Monday, January 5, 2015

ಚಿತ್ರಸಂತೆಯಲ್ಲಿ ದಕ್ಕಿದ್ದು! ದಕ್ಕದ್ದು! :-)

ಐದು ವರ್ಷಗಳ ಹಿಂದೆ, ಮೊದಲ ಬಾರಿಗೆ ಚಿತ್ರಸಂತೆಗೆ ಹೊರಟಾಗ, ಅಲ್ಲಿನ ಜನಸಾಗರ ನೋಡಿ ಗಲಿಬಿಲಿಯಾಗಿಬಿಟ್ಟಿತ್ತು. ರಸ್ತೆಯೆಂಬುದನ್ನು ಮರೆತು ಅನಾಥ ಪ್ರಜ್ಞೆ ಕಾಡಿ ಅತ್ತಿದಾಗಿತ್ತು!  ಆಮೇಲೆ ಒಂದಷ್ಟು ಗೆಳೆಯರು ಸಿಕ್ಕಿ ಸಮಾಧಾನವಾಗಿತ್ತು. ನನಗಾಗ (ಈಗಲೂ ಕೂಡ) ಈ ಆರ್ಟ್ ಶೋ, ಪೈಂಟಿಂಗ್, ಮಾಡರ್ನ್ ಆರ್ಟ್, ದೃಶ್ಯ ಕಲೆ! ಇವೆಲ್ಲಾ ಹೊಸ ಪದಗಳು. ಅವುಗಳನ್ನು ನೋಡಿದರೆ ನೈಜವಾಗಿ ಅಂದರೆ ಫೋಟೋಗ್ರಾಫ್ ತರಹ ಕಂಡರೆ ಮಾತ್ರ ಚಂದ ಎಂಬುದಷ್ಟೆ ಆಗಿನ, ಬಹುಶಃ ಈಗಿನ ಮನಸ್ಥಿತಿ!  ಕೆಲವು ಚಿತ್ರಗಳನ್ನು ನೋಡಿದರಂತೂ ತಲೆಬುಡ ಅರ್ಥವಾಗುವುದೇ ಇಲ್ಲಾ.  

ಐದು ವರ್ಷಗಳಲ್ಲಿ ದೃಶ್ಯಕಲೆಯ ಬಗ್ಗೆ ಅಂತಹ ಜ್ಞಾನ ಬೆಳೆಯದಿದ್ದರೂ, ಈ ಚಿತ್ರಗಳಲ್ಲಿ ಏನಾದರೂ ‘ಹಿಡನ್ ಮೆಸೇಜ್’ ಇರಬಹುದಾ? ಎಂಬ ಕುತೂಹಲ ಮೂಡುವಷ್ಟರ ಮಟ್ಟಿಗೆ , ಈ ಆರ್ಟ್ ವರ್ಕ್ ಗಳ ಬಗ್ಗೆ ಆಸಕ್ತಿ ಮೂಡಿದೆ.  ಅಂತಹದರಲ್ಲಿ,  ಹಲವಾರು ಕಾರಣಗಳಿಂದ ಚಿತ್ರಸಂತೆಗೆ ಈ ಐದು ವರ್ಷಗಳಲ್ಲಿ ಹೋಗಲಾಗಿರಲಿಲ್ಲ.  ಈ ಬಾರಿ ಒಂದಿಷ್ಟು ಫ್ರೆಂಡ್ಸ್ ಗಳೊಟ್ಟಿಗೆ ಮಾತನಾಡಿಕೊಂಡೇ ಹೊರಟಿದ್ದಾಯಿತು.  ಆದರೆ ಮೊದಲ ಬಾರಿ ಕೊಟ್ಟ ಥ್ರಿಲ್, ಈ ಬಾರಿ ಇರಲಿಲ್ಲ. ಜನರು ಕೂಡ ಅಷ್ಟೊಂದಿರಲಿಲ್ಲ ಎಂದೇ ಅನಿಸಿತು.  ಅದದೇ ಯಶೋದೆ, ಕೃಷ್ಣ, ಬುದ್ಧ, ಗಾಂಧಿ, ನಡುವೆ ಒಂದಷ್ಟು ಮನವರಳಿದ್ದು ತಮಿಳುನಾಡಿನಿಂದ ಬಂದಿದ್ದ ಒಂದಿಬ್ಬರ ಆರ್ಟ್ ವರ್ಕ್.  ನೀರಿನಲ್ಲಿ ಆಡುತ್ತಿದ್ದ ಮಕ್ಕಳೂ ಕಣ್ಮುಂದೆ ಇದ್ದಂತಿತ್ತು.  ಆದರೆ ವೀಕ್ಷಿಸುತ್ತಿದ್ದ ಜನರು, ತಮ್ಮ ಕ್ಯಾಮೆರಾಗಳಿಂದ ಫೋಟೋ ತೆಗೆಯುತ್ತಿದ್ದದ್ದು ಸಿಕ್ಕಾಪಟ್ಟೆ ಇರಿಸುಮುರಿಸಾಗುತ್ತಿತ್ತು.  ಈ ಡಿಜಿಟಲ್ ಕಾಲದಲ್ಲಿ, ಇಂತಹ ಆರ್ಟ್ ವರ್ಕ್ ಗಳ ಫೋಟೋ ಹಿಡಿದು, ಪ್ರಿಂಟ್ ಹಾಕಿಬಿಟ್ಟರೆ ಮುಗೀತಲ್ಲಾ?  ಒಂದಿಬ್ಬರ ಬಳಿ ಕಿತ್ತಾಡಿದ್ದು ಆಯಿತು.  ಊಹೂ, ನನ್ನ ಮಾತಿಗೆ ಯಾರೂ ಬೆಲೆ ಕೊಡಲಿಲ್ಲ. ಭಾಷೆ ಬರದ ಕಲಾವಿದ ಸುಮ್ಮನೆ ಕುಳಿತಿದ್ದರು, ಜನರು ಅವರ ಪಾಡಿಗೆ ಫೋಟೋ ತೆಗಿತಾನೇ ಇದ್ದರು.

