ಬರುವುದಿಲ್ಲವೆಂದುಕೊಂಡೆಯಾ? ಎಲ್ಲವೂ ಕೊನೆಯಿರದ ಪ್ರಶ್ನೆಗಳು! ಉತ್ತರಿಸಲು ನೀನೆದುರಿಗೆ ಇಲ್ಲ.

ಚಿಕ್ಕವಯಸ್ಸಿನಲ್ಲಿ ಗೆಳೆತನದ ಅವಶ್ಯಕತೆ ನನಗೆಂದಿಗೂ ಇರಲಿಲ್ಲ. ಅಂದರೆ ನನಗೆ ಯಾರೂ ಫೆಂಡ್ಸ್ ಇರಲೇ ಇಲ್ಲವೆಂದಲ್ಲ. ಬೇಕಾದಷ್ಟು ಇದ್ದರು. ಪ್ರತಿ ಬರ್ತ್ ಡೇ ಬಂದಾಗಲೂ ನನಗಿಷ್ಟು ಗ್ರೀಟಿಂಗ್ಸ್ ಬಂತು ಎಂದು ಹೇಳಿಕೊಳ್ಳೋದು ನನಗೊಂದು ಒಂದು ಹೆಮ್ಮೆಯ ವಿಷಯವಾಗಿತ್ತು. ಆದರೆ ಕ್ಯಾಂಟಿಟಿ ಇದ್ದರೂ ಅದ್ಯಾವುದರಲ್ಲೂ ಕ್ವಾಲಿಟೀ ಇರಲಿಲ್ಲ. ಅಂದರೆ ನಿಜವಾದ ಗೆಳೆತನವೆಂದರೇನು ಅನ್ನೋದು ಗೊತ್ತಿರಲಿಲ್ಲ. ಆದರೆ ನಿನ್ನ ಜೊತೆಗೆ ಆದ ಗೆಳೆತನ, ಗೆಳೆತನ ಎಂದರೇನು ಅನ್ನುವುದನ್ನು ಕಲಿಸಿತು. ನಾನು ಬಹಳ ಸಂಕೋಚ ಹಾಗೂ ನಾನೇನಕ್ಕೂ ಪ್ರಯೋಜನವಿಲ್ಲ ಎಂಬ ಕೀಳರಿಮೆಯಿಂದ ಬಳಲುತ್ತಿದ್ದೆ. ನನ್ನ ಅಮ್ಮನ ಬಳಿಯೂ ಮುಕ್ತವಾಗಿ ಮಾತನಾಡಲಾಗುತ್ತಿರಲಿಲ್ಲ. ಅಷ್ಟು ಸಂಕೋಚವಿದ್ದ ನನಗೆ, ಅದೇನೋ ಗೊತ್ತಿಲ್ಲ! ನೀನು ಕೇಳುತ್ತಿದ್ದೇಯೋ ಇಲ್ಲವೋ? ನಾನಂತೂ ಪ್ರತಿಯೊಂದನ್ನೂ ಮುಜುಗರವಿಲ್ಲದೆ ನಿನ್ನ ಬಳಿ ಹೇಳಿಕೊಳ್ಳುತ್ತಿದ್ದೆ. ನಾನೇನನ್ನೂ ಹೇಳಬಯಸಿದ್ದೇನೆ ಎನ್ನುವುದು ನನ್ನ ಕಣ್ಣುಗಳನ್ನು ನೋಡಿಯೇ ನೀನರ್ಥ ಮಾಡಿಕೊಳ್ಳುತ್ತಿದ್ದೆ. ಅಂತಹ ನನ್ನನ್ನು ಪೂರ್ತಿ ಅರ್ಥ ಮಾಡಿಕೊಳ್ತಿದ್ದ ನಿನ್ನಂಥ ಗೆಳೆಯನನ್ನು ದಿನದ ೨೪ ಗಂಟೆಗಳು ಜೊತೆ ಇರೋ ತರಹ ಮಾಡಿಕೊಂಡರೆ ಜೀವನ ಸೊಗಸು, ಗೆಳೆಯನೇ ಗಂಡನಾದರೆ ಸ್ವರ್ಗಕ್ಕೆ ಮೂರೇ ಗೇಣು ಎಂದು ತೀರಾ ಸಂಕುಚಿತವಾಗಿ ಯೋಚಿಸಿದೆ. ನಾನು ಪ್ರೊಪೋಸ್ ಮಾಡಿದರೆ, ನಿನಗೆ ಏನನ್ನಿಸಬಹುದು? ನೀನು ತಿರಸ್ಕರಿಸಿದರೆ ಒಂದು ಸುಂದರ ಗೆಳೆತನ ಹಾಳಾಗುತ್ತಲ್ವಾ? ಒಬ್ಬರ ಮುಖ ಮತ್ತೊಬ್ಬರು ನೋಡಲು ಸಾಧ್ಯವೇ? ಉಹೂ, ಇದ್ಯಾವುದನ್ನೂ ನಾನು ಯೋಚಿಸಲೇ ಇಲ್ಲ. ನನ್ನ ಜೊತೆಗಿದ್ದ ಇನ್ನಿತರ ಗೆಳತಿಯರ ಒತ್ತಾಯವೂ ನನ್ನಲ್ಲಿದ್ದ ಒಂದಷ್ಟು ಅಳುಕನ್ನು ದೂರ ಮಾಡಿತು. ಅವನು ತಿರಸ್ಕರಿಸಲು ಸಾಧ್ಯವೇ ಇಲ್ಲಾ ಅನ್ನೋ ಅಹಂ ನನ್ನ ತಲೆಗೇರಿತ್ತು. ಒಪ್ಪಿಕೊಂಡೇ ಒಪ್ಪಿಕೊಳ್ತಾನೆ ಅನ್ನೋದು ನನ್ನ ಬಲವಾದ ನಂಬಿಕೆಯಾಗಿತ್ತು. ಪ್ರೊಪೋಸ್ ಮಾಡಿಬಿಟ್ಟೆ. ಆದರೆ ನೀನು ಒಪ್ಪಲಿಲ್ಲ. ರಿಜೆಕ್ಟ್ ಮಾಡಿಬಿಟ್ಟೆ. ರಿಜೆಕ್ಟ್ ಮಾಡಿ ದೂರವಾಗಿದ್ದರೆ, ಬಹುಶಃ ನನಗೆ ನಿನ್ನ ಹಾಗೂ ನಿನ್ನ ಗೆಳೆತನದ ವ್ಯಾಲ್ಯೂ ಅರ್ಥವಾಗ್ತಾ ಇರಲಿಲ್ಲ. ಆದರೆ ಅಲ್ಲೂ ನೀನು ಗೆಳೆತನಕ್ಕೆ ಎಷ್ಟು ಬೆಲೆ ಕೊಟ್ಟೆ ಅಂದರೆ, ದಿನದ ೨೪ ಗಂಟೆಗಳು ಜೊತೆಯಲ್ಲಿ ಇಲ್ಲದಿದ್ದರೂ, ಅವಶ್ಯಕತೆ ಇದ್ದಾಗ ನಾನು ನಿನ್ನ ಹಿಂದೆ ಇದ್ದೇ ಇರ್ತೀನಿ ಅನ್ನೋದನ್ನು ತೋರಿಸಿಬಿಟ್ಟೆ. ನನ್ನ ಯಾವ ಸಂತೋಷದಲ್ಲೂ ಡೈರೆಕ್ಟಾಗಿ ಪಾಲ್ಗೊಳ್ಳದಿದ್ದರೂ, ನನ್ನ ದುಃಖದಲ್ಲಿ ಮಾತ್ರ ೧೦೦% ಭಾಗವಹಿಸಿದೆ. ನನ್ನ ಜೀವನದ ಪ್ರತಿ ಗಳಿಗೆಯಲ್ಲೂ ದೈಹಿಕವಾಗಿ ನನ್ನ ಜೊತೆ ಇಲ್ಲದಿದ್ದರೂ, ಮಾನಸಿಕವಾಗಿ ಹೆಜ್ಜೆ, ಹೆಜ್ಜೆಗೂ ನನ್ನ ಜೊತೆಗೆ ನೀನಿದ್ದಿ. ಇವತ್ತಿಗೂ ನನ್ನ ಪ್ರತಿಯೊಂದು ಸಂಕಟದ ಗಳಿಗೆಯಲ್ಲೂ ನೀನು ಹೇಳಿದ ಮಾತುಗಳು ಕಿವಿಯಲ್ಲಿ ಅನುರಣಿಸುತ್ತವೆ. ಮೈಕೊಡವಿಕೊಂಡು ಮೇಲೆಳಲು ಪ್ರೇರೇಪಿಸುತ್ತವೆ. ಆದರೆ ಇಂತಹ ಒಂದು ಗೆಳೆತನವನ್ನು ನಾನು ಅಪಾರ್ಥ ಮಾಡಿಕೊಂಡೆ ಅನ್ನೋ ಗಿಲ್ಟ್ ನನ್ನನ್ನು ಸಿಕ್ಕಾಪಟ್ಟೆ ನಿನ್ನಿಂದ ದೂರ ಓಡಿಸಿಬಿಟ್ಟಿತು. ನೀನು ನನ್ನ ಜೀವದ ಗೆಳೆಯನಾಗಿದ್ದೆ. ನನ್ನೆಲ್ಲಾ ಕಷ್ಟಗಳನ್ನೂ ನಿನ್ನ ಬಳಿ ಹೇಳಿಕೊಂಡು ಆ ಗೆಳೆತನದ ಪ್ರಯೋಜನವನ್ನೇನೋ ಪಡೆದುಕೊಂಡೆ. ನನ್ನ ಅನುಭವದ ಗಾತ್ರವನ್ನು ಹಿಗ್ಗಿಸಿಕೊಂಡೆ. ಆದರೆ ದುರಂತವೆಂದರೆ, ನಾನು ಯಾವಾಗಲೂ ಈ ಗೆಳೆತನದ ರಿಸೀವರ್ ಮಾತ್ರ ಆಗಿಬಿಟ್ಟೆ. ನಾನೆಂದಿಗೂ ನಿನ್ನ ಗೆಳತಿಯಾಗಲಿಲ್ಲ. ನೀನೆಂದಿಗೂ ನಿನ್ನ ಕಷ್ಟಗಳೇನು? ನೋವೇನು? ಇದ್ಯಾವುದನ್ನೂ ನನ್ನ ಬಳಿ ಹಂಚಿಕೊಳ್ಳಲು ಸಾಧ್ಯವಾಗಲಿಲ್ಲ. ಈ ವಿಷಯದಲ್ಲಿ ನನ್ನನ್ನು ದೂರವಿಟ್ಟುಬಿಟ್ಟೆ. 

ನೀನು ದೂರವಾದ ಬಳಿಕ ಗೆಳೆತನವೆಂದರೇನು ಎನ್ನುವುದು ಅರ್ಥವಾಗುತ್ತಿದೆ. ಗೆಳೆತನವೆಂದರೆ ಬರೇಯ ಟೈಮ್ ಪಾಸ್ ಅಲ್ಲ. ಅಪ್ಪನ ರಕ್ಷಣೆ, ಅಮ್ಮನ ವಾತ್ಸಲ್ಯ, ಅಣ್ಣನ ಕೀಟಲೆ, ತಮ್ಮನ ತುಂಟತನ, ಅಕ್ಕ, ತಂಗಿಯರ ಕಾಳಜಿ, ಗಂಡನ ಪ್ರೀತಿ, ಮಕ್ಕಳ ಮುಗ್ದತೆ ಎಲ್ಲವೂ ಒಂದಿಡೀ ಗೆಳೆತನದಲ್ಲಿಯೇ ಸಿಕ್ಕಿಬಿಡುವುದು. ಅದನ್ನು ನಾನು ಗಂಡನೆಂಬ ಬಂಧನದಲ್ಲಿ ಸಿಲುಕಿಸಿಬಿಡಲು ಯೋಚಿಸಿದ್ದಾದರೂ ಹೇಗೆ? ನನಗೆ ಈ ಗಿಲ್ಟ್ ನಿಂದ ಹೊರಬರಲು ಸಾಧ್ಯವಾಗಲೇ ಇಲ್ಲ. ಇಂದು ನಿನ್ನ ಹುಟ್ಟಿದ ಹಬ್ಬ. ಯಾರು ಮರೆತರೂ, ನಾನು ಮರೆಯಲಾರೆನೆಂದು ನಿನಗೂ ಕೂಡ ಗೊತ್ತಿರುತ್ತದೆ. ಇಂದಾದರೂ ನೀನು ಕರೆ ಮಾಡುವೆಯೆಂದು ನಂಬಿದ್ದೇನೆ. ನಿನ್ನ ಕರೆಗಾಗಿ ಕಾಯುತ್ತಿರುವ .................

ಗಂಡಿನ ದೇಹದ ಹೆಣ್ಣಿನ ಅಂತರಂಗ - ೨

ಈ ನನ್ನ ಹೊಸ ಗೆಳೆಯರನ್ನು ಭೇಟಿಯಾಗುವುದು ಹೆಚ್ಚಾದಂತೆ, ಟ್ಯೂಷನ್ನಿಗೆ ಹೋಗುವುದನ್ನು ಕಡಿಮೆ ಮಾಡಿದೆ. ಈ ಗುಂಪಿನಲ್ಲಿ ಎಲ್ಲರಿಗಿಂತ ಹಿರಿಯನಿಗೆ ೩೦ ವರ್ಷ ವಯಸ್ಸಾಗಿತ್ತು. ಆತನಿಂದ ಅಲ್ಪ ಸ್ವಲ್ಪ ಭರತನಾಟ್ಯವನ್ನು ಕೂಡ ಕಲಿತೆ. ಇವರಿಂದಾಗಿ ನನಗೆ ನನ್ನಂತೆಯೇ ಇನ್ನೂ ಅನೇಕರು ಇರುವರೆಂದು, ಅವರು ಹೆಣ್ಣಿನಂತೆಯೇ ಸೀರೆ .ಹಾಗೂ ‘ಆಪರೇಷನ್’ ಮಾಡಿಸಿಕೊಂಡು ಸಂಪೂರ್ಣ ಹೆಣ್ಣಾಗಿ ಬದಲಾಗುವರೆಂಬುದು ತಿಳಿಯಿತು! ಇಂತಹವರು ಗುಂಪುಗಳಾಗಿ ದಿಂಡಿಗಲ್, ಈರೋಡ್ ಗಳಲ್ಲಿ ನೆಲೆಸಿರುವರೆಂದು ಹಾಗೂ ಇವರಲ್ಲಿ ಅನೇಕರು ದೆಹಲಿ, ಮುಂಬೈನಂತಹ ದೂರ ಪ್ರದೇಶಗಳಿಗೆ ಹೋಗಿ ನೆಲೆಸಿದ್ದಾರೆ ಎಂಬುದು ಕೂಡ ತಿಳಿಯಿತು. ಆದರೆ ನಮ್ಮ ಈ ನಮಕಲ್ಲ್ ನಲ್ಲಿ, ಈ ಕೋಟೆ, ಗುಡ್ಡಗಳಲ್ಲಿ ಮಾತ್ರ ನಾವು ಹೆಂಗಸರಂತೇ ಇರಬಹುದಿತ್ತು. 

ನಮಕಲ್ ನ ಜನ ಬೆಳಿಗ್ಗೆ ಮಾತ್ರ ಈ ಕೋಟೆಗೆ ಬರುತ್ತಿದ್ದರು. ಆದರೆ ನಾವು ಮಾತ್ರ ಸಂಜೆ, ಎಲ್ಲರೂ ಹೋದ ನಂತರ ಇಲ್ಲಿಗೆ ಬರುತ್ತಿದ್ದೆವು. ಯಾರಾದರೂ ರೌಡಿಗಳನ್ನು ನೋಡಿದರೆ ನಾವು ಓಡಿಬಿಡುತ್ತಿದ್ದೆವು. ಹೀಗಿರುವಾಗ, ಒಂದು ಸಂಜೆ ಇಬ್ಬರು ರೌಡಿಗಳು ನನ್ನ ಸಂಗಾತಿಗಳಲ್ಲಿ ಒಬ್ಬಳನ್ನು ಹಿಡಿದುಕೊಂಡು ಬಹುದೂರ ಪೊದೆಗಳ ಮರೆಗೆ ಹೋಗಿಬಿಟ್ಟರು. ನಮಗೆ ಅವರೊಂದಿಗೆ ಹೊಡೆದಾಡುವಷ್ಟು ಶಕ್ತಿಯಾಗಲೀ ಅಥವಾ ಧೈರ್ಯವಾಗಲೀ ಇರಲಿಲ್ಲ. ಹಾಗೆಂದು ನನ್ನ ಗೆಳತಿಯನ್ನು ಅಲ್ಲಿಯೇ ಬಿಟ್ಟು ಹೋಗಲು ಕೂಡ ಸಾಧ್ಯವಾಗಲಿಲ್ಲ. ಸುಮಾರು ಒಂದು ಘಂಟೆಯ ನಂತರ ಆಕೆ ವಾಪಾಸ್ಸಾದಳು. ಆಕೆಯ ಮುಖದ ತುಂಬಾ ಬೆವರು ಹಾಗೂ ಆಕೆಗೆ ನಡೆಯಲು ಕೂಡ ಸಾಧ್ಯವಾಗುತ್ತಿರಲಿಲ್ಲ. ಬಹಳ ಸುಸ್ತಾದಂತಿದ್ದಳು.

