Wednesday, April 8, 2015

ವಾಸ್ತು ಪ್ರಕಾರ - ಒಂದು ಹರಟೆ

ಚಿಕ್ಕಂದಿನಲ್ಲಿ ಸಿನೆಮಾಗಳನ್ನು ನೋಡುವುದು ಕೇವಲ ಟೈಮ್ ಪಾಸ್ ಅಥವಾ ಮನರಂಜನೆಗಾಗಿ ಮಾತ್ರ ಎಂಬ ಅಭಿಪ್ರಾಯವಿತ್ತು.  ಹಾಗಾಗಿ ಅದರಲ್ಲಿ ಲಾಜಿಕ್ ಹುಡುಕುವ ಕೆಲಸವನ್ನೇ ಮಾಡುತ್ತಿರಲಿಲ್ಲ. ಕಥೆಗೆ ಪೂರಕವಾಗಿ ನಟನೆ, ಹಾಡು, ಸಂಗೀತ ಎಲ್ಲವೂ ಇದ್ದರಾಯಿತು ಎಂಬುದಷ್ಟೇ ಆಗಿದ್ದ ಮನಸ್ಥಿತಿ. ನಂತರ ಹೀಗೆ ಒಂದಷ್ಟು ಜನರ ಪರಿಚಯವಾದ ನಂತರ ಚಿತ್ರವನ್ನು ಕೇವಲ ನೋಡುವುದಷ್ಟೇ ಅಲ್ಲ, ಅದರಲ್ಲಿ ಅರ್ಥವನ್ನು ಹುಡುಕಬೇಕು, ಅವು ಏನನ್ನೋ ಹೇಳುತ್ತಿರುತ್ತವೆ, ಅವನ್ನು ಅರ್ಥೈಸಬೇಕು, ಅರ್ಥ ಮಾಡಿಕೊಳ್ಳಬೇಕು ಎಂದೆಲ್ಲಾ ಅವರು ಹೇಳಿದಾಗ, ನಾನು ಸಿನೆಮಾ ನೋಡುವ ದೃಷ್ಟಿಯೇ ಬದಲಾಗಿಬಿಟ್ಟಿತು.  ಇರುವ, ಇಲ್ಲದಿರುವ ಅರ್ಥವನ್ನೆಲ್ಲಾ ಹುಡುಕಿ, ಹುಡುಕಿ, ಸುಮ್ಮನೆ ಸಿನೆಮಾ ನೋಡುವ ಅಭ್ಯಾಸವೇ ತಪ್ಪಿ ಬಿಟ್ಟಿತು.  ಒಂದು ರೀತಿಯಲ್ಲಿ ಮನರಂಜನೆ ಕಳೆದು ಹೋಗಿ, ತಲೆಯಲ್ಲಿ ಆಲೋಚನೆಗಳು ಹೆಚ್ಚಾಗಿದ್ದಂತೂ ಸುಳ್ಳಲ್ಲ.

 ‘ಬೌದ್ಧಿಕ ದಾಸ್ಯದಲ್ಲಿ ಭಾರತ’ ಪುಸ್ತಕದಲ್ಲಿ ಪಾಶ್ಚಾತ್ಯರ ಹಾಗೂ ಭಾರತೀಯರ ಕಲಾ ಸಂಸ್ಕೃತಿಯ ಬಗ್ಗೆ ಒಂದಷ್ಟು ಮಾತುಗಳಿವೆ. ಪಾಶ್ಚಾತ್ಯರಿಗೆ ಸಂಗೀತ, ಚಿತ್ರಕಲೆ, ಕಥೆ, ಕಾವ್ಯಗಳೆಲ್ಲ ಕೇವಲ ಆಸ್ವಾದನೆ ಮಾಡಿ ಸಂತೋಷ ಪಡಬೇಕಾದ ವಿಷಯಗಳಾಗಿ ಕಾಣುವುದಿಲ್ಲ.  ಅವು ಅರ್ಥ ಮಾಡಿಕೊಳ್ಳಬೇಕಾದ ವಿಷಯಗಳು.  ಹಾಗಾಗಿ ಕಲಾವಿಮರ್ಶೆ ಎಂಬುದು ಅವರಲ್ಲಿ ಆದ್ಯ ಸ್ಥಾನವನ್ನು ಪಡೆದುಕೊಂಡಿದೆ.  ಕಲೆ ಎನ್ನುವುದು ಜೀವನದ ಅರ್ಥದ ಹುಡುಕಾಟವಾಗಿದೆ.  ಒಂದು ಕಲೆಯನ್ನು ಆಸ್ವಾದಿಸುವುದೆಂದರೆ ಅದರ ಅರ್ಥವನ್ನು, ಉದ್ದೇಶವನ್ನು ತಿಳಿದುಕೊಳ್ಳುವುದು ಎಂದೇ ಅವರು ಭಾವಿಸುತ್ತಾರೆ.  ಏನನ್ನು ತಿಳಿಸಲಿಕ್ಕಾಗಿ ಈ ಕಲಾಕೃತಿಯನ್ನು ರಚಿಸಲಾಗಿದೆ? ಕಲಾಕಾರನು ಅದರಲ್ಲಿ ಎಷ್ಟರಮಟ್ಟಿಗೆ ಯಶಸ್ವಿಯಾಗಿದ್ದಾನೆ? ಎಲ್ಲಿ ಎಡವಿದ್ದಾನೆ? ಅವನ ಉದ್ದೇಶವನ್ನು ಹೇಗೆ ತಿಳಿಸಿದ್ದರೆ ಚೆನ್ನಾಗಿರುತ್ತಿತ್ತು? ಇತ್ಯಾದಿಗಳನ್ನು ಕಲಾವಿಮರ್ಶೆ ಒಳಗೊಳ್ಳುತ್ತದೆ. 

ಕಲಾಕೃತಿಯೆಂಬುದರ ಮೂಲಕ ಕಲಾಕಾರನು ಏನನ್ನೋ ತಿಳಿಸಬೇಕು, ಇಲ್ಲದಿದ್ದಲ್ಲಿ ಕಲಾಕೃತಿಗೆ ಅದೊಂದು ನ್ಯೂನತೆ ಎಂಬ ಭಾವನೆ ಅವರಲ್ಲಿದೆ.  ಅವರೆಲ್ಲರ ಪ್ರಕಾರ ವ್ಯಕ್ತಿಯೊಬ್ಬನು ಏನನ್ನೋ ತಿಳಿಸುವ, ಸಂಕೇತಿಸುವ ಹಂಬಲವಿಲ್ಲದೇ ರಚಿಸಿದ್ದು ಕಲಾಕೃತಿಯಾಗಲಾರದು.  ಇದನ್ನೇ ‘ಕಲಾಕಾರನ ಅಭಿವ್ಯಕ್ತಿ’ ಎನ್ನಲಾಗುತ್ತದೆ.  ಆದರೆ ಈ ಕಲಾಕಾರರಿಗೆ ಹಾಗೂ ವಿಮರ್ಶಕರಿಗೆ ತಾವು ಕಲಾಕೃತಿಗಳಲ್ಲಿ ಯಾವ ಅರ್ಥವನ್ನು ಹುಡುಕಬೇಕು? ಯಾವ ಪ್ರಶ್ನೆಯನ್ನು ಇಟ್ಟುಕೊಂಡು, ಏಕಾಗಿ ಕಲೆಯನ್ನು ರಚಿಸಬೇಕು ಅಥವಾ ವಿಮರ್ಶೆಯನ್ನು ಮಾಡಬೇಕು? ಎಂಬುದರ ಬಗ್ಗೆ ಒಮ್ಮತವಿನ್ನೂ ಮೂಡದೇ, ವಿಭಿನ್ನ ಪಂಥಗಳು, ಬಗೆಹರಿಯದ ಚರ್ಚೆಗಳು ಇದಕ್ಕೆ ಸಂಬಂಧಿಸಿ ಹುಟ್ಟಿಕೊಂಡಿವೆ.

