Monday, August 27, 2012

ಒಳಗೊಬ್ಬ ಒಬ್ಬ ಒಬ್ಬ ಪರಮಾತ್ಮ ಉಸಿರಾಡು, ಆಡು ಅಂತಾನೆ



ಈ ನಮ್ಮ ಪರಮಾತ್ಮನಿಗೆ ಹಣ ಮಾಡುವುದರಿಂದ ಆಧ್ಯಾತ್ಮದವರೆಗೂ ಎಲ್ಲವೂ ಸುಲಭ. ಆದರೆ ಎಮ್ ಎಸ್ ಸಿ ಪರೀಕ್ಷೆ ಮಾತ್ರ ಬಿಡಿಸಲಾರದಷ್ಟು ಕಗ್ಗಂಟು. ಈತನ ತಂದೆ ಪ್ರಖ್ಯಾತ ಹೃದಯ ತಜ್ಞ. ವೈದ್ಯನಾಗಿ ಬೇಕಾದಷ್ಟು ಹಣ ಗಳಿಸಬಹುದಾದರೂ, ಆತ್ಮ ತೃಪ್ತಿಗೆ ಹಣವೇ ಮುಖ್ಯ ಅಲ್ಲವೆಂದು ಒಂದಷ್ಟು ಮಕ್ಕಳನ್ನು ಸಾಕಿಕೊಂಡು, ನೆಮ್ಮದಿಯಿಂದ ಬದುಕುತ್ತಿರುವ ಈತನಿಗೆ ಮಗನ ಹೃದಯದ ಬಗ್ಗೆ ಪರಮ ಹೆಮ್ಮೆ. ಈತ ಮಗ ಏನೂ ಮಾಡಿದರೂ ಪ್ರಶ್ನಿಸಲಾರ. ಮಗನ ಮೇಲೆ ಅದಮ್ಯ ವಿಶ್ವಾಸ. ಈಗಿನ ಅಪ್ಪಂದಿಗಿರುವ ಆತಂಕ, ನಿರೀಕ್ಷೆ ಈ ಅಪ್ಪನಿಗಿಲ್ಲ. ಹಾಗೆಯೇ ಅಪ್ಪ ನೀಡಿರುವ ಸ್ವಾತಂತ್ರದ ಇನಿತೂ ದುರುಪಯೋಗ ಪಡೆಯದ ಮಗ ಕಾಲೇಜಿನ ಪರೀಕ್ಷೆಯೊಂದನ್ನು ಬಿಟ್ಟು ಜೀವನದ ಎಲ್ಲಾ ಪರೀಕ್ಷೆಗಳಲ್ಲೂ ಫಸ್ಟ್ ಕ್ಲಾಸ್ ಪಾಸ್. ಮಗ ಪರೀಕ್ಷೆ ಪಾಸಾಗಲಿಲ್ಲವೆಂಬ ಕೊರಗು ಅಥವಾ ಮಗ ತನ್ನಂತೆಯೇ ವೈದ್ಯನಾಗಬೇಕೆಂಬ ಹಂಬಲವೂ ಕೂಡ ಈ ಅಪ್ಪನಿಗಿಲ್ಲ. ಆತನಿಗಿರುವ ಕಾಳಜಿಯೊಂದೇ, ತನ್ನ ಮಗನ ಹೃದಯಕ್ಕೆ ನೋವಾಗಬಾರದು. ಪ್ರಸ್ತುತ ಸ್ಪರ್ಧಾತ್ಮಕ ಜಗತ್ತಿನಲ್ಲಿ ನಾವೆಲ್ಲರೂ ಎದುರಿಸುತ್ತಿರುವ ಆತಂಕ, ಒತ್ತಡ, ಸೋಲು, ಕಿರಿಕಿರಿ, ನಿರಾಶೆ ಇವುಗಳೆಲ್ಲವನ್ನೂ ಬಿಟ್ಟು ನಿರಾಳವಾಗಿ ಬದುಕುವುದು ಹೇಗೆ ಎಂಬುದನ್ನು ತೋರಿಸುವ ಮಾದರಿ ಈ ಅಪ್ಪ, ಮಗ!