ಆಕೆಗೆ ಆದದ್ದೇನು? ಎನ್ನುವ ನನ್ನ ಕುತೂಹಲಕ್ಕೆ ಆಕೆ ನೀಡಿದ ಉತ್ತರ ನಂಬಲಸಾಧ್ಯವಾಗಿತ್ತು. ಹೀಗೂ ಉಂಟೇ? ತಮ್ಮ ಕಾಮ ತೃಷೆ ತೀರಿಸಿಕೊಳ್ಳಲು, ಆ ರೌಡಿಗಳು ಈ ನನ್ನ ಗೆಳತಿಯನ್ನು ಬಳಸಿಕೊಂಡಿದ್ದರು. ಆದು ಅಸಹಜವಾಗಿ! ಮಲವಿಸರ್ಜನೆಗಾಗಿ ಪ್ರಕೃತಿ ಕೊಟ್ಟಿರುವ ಅಂಗವನ್ನು ಅವರು ಹಿಂಸಿಸಿದ್ದರು! ನನ್ನ ಸಂಗಾತಿಗಳು, ನಮ್ಮಂತಹ ಹೆಣ್ಣಿಗರಿಗೆ ಸಂಭೋಗಿಸಲು, ಬೇರೆ ಇನ್ಯಾವ ಮಾರ್ಗವು ಇಲ್ಲವೆಂದು, ನಮ್ಮಂತಹವರಿಗೆ ಇದೇ ಜೀವನವೆಂದು ಬಿಡಿಸಿ ಹೇಳಿದರು. ನನಗೆ ಈ ಬಗ್ಗೆ ಅರಿವಿಲ್ಲದಿದ್ದುದು ಅವರಿಗೆಲ್ಲಾ ಸ್ವಲ್ಪ ಮಟ್ಟಿಗೆ ಆಶ್ಚರ್ಯವುಂಟು ಮಾಡಿತು. ಆದರೆ ನನಗೆ ಈ ರೀತಿಯ ಅಸಹಜವಾದ ಜೀವನ ಬೇಕಿರಲಿಲ್ಲ. ನನಗೆ ನಾನೊಬ್ಬಳು ಸುಂದರ ಹೆಣ್ಣಾಗಿ ಪರಿವರ್ತಿತಳಾಗಿ, ಸುಂದರ, ಸುಸಂಸ್ಕೃತ ಗಂಡಿನೊಂದಿಗೆ ಮದುವೆಯಾಗಿ, ನನ್ನದೇ ಆದ ಸಂಸಾರ ಹೊಂದುವ ಬಯಕೆಯಿದೆ ಎಂದೆ. ನನ್ನ ಸಂಗಾತಿಗಳೆಲ್ಲರೂ ಅಪಹಾಸ್ಯ ಮಾಡಿ ನಕ್ಕು, ಹೆಣ್ಣಾಗಿ ಪರಿವರ್ತಿತಳಾಗಬೇಕೆಂದರೆ ಬಹು ಕಷ್ಟ, ಮುಂಬೈಗೋ, ದೆಹಲಿಗೋ ಹೋಗಿ ನೆಲೆಸಿ, ಆಪರೇಷನ್ ಮಾಡಿಸಿಕೊಂಡರೆ ನಿನ್ನಾಸೆ ಪೂರೈಸಬಹುದೋ ಏನೋ ಎಂದು ಹೇಳಿದರು.

ಈ ನನ್ನ ಗೆಳೆಯರಿಂದ ದಿಂಡಿಗಲ್ ನಲ್ಲಿ ಆಷಾಢದಲ್ಲಿ ದೇವಿಯ ಜಾತ್ರೆ ನಡೆಯುವದೆಂದು, ಅಲ್ಲಿಗೆ ನನ್ನಂಥ ಆದರೆ ಆಪರೇಷನ್ ಮಾಡಿಸಿಕೊಂಡು ಹೆಂಗಸರಾಗಿರುವವರು, ಮುಂಬೈ, ದೆಹಲಿಯಲ್ಲಿ ನೆಲೆಸಿರುವವರು ಆ ಜಾತ್ರೆಗೆ ಪೂಜೆ ಸಲ್ಲಿಸಲು ಬರುವರೆಂದು ತಿಳಿಯಿತು. ಅವರಿಗೆ ‘ಅಮ್ಮ’ ಎಂದು ಕರೆಯುವರೆಂಬುದು ಕೂಡ ತಿಳಿಯಿತು. ನಾವೊಂದಷ್ಟು ಮಂದಿ, ಈ ‘ಅಮ್ಮ’ ನನ್ನು ಈ ಜಾತ್ರೆಯ ಸಂದರ್ಭದಲ್ಲಿ ಭೇಟಿ ಮಾಡಲು ನಿರ್ಧರಿಸಿದೆವು. ನಾನು ಟ್ಯೂಷನ್ ಹಣದಲ್ಲಿ ದಿಂಡಿಗಲ್ ಗೆ ಹೋಗಲು ಒಂದಿಷ್ಟು ಬಳೆ, ಸರ, ಓಲೆ ಮುಂತಾದವನ್ನು ಖರೀದಿಸಿದೆ. ಆಗ ಮನೆಯಲ್ಲಿ ಅಕ್ಕನ ಮದುವೆಯ ತಯಾರಿ ನಡೆಯುತ್ತಿತ್ತು. ಅವಳ ಲಂಗ, ದಾವಣಿಯನ್ನು ಕೂಡ ಕದ್ದು ಬಚ್ಚಿಟ್ಟುಕೊಂಡೆ. ಯಾರಿಗೂ ಗೊತ್ತಾಗದಂತೆ ನಾವೊಂದೈದು ಮಂದಿ ದಿಂಡಿಗಲ್ ಬಸ್ ಹತ್ತಿಯೇ ಬಿಟ್ಟೆವು. ನನ್ನ ಗೆಳೆಯರು ಬಸ್ ನಲ್ಲಿ ಹೆಂಗಸರ ಹಾಗೇ ಮಾತನಾಡಲು ಶುರು ಮಾಡಿದರು. ಆದರೆ ಹುಡುಗನ ವೇಷ ಧಾರಿಯಾಗಿ ಹುಡುಗಿಯಾಗಿ ಮಾತಾಡುವುದು ನನಗೇನೋ ಸರಿ ಕಾಣಿಸಲಿಲ್ಲ. ಬಸ್ ನಲ್ಲಿದ್ದವರೆಲ್ಲರ ದೃಷ್ಟಿ ನನಗೆ ಇಷ್ಟವಾಗಲಿಲ್ಲ. ಸಂಪೂರ್ಣ ಹುಡುಗಿಯಾಗಿ ನಾನೆಂದೂ ಬದಲಾಗುವೆನೋ? ಎನ್ನುವ ಕಳವಳ ನನಗೆ ಶುರುವಾಯಿತು. ನಾನು ಸಂಪೂರ್ಣ ಹುಡುಗಿಯಾಗುವೆನೇ? ಪ್ರಶ್ನೆ ಕಾಡಹತ್ತಿತು.

ದಿಂಡಿಗಲ್ ನಲ್ಲಿ ‘ಅಮ್ಮ’ ಇದ್ದ ಜಾಗಕ್ಕೆ ತಲುಪಿದೆವು. ಅಲ್ಲಿ ನಮ್ಮಂತಿರದೆ, ಸಂಪೂರ್ಣ ಹೆಂಗಸರಂತೆಯೇ ಕಾಣುತ್ತಿದ್ದ ಒಂದಷ್ಟು ಮಂದಿ ವಯಸ್ಸಾದವರು ಇದ್ದರು. ನೋಡಲಿಕ್ಕೆ ವ್ಯತ್ಯಾಸ ಗೊತ್ತಾಗದಿದ್ದರೂ, ಅವರ ಧ್ವನಿ ಕೇಳುತ್ತಿದ್ದಂತೆ ಅವರ್ಯಾರು ಎಂಬುದು ತಿಳಿದುಬಿಡುತ್ತಿತ್ತು. ಅವರಲ್ಲಿ ಒಬ್ಬಾಕೆ, ನಮ್ಮನ್ನುದ್ದೇಶಿಸಿ, ಮಕ್ಕಳೇ, ಎಲ್ಲಿಂದ ಬಂದಿರಿ? ನಿಮ್ಮ ಹಿರಿಯರಿಗೆ ‘ಪಾಂಪದುತಿ’ ಮಾಡಿ ಎಂದರು. ಸೀರೆ ಉಟ್ಟವರಿಗೆಲ್ಲಾ ನಾವು ಕಾಲಿಗೆ ನಮಸ್ಕರಿಸಿ ‘ಪಾಂಪದುತಿ ಅಮ್ಮಾ’ ಎಂದೆವು. ಅವರೆಲ್ಲರೂ ನಮ್ಮನ್ನು ಆಶೀರ್ವದಿಸಿದರು. ಆಪರೇಶನ್ ಮಾಡಿಸಿಕೊಂಡು, ಸೀರೆ ಉಟ್ಟವರನ್ನು ‘ಅಮ್ಮಾ’ ಎಂದು, ಹಾಗೂ ಅವರಿಗೆ ನಮಗಿಂತ ಗೌರವ ಹೆಚ್ಚೆಂಬುದನ್ನು, ಅಂತಹವರಿಗೆ ಕಾಲಿಗೆ ನಮಸ್ಕರಿಸಿ ಪಾಂಪದುತಿ ಹೇಳುವುದು ‘ನಮ್ಮ’ ಸಂಪ್ರದಾಯವೆಂಬುದನ್ನು ನಾನರ್ಥ ಮಾಡಿಕೊಂಡೆ.

ಅಲ್ಲಿದ್ದ ಹಿರಿಯಾಕೆಯೊಬ್ಬಳಲ್ಲಿ, ಸಂಪೂರ್ಣ ಹೆಣ್ಣಾಗಿ ಬದಲಾಗುವುದು ಹೇಗೆಂದು ಕೇಳಿದೆ. ಆಕೆ ನನ್ನನ್ನು ದೃಷ್ಟಿಸಿ ನೋಡಿದಳು. ನನಗಾಗ ಸುಮಾರು ೧೪ - ೧೫ ವರ್ಷಗಳಾಗಿದ್ದವು. ಆದರೆ ಮುಖದಲ್ಲಿ ಹುಡುಗರಿಗೆ ಮೂಡಬೇಕಾಗಿದ್ದ ಗಡ್ಡ, ಮೀಸೆ ಇವಾವುದೂ ನನಗೆ ಮೂಡಿರಲಿಲ್ಲ. "ನೀನೇನಾದರೂ ನಿರ್ವಾಣ ಮಾಡಿಸಿಕೊಂಡರೆ ಸಂಪೂರ್ಣ ಹೆಣ್ಣಂತೆಯೇ ಕಾಣಿಸುತ್ತೀಯೇ" ಎಂದಳು. ಸುತ್ತ ನೆರೆದಿದ್ದ ನನ್ನ ಸಹಪಾಠಿಗಳೆಲ್ಲರೂ ಆಕೆಯ ಮಾತನ್ನು ಅನುಮೋದಿಸಿದರು. ನನಗೆ ನನ್ನ ಬಗ್ಗೆ ಬಹಳ ಹೆಮ್ಮೆಯೆನಿಸಿತು. ‘ನಮ್ಮ’ ಸಂಪ್ರದಾಯದಲ್ಲಿ ಸಂಪೂರ್ಣ ಹೆಣ್ಣಾಗಬೇಕಾದರೆ ತಲೆಕೂದಲು ಬೆಳೆಸಿಕೊಳ್ಳಬೇಕು, ಕಿವಿ, ಮೂಗು ಹುಡುಗಿಯರಂತೆಯೇ ಚುಚ್ಚಿಸಿಕೊಳ್ಳಬೇಕು ಹಾಗೂ ಒಬ್ಬ ಗುರು (ಸೀರೆಯುಟ್ಟ ಸಂಪೂರ್ಣ ಹೆಣ್ಣಾಗಿ ಪರಿವರ್ತಿತಳಾದವಳು) ವಿಗೆ ‘ಚೇಲಾ’ ಆಗಿ, ಆಕೆ ಕೊಟ್ಟ ಕೆಲಸಗಳನ್ನು ಮಾಡಬೇಕು. ಅಕೆಗಾಗಿ ದುಡಿದು ತರಬೇಕು. ಹೀಗೆ ಆಕೆ ಹೇಳಿದಂತೆ, ನಿಯತ್ತಾಗಿ ಕೆಲಸ ಮಾಡಿ, ಹಣ ಸಂಪಾದಿಸಿ ತಂದರೆ, ಒಂದೆರಡು ವರ್ಷಗಳಾದ ಮೇಲೆ, ಆಕೆ ನಮಗೆ ಹೆಣ್ಣಾಗಲು ಸಹಾಯ ಮಾಡುವಳು. 

‘ಗುರು’ ಎಂದರೆ ತಾಯಿ. ಆಕೆ ಅವಳ ‘ಚೇಲಾ’ ಗಳಿಗೆ ತನ್ನ ಮನೆಯಲ್ಲಿ ವಾಸಿಸಲು ಅವಕಾಶ ಮಾಡಿಕೊಡುವಳು. ‘ಚೇಲಾ’ ಗಳ ಹೊಟ್ಟೆ, ಬಟ್ಟೆಗಳನ್ನು ಕೂಡಾ ಆಕೆಯೇ ನೋಡಿಕೊಳ್ಳುವಳು. ತಾಯಿ ತನ್ನ ಮಕ್ಕಳನ್ನು ಹೇಗೆ ಸಲಹುವಳೋ, ಹಾಗೇ ಸಲಹುವುದು ಈ ‘ಗುರು’ವಿನ ಕೆಲಸ. ಇದನ್ನೆಲ್ಲಾ ನನಗೆ ತಿಳಿಸಿದಾಕೆಗೆ ನನ್ನ ‘ಗುರು’ವಾಗಲೂ ಕೇಳಿಕೊಂಡೆ. ಆಕೆ ಮರುದಿವಸ ನಮ್ಮ ‘ಜಮಾತ್’ ಸೇರುವುದು. ಅಲ್ಲಿ ನಾನು ನಿನ್ನನ್ನು ನನ್ನ ‘ಚೇಲಾ’ ಆಗಿ ದತ್ತು ಸ್ವೀಕಾರ ಮಾಡುವೆ ಎಂದಳು. ಆ ರಾತ್ರಿ ನನ್ನ ಜೀವನದ ಅತ್ಯಂತ ಸುಖಮಯ ರಾತ್ರಿಯಾಗಿತ್ತು. ನನ್ನನ್ನು ದತ್ತು ಸ್ವೀಕಾರ ಮಾಡುವೆನೆಂದ ಆ ‘ಅಮ್ಮ’ ನ ಮಡಿಲಲ್ಲಿ ನಾನಂದು ಮಗಳಾಗಿದ್ದೆ. ನಮ್ಮಂಥ ಎಲ್ಲಿಯೂ ಸಲ್ಲದವರಿಗಾಗಿಯೇ, ದೇವರು ಇಂತಹ ಅಮ್ಮಂದಿರನ್ನು ಸೃಷ್ಠಿಸಿರಬೇಕೆಂದುಕೊಂಡೆ. ಮನೆ, ಕುಟುಂಬ ಎಲ್ಲಾ ಬಿಟ್ಟು ಬಂದ ನಮಗೆ ಅಮ್ಮನ ಆಸರೆ ದೊರಕಿತ್ತು.