ಭಾರತೀಯ ಸಾಂಪ್ರದಾಯಿಕ ಕಲಾ ಪ್ರಕಾರಗಳ ಸಂದರ್ಭದಲ್ಲಿ ಇಂಥ ಹುಡುಕಾಟಕ್ಕೆ ಪ್ರಸ್ತುತತೆಯೇನು? ಎಂಬ ಪ್ರಶ್ನೆಗೆ ಉತ್ತರವಿದ್ದಂತಿಲ್ಲ.  ಭಾರತೀಯ ಕಲೆಗಳಿಗೆ ಸಂಬಂಧಿಸಿ ರಸಸೃಷ್ಟಿ ಹಾಗೂ ರಸಾಸ್ವಾದನೆ ಎಂಬ ಪರಿಕಲ್ಪನೆ ಇದೆ.  ಆದರೆ ಇದನ್ನು ಅಲ್ಲಗಳೆದು ‘ಕಲಾಕಾರನು ಏನನ್ನೋ ತಿಳಿಸುವುದಕ್ಕಾಗಿ ಕಲೆಯನ್ನು ರಚಿಸಬೇಕು ಅಥವಾ ಅವನು ಏನನ್ನು ಅಭಿವ್ಯಕ್ತಿ ಮಾಡುತ್ತಿದ್ದಾನೆ ಎಂಬುದನ್ನು ಅರ್ಥ ಮಾಡಿಕೊಳ್ಳುವುದು ರಸಿಕನ ಉದ್ದೇಶ’ ಎಂಬುದಾಗಿ ಯಾರಾದರೂ ಪ್ರತಿಪಾದಿಸಿದರೆ ಅದು ಉಳಿದವರಿಗಿರಲಿ, ಹೇಳಿದವನಿಗೇ ಅರ್ಥವಾಗುತ್ತದೆ ಅಂತ ಅನ್ನಿಸುವುದಿಲ್ಲ. ಅಂದರೆ ನಮ್ಮ ಕಲಾಪ್ರಕಾರಗಳಲ್ಲಿ ಅರ್ಥ ಕಂಡುಹಿಡಿಯುವುದೇ ಅರ್ಥಹೀನ ಕೆಲಸವಾಗಬಹುದು (ಬೌದ್ಧಿಕ ದಾಸ್ಯದಲ್ಲಿ ಭಾರತ, ಪುಟ ೮೨).

ಕಲಾವಿಮರ್ಶೆಯ ಬಗ್ಗೆ ಈ ಪುಸ್ತಕದಲ್ಲಿ ಬರೆದದ್ದನ್ನು ಓದಿದಾಗ, ಅರೆ! ಹೌದಲ್ಲಾ?  ನಾವು ಚಿಕ್ಕಂದಿನಲ್ಲಿ ಚಿತ್ರಗಳನ್ನು ಹೀಗೆಯೇ ಎಂಜಾಯ್ ಮಾಡುತ್ತಿದ್ದದ್ದು. ರಾಜ್ ಕುಮಾರ್ ದ್ವಿಪಾತ್ರದಲ್ಲಿ ನಟಿಸುತ್ತಿದ್ದಾರೆ ಎಂದು ತಿಳಿದಿದ್ದರೂ ಕೂಡ ಕೆಟ್ಟ ಪಾತ್ರಕ್ಕೆ ಬೈಯುತ್ತಾ, ಒಳ್ಳೆಯ ಪಾತ್ರವನ್ನು ನಾವೇ ಆ ಪಾತ್ರವಾಗಿ ಸಂಭ್ರಮಿಸುತ್ತಾ, ಆ ಪಾತ್ರಕ್ಕೆ ತೊಂದರೆಯಾದಾಗ ನಾವು ಕೂಡ ಅದರೊಡನೆ ಅಳುತ್ತಾ, ನಮ್ಮ ಜೀವನದಲ್ಲಿ ನಡೆಯುತ್ತಿರುವ ಘಟನೆಯಂತೆಯೇ ಭಾವಿಸುತ್ತಿದ್ದೆವು.  ಆ ಮೂಲಕ ಚಿತ್ರದಲ್ಲಿ ತಲ್ಲೀನತೆಯನ್ನು ಪಡೆಯುತ್ತಿದ್ದೆವು.  ಆ ಘಳಿಗೆಗೆ ನಮ್ಮೆಲ್ಲಾ ನೋವನ್ನು ಮರೆಯುತ್ತಿದ್ದೆವು.  ನಾವು ಪಾಶ್ಚಾತ್ಯರನ್ನು ಅನುಕರಿಸುತ್ತಾ, ಅರ್ಥ ಹುಡುಕಾಡುವ ಗೋಜಿನಲ್ಲಿ, ಆ ಮುಗ್ಧತೆಯನ್ನು / ರಸಾಸ್ವಾದನೆಯನ್ನು ಕಳೆದುಕೊಂಡುಬಿಟ್ಟೆವೇ? ಎಂಬುದು ಕಾಡತೊಡಗಿತು. ಇನ್ನು ಮುಂದೆ, ಯಾವುದೇ ಚಿತ್ರವನ್ನು ನೋಡುವಾಗಲೂ ಅದನ್ನು ಎಂಜಾಯ್ ಮಾಡುವುದಷ್ಟೇ ನನ್ನ ಕೆಲಸ, ಅರ್ಥ ಹುಡುಕುವುದಲ್ಲ ಎಂಬ ಸ್ಪಷ್ಟತೆಯನ್ನು ಕಂಡುಕೊಂಡು! ಹೋಗಿ ನೋಡಿದ ಮೊದಲ ಚಿತ್ರ ‘ವಾಸ್ತು ಪ್ರಕಾರ’.

ಬಹಳ ನಿರೀಕ್ಷೆ ಮೂಡಿಸಿದ್ದ ‘ಬೆಂಕಿಪಟ್ಣ’ ಎರ್ರಾಬಿರ್ರಿ ಸೋತದ್ದು, ‘ವಾಸ್ತು ಪ್ರಕಾರ’ ದ ಮೇಲಿನ ನಿರೀಕ್ಷೆಯನ್ನು ಇನ್ನೂ ಹೆಚ್ಚು ಮಾಡಿತ್ತು ಎಂದರೆ ತಪ್ಪಾಗಲಾರದು.  ಆದರೆ ‘ವಾಸ್ತು ಪ್ರಕಾರ’ ನಿರೀಕ್ಷೆಯ ಮಟ್ಟ ಮುಟ್ಟದಿದ್ದರೂ, ಯೋಗರಾಜ್ ಭಟ್ಟರ ಮೇಲೆ ಪ್ರೇಕ್ಷಕರಿಗಿರುವ ನಂಬಿಕೆಯಿಂದಾಗಿ ಮಿಶ್ರ ಪ್ರತಿಕ್ರಿಯೆಗಳು ಎಲ್ಲೆಡೆ ವ್ಯಕ್ತವಾದವು.  ನೋಡದೇ ಮಾತಾಡಬಾರದು ಎಂದು ಚಿತ್ರವನ್ನು ನೋಡಿದ್ದಾಯಿತು.  ಚಿತ್ರ ಚೆನ್ನಾಗಿದೆಯೇ? ಇಲ್ಲವೇ?  ಭಟ್ಟರ ಚಿತ್ರಗಳ ಮಾಮೂಲಿಯಾಗಿ ಇರುವ ಎಲ್ಲಾ ಅಂಶಗಳು (ಮುಂಗಾರು ಮಳೆಯನ್ನು ಸೇರಿಸಿ) ಈ ಚಿತ್ರದಲ್ಲೂ ಇವೆ.  ಚಿತ್ರದ ಶುರುವಿನಲ್ಲಿಯೇ ಫೈಟಿಂಗ್, ನಂತರ ಒಂದು ಕಲರ್ ಫುಲ್ ಹಾಡು, ನೃತ್ಯ, ಉಡಾಫೆ ನಾಯಕ (ಈ ಬಾರಿ ಇಬ್ಬರೂ!), ವಯಸ್ಸು ಬೆಳೆದಿದ್ದರೂ ಅನುಭವದ ಕೊರತೆಯಿರುವ, ಚೆಲ್ಲುಚೆಲ್ಲಾಗಿ ಆಡುವ ನಾಯಕಿ, ಬಿಸ್ಲೇರಿ ನೀರಿನಂತಹ ಭಟ್ಟರ ಕಂಗ್ಲೀಷ್ ಹಾಡುಗಳು, ಕಾಡಿನ ಝರಿ ನೀರಿನಂತಹ ತಂಪಾದ ಜಯಂತ್ ಕಾಯ್ಕಿಣಿಯವರ ಹಾಡುಗಳು, ಪ್ರೀತಿಯಲ್ಲಿ ಬೀಳೊಲ್ಲವೆನ್ನುತ್ತಲೇ ಪ್ರೀತಿಯ ಒಂದೆರಡು ದೃಶ್ಯಗಳು, ನಾಯಕ, ನಾಯಕಿ ಜಗಳವಾಡಿದ ವಿರಹದ, ಕೋಪದ, ಕಣ್ಣೀರಿನ ದೃಶ್ಯಗಳು. ಅತಿ ಮುಖ್ಯವಾಗಿ ರೇಡಿಯೋ ನಾಟಕದ ಹಾಗೆಯೇ ಕೇಳಿಸುವ ಉದ್ದದ ಡೈಲಾಗ್ ಗಳು! ಅದೇ ಅನಂತ ನಾಗ್, ಸುಧಾ ಬೆಳವಾಡಿ....... 

