Tuesday, May 5, 2020

ಥಪ್ಪಡ್ - ಸ್ತ್ರೀವಾದವೇ? ಸಂಬಂಧಗಳ ದ್ವಂದ್ವವೇ?



ಮೂವೀಗಳಲ್ಲಿ ಸ್ತ್ರೀವಾದ / Feminism ಅಂತಂದ್ರೆ ನನಗೆ ಯಾವಾಗಲೂ ತಕ್ಷಣಕ್ಕೆ ನೆನಪಾಗೋದು ಎರಡು ಚಿತ್ರಗಳು. ಮೀನಾಕ್ಷಿ ಶೇಷಾದ್ರಿ ನಟಿಸಿರುವ ದಾಮಿನಿ ಮತ್ತು ಸ್ಮಿತಾ ಪಾಟೀಲ್ ನಟಿಸಿರುವ ಭೂಮಿಕಾ. ಪುಸ್ತಕ ಅಂದ್ರೆ ನೆನಪಾಗೋದು ಭೈರಪ್ಪನವರ ಕಾದಂಬರಿ `ಕವಲು'. ಮುಗ್ಧ ಮನಸ್ಸಿನ ಹೆಣ್ಣುಮಗಳೊಬ್ಬಳು ತನ್ನ ಮನೆಯಲ್ಲಿಯೇ ತನ್ನ ಮೈದುನ ಮತ್ತು ಆತನ ಗೆಳೆಯರು ಕೆಲಸದವಳ ಮೇಲೆ ಮಾಡಿದ ಅತ್ಯಾಚಾರದ ವಿರುದ್ಧ ಹೋರಾಡುವ ಕಥೆ `ದಾಮಿನಿ', ಎಷ್ಟೆಲ್ಲಾ ಕಷ್ಟ ಅನುಭವಿಸಬೇಕಾಗಿ ಬಂದರೂ ಕೂಡ, ತಾನು ಸುಳ್ಳು ಹೇಳೋಲ್ಲ ಅಂತಾ ಗಟ್ಟಿಯಾಗಿ ನಿಲ್ತಾಳೆ ಅವಳು. ನನಗೆ `ದಾಮಿನಿ' ಯ ನಾಯಕಿ ನಿಜವಾದ ಫೆಮಿನಿಸ್ಟ್ ಅಂತನ್ನಿಸ್ತಾಳೆ.

ಮತ್ತೊಂದು ಚಿತ್ರ ಭೂಮಿಕಾ - ತನ್ನ ಅಸ್ತಿತ್ವಕ್ಕೆ ಧಕ್ಕೆ ಬಂದಾಗಲೆಲ್ಲಾ ಬೇರೊಂದು ಗಂಡನ್ನು ಮದುವೆಯಾಗುತ್ತಾ ಹೋಗುತ್ತಾಳೆ. ಈ ಚಿತ್ರದ ಕ್ಲೈಮಾಕ್ಸ್ ಡೈಲಾಗ್ ಮಾತ್ರ ಮನಸ್ಸಿಗೆ ಹಿಂಸೆ ಮಾಡಿಬಿಡುತ್ತೆ. . ಆಕೆ ಮನೆ ಬಿಟ್ಟು ಹೋಗುವಾಗ, ಆಕೆಯ ಗಂಡನ ಮೊದಲ ಹೆಂಡತಿ ಇವಳಿಗೆ ಬುದ್ಧಿ ಹೇಳ್ತಾಳೆ "ಮನೆ ಬಿಟ್ಟು ಹೋಗಬೇಡ, ಹಾಸಿಗೆಗಳು ಬದಲಾಗಬಹುದು, ಅಡುಗೆ ಮನೆಗಳು ಬದಲಾಗಬಹುದು, ಗಂಡಸರ ಮುಖವಾಡಗಳು ಬದಲಾಗಬಹುದು, ಆದರೆ ಗಂಡಲ್ಲ"! ಅಂತಾ. ಆದರೂ ಇವಳು ಮನೆ ಬಿಟ್ಟು ಹೊರ ಬರ್ತಾಳೆ. ಈ ಚಿತ್ರದ ಬಗ್ಗೆ ಇನ್ನೂ ಡಿಟೇಲಾಗಿ ಬರೀಬೇಕು.. ಇನ್ನೊಮ್ಮೆ ಬರೀತೀನಿ.

