Tuesday, April 15, 2014

ತೊತ್ತೊ-ಚಾನ್ - ಪೋಷಕರು ಓದಬೇಕಾದ ಮಕ್ಕಳ ಪುಸ್ತಕ!

ತೊತ್ತೊ-ಚಾನ್ - ಜಪಾನಿನ ತೆತ್ಸುಕೊ ಕುರೊಯಾನಾಗಿ ಎಂಬಾಕೆ ತಾನು ಓದಿದ ವಿಶಿಷ್ಠ, ಪುಟ್ಟ ಶಾಲೆಯ ಬಗ್ಗೆ ಬರೆದ ಪುಸ್ತಕ. ಮಕ್ಕಳ ಸೃಜನಶೀಲ ಕಲಿಕೆಯ ಬಗ್ಗೆ ಆಸಕ್ತಿ ಹುಟ್ಟಿಸುವ ಕೃತಿ.  ಇದು ಸುಮಾರು ೧೯೭೮ ರಲ್ಲಿ ಪ್ರಕಟಗೊಂಡಾಗ, ಜಪಾನಿನಲ್ಲಿ ಮಕ್ಕಳ ಶಿಕ್ಷಣ ಹೇಗಿರಬೇಕು? ಎಂಬುದರ ಬಗ್ಗೆ ದೊಡ್ಡ ಅಲೆಯನ್ನೆಬ್ಬಿಸಿಬಿಟ್ಟಿತ್ತು.  ಅಂದಿನಿಂದ ಇಂದಿನವರೆಗೆ ಸುಮಾರು ೬೦ ಲಕ್ಷ ಪ್ರತಿಗಳು ಪ್ರಕಟಗೊಂಡಿವೆ ಹಾಗೂ ಅಸಂಖ್ಯಾತ ಭಾಷೆಗಳಲ್ಲಿ ಪುಸ್ತಕವು ಅನುವಾದಗೊಂಡಿದೆ.  ತೊತ್ತೊಚಾನ್ ಓದುವಾಗ ಪ್ರತಿ ಪುಟ, ಪುಟದಲ್ಲೂ ನನ್ನ ಪುಟ್ಟ ಮಗನೇ ಕಾಣಿಸುತಿದ್ದು, ತೊತ್ತೊಚಾನ್ ಬೇರೆ ಅಲ್ಲ, ನನ್ನ ಮಗ ಬೇರೆ ಅಲ್ಲ ಅನಿಸಿಬಿಟ್ಟಿತು.

ಲೇಖಕಿ ತೆತ್ಸುಕೋ ಳನ್ನು (ಈಗ ೮೦ವರ್ಷ) ಚಿಕ್ಕಂದಿನಲ್ಲಿ  ಪ್ರೀತಿಯಿಂದ ತೊತ್ತೊಚಾನ್ ಎಂದು ಕರೆಯುತ್ತಿರುತ್ತಾರೆ.  ಎಲ್ಲಾ ಮಕ್ಕಳ ಹಾಗೇ ತೊತ್ತೊಚಾನ್ ಅತ್ಯಂತ ತುಂಟಿ ಹಾಗೂ ಓದು, ಬರಹಗಳಲ್ಲಿ ಆಕೆಯ ಗಮನವನ್ನು ಸೆಳೆದಿಟ್ಟುಕೊಳ್ಳುವುದು ಬಹಳ ಕಷ್ಟ.  ಶಾಲೆಯಲ್ಲಿ, ತರಗತಿಯಲ್ಲಿ ಆಕೆಯ ತುಂಟತನವನ್ನು ತಡೆಯಲಾರದೇ, ತಮ್ಮ ಶಾಲೆಯಿಂದ ತೆಗೆದುಬಿಡುತ್ತಾರೆ.  ಆಗ ಆಕೆಗೆ ಕೇವಲ ೬, ೭ ವರ್ಷ.  ಅವಳ ಅಮ್ಮ, ಈ ವಿಷಯ ಆಕೆಗೆ ತಿಳಿಸದೇ, ಮತ್ತೊಂದು ಶಾಲೆಗೆ ಸೇರಿಸಲು ಕರೆದುಕೊಂಡು ಹೋಗುತ್ತಾರೆ.  ಅಲ್ಲಿಂದ, ತೊತ್ತೊಚಾನ್ ನ ವಿಶಿಷ್ಠ ಶಾಲೆ ‘ತೊಮೊಯೆ’ ಗೆ ಪಯಣ ಶುರುವಾಗುತ್ತದೆ.