‘ಜಮಾತ್’ ಎಂಬುವುದು ಈ ಸೀರೆ ಉಟ್ಟ ಹಿರಿಯರ ಸಭೆ. ಅಲ್ಲಿ ನಮ್ಮ, ನಮ್ಮ ತಂಡದ ಮುಖ್ಯ ವಿಷಯಗಳ ಚರ್ಚೆ, ಹಾಗೂ ಹೊಸ ‘ಚೇಲಾ’ ಗಳ ದತ್ತು ಸ್ವೀಕಾರ ಮುಂತಾದವು ನಡೆಯುವುದು. ಈರೋಡ್, ಮಧುರೈ ಮುಂತಾದ ಕಡೆಗಳಿಂದಲೂ ಈ ಜಮಾತ್ ಗೆ ಅಮ್ಮಂದಿರು ಬಂದಿದ್ದರು. ಈ ಜಮಾತ್ ನಲ್ಲಿ ಯಾರು ಯಾರ ‘ಗುರು’ ‘ಚೇಲಾ’ ಎಂಬುದರ ಬಗ್ಗೆ ಚರ್ಚೆ ನಡೆಯಿತು. ಎಲ್ಲರೂ ಸುತ್ತ ಕುಳಿತಿದ್ದರು. ಒಂದು ತಟ್ಟೆಗೆ ಬಿಳಿ ಅರಿವೆಯನ್ನು ಹಾಸಿ, ಅದರ ಮೇಲೆ ಎಲೆ, ಅಡಿಕೆ ಹಾಗೂ ೧.೨೫ ರೂಪಾಯಿಗಳನ್ನು ಇಟ್ಟಿದ್ದರು. ನನ್ನ ‘ಗುರು’ ನನ್ನನ್ನು ‘ಚೇಲಾ’ ಆಗಿ ಸ್ವೀಕರಿಸುತ್ತಿದ್ದೇನೆಂದು ಹೇಳಿ ಕಾಣಿಕೆಯಾಗಿ ೫ ರೂ ಗಳನ್ನು, ೧.೨೫ ರೂಗಳನ್ನು ಜಮಾತ್ ಗೆ ಕೊಟ್ಟಳು. ಅಲ್ಲಿದ್ದ ಇನ್ನಿತರ ಹಿರಿಯರು ನನ್ನ ಹೆಸರನ್ನು ಕರೆದು, ಈ ೫ ರೂಗಳು ‘ಚೇಲಾ’ ಗೆಂದು ಹೇಳಿದರು. ಸುತ್ತ ನೆರೆದವರೆಲ್ಲರೂ ಚಪ್ಪಾಳೆ ತಟ್ಟಿ, ಅನುಮೋದಿಸಿದರು. ಆ ಗಳಿಗೆಯಿಂದ ಆಕೆ ನನ್ನ ‘ಗುರು’ ವಾದಳು. ನಾನು ಆಕೆಯ ‘ಚೇಲಾ’ ಮಗಳಾದೆ. ಎಲ್ಲರಿಗೂ ‘ಪಾಂಪದುತಿ’ ಮಾಡಿದೆ.

ಆಧಾರ : truth about me (A hijra story) by A.Revath

ಗಂಡಿನ ದೇಹದ ಹೆಣ್ಣಿನ ಅಂತರಂಗ - ೧ನಾನ್ಯಾರು? ಇಂದಿಗೂ ನನಗೆ ಇದೊಂದು ಬಗೆಹರಿಯದ ಸಂಗತಿ. ಸೇಲಮ್ ಬಳಿಯ ನಮಕಲ್ಲ್ ತಾಲೂಕಿನ ಪುಟ್ಟದೊಂದು ಹಳ್ಳಿಯಲ್ಲಿ ಹುಟ್ಟಿದ ನನಗೆ ಅಪ್ಪ ಅಮ್ಮ ಇಟ್ಟ ಹೆಸರು ದೊರೈಸ್ವಾಮಿ. ಆದರೆ ನನಗೆಂದಿಗೂ ಈ ನನ್ನ ಹೆಸರು ಆಪ್ತವೆನಿಸಲೇ ಇಲ್ಲ! ನನಗೆ ಇಬ್ಬರು ಅಣ್ಣಂದಿರು, ಒಬ್ಬಳು ಅಕ್ಕ. ನಾನೇ ಎಲ್ಲರಿಗಿಂತ ಕೊನೆಯವನಾದ ಕಾರಣ ಎಲ್ಲರ ಪ್ರೀತಿ, ಆದರ ನನಗೊಂದಿಷ್ಟು ಹೆಚ್ಚೇ ಸಿಗುತ್ತಿತ್ತು. ನಮ್ಮದೊಂದು ಹಳೆಯ ಎರಡಂತಸ್ತಿನ ಮನೆಯಲ್ಲಿ ನಮ್ಮ ವಾಸ. ನಮ್ಮಪ್ಪನ ಬಳಿ ಎರಡು ಲಾರಿಗಳು ಹಾಗೂ ೫ ಎಕರೆ ಒಣಭೂಮಿ ಇತ್ತು. ಅಪ್ಪ ಲಾರಿ ಡ್ರೈವರ್, ದೊಡ್ಡಣ್ಣ ಅವರ ಬಳಿ ಕ್ಲೀನರ್ ಆಗಿ ಸಂಸಾರ ನಡೆಸಲು ಸಹಾಯ ಮಾಡುತ್ತಿದ್ದ. ಅಪ್ಪ ಸುತ್ತ ಮುತ್ತಲಿನ ಹಳ್ಳಿಗಳಲ್ಲಿ ಹಾಲನ್ನು ಸಂಗ್ರಹಿಸಿ, ಹತ್ತಿರದ ಹಾಲಿನ ಕಾರ್ಖಾನೆಗೆ ಸರಬರಾಜು ಮಾಡುತ್ತಿದ್ದ. ಇದಕ್ಕಾಗಿ ಈತ ಮುಂಜಾನೆ ಐದಕ್ಕೆ ಹೊರಟರೆ ಮನೆಗೆ ರಾತ್ರಿ ಹತ್ತು ಗಂಟೆಯ ತನಕವೂ ಎಡೆಬಿಡದಂತೆ ದುಡಿಯುತ್ತಿದ್ದ. ಅಣ್ಣಂದಿರು ಕೂಡ ಈತನಿಗೆ ಸಹಾಯ ಮಾಡುತ್ತಿದ್ದರು. ಅವರು ಬರುವ ಹೊತ್ತಿಗೆ ನಾನು ಹಾಗೂ ನನ್ನಕ್ಕ ಇಬ್ಬರೂ ಆಗಲೇ ನಿದ್ರಾವಸ್ಥೆಯಲ್ಲಿರುತ್ತಿದ್ದೆವು. ಅಪ್ಪ ಬಂದೊಡನೆಯೇ ಊಟ ಮುಗಿಸಿ, ನನಗೊಂದಿಷ್ಟು ಮೊಸರನ್ನ ಕಲಿಸಿ, ನನ್ನನ್ನು ಅಕ್ಕರೆಯಿಂದ ಎಬ್ಬಿಸಿ ಉಣಿಸುತ್ತಿದ್ದ.

ನನಗಾಗ ೧೦ ವರ್ಷ. ನಮ್ಮ ಹಳ್ಳಿಯಲ್ಲಿ ೫ನೇ ತರಗತಿಯ ತನಕ ಓದಲು ಶಾಲೆಯಿತ್ತು. ಅದಕ್ಕಿಂತ ಹೆಚ್ಚಿಗೆ ಓದುವವರು, ನಮಕಲ್ಲ್ ಟೌನಿಗೆ ಹೋಗಬೇಕಿತ್ತು. ಅಣ್ಣಂದಿರು ಹಾಗೂ ಅಕ್ಕ ಟೌನಿನಲ್ಲಿ ಓದುತ್ತಿದ್ದರು. ನಾನು ನೆರೆಹೊರೆಯ ಹುಡುಗಿಯರೊಂದಿಗೆ ಹಳ್ಳಿಯ ಶಾಲೆಗೆ ಹೋಗಿಬರುತ್ತಿದ್ದೆ. ನನಗೆ ಆ ಹುಡುಗಿಯರ ಆಟಗಳು ಅಚ್ಚುಮೆಚ್ಚಿನದಾಗಿದ್ದವು. ನನಗೆ ಹುಡುಗಿಯರ ಹಾಗೇ ಅಕ್ಕ ಏಳುವ ಮುನ್ನವೇ ಎದ್ದು, ಮನೆಬಾಗಿಲಿಗೆ ನೀರು ಹಾಕಿ, ಕಸ ಗುಡಿಸಿ, ರಂಗೋಲೆ ಹಾಕುವುದು ಅತ್ಯಂತ ನೆಚ್ಚಿನ ಕಾಯಕವಾಗಿತ್ತು. ಅಮ್ಮನಿಗೆ ಅಡುಗೆ ಮನೆಯಲ್ಲಿ ಸಹಾಯ ಮಾಡುವುದು, ಇನ್ನಿತರ ಮನೆ ಕೆಲಸಗಳಾದ ಕಸ ಗುಡಿಸು, ಪಾತ್ರೆ ತೊಳೆ, ಇಂತಹ ಕೆಲಸಗಳೆಲ್ಲವೂ ನನ್ನ ಓರಗೆಯ ಹುಡುಗಿಯರ ಹಾಗೇ ನನಗೂ ಕೂಡ ಇಷ್ಟವಾಗಿದ್ದವು. ಶಾಲೆಯಿಂದ ಬಂದೊಡನೆ ಅಕ್ಕನ ಉದ್ದನೆಯ ಲಂಗ, ರವಿಕೆ ತೊಟ್ಟು, ತಲೆಗೆ ಟವಲ್ಲನ್ನು ಜಡೆಯಂತೆ ಸುತ್ತಿ, ನವ ವಧುವಿನ ಹಾಗೇ ನಾಚುತ್ತಾ ನಡೆಯುವುದು ನನ್ನ ಹವ್ಯಾಸವಾಗಿತ್ತು. ಸುತ್ತಮುತ್ತಲಿನವರು ನನ್ನ ಈ ಅವತಾರವನ್ನು ನೋಡುತ್ತಾ, ತಮಾಷೆ ಮಾಡುತ್ತಾ, ದೊಡ್ಡವನಾದ ಮೇಲೆ ಸರಿ ಹೋಗುತ್ತಾನೆ ಎಂದು ಹೇಳುತ್ತಿದ್ದರೇ ಹೊರತು ಯಾರೂ ಕೂಡ ಗಂಭೀರವಾಗಿ ತೆಗೆದುಕೊಳ್ಳುತ್ತಿರಲಿಲ್ಲ. ಆದರೆ ಶಾಲೆಯಲ್ಲಿನ ನನ್ನ ಇನ್ನಿತರ ಸಹಪಾಠಿಗಳು ಮಾತ್ರ ನನ್ನನ್ನು ನಂಬರ್ ೯, ಹೆಣ್ಣಿಗ ಎಂದು ಛೇಡಿಸುತ್ತಿದ್ದರು. ಮತ್ತೂ ಹಲವರು, ‘ಏಕೆ ನೀನು ಹುಡುಗಿಯರ ವಸ್ತ್ರಗಳನ್ನು ಧರಿಸುತ್ತೀಯಾ? ನಿನ್ನ ನಡವಳಿಕೆ, ನಡುಗೆ ಏಕೆ ಹುಡುಗಿಯಂತಿದೆ? ನೀನು ಹುಡುಗನಲ್ಲವೇ? ಎಂದೆಲ್ಲಾ ಕೇಳುತ್ತಿದ್ದರು. ಆದರೂ ನನಗೆ ಹುಡುಗಿಯಂತೆ ಇರುವುದು ಇಷ್ಟವಾಗುತ್ತಿತ್ತು. ನನ್ನ ಮನೆಯ ಎದುರು ಕಾಲೇಜು ಹುಡುಗನೊಬ್ಬ ಇದ್ದ. ನನ್ನ ಶಾಲಾ ಪಾಠಗಳಲ್ಲಿ ನನಗೇನಾದರೂ ಅನುಮಾನವಿದ್ದರೆ ಕೇಳಿ ಪರಿಹರಿಸಿಕೊಳ್ಳುತ್ತಿದ್ದೆ. ಆಗೆಲ್ಲಾ ಆತ ನನ್ನ ಕೆನ್ನೆ ಚಿವುಟಿ, ನನ್ನ ತಬ್ಬಿಕೊಂಡು ಮುತ್ತಿಡುವಾಗಲೆಲ್ಲಾ ನನಗದು ಇಷ್ಟವಾಗುತ್ತಿತ್ತು. ಆತ ನನ್ನನ್ನು ಹೆಣ್ಣಿಗ ಎಂದು ಕರೆದು ಮುದ್ದಿಡುವಾಗಲೆಲ್ಲಾ ನವಿರಾದ ನಾಚಿಕೆಯೊಂದು ನನ್ನನ್ನು ಆವರಿಸುತ್ತಿತ್ತು.


ರಜಾದಿನಗಳಲೆಲ್ಲಾ ಮಕ್ಕಳು ಅಲ್ಲಿನ ಗುಡ್ಡದ ಮೇಲೆ ಆಕಳನ್ನು ಮೇಯಿಸಲು ಕರೆದುಕೊಂಡು ಹೋಗುತ್ತಿದ್ದೆವು. ಅಲ್ಲಿ ಹಾಡು ಹೇಳಿಕೊಳ್ಳುತ್ತಾ, ನಾನು ಹುಡುಗಿಯಂತೆ ಎಂದು ಕಲ್ಪಿಸಿಕೊಂಡು ಮನದಣಿಯೆ ಕುಣಿಯುವುದು ನನಗೆ ಬಹಳ ಖುಷಿ ಕೊಡುತ್ತಿತ್ತು.ತರಗತಿಯಲ್ಲಿ ನನ್ನ ಓರಗೆಯ ಗೆಳತಿಯರನ್ನು ನೋಡುವುದರಲ್ಲಿಯೇ ಮಗ್ನನಾಗಿಬಿಡುತ್ತಿದ್ದೆ. ಅವರ ಜಡೆ, ಜಡೆಗೆ ಕಟ್ಟಿದ ರಿಬ್ಬನ್, ಅವರ ಲಂಗ, ರವಿಕೆ, ಅವರು ಆ ಜಡೆಯನ್ನು ಹೆಣೆದು, ಮಲ್ಲಿಗೆ, ಕನಕಾಂಬರ ಹೂ ಮುಡಿದಿರುವ ಪರಿ ಇವೆಲ್ಲವನ್ನು ನೋಡುತ್ತಿದ್ದರೆ ನನಗೆ ಈ ಭಾಗ್ಯವಿಲ್ಲವಲ್ಲ ಎಂದು ಅಸೂಯೆಯಾಗುತ್ತಿತ್ತು. ನನಗೆ ಪಾಠದ ಕಡೆ ಲಕ್ಷ್ಯವೇ ಇರುತ್ತಿರಲಿಲ್ಲ. ಟೀಚರ್ ನನ್ನ ತೊಡೆ ಚಿವುಟಿ, ಒಂಟಿ ಕಾಲಿನಲ್ಲಿ ಬೆಂಚಿನ ಮೇಲೆ ನಿಲ್ಲುವ ಶಿಕ್ಷೆ ನೀಡುತ್ತಿದ್ದರು. ಅನೇಕಾನೇಕ ಬಾರಿ ಈ ಶಿಕ್ಷೆ ನಾನು ಹುಡುಗಿಯ ಹಾಗೇ ವರ್ತಿಸುವುದಕ್ಕಾಗಿಯೇ ಆಗಿರುತ್ತಿತ್ತು. ಆದರೆ ನನಗೆ ಮಾತ್ರ ನಾನು ಹುಡುಗಿಯರ ಹಾಗೇ ನಾನು ವರ್ತಿಸುತ್ತಿದ್ದೇನೆ ಎಂದನಿಸುವುದಕ್ಕಿಂತ ಹೆಚ್ಚಾಗಿ ನಾನು ಹುಡುಗಿಯೇ ಎಂದೆನಿಸುತ್ತಿತ್ತು! ನಾನು ಏಳನೆಯ ತರಗತಿಯಲ್ಲಿದ್ದಾಗ ಶಾಲಾ ವಾರ್ಷಿಕೋತ್ಸವಕ್ಕೆ ನಾಟಕಕ್ಕಾಗಿ ಸತ್ಯ ಹರಿಶ್ಚಂದ್ರನ ಹೆಂಡತಿಯ ಪಾತ್ರ ಮಾಡಬೇಕಾಯಿತು. ಇದಾದ ನಂತರ ಹೈಸ್ಕೂಲ್ ವಿದ್ಯಾರ್ಥಿಗಳು ನನ್ನನ್ನು ಛೇಡಿಸುವುದು ಹೆಚ್ಚಾಯಿತು. ಅವರು ನನ್ನ ಹಣೆಗೆ, ಎದೆಗೆ ಮುಷ್ಠಿಯಿಂದ ಗುದ್ದುವುದು, ಚಿವುಟುವುದು, ಅಶ್ಲೀಲವಾಗಿ ಮಾತನಾಡುವುದು ಹೀಗೆ ಶುರು ಮಾಡಿದರು. ಇಂತಹ ಹುಡುಗರನ್ನು ಕಂಡರೆ ಬೆದರುವುದು, ನನ್ನನ್ನು ಅಕ್ಕರೆಯಿಂದ ಕಾಣುವ ಹುಡುಗರತ್ತ ಆಕರ್ಷಿತನಾಗುತ್ತಾ, ನಾನು ಅವರನ್ನು ಪ್ರೀತಿಸುತ್ತಿದ್ದೇನೆ ಎನ್ನುವ ಕಲ್ಪನೆಯಲ್ಲಿ ಮುಳುಗಲು ಶುರು ಮಾಡಿದೆ.

