Wednesday, August 29, 2012

ನನ್ನ ಮನಸ್ಸು


ಸ್ವಭಾವತಃ ಭಾವುಕವಾಗಿ ಯೋಚಿಸುವ ನನಗೆ ನನ್ನ ಸುತ್ತಮುತ್ತಲಿನವರ ಸ್ವಾರ್ಥ, ತಾವು ಮೇಲೆರಲು ಮತ್ತೊಬ್ಬರನ್ನು ತುಳಿಯುವ ಬಯಕೆ, ಹಣ ಬದುಕಿನಲ್ಲಿ ಏನೇನೆಲ್ಲವನ್ನು ಮಾಡಬಲ್ಲುದು, ರಾಜಕೀಯ, ಆಸೆ, ಅಸೂಯೆ, ಇವೆಲ್ಲವನ್ನೂ ನೋಡಿ ನೋಡಿ ರೋಸಿ ಹೋಗಿದ್ದೆ. ನನ್ನೆಲ್ಲಾ ಅನಿಸಿಕೆಗಳನ್ನು, ಕೊರಗುಗಳನ್ನು ಹಂಚಿಕೊಳ್ಳಲು ಸ್ನೇಹಿತರ್ಯಾರು ಇರಲಿಲ್ಲ. ಈ ರೀತಿಯ ಬದುಕಿನ ಏಕತಾನತೆಯಿಂದ ಬೇಸತ್ತ ನಾನು ಈ ಇಂಟರ್ ನೆಟ್ ಸಂಪರ್ಕಕ್ಕೆ ಬಂದಿದ್ದು ಆಕಸ್ಮಿಕ. ಸಂಬಂಧಿಕರೊಬ್ಬರು ತಾನು ಯಾವಾಗಲೂ ಸಂಪದ ಎಂಬ ಬ್ಲಾಗ್ ನಲ್ಲಿ (ಫೇಸ್ ಬುಕ್ ನ ಕನ್ನಡ ಮಾದರಿ) ಬರೆಯುವುದಾಗಿಯೂ ಹೇಳಿದಾಗ ಕುತೂಹಲಕ್ಕೆಂದು ನೋಡಿದ್ದು ನಾನು. ಆ ಸಮಯದಲ್ಲಿ ಮಂಗಳೂರಿನಲ್ಲಿ ಪ್ರಮೋದ್ ಮುತಾಲಿಕ್ ರ ಸ್ವಘೋಷಿತ ಸಂಸ್ಕೃತಿಯ ರಕ್ಷಣಾ ದಾಳಿಯಾಗಿತ್ತು. ಸಂಪದದಲ್ಲಿ ಯಾರೋ ಪುರುಷ ಮಹಾಶಯನೊಬ್ಬ ಮಂಗಳೂರು ಪಬ್ ದಾಳಿಯನ್ನು ಸಮರ್ಥಿಸುತ್ತಾ, ನಮ್ಮ ಸಂಸ್ಕೃತಿ, ನಮ್ಮ ಸಂಸ್ಕೃತಿ ಎಂದು ಬೊಬ್ಬೆ ಹೊಡೆಯುತ್ತಾ, ಹೆಣ್ಣು ಮಕ್ಕಳನ್ನು ಅತ್ಯಂತ ಕೀಳಾಗಿ, ಅಶ್ಲೀಲ ಮಾತುಗಳಿಂದ ತೆಗಳುವಾಗ, ರೊಚ್ಚಿಗೆದ್ದು ಅದಕ್ಕೆ ಕಮೆಂಟಿಸಿದ್ದು ನಾನು! ಸಂಪದದಲ್ಲಿ ಅದುವರೆವಿಗೂ ಮಹಿಳೆಯರು ಯಾರೂ ಅಷ್ಟೊಂದು ಸಕ್ರಿಯವಾಗಿ ಭಾಗವಹಿಸುತ್ತಿರಲಿಲ್ಲ. ಅದರಲ್ಲೂ ಈ ರೀತಿಯ ಅಶ್ಲೀಲ ಬೈಗುಳಗಳನ್ನು ಎದುರಿಸುವವರಂತೂ ಇರಲೇ ಇಲ್ಲ. ಹಾಗಾಗಿ ನನ್ನ ಆ ಒಂದು ಕಮೆಂಟ್ ಹಾಗೂ ನನ್ನ ‘ಇಂಚರ’ ಎಂಬ ಹೆಸರು?! ಬಹುಶಃ ಇತರ ಸಂಪದಿಗರನ್ನು ಆಕರ್ಷಿಸಿತು. ನಾವೆಲ್ಲರೂ ಒಟ್ಟಾಗಿ ಆ ಮನುಷ್ಯನನ್ನು ಸಂಪದದಿಂದ ಹೊರಗೆ ಹಾಕಿದ್ದೆವು. ನಾನು ಸಂಪದಕ್ಕೆ ಬಂದದ್ದು ಹೀಗೆ. ಆಗ ನನಗೆ ಈ ಸೋಷಿಯಲ್ ನೆಟ್ ವರ್ಕಿಂಗ್ ಬಗ್ಗೆ ಆಗಲೀ ಅಂಥವಾ ಬ್ಲಾಗ್ ಗಳ ಬಗ್ಗೆಯಾಗಲೀ ಸ್ವಲ್ಪವೂ ತಿಳಿದಿರಲಿಲ್ಲ. ಫೇಸ್ ಬುಕ್, ಗೂಗಲ್ ಪ್ಲಸ್ ಇವ್ಯಾವುದೂ ಕೂಡ ಇರಲಿಲ್ಲ. ನನ್ನ ಬರವಣಿಗೆಯಂತೂ ಸೊನ್ನೆ. ಚಿಕ್ಕಂದಿನಿಂದಲೂ ಪುಸ್ತಕಗಳನ್ನು ಓದುವ ಗೀಳಿತ್ತು ಬಿಟ್ಟರೆ, ಯಾವುದೇ ಕವನಗಳಾಗಲೀ ಅಥವಾ ಸಣ್ಣ ಪುಟ್ಟ ಕಥೆಗಳನ್ನಾಗಲೀ ನಾನು ಬರೆದಿರಲಿಲ್ಲ. ಬರೆಯುವ ಪ್ರಯತ್ನ ಕೂಡ ಮಾಡಿರಲಿಲ್ಲ. ಇನ್ನಿತರ ಸಂಪದಿಗರ ಲೇಖನಗಳಿಗೆ ಪ್ರತಿಕ್ರಿಯಿಸುತ್ತಾ ನಾನು ಕೂಡ ಚುಟುಕು ಚುಟುಕಾಗಿ ಬರೆಯಲು ಶುರು ಮಾಡಿದೆ. ಅದಕ್ಕೆ ಸಿಗುತ್ತಿದ್ದ ಖುಷಿ ಖುಷಿಯ ಪ್ರತಿಕ್ರಿಯೆಗಳು ನನಗೆ ಆಸ್ಕರ್ ಅವಾರ್ಡ್ ನಂತೆ ಭಾಸವಾಗುತ್ತಿತ್ತು. ಸ್ಪೂರ್ತಿಯಿಂದ ಇನ್ನಷ್ಟು ಬರಹಗಳನ್ನು, ಅದಕ್ಕೆ ಲೇವಡಿ ಮಾಡುವವರಿಗೆ ಚುರುಕಾಗಿ, ಪ್ರೀತಿ ತೋರಿಸುವವರಿಗೆ ಇನ್ನಷ್ಟು ಪ್ರೀತಿ, ಪ್ರಶ್ನಿಸುವವರಿಗೆ ತಮಾಷೆಯ ಉತ್ತರಗಳು... ಓಹ್! ನಾನು ನಾನಾಗೇ ಇರಲಿಲ್ಲ. ನನ್ನ ಲೋಕ ಬೇರೆಯಾಗಿತ್ತು. ಖುಷಿ, ಖುಷಿ, ಖುಷಿ ಇಷ್ಟೇ ನನ್ನ ದಿನಚರಿ. ಹೊಗಳಿಕೆಗೆ ಮಣಿಯದವರಾರು? ಹೀಗಾಗಿ ಸಂಪದದಲ್ಲಿ ಬರೆಯುವುದೇ (ಬಹಳಷ್ಟು ಪ್ರತಿಕ್ರಿಯೆಗಳು ಬರುವುದರಿಂದ) ನನಗೆ ಖುಷಿ ಎನಿಸಿಬಿಟ್ಟಿತು. ಜೊತೆಗೆ ಹುಟ್ಟು ಸೋಮಾರಿಯಾದ ನಾನು ನನ್ನದೇ ಆದ ಹೊಸದೊಂದು ಬ್ಲಾಗ್ ತೆರೆಯಲು ಮನಸ್ಸು ಮಾಡಲಿಲ್ಲ. 