ಹಾಗಿದ್ದರೆ ಹೊಸದೇನಿಲ್ಲವೇ? ಇದೆ. ಈ ಬಾರಿ ನಾಯಕನ ಬದಲು ಸಹನಾಯಕನ ಬಾಯಲ್ಲಿ ಉದ್ದುದ್ದದ ಡೈಲಾಗ್ಸ್, ನಾಯಕಿಗಿಂತ ನಾಯಕಿಯ ಅಮ್ಮನಿಗೆ ನಟಿಸಲು ಸಿಕ್ಕಿರುವ ಅವಕಾಶ, ಮೊದಲ ಬಾರಿಗೆ ಭಟ್ಟರ ಚಿತ್ರದಲ್ಲೊಬ್ಬ ಖಳನಾಯಕಿ, ವಿದೇಶಿ ಲೊಕೇಷನ್, ಮುಖ್ಯವಾಗಿ ಪ್ರಸ್ತುತ ಸಮಾಜದಲ್ಲಿ ಮಧ್ಯಮ ವರ್ಗದವರನ್ನು ಕಾಡುತ್ತಿರುವ ಸಮಸ್ಯೆಗೊಂದು ಪರಿಹಾರ / ಸಂದೇಶ ಕೊಡಲು ಯತ್ನಿಸಿದ್ದಾರೆ. ಮನೆಗಳ ಗೋಡೆ ಬೀಳಿಸುವುದಕ್ಕಿಂತ, ಸಂಸಾರದಲ್ಲಿ ಸಾಮರಸ್ಯಕ್ಕಾಗಿ ಮನಗಳ ನಡುವೆ ಗೋಡೆ ಕಟ್ಟಿಕೊಳ್ಳಬೇಡಿ ಎಂದು ಸಾರಿದ್ದಾರೆ.  ಹಾಗಿದ್ದರೆ ಎಲ್ಲವೂ ಇದೆ.  ಚಿತ್ರ ಚೆನ್ನಾಗಿರಬೇಕು ಎನ್ನುತ್ತೀರಾ? ಊಹೂ, ಎಲ್ಲವೂ ಇದ್ದರೂ ಚಿತ್ರದಲ್ಲಿ ಏನೂ ಇಲ್ಲವೆಂದೇ ಭಾಸವಾಗುತ್ತದೆ.  

ಚಿತ್ರವೊಂದರ ಪ್ಲಸ್ ಪಾಯಿಂಟ್ ಇರುವುದು ಕಿವಿ ಮುಚ್ಚಿ ಕುಳಿತುಕೊಂಡರೂ ಚಿತ್ರದ ಕಥೆ ಅರ್ಥವಾಗುವುದರಲ್ಲಿ! ಆದರೆ ‘ವಾಸ್ತುಪ್ರಕಾರ’ ದಲ್ಲಿ ಕಣ್ಮುಚ್ಚಿ ಕುಳಿತರೂ ಚಿತ್ರ ಅರ್ಥವಾಗುತ್ತದೆ. ಕಣ್ಣು ಬಿಟ್ಟು ನೋಡುವಂತಹ ಯಾವುದೇ ಅಂಶಗಳೂ ಚಿತ್ರದಲ್ಲಿಲ್ಲ.  ಜಗ್ಗೇಶ್ ತನ್ನ ಎಂದಿನ ಲವಲವಿಕೆಯಲ್ಲಿ ನಟಿಸಿಲ್ಲ, ಭಟ್ಟರ ಡೈಲಾಗ್ ಗಳಲ್ಲಿ ಏಕತಾನತೆ ಇದೆ, ಪಂಚಿಂಗ್ ಇಲ್ಲ. ರಕ್ಷಿತ್ ಶೆಟ್ಟಿಗಂತೂ ಈ ಪಾತ್ರ ಹೊಂದುವುದೇ ಇಲ್ಲ. ರಕ್ಷಿತ್ ಶೆಟ್ಟಿಯ ಬಾಡಿ ಲಾಂಗ್ವೇಜ್ ಗೂ, ಡೈಲಾಗ್ ಗೂ ಹೊಂದಾಣಿಕೆಯೇ ಆಗುವುದಿಲ್ಲ.  ಬಹುಶಃ ಡೈಲಾಗ್ ಗಳು ಡಬ್ಬಿಂಗ್ ನಲ್ಲಿಯೇ ರಚಿತಗೊಂಡವೋ? ಎಂಬ ಅನುಮಾನ ಹುಟ್ಟಿಸುತ್ತವೆ. ಗಣೇಶ್, ಯಶ್, ದಿಗಂತ್ ಅಥವಾ ಸೃಜನ್ ಲೋಕೇಶ್ ಈ ಪಾತ್ರಕ್ಕೆ ಹೊಂದುತ್ತಿದ್ದರು. ರಕ್ಷಿತ್ ಶೆಟ್ಟಿ ಮತ್ತು ಈಶಾನಿಯ ನಡುವೆ ಕೆಮಿಸ್ಟ್ರಿಯೇ ಇಲ್ಲದಿರುವುದು ಎದ್ದು ಕಾಣುತ್ತದೆ.  ಅನಂತನಾಗ್ ಅವರಿಗಂತೂ ನಟಿಸುವ ಅವಕಾಶವೇ ಇಲ್ಲ. ಅವರು ಕೂಡ ಮುಖದಲ್ಲಿ ಭಾವನೆ ಕಾಣಿಸದಿರಲು / ನಟಿಸದಿರಲು ಶತಾಯಗತಾಯ ಪ್ರಯತ್ನಿಸಿದ್ದಾರೆ. ಇಡೀ ಚಿತ್ರದಲ್ಲಿ ಆರ್ಭಟಿಸುವುದು ಸುಧಾರಾಣಿ, ಚಂದ ಕಾಣುವುದು ಪರೋಲ್, ಟಿ.ಎನ್.ಸೀತಾರಾಂ, ಸುಧಾ ಬೆಳವಾಡಿ ಅವರ ನಟನೆ ನೋಡುವಂತಿದೆ. 

