Monday, October 15, 2012

ಇಂಗ್ಲೀಷ್ ಭಾಷೆಯ ದಾಳಿಯಿಂದ ಸೊರಗುತ್ತಿರುವ ಇನ್ನಿತರ ಭಾಷೆಗಳು - ಇಂಗ್ಲೀಷ್ ವಿಂಗ್ಲೀಷ್


ಶಶಿ - ಅತ್ಯಂತ ಸಾಮಾನ್ಯ ಹೆಣ್ಣು ಮಗಳು. ಅತ್ತೆ, ಗಂಡ, ಮಕ್ಕಳಿಗೆ ರುಚಿಯಾದ ಅಡುಗೆ ಮಾಡಿ, ಅವರಿಗೆ ಉಣಬಡಿಸುವುದರಲ್ಲಿಯೇ ಸಾರ್ಥಕ್ಯ ಕಂಡವಳು.  ಜೊತೆಗೊಂದಿಷ್ಟು ಪುಡಿಕಾಸು ಸಂಪಾದಿಸಲು, ತನಗೆ ಗೊತ್ತಿರುವಂಥ ವಿದ್ಯೆಯಾದ ಅಡುಗೆಯಿಂದಲೇ, ಮದುವೆ ಮುಂತಾದ ಸಮಾರಂಭಗಳಿಗೆ ಲಡ್ಡು ತಾನೇ ಕೈಯಾರೆ ತಯಾರಿಸಿ, ಅಲ್ಲಿಗೆ ಹೋಗಿ ಕೊಟ್ಟು ಬರುವಂಥವಳು.  ಆ ಹಣವನ್ನು ಆಪದ್ಧನವೆಂದು ಕಾದಿರಿಸುವವಳೇ ಹೊರತು, ತನ್ನ ಬಟ್ಟೆಬರೆ, ಅಲಂಕಾರಗಳಿಗೆ ಖರ್ಚು ಮಾಡುವಂಥವಳಲ್ಲ!  ಒಟ್ಟಿಗೆ ಬಾಳುವುದಕ್ಕೆ ಸಂಗಾತಿ ಪರಿಪೂರ್ಣನಾಗಿರಬೇಕಿಲ್ಲ, ಒಬ್ಬರಿಗೊಬ್ಬರು ಪೂರಕವಾಗಿದ್ದರೆ ಸಾಕು ಎಂಬುದು ಇವಳ ತತ್ವ. ಮಕ್ಕಳನ್ನು ಬೆಳೆಸುವಲ್ಲಿಯೂ ಆಕೆ ನಿರಾಳ. ಟೀನೇಜ್ ಮಗಳು ತುಂಡುಬಟ್ಟೆ ಹಾಕಿಕೊಂಡು, ಕಾಫೀ ಡೇ ಹೋಗುವುದನ್ನು ಅತೀ ಸಾಮಾನ್ಯ ವಿಷಯದಂತೆ ಸ್ವೀಕರಿಸುವಷ್ಟು, ತನ್ನ ಮುಂದೆಯೇ ತನ್ನ ಗಂಡ, ಪರ ನಾರಿಯನ್ನು ಹಗ್ ಮಾಡುವುದನ್ನು ಒಪ್ಪಿಕೊಳ್ಳುವಷ್ಟು, ಆಧುನಿಕ ಮನೋಧರ್ಮ ಇವಳಲ್ಲಿದೆ.  ಗೇ, ಲೆಸ್ಬಿಯನ್ ಸಂಬಂಧಗಳನ್ನು ಒಪ್ಪಿಕೊಳ್ಳಲು ಹಿಂದೆ ಮುಂದೆ ನೋಡುವಂಥ ಸುಶಿಕ್ಷಿತ ಮನೋವರ್ಗದ ನಡುವೆ, ಅವರದು ಹೃದಯವಲ್ಲವೇ? ಅವರು ಕೂಡ ಪ್ರೀತಿಸಲು, ಬದುಕಲು ಅರ್ಹರು ಎನ್ನುವಂಥ, ಗಂಡ, ಮಕ್ಕಳ ಆಧುನಿಕ ಮನಸ್ಸನ್ನು ಯಾವುದೇ ತಂಟೆ, ತಕರಾರಿಲ್ಲದೆ ಒಪ್ಪಿಕೊಳ್ಳುವಂಥ ವಿಶಾಲ ಮನಸ್ಸು ಈಕೆಯದು. ಈ ಆಧುನಿಕ ಜಗತ್ತಿನಲ್ಲಿ ಇದ್ದು ಕೂಡ ಇರದಂಥವಳು. ಸಂಬಂಧಗಳನ್ನು ಅರ್ಥ ಮಾಡಿಕೊಳ್ಳಲು, ಭಾವನೆಗಳನ್ನು ವ್ಯಕ್ತ ಪಡಿಸಲು ಭಾಷೆಯ ಹಂಗೇಕೆ? ತಾವೇ ಅವರ ಜಾಗದಲ್ಲಿ ನಿಂತು ನೋಡಿದರೆ ಅವರು ಅರ್ಥವಾಗುತ್ತಾರೆ ಎನ್ನುವ ಮನೋಭಾವದವಳು.  ಆದರೆ ಈಕೆಯನ್ನು, ಈಕೆಯ ಮನಸ್ಸನ್ನು ಅರ್ಥ ಮಾಡಿಕೊಳ್ಳದ ಗಂಡ ಮತ್ತು ಮಗಳು, ಈಕೆಯದು ಗೊಡ್ಡು ಸ್ವಭಾವವೆಂದು, ಈ ಜಗತ್ತಿನಲ್ಲಿ ಬದುಕಲು ಕೂಡ ಅನರ್ಹವೆಂದೂ, ಇಂಗ್ಲೀಷ್ ಭಾಷೆ ಬರದ ಈಕೆ ಅಡುಗೆಮನೆಯಲಿರಷ್ಟೇ ಲಾಯಕ್ಕೆಂದೂ, ಸಮಯ ಸಿಕ್ಕಾಗಲೆಲ್ಲಾ ಪರಿಹಾಸ್ಯ ಮಾಡುವ ಗಂಡ, ಅದನ್ನು ತನ್ನ ಉಪಯೋಗಕ್ಕೆ ಬಳಸಿಕೊಳ್ಳುವ ಮಗಳು, ಇವರೀರ್ವರ ಅಪಹಾಸ್ಯದಿಂದ ನೋವಾದರೂ, ಸಂಕಟವಾದರೂ, ತೋರಿಸಿಕೊಳ್ಳದ ಸಂಯಮಿ.  

ಹೀಗಿದ್ದ ಶಶಿಗೆ ಅಕಸ್ಮಾತ್ತಾಗಿ ಅಮೇರಿಕಾಗೆ ಒಂಟಿಯಾಗಿ ಹೋಗುವ ಸಂದರ್ಭ ಒದಗಿಬರುತ್ತದೆ.  ಅದುವರೆವಿಗೂ ಒಬ್ಬಂಟಿಯಾಗಿ ಎಲ್ಲಿಗೂ ಹೋಗಿರದಿದ್ದ ಈಕೆ, ತನ್ನ ಜಗತ್ತನ್ನು ಬಿಟ್ಟು ಹೋಗುವುದರ ಸಂಕಟದ ಜೊತೆಗೆ, ಒಂಟಿಯಾಗಿ ಭಾಷೆ ಬರದ ನಾಡಿನಲ್ಲಿ ಬದುಕುವುದು ಹೇಗೆ? ಎಂಬ ಕಳವಳ ಕಾಡತೊಡಗುತ್ತದೆ.  ಇಂಗ್ಲೀಷ್ ಭಾಷೆಯ ಅರಿವಿಲ್ಲದೆ ತನ್ನ ಜಗತ್ತನ್ನು ಸಂಭಾಳಿಸುತ್ತಿದ್ದ ಈಕೆಗೆ, ಅಮೇರಿಕಾದಲ್ಲಿ ಇಂಗ್ಲೀಷ್ ಬರದೇ ಇರುವುದು ಬಹು ದೊಡ್ಡ ತೊಡಕಾಗಿಬಿಡುತ್ತದೆ.  