Thursday, June 5, 2014

ಸಹನೆ - ಹೆಣ್ಣಿನ ‘ಛದ್ಮವೇಷ’!

ದ್ರೌಪದಿ - ಮಹಾಭಾರತದಲ್ಲಿ ರಚಿತವಾಗಿರುವ ಅದ್ಭುತ ಪಾತ್ರ.  ಆಕೆಯ ಬಗ್ಗೆ ಅಸಂಖ್ಯಾತ ಕಥೆಗಳಿವೆ.  ದ್ರುಪದ ಮಹಾರಾಜ, ‘ದ್ರೋಣ’ನ ಮೇಲೆ ಸೇಡು ತೀರಿಸಿಕೊಳ್ಳಲು ಮಗನಿಗಾಗಿ ಪ್ರಾರ್ಥಿಸಿ ಯಜ್ಞ ನಡೆಸುವಾಗ ದೃಷ್ಟದುಮ್ಯನೊಟ್ಟಿಗೆ ಹುಟ್ಟಿದವಳು ದ್ರೌಪದಿ, ‘ಅಗ್ನಿಯ ಮಗಳು’. ಅದೇ ‘ದ್ರೋಣ’ ನ ಶಿಷ್ಯ ‘ಅರ್ಜುನ’, ದ್ರುಪದ ಇಟ್ಟಿದ್ದ ಸ್ವಯಂವರ ಪರೀಕ್ಷೆಯಲ್ಲಿ ಗೆದ್ದು, ಇವಳನ್ನು ವರಿಸಿದ.  ಅಲ್ಲೂ ಕೂಡ ಮೊದಲಿಗೆ ಬಾಣವನ್ನು ಎದೆಗೇರಿಸಿದ್ದು ‘ಕರ್ಣ’. ಕರ್ಣ, ಈ ಸ್ವಯಂವರ ಪರೀಕ್ಷೆ ಎದುರಿಸಿದ್ದು ತನಗಾಗಿಯಲ್ಲದೆ, ದುರ್ಯೋಧನನಿಗಾಗಿ. ಇದನ್ನು ತಿಳಿದ ದ್ರೌಪದಿ, ಕರ್ಣನ ಮೇಲೆ ಮನಸ್ಸಾಗಿದ್ದರೂ, ‘ಸೂತಪುತ್ರ’ ನೆಂದು ಎಲ್ಲರ ಮುಂದೆ ಜರಿದು, ಅವನನ್ನು ಮದುವೆಯಾಗಲು ನಿರಾಕರಿಸಿದಳು. ದುರ್ಯೋಧನನಿಗೆ ಈ ಘಟನೆಯಿಂದ ಈಕೆಯ ಮೇಲೆ ದ್ವೇಷ ಶುರುವಾಯಿತು. 

ಅರ್ಜುನನ ಮಡದಿಯಾಗಿ ಮನೆ ಸೇರಿದ ಅಪ್ರತಿಮ ಸೌಂದರ್ಯವತಿ ‘ದ್ರೌಪದಿ’, ಅತ್ತೆ ‘ಕುಂತಿ’ಯ ಯೋಜನೆಯಿಂದಾಗಿ, ಪಂಚಪಾಂಡವರ ಮಡದಿಯಾಗಿ  ‘ವಸ್ತು’ವಿನಂತೆ ಹಂಚಿಹೋದಳು. ಇಲ್ಲಿಂದ ಆಕೆಯ ಮೇಲಿನ ದೌರ್ಜನ್ಯ, ಆಕೆ ಅದನ್ನು ಎದುರಿಸುವ ಬಗೆ, ಅವಳ ಕಷ್ಟ, ಹೆಂಗಸರಿಗೆ ಅರ್ಥವಾದಷ್ಟು ಇನ್ಯಾರಿಗೂ ಆಗದು.  ವರ್ಷಕೊಮ್ಮೆ ಪತಿಯರನ್ನು ಬದಲಾಯಿಸುವ ಈಕೆ ನಂಬುವುದಾದರೂ ಯಾರನ್ನು? ಪ್ರೀತಿಸುವುದಾದರೂ ಯಾರನ್ನು? ಅಥವಾ ಒಬ್ಬ ಪಾಂಡವನನ್ನೇ ಪ್ರೀತಿಸಿದರೂ ಕೂಡ, ಬಲವಂತವಾಗಿಯಾದರೂ ರೂಲ್ಸ್ ಪ್ರಕಾರ ಉಳಿದ ನಾಲ್ವರನ್ನು ಕೂಡಲೇಬೇಕಿತ್ತಲ್ಲವೇ?  ದ್ರೌಪದಿ ಪ್ರತಿ ಬಾರಿ ಪತಿಯನ್ನು ಬದಲಾಯಿಸುವಾಗ, ‘ಕನ್ಯತ್ವ’ ಮರುಕಳಿಸುವ ವರ ಪಡೆದಿದ್ದಳು ಎನ್ನುವುದನ್ನು ಕೂಡ ಒಪ್ಪದಿದ್ದರೂ ಪ್ರೀತಿ ಇಲ್ಲದ ಮೇಲೆ ಸಂಭೋಗ, ಬರೀ ಕಾಮವಷ್ಟೇ!  ಹಾಗಾಗಿ ಆಕೆ ಐವರನ್ನು ಮದುವೆಯಾಗಿದ್ದರೂ ಕೂಡ, ‘ಕನ್ಯೆ’ ಎನ್ನುವುದರಲ್ಲಿ ತಪ್ಪಿಲ್ಲ.  

