Tuesday, May 13, 2014

‘ಉಳಿದವರು ಕಂಡಂತೆ’

  1. ನಾವೊಂದಿಷ್ಟು ಗೆಳತಿಯರು ಫೇಸ್ ಬುಕ್ ನ ಗುಂಪಿನಲ್ಲಿ ಒಂದೆರಡು ಬಾರಿ ಖೋಖೋ ಕಥೆಗಳು ಎಂಬ ಆಟವನ್ನು ಆಡಿದ್ದೇವೆ. ಮೊದಲ ಕಥೆಯ ಥೀಮ್ ‘ಫಾಂಟಸಿ’ ಯಾಗಿದ್ದು, ಆಕೆ ಸುಮಾರು ಒಂದು ಪ್ಯಾರವುಳ್ಳ ಕಥೆಯನ್ನು ಆರಂಭಿಸಿದ್ದರು. ಒಬ್ಬರು ಮತ್ತೊಬ್ಬರಿಗೆ ‘ಖೋ!’ ಕೊಡುವುದು, ಮೊದಲಿನವರು ಹೇಳಿದ ಕಥೆಯ ವಿರುದ್ಧವೇ ಮತ್ತೊಬ್ಬರು ಕಥೆಯನ್ನು ತಿರುಗಿಸಿಬಿಡಬಹುದು, ಆದರೆ ಪಾತ್ರಗಳನ್ನು ಬದಲಿಸುವಂತಿಲ್ಲ. ಕಥೆಯ ಓಘವನ್ನು ತಪ್ಪಿಸುವಂತಿಲ್ಲ. ಹೀಗೆ.... ಉಳಿದವರೆಲ್ಲರೂ ತಮ್ಮದೇ ಕಲ್ಪನೆಯಲ್ಲಿ ಒಂದೊಂದು ಪ್ಯಾರವನ್ನು ಜೋಡಿಸುತ್ತಾ, ಅದೊಂದು ಅದ್ಭುತ ಮಕ್ಕಳ ಫಾಂಟಸಿ ಕಥೆಯಾಗಿ ಮೂಡಿ ಬಂದಿತ್ತು.
  2. ‘ಉಳಿದವರು ಕಂಡಂತೆ’ ಕೂಡ ಇದೇ ರೀತಿಯಾದ ಖೋಖೋ ಕಥೆ. ಮೊದಲಿಗೆ ಶುರುವಾಗುವ ಮುಂಬೈಯಿಂದ ವಾಪಾಸಾಗಿರುವ ಪಾತ್ರ. ಆತನಿಗೆ ಮಂಗಳೂರಿನಲ್ಲಿಯೇ ವಾಸವಾಗಿರುವ ತನ್ನಮ್ಮನನ್ನು ದುಬೈಗೆ ಕರೆದುಕೊಂಡು ಹೋಗಬೇಕೆನ್ನುವ ಬಯಕೆ, ಜೊತೆಗೆ ಮುಂಬೈನ ಭೂಗತ ಪಾತಕಿಗಳಿಂದ ತಪ್ಪಿಸಿಕೊಳ್ಳುವ ಆಸೆ, ಇಲ್ಲಿ ಒಂದಷ್ಟು ಸ್ಲೋ ಮೋಷನ್ ಶಾಟ್ಸ್ ಗಳು ಬೇಜಾರಾದರೂ ಕೂಡ, ಇನ್ನೇನೋ ಇರಬಹುದು ಎನ್ನುವ ಕಾತರತೆ, ಈ ಬೇಸರವನ್ನು ಮರೆಮಾಚುತ್ತವೆ. ಈ ಪಾತ್ರ ತನ್ನ ಮುಂದಿನ ಪಾತ್ರಕ್ಕೆ ಖೋ! ಕೊಡುತ್ತದೆ, ಜೊತೆಗೊಂದು ಲಿಂಕ್ ಕೂಡ ನೀಡುತ್ತದೆ. ಆ ಕೊಂಡಿಯನ್ನು ಹಿಡಿದು ಮತ್ತೊಂದು ಪಾತ್ರ ತನ್ನ ಕಥೆ ಶುರು ಮಾಡಿಕೊಳ್ಳುತ್ತದೆ. ಹೀಗೆ ಕೊನೆಯ ಪಾತ್ರದ ತನಕವೂ ಅವರ ಸ್ವಗತವನ್ನು ಕಥೆಗಾರ್ತಿ / ವರದಿಗಾರ್ತಿಯೊಬ್ಬಳು ಹಲವು ಭಾಗಗಳ ಮೂಲಕ ಬರೆಯುತ್ತಾ ಹೋಗುತ್ತಾಳೆ. ಅವನ್ನು ಒಂದರ ಜೊತೆಗೆ ಮತ್ತೊಂದನ್ನು ಜೋಡಿಸುತ್ತಾ ಹೋಗುತ್ತಾಳೆ. ಕೊನೆಯವರೆವಿಗೂ ನಿಮಗೇನನ್ನು ಹೇಳುತ್ತಿದ್ದಾರೆ ಎಂಬುದು ಅರ್ಥವಾಗುವುದಿಲ್ಲ. ಆದರೆ ಪಾತ್ರಗಳು ನಮ್ಮನ್ನು ಹಿಡಿದಿಡುತ್ತವೆ. ಕಥೆಯನ್ನು ಲಿಂಕ್ ಮಾಡುತ್ತಾ ಹೋಗುತ್ತವೆ.

  3. ಮೂರು ಕೊಲೆಗಳಾಗಿವೆ, ಆದರೆ ಯಾರಿಗೂ ಕೂಡ ಇದರ ಹಿಂದಿನ ಉದ್ದೇಶವೇನು? ಎಂಬುದೇ ತಿಳಿಯುವುದಿಲ್ಲ. ಈ ಗೊಂದಲವನ್ನು ಹಲವು ಬಾರಿ ‘ರಿಚ್ಚಿ’ ಪಾತ್ರದ ಬಾಯಲ್ಲಿ ಹೇಳಿಸುತ್ತಾರೆ ಕೂಡ! ಕೊಲೆಗಳಾಗಿವೆ ಎಂಬುದಷ್ಟೇ ಸತ್ಯ, ಉದ್ದೇಶ ಮುಖ್ಯವಲ್ಲ, ಒಬ್ಬೊಬ್ಬರಿಗೆ ಒಂದೊಂದು ಉದ್ದೇಶವಿರುತ್ತದೆ. ಅದು ಸತ್ಯವಿರಬೇಕಂತಿಲ್ಲ ಎಂಬುದಷ್ಟೇ ಸತ್ಯ ಮತ್ತು ಚಿತ್ರದ ಉದ್ದೇಶ! ಹಾಗೂ ಈ ಉದ್ದೇಶವು ‘ಉಳಿದವರು ಕಂಡಂತೆ’ ಆಗಿರುತ್ತದೆಯೇ ಹೊರತು, ಪಾತ್ರಧಾರಿಗಳದ್ದಾಗಿರುವುದಿಲ್ಲ ಎಂಬುದನ್ನು ಅತ್ಯಂತ ಚಂದವಾಗಿ, ಯಾವುದೇ ಡೈಲಾಗ್ ಗಳ ಅಬ್ಬರವಿಲ್ಲದೆಯೇ ನಿರೂಪಿಸಿದ್ದಾರೆ ನಿರ್ದೇಶಕ ‘ರಕ್ಷಿತ್ ಶೆಟ್ಟಿ’.

  4. ಅದ್ಭುತವಾದ ತಂತ್ರಗಾರಿಕೆ, ಪಾತ್ರಗಳ ರಚನೆ, ಪಾತ್ರಧಾರಿಗಳ ನಟನೆ, ಚಂದದ ಸಂಗೀತ ಮತ್ತು ಹಾಡುಗಳು, ದಕ್ಷಿಣ ಕನ್ನಡದ ಸೊಗಡನ್ನು ಇಂಚಿಂಚು ಬಿಡದಂತೆ ತೋರಿಸಿರುವ ಛಾಯಾಗ್ರಾಹಣ, ಅಲ್ಲಲ್ಲಿ ‘ಸ್ಲೋ ಮೋಷನ್’ ದೃಶ್ಯಗಳ ಹಾವಳಿಯಿದ್ದರೂ, ಒಂದೆರಡು ಕಡೆ ಹೇಳಿದ್ದನ್ನೇ ಹೇಳಿಸಿರುವುದರ ಔಚಿತ್ಯವೇನು? ಎನ್ನಿಸಿದರೂ ಕೂಡ ಅವೆಲ್ಲಾ ಮರೆತುಹೋಗಿಬಿಡುತ್ತವೆ. ಕೊನೆಗೆ ನಿರ್ದೇಶನವೊಂದೇ ಮನಸ್ಸಿನಾಳಕ್ಕಿಳಿದುಬಿಡುತ್ತದೆ. ದಕ್ಷಿಣ ಕನ್ನಡದ ಬಗ್ಗೆ ಸ್ವಲ್ಪವಾದರೂ ತಿಳಿದಿರುವವರಿಗಂತೂ, ಒಮ್ಮೆ ಮಂಗಳೂರಿಗೆ ಹೋಗಿ ಬಂದಂಥ ಭಾವ ಹುಟ್ಟಿಸಿಬಿಡುತ್ತದೆ.

