Monday, February 10, 2014

ಜಾತಿ ರಾಜಕಾರಣ!


ನಾವಿದ್ದ ಮನೆಯ ಸುತ್ತಮುತ್ತಲೂ ಅನೇಕ ಜಾತಿಗಳು ಸುತ್ತುವರೆದಿದ್ದರೂ, ಜಾತಿ ಬೇಧ / ಸಂಘರ್ಷ ನಮ್ಮನೆಂದಿಗೂ ಭಾಧಿಸಿರಲಿಲ್ಲ. ನಾವು ತೊಂದರೆಗೀಡಾದದ್ದು, ಅವಮಾನ ಮಾಡಿಸಿಕೊಂಡದ್ದು, ಕೊರಗಿದ್ದು, ನೊಂದಿದ್ದು ಎಲ್ಲವೂ ಈ ಶ್ರೀಮಂತ, ಬಡವ ಎಂಬ ವರ್ಗೀಕರಣದಿಂದಲೇ! ಹಾಗಾಗಿ ನಮ್ಮಷ್ಟಕ್ಕೆ ನಾವು ಪುಸ್ತಕಗಳನ್ನು ಓದುವುದನ್ನು ರೂಢಿಸಿಕೊಂಡೆವು. ಎಷ್ಟೇ ಬಡತನವಿದ್ದರೂ, ಪುಸ್ತಕಗಳನ್ನು ಓದುವುದಕ್ಕೆ ‘ಅಮ್ಮ’ ನಮ್ಮನ್ನು ನಿರ್ಬಂಧಿಸಿರಲಿಲ್ಲ. ಅದಕ್ಕೆ ಹಲವಾರು ಕಾರಣಗಳಿದ್ದವು. 

ಮುಖ್ಯವಾದವು - ೧. ಅಮ್ಮನಿಗೆ (ಅವರ ಅಣ್ಣ ಹೇಳಿಕೊಟ್ಟಂತೆ) ಮಕ್ಕಳು ಪಠ್ಯ ಪುಸ್ತಕಗಳ ಜೊತೆಗೆ ಉಳಿದ ಪುಸ್ತಕಗಳನ್ನು ಓದುವುದರಿಂದ ಭಾಷೆಯ ಮೇಲಿನ ಜ್ಞಾನ ಹೆಚ್ಚಾಗುವುದು ಎಂಬ ನಂಬಿಕೆ. ೨. ನಮಗೆ ಬಡತನವಿದ್ದುದ್ದರಿಂದ, ಹೊರಗೆ ಹೋಗಿ ಆಡುವಷ್ಟು ಸಮಯ ನಮ್ಮಲ್ಲಿರಲಿಲ್ಲ. ಏನಾದರೂ ಸಣ್ಣಪುಟ್ಟ ಕೆಲಸ ಮಾಡುತ್ತಾ, ಹಣ ಸಂಪಾದಿಸುವ ಅವಶ್ಯಕತೆ ಇತ್ತು. ಹಾಗಾಗಿ ಎಲ್ಲಾ ಕೆಲಸಗಳು ಮುಗಿದ ಮೇಲೆ ರಾತ್ರಿ ಹೊತ್ತು ಪುಸ್ತಕವನ್ನು ಓದುವುದರಲ್ಲಿಯೇ ಮನರಂಜನೆ ಕಾಣುತ್ತಿದ್ದೆವು. ೩. ನಾವಿದ್ದ ವಠಾರದ ಸುತ್ತಮುತ್ತಲಿನ ಜನರು ಅವಿದ್ಯಾವಂತರು ಹಾಗೂ ಅವಾಚ್ಯ ಶಬ್ದಗಳನ್ನು ಯಥೇಚ್ಛವಾಗಿ ಬಳಸುತ್ತಿದ್ದುದರಿಂದ, ಹಳ್ಳಿಯಿಂದ ಬಂದ ಅಮ್ಮ ಇಂತಹ ಭಾಷೆಯನ್ನು ಎಂದು ಕೇಳದಿದ್ದುದು, ಆಕೆಗೆ ತನ್ನ ಮಕ್ಕಳು ಕೂಡ ಈ ಭಾಷೆ ಎಲ್ಲಿ ಕಲಿತುಬಿಡುತ್ತಾರೋ? ಎನ್ನುವ ಭಯ. ಇಂದಿಗೂ ನನಗೆ ಸಿಟ್ಟು ಬಂದರೆ, ಯಾವ ಕೆಟ್ಟ ಪದಗಳು ಬೈಯಲು ಬರುವುದಿಲ್ಲವೆಂದರೆ, ಅದು ಅಮ್ಮ ಕಲಿಸಿದ ಸಂಸ್ಕೃತಿ!  ಇರಲಿ.