ಗಂಡಿಗೆ ತನ್ನೆಲ್ಲಾ ಚಿಂತೆಯನ್ನು ಮರೆಯಲು, ಒತ್ತಡವನ್ನು ಕಳೆದುಕೊಳ್ಳಲು ಸಂಭೋಗ ಬೇಕು. ಕುಡಿತದ ಮತ್ತಿನಲ್ಲಿ ತನ್ನೆಲ್ಲಾ ಕಷ್ಟಗಳನ್ನು ಕ್ಷಣ ಕಾಲ ಮರೆಯುವ ಹಾಗೆ, ಸಂಭೋಗದ ಮೂಲಕ ಕ್ಷಣಿಕ ಸುಖ ಕಂಡುಕೊಳ್ಳುತ್ತಾನೆ. ಆದರೆ ಹೆಣ್ಣಿಗೆ ಸಂಭೋಗ ಎಂಬುದು ಧ್ಯಾನಸ್ಥ ಸ್ಥಿತಿ, ಎಲ್ಲವನ್ನೂ ಮರೆತು, ಎಲ್ಲರನ್ನೂ ಮರೆತು, ತನ್ನೊಳಗೆ ತಾನು ಲೀನಳಾಗುವ ಸ್ಥಿತಿ. ಆತಂಕವೋ, ಚಿಂತೆಯೋ, ಅಶಾಂತಿಯೋ ಇದ್ದರೆ ಆಕೆಗೆ ಸಂಭೋಗದ ಬಯಕೆಯಿರುವುದಿಲ್ಲ. ಹಿಂದೆಂದೋ ಓದಿದ ಒಂದು ಜೋಕ್ ನೆನಪಾಗುತ್ತಿದೆ.  ಗಂಡ, ಹೆಂಡತಿ ಸಂಭೋಗಿಸುತ್ತಿರುವಾಗ, ಆಕೆ ತನ್ನ ಮನೆಯ ಮೇಲ್ಚಾವಣಿಗೆ ಯಾವ ಬಣ್ಣ ಹಾಕಿಸಬೇಕೆಂದು ಯೋಚಿಸುತ್ತಿದ್ದಳಂತೆ! ಆಗೆಲ್ಲಾ ಇಂತಹ ಜೋಕ್ಸ್ ಗೆ ನಕ್ಕರೂ, ಈಗ ಅದನ್ನೇ ಮರು ಯೋಚಿಸುವಾಗ ಅನಿಸುತ್ತದೆ - ಹೌದು, ಹೆಣ್ಣು ತನ್ನ ಅಸ್ತಿತ್ವವನ್ನು ಮರೆತು, ಅಲೌಕಿಕವಾಗಿ, ನಿಶ್ಚಿಂತೆಯಿಂದ, ಸಂಭೋಗದಲ್ಲಿ ಕೂಡಿಕೊಂಡರೆ ಮಾತ್ರ ಆಕೆಗೆ ಸಂತೃಪ್ತಿ ಸಿಗುತ್ತದೆ. 

ಪರ್ವದಲ್ಲಿ ದ್ರೌಪದಿಯ ಮನದ ಈ ತೊಳಲಾಟಗಳನ್ನು ಕೆಲವು ಕಡೆ ಚೆಂದವಾಗಿ ಚಿತ್ರಿಸಿದ್ದಾರೆ. ಯುದ್ಧದಲ್ಲಿ ಅವಳ ಮಕ್ಕಳು ಸತ್ತಾಗ, ಈ ಪಂಚಪಾಂಡವರು ಅಷ್ಟಾಗಿ ಗಮನಿಸುವುದಿಲ್ಲ, ಜೊತೆಗೆ ಆಕೆಯನ್ನು ಸಂತೈಸಲು ಬರುವುದಿಲ್ಲ, ನಮೈವರಲ್ಲಿ ಯಾರಿಗೆ ಹುಟ್ಟಿದವರೋ? ಏನೋ? ಎಂಬಂತಹ ಅವರ ಮನಸ್ಥಿತಿ, ಆ ಮಕ್ಕಳೊಡನೆ ಅವರಿಗೆ ಭಾವನಾತ್ಮಕ ಸಂಬಂಧವೇ ಇರುವುದಿಲ್ಲ. ಆದರೆ ಅದೇ ಭೀಮ ತನ್ನ ಮಗ ಘಟೋದ್ಗಜನನ್ನು ಹೊತ್ತೊಯ್ಯುವ ದೃಶ್ಯ, ಅಭಿಮನ್ಯು ಸತ್ತಾಗ ಅರ್ಜುನ ರೋದಿಸುವ ದೃಶ್ಯಗಳು, ದ್ರೌಪದಿಯ ಮನಸ್ಥಿತಿಯನ್ನು ಊಹಿಸಿಕೊಂಡರೆ ನಮ್ಮ ಮನವನ್ನು ಕಲಕಿಬಿಡುತ್ತದೆ. 

ಈಗ ‘ದ್ರೌಪದಿ’ ಯ ಬಗ್ಗೆ ಮಾತನಾಡುವಾಗ ಎಷ್ಟೇ ಆಕೆ ದಿಟ್ಟೆ, ವೀರವನಿತೆ, ಲೋಕವನ್ನು ಎದುರಿಸಿದವಳು ಎಂದು ಹೇಳಿದರೂ, ಆಗಿನ ಪರಿಸ್ಥಿತಿಯಲ್ಲಿ ಅವಳ ಬಗ್ಗೆ ಎಂತಹ ಕೀಳು ಅಭಿಪ್ರಾಯ ಇತ್ತು ಎಂಬುದಕ್ಕೆ ಅವಳ ವಸ್ತ್ರಾಪರಣದ ಘಟನೆಯೇ ಸಾಕ್ಷಿ.  ಐವರಿಗೆ ಹೆಂಡತಿಯಾದವಳು, ಆರನೆಯವರಿಗೋ ಅಥವಾ ಬೇರಾರಿಗೋ ಹೆಂಡತಿಯಾದರೆ ತಪ್ಪೇನು? ಎಂಬಂಥ ಅಸಹ್ಯ ಮನಸ್ಥಿತಿ ಉಳಿದ ಗಂಡಸರಿಗೆ ಇತ್ತು. ಆಕೆಯ ಮಾನವನ್ನು ಕಾಪಾಡಲು ಆಕೆಯ ಪಂಚಪಾಂಡವರು, ಮಹಾ ಶೂರರು ಅಸಹಾಯಕರಾಗಿದ್ದು ವಿಪರ್ಯಾಸ. ಇಂತಹ ಸಮಯದಲ್ಲಿ ಆಕೆಯನ್ನು ಕಾಪಾಡಲು ಬಂದವನು ‘ಕೃಷ್ಣ’ ಮಾತ್ರ.  ಹಾಗಾಗಿ ಎಲ್ಲಾ ಹೆಂಗಳೆಯರಿಗೂ ‘ಕೃಷ್ಣ’ನೆಂದರೆ ಪ್ರೀತಿ.  ಕೃಷ್ಣ ಹೆಂಗಳೆಯರ ಮನ ಅರಿತದ್ದರಿಂದಲೇ, ಆತ ಸಹಸ್ರಾರು ಮಹಿಳೆಯರಿಗೆ ಗಂಡನಾದರೂ ಕೂಡ, ಪ್ರತಿ ಹೆಣ್ಣು ಕೂಡ ‘ಕೃಷ್ಣ’ ನಂತಹ ಗಂಡ ಬೇಕೆಂದು ಹಪಹಪಿಸುತ್ತಿದ್ದದ್ದು, ರಾಮ ‘ಏಕ’ ಪತ್ನಿವ್ರತಸ್ಥ ನಾದದ್ದರಿಂದಲೇ ಗೌರವ ಪಡೆದದ್ದು.   

