Wednesday, August 6, 2014

ಹೀಗೊಂದು Disclaimer!

ಹೀಗೊಂದು Disclaimer

ಒಂದಷ್ಟು ತಿಂಗಳುಗಳ ಹಿಂದೆ ಯಾವುದೋ ತರಬೇತಿ ಕಾರ್ಯಕ್ರಮಕ್ಕೆ ಹೋಗಿ ಬಂದಾಗ, ಮುಖತಃ ಪರಿಚಯವಾದ ಒಂದಷ್ಟು ವ್ಯಕ್ತಿಗಳು, ಅವರವರೇ ಪುಸ್ತಕ ರಿಲೀಸ್ ಮಾಡುವುದರಿಂದ ಹಿಡಿದು ದೂರದರ್ಶನ ಅಥವಾ ಇನ್ನಿತರ ಖಾಸಗಿ ಚಾನೆಲ್ ಗಳಲ್ಲಿ ಕಾರ್ಯಕ್ರಮ ನೀಡುತ್ತಿದ್ದದ್ದು, ಒಬ್ಬರನ್ನೊಬ್ಬರು ‘ಪ್ರೊಮೋಟ್’ ಮಾಡಿಕೊಳ್ಳುತ್ತಿದ್ದರಿಂದ ಬೇಸತ್ತು, ಯಾರನ್ನೂ ಟ್ಯಾಗ್ ಮಾಡದೇ ಸ್ಟೇಟಸ್ ಒಂದನ್ನು ಹಾಕಿಕೊಂಡಿದ್ದೆ.  ನನ್ನ ಆ ಸ್ಟೇಟಸ್ ನಿಂದ ನೊಂದ ಅವರೆಲ್ಲರೂ ತಮ್ಮ, ತಮ್ಮ ವಾಲ್ ಗಳಲ್ಲಿ ಅನಾವಶ್ಯಕ ನನ್ನನ್ನು ‘ಟ್ಯಾಗ್’ ಮಾಡಿ, ಬೈದುಕೊಂಡಿದ್ದರು. ಮಾಧ್ಯಮಗಳು ಮತ್ತು ಫೇಸ್ ಬುಕ್ಕಿನಲ್ಲಿ ಈಗಾಗಲೇ ಚಿರಪರಿಚಿತರಾಗಿದ್ದುದರಿಂದ, ಅವರ ಒಂದಷ್ಟು ಬೆಂಬಲಿಗರು (ಈ ಲಿಸ್ಟಿನಲ್ಲಿ ಖ್ಯಾತ ಲೇಖಕ, ಲೇಖಕಿಯರ ಜೊತೆಗೆ ನನ್ನಂಥ ಒಂದಷ್ಟು ಅನಾಮಧೇಯರು ಇದ್ದರು)  ಬಾಯಿಗೆ ಬಂದದ್ದು ಮಾತನಾಡಿದಾಗಲೇ, ‘ಓಹೋ! ನಾನೊಂದು ದೊಡ್ಡ ಹುತ್ತಕ್ಕೆ ಕೈ ಹಾಕಿದ್ದೇನೆ!’ ಎಂಬುದು ತಿಳಿದದ್ದು!

ಆದರೆ ನನ್ನಲ್ಲಿ ಪ್ರಾಮಾಣಿಕತೆ ಇದ್ದುದರಿಂದಲೋ ಅಥವಾ ಯಾವುದೇ ಹಿಡನ್ ಅಜೆಂಡಾ ಇಲ್ಲದಿದುದರಿಂದಲೋ ಅಥವಾ ಅವರ ಇನ್ಯಾವುದಾದರೂ ‘ಹುನ್ನಾರ’ವೋ ಅಥವಾ ನಾನೊಂದು ಯಕಶ್ಚಿತ್ ‘ಸಾಮಾನ್ಯ’ಳು ಎನ್ನಿಸಿದುದರಿಂದಲೋ ಅಥವಾ ನನ್ನ ವಾದ ವೈಖರಿಯಿಂದಲೋ! ನನ್ನನ್ನು ಬ್ಲಾಕ್ ಮಾಡಲಾಯಿತು. ಮತ್ಯಾರೋ ಬೇಕೆಂದೇ ನನ್ನನ್ನು ‘ಅನ್ ಫ್ರೆಂಡ್’ ಮಾಡಿ, ನಾನೇ ‘ಅವರನ್ನು’ ಅನ್ಫ್ರೆಂಡ್ ಮಾಡಿದೆ’ ಎಂದು ಹಬ್ಬಿಸಿದರು.  ನನ್ನನ್ನು ‘ಬ್ಲಾಕ್’ ಮಾಡಿದ ಮೇಲೂ, ನನ್ನ ಮೇಲಿನ ವೈಯಕ್ತಿಕ ಪ್ರಹಾರಗಳು ನಡೆದೇ ಇದ್ದವು. ಆದರೆ ಉತ್ತರಿಸಲು ‘ಬ್ಲಾಕ್’ ಆಗಿದ್ದೆಯಾದ್ದರಿಂದ ಸಾಧ್ಯವಾಗಿರಲಿಲ್ಲ.  ಇದು ಕೂಡ ದೌರ್ಜನ್ಯವೇ ಅಲ್ಲವೇ? ಇರಲಿ.

ರಾತ್ರೋರಾತ್ರಿ ನನ್ನ ಈ ಒಂದು ಸ್ಟೇಟಸ್, ಜೊತೆಗೆ ಒಂದಷ್ಟು ಕಮೆಂಟ್ಸ್ ಬಹಳಷ್ಟು ಗೆಳೆಯರನ್ನು (ಕಂಡರಿಯದ/ಕೇಳರಿಯದ) ಗಿಟ್ಟಿಸಿತು. ಇನ್ ಬಾಕ್ಸಿನಲ್ಲಿ ಅನುಕಂಪದ ಮಾತುಗಳು ಬಂದು ಮುಟ್ಟಿದವು.  ನಾವಿದ್ದೇವೆ, ನಿನ್ನ ಜಗಳವನ್ನು ಮುಂದುವರೆಸೆಂದು ಹುರಿದುಂಬಿಸುವ ಮಾತುಗಳು ಬಂದವು.  ಆದರೆ ನನ್ನ ಸ್ಟೇಟಸ್ ‘ಗುಂಪುಗಾರಿಕೆ’ಯ ವಿರುದ್ಧವಾಗಿತ್ತು. ಹಾಗಾಗಿ ನನ್ನನ್ನು ಯಾವುದೇ ‘ಗುಂಪಿಗೆ’ ಸೇರಿಸಿಕೊಳ್ಳುವ ಅವರ ಪ್ರಯತ್ನ ಸಫಲವಾಗಲಿಲ್ಲ.  ನನ್ನಲ್ಲಿ ಪ್ರಾಮಾಣಿಕತೆ ಇತ್ತು, ಕಳಕಳಿ ಇತ್ತು ಹಾಗೂ ನನ್ನ ಸ್ಟೇಟಸ್ ಯಾವುದೇ ವ್ಯಕ್ತಿಗತ ದ್ವೇಷವಾಗಿರಲಿಲ್ಲ. ಆದರೂ ಕೂಡ ಸಿಕ್ಕಿದವರೆಲ್ಲರಿಗೂ, ಕೇಳಿದವರೆಲ್ಲರಿಗೂ ‘ಜಸ್ಟಿಫೈ’ ಮಾಡುವಂತ ಪರಿಸ್ಥಿತಿ ಬಂದೊದಗಿತು.

ಕೊನೆಗೊಮ್ಮೆ ನಾವು ಇಂತಹದೊಂದು ಸ್ಟೇಟಸ್ ಹಾಕಿಕೊಂಡಿಲ್ಲವೆಂಬಂತೇ / ಇಂತಹದೊಂದು ಪ್ರಕರಣವೇ ಆಗಿಲ್ಲವೆಂಬಂತೇ, ಎಲ್ಲರೂ ತಮ್ಮ, ತಮ್ಮ ಸ್ಟೇಟಸ್ ಗಳನ್ನೂ, ಕಾಮೆಂಟುಗಳನ್ನು ‘ಡಿಲೀಟ್’ ಮಾಡಿ ಸುಮ್ಮನಾಗಿಬಿಟ್ಟರು.  ಆದರೆ ನನಗೆ ಮಾತ್ರ ಈ ಘಟನೆ, ಮಾಧ್ಯಮದವರ ಅಥವಾ ಸ್ವಘೋಷಿತ ಕವಿ/ಬರಹಗಾರರ ಅಥವಾ ಅವರ ಬೆಂಬಲಿಗರ ಮತ್ತು ಈ ಘಟನೆಯನ್ನು ತಮ್ಮ ಬೇಳೆ ಬೇಯಿಸಿಕೊಳ್ಳುವುದರ ಕಡೆ ತಿರುಚುವ ರಾಜಕೀಯ ವ್ಯಕ್ತಿಗಳ ಮುಖವಾಡವನ್ನು ತೆರೆದಿಟ್ಟಿತು. ನನ್ನವರು ಎಂದೇ ತಿಳಿದಿದ್ದ ಅನೇಕರು ಕೂಡ ‘ಸಾಂಸ್ಕೃತಿಕ ರಂಗದಲ್ಲಿ ಸಿಕ್ಕಾಪಟ್ಟೆ ರಾಜಕೀಯವಿದೆ. ಅವರ ಸುದ್ಧಿಗೆ ಯಾಕೆ ಹೋದೆ?’ ಎಂದು ನನಗೆ ಬುದ್ಧಿ ಹೇಳಿದರು. ಅಂದಿನಿಂದ ನಾನು ಅಕ್ಷರಶಃ ಈ ಫೇಸ್ ಬುಕ್ಕಿನಲ್ಲಿ ಏಕಾಂಗಿಯಾದೆ.  ಯಾರೊಂದಿಗೂ ಚಾಟ್ ಮಾಡುವುದು ಸಲ್ಲ! ಎಂದರ್ಥ ಮಾಡಿಕೊಂಡೆ. ನನಗೆ ಸಹಾಯ ಮಾಡಲೆಂದು ಬರುವವರನ್ನು ದೂರವಿಟ್ಟೆ.  ಇದರ ಹಿಂದೆ ಮತ್ತ್ಯಾವುದೋ ‘ಹುನ್ನಾರ’ವಿರಬಹುದೆಂಬುದನ್ನು ಅರ್ಥ ಮಾಡಿಕೊಂಡೆ.  ಇದು ನಾನು ಕಲಿತ ಪಾಠ.

ಇಷ್ಟೆಲ್ಲಾ ಈಗೇಕೆ?  ಮೊನ್ನೆಯ ‘ಪ್ರಭಾ’ ಮತ್ತು ‘ವಿ.ಆರ್. ಭಟ್’ ಅವರ ಪ್ರಕರಣ.  ಅಲ್ಲಿ ನಾನು ಹಾಕಿದ ಸ್ಟೇಟಸ್ ಉಂಟು ಮಾಡಿದ ಕಿರಿಕಿರಿ! ಈ ಇಬ್ಪರ ಹೆಸರನ್ನು ಅದುವರೆವಿಗೂ ಕೇಳೇ ಇರಲಿಲ್ಲ. ಅವರಿಬ್ಬರ ಬೆಂಬಲಿಗರಂತೂ ಗೊತ್ತೇ ಇರಲಿಲ್ಲ. ಪ್ರಭಾ ಅವರು ಅರ್ಥವಿಲ್ಲದ / ಚರ್ವಿತಚರ್ವಣ / ಹಳಸಲಾದ ಸ್ಟೇಟಸ್ ಒಂದನ್ನು ಹಾಕಿಕೊಂಡಿದ್ದರು. ಅದರ ಬಗ್ಗೆ ನನಗೆ ತರ್ಕ ಮಾಡಲು ಇಷ್ಟವೂ ಇಲ್ಲ ಹಾಗೂ ಜಾತಿಯ ಬಗ್ಗೆ ಮಾತಾಡುವುದೇ ಅಸಹ್ಯ ಎಂಬ ಮನಸ್ಥಿತಿ ನನ್ನದಾದ್ದರಿಂದ ಈ ಬಗ್ಗೆ  ಮಾತಾಡುವುದಿಲ್ಲ.  ವಿಆರ್ ಭಟ್ ಅವರ ವೈಯಕ್ತಿಕ ಪ್ರೊಫೈಲ್ ಎಷ್ಟೇ ಗಟ್ಟಿಯಾಗಿರಲಿ, ಪತ್ರಕರ್ತನಾಗೇ ಇರಲಿ ಆದರೆ ಅವರು ಮಾಡಿದ್ದು ಅಕ್ಷಮ್ಯ ಅಪರಾಧ.  ‘ಹೆಣ್ಣೊಬ್ಬಳ’ ಬಗ್ಗೆ ಅಷ್ಟು ಕೆಟ್ಟದಾಗಿ ಯಾರೂ ಕೂಡ ಮಾತಾಡಬಾರದು. ಗಾಯವಾದ ಭಾಗಕ್ಕೆ ಸೂಜಿಯಿಂದ ತಿವಿದಂತಿತ್ತು ಅವರ ಮಾತುಗಳು.  ಹಾಗಾಗಿ ಅವರಿಗೆ ಶಿಕ್ಷೆಯಾಗಬೇಕು. ಇದರಲ್ಲಿ ಎರಡು ಮಾತಿಲ್ಲ.

ಪ್ರಭಾ ಅವರು ನಾನೊಬ್ಬಳು ನೊಂದಿರುವ ‘ಹೆಣ್ಣು’, ಇಂತಹ ಘಟನೆಗಳು ಪುನರಾವರ್ತನೆಯಾಗಬಾರದು ಎಂದು ಹೋರಾಟಕ್ಕೆ ನಿಂತರು. ವಿ.ಆರ್ ಮೇಲೆ ಕೇಸ್ ಹಾಕಿದರು. ಎಲ್ಲವೂ ಸರಿ. ಆದರೆ ಅದೇ ರೀತಿ ಅವರ ಸ್ಟೇಟಸ್ ಗಳಲ್ಲಿ ಇನ್ನಿತರರು ಪ್ರಭಾ ಅವರನ್ನು ಬೆಂಬಲಿಸುವ ಭರದಲ್ಲಿ ವಿ.ಆರ್ ಅವರ ಮನೆಯ ಹೆಣ್ಣುಮಕ್ಕಳ ಮೇಲೆ ಅಸಭ್ಯವಾಗಿ ಮಾತಾಡಿದರು.  ವಿ.ಆರ್ ಭಟ್ ಅವರನ್ನು ಕಡಿದು, ಕೊಚ್ಚುವ ಮಾತುಗಳನ್ನು ಆಡಿದರು. ಮಚ್ಚು, ಲಾಂಗು ತೆಗೆದುಕೊಂಡು ಕಾನೂನನ್ನು ಕೈಗೆ ತೆಗೆದುಕೊಳ್ಳುವುದಕ್ಕೆ! ನಮ್ಮದು ಕನ್ನಡ ಚಿತ್ರಗಳಲ್ಲ, ಬದುಕು ಎಂದರಿಯದಷ್ಟು ದಡ್ಡರು ಯಾರೂ ಅಲ್ಲಿ ಇರಲಿಲ್ಲ. ಅತ್ಯಾಚಾರ ಪ್ರಚೋದನೆ ತಪ್ಪಾದರೆ, ಕೊಲೆಯ ಪ್ರಚೋದನೆ ಕೂಡ ತಪ್ಪೇ ಅಲ್ಲವೇ?

ಶತಶತಮಾನಗಳಿಂದ ಬಾಯಿ ಮುಚ್ಚಿ ಕುಳಿತಿದ್ದ, ಗ್ಲಾಮರ್ ಗಷ್ಟೇ, ಗಾಸಿಪ್ ಗಷ್ಟೇ ಸೀಮಿತವಾಗಿದ್ದ ನಮ್ಮ ಹೆಣ್ಣುಮಕ್ಕಳು, ಇತ್ತೀಚಿಗಿನ ದಿನಗಳಲ್ಲಿ ಮುಕ್ತವಾಗಿ ಮಾತಾಡಲು ಶುರುಮಾಡಿದ್ದಾರೆ.  ಅವರನ್ನು ಪುರುಷಧೋರಣೆ ನಿಂದಿಸಿದಾಗಲೆಲ್ಲಾ, ನನ್ನಲ್ಲಿನ ‘ಹೆಣ್ಣು’ ಜಾಗೃತಳಾಗಿದ್ದಾಳೆ. ನನ್ನ ಗುಂಪುಗಾರಿಕೆ ಸ್ಟೇಟಸ್ ನ ವಿರುದ್ಧ, ನನ್ನ ವಿರುದ್ಧ ಹೋರಾಡಿದ್ದ ವ್ಯಕ್ತಿಗೆ, ಹಲವರು ಅಸಹ್ಯವಾಗಿ, ಹೊಲಸಾಗಿ ನಿಂದಿಸಿದಾಗಲೂ ನಾನು ಆಕೆಯನ್ನು ಸಪೋರ್ಟ್ ಮಾಡಿದ್ದೇನೆ. ಈಗ ವಿಆರ್ ಭಟ್ ಅವರ ಮೇಲೆ ಕೇಸ್ ಹಾಕಿ ಕೋಮು ಸೌಹಾರ್ದದ ಜೊತೆಗೆ ನೊಂದ ಹೆಣ್ಣುಮಕ್ಕಳ ಪರವಾಗಿ ನಿಂತಿರುವ ಪತ್ರಿಕೆಯ ಮಾಲಕಿ, ತಮ್ಮ ಪತ್ರಿಕೆಯಲ್ಲಿ ಹಲವಾರು ಹೆಣ್ಣುಮಕ್ಕಳ ವೈಯಕ್ತಿಕ ಘನತೆಗೆ ಧಕ್ಕೆ ತಂದಾಗ ಅಸಹ್ಯಿಸಿದ್ದೇನೆ.  ಅದನ್ನು ಖಂಡಿಸಿಯೂ ಇದ್ದೇನೆ.  ಕಾನೂನಿನ ಮೂಲಕ ಹೋರಾಡುತ್ತೇವೆಯೆಂದು ಆ ಹೆಣ್ಣುಮಕ್ಕಳು ಸ್ಟೇಟಸ್ ಹಾಕಿಕೊಂಡಾಗ ಸಂತೋಷಪಟ್ಟಿದ್ದೇನೆ.

ಪುರುಷಧೋರಣೆಯನ್ನು ಖಂಡಿಸಿ ಹೋರಾಟ ನಡೆಸಲು ಮುಂದಾದ  ಪ್ರಭಾ, ತನ್ನಂತೇ ಇನ್ನಿತರ ಹೆಣ್ಣುಮಕ್ಕಳು ಬೈಗಳಕ್ಕೆ ಈಡಾದಾಗ, ಅದು ಕೂಡ ಅವರ ಸ್ಟೇಟಸ್ ನಲ್ಲಿಯೇ, ಒಂದಿಷ್ಟು ಖಂಡಿಸದೇ ಇದ್ದದ್ದು, ನಿಜವಾಗಿಯೂ ನನಗೆ ನೋವಾಯಿತು.  ನಾನವರ ಗಮನಕ್ಕೆ ತಂದ ಮೇಲೂ ಕೂಡ ಅವರದನ್ನು ‘ನೆಗ್ಲೆಕ್ಟ್’ ಮಾಡಿದ್ದು ಯಾವ ಮನಸ್ಥಿತಿ?  ಸಂತ್ರಸ್ಥೆಗಲ್ಲದೆ ಬೇರೆಯವರಿಗೆ ಆ ನೋವು ಅರ್ಥವಾಗುವುದೇ? ಟಿವಿ ಸಂದರ್ಶನದಲ್ಲಿ  ಆಂಕರ್ ಕೇಳಿದ ಈ ಪ್ರಶ್ನೆಗೆ ‘ಕೋಪದ ಭರದಲ್ಲಿ ಮಾತಾಡ್ತಾರೆ! ಏನೂ ಮಾಡಲಾಗುವುದು? ಎಂಬಂತ ಬೇಜವಾಬ್ದಾರಿ ಹೇಳಿಕೆ ನೀಡಿದರೆ, ಪ್ರಭಾ ಅವರು ‘ಹೆಣ್ಣು’ ಎಂದೇ ಸಪೋರ್ಟ್ ಮಾಡಿದ್ದ ನನ್ನಂತವರಿಗೆ ಬೇಸರವಾಗಬಾರದೇ? ಪುರುಷಧೋರಣೆ ವಿರುದ್ಧ ಹೋರಾಡುವ ‘ಹೆಣ್ಣು’ ಪಕ್ಷಾತೀತಳಾಗಿ ಇರಬೇಕಲ್ಲವೇ?  ಶೇಕಡಾವಾರು ಲೆಕ್ಕದಲ್ಲಿ ಹೇಳುವುದಾದರೆ, ವಿಆರ್ ಭಟ್ ಮಾತುಗಳಿಗೆ ಅಸಹ್ಯಿಸಿದವರೇ ಬಹಳ ಮಂದಿ. ಯಾವ ಹೆಣ್ಣು ಕೂಡ ವಿಆರ್ ಭಟ್ ನನ್ನು ಸಪೋರ್ಟ್ ಮಾಡಲಿಲ್ಲ.

ನನ್ನ ಮುಂದಿರುವ ಪ್ರಶ್ನೆ - ಪ್ರಭಾ ಅವರು ಹೋರಾಡುತ್ತಿರುವುದು ಯಾರ ವಿರುದ್ಧ? ಪುರೋಹಿತಶಾಹಿಗಳ ವಿರುದ್ಧವೇ?  ಹೆಣ್ಣನ್ನು ಚೀಪಾಗಿ ನೋಡಿದ ಪುರುಷ ಧೋರಣೆಯ ವಿರುದ್ಧವೇ? ಇದರ ಕ್ಲಾರಿಟಿ ಅವರಿಗಿದ್ದರೆ ನಂತರದ ಹೋರಾಟದ ನಡೆಯನ್ನು ತೀರ್ಮಾನಿಸಬಹುದು.  ಬ್ರಾಹ್ಮಣ್ಯದ ವಿರುದ್ಧದ ಹೋರಾಟವಾದರೆ, ಬ್ರಾಹ್ಮಣರು ಕೂಡ ಕೇಸ್ ಹಾಕುತ್ತಾರೆ ಅವರಿಗಿಷ್ಟವಿದ್ದರೆ. ಅದು ಅವರ ಹಕ್ಕಿನ ಪ್ರಶ್ನೆ ಕೂಡ. ಇವರ ಮಾತುಗಳಿಗೆ ಇವರೇ ಜವಾಬ್ದಾರರು. ಇವರು ಅದನ್ನು ಎದುರಿಸಬೇಕು.  ಪುರುಷಧೋರಣೆಯ ವಿರುದ್ಧವಾದರೆ, ಈಗಾಗಲೇ ಎಲ್ಲಾ ಹೆಣ್ಣುಮಕ್ಕಳು ಪ್ರಭಾರನ್ನು ಈ ವಿಷಯದಲ್ಲಿ ಸಪೋರ್ಟ್ ಮಾಡಿದ್ದಾರೆ.  ಮಾಡುತ್ತಾರೆ.

ಇಷ್ಟಾದರೂ ‘ಪ್ರಭಾ’ ಅವರನ್ನು ಬೆಂಬಲಿಸುತ್ತಿರುವ ಮಂದಿ, ಅದನ್ನು ಮೌನವಾಗಿಯೇ ಒಪ್ಪುತ್ತಿರುವ ‘ಪ್ರಭಾ’ ಹೇಳುತ್ತಿರುವುದಾದರೂ ಏನು?  ಕೆಲವು ‘ಜಾಗೃತ’ ಹೆಣ್ಣುಮಕ್ಕಳು ವಿಆರ್ ಭಟ್ ರನ್ನು ಬೆಂಬಲಿಸುತ್ತಿದ್ದಾರೆ, ಅವಳು RSS ನವಳು, ಅದಕ್ಕೆ ವಿಆರ್ ಭಟ್ ಮನೆಯವರನ್ನು ಸಪೋರ್ಟ್ ಮಾಡುತ್ತಿದ್ದಾಳೆ!  ಇತ್ಯಾದಿ.  ಇಲ್ಲಿ ಪಕ್ಷ ಏನು ಬಂತು?  ನೊಂದ ಹೆಣ್ಣು ಎಂದ ಮೇಲೆ ಇತ್ತ ಕಡೆಯೂ ಅದೇ, ಅತ್ತ ಕಡೆಯೂ ಅದೇ. ಕೇವಲ ‘ಭಟ್’ ಎಂಬುದಕ್ಕಾಗಿ ಇವರ ಹೋರಾಟವಾದರೆ, ‘ನನ್ನ’ ಸಪೋರ್ಟ್ ಇರದು.  ಆದರೆ ನೊಂದ ‘ಹೆಣ್ಣು’ಮಕ್ಕಳ ಪರವಾದರೆ, ಎಲ್ಲಾ ‘ಹೆಂಗಸರು’ ಎದ್ದು ನಿಂತಾರು! ಇಡೀ ಪ್ರಕರಣವನ್ನು ರಾಜ್ಯದ ಅತ್ಯಂತ ಸೆನ್ಸೇಷನಲ್ ನ್ಯೂಸ್ ಎಂಬುದಾಗಿ ಪ್ರಕಟಿಸಿದ ಮಾಧ್ಯಮದವರಾಗಬಹುದು ಅಥವಾ ಪ್ರತಿಭಟಿಸಿದವರಾಗಬಹುದು, ಇವರ ವೈಯಕ್ತಿಕ ಹಿತಾಸಕ್ತಿಗಳೇನಿರಬಹುದು? ಎಂಬುದನ್ನೆಲ್ಲಾ   ನೋಡುತ್ತಾ, ಯೋಚಿಸುತ್ತಾ ಕುಳಿತಿದ್ದ ನನ್ನಂತಹವರಿಗೆ ನಿಜವಾಗಿಯೂ ಸಮಾಜದ ದುರ್ವ್ಯವಸ್ಥೆಗೆ ಬೇಸರವಾಗದಿರದು. 