ನಾನು ಹುಡುಗನಾಗಿದ್ದರೂ, ಇನ್ನಿತರ ಹುಡುಗರತ್ತ ಆಕರ್ಷಿತನಾಗುತ್ತಿದ್ದೇನೆ ಏಕೆ? ಇದು ಸರಿಯೇ, ತಪ್ಪೇ? ಈ ತರಹದ ಭಾವನೆಗಳು ನನ್ನಲ್ಲಿ ಮಾತ್ರವೇ ಮೂಡುತ್ತಿದೆಯೇ? ನಾನು ಹುಡುಗಿಯೇ? ಹುಡುಗನೇ? ಇದೆಲ್ಲವೂ ನನ್ನನ್ನು ಗೊಂದಲಕ್ಕುಂಟು ಮಾಡಿದವು. ಹಾಗಾಗಿ ನಾನು ಸ್ವಲ್ಪಸ್ವಲ್ಪವೇ ಓದಿನಿಂದ ವಿಮುಕ್ತನಾಗುತ್ತಾ, ಆಸಕ್ತಿ ಕಳೆದುಕೊಳ್ಳುತ್ತಾ ಹೋದೆ. ಇದ್ಯಾವುದನ್ನೂ ನಾನು ಅಪ್ಪ, ಅಮ್ಮನಲ್ಲಿ, ಅಣ್ಣಂದಿರಲ್ಲಿ ಹೇಳಲಾರದೇ ಹೋದೆ. ಹಾಗೂ ಹೀಗೂ ನಾನು ಹತ್ತನೇ ತರಗತಿಗೆ ಬಂದು ತಲುಪಿದೆ. ಈಗೀಗ ನನಗೆ ನಾನೊಂದು ಗಂಡಿನ ದೇಹದಲ್ಲಿ ಬಂಧಿಯಾಗಿರುವ ಹೆಣ್ಣೆಂದೇ ಭಾಸವಾಗುತ್ತಿತ್ತು. ಆದರೆ ಅದು ಹೇಗೆ ಸಾಧ್ಯ? ಹೀಗೂ ಇರುತ್ತದೆಯೇ? ನನ್ನನ್ನು ಈ ಪ್ರಪಂಚ ಹೆಣ್ಣೆಂದು ಸ್ವೀಕರಿಸುತ್ತದೆಯೇ? ಆ ದೇವರು ನನಗೇಕೆ ಇಂತಹ ಶಿಕ್ಷೆ ಕೊಟ್ಟ? ಈ ತರಹದ ದ್ವಂದ್ವದಲ್ಲಿ ಸಿಲುಕುವಂತೆ ಏಕೆ ಮಾಡಿದ? ಲೋಕದ ಕಣ್ಣಿಗೆ ನಾನು ಗಂಡು, ಆದರೆ ಅಂತರಂಗದಲ್ಲಿ ನಾನೊಬ್ಬಳು ಹೆಣ್ಣು! ಹೀಗೇಕೆ? ಹೀಗೇಕೆ? ಹಗಲು ರಾತ್ರಿ ನಾನು ಗೊಂದಲಗಳಲ್ಲಿ, ದ್ವಂದ್ವಗಳಲ್ಲಿ ಸಿಲುಕಿ ನರಳಿ ಹೋದೆ. ಈ ನರಳಾಟಕ್ಕಿಂತ ಸಾವಾದರೂ ಬರಬಾರದೇ? ಎಂದೆಲ್ಲಾ ಅನಿಸತೊಡಗಿತು. ಇದೆಲ್ಲವುದರ ಮಧ್ಯೆ ನನ್ನ ವಿದ್ಯೆ ಸೊರಗಿಹೋಯಿತು.

ನಾನು ಪರೀಕ್ಷೆಯಲ್ಲಿ ಫೇಲ್ ಆದೆ.ಈ ಅಶಾಂತಿ, ನೋವು, ಗೊಂದಲಗಳನ್ನು ಕಡಿಮೆ ಮಾಡಿಕೊಳ್ಳಲು ಮನೆಯ ಹತ್ತಿರವಿದ್ದ ಕೋಟೆಯ ಬಳಿ ಯೋಚಿಸುತ್ತಾ ಕುಳಿತುಕೊಳ್ಳುತ್ತಿದ್ದೆ. ಹೀಗಿರುವಾಗ ಒಮ್ಮೆ ೪ ಜನ ಹುಡುಗರು ಲುಂಗಿ ಉಟ್ಟು ಅಲ್ಲಿಗೆ ಬಂದರು. ನಾನು ಹೆದರುತ್ತಾ ವಾಪಾಸ್ಸು ಬರಲು ಯೋಚಿಸುತ್ತಿದ್ದಾಗ, ಅವರು ಒಬ್ಬರನ್ನೊಬ್ಬರು ಹುಡುಗಿಯರ ಹಾಗೇ ಹೆಸರಿಡಿದು ಕರೆದುಕೊಳ್ಳುತ್ತಾ, ಸ್ತ್ರೀಯರ ಹಾಗೇ ನೃತ್ಯ ಮಾಡಲು ಶುರು ಮಾಡಿದರು. ಇವರು ಕೂಡ ನನ್ನ ಹಾಗೇಯೇ ಗಂಡಿನ ದೇಹದೊಳಗಿನ ಹೆಣ್ಣುಗಳೆಂದು ತೋರಿತು. ನಾನು ಕೂಡ ಇವರಲ್ಲೊಬ್ಬಳು ಎಂದೆನಿಸಿತು. ಅವರೊಂದಿಗೆ ಆಪ್ತತೆ ಮೂಡಿತು. ಇವರ ಪರಿಚಯವಾದ ನಂತರ ಟ್ಯೂಷನ್ನಿಗೆ ಹೋಗುವುದನ್ನು ಕಡಿಮೆ ಮಾಡಿ, ಕೋಟೆಯ ಬಳಿ ಹೋಗುವುದು ಹೆಚ್ಚಾಯಿತು. ಅವರೊಂದಿಗೆ ನಾನು ಕೂಡ ಹೆಣ್ಣಿನಂತೆ ನರ್ತಿಸುತ್ತಿದ್ದೆ.

(ಮುಂದುವರೆಯುವುದು…..)


ಆಧಾರ : The Truth about me - ರೇವತಿ

(ಮೇ ೧೦ ೨೦೧೧ ರಂದು ರೇವತಿಯವರ ಬಗ್ಗೆ ಬರೆದುಕೊಡಲು ಸ್ನೇಹಿತನೊಬ್ಬ ವಿನಂತಿಸಿಕೊಂಡಾಗ ಬರೆಯಲು ಶುರು ಮಾಡಿದ್ದು, ಆಮೇಲೆ ಮುಗಿಸಲಾಗಲೇ ಇಲ್ಲ :( )

ಲೈಫು ಇಷ್ಟೇನೇ

ಗಾಂಧಿನಗರದಲ್ಲಿ ತಯಾರಾಗುವ ಪ್ರತಿ ಚಲನಚಿತ್ರಗಳು ಇಂತಿಂತಹ ಗುಂಪಿಗೆ ಎಂದು ತಯಾರಾಗುತ್ತವೆ. ಉದಾಹರಣೆಗೆ ಮಚ್ಚು, ಲಾಂಗ್, ಫೈಟ್, ಇಂತಹವು ಒಂದು ವರ್ಗದ ವೀಕ್ಷಕರಿಗಾದರೆ, ಕಣ್ಣೀರು, ತಾಯಿ ಸೆಂಟಿಮೆಂಟ್ಸ್ ಮತ್ತೊಂದು ವರ್ಗದವರಿಗೆ, ದೇವಿ ಮಹಾತ್ಮೆ ಇಂತಹ ಭಕ್ತಿ ಪ್ರಧಾನ ಚಿತ್ರಗಳು ಇನ್ನೊಂದು ವರ್ಗದ ವೀಕ್ಷಕರಿಗೆ, ಹೀಗೆ. ಯೋಗರಾಜ್ ಭಟ್ ತಮ್ಮ ‘ಪಂಚರಂಗಿ’ ನಿರ್ಮಾಣದ ವೇಳೆಗೆ ನೀಡಿದ ಸಂದರ್ಶನವೊಂದರಲ್ಲಿ ಹೇಳಿದ್ದರು, ನಮ್ಮ ಕನ್ನಡ ಚಲನಚಿತ್ರಗಳು ಉಳಿಯಬೇಕಾದರೆ ಅಥವಾ ಥಿಯೇಟರು ಗಳಲ್ಲಿ ಹಣ ಮಾಡಬೇಕೆಂದಿದ್ದರೆ ಆ ಚಿತ್ರವು ಯುವ ಜನಾಂಗವನ್ನು ಅಂದರೆ ೧೮ ವಯಸ್ಸಿನಿಂದ ೨೩ ವರ್ಷದವರನ್ನು ಸೆಳೆಯುವಂತಿರಬೇಕು. ಆ ವರ್ಗದವರಿಗೆ ಸಿನೆಮಾ ಹಿಡಿಸಿದರೆ ಚಿತ್ರವು ಹಿಟ್ ಆಗುವುದು ಎಂದಿದ್ದರು. ಅವರ ಶಿಷ್ಯ ಪವನ್ ಕುಮಾರ್ ಅಕ್ಷರಷಃ ಭಟ್ಟರ ಈ ಮಾತಿಗೆ ಮಾರು ಹೋಗಿ ನಿರ್ದೇಶಿಸಿರುವ ಸಿನೆಮಾ ‘ಲೈಫು ಇಷ್ಟೇನೇ’.

ನಾಯಕ, ಆತನಿಗೆ ಹಲವು ಹುಡುಗಿಯರೊಂದಿಗೆ ಉಂಟಾಗುವ ಮೊದಲ ಪ್ರೀತಿ! ಪ್ರೈಮರಿ ಸ್ಕೂಲಿನಿಂದ ಹಿಡಿದು ಕಾಲೇಜಿನ ತನಕವೂ ಆತನ ಸನಿಹಕ್ಕೆ ಬರುವ ಪ್ರತಿಯೊಬ್ಬ ಹುಡುಗಿಯೊಂದಿಗೂ ಆತನಿಗೆ ಮೊದಲ ಬಾರಿಗೆ ಹಿಂದೆಂದೂ ಆಗದಿದ್ದಂತಹ, ಕಾಣದಿದ್ದಂತಹ ಪ್ರೀತಿ ಉಂಟಾಗುತ್ತದೆ. ಆದರೆ ಯಾವುದೂ ಕೂಡ ಸಫಲವಾಗುವುದಿಲ್ಲ. ನಾಯಕನ ಅಪ್ಪ, ಅಮ್ಮ ತಮ್ಮ, ತಮ್ಮ ಮೊದಲ ಪ್ರೀತಿಯಲ್ಲಿ ಸೋತರೂ, ಮದುವೆಯಾದ ಮೇಲೆ ಒಬ್ಬರನ್ನೊಬ್ಬರನ್ನು ಪ್ರೀತಿಸುತ್ತಿರುವವರು. ಈಗಿನ ಕಾಲದ ಮಕ್ಕಳನ್ನು ಹೇಗೆ ಬೆಳೆಸಬೇಕೆಂಬ ಅರಿವಿರುವವರು. ನಾಯಕನ ಮನೆಯಲ್ಲಿ ಎಂತಹ ಮುಕ್ತತೆಯ ವಾತಾವರಣವೆಂದರೆ ಅಪ್ಪ, ಪ್ರೈಮರಿ ಸ್ಕೂಲ್ ವಯಸ್ಸಿನ ಮಗನೊಂದಿಗೆ ಕುಳಿತು ವಯಸ್ಕರ ಸಿನೆಮಾ ನೋಡುವುದು, ತಾಯಿ ವ್ಯಾಲೆಂಟೇನ್ಸ್ ಡೇ ಗೆಂದು ಮಗನಿಗೆ ಹಣ ಕೊಡುವುದು, ಪ್ರೀತಿಸಿ ಕೈಕೊಟ್ಟ ಗೆಳತಿಯ ನೆನಪುಗಳನ್ನು ಅಪ್ಪ, ಅಮ್ಮನ ಮುಂದೆಯೇ ಮಗ ಸುಟ್ಟು ಹಾಕುವುದು, ಮಗ ಅಪ್ಪನಿಗೆ ಕಾಂಡೋಮ್ ತೆಗೆದುಕೊಂಡಿದ್ದೇನೆ, ರಾತ್ರಿ ಮನೆಗೆ ಬರೊಲ್ಲವೆನ್ನುವುದು…. ಮಕ್ಕಳಿಗೆ ತಪ್ಪು ಮಾಡಲು ಬಿಡಬೇಕು, ಆಗಲೇ ಅವರು ಬುದ್ಧಿ ಕಲಿಯಲು ಸಾಧ್ಯ ಎನ್ನುವ ಅಮ್ಮ, ಅಡುಗೆ ಮನೆಯಲ್ಲಿಯೇ ಸಿಗರೇಟ್ ಸೇದುವ ಅಪ್ಪ. ಇದು ಅವರ ಸಂಸಾರ, ಸಂಸ್ಕಾರ.

ಕಾಲೇಜಿನಲ್ಲಿ ನಿಜವಾಗಲೂ ಮೊದಲ ಬಾರಿಗೆ! ಪ್ರೀತಿಸುವ ನಾಯಕ, ಆದರೆ ಆ ಗೆಳತಿಯ ಅಪ್ಪ ಬಹಳ ಶಿಸ್ತುಗಾರ. ಆತನ ಭಯಕ್ಕೆ ತನ್ನ ಪ್ರೀತಿಯೊಂದಿಗೆ ರಾಜಿ ಮಾಡಿಕೊಂಡು, ಅಪ್ಪ ಹುಡುಕಿದ ಶ್ರೀಮಂತ ಹುಡುಗನನ್ನು ಮದುವೆಯಾಗುವ ಆ ಹುಡುಗಿ, ಆಕೆಯ ನೆನಪಿನಲ್ಲಿ ಜೂನಿಯರ್ ದೇವದಾಸ್ ಆಗುವ ನಾಯಕ, ಆತನನ್ನು ಆಕೆಯ ನೆನಪಿನಿಂದ ಹೊರಗೆ ಬರಲು ಪ್ರಯತ್ನಿಸುವ ಮತ್ತೊಬ್ಬ ಹುಡುಗಿಯೊಂದಿಗೆ ನಮ್ಮ ಈ ನಾಯಕನಿಗೆ ಉಂಟಾಗುವ ಮತ್ತೊಂದು ಮೊದಲ ಪ್ರೀತಿ! ಆ ಹುಡುಗಿ ಅತ್ಯಂತ ಜೀವಂತಿಕೆ ತುಂಬಿಕೊಂಡಂಥವಳು. ಸರಳ, ಸುಂದರ ಜೀವನ ನಡೆಸಬೇಕೆನ್ನುವಂತಹವಳು. ದಾರಿಬದಿಯಲ್ಲಿ ಸಿಗುವ ತಿಂಡಿ ತಿನ್ನುತ್ತಾ, ರಸ್ತೆಯ ಮೇಲೆ ಮಲಗಿ ನಕ್ಷತ್ರ ಎಣಿಸುವಂತಹಳು. ನಾಯಕನಿಗೆ ಮೋಸ ಮಾಡಿದ ಹುಡುಗಿಯ ವಿರುದ್ದ ಸ್ವಭಾವದವಳು. ಈಕೆಗೆ ನಾಯಕನ ಮೇಲೆ ನಿಜವಾಗಲೂ ಮೊದಲಬಾರಿಗೆ ಪ್ರೀತಿ ಉಂಟಾಗುತ್ತದೆ.