‘ತೊಮೊಯೆ’ ಕೊಬಾಯಾಶಿ ಎಂಬುವವರ ಕನಸಿನ ಕೂಸು.  ಮಕ್ಕಳನ್ನು ಮಕ್ಕಳ ಹಾಗೆಯೇ ಬೆಳೆಸಬೇಕು, ರೇಸ್ ಕುದುರೆಗಳಂತಲ್ಲ! ಎಂಬುದರಲ್ಲಿ ಅಪಾರ ನಂಬಿಕೆಯಿಟ್ಟಿದ್ದವರು. ಹಾಗಾಗಿ ಅವರ ಶಾಲೆಯಲ್ಲಿ ಯಾವುದೇ ರೀತಿಯ ನಿಯಮಾವಳಿಗಳು ಇರಲಿಲ್ಲ. ಕಲಿಕೆ ಎಂಬುದು ಸ್ವಚ್ಚಂದವಾಗಿ ಮಕ್ಕಳು ಆಹ್ಲಾದಿಸಬೇಕೇ ಹೊರತು ಒತ್ತಾಯದಿಂದ ಓದುವುದಲ್ಲ ಎಂದು ನಂಬಿದ್ದ ಅವರು, ಅದಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟರು.  ‘ತೊಮೊಯೆ’ ಪ್ರಾರಂಭಿಸುವ ಮುನ್ನಾ, ಪ್ರಪಂಚದ ಅನೇಕ ಶಾಲೆಗಳಿಗೆ ಭೇಟಿ ನೀಡಿ, ತಮ್ಮ ಶಾಲೆ ಹೇಗಿರಬೇಕು? ಎಂಬುದರ ಬಗ್ಗೆ ಖಚಿತ ಅಭಿಪ್ರಾಯ ಹೊಂದಿದ್ದರು.  ಅದ್ಭುತ ಶಿಕ್ಷಕ! ನಮ್ಮ ಮಕ್ಕಳಿಗೆ ಇಂತಹ ಒಬ್ಬ ಶಿಕ್ಷಕ ಸಿಕ್ಕರೂ ಸಾಕು ಎಂಬ ಬಯಕೆ ಪ್ರತಿಯೊಬ್ಬರಲ್ಲೂ ಉಂಟು ಮಾಡುವಂತಹ ವ್ಯಕ್ತಿ.

‘ತೊಮೊಯೆ’ ಶಾಲೆಯ ಕಟ್ಟಡವೇ ಅತ್ಯಂತ ಸೊಗಸು. ರೈಲು ಗಾಡಿಗಳದ್ದು! ಇಂತಹ ಕಲ್ಪನೆಯಾದರೂ ನಮಗೆ ಬರಬಹುದೇ? ಪುಟ್ಟ, ಪುಟ್ಟ ಮಕ್ಕಳಿಗೆ ರೈಲಿನ ಪ್ರಯಾಣ ಎಂದರೆ ಬಹಳ ಇಷ್ಟವಲ್ಲವೇ?  ಇನ್ನೂ ಅಂತಹ ರೈಲು ಗಾಡಿಯೇ ಶಾಲೆಯಾಗಿಬಿಟ್ಟರೆ?  ಓದಿನ ಸುಖ! ಆಹಾ! :-)  ಶಾಲೆಯೆಂದರೆ ಜೈಲು ಎಂದುಕೊಂಡಿದ್ದ ತೊತ್ತೊಚಾನ್, ‘ತೊಮೊಯೆ’ ಪ್ರವೇಶಿಸಿದೊಡನೆಯೇ, ಈ ರೈಲು ಗಾಡಿಯನ್ನು ನೋಡಿ ದಂಗಾಗಿಬಿಡುತ್ತಾಳೆ.  ಇದೇ ಶಾಲೆಗೆ ಸೇರಬೇಕು ಎಂದು ನಿಶ್ಚಯಿಸಿಬಿಡುತ್ತಾಳೆ.  ಆದರೆ ಈಗಾಗಲೇ ಒಂದು ಶಾಲೆಯಿಂದ ಹೊರದಬ್ಬಿಸಿಕೊಂಡಿರುವ ಈ ‘ತುಂಟಿ’ ಯನ್ನು, ಕೊಬಾಯಾಶಿ ಸೇರಿಸಿಕೊಳ್ಳುವರೇ? ಎಂಬುದು ‘ಅಮ್ಮ’ ನ ತಾಕಲಾಟ. ಇವಾವುದರ ಅರಿವಿಲ್ಲದೆ, ಮುಖ್ಯೋಪಾಧ್ಯಾಯರ ಕೋಣೆಯನ್ನು ಪ್ರವೇಶಿಸುವ ಪುಟ್ಟ ಹುಡುಗಿ ತೊತ್ತೊ-ಚಾನ್, ಸುಮಾರು ೪ ಗಂಟೆಗಳ ಕಾಲ ಕೊಬಾಯಾಶಿಯವರೊಂದಿಗೆ ಮಾತಾಡುತ್ತಾಳೆ! ಯಾರ ಸಂದರ್ಶನ ಯಾರು ಮಾಡಿದ್ದು? :-)  ಪುಸ್ತಕವನ್ನು ಓದಿಯೇ ತಿಳಿಯಬೇಕು.

