Monday, August 27, 2012

ಲೈಫು ಇಷ್ಟೇನೇ

ಗಾಂಧಿನಗರದಲ್ಲಿ ತಯಾರಾಗುವ ಪ್ರತಿ ಚಲನಚಿತ್ರಗಳು ಇಂತಿಂತಹ ಗುಂಪಿಗೆ ಎಂದು ತಯಾರಾಗುತ್ತವೆ. ಉದಾಹರಣೆಗೆ ಮಚ್ಚು, ಲಾಂಗ್, ಫೈಟ್, ಇಂತಹವು ಒಂದು ವರ್ಗದ ವೀಕ್ಷಕರಿಗಾದರೆ, ಕಣ್ಣೀರು, ತಾಯಿ ಸೆಂಟಿಮೆಂಟ್ಸ್ ಮತ್ತೊಂದು ವರ್ಗದವರಿಗೆ, ದೇವಿ ಮಹಾತ್ಮೆ ಇಂತಹ ಭಕ್ತಿ ಪ್ರಧಾನ ಚಿತ್ರಗಳು ಇನ್ನೊಂದು ವರ್ಗದ ವೀಕ್ಷಕರಿಗೆ, ಹೀಗೆ. ಯೋಗರಾಜ್ ಭಟ್ ತಮ್ಮ ‘ಪಂಚರಂಗಿ’ ನಿರ್ಮಾಣದ ವೇಳೆಗೆ ನೀಡಿದ ಸಂದರ್ಶನವೊಂದರಲ್ಲಿ ಹೇಳಿದ್ದರು, ನಮ್ಮ ಕನ್ನಡ ಚಲನಚಿತ್ರಗಳು ಉಳಿಯಬೇಕಾದರೆ ಅಥವಾ ಥಿಯೇಟರು ಗಳಲ್ಲಿ ಹಣ ಮಾಡಬೇಕೆಂದಿದ್ದರೆ ಆ ಚಿತ್ರವು ಯುವ ಜನಾಂಗವನ್ನು ಅಂದರೆ ೧೮ ವಯಸ್ಸಿನಿಂದ ೨೩ ವರ್ಷದವರನ್ನು ಸೆಳೆಯುವಂತಿರಬೇಕು. ಆ ವರ್ಗದವರಿಗೆ ಸಿನೆಮಾ ಹಿಡಿಸಿದರೆ ಚಿತ್ರವು ಹಿಟ್ ಆಗುವುದು ಎಂದಿದ್ದರು. ಅವರ ಶಿಷ್ಯ ಪವನ್ ಕುಮಾರ್ ಅಕ್ಷರಷಃ ಭಟ್ಟರ ಈ ಮಾತಿಗೆ ಮಾರು ಹೋಗಿ ನಿರ್ದೇಶಿಸಿರುವ ಸಿನೆಮಾ ‘ಲೈಫು ಇಷ್ಟೇನೇ’.

ನಾಯಕ, ಆತನಿಗೆ ಹಲವು ಹುಡುಗಿಯರೊಂದಿಗೆ ಉಂಟಾಗುವ ಮೊದಲ ಪ್ರೀತಿ! ಪ್ರೈಮರಿ ಸ್ಕೂಲಿನಿಂದ ಹಿಡಿದು ಕಾಲೇಜಿನ ತನಕವೂ ಆತನ ಸನಿಹಕ್ಕೆ ಬರುವ ಪ್ರತಿಯೊಬ್ಬ ಹುಡುಗಿಯೊಂದಿಗೂ ಆತನಿಗೆ ಮೊದಲ ಬಾರಿಗೆ ಹಿಂದೆಂದೂ ಆಗದಿದ್ದಂತಹ, ಕಾಣದಿದ್ದಂತಹ ಪ್ರೀತಿ ಉಂಟಾಗುತ್ತದೆ. ಆದರೆ ಯಾವುದೂ ಕೂಡ ಸಫಲವಾಗುವುದಿಲ್ಲ. ನಾಯಕನ ಅಪ್ಪ, ಅಮ್ಮ ತಮ್ಮ, ತಮ್ಮ ಮೊದಲ ಪ್ರೀತಿಯಲ್ಲಿ ಸೋತರೂ, ಮದುವೆಯಾದ ಮೇಲೆ ಒಬ್ಬರನ್ನೊಬ್ಬರನ್ನು ಪ್ರೀತಿಸುತ್ತಿರುವವರು. ಈಗಿನ ಕಾಲದ ಮಕ್ಕಳನ್ನು ಹೇಗೆ ಬೆಳೆಸಬೇಕೆಂಬ ಅರಿವಿರುವವರು. ನಾಯಕನ ಮನೆಯಲ್ಲಿ ಎಂತಹ ಮುಕ್ತತೆಯ ವಾತಾವರಣವೆಂದರೆ ಅಪ್ಪ, ಪ್ರೈಮರಿ ಸ್ಕೂಲ್ ವಯಸ್ಸಿನ ಮಗನೊಂದಿಗೆ ಕುಳಿತು ವಯಸ್ಕರ ಸಿನೆಮಾ ನೋಡುವುದು, ತಾಯಿ ವ್ಯಾಲೆಂಟೇನ್ಸ್ ಡೇ ಗೆಂದು ಮಗನಿಗೆ ಹಣ ಕೊಡುವುದು, ಪ್ರೀತಿಸಿ ಕೈಕೊಟ್ಟ ಗೆಳತಿಯ ನೆನಪುಗಳನ್ನು ಅಪ್ಪ, ಅಮ್ಮನ ಮುಂದೆಯೇ ಮಗ ಸುಟ್ಟು ಹಾಕುವುದು, ಮಗ ಅಪ್ಪನಿಗೆ ಕಾಂಡೋಮ್ ತೆಗೆದುಕೊಂಡಿದ್ದೇನೆ, ರಾತ್ರಿ ಮನೆಗೆ ಬರೊಲ್ಲವೆನ್ನುವುದು…. ಮಕ್ಕಳಿಗೆ ತಪ್ಪು ಮಾಡಲು ಬಿಡಬೇಕು, ಆಗಲೇ ಅವರು ಬುದ್ಧಿ ಕಲಿಯಲು ಸಾಧ್ಯ ಎನ್ನುವ ಅಮ್ಮ, ಅಡುಗೆ ಮನೆಯಲ್ಲಿಯೇ ಸಿಗರೇಟ್ ಸೇದುವ ಅಪ್ಪ. ಇದು ಅವರ ಸಂಸಾರ, ಸಂಸ್ಕಾರ.