ಈತನಿಗಿಬ್ಬರೂ ಗೆಳೆಯರು, ಒಬ್ಬ ಮಂತ್ರಿಯ ಮಗ ಶ್ರೀಮಂತ (ಆತನ ಕಥೆ ಮುಂದುವರೆಯುವುದಿಲ್ಲ). ಮತ್ತೊಬ್ಬ ಹಳ್ಳಿಯಿಂದ ತಾತನ ಕೊನೆಯಾಸೆ ನೆರವೇರಿಸಲು ನಗರದಲ್ಲಿ ಓದಲು ಬಂದಿರುವಾತ. ಈ ಗೆಳೆಯನ ತಂದೆ, ತಾಯಿ ಬಡವರು. ಈತನ ಕನಸುಗಳಲ್ಲಿ ಬಣ್ಣವಿಲ್ಲ. ಅಪ್ಪ, ಅಮ್ಮನಿಗೆ ಕಷ್ಟವಾಗಬಾರದು, ಬೇಗ ಓದು ಮುಗಿಸಿ, ಕೆಲಸ ಹುಡುಕಿ, ತನ್ನನ್ನು ತಾನು ಅರಿತು, ನಂತರ ಪ್ರೀತಿ, ಪ್ರೇಮ ಎನ್ನುವ ಪ್ರಾಕ್ಟಿಕಲ್ ಹುಡುಗ. ಹುಡುಗಿಯರೊಂದಿಗೆ ಚೆಲ್ಲಾಟವಾಡುತ್ತಾ, ಅಪ್ಪ, ಅಮ್ಮ ನೋಡಿಕೊಳ್ತಾರೆ ಎಂಬ ಉದಾಸೀ ಮನೋಭಾವದ ನಾಯಕನ ತದ್ವಿರುದ್ದ ಸ್ವಭಾವ ಆತನ ಗೆಳೆಯನದು. ನಿನ್ನ ಹೃದಯ ಪಬ್ಲಿಕ್ ಶೌಚಾಲಯದಂತೆ, ಕ್ಲೀನ್ ಮಾಡಿಕೋ ಎಂದು ನಾಯಕನಿಗೆ ಬುದ್ಧಿ ಹೇಳುವ ಈತನಿಗೇನಾಯಿತು? ನಾಯಕ ಎಂತಹ ನಿರ್ಧಾರ ಕೈಗೊಂಡ? ಎರಡನೆಯ ನಾಯಕಿಯ ಮೊದಲ ಪ್ರೀತಿ ಯಶಸ್ಸು ಕಂಡಿತೇ? ಇದು ಚಿತ್ರದ ಕ್ಲೈಮಾಕ್ಸ್.
ಸಂಪೂರ್ಣವಾಗಿ ಹುಡುಗರ ಮೇಲೆ ಕೇಂದ್ರೀಕೃತವಾದ ಚಿತ್ರವಿದು. ಹುಡುಗಿಯರ ಭಾವನೆಗಳಿಗೆ ಅಷ್ಟಾಗಿ ಮಹತ್ವ ನೀಡಿಲ್ಲ. ಹಾಗಾಗಿಯೇ ಬಹುಶಃ ಪಾತ್ರ ವಹಿಸಿದವರಲ್ಲಿ ಕೂಡಾ ಏನೋ ಕೊರತೆಯಿದ್ದಂತೆ ಭಾಸವಾಗುವುದು. ಪ್ರೀತಿ, ಪ್ರೇಮ, ಕೊನೆಗೆ ಮುಂಗಾರು ಮಳೆಯ ಹಾಡಾದ ‘ಇವನು ಇನಿಯನಲ್ಲ’ ವನ್ನು ಕೂಡ ಲೇವಡಿ ಮಾಡಿ, ಪ್ರೀತಿಯೆಂಬುದೇ ಹಾಸ್ಯಾಸ್ಪದ ವೆಂಬಂತೆ ಚಿತ್ರಿಸಿರುವುದು, ಅದಕ್ಕೆ ವೀಕ್ಷಕ (ಟೀನೇಜ್ ಹುಡುಗರು)ರಿಂದ ಬೀಳುವ ಚಪ್ಪಾಳೆಗಳು, ಶಿಳ್ಳೆಗಳು ಪ್ರಸ್ತುತ ಯುವ ಜನಾಂಗದ ಮನಸ್ಸಿನ ಕನ್ನಡಿಯಂತೆ ತೋರುವುದು.

ಗಾಂಧಿನಗರದ ಸಿದ್ಧ ಸೂತ್ರಗಳನ್ನು ಮೀರುವ / ಮೀರಿದ ಕಥೆ, ಚಿತ್ರಕಥೆಯಾಗಿ, ಕನ್ನಡ ಚಿತ್ರರಂಗಕ್ಕೆ ಭವಿಷ್ಯವಿದೆ ಎಂಬ ಆಶಾಭಾವನೆ ಹುಟ್ಟು ಹಾಕಿದರೂ, ಡೈಲಾಗ್ಸ್ ಗಳಲ್ಲಿ ಸ್ವಲ್ಪ ಹಿಡಿತ, ಮಧ್ಯಂತರದ ನಂತರ ನಿಧಾನವಾಗಿ ಸಾಗುವ ಕಥೆ ಸ್ವಲ್ಪ ಬೋರ್ ಹೊಡೆಸಿ, ವೀಕ್ಷಕರ ನಡುವೆ ಪಂಚರಂಗಿ ಚೆನ್ನಾಗಿತ್ತು, ಇದೂ ಪರವಾಗಿಲ್ಲ ಎಂಬ ಅನಿಸಿಕೆ ಮೂಡಿಸಿ, ಗುರುವನ್ನು ಮೀರದ ಶಿಷ್ಯನಾಗಿಯೇ ಉಳಿದುಬಿಡುತ್ತಾರೆ ಪವನ್.

ನೆನಪಿನಲ್ಲೇ ನೀನೀಗ ಎಂದಿಗಿಂತ ಸನಿಹ!


ನೀರಲ್ಲಿ ಸಣ್ಣ ಅಲೆಯೊಂದು ಮೂಡಿ ಚೂರಾದ ಚಂದ್ರನೀಗ....
ಇಲ್ಲೊಂದು ಚೂರು, ಅಲ್ಲೊಂದು ಚೂರು ಒಂದಾಗಬೇಕು ಬೇಗ...
ತುಸು ದೂರ ಸುಮ್ಮನೆ ಜೊತೆಯಲ್ಲಿ ಬಂದೆಯಾ...
ನಡುವೆಲ್ಲೊ ಮೆಲ್ಲಗೆ ಮಾಯವಾದೆಯ.... :-(

ಈ ಹಾಡು ಕೇಳಿದಾಗಲೆಲ್ಲಾ ನನಗೆ ಅರಿವಿಲ್ಲದಂತೆ ನನ್ನ ಕೆನ್ನೆ ಒದ್ದೆಯಾಗುತ್ತದೆ. ಇವತ್ತು ಹುಣ್ಣಿಮೆ. ನನಗೆ ಚೆನ್ನಾಗಿ ಗೊತ್ತು. ನನ್ನ ತರಹಾ ನೀನು ಕೂಡ ಚಂದ್ರನನ್ನು ನೋಡ್ತಾ ಕುಳಿತಿರ್ತೀಯಾ. ನೀನು ನನ್ನಿಂದ ದೂರವಾಗಿ, ಇವತ್ತಿಗೆ ಆರು ತಿಂಗಳಾಗಿದ್ದರೂ, ನೀ ಇಲ್ಲಿಯೇ ನನ್ನ ಪಕ್ಕದಲ್ಲೇ ಕುಳಿತಿದ್ದಿಯೇನೋ ಎಂದೆನಿಸುತ್ತಿದೆ. ನಿನ್ನ ಬಿಸಿ ಉಸಿರು ಇಲ್ಲೇ ಎಲ್ಲೋ ಹತ್ತಿರದಲ್ಲೇ ಸುಳಿದಂತಾಗುತ್ತಿದೆ. ತಲೆ ಸವರಿ ‘ಚಿನ್ನ, ಪುಟ್ಟ’ ಎಂದೇನೋ ಹೇಳಿದಂತೆನಿಸುತ್ತಿದೆ. ನೀನು ‘ಚಿನ್ನ, ಪುಟ್ಟ, ಮುದ್ದು, ಬಂಗಾರ’ ಎಂದೆಲ್ಲಾ ಏನೇನೋ ಹೆಸರುಗಳಿಂದ ಚೆಂದದಲ್ಲಿ ನನ್ನನ್ನು ಕರೆಯುತ್ತಿದ್ದೆ. ಆದರೆ ನನಗ್ಯಾಕೋ ನಿನಗೊಂದು ಚೆಂದದ ಹೆಸರನ್ನಿಡಲಾಗಲೇ ಇಲ್ಲ. ನಿನ್ನನ್ನು ಯಾವ ಹೆಸರಿನಿಂದ ಕರೆಯಲಿ? ಎಂದೆಲ್ಲಾ ನಾನು ತಲೆಕೆಡಿಸಿಕೊಳ್ಳುವಾಗಲೂ, ನಿನ್ನ ಮುಗುಳ್ನಗೆಯೇ ಉತ್ತರವಾಗುತ್ತಿತ್ತು. ಚಂದ್ರನನ್ನು ನೋಡುವಾಗಲಾದರೂ ನನ್ನ ನೆನಪಿಸಿಕೊಳ್ತೀಯಾ? ‘ಮರೆತಿದ್ದರೆ ತಾನೇ?’ ಎಂದು ನಗ್ತಿದ್ದೀ ಅಲ್ವಾ? ಅಥವಾ ನಾನು ಆಶಾವಾದಿಯೇ?

ಪ್ರೀತಿ ವಸ್ತುವಲ್ಲ, ಹುಡುಕಿದ್ರೆ ಸಿಗೊಲ್ಲ, ಡಿಮಾಂಡ್ ಮಾಡಿ ಪಡಕೊಳ್ಳೋಕು ಆಗೊಲ್ಲ, ಪ್ರೀತಿಯೊಂದು ಸುಂದರ ಅನುಭವ, ತನ್ನಷ್ಟಕ್ಕೆ ಉಂಟಾಗುವುದು ಅಂತಾ ಬಲವಾಗಿ ನಂಬಿದ್ದ ನನ್ನನ್ನು ಗೆಳತಿಯರೆಲ್ಲರೂ ಗೇಲಿ ಮಾಡಿ ನಗುವಾಗ, ನನ್ನ ಅನಿಸಿಕೆಯೇ ತಪ್ಪೇ? ಎಂದು ಯೋಚಿಸ್ತಿದ್ದೆ. ಆದರೆ ನಿನ್ನೊಂದಿಗಿನ ಸ್ನೇಹ ಯಾವಾಗ ಪ್ರೀತಿಯಾಗಿ ಬದಲಾಯ್ತೋ? ತಿಳಿಯಲೇ ಇಲ್ಲ. ಹುಣ್ಣಿಮೆಯ ರಾತ್ರಿ ನೀ ನನ್ನ ಮಡಿಲಲ್ಲಿ ಮಲಗಿದ್ದೆ. ಆ ಏಕಾಂತ, ಸುತ್ತಲೂ ಕಾಡು, ಚಂದ್ರನ ತಿಳಿ ಬೆಳಕು ನಿನ್ನ ಕಣ್ಣುಗಳಲ್ಲಿ ಪ್ರತಿಫಲಿಸುತ್ತಿತ್ತು. ನಿನ್ನ ನಗೆಯಲ್ಲಿ ನನಗೆ ಆ ಚಂದ್ರ ಕಾಣುತ್ತಿದ್ದ. ನನ್ನ ಬೆರಳುಗಳು ನಿನ್ನ ತಲೆಗೂದಲಿನೊಟ್ಟಿಗೆ ಆಟವಾಡುತ್ತಿದ್ದವು. ಆ ಕ್ಷಣದಲ್ಲಿ ಪ್ರೀತಿ ಮೂಡಿತೇ? ಅದಕ್ಕೂ ಮುನ್ನಾ ನಾವು ಬಹಳಷ್ಟು ರಾತ್ರಿಗಳನ್ನು ಒಟ್ಟಿಗೆ ಕಳೆದಿದ್ದರೂ, ಇಂತಹ ಸುಂದರ ಅನುಭವದ ಅರಿವಾಗಿರಲಿಲ್ಲ. ಅಂದು ನಮ್ಮಿಬ್ಬರಿಗೂ ಕಾಲದ ಪರಿವೇ ಇರಲಿಲ್ಲ. ಆದರೆ ಇಂದು?! ಗಡಿಯಾರವೇ ಕೆಟ್ಟು ಕುಳಿತಿದೆ.

ಸ್ವಭಾವತಃ ವಾಚಾಳಿಯಾದ ನಾನು, ನಿನ್ನ ಪರಿಚಯವಾದಂದಿನಿಂದ ದಿನದ ೨೪ ಗಂಟೆಗಳೂ ಮಾತಾಡಿದರೂ, ನನಗೆ ಸಮಾಧಾನವಾಗುತ್ತಿರಲಿಲ್ಲ. ಎದ್ದಾಗಿನಿಂದ ನಡೆದ ಪ್ರತಿಯೊಂದನ್ನು ನಿನಗೆ ವರದಿ ಮಾಡದಿದ್ದರೆ ನನಗೆ ನಿದ್ರೆಯೇ ಬರುತ್ತಿರಲಿಲ್ಲ. ನೀನು ಮಾತ್ರ ಎಂದಿಗೂ ನನ್ನ ಮೇಲೆ ಇದಕ್ಕಾಗಿ ಅಸಹನೆ ಪಟ್ಟಿದ್ದಾಗಲೀ, ಕೋಪವಾಗಲೀ ಮಾಡಿಕೊಳ್ಳಲೇ ಇಲ್ಲ. ನನ್ನೊಂದಿಗಿರುವ ಪ್ರತಿ ಕ್ಷಣವನ್ನು ನೀನು ಆಹ್ಲಾದಿಸುತ್ತಿದ್ದೆ. ನಾನೊಟ್ಟಿಗಿರುವಾಗ ನೀ ನಿನ್ನ ಬೇರೆ ಕೆಲಸದಲ್ಲಿ ಮಗ್ನನಾಗಿಬಿಟ್ಟರೆ ನನಗೆ ಸಿಟ್ಟು ಬರುತ್ತಿತ್ತು, ಕೂಗಾಡುತ್ತಿದ್ದೆ, ಎದ್ದು ಹೋಗ್ತೇನೆ ಎಂದೆಲ್ಲಾ ಹೆದರಿಸುತ್ತಿದ್ದೆ. ಆಗ ನೀನು ಸಮಚಿತ್ತದಿಂದ ನನ್ನನ್ನು ಕೂಡಿಸಿ ಹೇಳುತ್ತಿದ್ದ ಮಾತುಗಳು ಈಗಲೂ ನನ್ನ ಕಿವಿಯಲ್ಲಿ ಗುಂಯುಗುಟ್ಟುತ್ತದೆ. ‘ಬಂಗಾರ, ನಾನೇನೇ ಕೆಲಸ ಮಾಡುತ್ತಿರಲಿ, ನೀನು ನನ್ನೊಟ್ಟಿಗಿದ್ದರೆ ಮಾತ್ರ ನನಗೆ ಆ ಕೆಲಸದಲ್ಲಿ ಮಗ್ನನಾಗಲು ಸಾಧ್ಯ ಕಣೇ. ಅದರರ್ಥ ನಾನು ನಿನ್ನನ್ನು ಮರೆತಿದ್ದೇನೆ ಎಂದಲ್ಲ. ನನ್ನ ಮೌನ ನಿನ್ನೊಟ್ಟಿಗೆ ಮಾತನಾಡುತ್ತಿರುತ್ತೆ. ಅದನ್ನು ಕೇಳಿಸಿಕೋ’ ಎಂದೆಲ್ಲಾ ಹೇಳುತ್ತಿದ್ದೆ. ನನಗದು ಅರ್ಥವಾಗುತ್ತಿರಲಿಲ್ಲ. ನನ್ನ ಸಮಾಧಾನಕ್ಕೆ ಏನೋ ಹೇಳ್ತಿದ್ದೀಯಾ ಅಂದುಕೊಳ್ತಿದ್ದೆ. ನೀನಿಲ್ಲದ ಈ ಬಲವಂತದ ಏಕಾಂತದಲ್ಲಿ, ನಮ್ಮಿಬ್ಬರ ಮೌನಗಳು ಮಾತಾಡುತ್ತಿವೆ. ನನಗದರ ಅರಿವು ಇಂದಿಗಾಗುತ್ತಿದೆ.
ನನ್ನ ಪ್ರತಿ ಮಾತುಗಳು ನಿನಗೆ ಅರ್ಥವಾದಂತೆ, ಬೇರೆಯವರಿಗೆ ಅರ್ಥವಾಗುತ್ತಿರಲಿಲ್ಲ. ಎಷ್ಟೋ ಬಾರಿ, ನಾನು ಹೇಳುವ ಮುಂಚೆಯೇ, ನಾನು ಹೇಳಬೇಕೆಂದದ್ದು ನಿನಗೆ ತಿಳಿದುಬಿಡುತ್ತಿತ್ತು. ಆಶ್ಚರ್ಯಪಡುತ್ತಿದ್ದ ನನಗೆ ತಮಾಷೆ ಮಾಡುತ್ತಾ, ನಮ್ಮಿಬ್ಬರ ಹೃದಯಗಳು ಒಂದನ್ನೊಂದು ಬೆಸೆದುಕೊಂಡಿವೆ ಕಣೇ. ಅದಕ್ಕೆ ನೀನು ಹೇಳುವ ಮುಂಚೆಯೇ ನನಗೆ ತಿಳಿಯುತ್ತದೆ ಎಂದೆಲ್ಲಾ ಹೇಳಿ ನಗಿಸುತ್ತಿದ್ದ ನಿನಗೆ, ನನ್ನ ಹೃದಯವೀಗ ಅಳುತ್ತಿರುವುದರ ಅರಿವಾಗುತ್ತಿಲ್ಲವೇ? ಸಣ್ಣದೊಂದು ಘಟನೆ ನಮ್ಮಿಬ್ಬರ ನಡುವೆ ದೊಡ್ಡದಾಗಿಬಿಟ್ಟಿತು. ನೀ ಪರಿ ಪರಿಯಾಗಿ ಬಿಡಿಸಿ ಹೇಳಿದರೂ ನಾನು ನಿನ್ನನ್ನು ನಂಬದೇ, ಕೋಪಿಸಿಕೊಂಡೆ. ಆದರೆ ಎಂದೂ ತಾಳ್ಮೆ ಕಳೆದುಕೊಳ್ಳದ ನೀನು ಕೊಟ್ಟ ಶಿಕ್ಷೆಯಾದರೂ ಎಂತಹದು? ನನ್ನಿಂದ ಸಂಪೂರ್ಣ ದೂರವಾಗಿದ್ದು! ನಾನು ಕನಸಿನಲ್ಲಿಯೂ ಕೂಡ ಕಲ್ಪಿಸಿಕೊಳ್ಳಲಸಾಧ್ಯ. ಸಂಪೂರ್ಣ ನನ್ನ ಪ್ರೀತಿಯ ಬಗ್ಗೆ ತಿಳಿದಿದ್ದ ನಿನಗೆ, ನೀ ಬಿಟ್ಟು ಹೋದರೆ ನಾ ಹೇಗೆ ಬದುಕಬಲ್ಲೆ? ಎಂದೇನಾದರೂ ಯೋಚಿಸಿದೆಯಾ? ಪ್ರೀತಿ ಕಾಡಿ, ಬೇಡಿ, ಉಳಿಸಿಕೊಳ್ಳುವಂತಹದಲ್ಲ ಕಣೋ. ಹಾಗಾಗಿಯೇ ನಾನು ನಿನ್ನನ್ನು ಉಳಿಸಿಕೊಳ್ಳಲು ಯತ್ನಿಸಲಿಲ್ಲ.