‘ವಾಸ್ತು’ ಎಂಬುದೆಲ್ಲಾ ಸುಳ್ಳು ಎಂಬುದನ್ನು ನಿರೂಪಿಸಲು ಹೊರಟ ಭಟ್ಟರು, ನಿರೂಪಣೆಯಲ್ಲಿ ಎಡವಿದ್ದರಿಂದ, ಪ್ರೇಕ್ಷಕರಿಗೆ ‘ವಾಸ್ತು’ ಕಾಡುವುದೇ ಇಲ್ಲಾ, ಇತ್ತ ಕಡೆ ಪಾತ್ರಗಳು ರಚಿತವಾಗಿವೆಯೇ ಹೊರತು, ಅವುಗಳಿಗೊಂದು ಗೊತ್ತು, ಗುರಿ ಇಲ್ಲದಿರುವುದರಿಂದ, ಅವುಗಳು ಆಡಿದ್ದೇ ಆಟವಾಗಿಬಿಡುತ್ತವೆ.  ಪ್ರೇಕ್ಷಕರಿಗೆ ಮೋಡಿ ಮಾಡುವಲ್ಲಿ ಸೋಲುತ್ತವೆ. ಬಹುಶಃ ಹೊಸಬರು ಈ ಚಿತ್ರವನ್ನು ಹೀಗೆ ನಿರ್ದೇಶಿಸಿದ್ದರೆ, ಚಿತ್ರದ ನೆಗೆಟಿವ್ ಅಂಶಗಳನ್ನು ಮರೆತುಬಿಡಬಹುದಿತ್ತು.  ಆದರೆ ಭಟ್ಟರ ಪ್ರತಿಭೆಗೆ ತಕ್ಕುದಾದ ಸಿನೆಮಾವಲ್ಲವೆಂದೇ ಹೇಳಬಹುದು.  ಕನ್ನಡ ಚಿತ್ರರಂಗದ ನಿರ್ದೇಶಕರು ಇನ್ನಾದರೂ ‘ಚಿತ್ರಕಥೆ’ ಗೆ ಹೆಚ್ಚಿನ ಗಮನ ನೀಡುವುದು ಒಳ್ಳೆಯದು. ಈ ವಿಷಯದಲ್ಲಿ ಉಡಾಫೆ ಸಲ್ಲದು! ಪ್ರೇಕ್ಷಕರು taken as granted ಆಗಬಾರದು. ಇಂತಹದೊಂದು ಪಾಠ, ಕನ್ನಡ ಚಿತ್ರರಂಗಕ್ಕೆ ಅವಶ್ಯವಾಗಿ ಬೇಕಿತ್ತು.  ಭಟ್ಟರ ಹೆಸರಿನಿಂದಾಗಿ ‘ವಾಸ್ತು ಪ್ರಕಾರ’ ಹಣ ಮಾಡಿಬಿಡಬಹುದು.  ಆದರೆ ಗುಣಮಟ್ಟದ ವಿಷಯದಲ್ಲಿ ಈ ತರಹದ ರಾಜಿ ಸಲ್ಲದು! 

Tuesday, January 6, 2015

ಎಂತಹ ಮಧುರ ಚುಂಬನವಿದು!

ಎಂತಹ ಮಧುರ ಚುಂಬನವಿದು!

ಎಂತಹಾ ಮೃದು, ಮಧುರ ಚುಂಬನ!
ನಾವಿಬ್ಬರೂ ಶಾಶ್ವತವಾಗಿ ಅಗಲುವ ಮುನ್ನಾ!
ಹೃದಯವನ್ನು ಕಲಕಿ ಹಿಂಸಿಸುತ್ತಿರುವ ಸಂಕಟ
ನಿನಗರಿವಾಗಬಾರದೆಂದು ಪಣ ತೊಟ್ಟಿದ್ದೇನೆ
ಈ ನೋವು, ನಿಟ್ಟುಸಿರು, ನರಳಾಟ
ನಿನಗೆ ತಾಕದಿರುವಂತೆ ಪ್ರತಿಜ್ಞೆ ಮಾಡಿದ್ದೇನೆ.
ಅದೃಷ್ಟದ ತಾರೆ ಅವಳೇ, ಅವನ ತೊರೆದ ಮೇಲೆ
ಇನ್ನೂ ಮುಂದಿನ ಬದುಕೆಲ್ಲವೂ ದುಃಖಮಯವೆಂದು
ಅವನಿಗೆ ವಿವರಿಸಲು ಯಾರಿಗಾದರೂ ಸಾಧ್ಯವೇ?
ಇಲ್ಲಾ, ನನ್ನ ಕಣ್ಗಳೇನೂ ಮಿಂಚುತ್ತಿಲ್ಲ;
ನಿರಾಶೆಯ ಕತ್ತಲ ಕೂಪಕ್ಕೆ ತಳ್ಳಲ್ಪಟ್ಟಿದ್ದೇನೆ.
ನಾನೆಂದೂ ನನ್ನ ಅರೆ ಪ್ರೀತಿಗೆ ಬೈಯುವುದಿಲ್ಲ
ನನ್ನ ಪ್ರೀತಿ/ನ್ಯಾನ್ಸಿ ಯನ್ನು ತಡೆಯುವುದಿಲ್ಲ
ಪ್ರೀತಿಯನ್ನು, ಪ್ರೀತಿಯಿಂದಲೇ, ಪ್ರೀತಿಗಾಗಿಯೇ
ಪ್ರೀತಿಸುತ್ತೇನೆ.
ನಾವೆಂದಿಗೂ ಕರುಣೆಯಿಂದ ಪ್ರೀತಿಸಿರಲಿಲ್ಲ.
ನಮ್ಮದೆಂದಿಗೂ ಕುರುಡು ಪ್ರೇಮವಾಗಿರಲಿಲ್ಲ
ಹೃದಯ ನೊಂದು, ಬೇರ್ಪಡುವ, ಮತ್ತೆಂದಿಗೂ
ಭೇಟಿಯಾಗದಂತಹ ಕೆಟ್ಟ ಪ್ರೀತಿಯೂ ಆಗಿರಲಿಲ್ಲ
ನನ್ನ ಮೊಟ್ಟ ಮೊದಲ ಚಂದದ ಪ್ರೀತಿ ನೀನೇ!
ನನ್ನ ಪರಿಪೂರ್ಣ ಆತ್ಮ ಸಂಗಾತಿ ನೀನೇ!
ಜೀವನದುದ್ದಕ್ಕೂ ಸಂತೋಷ, ಶಾಂತಿ, ನೆಮ್ಮದಿ
ಪ್ರೀತಿ, ಪ್ರೇಮ, ಆಯುರಾರೋಗ್ಯ ಐಶ್ವರ್ಯ ನಿನ್ನದಾಗಲಿ
ಎಂತಹ ಅನುರಾಗದ ದೀರ್ಘ ಮಧುರ ಚುಂಬನ!
ಅಯ್ಯೋ! ಶಾಶ್ವತವಾಗಿ ಬೇರ್ಪಡಲೇಬೇಕಲ್ಲಾ!
ಇನ್ನೆಂದಿಗೂ ನಿನ್ನಂತರಾಳವ ಕಲಕುವುದಿಲ್ಲವೆಂದು
ವಾಗ್ಧಾನ ನೀಡುತ್ತೇನೆ.
ಈ ನೋವು, ಸಂಕಟ ನಿನಗೆಂದಿಗೂ ತಿಳಿಯದಿರಲೆಂದು
ಪಣ ತೊಟ್ಟಿದ್ದೇನೆ.

A fond kiss

A fond kiss, and then we sever;
A farewell, and then forever!
Deep in heart-wrung tears I'll pledge thee,
Warring sighs and groans I'll wage thee.
Who shall say that Fortune grieves him,
While the star of hope she leaves him?
Me, nae cheerfu' twinkle lights me;
Dark despair around benights me.
I'll ne'er blame my partial fancy,
Nothing could resist my Nancy;
But to see her was to love her;
Love but her, and love forever.
Had we never lov'd say kindly,
Had we never lov'd say blindly,
Never met--or never parted--
We had ne'er been broken-hearted.
Fare thee well, thou first and fairest!
Fare thee well, thou best and dearest!
Thine be like a joy and treasure,
Peace. enjoyment, love, and pleasure!
A fond kiss, and then we sever;
A farewell, alas, forever!
Deep in heart-wrung tears I'll pledge thee,
Warring sighs and groans I'll wage thee!