ಅದಕ್ಕೆ ಪೂರಕವಾಗಿ ಕಾಫಿ ಶಾಪ್ ಒಂದರಲ್ಲಿ ನಡೆಯುವ ಘಟನೆ, ಆಕೆಯ ಆತ್ಮವಿಶ್ವಾಸಕ್ಕೆ ಧಕ್ಕೆ ತಂದುಬಿಡುತ್ತದೆ.  ೪ ವಾರಗಳಲ್ಲಿ ಇಂಗ್ಲೀಷ್ ಕಲಿಸುವ ಕೋರ್ಸಿಗೆ ಸೇರುವ ಶಶಿ, ಅಲ್ಲಿ ಇವಳಂತೆಯೇ ಭಾಷೆಯ ತೊಡಕಿನಿಂದ ತೊಂದರೆ ಅನುಭವಿಸಿ, ಇಂಗ್ಲೀಷ್ ಕಲಿಯಲು ಬರುವ ಇನ್ನಿತರರು, ತನ್ನ ಕಾಲ ಮೇಲೆ ತಾನು ನಿಲ್ಲಲು ಸಹಾಯ ಮಾಡಿರುವ ಇವಳ ಅಡುಗೆ ಬಗ್ಗೆ ಇವಳಿಗೆ ಪ್ರೀತಿಯಿದ್ದರೂ, ಗಂಡ ಮತ್ತು ಮಗಳು ಅಪಹಾಸ್ಯ ಮಾಡಿ, ಅದರ ಬಗ್ಗೆ ಕೀಳರಿಮೆ ಬೆಳೆಸಿಕೊಂಡಿರುವ ಶಶಿಗೆ, ನೀನೊಬ್ಬಳು ಉದ್ಯಮಿ ಎಂದು ಅರಿವು ಮೂಡಿಸುವ ಆಕೆಯ ಟೀಚರ್, ನಿನ್ನ ಅಡುಗೆ ಕೆಲಸ ಕಲೆಯೆಂದೂ ಅಭಿಮಾನ ಮೂಡಿಸುವ, ಇವಳಂತೆಯೇ ಅಡುಗೆಯನ್ನೇ ತನ್ನ ಕೆಲಸ ಮಾಡಿಕೊಂಡಿರುವ ಫ್ರೆಂಚ್ ಗೆಳೆಯ, ಆತ ಇವಳತ್ತ ಆಕರ್ಷಿತನಾಗುವುದು, ಭಾಷೆ ಬರದಿದ್ದರೂ, ತಮ್ಮ ತಮ್ಮ ಭಾಷೆಗಳಲ್ಲಿಯೇ ತಮ್ಮೆಲ್ಲಾ ಮನಸ್ಸಿನ ಭಾವನೆಗಳನ್ನು ಹಂಚಿಕೊಳ್ಳುವುದು, ಇವರಿಬ್ಬರ ನಡುವೆ ನಡೆಯುವಂಥ ಘಟನೆಗಳು, ಈಕೆಯನ್ನು ಹೆಜ್ಜೆಹೆಜ್ಜೆಗೂ ಹುರಿದುಂಬಿಸುವ, ಅಮೇರಿಕಾದಲ್ಲೇ ಹುಟ್ಟಿ, ಬೆಳೆದಿರುವ ಅಕ್ಕನ ಮಗಳು, ಇವಳಲ್ಲಿ ಆತ್ಮವಿಶ್ವಾಸ ಚಿಗುರುವಂತೆ ಮಾಡುವುದು. ತನ್ನ ಬಗ್ಗೆ ತನಗೆ ಪ್ರೀತಿಯುಂಟುವಂತೆ ಮಾಡಿದ ಫ್ರೆಂಚ್ ಗೆಳೆಯನನ್ನು ಆಯ್ಕೆ ಮಾಡುತ್ತಾಳಾ? ಅಥವಾ ತನ್ನ ಹಿಂದಿನ ಜೀವನಕ್ಕೆ ಮರಳುತ್ತಾಳಾ? ಇದು ಇಂಗ್ಲೀಷ್ ವಿಂಗ್ಲೀಷ್ ಚಿತ್ರದ ಕ್ಲೈಮಾಕ್ಸ್.

