Monday, August 27, 2012

ಸಾವು ?!!!

ಸಾವು ಎಂದೊಡನೆಯೇ ಎಲ್ಲರೂ ಬೆಚ್ಚಿ ಬೀಳ್ತೀವಿ ಅಲ್ವಾ? ಏ, ಬಿಡ್ತು ಅನ್ನು, ಅಶ್ವಿನಿ ದೇವತೆಗಳಿದ್ದಾರೆ, ಅಸ್ತು ಅಂದು ಬಿಡ್ತಾರೆ ಎಂದು ಹೆದರಿಸುತ್ತೇವೆ. ಹುಟ್ಟಿದವರೆಲ್ಲರೂ ಸಾಯಲೇ ಬೇಕು. ಯಾರೂ ಇಲ್ಲಿ ಶಾಶ್ವತವಲ್ಲ. ವಿಜ್ಞಾನ ಎಷ್ಟೇ ಮುಂದುವರಿದಿದೆ ಎಂದರೂ, ನಮಗ್ಯಾರಿಗೂ ಸಾವನ್ನು ಗೆಲ್ಲಲಾಗಿಲ್ಲ. ಸ್ವಲ್ಪ ಮಟ್ಟಿಗೆ ಸಾವನ್ನು ಮುಂದೂಡಬಹುದೇ ಹೊರತು ಸಾಯುವುದೇ ಇಲ್ಲ ಎನ್ನಲಾಗದು. ಇಷ್ಟಿದ್ದರೂ ನಾವೆಲ್ಲರೂ ಹೀಗ್ಯಾಕೆ? ಪ್ರತಿಯೊಂದಕ್ಕೂ ಹುಟ್ಟಿದ ದಿನದಿಂದ ಹಿಡಿದು ಪ್ರತಿಯೊಂದು ಗಳಿಗೆಯನ್ನೂ ನಮ್ಮ ಕ್ಯಾಮೆರಾಗಳಲ್ಲಿ ದಾಖಲಿಸಲು ಇಷ್ಟ ಪಡುವ ನಾವು ಅದೇ ಸಾವನ್ನು ಮಾತ್ರ ಫೋಟೋದಲ್ಲಿ ಹಿಡಿದಿಟ್ಟುಕೊಳ್ಳಲಾರೆವು. ಸಂಭ್ರಮದಿಂದ ಕಳಿಸಿಕೊಡಲಾರೆವು. ನಮ್ಮ ಪ್ರೀತಿ ಪಾತ್ರರು ನರಳುತ್ತಾ ಬಿದ್ದಿದ್ದರೂ, ಜೀವದೊಂದಿಗೆ ಹೋರಾಡುತ್ತಿದ್ದರೂ, ಅವರನ್ನು ಕಳೆದುಕೊಳ್ಳುತ್ತೇವೆಂಬ ಭಯ ನಮ್ಮನ್ನು ಕಾಡುತ್ತಲೇ ಇರುತ್ತದೆ. ನಾವು ಬದುಕಿರುವುದರ ಬಗ್ಗೆ ನಮಗೆ ಗ್ಯಾರಂಟಿಯಿಲ್ಲ. ಆದರೂ ಅವರನ್ನು ಹೇಗಾದರೂ ಮಾಡಿ, ಏನಾದರೂ ಮಾಡಿ ಉಳಿಸಿಕೊಳ್ಳುತ್ತೇವೆಂದು ಪಣ ತೊಡುತ್ತೇವೆ!