ಈ ಬರಹಗಳು, ಮತ್ತೊಬ್ಬರ ಬರಹಗಳಿಗೆ ನನ್ನ ಪ್ರತಿಕ್ರಿಯೆಗಳು, ಹೀಗೆ ಸಮಾನಮನಸ್ಕರೊಂದಿಷ್ಟು ಜನ ಆತ್ಮೀಯರಾದರು. ಮನೆಯವರಂತೆಯೇ ಭಾಸವಾಗಿಬಿಟ್ಟರು. ಯಾವುದೇ ರೀತಿಯ ಕನಸುಗಳಿಲ್ಲದೆ, ಗುರಿಯಿಲ್ಲದೆ ಹಾಯಾಗಿದ್ದ ನನಗೆ, ಗೆಳೆಯರ ಕನಸುಗಳನ್ನು ಕೇಳಿದಾಗ ಅರೆ! ನನಗೆ ಈ ರೀತಿಯ ಯಾವುದೇ ಗುರಿ ಇಲ್ಲದಿರುವುದಕ್ಕೆ ಬೇಸರ ಶುರುವಾಗಿದೆಯೇ? ಎಂಬ ಪ್ರಶ್ನೆ, ಯಾವುದಾದರೊಂದು ಚಟುವಟಿಕೆಯಲ್ಲಿ ತೊಡಗಬೇಕೆನ್ನುವ ಆಶಯ, ಯಾವ ಕಲಾತ್ಮಕ ಚಟುವಟಿಕೆ ಶುರು ಮಾಡಲಿ? ಎಂಬ ಚಿಂತೆ, ಎಲ್ಲವೂ ಒಟ್ಟೊಟ್ಟಿಗೆ ದಾಳಿ ಮಾಡತೊಡಗಿದವು. ಸಮಾನಮನಸ್ಕರೆಲ್ಲರೂ ಸೇರಿ ಒಟ್ಟಿಗೆ ಯಾವುದಾದರೊಂದು ಪ್ರಾಜೆಕ್ಟ್ ಶುರು ಮಾಡೋಣವೆಂದು ಪ್ರಾರಂಭಿಸಿ, ನಂತರ ಟೀಮ್ ವರ್ಕ್ ನಲ್ಲಿ ಎಲ್ಲರೂ ಸೋತು, ಪ್ರಾಜೆಕ್ಟ್ ಕೂಡ ಮೂಲೆ ಸೇರಿತು. ಮನೆಯವರಂತೆಯೇ ಕಂಡಿದ್ದ ಸ್ನೇಹಿತರಲ್ಲೂ ಸ್ವಾರ್ಥ ಕಂಡಾಗ, ಅವರೆಲ್ಲರೂ ನನ್ನನ್ನು ಭಾವುಕಳೆಂದು, ಯಾವುದೇ ಕೆಲಸಕ್ಕೆ ಪ್ರಯೋಜನವಿಲ್ಲವೆಂದು ಹೀಯಾಳಿಸಿದಾಗ, ಮತ್ತೊಬ್ಬ ಆತ್ಮೀಯ ಸ್ನೇಹಿತ ಈ ಪ್ರಾಜೆಕ್ಟ್ ನಿಂದಾಗಿ ಕಾರಣವೇ ಕೊಡದೇ ದೂರ ಹೋದಾಗ, ಅರಳಿದ್ದ ಮನ ಮತ್ತೆಂದಿಗೂ ಅರಳಲಾರೆನೆಂಬಂತೆ ಮುದುಡಿತು. ಮತ್ತೆ ಏಕಾಂಗಿಯಾದೆ. ಈ ಎಲ್ಲಾ ಬ್ಲಾಗ್ ಪ್ರಪಂಚಗಳಿಂದ ದೂರವಾದೆ. ಒಂದಷ್ಟು ದಿನಗಳು ಅತ್ತೆ, ಕೊರಗಿದೆ, ಸೊರಗಿದೆ, ನಾನು