ನಾಯಕನಿಗೆ ಇಬ್ಬರೂ ನಾಯಕಿಯರು. ನಾಯಕನಿಗೆ ಸಿನೆಮಾ ಥಿಯೇಟರ್ ನಲ್ಲಿ ದಿಢೀರನೆ ಪರಿಚಯವಾಗುವ ಹುಡುಗಿಯೊಂದಿಗೆ ಉಂಟಾಗುವ ಪ್ರೀತಿ! ಆಕೆ ಸುಂದರಿಯಲ್ಲ, ಆಕೆಗೆ ಇವನು ನುಸಿಪೀಡೆ!, ಮದುವೆಗೂ, ಮಸಣಕ್ಕೂ ನುಡಿಸುವ ಶಹನಾಯಿ ಸಂಗೀತವೆಂದರೆ ಈತನಿಗೆ ಅಷ್ಟಕಷ್ಟೆ. ಆಕೆ ಈತನಿಗಿಷ್ಟವಿಲ್ಲದಿರುವ ಶಹನಾಯಿ ನುಡಿಸುವುದರಲ್ಲಿ ಪರಿಣಿತೆ! ಆದರೂ ಅವಳನ್ನು ಬೆಂಬಿಡದಂತೆ ಒಲಿಸಿಕೊಳ್ಳುವ ಪರಿ, ಮೊದಮೊದಲು ಒಲ್ಲೆ ಎನ್ನುತ್ತಲೇ ಆಕೆ ಈತನನ್ನು ಪ್ರೇಮಿಸುವುದು, ರಾಜಮನೆತನದ ಈಕೆಯ ಹಿರಿಯರು ಕೂಡ ನಾಯಕ, ನಾಯಕನ ತಂದೆಯ ಹೃದಯ ಶ್ರೀಮಂತಿಕೆಗೆ ಮಾರು ಹೋಗಿ ಮದುವೆಗೆ ಒಪ್ಪಿಕೊಳ್ಳುತ್ತಾರೆ. ಮತ್ತೊಬ್ಬಳು ಕಾಲೇಜಿನ ಸಹಪಾಠಿ, ಅನಾಥೆ, ಸುಂದರಿ, ನಾಯಕನ ಪ್ರತಿಯೊಂದು ವಿಷಯವೂ ಈಕೆಗೆ ಗೊತ್ತಿದೆ, ಆತ ಮತ್ತೊಬ್ಬಳನ್ನು ಪ್ರೀತಿಸುತ್ತಿರುವುದು ಕೂಡ! ಈಕೆ ನಾಯಕನಲ್ಲಿ ಅನುರಕ್ತೆ. ಪ್ರತಿ ಬಾರಿಯೂ ಆಕೆ ತನ್ನ ಪ್ರೀತಿಯನ್ನು ಇನ್ನಿಲ್ಲದಂತೆ ವ್ಯಕ್ತ ಪಡಿಸುತ್ತಾಳೆ, ನಾಯಕ ಮತ್ತೊಬ್ಬಳೊಂದಿಗೆ ಮದುವೆಯಾಗಬಾರದೆಂದು ಬಹಳಷ್ಟು ಪ್ರಯತ್ನಿಸಿದರೂ ಸೋಲುತ್ತಾಳೆ. ಆತನ ಮದುವೆಯಾದ ನಂತರವೂ ಕೂಡ ಆಕೆ ತನ್ನ ಪ್ರಯತ್ನವನ್ನು ಬಿಡುವುದಿಲ್ಲ. ಈ ಎಲ್ಲಾ ವಿಷಯಗಳು ತಿಳಿದಿದ್ದರೂ ನಾಯಕ ಮಾತ್ರ ನಿರ್ಲಿಪ್ತ. ಆದರೆ ಆತ ಈಕೆಯೊಂದಿಗಿನ ತೋರುವ ಸ್ನೇಹದಲ್ಲಿ ಮಾತ್ರ ಇನಿತೂ ಕಪಟವಿಲ್ಲ. ಮದುವೆ ಆಯಿತು, ಮಗುವಾಯಿತು, ಜೀವನ ಅತ್ಯಂತ ಸುಖಮಯವಾಗಿ ಸಾಗುತ್ತಿದೆ, ಸಂತೃಪ್ತ ಜೀವನ ಎಂದನ್ನಿಸುವಾಗ, ಕಥೆಗೊಂದು ತಿರುವು, ಈ ಸಂತಸದ ಭಾರ ತಾಳಲಾರದೇ ಹೆಂಡತಿಯ ಹೃದಯ ಸೋಲುವುದು, ಆಕೆಯ ಸಾವಿನ ನಂತರ ಮುಂದೇನು? ಗೆಳತಿಯೇ ಪತ್ನಿಯಾಗುವಳೇ? ಆತನ ಸ್ನೇಹ ಗೆಲ್ಲುತ್ತದೆಯೋ? ಈಕೆಯ ಪ್ರೀತಿ ಗೆಲ್ಲುತ್ತದೆಯೋ? ಇದು ಚಿತ್ರದ ಕ್ಲೈಮಾಕ್ಸ್.