ಹೀಗೆ ಪುಸ್ತಕ ಪ್ರೀತಿ ಬೆಳೆಸಿಕೊಂಡ ನಾವು, ಹತ್ತಿರದಲ್ಲಿಯೇ ಇದ್ದ ಸೆಂಟ್ರಲ್ ಲೈಬ್ರರಿಗೆ ಎಡತಾಕುತ್ತಿದ್ದೆವು. ೨, ೩ ನೇ ಕ್ಲಾಸಿನಲ್ಲಿಯೇ ಪತ್ತೇದಾರಿ ಕಾದಂಬರಿಗಳನ್ನು ಓದುವ!, ನಂತರ ಅದು ಬೋರಾದಾಗ, ಮತ್ತಿನ್ಯಾರದೋ, ಹೀಗೆ ಸುಮಾರಷ್ಟು ಪುಸ್ತಕಗಳನ್ನು ಓದಲು ಶುರುಮಾಡಿದೆವು. ಪುಸ್ತಕಗಳನ್ನು ಬರೆದಿರುವ ಸಾಹಿತಿಗಳಂತೂ ದೇವರಂತೆಯೇ ಭಾಸವಾಗುತ್ತಿದ್ದರು. ತೇಜಸ್ವಿ, ಭೈರಪ್ಪನವರ ಪುಸ್ತಕಗಳನ್ನು ಓದಿದಾಗಲಂತೂ, ಇವರು ಬೇರೆ ಯಾವುದೋ ಲೋಕದಿಂದ ಬಂದವರಿರಬೇಕು ಎಂಬ ಅನಿಸಿಕೆಯೂ ಕೂಡ ಮೂಡಿಬಿಡುತ್ತಿತ್ತು. ಇವರೆಲ್ಲರನ್ನೂ ಪೂಜ್ಯಭಾವದಿಂದ ನೋಡುವಂತಾಗುತ್ತಿತ್ತು. ಪತ್ತೇದಾರಿ ಕಾದಂಬರಿಗಳು ಪುಸ್ತಕಗಳ ಹುಚ್ಚನ್ನು ಹಚ್ಚಿದರೆ, ಕುವೆಂಪು, ಭೈರಪ್ಪನವರ ಕೃತಿಗಳು ಚಿಂತನೆಗೆ ಹಚ್ಚುತ್ತಿದ್ದವು. ಆಗೆಲ್ಲಾ ನನಗೆ ಈ ಕುವೆಂಪು, ತೇಜಸ್ವಿ - ಒಕ್ಕಲಿಗರು, ಭೈರಪ್ಪ - ಬ್ರಾಹ್ಮಣ, ಅನಂತಮೂರ್ತಿ - ಲೆಫ್ಟಿಸ್ಟ್, ಮತ್ತಿನ್ಯಾರೋ - ರೈಟಿಸ್ಟ್ ಇದೆಲ್ಲಾ ಗೊತ್ತೇ ಇರಲಿಲ್ಲ! ಕಿನ್ನರ, ಕಿಂಪುರುಷ ರಂತೆ ಕಂಡುಬರುತ್ತಿದ್ದ ನಮ್ಮ ಚಿತ್ರ ನಟ/ನಟಿಯರು, ಹೇಗೆ ಟಿವಿ ಬಂದ ಮೇಲೆ, ಅದರಲ್ಲಿ ಅವರ ಮಾತುಕಥೆಗಳನ್ನು ನೋಡಿದ ಮೇಲೆ, ನಮ್ಮಂತೆಯೇ ಇವರು ಕೂಡ ಭೂಲೋಕದವರು ಎಂಬ ಅರಿವಾಯಿತೋ, ಹಾಗೆಯೇ ಈ ಫೇಸ್ ಬುಕ್ಕಿನಲ್ಲಿ ಹೊಸ ಸಾಹಿತಿಗಳ ಚರ್ಚೆ, ಹಳೆಯ ಸಾಹಿತಿಗಳ ಬಗೆಗಿನ ಮಾತುಕಥೆ ನೋಡಿದಾಗ, ಅರೆರೆ! ಸಾಹಿತಿಗಳೂ ಕೂಡ ನಮ್ಮಂತೆಯೇ ಜನ ಸಾಮಾನ್ಯರು! ಎಂಬುದರ ಅರಿವಾಗತೊಡಗಿತು. ನಾನು ಯಾವ ಪುಸ್ತಕಗಳನ್ನು ಓದಿದರೂ, ಅದರಲ್ಲಿನ ಹೂರಣ ನೆನಪಿಟ್ಟುಕೊಳ್ಳುತ್ತೇನೆಯೇ ಹೊರತು, ಪುಸ್ತಕದ ಶೀರ್ಷಿಕೆ ಮತ್ತು ಬರೆದಿರುವವರು ಯಾರು ಎಂಬ ನೆನಪಿರುವುದಿಲ್ಲ. ಮತ್ತೊಮ್ಮೆ ಪುಸ್ತಕವನ್ನು ತೆರೆದು, ಓದಲು ಶುರುಮಾಡಿದಾಗಲೇ, ಓಹ್! ಇದನ್ನು ಓದಿದ್ದೆ ಅಲ್ಲವೇ? ಎಂಬುದು ಅರಿವಾಗುತ್ತದೆ. ಇದು ನನ್ನ ಅಜ್ಞಾನ ಅಥವಾ ಮರೆಗುಳಿತನ! ನಾನು ಯಾವುದನ್ನು ಅಜ್ಞಾನ / ಮರೆಗುಳಿತನ ಎಂದೆಣಿಸಿದ್ದೇನೋ, ಅದು ನಿಜವಾಗಿಯೂ ಜ್ಞಾನ ಎಂಬುದು ಅರಿವಾಗತೊಡಗಿದ್ದು ಫೇಸ್ ಬುಕ್ ನ ಸಂಪರ್ಕಕ್ಕೆ ಬಂದ ಮೇಲೆಯೇ! ಬರೆದಿರುವವರು ಯಾರು ಎಂಬುದು ನಿಮಗೆ ತಿಳಿದಿಲ್ಲವಾದರೆ, ಯಾವುದೇ ಪೂರ್ವಾಗ್ರಹವಿಲ್ಲದೆ ಮಾತನಾಡಬಹುದು ಎಂಬುದು ನನಗರ್ಥವಾಗುತ್ತಾ ಹೋಯಿತು!

