Thursday, November 27, 2014

ಹಾಗೆ ಸುಮ್ಮನೆ - ಎರಡು ಕಾರ್ಯಕ್ರಮಗಳ ಬಗ್ಗೆ

ಒಂದು ಆಡಿಯೋ ಪುಸ್ತಕ ಬಿಡುಗಡೆ, ಮತ್ತೊಂದು ಹೊಸ ಸಿನೆಮಾ ಪ್ರೀಮಿಯರ್ ಶೋ. ಒಂದು ಸಮಾಜ ಸೇವೆಗಾಗಿ, ಮತ್ತೊಂದು ಪ್ಯಾಷನ್ ಗಾಗಿ. ಎರಡರಲ್ಲೂ ಹೊಸ ಮುಖಗಳೇ ಹೆಚ್ಚು. ಎರಡೂ ತಂಡಗಳ ನಿರ್ದೇಶಕರು ಹೊಸಬರು. ಎರಡೂ ಕಾರ್ಯಕ್ರಮಗಳು ಹೇಗಿದ್ದವು?

ಮೊದಲ ಕಾರ್ಯಕ್ರಮದಲ್ಲಿ ಪ್ರಾಜೆಕ್ಟ್ ನ ಸಾರಥ್ಯ ವಹಿಸಿದ ವ್ಯಕ್ತಿಯೇ ಎಲ್ಲೆಲ್ಲೂ ಕಾಣುತ್ತಿದ್ದರೆ, ಎರಡನೇ ಕಾರ್ಯಕ್ರಮದಲ್ಲಿ ನಿರ್ದೇಶಕ  ಚಿತ್ರತಂಡವನ್ನು ಮುಂದಿಟ್ಟು ವಿನಯದಿಂದ ಹಿಂದೆ ನಿಂತಿದ್ದರು. ಮೊದಲನೆಯದರಲ್ಲಿ ಆ ಕ್ಷಣಕ್ಕೆ  ತಮಗೆ ಮುಖ್ಯವಾದವರನಷ್ಟೇ (ಪ್ರಾಜೆಕ್ಟ್ ಗಲ್ಲಾ) ಆಗಾಗ ನೆನಪಿಸಿಕೊಳ್ಳುತ್ತಿದ್ದರೇ, ಎರಡನೆಯ ಕಾರ್ಯಕ್ರಮದ ಕೊನೆಯಲ್ಲಿ ಮಾತಾಡಿದ ನಿರ್ದೇಶಕ, ತನ್ನಿಡೀ ಜೀವನದಲ್ಲಿ, ಕನಸಿನಲ್ಲಿ ಸಹಕರಿಸಿದವರನ್ನು, ಜೊತೆಯಲ್ಲಿದ್ದವರನ್ನು ಸ್ಮರಿಸಿ 'ಎಂದರೋ ಮಹಾನುಭಾವಲು' ಎಂದು ಎಲ್ಲರಿಗೂ ವಂದಿಸಿದರು.

ಮೊದಲನೆಯ ಕಾರ್ಯಕ್ರಮದಲ್ಲಿ ಕೊನೆಯವರೆಗೂ ತಂಡದವರ್ಯಾರು ಒಟ್ಟಿಗೆ ಫೋಟೋ ತೆಗೆಸಿಕೊಳ್ಳುವುದು ಅಥವಾ ಸ್ಟೇಜ್ ಹತ್ತುವುದಿರಲಿ, ಅವರ ಹೆಸರುಗಳು ಕೂಡ ಬಂದವರಾರಿಗೂ ತಿಳಿಯಲಿಲ್ಲ.  ಎರಡನೆಯ ಕಾರ್ಯಕ್ರಮದಲ್ಲಿ ತಂಡದ ಪ್ರತಿಯೊಬ್ಬರೂ ಬಂದಿದ್ದ ಮೀಡಿಯಾಗಳೊಟ್ಟಿಗೆ ತಮ್ಮ ಅನುಭವ ಹಂಚಿಕೊಳ್ಳುತ್ತಾ, ಆನಂದ ಅನುಭವಿಸುತ್ತಿದ್ದರು. ಮೊದಲ ಕಾರ್ಯಕ್ರಮದ ಸಾರಥ್ಯ ವಹಿಸಿದ ವ್ಯಕ್ತಿಯ ಹೆಸರು ಮಾಡುವ ಹಪಾಹಪಿಯನ್ನು ನೋಡಿ ಕಿರಿಕಿರಿಯಾದರೆ, ಮತ್ತೊಂದರ ಕಾರ್ಯಕ್ರಮದ ಸಾರಥ್ಯ ವಹಿಸಿದ ವ್ಯಕ್ತಿ ಮೌನವಾಗಿ ತನ್ನ ಕನಸು ಈಡೇರಿದ ಧನ್ಯತೆ ಅನುಭವಿಸುತ್ತಿದ್ದನ್ನು ನೋಡಿ ಖುಷಿಯಾಯಿತು.