ಬಹಳ ದಿವಸಗಳ ಹಿಂದೆ ಪಂಚಕನ್ಯೆಯರ ಬಗ್ಗೆ ಬರೆಯಬೇಕೆಂದುಕೊಂಡಿದ್ದೆ.  ಒಂದಿಬ್ಬರ ಬಗ್ಗೆ ಬರೆದು ಬ್ಲಾಗ್ ನಲ್ಲಿ ಪ್ರಕಟಿಸಿಯೂ ಇದ್ದೆ. ‘ದ್ರೌಪದಿ’ ಯ ಬಗ್ಗೆ ಬರೆಯಲಾಗಿರಲಿಲ್ಲ.  ಅದಕ್ಕೆ ಅವಕಾಶ ದೊರೆತದ್ದು ಕಿರುಚಿತ್ರ ‘ಛದ್ಮವೇಷ’ ನೋಡಿದ ನಂತರ.  ಹೆಚ್ ಎಸ್ ವಿ ಯವರ ನಾಟಕದ ‘ಮೊನೋಲಾಗ್’ ಜೊತೆಜೊತೆಗೆ ಪ್ರಸ್ತುತ ಹೆಣ್ಣಿನ ಕಥೆಯೊಂದನ್ನು ಹೆಣೆದು, ಅದನ್ನು ನಿರೂಪಿಸಿರುವ ರೀತಿ ಚಂದ.  
ನಾಟಕದಲ್ಲಿ ದ್ರೌಪದಿಯ ಪಾತ್ರಧಾರಿ, ನಿಜಜೀವನದಲ್ಲಿ ಕುಡುಕ ಗಂಡ, ಇಬ್ಬರು ಮಕ್ಕಳೊಡನೆ ಬದುಕುವ ಹೆಣ್ಣುಮಗಳೊಬ್ಬಳು,  ಗಂಡನನ್ನು ಹೆಂಡತಿಗಿಂತ ಹೆಚ್ಚಾಗಿ ತಾಯಿಯಂತೆಯೇ ಸಲಹುವ ಇವಳಿಗೊಬ್ಬ ಆಟೋ ಡ್ರೈವರ್ ‘ತಮ್ಮ’.  ತನಗಿರುವಂತೆಯೇ ಈಕೆಗೂ ಕೂಡ  ಅನೈತಿಕ ಸಂಬಂಧ ಆ ಆಟೋಡ್ರೈವರ್ ನೊಟ್ಟಿಗಿರಬಹುದೆಂದು ಸಂಶಯಿಸುವ ಗಂಡ, ಮಕ್ಕಳಿಗೆ ಸುಭದ್ರ ಭವಿಷ್ಯ ಕಲ್ಪಿಸುವಲ್ಲಿ ನಿರತಳಾಗಿರುವ ಹೆಣ್ಣು ಮಗಳು ಈಕೆ, ಇವೆಲ್ಲದರ ನಡುವೆ ಬರುವಂತಹ ಮಕ್ಕಳ ಶಾಲೆಯಲ್ಲಿ ನಡೆಯುವ ‘ಛದ್ಮವೇಷ’ ಸ್ಪರ್ಧೆ, ಒಬ್ಬ ಮಗನನ್ನು ‘ರಾಮ’ನನ್ನಾಗಿಯೂ, ಮತ್ತೊಬ್ಬನನ್ನು ‘ಗಾಂಧಿ’ಯನ್ನಾಗಿಯೂ ರೆಡಿ ಮಾಡುವ ಅಮ್ಮ, ಅಲ್ಲಿ ಶಾಲೆಯಲ್ಲಿ ‘ಭಾರತಮಾತೆ’ ಯ ವೇಷ ಧರಿಸಿದ್ದ ಮಗುವನ್ನು ಕರೆದೊಯ್ಯಲು ಬರದ ಅವಳ ಬೇಜವಾಬ್ದಾರಿ ಪೋಷಕರು, ‘ಕೃಷ್ಣ’ನಂತೆ ತನಗೆ ಸಹಾಯ ಮಾಡುವವ ಎಂದೇ ನಂಬಿಕೊಂಡಿದ್ದ ಇವಳ ನಂಬಿಕೆಯನ್ನು ಹುಸಿ ಮಾಡುವ ಆಟೋ ಡ್ರೈವರ್,  ದ್ರೌಪದಿಯ ಕಾಲದಿಂದಲೂ ಹೆಣ್ಣು ಮಕ್ಕಳ ಶೋಷಣೆ ತಪ್ಪಿಲ್ಲ ಎನ್ನುವುದನ್ನು ನಿರೂಪಿಸುವ ಇವಳ ಮೇಲಿನ ಅತ್ಯಾಚಾರದ ಪ್ರಯತ್ನ, ಅದನ್ನು ಆಕೆ ಒಬ್ಬಂಟಿಯಾಗಿ ಎದುರಿಸುವ ಧೈರ್ಯ, ‘ಸಹನೆ - ಹೆಣ್ಣಿನ ಛದ್ಮವೇಷ’ ಎಂಬುವಲ್ಲಿಗೆ ಕಿರುಚಿತ್ರ ಮುಗಿಯುತ್ತದೆ.