ಈಗಿನ ಸಾಮಾಜಿಕ ಪರಿಸ್ಥಿತಿಯಲ್ಲಿ, ಜಾತಿವ್ಯವಸ್ಥೆಯಿಂದಾಗುತ್ತಿರುವ ತೊಂದರೆಗಳಿಗಿಂತಲೂ ಹೆಚ್ಚಾಗಿ ತೊಂದರೆಗೀಡಾಗುತ್ತಿರುವವರು ಬಡವರು. ಈಗ ಎಲ್ಲಾ ಕಡೆಯೂ ರಾರಾಜಿಸುತ್ತಿರುವುದು ಹಣ ಬಿಟ್ಟರೆ ರಾಜಕೀಯ ‘ಬಲ’. ಈ ಪೊಲಿಟಿಕಲ್ ಇನ್ ಫ್ಲುಯೆನ್ಸ್ ಕೂಡ ಹಣಬಲದಿಂದಾಗಿಯೇ ದೊರೆಯುವುದರಿಂದ, ನನ್ನ ಪ್ರಕಾರ ‘ಹಣ’ ವೊಂದೇ ಇವತ್ತಿನ ‘ದಲಿತ’ರನ್ನು ತುಳಿಯುತ್ತಿರುವುದು. ಈ ‘ದಲಿತ’ - ಬ್ರಾಹ್ಮಣ, ಒಕ್ಕಲಿಗ ಅಥವಾ ಇನ್ಯಾವುದೋ ಜಾತಿಗಳಾಗಿರಬಹುದು, ಬಡವನಾಗಿರಬೇಕು, ಅಷ್ಟೇ. ‘ಹಳ್ಳಿ ಹುಡುಗ, ಪ್ಯಾಟೇಗೇ ಬಂದ’ ಇಂತಹ ಕಾರ್ಯಕ್ರಮಗಳು ‘ದಲಿತ’ ರನ್ನು ತುಳಿಯಲು ಮಾಡಿದ್ದೋ? ಟಿಆರ್ ಪಿ ಗಳಿಸಿ ಹಣ ಮಾಡಲು ಮಾಡಿದ್ದೋ? ಅಥವಾ ಹಳ್ಳಿಗಳೆಲ್ಲವೂ ಮುಚ್ಚಿ ಹೋಗಿ, ನಗರಕ್ಕೆ ವಲಸೆ ಬರುತ್ತಿರುವುದು ಜಾತಿಯಿಂದಾಗಿಯೇ? ಇಂತಹ ಇನ್ನೂ ಹತ್ತು ಹಲವಾರು ಪ್ರಶ್ನೆಗಳನ್ನು ನಮ್ಮಷ್ಟಕ್ಕೆ ನಾವೇ ಕೇಳಿಕೊಂಡರೆ, ನಮ್ಮ ಈಗಿನ ಕಾಲದ ‘ಸತ್ಯ’ ಗೊತ್ತಾಗುವುದು. ನಾವು ಹೋರಾಡಬೇಕಿರುವುದು ಈ ‘ಸತ್ಯ’ದ ವಿರುದ್ಧ!. 

ಹೋರಾಡಬೇಕೆಂದೊಡನೆ ಸಾಮಾನ್ಯ ಮನುಷ್ಯ ‘ಲೆಫ್ಟಿಸ್ಟ್’ ಆಗಿಬಿಡುವುದು, ಮೇಲ್ವರ್ಗದವರ ಪರ ಮಾತಾಡಿದೊಡನೆಯೇ ‘ರೈಟಿಸ್ಟ್’ ಆಗಿಬಿಡುವುದು, ದಲಿತರು ಹೋರಾಡಿದರೆ ‘ಹಕ್ಕಿಗಾಗಿ’ ಹೋರಾಡುವುದು (ದಲಿತರಲ್ಲಿ ಬಡವರನ್ನು ಕೇಳುವವರಿಲ್ಲ, ಆ ಮಾತು ಬೇರೆ!) ರಾಜಕಾರಣಿಗಳು ತಮ್ಮ ಸ್ವಾರ್ಥಸಾಧನೆಗಾಗಿ ನೂರಾರು ಜಾತಿಗಳನ್ನು ಪೋಷಿಸುತ್ತಿದ್ದರೆ, ಸಾಹಿತಿಗಳು ‘ಈ ಲೆಫ್ಟಿಸ್ಟ್, ರೈಟಿಸ್ಟ್, ಮೇಲ್ವರ್ಗ, ದಲಿತರು’ ಎಂಬ ನಾಲ್ಕು ಜಾತಿಗಳನ್ನು ಪೋಷಿಸುತ್ತಿದ್ದಾರೆ. ಇವೆಲ್ಲವನ್ನೂ ನಾವು ಇನ್ನೆಷ್ಟು ಕಾಲ ಸಾಮಾನ್ಯ ಜನರು ಬಾಯಿಮುಚ್ಚಿಕೊಂಡು ಸಹಿಸುವುದು? ಸಮಾಜದಲ್ಲಿ ಬಡವರ್ಗದವರಿಗೆ / ಅವಿದ್ಯಾವಂತರಿಗೆ ಬೆಳೆಯಲು ಏನು ಬೇಕೋ? ಆ ಸಹಾಯ ಮಾಡಲಿ, ತಪ್ಪಿಲ್ಲ. ಎಲ್ಲರೂ ಒಂದೇ!. ಆದರೆ ಕಣ್ಣೊರೆಸುವ ತಂತ್ರ ಏಕೆ? ಯಾವುದೇ ನೀತಿ ನಿಯಮಗಳು ಮನುಷ್ಯನಿಗೆ ಬೆಳೆಯಲು ಸಹಾಯಕಾರಿಯಾಗಿರಬೇಕೇ ಹೊರತು ಯಾವುದೇ ಮನುಷ್ಯನನ್ನು ತುಳಿಯಲಲ್ಲ! ಹಳ್ಳಿ, ಹಳ್ಳಿಗಳಿಗೆ ಅಥವಾ ನಗರದ ಸ್ಲಮ್ ಪ್ರದೇಶಗಳಿಗೆ ಹೋಗಿ ಸಂದರ್ಶನ (ಪ್ರಾಮಾಣಿಕವಾಗಿ!) ಮಾಡಿ ನೋಡಿದರೆ ತಿಳಿಯುತ್ತದೆ. ಇವತ್ತಿನ ಮೂಲ ಸಮಸ್ಯೆ ‘ಜಾತಿ’ ಗಿಂತಲೂ ‘ಆರ್ಥಿಕ ಪರಿಸ್ಥಿತಿ’ ಯದ್ದು ಎಂದು. ಹಣವಿಲ್ಲದೆ ಯಾವ ಕೆಲಸವೂ ನಡೆಯದು, ದಲಿತರದು ಕೂಡ! ಈ ಎಲ್ಲಾ ವಿಷಯಗಳನ್ನು ಯಾವಾಗಲೂ ಯೋಚಿಸುವ ನಾನು ಯಾವುದೇ ಹುನ್ನಾರವಿಲ್ಲದೆ, ಪ್ರಾಮಾಣಿಕವಾಗಿ (ನನ್ನ ಅರಿವನ್ನು ಹಿಗ್ಗಿಸಿಕೊಳ್ಳಲು) ಕೇಳಿದ ಮೊದಲ ಪ್ರಶ್ನೆ - ಈಗಿನ ಸಾಹಿತಿಗಳು ಕೂಡ ತಮ್ಮ ಕಾವ್ಯರಚನೆಯಲ್ಲಿ ವಸ್ತುವಿಷಯವನ್ನು ಆಯ್ಕೆ ಮಾಡಿಕೊಳ್ಳುವಾಗ ‘ಜಾತಿ’ ವಿಷಯವನ್ನೇಕೆ ಆಯ್ದುಕೊಳ್ಳುತ್ತಾರೆ? ಮತ್ತೊಂದು ಪ್ರಶ್ನೆ - ತಮ್ಮ ಕೃತಿಗಳ ಮಾರ್ಕೆಟಿಂಗ್ ಗಾಗಿ ಅಥವಾ ಅದನ್ನೊಂದು ಸೇಲಬಲ್ ಕೃತಿಯಾಗಿಸಲು, ಬೇಕಂತಲೇ ‘ಕಾಮ’ ‘ಅಶ್ಲೀಲ’ ‘ನೀಲಿ’ ಮುಂತಾದ ಶೀರ್ಷಿಕೆಗಳನ್ನಿಟ್ಟು ಅಥವಾ ಪುರಾಣ ಕೃತಿಗಳ ಪಾತ್ರಗಳನ್ನಿಟ್ಟುಕ್ಕೊಂಡು, ಬೇಕೆಂದೇ ಆ ಪಾತ್ರಗಳನ್ನು ಅಶ್ಲೀಲವಾಗಿ ಚಿತ್ರಿಸುವರೇ? ಎಂಬುದಾಗಿತ್ತು. ಇದಕ್ಕೆ ಉತ್ತರಗಳು ನನಗೆ ಅರ್ಥವಾಗುವ ಹಾಗೇ ಸಮರ್ಪಕವಾಗಿ ಸಿಗಲಿಲ್ಲ. ಹಾಗಾಗಿ ನನ್ನ ಮತ್ತೊಂದು ‘ಫೆಮಿನಿಸ್ಟ್’ ಗಳು ಎಂದೊಡನೆ ಯಾಕೆ ‘ಬಿಂದಾಸ್’ ಆಗಿ, ‘ಕಾಮ / ಸೆಕ್ಸ್’ ವಿಷಯದ ಬಗ್ಗೆಯೇ ಮಾತಾಡಬೇಕು? ಗಂಡಿಗೆ ಸರಿಸಮನಾಗಿ ನಿಲ್ಲುವುದು ಎಂದರೆ ಗಂಡನ್ನು ತುಳಿಯುವುದೇ? ಅಥವಾ ತನ್ನ ಹೆಣ್ತನವನ್ನು ಬಿಟ್ಟುಕೊಡದಿರುವುದೇ? ಎಂಬೆಲ್ಲಾ ಪ್ರಶ್ನೆಗಳನ್ನು ಕೇಳದೇ ಸುಮ್ಮನಾಗಿಬಿಟ್ಟೆ. 