  5. ಕನ್ನಡ ಚಿತ್ರಗಳಲ್ಲಿ ಡೈಲಾಗ್ ಗಳ ಅಬ್ಬರ ಹೆಚ್ಚು, ಏಕೆ ಬೇಕು? ದೃಶ್ಯಗಳಲ್ಲಿ ಕಥೆಯನ್ನು ಹೇಳಲು ಸಾಧ್ಯವಿಲ್ಲವೇ? ಎಂಬ ನನ್ನ ಯಾವತ್ತಿನ ಆಕ್ಷೇಪಣೆಗೆ ಉತ್ತರವಾಗಿ ‘ಉಳಿದವರು ಕಂಡಂತೆ’ ಬಂದಿದೆ. ಇಡೀ ಚಿತ್ರದಲ್ಲಿ ಸಣ್ಣ, ಸಣ್ಣ ದೃಶ್ಯಗಳು ಹೇಗೆ ದಕ್ಷಿಣ ಕನ್ನಡದ ಕಥೆಯನ್ನು ಹೇಳುತ್ತದೆ? ಎಂಬುದನ್ನು ಸಣ್ಣ ಉದಾಹರಣೆಯ ಮೂಲಕ ಹೇಳಿಬಿಡುತ್ತೇನೆ. ಮಂಗಳೂರಿನಲ್ಲಿ ಮೀನು ಮಾರುವ ಹೆಂಗಸರು ಅತ್ಯಂತ ಚಂದವಾಗಿರುತ್ತಾರೆ. ಎಲ್ಲರೂ ಒಂದೇ ಕಡೆ ವ್ಯಾಪಾರ ಮಾಡುವವರಾದ್ದರಿಂದ ಸ್ಪರ್ಧೆ ಹೆಚ್ಚು. ಅದಕ್ಕಾಗಿ ತಮ್ಮ ಮಾಲುಗಳನ್ನು ಮಾರಲು ಏನೇನೋ ಕಸರತ್ತು ಮಾಡುತ್ತಾರೆ. ಗಿರಾಕಿಗಳು ವ್ಯಾಪಾರದ ನೆಪದಿಂದ ಒಂದಿಷ್ಟು ತಮ್ಮ ಮೈ, ಕೈ ಸವರಿದರೂ ‘ಏನೂ ಆಗಿಲ್ಲವೆಂಬಂತೆ’ ಸುಮ್ಮನಾಗಿಬಿಡುತ್ತಾರೆ ಈ ಮೀನುಗಾರ್ತಿಯರು. ನಾನಿಷ್ಟು ದೊಡ್ಡದಾಗಿ ಬರೆದದ್ದನ್ನು, ಒಂದು ಸಣ್ಣ ಹಾಡಿನ ದೃಶ್ಯದಲ್ಲಿ ತೋರಿಸಿಬಿಡುತ್ತಾರೆ ನಿರ್ದೇಶಕ! ಈ ತರಹದ ಅನೇಕ ದೃಶ್ಯಗಳು ಅಲ್ಲಿ ಚಂದವಾಗಿ ಬಂದಿವೆ. ನೋಡುವ ತಾಳ್ಮೆ ಬೇಕಷ್ಟೇ!