Robert Burns

http://www.poemhunter.com/robert-burns/

Monday, January 5, 2015

ಸಂಗೀತ - ತೂಗುವ ತೊಟ್ಟಿಲು



ಸಂಗೀತವು ಸಾಗರದಂತೆ, ಯಾವಾಗಲೂ ನನ್ನನ್ನು 
ದಿಗಂತದತ್ತ ಸೆಳೆದೊಯ್ಯುತ್ತದೆ,
ಮುಸುಕಿರುವ ಮಂಜಿನ ಮೋಡಗಳ ಕೆಳಗೆ,
ನನ್ನ ಕಳಾಹೀನ ನಸೀಬಿಗೆ ಹುಟ್ಟು ಹಾಕುತ್ತಿರುತ್ತೇನೆ.
ಅಲೆಗಳ ಗಾಳಿಯಬ್ಬರ ತಾಳಲಾರದೆ,
ಉಬ್ಬಿಕೊಳ್ಳುವ ಹಡಗಿನ ಹಾಯಿಬಟ್ಟೆಯ
ಹಾಗೆಯೇ, ನನ್ನೆದೆಯು ಭಾರದೀ ಊದಿಬಿಡುತ್ತದೆ.
ರಾತ್ರಿಯ ಪರದೆ ಬೀಳುವಾಗ, ಹೊರಳಾಡುತ್ತಲೇ
ನಾನು ಇವೆಲ್ಲವುಗಳ ಬೆಂಬತ್ತಿ ಹೋಗುವೆ
ದೋಣಿಯ ಭಾವನೆಗಳು ಅರ್ಥವಾದಂತೆ
ಅದರ ತುಡಿತಗಳು ನನ್ನೊಳಗೂ ಮಿಡಿಯುತ್ತವೆ. 
ಚಂದದ ಗಾಳಿಯೋ, ಚಂಡಮಾರುತವೋ 
ಬೀಸಿದಾಗ ಅದು ಉಂಟು ಮಾಡುವ ಕಂಪನ
ಭೂಗರ್ಭದಾಳದಲ್ಲೆಲ್ಲೋ ನನಗೆ ತೂಗುವ ತೊಟ್ಟಿಲು
ಅಥವಾ ಶಾಂತ ಸ್ವರೂಪಿಯಂತೆ ನಟಿಸುತ್ತಿರುವ
ನನ್ನೊಳಗಿನ ಹತಾಶೆಗೆ ಹಿಡಿದ ಬೃಹತ್ ಕನ್ನಡಿಯೂ!

Music

Music, like an ocean, often carries me away! 
Through the ether far, 
or under a canopy of mist, I set sail 
for my pale star. 
Breasting the waves, my lungs swollen 
like a ship’s canvas, 
night veils from me the long rollers, 
I ride their backs: 
I sense all a suffering vessel’s passions 
vibrating within me: 
while fair winds or the storm’s convulsions 
on the immense deep 
cradle me. Or else flat calm, vast mirror there 
of my despair!

Charles Baudelaire

http://www.poemhunter.com/charles-baudelaire/

ಚಿತ್ರಸಂತೆಯಲ್ಲಿ ದಕ್ಕಿದ್ದು! ದಕ್ಕದ್ದು! :-)

ಐದು ವರ್ಷಗಳ ಹಿಂದೆ, ಮೊದಲ ಬಾರಿಗೆ ಚಿತ್ರಸಂತೆಗೆ ಹೊರಟಾಗ, ಅಲ್ಲಿನ ಜನಸಾಗರ ನೋಡಿ ಗಲಿಬಿಲಿಯಾಗಿಬಿಟ್ಟಿತ್ತು. ರಸ್ತೆಯೆಂಬುದನ್ನು ಮರೆತು ಅನಾಥ ಪ್ರಜ್ಞೆ ಕಾಡಿ ಅತ್ತಿದಾಗಿತ್ತು!  ಆಮೇಲೆ ಒಂದಷ್ಟು ಗೆಳೆಯರು ಸಿಕ್ಕಿ ಸಮಾಧಾನವಾಗಿತ್ತು. ನನಗಾಗ (ಈಗಲೂ ಕೂಡ) ಈ ಆರ್ಟ್ ಶೋ, ಪೈಂಟಿಂಗ್, ಮಾಡರ್ನ್ ಆರ್ಟ್, ದೃಶ್ಯ ಕಲೆ! ಇವೆಲ್ಲಾ ಹೊಸ ಪದಗಳು. ಅವುಗಳನ್ನು ನೋಡಿದರೆ ನೈಜವಾಗಿ ಅಂದರೆ ಫೋಟೋಗ್ರಾಫ್ ತರಹ ಕಂಡರೆ ಮಾತ್ರ ಚಂದ ಎಂಬುದಷ್ಟೆ ಆಗಿನ, ಬಹುಶಃ ಈಗಿನ ಮನಸ್ಥಿತಿ!  ಕೆಲವು ಚಿತ್ರಗಳನ್ನು ನೋಡಿದರಂತೂ ತಲೆಬುಡ ಅರ್ಥವಾಗುವುದೇ ಇಲ್ಲಾ.  

ಐದು ವರ್ಷಗಳಲ್ಲಿ ದೃಶ್ಯಕಲೆಯ ಬಗ್ಗೆ ಅಂತಹ ಜ್ಞಾನ ಬೆಳೆಯದಿದ್ದರೂ, ಈ ಚಿತ್ರಗಳಲ್ಲಿ ಏನಾದರೂ ‘ಹಿಡನ್ ಮೆಸೇಜ್’ ಇರಬಹುದಾ? ಎಂಬ ಕುತೂಹಲ ಮೂಡುವಷ್ಟರ ಮಟ್ಟಿಗೆ , ಈ ಆರ್ಟ್ ವರ್ಕ್ ಗಳ ಬಗ್ಗೆ ಆಸಕ್ತಿ ಮೂಡಿದೆ.  ಅಂತಹದರಲ್ಲಿ,  ಹಲವಾರು ಕಾರಣಗಳಿಂದ ಚಿತ್ರಸಂತೆಗೆ ಈ ಐದು ವರ್ಷಗಳಲ್ಲಿ ಹೋಗಲಾಗಿರಲಿಲ್ಲ.  ಈ ಬಾರಿ ಒಂದಿಷ್ಟು ಫ್ರೆಂಡ್ಸ್ ಗಳೊಟ್ಟಿಗೆ ಮಾತನಾಡಿಕೊಂಡೇ ಹೊರಟಿದ್ದಾಯಿತು.  ಆದರೆ ಮೊದಲ ಬಾರಿ ಕೊಟ್ಟ ಥ್ರಿಲ್, ಈ ಬಾರಿ ಇರಲಿಲ್ಲ. ಜನರು ಕೂಡ ಅಷ್ಟೊಂದಿರಲಿಲ್ಲ ಎಂದೇ ಅನಿಸಿತು.  ಅದದೇ ಯಶೋದೆ, ಕೃಷ್ಣ, ಬುದ್ಧ, ಗಾಂಧಿ, ನಡುವೆ ಒಂದಷ್ಟು ಮನವರಳಿದ್ದು ತಮಿಳುನಾಡಿನಿಂದ ಬಂದಿದ್ದ ಒಂದಿಬ್ಬರ ಆರ್ಟ್ ವರ್ಕ್.  ನೀರಿನಲ್ಲಿ ಆಡುತ್ತಿದ್ದ ಮಕ್ಕಳೂ ಕಣ್ಮುಂದೆ ಇದ್ದಂತಿತ್ತು.  ಆದರೆ ವೀಕ್ಷಿಸುತ್ತಿದ್ದ ಜನರು, ತಮ್ಮ ಕ್ಯಾಮೆರಾಗಳಿಂದ ಫೋಟೋ ತೆಗೆಯುತ್ತಿದ್ದದ್ದು ಸಿಕ್ಕಾಪಟ್ಟೆ ಇರಿಸುಮುರಿಸಾಗುತ್ತಿತ್ತು.  ಈ ಡಿಜಿಟಲ್ ಕಾಲದಲ್ಲಿ, ಇಂತಹ ಆರ್ಟ್ ವರ್ಕ್ ಗಳ ಫೋಟೋ ಹಿಡಿದು, ಪ್ರಿಂಟ್ ಹಾಕಿಬಿಟ್ಟರೆ ಮುಗೀತಲ್ಲಾ?  ಒಂದಿಬ್ಬರ ಬಳಿ ಕಿತ್ತಾಡಿದ್ದು ಆಯಿತು.  ಊಹೂ, ನನ್ನ ಮಾತಿಗೆ ಯಾರೂ ಬೆಲೆ ಕೊಡಲಿಲ್ಲ. ಭಾಷೆ ಬರದ ಕಲಾವಿದ ಸುಮ್ಮನೆ ಕುಳಿತಿದ್ದರು, ಜನರು ಅವರ ಪಾಡಿಗೆ ಫೋಟೋ ತೆಗಿತಾನೇ ಇದ್ದರು.