ಎರಡನೆಯ ಪ್ರಾಜೆಕ್ಟ್ ನಲ್ಲಿ ಕೆಲಸ ಮಾಡಿದವರಿಗೆ, ಅವರ ಸಮಯಕ್ಕೆ ಸಂಭಾವನೆ ನೀಡಿದೆಯೋ ಇಲ್ಲವೋ? ತಿಳಿದಿಲ್ಲ. ಆದರೆ ಅವರು ಮಾಡಿರುವ ಕೆಲಸದ ಬಗ್ಗೆ ಹೆಮ್ಮೆಯಂತೂ ನಿರ್ದೇಶಕನ ಮುಖದಲ್ಲಿ ಕಾಣುತ್ತಿತ್ತು. ಮೊದಲನೆಯ ಪ್ರಾಜೆಕ್ಟ್ ಸಮಾಜಸೇವೆಯ ಉದ್ಧೇಶದಿಂದ ಕೂಡಿದ್ದರಿಂದ, ಅದಕ್ಕಾಗಿ ಕೆಲಸ ಮಾಡಿದ ಪ್ರತಿಯೊಬ್ಬರೂ ಹಣ ತೆಗೆದುಕೊಳ್ಳದೇ ಮಾಡಿದ್ದರು. ಹಾಗಾಗಿ ಅವರಿಗೆ ಕೃತಜ್ಞತೆ ಸಲ್ಲಿಸಲೇಬೇಕಾಗಿದ್ದುದು ತಂಡದ ನಿರ್ದೇಶಕನ ಕರ್ತವ್ಯವಾಗಿತ್ತು. ಆದರೆ ಆ ಕೆಲಸವಾಗಲೇ ಇಲ್ಲ. ತಂಡದ ಪ್ರತಿಯೊಬ್ಬರೂ ತಮ್ಮ ಅತ್ಯಮೂಲ್ಯ ಸಮಯವನ್ನು ಇದಕ್ಕಾಗಿ ನೀಡಿದ್ದಾರೆ ಎಂಬ ಅರಿವೇ ಇಲ್ಲದಂತಾಡುತ್ತಿದ್ದದ್ದು ಬೇಸರದ ಸಂಗತಿ. ಹೊಳೆ ದಾಟಿದ ಮೇಲೆ ಅಂಬಿಗನ ಹಂಗ್ಯಾಕೆ ಅಲ್ಲವೇ? 

ಇವೆರಡನ್ನೂ ದಾಖಲಿಸದೇ ಸುಮ್ಮನಿರಬಹುದಿತ್ತು. ಆದರೆ ಮುಖವಾಡಗಳನ್ನು ಕಳಚುವುದು ಹೇಗೆ?

Thursday, November 6, 2014

ಪ್ರೇಮವು ಆತ್ಮದಾ ‘ಹರಿವು’, ಇರುವಿಗೆ ಅರಿವಿನ ಮರೆವು - ಹರಿವು ಕನ್ನಡ ಚಲನಚಿತ್ರ.