ಚಿತ್ರದ ಟೆಕ್ನಿಕಲ್ ವಿಷಯಗಳ ಬಗ್ಗೆ ಮಾತಾಡುವುದು ಅನಗತ್ಯ.  ಅಲ್ಲಲ್ಲಿ ತುಂಡು, ತುಂಡಾದಂತೆ ಅನಿಸಿದರೂ, ಕೆಲವೊಂದು ಕಡೆ ನಾಟಕೀಯವೆನಿಸಿದರೂ ಕೂಡ ಚಿತ್ರವು ಏನನ್ನು ಹೇಳಬಯಸಿದೆ? ಅದನ್ನು ಚಂದವಾಗಿ ಹೇಳಿದೆ, ಮನಮುಟ್ಟುವಂತೆ ಹೇಳಿದೆ.  ಆದರೆ ಒಂದಷ್ಟು ಹಿರಿಯರು ಹೇಳಿದಂತೆ ‘ದೊಡ್ಡ’ ಚಿತ್ರವಾಗಿ, ತೆರೆಗೆ ಬಂದರೆ ಯಶಸ್ವಿಯಾಗುತ್ತದೆಯೇ? ಕಮರ್ಷಿಯಲೀ ಓಡುವುದೇ?  ಗೊತ್ತಿಲ್ಲ. ಛದ್ಮವೇಷದಲ್ಲಿ ಗಮನ ಸೆಳೆದದ್ದು ನಾಯಕಿ ಪಾತ್ರಧಾರಿಯ ಅಭಿನಯ, ಆಕೆ  ಸಂಭಾಷಿಸುವ ಶೈಲಿ, ಆ ಘಳಿಗೆಯಲ್ಲಿ ನಾವೇ ದ್ರೌಪದಿಯಾಗುತ್ತೇವೆ ಎಂಬುದರಲ್ಲಿ ಸಂಶಯವಿಲ್ಲ.  ವಸ್ತ್ರಾಪರಣದ ಸಂದರ್ಭದಲ್ಲಿ ಆಕೆ ಹೇಳುವ ಮಾತುಗಳು ‘ಕೃಷ್ಣ, ಅಂದು ನೀ ಬರಬಾರದಿತ್ತು, ಈ ದ್ರೌಪದಿ ಬೆತ್ತಲಾಗಬೇಕಿತ್ತು,  ಆ ಮೂಲಕ ಅಲ್ಲಿ ನೆರೆದಿದ್ದ ಸಮಸ್ತ ಗಂಡಸರು ಬೆತ್ತಲಾಗಬೇಕಿತ್ತು, ಇಡೀ ಸಮಾಜ ಅವರನ್ನು ಗೇಲಿ ಮಾಡುತ್ತಿತ್ತು.  ನೀ ಬಂದು ಕಾಪಾಡಿದ್ದು ನನ್ನನ್ನಲ್ಲ, ಅವರನ್ನು’ ಎಂಬಂತಹ ಮಾತುಗಳು, ಮನಸ್ಸನ್ನು ಚುಚ್ಚಿಬಿಡುತ್ತವೆ.  ಮರುಕ್ಷಣವೇ ಆಕೆಯ ಒಳಧ್ವನಿ ಆಕೆಯನ್ನು ಎಚ್ಚರಿಸುತ್ತದೆ ‘ಅವರನೆಲ್ಲಾ ತೆಗಳುತ್ತಿರುವೆಯಲ್ಲಾ? ನೀನೇಕೆ ಅಸಹಾಯಕಳಾಗಿ ಎರಡು ಕೈಮೇಲೆತ್ತಿ, ಕೃಷ್ಣನ ಮೊರೆಹೋದೆ, ಅಗ್ನಿಯ ಮಗಳು ನೀನೆಂಬುದನ್ನು ಮರೆತದ್ದು ಏಕೆ? ಎನ್ನುತ್ತದೆ. ಆ ಕ್ಷಣದಲ್ಲಿ ನಮಗೂ ಕೂಡ ‘ಹೌದಲ್ಲಾ? ಇದುವರೆವಿಗೂ ನಾವು ನಮ್ಮನ್ನು ರಕ್ಷಿಸಿ, ಎಂದೇ ಮೊರೆಹೋಗುತ್ತಿದ್ದೇವೆ ಹೊರತು ಬೇರೆಯವರು ನಮ್ಮನ್ನೇಕೆ ರಕ್ಷಿಸಬೇಕು? ನಮ್ಮನ್ನು ನಾವೇ ರಕ್ಷಿಸಿಕೊಳ್ಳಬೇಕಲ್ಲವೇ? ಎಂದೆನಿಸಿಬಿಡುತ್ತದೆ.