ಕೂಡ ಪ್ರೊಫೆಷನಲ್ ಎಂದು ತೋರಿಸಿಕೊಳ್ಳಲು ಪರಿಚಯದವರೊಬ್ಬರ ಸಹಾಯದಿಂದ ಕಿರು ಚಿತ್ರವೊಂದನ್ನು ಶುರು ಮಾಡಿದೆ. ಅದು ಕೂಡ ಅವರ ಮನಸ್ಸಿಲ್ಲದ ಮನಸ್ಸಿನಿಂದಾಗಿಯೋ ಅಥವಾ ನಿಜವಾಗಿಯೂ ಚಿತ್ರ ಚೆಂದ ಬಂದಿಲ್ಲವೋ? ನಾನಂತೂ ಈ ವಿಷಯದಲ್ಲಿ ತೀರಾ ಅನನುಭವಿ, ಆ ಕಿರುಚಿತ್ರ ಎಡಿಟಿಂಗ್ ಹಂತದಲ್ಲಿಯೇ ನಿಂತು ಹೋಯಿತು. ಸ್ನೇಹಿತರನೇಕರು ನಿನ್ನ ಭಾವುಕತೆಯೇ ನಿನ್ನ ದೌರ್ಬಲ್ಯವೆಂದು, ನೀನೇನನ್ನು ಸಾಧಿಸಲಾರೆಯೆಂದು ಹೀಯಾಳಿಸಿದಾಗ ಮೇಲೇರಲಾರೆಯೆಂಬಂತೆ ತೀರಾ ಒಳಕ್ಕಿಳಿದುಬಿಟ್ಟೆ. ನಾನು ಯಾವುದಕ್ಕೂ ಪ್ರಯೋಜನವಿಲ್ಲವೆಂದು, ನನ್ನ ಬದುಕಿಗೆ ಅರ್ಥವಿಲ್ಲದಂತಾಗಿದೆಯೆಂದು ಕೊರಗು ಶುರುವಾಯಿತು. ನಾನು ಯಾವಾಗಲೂ ಹೀಗೆ, ತೀರಾ ನನ್ನೊಳಗೆ ನಾನಿಳಿದುಬಿಟ್ಟಾಗ, ನನ್ನನ್ನು ನಾನೇ ವಿಶ್ಲೇಷಿಸಿಕೊಂಡು, ನನ್ನ ಒಪ್ಪುತಪ್ಪುಗಳೆಲ್ಲವನ್ನೂ ನಾನೇ ನನ್ನೊಳಗೆ ಸರಿ ಮಾಡಿಕೊಂಡು ಮತ್ತೆ ಉತ್ಸಾಹದಿಂದ ಮತ್ತೊಂದು ಬದುಕಿಗೆ ಸಜ್ಜಾಗಿಬಿಡುತ್ತೇನೆ. ಈ ಸಲವೂ ಹೀಗೆ, ಶುರುವಾಯಿತು ಕಮಾಡಿಟಿ ಟ್ರೇಡಿಂಗ್ (ಇದನ್ನು ಮತ್ತೊಮ್ಮೆ ಬರೆಯುತ್ತೇನೆ) ಹಾಗೂ ಅದರಲ್ಲಿನ ಏಕತಾನತೆಯಿಂದ ಹೊರಬರಲು (ದಿನವಿಡೀ ಆನ್ಲೈನ್ ಇರಬೇಕಾದ ಕಾರಣ) ಫೇಸ್ ಬುಕ್ ಪಯಣ. ಹಾ! ಮರೆತೆ! ವೈದೇಹಿಯವರ ಅಲೆಗಳಲ್ಲಿ ಅಂತರಂಗ ಕೂಡ ಮತ್ತೆ ನಾನು ಎದ್ದು ನಿಲ್ಲಲು ಸಹಕಾರ ಕೊಟ್ಟಿತು. 