ತಾಯಿಯ ಮಡಿಲಲ್ಲಿ, ತಾಯಿಯೇ ನನ್ನ ದೇವರು, ಹೀಗೆ ಅಮ್ಮ ಮಕ್ಕಳ ಸೆಂಟಿಮೆಂಟ್ಸ್ ನಲ್ಲಿ ಬಂದಷ್ಟು ಚಿತ್ರಗಳು, ಅಪ್ಪ ಮಗನದು ಬಂದಿರುವುದು ಬಹಳ ಕಡಿಮೆ. ನಮ್ಮ ಚಿತ್ರಗಳಲ್ಲಿಯೂ, ಮನೆಗಳಲ್ಲಿಯೂ  ‘ಅಪ್ಪ’ ‘ಯಜಮಾನ’ನಾಗಿರುವುದೇ ಹೆಚ್ಚು.  ಹಿಂದೆ ಭಾವನಾತ್ಮಕವಾಗಿ ಚಿತ್ರಿಸಲೋ ಅಥವಾ ಹೆಂಗಳೆಯರನ್ನು ಸೆಳೆಯಲೋ ರಚಿತವಾಗುತ್ತಿದ್ದ ಕಣ್ಣೀರಿನ ಅಮ್ಮ ಈಗೀಗ ಕಾಣೆಯಾಗುತ್ತಿದ್ದಾಳೆ. ಕುಟುಂಬಗಳು ಸಣ್ಣದಾಗುತ್ತಿರುವುದರಿಂದಲೋ ಅಥವಾ ಅಮ್ಮ ಕೂಡ ಹೊರಗೆ ದುಡಿಯುವ ಕಾರಣದಿಂದಲೋ, ಇತ್ತೀಚಿನ ದಿನಗಳಲ್ಲಿ 'ಅಪ್ಪ' ಕೂಡ ಸಮಾಜದ ಭಾವನಾತ್ಮಕ ಕೇಂದ್ರವಾಗುತ್ತಿದ್ದಾನೆ.  ‘ಅಪ್ಪ’ನನ್ನು ಒರಟು ಮನುಷ್ಯನಂತೆಯೋ, ಶಿಸ್ತಿಯ ಸಿಪಾಯಿಯಂತೆಯೋ ಅಥವಾ ಕುಡುಕನಾಗಿ ಮನೆ ಮಕ್ಕಳನ್ನು ಬೀದಿಗೆ ಬೀಳುವಂತೆ ಮಾಡುವ ವ್ಯಕ್ತಿಯಾಗಿಯೋ ಚಿತ್ರಿಸದಂತೆ, ‘ಅಪ್ಪ’ ನೇ ಮಕ್ಕಳ ‘ಅಮ್ಮ’ ಕೂಡ ಆಗಿ ಸಲಹುವಂತಹ ಚಿತ್ರಗಳು ನಿರ್ಮಾಣಗೊಳ್ಳುತ್ತಿವೆ. ‘ಏಕಾಂಗಿ’ ಯಲ್ಲಿ, ಯಾರ ಹಂಗೂ ಇಲ್ಲದಂತೆ ಒಂಟಿಯಾಗಿಯೇ, ಸಮಾಜದ ಸಂಪರ್ಕವೇ ಇಲ್ಲದಂತೆ, ಶಿಸ್ತಿನಿಂದ ಬೆಳೆಯುವಂತೆ ಪ್ರೇರೇಪಿಸುವ ‘ಅಪ್ಪ’ನಿದ್ದರೆ, ‘ಪರಮಾತ್ಮ’ ದಲ್ಲಿ ‘ಅಪ್ಪ’ ತಾನೇ ‘ಅಮ್ಮ’ ಕೂಡ ಆಗಿ ಮಗನನ್ನು ಬೆಳೆಸುತ್ತಾನೆ.  ನಂತರ ಆ ಮಗ ಕೂಡ ತಾನು  ‘ಅಪ್ಪ’ನಾದಾಗ ತನ್ನ ಮಗನಿಗೆ ‘ಅಮ್ಮ’ ಕೂಡ ಆಗಬೇಕಾಗುತ್ತದೆ.  ಹೀಗೆ ಏಕಾಂಗಿಯಾಗಿ ‘ಅಪ್ಪ’ ನೇ ‘ಅಮ್ಮ’ ನ ಪಾತ್ರವನ್ನು ನಿರ್ವಹಿಸುತ್ತಿದ್ದಾನೆ.  ಈ ನಿಟ್ಟಿನಲ್ಲಿ ಬಂದಂತ ಮತ್ತೊಂದು ಚಿತ್ರ ‘ಹರಿವು’. ಮಾತಾಡುವ ಮಗ-ಅಪ್ಪ ಹಾಗೂ ಮೌನದ ಅಪ್ಪ-ಮಗ ಈ ಎರಡು ಕಥೆಗಳನ್ನು ಹೊತ್ತು ಸಾಗುವ ಹರಿವು. ಮಾತಾಡುವ ಮಗ-ಅಪ್ಪನ ಜೋಡಿಗಿಂತ ಮಾತಾಡದೇ ಇರುವ, ಫ್ರೀಜ್ ಆಗಿಬಿಡುವ, ಆಗಾಗ ಸ್ಟಾಚ್ಯು ಆಗುವ ಅಪ್ಪ-ಮಗನ ಸಂಬಂಧ ವೀಕ್ಷಕರ ಮನಸ್ಸನ್ನು ಕಲಕಿಬಿಡುತ್ತದೆ. ಹಿಂದೆಲ್ಲಾ ಮನುಷ್ಯ ಸಂಬಂಧಗಳು ಶ್ರೀಮಂತ ವರ್ಗದಲ್ಲಿ ಮಾತ್ರ ತೆಳುವಾಗಿದ್ದದ್ದು, ಈಗೀಗ ಮಧ್ಯಮ ವರ್ಗಗಳಲ್ಲೂ ಹದಗೆಡುತ್ತಿರುವುದು, ಸಮಯದ ಅರಿವಿಲ್ಲದೆ, ನಾವೇನನ್ನೂ ಕಳೆದುಕೊಳ್ಳುತ್ತಿದ್ದೇವೆ ಎಂಬ ಪರಿವೆಯೇ ಇಲ್ಲದೆ ಹಣಕ್ಕಾಗಿ, ಎಡಬಿಡದೆ ದುಡಿಯುವುದಕ್ಕಾಗಿ ನಾಗಲೋಟದಿಂದ ಓಡುತ್ತಿರುವ ಮಧ್ಯಮ ವರ್ಗದ ಜನರ ಹತಾಶೆ, ಕಿರಿಕಿರಿ, ಅಸಹಾಯಕತೆಯನ್ನು ಮಾತಾಡುವ ಮಗ-ಅಪ್ಪನ ಮೂಲಕ ‘ಹರಿವು’ ಮಾತಾಡುತ್ತದೆಯಾದರೂ, ಮೌನದ ಅಪ್ಪ-ಮಗನ ಜೋಡಿ ಮಾಡುವ ಮೋಡಿಯ ಮುಂದೆ ಪೇಲವ ಅನಿಸಿಬಿಡುವುದು ಸುಳ್ಳಲ್ಲ. ಅಂತೆಯೇ ಮೌನಕ್ಕಿರುವ ತಾಕತ್ತನ್ನು ಎತ್ತಿ ತೋರಿಸುತ್ತದೆ. ಕನ್ನಡ ಚಲನಚಿತ್ರಗಳು ಮಾತುಗಳಲ್ಲಿಯೇ ಗೆಲ್ಲಬೇಕಾದ ಅವಶ್ಯಕತೆಯಿಲ್ಲ, ಮೌನದಲ್ಲೂ ಗೆಲ್ಲಬಹುದು ಎಂಬ ಭರವಸೆಯನ್ನು ಮೂಡಿಸುವಂತಹ ಚಿತ್ರ ‘ಹರಿವು’.