ಇಷ್ಟೆಲ್ಲಾ ನಡೆಯುತ್ತಿರುವಾಗ, ನಾನು ವಿಆರ್ ಭಟ್ ಅವರನ್ನು ಸಪೋರ್ಟ್ ಮಾಡಿದ್ದೇನೆಂದು ಬಹಳ ಮಂದಿ ನನ್ನನ್ನು ಹೀಯಾಳಿಸಿದರು (ಡಿಪ್ಲೋಮಾಟಿಕ್ ಆಗಿ). ಕೆಲವರು ಇನ್ ಬಾಕ್ಸಿಗೆ ಬಂದು ಈ ಹೋರಾಟ ಯಾವ ಸ್ವರೂಪ ಪಡೆಯುತ್ತದೆ? ಎನ್ನುವುದನ್ನು ವಿವರಿಸಿದರು. ಇನ್ನೊಂದಿಷ್ಟು ಮಂದಿ ಮೊಸಳೆ ಕಣ್ಣೀರು ಸುರಿಸುತ್ತಾ ಬಂದು ‘ನನ್ನ ಜಾತಿ’ ಯ ಬಗ್ಗೆ ವಿವರಣೆ ಪಡೆದರು. ಕಮೆಂಟುಗಳಲ್ಲಿ ಇನ್ಯಾರೋ ‘Read between the lines' ಎಂದು ಪಾಠ ಮಾಡಿದರು.  ಪಾಠ ಕಲಿತ ‘ನಾನು’ ಅವರ ಪೋಸ್ಟ್ ಗಳನ್ನು, ಕಮೆಂಟುಗಳನ್ನು ಕೂಡ ಹಾಗೇಯೇ ಓದುತ್ತೇನೆ ಎಂಬುದನ್ನು ಮರೆತರು. ಪ್ರಭಾ ಅಥವಾ ಇನ್ಯಾರೇ ಇರಬಹುದು ಹೆಣ್ಣು ‘ಅಬಲೆ’ ಎಂದು ಬಿಂಬಿಸುವುದರಲ್ಲಿಯೇ ಎಲ್ಲರ ಮನಸ್ಸು! :( ಒಟ್ಟಿನಲ್ಲಿ ‘ನನ್ನನ್ನು’ ಕೂಡ ಒಂದು ಗುಂಪಿಗೆ ಸೇರಿಸುವ ಹಂಬಲ, ಹುಮ್ಮಸ್ಸು, ಬಯಕೆ ಎಲ್ಲರದೂ. ಅವರಿಗೆಲ್ಲಾ ತಿಳಿಯದ್ದು ವೈಯಕ್ತಿಕ ವಿಷಯಗಳನ್ನು ನಾನೆಂದಿಗೂ ಸಾಮಾಜಿಕ ಜಾಲ ತಾಣಗಳಲ್ಲಿ ಬರೆಯುವಾಗ ಮೂರನೇಯ ವ್ಯಕ್ತಿಯಾಗಿಯೇ ಬರೆಯುತ್ತೇನೆ. ನಾನು ಯಾವುದೇ ಗುಂಪಿನೊಡನೇ ಸೇರಿಕೊಳ್ಳಲು ಇಷ್ಟಪಡುವುದಿಲ್ಲ ಹಾಗೂ ಈಗ ಇಲ್ಲಿ ಬರೆಯುತ್ತಿರುವ ‘ನಾನು’ ನಾನಲ್ಲ ಎಂಬುದು. 

ಹಾಗಾದರೆ ಇಲ್ಲಿ ಬಳಸಿರುವ ‘ನಾನು’ ಯಾರು?  ‘ನಾನು’ ಎಂದರೆ ‘ಅತ್ಯಂತ ಸಾಮಾನ್ಯ ವ್ಯಕ್ತಿ’!. ನಾನು ಯಾರದೋ ರಾಜಕೀಯ ದಾಳಗಳಿಗೆ ಬಲಿಯಾಗುವುದನ್ನು ಒಪ್ಪುವುದಿಲ್ಲ. ನನಗೆ ಯಾವುದೇ ಕಟ್ಟುಪಾಡುಗಳು, ಹುನ್ನಾರಗಳು, ಎಡ, ಬಲ ಎಂಬ ಸಿದ್ದಾಂತಗಳು ಕಾಡುವುದಿಲ್ಲ. ಹೆಸರಿನ ಅಥವಾ ಹಣ ಮಾಡುವ ಬಯಕೆಯಿಲ್ಲ. ನನಗೆ ಮಾಧ್ಯಮಗಳಲ್ಲಿ ಬರುವುದು ಕೂಡ ಬೇಕಿಲ್ಲ. ನನಗೆ ಬೇಕಿರುವುದು ಸಮಾಜದ ಸ್ವಾಸ್ತ್ಯ  ಯಾರದೋ ರಾಜಕೀಯಕ್ಕೆ ಬಲಿಯಾಗುವುದಲ್ಲ. ಅಪ್ಪ ಹಾಕಿದ ಆಲದ ಮರಕ್ಕೆ ಜೋತು ಬೀಳುವ ವ್ಯಕ್ತಿತ್ವದ ಅವಶ್ಯಕತೆಯೂ ಇಲ್ಲಾ.  ತಾತ ಮಾಡಿದ ತಪ್ಪಿಗೆ ಮೊಮ್ಮಕ್ಕಳು ಬಲಿಯಾಗುವ ಆಸೆಯಿಲ್ಲ.  ಸಮಾಜದಲ್ಲಿ ಎಲ್ಲಕ್ಕಿಂತ ಹೆಚ್ಚಾಗಿ ತುಳಿತಕ್ಕೊಳಗಾಗಿರುವವರು ಬಡವರು, ರೈತರು. ಇವರನ್ನು ಮೇಲಕ್ಕೆತ್ತಬೇಕೆಂಬ ಹಪಾಹಪಿ.  ಎಲ್ಲಾ ಜಾತಿ, ಮತ, ಧರ್ಮಗಳಲ್ಲೂ ಕೊಳಕಿದೆ, ಆದರೆ ಬೆಳೆಸಬೇಕಿರುವುದು ಅದರಲ್ಲಿನ ಪಾಸಿಟಿವ್ ಗುಣಗಳನ್ನಷ್ಟೆ ಎಂಬ ಅರಿವು, ಹೆಣ್ಣು ‘ಅಬಲೆ’ ಯಲ್ಲಾ, ಅವಳು ಗಂಡಿನಷ್ಟೇ ಸರಿಸಮಾನಳು ಎಂಬ ಪ್ರಜ್ಞೆ, ಯಾವುದೇ ಸಮಾಜದ ರೀತಿನೀತಿಗಳು ಮಕ್ಕಳಿಗೆ ಆದರ್ಶಪ್ರಾಯವಾಗಿರಬೇಕು. ನಮ್ಮ ಮಕ್ಕಳು ಚಂದವಾಗಿ, ಸುಂದರವಾಗಿ ಬೆಳೆಯಬೇಕೆಂದು ಅಪೇಕ್ಷೆ ಪಡುವಂತಹ ಮನಸ್ಥಿತಿಯಷ್ಟೇ.  ‘ನನಗೆ’ ಬೇಕಿರುವುದು ನಿಜವಾಗಿಯೂ ‘ಗುಂಪುಗಾರಿಕೆ’ಯಲ್ಲ. ಸಮಾಜವನ್ನು ಬೆಳೆಸುವ, ಕಟ್ಟುವ ಒಂದೊಳ್ಳೆಯ ‘ಟೀಮ್’. 

ಬರವಣಿಗೆ

ಯಾವುದೇ ಓದು ಅಥವಾ ಬರವಣಿಗೆ ಆ ಮನುಷ್ಯನನ್ನು ಇನ್ನಷ್ಟು ವಿನಯವಂತನನ್ನಾಗಿಸದಿದ್ದರೆ, ಆತ ಬರೆದದ್ದು / ಓದಿದ್ದು ವ್ಯರ್ಥ.


ಬರವಣಿಗೆಯೋ / ಇನ್ಯಾವುದೋ ಕಲಾಪ್ರಕಾರಗಳು ಮೊದಲು ಅದರ ರಚನಕಾರನಿಗೆ ಖುಷಿ ನೀಡಬೇಕು, ಅವುಗಳಲ್ಲಿ ಪ್ರಾಮಾಣಿಕತೆ ಇರಬೇಕು, ಹೊಗಳುಭಟರೇ ತುಂಬಿರುವ ಈಗಿನ ಕಾಲದಲ್ಲಿ ತನ್ನ ರಚನೆಗಳನ್ನು ತಾನೇ ಪುನರ್ವಿಮರ್ಶೆ ಮಾಡಿಕೊಳ್ಳುವ ಅವಶ್ಯಕತೆ ಬಹಳ ಹೆಚ್ಚು. ಜೊತೆಗೆ ಯಾವುದೇ ಕೃತಿ, ಅದರ ಕೃತಿಕಾರನಿಗೆ ತೃಪ್ತಿ ನೀಡಬಾರದು. 

ತನ್ನ ರಚನೆಗಳನ್ನು ತಲುಪುವವರಿಗೆ ತಲುಪಿಸಿದ ನಂತರ, ನಿರಾಳವಾಗಿಬಿಡಬೇಕು, ಅದಕ್ಕೆ ದೊರೆಯುವ ಎಲ್ಲಾ ರೀತಿಯ ಹೊಗಳಿಕೆ / ತೆಗಳಿಕೆ, ಟೀಕೆ, ಟಿಪ್ಪಣಿಗಳನ್ನು ನಿರ್ಲಿಪ್ತವಾಗಿ ಸ್ವೀಕರಿಸುವ ಮನಸ್ಥಿತಿ ಬೆಳೆಸಿಕೊಳ್ಳಬೇಕು. ಸಾಧ್ಯವಿದ್ದರೆ, ಆ ಟೀಕೆಗಳನ್ನು ಮೀರಿ, ತಪ್ಪುಗಳನ್ನು ಸರಿ ಮಾಡಿಕೊಳ್ಳುವತ್ತ ತನ್ನ ಮುಂದಿನ ಹೆಜ್ಜೆಯನ್ನು ಇಡಬೇಕು.ಹೆಣ್ಣು ಅಬಲೆ! :(


http://bhoothagannadi.blogspot.in/2014/08/blog-post_4.html?m=1 ಈ ಲೇಖನ ಓದಿದಾಗ ಬೇಡಬೇಡವೆಂದರೂ ನಾನು ೧೦ ನೇ ತರಗತಿಯಲ್ಲಿದ್ದಾಗ ನಡೆದ ಕಾವೇರಿ ಗಲಾಟೆ ನೆನಪಾಯಿತು. 

ನಾವು ಆಗ ರಾಜಾಜಿನಗರದಲ್ಲಿದ್ದೆವು. ಪಕ್ಕದ ರಸ್ತೆ ಪ್ರಕಾಶ ನಗರ. ಇತ್ತ ಕಡೆ ಕನ್ನಡಿಗರು, ಅತ್ತ ಕಡೆ ತಮಿಳರು ಹೆಚ್ಚು. ಅಲ್ಲೆಲ್ಲೋ ನಡೆಯುತ್ತಿದ್ದ ಕಾವೇರಿ ಗಲಭೆಯ ಗಾಳಿ ಇಲ್ಲಿಗೂ ಬೀಸಿತು. ಅದುವರೆವಿಗೂ ಒಟ್ಟಿಗೆ ಟೀ ಕುಡಿಯುತ್ತಿದ್ದ, ಹೆಗಲ ಮೇಲೆ ಕೈ ಹಾಕಿಕೊಂಡು ಓಡಾಡುತ್ತಿದ್ದ ಗೆಳೆಯರ ನಡುವೆ ಎರಡು ಬಣಗಳಾದವು. ಕರ್ನಾಟಕ ತಮಿಳುನಾಡು ಬಾರ್ಡರ್ ನಮ್ಮ ಮನೆಯ ಪಕ್ಕದಲ್ಲೇ ರಚಿತವಾಯಿತು. ಎರಡು ಕಡೆಯವರೂ ಆತ್ಮೀಯ ಸ್ನೇಹಿತರೇ. ಆದರೂ ಸೀಮೆಎಣ್ಣೆ ಬಾಟಲುಗಳಿಂದ ಹಿಡಿದು ಚಾಕು, ಚೂರಿ, ಮಚ್ವು, ಲಾಂಗ್ ಎಲ್ಲವೂ ಹೊರ ಬಂದವು. ಎರಡೂ ಕಡೆಯವರು ಬೈದಾಡುತ್ತಿದ್ದರು. ಬಾಟಲುಗಳನ್ನು ಎಸೆಯುತ್ತಿದ್ದರು. ಎರಡೂ ಕಡೆಯವರೂ ಬೈದಾಡುತ್ತಿದ್ದರು. ನಮ್ಮ ಬೈಗುಳಗಳೆಲ್ಲವೂ ಅಮ್ಮ ಮತ್ತು ಅಕ್ಕಂದಿರಿಗೆ ಅಲ್ಲವೇ?  ಪೋಲೀಸರು ಬಂದು ಅಶ್ರುವಾಯು ಸಿಡಿಸಿದರು. ನಮ್ಮ ಮನೆಯೇ ಕಾರ್ನರ್ ಆದ್ದರಿಂದ ಜೊತೆಗೆ ಅಣ್ಣನ ಸ್ನೇಹಿತರು ಒಂದಷ್ಟು ಜನರಿದ್ದರಿಂದ ನಮ್ಮ ಮನೆಯ ಈರುಳ್ಳಿಯೆಲ್ಲವೂ ಖಾಲಿ. ಕರ್ಫ್ಯೂ ಹಾಕಿದರು. ಈ ಗಲಾಟೆಯ ಸಂದರ್ಭವನ್ನು ಉಪಯೋಗಿಸಿಕೊಂಡು, ನಮ್ಮ ಮನೆಯ ಎದುರು ಬಹುಕಾಲದಿಂದ ಎಬ್ಬಿಸಲಾಗದೇ ವಾಸವಾಗಿದ್ದ ಸ್ಲಮ್ / ಮನೆ (ನೆನಪಿಲ್ಲ) ಒಂದಕ್ಕೆ ಬೆಂಕಿ ಹಚ್ಚಲಾಯಿತು. ಪಾಪ! ಆಮೇಲೆ ಆ ಜನರು ಎಲ್ಲಿ ಹೋದರೋ ತಿಳಿಯಲಿಲ್ಲ. 

ಗಲಭೆಗೆ ಸೇರಿದ್ದ ಜನರು ದೂರವಾಗುವಾಗ ಹೇಳಿ ಹೋದದ್ದು ಮಾತ್ರ "ನಿಮ್ಮ ರಸ್ತೆಯಲ್ಲಿ ಓಡಾಡುವ ಯಾವ ಹೆಣ್ಣುಮಕ್ಕಳು ಕೂಡ ಸುರಕ್ಷಿತವಾಗಿ ಮನೆ ಸೇರಲಾರರು!  

ಒಂದಷ್ಟು ದಿವಸಗಳು ನಾನು ಟೈಪಿಂಗ ಕ್ಲಾಸಿಗೆ ಹೋಗುವಾಗ ನನ್ನೊಟ್ಟಿಗೆ ಯಾರಾದರೂ ಬರುತ್ತಿದ್ದರು. ಹೀಗೆ ಎತ್ತಿಗೆ ಜ್ವರ ಬಂದರೆ, ಎಮ್ಮೆಗೆ ಬರೆ! ಯಾವಾಗಲೂ ಅಂದು, ಇಂದು 

ಇಂತಿ ನಮಸ್ಕಾರಗಳು - ನಟರಾಜ್ ಹುಳಿಯಾರ್ ಅವರ ಪುಸ್ತಕದಲ್ಲಿ ಇಷ್ಟವಾದದ್ದು.

ನಟರಾಜ್ ಹುಳಿಯಾರ್ ಅವರ ‘ಇಂತಿ ನಮಸ್ಕಾರಗಳು’ ಲಂಕೇಶ್ ಮತ್ತು ಡಿ.ಆರ್. ನಾಗರಾಜ್ ಅವರ ಬಗೆಗಿನ, ಅವರ ಆಲೋಚನೆಗಳ ಬಗೆಗಿನ ವಿವರಣೆಯನ್ನು ನೀಡುವ ಪುಸ್ತಕ. ಎಲ್ಲಾ ಹಿರಿ, ಮರಿ, ಕಿರಿ ಸಾಹಿತಿಗಳು ಓದಬೇಕಾದದ್ದು. ಕೆಲವು ವಾಕ್ಯಗಳಂತೂ ಸಿಕ್ಕಾಪಟ್ಟೆ ಇಷ್ಟವಾಗಿಬಿಡುತ್ತವೆ. ಅವುಗಳಲ್ಲಿ ಬಹುಮುಖ್ಯವೆನೆಸಿದ್ದು Especially FB ಭಟ್ಟಂಗಿಗಳಿಗೆ ಅನ್ವಯಿಸುವುದು

೧. ಯಾಜಮಾನ್ಯ ತನ್ನ ಭಟ್ಟಂಗಿಗಳನ್ನು ತಾನೇ ಸೃಷ್ಟಿಸಿಕೊಳ್ಳುತ್ತಿರುತ್ತದೆ. ರಾಜರುಗಳು ತಮ್ಮ ದೌರ್ಬಲ್ಯಗಳನ್ನು ಮುಚ್ಚಿಕೊಳ್ಳಲು, ತಮ್ಮನ್ನು ಜನಪ್ರಿಯಗೊಳಿಸಿಕೊಳ್ಳಲು ಹಾಗೂ ಆತ್ಮವಿಶ್ವಾಸದ ಕೊರತೆಯನ್ನು ತುಂಬಿಕೊಳ್ಳಲು ಕೂಡ ಭಟ್ಟಂಗಿಗಳನ್ನು ಸೃಷ್ಟಿಸಿಕೊಳ್ಳುತ್ತಾರೆ. ಜೊತೆಗೆ ಕೀಳರಿಮೆಯಿಂದಾಗಿ ಕೂಡ ಭಟ್ಟಂಗಿಗಳನ್ನು ನೇಮಿಸಿಕೊಳ್ಳುತ್ತಿರುತ್ತಾರೆ. ಈ ಭಟ್ಟಂಗಿಗಳು ರಾಜನ ಪ್ರತ್ಯೇಕ ಸಂಸ್ಥೆಯಾಗಿಯೂ ಕಾರ್ಯ ನಿರ್ವಹಿಸುತ್ತಿರುತ್ತಾರೆ. ಆತ್ಮವಿಶ್ವಾಸದ ಕೊರತೆಯಿಂದಾಗಿ ಆಳುವವರು ಮತ್ತು ಆಳುಗಳಿಬ್ಬರಿಗೂ ಈ ಭಟ್ಟಂಗಿತನ ಅನಿವಾರ್ಯವಾಗುತ್ತದೆ. ಪ್ರಭುತ್ವಕ್ಕೆ ಹೊಗಳಿಕೆ ಬೇಕಾದ್ದರಿಂದ, ಅದರ ಅಧೀನದಲ್ಲಿರುವವರಿಗೂ ಭಟ್ಟಂಗಿತನ ತಮ್ಮ ಜೀವನ ನಿರ್ವಹಣೆಯ ಸಲೀಸು ಮಾರ್ಗವಾಗಿಬಿಡುತ್ತದೆ.

೨. ಹೊಗಳದಿದ್ದರೆ ಅಭದ್ರತೆ, ಹೊಗಳಿದರೆ ಅನುಮಾನ ... ಈ ಎರಡೂ ಪ್ರವೃತ್ತಿಗಳು ನಮ್ಮಲ್ಲಿರುತ್ತವೆ. ಆದರೆ ನಾವು ಸೂಕ್ಷ್ಮವಾಗಿದ್ದರೆ, ಇನ್ನೊಬ್ಬ ನಮ್ಮನ್ನು ಹೊಗಳಲಾರಂಭಿಸಿದ ತಕ್ಷಣ ನಮ್ಮ ದೌರ್ಬಲ್ಯಗಳೇ ಹೆಚ್ಚು ಗೋಚರಿಸತೊಡಗುತ್ತವೆ. ಅಭದ್ರ ಮನಸ್ಥಿತಿಯಲ್ಲಿರುವ ಒಬ್ಬ ಯಜಮಾನನೇ ಭಟ್ಟಂಗಿಗಳನ್ನು ಸೃಷ್ಟಿಸಿಕೊಳ್ಳಬಹುದು. ಮನುಷ್ಯನ ಕೀಳರಿಮೆಯಿಂದ, ಲಾಭದಾಸೆಯಿಂದ ಅಥವಾ ಇನೊಬ್ಬನನ್ನು ಸಂತೋಷವಾಗಿಡಲು ಬಯಸುವ ಸರಳವಾದ ಒಳ್ಳೆಯತನದಿಂದಲೂ ಹೊಗಳಿಕೆ ಹುಟ್ಟಿರಬಹುದು. ಕೆಲ ಬಗೆಯ ಓದುಗರು ಲೇಖಕನೊಬ್ಬನನ್ನು ಗ್ರಹಿಸಲು ಶ್ರಮಪಡುವುದರ ಬದಲಿಗೆ ಅವನನ್ನು ಸುಮ್ಮನೆ ಹೊಗಳುವ ಸುಲಭ ಮಾರ್ಗ ಹಿಡಿಯುವುದನ್ನು ಕಂಡು ನಾಟಕಕಾರ ಬರ್ಟೋಲ್ಟ್ ಬ್ರೆಕ್ಟ್ ಉರಿದು ಬೀಳುತ್ತಿದ್ದನಂತೆ.
(ಆದರೆ ಐರನಿ ನೋಡಿ, ಇದೇ ಬ್ರೆಕ್ಟ್, ಲಂಕೇಶ್, ಡಿ.ಆರ್ ಅಭಿಮಾನಿಗಳು ಎಂದು ಹೇಳಿಕೊಳ್ಳುವ ಅನೇಕ ಮಂದಿ, ಒಬ್ಬರು ಮತ್ತೊಬ್ಬರ ಭಟ್ಟಂಗಿಗಳಾಗಿರುವುದು!  )

೪.  ಭಟ್ಟಂಗಿಗಳ ಸುಳ್ಳುಗಳಲ್ಲಿ ಲೇಖಕ ಸತ್ಯಕ್ಕಾಗಿ ತಡಕಾಡುವಂತಾಗುತ್ತದೆ. (ಫೇಸ್ ಬುಕ್ಕಿನಲ್ಲಂತೂ ಸಿಕ್ಕಾಪಟ್ಟೆ ತಡಕಬೇಕಾಗುತ್ತದೆ)

೫.  ಬರೆಯುವವನಿಗೆ ಹೊರಗಣ್ಣಿಗಿಂತ ಒಳಗಣ್ಣು ಮುಖ್ಯ

೬.  ಗೊತ್ತಿದ್ದೋ ಗೊತ್ತಿಲ್ಲದೆಯೋ ಸುಳ್ಳು, ಅರೆ ಸುಳ್ಳು ಬರೆಯುವ, ಮಾತನಾಡುವ ಎಲ್ಲರೂ ತಮ್ಮೊಳಗೆ ನರಕ ಸೃಷ್ಟಿಸಿಕೊಳ್ಳುತ್ತಲೇ ಸುತ್ತಲಿನ ನರಕವನ್ನು ಆಳವಾಗಿಸುತ್ತಾ ಹೋಗುತ್ತಾರೆ. 