ನೀನು ನಿಶ್ಯಬ್ದವಾಗಿ ನನ್ನ ಜಗತ್ತಿಗೆ ಬಂದೆ, ಶಾಶ್ವತವಾಗಿ ನೆಲೆ ನಿಂತೆ. ನೀನು ಎಲ್ಲಿದ್ದರೂ ನಾನೆಂದಿಗೂ ನಿನ್ನನ್ನು ವಾಪಾಸ್ಸು ಬರಲು ಕೇಳುವುದಿಲ್ಲ. ಆದರೆ ಒಂದು ಮಾತಂತೂ ಸ್ಪಷ್ಟ. ನಾನು ನಿನ್ನನ್ನು ಹೃದಯದಿಂದ ಪ್ರೀತಿಸುತ್ತೀನಿ ಕಣೋ. ನಿನ್ನ ಹೃದಯಕ್ಕೆ ಅದು ಕೇಳುತ್ತದೆ. ನನಗಷ್ಟೇ ಸಾಕು.

I want to say I Love You,
But I'm afraid...
Afraid that you'll just take it for granted.
In silence then, I'll just love you.
In silence I'll find...
The fulfillment of my dreams.

ಒಳಗೊಬ್ಬ ಒಬ್ಬ ಒಬ್ಬ ಪರಮಾತ್ಮ ಉಸಿರಾಡು, ಆಡು ಅಂತಾನೆಈ ನಮ್ಮ ಪರಮಾತ್ಮನಿಗೆ ಹಣ ಮಾಡುವುದರಿಂದ ಆಧ್ಯಾತ್ಮದವರೆಗೂ ಎಲ್ಲವೂ ಸುಲಭ. ಆದರೆ ಎಮ್ ಎಸ್ ಸಿ ಪರೀಕ್ಷೆ ಮಾತ್ರ ಬಿಡಿಸಲಾರದಷ್ಟು ಕಗ್ಗಂಟು. ಈತನ ತಂದೆ ಪ್ರಖ್ಯಾತ ಹೃದಯ ತಜ್ಞ. ವೈದ್ಯನಾಗಿ ಬೇಕಾದಷ್ಟು ಹಣ ಗಳಿಸಬಹುದಾದರೂ, ಆತ್ಮ ತೃಪ್ತಿಗೆ ಹಣವೇ ಮುಖ್ಯ ಅಲ್ಲವೆಂದು ಒಂದಷ್ಟು ಮಕ್ಕಳನ್ನು ಸಾಕಿಕೊಂಡು, ನೆಮ್ಮದಿಯಿಂದ ಬದುಕುತ್ತಿರುವ ಈತನಿಗೆ ಮಗನ ಹೃದಯದ ಬಗ್ಗೆ ಪರಮ ಹೆಮ್ಮೆ. ಈತ ಮಗ ಏನೂ ಮಾಡಿದರೂ ಪ್ರಶ್ನಿಸಲಾರ. ಮಗನ ಮೇಲೆ ಅದಮ್ಯ ವಿಶ್ವಾಸ. ಈಗಿನ ಅಪ್ಪಂದಿಗಿರುವ ಆತಂಕ, ನಿರೀಕ್ಷೆ ಈ ಅಪ್ಪನಿಗಿಲ್ಲ. ಹಾಗೆಯೇ ಅಪ್ಪ ನೀಡಿರುವ ಸ್ವಾತಂತ್ರದ ಇನಿತೂ ದುರುಪಯೋಗ ಪಡೆಯದ ಮಗ ಕಾಲೇಜಿನ ಪರೀಕ್ಷೆಯೊಂದನ್ನು ಬಿಟ್ಟು ಜೀವನದ ಎಲ್ಲಾ ಪರೀಕ್ಷೆಗಳಲ್ಲೂ ಫಸ್ಟ್ ಕ್ಲಾಸ್ ಪಾಸ್. ಮಗ ಪರೀಕ್ಷೆ ಪಾಸಾಗಲಿಲ್ಲವೆಂಬ ಕೊರಗು ಅಥವಾ ಮಗ ತನ್ನಂತೆಯೇ ವೈದ್ಯನಾಗಬೇಕೆಂಬ ಹಂಬಲವೂ ಕೂಡ ಈ ಅಪ್ಪನಿಗಿಲ್ಲ. ಆತನಿಗಿರುವ ಕಾಳಜಿಯೊಂದೇ, ತನ್ನ ಮಗನ ಹೃದಯಕ್ಕೆ ನೋವಾಗಬಾರದು. ಪ್ರಸ್ತುತ ಸ್ಪರ್ಧಾತ್ಮಕ ಜಗತ್ತಿನಲ್ಲಿ ನಾವೆಲ್ಲರೂ ಎದುರಿಸುತ್ತಿರುವ ಆತಂಕ, ಒತ್ತಡ, ಸೋಲು, ಕಿರಿಕಿರಿ, ನಿರಾಶೆ ಇವುಗಳೆಲ್ಲವನ್ನೂ ಬಿಟ್ಟು ನಿರಾಳವಾಗಿ ಬದುಕುವುದು ಹೇಗೆ ಎಂಬುದನ್ನು ತೋರಿಸುವ ಮಾದರಿ ಈ ಅಪ್ಪ, ಮಗ!

ನಾಯಕನಿಗೆ ಇಬ್ಬರೂ ನಾಯಕಿಯರು. ನಾಯಕನಿಗೆ ಸಿನೆಮಾ ಥಿಯೇಟರ್ ನಲ್ಲಿ ದಿಢೀರನೆ ಪರಿಚಯವಾಗುವ ಹುಡುಗಿಯೊಂದಿಗೆ ಉಂಟಾಗುವ ಪ್ರೀತಿ! ಆಕೆ ಸುಂದರಿಯಲ್ಲ, ಆಕೆಗೆ ಇವನು ನುಸಿಪೀಡೆ!, ಮದುವೆಗೂ, ಮಸಣಕ್ಕೂ ನುಡಿಸುವ ಶಹನಾಯಿ ಸಂಗೀತವೆಂದರೆ ಈತನಿಗೆ ಅಷ್ಟಕಷ್ಟೆ. ಆಕೆ ಈತನಿಗಿಷ್ಟವಿಲ್ಲದಿರುವ ಶಹನಾಯಿ ನುಡಿಸುವುದರಲ್ಲಿ ಪರಿಣಿತೆ! ಆದರೂ ಅವಳನ್ನು ಬೆಂಬಿಡದಂತೆ ಒಲಿಸಿಕೊಳ್ಳುವ ಪರಿ, ಮೊದಮೊದಲು ಒಲ್ಲೆ ಎನ್ನುತ್ತಲೇ ಆಕೆ ಈತನನ್ನು ಪ್ರೇಮಿಸುವುದು, ರಾಜಮನೆತನದ ಈಕೆಯ ಹಿರಿಯರು ಕೂಡ ನಾಯಕ, ನಾಯಕನ ತಂದೆಯ ಹೃದಯ ಶ್ರೀಮಂತಿಕೆಗೆ ಮಾರು ಹೋಗಿ ಮದುವೆಗೆ ಒಪ್ಪಿಕೊಳ್ಳುತ್ತಾರೆ. ಮತ್ತೊಬ್ಬಳು ಕಾಲೇಜಿನ ಸಹಪಾಠಿ, ಅನಾಥೆ, ಸುಂದರಿ, ನಾಯಕನ ಪ್ರತಿಯೊಂದು ವಿಷಯವೂ ಈಕೆಗೆ ಗೊತ್ತಿದೆ, ಆತ ಮತ್ತೊಬ್ಬಳನ್ನು ಪ್ರೀತಿಸುತ್ತಿರುವುದು ಕೂಡ! ಈಕೆ ನಾಯಕನಲ್ಲಿ ಅನುರಕ್ತೆ. ಪ್ರತಿ ಬಾರಿಯೂ ಆಕೆ ತನ್ನ ಪ್ರೀತಿಯನ್ನು ಇನ್ನಿಲ್ಲದಂತೆ ವ್ಯಕ್ತ ಪಡಿಸುತ್ತಾಳೆ, ನಾಯಕ ಮತ್ತೊಬ್ಬಳೊಂದಿಗೆ ಮದುವೆಯಾಗಬಾರದೆಂದು ಬಹಳಷ್ಟು ಪ್ರಯತ್ನಿಸಿದರೂ ಸೋಲುತ್ತಾಳೆ. ಆತನ ಮದುವೆಯಾದ ನಂತರವೂ ಕೂಡ ಆಕೆ ತನ್ನ ಪ್ರಯತ್ನವನ್ನು ಬಿಡುವುದಿಲ್ಲ. ಈ ಎಲ್ಲಾ ವಿಷಯಗಳು ತಿಳಿದಿದ್ದರೂ ನಾಯಕ ಮಾತ್ರ ನಿರ್ಲಿಪ್ತ. ಆದರೆ ಆತ ಈಕೆಯೊಂದಿಗಿನ ತೋರುವ ಸ್ನೇಹದಲ್ಲಿ ಮಾತ್ರ ಇನಿತೂ ಕಪಟವಿಲ್ಲ. ಮದುವೆ ಆಯಿತು, ಮಗುವಾಯಿತು, ಜೀವನ ಅತ್ಯಂತ ಸುಖಮಯವಾಗಿ ಸಾಗುತ್ತಿದೆ, ಸಂತೃಪ್ತ ಜೀವನ ಎಂದನ್ನಿಸುವಾಗ, ಕಥೆಗೊಂದು ತಿರುವು, ಈ ಸಂತಸದ ಭಾರ ತಾಳಲಾರದೇ ಹೆಂಡತಿಯ ಹೃದಯ ಸೋಲುವುದು, ಆಕೆಯ ಸಾವಿನ ನಂತರ ಮುಂದೇನು? ಗೆಳತಿಯೇ ಪತ್ನಿಯಾಗುವಳೇ? ಆತನ ಸ್ನೇಹ ಗೆಲ್ಲುತ್ತದೆಯೋ? ಈಕೆಯ ಪ್ರೀತಿ ಗೆಲ್ಲುತ್ತದೆಯೋ? ಇದು ಚಿತ್ರದ ಕ್ಲೈಮಾಕ್ಸ್.

ಇಡೀ ಚಿತ್ರದುದ್ದಕ್ಕೂ ಯಾವುದೇ ಇಮೇಜಿನ ಹಂಗಿಲ್ಲದೆ, ಪಾತ್ರವೇ ತಾನೆಂಬಂತೆ ನಟಿಸಿರುವ ಪುನೀತ್ ಹಾಗೂ ಗೆಳತಿಯ ಪಾತ್ರದಲ್ಲಿ, ಚೆಲ್ಲುಚೆಲ್ಲಾಗಿ, ಮಗುವಿನಂತೆ ಮುದ್ದಾಗಿ ನಟಿಸಿರುವ ಐಂದ್ರೀತಾ ಚಿತ್ರದ ಹೈಲೈಟ್. ಗ್ರಾಫಿಕ್ಸ್ ಸ್ವಲ್ಪ ಹೆಚ್ಚೆನಿಸಿ, ಕಿರಿಕಿರಿ ಉಂಟು ಮಾಡಿದರೂ ಪುನೀತ್ ರ ನೃತ್ಯ, ಇದೆಲ್ಲವನ್ನೂ ಮರೆಸಿಬಿಡುತ್ತದೆ. ಪ್ರತಿ ಚಿತ್ರದಲ್ಲೂ ತಮ್ಮ ಪ್ರಾಣಿಪ್ರೀತಿಯನ್ನು ತೋರಿಸುವ ಭಟ್ಟರು ಇದ್ರಲ್ಲಿ ತೋರಿಸಿರುವ ಗ್ರಾಫಿಕ್ಸ್ ಅಳಿಲು! ಅವರ ಹಿಂದಿನ ಚಿತ್ರಗಳಲ್ಲಿ ಪ್ರಾಣಿಗಳು ಮೋಡಿ ಮಾಡಿದಂತೆ ಮಾಡುವುದಿಲ್ಲ. ಬಲವಂತವಾಗಿ ಆ ಪಾತ್ರವನ್ನು ತುರುಕಿದಂತೆ ಅನಿಸುತ್ತದೆ. ಇನ್ನೂ ಮತ್ತೊಬ್ಬ ನಾಯಕಿ ದೀಪ ಸನ್ನಿಧಿಯ ನಟನೆ ಕೆಲವೊಂದು ಸನ್ನಿವೇಶಗಳಲ್ಲಿ ನಾಟಕೀಯ ಎಂದೆನಿಸಿಬಿಡುತ್ತದೆ. ಅಳುವಿನ ಸಂದರ್ಭಗಳಲ್ಲಂತೂ ಆಕೆಯನ್ನು ನೋಡಲಸಾಧ್ಯ. ಇನ್ನುಳಿದಂತೆ ಇನ್ನಿತರರ ನಟನೆಯ ಬಗ್ಗೆ ಎರಡು ಮಾತಿಲ್ಲ.

ಮಧ್ಯಂತರದ ನಂತರ ಚಿತ್ರ ದೀರ್ಘವೆಂದೆನಿಸಿ ಸ್ವಲ್ಪ ಮಟ್ಟಿಗೆ ಬೋರ್ ಆಗುತ್ತದೆಯಾದರೂ, ಪ್ರೀತಿ, ಪ್ರೇಮ ಎಲ್ಲಾ ಸುಳ್ಳು, ಟೈಮ್ ಪಾಸ್ ಗಾಗಿ ಮಾತ್ರ ಎಂದೆನ್ನುವ ಈಗಿನ ಯುವಜನಾಂಗದ ನಡುವೆಯೂ, ಈ ತರಹದ ಪ್ರೀತಿ, ಸ್ನೇಹ ಕೂಡ ಇರುತ್ತದೆಯೆಂಬ ಆಶಾಕಿರಣವನ್ನು ಈ ಚಿತ್ರ ಹಾಗೂ ಪುನೀತ್ ರ ನಟನೆ ಹುಟ್ಟು ಹಾಕುವುದರಲ್ಲಿ ಯಶಸ್ವಿಯಾಗುತ್ತದೆ. ಚಿತ್ರದಿಂದ ಚಿತ್ರಕ್ಕೆ ಭಟ್ಟರು ತತ್ವಜ್ಙಾನಿಯಾಗುತ್ತಿದ್ದಾರೇನೋ ಎಂಬ ಭಾವನೆ ಮೂಡಿಸುತ್ತದೆ. ಯಾವುದೇ ಅತಿಯಾದ ನಿರೀಕ್ಷೆಗಳಿಲ್ಲದೆ ಈ ಚಿತ್ರವನ್ನು ನೋಡಿದರೆ, ೭೦, ೮೦ ರ ದಶಕಗಳ ರಾಜ್ ರ ಸಾಮಾಜಿಕ / ಕೌಟುಂಬಿಕ ಚಿತ್ರವೊಂದನ್ನು ನೋಡಿದಂತಾಗುವುದು.

(೧೦ ಸೆಪ್ಟೆಂಬರ್ ೨೦೧೧ ರಂದು ಸಂವಾದಕ್ಕಾಗಿ ಬರೆದಿದ್ದು)

ಡರ್ಟಿ ಇರದಿದ್ದರೂ ಮನ ಮುಟ್ಟದ ‘ಡರ್ಟಿ ಪಿಕ್ಚರ್’

ಡರ್ಟಿ ಪಿಕ್ಚರ್ - ಸಿಲ್ಕ್ ಸ್ಮಿತಾಳ ಕಥೆ ಆಧಾರಿಸಿದಂತಹ ಚಿತ್ರವೆಂದು, ವಿದ್ಯಾಬಾಲನ್ ‘ಸಿಲ್ಕ್’ ಪಾತ್ರದಲ್ಲಿ ನಟಿಸುತ್ತಿರುವಳೆಂದು! ಶೂಟಿಂಗ್ ಶುರುವಾದಾಗಿನಿಂದಲೂ ಎಲ್ಲರ ಕುತೂಹಲ ಕೆರಳಿಸಿದ ಚಿತ್ರ. 

ಬಡತನದಿಂದಾಗಿ ೪ ನೇ ತರಗತಿಗೆ ಓದನ್ನು ಬಿಟ್ಟ ‘ವಿಜಯ ಲಕ್ಷ್ಮಿ’ ಗೆ ಆಕೆಯ ಸೌಂದರ್ಯವೇ ಮುಳ್ಳಾಯಿತು. ಹಾಗಾಗಿ, ಸಣ್ಣ ವಯಸ್ಸಿನಲ್ಲೇ ಆಕೆಗೆ, ಆಕೆಯ ತಂದೆ ತಾಯಿ ಮದುವೆ ಮಾಡಿಸಿಬಿಟ್ಟರು. ಗಂಡನ ಮನೆಯ ದೌರ್ಜನ್ಯ ತಾಳಲಾಗದೇ, ಅಲ್ಲಿಂದ ರಾತ್ರೋ ರಾತ್ರಿ ಚೆನ್ನೈಗೆ ಓಡಿಬಂದವಳು ಆಶ್ರಯ ಪಡೆದದ್ದು ನೆಂಟರೊಬ್ಬರ ಮನೆಯಲ್ಲಿ. ಈಕೆಗೆ ನಟಿಯಾಗಬೇಕೆಂಬ ಮಹತ್ವಾಕಾಂಕ್ಷೆ. ಆದರೆ ಇಲ್ಲೂ ದುರಾದೃಷ್ಟ ಕೈಕೊಟ್ಟಿತು. ನಟಿಯಾಗಲು ಬಂದವಳು, ತನ್ನ ದೇಹ ಸಿರಿಯನ್ನೇ ಬಂಡವಾಳವಾಗಿಸಿಕೊಂಡು ಸುಮಾರು ೧೭ ವರ್ಷಗಳ ಕಾಲ ಇಡೀ ದಕ್ಷಿಣ ಭಾರತದ ಎಲ್ಲಾ ಭಾಷೆಗಳಲ್ಲಿ ಕ್ಯಾಬರೇ ನರ್ತಕಿಯಾಗಿ, ಸಣ್ಣ ಪುಟ್ಟ ಪಾತ್ರಗಳಲ್ಲಿ ಸರಿ ಸುಮಾರು ೪೫೦ ಚಿತ್ರಗಳಲ್ಲಿ ನಟಿಸಿ ‘ಸಿಲ್ಕ್’ ಸ್ಮಿತಾ ಆದದ್ದು ದಂತ ಕಥೆ! ಎಲ್ಲೋ ಅಲ್ಲೊಂದು, ಇಲ್ಲೊಂದು ಬಿಟ್ಟರೆ, ಬಹುತೇಕ ಸಿನೆಮಾಗಳಲ್ಲಿ ಒಂದೇ ತರಹದ ಪಾತ್ರಗಳು. ಅಶ್ಲೀಲತೆಯಿಂದ ಕೂಡಿದ ಲೈಂಗಿಕ ಪ್ರಚೋದನಕಾರಿಯಾದಂತಹ ಪಾತ್ರಗಳಲ್ಲಿಯೇ ಈಕೆ ನಟಿಸಬೇಕಾಯಿತು. ೧೯೮೦ರ ಕಾಲದಲ್ಲಿ ಪ್ರದರ್ಶಿತವಾಗದೇ, ಡಬ್ಬದಲ್ಲೇ ಉಳಿದಿದ್ದ ಅನೇಕ ಸಿನೆಮಾಗಳು ಈಕೆಯದೊಂದು ಸೆಕ್ಸೀ ನೃತ್ಯವನ್ನು ತುರುಕಿಸಿದ್ದಕ್ಕಾಗಿಯೇ ಪ್ರದರ್ಶನಗೊಳ್ಳುವ ಭಾಗ್ಯವನ್ನು ಕಂಡಿದ್ದವಂತೆ. ವೀಕ್ಷಕರು ಚಿತ್ರದಲ್ಲಿ ಈಕೆಯ ನೃತ್ಯ ಬರುವ ಸಮಯಕ್ಕೆ ಸರಿಯಾಗಿ, ಅದನ್ನು ನೋಡಲಿಕ್ಕಾಗಿಯೆ ಥಿಯೇಟರ್ ಗೆ ಬರುತ್ತಿದ್ದರಂತೆ. ನಟಿಯಾಗಲು ಬಂದವಳು ‘ಸ್ಟಾರ್’ ಆದರೂ ಕೂಡ ಮಾಧ್ಯಮಗಳಿಂದಾಗಿ (ಈಕೆಯನ್ನು ಸಾಫ್ಟ್ ಪೊರ್ನ್ ನಟಿಯೆಂದು ಬಹುತೇಕ ಪತ್ರಕರ್ತರು ಅಭಿಪ್ರಾಯ ಪಟ್ಟಿದ್ದರು), ಸಿನೆಮಾ ಮಂದಿಯ ನಡುವೆ (ಈಕೆಯ ನಟನೆಗಿಂತಲೂ, ಇವಳ ದೇಹವನ್ನು ಬಿಡಿಸಿ, ಬಿಡಿಸಿ ತೋರಿಸುವುದರಲ್ಲಿಯೇ ಇವರಿಗಿದ್ದ ಆಸಕ್ತಿ), ಪ್ರೇಮದಲ್ಲೂ ವೈಫಲ್ಯ ಕಂಡ ‘ಸಿಲ್ಕ್’ ಸ್ಮಿತಾ ತನಗಂಟಿದ್ದ ಇಮೇಜನ್ನು ತೊಳೆಯಲು ತಾನೇ ನಿರ್ಮಾಪಕಿಯಾಗಲು ನಿರ್ಧರಿಸಿದರೂ, ಹಣದ ಮುಗ್ಗಟ್ಟಿನಿಂದ, ಕುಡಿತದಿಂದ ಯಾವುದೂ ಸಾಧ್ಯವಾಗದೇ ಹತಾಶಳಾಗಿ, ಆತ್ಮಹತ್ಯೆ ಮಾಡಿಕೊಂಡ ‘ಸಿಲ್ಕ್’ ಸ್ಮಿತಾಳದ್ದು ದುರಂತ ಕಥೆ.

ಇನ್ನೂ ‘ಡರ್ಟಿ ಪಿಕ್ಚರ್’ ಚಿತ್ರದ ಬಗ್ಗೆ ಹೇಳುವುದಾದರೆ, ಈ ಮೇಲಿನ ಕಥೆಯಲ್ಲಿಯೇ ಸಣ್ಣ ಪುಟ್ಟ ಮಾರ್ಪಾಡು ಮಾಡಿ, ಒಂದಿಷ್ಟು ಬಾಲಿವುಡ್ ಮಸಾಲೆ ತುರುಕಿ, ಶುರು ಶುರುಗೆ ಆಸಕ್ತಿ ಮೂಡಿಸಿ (‘ಸಿಲ್ಕ್’ ಸ್ಮಿತಾಳ ಹಾಗೆಯೇ), ನಂತರ ಚಿತ್ರವೂ ಯಾಕೋ ಬೋರ್ ಹೊಡೆಸುತ್ತಿದೆಯೆಲ್ಲಾ ಎಂಬ ಭಾವನೆ ಮೂಡಿಸಿ, ಕೊನೆಗೊಂದು ಚೆಂದದ, ಮನ ಮುಟ್ಟುವಂತಹ, ಭಾವುಕತೆಯಿಂದ ಕೂಡಿದಂತಹ ಅಂತ್ಯ (ಅಂತ್ಯ ಮೊದಲೇ ಗೊತ್ತಿದ್ದರೂ) ಕಾಣುವ ಚಿತ್ರಕಥೆ ಈ ‘ಡರ್ಟಿ ಪಿಕ್ಚರ್’. ದುರಂತವೆಂದರೆ ಚಿತ್ರ ಕಥೆಯಲ್ಲಿಯೂ ಕೂಡ ‘ಸಿಲ್ಕ್’ ಳ ದೇಹ ಸಿರಿ ಪ್ರಾಮುಖ್ಯತೆ ಕಂಡಷ್ಟು ಆಕೆಯ ಮನಸ್ಥಿತಿ ಎಲ್ಲೂ ಹೈಲೈಟ್ ಆಗುವುದಿಲ್ಲ. ಚಿತ್ರ ಎಲ್ಲೂ ಕೂಡ ‘ಸಿಲ್ಕ್’ ಳ ಮನಸ್ಸನ್ನು ಹೊಕ್ಕು ನೋಡುವುದಿಲ್ಲ. ಅವಳ ಭಾವನೆಗಳು ಚಿತ್ರಿತಗೊಂಡಿಲ್ಲ. ಇದು ಚಿತ್ರದ ಅತಿ ದೊಡ್ಡ ಮೈನಸ್ ಪಾಯಿಂಟ್. ವಿದ್ಯಾಬಾಲನ್ ತನ್ನ ದೇಹದಲ್ಲಿ ಬಹಳಷ್ಟು ಮಾರ್ಪಾಡು ಮಾಡಿಕೊಂಡು, ಸೆಕ್ಸೀ ಇಮೇಜ್ (‘ಸಿಲ್ಕ್’ ನಂತೇ) ಬೆಳೆಸಿಕೊಳ್ಳಲು ಸಾಕಷ್ಟು ತಯಾರಿ ನಡೆಸಿ, ಕೆಚ್ಚೆದೆಯಿಂದ, ‘ಬಿಚ್ಚು’ಗಾರ್ತಿ ಯಾಗಿ ಚೆಂದ ನಟಿಸಿದ್ದರೂ, ಅದು ನಟನೆಯಾಗಿಯೇ ಕಾಣುತ್ತದೆ. ಚಿತ್ರದಲ್ಲೊಂದು ಡೈಲಾಗ್ - ‘ಸಿಲ್ಕ್’ ಳಿಗೆ ಪ್ರತಿಸ್ಪರ್ಧಿಯಾಗಿ ಹುಟ್ಟಿಕೊಳ್ಳುತ್ತಿದ್ದ ‘ಶಕೀಲಾ’ ಳಿಗೆ, ‘ಸಿಲ್ಕ್’ ಹೇಳುತ್ತಾಳೆ. ‘ಮನೆಯಲ್ಲಿರುವ ಕನ್ನಡಿಯನ್ನು ಒಡೆದು ಹಾಕು’, ನೀನು ‘ಸಿಲ್ಕ್’ ಆಗಬಹುದೆಂದು ಅದು ಸುಳ್ಳು ಹೇಳುತ್ತಿದೆ!’. ಇದು ವಿದ್ಯಾಬಾಲನ್ ಗೆ ಕೂಡ ಸೂಕ್ತವೇ. ವಿದ್ಯಾ ಮೋಹಕವಾಗಿ ಕಾಣುತ್ತಾಳೆಯೇ ಹೊರತು ಸಿಲ್ಕ್ ಳ ಸೆಕ್ಸಿ ಫೀಲ್ ಆಕೆಗೆ ಬಂದಿಲ್ಲ. ‘ಸಿಲ್ಕ್’ ಳಿಗೆ ‘ಸಿಲ್ಕ್’ ಳೇ ಸಾಟಿ! ಇನ್ಯಾರೂ ಆಕೆಯ ಪಾತ್ರ ಮಾಡಲಾರರು. ಇನ್ನುಳಿದಂತೆ ನಸಿರುದ್ದೀನ್ ಶಾ ನಟನೆ ಚೆನ್ನಾಗಿದ್ದರೂ, ಆ ಪಾತ್ರಕ್ಕೆ ಹೊಂದುವುದಿಲ್ಲ. ಬಹುಶಃ ಆಗ ಎಷ್ಟೇ ವಯಸ್ಸಾಗಿದ್ದರೂ, ನಾಯಕನ ಪಾತ್ರಕ್ಕೆ ಪ್ರಾಮುಖ್ಯತೆ ಹೆಚ್ಚು, ಅವರು ನಡೆದದ್ದೇ ದಾರಿ ಎಂಬುದನ್ನು ಬಿಂಬಿಸಲು ಅವರನ್ನು ಆಯ್ಕೆ ಮಾಡಿಕೊಂಡಿರಬಹುದು. ಪತ್ರಕರ್ತೆಯ ಪಾತ್ರಧಾರಿ ಬಹಳ ಚೆನ್ನಾಗಿ ನಟಿಸಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ ಇಡೀ ಚಿತ್ರದುದ್ದಕ್ಕೂ ‘ಸಿಲ್ಕ್’ ಳನ್ನು ಚಿತ್ರಿಸಿರುವ ನಿರ್ದೇಶಕನ ಜಾಣ್ಮೆಯನ್ನು ಮೆಚ್ಚಲೇ ಬೇಕು. ಎಲ್ಲೂ ಅಶ್ಲೀಲತೆಯ ಸೋಂಕಿಲ್ಲದೆ, ಎಷ್ಟು ಬೇಕೋ ಅಷ್ಟನ್ನೇ ಚಿತ್ರಿತಗೊಳಿಸಿರುವ ರೀತಿ ವೀಕ್ಷಕನ ಮೆಚ್ಚುಗೆ ಗಳಿಸುತ್ತದೆ. ಹಾಗಾದ್ರೆ ಚಿತ್ರ ಚೆನ್ನಾಗಿದೆಯೋ? ಇಲ್ಲವೋ? ಚೆನ್ನಾಗಿದೆ. ಆದರೆ! ಏನೋ ಕೊರತೆ ಕಾಣುತ್ತದೆ. ಏನು? ಎಂಬುದು ಕೊನೆಯವರೆಗೂ ಗೊತ್ತಾಗುವುದೇ ಇಲ್ಲ. 