ಚಿತ್ರದ ಮತ್ತೊಂದು ಎಳೆ, ಮೌನವಾಗಿರುವ ಅಪ್ಪ-ಮಗನ ಜೋಡಿಯ ಕಥೆ. ಪ್ರಜಾವಾಣಿಯಲ್ಲಿ ವೈದ್ಯರೊಬ್ಬರು ತಮ್ಮ ಅಂಕಣದಲ್ಲಿ ವರದಿ ರೂಪದಲ್ಲಿ ಬರೆದಿದ್ದ ನೈಜ ಕಥೆಯಾಧಾರಿತವಾದದ್ದು. ಎಂದೂ ಬೆಂಗಳೂರು ನೋಡದೆ ಇದ್ದ ಉತ್ತರ ಕರ್ನಾಟಕದ ಹಳ್ಳಿಯ ಬಡರೈತನೊಬ್ಬ, ತನ್ನ ಏಕೈಕ ಮಗನ ಚಿಕಿತ್ಸೆಗಾಗಿ, ಅವನನ್ನು ಉಳಿಸಿಕೊಳ್ಳುವ ಸಲುವಾಗಿ ಬರುವ ಕಥೆ.  ನಗರಗಳಲ್ಲಿ ಈಗೀಗ ಮಧ್ಯಮ ವರ್ಗದವರಲ್ಲಿ ಆರೋಗ್ಯ ಕಾಳಜಿಯಿಂದಾಗಿ, ಆರೋಗ್ಯದಲ್ಲಿ ಒಂದಿಷ್ಟು ಹೆಚ್ಚುಕಮ್ಮಿಯಾದರೂ ಕೈಗೊಬ್ಬ, ಕಾಲಿಗೊಬ್ಬ ವೈದ್ಯರು ಸಿಗುವಾಗ, ಜೊತೆಗೆ ಆರೋಗ್ಯ ವಿಮೆ ಯಂತಹ ಸೌಲಭ್ಯಗಳ ಅರಿವು, ಜೊತೆಗೆ ಮನೆಯ ಪ್ರತಿಯೊಬ್ಬರೂ ಎಡಬಿಡದೆ ದುಡಿಯುವುದರಿಂದ ಇಂತಹ ಕಾಯಿಲೆಗಳು ಬಂದಾಗ ತಮ್ಮ ಕೈಗೆಟಕುವ ದರದಲ್ಲಿ ಸಿಗುವ ವೈದ್ಯಕೀಯ ಚಿಕಿತ್ಸೆಗಳಿಂದ ನಮ್ಮವರನ್ನು ಕಾಪಾಡಿಕೊಳ್ಳಲುಬಹುದು ಎಂಬ ಆಶಾದಾಯಕ ವಾತಾವರಣವಿರುತ್ತದೆ. ಆದರೆ ಯಾವ ಸೌಲಭ್ಯವೂ ಇರದ, ಹಳ್ಳಿಯ ಅವಿದ್ಯಾವಂತ ಕಡುಬಡವರಿಗೆ ಯಾವುದಾದರೂ ಕಾಯಿಲೆ ಬಂದರೆ? ಹೊಟ್ಟೆಬಟ್ಟೆಗೆ ದುಡ್ಡಿಲ್ಲದ ಬಡ ರೈತ ಹೇಗೆ ಬಾಳಿಯಾನು?  ಅದೂ ಕೂಡ ಚಿಕಿತ್ಸೆಗಾಗಿ ನಗರಕ್ಕೆ ಹೋಗಬೇಕಾದ ಪರಿಸ್ಥಿತಿ ಬಂದಾಗ, ಅಲ್ಲಿಯೇ ತಿಂಗಳಾನುಗಟ್ಟಲೆ ಇರಬೇಕಾದ ಪರಿಸ್ಥಿತಿ ಉಂಟಾದರೆ?  ಹೇಗಿದ್ದಾನು?  ತಾನಾಯಿತು, ತನ್ನ ಸಂಸಾರವಾಯಿತು ಎಂಬಂತಿದ್ದ ರೈತನ ಬಾಳು, ಆತನ ಮಗನ ಕಾಯಿಲೆಯಿಂದ ಹೇಗೆ ಮೂರಾಬಟ್ಟೆಯಾಗುತ್ತದೆ? ಎಂಬುದನ್ನು ಅತಿ ಕಡಿಮೆ ಮಾತುಗಳಲ್ಲಿ, ದೃಶ್ಯಗಳಲ್ಲಿ ಕಥೆ ಹೇಳುತ್ತಾ ಹೋಗುತ್ತಾರೆ ನಿರ್ದೇಶಕ ಮಂಸೋರೆ.