ಮೊನ್ನೆ, ಮೊನ್ನೆ ತಾನೇ ಬೆಂಗಳೂರಿನಲ್ಲಿ ಬಾಂಬ್ ಬ್ಲಾಸ್ಟ್ ಆಗಿದ್ದರೂ ಕೂಡ, ಚಿತ್ರ ಸಂತೆಯಲ್ಲಿ ಲಕ್ಷಾಂತರ ಜನರು ಸೇರುತ್ತಾರೆಂದು ತಿಳಿದಿದ್ದರೂ ಕೂಡ, ಯಾವುದೇ ರೀತಿಯ ಸೆಕ್ಯುರಿಟಿ ಇಲ್ಲದಿದ್ದದು ಖೇದಕರ.  ಎಂತಹುದೇ ಅನಾಹುತ ನಡೆಯುವಂತಹ ಹೇರಳ ಅವಕಾಶಗಳು ಅಲ್ಲಿದ್ದವು.  ಚಿತ್ರಕಲಾಪರಿಷತ್ತಿನ ಒಳಗಂತೂ ಒಬ್ಬರನೊಬ್ಬರು ಅಕ್ಷರಶಃ ತಳ್ಳಿಕೊಂಡು ಹೋಗುವಂತಹ ನೂಕುನುಗ್ಗಲು!  ಒಂದಷ್ಟು ಪೋಲೀಸರು, ದೂರದಲ್ಲೊಂದು ಕಡೆ ರೆಡ್ ಕ್ರಾಸ್ ನವರ ವ್ಯಾನ್, ಬಿಟ್ಟರೆ, ಮತ್ಯಾವುದೇ ರಕ್ಷಣಾ ಸೌಲಭ್ಯಗಳೂ ಇರಲಿಲ್ಲ.  ಯಾರೋ ಕಿಡಿಗೇಡಿಗಳು ಸುಮ್ಮನೊಂದು ಪಟಾಕಿ ಹೊಡೆದರೂ ಸಾಕು, ಕಾಲ್ತುಳಿತದಲ್ಲಿ ಒಂದಷ್ಟು ಜನರು ಸಿಕ್ಕಿಕೊಳ್ಳುತ್ತಿದ್ದರು!

ಮತ್ತೊಂದು ವಿಷಯ ತಲೆ ಕೆಡಿಸಿದ್ದು, ಚಿತ್ರ ಸಂತೆಯಲ್ಲಿ ಬಿಕರಿಯಾಗುತ್ತಿದ್ದ ಕಲೆಗಳ ದುಬಾರಿ ಬೆಲೆ.  ಸಣ್ಣಪುಟ್ಟ ಜಾತ್ರೆಯಲ್ಲಿ ಸಿಗುವಂತಹ ವಸ್ತುಗಳ ಹೊರತು, ಉಳಿದವುಗಳ ಬೆಲೆ ಸಾವಿರದ ಮೇಲೆಯೇ! ಹಾಗಿದ್ದರೆ ಚಿತ್ರಗಳು ಗ್ಯಾಲರಿಯಿಂದ ಸಂತೆಗೆ ಬಂದರೂ, ಆಕಾಶಕ್ಕೇರಿದ ಬೆಲೆ ಕೇಳಿ, ಚಿತ್ರಗಳನ್ನು ಕೊಂಡುಕೊಳ್ಳುವುದು ಜನಸಾಮಾನ್ಯರಿಗೆ ಸಾಧ್ಯವಾದೀತೇ?  ಚಿತ್ರಸಂತೆಯಲ್ಲಿ ಹಣ ಮಾಡಿದ್ದು ಫುಡ್ ಸ್ಟಾಲ್ ಗಳಷ್ಟೇ!  ಇನ್ನು ಮುಂದೆ, ಚಿತ್ರಸಂತೆಯಲ್ಲಿ ಸ್ಟಾಲ್ ಹಾಕಲು ಅವಕಾಶ ಸಿಕ್ಕರೇ, ಫುಡ್ ಸ್ಟಾಲ್ ಹಾಕುವುದೇ ಒಳ್ಳೆಯದು ಎನ್ನುವ ಅಭಿಪ್ರಾಯಕ್ಕೆ ಬರುವಂತಹ ನೂಕುನುಗ್ಗಲು ಅಲ್ಲಿತ್ತು. ಉಳಿದಂತೆ ಬೇರೆ ಕಡೇ, ಫೋಟೋ ತೆಗೆಯುವವರದ್ದೇ ಸಂಭ್ರಮ ಹೆಚ್ಚು.

ಚಿತ್ರಸಂತೆಗೆ ಹೋದದ್ದು ಸಾರ್ಥಕ ಎಂಬ ಅನಿಸಿಕೆ ಮೂಡಿದ್ದು ಚಿತ್ರಕಲಾಪರಿಷತ್ತಿನ ಅನಿಲ್ ಸರ್ ಅವರನ್ನು ಭೇಟಿ ಮಾಡಿದ್ದು.  ಅಷ್ಟೊಂದು ಜವಾಬ್ದಾರಿ ಅವರ ಮೇಲಿದ್ದರೂ, ಬೆಳಿಗ್ಗೆಯಿಂದ ಎಲ್ಲರನ್ನೂ ಭೇಟಿ ಮಾಡಿ ಸಾಕಾಗಿದ್ದರೂ, ಒಂದಿಷ್ಟು ಸುಸ್ತು ಕೂಡ ತೋರಿಸಿಕೊಳ್ಳದೇ ಓಡಾಡುತ್ತಿದ್ದ ರೀತಿ!  ಪ್ರತಿಯೊಬ್ಬರಿಗೂ ಅವರೇ ಬೇಕು.  ಅವರೊಂದಿಗೆ ಕಳೆದ ಒಂದಿಷ್ಟು ಕಾಲ ಇಡೀ ದೃಶ್ಯಕಲೆಯನ್ನೇ ನೋಡುವ ರೀತಿ ಬದಲಾಯಿಸಿದ್ದಂತೂ ಸುಳ್ಳಲ್ಲ.  ಅವರನ್ನು ಭೇಟಿ ಮಾಡುವ ಮುಂಚೆ, ಒಂದೂ ಪೋರ್ಟೇಟ್ ಚಿತ್ರವನ್ನು ನೋಡಿ ಬಂದಿದ್ದೆವು. ಅದ್ರಲ್ಲಿ ದಪ್ಪನೆಯ ಮೂಗು, ಕೆಟ್ಟದಾಗಿರುವ ತುಟಿ, ಸಣ್ಣ ಮಕ್ಕಳು ಚಿತ್ರಿಸಿರುವ ರೀತಿ ಇತ್ತು. ಇದು ಏನು ಚಂದ? ಎಂದು ಹಾಕಿದ್ದಾರೆ ಎಂದು ತಮಾಷೆ ಮಾಡಿ ಹೋಗಿದ್ದೆವು.

ಅನಿಲ್ ಸರ್ ಬಳಿ ಕುತೂಹಲದಿಂದ, ಒಂದಿಷ್ಟು ಸಂಕೋಚದಿಂದ ಆ ಚಿತ್ರದ ಬಗ್ಗೆ ಕೇಳಿದಾಗ ಅವರು ಆ ಚಿತ್ರವನ್ನು ಅರ್ಥೈಸಿದ ರೀತಿ ಚಂದ.  ಆ ಚಿತ್ರದಲ್ಲಿ ಇಡೀ ಹೆಣ್ಣಿನ ಮುಖವನ್ನು ಓರೆಕೋರೆಯಾಗಿ ಕಪ್ಪು ಬಣ್ಣದಲ್ಲಿ ಬರೆದಿದ್ದರೆ, ಮೂಗುತಿ, ಕಿವಿಯೋಲೆ ಮತ್ತು ಬೈತಲೆ ಬೊಟ್ಟು ಮಾತ್ರ ಕೆಂಪು ಬಣ್ಣದಲ್ಲಿ, ಎದ್ದು ಕಾಣುವಂತೆ ಬರೆದಿದ್ದರು.  ಹಾಗಾಗಿ ಇಡೀ ಚಿತ್ರದಲ್ಲಿ ಎದ್ದು ಕಾಣುವ ಅಂಶ ಆಕೆಯ ಮುಖಕ್ಕಿಂತ, ಹಳೆಯ ಕಾಲದ ಆಭರಣಗಳಾಗಿದ್ದು (ನಮಗೆ ಗೊತ್ತೇ ಆಗಿರಲಿಲ್ಲ :( ). ಇದರಿಂದ ಅರ್ಥ ಮಾಡಿಕೊಳ್ಳಬೇಕಾದ ಅಂಶವೇನೆಂದರೆ, ಸಾಂಪ್ರದಾಯಿಕತನಕ್ಕೆ ಆ ಕಲಾವಿದ ಹೆಚ್ಚು ಬೆಲೆ ಕೊಟ್ಟು, ಉಳಿದದ್ದು ನಗಣ್ಯ ಎಂಬಂತೆ ಚಿತ್ರಿಸಿದ್ದಾನೆ,  ಎಂದು ಅವರು ಹೇಳಿದಾಗ, ಅದುವರೆಗೂ ಆಡಿಕೊಂಡಿದ್ದ ನಮ್ಮ ಬಾಯಿಗೆ ಬೀಗ ಬಿದ್ದಿತು.