ಇದ್ದಾಗ ದ್ವೇಷದಿಂದ, ಜಗಳವಾಡುತ್ತಾ ಕಾಲ ಕಳೆದಿದ್ದ ನಮಗೆ, ಆ ವ್ಯಕ್ತಿಯ ಸಾವು, ಇಲ್ಲದ ಪ್ರೀತಿಯನ್ನು ತಂದುಬಿಡುತ್ತದೆ! ಅವರಿದ್ದಾಗ ನಾವ್ಯಾಕೆ ಅವರಿಗಾಗಿ ಬದಲಾಗಬೇಕು? ನಾನೇ ಸರಿ, ನನ್ನದೇನೂ ತಪ್ಪಿಲ್ಲ, ಬೇಕಿದ್ದರೆ ಅವನೇ ತಗ್ಗಿ ಬರಲಿ, ಸತ್ತರೂ ಸರಿ ಆತನ ಮುಖ ನೋಡೋಲ್ಲ ಎನ್ನುವಂತಹ ಹಟವೇ ನಮಗೆ ಮುಖ್ಯವಾಗಿರುತ್ತದೆ. ಆದರೆ ಆ ವ್ಯಕ್ತಿಯ ಸಾವು, ನಮ್ಮನ್ನು ಚಡಪಡಿಸುವಂತೆ ಮಾಡಿಬಿಡುತ್ತದೆ. ಇದ್ದಕ್ಕಿದ್ದಂತೆ ಆ ವ್ಯಕ್ತಿ ನಮಗೆ ಮಹಾನ್ ವ್ಯಕ್ತಿಯ ಹಾಗೇ ಕಾಣಿಸಿಕೊಳ್ಳುತ್ತಾರೆ. ಅವರ ಗೈರು ಹಾಜರಿ ನಮಗೆ ಎದ್ದು ತೋರುತ್ತದೆ. ಅವರಿಲ್ಲದೆ ನಾವು ಬದುಕಲಾರೆವು ಎನ್ನುವಂತಹ ಸ್ಥಿತಿಯನ್ನು ಉಂಟುಮಾಡುತ್ತದೆ. ಇದಲ್ಲವೇ ವಿಪರ್ಯಾಸ! ಇದ್ದಾಗಲೇ ಸರಿ ಮಾಡಿಕೊಂಡಿದ್ದರೆ?! ಈ ‘ರೆ’ ನಮ್ಮನ್ನು, ನಾವು ಸಾಯುವವರೆಗೂ ಬೆನ್ನು ಹತ್ತುತ್ತದೆ. ಹೋಗಲಿ, ಈ ಸಾವಿಂದ ಪಾಠ ಕಲಿಯುತ್ತೇವೆಯೇ? ಮತ್ತದೇ ಹಠ, ಮತ್ತದೇ ಜಗಳ ಮತ್ತೊಬ್ಬರೊಂದಿಗೆ!

ಹಿಂದಿನ ಕಾಲದಲ್ಲಿಯಾದರೆ, ಅವಿಭಕ್ತ ಕುಟುಂಬ, ಮನೆ ತುಂಬ ಮಕ್ಕಳು, ಮೊಮ್ಮಕ್ಕಳು. ಯಾರಾದರೂ ಅಕಾಲ ಮೃತ್ಯುಗೀಡಾದರೆ, ಉಳಿದವರು ಆ ಮಕ್ಕಳನ್ನು ತಮ್ಮ ಮಕ್ಕಳೊಟ್ಟಿಗೆ ಸಾಕುತ್ತಿದ್ದರು. ಈ ಜನ್ಮದಲ್ಲಿ ಸತ್ತವರ ಋಣ ‘ಇಷ್ಟೇ ಇದ್ದಿದ್ದು’! ಎಂದು ಕ್ಷಣ ಮಾತ್ರದಲ್ಲಿ ಆ ನೋವನ್ನು ಅರಗಿಸಿಕೊಂಡು ಮುಂದಿನ ಕೆಲಸಕ್ಕೆ ತಯಾರಿ ನಡೆಸುತ್ತಿದ್ದರು. ಅಲ್ಲೊಂದು, ಇಲ್ಲೊಂದು ತೀರಾ ತೊಂದರೆಗೊಳಗಾದವರು ಇದ್ದರೆ ಹೊರತು ಅಂತಹ ಅನಾಥ ಪ್ರಜ್ಞೆ ಕಾಡುತ್ತಿರಲಿಲ್ಲ. ಆದರೆ ಈಗ ನಮ್ಮ ಪ್ರೀತಿ ಪಾತ್ರರ ಅಕಾಲ ಮೃತ್ಯು ನಮಗೆ ಎಂತಹ ಶಾಕ್ ನೀಡುತ್ತದೆಯೆಂದರೆ, ಎಷ್ಟೋ ಕುಟುಂಬಗಳು ಆ ವ್ಯಕ್ತಿಯ ಸಾವಿನ ನಂತರ ಬೀದಿಗೆ ಬಂದುಬಿಡುತ್ತವೆ. ಸತ್ತಾಗ ಬಂದು, ಲೊಚಗುಟ್ಟಿ, ಕಣ್ಣೊರೆಸಿಕೊಂಡು ಹೋದವರು, ಆ ವ್ಯಕ್ತಿಯ ಕುಟುಂಬದವರು ಇನ್ನೂ ಬದುಕಿದ್ದಾರೆ ಎನ್ನುವುದನ್ನು ಮರೆತುಬಿಡುತ್ತಾರೆ. ಆ ಇನ್ಯೂರೆನ್ಸ್, ಈ ಇನ್ಶೂರೆನ್ಸ್ ಎಂದು ಕೆಲವರಿಗೆ, ಜೀವನ ನಿರ್ವಹಿಸಲು ತೊಂದರೆಯಾಗದಿದ್ದರೂ, ಸಂಬಂಧಗಳಿಗೆ ಬೆಲೆಯೇ ಇಲ್ಲದಿರುವ ಅಥವಾ ಇದ್ದಾಗ ನಾವು, ನಮ್ಮ ಮಕ್ಕಳು ಎಂದಿರುವ ಕುಟುಂಬಗಳು ಅಕ್ಷರಶಃ ಅನಾಥವಾಗಿಬಿಡುತ್ತವೆ. 