ಪ್ರಕೃತಿ ಸಹಜವಾಗಿಯೇ, ಹೊಸ ಚಿಗುರಿಗಿರುವ ಪ್ರಾಮುಖ್ಯತೆ, ಜೀವಂತಿಕೆ, ಹಣ್ಣೆಲೆಗಳಿಗಿರುವುದಿಲ್ಲ. ತನ್ನ ಜೀವನವನ್ನು ಭದ್ರಪಡಿಸಿಕೊಳ್ಳುವಲ್ಲಿ ನಿರತನಾಗಿರುವ ಮಗನಿಗೆ, ಅಪ್ಪನ ಕಾಯಿಲೆ ಅಂತಹ ಗಾಬರಿಯನ್ನುಂಟು ಮಾಡದಿರುವುದು ಆಶ್ಚರ್ಯವೇನಲ್ಲ. ಅಂತೆಯೇ ತನ್ನ ಪೀಳಿಗೆಯನ್ನು ಮುಂದುವರೆಸಬೇಕಾದ ಮಗನಿಗೆ ಮಾರಣಾಂತಿಕ ಕಾಯಿಲೆಯಾದರೆ, ಅಪ್ಪ, ಅಮ್ಮನಿಗೆ ಬದುಕೇ ಇಲ್ಲದಂತಾಗಿಬಿಡುವುದು ಕೂಡ ಸಹಜ ಪ್ರಕ್ರಿಯೆಯೇ ಹೌದು. ಬದುಕೇ ಹಾಗೇ.  ಮಕ್ಕಳಂತೆಯೇ ವಯಸ್ಸಾದವರು ಕೂಡ ನಿಸ್ಸಹಾಯಕರು ಎಂಬ ಸತ್ಯದ ಅರಿವಿದ್ದರೂ ಕೂಡ, ಯೌವ್ವನದಲ್ಲಿ ತಮ್ಮ  ಬದುಕೇ ಮುಖ್ಯವಾಗಿಬಿಡುವುದು,  ವಯಸ್ಸಾದವರ ನಡವಳಿಕೆಗಳಿಂದ ಕಿರಿಕಿರಿ ಅನುಭವಿಸುವುದು ಜೀವನದ ಮತ್ತೊಂದು ಮಜಲಷ್ಟೇ.  ನಾವು ಕೂಡ ಮುಂದೇ ವಯಸ್ಸಾದವರ ಪಟ್ಟಕ್ಕೇರಿದಾಗ ನಮ್ಮ ಮಕ್ಕಳಿಂದ ಆಗುವ ನೋವಿನ ಅನುಭವ, ಜೊತೆಗೆ  ಪೋಷಕರು ಮಕ್ಕಳಿಗಾಗಿ ತಮ್ಮ ಬದುಕನ್ನೇ ತೆರಲು ತಯಾರಾಗುವ ಪರಿ, ಎರಡೂ ಕೂಡ ಮನೋಜ್ಞವಾಗಿ ‘ಹರಿವು’ ನಲ್ಲಿ ಚಿತ್ರಿತಗೊಂಡಿದೆ.