ಮತ್ತೊಂದು ವಿಷಯ ಅನಿಲ್ ಸರ್ ವಿವರಿಸಿದ್ದು, ಕಲಾವಿದರು ತಮ್ಮನ್ನು ತಾವೇ ಅಲಂಕರಿಸಿಕೊಂಡು, ತಾವು ಕೂಡ ಕಲೆಯ ಭಾಗವಾಗಿಬಿಡುವುದು.  ಅವರನ್ನು Performance Artist  ಎಂದು ಹೇಳುತ್ತಾರೆ ಎಂದರು. ಈಗೀಗ Performance Artist ಆಗುವುದರಲ್ಲಿ ಹೆಚ್ಚಾಗಿ ಕಲಾವಿದರು ಆಸಕ್ತಿ ತೋರಿಸುತ್ತಿದ್ದಾರೆ. ಅದರಲ್ಲಿಯೂ ಹೆಣ್ಣು ಮಕ್ಕಳು ಹೆಚ್ಚಿಗೆ ಭಾಗವಹಿಸುತ್ತಿದ್ದಾರೆ ಎಂಬ ಅಂಶ ಸಿಕ್ಕಾಪಟ್ಟೆ ಕುತೂಹಲ ಕೆರಳಿಸಿತು.  ಇದರ ಬಗ್ಗೆ ಮತ್ತೊಮ್ಮೆ  ವಿವರವಾಗಿ ಬರೆಯಬೇಕು.  ಒಂದೊಂದು ಚಿತ್ರಕ್ಕೂ ಹತ್ತಿಪ್ಪತ್ತು ಪುಟಗಳಷ್ಟು ವಿವರಗಳನ್ನು ಬರೆಯಬಹುದು ಎಂದವರು ವಿವರಿಸುತ್ತಿದ್ದರೆ, ದೃಶ್ಯಕಲೆಯೂ ಸಿನೆಮಾಕ್ಕಿಂತಲೂ ಹೆಚ್ಚಿನ, ಒಳ್ಳೆಯ ಅನುಭವವನ್ನು / ಆನಂದವನ್ನು / ಥ್ರಿಲ್ ಅನ್ನು ಕೊಡುತ್ತದೆ ಎಂಬುದು ಅರ್ಥವಾಗುತ್ತಾ ಹೋಯಿತು.  ಕೇವಲ ಅರ್ಧ ಗಂಟೆಯಲ್ಲಿ ಅವರು ವಿವರಿಸಿದ್ದು ನಮಗೆ ಇಷ್ಟು ಖುಷಿ ಕೊಡಬೇಕಾದರೆ, ಅವರ ವಿದ್ಯಾರ್ಥಿಗಳು ನಿಜವಾಗಿಯೂ ಅದೃಷ್ಟಶಾಲಿಗಳು :-)







ಯಾವುದು ಮುಖ್ಯ?

ಯಾವುದು ಮುಖ್ಯ?

ಕೆಲವರು ಸರದಾರರಾಗಿರುವ ಸೊಕ್ಕಿನಿಂದ,
ತಮ್ಮಲ್ಲಿರುವ ಸೈನಿಕರ ಬಲದಿಂದ ಅಥವಾ
ಅವರ ಯುದ್ದದ ಹಡಗುಗಳು ಸಮುದ್ರದಲ್ಲಿ
ಕಾದಾಡಿ ಎಬ್ಬಿಸಿರುವ ತೆರೆಗಳಿಂದ ಮೆರೆಯುತ್ತಾರೆ.
ಯುದ್ಧವು ಅದರದ್ದೇ ಆದ ವೈಭವವನ್ನು ಹೊಂದಿದೆ
ಆದರೆ ನೀನಿಷ್ಟ ಪಡುವ ಈ ತುಕಡಿಗಳ ರಂಗುರಂಗಿನ
ಜೀವನದಿಂದ ನಾನು ಬಹು ದೂರ ಉಳಿದಿದ್ದೇನೆ.

ಇವುಗಳಿಗೆ ಸಾಕ್ಷಿ ಬೇಕೆನ್ನಿಸಿದರೆ,
ಇತಿಹಾಸದತ್ತ ಒಮ್ಮೆ ತಿರುಗಿ ನೋಡು:
ಹೆಲೆನ್ ನ ಕಥೆ ನಮ್ಮೆಲ್ಲರಿಗೂ ನೆನಪಿದೆ.
ಅವಳು ತನ್ನ ಮಗುವನ್ನು, ಶ್ರೀಮಂತ ಗಂಡನನ್ನು,
ತನ್ನಿಡೀ ಸಂಸಾರವನ್ನು ತೊರೆದು
ಅಪರಿಚಿತನೊಬ್ಬನ ಕೈ ಹಿಡಿದು ಹೊರಟ ಕಥೆ!
ಅವಳ  ಚೆಲುವಿಗೆ ಸರಿಸಾಟಿ ಯಾರೂ
ಇರಲಿಲ್ಲವಾದರೂ, ಪ್ರೀತಿಯ ಅಣತಿಗೆ
ತಲೆ ಬಾಗಿ ನಡೆದೇ ಬಿಟ್ಟಳು.

ಪ್ರೀತಿ ಎಂದರೆ ಅಧಿಕಾರದಂತೆ, ಯಾರೂ
ಅದರ ಆಜ್ಞೆ ಮೀರಲಾರರು,
ನನ್ನ ಆಲೋಚನೆಗಳು ಕೂಡ ಹಾಗೆಯೇ,
ದೂರದಲ್ಲಿರುವ ನನ್ನ ಪ್ರೀತಿಯನ್ನನುಸರಿಸಬೇಕು
ಅವಳ ಮಿಂಚಿನಂತಹ ನಗು, ನನಗೆ ನೀಡುವ
ಆನಂದದ ಮುಂದೆ, ಕವಚ ತೊಟ್ಟು ನಿಂತ
ವೀರರ ಹುಮ್ಮಸ್ಸು ವ್ಯರ್ಥ!

"On what is best"

Some celebrate the beauty
of knights, or infantry,
or billowing flotillas
at battle on the sea.
Warfare has its glory,
but I place far above
these military splendors
the one thing that you love.

For proof of this contention
examine history:
we all remember Helen,
who left her family,
her child, and royal husband,
to take a stranger's hand:
her beauty had no equal,
but bowed to love's command.

As love then is the power
that none can disobey,
so too my thoughts must follow
my darling far away:
the sparkle of her laughter
would give me greater joy
than all the bronze-clad heroes