ಭಾರತದಲ್ಲೇ ನೆಲೆಸಿರುವಂಥ ಆಧುನಿಕ ಸುಶಿಕ್ಷಿತ ವರ್ಗದ ಮನಸ್ಥಿತಿ ಹಾಗೂ ಅಮೇರಿಕಾದಲ್ಲಿ ನೆಲೆಸಿರುವ ಅನಿವಾಸಿ ಭಾರತೀಯರ ಮನಸ್ಥಿತಿ ಚಿತ್ರದಲ್ಲಿ ಚೆಂದವಾಗಿ ನಿರೂಪಿತಗೊಂಡಿದೆ. ಅಮೇರಿಕಾದಲ್ಲಿದ್ದರೂ, ಹಾಕಿಕೊಳ್ಳುವ ಬಟ್ಟೆಯಿಂದ ಹಿಡಿದು, ನಡವಳಿಕೆಯಾಗಬಹುದು, ಸಂಭೋದನೆಯಾಗಬಹುದು, ಭಾರತದ ಸಂಸ್ಕೃತಿ, ಭಾಷೆಯನ್ನು ಮರೆಯದ  ಅನಿವಾಸಿ ಭಾರತೀಯರು,  ಅಲ್ಲಿಯೇ ಜನಿಸಿ, ಅಮೇರಿಕನ್ ಸಿಟಿಜನ್ ಶಿಪ್ ಪಡೆದು, ಬೆಳೆದಿರುವ ಅವರ ಮಕ್ಕಳು ಕೂಡ ಭಾರತೀಯ ಸಂಸ್ಕೃತಿಯಂತೆಯೇ ಬದುಕಲು ಆಸೆ ಪಡುವುದು, ಮತ್ತೊಂದು ಕಡೆ ಭಾರತದಲ್ಲಿಯೇ ಜನಿಸಿ, ಅಮೇರಿಕಾದ ಗಂಧಗಾಳಿ ಇಲ್ಲದೆ ಇಲ್ಲಿಯೇ ಬೆಳೆದಿದ್ದರೂ, ಉಡುಗೆ, ತೊಡುಗೆ, ಊಟ ಉಪಚಾರ, ಭಾಷೆಯ ಉಚ್ಚಾರ ಎಲ್ಲದರಲ್ಲೂ ಅಮೇರಿಕನರನ್ನು ಅನುಕರಿಸಲು ಪ್ರಯತ್ನ ಪಡುವುದು ಎಲ್ಲೋ ಒಂದು ಕಡೆ ನಮ್ಮ ಭಾರತೀಯ ಸಂಸ್ಕೃತಿ ಬೆಳೆಯುತ್ತಿದೆಯಲ್ಲಾ ಎನ್ನುವ ಆಸೆಯನ್ನು ಬಿತ್ತಿದರೂ, ಇಲ್ಲಿ, ಭಾರತದಲ್ಲಿ,  ಆಧುನಿಕ ಮನೋಭಾವವೆಂದರೆ ಅಮೇರಿಕನವರದ್ದು ಮಾತ್ರ ಎಂದು ಮಕ್ಕಳಾದಿಯಾಗಿ ಎಲ್ಲರೂ ಒಪ್ಪಿಕೊಳ್ಳುವುದು, ಇಲ್ಲವೇ ನೀನು ಬದುಕಲು ಅನರ್ಹ ಅಥವಾ ಅಡುಗೆ ಮನೆಗಷ್ಟೇ ಲಾಯಕ್ಕು ಎಂಬುದು ನಮ್ಮಲ್ಲಾಗುತ್ತಿರುವ ಸಂಕುಚಿತ ಭಾವನೆಯನ್ನು ಹಾಗೂ ಹೀಗೆ ಇರದಿದ್ದವರು ಕೀಳರಿಮೆಗೆ ಒಳಗಾಗುವ, ಇಂಥವರೆಲ್ಲರೂ ತಮ್ಮ ಚಿಪ್ಪಿನೊಳಗೆ ಹುದುಗಿಬಿಡುವಂಥ ಅಪಾಯವನ್ನು, ತನ್ಮೂಲಕ ನಮ್ಮ ಸಮಾಜದ ಬೆಳವಣಿಗೆ ಕುಂಠಿತವಾಗಬಹುದೇನೋ ಎನ್ನುವ ಆತಂಕವನ್ನು ಎತ್ತಿ ತೋರಿಸುತ್ತದೆ.  ಕೇರಳದಲ್ಲಿ ನೆಲೆಸಲು ಮಲೆಯಾಳಂ, ತಮಿಳುನಾಡಿನಲ್ಲಿ ನೆಲೆಸಲು ತಮಿಳು, ಕನ್ನಡನಾಡಿನಲ್ಲಿ ನೆಲೆಸಲು ಕನ್ನಡ (?!) ಬೇಕು ಎಂಬುದನ್ನು ಬಿಟ್ಟು, ಇಂಗ್ಲೀಷ್ ಭಾಷೆ ಮಾತ್ರ ಮುಖ್ಯ, ಇನ್ನುಳಿದ ಭಾಷೆಗಳೆಲ್ಲವೂ ನಗಣ್ಯ ಎನ್ನುವ ಮನೋಭಾವ ಭಾರತೀಯರಲ್ಲಿ ಮಾತ್ರವಲ್ಲ, ಫ್ರೆಂಚ್, ಆಫ್ರಿಕನ್, ಚೈನೀಸ್, ಪಾಕೀಸ್ತಾನೀಯರು ಎಲ್ಲರಲ್ಲೂ ಮೂಡುತ್ತಿದೆ ಎನ್ನುವುದು ಕೂಡ ಆತಂಕದ ವಿಷಯವೇ ಆಗಿದೆ. ಚಿತ್ರದ ನಾಯಕಿಯಾದ ಶಶಿ ಒಂದು ಕಡೆ ಹೇಳುವ ಮಾತು, "ನನಗೆ ಪ್ರೀತಿಗಿಂತಲೂ ಒಂದಿಷ್ಟೂ ಗೌರವ ಬೇಕು!"  ಈ ಮಾತು ನಮಗೆಲ್ಲರಿಗೂ ಭಾಷೆಯ ವಿಷಯದಲ್ಲಿ ಪಾಠವಾದರೆ, ನಮ್ಮ ನಮ್ಮ ಭಾಷೆಗಳ ಮೇಲೆ ನಮಗೆ ಪ್ರೀತಿಗಿಂತಲೂ, ಗೌರವ ಮೂಡಿದರೆ ಬಹುಶಃ ಅಳಿಯುತ್ತಿರುವ ಎಲ್ಲಾ ಭಾಷೆಗಳೂ ಉಳಿಯುವುದು.