ಇನ್ನೂ ಭೈರಪ್ಪನವರ `ಕವಲು' ಕಾದಂಬರಿಯಲ್ಲಿ ರಚಿತವಾಗಿದ್ದ ಒಂದಷ್ಟು ಸ್ತ್ರೀ ವಾದಿಗಳ ಪಾತ್ರಗಳೊಂದಿಗೆ ತಮ್ಮನ್ನು ತಾವು ಹೋಲಿಸಿ ನೋಡಿ ಬಹಳಷ್ಟು ಕಾದಂಬರಿಗಾರ್ತಿಯರು, ಭಾಷಣಗಾರ್ತಿಯರು, ಭೈರಪ್ಪನವರ ವಿರುದ್ಧ ತಿರುಗಿಬಿದ್ದಿದ್ದರು. ತಮ್ಮನ್ನು ತಾವೇ ಸ್ತ್ರೀವಾದಿಗಳೆಂದು ಕರೆದುಕೊಳ್ಳುವ, ಈ ನನಗೆ ಅದರಲ್ಲಿಯ ಮುಖ್ಯ ಪಾತ್ರವಾಗಿದ್ದ ವೈಜಯಂತಿಯೇ ಫೆಮಿನಿಸ್ಟ್ ಅಂತನ್ನಿಸ್ತಾಳೆ ಹೊರತು ಉಳಿದೆಲ್ಲಾ ಪಾತ್ರಗಳು psedo feminists ರೀತಿ ಕಾಣುತ್ತದೆ. ಈ ಕಾದಂಬರಿ ಬಗ್ಗೆ ನಾನು ಈಗಾಗಲೇ ಬರೆದಿದ್ದೀನಿ.

ಥಪ್ಪಡ್ ಚಲನಚಿತ್ರ ನೋಡ್ತಾ, ನೋಡ್ತಾ ಇವೆಲ್ಲಾ ನೆನಪಾಗ್ತಾ ಹೋಯಿತು. ಒಂದೇ ಒಂದು ಥಪ್ಪಡ್ ತಾನೇ? ಅಡ್ಜಸ್ಟ್ ಮಾಡಿಕೊಂಡು ಹೋಗು, ಅಂತಾ ಎಲ್ಲಾ ಹೆಣ್ಣಿನ ಪಾತ್ರಗಳು ಒತ್ತಾಯಿಸುವುದು ನಾಯಕಿಯನ್ನು ಹೊರತು ಯಾರೂ ಕೂಡ ತಪ್ಪು ಮಾಡಿದ ಗಂಡನ್ನು ಎಚ್ಚರಿಸುವ ಕೆಲಸ ಮಾಡುವುದಿಲ್ಲ ಎಂಬುದು ಗಮನಿಸಬೇಕಾದ ಅಂಶ. ಪ್ರಗತಿಪರ ಕ್ರಾಂತಿಕಾರಿಯಾದ ನಾಯಕಿಯ ತಂದೆ ಕೂಡ ಮೌನವಾಗಿ ನಾಯಕಿಯ ಗಂಡನನ್ನೇ ಸಪೋರ್ಟ್ ಮಾಡ್ತಾನೆ. ತನ್ನದೇ ನಿರ್ಧಾರ ಮನೆಯಲ್ಲಿ ನಡೆಯಬೇಕು ಎಂದು ಹಠ ಮಾಡುವ ಅಪ್ಪನೊಬ್ಬ, ಆತನ ವಿರುದ್ಧ ಸಿಟ್ಟಿಗೆದ್ದು, ಮನೆಯಿಂದ ಹೊರನಡೆಯುವ ಮಗನೊಟ್ಟಿಗೆ, ತಾನು ಕೂಡ ಮಗನೊಟ್ಟಿಗೆ ಇರ್ತೇನೆ ಎಂದು ಹೊರನಡೆಯುವ ಅಮ್ಮ! ಕಡೆಗೆ ಅದೇ ಮಗ, ಥೇಟ್ ತನ್ನ ಗಂಡನಂತೆಯೇ ಆತನ ಹೆಂಡತಿಯೊಂದಿಗೆ ನಡೆದುಕೊಂಡಾಗ, ಅಮ್ಮ ಒದ್ದಾಡೋದು, ತಾನು ಮಗನನ್ನು ಸರಿಯಾಗಿ ಬೆಳೆಸಲಿಲ್ಲವೇನೋ? ಎಂಬ ಗಿಲ್ಟ್ ಅನುಭವಿಸೋದು, ಇಂತಹ `ಇಗೋ' ಗಳೆಲ್ಲವೂ ಬಹುಶಃ ಜೀನ್ ಗಳಲ್ಲಿರುತ್ತದೆಯೇನೋ? ಎಂಬ ಭಾವ ಮೂಡಿಸಿಬಿಡುತ್ತದೆ.