ಹೀಗೆ ಶುರುವಾಗುವ ತೊತ್ತೊಚಾನ್ ನ ‘ತೊಮೊಯೆ’ ಯ ಕಥೆ, ಆ ಬಾಲ ಭಾಷೆಯಲ್ಲಿಯೇ ಮುಂದುವರೆಯುತ್ತದೆ. ಓದುವ ಪ್ರತಿಯೊಬ್ಬರೂ ೬,೭ ವರ್ಷದವರಾಗುತ್ತಾರೆ! ಅನೇಕ ಪುಟ್ಟ, ಪುಟ್ಟ ಘಟನೆಗಳು ‘ಹಿರಿಯರ’ ದೃಷ್ಠಿಯಲ್ಲಿ ‘ಕೆಲಸಕ್ಕೆ ಬಾರದಂತದ್ದು, ತುಂಟತನದ್ದೋ ಅಥವಾ ಕಿರಿಕಿರಿಯದ್ದೋ, ಇವೆಲ್ಲವೂ ಆ ಪುಟ್ಟ ಹುಡುಗಿಯ ಕಣ್ಗಳಲ್ಲಿ ಮಹತ್ತರವಾಗಿ ಕಾಣುತ್ತದೆ. ಒಂದು ಪುಟ್ಟ ಘಟನೆ - ತೊತ್ತೊಚಾನ್ ಳ ಪರ್ಸ್ ಒಮ್ಮೆ ಶಾಲೆಯ ಕಕ್ಕಸು ಗುಂಡಿಯಲ್ಲಿ ಬಿದ್ದು ಹೋಗುತ್ತದೆ.  ಆಕೆ ಅದನ್ನು ಅಲ್ಲಿಯೇ ಬಿಟ್ಟುಬಿಡಲು ತಯಾರಿರುವುದಿಲ್ಲ. ಹಾಗಾಗಿ ಯೋಚಿಸಿ, ತೋಟದ ಕೆಲಸಕ್ಕಾಗಿ ತಂದಿದ್ದ ದೊಡ್ಡ ಸಟ್ಟುಗವನ್ನು ತಂದು, ಅಗೆಯಲು ಶುರು ಮಾಡುತ್ತಾಳೆ, ಕೊಬಾಯಾಶಿ ಬಂದವರು ಆಕೆಯನ್ನು, ಆಕೆಯ ಪಕ್ಕ ರಾಶಿ ಬಿದ್ದಿದ್ದ ಕೊಳಕನ್ನು ನೋಡಿ ಏನಾಗಿದೆ? ಎಂದು ವಿಚಾರಿಸುತ್ತಾರೆ.  ಪರ್ಸ್ ಕಳೆದು ಹೋದ ವಿಚಾರ ತಿಳಿದು, ‘ಸರಿ, ಎಲ್ಲಾ ಆದ ಮೇಲೆ, ಮತ್ತೆ ಆ ಕೊಳಕನ್ನು ವಾಪಾಸು ಆ ಗುಂಡಿಗೆ ತುಂಬಿಬಿಡು’ ಎಂದು ಹೇಳಿ ಹೊರನಡೆಯುತ್ತಾರೆ.  ಸುಮಾರು ಹೊತ್ತಿನ ನಂತರವೂ ಅವಳನ್ನು ‘ಪರ್ಸ್ ಸಿಕ್ಕಿತೇ?’ ಎಂದು ಕೇಳುವರೇ ಹೊರತು ಇನ್ನೇನೂ ಹೇಳುವುದಿಲ್ಲ. ಕೊನೆಗೂ ಪರ್ಸ್ ಸಿಕ್ಕದೇ, ತೊತ್ತೊಚಾನ್ ನಿರಾಶಳಾಗಿ, ದುರ್ಗಂಧ ಬೀರುತ್ತಿದ್ದ ಆ ಕೊಳಕನ್ನು ಮತ್ತೆ ಗುಂಡಿಗೆ ತುಂಬಿಸಿ ಹೊರಡುತ್ತಾಳೆ!