ಫೇಸ್ ಬುಕ್ ನಲ್ಲಿ ಗೆಳತಿಯೊಬ್ಬಳು ಪರಿಚಯಿಸಿದ ಅಂತಃಪುರದ ಗುಂಪು. ಈಗಾಗಲೇ ಇಂತಹದೊಂದು ಗುಂಪಿನಿಂದ ನೊಂದಿದ್ದ ನನಗೆ, ಮತ್ತೆ ಇದ್ಯಾವುದೂ ಬೇಡವಾಗಿತ್ತು. ಆದರೂ ಈ ಮನಸ್ಸು ಬಿಡಬೇಕಲ್ಲಾ?! ಅವರೆಲ್ಲರು ಭೇಟಿಯಾಗಲು ನಿರ್ಧರಿಸಿದಾಗ, ನೀನು ಕೂಡ ಹೋಗು ಎಂದು ಪ್ರೇರೇಪಿಸಿತು. ಭೇಟಿಯಾದಾಗ ಒಂದಿಷ್ಟು ಅಳುಕು, ಅಸಡ್ಡೆ, ಸಂಕೋಚ ಎಲ್ಲವೂ ಇದ್ದರೂ, ಪರಿಚಯಿಸಿಕೊಂಡಾಗ ಎಲ್ಲರೂ ತೋರಿದ ಆತ್ಮೀಯತೆ, ನಾನು ಕಳೆದುಕೊಂಡಿದ್ದನ್ನು ಮತ್ತೆ ಪಡೆದೆ ಎಂಬಂತೆ ಭಾಸವಾಯಿತು. ಅಂದಿನಿಂದ ತುಸು ಹೆಚ್ಚೇ ಅಂತಃಪುರಕ್ಕೆ ಭೇಟಿ ನೀಡತೊಡಗಿದೆ. ಇದರಿಂದ ಅವರೆಲ್ಲರ ಬ್ಲಾಗ್ಸ್, ವಿಚಾರಧಾರೆಗಳನ್ನು ಓದುವ ಅವಕಾಶವಾಯಿತು. ಓದಿದಾಗ ಹಲವು ಬಾರಿ ಅರೆ! ಇದು ನನ್ನನಿಸಿಕೆಯೂ ಹೌದು, ನಾನು ಕೂಡ ಹೀಗೆ ಬರೆಯಬೇಕೆಂದುಕೊಂಡಿದ್ದೆ, ಇವೆಲ್ಲವೂ ನನ್ನನ್ನು ಕೂಡ ಅವರಿಗೆ ಕಾಡಿದಷ್ಟೇ ಕಾಡಿದ್ದವು, ನನ್ನ ಭಾವುಕತೆ ನನ್ನ ದೌರ್ಬಲ್ಯವಲ್ಲ, ಬರಹಗಾರ್ತಿಯೊಬ್ಬಳಿಗೆ ಇರಬೇಕಾದ ಅಂಶ ಇದೊಂದು ಎಂಬುದು ಮನದಟ್ಟಾಯಿತು. ಮುಖ್ಯವಾಗಿ ಉಷಾ ಕಟ್ಟೆಮನೆಯವರ ಮೌನ ಕಣಿವೆಯಂತೂ ಹಗಲು ರಾತ್ರಿ ನನ್ನನ್ನು ಕಾಡತೊಡಗಿತು. ಭಾವುಕತೆಯಿದ್ದರೆ ಮಾತ್ರ ಯಾವ ವಿಷಯವನ್ನಾಗಲೀ ವಿಶ್ಲೇಷಿಸಿ ಬರೆಯಲು ಸಾಧ್ಯ ಎಂದೆನಿಸತೊಡಗಿತು. ಇಲ್ಲದಿದ್ದರೆ ನಮ್ಮ ಬರಹ ತೀರಾ ಸಪ್ಪೆಯಾಗಿ, ಯಾಂತ್ರಿಕವಾಗಿಬಿದುತ್ತದೆಯೆಂದು ಅನಿಸತೊಡಗಿತು. ಮನಸ್ಸಿನಿಂದ ಯೋಚಿಸಿ ಬರೆಯುವಾಗ ಅದು ಬಹಳಷ್ಟು ಜನರನ್ನು ತಲುಪುತ್ತದೆಯೆಂದು ತೋರಿತು. ಇದೆಲ್ಲಕ್ಕೆ ಕಲಶಪ್ರಾಯವೆಂಬಂತೆ ಅಗ್ನಿ ಶ್ರೀಧರ್ ಅವರ ಪುಸ್ತಕ ಆಧುನಿಕ ಮಾಂತ್ರಿಕರ ಜಾಡಿನಲ್ಲಿ ತೀರಾ ನನ್ನನ್ನು ಕಾಡಿತು. ಅದರಲ್ಲಿನ ವಿಚಾರಧಾರೆಗಳೆಲ್ಲವೂ ನನ್ನ ತಲೆಯಲ್ಲಿ ಹಲವು ಬಾರಿ ಬಂದಿದ್ದರೂ ಕೂಡ, ಅದನ್ನು ಪ್ರಕಟಿಸಿದರೆ ಎಲ್ಲಿ ಹಾಸ್ಯಸ್ಪದವಾಗುವುದೋ ಎಂದು ಮುಚ್ಚಿಟ್ಟಿದ್ದೆ. ಹಾ! ನನ್ನಂತೆಯೇ ಯೋಚಿಸುವವರು ಹಲವರಿದ್ದಾರೆ. ನನ್ನ ಭಾವುಕತೆ ಕ್ಷುಲ್ಲಕವೇನಲ್ಲ ಎಂದೆನಿಸಿ ಮನಸ್ಸಿಗೆ ಉಲ್ಲಾಸ ಮೂಡಿತು. ಆತ್ಮವಿಶ್ವಾಸ ಮೈದೋರಿತು. ನನ್ನದೇ ಒಂದು ಬ್ಲಾಗ್ ಶುರು ಮಾಡಿದೆ. ಅಲ್ಲಿ ಇಲ್ಲಿ ಬರೆದಿದ್ದ ಬರಹಗಳೆಲ್ಲವನ್ನೂ ಒಂದೇ ದಿವಸ ತಂದು ಇದರಲ್ಲಿ ಹಾಕಿದೆ. ಅದರಲ್ಲಿ ನನ್ನ ಮನ ಕಲಕಿದ / ಯೋಚಿಸಲು ಪ್ರೇರೇಪಿಸಿದ ಒಂದಷ್ಟು (ಈಗ ಬರಹದ ಶೈಲಿ ತೀರಾ ಕೆಟ್ಟದಾಗಿದೆ ಎಂದೆನಿಸಿದರೂ, ಹೆತ್ತವರಿಗೆ ಹೆಗ್ಗಣ ಮುದ್ದು! :-) ) ಬರಹಗಳನ್ನು ಅಂತಃಪುರದಲ್ಲಿ ಎಲ್ಲಾ ಸಖಿಯರ ಅವಗಾಹನೆಗಿಟ್ಟೆ. 