ಮೊನ್ನೆ, ಮೊನ್ನೆ ತಾನೇ ಬೆಂಗಳೂರಿನಲ್ಲಿ ಬಾಂಬ್ ಬ್ಲಾಸ್ಟ್ ಆಗಿದ್ದರೂ ಕೂಡ, ಚಿತ್ರ ಸಂತೆಯಲ್ಲಿ ಲಕ್ಷಾಂತರ ಜನರು ಸೇರುತ್ತಾರೆಂದು ತಿಳಿದಿದ್ದರೂ ಕೂಡ, ಯಾವುದೇ ರೀತಿಯ ಸೆಕ್ಯುರಿಟಿ ಇಲ್ಲದಿದ್ದದು ಖೇದಕರ.  ಎಂತಹುದೇ ಅನಾಹುತ ನಡೆಯುವಂತಹ ಹೇರಳ ಅವಕಾಶಗಳು ಅಲ್ಲಿದ್ದವು.  ಚಿತ್ರಕಲಾಪರಿಷತ್ತಿನ ಒಳಗಂತೂ ಒಬ್ಬರನೊಬ್ಬರು ಅಕ್ಷರಶಃ ತಳ್ಳಿಕೊಂಡು ಹೋಗುವಂತಹ ನೂಕುನುಗ್ಗಲು!  ಒಂದಷ್ಟು ಪೋಲೀಸರು, ದೂರದಲ್ಲೊಂದು ಕಡೆ ರೆಡ್ ಕ್ರಾಸ್ ನವರ ವ್ಯಾನ್, ಬಿಟ್ಟರೆ, ಮತ್ಯಾವುದೇ ರಕ್ಷಣಾ ಸೌಲಭ್ಯಗಳೂ ಇರಲಿಲ್ಲ.  ಯಾರೋ ಕಿಡಿಗೇಡಿಗಳು ಸುಮ್ಮನೊಂದು ಪಟಾಕಿ ಹೊಡೆದರೂ ಸಾಕು, ಕಾಲ್ತುಳಿತದಲ್ಲಿ ಒಂದಷ್ಟು ಜನರು ಸಿಕ್ಕಿಕೊಳ್ಳುತ್ತಿದ್ದರು!