ಇವೆರಡೂ ಎಳೆಗಳ ನಡುವೆ ಕಂಡು ಬರುವುದು ನಮ್ಮ ಸರ್ಕಾರಿ ಆಸ್ಪತ್ರೆಗಳ ಚಿತ್ರಣ.  ದಿನವೂ ಸಾವಿರಾರು ರೋಗಿಗಳಿಂದ ಅದ್ರಲ್ಲೂ ಬಡ ರೋಗಿಗಳಿಂದ ತುಂಬಿ ತುಳುಕುವ ನಮ್ಮ ಸರ್ಕಾರಿ ಆಸ್ಪತ್ರೆಗಳಲ್ಲಿ ಕೆಲಸ ಮಾಡುವವರ ಧೋರಣೆ ಅತ್ಯಂತ ನೈಜವಾಗಿ ಬಿಂಬಿತಗೊಂಡಿದೆ.  ದಿನಾ ಸಾಯೋರಿಗೆ ಅಳೋರ್ಯಾರು?  ಎಂಬಂತೆ, ಅವರಿಗೆ ರೋಗಿಗಳ, ರೋಗಿಗಳ ಸಂಬಂಧಿಕರ ಕಷ್ಟಕಾರ್ಪಣ್ಯಗಳು, ನೋವು ಸಂಕಟಗಳು ನಗಣ್ಯ.  ನಗರಗಳಲ್ಲಿ, (ಬಹುಶಃ ಈಗೀಗ ಹಳ್ಳಿಗಳಲ್ಲೂ ಕೂಡ) ಮಾನವೀಯ ಸಂಬಂಧಗಳು ಮೌಲ್ಯ ಕಳೆದುಕೊಳ್ಳುವುದನ್ನು ತೋರಿಸುತ್ತಾ ಹೋಗುತ್ತಾರೆ.  ರೋಗಿಗಳ ನೋವಿನಲ್ಲೂ, ಸಾವಿನಲ್ಲೂ ವಾರ್ಡ್ ಬಾಯ್ ಮುಂತಾದವರು ತಮ್ಮ ಬದುಕನ್ನು ಕಂಡುಕೊಳ್ಳುವುದನ್ನು ನೋಡಿದಾಗ ಸಂವೇದನೆಯುಳ್ಳವರಿಗೆ ಸಂಕಟವಾಗದಿರದು. ಹಾಗೆಯೇ ಪ್ರಾಕ್ಟಿಕಲ್ ಆಗಿ ಯೋಚಿಸಿದಾಗ, ಅವರಿಗೆ ಬರುವ ಸಂಬಳ, ಸವಲತ್ತುಗಳಿಗೆ, ನಗರದಲ್ಲಿ ವಾಸಿಸುವವರಿಗೆ ಎಷ್ಟೇ ಹಣವಿದ್ದರೂ ಸಾಲದು ಎಂಬ ಸತ್ಯ ಕಣ್ಣಿಗೆ, ಮನಸ್ಸಿಗೆ ರಾಚುತ್ತದೆ.  ಹಣವೇ ಸಂಬಂಧವಾಗಿಬಿಡುವುದು ನಗರವಾಸಿಗಳ ಕರ್ಮಕಾಂಡವಾದರೆ, ಹಣವಿಲ್ಲದಿರುವುದೇ ಹಳ್ಳಿಗರ ನೋವಿಗೆ ಕಾರಣವಾಗಿಬಿಡುವುದು ಬದುಕಿನ ದುರಂತ.  ಸಂಬಂಧ ಮುಖ್ಯವೇ? ಹಣ ಮುಖ್ಯವೇ? ಎಂಬ ತಾಕಲಾಟ ಉಂಟು ಮಾಡಿಬಿಡುತ್ತದೆ ‘ಹರಿವು’.

ಸಾಮಾನ್ಯವಾಗಿ ನಮ್ಮ ಕನ್ನಡ ಚಿತ್ರಗಳಲ್ಲಿ ಸರ್ಕಾರಿ ವೈದ್ಯರನ್ನು ಅಪರಾಧಿಗಳಂತೆ, ಹಣಕ್ಕಾಗಿ ಏನೂ ಬೇಕಾದರೂ ಮಾಡುವವರಂತೆ ಚಿತ್ರಿಸುತ್ತಾರೆ.  ಆದರೆ ‘ಹರಿವು’ ಚಿತ್ರದಲ್ಲಿ ವೈದ್ಯರನ್ನು ಮಾನವೀಯತೆಯುಳ್ಳ, ಹಳ್ಳಿಗರ ಬಗ್ಗೆ ಕನಿಕರವುಳ್ಳವರಂತೆ ಚಿತ್ರಿಸಿರುವುದು ವಿಶೇಷ.  ರೈತನ ಬಳಿ ಹಣವಿಲ್ಲದಿದ್ದರೂ, ದಾಬಾದವ ಆತನಿಗೆ ನೀಡುವ ತಿಂಡಿ, ಚಹಾ ಮತ್ತು ಆತನನ್ನು ಊರಿಗೆ ಕರೆದೊಯ್ಯುವಂತೆ ಪ್ರೇರೇಪಿಸುವುದು ಎಲ್ಲವನ್ನೂ ನೋಡಿದಾಗ ಬಹುಶಃ ಬೆಂಗಳೂರಿನಲ್ಲಿ ನೆಲೆಸಿರುವವರಲ್ಲಿ ಮುಕ್ಕಾಲು ಭಾಗ ಜನ ವಲಸಿಗರಾದ್ದರಿಂದ, ತಮ್ಮ ಹುಟ್ಟೂರಿನ ಬಗ್ಗೆ ಮೋಹವಿರುವುದು, ಹಳ್ಳಿಯೆಂದರೆ ಪ್ರೀತಿಯಿರುವುದು ಎದ್ದು ಕಾಣುತ್ತದೆ.  