(೧೨ ಜುಲೈ ೨೦೧೧ ರಂದು ಸಂವಾದಕ್ಕಾಗಿ ಬರೆದಿದ್ದು)

‘ಕಂಡರೂ ಸಾವು, ನೀ ಬದುಕು’ ಎನ್ನುವ ಸಿದ್ಲಿಂಗು

ಸಿದ್ಲಿಂಗು - ಉದ್ದದ ಕಥೆ. ಆತನ ಹುಟ್ಟಿನಿಂದ ಶುರುವಾಗುವ ಕಥೆ. ಹುಟ್ಟುತ್ತಲೇ ಅಮ್ಮನನ್ನು ಕಳೆದುಕೊಂಡು ಅನಾಥನಾಗುವ ಸಿದ್ಲಿಂಗು. ಮಾಮೂಲೀ ಕಥೆಗಳಲ್ಲಿನ ಮಲತಾಯಿಯಂತಲ್ಲದೆ, ಅಪ್ಪನ ಪ್ರೇಯಸಿ, ಅಮ್ಮನೇ ಆಗುತ್ತಾಳೆ. ಆದರೂ ಮಗು ಸಿದ್ಲಿಂಗು ಅಳು ನಿಲ್ಲಿಸುವುದು ಈ ಹೊಸ ಅಮ್ಮ ಕೈಗೆ ‘ಕಾರ್’ ಗೊಂಬೆಯನ್ನಿತ್ತಾಗ. ಅಂದಿನಿಂದ ‘ಕಾರ್’ ಅನ್ನು ಪಡೆಯುವುದು ಆತನ ಕನಸಾಗಿಬಿಡುತ್ತದೆ. ಆ ಕನಸನ್ನು ಅಪ್ಪ, ಅಮ್ಮ ಇಬ್ಬರೂ ಕೂಡ ಪೋಷಿಸುತ್ತಾರೆ. ಒಟ್ಟಿನಲ್ಲಿ ಸಿದ್ಲಿಂಗುಗೆ ಹುಟ್ಟಿನಿಂದಲೂ ಅತಿಯಾದ ಕಾರಿನ ಹುಚ್ಚು! ಆತ ಅತಿಯಾಗಿ ದ್ವೇಷಿಸುತ್ತಿದ್ದ ಸಹಪಾಠಿ ಕೂಡ ಆಕೆಯ ತಂದೆ ‘ಕಾರ್’ ಕೊಂಡಾಕ್ಷಣ ಪ್ರೀತಿಯ ಗೆಳತಿಯಾಗಿಬಿಡುತ್ತಾಳೆ. ಒಂಟಿ ಲೆಕ್ಚರರ್ ಳಿಗೆ ಈತ ಜೊತೆಯಾಗುವುದು ಕೂಡ ಆಕೆಯ ಬಳಿ ಕಾರ್ ಇದೆಯೆಂದೇ! ಲೆಕ್ಚರರ್ ಳಿಗೆ ನಿಮ್ಮ ‘ಕಾರ್’ ಹಾಗೂ ‘ಎದೆ’ ಇಷ್ಟ ಎಂದು ಹೇಳಿ ಓಡಿಹೋದವನು ಆಕೆಯ ‘ಕಾರ್’ ನನ್ನು ಮರೆಯಲಾಗದೆ ಕ್ಷಮೆ ಕೇಳುತ್ತಾ ವಾಪಾಸಾಗುತ್ತಾನೆ. ಸೋಗು ಹಾಕಿಕೊಂಡು ಬದುಕುವವರಿಗಿಂತ, ಈತನೇ ವಾಸಿ ಎಂದು ಇನ್ನಷ್ಟು ಹತ್ತಿರವಾಗುವ, ಗಂಡನಿಂದ ದೂರವಾಗಿರುವ ಲೆಕ್ಚರರ್ ಗೆ, ಸಿದ್ಲಿಂಗುವಿನ ತರಹವೇ ರೈಲಿನ ಹುಚ್ಚು! ಅವಳ ಒಂಟಿತನವನ್ನು ಅರ್ಥ ಮಾಡಿಕೊಳ್ಳುವ ಸಿದ್ಲಿಂಗು, ಈ ಇಬ್ಬರ ನಡುವಿನ ಒಡನಾಟ, ಬಾಂಧವ್ಯ ಬೆಳೆದು, ಅಕಸ್ಮಾತ್ತಾಗಿ ದೇಹವು ಕೂಡ ಬೆರೆಯುತ್ತದೆ. ಸಿದ್ಲಿಂಗು ಈ ಘಟನೆಯಿಂದ ಚೇತರಿಸಿಕೊಳ್ಳುವಷ್ಟರಲ್ಲಿ, ಆತನ ತಂದೆ ತಾಯಿ ಅಕಸ್ಮಾತ್ತಾಗಿ ತೀರಿಕೊಂಡು, ಆತನ ಜೀವನದ ದಾರಿ ಬೇರೆಯಾಗುತ್ತದೆ. ಹೀಗೆ ಸಿದ್ಲಿಂಗು ಪ್ರತಿ ಬಾರಿ ಕಾರಿನ ಬಗ್ಗೆ ತನ್ನ ಪ್ರೀತಿ ಪ್ರಕಟಪಡಿಸುವಾಗಲೆಲ್ಲಾ, ಆತನ ಜೀವನ ‘ಆಕಸ್ಮಿಕ’ ತಿರುವನ್ನು ಪಡೆದುಕೊಳ್ಳುತ್ತದೆ. 


ಅಕ್ಷರಶಃ ಒಂಟಿಯಾಗಿಬಿಡುವ ಈತನಿಗೆ ಬದುಕಲು ಕನಸೊಂದೇ ಆಸರೆಯಾಗುತ್ತದೆ. ಸುಳ್ಳು ಹೇಳಲು ಬರದವನಿಗೆ ಮಾರ್ಕೆಟಿಂಗ್ ಕೆಲಸ. ಹಣ ಸಂಪಾದಿಸುವಾಗ ಕನಸನ್ನು ನನಸು ಮಾಡಿಕೊಳ್ಳುವ ಪ್ರಯತ್ನ. ಹಳೇ ಕಾರ್, ಅದರ ಓನರ್ ಕೂಡ ಅಷ್ಟೇ ವಯಸ್ಸಾದವನು. ಆತನಿಗೆ ತನ್ನ ಕಾರಿನ ಮೇಲೆ ಅದಮ್ಯ ಪ್ರೀತಿ, ಮಗನನ್ನು ದೂರ ಮಾಡಿಕೊಂಡ ಈತ ಕೂಡ ಒಂಟಿ, ಸಿದ್ಲಿಂಗು ವಿನ ಕಾರಿನ ಪ್ರೀತಿ ಕಂಡ ಅವನು ತನ್ನ ಕಾರ್ ಅನ್ನು ಮಾರಲು ಮನಸ್ಸು ಮಾಡುತ್ತಾನೆ. ಇವರಿಬ್ಬರ ನಡುವೆ ವ್ಯವಹಾರ ಹೊರತಾಗಿಯೂ ಒಂದು ಬಾಂಧವ್ಯ ಮೂಡುತ್ತದೆ. ಸಾಲಕ್ಕಾಗಿ ಓಡಾಡುವ ಸಿದ್ಲಿಂಗು, ಆ ಸಮಯದಲ್ಲಿ ಪರಿಚಯವಾಗುವ, ತನ್ನಂತೆಯೇ ಒಂಟಿಯಾಗಿರುವ ಹುಡುಗಿ (ಟೀಚರ್), ಮಾನವೀಯತೆ ದೃಷ್ಟಿಯಿಂದ ಹತ್ತಿರವಾದರೂ, ಕೊನೆಕೊನೆಗೆ ಅವಳೇ ಈತನ ಆಸೆಗಳಿಗೆ, ಕನಸುಗಳಿಗೆ ಬೆನ್ನೆಲುಬು ಆಗುತ್ತಾಳೆ. ಕಾರ್ ಕೊನೆಗೂ ಸಿಕ್ಕಿಯೇ ಬಿಟ್ಟಿತು ಅನ್ನುವಷ್ಟರಲ್ಲಿ ಕಾರಿನ ಮಾಲೀಕನ ಸಾವು. ಆ ಘಟನೆಯಿಂದ ಇನ್ನಷ್ಟು ಹತ್ತಿರವಾಗುವ ಇಬ್ಬರೂ, ಎಲುಬಿಲ್ಲದ ನಾಲಿಗೆಯ ಸಿದ್ಲಿಂಗು ಆಕೆಗೆ ಪ್ರೊಪೋಸ್ ಮಾಡುವ ಶೈಲಿ, ಅವನ ಗಲೀಜು ಮಾತಿಗೆ ಒಳಗೊಳಗೆ ಇಷ್ಟ ಪಟ್ಟಿದ್ದರೂ ಮುನಿಸಿಕೊಳ್ಳುವ ಗೆಳತಿ, ಒಲಿಸಿಕೊಳ್ಳಲು ಒದ್ದಾಡುವ ಸಿದ್ಲಿಂಗು.. ಎಲ್ಲಾ ಮುಗಿಯಿತು ಇನ್ನೇನು? ಅನ್ನುವಷ್ಟರಲ್ಲಿ ಹಳೇ ಲೆಕ್ಚರರ್ ಳ ಭೇಟಿ, ಹಳೇ ಕಾರಿನ ಮಾಲೀಕನ ಮಗ ರೌಡಿ ತನಗೆ ಅಪ್ಪನ ಕಾರ್ ಬೇಕೆಂದು ಮಾಡುವ ಗಲಾಟೆ, ಕ್ಲೈಮಾಕ್ಸ್ ನಲ್ಲಿ ಅಕಸ್ಮಾತ್ತಾಗಿ ಸಾಯುವ ಗೆಳತಿ! ಆಕಸ್ಮಿಕ ಆರಂಭವೂ ಹೌದು, ಅಂತ್ಯವೂ ಹೌದು ಎಂದು ಹಠಾತ್ತನೆ ಮುಗಿಯುವ ಸಿನೆಮಾ.


ಇಡೀ ಸಿನೆಮಾದುದ್ದಕ್ಕೂ ನಮಗೆ ಕಂಡುಬರುವುದು ಒಂಟಿ ಜೀವಗಳು. ಒಂಟಿತನದಿಂದ ನೊಂದು ಬೇಸತ್ತ ಇವರು, ಮತ್ತೊಬ್ಬರ ಒಂಟಿತನದ ನೋವನ್ನು ಅರ್ಥ ಮಾಡಿಕೊಂಡು ಜೊತೆಗೂಡುವರು. ಹೀಗೆ ಸಿದ್ಲಿಂಗುಗೆ ಜೊತೆಯಾಗುವ ಪ್ರತಿಯೊಬ್ಬರೂ ಆತನಿಗೆ ತಾವು ಅರ್ಥೈಸಿಕೊಂಡಿರುವ ಒಂದೊಂದು ಪಾಠವನ್ನು ಕಲಿಸಿ ಹೋಗುತ್ತಾರೆ. ಸಿನೆಮಾ ಶುರುವಾಗುವುದು ಸಿದ್ಲಿಂಗುವಿನ ಹುಟ್ಟಿನಿಂದ, ತಾಯಿಯ ಸಾವಿನಿಂದ. ಆದರೆ ಮುಗಿಯುವುದು ಗೆಳತಿಯ ಸಾವಿನಿಂದ. ಪ್ರತಿ ಬಾರಿಯೂ ಈತ ಸಾವೊಂದನ್ನು ನೋಡಿದಾಗ, ಈತನ ಜೀವನ ತಿರುವುಗಳನ್ನು ಕಾಣುತ್ತದೆ, ಈತ ಮೆಚ್ಯೂರ್ ಆಗುತ್ತಾ ಹೋಗುತ್ತಾನೆ. ಹಾಗಾಗಿ ಗೆಳತಿಯ ಸಾವು ಆಕಸ್ಮಿಕವಾಗಿದ್ದರೂ, ಇದು ಅಂತ್ಯವಲ್ಲ. ಸಿದ್ಲಿಂಗುವಿನ ಜೀವನ ಮತ್ತೊಂದು ತಿರುವನ್ನು ಕಾಣುತ್ತದೆ, ಈತನ ಜೀವನದ ಮತ್ತೊಂದು ಆರಂಭ ಇರಬಹುದೇನೋ ಎನ್ನುವ ಆಶಾಭಾವನೆ ಬಿತ್ತುತ್ತದೆ. ಸಿದ್ಲಿಂಗು ತಾನು ಸತ್ತಾಗ ಕಣ್ಣೀರಿಡಲು ತನ್ನವರು ಯಾರಾದರೂ ಇರಬೇಕೆಂದು ಯಾವಾಗಲೂ ಯೋಚಿಸುತ್ತಾನೆಯೇ ಹೊರತು, ಜೀವನದಲ್ಲಿ ಜೊತೆಯಾಗಿರಲಲ್ಲ. ಈತ ಕಾರನ್ನು ಪ್ರೀತಿಸಿದಷ್ಟು, ಅದನ್ನು ಪಡೆಯಬೇಕೆಂದು ಪ್ರಯತ್ನ ಪಡುವಷ್ಟು, ಯಾರ ಪ್ರೀತಿಯನ್ನು ಗಳಿಸಿಕೊಳ್ಳಲು ಪ್ರಯತ್ನಿಸುವುದಿಲ್ಲ. ಈತನ ಬಿಚ್ಚು ಮಾತಿನಲ್ಲಿನ ಸತ್ಯಕ್ಕೆ ಮಾರು ಹೋದವರೆಲ್ಲ ಈತನನ್ನು ಪ್ರೀತಿಸಲು ಶುರು ಮಾಡುತ್ತಾರೆ, ಈತನಿಗೆ ಹತ್ತಿರವಾಗುತ್ತಾರೆ. ಹಾಗೆಯೇ ಆಕಸ್ಮಿಕಗಳಲ್ಲಿ ದೂರವಾಗುತ್ತಾರೆ. "ನಾನು, ನನ್ನದು ಎನ್ನುವ ನಿನ್ನಯ ತರ್ಕವೇ, ಬಾಲಿಶ, ಎಲ್ಲಾ ಶೂನ್ಯ ಎನ್ನುವ ನಿನ್ನಯ ವರ್ಗವೇ ಅಂಕುಶ" ಎಂದು ಮನಸ್ಸಿಗೆ ಸಮಾಧಾನ ಹೇಳುತ್ತಾ, "ಕಂಡರೂ ಸಾವು, ನೀ ಬದುಕು" ಎಂದುಕೊಳ್ಳುತ್ತಾ ಈತ ನಿರ್ಲಿಪ್ತನಾಗಿ ಜೀವನದ ಮತ್ತೊಂದು ಅಂಕಕ್ಕೆ ರೆಡಿಯಾಗುತ್ತಾನೆ. ತನ್ನ ಕನಸನ್ನು ಸಾಕಾರ ಮಾಡಿಕೊಳ್ಳುವತ್ತ ಗಮನ ಹರಿಸುತ್ತಾನೆ. ಪಾತ್ರ ಚಿಕ್ಕದಾಗಿದ್ದರೂ, ಚೊಕ್ಕದಾಗಿ ನಟಿಸಿರುವ ಸ್ಕೂಲ್ ಆಯಾಳ ಪಾತ್ರದಲ್ಲಿ ಗಿರಿಜಾ ಲೋಕೇಶ್, ಲೆಕ್ಚರರ್ ಪಾತ್ರದಲ್ಲಿನ ಸುಮನ್ ರಂಗನಾಥ್, ಈ ಇಬ್ಬರ ಒಂಟಿತನ ಚಿತ್ರ ಕೊನೆಯಾದ ನಂತರವೂ ಕಾಡುತ್ತದೆ. ಯೋಗೇಶ್, ರಮ್ಯಾ ರಿಂದ ಹಿಡಿದು ಪ್ರತಿಯೊಬ್ಬರೂ ಕೂಡ ತಮ್ಮತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಎಲ್ಲೆಲ್ಲೋ ಓಡುವ ಮನಸೇ ಹಾಡಂತೂ ಮತ್ತೆ, ಮತ್ತೆ ಕೇಳಬೇಕೆನಿಸುತ್ತದೆ. ಚಿತ್ರದ ಕೊನೆ ೧೫ ನಿಮಿಷಗಳು ಚಿತ್ರದ ಲಯವನ್ನು ತಪ್ಪಿಸಿ, ಅರ್ಥವೇ ಆಗದಂತೆ ಮಾಡಿಬಿಡುತ್ತದೆ. ಅಂತ್ಯವಂತೂ ನಿರೀಕ್ಷಿಸಿಯೇ ಇರದಂಥದ್ದು ಆಗಿರುವುದರಿಂದ, ಅರಗಿಸಿಕೊಳ್ಳಲು ಕಷ್ಟವಾಗುತ್ತದೆ. (೨೪ ಜನವರಿ ೨೦೧೨ ರಂದು ಬರೆದದ್ದು - ಸಂವಾದಕ್ಕಾಗಿ)