೭. ವ್ಯಕ್ತಿಯೊಬ್ಬನ ನಿರ್ಗಮನದ ನಾಲ್ಕಾರು ವರ್ಷಗಳಲ್ಲೇ ನಾವು ನೋಡುವ ಕಣ್ಣು ಹೇಗೆ ಬದಲಾಗುತ್ತಿರುತ್ತದೆ! ಅವನ ಬಗೆಗಿನ ಪೂರ್ವಾಗ್ರಹಗಳು, ಅನಗತ್ಯ ಮೆದುತನ, ಇವನು ನಮ್ಮವನೆಂದು ಸುಮ್ಮನೆ ಉಕ್ಕುವ ಪ್ರೀತಿ, ಅತಿ ನಿಕಟತೆಯಿಂದ ಒಸರತೊಡಗುವ ಅಸಹನೆ... ಇವೆಲ್ಲ ಕಡಿಮೆಯಾಗಿ ಒಂದು ಬಗೆಯ ನಿರ್ಲಿಪ್ತ ದೃಷ್ಟಿ ನಿರ್ಮಾಣವಾಗತೊಡಗುತ್ತದೆ. 

೮.  ಲಂಕೇಶ ಬಯ್ದಂತೆ ತಾವೂ ಬಯ್ಯಬಹುದೆಂದು ಹೊರಟ ಪತ್ರಕರ್ತರು ಎಲ್ಲೆಡೆ ಭಂಡ ಪತ್ರಿಕೋದ್ಯಮವನ್ನು ಸೃಷ್ಟಿಸತೊಡಗಿದರು.
ಲಂಕೇಶರನ್ನು ಅನುಕರಿಸುವ ಅನೇಕರು ಅವರ ತಾತ್ವಿಕ ಆಳವಿಲ್ಲದೆ, ನೈತಿಕ ರೋಷವನ್ನು ಆರೋಪಿಸಿಕೊಂಡು ಬರೆಯುವುದರಿಂದಲೇ ಅಂಥವರು ಹುಸಿಯಾಗಿ ಕಾಣುತ್ತಾರೆ ಹಾಗೂ ಅವರ ಬರಹಗಳು ತೆಳುವಾಗಿ ಕಾಣತೊಡಗುತ್ತವೆ. (ಹ್ಮ್, ಈಗಲೂ ಇದು ತಪ್ಪಿಲ್ಲ  ಎಷ್ಟೇ ಕುಣಿದರೂ ಕೆಂಬೂತ ........... ಆಗುತ್ಯೇ? :))

೯.  ದೊಡ್ಡ ಲೇಖಕನೊಬ್ಬ ಗಂಭೀರ ಸಾಹಿತ್ಯ ವಿಮರ್ಶಕನೂ, ಮತ್ತೆ ಮತ್ತೆ ತನ್ನ ಕಲೆಯನ್ನು ಪರೀಕ್ಷಿಸಿಕೊಳ್ಳುವ ವಿದ್ಯಾರ್ಥಿಯೂ ಆಗಿರುತ್ತಾನೆ ಮತ್ತು ಆಗಿರಲೇಬೇಕು

೧೦.  ಸಾಹಿತ್ಯಸಂಸ್ಥೆಗಳ ವಿಮರ್ಶಾ ತೀರ್ಮಾನಗಳ ಬಗ್ಗೆ ಲಂಕೇಶರಿಗೆ ಅಷ್ಟೇನೂ ನಂಬಿಕೆಯಿರಲಿಲ್ಲ. "ಈ ಅಕಾಡೆಮಿ ಥರದ ಸಂಸ್ಥೆಗಳಲ್ಲಿ ಮೂರನೆಯ ದರ್ಜೆಯ ನಾಟಕಕಾರನೊಬ್ಬನಿಗೆ, 'ನಿನ್ನ ನಾಟಕ ಚೆನ್ನಾಗಿಲ್ಲ' ಎಂದು ಹೇಳಿದರೆ, 'ನಿನ್ನ ನಾಟಕ ಚೆನ್ನಾಗಿದೆಯಾ?' ಎಂದು ಕೇಳುತ್ತಾನೆ. ಇಂಥ ಕಡೆ ಅಭಿರುಚಿ, ಆಯ್ಕೆಗಳು ಶ್ರೇಷ್ಠ ಮಟ್ಟದ್ದಾಗುವುದು ಕಷ್ಟ


Evil ಬಗ್ಗೆ ಲಂಕೇಶ್ ಬರೆದದ್ದು!

‘ಮನುಷ್ಯ ಮೂಲತಃ ಈವಿಲ್’ ಎಂದವರು ಲಂಕೇಶ್. 

ಲಂಕೇಶ್ ರ ‘ಸಂಕ್ರಾಂತಿ’ ದಲಿತ, ಬಂಡಾಯ, ಪ್ರಗತಿಪರ ಸಾಹಿತ್ಯದಲ್ಲಿ ವ್ಯಾಪಕವಾಗಿ ಕಂಡ ಪ್ರಭುತ್ವ ಕುರಿತ ಅನೇಕ ಪ್ರಶ್ನೆಗಳನ್ನು ಎಪ್ಪತ್ತರ ದಶಕದ ಆರಂಭದಲ್ಲೇ ಧ್ವನಿಪೂರ್ಣವಾಗಿ ಮಂಡಿಸಿದೆ. ವೈದಿಕ ಧರ್ಮ, ಜೈನ ಧರ್ಮ, ಶರಣ ಧರ್ಮ ಎಲ್ಲವೂ ಇಲ್ಲಿ ಪರೀಕ್ಷೆಗೆ ಒಳಗಾಗುತ್ತವೆ. ಇಲ್ಲಿನ ಬಿಜ್ಜಳ-ಬಸವಣ್ಣರ ಮುಖಾಮುಖಿ ತಾತ್ವಿಕ, ಸಾಮಾಜಿಕ ಹಾಗೂ ವ್ಯಕ್ತಿಗತ ಮುಖಾಮುಖಿಗಳನ್ನು ಒಟ್ಟಿಗೇ ಗ್ರಹಿಸಬಲ್ಲ ಬಹು ಸೂಕ್ಷ್ಮ ಮಾದರಿಯೊಂದನ್ನು ರೂಪಿಸಿದೆ. ಬಸವಣ್ಣ ಬಿಜ್ಝಳನ ಅಧಿಕಾರದ ಶಿಥಿಲತೆ ಹಾಗೂ ಭ್ರಮೆಗಳನ್ನು ಟೀಕಿಸುತ್ತಾನೆ. ಬಿಜ್ಜಳ ‘ನೀನು ಬ್ರಾಹ್ಮಣ, ಒಂದು ಕಾಲದಲ್ಲಿ ಸಂಸ್ಕೃತ ಭಾಷೆಯನ್ನು ಬಳಸಿಕೊಂಡು ಕೆಳಜಾತಿಯವರನ್ನು ಶೋಷಿಸುತ್ತಿದ್ದೆ. ಈಗ ಕನ್ನಡ ಭಾಷೆಯನ್ನು ಬಳಸಿ ಅದೇ ಕೆಲಸ ಮಾಡುತ್ತಿದ್ದೀಯಾ’ ಎಂದು ಬಸವಣ್ಣನನ್ನು ಛೇಡಿಸುತ್ತಾನೆ.

‘ಸಂಕ್ರಾಂತಿ’ಯ ಬಿಜ್ಜಳ ಹೇಳುತ್ತಾನೆ : ‘ಪ್ರೇಮ, ಕಾಮ, ಅತ್ಯಾಚಾರ, ವ್ಯಕ್ತಿಪ್ರೇಮ, ಜಾತಿಪ್ರೇಮ, ನಿಷ್ಕಾಮ ಪ್ರೇಮ - ಯಾವುದನ್ನು ಮಾಡಲು ಹೋಗಿ ಯಾವುದನ್ನು ಮಾಡುತ್ತೇವೋ ದೇವರೇ ಬಲ್ಲ...’

ಕವನವೊಂದನ್ನು ಸಾಲುಗಳ ಮಧ್ಯೆ ಓದಬೇಕೆಂದು ರೂಪನಿಷ್ಠ ವಿಮರ್ಶಕರು ಹೇಳುವ ಹಾಗೆ, ಲಂಕೇಶರಂಥ ಲೇಖಕರು ಮನುಷ್ಯರನ್ನು ಕೂಡ ಹಾಗೇ ಗ್ರಹಿಸಬೇಕೆಂದು ನಮಗೆ ನೆನಪಿಸುತ್ತಿರುತ್ತಾರೆ. ಆದ್ದರಿಂದಲೇ ಎಲ್ಲೆಡೆ ಇರುವ ಕೇಡು ನಾಯಕಪಾತ್ರಗಳಲ್ಲೂ ಇರುತ್ತದೆ ಎಂಬುದನ್ನು ಕಾಣಲು, ಕಾಣಿಸಲು ಈ ಬಗೆಯ ಲೇಖಕರು ಹಿಂಜರಿಯುವುದಿಲ್ಲ.

ಮನುಷ್ಯನ ಕೇಡಿನ ಪ್ರವೃತ್ತಿ ಕತ್ತಿಯ ಮೊನೆಯಲ್ಲಿ ವ್ಯಕ್ತವಾದರೆ ಅದನ್ನು ಗುರುತಿಸುವುದು ಸುಲಭ. ಆದರೆ ಅದು ನಾವು ಸಾಮಾನ್ಯವಾಗಿ ಸಂದೇಹಿಸದಂಥ ಮಾನವವರ್ತನೆಗಳ ಹಿಂದೆಯೂ ಇದ್ದರೆ?

ಈವಿಲ್ ಗೆ ಇನ್ನೊಂದು ಈವಿಲ್ ಅನ್ನು ಕೇವಲ ಸೋಲಿಸಿದ ಮಾತ್ರಕ್ಕೆ ಆನಂದವಿಲ್ಲ. ಬದಲಿಗೆ, ಮುಗ್ಧವಾದದ್ದನ್ನು ಹೊಸಕಿ ಹಾಕಿದಾಗಲೇ ಅದಕ್ಕೆ ತೃಪ್ತಿ’ ಎಂದು ಬಸವರಾಜ ಅರಸು ಹೇಳಿದ್ದರು.

ನಮ್ಮ ಓದು, ತರಬೇತಿಗಳು ನಮ್ಮ ಆಳದ ಕೇಡನ್ನು ಆಗಾಗ ಸ್ಪರ್ಶಿಸಿದರೂ ಅದನ್ನು ಸಂಪೂರ್ಣವಾಗಿ ಕದಲಿಸದೆ ಸೋತುಬಿಡುತ್ತವೆಯೇ? ಹಾಗಾದರೆ ಯಾವ ಮನುಷ್ಯನೂ ಮೂಲಭೂತವಾಗಿ ಬದಲಾಗಲಾರನೆ?

ಇನ್ನೊಬ್ಬ ವ್ಯಕ್ತಿಯ ಆಳಕ್ಕೆ ಹೋಗುವುದು ನಮ್ಮ ಆಳಕ್ಕೆ ಹೋಗುವ ಮೂಲಕ ಮಾತ್ರ ಸಾಧ್ಯ.

ಮನುಷ್ಯನಿಗೆ ಇನ್ನೊಬ್ಬರನ್ನು ಹಿಂಸಿಸುವುದರಲ್ಲಿ, ವಂಚಿಸುವುದರಲ್ಲಿ ಆನಂದವಿದೆ.

ಈವಿಲ್ ಗೆ ಇರುವ ವಿಚಿತ್ರ ಚಾಲಕಶಕ್ತಿ ಹಾಗೂ ಅದರ ಆಕರ್ಷಣೆ ಎಷ್ಟು ಆಳವಾದದ್ದು ಎಂಬುದನ್ನು ಅರಿಯದ ಲೇಖಕ ಭೋಳೆಯಾಗಿಬಿಡಬಲ್ಲ. ಕೇಡು ಅದೆಷ್ಟು ಆಕರ್ಷಕವಾಗಿರಬಲ್ಲದೆಂದರೆ, ಬರೆಯುತ್ತಾ, ಬರೆಯುತ್ತಾ ಲೇಖಕನೇ ಅದರ ಸ್ವರೂಪಕ್ಕೆ ಬೆರಗಾಗಿ ಅದರ ಮೋಹಕ್ಕೆ ಒಳಗಾಗಬಲ್ಲ.

ಈವಿಲ್ ಏಕಮನಸ್ಸಿನಿಂದ ಕೆಲಸ ಮಾಡುತ್ತಿರುತ್ತದೆ. ಅದಕ್ಕೆ ವಿನಾಶ ಮಾಡುವುದು ಹಾಗೂ ಗೆಲ್ಲುವುದು ಬಿಟ್ಟರೆ ಬೇರೆ ಕೆಲಸವೇ ಇಲ್ಲ. ಆದರೆ ಒಳಿತು ಹಾಗಲ್ಲ. ಕೇಡು ಹೆಚ್ಚಿಗೆ ಇರುವ ಜನ ಏನಾದರೂ ಮಾಡಿ ಸುಳ್ಳು, ಮೋಸ ಎಲ್ಲ ಬೆರೆಸಿ ತಮ್ಮ ಕೆಲಸ ಸಾಧಿಸಿಕೊಳ್ಳಲು ಯತ್ನಿಸುತ್ತಾರೆ; ಆದರೆ ಒಳ್ಳೆಯತನ ಹೆಚ್ಚಿಗೆ ಇರುವ ಸಂಕೋಚ ಸ್ವಭಾವದವರು ಹಿಂದೆ ಸರಿದುಬಿಡುತ್ತಾರೆ.

ಮನೋವಿಜ್ಞಾನಿ ರೊಲೋ ಮೇ ಎರಡು ಬಗೆಯ ಮುಗ್ಧತೆಗಳನ್ನು ಗುರುತಿಸುತ್ತಾನೆ. ಒಂದು, ಭೋಳೆ ಮುಗ್ಧತೆ; ಇನ್ನೊಂದು, ಪ್ರಾಮಾಣಿಕ ಮುಗ್ಧತೆ. ಅವನ ಪ್ರಕಾರ ‘ಯಾವುದು ಕೇಡಿನ ಸ್ವರೂಪ ಹಾಗೂ ಶಕ್ತಿಯನ್ನು ಅರಿತಿರುವುದಿಲ್ಲವೋ ಅದು ಭೋಳೆ ಮುಗ್ಧತೆ; ಕೇಡನ್ನು ಅರಿತು ತನ್ನ ಮುಗ್ಧತೆಯನ್ನು ಉಳಿಸಿಕೊಳ್ಳುವುದೇ ಪ್ರಾಮಾಣಿಕ ಮುಗ್ಧತೆ’.

ಎಲ್ಲೆ - ಕಿರುಚಿತ್ರ

ಹೀಗೆ ಸ್ಕೂಲ್ ಗಳ ಬಗ್ಗೆ

ಪ್ರಾಬ್ಲಮ್ ಇರೋದು ನಮ್ಮ ಶಾಲೆಗಳೆಲ್ಲಾ ಕಾರ್ಪೋರೇಟ್ ಸ್ಕೂಲ್ ಗಳಾಗಿರುವುದರಿಂದ. ಹಣ ಮಾಡುವುದಷ್ಟೇ ಇವುಗಳ ಮೂಲ ಉದ್ದೇಶ. ಹಾಗಾಗಿ ಆ ಸ್ಕೂಲಿನಲ್ಲಿ ಜರ್ಮನ್, ಫ್ರೆಂಚ್ ತರಾನೇ "ಕನ್ನಡ" ಕಲಿಸ್ತಾರಂತೆ! ಅನ್ನೋದು ದೊಡ್ಡ ವಿಷಯ, ದುಡ್ಡಿನ ವಿಷಯವಾದರೆ, ತಾನಾಗಿಯೇ ಕನ್ನಡ ಕಲಿಸೋಕೆ ಮುಂದೆ ಬರ್ತಾರೆ ಇವರೆಲ್ಲಾ. ಹಾಗಾಗಿ ಇವರನ್ನು ನಂಬಿ ಪ್ರಯೋಜನವಿಲ್ಲ.
ನಾವು ಮಾಡಬೇಕಿರುವುದು ನಮ್ಮಮಕ್ಕಳಿಗೆ ನಮ್ಮ, ನಮ್ಮ ಭಾಷೆಗಳ ಮೇಲಿನ ಪ್ರೀತಿಯನ್ನು ಹೆಚ್ಚಿಸುವುದು. ಅವರೊಂದಿಗೆ ಅದೇ ಭಾಷೆಯಲ್ಲಿ ಮಾತನಾಡುವುದು, ಅದೇ ಭಾಷೆಯನ್ನು ಕೇಳಿಸುವುದು. ಮೊದಲ 3 ವರ್ಷಗಳು ನಾವು ಯಾವ ಭಾಷೆಯಲ್ಲಿ ಮಕ್ಕಳೊಡನೆ ಮಾತನಾಡುತ್ತೇವೆ, ಅದೇ ಮಕ್ಕಳ ಮಾತೃಭಾಷೆಯಾಗುತ್ತದೆ. ಕನ್ನಡ ಮಾತಾಡಿ, ಕನ್ನಡ ಡಬ್ಬಿಂಗ್ ತನ್ನಿ, ಕನ್ನಡ ಕೇಳಿಸಿ. ಓದೋಕೆ ಒಳ್ಳೆಯ ಪುಸ್ತಕಗಳನ್ನು ನೀಡಿ, ಬರೆಯೋದು ತಾನಾಗಿಯೇ ಕಲಿತಾರೆ. 

ಮಕ್ಕಳನ್ನು ಯಾವ ಭಾಷೆಯಲ್ಲಿ ಓದಿಸಬೇಕು ಅನ್ನುವ ಸಮಸ್ಯೆ ಇವತ್ತು, ನಿನ್ನೆಯದಲ್ಲ! 50 ವರ್ಷಗಳ ಹಿಂದೆ ನಮ್ಮಮ್ಮ ಕೂಡಾ ತಲೆ ಕೆಡಿಸಿಕೊಂಡಿದ್ದರು. ಹೈಸ್ಕೂಲಿನಲ್ಲಿ ಇಂಗ್ಲೀಷ್ ಪ್ರಾಧ್ಯಾಪಕರಾದ ಅವರಣ್ಣ ಹೇಳಿದಂತೆ ನಾವೆಲ್ಲರೂ ಏಳನೇ ತರಗತಿಯ ತನಕ ಕನ್ನಡದಲ್ಲಿ ಓದಿ, ನಂತರ ಇಂಗ್ಲೀಷ್ ತೆಗೆದುಕೊಂಡಿದ್ದೆವು. ನಮ್ಮ ಮಕ್ಕಳ ಕಾಲಕ್ಕೆ ಈಗ 4,5 ಮಾದರಿಯ ಶಿಕ್ಷಣ ವ್ಯವಸ್ಥೆ! - ರಾಜ್ಯದೊಂದು, ಸಿಬಿಎಸ್ ಇ, ಐಸಿಎಸ್ ಇ ಇನ್ನೂ ಇಂತಹ ಹಲವಾರು ಸಿಲಬಸ್ ಗಳು ಮಕ್ಕಳ ನಿದ್ದೆ ಕೆಡಿಸುತ್ತಿವೆ. ಬಡವ, ಬಲ್ಲಿದ, ಪೇಟೆ ಮತ್ತು ಹಳ್ಳಿ ಮಕ್ಕಳನ್ನು ಕೂಡಾ ನಮ್ಮ ಈಗಿರೋ ಶಿಕ್ಷಣ ತಲೆಕೆಡಿಸ್ತಿದೆ. ಜೊತೆಗೆ ಟಿವಿ, ಇಂಟರ್ ನೆಟ್ ಕೂಡಾ. ಹೀಗಿರುವಾಗ ಸುಪ್ರೀಂ ಕೋರ್ಟು ಕನ್ನಡದಲ್ಲೇ ಕಲಿಸಬೇಕು ಅಂತಾ ರೂಲ್ ಮಾಡಿದ್ದರೆ ಏನಾಗ್ತಿತ್ತು? ಒತ್ತಾಯದಿಂದ ನಮ್ಮ ಮಕ್ಕಳು ಕನ್ನಡ ಕಲಿತು ಎಲ್ಲಾ ಕಡೆ ಕನ್ನಡ ಡಿಂಡಿಮ ಬಾರಿಸ್ತಾರೆ? ಅಂತೀರಾ? ಚೀನಾದಲ್ಲಿ ತಮಗೆ ಇಂಗ್ಲೀಷ್ ಬಂದಿದ್ದರೆ ಎಷ್ಟು ಚಂದ ಇರುತಿತ್ತು? ಅದೊಂದೇ ನಮ್ಮ ಕೊರತೆ, ಇಲ್ಲವಾಗಿದ್ದರೆ ಅಮೇರಿಕಾವನ್ನು ಮೀರಿಸುತಿದ್ದೆವು ಅಂತಾ ಗೈಡ್ ಹೇಳ್ತಿದ್ದ! ಅಲ್ಲಿ ಕೂಡಾ ಈಗ ಮಕ್ಕಳಿಗೆ ಇಂಗ್ಲೀಷ್ ಪಾಠ ನಡೆಯುತ್ತಿದೆ! 

ಹಾಗಾದರೆ ಏನು ಮಾಡಬೇಕು? ಏನಿಲ್ಲಾ, ಮಕ್ಕಳಿಗೆ ಯಾವುದೇ ಭಾಷೆಯಾದರೂ ಪ್ರೀತಿಸಲು ಹೇಳಿಕೊಡಬೇಕು. ತಪ್ಪಿಲ್ಲದಂತೆ ಕಲಿಯಲು ಪ್ರೇರೇಪಿಸಬೇಕು. ಮಾತು ಕಲಿಯುವ ಸಮಯದಲ್ಲಿ ನಮ್ಮ ಮಾತೃ ಭಾಷೆಯಲ್ಲಿಯೇ ಮಾತಾಡಬೇಕು. ಅವರಿಗೆ ಭಾಷೆಯ ಮಹತ್ವ ತಿಳಿಸಿಕೊಡಬೇಕು. ಆಗ ಯಾವುದೇ ಭಾಷೆ ಕಲಿತರೂ ಚಂದ ಕಲಿಯುತ್ತಾರೆ. 

ತುಳುವನ್ನೇ ಕೇಳಿಸಿಕೊಂಡು ಬೆಳೆದ ಒಬ್ಬ ಮಗನಿಗೆ ಪಾಠ ಮಾಡುವಾಗ ಅರ್ಥ ಗಳನ್ನು ತುಳುವಿನಲ್ಲಿಯೇ ಹೇಳಬೇಕು, ಮತ್ತೊಬ್ಬ ಮಾತು ಕಲಿಯುವಾಗ ಕನ್ನಡ ಹೆಚ್ಚು ಕೇಳಿಸಿಕೊಂಡದ್ದರಿಂದ, ಕನ್ನಡದಲ್ಲಿಯೇ ವಿವರಿಸಬೇಕು. ಕೈಲಾಸಂ ಆಗ್ಲೇ ಹೇಳಿದ್ದರು - ಮಕ್ಕಳ ಸ್ಕೂಲ್ ಮನೇಲಲ್ವೇ! ಅಂಬರೀಷ್ ಅವರು ವಿಕ್ರಮ್ ಆಸ್ಪತ್ರೆಯಲ್ಲಿ ಅಡ್ಮಿಟ್ ಆದಾಗ ಬರೆದದ್ದು.

ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡುವುದಕ್ಕಿಂತ, ಆ ರೋಗಿಯ ಅಟೆಂಡರ್ ಗಳನ್ನು, ನೋಡಲು ಬರುವವರನ್ನು ಮ್ಯಾನೇಜ್ ಮಾಡುವುದು ಭಯಂಕರ ಕಷ್ಟ! ಅದರಲ್ಲೂ ಆ ರೋಗಿ ಸೆಲೆಬ್ರಿಟಿಯಾಗಿದ್ದರೆ, ಆಸ್ಪತ್ರೆಯ ಸಿಬ್ಬಂಧಿಗಳ ಕಥೆ ಮುಗಿಯಿತು. ವೈದ್ಯರು ಅವರ ಪಾಡಿಗೆ ಅವರ ಕೆಲಸ ಮಾಡಲು ಬಿಡದೇ ನೂರೆಂಟು ಪ್ರಶ್ನೆಗಳನ್ನು ಕೇಳಿ ತಲೆ ತಿಂದು ಬಿಡುತ್ತಾರೆ. ಬಂದವರೆಲ್ಲರಿಗೂ ಸಮಜಾಯಿಷಿ ನೀಡುವುದೇ ವೈದ್ಯರ ಹಾಗೂ ಸಿಬ್ಬಂಧಿಗಳ ಕೆಲಸವಾಗಿಬಿಡುತ್ತದೆ. ನೂರು ರೋಗಿಗಳನ್ನು ಮ್ಯಾನೇಜ್ ಮಾಡಬಹುದು ಆದರೆ ೧೦ ರೋಗಿಗಳ ೧೦೦ ಅಟೆಂಡರ್ ಗಳನ್ನಲ್ಲ! ಇನ್ನೂ ನೋಡಲು ಬರುವವರ ಕಾಟ ಬೇರೆ. ಹೋಗಿ ನೋಡದಿದ್ದರೆ ಏನಂದುಕೊಳ್ಳುತ್ತಾರೋ? ಎಂದಂದುಕೊಂಡು ಬರುವವರೇ ಹೆಚ್ಚು ಜನ. ಇವರಿಂದಾಗಿ ರೋಗಿಗಳಿಗೂ ರೆಸ್ಟ್ ಇಲ್ಲ, ಅಟೆಂಡರ್ ಗಳಿಗೂ ನೆಮ್ಮದಿಯಿಲ್ಲ! ಎನಾಯಿತೂ? ಎಂಬುದನ್ನು ವಿವರಿಸಿ, ವಿವರಿಸಿ, ಅಟೆಂಡರ್ ಗಳಿಗೂ ಪಕ್ಕದ ಬೆಡ್ ರೆಡಿ ಮಾಡಬೇಕಾಗುತ್ತದೆ! 

(ನಟ ಅಂಬರೀಷ್ ಹಾಗೂ ವಿಕ್ರಮ್ ಆಸ್ಪತ್ರೆಯ ಪರವಾಗಿ) — feeling sick.

ಪ್ರಜಾವಾಣಿ ದೀಪಾವಳಿ ವಿಶೇಷಾಂಕದಲ್ಲಿ ಬಂದಿದ್ದ ಸಂದರ್ಶನ


ಪ್ರಜಾವಾಣಿ ದೀಪಾವಳಿ ವಿಶೇಷಾಂಕದಲ್ಲಿ ವಿವೇಕ್ ಶಾನ್ಭಾಗ್ ಮತ್ತು ಜಯಂತ್ ಕಾಯ್ಕಿಣಿಯವರು ಚಂದ್ರಶೇಖರ ಕಂಬಾರ್, ಕಾರ್ನಾಡ್, ದೇವನೂರು ಮತ್ತು ಅನಂತ ಮೂರ್ತಿಯವರ ಸಂವಾದ ನಡೆಸಿದ್ದರು. ಇತ್ತೀಚಿನ ದಿನಗಳಲ್ಲಿ ನಡೆದ ಅಪರೂಪದ ಹಾಗೂ ಪ್ರಾಮಾಣಿಕತೆಯ ಸಂವಾದವೆಂದೇ ಹೇಳಬಹುದು. ಈ ಸಂವಾದದಲ್ಲಿ ಪರಸ್ಪರರ ನಡುವೆ ಇರುವ ನೆನಪುಗಳಿಂದ ಹಿಡಿದು ಸಂಸ್ಕೃತಿ, ಸಾಹಿತ್ಯ, ರಾಜಕೀಯ,ಜಾತಿ, ಭಾಷೆ, ಶಿಕ್ಷಣ ಈ ಎಲ್ಲವುಗಳ ಬಗ್ಗೆಯೂ ಒಳ್ಳೆಯ ಚರ್ಚೆ ನಡೆದಿದೆ. (ನನಗೆ ಅತ್ಯಂತ ಖುಷಿ ಕೊಟ್ಟ, ಕಳೆದುಹೋಗುತ್ತಿರುವ ಸಾಹಿತಿಗಳ ಮೇಲಿನ ಗೌರವವನ್ನು ಮರಳಿಸಿದ ಯಶಸ್ಸು ಈ ಸಂವಾದದ್ದು!) ಈ ಸಂವಾದದಲ್ಲಿ ದೇವನೂರು ಅವರು ಒಂದು ಮಾತು ಹೇಳಿದ್ದಾರೆ ‘ಇಂಡಿಯಾದಂಥ ದೇಶಗಳಲ್ಲಿ ಒಬ್ಬ ಲೇಖಕನನ್ನು ಕತೆ-ಗಿತೆ ಬರೆಯುವವನು ಎಂದು ಪರಿಗಣಿಸುವುದಿಲ್ಲ. ಅವನೊಬ್ಬ ಪ್ರವಾದಿ ಅಂತಲೋ, ಆಲ್ ರೌಂಡರ್ ಅಂತಲೋ ಅಂದುಕೊಂಡುಬಿಡ್ತಾರೆ!’ 

ಕಾರ್ನಾಡ್ ಹೇಳಿರುವುದು - ಕನ್ನಡ ಸಾಹಿತ್ಯಕ್ಕೆ ದೊಡ್ಡ ಡ್ಯಾಮೇಜ್ ಆಗಿರುವುದು ಜ್ಞಾನಪೀಠ ಅವಾರ್ಡ್ನಿಂದ! ಇವರನ್ನು ದೇವಾಂಶ ಸಂಭೂತರು ಅನ್ನುವಂಥ ಟ್ರೀಟ್ ಮೆಂಟ್ ಶುರುವಾಗಿಬಿಟ್ಟಿದೆ. ಯಶವಂತ ಚಿತ್ತಾಲರಂಥ ಲೇಖಕರನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ’. ಗ್ರಂಥಾಲಯಕ್ಕೆ ಸಂಬಂಧಿಸಿದವರೊಬ್ಬರು ಜ್ಞಾನಪೀಠ ಪ್ರಶಸ್ತಿ ಪಡೆದ ನನಗೆ ಮತ್ತು ಅನಂತಮೂರ್ತಿ ಅವರಿಗೆ ಎರಡು ಟ್ರೋಫಿ ಅಂತಾ ಘೋಷಿಸಿಬಿಟ್ಟರು. ಜ್ಞಾನ ಪೀಠ ಪ್ರಶಸ್ತಿ ಪಡೆದಿದ್ದಕ್ಕೆ ನನಗ್ಯಾಕೆ ಟ್ರೋಫಿ? ನಾನು ತೊಗೊಳ್ಳೋದಿಲ್ಲ ಅಂದೆ. ಕಡೆಗೆ ಅನಂತಮೂರ್ತಿ ಅವರ ಬಳಿಗೆ ಹೋಗಿ ನೀವಾದರೂ ತೊಗೊಳ್ಳಿ ಅಂದರು. ಆಮೇಲೆ ಅವರಿಗೆ ಸನ್ಮಾನ ಆಯಿತು. ಆಮೇಲೆ ಗೊತ್ತಾಯಿತು. ಸನ್ಮಾನ ಮಾಡುತ್ತಿದ್ದ ವ್ಯಕ್ತಿ ನಿವೃತ್ತರಾಗುತ್ತಿದ್ದಾರೆ. ಅವರು ಪೇಪರ್ ನಲ್ಲಿ ಬರುವ ಕಾರಣಕ್ಕೆ ನಮ್ಮನ್ನು ಸನ್ಮಾನಿಸುತ್ತಿದ್ದಾರೆ ಅಂತಾ!

ಇದಕ್ಕೆ ಉತ್ತರವಾಗಿ ಅನಂತ ಮೂರ್ತಿ ಅವರು - ಬೇರೆ ದೇಶಗಳಲ್ಲಿ ಲೇಖಕರಿಗೂ ಸಾಮಾನ್ಯರಿಗೂ ಇಲ್ಲಿರುವಂಥ ಸಂಬಂಧಗಳಿಲ್ಲ. ಎಲ್ಲಾ ಪ್ರಶಸ್ತಿಗಳು ಬಂದಾಗಲೂ ಒಂದು ರೀತಿಯ ಉತ್ಸವದ ಸಂಭ್ರಮಗಳು ಇಂಡಿಯಾದಲ್ಲಿ ಇವೆ. ಇದನ್ನು ನಿರಾಕರಿಸುವುದು ಅಷ್ಟು ಸರಿಯಲ್ಲ ಅಂತ ನನಗೆ ಅನ್ನಿಸುತ್ತದೆ. ಅದನ್ನು ತಲೆಗೆ ಹಚ್ಚಿಕೊಳ್ಳಲು ಬಾರದು, ಹಾಗಂತ ನಿರಾಕರಿಸಲೂ ಬಾರದು. ಸಾಹಿತ್ಯ ಸಮ್ಮೇಳನ ಅನ್ನುವ ಉತ್ಸವ ಮಾಡ್ತಾರೆ. ಸಾವಿರಾರು ಜನ ಸೇರ್ತಾರೆ. ಕನ್ನಡದಂಥ ಒಂದು ಭಾಷೆ ಜಗತ್ತಿನ ಭಾಷೆಯೂ ಅಲ್ಲ. ಅಂಥ ಹೊತ್ತಿನಲ್ಲಿ ಈ ರೀತಿಯ ಪ್ರೋತ್ಸಾಹ ಕನ್ನಡಕ್ಕೆ ಬರುವುದನ್ನು ಲೇಖಕರು ತಿರಸ್ಕರಿಸಬಾರದು ಅಥವಾ ಅದನ್ನು ತಲೆಗೆ ಹಚ್ಚಿಕೊಂಡು ನಾನು ಬಹಳ ದೊಡ್ಡ ಲೇಖಕ ಆಗ್ತೀನಿ ಅಂತಾ ತಿಳಿಯೋದು ಅಲ್ಲ.

ಮಾತುಗಳಿಗೆ ಬದ್ಧತೆ ಬೇಕು (ಫೇಸ್ ಬುಕ್ ನಲ್ಲಿ ಬರೆದದ್ದು)

ಮಾತುಗಳಿಗೆ ತೂಕವಿದೆ, ಮಾತುಗಳನ್ನಾಡುವಾಗ ಬದ್ಧತೆ ಬೇಕು ಎಂಬುದು ಚಿಕ್ಕಂದಿನಿಂದ ನಾನು ಅರ್ಥ ಮಾಡಿಕೊಂಡಿರುವುದು. ಹೀಗೆ ಒಂದಷ್ಟು ವರ್ಷಗಳ ಹಿಂದೆ, ಯಾವುದೋ ಕೆಲಸವನ್ನು ನಾವೊಂದಿಷ್ಟು ಜನ ಮಾಡುತ್ತೇವೆ ಎಂದು ಒಪ್ಪಿಕೊಂಡಿದ್ದೆವು. ಆದರೆ ಮಾಡಲಾಗಿರಲಿಲ್ಲ. ನಾನದಕ್ಕೆ ಒಪ್ಪಿಕೊಂಡಿರುವ ಕೆಲಸ ಮಾಡದಿರುವುದಕ್ಕೆ, ಅವರ ಬಳಿ ಹೋಗಿ ಮಾಡಲಾಗುತ್ತಿಲ್ಲ ಎಂದು ವಿವರಿಸಿ, ಕ್ಷಮೆ ಕೇಳಿ ಬರಬೇಕು ಎಂಬುದು ನನ್ನ ಅನಿಸಿಕೆಯಾಗಿತ್ತು. ಉಹೂಂ, ಉಳಿದವರು ಇದಕ್ಕೆ ತಯಾರಿರಲಿಲ್ಲ. ನಮಗೆ ಕೆಲಸ ಕೊಟ್ಟಿರುವವರು, ನಾವು ಕೆಲಸ ಮಾಡುತ್ತೇವೆ ಎಂದೇನೂ ನಂಬಿರಲಿಲ್ಲ. ಹಾಗಾಗಿ ಹೋಗಿ ಹೇಳುವ ಅವಶ್ಯಕತೆಯಿಲ್ಲ ಎಂಬುದು ಉಳಿದವರ ತರ್ಕವಾಗಿತ್ತು. ಅವರು ನಂಬಿರುತ್ತಾರೋ, ಇಲ್ಲವೋ, ಮಾಡುತ್ತೇವೆ ಎಂದ ನಾವು, ಈಗ ಆಗುತ್ತಿಲ್ಲ ಎಂದು ಹೇಳಬೇಕು ಎಂಬುದು ನನ್ನ ತರ್ಕವಾಗಿತ್ತು. ಆ ಬೇರೆಯವರನ್ನು ಕನ್ ವಿನ್ಸ್ ಮಾಡಲಲ್ಲ, ನಮ್ಮ ಮಾತುಗಳನ್ನು ನಾವು ಆಡೇ ಇಲ್ಲ ಎನ್ನುವಂತೆ ಹೇಗಿರುವುದು? ಎನ್ನುವುದು ನನ್ನ ಕಿತ್ತಾಟವಾಗಿತ್ತು. ಈ ವಿಷಯಕ್ಕೆ ಸುದೀರ್ಘವಾಗಿ ಚರ್ಚೆಯಾಗಿ, ಕೊನೆಗೆ ನಾನು ಮಾತ್ರ ಅವರಿಗೆ ನನ್ನ ಅಸಹಾಯಕತೆಯನ್ನು ಹೇಳಿ, ಈ ಕೆಲಸ ಮಾಡುತ್ತಿಲ್ಲ ಎಂದಿದ್ದೆ. ಉಳಿದವರು ಯಾವುದೇ ರೀತಿಯ ತಪ್ಪೊಪ್ಪಿಗೆ ಕೊಟ್ಟಿರಲಿಲ್ಲ.

ಈಗ ಫೇಸ್ಬುಕ್ಕಿನಲ್ಲಿ ಗಳಿಗೆಗೊಂದು ಸ್ಟೇಟಸ್ ಅಪ್ಡೇಟ್ ಆಗುವುದು, ಕಮೆಂಟ್ ಗಳು, ಕೊನೆಗೆ ಎಲ್ಲವೂ ಇದ್ದಕಿದ್ದಂತೆ ಮಾಯವಾಗಿಬಿಡುವುದನ್ನು ನೋಡಿದಾಗ, ಮತ್ತೊಂದಿಷ್ಟು ಮನಸ್ಸಿಗೆ ಕಿರಿಕಿರಿ, ಹೌದು, ಮಾತುಗಳಿಗೆ ಬದ್ಧತೆ ಬೇಕು, ಫೇಸ್ ಬುಕ್ ಸ್ಟೇಟಸ್ ಆಗಬಹುದು ಅಥವಾ ಇನ್ ಬಾಕ್ಸ್ ಮೆಸೇಜ್ ಆಗಬಹುದು! ಬೇರೆಯವರನ್ನು ಒಪ್ಪಿಸಲಲ್ಲ, ನಮ್ಮ ಮುಂದೆಯೇ ನಾವು ಬೀಳದಿರಲು! ಅಲ್ಲವೇ?

ಸ್ಪರ್ಧೆ ಎಲ್ಲಿಲ್ಲ? (ಡಬ್ಬಿಂಗ್ ಬೇಡಾ ಎಂದಾಗ ಬರೆದದ್ದು )

ನಮ್ಮ ಏರಿಯಾದಲ್ಲಿ ೯೬-೯೮ರಲ್ಲಿ ಇದ್ದಿದ್ದೇ ಒಂದು ಆಸ್ಪತ್ರೆ. ೩ ಕಿ.ಮೀ ದೂರದಲ್ಲಿ ಮತ್ತೊಂದು ಸಣ್ಣ ನರ್ಸಿಂಗ್ ಹೋಂ. ಈ ಆಸ್ಪತ್ರೆಯಲ್ಲಿ ಎರ್ರಾಬಿರ್ರಿ ಬಿಲ್ ಮಾಡತೊಡಗಿದಾಗ, ನಮ್ಮ ಕ್ಲಿನಿಕ್ ಗೆ ಬರ್ತಿದ್ದ ರೋಗಿಗಳಿಗೆ ಆಗುತ್ತಿದ್ದ ತೊಂದರೆ ನೋಡಿ ನಾವು ಒಂದು ನರ್ಸಿಂಗ್ ಹೋಂ ಶುರು ಮಾಡಿದೆವು. ನಮ್ಮಲ್ಲಿ ಕಡಿಮೆ ಚಾರ್ಜು ಇದ್ದುದರಿಂದ ಸಿಕ್ಕಾಪಟ್ಟೆ ಪೇಶಂಟ್ಸ್ ಕೂಡ ಬಂದರು. ನಮ್ಮಲ್ಲಿ ಕೆಲಸಕ್ಕೆಂದು ಬಂದ ಡಾಕ್ಟರ್ಸ್ ಪಕ್ಕದಲ್ಲೇ ಕ್ಲಿನಿಕ್ ಗಳು, ಕನ್ಸಲ್ಟೆಂಟ್ಸ್ ಹೊಸ, ಹೊಸ ಆಸ್ಪತ್ರೆಗಳನ್ನು ಕಟ್ಟೋಕೆ ಶುರು ಮಾಡಿದರು. ಕೆಲವರು ಉಳಕೊಂಡರು. ಕೆಲವು ಕ್ಲಿನಿಕ್ / ಆಸ್ಪತ್ರೆಗಳು ನಡೆಸಲಾಗದೇ ಮುಚ್ಚಿ ಹೋದವು. ನಮ್ಮ ಚಿಕ್ಕ ನರ್ಸಿಂಗ್ ಹೋಂ ಎದುರೇ ಮಲ್ಟಿ ಸ್ಪೆಷಾಲಿಟಿ ಡೇ ಕ್ಲಿನಿಕ್, ಆರ್ಥೋ ಸೆಂಟರ್, ೬೦ ಬೆಡ್ ಗಳ ಆಸ್ಪತ್ರೆ, ಪಕ್ಕದಲ್ಲೇ ಮತ್ತೊಂದು ಆಸ್ಪತ್ರೆ ಎಲ್ಲವೂ ಶುರು ಆದವು. ಇತ್ತೀಚೆಗೆ ಒಂದು ದೊಡ್ಡ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಶುರುವಾಗಿದೆ. ಎಡವಿ ಬಿದ್ದರೆ ಒಂದು ಕ್ಲಿನಿಕ್, ಆಸ್ಪತ್ರೆಗಳು ನಮ್ಮ ಏರಿಯಾದಲ್ಲಿ ಈ ೧೫ ವರ್ಷಗಳಲ್ಲಿ ಶುರುವಾಗಿವೆ. ಆಸ್ಪತ್ರೆಗಳು / ಕ್ಲಿನಿಕ್ ಗಳು ಇನ್ನು ಮುಂದೆ ಈ ಏರಿಯಾದಲ್ಲಿ ಬೇಡಾ, ನಮ್ಮ ಹೊಟ್ಟೆಗೆ ಹೊಡಿಬೇಡಿ, ಅಂತಾ ಯಾರಿಗೆ ನಿಷೇಧ ಹಾಕೋದು ನಾವು?  ಇದೆಲ್ಲಾ ಯಾಕೆ ಹೇಳ್ತಿದ್ದೀನಿ ಅಂದುಕೊಂಡ್ರಾ? ಡಬ್ಬಿಂಗ್ ಬಂದ್ರೆ ಕನ್ನಡ ಚಿತ್ರರಂಗದ ಕಥೆ ಅಷ್ಟೇ, ಕಲಾವಿದರ ಹೊಟ್ಟೆಗೆ ಹೊಡೀತೀವಿ, ನಾವು ಬೇರೆ ಭಾಷೆಗಳ ಎದುರು ನಿಲ್ಲೋಕೆ ಆಗೋಲ್ಲ ಅಂತಾ ಹೇಳ್ತಿರೋರಿಗೆ ಇದೊಂದು ಉದಾಹರಣೆಯಷ್ಟೇ!  ಎಲ್ಲಾ ಫೀಲ್ಡ್ ಗಳಲ್ಲೂ ಸ್ಪರ್ಧೆ ಇರೋದೇ! ಎದುರಿಸಬೇಕು ನಾವು. ಅವತ್ತಿಂದ ಇವತ್ತಿನ ತನಕ ನಮಗೆ, ನಮ್ಮ ಹೊಟ್ಟೆಗೆ!  ಇಷ್ಟೆಲ್ಲಾ ಆಸ್ಪತ್ರೆಗಳಾಗಿದ್ದರೂ ತೊಂದರೆಯಾಗಿಲ್ಲ ಅಂತಾ ಹೇಳೋಕಷ್ಟೇ.

ಅಮ್ಮನ ಹುಟ್ಟಿದ ಹಬ್ಬದ ದಿನ (ಅವಧಿಯಲ್ಲಿ ಬಂದದ್ದು)