ಚಿತ್ರದ ಪ್ರತಿ ಪಾತ್ರಗಳು ದ್ವಂದತೆಯಿಂದ ತುಂಬಿ ತುಳುಕಾಡುತ್ತಿವೆ. ಒಂದೇ ಏಟು, ಆದರೆ ಆ ಏಟಿನಿಂದ ಎಷ್ಟೊಂದು ಜನರ ಮನಸ್ಥಿತಿಗಳ ಅನಾವರಣವಾಗಿಬಿಡುತ್ತದೆ. ಪ್ರತ್ಯಕ್ಷವಾಗಿ ತೋರಿಸುವ ಒಂದು ಏಟು, ಪ್ರತಿಯೊಂದು ಪಾತ್ರಗಳಿಗೂ ಪರೋಕ್ಷವಾಗಿ ಏಟು ಕೊಡುತ್ತಾ, ಅವರನ್ನು ಎಚ್ಚರಿಸುತ್ತಾ ಹೋಗುತ್ತದೆ. ಬಹಳಷ್ಟು ಅಪರಾಧಗಳು ನಡೆಯೋದು ಕ್ಷಣ ಮಾತ್ರದಲ್ಲಿಯೇ. ಹಾಗಂತಾ ಅದನ್ನು ಒಪ್ಪಿಕೊಂಡು ಬಿಡಲು ಸಾಧ್ಯವೇ?

ಸ್ತ್ರೀಯರ ಪರ ಕೋರ್ಟಿನಲ್ಲಿ ಹೋರಾಡಿ, ಕೇಸ್ ಗಳನ್ನು ಗೆದ್ದು, ಪ್ರಸಿದ್ಧಿ ಪಡೆದಿರುವ ಸ್ತ್ರೀ ವಾದಿ ವಕೀಲೆ ಸ್ವತಃ ತನ್ನ ಮನೆಯಲ್ಲಿ ಶೋಷಿತೆ! ಆದರೆ ಆಕೆ ತನ್ನ ಸಂಕಟವನ್ನು, ತನ್ನ ಒಂಟಿತನವನ್ನು ಮರೆಮಾಚಲು ಉಪಯೋಗಿಸುವುದು ಮತ್ತೊಬ್ಬ ಅಮಾಯಕ ಹುಡುಗನನ್ನು! ಕಡೆಗೆ ಆ ಹುಡುಗನಿಗೆ ಏನನ್ನಿಸಬಹುದು ಎಂದೂ ಕೂಡ ಯೋಚಿಸದೇ, ಅವನನ್ನು ಒಂಟಿಯಾಗಿ ಬಿಟ್ಟು ಹೊರಟುಬಿಡುವುದಿದೆಯಲ್ವಾ? ಅದು ತುಂಬಾ ಹಿಂಸೆ ಮಾಡಿಬಿಡುತ್ತದೆ. ತನ್ನ ಜೀವನದಲ್ಲಿ ಮುಂದಕ್ಕೆ ಒಳ್ಳೆಯ ಗಂಡು ಸಿಗದಿದ್ದರೆ ಎಂದು ಒಂಟಿಯಾಗಿರಲು ನಿರ್ಧರಿಸುವ ವಿಧವೆಯ ಮನಸ್ಥಿತಿ ಅಷ್ಟೊಂದು ಕಾಡದಿದ್ದರೂ, ಇನ್ನೂ ಹದಿಹರೆಯಕ್ಕೆ ಕಾಲಿಡುತ್ತಿರುವ ತನ್ನ ಮಗಳಿಗೆ ಆ ಗಂಡು ಒಳ್ಳೆಯವನು ಎಂದು ನಿರ್ಧರಿಸುವ ಆಕೆಯ ಮನಸ್ಥಿತಿ ಆಶ್ಚರ್ಯವೆನಿಸುತ್ತದೆ!