ಕಾವ್ಯಕಮ್ಮಟದಲ್ಲಿ ನಾನು ಕೇಳಿದ ಈ ಎರಡು ಪ್ರಶ್ನೆಗಳು, ಅದಕ್ಕೆ ಸಿಕ್ಕಂತಹ ಉತ್ತರಗಳು, ಜೊತೆಗೆ ಒಂದೆರಡು ಹುರುಳಿಲ್ಲದ ಕವನ ಸಂಕಲನಗಳನ್ನು ಬರೆದವರಿಗೆ (ಇನ್ಯಾವುದೋ ಹಿಡನ್ ಅಜೆಂಡಾ ಇಟ್ಟುಕೊಂಡು) ತೋರಿಸುತ್ತಿದ್ದ ಅಪ್ರಾಮಾಣಿಕ ಪ್ರೀತಿ, ಸಾಹಿತಿಗಳೂ ಕೂಡ ವ್ಯಕ್ತಿನಿಷ್ಟರೇ? ಇವರೇಕೆ ವಸ್ತುನಿಷ್ಟರಾಗಿ ಮಾತನಾಡುತ್ತಿಲ್ಲ? ‘ವಿಶ್ವ ಮಾನವ’ ತತ್ವವನ್ನು ಪ್ರತಿಪಾದಿಸಿದ ‘ಕುವೆಂಪು’ ರವರನ್ನಾಗಲೀ, ಅಪ್ಪ ಹೊರಟ ದಾರಿಯ ಮತ್ತೊಂದು ದಿಕ್ಕಿನಲ್ಲಿ ಹೊರಟ,ವಿಜ್ಞಾನವನ್ನು ಸರಳಾತಿಸರಳವಾಗಿ ನಮಗೆಲ್ಲಾ ನೀಡಿದ ‘ತೇಜಸ್ವಿ’ ಯವರನ್ನು ಇವತ್ತಿಗೂ ಜಾತಿಯಿಂದಲೇ ಗುರುತಿಸುತ್ತಿದ್ದಾರೆ ಎಂಬುದು ವಿಷಾದನೀಯ. ಸಾಮಾನ್ಯ ಜನರಲ್ಲ ಇವರನ್ನು ಹೀಗೆ ನೋಡುತ್ತಿರುವವರು! ಸಾಹಿತಿಗಳೇ! ತುಂಬಾ ಓದಿಕೊಂಡಿರುವವರೇ ಹೀಗೆ ಮಾಡುತ್ತಿರುವುದು. ಅದಕ್ಕೆ ಅವರದೇ ಆದ ಹಿಡನ್ ಅಜೆಂಡಾಗಳಿರುವುದು ಅತ್ಯಂತ ಶೋಚನೀಯ ಪರಿಸ್ಥಿತಿ! ನನ್ನೊಳಗೆ ಈಗಿನ ಸಾಹಿತಿಗಳೆಲ್ಲರೂ ಸಾಹಿತಿಗಳಲ್ಲ, ಸಾಹಿತ್ಯವನ್ನು ಅರೆದು ಕುಡಿದಿದ್ದರೂ, ಜ್ಞಾನವಾಹಕರಲ್ಲ, ತಮ್ಮ ಪ್ರತಿಭೆಯಿಂದ ಜಾತೀ ಪದ್ದತಿಯನ್ನು ಇನ್ನಷ್ಟು (ತಮ್ಮ ಬೇಳೆ ಬೇಯಿಸಿಕೊಳ್ಳಲು!) ಉತ್ತೇಜಿಸುವವರು ಎಂದೇ ಅನಿಸತೊಡಗಿತು. ಇದು ನನ್ನನುಭವ / ನನ್ನನಿಸಿಕೆ ಹೊರತು ಇದು ಕಾವ್ಯಕಮ್ಮಟ ಆಯೋಜಿಸಿದವರ ತಪ್ಪಲ್ಲ. ನಾನು ಜಾತಿ ಎಂಬ ವಿಷಯದ ಬಗೆಗಿನ ಪ್ರಶ್ನೆಗೆ, ತಾಳ್ಮೆಯಿಂದ ಉತ್ತರಿಸದೇ, ಬುದ್ಧಪ್ರೇಮಿಯೊಬ್ಬರು ನನ್ನ ಹಿನ್ನೆಲೆ ವಿಚಾರಿಸಲು ಮುಂದಾದರು, ಒಂದಷ್ಟು ಜನ ವಾತಾವರಣ ಕಾವೇರದಂತೆ ಶ್ರಮಿಸಿದರು, ಒಂದಷ್ಟು ಜನ ಮೈಕ್ ಮುಂದೆ ನನ್ನ ವಿಚಾರಗಳನ್ನು ಕಡಿದು ಹಾಕಿದರೂ, ಮೈಕಿಲ್ಲದಿದ್ದಾಗ ‘ನಾನು ಹೇಳಿದ್ದು ಸರಿ’ ಎಂದು ಒಪ್ಪಿದರು. ರಾಜಕಾರಣಿಗಳು ಹೇಗೆ ವೋಟ್ ಬ್ಯಾಂಕಿಂಗ್ ಗಾಗಿ ಜಾತೀ ವ್ಯವಸ್ಥೆಯನ್ನು ಕೊನೆಗೊಳಿಸಲು ಮುಂದಾಗುವುದಿಲ್ಲವೋ? ಹಾಗೆಯೇ ನಮ್ಮ ಸಾಹಿತಿಗಳು ಕೂಡ ಈ ಜಾತೀ ವ್ಯವಸ್ಥೆಯನ್ನು ಕೊನೆಗೊಳಿಸುತ್ತಿಲ್ಲ ಎಂಬುದು ಮನಸ್ಸಿಗೆ ಕಿರಿಕಿರಿಯನ್ನುಂಟು ಮಾಡತೊಡಗಿತು. ನಮ್ಮ ಸಾಹಿತಿಗಳು, ರಾಜಕಾರಣಿಗಳು, ಬುದ್ಧಿಜೀವಿಗಳು ತಮ್ಮೆಲ್ಲರ ತರ್ಕಗಳನ್ನು ನಮ್ಮಂತಹ ಜನಸಾಮಾನ್ಯರಲ್ಲಿ ಬಿಂಬಿಸಿ, ಇನ್ನಷ್ಟು ಜಾತೀ ಪದ್ದತಿಯನ್ನು, ಜಾತಿಗಳ ನಡುವಿನ ಅಂತರವನ್ನು ಹೆಚ್ಚಿಸುತ್ತಿದ್ದಾರೆ ಎಂದರೆ ತಪ್ಪಿಲ್ಲ. 