ಅವತ್ತು ಯಾವತ್ತೋ ವಿಶ್ವ ಅಮ್ಮಂದಿರ ದಿನವಂತೆ! ನಮ್ಮ ಭಾರತದಲ್ಲಿ ಇರೋ, ಇಲ್ಲದೆ ಇರೋ ಮೂರು ಮುಕ್ಕಾಲು ಕೋಟಿ ದೇವತೆಗಳಿಗೊಂದು ಹಬ್ಬ ಮಾಡಿಕೊಂಡು, ಆ ಆಚರಣೆ, ಈ ಸಂಪ್ರದಾಯವೆಂದು ಬಂಧುಬಾಂದವರೆಲ್ಲರೂ ಒಡಗೂಡಿ ಹಬ್ಬಗಳನ್ನು ಸಂಭ್ರಮದಿಂದ ಆಚರಿಸುವಾಗ, ಈ ಅಪ್ಪಂದಿರ, ಅಮ್ಮಂದಿರ, ಪ್ರೇಮಿಗಳ ದಿನವೆಂದು ಬಲವಂತವಾಗಿ ನೆನಪಿಸಿಕೊಂಡು ಶುಭಾಶಯಗಳಿಗಷ್ಟೇ ಸೀಮಿತವಾಗಿಬಿಡುವ ಈ ಪಾಶ್ಚಾತ್ಯ ಅನುಕರಣೆ ನನಗೇನೂ ಅಷ್ಟೊಂದು ಇಷ್ಟವಿಲ್ಲ. ಸಂಬಂಧಗಳ ಬಗ್ಗೆ ಯಾವುದೇ ರೀತಿಯ ಭಾವನಾತ್ಮಕ ಒಡನಾಟ ಅಷ್ಟೇನೂ ಇರದ ಪಾಶ್ಚಾತ್ಯರಿಗೆ ಈ ದಿನಗಳೆಲ್ಲವೂ ಮುಖ್ಯವಾಗಿರಬಹುದೇನೋ? ಆದರೂ ನಮ್ಮ ಜನರೆಲ್ಲರೂ ಈ ಎಲ್ಲಾ ಪಾಶ್ಚಾತ್ಯ ದಿನಗಳಿಗೆ ಮುಗಿ ಬಿದ್ದು, ಶುಭಾಶಯಗಳನ್ನು ಹೇಳುವುದನ್ನು ಕಂಡಾಗ ನನಗೆ ಆಶ್ಚರ್ಯವಾಗುವುದು. ಅದರಲ್ಲೂ ಈ ಸಾಮಾಜಿಕ ಜಾಲತಾಣಗಳಿಗೆ ಜನರು ಆಕರ್ಷಿತರಾದ ಮೇಲಂತೂ, ಮನೆಯಲ್ಲೇ ಇರುವ ಗಂಡನಿಗೂ, ಮಕ್ಕಳಿಗೂ ಕೂಡ ಫ಼ೇಸ್ ಬುಕ್ ನಲ್ಲೇ ಮದುವೆಯ, ಹುಟ್ಟಿದ ಹಬ್ಬದ ಶುಭಾಶಯಗಳನ್ನು ಹೇಳುವುದನ್ನು ಕಂಡರೆ ಅಳುವುದೋ, ನಗುವುದೋ ನೀವೇ ಹೇಳಿ!
ಇದನ್ನೆಲ್ಲಾ ನಾನೇಕೆ ಇಂದು ಬರೆಯುತ್ತಿದ್ದೇನೆ? ವಿಶೇಷವಾಗಿ ಬಾಪು ಸತ್ತ ದಿವಸದಂದು! ಚಿಕ್ಕಂದಿನಲ್ಲಿ ಪರೀಕ್ಷೆಗೆ ಓದುವಾಗ, ನಾನೆಂದು ಗಾಂಧೀಜಿಯವರು ಸತ್ತದ್ದು ಜನವರಿ ೩೦ ರಂದು ಎಂದು ಬಾಯಿಪಾಠ ಮಾಡಿದ್ದೇ ಇಲ್ಲ. ಏಕೆಂದರೆ ಜನವರಿ ೩೦ ಅಮ್ಮ ಹುಟ್ಟಿದ ದಿವಸ! :-) ಪೋರ ಬಂದರಿನಲ್ಲಿ ಗಾಂಧೀಜಿಯವರ ಜನನ ಹಾಗೇ, ಹೀಗೆ ಎಂದೆಲ್ಲಾ ಆಗಾಗ ನೆನಪಿಸಿಕೊಳ್ಳುತ್ತಿದ್ದರೂ, ಸತ್ತದ್ದು ಎಂಬ ಪ್ರಶ್ನೆ ಮೂಡಿದ ಕೂಡಲೇ ಮುಖದಲ್ಲಿ ಮುಗುಳ್ನಗೆ ಮೂಡಿಬಿಡುತ್ತಿತ್ತು. ಈಗ ನನ್ನ ಮಕ್ಕಳಿಗೂ ಕೂಡ ಗಾಂಧೀಜಿ ಸತ್ತ ದಿವಸ ಎಂದರೆ ಅವರ ‘ದೊಡ್ಡ’ ಹುಟ್ಟಿದ ದಿವಸವೆಂದೇ ನೆನಪು! ಅಕ್ಕನ ಮಗಳು ಗಾಂಧಿ ಜಯಂತಿಯಂದು ಹುಟ್ಟಿದ ಮೇಲೆ, ಈ ಎರಡು ದಿನಗಳನ್ನು ನೆನಪಿಟ್ಟುಕೊಳ್ಳುವುದು ಸಲೀಸು! :-) ಬಹುತೇಕರ ಮನೆಯಲ್ಲಿ ಅಪ್ಪನನ್ನು ಬಹುವಚನದಲ್ಲಿಯೂ, ಅಮ್ಮನನ್ನು ಏಕವಚನದಲ್ಲಿಯೂ ಕರೆಯುತ್ತಾರೆ. ಆದರೆ ನಮ್ಮನೆಯಲ್ಲಿ ಅಮ್ಮನನ್ನು ಕೂಡಾ ಬಹುವಚನದಲ್ಲಿಯೇ ಮಾತನಾಡಿಸುತ್ತೇವೆ. ನನ್ನ ಶಾಲೆಯ ಗೆಳತಿಯರೆಲ್ಲರಿಗೂ ಇದೊಂದು ಬೆರಗು! :-)
ಅಮ್ಮನಿಗೆ ನಾವು ಒಟ್ಟು ಐದು ಜನ ಮಕ್ಕಳು. ನಾವೆಂದೂ ಆಕೆಯ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸಿದವರಲ್ಲ. ಆಗೊಂದು, ಈಗೊಂದು ತಮ್ಮ ಅಮ್ಮನ ಬಗ್ಗೆ, ಅಪ್ಪನ ಬಗ್ಗೆ, ಬಹಳಷ್ಟು ಲೇಖನಗಳು ಬರುತ್ತಿದ್ದನ್ನು ಓದುತ್ತಿದ್ದರೂ ಕೂಡ, ನಮಗೆಂದೂ ನಮ್ಮಮ್ಮನ ಬಗ್ಗೆ ಬರೆಯಬೇಕೆಂದು ಅಥವಾ ಹೇಳಿಕೊಳ್ಳಬೇಕೆಂದು ಅನಿಸಿರಲಿಲ್ಲ. ಇದನ್ನೆಲ್ಲಾ ಬರೆಯುವುದು ವೈಯಕ್ತಿಕ, ನಮ್ಮ ಬಗ್ಗೆಯೇ ಹೇಳಿಕೊಳ್ಳುವ ಹೆಚ್ಚುಗಾರಿಕೆ ಏಕೆ? ನಾವೇನೂ ಸೆಲೆಬ್ರಿಟಿಗಳೇ? ಎಂದೇ ನನ್ನ ಭಾವನೆಯಿತ್ತು. ಈಗ ಇದೆಲ್ಲವನ್ನೂ ಬರೆಯುತ್ತಿದ್ದೇನೆ ಎಂಬುದು ಕೂಡ ಯಾರಿಗೂ ತಿಳಿದಿಲ್ಲ. ಬಹುಶಃ ಗೊತ್ತಾಗಿದ್ದರೆ ಬಿಡುತ್ತಿದ್ದರೋ ಇಲ್ಲವೋ? ಅಮ್ಮನಿಗೆ ಇದು ನಿಜವಾಗಿಯೂ ಸರ್ಪ್ರೈಸ್. ಆದರೆ ಖುಷಿ ಪಡುತ್ತಾರೋ? ಹೆಮ್ಮೆ ಪಡುತ್ತಾರೋ? ಅಥವಾ ಯಾಕೆ ಬರೆಯೋಕೆ ಹೋದೆ? ಎಂದು ಬೇಸರಿಸುತ್ತಾರೋ? ಗೊತ್ತಿಲ್ಲ. ಆದರೂ ಆಕೆ ಬೇರೆಯವರಿಗೆ ಸೆಲೆಬ್ರಿಟಿ ಅಲ್ಲದಿದ್ದರೂ, ನನಗೆ, ಆಕೆಯ ಮಕ್ಕಳಿಗೆ, ಅವರು ದೊಡ್ಡ, ನಿಜವಾದ ಸೆಲೆಬ್ರಿಟಿ! ಹಾಗಾಗಿ ಅಮ್ಮನಿಗೊಂದು ನನ್ನ ಕಡೆಯಿಂದ ಹುಟ್ಟುಹಬ್ಬಕ್ಕೆ ಈ ಪುಟ್ಟ ಗಿಫ್ಟ್.
ಅಮ್ಮ ಎಂದ ಕೂಡಲೇ ನನಗೆ ಮೊದಲಿಗೆ ನೆನಪಾಗುವುದು ಸುಮಾರು ನನಗೆ ೫, ೬ ವರ್ಷಗಳಿದ್ದಾಗ ಶೃಂಗೇರಿಯ ಶಾರದಾಮಾತೆಯ?! (ನೆನಪಿಲ್ಲ) ಪಾದಗಳ ಫೋಟೋ ನಮ್ಮ ದೇವರ ಕೋಣೆಯಲ್ಲಿದ್ದದ್ದು! ಅದರ ಮೇಲೆ ಅಮ್ಮನವರ ಪಾದ ಎಂದು ಬರೆದಿತ್ತು. ನಾನು ಬೆಳಿಗ್ಗೆ ಎದ್ದ ಕೂಡಲೇ ಆ ಫೋಟೋಗೆ ಎದ್ದು ನಮ್ಮಮ್ಮನ ಪಾದಗಳೆಂದು ನಮಸ್ಕರಿಸುತ್ತಿದ್ದೆ. ಮನೆಗೆ ಬಂದವರೆಲ್ಲರಿಗೂ, ನಮ್ಮಮ್ಮನ ಪಾದಗಳೆಂದು ಹೇಳಿಯೇ, ಆ ಫೋಟೋವನ್ನು ಪರಿಚಯಿಸುತ್ತಿದ್ದೆ! ಎಲ್ಲರೂ ನಗುತ್ತಿದ್ದದ್ದು ಅರಿವಿಗೆ ಬಂದರೂ, ಯಾಕೆ ನಗುತ್ತಿದ್ದಾರೆ? ಎಂಬುದು ಅರ್ಥವಾಗುತ್ತಿರಲಿಲ್ಲ. ತದನಂತರ ೪, ೫ ನೇ ತರಗತಿಯವರೆವಿಗೂ ಯಾವುದೇ ಪರೀಕ್ಷೆ (ಕಿರು, ಅರೆ, ವಾರ್ಷಿಕ) ಗಳ ದಿವಸ, ಬಹಳ ಉತ್ಸಾಹದಲ್ಲಿ ಅಮ್ಮನಿಗೆ ನಮಸ್ಕಾರ ಮಾಡಿ ಹೋಗುತ್ತಿದ್ದದ್ದು! ಸ್ವಲ್ಪ ತಿಳುವಳಿಕೆ?! ಬಂದ ನಂತರ ಇದೆಲ್ಲಕ್ಕೂ ಫುಲ್ ಸ್ಟಾಪ್ ಬಿತ್ತು. ಆಗಲೋ, ಈಗಲೋ ಒಮ್ಮೊಮ್ಮೆ ಇದ್ದಕ್ಕಿದ್ದಂತೆ ಹಬ್ಬ, ಹರಿದಿನಗಳಂದು ನಮಸ್ಕಾರ ಮಾಡುವುದುಂಟು (ಮಕ್ಕಳಿಗೆ ಇದೆಲ್ಲವೂ ತಿಳಿದಿರಬೇಕು ಎನ್ನುವ ಕಾರಣಕ್ಕಾಗಿ)
ಅಮ್ಮ ಸ್ವಾತಂತ್ರ ಪೂರ್ವದಲ್ಲಿ ಹುಟ್ಟಿದವರು. ಸ್ವಾತಂತ್ರ್ಯ ಬಂದಾಗ ಬಹುಶಃ ಅವರಿಗೆ ೪ ವರ್ಷವೆನಿಸುತ್ತದೆ. ಅವರ ಅಕ್ಕನ ಶಾಲೆಯಲ್ಲಿ ಬೂಂದಿ ಕಾಳು ಕೊಟ್ಟಿದ್ದರೆಂದು ಅವರು ಹೇಳುತ್ತಿದ್ದ ನೆನಪು. ಅಮ್ಮನ ಅಣ್ಣ ಗಾಂಧಿ ತತ್ವಗಳಿಂದ ಆಕರ್ಷಿತರಾದವರು. ಅವರು ಚರಕ ತಂದು, ನೂಲನ್ನು ಕೂಡ ನೇಯುತ್ತಿದ್ದರಂತೆ. ಇವತ್ತಿಗೂ ಕೂಡ ಅಮ್ಮನ ಅಣ್ಣ ತನ್ನ ಕೆಲಸವನ್ನು ತಾನೇ ಮಾಡಿಕೊಳ್ಳಬೇಕು, ಯಾರ ಮೇಲೂ ಡಿಪೆಂಡ್ ಆಗಬಾರದೆಂದೇ ಬಯಸುವವರು. ಅಮ್ಮ ಕೂಡ ಅವರ ಅಣ್ಣನಂತೆಯೇ ಗಾಂಧಿ ತತ್ವಗಳಿಂದ, ಆದರ್ಶಗಳಿಂದ ಪ್ರೇರಿತರಾದವರು. ಅದಕ್ಕಿಂತಲೂ ಹೆಚ್ಚಿಗೆ ತನ್ನ ಅಣ್ಣನ ತತ್ವಗಳಿಂದ ಪ್ರೇರಿತರಾದವರು. ತನ್ನ ಆದರ್ಶವನ್ನು ತನ್ನ ತಂಗಿಯ ಮಕ್ಕಳು ಪಾಲಿಸುತ್ತಿದ್ದಾರೆಂದು ಮಾವನಿಗೆ ನಮ್ಮ ಮೇಲೆ ಪ್ರೀತಿ, ಅಮ್ಮನಿಗೆ ತನ್ನಣ್ಣನ ಮೆಚ್ಚಿಗೆ ಗಳಿಸಿರುವರೆಂಬ ಹೆಮ್ಮೆ. ನಾನೋ ಅಥವಾ ನನ್ನ ಮಕ್ಕಳು, ಮನೆಯ ಕೆಲಸದವಳಿಗೆ ನಾವು ಮಾಡಿಕೊಳ್ಳಬಹುದಾದ ಕೆಲಸವನ್ನು ಹೇಳಿದರೆ, ಅಮ್ಮನಿಗೆ ಸಿಡಿಮಿಡಿ. ‘ನಿಮ್ಮ ನಿಮ್ಮ ಕೆಲಸ ನೀವೇ ಮಾಡಿಕೊಳ್ಳಿ, ಯಾಕೆ ಬೇರೆಯವರ ಮೇಲೆ ಅವಲಂಬನೆಯಾಗ್ತೀರಿ’ ಎಂಬುವುದು ಅವರ ತರ್ಕ. ನನ್ನ ಕೈಕಾಲು ಗಟ್ಟಿಯಿರುವವರೆಗೂ ಯಾರ ಮನೆಯಲ್ಲಿ ತನ್ನ ಅಗತ್ಯವಿರುತ್ತದೆಯೋ (ಕೆಲಸ ಮಾಡಲು!) ಅಲ್ಲಿರುತ್ತೇನೆ. ಯಾರ ಮೇಲೂ ಭಾರವಾಗದೇ, ಹೀಗೆ ಕೆಲಸ ಮಾಡುತ್ತಿರುವಾಗಲೇ ತೀರಿಕೊಳ್ಳಬೇಕೆಂಬುದು ಅಮ್ಮನ ಜೀವನದ ಮಹದಾಸೆ :-)
ಆಗಿನ ಕಾಲದಲ್ಲಿ ‘ಅಮ್ಮ’ ಎಸ್ ಎಸ್ ಎಲ್ ಸಿ ಓದಿದ್ದು (ಹಾಗಂದರೆ, ಅವರ ರೆಡಿ ಉತ್ತರ ಅದು ಎಸ್ ಎಸ್ ಎಲ್ ಸಿ ಯಲ್ಲಾ, ಆಗ ೧೧ನೇ ತರಗತಿಯಿತ್ತು ಎಂಬುದು) ವಿಶೇಷ. ತುಳುನಾಡಿನಲ್ಲಿ ನಮ್ಮ ಜನರಲ್ಲಿ ವರದಕ್ಷಿಣೆ ಎಂಬ ಪಿಡುಗು ಇಲ್ಲದಿದ್ದರೂ, ಚಿನ್ನದ ಬಯಕೆ ಹೆಚ್ಚು. ಅಮ್ಮನನ್ನು ಮದುವೆ ಮಾಡಿಕೊಡುವಾಗ, ಅಮ್ಮನನ್ನು ನೋಡಲು ಬಂದವರೊಬ್ಬರೂ ‘ಚಿನ್ನ’ ಹೆಚ್ಚಿಗೆ ಕೇಳಿದರೆಂದು ಅಮ್ಮನ ಅಮ್ಮ ಆ ಹುಡುಗನನ್ನು ತಿರಸ್ಕರಿಸಿದ್ದರಂತೆ. ‘ನನ್ನ ಮಗಳನ್ನು ಎಸ್ ಎಸ್ ಎಲ್ ಸಿ ತನಕ ಓದಿಸಿರುವುದೇ ದೊಡ್ಡ ಬಂಗಾರ’ ಎಂದು ಹೇಳಿ ಅವರನ್ನು ವಾಪಾಸು ಕಳಿಸಿದ್ದರಂತೆ. ಅಪ್ಪ ನೋಡಲು ಚಂದವಿದ್ದುದರಿಂದ, ಬೆಂಗಳೂರಿನಲ್ಲಿ ಒಳ್ಳೆಯ ಕೆಲಸವಿದೆ ಎಂದು ಮದುವೆ ಮಾಡಿಕೊಟ್ಟರು. ಆದರೆ ಮದುವೆಯಾಗಿ ಬಂದ ನಂತರವೇ, ಅಪ್ಪನಿಗೆ ಸರಿಯಾದ ಕೆಲಸವಿಲ್ಲ ಎಂದು ತಿಳಿದ ಅಮ್ಮ, ನಂತರ ಜೀವನದಲ್ಲಿ ನೆಲೆಸಲು ಪಟ್ಟಿದೆಲ್ಲಾ ದೊಡ್ಡ ಪರಿಪಾಟಲು.
ತನ್ನ ಜೀವನದ ಅತ್ಯಂತ ಸಂಕಷ್ಟದ ದಿನಗಳಲ್ಲಿ, ನೆರೆಹೊರೆಯವರಿಗಾಗಲೀ ಅಥವಾ ನೆಂಟರಿಷ್ಟರಿಗಾಗಲೀ ಕೇರ್ ಮಾಡದೇ ಮಕ್ಕಳಿಗಾಗಿ ತನ್ನೆಲ್ಲಾ ಸುಖವನ್ನೂ ಧಾರೆಯೆರೆದದ್ದು ಅಮ್ಮ. ಅಮ್ಮ ತನ್ನೆಲ್ಲಾ ಕಷ್ಟಗಳನ್ನು ನೆಗ್ಲೆಕ್ಟ್ ಮಾಡಿದ್ದು, ನಮಗೋಸ್ಕರ, ನಮ್ಮನ್ನು ಒಂದು ನೆಲೆಗೆ ತರುವುದಕೋಸ್ಕರ. ಅಮ್ಮ ಹೊರಹೋಗಿ ದುಡಿಯುವುದು ಅಪ್ಪನಿಗಿಷ್ಟವಿಲ್ಲದ್ದರಿಂದ, ಮನೆಯಲ್ಲಿಯೇ ಕುಳಿತು, ಪುಡಿಗಾಸಿಗಾಗಿ ದುಡಿಯುತ್ತಿದ್ದರು. ಸಣ್ಣ ವಯಸ್ಸಿನಲ್ಲಿಯೇ ವಿಧವೆಯಾದ ಆಕೆ, ನಮ್ಮನ್ನು ಬೆಳೆಸಲು ಕಷ್ಟಪಟ್ಟದ್ದು ದೊಡ್ಡ ಸಾಹಸವೇ ಸೈ. ನಿಮಗೆ ವಿದ್ಯೆ ಕಲಿಸಿದ್ದು ಬಿಟ್ಟರೆ ನಾನ್ಯಾವ ಆಸ್ತಿಯನ್ನು ಕೊಡಲಿಲ್ಲ ಎಂದಾಕೆ ಒಮ್ಮೊಮ್ಮೆ ಕೊರಗುವುದ್ದಿದೆ. ಆಗೆಲ್ಲಾ ನಾವೆಲ್ಲರೂ ‘ನಾವು ಒಬ್ಬೊಬ್ಬರೂ ಇಷ್ಟು ಕೋಟಿ ಬಾಳುತ್ತಿದ್ದೇವೆ’ ಎಂದು ತಮಾಷೆ ಕೂಡ ಮಾಡುವುದಿದೆ. ಆಕೆಯೇ ತನ್ನೆಲ್ಲಾ ಈ ಜೀವನ ಚರಿತ್ರೆಯನ್ನು ಬರೆಯುತ್ತಿರುವುದರಿಂದ, ಆಕೆಯ ಜೀವನದ ಬಗ್ಗೆ ನಾನು ಬರೆಯುವುದು ಸರಿಯಾಗದು.
ಕೊನೆಯ ಮಗಳಾದ್ದರಿಂದ ಹಾಗೂ ಅಪ್ಪ ಬೇಗ ತೀರಿಕೊಂಡದ್ದರಿಂದ, ನಾನು ಅಮ್ಮನ ಮೇಲೆ ಎಲ್ಲಕ್ಕೂ ಭಯಂಕರ ಅವಲಂಬಿತಳಾಗಿದ್ದೆ. ಹಾಗಾಗಿ, ಆಕೆಯ ಪ್ರೀತಿ ಬೇರೆಯವರಿಗೆ ಹೋಲಿಸಿದರೆ ನನಗೊಂದಿಷ್ಟು ಹೆಚ್ಚೇ! ಆದರೂ ಒಮ್ಮೊಮ್ಮೆ ಮಕ್ಕಳಲ್ಲಿ ಆಕೆಗೆ ಯಾರ ಮೇಲೆ ಹೆಚ್ಚು ಪ್ರೀತಿ? ಎಂಬುವ ತರ್ಕ ಬಂದಾಗಲೆಲ್ಲಾ, ಅಮ್ಮ ಹೇಳುತ್ತಿದ್ದದ್ದು ಇಷ್ಟೇ – ಪ್ರೀತಿ ಎಲ್ಲರ ಮೇಲೂ ಸಮನಾಗಿಯೇ ಇರುತ್ತದೆ. ಆದರೆ ನನ್ನ ಮಕ್ಕಳಲ್ಲಿ ಯಾರಿಗೆ ಬೇರೆಯವರಿಗಿಂತ ಹೆಚ್ಚಿನ ಕಷ್ಟ ಇರುತ್ತದೆಯೋ ಅವರ ಮೇಲೆ ಒಂದಿಷ್ಟು ಹೆಚ್ಚಿನ ಗಮನವಿರುತ್ತದೆ. ಅದು ಪ್ರೀತಿ ಎನ್ನುವುದಕ್ಕಿಂತ ‘ಕಳಕಳಿ’ ಎನ್ನಬಹುದು ಎಂದುತ್ತರ ಅವರ ಬಳಿ ಯಾವಾಗಲೂ ರೆಡಿ! :-)ಆದರೂ ಅಮ್ಮನಿಗೆ ನನ್ನ ‘ದೊಡ್ಡಣ್ಣ’ನ ಮೇಲೆ ಹೆಚ್ಚಿನ ಪ್ರೀತಿ! ಎಂಬ ಗುಮಾನಿ ನಮ್ಮೆಲ್ಲರದು!
ವಿದ್ಯೆಯ ಬೆಲೆ ಅರಿತಿದ್ದ ಅಮ್ಮ, ಎಷ್ಟೇ ಬಡತನವಿದ್ದರೂ, ಪುಸ್ತಕಗಳನ್ನು ಕೊಳ್ಳಲು ತೊಂದರೆ ಮಾಡುತ್ತಿರಲಿಲ್ಲ. ಚಿಕ್ಕ ವಯಸ್ಸಿನಲ್ಲಿ ಮಾತೃ ಭಾಷೆಯಲ್ಲಿ ಮಕ್ಕಳು ವಿದ್ಯೆ ಕಲಿಯಬೇಕು, ನಂತರ ಹೈಸ್ಕೂಲಿಗೆ ಬಂದ ಮೇಲೆ ಇಂಗ್ಲೀಷ್ ಕಲಿಯಬಹುದು ಎಂದು ತನ್ನಣ್ಣ ಹೇಳಿದ ಮೇಲೆ, ನಾವೆಲ್ಲರೂ ೭ ನೇ ತರಗತಿಯವರೆಗೂ ಓದಿದ್ದು ಕನ್ನಡ ಶಾಲೆಯಲ್ಲಿಯೇ. ಶಾಲೆಗೆ ಹೋಗಿ ಕಲಿಯುವುದಕ್ಕಿಂತ ಹೆಚ್ಚಿಗೆ ಕಥೆ, ಕಾದಂಬರಿಗಳನ್ನು ಓದಿಯೂ ಕಲಿಯಬಹುದು ಎಂಬುದರ ಅರಿವಿದ್ದ ಅಮ್ಮ, ನಮಗೆಂದೂ ಯಾವುದೇ ಪುಸ್ತಕವನ್ನು ಓದಲು ತೊಂದರೆ ಮಾಡುತ್ತಿರಲಿಲ್ಲ. ಪರೀಕ್ಷೆಯ ದಿವಸವೂ ಕೂಡ ನಾವು ಮ್ಯಾಗಜೀನ್ ಗಳನ್ನು ಓದುತ್ತಿದ್ದೆವು. ಟಿವಿ ನೋಡುತ್ತಿದ್ದೆವು. ಅಮ್ಮನ ಡೈಲಾಗ್ ಇಷ್ಟೇ ‘ನೀವು ಓದುವುದು ನಿಮಗಾಗಿ, ನಿಮ್ಮ ಒಳಿತಿಗಾಗಿ’. ನಮಗೆ ಇಷ್ಟೇ ಸಾಕಿತ್ತು. ಪರೀಕ್ಷೆ ಸಮಯದಲ್ಲೂ ಕೂಡ ಇವರು ಇನ್ನಿತರ ಪುಸ್ತಕಗಳನ್ನು ಓದುತ್ತಾರೆ / ಅವರಮ್ಮ ಬಿಡುತ್ತಾರೆ!, ಎಂಬುದು ನಮ್ಮ ಕಸಿನ್ ಗಳಿಗೆ ಆಶ್ಚರ್ಯದ ವಿಷಯವಾಗಿತ್ತು. ಇದೇ ನಿಯಮವನ್ನು ನಾನೀಗ ನನ್ನ ಮಕ್ಕಳಿಗೂ ಕೂಡ ಪಾಲಿಸುತ್ತಿದ್ದೇನೆ. ಯಾವುದೇ ಪರೀಕ್ಷೆಯ / ಮಾರ್ಕುಗಳ ಒತ್ತಡವಿಲ್ಲದೆ, ಕೇವಲ ಓದಿಗಾಗಿ, ಓದಿನ ಪರೀಕ್ಷೆಗಾಗಿ ನನ್ನ ಮಕ್ಕಳು ಕೂಡ ಪರೀಕ್ಷೆ ಬರೆಯುತ್ತಿದ್ದಾರೆ! ;)
ಅಮ್ಮನಲ್ಲಿ ನನಗಿಷ್ಟವಾಗುವ ಗುಣ ‘ಯಾವುದೇ ವಸ್ತುವನ್ನು ಹಾಳು ಮಾಡದಿರುವುದು’. ಇವತ್ತಿಗೂ ಕೂಡ ತನ್ನಪ್ಪನನ್ನು ನೆನಪಿಸಿಕೊಳ್ಳುತ್ತಲೇ, ಎಲ್ಲಾ ವೃತ್ತಪತ್ರಿಕೆಗಳನ್ನೂ ಎತ್ತಿಟ್ಟು, ಪೇಪರ್ ನವನು ಬಂದಾಗ ಕೊಡುವುದು. ಅಮ್ಮನ ಅಣ್ಣನಿಗೆ ಪೇಪರ್ ಹಾಳು ಮಾಡುವುದು ಇಷ್ಟವಾಗುತ್ತಿರಲಿಲ್ಲವಂತೆ. ನಾವ್ಯಾರೂ ಎಂದಿಗೂ ಪೇಪರ್ ಅಥವಾ ಯಾವುದೇ ಹಾಳೆಯನ್ನು ಹರಿಯುವುದು ಮಾಡುತ್ತಿರಲಿಲ್ಲ. ಅಮ್ಮನಿಗಿದು ಯಾವಾಗಲೂ ಹೆಮ್ಮೆಯ ವಿಷಯ. ಆಕೆಯ ಮತ್ತೊಂದು ಗುಣ, ನೀರು ವೇಸ್ಟ್ ಮಾಡದಿರುವುದು. ಅಕ್ಕಿ ಬಸಿದ ನೀರು, ತರಕಾರಿ ತೊಳೆದ ನೀರು ಎಲ್ಲವನ್ನೂ ಮುಂಚೆ ಒಂದು ಬಕೆಟ್ಟಿನಲ್ಲಿ ಸಂಗ್ರಹಿಸಿ, ಮನೆಯ ಮುಂದೆ ಬರುವ ಹಸುವಿಗೆ ಕೊಡುತ್ತಿದ್ದರು. ಆದರೆ ಈಗ ಯಾವುದೇ ಹಸುಗಳು ಮನೆಯ ಮುಂದೆ ಬರುವುದಿಲ್ಲವಾದ್ದರಿಂದ, ಅದನೆಲ್ಲವನ್ನೂ ಸಂಗ್ರಹಿಸಿ, ಗಿಡಗಳಿಗೆ ಉಣಿಸುವುದು ಆಕೆಯ ಅತ್ಯಂತ ಪ್ರಿಯವಾದ ಹವ್ಯಾಸ. ಪ್ರತಿ ಬಾರಿಯೂ ಬಕೆಟ್ ತುಂಬಿದ ತಕ್ಷಣ, ಅದನ್ನು ಕೆಳ ಮಾಳಿಗೆಗೆ ಕೊಂಡು ಹೋಗುವುದನ್ನು ನೋಡಲಾರದೇ, ನಾನು ನನ್ನ ಮನೆ ಕಟ್ಟುವಾಗ ವೇಸ್ಟ್ ವಾಟರ್ ಪ್ಲಾಂಟ್ ಕಟ್ಟಿಬಿಟ್ಟೆ!
ಮತ್ತೊಂದು ಆಕೆಯ ಗುಣ ‘ಬೇರೆಯವರಿಗೆ ತೊಂದರೆ ಮಾಡದಿರುವುದು’, ಈ ‘ತೊಂದರೆ ಮಾಡದಿರುವುದು’ ಎನ್ನುವ ಪಾಲಿಸಿಯೇ, ಬಹಳಷ್ಟು ಬಾರಿ ನಮಗೆಲ್ಲಾ ತೊಂದರೆ ಮಾಡಿರುವುದು ಸುಳ್ಳಲ್ಲ! :-) ಆಗೆಲ್ಲಾ ನಾವು ಕೋಪ ಮಾಡಿಕೊಂಡು ಕೂಗಾಡಿದರೂ, ಒಳ ಮನಸ್ಸಿನಲ್ಲಿ ‘ಪಾಪ, ಅಮ್ಮನದೇನು ತಪ್ಪು? ತೊಂದರೆ ಮಾಡಬಾರದೆಂದೇ ಅವರು ಹಾಗೆ ನಡೆದುಕೊಂಡಿದ್ದಾರೆ, ನಾನು ಹೀಗೆ ಕೂಗಾಡಬಾರದಿತ್ತು’ ಎಂದೆಲ್ಲಾ ಅನಿಸಿ, ಭಯಂಕರ ಗಿಲ್ಟ್ ಕಾಡಿಬಿಡುತ್ತಿತ್ತು. ಈ ‘ತೊಂದರೆ ಮಾಡದಿರುವುದು’ ಗುಣದ ಮತ್ತೊಂದು ರೂಪ, ‘ಅರ್ಜೆಂಟ್’. ಮನೆಯಲ್ಲಿ ೫ ಜನ ಮಕ್ಕಳು, ಜೊತೆಗೆ ಎಲ್ಲಾ ಕೆಲಸಗಳನ್ನು ಅವರೇ ಮಾಡಿಕೊಳ್ಳಬೇಕಾಗಿದ್ದರಿಂದ ಬೇಗ, ಬೇಗ ಮಾಡಿಬಿಡುವುದು ಅವರಿಗೆ ಅಭ್ಯಾಸವಾಗಿಬಿಟ್ಟಿತ್ತು. ಆದರೆ ನಾನೋ ತದ್ವಿರುದ್ದ! ಸ್ವಲ್ಪ ನಿಧಾನ. ‘ಹೋದ ಮನೆಯಲ್ಲೂ ಹೀಗೆ ಮಾಡು’ ಎಂದು ಎಷ್ಟು ಸಲ ಅವರ ಬಳಿ ಈ ವಿಷಯದಲ್ಲಿ ಬೈಸಿಕೊಂಡಿದ್ದೇನೋ? ಲೆಕ್ಕವೇ ಇಲ್ಲ. ಆಗೆಲ್ಲಾ ಅಮ್ಮನ ತರಹದ ಅರ್ಜೆಂಟ್ ಅತ್ತೆ ಸಿಗಬಾರದು ಎಂದು ನಾನು ಕೂಡ ಬೈದುಕೊಂಡಿದ್ದೇನೆ. ನಾನು ಹೊಕ್ಕಿರುವ ಮನೆಯವರು, ನನಗಿಂತಲೂ ನಿಧಾನ ಆಗಿರುವುದರಿಂದ, ಅಮ್ಮನಂತಹ ಅರ್ಜೆಂಟ್ ಅತ್ತೆ ಸಿಗಲಿಲ್ಲ. ಏನು ಅರ್ಜೆಂಟ್ ಮಾಡ್ತಿ? ಎಂದು ಇವರು ಬೈದಾಗಲೆಲ್ಲಾ, ನನ್ನ ಮುಖದಲ್ಲೊಂದು ಮುಗುಳ್ನಗೆ! :-)
ಸುಳ್ಳು ಹೇಳದಿರುವುದು, ಪ್ರಾಮಾಣಿಕತೆಯ ಬೆಲೆ, ಹಣದ ಮೌಲ್ಯ ಇವೆಲ್ಲವನ್ನೂ ಅಮ್ಮ ತಾನು ಪಾಲಿಸಿದ್ದಲ್ಲದೇ, ನಮಗೂ ಕೂಡಾ ಜೊತೆಗೆ ಈಗ ನಮ್ಮ ಮಕ್ಕಳಿಗೂ ಹೇಳಿಕೊಡುತ್ತಿರುವುದನ್ನು ನೋಡಿದಾಗ ಬಹಳ ಖುಷಿಯಾಗುತ್ತದೆ. ‘ಸುಖಕ್ಕೆ ಹೊಂದಿಕೊಂಡ ಜೀವ, ಕಷ್ಟ ಬಂದರೆ ತಡೆದುಕೊಳ್ಳಲಾರದು, ಆದರೇ ಕಷ್ಟದ ಅರಿವಿದ್ದರೆ, ಸುಖಕ್ಕೆ ಹೊಂದಿಕೊಳ್ಳುವುದು ಸುಲಭ ’ ಎನ್ನುತ್ತಾ, ನಮ್ಮೆಲ್ಲರನ್ನೂ ಯಾವುದೇ ವಾತಾವರಣಕ್ಕೆ ಹೊಂದಿಕೊಳ್ಳುವಂತೆ ಬೆಳೆಸಿದರು. ಈಗ ನಾವೆಲ್ಲರೂ ಆರಾಮದಾಯಕ ಜೀವನ (ಆಕೆಯಿಂದಾಗಿಯೇ) ನಡೆಸುತ್ತಿದ್ದರೂ, ತಾನು ಮಾತ್ರ ಈಗಲೂ ಬಸ್ಸಿನಲ್ಲಿಯೇ ನೆಂಟರಿಷ್ಟರ ಮನೆಗೆ ಓಡಾಡುತ್ತಾ, ಎರಡು, ಮೂರು ಸ್ಟಾಪ್ ಗಳಾದರೆ ನಡೆಯುತ್ತಲೇ ಹಣವನ್ನು ಉಳಿಸುತ್ತಾ, ‘ನಾನು ಆ ಹಣವನ್ನು ಉಳಿಸಿದರೆ, ಅದು ಯಾರದೋ ಕಷ್ಟಕ್ಕಾಗುವುದು’ ಎನ್ನುತ್ತಾ, ನೆಂಟರಿಷ್ಟರು ಯಾರಾದರೂ ಹಣಕಾಸಿನ ತೊಂದರೆಯಲ್ಲಿದ್ದರೆ, ತಾನುಳಿಸಿದ ಈ ಹಣವನ್ನು ಅವರಿಗೆ ನೀಡುತ್ತಾ, ಒಮ್ಮೊಮ್ಮೆ ನನಗೆ ಸಿಟ್ಟು ಬಂದರೂ, ಯೋಚಿಸಿ ನೋಡುವಾಗ, ಯಾವುದೇ ಸಿದ್ಧಾಂತಗಳ ಹಾವಳಿಯಿಲ್ಲದೆ, ದೊಡ್ಡ, ದೊಡ್ಡ ಮಾತುಗಳಿಲ್ಲದೆ, ತಣ್ಣಗೆ ಆಕೆ ಮಾಡುತ್ತಿರುವ ಸಮುದಾಯದ ಒಳಿತನ್ನು ನೋಡಿದಾಗ ಹೆಮ್ಮೆಯಾಗುತ್ತದೆ.
ಲೈಫ್ ಆಫ್ ಪೈ ಚಿತ್ರ ನೋಡಿದಾಗಿನಿಂದ ಒಂದೇ ಸಮನೆ ನನಗೆ ಕಾಡಿದ್ದು ಅಪ್ಪ, ಅಮ್ಮ. ಅದ್ರಲ್ಲೂ ಮುಖ್ಯವಾಗಿ ಅಮ್ಮ ನಮ್ಮ ಜೀವನದಲ್ಲಿ ಎಂತಹ ಪ್ರಮುಖ ಪಾತ್ರ ವಹಿಸುತ್ತಾಳೆ ಅಲ್ಲವೇ? ಎಂಬುದು. ಆ ಚಿತ್ರದ ನಾಯಕ ತನ್ನ ಜೀವನದುದ್ದಕ್ಕೂ, ಎಂತಹ ಕಷ್ಟ ಬಂದರೂ, ಒಂಟಿಯಾಗಿಬಿಟ್ಟರೂ ತನ್ನಮ್ಮ ಹೇಳಿಕೊಟ್ಟ ಪಾಠಗಳನ್ನೇ ಉಪಯೋಗಿಸುತ್ತ, ಜೀವನದಲ್ಲಿ ಜಯಶಾಲಿಯಾಗುತ್ತಾನೆ. ಅದು ತಪ್ಪೋ, ಸರಿಯೋ ಎನ್ನುವ ಯಾವ ಜಿಜ್ಞಾಸೆಯೂ ಇಲ್ಲದೇ, ಆತ ತನ್ನಮ್ಮನ ಮಾತುಗಳನ್ನು ಸಂಪೂರ್ಣವಾ ಗಿ ನಂಬಿಬಿಡುತ್ತಾನೆ. ಚಿತ್ರ ನೋಡುತ್ತಾ, ನೋಡುತ್ತಾ, ನನ್ನ ಅಮ್ಮ ನನ್ನ ಮೇಲೆ ಬೀರಿದ ಪ್ರಭಾವ ಎಂತಹುದು? ಎಂದು ಯೋಚಿಸಿದಾಗ ಅನ್ನಿಸಿದ್ದು ಇಷ್ಟೇ – ನನ್ನಮ್ಮ ಎಂದಿಗೂ ತನಗಿದ್ದ ಬಂಧುಬಾಂದವರ ಮೇಲಿನ ಸಿಟ್ಟಾಗಲೀ, ದ್ವೇಷವಾಗಲೀ, ಅಸೂಯೆಯಾಗಲೀ, ಇಂತಹ ಯಾವುದೇ ನೆಗಟಿವ್ ಅಂಶಗಳನ್ನು ಮಕ್ಕಳಿಗೆಂದಿಗೂ ತಿಳಿಸುತ್ತಿರಲಿಲ್ಲ. ತನ್ನ ಅಭಿಪ್ರಾಯ ಮಂಡಿಸುವಾಗ ಆಕೆ ಹೇಳುತ್ತಿದ್ದದ್ದು ಇಷ್ಟೇ – “ನನಗೆ ಇವರ ಬಗ್ಗೆ ಹೀಗನ್ನಿಸುತ್ತಿದೆ, ಬಹುಶಃ ನನ್ನ ಅನಿಸಿಕೆ ತಪ್ಪಿರಬಹುದು, ನೀವು ಯೋಚಿಸಿ ನಿರ್ಧರಿಸಿ!” ಹಾಗಾಗೀ ನಾವು ಯಾರ ಬಗ್ಗೆಯೂ, ಯಾವುದೇ ಪೂರ್ವಾಗ್ರಹ ಪೀಡಿತರಾಗದೇ, ನಮ್ಮಷ್ಟಕ್ಕೇ ನಾವೇ ಮನುಷ್ಯರನ್ನು ಅರ್ಥ ಮಾಡಿಕೊಳ್ಳುತ್ತಾ ಹೋದೆವು. ಈಗಲೂ ನಾವು ಯಾವುದೇ ವಿಷಯವನ್ನು ಮಾತಾಡುವಾಗ, ಪೂರ್ವಾಗ್ರಹ ಪೀಡಿತರಾಗದೇ ಮಾತನಾಡಲು ಅಮ್ಮನೇ ಕಾರಣ.
ಇನ್ನೂ ಬಹಳಷ್ಟು ಆಕೆಯ ಬಗ್ಗೆ ಬರೆಯುವುದಿದೆ. ಮತ್ತೊಮ್ಮೆ ಸಮಯವಾದಾಗ ಬರೆಯುತ್ತೇನೆ. ಜೀವನದಲ್ಲಿ ನಾವು ಇಷ್ಟು ಮುಂದೆ ಬಂದಿದ್ದರೆ, ನಾವೀಗ ನಡೆಸುತ್ತಿರುವ ಆರಾಮದಾಯಕ, ಐಷಾರಾಮದ ಜೀವನ, ಪಾಲಿಸುತ್ತಿರುವ ಮೌಲ್ಯಗಳು ಎಲ್ಲಕ್ಕೂ ಅವರೇ ಕಾರಣ. ಮನೆಯೇ ಮೊದಲ ಪಾಠಶಾಲೆ, ತಾಯಿಯೇ ಮೊದಲ ಗುರು ಎಂಬ ಗಾದೆ ಮಾತನ್ನು ಅಕ್ಷರಶಃ ಪಾಲಿಸಿದ ಆಕೆ, ಈಗ ಮೊಮ್ಮಕ್ಕಳಿಗೂ ಕೂಡ ಗುರುವಾಗಿರುವುದು ನನ್ನ ಭಾಗ್ಯ!. ‘ಅಜ್ಜಿ ಸಾಕಿದ ಮಗು’ ಎಂಬಂತೆ ಆಗಬೇಡಿರೋ ಎಂದು ನನ್ನ ಮಕ್ಕಳಿಗೆ ಹೇಳುತ್ತಲೇ, ಮಕ್ಕಳಿಗೆ ನನಗಿಂತಲೂ ಹೆಚ್ಚಿಗೆ ಅಮ್ಮನಾಗಿದ್ದಾರೆ. ಅಮ್ಮನ ಕೈಲಿ ಬೆಳೆದ, ಬೆಳೆಯುತ್ತಿರುವ ಅದೃಷ್ಠಶಾಲಿ ಮೊಮ್ಮಕ್ಕಳು, ನನ್ನ ಮಕ್ಕಳು. ಹೊಸ ಚಿಗುರು, ಹಳೆ ಬೇರು ಕೂಡಿರಲು ಮರ ಸೊಗಸು ಎಂಬಂತಿದೆ ನಮ್ಮ ಮನೆ! :-) ಹುಟ್ಟುಹಬ್ಬದ ಶುಭಾಶಯಗಳು ಹೇಳುವುದು ಕೃತಕ ಎಂಬುದು ಯಾವಾಗಲೂ ಅಮ್ಮನ ಹೇಳಿಕೆ. ೭೦ವರ್ಷ ತುಂಬುತ್ತಿರುವ ಈ ಹೊತ್ತಿನಲ್ಲಿ, ನನ್ನ ಕಿರಿ ಮಗ ಯಾವಾಗಲೂ ಹೇಳುವಂತೆ, ಅವನ ಮಗ ಹುಟ್ಟುವವರೆಗೂ ಅಮ್ಮ ನಮ್ಮೊಂದಿಗೆ ಇರಲಿ, ಕೈಕಾಲು ಗಟ್ಟಿಯಾಗಿಯೇ ಇರಲಿ! :-)