  6. ಹಿಂದೆ ‘ಸಿಂಪಲ್ಲಾಗೊಂದು’ ಚಿತ್ರ ನೋಡಿ, ಅದರಲ್ಲಿದ್ದ ಡೈಲಾಗ್ ಗಳ ಸುರಿಮಳೆಗೆ ನಾನು ಇನ್ನಿಲ್ಲದಂತೆ ಆ ಚಿತ್ರದ ನಿರ್ದೇಶಕ ‘ಸುನಿ’ ಹಾಗೂ ನಟಿಸಿದ ‘ರಕ್ಷಿತ್’ ಗೆ ಅಕ್ಷರಶಃ ಬೈದಿದ್ದೆ. ಯೋಗರಾಜ್ ಭಟ್ಟರನ್ನು ಯಥಾವತ್ತಾಗಿ ನಕಲಿಸಿದ್ದಾರೆ ಎಂದೇ ಹೇಳಿಬಿಟ್ಟಿದ್ದೆ. ಆದರೆ ‘ಉಳಿದವರು ಕಂಡಂತೆ’ ನೋಡಿದ ಮೇಲೆ, ಇಂತಹ ಚಿತ್ರವನ್ನು ನಿರ್ಮಾಣ ಮಾಡಲು ಒಪ್ಪಿಕೊಂಡ ‘ಸುನಿ’ ಹಾಗೂ ನಟಿಸಿ, ನಿರ್ದೇಶಿಸಿದ ‘ರಕ್ಷಿತ್’ ಗೆ ನನ್ನ ಕಡೆಯಿಂದ ‘ಹ್ಯಾಟ್ಸ್ ಆಫ್’. ಕನ್ನಡ ಚಿತ್ರರಂಗದಲ್ಲಿ ದುನಿಯಾ ‘ಸೂರಿ’ ಹಾಗೂ ಯೋಗರಾಜ್ ಭಟ್ಟರಿಗೆ ಯಾರಾದರೂ ಸಡ್ಡು ಹೊಡೆಯುತ್ತಾರೆಂದರೇ ಅದು ನಿಜವಾಗಿಯೂ ನಿರ್ದೇಶಕ ‘ರಕ್ಷಿತ್’ ನಿಂದಲೇ ಸಾಧ್ಯ!

  7. ಒಂದೆಡೆ ಕನ್ನಡದಲ್ಲಿ ಒಳ್ಳೆಯ ಚಿತ್ರಗಳೇ ಇಲ್ಲವೆಂದು ಬೊಬ್ಬೆ ಹೊಡೆಯುತ್ತೇವೆ. ಅದದೇ ಮಚ್ಚು, ಲಾಂಗು, ರೌಡಿಸಂ, ಐಟಮ್ ನೃತ್ಯಗಳು, ನಾಯಕ ಪ್ರಧಾನ ಚಿತ್ರಗಳೆಂದು ಮೂಗು ಮುರಿಯುತ್ತೇವೆ. ಅದ್ಯಾವುದೋ ಬಾಲಿವುಡ್ ನ ಚಿತ್ರಗಳು, ತಮಿಳು, ತೆಲುಗುನಲ್ಲಿ ಯಶಸ್ವಿಯಾದದ್ದನ್ನು ತಂದು, ಇಲ್ಲಿ ರಿಮೇಕ್ ಮಾಡಿ ಕೊಟ್ಟರೆ, ಸ್ವಂತಿಕೆ ಇಲ್ಲ, ಕನ್ನಡದ ಸೊಗಡಿಲ್ಲ ಎಂದು ಹೀಗಳೆಯುತ್ತೇವೆ. ಕೊನೆಗೊಮ್ಮೆ, ನಮ್ಮ ಯುವ ನಿರ್ದೇಶಕರು, ನಿರ್ಮಾಪಕರು ಧೈರ್ಯ ಮಾಡಿ, ‘ನಮ್ಮಲ್ಲೂ ಪ್ರತಿಭೆ ಇದೆ, ತೆಗೆದುಕೊಳ್ಳಿ, ಈಗ ಮಾತಾಡಿ’ ಎಂದೊಡನೆ, ಚಿತ್ರ ಅರ್ಥವಾಗುತ್ತಿಲ್ಲ, ಕ್ಲೈಮಾಕ್ಸ್ ಹೀಗಿರಬೇಕಿತ್ತು, ಹಾಲಿವುಡ್, ಬಾಲಿವುಡ್ ಚಿತ್ರಗಳ ಪ್ರೇರಣೆಯಂತಿದೆ ಎಂದು ಹೇಳಿ ಉತ್ಸಾಹ ಭಂಗ ಮಾಡುತ್ತೇವೆ.