Sappho

http://www.poemhunter.com/Sappho

ಹೊಸ ವರ್ಷದ ಮುಂಜಾನೆ

ಹೊಸ ವರ್ಷದ ಮುಂಜಾನೆ

ಇನ್ನೊಂದೇ ರಾತ್ರಿ ಬಾಕಿ, ಹಳತು ಹೊಸತಾಗಲಿಕ್ಕೆ
ಇರುವುದೊಂದೇ ಇರುಳು ಹೊಸ ವರ್ಷ ರೂಪುಗೊಳ್ಳಲಿಕ್ಕೆ
ಹಿಂದಿನ ವರ್ಷದ ಆಶಯ ಅಸಹನೆಯಾಗಿ ಮಾರ್ಪಟ್ಟಿದ್ದರೂ,
ಆಶಿಸಿದೆ "ಹೊಸ ವರ್ಷ ಎಲ್ಲವನ್ನೂ ಮರಳಿ ತರುತ್ತದೆಯೆಂದು"
ಹಳೆಯ ವರ್ಷದ ಭರವಸೆ ಸಮಾಧಿಯಾಗಲು ಹೃದಯವೇ
ಕೊಳ್ಳಿಯಿಟ್ಟಿರಲು, ನಂಬುಗೆಯೊಂದು ಮಾತಾಡಿತು :
"ಸತ್ತವರ ಬೂದಿಯಲ್ಲಿ ಹೂಗಳು ಅರಳಿ ನಿಂತು ನವ
ಕಾಲವನ್ನು ರಾಜನಂತೆ ಬರಮಾಡಿಕೊಳ್ಳುತ್ತವೆ"
ಕಳೆದ ಕಾಲದ ಹೃದಯ ದುರಾಸೆ, ಸ್ವಾರ್ಥ ಹಾಗೂ
ನೋವಿನಿಂದ ತುಂಬಿ ತುಳುಕಾಡಿ ಚೀರಿಡುತ್ತಿತ್ತು :
"ನನಗೆ ಬೇಕಾದ್ದು ಅರ್ಧದಷ್ಟು ದೊರಕಲಿಲ್ಲ,
ನನ್ನ ಬಾಯಾರಿಕೆಯು ಅತೃಪ್ತಿ, ಕಹಿಯ ಬೇಗೆಯಾಗಿದೆ.
ಆದರೂ ಹೊಸ ವರ್ಷದ ಹೃದಯ ವೈಶಾಲ್ಯತೆಗೆ
ಬೆರಗಾಗಿ, ಕಳೆದ ಉಡುಗೊರೆಗಳು ಮರಳುತ್ತವೆ.
ನನ್ನೆಲ್ಲಾ ಸೋಲುಗಳಿಂದ ಪಾಠ ಕಲಿತ ಅದು
ನೈಜ ಪ್ರೀತಿಯ ಮಹತ್ವ ಅರಿಯುತ್ತದೆ.
ನಾನೋ ಎಚ್ಚರಗೇಡಿ; ಆದರೆ ಅವ ಸಂಯಮಿ,
ಪ್ರಶಾಂತ, ನಿರ್ಮಲ ಬದುಕಿನ ಪವಿತ್ರ ಪ್ರೇಮಿ
ನಾನೋ ಗುಲಾಮ, ಹೇಡಿ; ಆದರೆ ಅವ
ಸ್ವಾತಂತ್ರ್ಯದ ಹರಿಕಾರ,
ಆತನ ಶಾಂತಿ ಮಂತ್ರದ ಜಪದಿಂದ ನನ್ನ
ಹೋರಾಟದ ಕೊನೆ

ಇನ್ನೊಂದೇ ರಾತ್ರಿ ಬಾಕಿ, ಹಳತು ಹೊಸತಾಗಲಿಕ್ಕೆ!
ಮತ್ತೆಂದೂ ಇರುಳು ಈ ಬದಲಾವಣೆಗಳಿಗೆ ಸಾಕ್ಷಿಯಾಗದು
ಹಳೆಯ ವರ್ಷಕ್ಕೆ ಅದರದ್ದೇ ಒಂದಷ್ಟು ಕೆಲಸಗಳಿದ್ದವು
ಅದಕ್ಕೆ ಹೊಸ ವರ್ಷದ ಅಚ್ಚರಿಗಳನ್ನು ರೂಪಿಸಲಾಗಿಲ್ಲ
ರಾತ್ರಿ ಕಳೆದು ಹೊಸ ಹಗಲು ಬರುವುದಂತೂ ನಿಶ್ಚಿತ
ನೋವುಗಳಿಗೆ ಮುಲಾಮು ಹಚ್ವುತ್ತದೆ ರಾತ್ರಿಯ ನಿದ್ದೆ,
ಹೊಸ ವರ್ಷದ ಮುಂಜಾನೆಯಂತೆ, ಪ್ರತಿ ಬೆಳಿಗ್ಗೆಯೂ
ಬೆಳಕಿನ ಹಬ್ಬವಾಗುತ್ತದೆ.
ಪ್ರತಿ ಇರುಳು ನಮ್ಮೆಲ್ಲಾ ಒಪ್ಪುತಪ್ಪು, ಪ್ರಾರ್ಥನೆಗೆ
ಕಿವಿಗೊಟ್ಟರೆ; ಪ್ರತಿ ಬೆಳಿಗ್ಗೆಯೂ ಮೂಡುವ ಸೂರ್ಯನ
ಕಿರಣದಂತೆ, ನಮ್ಮೆಲ್ಲಾ ಸಂತೋಷದ ಶುರುವಾತು
ಇನ್ನೊಂದೇ ರಾತ್ರಿ ಹಳತು ಹೊಸತಾಗಲಿಕ್ಕೆ
ಮತ್ತೊಂದು ನಿದ್ದೆ ಇರುಳು ಬೆಳಗಾಗಲಿಕ್ಕೆ
ಪ್ರತಿ ಮುಂಜಾನೆಯೂ ಹೊಸ ವರ್ಷದ ಬೆಳಗಿನಂತೆ
ಹೊಸದಾಗಿಯೇ ಹುಟ್ಟುತ್ತದೆ
ಹೊಸತೆಲ್ಲವೂ ನಿತ್ಯ, ಹಳತೆಲ್ಲವೂ ಸತ್ಯವೆಂದು
ನಿರೂಪಿಸುತ್ತದೆ.

New Year’s Morning

Only a night from old to new!
Only a night, and so much wrought!
The Old Year’s heart all weary grew,
But said: “The New Year rest has brought.”
The Old Year’s hopes its heart laid down,
As in a grave; but trusting, said:
“The blossoms of the New Year’s crown
Bloom from the ashes of the dead.”
The Old Year’s heart was full of greed;
With selfishness it longed and ached,
And cried: “I have not half I need.
My thirst is bitter and unslaked.
But to the New Year’s generous hand
All gifts in plenty shall return;
True love it shall understand;
By all my failures it shall learn.
I have been reckless; it shall be
Quiet and calm and pure of life.
I was a slave; it shall go free,
And find sweet peace where I leave strife.”

Only a night from old to new!
Never a night such changes brought.
The Old Year had its work to do;
No New Year miracles are wrought.
Always a night from old to new!
Night and the healing balm of sleep!
Each morn is New Year’s morn come true,
Morn of a festival to keep.
All nights are sacred nights to make
Confession and resolve and prayer;
All days are sacred days to wake
New gladness in the sunny air.
Only a night from old to new;
Only a sleep from night to morn.
The new is but the old come true;
Each sunrise sees a new year born.

Helen Hunt Jackson

http://www.poemhunter.com/helen-hunt-jackson/

ನಾ ನಿನ್ನ ಪ್ರೀತಿಸಿದೆ

ನಾ ನಿನ್ನ ಪ್ರೀತಿಸಿದೆ

ನಾ ನಿನ್ನ ಪ್ರೀತಿಸಿದೆ. ಬಹುಶಃ ಪ್ರೀತಿಸುತ್ತಿರುವೆ ಈಗಲೂ
ಒಂದಷ್ಟು ದಿವಸಗಳು ಈ ಭಾವನೆ ಉಳಿಯಬಹುದು....
ಆದರೆ ನನ್ನ ಈ ಪ್ರೀತಿ ನಿನ್ನನೆಂದಿಗೂ ಬಾಧಿಸದಿರಲಿ
ನಿನಗೆ ನೋವನ್ನುಂಟು ಮಾಡುವ ಆಶಯವಿಲ್ಲ ನನಗೆ,
ನಾ ನಿನ್ನ ಪ್ರೀತಿಸಿರುವೆ; ನಾನನುಭವಿಸಿದ ಹತಾಷೆ,
ಅಸೂಯೆ, ಸಂಕೋಚ ಎಲ್ಲವೂ ವ್ಯರ್ಥವಾದರೂ
ಆರ್ದತೆಯಿಂದ, ದೃಢತೆಯಿಂದ ಪ್ರೀತಿಸಿದ್ದಂತೂ ಸತ್ಯ
ಆ ದೇವರು ನಿನಗೆ ಮತ್ತದೇ ಪ್ರೀತಿ ಸಿಗುವಂತೆ ವರ
ಕರುಣಿಸಲಿ

I loved you

I loved you, and I probably still do,
And for a while the feeling may remain...
But let my love no longer trouble you,
I do not wish to cause you any pain.
I loved you; and the hopelessness I knew,
The jealousy, the shyness - though in vain -
Made up a love so tender and so true
As may God grant you to be loved again.

Alexander Sergeyevich Pushkin

http://www.poemhunter.com/alexander-sergeyevich-pushkin/