Tuesday, August 5, 2014

ನೊಣ ಮತ್ತು ಸೊಳ್ಳೆ ಕಥೆ!


ಸೊಳ್ಳೆ ಕಥೆ! 

ಒಂದಾನೊಂದು ಕಾಲದಲ್ಲಿ ಜಗತ್ತು ಬಹಳ ಶಾಂತವಾಗಿತ್ತು. ನಮ್ಮೊಳಗಿರುವ ಗಲೀಜಿನಿಂದಲೋ ಅಥವಾ ವಿದೇಶಿಯರ ಕೈವಾಡದಿಂದಲೋ?! ಒಂದಷ್ಟು ಸೊಳ್ಳೆಗಳು ಸೃಷ್ಠಿಯಾದವು. ಈ ಸೊಳ್ಳೆಗಳು ತಮ್ಮ ಸಂತಾನಾಭಿವೃದ್ಧಿಗಾಗಿಯೇ ರಕ್ತ ಹೀರುವ ಉದ್ದೇಶವನ್ನು ನಂಬದ ಜನರು, ಸೊಳ್ಳೆಗಳ ಈ ಆಟಾಟೋಪಕ್ಕೆ ಏನೇನೋ ಹೆಸರಿಟ್ಟರು. ರೈಟಿಸ್ಟ್ ಗಳು ಇವೆಲ್ಲಾ ಲೆಫ್ಟಿಸ್ಟ್ ಗಳ ಹುನ್ನಾರವೆಂದೂ, ಲೆಫ್ಟಿಸ್ಟ್ ಗಳು ರೈಟಿಸ್ಟ್ ಗಳ ಆಷಾಢಭೂತಿತನವನ್ನು, ಲೆಫ್ಟಿಸ್ಟ್ ಗಳ ಒಳಗಿರುವ ರೈಟಿಸ್ಟ್ ಗಳನ್ನು, ರೈಟಿಸ್ಟ್ ಗಳ ಒಳಗಿರುವ ಲೆಫ್ಟಿಸ್ಟ್ ಗಳನ್ನು ಹೀಗಳೆಯುತ್ತಾ ಕುಳಿತರು. ಸೊಳ್ಳೆಗಳ ನಿರ್ಮೂಲನಕ್ಕೆಂದು ಒಂದಷ್ಟು ಗುಂಪುಗಳು ಈ ಜನರ ಮಧ್ಯೆಯೇ ರಚಿತವಾದವು. ಆ ಗುಂಪುಗಳು ಕಳಪೆಮಟ್ಟದ ಸ್ಪ್ರೇಗಳನ್ನು ಕೊಂಡುಕೊಂಡದ್ದರಿಂದ, ಸೊಳ್ಳೆಗಳು ಅವುಗಳನ್ನು ತಿಂದು, ತೇಗಿ ಇನ್ನಷ್ಟು ಕೊಬ್ಬಿದವು. ಇನ್ನೂ ನನ್ನಂತಹ ಒಂದಷ್ಟು ಜನರು, ಸೊಳ್ಳೆಗಳನ್ನು ಹೊಡೆದು ಕೊಂದರೆ ಲೆಫ್ಟಿಸ್ಟ್ ಗಳಾಗಿಬಿಡುವುದು ಅಥವಾ ಸೊಳ್ಳೆ ಪರದೆ ಹಾಕಿ ಕೂತರೆ ರೈಟಿಸ್ಟ್ ಗಳಾಗಿಬಿಡುವುದರ ಮರ್ಮದ ರಹಸ್ಯ ಬೇಧನ ಮಾಡಲು ಹೊರಟು, ಸೊಳ್ಳೆಗಳ ಉದ್ದೇಶವನ್ನು ಅರಿತು ಹತಾಶಗೊಂಡರು. ಸೊಳ್ಳೆಗಳನ್ನು ನಿರ್ಮೂಲನ ಮಾಡುವುದಷ್ಟೇ ನಮ್ಮ ಉದ್ದೇಶವಾಗಿರಬೇಕು ಎಂಬುದನ್ನು ಸಾರಿ, ಸಾರಿ ಹೇಳಿದರೂ ಜನರು ನಂಬದೇ, ಹೀಗೇ ಹೇಳಿದವರನ್ನು ಕೂಡ ತಮಗೆ ತೋಚಿದ ಗುಂಪಿಗೆ ಸೇರಿಸುತ್ತಾ, ಬ್ರಾಂಡ್ ಮಾಡುತ್ತಾ ಹೊರಟರು.

ಮುಂದಾ?


ಏನೂ ಇಲ್ಲ, ಸದ್ಯಕ್ಕಿರುವ ಕೃತಕ ಸಲ್ಯೂಷನ್ - ವಾತಾವರಣದಲ್ಲಿ ಬಿಸಿ ಹೆಚ್ಚಿರುವುದರಿಂದ, ಕೃತಕ ಏರ್ ಕಂಡೀಷನರ್ ಬಳಸಿ, ವಾತಾವರಣವನ್ನು ತಂಪಾಗಿಸಿಕೊಂಡು, ಹೊದಿಕೆ ಹೊದ್ದು, ಸೊಳ್ಳೆಗಳೇ ಇಲ್ಲವೆಂದು ನಮ್ಮನ್ನು ನಾವೇ ನಂಬಿಸಿಕೊಳ್ಳುತ್ತಾ ಸುಮ್ಮನೆ ಕೂರುವುದೊಂದೇ ಉಪಾಯ  — feeling ತಂಪು, ತಂಪು, ಕೂಲ್, ಕೂಲ್! ಎಂಥ ಹಾಟ್ ಮಗಾ?! :-).


ಜಗತ್ತಿನಲ್ಲಿ ಸೊಳ್ಳೆಗಳ ಹುಟ್ಟಿನ ಬಗ್ಗೆ, ಅವುಗಳ ದಾಂಧಲೆ ಬಗ್ಗೆ ಹೇಳಿದ್ದೆ ಅಲ್ವಾ? ಇವತ್ತು ನೊಣಗಳ ಕಥೆ ನೋಡೋಣ 
ಗಲೀಜು ಇರುವೆಡೆ ನೊಣಗಳು ಕೂಡ ಇದ್ದೇ ಇರುತ್ತಲ್ಲವೇ? ಅವುಗಳಿಗಂತೂ ಸುಮಾರು ೬೫ ಮಿಲಿಯನ್ ವರ್ಷಗಳ ಇತಿಹಾಸವಿದೆಯಂತೆ! ನೊಣಗಳು ಬದುಕುವುದಾದರೂ ಹೇಗೆ? ಹೇಸಿಗೆ ತಿಂದು, ತೇಗಿದರೇ ಮಾತ್ರ ಬದುಕುತ್ತವೆ. ಹಾಗಾಗಿ ಎಲ್ಲಿ ಹೇಸಿಗೆ, ಕಸ, ಗಲೀಜು ತುಂಬಿರುತ್ತದೆಯೋ ಅಲ್ಲೆಲ್ಲಾ, ನೊಣಗಳ ಹಾವಳಿ ವಿಪರೀತ. ನೊಣಗಳ ಹಾವಳಿ ತಪ್ಪಿಸಲು ನಮ್ಮ ಮನೆ ಅಂಗಳ ಸ್ವಚ್ಛವಾಗಿಟ್ಟುಕೊಳ್ಳಬೇಕೇ ಹೊರತು, ನೊಣಗಳನ್ನು ದೂಷಿಸುವುದಲ್ಲ ಅಲ್ಲವೇ?