  8. ‘ಉಳಿದವರು ಕಂಡಂತೆ’ ಚಿತ್ರದ ಬಗೆಗಿನ ಒಂದಷ್ಟು ಪತ್ರಿಕಾ ವಿಮರ್ಶಕರು ಬರೆದ ವಿಮರ್ಶೆಗಳನ್ನು ಓದಿದ್ದೆ. ನಾನೇ ನೋಡಿ, ನಂತರ ನಿಶ್ಚಿತ ಅಭಿಪ್ರಾಯಕ್ಕೆ ಬರುವುದೊಳ್ಳೆಯದು ಎಂದೇ ನಿರ್ಧರಿಸಿದ್ದೆ. ಆದರೆ ಚಿತ್ರ ನೋಡಿ ಬಂದ ಮೇಲೆ ಅನಿಸುತ್ತಿದೆ. ಇಂತಹ ಚಿತ್ರ ಅರ್ಥವಾಗುವುದಿಲ್ಲ ಎಂದು ಹೇಳಿದ ವಿಮರ್ಶಕರ ವಿಮರ್ಶೆಗಳನ್ನೇ ಇನ್ನು ಮುಂದೆ ಓದದಿರುವುದು ಒಳ್ಳೆಯದು. ಕನ್ನಡ ಪ್ರೇಕ್ಷಕರನ್ನು ಬೆಳೆಸಬೇಕು, ಕನ್ನಡ ಪ್ರೇಕ್ಷಕರಿಗೆ ಇಂತಹ ಚಿತ್ರಗಳು ಅರ್ಥವಾಗುವುದಿಲ್ಲ ಎನ್ನುವುದು, ನಮಗೆಲ್ಲಾ ಅವಮಾನ ಮಾಡಿದಂತಲ್ಲವೇ? ಅಂತಹ ಕಾಂಪ್ಲೆಕ್ಸ್ ಚಿತ್ರವೇನಲ್ಲ ‘ಉಳಿದವರು ಕಂಡಂತೆ’
     

ಫೇಸ್ ಬುಕ್ ಸ್ಟೇಟಸ್ ಗಳೂ!

ಕೆಲವು ತಿಂಗಳುಗಳ ಹಿಂದೆ ಕಾವ್ಯಕಮ್ಮಟವೆಂದರೆ ಹೇಗಿರಬಹುದು? ಎನ್ನುವ ಕುತೂಹಲ ತಣಿಸಿಕೊಳ್ಳಲು ಹೋಗಿದ್ದೆ. ಅಲ್ಲಿ ನನಗಾದ ಒಂದಿಷ್ಟು ಅನುಭವಗಳನ್ನು, ಹೀಗೆಯೇ ಫೇಸ್ ಬುಕ್ಕಿನಲ್ಲಿ ಹಾಕಿಕೊಂಡಿದ್ದೆ. ಈ ಫೇಸ್ ಬುಕ್ಕಿನಲ್ಲಿ ಒಂದಷ್ಟು ದಿವಸಗಳಾದ ಮೇಲೆ, ನಮ್ಮೆಲ್ಲಾ ಸ್ಟೇಟಸ್ ಗಳು ತಳ ಕಾಣುವುದರಿಂದ, ಜೊತೆಗೆ ನಾನೆಲ್ಲೂ ಇದನ್ನು ಬರೆದಿಟ್ಟುಕೊಳ್ಳದ್ದರಿಂದ, ನನ್ನ ದೃಷ್ಟಿಯಲ್ಲಿ ನನಗಿವು ಮುಖ್ಯ ಅನ್ನಿಸಿದ್ದರಿಂದ, ಬ್ಲಾಗ್ ಗೆ ಎಲ್ಲವನ್ನೂ ಕಾಪಿ ಮಾಡಿಟ್ಟಿದ್ದೇನೆ.  ಓದಿ ನೋಡಿ! :-)

ಹೀಗೊಂದು ಘೋಷಣೆ!

ನಾನು ಕಾವ್ಯಕಮ್ಮಟದ ಬಗ್ಗೆ ಬರೆದಿರುವುದೆಲ್ಲಾ ನಾ ಕಂಡುಕೊಂಡ ಸತ್ಯ, ಕಾವ್ಯಕಮ್ಮಟದಲ್ಲಿ ಹೇಳಿಕೊಟ್ಟಿರುವುದಲ್ಲಾ ! ಕಾವ್ಯಕಮ್ಮಟಕ್ಕೂ ನನ್ನ ಹೇಳಿಕೆಗಳಿಗೂ ಸಂಬಂಧವಿಲ್ಲ!