ತನ್ನ ಹೆಂಡತಿಗೆ ತಾನು ಯಾವತ್ತೂ ಬೇರೆ ಗಂಡಸರಂತೆ ಹೊಡೆದು, ಬಡಿದು ಮಾಡಿಲ್ಲ, ಆಕೆಗೆ ಸ್ವಾತಂತ್ರ್ಯ ಕೊಟ್ಟಿದ್ದೇನೆ ಎಂದು ಬೀಗುವ ಪ್ರಗತಿಪರ ಕ್ರಾಂತಿಕಾರಿ ಗಂಡನೊಬ್ಬ! ಆದರೆ ನೀನು ಹೊಡೆದು ಬಡಿದು ಮಾಡಿಲ್ಲದಿರಬಹುದು, ಆದರೆ ಅದನ್ನೇ ನೀನು ನನಗೆ ನೀಡಿರುವ ಸ್ವಾತಂತ್ರ್ಯ ಎಂದುಕೊಳ್ಳಬೇಡ, ನಾನು ಈ ಸಂಸಾರ ನಡೆಯಲು ಬಹಳಷ್ಟು ಕಾಂಪ್ರೊಮೈಸ್ ಮಾಡಿಕೊಂಡಿದ್ದೇನೆ ಎಂದು ತಣ್ಣಗೆ ಕಪಾಳ ಮೋಕ್ಷ ಮಾಡುವ ಆತನ ಹೆಂಡತಿ! ಅವನು ತನ್ನ ಹೆಂಡತಿಯ ಅಂತರಾಳ ತಿಳಿದು, ಕಳೆದು ಹೋದ ಕಾಲದಲ್ಲಿ ಆಕೆಗಿದ್ದ ಆಸೆಯನ್ನು ಈ ಕಾಲದಲ್ಲಿ ಪೂರೈಸಲು ಪ್ರಯತ್ನ ಪಟ್ಟರೆ, ಆತನ ಹೆಂಡತಿಗೆ ಅದರಿಂದ ಖುಷಿಯಾಗಬಹುದೇ? ಕಾಲ ಮಿಂಚಿಹೋದ ಮೇಲೆ, ಬದಲಾದರೇನು ಪ್ರಯೋಜನ? ಎಂದೆನ್ನಿಸುವುದಿಲ್ಲವೇ?