ಸೊಳ್ಳೆಗಳಿಗೆ ನೊಣಗಳನ್ನು ಕಂಡರೆ ಅಸೂಯೆ, ಈ ನೊಣಗಳು ಗಟ್ಟಿಗರು, ನಮ್ಮಷ್ಟು ಸುಲಭವಾಗಿ ಸಾಯುವವರಲ್ಲ, ಸಂಗೀತ ಹಾಡುತ್ತಾ ಜನರನ್ನು ಮರುಳು ಮಾಡುತ್ತಾ ರೋಗಗಳನ್ನು ಎಷ್ಟು ಸುಲಭವಾಗಿ ಹರಡಿಬಿಡುತ್ತವೆ, ಆದರೆ ನಾವು ಜನರ ರಕ್ತ ಹೀರಲೇ ಬೇಕು, ಹಾಗಾಗಿ ನಮ್ಮ ಕೆಲಸ ಕಷ್ಟ ಎಂಬುದು ಸೊಳ್ಳೆಗಳ ಆಗ್ರಹ. ಇಡೀ ಜಗತ್ತಿನ ಹೇಸಿಗೆಯನ್ನು ತಿಂದು, ಸ್ವಚ್ಛ ಮಾಡುತ್ತಿದ್ದೇವೆಂಬ ಅಹಂ ನೊಣಗಳದ್ದು. ಆದರೆ ನಮ್ಮ ಜನರೋ ತಮ್ಮ ತಮ್ಮ ಮನೆಯ ಗಲೀಜನ್ನು ಸ್ವಚ್ಛಗೊಳಿಸದೇ, ಮತ್ತೊಬ್ಬರ ಮನೆಯ ಕಾಂಪೌಂಡ್ ನೋಡುತ್ತಾ ಕುಳಿತಿರುವುದು, ಹಾಗೂ ಇದರಿಂದ ಇನ್ನಷ್ಟು ಸೊಳ್ಳೆ, ನೊಣಗಳ ಹುಟ್ಟಿಗೆ ಕಾರಣವಾಗುತ್ತಿರುವುದು ಬೇಸರದ ಸಂಗತಿ

ಸಾಂಕ್ರಮಿಕ ರೋಗಗಳು ಇಬ್ಬರಿಂದಲೂ ಹರಡುತ್ತಿವೆ, ಇವರಿಬ್ಬರನ್ನೂ ನಿರ್ಮೂಲನಗೊಳಿಸಬೇಕು, ಮತ್ತು ಹೇಗೆ? ಎಂಬುದರ ಬಗ್ಗೆ ಚರ್ಚೆಯಾಗದೇ, ಸೊಳ್ಳೆಗಳ ಶಕ್ತಿ ಹೆಚ್ಚೊ? ನೊಣಗಳದ್ದೋ? ಎಂಬ ಚರ್ಚೆಯಾಗುತ್ತಿರುವುದು ನಿಜವಾಗಿಯೂ ಶೋಚನೀಯ ಪರಿಸ್ಥಿತಿ ! 
ಭಾಗ ೨

 ‘x' ಎಂದರೆ ಅಸಹ್ಯ, ಕ್ರೂರ, ಭೀಬತ್ಸ. ಹಾಗೆಯೇ ‘D' ಎಂದರೆ ಅಸಹನೆ, ನಿಂದನೆ, ದಬ್ಬಾಳಿಕೆ.  ಸೊಳ್ಳೆಯೊಂದಕ್ಕೆ ‘x' ಎಂದು ಹೇಳಿದರೆ ಮರ್ಮಾಘಾತವಾಗುವುದು.  ಹಾಗೆಯೇ ನೊಣಕ್ಕೆ ‘D' ಎಂದರೆ ತಡೆಯಲಾರದಷ್ಟು ಸಿಟ್ಟು ಬರುವುದು.  ಹೀಗಿದ್ದಾಗ ಸುಖಾಸುಮ್ಮನೆ ಸೊಳ್ಳೆಯೊಂದು ನೊಣಕ್ಕೆ ‘D' ಎಂದಿತು. ನೊಣವು ನನ್ನನ್ನು ‘D’ ಎನ್ನುತ್ತೀಯೇ? ಹಾಗಾದರೆ ನೀನು ‘x' ಎಂದಿತು.  ‘x' ಎಂದರೆ ಸೊಳ್ಳೆಗೆ ಆಘಾತವಾಗುವುದು ಎಂದು ತಿಳಿದೇ ಹೇಳಿತು. ನಂತರ ನಡೆದದ್ದು ಕೋಲಾಹಲ.  ಈ ಕೋಲಾಹಲದಲ್ಲಿ ಜನರಿಗೆ ಯಾರನ್ನು ಸಪೋರ್ಟ್ ಮಾಡಬೇಕೆನ್ನುವುದು ಸಮಸ್ಯೆ!  ಜನರಿಗೆ ಸೊಳ್ಳೆಯೂ ಹಾಗೂ ನೊಣ ಎರಡೂ ಕೂಡ ರೋಗವನ್ನು ಹಬ್ಬಿಸುವುದರಿಂದ ಎರಡೂ ಕೂಡ ನಾಶವಾಗಲಿ ಎಂಬ ಬಯಕೆ.  ಒಂದು ಒಳ್ಳೆಯ ಸೊಳ್ಳೆ ಬ್ಯಾಟ್ (ನೊಣವನ್ನು ಸಾಯಿಸುವಂತದ್ದು) ತೊಗೊಬೇಕು ಅರ್ಜೆಂಟಾಗಿ! :) 


ಅತ್ಯಾಚಾರ ಅಂದ್ರೆ ಬರೀ ಲೈಂಗಿಕ ಅತ್ಯಾಚಾರ ಮಾತ್ರನಾ?

ಅತ್ಯಾಚಾರ ಅಂದ್ರೆ ಬರೀ ಲೈಂಗಿಕ ಅತ್ಯಾಚಾರ ಮಾತ್ರನಾ?

ಈ ಲೈಂಗಿಕ ಅತ್ಯಾಚಾರವನ್ನು ಅತ್ಯಂತ ಕ್ರೂರಿಯಾಗಿ ಚಿತ್ರಿಸಿ ನಮ್ಮ ಮಕ್ಕಳು ಮತ್ತು ಹೆಂಗಸರನ್ನು ಇನ್ನಷ್ಟು ಭಯ ಪಡಿಸಿ, ಮೂಲೆಯಲ್ಲಿ ಕೂರುವಂತೆ ಮಾಡುತ್ತಿದ್ದೇವೆ.

ಮೊನ್ನೆ ಟೌನ್ ಹಾಲ್ ಬಳಿಯ ಪ್ರತಿಭಟನೆ ಮತ್ತು ಉಷಾ ಆಂಟಿಯವರ ಬುಕ್ ರಿಲೀಸ್ ಎರಡನ್ನೂ ಕಂಬೈನ್ ಮಾಡಿಕೊಂಡು ಒಬ್ಬಳೇ ಹೊರಟಿದ್ದೆ. ಆಗ ಸಮಯ ಸಂಜೆ ೫.೩೦ ಗಂಟೆ. ಟೌನ್ ಹಾಲ್ ನಿಂದ ನಯನ ಸಭಾಂಗಣ (ಇರುವುದು ಕನ್ನಡ ಭವನದೊಳಗೆ) ದ ತನಕ ಹೋಗುವಷ್ಟರಲ್ಲಿ ನನ್ನ ತಲೆಯೊಳಗೆ ಸುಳಿದ ಆಲೋಚನೆಗಳು ಸಾವಿರಾರು. ಎಲ್ಲವೂ ಅತ್ಯಾಚಾರಕ್ಕೆ ಸಂಬಂಧಿಸಿದ್ದೆ. ನನಗೆ ನಯನ ಸಭಾಂಗಣ ಇರುವುದೆಲ್ಲಿ ಎಂದು ಗೊತ್ತಿರಲಿಲ್ಲ. ಸಂಸ ಬಯಲು ರಂಗಮಂದಿರದ ಬಳಿ ೪,೫ ಮಂದಿ ಕುಳಿತಿದ್ದರು. ಅವರ ಬಳಿ ಕೇಳಲು ಭಯ. ಆದರೂ ಕೇಳಿದೆ. ಅವರು ಪಕ್ಕದಲ್ಲಿಯೇ ಮುಂದಕ್ಕೆ ಹೋಗಿ ಎಂದರು. ಸಂಸ ಬಯಲು ಮಂದಿರದಿಂದ ನಯನ ಸಭಾಂಗಣಕ್ಕೆ ಹೋಗುವವರೆಗೂ ನಿರ್ಜನ ಪ್ರದೇಶ. ಆಗಲೇ ಕತ್ತಲು ಮುತ್ತಿಕೊಳ್ಳುತ್ತಿತ್ತು. ಅವರು ಹಿಂದೆ ಬಂದರೆ? ಈಗೇನಾದರೂ ಮಾಡಿದರೆ? ನನ್ನನ್ನು ನಾನು ಹೇಗೆ ಪ್ರೊಟೆಕ್ಟ್ ಮಾಡಿಕೊಳ್ಳುವುದು? ಇದು ನನ್ನ ತಲೆಯಲ್ಲಿ ನಡೆದ ತಾಕಲಾಟ. ಕನ್ನಡ ಭವನದೊಳಗೆ ಪ್ರವೇಶ ಮಾಡಿದೆ. ಅಲ್ಲಿಂದ ಕೆಳ ಮಹಡಿಗಿಳಿದು, ಹೋಗುವಷ್ಟರಲ್ಲಿ ಅಕ್ಷರಶಃ ಹೆದರಿಕೆಯಿಂದ ಬೆವರಿದೆ. ಏಕೆಂದರೆ ಅಲ್ಲಿ ಒಬ್ಬರೂ ಇರಲಿಲ್ಲ. ಆ ಜಾಗದಲ್ಲಿ ಏನೂ ಬೇಕಿದ್ದರೂ ಆಗಬಹುದಿತ್ತು. ಈ ಭಯ ನನಗೆ ಹಿಂದೆಂದೂ ಕಾಡಿರಲಿಲ್ಲ. ನಾನು ರಾತ್ರಿ ಹೊತ್ತು ಒಬ್ಬೊಬ್ಬಳೇ ಓಡಾಡುವಾಗ ‘ಚೈನ್ ಸ್ನಾಚ್’ ಮಾಡುತ್ತಾರೆಂದು ಕಳ್ಳತನಕ್ಕೆ ಹೆದರುತ್ತಿದ್ದೆ ಹೊರತು ‘ರೇಪ್’ ಆಗಬಹುದು ಎಂದು ಹೆದರಿರಲಿಲ್ಲ!  

ಉಷಾ ಆಂಟಿಯವರ ಪುಸ್ತಕಗಳು ರಿಲೀಸ್ ಆದವು. ಎಲ್ಲರೂ ಮಾತಾಡುತ್ತಿದ್ದರು. ಆಗ ನನ್ನ ತಲೆಯಲ್ಲಿ ನಾನು ಹೆದರಿದ ವಿಷಯವೇ! ನನಗೆಂದಿಗೂ ನನಗೆ ಸಿಕ್ಕ ಗೆಳೆಯರು ಈ ಮನಸ್ಥಿತಿಯವರಾಗಿರಲಿಲ್ಲ. ನನ್ನ ಅಣ್ಣಂದಿರು ಈ ಮನಸ್ಥಿತಿಯವರಲ್ಲ. ನನ್ನ ನೆಂಟರಿಷ್ಟರು ಈ ಮನಸ್ಥಿತಿಯವರಲ್ಲಾ. ಇಷ್ಟು ವರ್ಷಗಳೂ ಇಲ್ಲದ ಈ ಭಯ ಈಗ ಹುಟ್ಟಿದ್ದು ಏಕೆ? ನನ್ನ ಮನಸ್ಸನ್ನು ಕಂಟ್ರೋಲ್ ಮಾಡಿಕೊಳ್ಳಲು ನನಗೆ ಸುಮಾರು ಹೊತ್ತು ಬೇಕಾಯಿತು. 

ಈಗ ಯೋಚಿಸಿ , ನನ್ನ ಮನಸ್ಸಿನ ಮೇಲಾದ ಅತ್ಯಾಚಾರಕ್ಕೆ ಯಾರು ಹೊಣೆ? ಸಮಾಜವೇ, ಯಾರೋ ಕೆಲವು ಮಂದಿಗಳೇ? ಗಂಟೆಗೊಂದು, ನಿಮಿಷಕೊಂದು ಅತ್ಯಾಚಾರದ ಮುದ್ರೆಯೊತ್ತಿ (ಆಗಿರುತ್ತದೆಯೋ, ಇಲ್ಲವೋ) ಕೇವಲ ಟಿ ಆರ್ ಪಿ ಗಾಗಿ ನಮ್ಮೆಲ್ಲರನ್ನೂ ಹೆದರಿಸುತ್ತಿರುವ ಮಾಧ್ಯಮದವರೇ? ನೀವೇ? ನಾನೇ? 
ಗಾಡಿ ಕಲಿಯಲು ಹೊರಟಾಗ ಆಕ್ಸಿಡೆಂಟಿನ ಭಯ ನನಗೆ. ಆಗ ನನ್ನ ಗೆಳೆಯನೊಬ್ಬ ಹೇಳಿದ ಮಾತು (ಸುಮಾರು ವರುಷಗಳ ಹಿಂದಿನ ಮಾತು) ಈಗಲೂ ನೆನಪಿದೆ. ಲೆಕ್ಕದಷ್ಟು ಆಕ್ಸಿಡೆಂಟ್ ಗಳು ಆಗುತ್ತವೆ. ಲಕ್ಷಾಂತರ ಮಂದಿ ಸುರಕ್ಷಿತವಾಗಿ ಮನೆ ಸೇರುತ್ತಿರುತ್ತಾರೆ. ನೀನು ಸುರಕ್ಷಿತವಾಗಿ ಮನೆ ಸೇರುತ್ತಿರುವವರನ್ನು ಗಮನಿಸು. ಆಕ್ಸಿಡೆಂಟ್ ಆಗುತ್ತಿರುವವರನಲ್ಲ! ಆಗ ಭಯ ಕಡಿಮೆಯಾಗುತ್ತದೆ. ಗಾಡಿ ಕಲಿಯಲು ಆಗುತ್ತದೆ. 

ನಮ್ಮ ಮಕ್ಕಳನ್ನು ಸುರಕ್ಷಿತವಾಗಿರಲು ಕಲಿಸಬೇಕೇ ಹೊರತು ಜೀವನದ ಗಾಡಿ ಧೈರ್ಯವಾಗಿ ಓಡಿಸುವಂತೆ ಪ್ರೇರೇಪಿಸಬೇಕೇ ಹೊರತು ಈಗಾಗಲೇ ರೇಸ್ ಕುದುರೆಗಳಾಗಿರುವ ಅವರನ್ನು ಖೈದಿಗಳಾಗಿಸುವುದಲ್ಲ ಅಲ್ಲವೇ? ಈಗಷ್ಟೇ ತಮ್ಮ ಸೇಫರ್ ಜ಼ೋನ್ ನಿಂದ ಹೊರ ಬರುತ್ತಿರುವ ಹೆಂಗಸರನ್ನು ಭಯಬೀತರನ್ನಾಗಿಸುವುದು ಅಲ್ಲ ಅಲ್ಲವೇ?

ರೇಪ್ ಅನ್ನೋದು ಒಂದು ಮನಸ್ಥಿತಿ. ಶಿಕ್ಷೆಯಾಗುತ್ತದೆ ನನಗೆ ಎಂದು ಯೋಚಿಸುವ ಗಂಡಸರ್ಯಾರು ರೇಪ್ ಮಾಡುವುದಿಲ್ಲ! ಗಂಡಸರು ಕೂಡ ವಿಕ್ಟಿಮ್ಸ್ ಎಂದು ಏಕೆ ಯೋಚಿಸುವುದಿಲ್ಲ. ಮೊನ್ನೆ ಒಬ್ಬರು ಆರ್ಟಿಕಲ್ ಬರೆದಿದ್ದರು. ಹೆಸರು ಮರೆತಿದ್ದೇನೆ. ಹುಡುಗಿಗೆ ಋತುಸ್ರಾವ ಶುರುವಾದಾಗ ಮನೆಮಂದಿ ಎಲ್ಲರೂ ಆಕೆಯನ್ನು ಕೇರ್ ತೆಗೆದುಕೊಳ್ಳುತ್ತೇವೆ. ಆಕೆಗೆ ವಿವರಿಸುತ್ತೇವೆ. ಹೇಗಿರಬೇಕು? ಎಂಬುದನ್ನೆಲ್ಲಾ ಬಿಡಿಸಿ ಹೇಳುತ್ತೇವೆ. ಹೊರಗೆ ಆಡಲು ಹೋದಾಗಿಂದ ಹಿಡಿದು ಮನೆ ಸೇರುವ ತನಕ ಯಾರಾದರೊಬ್ಬರನ್ನು ಕಾವಲು ಇಡಿಸುತ್ತೇವೆ. ಇಲ್ಲವೇ ನಮ್ಮ ಕಣ್ಣು, ಕಿವಿಗಳೇ ಕಾವಲುಗಾರರಾಗಿರುತ್ತವೆ. ಆದರೆ ಬಾಲಕನೊಬ್ಬ ದೊಡ್ಡವನಾಗುವುದು ನಮಗೆ ತಿಳಿಯುವುದೇ ಇಲ್ಲ! ಆತನ ಬದಲಾವಣೆಯನ್ನು ಗಮನಿಸುವುದೇ ಇಲ್ಲ, ಆತನ ಮನಸ್ಸಿನಲ್ಲಿ ಕೋಲಾಹಲ ನಡೆಯುತ್ತಿರಬಹುದೆಂಬ ಕಲ್ಪನೆಯೇ ಇಲ್ಲ. 
ನನ್ನ ಪುಟ್ಟ ಮಗನ (೭ ವರ್ಷ ಆಗ ಅವನಿಗೆ) ಸ್ಕೂಲ್ ಡೇ ತರಬೇತಿ ನಡೆಯುತ್ತಿತ್ತು. ಒಮ್ಮೆ ಸಿಟ್ಟು ಮಾಡಿಕೊಂಡು ಬಂದ. ನಾನು ಡ್ಯಾನ್ಸ್ ಮಾಡುವುದೇ ಇಲ್ಲ ನಾಡಿದ್ದು ಎಂದ. ವಿಚಾರಿಸಿದ್ದಕ್ಕೆ ತಿಳಿಯಿತು. ಹೆಣ್ಣು ಮಕ್ಕಳಿಗೆಲ್ಲಾ ಡ್ರೆಸ್ ಬದಲಾಯಿಸಲು ಪ್ರೈವಸೀ ಅಂತೆ. ಹುಡುಗರು ಎಲ್ಲರ ಮುಂದೆ ಬದಲಾಯಿಸಬೇಕು. ಆ ಹುಡುಗಿಯರು ನಮ್ಮ ‘ಇನ್ನರ್ ವೇರ್’ ನೋಡಿ ನಗ್ತಾರೆ ಗೊತ್ತಾ? ನಮಗೇನು ಮರ್ಯಾದೆ ಇರೊಲ್ವಾ? ನಮ್ಮ ಪ್ರೈವೇಟ್ ಪಾರ್ಟ್ ಅವರ್ಯಾಕೆ ನೋಡಬೇಕು? ಕೊಟ್ಟರೆ ನಮಗೂ ಪ್ರೈವಸಿ ಕೊಡಬೇಕು. ಹೀಗ್ಯಾಕೆ ಅವರಿಗೊಂದು ರೂಲ್ಸ್, ನಮಗೊಂದು ರೂಲ್ಸ್? ಎಂದ. ಅದಕ್ಕೆ ನನ್ನ ದೊಡ್ಡ ಮಗ ‘ತಣ್ಣಗೆ, ಅಮ್ಮ, ಈ ಹುಡುಗಿಯರೇ ಜಾಸ್ತಿ ಈ ವಿಷಯದಲ್ಲಿ ನಗೋದು. ತಮಾಷೆ ಮಾಡೋದು. ಆಮೇಲೆ ಏನಾದರೂ ಸ್ವಲ್ಪ ಹೆಚ್ಚು ಕಡಿಮೆಯಾದರೆ, ನಮ್ಮ ಮೇಲೆ ಎತ್ತಾಕಿಬಿಡ್ತಾರೆ. ಕೊನೆಗೆ ನಮಗೆ ಟೀಚರ್ಸ್ ಬೈಯೋದು. ಇವರಿಗೂ ಪ್ರೈವಸಿ ಕೊಡೋಕೆ ಟೀಚರ್ ಗೆ ಕನ್ ವಿನ್ಸ್ ಮಾಡಿ. ಅವನು ಹೇಳ್ತಿರೋದರಲ್ಲಿ, ಕೇಳ್ತಿರೋದರಲ್ಲಿ ತಪ್ಪೇನಿದೆ? ಎಂದ. ಆಮೇಲೆ ಆ ವರ್ಷದಿಂದ ಇಬ್ಬರಿಗೂ ಪ್ರೈವಸಿ ಸಿಕ್ಕಿತು.