ಕಾಲೇಜಿನಲ್ಲಿ ನಿಜವಾಗಲೂ ಮೊದಲ ಬಾರಿಗೆ! ಪ್ರೀತಿಸುವ ನಾಯಕ, ಆದರೆ ಆ ಗೆಳತಿಯ ಅಪ್ಪ ಬಹಳ ಶಿಸ್ತುಗಾರ. ಆತನ ಭಯಕ್ಕೆ ತನ್ನ ಪ್ರೀತಿಯೊಂದಿಗೆ ರಾಜಿ ಮಾಡಿಕೊಂಡು, ಅಪ್ಪ ಹುಡುಕಿದ ಶ್ರೀಮಂತ ಹುಡುಗನನ್ನು ಮದುವೆಯಾಗುವ ಆ ಹುಡುಗಿ, ಆಕೆಯ ನೆನಪಿನಲ್ಲಿ ಜೂನಿಯರ್ ದೇವದಾಸ್ ಆಗುವ ನಾಯಕ, ಆತನನ್ನು ಆಕೆಯ ನೆನಪಿನಿಂದ ಹೊರಗೆ ಬರಲು ಪ್ರಯತ್ನಿಸುವ ಮತ್ತೊಬ್ಬ ಹುಡುಗಿಯೊಂದಿಗೆ ನಮ್ಮ ಈ ನಾಯಕನಿಗೆ ಉಂಟಾಗುವ ಮತ್ತೊಂದು ಮೊದಲ ಪ್ರೀತಿ! ಆ ಹುಡುಗಿ ಅತ್ಯಂತ ಜೀವಂತಿಕೆ ತುಂಬಿಕೊಂಡಂಥವಳು. ಸರಳ, ಸುಂದರ ಜೀವನ ನಡೆಸಬೇಕೆನ್ನುವಂತಹವಳು. ದಾರಿಬದಿಯಲ್ಲಿ ಸಿಗುವ ತಿಂಡಿ ತಿನ್ನುತ್ತಾ, ರಸ್ತೆಯ ಮೇಲೆ ಮಲಗಿ ನಕ್ಷತ್ರ ಎಣಿಸುವಂತಹಳು. ನಾಯಕನಿಗೆ ಮೋಸ ಮಾಡಿದ ಹುಡುಗಿಯ ವಿರುದ್ದ ಸ್ವಭಾವದವಳು. ಈಕೆಗೆ ನಾಯಕನ ಮೇಲೆ ನಿಜವಾಗಲೂ ಮೊದಲಬಾರಿಗೆ ಪ್ರೀತಿ ಉಂಟಾಗುತ್ತದೆ.

ಈತನಿಗಿಬ್ಬರೂ ಗೆಳೆಯರು, ಒಬ್ಬ ಮಂತ್ರಿಯ ಮಗ ಶ್ರೀಮಂತ (ಆತನ ಕಥೆ ಮುಂದುವರೆಯುವುದಿಲ್ಲ). ಮತ್ತೊಬ್ಬ ಹಳ್ಳಿಯಿಂದ ತಾತನ ಕೊನೆಯಾಸೆ ನೆರವೇರಿಸಲು ನಗರದಲ್ಲಿ ಓದಲು ಬಂದಿರುವಾತ. ಈ ಗೆಳೆಯನ ತಂದೆ, ತಾಯಿ ಬಡವರು. ಈತನ ಕನಸುಗಳಲ್ಲಿ ಬಣ್ಣವಿಲ್ಲ. ಅಪ್ಪ, ಅಮ್ಮನಿಗೆ ಕಷ್ಟವಾಗಬಾರದು, ಬೇಗ ಓದು ಮುಗಿಸಿ, ಕೆಲಸ ಹುಡುಕಿ, ತನ್ನನ್ನು ತಾನು ಅರಿತು, ನಂತರ ಪ್ರೀತಿ, ಪ್ರೇಮ ಎನ್ನುವ ಪ್ರಾಕ್ಟಿಕಲ್ ಹುಡುಗ. ಹುಡುಗಿಯರೊಂದಿಗೆ ಚೆಲ್ಲಾಟವಾಡುತ್ತಾ, ಅಪ್ಪ, ಅಮ್ಮ ನೋಡಿಕೊಳ್ತಾರೆ ಎಂಬ ಉದಾಸೀ ಮನೋಭಾವದ ನಾಯಕನ ತದ್ವಿರುದ್ದ ಸ್ವಭಾವ ಆತನ ಗೆಳೆಯನದು. ನಿನ್ನ ಹೃದಯ ಪಬ್ಲಿಕ್ ಶೌಚಾಲಯದಂತೆ, ಕ್ಲೀನ್ ಮಾಡಿಕೋ ಎಂದು ನಾಯಕನಿಗೆ ಬುದ್ಧಿ ಹೇಳುವ ಈತನಿಗೇನಾಯಿತು? ನಾಯಕ ಎಂತಹ ನಿರ್ಧಾರ ಕೈಗೊಂಡ? ಎರಡನೆಯ ನಾಯಕಿಯ ಮೊದಲ ಪ್ರೀತಿ ಯಶಸ್ಸು ಕಂಡಿತೇ? ಇದು ಚಿತ್ರದ ಕ್ಲೈಮಾಕ್ಸ್.
ಸಂಪೂರ್ಣವಾಗಿ ಹುಡುಗರ ಮೇಲೆ ಕೇಂದ್ರೀಕೃತವಾದ ಚಿತ್ರವಿದು. ಹುಡುಗಿಯರ ಭಾವನೆಗಳಿಗೆ ಅಷ್ಟಾಗಿ ಮಹತ್ವ ನೀಡಿಲ್ಲ. ಹಾಗಾಗಿಯೇ ಬಹುಶಃ ಪಾತ್ರ ವಹಿಸಿದವರಲ್ಲಿ ಕೂಡಾ ಏನೋ ಕೊರತೆಯಿದ್ದಂತೆ ಭಾಸವಾಗುವುದು. ಪ್ರೀತಿ, ಪ್ರೇಮ, ಕೊನೆಗೆ ಮುಂಗಾರು ಮಳೆಯ ಹಾಡಾದ ‘ಇವನು ಇನಿಯನಲ್ಲ’ ವನ್ನು ಕೂಡ ಲೇವಡಿ ಮಾಡಿ, ಪ್ರೀತಿಯೆಂಬುದೇ ಹಾಸ್ಯಾಸ್ಪದ ವೆಂಬಂತೆ ಚಿತ್ರಿಸಿರುವುದು, ಅದಕ್ಕೆ ವೀಕ್ಷಕ (ಟೀನೇಜ್ ಹುಡುಗರು)ರಿಂದ ಬೀಳುವ ಚಪ್ಪಾಳೆಗಳು, ಶಿಳ್ಳೆಗಳು ಪ್ರಸ್ತುತ ಯುವ ಜನಾಂಗದ ಮನಸ್ಸಿನ ಕನ್ನಡಿಯಂತೆ ತೋರುವುದು.

ಗಾಂಧಿನಗರದ ಸಿದ್ಧ ಸೂತ್ರಗಳನ್ನು ಮೀರುವ / ಮೀರಿದ ಕಥೆ, ಚಿತ್ರಕಥೆಯಾಗಿ, ಕನ್ನಡ ಚಿತ್ರರಂಗಕ್ಕೆ ಭವಿಷ್ಯವಿದೆ ಎಂಬ ಆಶಾಭಾವನೆ ಹುಟ್ಟು ಹಾಕಿದರೂ, ಡೈಲಾಗ್ಸ್ ಗಳಲ್ಲಿ ಸ್ವಲ್ಪ ಹಿಡಿತ, ಮಧ್ಯಂತರದ ನಂತರ ನಿಧಾನವಾಗಿ ಸಾಗುವ ಕಥೆ ಸ್ವಲ್ಪ ಬೋರ್ ಹೊಡೆಸಿ, ವೀಕ್ಷಕರ ನಡುವೆ ಪಂಚರಂಗಿ ಚೆನ್ನಾಗಿತ್ತು, ಇದೂ ಪರವಾಗಿಲ್ಲ ಎಂಬ ಅನಿಸಿಕೆ ಮೂಡಿಸಿ, ಗುರುವನ್ನು ಮೀರದ ಶಿಷ್ಯನಾಗಿಯೇ ಉಳಿದುಬಿಡುತ್ತಾರೆ ಪವನ್.

No comments:

Post a Comment