ಇನ್ನೂ ನಾಯಕಿಯ ಪಾತ್ರ ಅತ್ಯಂತ ಕ್ಲಾರಿಟಿಯುಳ್ಳದ್ದು. ಆಕೆಯನ್ನು ಯಾರೂ ಬಲವಂತ ಮಾಡಿರದಿದ್ದರೂ, ತಾನಾಗಿಯೇ ಹೌಸ್ ವೈಫ್ ಆಗಿರಲು ಒಪ್ಪಿಕೊಂಡಿರುವುದು, ಕಡೆಗೆ ಎಲ್ಲರೂ ಬಲವಂತ ಮಾಡಿದರೂ, ಹೌಸ್ ವೈಫ್ ಆಗಿರಲು ಒಪ್ಪಿಕೊಳದಿರುವುದು! ಸಿಂಪಲ್. ಒಂದೇ ಏಟಾಗಿರಬಹುದು, ಆದರೆ ಅವನು ಹೊಡೆಯಬಾರದು. ನಾನು ಕಾಂಪ್ರೊಮೈಸ್ ಮಾಡಿಕೊಳ್ಳೋಲ್ಲ, ಯಾಕೆ ಮಾಡಿಕೊಳ್ಳಬೇಕು? ಅವನು ತನ್ನ ಕೆಲಸವನ್ನು ಪ್ರೀತಿಸುತ್ತಿದ್ದ, ನಾನು ನನ್ನ ಕೆಲಸವನ್ನು. ನನ್ನ ಕೆಲಸ್ಸಕ್ಕೆ ಗೌರವ ಸಿಗದಿದ್ದ ಮೇಲೆ, ಖುಷಿಯಾಗಿರುವಂತೆ ನಟಿಸುತ್ತಾ ನನ್ನ ಕೈಲಿ ಅಲ್ಲಿರೋಕೆ ಸಾಧ್ಯವಿಲ್ಲ ಅಂತಾ ಆಕೆ ಬಿಡಿಸಿ ಹೇಳುವಾಗ, ಹೌದಲ್ವಾ? ಅಂತಾನೇ ಅನ್ನಿಸೋದು. ಹೊರಗಿನವರೊಂದಿಗೆ ಅರೆ ಕ್ಷಣ ಭೇಟಿ ಮಾಡುವಾಗ ನಟಿಸಿ ವಾಪಾಸ್ಸ್ಸು ಬಂದುಬಿಡಬಹುದು, ಆದರೆ ಮನೆಯಲ್ಲಿ ಸದಾಕಾಲ ಇರುವಾಗ ನಟಿಸಲು ಸಾಧ್ಯವೇ? ಯಾವ ಸಂಬಂಧವನ್ನೂ ನಟನೆ ಮಾಡುತ್ತಾ ಉಳಿಸಿಕೊಳ್ಳಲು ಸಾಧ್ಯವಿಲ್ಲ. ಸದಾಕಾಲ ನಟಿಸುತ್ತಾ ಒಟ್ಟಿಗಿದ್ದು, ಒಳಗೊಳಗೆ ಹಿಂಸೆ ಪಡುವುದಕ್ಕಿಂತ, ದೂರವಿದ್ದು ವಿಶ್ವಾಸವನ್ನು ಉಳಿಸಿಕೊಳ್ಳುವುದೇ ಒಳ್ಳೆಯದು ಎಂದನಿಸುತ್ತದೆ. ಇಲ್ಲಿ ನಾಯಕಿಗೆ ದುಃಖವಾಗಬಹುದು, ಆದರೆ ಗಿಲ್ಟ್ ಕಾಡೋಲ್ಲ, ಉಳಿದಂತೆ ಎಲ್ಲಾ ಪಾತ್ರಗಳು ಈ ಘಟನೆಯಿಂದ ಬದಲಾದರೂ, ಬದಲಾದಂತೆ ತೋರಿದರೂ, ಗಿಲ್ಟ್ ಮಾತ್ರ ಅವರನ್ನು ಬಿಡೋಲ್ಲ.

ಈ ಚಿತ್ರದಲ್ಲಿ ಚಂದದ ಜೋಡಿಯೆಂದರೆ ನಾಯಕಿಯ ತಮ್ಮ ಮತ್ತು ಆತನ ಗೆಳತಿಯದ್ದು. ಆತನ ಗೆಳತಿ ಹೇಳುವ ಮಾತು "Let’s grow together” ಸಂಬಂಧಕ್ಕೆ ಬೇಕಾದದ್ದು ಏನು? ಎಂಬುದನ್ನು ಚಂದವಾಗಿ, ಚೊಕ್ಕವಾಗಿ ಹೇಳಿಬಿಡುತ್ತದೆ. ಗಂಡು, ಹೆಣ್ಣಿನ ಸಂಬಂಧಗಳು ಯಾವಾಗಲೂ ಒಟ್ಟಿಗೆ ಒಂದಷ್ಟು ಕಳೆದುಕೊಳ್ಳುತ್ತಾ, ಒಂದಷ್ಟು ಪಡೆಯುತ್ತಾ, ಒಟ್ಟಿಗೆ ಬೆಳೆಯಬೇಕು. ಆಗಲೇ ಆ ಸಂಬಂಧಕ್ಕೊಂದು ಅರ್ಥ, ಆ ಬಾಂಧವ್ಯಕ್ಕೊಂದು ಬೆಲೆ. ಅಂತಹ ಸಂಸಾರ ಖುಷಿಯಾಗಿರುತ್ತದೆ ಅನ್ನೋದನ್ನು ತೋರಿಸಿಕೊಡುತ್ತದೆ.





1 comment:

  1. ಈ ಸಿನೆಮಾ ನೋಡುವಾಗ ಫೆಮಿನಿಸಂ ಅನ್ನುವುದು ಕೊಂಚವೂ ನೆನಪಾಗಲಿಲ್ಲ. ಇದು ಪ್ಯೂರ್ಲೀ ಮಾನವ ಡಿಗ್ನಿಟಿಯ ವಿಷಯ ಅನ್ನಿಸಿತು.

    ReplyDelete