ಅಕಾಲ ಮೃತ್ಯುವನ್ನು ಎದುರಿಸುವುದು ಹಿಂಸೆಯೇ ಸರಿ. ಆದರೆ ಹಣ್ಣು ಹಣ್ಣು ಮುದುಕರು, ಈ ಜೀವನದಲ್ಲಿ ನಮ್ಮ ಕೆಲಸವೆಲ್ಲಾ ಮುಗೀತು, ಇನ್ಯಾಕೆ ಸಾವು ಬರಲಿಲ್ಲವೋ? ಎಂದು ಗೋಳಾಡುತ್ತಿರುವವರು ಅಥವಾ ವರ್ಷಾನುಗಟ್ಟಲೆ ಬಹು ಹಿಂಸೆಯಿಂದ, ಕಿಡ್ನಿ ಫೇಲ್ಯೂರ್, ಲಿವರ್ ಪ್ರಾಬ್ಲಮ್, ಹಾರ್ಟ್ ಪ್ರಾಬ್ಲಮ್ ಎಂದು ಹತ್ತು ಹಲವಾರು ಕಾಯಿಲೆಗಳಿಂದ ನರಳುತ್ತಿರುವವರಿಗೆ ಸಾವು ನಿಜವಾಗಲೂ ಅವರಿಗೆ ಮುಕ್ತಿ ನೀಡುತ್ತದೆ. ಅಯ್ಯೋ! ಅವರು ನರಳುವುದನ್ನು ನೋಡಲಾಗುವುದಿಲ್ಲ, ಬೇಗ ಸಾವು ಬರಬಾರದೇ? ಎಂದು ಕಂಡ ಕಂಡ ದೇವರಿಗೆಲ್ಲಾ ಕೈಮುಗಿದಿರುತ್ತೇವೆ. ಇಷ್ಟೆಲ್ಲಾ ಗೊತ್ತಿದ್ದರೂ ಅವರು ನಿಜವಾಗಲೂ ಸತ್ತೇ ಬಿಟ್ಟಾಗ, ಇಷ್ಟು ಬೇಗ ಸಾವು ಬರಬಾರದಿತ್ತು ಎಂದು ಮತ್ತೆ ಅದೇ ದೇವರಿಗೆ ಶಪಿಸುತ್ತೇವೆ! ನಾವ್ಯಾಕೆ ಹೀಗೆ?