ಅಂತಃಪುರದ ಸಖಿ ಹಾಗೂ ವಿ.ಕ.ದಲ್ಲಿರುವ ಶ್ರೀದೇವಿ ಕಳಸದ ಅವರು ನನ್ನ ಬ್ಲಾಗ್ ಅನ್ನು ಬ್ಲಾಗಿಲರು ಕಾಲಮಿನಲ್ಲಿ ಪ್ರಕಟಿಸುವರೆಂಬುದನ್ನು ಕನಸು ಮನಸಿನಲ್ಲಿಯೂ ಎಣಿಸಿರಲಿಲ್ಲ. ಹಿಂದಿನ ದಿನ ಸರಿ ರಾತ್ರಿಯ ತನಕ ಅಂತಃಪುರದಲ್ಲಿ ಒಬ್ಬರನ್ನೊಬ್ಬರು ಕೀಟಲೆ ಮಾಡುತ್ತಾ ಇರುವಾಗಲೂ ಆಕೆ ಒಂದಿಷ್ಟು ಹಿಂಟ್ ಕೂಡ ಕೊಟ್ಟಿರಲಿಲ್ಲ. ಇಂತಹದೊಂದು ಸರ್ಪೈಸ್ ಗಾಗಿ ಕಾಯುವ ನನಗೆ, ನನ್ನ ಜೀವನದಲ್ಲಿ ಯಾರೂ ಕೂಡ ಇಂತಹ ಸುಂದರ ಸರ್ಪೈಸ್ ಕೊಟ್ಟಿರಲಿಲ್ಲ. ನಿಜಕ್ಕೂ ನನಗಿದೊಂದು ದೊಡ್ಡ ಉಡುಗೊರೆ. ಇದರೊಂದಿಗೆ ನನ್ನಲ್ಲೂ ಕೂಡ ಬರಹಗಾರ್ತಿ ಇದ್ದಾಳೇನೋ ಎನ್ನುವ ಕೌತುಕ, ಇದೆಲ್ಲದರ ಜೊತೆಗೆ ಪತ್ರಿಕೆಯಲ್ಲಿ ನನ್ನದೊಂದು ಬರಹ ಬಂದ ಮೇಲೆ ಇನ್ನಷ್ಟು ಬರೆಯಲು ಉತ್ಸಾಹ, ಆದರೆ ಅಷ್ಟು ಸುಲಭವೇನಲ್ಲ ಎನ್ನುವ ಮನಸ್ಸಿನ ಎಚ್ಚರಿಕೆ, ಹೆಚ್ಚಿದ ಜವಾಬ್ದಾರಿ ಎಲ್ಲವೂ ಸೇರಿ ಕಲಸುಮೆಲೋಗರವಾಗಿ ಇದೆಲ್ಲವನ್ನೂ ಬರೆದುಬಿಟ್ಟರೆ ನನ್ನ ತಳಮಳ ಕಡಿಮೆಯಾಗಬಹುದು ಎಂದು ಎಲ್ಲವನ್ನೂ ದಾಖಲಿಸಿದ್ದೇನೆ :-) ಒಂದೊಂದಾಗಿ ನನ್ನ ಅನುಭವಗಳೆಲ್ಲವನ್ನೂ, ಪ್ರಚಲಿತ ವಿದ್ಯಮಾನಗಳ ಬಗೆಗಿನ ನನ್ನ ಅನಿಸಿಕೆಗಳನ್ನು ಬರೆಯಬೇಕೆಂದು ಕೂಡ ನಿರ್ಧರಿಸಿದ್ದೇನೆ. ತೀರಾ ಆಲಸಿಯಾದ ನಾನು ಏನೆಲ್ಲವನ್ನೂ ಬರೆಯಬಲ್ಲೆನೋ? ಅಥವಾ ನಿಲ್ಲಿಸಿಯೇಬಿಡುತ್ತೇನೆಯೋ ಗೊತ್ತಿಲ್ಲ. ಸದ್ಯಕ್ಕಂತೂ ಪತ್ರಿಕೆಯಲ್ಲಿ ನನ್ನ ಬ್ಲಾಗ್ ಬಗ್ಗೆ ಬಂದಿದೆ ಎನ್ನುವ ಹೆಮ್ಮೆ, ಹುಮ್ಮಸ್ಸಿದೆ. ಎಷ್ಟು ದಿವಸಗಳು ಹೀಗೆ? ನೋಡೋಣ.

1 comment:

  1. Wow oodi nijakku nimbagge hemme yenisitu...bekku swalpa somaritana bitre innastu oolle barahagalannu unabadisodantoo gurantee....

    ReplyDelete