ಮಧ್ಯಾಹ್ನದ ಆ ಮಕ್ಕಳ ಊಟವಂತೂ ನಿಜಕ್ಕೂ ಚಂದ. ‘ಒಂದಿಷ್ಟು ನೆಲದ್ದು, ಒಂದಿಷ್ಟು ಜಲದ್ದು’ ತೆಗೆದುಕೊಂಡು ಬರಬೇಕು ಮತ್ತು ಊಟಕ್ಕೂ ಮುನ್ನಾ ಅವರ ಪಾರ್ಥನೆ ‘ಅಗಿಯಿರಿ, ಅಗಿದು ತಿನ್ನಿರಿ’ ಎನ್ನುವ ಪುಟ್ಟ ಪದ್ಯವಾಗಿರುತ್ತದೆ.  ಊಟವಾದ ನಂತರ ಮಕ್ಕಳ ಇಷ್ಟದ ಹಾಗೇ ವಾಕಿಂಗ್ ಅಥವಾ ಈಜುವುದೋ ಮುಂತಾದ ಚಟುವಟಿಕೆಗಳಲ್ಲಿ ತೊಡಗುತ್ತಿದ್ದರು. ಅಮೇರಿಕಾದಿಂದ ಪುಟ್ಟ ಹುಡುಗನೊಬ್ಬ ಈ ಶಾಲೆಗೆ ಬಂದು ಸೇರುತ್ತಾನೆ.  ಅವನಿಗೆ ಈ ಮಕ್ಕಳು ಜಪಾನೀಸ್ ಕಲಿಸುವುದು, ಆತನಿಂದ ಇಂಗ್ಲೀಷ್ ಭಾಷೆ ಕಲಿಯುತ್ತಾ ಹೋಗುತ್ತಾರೆ.  ಅಂಗವಿಕಲರು, ಹೆಣ್ಣು ಮಕ್ಕಳು, ಗಂಡು ಮಕ್ಕಳು, ಜಪಾನೀಯರು, ಅಮೇರಿಕನ್ನರು ಎನ್ನುವ ಬೇಧಭಾವವಿಲ್ಲದೇ, ಯಾರಿಗೂ ಕೂಡ ಮುಜುಗರವಾಗದಂತಹ, ಎಲ್ಲರಲ್ಲೂ ಆತ್ಮವಿಶ್ವಾಸ ಉಕ್ಕುವಂತಹ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸುತ್ತಿದ್ದರು. ಸಂಗೀತ ಕಲಿಯುತ್ತಿದ್ದರು,  ಬೇಸಿಗೆಯಲ್ಲಿ ಕ್ಯಾಂಪು ಹಾಕುತ್ತಿದ್ದರು, ಪ್ರವಾಸಕ್ಕೆ ಹೋಗುತ್ತಿದ್ದರು, ಶಾಲೆಯಲ್ಲಿಯೇ ‘ನೈಟ್ ಔಟ್’ ಮಾಡುತ್ತಿದ್ದರು, ಅಡುಗೆ ಮಾಡುತ್ತಿದ್ದರು,ಇಷ್ಟವಿದ್ದವರೂ ವಿಜ್ಞಾನ ಪ್ರಯೋಗಗಳಲ್ಲಿ ತೊಡಗುತ್ತಿದ್ದರು ಹೀಗೆ..... ಮಗುವೊಂದು ‘ದೊಡ್ಡವ’ನಾಗಿ ಬೆಳೆಯಲು ಬೇಕಾದ ಎಲ್ಲವನ್ನೂ ಹೇಳಿಕೊಡುತ್ತಿದ್ದರು.  ಮಕ್ಕಳು ಅದನ್ನೊಂದು ಶಿಕ್ಷೆ ಎಂಬಂತೆ ಅನುಭವಿಸದೇ, ಆನಂದದಿಂದ ‘ದೊಡ್ಡವ’ರಾಗುತ್ತಿದ್ದರು.