ಮತ್ತೊಂದು ವಿಷಯ ತಲೆ ಕೆಡಿಸಿದ್ದು, ಚಿತ್ರ ಸಂತೆಯಲ್ಲಿ ಬಿಕರಿಯಾಗುತ್ತಿದ್ದ ಕಲೆಗಳ ದುಬಾರಿ ಬೆಲೆ.  ಸಣ್ಣಪುಟ್ಟ ಜಾತ್ರೆಯಲ್ಲಿ ಸಿಗುವಂತಹ ವಸ್ತುಗಳ ಹೊರತು, ಉಳಿದವುಗಳ ಬೆಲೆ ಸಾವಿರದ ಮೇಲೆಯೇ! ಹಾಗಿದ್ದರೆ ಚಿತ್ರಗಳು ಗ್ಯಾಲರಿಯಿಂದ ಸಂತೆಗೆ ಬಂದರೂ, ಆಕಾಶಕ್ಕೇರಿದ ಬೆಲೆ ಕೇಳಿ, ಚಿತ್ರಗಳನ್ನು ಕೊಂಡುಕೊಳ್ಳುವುದು ಜನಸಾಮಾನ್ಯರಿಗೆ ಸಾಧ್ಯವಾದೀತೇ?  ಚಿತ್ರಸಂತೆಯಲ್ಲಿ ಹಣ ಮಾಡಿದ್ದು ಫುಡ್ ಸ್ಟಾಲ್ ಗಳಷ್ಟೇ!  ಇನ್ನು ಮುಂದೆ, ಚಿತ್ರಸಂತೆಯಲ್ಲಿ ಸ್ಟಾಲ್ ಹಾಕಲು ಅವಕಾಶ ಸಿಕ್ಕರೇ, ಫುಡ್ ಸ್ಟಾಲ್ ಹಾಕುವುದೇ ಒಳ್ಳೆಯದು ಎನ್ನುವ ಅಭಿಪ್ರಾಯಕ್ಕೆ ಬರುವಂತಹ ನೂಕುನುಗ್ಗಲು ಅಲ್ಲಿತ್ತು. ಉಳಿದಂತೆ ಬೇರೆ ಕಡೇ, ಫೋಟೋ ತೆಗೆಯುವವರದ್ದೇ ಸಂಭ್ರಮ ಹೆಚ್ಚು.

ಚಿತ್ರಸಂತೆಗೆ ಹೋದದ್ದು ಸಾರ್ಥಕ ಎಂಬ ಅನಿಸಿಕೆ ಮೂಡಿದ್ದು ಚಿತ್ರಕಲಾಪರಿಷತ್ತಿನ ಅನಿಲ್ ಸರ್ ಅವರನ್ನು ಭೇಟಿ ಮಾಡಿದ್ದು.  ಅಷ್ಟೊಂದು ಜವಾಬ್ದಾರಿ ಅವರ ಮೇಲಿದ್ದರೂ, ಬೆಳಿಗ್ಗೆಯಿಂದ ಎಲ್ಲರನ್ನೂ ಭೇಟಿ ಮಾಡಿ ಸಾಕಾಗಿದ್ದರೂ, ಒಂದಿಷ್ಟು ಸುಸ್ತು ಕೂಡ ತೋರಿಸಿಕೊಳ್ಳದೇ ಓಡಾಡುತ್ತಿದ್ದ ರೀತಿ!  ಪ್ರತಿಯೊಬ್ಬರಿಗೂ ಅವರೇ ಬೇಕು.  ಅವರೊಂದಿಗೆ ಕಳೆದ ಒಂದಿಷ್ಟು ಕಾಲ ಇಡೀ ದೃಶ್ಯಕಲೆಯನ್ನೇ ನೋಡುವ ರೀತಿ ಬದಲಾಯಿಸಿದ್ದಂತೂ ಸುಳ್ಳಲ್ಲ.  ಅವರನ್ನು ಭೇಟಿ ಮಾಡುವ ಮುಂಚೆ, ಒಂದೂ ಪೋರ್ಟೇಟ್ ಚಿತ್ರವನ್ನು ನೋಡಿ ಬಂದಿದ್ದೆವು. ಅದ್ರಲ್ಲಿ ದಪ್ಪನೆಯ ಮೂಗು, ಕೆಟ್ಟದಾಗಿರುವ ತುಟಿ, ಸಣ್ಣ ಮಕ್ಕಳು ಚಿತ್ರಿಸಿರುವ ರೀತಿ ಇತ್ತು. ಇದು ಏನು ಚಂದ? ಎಂದು ಹಾಕಿದ್ದಾರೆ ಎಂದು ತಮಾಷೆ ಮಾಡಿ ಹೋಗಿದ್ದೆವು.