ಸ್ವಲ್ಪ ಎಚ್ಚರಿಕೆ ವಹಿಸಿದರೆ, ಕೆಲವು ಅಪಘಾತಗಳನ್ನು ತಡೆಯಬಹುದು. ಕುಡಿದು, ಗಾಡಿ ಓಡಿಸದಿರುವುದು, ವಿದ್ಯುತ್ ರಿಪೇರಿ ಮಾಡುವಾಗ ಮೈನ್ ಆಫ್ ಮಾಡಲು ಉದಾಸೀನ ಮಾಡದಿರುವುದು ಹೀಗೆ. ಹಾಗೆಯೇ ಎಷ್ಟೋ ಕಾಯಿಲೆಗಳನ್ನು ಕೂಡ ನಮ್ಮ ಜೀವನ ಶೈಲಿಯಲ್ಲಿ ಬದಲಾವಣೆ ಮಾಡಿಕೊಳ್ಳುವ ಮೂಲಕ ತಡೆಗಟ್ಟಬಹುದು. ಶುದ್ದ ಆಹಾರ, ಶುದ್ಧ ನೀರು, ಸ್ವಚ್ಛ ವಾತಾವರಣ, ಕ್ರಮಬದ್ಧ ಜೀವನ, ವಾಕಿಂಗ್ ಇವುಗಳಿಂದ ಹತ್ತು ಹಲವಾರು ಕಾಯಿಲೆಗಳು ದೂರವಾಗುತ್ತವೆ. ಇನ್ನೂ ಹೃದಯ, ಕಿಡ್ನಿ, ಲಿವರ್ ಕಾಯಿಲೆಗಳಿಂದ ನರಳುವವರು, ಸರಿಯಾದ ಔಷಧ ಹಾಗೂ ಪಥ್ಯ ಮಾಡಿದರೆ ಯಾವಾಗ ಸಾವು ಬರುತ್ತದಪ್ಪಾ? ಎಂದು ಕಾಯದ ರೀತಿ, ದೇಹವನ್ನು ಬಾಧಿಸದ ರೀತಿ ನೋಡಿಕೊಳ್ಳಬಹುದು. ಇದ್ಯಾವುದನ್ನೂ ಮಾಡದೇ, ಕೇರ್ ಲೆಸ್ ಮಾಡಿ, ಇನ್ನೆಷ್ಟು ದಿವಸಗಳು ಬದುಕಿರ್ತೇವೆ, ಬದುಕಿರ್ತಾರೆ ಬಿಡಿ, ಎಲ್ಲರೂ ಒಂದಲ್ಲ ಒಂದು ದಿವಸ ಹೋಗುವವರೇ ಎಂದು ಉಡಾಫೆ ಮಾತಾಡಿ, ಕೊನೆಗೊಂದು ದಿವಸ ಸಾವು ಕದ ತಟ್ಟಿದಾಗ, ನಾವು ಕಳುಹಿಸಲಾರೆವು ಎಂದು ಹಟ ಮಾಡುವುದಕ್ಕೆ ಏನೆನ್ನೋಣ?

ಇದೆಲ್ಲವನ್ನೂ ಬರೀತಿದ್ದರೂ, ಮನಸ್ಸಿನ ಮೂಲೆಯಲ್ಲಿ ಒಂದು ಅಳುಕು. ಇಷ್ಟೆಲ್ಲಾ ಮಾತನಾಡುವ ನಾನು, ನನ್ನ ಪ್ರೀತಿ ಪಾತ್ರರ ಅಗಲಿಕೆಯನ್ನು ತಡೆದುಕೊಳ್ಳುವೆನೇ? ಊಹು! ಬಹಳ ಕಷ್ಟ. ಆದರೆ ಒಂದಂತೂ ಸ್ಪಷ್ಟವಾಗಿ ಹೇಳುತ್ತೇನೆ. ಇರುವುದು ಒಂದಷ್ಟು ದಿವಸಗಳು. ಅದನ್ನಿಷ್ಟು ಸಹನೀಯ ಬದುಕಾಗಿಸೋಣ. ಸುಂದರವಾಗಿಸೋಣ, ಈ ಹಟ, ದ್ವೇಷ, ಜಗಳ, ಕಾದಾಟ ಬಿಟ್ಟು ಇದ್ದಾಗಲೇ ಸರಿ ಮಾಡಿಕೊಳ್ಳೋಣ. ಸತ್ತ ಮೇಲೆ ಕೊರಗುವುದನ್ನು ಬಿಡೋಣ. ಯಾರಿಗೆ ಗೊತ್ತು? ಇವತ್ತೋ! ನಾಳೆಯೋ! ಸಾವಿಂದ ಕರೆ ಬರಬಹುದು. ಸ್ವೀಕರಿಸಲು ಮಾನಸಿಕರಾಗಿ ಸಿದ್ಧರಾಗೋಣ, ಅಲ್ವೇ? ಏನಂತೀರಿ

1 comment:

  1. ನೂರಕ್ಕೆ ನೂರು ನಿಜ
    ಮಾಲಾ

    ReplyDelete