ಇಡೀ ಚಿತ್ರದುದ್ದಕ್ಕೂ ಯಾವುದೇ ಇಮೇಜಿನ ಹಂಗಿಲ್ಲದೆ, ಪಾತ್ರವೇ ತಾನೆಂಬಂತೆ ನಟಿಸಿರುವ ಪುನೀತ್ ಹಾಗೂ ಗೆಳತಿಯ ಪಾತ್ರದಲ್ಲಿ, ಚೆಲ್ಲುಚೆಲ್ಲಾಗಿ, ಮಗುವಿನಂತೆ ಮುದ್ದಾಗಿ ನಟಿಸಿರುವ ಐಂದ್ರೀತಾ ಚಿತ್ರದ ಹೈಲೈಟ್. ಗ್ರಾಫಿಕ್ಸ್ ಸ್ವಲ್ಪ ಹೆಚ್ಚೆನಿಸಿ, ಕಿರಿಕಿರಿ ಉಂಟು ಮಾಡಿದರೂ ಪುನೀತ್ ರ ನೃತ್ಯ, ಇದೆಲ್ಲವನ್ನೂ ಮರೆಸಿಬಿಡುತ್ತದೆ. ಪ್ರತಿ ಚಿತ್ರದಲ್ಲೂ ತಮ್ಮ ಪ್ರಾಣಿಪ್ರೀತಿಯನ್ನು ತೋರಿಸುವ ಭಟ್ಟರು ಇದ್ರಲ್ಲಿ ತೋರಿಸಿರುವ ಗ್ರಾಫಿಕ್ಸ್ ಅಳಿಲು! ಅವರ ಹಿಂದಿನ ಚಿತ್ರಗಳಲ್ಲಿ ಪ್ರಾಣಿಗಳು ಮೋಡಿ ಮಾಡಿದಂತೆ ಮಾಡುವುದಿಲ್ಲ. ಬಲವಂತವಾಗಿ ಆ ಪಾತ್ರವನ್ನು ತುರುಕಿದಂತೆ ಅನಿಸುತ್ತದೆ. ಇನ್ನೂ ಮತ್ತೊಬ್ಬ ನಾಯಕಿ ದೀಪ ಸನ್ನಿಧಿಯ ನಟನೆ ಕೆಲವೊಂದು ಸನ್ನಿವೇಶಗಳಲ್ಲಿ ನಾಟಕೀಯ ಎಂದೆನಿಸಿಬಿಡುತ್ತದೆ. ಅಳುವಿನ ಸಂದರ್ಭಗಳಲ್ಲಂತೂ ಆಕೆಯನ್ನು ನೋಡಲಸಾಧ್ಯ. ಇನ್ನುಳಿದಂತೆ ಇನ್ನಿತರರ ನಟನೆಯ ಬಗ್ಗೆ ಎರಡು ಮಾತಿಲ್ಲ.

ಮಧ್ಯಂತರದ ನಂತರ ಚಿತ್ರ ದೀರ್ಘವೆಂದೆನಿಸಿ ಸ್ವಲ್ಪ ಮಟ್ಟಿಗೆ ಬೋರ್ ಆಗುತ್ತದೆಯಾದರೂ, ಪ್ರೀತಿ, ಪ್ರೇಮ ಎಲ್ಲಾ ಸುಳ್ಳು, ಟೈಮ್ ಪಾಸ್ ಗಾಗಿ ಮಾತ್ರ ಎಂದೆನ್ನುವ ಈಗಿನ ಯುವಜನಾಂಗದ ನಡುವೆಯೂ, ಈ ತರಹದ ಪ್ರೀತಿ, ಸ್ನೇಹ ಕೂಡ ಇರುತ್ತದೆಯೆಂಬ ಆಶಾಕಿರಣವನ್ನು ಈ ಚಿತ್ರ ಹಾಗೂ ಪುನೀತ್ ರ ನಟನೆ ಹುಟ್ಟು ಹಾಕುವುದರಲ್ಲಿ ಯಶಸ್ವಿಯಾಗುತ್ತದೆ. ಚಿತ್ರದಿಂದ ಚಿತ್ರಕ್ಕೆ ಭಟ್ಟರು ತತ್ವಜ್ಙಾನಿಯಾಗುತ್ತಿದ್ದಾರೇನೋ ಎಂಬ ಭಾವನೆ ಮೂಡಿಸುತ್ತದೆ. ಯಾವುದೇ ಅತಿಯಾದ ನಿರೀಕ್ಷೆಗಳಿಲ್ಲದೆ ಈ ಚಿತ್ರವನ್ನು ನೋಡಿದರೆ, ೭೦, ೮೦ ರ ದಶಕಗಳ ರಾಜ್ ರ ಸಾಮಾಜಿಕ / ಕೌಟುಂಬಿಕ ಚಿತ್ರವೊಂದನ್ನು ನೋಡಿದಂತಾಗುವುದು.

(೧೦ ಸೆಪ್ಟೆಂಬರ್ ೨೦೧೧ ರಂದು ಸಂವಾದಕ್ಕಾಗಿ ಬರೆದಿದ್ದು)

No comments:

Post a Comment