೧.  ಗುಂಪುಗಾರಿಕೆ ರಾಜಕಾರಣಿಗಳ ಸ್ವತ್ತು ಎಂದುಕೊಂಡಿದ್ದೆ. ಉಹೂ! ಇದಕ್ಕೆ ಯಾವ ರಂಗದವರು ಹೊರತಲ್ಲ ಸಾಹಿತಿಗಳು / ಹಿರಿತೆರೆ / ಕಿರುತೆರೆ etc., et..... ಅದರಲ್ಲೂ ನಮ್ಮ ಸಾಹಿತಿಗಳೇ (ಸ್ವಘೋಷಿತರು) ರಾಜಕೀಯ ಮಾಡುವುದನ್ನು ನೋಡಿದಾಗ ಅನಿಸಿದ್ದು - ಈಗಿರುವುದು ಎರಡೇ ಜಾತಿಗಳು - ಶ್ರೀಮಂತ, ಬಡವ. ಇದನ್ನರಿತು, ನಮ್ಮ ಹಿರಿ, ಕಿರಿ, ಮರಿ ಸಾಹಿತಿಗಳೆಲ್ಲರೂ ಇನ್ಯಾವುದೇ ಬ್ರಾಹ್ಮಣ, ದಲಿತ, ಬಂಡಾಯ, ಕ್ರಾಂತಿ ಕಡೆಗೆ ಗಮನ ಹರಿಸದೆ, ತಮ್ಮ ಪಾಡಿಗೇ ತಮ್ಮ ಓದು, ಬರಹಗಳಲ್ಲಿ ತೊಡಗಿಸಿಕೊಳ್ಳುವುದು! ರಾಜಕೀಯವನ್ನು ರಾಜಕಾರಣಿಗಳಿಗೆ ಬಿಟ್ಟು ಕೊಡುವುದು! :-)

೨.  ನಮ್ಮ ‘ಲೇಡಿ’ ಸಾಹಿತಿಗಳು ತಮ್ಮ ಸೆಕ್ಶುಯಾಲಿಟಿ ಪ್ರದರ್ಶನ ಮಾಡದೇ ಇಂಟೆಲೆಕ್ಚುಯಾಲಿಟಿಯನ್ನು ತೋರಿಸುವುದು!

೩.  ಹೇಗೆ ನಮ್ಮ ಕಿರಿ, ಮರಿ ಸಾಹಿತಿಗಳು ಹಿಂದಿನ ಪಂಪ, ರನ್ನ, ಕುವೆಂಪು ಇವರನ್ನೆಲ್ಲಾ ಓದಬೇಕಿದೆಯೋ, ಅಷ್ಟೇ ಅವಶ್ಯಕತೆ ನಮ್ಮ ಹಿರಿ ಸಾಹಿತಿಗಳು ಆನ್ಲೈನ್ ಮೀಡಿಯಾಗಳ ಬಗ್ಗೆ ಅಪ್ಡೇಟ್ ಆಗಬೇಕಿರುವುದು!

೪. ಅರ್ಥವಾದದ್ದು! - ಪರಂಪರೆ ಮತ್ತು ಪ್ರತಿಭೆ ಇದ್ದರೆ ಮಾತ್ರ ಕಾವ್ಯಸೃಷ್ಟಿ ಸಾಧ್ಯ.

೫. ಕೇಳಿದ್ದು! - Interpretations are extravagant! :)

೬. ಮನ ಚಿಂತೆಗೀಡಾದದ್ದು! - ಸ್ತ್ರೀವಾದವೆಂದರೆ?.........
     ಸ್ತ್ರೀವಾದವೆಂದರೆ ಗಂಡಿಗೆ ಸಮನಾಗಿ ಕಾಮಿಸುವುದಲ್ಲ!
     ಹೆಣ್ತನವನ್ನು ಗೌರವಿಸುತ್ತಾ ಬದುಕುವುದು!