ಅನಿಲ್ ಸರ್ ಬಳಿ ಕುತೂಹಲದಿಂದ, ಒಂದಿಷ್ಟು ಸಂಕೋಚದಿಂದ ಆ ಚಿತ್ರದ ಬಗ್ಗೆ ಕೇಳಿದಾಗ ಅವರು ಆ ಚಿತ್ರವನ್ನು ಅರ್ಥೈಸಿದ ರೀತಿ ಚಂದ.  ಆ ಚಿತ್ರದಲ್ಲಿ ಇಡೀ ಹೆಣ್ಣಿನ ಮುಖವನ್ನು ಓರೆಕೋರೆಯಾಗಿ ಕಪ್ಪು ಬಣ್ಣದಲ್ಲಿ ಬರೆದಿದ್ದರೆ, ಮೂಗುತಿ, ಕಿವಿಯೋಲೆ ಮತ್ತು ಬೈತಲೆ ಬೊಟ್ಟು ಮಾತ್ರ ಕೆಂಪು ಬಣ್ಣದಲ್ಲಿ, ಎದ್ದು ಕಾಣುವಂತೆ ಬರೆದಿದ್ದರು.  ಹಾಗಾಗಿ ಇಡೀ ಚಿತ್ರದಲ್ಲಿ ಎದ್ದು ಕಾಣುವ ಅಂಶ ಆಕೆಯ ಮುಖಕ್ಕಿಂತ, ಹಳೆಯ ಕಾಲದ ಆಭರಣಗಳಾಗಿದ್ದು (ನಮಗೆ ಗೊತ್ತೇ ಆಗಿರಲಿಲ್ಲ :( ). ಇದರಿಂದ ಅರ್ಥ ಮಾಡಿಕೊಳ್ಳಬೇಕಾದ ಅಂಶವೇನೆಂದರೆ, ಸಾಂಪ್ರದಾಯಿಕತನಕ್ಕೆ ಆ ಕಲಾವಿದ ಹೆಚ್ಚು ಬೆಲೆ ಕೊಟ್ಟು, ಉಳಿದದ್ದು ನಗಣ್ಯ ಎಂಬಂತೆ ಚಿತ್ರಿಸಿದ್ದಾನೆ,  ಎಂದು ಅವರು ಹೇಳಿದಾಗ, ಅದುವರೆಗೂ ಆಡಿಕೊಂಡಿದ್ದ ನಮ್ಮ ಬಾಯಿಗೆ ಬೀಗ ಬಿದ್ದಿತು.

ಮತ್ತೊಂದು ವಿಷಯ ಅನಿಲ್ ಸರ್ ವಿವರಿಸಿದ್ದು, ಕಲಾವಿದರು ತಮ್ಮನ್ನು ತಾವೇ ಅಲಂಕರಿಸಿಕೊಂಡು, ತಾವು ಕೂಡ ಕಲೆಯ ಭಾಗವಾಗಿಬಿಡುವುದು.  ಅವರನ್ನು Performance Artist  ಎಂದು ಹೇಳುತ್ತಾರೆ ಎಂದರು. ಈಗೀಗ Performance Artist ಆಗುವುದರಲ್ಲಿ ಹೆಚ್ಚಾಗಿ ಕಲಾವಿದರು ಆಸಕ್ತಿ ತೋರಿಸುತ್ತಿದ್ದಾರೆ. ಅದರಲ್ಲಿಯೂ ಹೆಣ್ಣು ಮಕ್ಕಳು ಹೆಚ್ಚಿಗೆ ಭಾಗವಹಿಸುತ್ತಿದ್ದಾರೆ ಎಂಬ ಅಂಶ ಸಿಕ್ಕಾಪಟ್ಟೆ ಕುತೂಹಲ ಕೆರಳಿಸಿತು.  ಇದರ ಬಗ್ಗೆ ಮತ್ತೊಮ್ಮೆ  ವಿವರವಾಗಿ ಬರೆಯಬೇಕು.  ಒಂದೊಂದು ಚಿತ್ರಕ್ಕೂ ಹತ್ತಿಪ್ಪತ್ತು ಪುಟಗಳಷ್ಟು ವಿವರಗಳನ್ನು ಬರೆಯಬಹುದು ಎಂದವರು ವಿವರಿಸುತ್ತಿದ್ದರೆ, ದೃಶ್ಯಕಲೆಯೂ ಸಿನೆಮಾಕ್ಕಿಂತಲೂ ಹೆಚ್ಚಿನ, ಒಳ್ಳೆಯ ಅನುಭವವನ್ನು / ಆನಂದವನ್ನು / ಥ್ರಿಲ್ ಅನ್ನು ಕೊಡುತ್ತದೆ ಎಂಬುದು ಅರ್ಥವಾಗುತ್ತಾ ಹೋಯಿತು.  ಕೇವಲ ಅರ್ಧ ಗಂಟೆಯಲ್ಲಿ ಅವರು ವಿವರಿಸಿದ್ದು ನಮಗೆ ಇಷ್ಟು ಖುಷಿ ಕೊಡಬೇಕಾದರೆ, ಅವರ ವಿದ್ಯಾರ್ಥಿಗಳು ನಿಜವಾಗಿಯೂ ಅದೃಷ್ಟಶಾಲಿಗಳು :-)No comments:

Post a Comment