ಸಮಾಜದಲ್ಲಿ ಯಾವಾಗಲೂ ಪಾಸಿಟಿವ್ ಮೈಂಡ್ ಸೆಟ್ ಶುರು ಮಾಡಬೇಕೇ ಹೊರತು ನೆಗೆಟಿವ್ ನನ್ನು ಎತ್ತಿ ತೋರಿಸುವುದಲ್ಲ. ನಮ್ಮಿಂದ ಸಮಾಜ. ಸಮಾಜದಿಂದ ನಾವಲ್ಲ. ಎರಡು ಉದಾಹರಣೆಗಳು. ೧. ನಮ್ಮ ಮನೆ ಬಹಳ ದೂರವಿದೆ. ಅಕಸ್ಮಾತ್ ರಾತ್ರಿ ತಡವಾಗಿಬಿಟ್ಟರೆ ವಾಪಾಸು ಆಟೋದಲ್ಲೇ ಬರಬೇಕು. ನನಗೆ ಮತ್ತು ಅಮ್ಮನಿಗೆ ಆಗಲೇ ಹೇಳಿದಂತೆ ಕಳ್ಳರ ಭಯವೇ ಹೆಚ್ಚು. (ಚಿನ್ನ ಅಷ್ಟೊಂದು ಹಾಕಿಕೊಳ್ತಿರಾ? ಎಂದು ಕೇಳಬೇಡಿ  ) ಮೊಬೈಲ್ ಕಿತ್ತುಕೊಂಡರೆ? ನಾವು ಹಾಕಿಕೊಂಡಿರೋದು ಚಿನ್ನದಲ್ಲಾ ಅಂತಾ ಅವರಿಗೆ ಹೇಗೆ ಗೊತ್ತಾಗುತ್ತದೆ? ಹೊಡೆದುಬಿಟ್ಟರೆ? ಹೀಗೆಲ್ಲಾ. ಅದಕ್ಕೆ ನಾವಿಬ್ಬರೂ ಕಂಡುಕೊಂಡಿರೋ ಉಪಾಯ. ಆ ಆಟೋದವರನ್ನು ಪರಿಚಯಿಸಿಕೊಳ್ಳುವುದು. ಉದ್ದಕ್ಕೂ ಅವರೊಂದಿಗೆ ಅವರ ಕಷ್ಟ, ನಷ್ಟಗಳನ್ನು ವಿಚಾರಿಸುತ್ತಾ ಬರುವುದು. ನಮ್ಮ ಮನೆಗೆ ಬರುವಷ್ಟರಲ್ಲಿ ಆತ ಪರಿಚಯವಾಗಿಬಿಟ್ಟಿರುತ್ತಾನೆ. ನನಗೆ ಹುಷಾರಾಗಿ ಹೋಗಿ ಮೇಡಮ್ ಎಂದು ನಿರ್ದೇಶಿಸುವಷ್ಟರ ಮಟ್ಟಿಗೆ. Uma Sekhar ಮತ್ತು Anuradha B Rao ಈ ಇಬ್ಬರೂ ಕೂಡ ಹೀಗೆಯೇ. ಆತ್ಮೀಯವಾಗಿ ಆತನೊಂದಿಗೆ ಮಾತಾಡುತ್ತಾ, ತಮಾಷೆಯಾಗಿಯೇ ಜಗಳವಾಡುತ್ತಾ, ಸುರಕ್ಷಿತವಾಗಿ ಮನೆ ತಲುಪುತ್ತಾರೆ. ನಮ್ಮನ್ನು ನಂಬಿದ್ದಾರೆ ಇವರು ಎಂದಾದ ಕೂಡಲೇ ಆ ಅಪರಿಚಿತ ಗಂಡಿನಲ್ಲಿ ನಮ್ಮನ್ನು ಸುರಕ್ಷಿತವಾಗಿ ತಲುಪಿಸಬೇಕು ಎನ್ನುವ ಭಾವ ಹುಟ್ಟಿಬಿಡುತ್ತದೆ. ನನ್ನ ಪ್ರಕಾರ ಇದು ‘ಪಾಸಿಟಿವ್ ಮೈಂಡ್ ಸೆಟ್’ 

ಅದೇ ನನ್ನ ಮಕ್ಕಳ ತರಗತಿಗಳಲ್ಲಿ ಗಂಡು ಮಕ್ಕಳನ್ನು ಪ್ರಚೋದಿಸುತ್ತಲೇ ಅಥವಾ ಅವರನ್ನು ಕಾಡಿಸುತ್ತಲೇ ಇರುವ ಕೆಲವೊಂದು ಹೆಣ್ಣುಮಕ್ಕಳು, ಟೀಚರ್ ಬಂದೊಡನೆಯೇ ಅಥವಾ ಸಿಕ್ಕಿಬಿದ್ದಾಗ ಅಳುತ್ತಾ ನಿಂತುಬಿಡುತ್ತಾರೆಯಂತೆ. ಏನೂ ಮಾದದೇ ಸುಮ್ಮನಿದ್ದ ಗಂಡು ಮಕ್ಕಳಿಗೆ ಬೈಗುಳ. ನನ್ನ ದೊಡ್ಡ ಮಗ ಹೇಳ್ತಾನೆ ‘ಅಬ್ಬಾ! ಈ ಗರ್ಲ್ಸ್ ಭಯಂಕರ ಡೇಂಜರಸ್ ಅಮ್ಮಾ. ಅದೆಲ್ಲಿರುತ್ತೋ? ಕಣ್ಣೀರು. ಪುಳಕ್ ಅಂತಾ ಬಂದುಬಿಡುತ್ತೆ. ನಮಗೆ ಡೌಟ್ ಆಗಿಬಿಡುತ್ತದೆ, ನಾವೇನಾದರೂ ಮಾಡಿದೆವಾ? ಅಂತಾ. ಅವರ ಸುದ್ಧಿಗೆ ಹೋಗೊಲ್ಲಾ ನಾವು’ ಎಂದು ಹೇಳುತ್ತಾನೆ. ಇದು ನನ್ನ ಪ್ರಕಾರ ಈ ಗಂಡು ಮಕ್ಕಳಿಗೆ ಹೆಣ್ಣು ಮಕ್ಕಳ ವಿಷಯದಲ್ಲಿ ನೆಗೆಟಿವ್ ನೆಸ್ ಕ್ರಿಯೇಟ್ ಆಗ್ತಿದೆ.
ನಮ್ಮ ಸಮಾಜ ಬೆಳೆಯಲು ನಮಗೆ ಇಬ್ಬರೂ ಬೇಕಲ್ವಾ? ಗಂಡು ಮಕ್ಕಳೆಲ್ಲಾ ರೇಪಿಸ್ಟ್ ಗಳಾಗಿಬಿಡ್ತಾರೆ? ಹೆಣ್ಣು ಮಕ್ಕಳೆಲ್ಲಾ ವಿಕ್ಟಿಮ್ಸ್ ಗಳಾಗಿಬಿಡ್ತಾರೆ? ಅನ್ನೋ ಭಯ ಯಾಕೆ ಹುಟ್ಟು ಹಾಕ್ತಿದ್ದೀವಿ? ಯಾಕೆ ಯಾವುದೊಂದನ್ನೂ ‘ಡೀಪ್’ ಆಗಿ ಯೋಚಿಸೊಲ್ಲ. ಅನುಭವಿಸಿರುವವರಿಗೆ ಸಾಂತ್ವನ ಹೇಳಬೇಕು. ನಿಜ. ಧೈರ್ಯ ನೀಡಬೇಕು. ಅಂತವರಿಗೆ ಶಿಕ್ಷೆ ಆಗಬೇಕು. ಎಲ್ಲವೂ ನಿಜ. ಸರಿ. ಆದರೆ ಹಾಗೆಯೇ ಇಂತಹದೊಂದು ಭೀಕರ ಕೃತ್ಯ ಏಕಾಯಿತು? ಎಂದು ಏಕೆ ಯೋಚಿಸುತ್ತಿಲ್ಲ. ವಿಕ್ಟಿಮ್ಸ್ ಮತ್ತು ಅವರ ಮನೆಯವರಿಗೆ ಕುಳಿತು ಯೋಚಿಸಲು ಸಾಧ್ಯವಾಗುವುದಿಲ್ಲ. ಆದರೆ ಉಳಿದವರು ಅವರಿಗೆ ಬೆಂಬಲ ನೀಡುತ್ತಲೇ, ಈ ಕೆಲಸವನ್ನು ಮಾಡಬಹುದಲ್ವಾ?

ಮೊನ್ನೆ ನಡೆದ ವಿಬ್ಗಯಾರ್ ಶಾಲೆಯ ಪ್ರಕರಣದಲ್ಲಿ ಆರೋಪಿಯಾದ ಟೀಚರ್ ಮಗಳು ಅದೇ ಶಾಲೆಯಲ್ಲಿ ಯುಕೆಜಿ ಓದುತ್ತಿದ್ದಳಂತೆ. ಅವಳನ್ನೀಗ ಶಾಲೆಯಿಂದ ಬಿಡಿಸಲಾಗಿದೆ. ಆ ಮಗುವಿನ ಭವಿಷ್ಯದ ಕಥೆಯೇನು? ಖೈದಿಗಳ ಮಕ್ಕಳು ಅನುಭವಿಸುತ್ತಿರುವ ಅತ್ಯಾಚಾರಗಳು ಕಡಿಮೆ ಇವೆಯೇ? ಇದಕ್ಕೆಲ್ಲಾ ಪರಿಹಾರ simultaneously ಹುಡುಕಬೇಕು.

ಕಠಿಣ ಶಿಕ್ಷೆ ಮತ್ತೊಂದು ಅಪರಾಧವನ್ನು ತಡೆಯಲಾರದು. ಅಪರಾಧಕ್ಕೆ ಹಲವಾರು ಕಾರಣಗಳಿರುತ್ತವೆ. ಅವುಗಳನ್ನು ತಿಳಿದುಕೊಳ್ಳಲು ಪ್ರಯತ್ನಿಸಬೇಕು. ಖಂಡಿತವಾಗಿಯೂ ವಿಕ್ಟಿಮ್ ಮತ್ತು ಅವರ ಮನೆಯವರು ಹೇಳಲಾಗದಷ್ಟು ನೊಂದಿರುತ್ತಾರೆ. ಅವರಿಗೆ ಸಾಂತ್ವನ ಹೇಳುವುದು ಮನುಷ್ಯರಾದವರೆಲ್ಲರ ಕರ್ತವ್ಯ.


Monday, August 4, 2014

ಗೆಳೆತನವೆಂದರೆ ಬರೀ ಟೈಮ್ ಪಾಸ್ ಅಲ್ಲಾ!

ಮನುಷ್ಯ ಸಂಘಜೀವಿ. ಆತ ಒಂಟಿಯಾಗಿ ಬದುಕಲೊಲ್ಲ! ಅಪ್ಪ, ಅಮ್ಮ, ಅಣ್ಣ, ತಮ್ಮ, ಅಕ್ಕ, ತಂಗಿ ಹೀಗೆ...  ಹುಟ್ಟಿನಿಂದಲೇ ಆತನ ಸುತ್ತಲೂ ತನ್ನವರ ವರ್ತುಲ ಸುತ್ತಿಕೊಂಡಿರುತ್ತದೆ. ಆದರೆ ಈ ತರಹದ ರಕ್ತಸಂಬಂಧಗಳಲ್ಲದೆ, ಕೆಲವೊಂದು ಸಂಬಂಧಗಳು ಹೀಗೆಯೇ ಹತ್ತಿರವಾಗಿಬಿಡುತ್ತವೆ.  ಅದಕ್ಕೊಂದು ನಿರ್ದಿಷ್ಟವಾದ ಕಾರಣಗಳಾಗಲೀ, ಘಟನೆಗಳಾಗಲೀ ಇರುವುದಿಲ್ಲ. ಇಂತಹ ಗೆಳೆತನವೆಂದರೆ ಬರೇಯ ಟೈಮ್ ಪಾಸ್ ಅಲ್ಲ. ಅಪ್ಪನ ರಕ್ಷಣೆ, ಅಮ್ಮನ ವಾತ್ಸಲ್ಯ, ಅಣ್ಣನ ಕೀಟಲೆ, ತಮ್ಮನ ತುಂಟತನ, ಅಕ್ಕ, ತಂಗಿಯರ ಕಾಳಜಿ, ಗಂಡನ ಪ್ರೀತಿ, ಮಕ್ಕಳ ಮುಗ್ದತೆ ಎಲ್ಲವೂ ಒಂದಿಡೀ ಗೆಳೆತನದಲ್ಲಿಯೇ ಸಿಕ್ಕಿಬಿಡುವುದು.

ಈ ಗೆಳೆತನಗಳಲ್ಲೂ ಎಷ್ಟೊಂದು ಬಗೆಗಳಿವೆ! ಸಿಕ್ಕಾಗ ಹೈ, ಹಲೋ, ಮುಗುಳ್ನಗೆಗಷ್ಟೇ ಸೀಮಿತವಾದ ಗೆಳೆತನ, ಆತ್ಮೀಯ ಗೆಳೆತನ, ಕುಡಿತ, ಸಿಗರೇಟ್ ಅಥವಾ ಸಿನೆಮಾ ಮುಂತಾದ ಮೋಜುಗಳಿಗಾಗಿ ಅವಲಂಬಿತವಾದ ಗೆಳೆತನ, ಯಾವುದಾದರೂ ಕೆಲಸಕಷ್ಟೇ ಮುಖ್ಯವಾಗಿರುವ ಗೆಳೆತನ, ಟೈಮ್ ಪಾಸ್ ಗೆಳೆತನ ಹೀಗೆ....... ಆತ್ಮೀಯ ಗೆಳೆತನ ಅಥವಾ ಬೆಸ್ಟ್ ಫ್ರೆಂಡ್ಸ್ ನಲ್ಲಿರುವಷ್ಟು ಮಾಧುರ್ಯ ಇನ್ಯಾವುದೇ ರಕ್ತ ಸಂಬಂಧಗಳಲ್ಲೂ ಕೂಡ ಸಿಗುವುದಿಲ್ಲ. ಜೀವನದಲ್ಲಿ ಇಂತಹ ಒಂದು ಸಂಬಂಧ ಸಿಕ್ಕರೂ ಸಾಕು, ಆ ಜೀವನ ಸಾರ್ಥಕ. ಹಾಗಾದರೆ ಇಂತಹ ಆತ್ಮೀಯ ಗೆಳೆಯರನ್ನು ಗುರುತಿಸುವುದು ಹೇಗೆ?

ಯಾವುದೇ ಕಪಟ, ಸುಳ್ಳು, ಮೋಸ ಅರಿಯದ ಅಥವಾ ನಮ್ಮ ಮುಂದೆ ಯಾವುದೇ ಸುಳ್ಳು ಅಂಗಿ ತೊಟ್ಟುಕೊಳ್ಳದೇ, ಯಾವುದೇ ಅಹಂಕಾರವಿಲ್ಲದೆ, ನಮ್ಮ ಆತ್ಮದಂತೆ ಇದ್ದುಬಿಡುವುದು.  ಈ ಸಂಬಂಧದಲ್ಲಿ ಕೊಡು, ಕೊಳ್ಳುವ ಹಂಬಲವಿರುವುದಿಲ್ಲ, ಜಗಳವಾಡಿದರೂ ಅದು ಆ ವಿಷಯಕಷ್ಟೇ ಆಗಿರುತ್ತದೆಯೇ ಹೊರತು, ಮರುಕ್ಷಣ ಹೆಗಲ ಮೇಲೆ ಕೈ ಹಾಕಿಕೊಂಡು, ನಗುತ್ತಾ ಹೊರಗೆ ಹೋದಾಗ, ಎಲ್ಲರಿಗೂ ಆಶ್ಚರ್ಯವಾಗಬಹುದು.  ಇವನ ಹತ್ತಿರ ನಿರ್ಭಯವಾಗಿ ಎಲ್ಲಾ ಖಾಸಗಿ ವಿಷಯಗಳನ್ನೂ ಹೇಳಬಹುದು ಅನ್ನುವ ನಂಬಿಕೆ ಇರಬೇಕು. ಅಂತಹದೊಂದು ಗೆಳೆತನ, ನಿಮ್ಮದಾಗಿದ್ದರೆ ಯಾವುದೇ ಕಾರಣಕ್ಕೂ, ಅದನ್ನು ಬಲಿ ಕೊಡಬೇಡಿ!

ಇವುಗಳನೆಲ್ಲಾ ಮುಂಚೆಯೇ ಯೋಚಿಸಿ, ಲಾಭನಷ್ಟಗಳನ್ನು ಕಾಲ್ಕುಲೇಟ್ ಮಾಡಿ, ಇಂತಹ ಗೆಳೆತನ ಪ್ರಾರಂಭಿಸಿದರೆ ಅದೊಂದು ರೀತಿಯ ವ್ಯವಹಾರ ಆಗಿಬಿಡುತ್ತದೆ.  ಅದನ್ನು ಸ್ನೇಹವೆಂದು ಕರೆಯಲಾಗುವುದಿಲ್ಲ.  ಆದರೆ ಯಾವುದೋ ಒಂದು ಘಟನೆಯಲ್ಲಿಯೋ, ಸಂದರ್ಭದಲ್ಲಿಯೋ ಆಕೆ / ಆತ ನಮಗೆ ಇಷ್ಟವಾಗಬಹುದು, ನಮಗೆ ತೀರಾ ಹತ್ತಿರದವಳಂತೆ, ಎಷ್ಟೋ ದಿವಸಗಳ ಪರಿಚಯದಂತೆ, ಕಂಡಕೂಡಲೇ ಇಷ್ಟವಾಗಿಬಿಡಬಹುದು. ಯಾವುದೇ ಹಿಡನ್ ಅಜೆಂಡಾ ಇಲ್ಲದೇ ಆಕೆ ನಮಗೆ ಹತ್ತಿರವಾಗಬಹುದು. ನಂತರ ಆ ಸಂಬಂಧ ಬೆಳೆಯುತ್ತಾ ಹೋಗುತ್ತದೆ. ವ್ಯಕ್ತಿ ಒಬ್ಬ ತನ್ನ ಅನುಭವಗಳ ಮೂಲಕ ಹೇಗೆ ಬೆಳೆಯುತ್ತ ಹೋಗುತ್ತಾನೋ ಹಾಗೆಯೇ ಈ ಸಂಬಂಧಗಳು ಕೂಡ ತಮ್ಮದೇ ಅನುಭವಗಳ ಮೂಲಕ ಬೆಳೆಯುತ್ತಾ ಹೋಗುತ್ತವೆ.

ಕಾಲಕ್ರಮೇಣ ಹುಡುಗ, ಹುಡುಗಿಯ ನಡುವೆ ಇರುವ ಇಂತಹ ಗೆಳೆತನ, ಪ್ರೀತಿ ಪ್ರೇಮಕ್ಕೆ ಬದಲಾಗಿ ಜೀವನ ಸಂಗಾತಿಗಳಾಗಬಹುದು. ಇವರು ನಮ್ಮ ಜೀವನದ ಅತಿ ಮುಖ್ಯ ಭಾಗವಾಗಿಬಿಡಬಹುದು ಅಥವಾ ಶುರುವಾದಾಗ ಇದ್ದ ಮಾಧುರ್ಯ, ಕಾಲಕಳೆದಂತೆ ಹಾಳಾಗಿಬಿಡಬಹುದು.  ನೀನು ಬೇರೆ, ನಾನು ಬೇರೆ ಅಲ್ಲಾ, ನನ್ನ ಆತ್ಮ ನೀನು ಎಂದು ಯಾರಲ್ಲೂ ಹೇಳಿಕೊಳ್ಳದ ಗುಟ್ಟುಗಳೆಲ್ಲಾ, ಈತನೊಂದಿಗೆ ಶೇರ್ ಮಾಡಿಕೊಂಡಿದ್ದೆ ಎಂಬುದು ನಮ್ಮನ್ನು ಅಣಕಿಸಲು ಶುರು ಮಾಡಬಹುದು.  ಒಟ್ಟಿನಲ್ಲಿ ಇವೆಲ್ಲವೂ ನಮ್ಮ ಜೀವನದ, ನಾವು ನಂಬಿಕೊಂಡು ಬಂದಂಥ ಮೌಲ್ಯಗಳು, ಆದ್ಯತೆಗಳು, ಜೊತೆಜೊತೆಗೆ ನಮ್ಮ ಗೆಳೆಯರ ಆದ್ಯತೆಗಳು, ನಂಬಿಕೆಗಳ ಮೇಲೆ ಅವಲಂಬಿತವಾಗಿರುತ್ತವೆ.  

ಸ್ಕೂಲಿನ ಹಂತದವರೆಗೂ ಅಪ್ಪ, ಅಮ್ಮನ ಹಾಗೂ ಶಿಕ್ಷಕರ ಅಧೀನದಲ್ಲಿರುವಾಗ ಯಾರೊಂದಿಗೂ ಅಷ್ಟೊಂದು ಬಲಿಯದ ಸ್ನೇಹ ಸಂಬಂಧ, ಇದ್ದಕಿದ್ದಂತೆ ಕಾಲೇಜಿಗೆ ಬಂದ ಮೇಲೆ ಪಂಜರದಿಂದ ಹೊರ ಬಂದ ಹಕ್ಕಿಯಂತಾಗುವ ಮನಸ್ಥಿತಿ, ಕಂಡಕಂಡವರನ್ನು ಸ್ನೇಹಿತರಂತೆ ಭಾವಿಸತೊಡಗುತ್ತದೆ. ಆದರೆ ಯಾವುದೇ ಬದ್ಧತೆ ಇಲ್ಲದೆ ಉಂಟಾಗುವ ಇಂತಹ ಸ್ನೇಹ ಸಂಬಂಧಗಳು ಹಾಗೆಯೇ, ಅಷ್ಟೇ ಬೇಗ ಮುರಿದು ಬೀಳುತ್ತವೆ. ಹಾಗಾದರೆ ಇದಕ್ಕೆ ಕಾರಣಗಳೇನು?  ಇಂತಹ ಸ್ನೇಹಗಳಿಗೆ ಬೆಲೆ ಇಲ್ಲವೇ? ಸ್ನೇಹವನ್ನು ಕಾಪಾಡಿಕೊಳ್ಳುವುದು ಹೇಗೆ?  ಅವರನ್ನು ನಮ್ಮ ಎಷ್ಟು ಹತ್ತಿರಕ್ಕೆ ಬಿಟ್ಟುಕೊಳ್ಳಬೇಕು?  ನಮ್ಮ ನಡುವೆ ಎಷ್ಟು ಅಂತರವನ್ನು ಇಟ್ಟುಕೊಳ್ಳಬೇಕು? ಇದೆಲ್ಲವನ್ನೂ ಯೋಚಿಸಬೇಕಾಗುತ್ತದೆ.

ನಮ್ಮ ಅತ್ಯುತ್ತಮ ಸ್ನೇಹವನ್ನು ಕಾಪಾಡಿಕೊಳ್ಳಲು ನಮಗೆ ಮುಖ್ಯವಾಗಿ ಬೇಕಾಗಿರುವುದು ಪರಸ್ಪರರಲ್ಲಿ ನಂಬಿಕೆ, ನಿಸ್ವಾರ್ಥತೆ ಹಾಗೂ ಆಪ್ತತೆ. ನೀವೆಷ್ಟು ಆಪ್ತತೆಯಿಂದ, ನಂಬಿಕೆಯಿಂದ, ನಿಸ್ವಾರ್ಥತೆಯಿಂದ ನಿಮ್ಮ ಗೆಳೆಯನನ್ನು ಆದರಿಸುತ್ತೀರೋ ಅಲ್ಲಿಯವರೆಗೂ ಆ ಗೆಳೆತನಕ್ಕೆ ಕುಂದಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಬದ್ಧತೆ ಬೇಕಾಗುತ್ತದೆ. ಹಾಗೆಯೇ ಒಬ್ಬರಿಗೊಬ್ಬರು ನಾವು ನೀಡುವ ಸ್ವಾತಂತ್ರ್ಯ.  ಗೆಳೆತನವೆಂದಿಗೂ ಉಸಿರುಕಟ್ಟಿಸುವ ವಾತಾವರಣವನ್ನು ನಿರ್ಮಾಣ ಮಾಡಬಾರದು.  ನಿಮ್ಮ ಗುಟ್ಟುಗಳನ್ನು, ನಿಮ್ಮ ಖಾಸಗಿ ವಿಷಯಗಳನ್ನು ಆತನ ಬಳಿ ಹಂಚಿಕೊಂಡಿದ್ದನ್ನು, ಆತ ಬೇರೆಲ್ಲೂ ಹೇಳದೇ, ನಿಮ್ಮಷ್ಟೇ ಅಂತಹ ವಿಷಯಗಳಿಗೆ ಗೌರವ ಕೊಡುವವನಾಗಿರಬೇಕು. ಆತ ಅಂಥವನಾಗಿರದಿದ್ದಲ್ಲಿ, ಒಂದು ಮಟ್ಟಿಗಿನ ಅಂತರ ಕಾಪಾಡಿಕೊಳ್ಳುವುದೇ ಒಳಿತು. 

ಇಂತಹ ಒಂದು ಸುಂದರ, ಅಪರೂಪದ ಸ್ನೇಹ, ಕೆಲವೊಮ್ಮೆ ಕೆಲವು ಸ್ವಾರ್ಥಪರ ಜನರಿಂದ ಹಾಳಾಗಿಬಿಡುತ್ತದೆ ಅಥವಾ ಸೊರಗಿಬಿಡುತ್ತದೆ. ಹಾಗಾದಾಗ ನಮ್ಮ ಆತ್ಮಗೌರವವನ್ನು ಬದಿಗಿಟ್ಟು, ಸ್ನೇಹವನ್ನು ಕಾಪಾಡಿಕೊಳ್ಳಲು ಒಂದಷ್ಟು ಹೋರಾಡಬೇಕಾಗುತ್ತದೆ, ಹೆಣಗಬೇಕಾಗುತ್ತದೆ, ಅದು ಕೂಡ ನಮಗಾಗಿಯೇ, ಅಯ್ಯೋ! ಇವನಿಗಾಗಿ ಇಷ್ಟೆಲ್ಲಾ ಮಾಡಬೇಕಲ್ಲಾ ಎಂದು ಕೊರಗದೆ, ನನಗಾಗಿ ಎಂದು ಸಂತಸದಿಂದ ಪ್ರಯತ್ನ ಪಡಬೇಕಾಗುತ್ತದೆ. ಆದರೆ ಅದನ್ನು ಕೂಡ ಒಂದು ಹಂತದವರೆಗೂ ಮಾತ್ರ ಮಾಡಲು ಸಾಧ್ಯ.  ನಮಗಿರುವಷ್ಟೇ ಆಸಕ್ತಿ, ಪ್ರೀತಿ, ಆ ಗೆಳೆಯನಲ್ಲಿಯೂ ಇರಬೇಕಾಗುತ್ತದೆ.  ಏಕೆಂದರೆ ಎರಡು ಕೈ ಸೇರಿದರೆ ಮಾತ್ರ ಚಪ್ಪಾಳೆ ಅಲ್ಲವೇ? ಆಗಲಿಲ್ಲವೇ? ನಿರಾಸೆ ಬೇಡ, ಜೀವನದುದ್ದಕ್ಕೂ, ನಮ್ಮಲ್ಲಿ ಜೀವನ ಉತ್ಸಾಹ ಇರುವ ತನಕವೂ, ನಾವು ಜೀವನವನ್ನು ಪ್ರೀತಿಸುವಷ್ಟು ದಿನವೂ, ನಮಗೆ ಸ್ನೇಹ, ಸ್ನೇಹಿತರು ದೊರಕುತ್ತಲೇ ಹೋಗುತ್ತಾರೆ.


(ವಿಜಯ ಕರ್ನಾಟಕದಲ್ಲಿ ಬಂದದ್ದು)