೭. ಬಹಳ ಬೇಸರವಾಗಿದ್ದು - ಇವತ್ತಿಗೂ ಕೆಲ ಬುದ್ಧಿಜೀವಿಗಳು ಹೆಂಗಸರನ್ನು ಕಮಾಡಿಟಿಯಾಗಿಯೇ ನೋಡುವುದು! ಕೆಲ ಹೆಂಗಸರು ತಾವು ಬುದ್ಧಿಜೀವಿಗಳಾಗಬೇಕೆಂದು, ತಮ್ಮ ಹೆಣ್ತನವನ್ನು ಬಳಸುವುದು. ಇದಕ್ಕೆ ದೊಡ್ಡವರು, ಚಿಕ್ಕವರು ಎಂಬ ವಯಸ್ಸಿನ ಬೇಧಭಾವವಿಲ್ಲ.

೮. ಬುದ್ಧ ಪ್ರೇಮಿ ಬೇಸ್ತು ಬಿದ್ದ ಪ್ರಸಂಗ! - ನನ್ನ ಪ್ರಶ್ನೆಗಳಿಗೆ ವೈಯಕ್ತಿಕವಾಗಿ ಉತ್ತರಿಸಲು, ತೋಳೇರಿಸಿದ ‘ಬುದ್ಧ ಪ್ರೇಮಿ’, ನಾನ್ಯಾರೆಂದು ತಿಳಿಯದೇ ಪೆಚ್ಚಾದದ್ದು! ಅಬ್ಬರಿಸಿ ಬೊಬ್ಬಿರಿದರಿಲ್ಲಾರಿಗೂ ಭಯವಿಲ್ಲ!

೯. ಪಸರಿಸಿದ ಹೊಸ ಘಮಲು! - ಅಮ್ಮನಾದ ಫೇಸ್ ಬುಕ್, ಭಕ್ತಿ ಪರಾಕಾಷ್ಠೆಯಿಂದ ಕಾಮದ ಉತ್ತುಂಗಕ್ಕೇರಿದ ‘ಅಕ್ಕ’!

೧೦. ಕಿರಿಕಿರಿಯಾದದ್ದು! - ಬಿಂಬ ಪ್ರತಿಬಿಂಬ! ಪದಗಳು ಅರ್ಥವಾಗದಿದ್ದದ್ದು!

೧೧. ತಲೆ ಕೆಡಿಸಿದ್ದು! - ವಿಷಯಕ್ಕಿಂತ ಯಾರು, ಯಾವ ಪೊಸಿಷನಲ್ಲಿದ್ದು ಮಾತಾಡ್ತಿದ್ದಾರೆ ಅನ್ನೋದು ಅತಿ ಮುಖ್ಯವಾಗುತ್ತದೆ! ಎಂಬುವುದು

೧೨. ಮರೆತು ಹೋದದ್ದು! - ಒಡೆದು ಕಟ್ಟುವ ಪ್ರಾಸೆಸ್ ನಲ್ಲಿ, ಎಲ್ಲರೂ ಇನ್ನೂ ಒಡೆಯುತ್ತಲೇ ಇರುವುದು ಮತ್ತು ಕಟ್ಟುವ ಉತ್ಸಾಹ ಯಾರಿಗೂ ಇಲ್ಲದಿರುವುದು!

೧೩.  Last but not the least ಕಾವ್ಯಕಮ್ಮಟದಲ್ಲಿ ಜ್ಞಾನೋದಯವಾದದ್ದು / ಗೊಂದಲಗೊಂಡದ್ದು! -
ಓದಿಕೊಂಡವರೆಲ್ಲಾ ಜ್ಞಾನಿಗಳಲ್ಲ!
ಬರೆದವರೆಲ್ಲಾ ಅರಿತವರಲ್ಲಾ!
ಓದುವುದು ಮುಖ್ಯ, ಬರೆಯಲು!
ಬರೆಯುವುದು ಮುಖ್ಯ, ಬರೆಯಲು!

೧೪. ಮೈಕ್ ತುಂಬಾ ಮಾತಾಡುತ್ತೆ, ಮನುಷ್ಯರಿಗಿಂತ.

೧೫.  ತೂಕಬದ್ಧ ಮಾತುಗಳಿಗೆ ಪರಂಪರೆ ಬೇಕು. ಅವನ್ನು ಸುಂದರವಾಗಿ ಹೆಣೆಯಲು ಪ್ರತಿಭೆ ಬೇಕು!

ಉಸ್ಸಪ್ಪಾ! ಮುಗೀತು!