ಭಾವನಾತ್ಮಕ / ಕಲಾತ್ಮಕ ಚಿತ್ರಗಳಲ್ಲಿ ಹೆಚ್ಚಾಗಿ ಚಿತ್ರದ ಅಂತ್ಯವನ್ನು ವಿಷಾದದಿಂದಲೇ ಕೊನೆಗಾಣಿಸುವುದು, ನಿರಾಸೆ, ನೋವನ್ನೇ ಎತ್ತಿ ಹಿಡಿಯುವುದು, ಆ ಮೂಲಕ ಪ್ರೇಕ್ಷಕರ ಭಾವನೆಗಳನ್ನು ಹೊಡೆದೆಬ್ಬಿಸುವುದು ನಡೆಯುತ್ತಲೇ ಇರುತ್ತದೆ.  ‘ಹರಿವು’ ನ ವಿಶೇಷವೆಂದರೆ ಚಿತ್ರದಲ್ಲಿನ ಒಂದು ಪಾತ್ರದ ಅಂತ್ಯ, ನೋವನ್ನುಂಟು ಮಾಡುತ್ತದೆಯಾದರೂ, ಅನೇಕರ ಬದುಕನ್ನು ಸರಿಪಡಿಸಿಬಿಡುತ್ತದೆ. ಮತ್ತೂ ಒಂದು ಗಮನಿಸಬೇಕಾದ ವಿಷಯವೆಂದರೆ - ಹಳ್ಳಿಯಿಂದ ಮಗನ ಚಿಕಿತ್ಸೆಗಾಗಿ ಹೊರಡುವ ‘ಅಪ್ಪ’, ನಗರದಲ್ಲಿ ಅಡುಗೆ ಮಾಡಲು ಬೇಕಾದ ಪಾತ್ರೆಪಗಡೆಗಳನ್ನು ಕೊಂಡೊಯ್ದಿರುತ್ತಾನೆ.  ವಾಪಾಸ್ಸು ಬರುವಾಗ, ತನ್ನ ಅತ್ಯಂತ ನೋವಿನ ಕ್ಷಣಗಳಲ್ಲೂ ಆ ಪಾತ್ರೆಪಗಡೆಗಳನ್ನು ಮರೆಯದೇ, ತನ್ನ ಹಳ್ಳಿಗೆ ವಾಪಾಸ್ಸು ತರುವುದು, ಆತನಿಗೂ ಕೂಡ ಆ ನೋವಿನ ಗಳಿಗೆ ಕ್ಷಣ ಕಾಲದ್ದೇ?!  ಬದುಕೇ ಇಲ್ಲವೆಂಬಂತೆ ಆ ಕ್ಷಣ ಭಾಸವಾದರೂ, ತನ್ನ ಮುಂದಿನ ಬದುಕಿಗೆ ಆತ ಅಣಿಯಾಗುತ್ತಿದ್ದಾನೆ ಎಂಬುದನ್ನು ಹೇಳುತ್ತದೆಯೇ? ಎಂಬುದು ಕ್ಷಣಕ್ಷಣಕ್ಕೂ ಕಾಡಿದ್ದಂತೂ ಸುಳ್ಳಲ್ಲ.  ‘ಹರಿವು’ ಚಿತ್ರದ ಟ್ಯಾಗ್ ಲೈನ್ ‘ನಿನ್ನೆಗಳಿರದ ನಾಳೆಗಳೆಡೆಗೆ’ ಕೂಡ ಬದುಕಿನೆಡೆಗಿನ ಪ್ರೀತಿಯನ್ನೇ, ಮನುಷ್ಯ ಎಷ್ಟೇ ನಿರಾಸೆಯಿಂದ ಬಳಲಿದರೂ, ಬದುಕನ್ನು ಪ್ರೀತಿಸುವುದನ್ನೇ ಒತ್ತಿ ಹೇಳುತ್ತದೆ. ಬದುಕಿಗೆ ಹಣವೋ, ಸಂಬಂಧವೋ? ಎಂಬ ಪ್ರಶ್ನೆಗಳಿಗಿಂತ ಬದುಕನ್ನು ಪ್ರೀತಿಯಿಂದ ಬದುಕುವುದಷ್ಟೇ ಮುಖ್ಯ ಎಂಬ ಭಾವನೆ ಉಂಟು ಮಾಡಿಬಿಡುತ್ತದೆ.  