ಮಿಕ್ಕಿದಂತೆ, ಶ್ರೀದೇವಿಯ ನಟನೆ ಹಾಗೂ ಅದಕ್ಕೆ ಪೂರಕವಾದ ಇನ್ನಿತರರ ನಟನೆ ನಿಜಕ್ಕೂ ಪ್ರಶಂಸನೀಯ. ‘ಶಶಿ’ ಪಾತ್ರದ ಪರಕಾಯ ಪ್ರವೇಶ, ಶ್ರೀದೇವಿಗೆ ಶ್ರೀದೇವಿಯೇ ಸಾಟಿ.  ಈ ಹಿಂದಿನ ಚಿತ್ರಗಳಲ್ಲಿ ಬಳುಕುವ ಬಳ್ಳಿಯಂತಿದ್ದ ಸುಂದರಿ ಶ್ರೀದೇವಿ, ಈ ಚಿತ್ರದಲ್ಲಿ ಆಹಾರವಿಲ್ಲದೆ ಸೊರಗಿದಂತಾಗಿರುವುದನ್ನು ನೋಡಲು ಅಸಹನೀಯವಾಗಿದ್ದರೂ, ‘ಶಶಿ’ ಪಾತ್ರಕ್ಕೆ ಆಕೆ ಹೀಗೆ ಸೊರಗಿದಂತಿರುವುದೇ ಸರಿ ಎಂದೆನಿಸುತ್ತದೆ. ಇಂಗ್ಲೀಷ್ ಭಾಷೆಯ ದಾಳಿಯಿಂದಾಗಿ ಮಿಕ್ಕೆಲ್ಲಾ ಭಾಷೆಗಳು ಸೊರಗಿರುವುದನ್ನು ಪರೋಕ್ಷವಾಗಿ ಸೂಚಿಸುತ್ತಿದೆಯೇನೋ ಎಂದೆನಿಸುತ್ತದೆ!   ಅಮಿತಾಭ್ ಅವರದೂ ಅತಿಥಿ ಪಾತ್ರವಾದರೂ, ಸಿಕ್ಕ ಐದು ನಿಮಿಷಗಳಲ್ಲಿಯೇ ಮನಸೆಳೆದು ಬಿಡುತ್ತಾರೆ.  ಫ್ರೆಂಚ್ ಪಾತ್ರಧಾರಿಯ ನಿಶ್ಯಬ್ದ ತುಟಿಯಂಚಿನ ನಗೆ ಇಡೀ ಚಿತ್ರಕೊಂದು ಮೆರುಗು ನೀಡುತ್ತದೆ.  

3 comments:

 1. ವಾಹ್ !! ತುಂಬಾ ಚೆನ್ನಾಗಿ ಬರ್ದಿದ್ದಿರಿ . ಇದೇನು english -vinglish ಅಂತ ಸುಮ್ಮನೆ ಅಂತಃ ಪುರದಲ್ಲಿ ನೋಡ್ತಾ ಇದ್ದೆ. ಆದ್ರೆ ಈ ಇಂಚರ ನನ್ನ ಮೊದಲ ಬಾರಿಗೆ ಹಿಂದಿ ಚಲನಚಿತ್ರಕ್ಕೆ ದುಂಬಾಲು ಬೀಳೋವಂತೆ ಮಾಡಲು ಯಶಸ್ವಿ ಆದ್ಲು .... ಬರೀತಾ ಇರಿ

  ReplyDelete
 2. ಚೆನ್ನಾಗಿ ವಿಮರ್ಶೆ ಮಾಡಿದ್ದೀರಿ ..ಅಭಿನಂದನೆಗಳು .

  ReplyDelete
 3. ಇಂಗ್ಲಿಷ್ ವಿಂಗ್ಲಿಷ್ ನಾನು ಇತ್ತೀಚೆಗೆ ನೋಡಿದ ಒಳ್ಳೆಯ ಚಿತ್ರಗಳಲ್ಲಿ ಒಂದು.
  ಮೊದಲನೆಯದಾಗಿ ಒಬ್ಬ ಭಾರತೀಯ ಗೃಹಿಣಿಯ ಚಿತ್ರಣವನ್ನು ಅದ್ಬುತವಾಗಿ ಕಟ್ಟಿಕೊಟ್ಟಿದೆ ಹಾಗೆ ಆಕೆಯ ಮನಸ್ಸಿನಾಳದ ಭಾವನೆಗಳನ್ನು ಹಿಡಿಯುವಲ್ಲಿಯೂ ಸಹ ಸಫಲವಾಗಿದೆ.
  ಅದಲ್ಲದೇ ಅನೇಕ ವಿಷಯಗಳ ಬಗ್ಗೆ ಮಾತನಾಡುವ ಚಿತ್ರ. ಪ್ರೀತಿಗೆ ಭಾಷೆ, ಗಡಿಯ ನಿರ್ಭಂದವಿಲ್ಲ ಎಂಬುದರಿಂದ ಹಿಡಿದು ಗೆಳೆತನ, ಸಂಸಾರ, ಸಂಬಂದಗಳು ಎಲ್ಲವನ್ನು ಚಿತ್ರಿಸಿದೆ.
  ಒಳ್ಳೆಯ ವಿಮರ್ಷೆ. :-)

  ReplyDelete