ಸೂರ್ಯೋದಯಕ್ಕೆ ಕಾಯುತ್ತಿರುವಾಗ, ಕಮ್ಮಟದಲ್ಲಿ ಹಿಂದಿನ ದಿವಸ ನಡೆದ ಘಟನೆಗಳನ್ನು ಮೆಲಕು ಹಾಕುತ್ತಾ, ಆಕಾಶದೆಡೆ ನೋಡುತ್ತಾ ಕುಳಿತಾಗ ಹೊಳೆದಿದ್ದು! -

ಹುಟ್ಟಬೇಕಿದೆ ನಮ್ಮಲ್ಲೊಬ್ಬ ಕುವೆಂಪು, ಬೇಂದ್ರೆ, ಅಡಿಗ!

ಹುಟ್ಟಬೇಕಿದೆ ನಮ್ಮಲೊಬ್ಬ ಕುವೆಂಪು, ಬೇಂದ್ರೆ, ಅಡಿಗ!

ನವಿಲುಕಲ್ಲಿನಲ್ಲಿ ನೆಟ್ಟದ್ದು ಶೂನ್ಯ ನೋಟ,
ನಭೋಮಂಡಲದಲ್ಲಿ ತಾರೆಗಳ ಕೂಟ
ಮನದಲ್ಲಿ ಆಲೋಚನೆಗಳ ಮೆರವಣಿಗೆ,
ಪಲ್ಲಕ್ಕಿ ಹೊತ್ತದ್ದು ಜಾತೀಯ, ಜಾಗತಿಕ ಸಮಸ್ಯೆ
ಮರೆತಿದ್ದಾನೆ, ಮನುಷ್ಯ ಜಾತಿ ತಾನೊಂದೇ ವಲಂ,
ಆಗಿರುವನು ಶೂದ್ರ ತಪಸ್ವಿ ಮೌನ,
ಗಾಳಿಯ ಮಾತುಗಳದ್ದೇ ಅಬ್ಬರ

ಬುದ್ಧ, ಬಸವಣ್ಣ, ಗಾಂಧಿ ಅಮರರಾದರು,
ಕಡಲಿನಲೆಯ ಮೊರೆತದಲಿ
ಕ್ಷೀಣವಾದದ್ದು ವಿಶ್ವಮಾನವ ತತ್ವಗಳು,
ಬೇಕೇ ಪಂಪ, ರನ್ನ, ಕುವೆಂಪು?
ಅಹುದಹುದು! ಎಂದೆಯಾ?
ಪಕ್ಕದಲ್ಲಿಯೇ ಅಪ್ಪ ಹಾಕಿದ ಆಲದಮರ!
ದೂರದಲ್ಲೆಲ್ಲೋ ಹಕ್ಕಿಗಳ ಇಂಚರ!

ಅಗೋ ನೋಡಲ್ಲಿ ‘ಉದಯ ರವಿ’
ಮರೆಯಾಗಿರುವ ‘ಪೂರ್ಣಚಂದ್ರ’
ಮನದಲ್ಲಿ ಹೆಪ್ಪುಗಟ್ಟಿರುವ ಹಿಮಾಲಯ
ಕೆಂಪಾದ, ಮಸುಕು ಮಲೆನಾಡು
ಒಡೆದು ಕಟ್ಟಲು ಇದು ಮನೆಯಲ್ಲ
ಸ್ವಾತಿ ಮುತ್ತಾಗಲು ತಾಳ್ಮೆ ಬೇಕು
ಕಲಿಸುವ, ಕಲಿಯುವ ಸಹನೆ ಇಬ್ಬರಿಗೂ ಬೇಕು

ಹುಟ್ಟಬೇಕಿದೆ ನಮ್ಮಲ್ಲೊಬ್ಬ ಕುವೆಂಪು, ಬೇಂದ್ರೆ, ಅಡಿಗ :-)

(ರಾಜಕಾರಣ ಮಾಡುತ್ತಿರುವ ಸಾಹಿತಿಗಳನ್ನು ನೋಡಿದಾಗ ಅನ್ನಿಸಿದ್ದು - ಇವರೆಲ್ಲಾ ರಾಜಕೀಯಕ್ಕೆ ಇಳಿದಿದ್ದರೆ ಈಗಿರುವ ಎಲ್ಲಾ ರಾಜಕಾರಣಿಗಳನ್ನೂ ಬೀಸಿ ಒಗೆಯಬಹುದು. ಅಷ್ಟರ ಮಟ್ಟಿಗೆ ರಾಜಕಾರಣ ಇವರಿಗೆ ಒಲಿದಿದೆ)