ಮಹಿಳೆಯರನ್ನು ದುರ್ಬಲರು ಎಂದು ಚಿತ್ರಿಸಿ, ಚಿತ್ರಿಸಿ, ನಿಜವಾಗಿಯೂ ನಾವೆಲ್ಲರೂ ದುರ್ಬಲರಾಗಿಬಿಟ್ಟಿದ್ದೇವೆ, ಈ ಹೊತ್ತಿನಲ್ಲಿ ಅತ್ಯಾಚಾರ ಅಥವಾ ಇನ್ಯಾವುದೇ ಶೋಷಣೆಗಳನ್ನು ತಪ್ಪಿಸಿಕೊಳ್ಳಲು ಅವಶ್ಯವಾಗಿಯೂ ಹೆಣ್ಣು ಸಮರ್ಥಳು, ಯಾರ ಮೇಲೂ ಡಿಪೆಂಡ್ ಆಗಬೇಕಂತಿಲ್ಲ, ಯಾಕೆ ಆಗಬೇಕು? ಎನ್ನುವ ಸತ್ಯ ಮುಖಕ್ಕೆ ಹೊಡೆದು ಎಬ್ಬಿಸುತ್ತದೆ. ಹೆಣ್ಣು ತಾಯಿಯಾಗಿ ಎಲ್ಲರನ್ನು ಸಲಹುತ್ತಾಳೆ ಎಂಬುದಾದರೆ ಅವಳನ್ನು ಕೂಡ ಅವಳೇ ಸಲುಹಬಲ್ಲಳು ಎಂದನ್ನಿಸಿ, ಮೈ ಹಗುರಾಗಿಬಿಡುತ್ತದೆ.  ಈ ತರಹದ ಒಂದು ಆಲೋಚನೆ, ಶಕ್ತಿ ಆ ಚಿತ್ರ ನೀಡಿತು ಎಂಬುದಂತೂ ಸುಳ್ಳಲ್ಲ.  ಪ್ರಸ್ತುತ ಸಮಾಜದಲ್ಲಿ ಹೆಣ್ಣಿನ ಶೋಷಣೆಗಳಿಗೆ, ಹೆಣ್ಣು ತನ್ನನ್ನು ತಾನು ದುರ್ಬಲಳು ಅಂದುಕೊಳ್ಳುವುದು ಕೂಡ ಕಾರಣ ಎಂದೆನಿಸಿಬಿಡುತ್ತದೆ. ಚಿತ್ರದ ಕೊನೆಯಲ್ಲಿ ಅತ್ಯಾಚಾರಿಗಳನ್ನು ಎದುರಿಸಿ ಗೆದ್ದು ಬಂದ ಇವಳನ್ನು ಸಂದರ್ಶಿಸುವವರಿಗೆ ಆಕೆ ನೀಡುವ ಹೇಳಿಕೆ, ಇಡೀ ಚಿತ್ರದ ಪ್ಲಸ್ ಪಾಯಿಂಟ್ ಆಗಿಬಿಡುತ್ತದೆ. ‘ನನಗಿಬ್ಬರು ಗಂಡು ಮಕ್ಕಳು, ಅವರು ಹೆಣ್ಣುಮಕ್ಕಳನ್ನು ಗೌರವಿಸುವಂತೆ ಬೆಳೆಸುತ್ತೇನೆ’ ಎಂಬುದು ಅಲ್ಲೂ ಕೂಡ ಹೆಣ್ಣಿನ ಜವಾಬ್ದಾರಿಯನ್ನು ಅರ್ಥ ಮಾಡಿಸುತ್ತದೆ.