ವಸುಧೇಂದ್ರ ಅವರು ಎಂದೋ ಹೇಳಿದ ಮಾತು, ಕನ್ನಡ ಚಿತ್ರಗಳನ್ನು ನೋಡುವಾಗಲೆಲ್ಲಾ ನೆನಪಾಗುತ್ತಲೇ ಇರುತ್ತದೆ.  "ನಮ್ಮ ಚಿತ್ರಗಳಲ್ಲಿ ಮಾತುಗಳನ್ನು ಕೇಳಿಸಿಕೊಂಡು ಸಾಕಾಗಿದೆ, ಒಂದಿಷ್ಟು ಮೌನ ಬೇಕು.  ಆ ಮೌನ ಉಂಟು ಮಾಡುವ ಅನುಭವವನ್ನು, ಮೌನದಿಂದ ಆಸ್ವಾದಿಸಿದಾಗಲಷ್ಟೇ ವೀಕ್ಷಕ ತೃಪ್ತಿಯಾಗುತ್ತಾನೆ" ಎಂದಿದ್ದರು. ಅಂತಹ ಕ್ಷಣಗಳು ಹೇರಳವಾಗಿ ‘ಹರಿವು’ ನಲ್ಲಿ ತುಂಬಿವೆ.  ಬಹುಶಃ ನಿರ್ದೇಶಕ ಮಂಸೋರೆ, ಕಲಾಶಾಲೆಯಿಂದ ಕಲಿತು ಬಂದದಕ್ಕೋ ಏನೋ? ಕಥೆ ಏನನ್ನೋ ಹೇಳುತ್ತಿದ್ದರೂ ಕೂಡ, ಸಣ್ಣ, ಸಣ್ಣ ದೃಶ್ಯಗಳು, ಶಾಟ್ಸ್ ಗಳು ಮತ್ತೇನನ್ನೋ ಹೇಳುತ್ತಿರುತ್ತವೆ. ನೋಡುವ ಸೂಕ್ಷ್ಮತೆ ವೀಕ್ಷಕನಿಗಿರಬೇಕಷ್ಟೇ!  ಅದ್ಭುತ ಛಾಯಾಗ್ರಹಣ, ಅದ್ರಲ್ಲೂ ಚಿತ್ರದುರ್ಗದ ಗಾಳಿಯಂತ್ರಗಳು, ಹೊಸಪೇಟೆಯತ್ತ ತಿರುಗುವ ದಾರಿ, ವೈದ್ಯರ ಮುಖ ‘ಅಪ್ಪ’ನ ಮುಖಕ್ಕೆ ಬದಲಾಗುವುದು, ಪುಸ್ತಕ ಓದುವಾಗ ಅದ್ರಲ್ಲಿ ಬದಲಾಗುವ ಚಿತ್ರಗಳು, ಕತ್ತಲಿನಲ್ಲಿ ಕಣ್ಮರೆಯಾಗುವ ವ್ಯಾನಿನ ಲೈಟ್, ಬೆಳದಿಂಗಳಾಗುವ ಪರಿ, ಗುಡಿಸಲಿನಲ್ಲಿ ಕತ್ತಲು ಬೆಳಕಿನ ಮಿಶ್ರಣ ಹೀಗೆ...  ಬಹಳಷ್ಟು ದೃಶ್ಯಗಳು ಮನಸ್ಸನ್ನು ಹಿಡಿದಿಟ್ಟುಕೊಳ್ಳುತ್ತವೆ.

ಪ್ರಮುಖ ಪಾತ್ರದಲ್ಲಿ ನಟಿಸಿರುವ ‘ಸಂಚಾರಿ’ ವಿಜಯ್ ನಟನೆಯಂತೂ ಅತ್ಯದ್ಭುತ.   ಪಾತ್ರವೇ ತಾನಾಗಿಬಿಡುವುದು ಅವರಿಗೆ ಸಿದ್ಧಿಸಿದೆ. ಹೆಂಡತಿಯ ಪಾತ್ರಧಾರಿ, ಚಿತ್ರದ ಕ್ಲೈಮಾಕ್ಸ್ ನಲ್ಲಿ ನಟನೆಯಲ್ಲಿ ವಿಜಯ್ ಅವರನ್ನು ಮೀರಿಸಿಬಿಡುತ್ತಾರೆ. ಬಾಲಕನ ಪಾತ್ರಧಾರಿ ನೈಜವಾಗಿ ನಟಿಸಿ, ಎಲ್ಲರ ಮನಸೂರೆಗೊಳ್ಳುತ್ತಾನೆ.  ಚಿತ್ರದ ಕೊನೆಯಲ್ಲಿ ಬರುವ ಹಾಡಂತೂ ಇಡೀ ಚಿತ್ರದ ಕಥೆಯನ್ನು ಕ್ಷಣ ಮಾತ್ರದಲ್ಲಿ ಹೇಳಿಬಿಡುತ್ತದೆ.  ಅದ್ಭುತ ಸಾಲುಗಳು, ಅದಕ್ಕೆ ಸರಿಯಾಗಿ ಹೊಂದುವ ದೃಶ್ಯಗಳು, ಸಂಗೀತ ಮತ್ತು ಅದನ್ನು ಹಾಡಿರುವ ಪರಿ ಒಂದೊಳ್ಳೆ ಭಾವಚಿತ್ರವನ್ನು ಮೂಡಿಸಿಬಿಡುತ್ತದೆ.  

ಕೊನೆ ಮಾತು - ಅದದೇ ನಿರ್ದೇಶಕರ ಹೆಸರುಗಳನ್ನು ಪ್ರಶಸ್ತಿಯ ಪಟ್ಟಿಯಲ್ಲಿ ನೋಡಿರುವ ಕನ್ನಡ ವೀಕ್ಷಕರಿಗೆ, ಇನ್ನು ಮುಂದೆಯಾದರೂ ಹೊಸ ಹೆಸರುಗಳು ಕಾಣಿಸಬಹುದು ಎಂಬ ಆಶಾಭಾವನೆಯನ್ನು ಹುಟ್ಟುಹಾಕುವಲ್ಲಿ ಯಶಸ್ವಿಯಾಗಿದೆ ‘ಹರಿವು’.