ಈ ರೈಟಿಸ್ಟ್, ಲೆಫ್ಟಿಸ್ಟ್, ಬ್ರಾಹ್ಮಣ, ದಲಿತ ಯಾವುದೇ ಅರಿವಿಲ್ಲದೆ ತಣ್ಣಗಿದ್ದ ನನಗೆ, ಹಿಂದಿನವರು ಬರೆದ ಪುಸ್ತಕಗಳಲ್ಲಿನ ತತ್ವಗಳನ್ನು ಮಾತ್ರ ಅರಗಿಸಿಕೊಳ್ಳುವತ್ತ ಗಮನದಲ್ಲಿದ್ದ ನನಗೆ, ಈಗಿನ ಸಾಹಿತಿಗಳ ‘ವ್ಯಕ್ತಿ’ ಪರಿಚಯ, ಅವರ ಆಲೋಚನೆಗಳಲ್ಲಿ ತುಂಬಿರುವ ‘ಸ್ವಾರ್ಥ’, ಅದಕ್ಕಾಗಿ ಅವರು ಯಾವ ಮಟ್ಟಕ್ಕೆ ಬೇಕಿದ್ದರೂ ಹೋಗುತ್ತಾರೆ ಎನ್ನುವ ‘ಸತ್ಯ’, ಅದಕ್ಕಾಗಿ ಮುಗ್ಧ / ಸಾಮಾನ್ಯ ಜನರನ್ನೂ ಬಳಸಿಕೊಳ್ಳುವ ‘ಹುನ್ನಾರ’ ಎಲ್ಲವನ್ನೂ ಕಂಡು ರೋಸಿಹೋಗುತ್ತಿದೆ. ಈ ರಾಜಕೀಯದಲ್ಲಿ ಹೆಣ್ಣು, ಗಂಡೆಂಬ ಬೇಧವಿಲ್ಲ. ಅಷ್ಟರಮಟ್ಟಿಗೆ ಹೆಣ್ಣು ಸಮಾನತೆ ಹೊಂದಿದ್ದಾಳೆ ಎಂಬುದು ಗಮನಾರ್ಹ! ನಿಜವಾಗಿಯೂ ಇಂತಹ ಸಾಹಿತಿಗಳ / ರಾಜಕಾರಣಿಗಳ ವಿರುದ್ಧ ಹೋರಾಡಬೇಕಿರುವುದು ಈ ಹೊತ್ತಿನ ತುರ್ತು! ಕಾವ್ಯಕಮ್ಮಟದಲ್ಲಿ ‘ಪಂಪ’, ‘ಕುಮಾರವ್ಯಾಸ’ ಇವರನ್ನೆಲ್ಲಾ ಓದಿಕೊಂಡು ಮರೆತು, ಹೊಸ ಕಾವ್ಯದ ಸೃಷ್ಟಿ ಮಾಡಬೇಕಂದರು! ಅಂದರೆ ಅದರ ಅರ್ಥ ಅವರ ತತ್ವಗಳನ್ನು ನಮ್ಮಲ್ಲಿ ಅಳವಡಿಸಿಕೊಂಡು, ಒಂದಾಗಿಸಿಕೊಂಡು ಅವರನ್ನು ಮರೆತುಬಿಡುವುದು, ಆ ವ್ಯಕ್ತಿಗಳನ್ನು ಮರೆತುಬಿಡುವುದು. ಇದನ್ನು ಎಲ್ಲಾ ಸಾಹಿತಿಗಳು ತಮ್ಮಲ್ಲಿ ಅಳವಡಿಸಿಕೊಂಡರೆ, ಪೂರ್ವಾಗ್ರಹವಿಲ್ಲದೇ ಮಾತಾಡಬಹುದು. ವ್ಯಕ್ತಿನಿಷ್ಟೆಗಿಂತ, ವಸ್ತು ನಿಷ್ಟೆ ಅತಿ ಮುಖ್ಯ. ಸಾಧ್ಯವಿಲ್ಲವೇ? ರೂಮಿಯ ಗುರು ಹೇಳಿದಂತೆ ‘The Knowledge which does not steal you from yourself; Ignorance is better than such knowledge' ನಮಗೆ ಪಂಪ, ರನ್ನ, ಕುವೆಂಪು ಯಾರನ್ನೂ ಓದದಿರುವುದೇ ಒಳ್ಳೆಯದು!

1 comment:

  1. ಹೌದು. ಈ ವಿಷಯಗಳು ನಿಜ.. ನಿಜ.

    ReplyDelete