ಕೇವಲ ೫೦ ಮಕ್ಕಳಿಗಿಂತ ಕಡಿಮೆ ಇದ್ದ ‘ತೊಮೊಯೆ’ ಶಾಲೆಗೆ ಯುದ್ಧದ ಭೀತಿ ಆವರಿಸುತ್ತದೆ.  ಆದರೆ ಮಕ್ಕಳಿಗೆ ಮಾತ್ರ ಇದಾವುದರ ಅರಿವಿಲ್ಲದಂತೆ ನೋಡಿಕೊಳ್ಳುತ್ತಾರೆ.  ಆದರೆ ಬಾಂಬ್ ದಾಳಿಯಿಂದ ‘ತೊಮೊಯೆ’ ನಾಶವಾಗಿಬಿಡುತ್ತದೆ.  ಕೊಬಾಯಾಶಿಯವರಿಗೆ ಮತ್ತೊಂದು ಇಂತಹ ಶಾಲೆಯನ್ನು ಮಾಡಲು ಸಾಧ್ಯವಾಗುವುದಿಲ್ಲ. ತೊತ್ತೊಚಾನ್ ತಾನು ಬೆಳೆದು ದೊಡ್ಡವಳಾದ ಮೇಲೆ ಇಂತಹದೊಂದು ಶಾಲೆಯನ್ನು ನಿರ್ಮಿಸುವುದಾಗಿ ಶಪಥ ಮಾಡುತ್ತಾಳೆ. ಕೊನೆಗೊಮ್ಮೆ, ತನ್ನ ಈ ಶಾಲೆಯಲ್ಲಿ ಬೆಳೆದವರೆಲ್ಲಾ ಏನಾಗಿದ್ದಾರೆ? ಎಂಬುದನ್ನು ದಾಖಲಿಸುತ್ತಾ ಹೋಗುತ್ತಾಳೆ.  ಶಾಲೆಯಿಂದ ಹೊರದಬ್ಬಿಸಿಕೊಂಡಿದ್ದ ತೊತ್ತೊಚಾನ್ ಈಗ ತೆತ್ಸುಕೋ ಕುರೊಯಾನಾಗಿ - ಪ್ರಖ್ಯಾತ ಜಪಾನೀ ನಟಿ ಮತ್ತು ಯುನಿಸೆಫ್ ನ ಸದ್ಭಾವನಾ ರಾಯಭಾರಿ!

ಇಂತಹ ಶಾಲೆಯ ಪರಿಕಲ್ಪನೆ ಬೆಂಗಳೂರಿನಲ್ಲಿಯೂ ಸುಮಾರು ಏಳೆಂಟು ಕಡೆ ಇವೆ.  ಹೆಸರಿಸಬಹುದಾದದ್ದು ವ್ಯಾಲೀ ಸ್ಕೂಲ್,  ಸೆಂಟರ್ ಫಾರ್ ಲರ್ನಿಂಗ್ ಮುಂತಾದವು, ಮುಖ್ಯವಾಗಿ ಈ ಶಾಲೆಗಳು ಜಿಡ್ಡು ಕೃಷ್ಣಮೂರ್ತಿ ಯವರ ಆಶಯಾಧಾರಿತ ರೂಪುಗೊಂಡವು.  ಆದರೆ ಎಷ್ಟರ ಮಟ್ಟಿಗೆ ಯಶಸ್ವಿಯಾಗಿದೆ? ಎಂಬುದು ಅಷ್ಟಾಗಿ ತಿಳಿದುಬಂದಿಲ್ಲ.  ಒಟ್ಟಿನಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಇಂತಹದೊಂದು ಕ್ರಾಂತಿ ಆಗಲೇಬೇಕಾದ ಅವಶ್ಯಕತೆಯಂತೂ ಇದೆ.  ಆದಷ್ಟೂ ಬೇಗ ಆಗಲಿ ಎಂಬುದಷ್ಟೇ ನನ್ನ ಬಯಕೆ.  ಪ್ರತಿಯೊಬ್ಬರೂ ತೊತ್ತೊ-ಚಾನ್ ಓದಿದರೆ, ಮಕ್ಕಳ ಮನಸ್ಸನ್ನು ಅರ್ಥ ಮಾಡಿಕೊಳ್ಳುವುದು ಸುಲಭಸಾಧ್ಯ! ಮಕ್ಕಳ ಶಿಕ್ಷಣ ಹೇಗಿರಬೇಕೆಂಬುದನ್ನು ಕೂಡಾ!